ನವದೆಹಲಿ, ಜುಲೈ 26: ದೇಶದ ಪ್ರತಿಯೊಬ್ಬ ಯುವಜನರನ್ನು ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯಿಂದ ಮುಂದಕ್ಕೆ ಕೊಂಡೊಯ್ಯುವುದು ಸರ್ಕಾರದ ಮುಖ್ಯ ಗುರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ಮೈ ಭಾರತ್ ಪ್ಲಾಟ್ಫಾರ್ಮ್ ವತಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಆಯೋಜಿತವಾದ ‘ವಿಕಸಿತ್ ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ 2026’ ನಲ್ಲಿ (Viksit Vibrant Village Programme) ಮಾತನಾಡುತ್ತಿದ್ದ ಪ್ರಧಾನಿಗಳು, ಗಡಿಭಾಗದ ಅಭಿವೃದ್ಧಿ ಮತ್ತು ಗಡಿ ಗ್ರಾಮಗಳ ಅಭ್ಯುದಯವು ದೇಶದ ವಿಕಾಸಕ್ಕೆ ಬಹಳ ಮುಖ್ಯ ಎಂದು ಹೇಳಿದ್ದಾರೆ.
‘ಯುವಜನರು ಭಾರತದ ಗಡಿಭಾಗದ ಗ್ರಾಮಗಳಿಗೆ ಹೋಗಿ ಅಲ್ಲಿರುವ ಬದುಕಿನ ಅನುಭವ ಪಡೆಯುವುದು ಬಹಳ ಅಗತ್ಯ. ಗಡಿ ಗ್ರಾಮಗಳಲ್ಲಿ ಜನರಿಗೆ ದೇಶ ಅದೆಷ್ಟು ಮುಖ್ಯ, ಈ ದೇಶಕ್ಕಾಗಿ ಅದೆಷ್ಟು ಜಾಗ್ರತೆಯಿಂದ ಇರುತ್ತಾರೆ ನಿಮಗೆ ಗೊತ್ತಾಗುತ್ತದೆ’ ಎಂದು ಪ್ರಧಾನಿಗಳು ತಿಳಿಸಿದ್ದಾರೆ.
‘ಸೊಲೊ ಟ್ರಾವೆಲ್’ ಮತ್ತು ಯುವ ಶಕ್ತಿಯ ಮೆಚ್ಚುಗೆ
ಸಂವಾದದ ವೇಳೆ ಮಾತನಾಡಿ ಪ್ರಧಾನಿಯವರು, ಇತ್ತೀಚಿನ ದಿನಗಳಲ್ಲಿ ‘ಒಂಟಿ ಪ್ರಯಾಣ’ (Solo Travel) ದೊಡ್ಡ ಟ್ರೆಂಡ್ ಆಗಿದೆ ಎಂದರು.
“ಸೊಲೊ ಟ್ರಾವೆಲ್ ಎನ್ನುವುದು ನಮ್ಮನ್ನು ನಾವು ಕಂಡುಕೊಳ್ಳುತ್ತಾ ಜಗತ್ತನ್ನು ತಿಳಿಯುವ ಅತ್ಯುತ್ತಮ ಮಾರ್ಗ. ನೀವು ಈ ಅಭಿಯಾನದಲ್ಲಿ ಒಂಟಿಯಾಗಿ ಹೊರಟಿದ್ದರೂ, ಭಾರತದಾದ್ಯಂತ ಸಾಗಿದ ಈ ಪ್ರಯಾಣವು ನಿಮ್ಮನ್ನೆಲ್ಲ ಒಂದೇ ಕುಟುಂಬವನ್ನಾಗಿ ಮಾಡಿದೆ. ಭಾರತದ ಹೆಣ್ಣುಮಕ್ಕಳು ಒಂಟಿಯಾಗಿ ಇಂತಹ ಸಾಹಸಿ ಪ್ರಯಾಣ ಕೈಗೊಂಡಿರುವುದು ಅವರಲ್ಲಿ ಬೆಳೆಯುತ್ತಿರುವ ಆತ್ಮವಿಶ್ವಾಸಕ್ಕೆ ಸಾಕ್ಷಿಯಾಗಿದೆ” ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: PM Modi Interaction: ವಿಕಸಿತ್ ವೈಬ್ರೆಂಟ್ ಗ್ರಾಮ ಯೋಜನೆ; ಪ್ರಧಾನಿ ಜೊತೆ ಅನುಭವ ಹಂಚಿಕೊಂಡ ಯುವಜನರು
ಇದಕ್ಕೂ ಮುನ್ನ, ಅಭಿಯಾನದಲ್ಲಿ ಪಾಲ್ಗೊಂಡ ಯುವಜನರು ತಮ್ಮ ಅನುಭಗಳನ್ನು ಹಂಚಿಕೊಂಡರು. ಗಡಿಗ್ರಾಮಗಳಲ್ಲಿನ ಸಂಸ್ಕೃತಿ, ಅಲ್ಲಿಯ ಜನರ ಆಚಾರ ವಿಚಾರ, ತಮಗೆ ಸಿಕ್ಕ ಸತ್ಕಾರ ಇತ್ಯಾದಿ ಎಲ್ಲವನ್ನೂ ಈ ಮಕ್ಕಳು ಪ್ರಧಾನಿಗಳ ಜೊತೆ ಹೇಳಿಕೊಂಡರು.
ವಿಕಸಿತ್ ವೈಬ್ರೆಂಟ್ ವಿಲೇಜ್ ಪ್ರೋಗ್ರಾಮ್ನ ಮುಖ್ಯ ವಿವರಗಳು
ಗಡಿ ಗ್ರಾಮಗಳನ್ನು ದೇಶದ “ಮೊದಲ ಗ್ರಾಮಗಳು” ಎಂದು ಪರಿಗಣಿಸುವ ಪ್ರಧಾನಿಯವರ ಕಲ್ಪನೆಯಂತೆ ‘ಮೈ ಭಾರತ್’ ಮೂಲ ರಚನೆಯಡಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜೂನ್ 4 ರಿಂದ ಜೂನ್ 30 ರವರೆಗೆ ಎರಡು ಹಂತಗಳಲ್ಲಿ ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಆಯ್ದ 74 ಗಡಿ ಗ್ರಾಮಗಳಲ್ಲಿ ಈ ಅಭಿಯಾನ ನಡೆಯಿತು. ದೇಶಾದ್ಯಂತ 3 ಲಕ್ಷಕ್ಕೂ ಹೆಚ್ಚು ಯುವಕರು ಪಾಲ್ಗೊಂಡಿದ್ದ ಆನ್ಲೈನ್ ಕ್ವಿಜ್ ಸ್ಪರ್ಧೆಯ ಮೂಲಕ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುವ 400ಕ್ಕೂ ಹೆಚ್ಚು ಯುವಕರನ್ನು ಆಯ್ಕೆ ಮಾಡಲಾಗಿತ್ತು.
ಇದನ್ನೂ ಓದಿ: ಮೊದಲ ಸಭೆಯಲ್ಲೇ ಅಧಿಕಾರಿಗಳಿಗೆ ಖಡಕ್ ಸಲಹೆ ಸೂಚನೆಗಳನ್ನ ನೀಡಿದ ಪ್ರಲ್ಹಾದ ಜೋಶಿ
ಗಡಿ ಗ್ರಾಮಗಳಲ್ಲಿ ಯುವಕರ ಚಟುವಟಿಕೆಗಳು
ಗಡಿ ಭಾಗದ ಸ್ಥಳೀಯ ಕುಟುಂಬಗಳೊಂದಿಗೆ ವಾಸಿಸಿದ ಯುವಕರು ಕೆಳಗಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು:
- ಸ್ವಚ್ಛತಾ ಅಭಿಯಾನ ಹಾಗೂ ಸರ್ಕಾರಿ ಯೋಜನೆಗಳ ಕುರಿತು ಜಾಗೃತಿ.
- ಯುವ ಸಮ್ಮೇಳನಗಳು, ಸಾಂಸ್ಕೃತಿಕ ವಿನಿಮಯ ಮತ್ತು ಸಸಿನೆಡುವಿಕೆ.
- ‘ಮಿನಿ ಮಾಡೆಲ್ ಪಂಚಾಯತ್’ ಸಿಮ್ಯುಲೇಶನ್ ಹಾಗೂ ಸ್ಥಳೀಯ ಕಲಾಕಾರರೊಂದಿಗೆ ಸಂವಾದ.
- ಗಡಿ ಭಾಗದ ಆಶೋತ್ತರಗಳು, ಸಂಸ್ಕೃತಿ ಮತ್ತು ಆಯಕಟ್ಟಿನ ಪ್ರಾಮುಖ್ಯತೆಯನ್ನು ಹತ್ತಿರದಿಂದ ಅರಿಯುವುದು.
ಗಡಿ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮತ್ತು ರಾಷ್ಟ್ರೀಯ ಭಾವೈಕ್ಯತೆಯನ್ನು ಬಲಪಡಿಸುವಲ್ಲಿ ಯುವಜನತೆಯ ಈ ಸಕ್ರಿಯ ಪಾಲ್ಗೊಳ್ಳುವಿಕೆಯು ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ