ಕೋಲ್ಕತಾದಲ್ಲಿ ಬಳಸಲಾದ ಟಿಬಿಎಂ ಯಂತ್ರದ ಚಿತ್ರImage Credit source: PTI
ನವದೆಹಲಿ, ಜುಲೈ 27: ಮೆಟ್ರೋ, ರೈಲ್ವೆ ಮತ್ತು ಹೈವೇ ಸುರಂಗ ಯೋಜನೆಗಳಲ್ಲಿ ಬಳಸಲಾಗುವ ಅತ್ಯಾಧುನಿಕ ಟನಲ್ ಬೋರಿಂಗ್ ಮೆಷಿನ್‌ಗಳ (TBM) ಪೂರೈಕೆಯಲ್ಲಿ ಚೀನಾ ಅಡ್ಡಗಾಲು ಹಾಕಿದ್ದು ಭಾರತ ಹೊಸ ಮಾಸ್ಟರ್ ಪ್ಲಾನ್ ಹಾಕಿದೆ. ಭಾರತ ಸರ್ಕಾರವು ತನ್ನ ಮೂಲಸೌಕರ್ಯ (Infrastructure) ವಲಯವನ್ನು ಚೀನಾದ ಮೇಲಿನ ಅವಲಂಬನೆಯಿಂದ ಮುಕ್ತಗೊಳಿಸಲು ಸಮರೋಪಾದಿಯ ಕೆಲಸ ಆರಂಭಿಸಿದೆ. ಇನ್ಫ್ರಾಸ್ಟ್ರಕ್ಚರ್ ಕ್ಷೇತ್ರದ ದೊಡ್ಡ ದೊಡ್ಡ ಪ್ರಾಜೆಕ್ಟ್ಗಳಲ್ಲಿ ಚೀನಾದ (China) ಯಂತ್ರೋಪಕರಣಗಳ ಬಳಕೆ ವ್ಯಾಪಕವಾಗಿದೆ. ಅವುಗಳ ರಫ್ತಿಗೆ ಚೀನಾ ಅಡ್ಡಗಾಲು ಹಾಕಿದ್ದು ಭಾರತವನ್ನು ಸ್ವಾವಲಂಬನೆಯ ದಾರಿ ಹಿಡಿಯುವಂತೆ ಮಾಡಿದೆ.
ಏನಿದು TBM ಆಘಾತ?
ಭಾರತದ ಪ್ರಮುಖ ಮೆಟ್ರೋ ಯೋಜನೆಗಳು (ಬೆಂಗಳೂರು, ಮುಂಬೈ, ಡೆಹ್ರಾಡೂನ್ ಮುಂತಾದವು) ಮತ್ತು ಹಿಮಾಲಯನ್ ಪ್ರದೇಶದ ಸುರಂಗ ಯೋಜನೆಗಳಿಗಾಗಿ ಚೀನಾದಲ್ಲಿ ತಯಾರಾದ TBM ಯಂತ್ರಗಳನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಚೀನಾದ ರಫ್ತು ನಿರ್ಬಂಧಗಳಿಂದಾಗಿ ಈ ಸುರಂಗ ಕೊರಕ ಯಂತ್ರಗಳು ಚೀನಾದಿಂದ ಹೊರಗೆ ಬರಲೇ ಇಲ್ಲ.
ಇದರಿಂದಾಗಿ ಭಾರತದ ಹಲವು ಪ್ರಾಜೆಕ್ಟ್ಗಳ ಕೆಲಸ ನಿಂತುಹೋಗುವ ಅಥವಾ ತೀವ್ರ ವಿಳಂಬವಾಗುವ ಭೀತಿ ಎದುರಾಯಿತು. ಈ ‘TBM ಆಘಾತ’ ಭಾರತಕ್ಕೆ ಮೂಲಸೌಕರ್ಯ ವಲಯದಲ್ಲಿ ಚೀನಾದ ಮೇಲಿನ ಅತಿಯಾದ ಅವಲಂಬನೆಯ ಅಪಾಯವನ್ನು ಮನವರಿಕೆ ಮಾಡಿಕೊಟ್ಟಿತು.
ಇದನ್ನೂ ಓದಿ: ಚೀನಾದ ಉತ್ಪನ್ನಗಳು ಇಷ್ಟು ಕಡಿಮೆ ಬೆಲೆಗೆ ಸಿಗುವುದು ಹೇಗೆ? ಚೀನೀ ಸಿಇಒವೊಬ್ಬರು ಬಿಚ್ಚಿಟ್ಟ ವಾಸ್ತವ ಇದು
ಸ್ವಾವಲಂಬನೆಗೆ ಭಾರತದ ಪ್ರಮುಖ ಕಾರ್ಯತಂತ್ರಗಳು
- ದೇಶೀಯವಾಗಿ ತಯಾರಿಕೆಗೆ ಉತ್ತೇಜನ: ಭಾರತವು ಈಗ ದೇಶೀಯವಾಗಿಯೇ (Indigenous) ಅತ್ಯಾಧುನಿಕ ಸುರಂಗ ಕೊರೆಯುವ ಯಂತ್ರಗಳನ್ನು (TBMs) ಹಾಗೂ ಭಾರೀ ನಿರ್ಮಾಣ ಉಪಕರಣಗಳನ್ನು ತಯಾರಿಸಲು (Local Manufacturing) ಸ್ಥಳೀಯ ಮತ್ತು ಜಾಗತಿಕ ಕಂಪನಿಗಳೊಂದಿಗೆ (ಜಪಾನ್, ಜರ್ಮನಿ) ಸಹಭಾಗಿತ್ವ ವಹಿಸುತ್ತಿದೆ.
- ಪೂರೈಕೆ ಸರಪಳಿ ವೈವಿಧ್ಯೀಕರಣ: ಚೀನಾದ ಕಂಪನಿಗಳಿಗೆ ಪರ್ಯಾಯವಾಗಿ ಜಪಾನ್, ಜರ್ಮನಿ ಮತ್ತು ಯುರೋಪಿಯನ್ ಒಕ್ಕೂಟದ ಪ್ರಮುಖ ಯಂತ್ರೋಪಕರಣ ತಯಾರಕ ಸಂಸ್ಥೆಗಳಿಗೆ (Diversifying Supply Chain) ಭಾರತ ಆದ್ಯತೆ ನೀಡುತ್ತಿದೆ.
- PLI ಯೋಜನೆಗಳು: ಭಾರೀ ಯಂತ್ರೋಪಕರಣಗಳು ಮತ್ತು ನಿರ್ಮಾಣ ಉಪಕರಣಗಳ ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸಲು ಸರ್ಕಾರ ವಿಶೇಷ ಸಬ್ಸಿಡಿ ಮತ್ತು ನಿಯಮಾವಳಿಗಳ ಬೆಂಬಲ ನೀಡುತ್ತಿದೆ.
- ಸುರಕ್ಷತೆಯ ಪರಿಶೀಲನೆ, ಕಟ್ಟುನಿಟ್ಟಿನ ನಿಯಮ: ಮೂಲಸೌಕರ್ಯ ಯೋಜನೆಗಳಲ್ಲಿ ಬಳಸುವ ವಿದೇಶಿ ತಂತ್ರಜ್ಞಾನ ಮತ್ತು ಉಪಕರಣಗಳ ಮೇಲೆ, ಅದರಲ್ಲೂ ವಿಶೇಷವಾಗಿ ಚೀನಾದಿಂದ ಬರುವ ಯಂತ್ರಗಳ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌ಗಳ ಮೇಲೆ ಕಟ್ಟುನಿಟ್ಟಿನ ಭದ್ರತಾ ತಪಾಸಣೆಗಳನ್ನು ಕಡ್ಡಾಯಗೊಳಿಸಲಾಗಿದೆ.
ಇದನ್ನೂ ಓದಿ: ಬ್ರಹ್ಮಪುತ್ರಾ ನದಿಗೆ ಚೀನಾ ಅಡ್ಡಗಾಲು; ಅಣೆಕಟ್ಟೆ ಜಾಗವೇ ಬಹಳ ಡೇಂಜರ್- ಸ್ವತಃ ಚೀನೀ ವಿಜ್ಞಾನಿಗಳಿಂದಲೇ ವರದಿ
ಮೂಲಸೌಕರ್ಯ ಯೋಜನೆಗಳು ಯಾವುದೇ ಜಾಗತಿಕ ಅಥವಾ ರಾಜಕೀಯ ಬಿಕ್ಕಟ್ಟುಗಳಿಂದ ಸ್ಥಗಿತಗೊಳ್ಳಬಾರದು ಮತ್ತು ಮುಂಬರುವ ದಶಕಗಳಲ್ಲಿ ದೇಶದ ಮೆಟ್ರೋ, ರೈಲ್ವೆ ಹಾಗೂ ರಕ್ಷಣಾತ್ಮಕ ಸುರಂಗ ನಿರ್ಮಾಣಗಳು’ಆತ್ಮನಿರ್ಭರ’ (ಸ್ವಾವಲಂಬಿ) ತಂತ್ರಜ್ಞಾನದ ಆಧಾರದ ಮೇಲೆ ನಡೆಯಬೇಕು ಎಂಬುದು ಭಾರತ ಸರ್ಕಾರದ ಮುಖ್ಯ ಗುರಿಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ