ಬೆಂಗಳೂರು, ಜು.31: ದೇಶದ ಪ್ರಮುಖ ಆನ್ಲೈನ್ ಫುಡ್ ಡೆಲಿವರಿ ಸಂಸ್ಥೆಯಾದ ಸ್ವಿಗ್ಗಿ (Swiggy) ಗೆ ಬೆಂಗಳೂರಿನಲ್ಲಿ ದೊಡ್ಡ ಆಘಾತ ಎದುರಾಗುವ ಸಾಧ್ಯತೆಯಿದೆ. ಅನಗತ್ಯ ಕಮಿಷನ್, ಪಾವತಿಗಳಲ್ಲಿ ಪಾರದರ್ಶಕತೆಯ ಕೊರತೆ ಹಾಗೂ ಅನುಮತಿಯಿಲ್ಲದೆ ಹಣ ಕಡಿತಗೊಳಿಸುತ್ತಿರುವುದನ್ನು ಖಂಡಿಸಿ ಬೆಂಗಳೂರು ಹೋಟೆಲ್ಗಳ ಸಂಘ (BHA) ಸೇರಿದಂತೆ ವಿವಿಧ ಹೋಟೆಲ್ ಮಾಲೀಕರ ಸಂಘಟನೆಗಳು ಆಗಸ್ಟ್ 15ರಿಂದ ಸ್ವಿಗ್ಗಿ ಮೂಲಕ ಆರ್ಡರ್ ಸ್ವೀಕರಿಸುವುದನ್ನು ಪೂರ್ಣವಾಗಿ ಸ್ಥಗಿತಗೊಳಿಸಲು (Boycott) ಗಂಭೀರ ತೀರ್ಮಾನ ಕೈಗೊಂಡಿವೆ.
ಕಳೆದ 10 ತಿಂಗಳಿನಿಂದ ನಿರಂತರವಾಗಿ ಮಾತುಕತೆ ನಡೆಸಿದರೂ ಸಮಸ್ಯೆಗೆ ಸೂಕ್ತ ಪರಿಹಾರ ಸಿಗದ ಹಿನ್ನೆಲೆಯಲ್ಲಿ, ಸಮಸ್ಯೆಗಳನ್ನು ಸರಿಪಡಿಸಲು ಸ್ವಿಗ್ಗಿಗೆ 15 ದಿನಗಳ ಅಂತಿಮ ಗಡುವು (ಆಗಸ್ಟ್ 15) ನೀಡಲಾಗಿದೆ.
ಹೋಟೆಲ್ ಮಾಲೀಕರ ಆರೋಪಗಳೇನು?
ಹೋಟೆಲ್ ಮಾಲೀಕರ ಅನುಮತಿಯಿಲ್ಲದೆ ಪ್ರಚಾರ ವೆಚ್ಚಗಳು, ಕ್ಲಿಕ್ ವೆಚ್ಚ, ಕಸ್ಟಮರ್ ಅಕ್ವಿಸಿಷನ್ (CPA) ಹಾಗೂ ಜಾಹೀರಾತು ಶುಲ್ಕಗಳ ಹೆಸರಿನಲ್ಲಿ ಹಣ ಕಡಿತಗೊಳಿಸಲಾಗುತ್ತಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿಎಚ್ಎ ಗೌರವಾಧ್ಯಕ್ಷ ಪಿ.ಸಿ. ರಾವ್, “ನಮಗೆ ಸ್ವಿಗ್ಗಿಯ ಸಾಮಾನ್ಯ ಸೇವಾ ಶುಲ್ಕಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ ಸೇವಾ ಶುಲ್ಕ, ಪೇಔಟ್ ಶುಲ್ಕ, ಮ್ಯಾಪ್-ಅಪ್ ಶುಲ್ಕ ಎಂದು ಹೇಳಿ 1 ಲಕ್ಷ ರೂಪಾಯಿ ಆರ್ಡರ್ ಹಣದಲ್ಲಿ ಹೋಟೆಲ್ ಮಾಲೀಕರಿಗೆ ಕೇವಲ 40,000 ದಿಂದ 50,000 ಮಾತ್ರ ನೀಡಲಾಗುತ್ತಿದೆ” ಎಂದು ಕಿಡಿಕಾರಿದ್ದಾರೆ.
ಗ್ರಾಹಕರಿಂದ ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸಬೇಕಾದ ಜಿಎಸ್ಟಿ ಮೊತ್ತಕ್ಕೂ ಸ್ವಿಗ್ಗಿ ಸೇವಾ ಶುಲ್ಕ ವಿಧಿಸುತ್ತಿದೆ ಎಂದು ಸಂಘಟನೆ ಗಂಭೀರ ಆರೋಪ ಮಾಡಿದೆ.
ಹೋಟೆಲ್ ಸಂಘಟನೆಗಳ ಪ್ರಮುಖ ಬೇಡಿಕೆಗಳು
- ಪ್ರತಿಯೊಂದು ಆರ್ಡರ್ನ ಕಮಿಷನ್, ಜಿಎಸ್ಟಿ, ಜಾಹೀರಾತು ವೆಚ್ಚ ಹಾಗೂ ರಿಯಾಯಿತಿಗಳನ್ನು ಪ್ರತ್ಯೇಕವಾಗಿ ಸ್ಪಷ್ಟಪಡಿಸುವ ಬಿಲ್ ನೀಡಬೇಕು.
- ಅನಗತ್ಯ ಜಾಹೀರಾತು ಹಾಗೂ ಪ್ರಚಾರ ಅಭಿಯಾನಗಳಿಂದ ಹೋಟೆಲ್ಗಳು ಹೊರಬರಲು ಸುಲಭವಾದ ‘ಒನ್-ಕ್ಲಿಕ್’ ಆಯ್ಕೆ ನೀಡಬೇಕು.
- ಹೋಟೆಲ್ ಮಾಲೀಕರ ಡಿಜಿಟಲ್ ಅಥವಾ ಲಿಖಿತ ಅನುಮತಿಯಿಲ್ಲದೆ ಯಾವುದೇ ರೀತಿಯ ಪ್ರಚಾರ ವೆಚ್ಚಗಳನ್ನು ಕಡಿತಗೊಳಿಸಬಾರದು.
ಇದನ್ನೂ ಓದಿ: ಹೊಟ್ಟೆನೋವೆಂದು ಬಿದ್ದಿದ್ದಾಗ ಸಂಪಾದನೆ ಕದ್ದ ಕಳ್ಳರು: ಬೀದಿಬದಿ ವ್ಯಾಪಾರಿಯ ಕಣ್ಣೀರು ಒರೆಸಿದ ಅಪರಿಚಿತ
ಆಗಸ್ಟ್ 15 ರವರೆಗೆ ಮಾತುಕತೆಗೆ ಅವಕಾಶ
ಸಂಘಟನೆಯು ಬಾಯ್ಕಾಟ್ ಎಚ್ಚರಿಕೆ ನೀಡಿದ್ದರೂ, ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಬಾಗಿಲು ತೆರೆದಿದೆ. “ಸ್ವಿಗ್ಗಿ ಮುಂದಿನ 15 ದಿನಗಳಲ್ಲಿ ಈ ಎಲ್ಲಾ ಲೋಪದೋಷಗಳನ್ನು ಸರಿಪಡಿಸಿಕೊಂಡರೆ ನಾವು ಸೇವೆ ಮುಂದುವರಿಸುತ್ತೇವೆ. ಇಲ್ಲವಾದಲ್ಲಿ ನಮಗೆ ಬಾಯ್ಕಾಟ್ ಮಾಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ” ಎಂದು ಪಿ.ಸಿ. ರಾವ್ ತಿಳಿಸಿದ್ದಾರೆ. ಅಲ್ಲದೆ, ಇದರಿಂದ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದಾಗಿಯೂ ಸಂಘ ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ