ಮುಂಬೈ, ಆಗಸ್ಟ್ 5: ಯುಪಿಐ (UPI) ಡಿಜಿಟಲ್ ಪಾವತಿಗಳ ಮೇಲೆ ಮುಂದಿನ ದಿನಗಳಲ್ಲಿ ಶುಲ್ಕ ವಿಧಿಸಲಾಗುವುದೇ ಮತ್ತು ಈ ವೆಚ್ಚವನ್ನು ಯಾರು ಭರಿಸಲಿದ್ದಾರೆ ಎಂಬ ಚರ್ಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಸಂಜಯ್ ಮಲ್ಹೋತ್ರಾ ಸ್ಪಷ್ಟನೆ ನೀಡಿದ್ದಾರೆ. ಸರ್ಕಾರ ಮಂಡನೆ ಮಾಡಿರುವ ವಿಧೇಯಕದಲ್ಲಿ ಯುಪಿಐ ಪಾವತಿಯನ್ನು ಪ್ರಸ್ತಾಪಿಸಿಲ್ಲ. ಎಂಡಿಆರ್ ದರವನ್ನು ನಿಗದಿ ಮಾಡಿಲ್ಲ. ಅಥವಾ ಎಂಡಿಆರ್ಗೆ ಹಣದ ಮಿತಿಯನ್ನೂ ಪ್ರಸ್ತಾಪಿಸಿಲ್ಲ ಎಂದು ತಿಳಿಸಿರುವ ಆರ್‌ಬಿಐ ಗವರ್ನರ್, ಎಂಡಿಆರ್ ಅನ್ನು ಗ್ರಾಹಕರ ಹೊರತಾಗಿ ಸರ್ಕಾರವೋ, ವರ್ತಕರೋ ಅಥವಾ ವಿಶಾಲ ಆರ್ಥಿಕ ವ್ಯವಸ್ಥೆಯೂ ಭರಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂಸತ್ತಿನಲ್ಲಿ ಮಂಡಿಸಲಾದ ‘ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ತಿದ್ದುಪಡಿ ವಿಧೇಯಕ’ದ (Payment and Settlement Systems Amendment Bill) ಹಿನ್ನೆಲೆಯಲ್ಲಿ, ಯುಪಿಐ ಮೇಲಿನ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಅಥವಾ ಶುಲ್ಕಗಳ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಥರ್ಡ್ ಪಾರ್ಟಿ ಇನ್ಷೂರೆನ್ಸ್ ಇಲ್ಲದಿದ್ದರೆ ಪೆಟ್ರೋಲ್-ಡೀಸಲ್ ಸಿಗಲ್ಲ: ಸುಪ್ರೀಂಕೋರ್ಟ್ ನಿರ್ದೇಶನದಲ್ಲಿ ಬರಲಿದೆ ಹೊಸ ಕಾನೂನು
ಡಿಜಿಟಲ್ ಮೂಲಸೌಕರ್ಯ ನಿರ್ವಹಣೆಗೆ ವೆಚ್ಚ ಅಗತ್ಯ
ಯುಪಿಐನಂತಹ ಬೃಹತ್ ಡಿಜಿಟಲ್ ಮೂಲಸೌಕರ್ಯವು ದೀರ್ಘಕಾಲದವರೆಗೆ ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯಾಚರಿಸಲು ಅದರ ನಿರ್ವಹಣಾ ವೆಚ್ಚವನ್ನು ಯಾರಾದರೂ ಒಬ್ಬರು ಭರಿಸಲೇಬೇಕಾಗುತ್ತದೆ ಎಂದು ಆರ್‌ಬಿಐ ಗವರ್ನರ್ ತಿಳಿಸಿದ್ದಾರೆ.
ಸಾಮಾನ್ಯ ಗ್ರಾಹಕರ ಮೇಲೆ ನೇರ ಹೊರೆ ಬೀಳದು: ಯುಪಿಐ ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ವೆಚ್ಚ ತಗುಲಿದರೂ, ಆ ಹೊರೆಯನ್ನು ಸಾಮಾನ್ಯ ಬಳಕೆದಾರರ (General Consumers) ಮೇಲೆ ನೇರವಾಗಿ ಹೇರುವ ಪ್ರಸ್ತಾವನೆ ಸರ್ಕಾರದ ಅಥವಾ ಆರ್‌ಬಿಐ ಮುಂದಿಲ್ಲ. ಉದ್ಯಮ ಅಥವಾ ಆರ್ಥಿಕ ವ್ಯವಸ್ಥೆಯ ಇತರ ಮಾರ್ಗಗಳ ಮೂಲಕ ಇದನ್ನು ಸರಿದೂಗಿಸುವ ಸಾಧ್ಯತೆ ಇರುತ್ತದೆ ಎಂದು ಸಂಜಯ್ ಮಲ್ಹೋತ್ರಾ ವಿವರಿಸಿದ್ದಾರೆ.
₹2,000 ಕ್ಕಿಂತ ಹೆಚ್ಚಿನ ಮೌಲ್ಯದ ವಹಿವಾಟುಗಳು
ಕೇಂದ್ರ ಹಣಕಾಸು ಸಚಿವಾಲಯವು ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದ್ದು, ಹೆಚ್ಚಿನ ಮೌಲ್ಯದ ವಾಣಿಜ್ಯ ವಹಿವಾಟುಗಳ ಮೇಲೆ ಭವಿಷ್ಯದಲ್ಲಿ ಅಗತ್ಯ ಬಿದ್ದರೆ ಎಂಡಿಆರ್ (MDR) ವಿಧಿಸಲು ಸರ್ಕಾರಕ್ಕೆ ನಮ್ಯತೆ (Flexibility) ಒದಗಿಸುತ್ತದೆ.
ದೈನಂದಿನ ಸಣ್ಣ ವಹಿವಾಟುಗಳು ಉಚಿತ: ಹಾಲು, ತರಕಾರಿ, ದಿನಸಿ ಸಾಮಗ್ರಿಗಳಂತಹ ಶೇಕಡಾ 90 ಕ್ಕಿಂತ ಹೆಚ್ಚಿನ ದೈನಂದಿನ ಸಣ್ಣ ವಹಿವಾಟುಗಳು ಮತ್ತು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ (P2P) ಮಾಡುವ ಹಣ ವರ್ಗಾವಣೆಗಳು ಉಚಿತವಾಗಿಯೇ ಮುಂದುವರಿಯಲಿವೆ.
ಇದನ್ನೂ ಓದಿ: ಯುನಿಟಿ ಬ್ಯಾಂಕ್ನಲ್ಲಿ ಸೇವಿಂಗ್ಸ್ ಅಕೌಂಟ್ಗೆಯೇ ಸಿಗುತ್ತೆ ಶೇ. 7 ಬಡ್ಡಿ; ಶೇ. 8.5ರವರೆಗೆ ಎಫ್ಡಿ ದರ
ಸದ್ಯಕ್ಕೆ ಶುಲ್ಕದ ಪ್ರಸ್ತಾವ ಇಲ್ಲ ಎಂದ ಆರ್‌ಬಿಐ
ಯುಪಿಐ ವಹಿವಾಟುಗಳ ಮೇಲೆ ತಕ್ಷಣವೇ ಯಾವುದೇ ಶುಲ್ಕ ವಿಧಿಸುವ ಪ್ರಸ್ತಾವನೆ ಇಲ್ಲ. ಇದು ಇನ್ನೂ ಆರಂಭಿಕ ಹಂತದಲ್ಲಿದ್ದು, ನಿಯಮಗಳು ರೂಪುಗೊಳ್ಳುವವರೆಗೆ ಕಾಯಿರಿ ಎಂದು ಗವರ್ನರ್ ಸ್ಪಷ್ಟಪಡಿಸಿದ್ದಾರೆ. ಸದ್ಯ ಇರುವ ವದಂತಿಗಳ ಪ್ರಕಾರ, ಅಂಗಡಿ ಮುಂಗಟ್ಟು ಇತ್ಯಾದಿ ವ್ಯಾಪಾರಿಗಳಿಗೆ ಗ್ರಾಹಕರು ₹2,000 ಕ್ಕಿಂತ ಹೆಚ್ಚಿನ ಮೊತ್ತದ ಪೇಮೆಂಟ್ ಮಾಡಿದಾಗ ವ್ಯಾಪಾರಿಗಳಿಂದ ನಿರ್ದಿಷ್ಟ ಎಂಡಿಆರ್ ಅನ್ನು ಬ್ಯಾಂಕುಗಳು ಮತ್ತು ಪೇಮೆಂಟ್ ಕಂಪನಿಗಳು ಮುರಿದುಕೊಳ್ಳಬಹುದು. ಈ ಸುದ್ದಿಗಳ ಪ್ರಕಾರ ಎಂಡಿಆರ್ ಶುಲ್ಕ ಶೇ. 0.5ರಷ್ಟಿರಬಹುದು. ಅಂದರೆ, ₹2,000 ಪೇಮೆಂಟ್ ಮಾಡಿದರೆ ಎಂಡಿಆರ್ ಶುಲ್ಕ ₹10 ಇರಬಹುದು. ವ್ಯಾಪಾರಿಗಳಿಗೆ ಸಿಗುವ ಪೇಮೆಂಟ್ ₹1,990 ರೂ ಆಗುತ್ತದೆ. ಆದರೆ, ಆರ್‌ಬಿಐ ಗವರ್ನರ್ ಅವರು ಸದ್ಯಕ್ಕೆ ಈ ವದಂತಿಗಳನ್ನು ತಳ್ಳಿಹಾಕಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ