ಫಿಫಾ ವಿಶ್ವಕಪ್ 2026ರ ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳ ವೇಳೆ ನಡೆದ ಆನ್-ಫೀಲ್ಡ್ ಗಲಾಟೆ ಹಾಗೂ ವಿವಾದಾತ್ಮಕ ಆಚರಣೆಗಳಿಗೆ ಸಂಬಂಧಿಸಿದಂತೆ, ಅರ್ಜೆಂಟೀನಾ ಆಟಗಾರರು ಮತ್ತು ಅರ್ಜೆಂಟೀನಾ ಫುಟ್‌ಬಾಲ್ ಸಂಸ್ಥೆ (AFA) ವಿರುದ್ಧ ಫಿಫಾ (FIFA) ಭಾರಿ ಶಿಸ್ತು ಕ್ರಮಕ್ಕೆ ಮುಂದಾಗಿದೆ.
ಕೈಕೈ ಮಿಲಾಯಿಸಿದ ಆಟಗಾರರು:
ಸ್ಪೇನ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ 1-0 ಗೋಲುಗಳಿಂದ ಸೋತ ನಂತರ, ಮೈದಾನದಲ್ಲಿ ಉಭಯ ತಂಡಗಳ ಆಟಗಾರರ ನಡುವೆ ಭಾರಿ ಗಲಾಟೆ ನಡೆದಿತ್ತು. ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಫಿಫಾ ಶಿಸ್ತು ಸಮಿತಿಯು ಅರ್ಜೆಂಟೀನಾದ ಪ್ರಮುಖ ಆಟಗಾರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿದೆ.
- ಲಿಯಾಂಡ್ರೊ ಪರೇಡೆಸ್: ಸ್ಪೇನ್‌ನ ಗಾವಿ ಮತ್ತು ಎರಿಕ್ ಗಾರ್ಸಿಯಾ ಅವರೊಂದಿಗೆ ಜಗಳವಾಡಿದ ಹಿನ್ನೆಲೆಯಲ್ಲಿ ಇವರ ಮೇಲೆ 3 ಹಲ್ಲೆ ಪ್ರಕರಣಗಳನ್ನು ದಾಖಲಿಸಲಾಗಿದೆ.
- ನಾಹ್ಯುಯೆಲ್ ಮೊಲಿನಾ: ಸ್ಪೇನ್ ತಂಡದ ನಾಯಕ ರೋಡ್ರಿಗೆ ಹೊಡೆಯಲು ಯತ್ನಿಸಿದ ಆರೋಪದ ಮೇಲೆ 2 ಹಲ್ಲೆ ಮತ್ತು ಅಸಭ್ಯ ವರ್ತನೆಯ ಕೇಸ್ ಹಾಕಲಾಗಿದೆ.
- ಥಿಯಾಗೊ ಅಲ್ಮಾಡಾ: ಅರ್ಜೆಂಟೀನಾ ಆಟಗಾರ ಥಿಯಾಗೊ ವಿರುದ್ಧ ಕ್ರೀಡಾ ಮನೋಭಾವನೆಗೆ ಧಕ್ಕೆ ತಂದಿದ್ದಕ್ಕಾಗಿ ಫಿಫಾ ಶಿಸ್ತು ಸಂಹಿತೆಯ ಆರ್ಟಿಕಲ್ 14(1)(b) ಅಡಿಯಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದೆ.
- ರೋಬರ್ಟೊ ಅಯಾಲಾ (ಸಹಾಯಕ ತರಬೇತುದಾರ): ಮೈದಾನದ ಗಲಾಟೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಅರ್ಜೆಂಟೀನಾ ತಂಡದ ಸಹಾಯಕ ಕೋಚ್ ರೋಬರ್ಟೊ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿದೆ.
ರಾಜಕೀಯ ಬ್ಯಾನರ್ ಪ್ರದರ್ಶನದ ವಿವಾದ:
ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದ ನಂತರ, ಅರ್ಜೆಂಟೀನಾ ಆಟಗಾರರು ಮೈದಾನದಲ್ಲಿ “ಲಾಸ್ ಮಾಲ್ವಿನಾಸ್ ಸನ್ ಅರ್ಜೆಂಟೀನಾಸ್” (ಫಾಕ್‌ಲ್ಯಾಂಡ್ ದ್ವೀಪಗಳು ಅರ್ಜೆಂಟೀನಾಕ್ಕೆ ಸೇರಿದ್ದು) ಎಂಬ ರಾಜಕೀಯ ಘೋಷಣೆಯುಳ್ಳ ಬ್ಯಾನರ್ ಪ್ರದರ್ಶಿಸಿದ್ದರು.
ಕ್ರೀಡಾಂಗಣದಲ್ಲಿ ಯಾವುದೇ ರಾಜಕೀಯ ಅಥವಾ ಸದ್ಧಾಂತಿಕ ಸಂದೇಶಗಳನ್ನು ಪ್ರದರ್ಶಿಸುವುದನ್ನು ಫಿಫಾದ ಆರ್ಟಿಕಲ್ 13 ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ. ಹೀಗಾಗಿ ಇದರ ವಿರುದ್ಧವೂ ತನಿಖೆ ಆರಂಭವಾಗಿದೆ.
ಅರ್ಜೆಂಟೀನಾ ಫುಟ್‌ಬಾಲ್ ಸಂಸ್ಥೆ (AFA) ಮೇಲಿನ ಆರೋಪಗಳು:
ಕೇವಲ ಆಟಗಾರರು ಮಾತ್ರವಲ್ಲದೆ, ಇಡೀ ಅರ್ಜೆಂಟೀನಾ ಫುಟ್‌ಬಾಲ್ ಸಂಸ್ಥೆಯ ವಿರುದ್ಧವೂ ಫಿಫಾ ಪ್ರಕರಣ ದಾಖಲಿಸಿದೆ.
- ಅಭಿಮಾನಿಗಳ ದುರ್ವರ್ತನೆ: ಪಂದ್ಯದ ವೇಳೆ ಅರ್ಜೆಂಟೀನಾ ಅಭಿಮಾನಿಗಳು ಜನಾಂಗೀಯ ನಿಂದನೆ ಮಾಡಿದ್ದು ಮತ್ತು ಮೈದಾನಕ್ಕೆ ವಸ್ತುಗಳನ್ನು ಎಸೆದ ಆರೋಪ ಎದುರಿಸುತ್ತಿದೆ.
- ನಿಯಮ ಉಲ್ಲಂಘನೆ: ಪಂದ್ಯವನ್ನು ತಡವಾಗಿ ಆರಂಭಿಸಿದ್ದು ಮತ್ತು ಕ್ರೀಡಾಂಗಣದ ಭದ್ರತಾ ನಿಯಮಗಳನ್ನು ಪಾಲಿಸದೇ ಇರುವ ಆರೋಪ ಕೂಡ ಅರ್ಜೆಂಟೀನಾ ಫುಟ್‌ಬಾಲ್ ಸಂಸ್ಥೆಯ ಮೇಲಿದೆ.
ಇದನ್ನೂ ಓದಿ: ಯಾವ ಬೌಲರ್ ಕಂಡರೆ ಭಯ? ವೈಭವ್ ಸೂರ್ಯವಂಶಿ ಖಡಕ್ ಉತ್ತರ
ಮುಂದಿನ ಪರಿಣಾಮಗಳೇನು?
ಆರೋಪ ಎದುರಿಸುತ್ತಿರುವ ಆಟಗಾರರು ಮತ್ತು ಅರ್ಜೆಂಟೀನಾ ಫುಟ್‌ಬಾಲ್ ಸಂಸ್ಥೆಯು ಫಿಫಾ ಶಿಸ್ತು ಸಮಿತಿಗೆ ತಮ್ಮ ಅಧಿಕೃತ ಸ್ಪಷ್ಟನೆ ನೀಡಬೇಕಿದೆ. ತಪ್ಪಿತಸ್ಥರೆಂದು ಸಾಬೀತಾದರೆ ಆಟಗಾರರಿಗೆ ಕನಿಷ್ಠ 3 ಪಂದ್ಯಗಳ ನಿಷೇಧ ವಿಧಿಸುವ ಸಾಧ್ಯತೆಯಿದೆ. ಇದರಿಂದ ಅವರು ಮುಂದಿನ ಪ್ರಮುಖ ಅಂತರರಾಷ್ಟ್ರೀಯ ಪಂದ್ಯಗಳಿಂದ ವಂಚಿತರಾಗಬಹುದು ಹಾಗೂ AFA ಭಾರಿ ಪ್ರಮಾಣದ ದಂಡ ತೆರಬೇಕಾಗಬಹುದು.