Headlines

ಪ್ರತಿಭಟನಾಕಾರರ ಕಾನೂನು ನೆರವಿಗೆ ಸಿಜೆಪಿಯಿಂದ ವೆಬ್​ಸೈಟ್ ಆರಂಭ; 1 ಕೋಟಿ ರೂ. ದೇಣಿಗೆ ನೀಡಿದ ಕಪಿಲ್ ಸಿಬಲ್ – Kannada News | CJP to launch legal aid fund website linking protesters with lawyers Kapil Sibal announces 1 crore fund

ನವದೆಹಲಿ, ಜುಲೈ 27: ಪ್ರತಿಭಟನೆಯಲ್ಲಿ ಭಾಗವಹಿಸಿ ಕಾನೂನು ಕ್ರಮಗಳನ್ನು ಎದುರಿಸುತ್ತಿರುವವರ ನೆರವಿಗೆ ಕಾನೂನು ನೆರವು ನಿಧಿ (Legal Aid Fund) ಸಂಗ್ರಹಿಸಲು ವೆಬ್​ಸೈಟ್ ಆರಂಭಿಸುವುದಾಗಿ ಕಾಕ್ರೋಚ್ ಜನತಾ ಪಾರ್ಟಿ (CJP) ಇಂದು ಘೋಷಿಸಿದೆ. ಪ್ರತಿಭಟನಾಕಾರರ ವಿರುದ್ಧ ಕೈಗೊಳ್ಳಲಾದ ಕಾನೂನು ಕ್ರಮಗಳನ್ನು ಮೇಲ್ವಿಚಾರಣೆ ಮಾಡುವ ಹಾಗೂ ಅವರಿಗೆ ವಕೀಲರ ಸಂಪರ್ಕ ಕಲ್ಪಿಸುವ ವೆಬ್​ಸೈಟ್ ಅನ್ನು ಕಾಕ್ರೋಚ್ ಜನತಾ ಪಾರ್ಟಿ (CJP) ಶೀಘ್ರದಲ್ಲೇ ಆರಂಭಿಸಲಿದೆ ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಸೋಮವಾರ ತಿಳಿಸಿದ್ದಾರೆ. ಜೊತೆಗೆ, ಈ ವೆಬ್​ಸೈಟ್​ನ ಕಾನೂನು ನೆರವು ನಿಧಿಗಾಗಿ ಕಪಿಲ್ ಸಿಬಲ್ 1 ಕೋಟಿ ರೂ. ದೇಣಿಗೆ ಘೋಷಿಸಿದ್ದು, ದೇಶಾದ್ಯಂತ ಇರುವ ವಕೀಲರು ಈ ನಿಧಿಗೆ ಬೆಂಬಲ ನೀಡುವಂತೆ ಕರೆ ನೀಡಿದ್ದಾರೆ.

1 ಕೋಟಿ ನೆರವು ಘೋಷಿಸಿದ ಕಪಿಲ್ ಸಿಬಲ್:

ಇಂದು ಸಿಜೆಪಿಯ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಪ್ರತಿಭಟನಾಕಾರರಿಗೆ ಕಾನೂನು ಮತ್ತು ಆರ್ಥಿಕ ಬೆಂಬಲವನ್ನು ಘೋಷಿಸಿದರು. “ಶಾಂತಿಯುತವಾಗಿ ಪ್ರತಿಭಟನೆ ನಡೆಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದನ್ನು ನಾವು ಬಯಸುವುದಿಲ್ಲ. ಅದೊಂದು ತಾನಾಗಿಯೇ ಉದ್ಭವಿಸಿದ ಪ್ರತಿಭಟನೆಯಾಗಿತ್ತು. ಅನೇಕ ಬಾರಿ ಸರ್ಕಾರಗಳು ಯಾವುದೇ ಭಿನ್ನಾಭಿಪ್ರಾಯ ಅಥವಾ ಪ್ರತಿಭಟನೆಯನ್ನು ಸಹಿಸುವುದಿಲ್ಲ. ಎಲ್ಲೆಲ್ಲಿ ಶಾಂತಿಯುತ ಪ್ರತಿಭಟನೆಗಳು ನಡೆದಿವೆಯೋ ಮತ್ತು ಎಲ್ಲೆಲ್ಲಿ ಪ್ರತಿಭಟನಾಕಾರರನ್ನು ಗುರಿಯಾಗಿಸಲಾಗಿದೆಯೋ, ಅವರಿಗಾಗಿ ವೆಬ್‌ಸೈಟ್ ಒಂದನ್ನು ತೆರೆಯಲಾಗುತ್ತದೆ. ಇದಕ್ಕೆ ನಾನು 1 ಕೋಟಿ ರೂ. ದೇಣಿಗೆ ನೀಡುತ್ತೇನೆ. ಭಾರತದಲ್ಲಿ ಎಲ್ಲೇ ವಿಚಾರಣೆ ನಡೆದರೂ ನಮ್ಮ ವಕೀಲರು ಸಂತ್ರಸ್ತರಿಗೆ ನೆರವಾಗಲು ಅನುಕೂಲವಾಗುವಂತೆ ಇತರ ವಕೀಲರೂ ಸಹಾಯ ಮಾಡಬೇಕೆಂದು ಮನವಿ ಮಾಡುತ್ತೇನೆ” ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.

ಇದನ್ನೂ ಓದಿ: ಎಲ್ಲ ಬೇಡಿಕೆಗೂ ಕೇಂದ್ರ ಸರ್ಕಾರ ಒಪ್ಪಿಗೆ; ಪ್ರತಿಭಟನೆ ಹಿಂಪಡೆದ ಸಿಜೆಪಿ, ಶಾಂತಿಯುತವಾಗಿ ತೆರಳಲು ವಿದ್ಯಾರ್ಥಿಗಳಿಗೆ ಕರೆ

“ಪ್ರತಿಯೊಂದು ಸ್ಥಳದಲ್ಲೂ ಏನು ನಡೆಯಿತು, ಯಾವ ವಿದ್ಯಾರ್ಥಿ ಅಥವಾ ಪ್ರತಿಭಟನಾಕಾರರು ತೊಂದರೆಗೆ ಒಳಗಾಗಿದ್ದಾರೆ ಮತ್ತು ಅವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಪತ್ತೆಹಚ್ಚಲು ಈ ಸಿಜೆಪಿ ಒಂದು ಫ್ರೇಮ್​​ವರ್ಕ್​ ಅನ್ನು ರೂಪಿಸಲಿದೆ” ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ಕಾನೂನು ಹೋರಾಟದಲ್ಲಿ ನೆರವಾಗಬಲ್ಲ ವಕೀಲರನ್ನು ಗುರುತಿಸಲು ಈ ವೆಬ್​ಸೈಟ್ ಸಹಾಯ ಮಾಡಲಿದೆ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ. “ಕಾನೂನು ನೆರವು ನೀಡಲು ಇಚ್ಛಿಸುವ ವಕೀಲರು ತಮ್ಮ ಹೆಸರು, ಸ್ಥಳ ಮತ್ತು ನೀಡಬಹುದಾದ ನೆರವಿನ ಸ್ವರೂಪವನ್ನು ನೋಂದಾಯಿಸಿಕೊಳ್ಳಲು ವೇದಿಕೆಯೊಂದನ್ನು ನಿರ್ಮಿಸಲಾಗುವುದು” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Dharmendra Pradhan: ಸಿಜೆಪಿ ಬೇಡಿಕೆಗೆ ಮಣಿದ ಸರ್ಕಾರ; ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾಗಿರುವ ಕಪಿಲ್ ಸಿಬಲ್, ಪ್ರಧಾನಿ ಮನಮೋಹನ್ ಸಿಂಗ್ ಅವರ ಸಂಪುಟದಲ್ಲಿ ಮೇ 2009ರಿಂದ ಅಕ್ಟೋಬರ್ 2012ರವರೆಗೆ ಭಾರತದ ಮಾನವ ಸಂಪನ್ಮೂಲ ಅಭಿವೃದ್ಧಿ (HRD) ಅಥವಾ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್, ಜುಲೈ 25ರಂದು 37 ದಿನಗಳ ಸುದೀರ್ಘ ಪ್ರತಿಭಟನೆಯನ್ನು ಹಿಂಪಡೆಯುವ ಮುನ್ನ ಹಿರಿಯ ವಕೀಲ ಹಾಗೂ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರಿಂದ ಕಾನೂನು ಸಲಹೆ ಪಡೆಯಲಾಗಿತ್ತು ಎಂದು ತಿಳಿಸಿದರು. ಈ ಹಿಂದಿನ ಪ್ರತಿಭಟನೆಗಳಲ್ಲೂ ಪ್ರತಿಭಟನಾಕಾರರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಬಳಸಲಾದ ತಂತ್ರವನ್ನು ಉಲ್ಲೇಖಿಸಿದ ಸಿಜೆಪಿ, ಪ್ರತಿಭಟನೆ ಮುಗಿದ ನಂತರ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದೆ.

“ನಾವು ಕಪಿಲ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆವು ಮತ್ತು ಕಾನೂನು ಮಾರ್ಗದರ್ಶನ ಕೋರಿದ್ದೆವು. ಜುಲೈ 25ರಂದು ಪ್ರತಿಭಟನೆಯನ್ನು ಹಿಂಪಡೆದಾಗ, ಚಳವಳಿ ಅಂತ್ಯಗೊಂಡ ನಂತರ ಸರ್ಕಾರವು ಪ್ರತ್ಯೇಕವಾಗಿ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಲು ಪ್ರಾರಂಭಿಸಬಹುದು ಎಂಬ ಆತಂಕ ನಮಗಿತ್ತು. ಇತರ ಪ್ರಮುಖ ಪ್ರತಿಭಟನೆಗಳಲ್ಲೂ ಜನರನ್ನು ಪ್ರತ್ಯೇಕಿಸಿ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿದ ಉದಾಹರಣೆಗಳಿರುವುದರಿಂದ ಈ ಆತಂಕ ಸಹಜವಾಗಿಯೇ ಇತ್ತು. ಹೀಗಾಗಿ, ಯಾವುದೇ ಪ್ರತಿಭಟನಾಕಾರರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬಾರದು ಎಂಬುದನ್ನು ನಮ್ಮ ಬೇಡಿಕೆಯಲ್ಲಿ ಸೇರಿಸಲಾಗಿತ್ತು” ಎಂದು ಸೌರವ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *