ಬೆಂಗಳೂರು, ಜುಲೈ 27: ಕರ್ನಾಟಕದಲ್ಲಿ ಗೃಹ ಜ್ಯೋತಿ ಯೋಜನೆಯ ಮನೆ-ಮನೆ ಪರಿಶೀಲನೆಗೆ ವಿಳಂಬವಾಗಿದೆ. ಸೇವಾ ಸಿಂಧು ಪೋರ್ಟಲ್‌ನಲ್ಲಿ ಸರ್ವರ್ ಸಮಸ್ಯೆಯಿಂದ ಆ್ಯಪ್ ಕಾರ್ಯನಿರ್ವಹಣೆ ಮಂದಗತಿಯಲ್ಲಿದ್ದು, ಜೊತೆಗೆ ರಾಜ್ಯಾದ್ಯಂತ ಮೀಟರ್ ರೀಡರ್‌ಗಳ ತೀವ್ರ ಅಭಾವ ಎದುರಾಗಿದೆ. 1.65 ಕೋಟಿ ಫಲಾನುಭವಿಗಳ ಪೈಕಿ ಕೇವಲ 45 ಲಕ್ಷ ಮನೆಗಳ ಪರಿಶೀಲನೆಯಷ್ಟೇ ಮುಗಿದಿದ್ದು, ನಿಗದಿತ ಆಗಸ್ಟ್ 31ರ ಗಡುವಿನೊಳಗೆ ಪ್ರಕ್ರಿಯೆ ಪೂರ್ಣಗೊಳ್ಳುವುದು ಅನುಮಾನವಾಗಿದೆ. ಇನ್ನು 20,000ಕ್ಕೂ ಹೆಚ್ಚು ಜನರು ಸ್ವಯಂಪ್ರೇರಿತವಾಗಿ ಯೋಜನೆಯಿಂದ ಹೊರಬಂದಿದ್ದಾರೆ.
ಪ್ರಸ್ತುತ ಪ್ರಗತಿ
ರಾಜ್ಯದಲ್ಲಿ ಒಟ್ಟು 1.65 ಕೋಟಿ ಫಲಾನುಭವಿಗಳನ್ನು ಪರಿಶೀಲಿಸುವ ಗುರಿ ಹೊಂದಲಾಗಿದ್ದು, ಜುಲೈ 1 ರಿಂದ ಆರಂಭವಾದ ಈ ಪ್ರಕ್ರಿಯೆಯಲ್ಲಿ ಇದುವರೆಗೆ ಕೇವಲ 45 ಲಕ್ಷ ಮನೆಗಳ ಪರಿಶೀಲನೆ ಮಾತ್ರ ಪೂರ್ಣಗೊಂಡಿದೆ. ನಿಗದಿತ ಆಗಸ್ಟ್ 31ರೊಳಗೆ ಈ ಬೃಹತ್ ಗುರಿಯನ್ನು ತಲುಪುವುದು ಕಷ್ಟಕರವೆನಿಸಿದೆ.
ಇಡೀ ರಾಜ್ಯಾದ್ಯಂತ ಕೇವಲ 21,602 ಮೀಟರ್ ರೀಡರ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಸ್ಕಾಂ (Bescom) ವ್ಯಾಪ್ತಿಯಲ್ಲಿ 65 ಲಕ್ಷ ಫಲಾನುಭವಿಗಳಿದ್ದು, ಪರಿಶೀಲನೆಗೆ ಕೇವಲ 7,409 ಮೀಟರ್ ರೀಡರ್‌ಗಳಿದ್ದಾರೆ. ಈಗಾಗಲೇ 25 ಲಕ್ಷ ಮನೆಗಳ ಪರಿಶೀಲನೆ ಮುಗಿದಿದ್ದು, ಇನ್ನು 40 ಲಕ್ಷ ಮನೆಗಳು ಬಾಕಿ ಇವೆ.
ಸರ್ವರ್ ಕ್ರ್ಯಾಶ್ ಮತ್ತು ತಾಂತ್ರಿಕ ತೊಡಕು
ಗೃಹ ಜ್ಯೋತಿ ಡೇಟಾವನ್ನು ‘ಸೇವಾ ಸಿಂಧು’ ಪೋರ್ಟಲ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ. ಇದೇ ಪೋರ್ಟಲ್‌ನಲ್ಲಿ ಗೃಹ ಲಕ್ಷ್ಮಿ, ಶಕ್ತಿ ಯೋಜನೆ, ರೇಷನ್ ಕಾರ್ಡ್ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಖಾತಾ ಸೇವೆಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಸರ್ವರ್ ಮೇಲಿನ ಲೋಡ್ ಹೆಚ್ಚಾಗಿ ಆ್ಯಪ್ ಪದೇ ಪದೇ ಸ್ಲೋ ಆಗುತ್ತಿದೆ ಅಥವಾ ಕ್ರ್ಯಾಶ್ ಆಗುತ್ತಿದೆ.
ಸುಮಾರು 20,000ಕ್ಕೂ ಹೆಚ್ಚು ಫಲಾನುಭವಿಗಳು ತಮ್ಮ ವೈಯಕ್ತಿಕ ವಿವರಗಳನ್ನು ನೀಡಲು ನಿರಾಕರಿಸಿದ್ದು, ‘Part B’ ಫಾರ್ಮ್‌ಗೆ ಸಹಿ ಮಾಡುವ ಮೂಲಕ ಸ್ವಯಂಪ್ರೇರಿತವಾಗಿ ಗೃಹ ಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಸೌಲಭ್ಯವನ್ನು ಬಿಟ್ಟುಕೊಟ್ಟಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ