Headlines

ನೀವು ಯಾವಾಗ ಬೇಕಾದರೂ ಬನ್ನಿ, ನಿಮ್ಮ ಭದ್ರತೆಯ ಜವಾಬ್ದಾರಿ ನಮ್ಮದು, ತಸ್ಲೀಮಾ ನಸ್ರೀನ್​ಗೆ ಸಿಎಂ ಸುವೇಂದು ಭರವಸೆ – Kannada News | Taslima Nasreen Returns: CM Suvendu Adhikari Guarantees Full Security in Kolkata

ಕೋಲ್ಕತ್ತಾ, ಆಗಸ್ಟ್ 02: ಸುಮಾರು 19 ವರ್ಷಗಳ ಗಡಿಪಾರು ಬಳಿಕ ಕೋಲ್ಕತ್ತಾಗೆ ಮರಳಿರುವ ಬಾಂಗ್ಲಾದೇಶದ ಪ್ರಸಿದ್ಧ ಲೇಖಕಿ ತಸ್ಲೀಮಾ ನಸ್ರೀನ್ (Taslima Nasreen) ಅವರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಪೂರ್ಣ ಭದ್ರತೆಯ ಭರವಸೆ ನೀಡಿದ್ದಾರೆ. ಶನಿವಾರ ಕೋಲ್ಕತ್ತಾದ ರವೀಂದ್ರ ಸದನದಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿಗಳು, ತಸ್ಲೀಮಾ ಅವರು ಇನ್ಮುಂದೆ ಬಯಸಿದಾಗಲೆಲ್ಲಾ ಬಂಗಾಳಕ್ಕೆ ಭೇಟಿ ನೀಡಬಹುದು ಎಂದು ಮುಕ್ತ ಆಹ್ವಾನ ನೀಡಿದ್ದಾರೆ.

ಪೊಲೀಸ್ ಇಲಾಖೆಯ ಉಸ್ತುವಾರಿ ವಹಿಸಿರುವ ಮುಖ್ಯಮಂತ್ರಿಯಾಗಿ ನಿಮಗೆ ಸೂಕ್ತ ಭದ್ರತೆ ಒದಗಿಸುವುದು ನನ್ನ ಕರ್ತವ್ಯ. ಒಮ್ಮೆ ಮಾತ್ರವಲ್ಲ, ನೀವು ಎಷ್ಟು ಬಾರಿ ಬಯಸಿದರೂ ಪಶ್ಚಿಮ ಬಂಗಾಳಕ್ಕೆ ಬನ್ನಿ, ಸಂಪೂರ್ಣ ಭದ್ರತೆ ನೀಡಲಾಗುವುದು ಎಂದಿದ್ದಾರೆ. ಬಂಗಾಳವು ಈಗ ಬೆದರಿಕೆ ಹಾಗೂ ಜನರನ್ನು ಮೌನಗೊಳಿಸುವ ಕಾಲದಿಂದ ಹೊರಬಂದಿದೆ. ಇಲ್ಲಿ ಸಾಂವಿಧಾನಿಕ ಮೌಲ್ಯಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ರಕ್ಷಿಸಲಾಗುತ್ತದೆ” ಎಂದು ಅವರು ಹೇಳಿದ್ದಾರೆ.

2007 ರ ನಂತರ ಪ್ರಥಮ ಬಾರಿಗೆ ಕೋಲ್ಕತ್ತಾದ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡ 63 ವರ್ಷದ ಲೇಖಕಿ ತಸ್ಲೀಮಾ ನಸ್ರೀನ್, ನಾನು ಯಾವುದೇ ರಾಜಕೀಯ ಪಕ್ಷದ ಪರವಾಗಿ ಅಥವಾ ವಿರುದ್ಧವಾಗಿ ಮಾತನಾಡಲು ಬಂದಿಲ್ಲ. ಮಹಿಳಾ ಹಕ್ಕುಗಳು ಮತ್ತು ವಾಕ್ ಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತಲು ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಮತ್ತಷ್ಟು ಓದಿ: ಕೆಂಪು ಬಾರ್ಡರ್​ನ ಬಿಳಿ ಸೀರೆ, ಹಣೆಯ ಮೇಲೆ ಬಿಂದಿ, ಮುಖದಲ್ಲಿ ನಗು, 19 ವರ್ಷಗಳ ಬಳಿಕ ಕೋಲ್ಕತ್ತಾಗೆ ಬಂದ ತಸ್ಲೀಮಾ ನಸ್ರೀನ್

ಅನ್ಯಾಯ ಎಷ್ಟು ಕಾಲ ಮುಂದುವರೆದರೂ ಶಾಶ್ವತವಲ್ಲ ಎಂಬುದಕ್ಕೆ ಇಂದು ತೆರೆದಿರುವ ಈ ಬಾಗಿಲುಗಳೇ ಸಾಕ್ಷಿ. ಇತಿಹಾಸವು ಬಾಗಿಲುಗಳನ್ನು ಯಾರು ಮುಚ್ಚಿದರು ಮತ್ತು ಯಾರು ತೆರೆದರು ಎಂಬುದನ್ನು ನೆನಪಿನಲ್ಲಿಡುತ್ತದೆ ಎಂದು ಭಾವುಕರಾಗಿ ನುಡಿದರು.

2007ರ ಹಿಂಸಾತ್ಮಕ ಪ್ರತಿಭಟನೆ ಹಾಗೂ ನಿಷೇಧ: ತಸ್ಲೀಮಾ ನಸ್ರೀನ್ ಅವರ ‘ದ್ವಿಖಂಡಿತೋ’ ಎಂಬ ಆತ್ಮಚರಿತ್ರೆ ಕೃತಿಯ ವಿರುದ್ಧ 2007 ರಲ್ಲಿ ಮೂಲಭೂತವಾದಿ ಸಂಘಟನೆಗಳು ಕೋಲ್ಕತ್ತಾದಲ್ಲಿ ಭಾರಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದವು. ಅಂದಿನ ಎಡರಂಗ ಸರ್ಕಾರವು ಪುಸ್ತಕವನ್ನು ನಿಷೇಧಿಸಿ, ಕಾನೂನು-ಸುವ್ಯವಸ್ಥೆಯ ನೆಪವೊಡ್ಡಿ ಅವರನ್ನು ರಾಜ್ಯದಿಂದ ಹೊರಗೆ ಕಳುಹಿಸಿತ್ತು.

ಧಾರ್ಮಿಕ ಮೂಲಭೂತವಾದದ ವಿರುದ್ಧ ಕಠಿಣ ಬರಹಗಳನ್ನು ಬರೆದಿದ್ದಕ್ಕಾಗಿ ಇಸ್ಲಾಮಿಕ್ ಉಗ್ರ ಸಂಘಟನೆಗಳಿಂದ ಜೀವಬೆದರಿಕೆ ಎದುರಿಸಿದ ತಸ್ಲೀಮಾ, 1994 ರಲ್ಲೇ ಬಾಂಗ್ಲಾದೇಶದಿಂದ ಗಡಿಪಾರಾಗಿದ್ದರು. ಸುದೀರ್ಘ ಸಮಯದ ನಂತರ ಬಂಗಾಳದಲ್ಲಿ ಆಡಳಿತ ಬದಲಾವಣೆಯಾದ ಬೆನ್ನಲ್ಲೇ ಅವರಿಗೆ ಮತ್ತೆ ಅಧಿಕೃತ ಆಶ್ರಯ ಹಾಗೂ ವೇದಿಕೆ ಲಭಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *