ಇಸ್ಲಮಾಬಾದ್, ಜುಲೈ 23: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಪಾಕ್ ಆಕ್ರಮಿತ ಕಾಶ್ಮೀರದ (PoK) ಪ್ರಧಾನಿಯಾಗಬೇಕೆಂಬುದು ನನ್ನಾಸೆ ಎಂದು ಹೇಳಿಕೊಂಡಿದ್ದಾರೆ. ಪಿಒಕೆ ನನ್ನ ಎರಡನೇ ಮನೆಯಿದ್ದಂತೆ. ಆ ಪ್ರದೇಶವನ್ನು ಆಳಲು ಬಯಸುವುದಾಗಿ ತಿಳಿಸಿದ್ದಾರೆ. ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (PML-N) ಪಕ್ಷದ ಮುಖ್ಯಸ್ಥರಾಗಿರುವ ನವಾಜ್ ಶರೀಫ್, ಈ ವಾರದ ಆರಂಭದಲ್ಲಿ ಪಿಒಕೆಯ ಅತಿ ದೊಡ್ಡ ನಗರವಾದ ಮುಜಫರಾಬಾದ್ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ತಮ್ಮ ಈ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ತಮ್ಮ ಸ್ವಂತ ಪ್ರಾಂತ್ಯವಾದ ಪಂಜಾಬ್ ಎಷ್ಟು ಮುಖ್ಯವೋ, ತಮಗೆ ಪಿಒಕೆ ಕೂಡ ಅಷ್ಟೇ ಮುಖ್ಯ ಎಂದು ನವಾಜ್ ಶರೀಫ್ ಪ್ರತಿಪಾದಿಸಿದ್ದಾರೆ. “ಇದು ನನ್ನ ಎರಡನೇ ಮನೆ. ನನ್ನ ಪೂರ್ವಜರು ಕಾಶ್ಮೀರದಿಂದ ವಲಸೆ ಬಂದವರು” ಎಂದು ಅವರು ಹೇಳಿದ್ದಾರೆ.
“ನನ್ನ ಪಕ್ಷ ಗೆದ್ದರೆ, ಪಾಕ್ ಆಕ್ರಮಿತ ಕಾಶ್ಮೀರದ (PoK) ಅಭಿವೃದ್ಧಿಯನ್ನು ನಾನು ಖುದ್ದಾಗಿ ಮೇಲ್ವಿಚಾರಣೆ ಮಾಡಲು ಸಾಧ್ಯವಾಗುವಂತೆ ನನ್ನನ್ನು ಇಲ್ಲಿನ ಪ್ರಧಾನಿಯನ್ನಾಗಿ ಮಾಡಲು ಪ್ರಧಾನಿ ಶೆಹಬಾಜ್ ಶರೀಫ್ ಅವರಲ್ಲಿ ನಾನು ಮನವಿ ಮಾಡುತ್ತೇನೆ” ಎಂದು ಪಾಕಿಸ್ತಾನದ ಹಾಲಿ ಪ್ರಧಾನಿಯ ಅಣ್ಣನೂ ಆಗಿರುವ ನವಾಜ್ ಶರೀಫ್ ಹೇಳಿದ್ದಾರೆ.
ಇದನ್ನೂ ಓದಿ: ಪಿಒಕೆಯಲ್ಲಿ ತೀವ್ರಗೊಂಡ ಹಿಂಸಾಚಾರ; ಪಾಕಿಸ್ತಾನಿ ಪಡೆಗಳ ಗುಂಡಿನ ದಾಳಿಗೆ 6 ಜನ ಬಲಿ
ಪಿಒಕೆಯಲ್ಲಿ ಚುನಾವಣೆ:
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜುಲೈ 27 ಮತ್ತು ಆಗಸ್ಟ್ 10ರ ನಡುವೆ ಚುನಾವಣೆಗಳು ನಡೆಯಲಿವೆ. ಈ ಚುನಾವಣೆಗಳಲ್ಲಿ ನವಾಜ್ ಶರೀಫ್ ಅವರ PML-N ಪಕ್ಷವು ಕೇಂದ್ರ ಒಕ್ಕೂಟ ಸರ್ಕಾರದಲ್ಲಿ ತನ್ನ ಮೈತ್ರಿಕೂಟದ ಭಾಗವಾಗಿರುವ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (PPP) ವಿರುದ್ಧವೇ ಸ್ಪರ್ಧಿಸುತ್ತಿದೆ. ಪಾಕಿಸ್ತಾನದ ಆಡಳಿತದ ವಿರುದ್ಧ ಈ ಪ್ರದೇಶದಲ್ಲಿ ಭಾರಿ ಪ್ರತಿಭಟನೆಗಳು ವ್ಯಕ್ತವಾಗುತ್ತಿವೆ. ನಿಯಂತ್ರಣವಿಲ್ಲದ ಹಣದುಬ್ಬರ, ಹೆಚ್ಚಿದ ವಿದ್ಯುತ್ ದರಗಳು ಮತ್ತು ಗಣ್ಯರ ವಿಶೇಷ ಹಕ್ಕುಗಳನ್ನು ಖಂಡಿಸಿ ‘ಜಮ್ಮು ಕಾಶ್ಮೀರ ಜಂಟಿ ಅವಾಮಿ ಆಕ್ಷನ್ ಕಮಿಟಿ’ (JKJAAC) ನೇತೃತ್ವದಲ್ಲಿ ಭಾರಿ ಚಳವಳಿ ನಡೆಯುತ್ತಿವೆ.
ಪಿಒಕೆಯಲ್ಲಿ ನಡೆದ ಹಿಂಸಾಚಾರದಲ್ಲಿ ಇದುವರೆಗೆ 30ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸಲು ಪಾಕಿಸ್ತಾನ ಸರ್ಕಾರಕ್ಕೆ ಕೊನೆಯ ಒಂದು ಅವಕಾಶ ನೀಡುತ್ತಿರುವುದಾಗಿ ತಿಳಿಸಿದ್ದ ಜೆಎಎಸಿ (JAAC), ಕಳೆದ ವಾರ ತನ್ನ ಬೃಹತ್ ಮೆರವಣಿಗೆಯನ್ನು ಮುಂದೂಡಿತ್ತು. ಪಾಕಿಸ್ತಾನಿ ಅಧಿಕಾರಿಗಳಿಂದ ನಿಷೇಧಕ್ಕೊಳಗಾಗಿರುವ ಈ ಸಂಘಟನೆಯು ಇದೀಗ ಮತ್ತೊಮ್ಮೆ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಮುಜಫರಾಬಾದ್ ಕಡೆಗೆ ಕೈಗೊಳ್ಳುವ ‘ಲಾಂಗ್ ಮಾರ್ಚ್’ ಈ ವಾರ ಪುನರಾರಂಭಗೊಳ್ಳಲಿದೆ ಎಂದು ಎಚ್ಚರಿಸಿದ್ದು, ಪಿಒಕೆಯಾದ್ಯಂತ ನಡೆಯುತ್ತಿರುವ ಧರಣಿ ಪ್ರತಿಭಟನೆಗಳು ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದೆ.
ನವಾಜ್ ಶರೀಫ್ಗಿದೆ ಕಾನೂನಿನ ತಡೆ:
ನವಾಜ್ ಶರೀಫ್ ತಾವು ಪಿಒಕೆ ಪ್ರಧಾನಿಯಾಗಬೇಕೆಂದು ಬಯಸಿದರೂ ಅದು ಸುಲಭವಲ್ಲ. ಏಕೆಂದರೆ, ಪಿಒಕೆಯ ಸಂವಿಧಾನದ ಪ್ರಕಾರ ಅವರು ಅಲ್ಲಿನ ಪ್ರಧಾನಿಯಾಗಲು ಸಂಪೂರ್ಣವಾಗಿ ಅನರ್ಹರಾಗಿದ್ದಾರೆ. ಪಿಒಕೆ ಸಂವಿಧಾನದ ಪ್ರಕಾರ, ಆ ಪ್ರದೇಶದ ಮೂಲ ನಿವಾಸಿಯಾಗಿರುವ ಮತ್ತು ಅಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿರುವ ವ್ಯಕ್ತಿ ಮಾತ್ರ ಪ್ರಧಾನಿಯಾಗಲು ಅರ್ಹರು.
ಇದನ್ನೂ ಓದಿ: ಜಮ್ಮು-ಕಾಶ್ಮೀರದ ಅನಂತ್ನಾಗ್ನಲ್ಲಿ ಉಗ್ರರ ಗುಂಡಿನ ದಾಳಿ; ಪೋಲೀಸ್ ಕಾನ್ಸ್ಟೆಬಲ್ ಹುತಾತ್ಮ
ಆದರೆ, ನವಾಜ್ ಶರೀಫ್ ಅವರು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದವರಾಗಿದ್ದು, ಪಿಒಕೆಯ ಮತದಾರರಲ್ಲ. ಹೀಗಾಗಿ, ಕಾನೂನಾತ್ಮಕವಾಗಿ ಅವರು ಅಲ್ಲಿ ಪ್ರಧಾನಿಯಾಗಲು ಸಾಧ್ಯವೇ ಇಲ್ಲ. ಆದ್ದರಿಂದ ಅವರ ಈ ಹೇಳಿಕೆ ಕೇವಲ್ ಚುನಾವಣಾ ಗಿಮಿಕ್ ಎಂದು ವಿಶ್ಲೇಷಿಸಲಾಗುತ್ತಿದೆ.
ಪಿಒಕೆ ಕುರಿತು ಭಾರತದ ನಿಲುವು:
ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಅಂಗಗಳಾಗಿವೆ ಎಂಬುದು ಭಾರತದ ಸ್ಪಷ್ಟ ನಿಲುವಾಗಿದೆ. ಪಾಕಿಸ್ತಾನವು ಈ ಪ್ರದೇಶಗಳ ಭಾಗಗಳನ್ನು ಅಕ್ರಮವಾಗಿ ಮತ್ತು ಬಲವಂತವಾಗಿ ಕಬಳಿಸಿಕೊಂಡಿದೆ ಎಂದು ಭಾರತ ಪದೇ ಪದೇ ಪ್ರತಿಪಾದಿಸುತ್ತಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ