ಪಡಿತರ ಅಂಗಡಿಗಳಲ್ಲಿ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾ ಟಿಕೆಟ್ ಮಾರಾಟ
ಹಾವೇರಿ, ಜುಲೈ 27: ರಾಜ್ಯಾದ್ಯಂತ ಪಡಿತರ ಅಂಗಡಿಗಳಲ್ಲಿ ಆಹಾರ ಧಾನ್ಯದ ವಿತರಣೆ ಜೊತೆಗೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾ ಟಿಕೆಟ್ ಮಾರಾಟಕ್ಕೆ ಆಹಾರ ಇಲಾಖೆ ಸೂಚನೆ ನೀಡಿದೆ. ಒಂದು ನ್ಯಾಯಬೆಲೆ ಅಂಗಡಿಗೆ 50 ರಿಂದ 100 ಟಿಕೆಟ್ ವಿತರಣೆ ಮಾಡಲಾಗಿದ್ದು, ಆಹಾರ ಇಲಾಖೆ ಒಂದು ಟಿಕೆಟ್ಗೆ 150 ರೂಪಾಯಿ ನಿಗದಿ ಮಾಡಿದೆ. ಸಾಮಾಜಿಕ ಕಾಳಜಿ ಹಾಗೂ ಗ್ರಾಮೀಣ ಹಿನ್ನೆಲೆಯನ್ನು ಹೊಂದಿರುವ ಈ ಕನ್ನಡ ಚಲನಚಿತ್ರ ಜುಲೈ 31, 2026ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.
ರಾಜ್ಯ ಸರ್ಕಾರದ ಕನಸಿನ ಕೂಸಾದ ಅನ್ನಭಾಗ್ಯ ಯೋಜನೆಯ ಪಡಿತರ ವಿತರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಜಾಗೃತಿ ಗೊಳಿಸುವ ಸಂಬಂಧ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಎಂಬ ಚಲನಚಿತ್ರವನ್ನು ಮೊದಲಬಾರಿಗೆ ಕರ್ನಾಟಕ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಯ ಮಾಲೀಕರು ಹಾಗೂ ಕುಟುಂಬ ವರ್ಗದವರಿಗೆ ಹಾಗೂ ರಾಜ್ಯದ ಕಾರ್ಡುದಾರರಿಗೆ ಪ್ರದರ್ಶಿಸುವ ಸಲುವಾಗಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ಚಲನಚಿತ್ರದ ಪ್ರದರ್ಶನಕ್ಕೆ ಅನುವು ಮಾಡಿಕೊಡಲು ಕೋರಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆ ಆಯುಕ್ತರು ಅದಾಗಲೇ ಆದೇಶಿಸಿದ್ದಾರೆ.
ಇದನ್ನೂ ಓದಿ: ‘ಅರ್ಚನಾ ಕೊಟ್ಟಿಗೆ ಬಿಗ್ ಬಾಸ್ಗೆ ಬರಲಿ’; ವೀಕ್ಷಕರ ಒತ್ತಾಯ
ಕುಮಾರ್ ಬಂಗಾರಪ್ಪ, ರಾಗಿಣಿ ನಟನೆಯ ಸಿನಿಮಾ
ಈ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಕುಮಾರ್ ಬಂಗಾರಪ್ಪ ಮತ್ತು ರಾಗಿಣಿ ದ್ವಿವೇದಿ ಕಾಣಿಸಿಕೊಂಡಿದ್ದಾರೆ, ಬಿ. ರಾಮಮೂರ್ತಿ ಅವರ ಕಥೆಗೆ ಸಾತ್ವಿಕ್ ಪವನ್ ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ಸರ್ಕಾರದ ಪಡಿತರ ವಿತರಣಾ ವ್ಯವಸ್ಥೆ (Ration System) ಮತ್ತು ನ್ಯಾಯಬೆಲೆ ಅಂಗಡಿಗಳ ಮಹತ್ವ ಹಾಗೂ ಅದರ ಸುತ್ತ ನಡೆಯುವ ಸಾಮಾಜಿಕ ವಿದ್ಯಮಾನಗಳನ್ನು ಆಧರಿಸಿದ ಕತೆಯನ್ನು ಈ ಸಿನಿಮಾ ಹೊಂದಿದೆ ಎನ್ನಲಾಗಿದೆ.
ಆಹಾರ ಇಲಾಖೆ ನಿರ್ಧಾರಕ್ಕೆ ಆಕ್ರೋಶ
ಪಡಿತರ ಅಂಗಡಿಗಳಲ್ಲಿ ಸಿನಿಮಾ ಟಿಕೆಟ್ ಮಾರಾಟ ಸಂಬಂಧ ಆಹಾರ ಇಲಾಖೆಯ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ. ಸಿನಿಮಾ ನೋಡಲು ಇಷ್ಟ ಇದ್ದವರು ಥಿಯೇಟರ್ಗೆ ಹೋಗಿ ನೋಡ್ತಾರೆ. ನೋಡಲು ಇಷ್ಟ ಇಲ್ಲದವರು ಚಿತ್ರಮಂದಿರಗಳಿಗೆ ಹೋಗುವುದಿಲ್ಲ. ಹೀಗಾಗಿ ಆಹಾರ ಇಲಾಖೆ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 2:58 pm, Mon, 27 July 26