ರಾಜಮೌಳಿ (Rajamouli) ನಿರ್ದೇಶನದ ‘ವಾರಣಾಸಿ’ ಸಿನಿಮಾ ಭಾರಿ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಸಿನಿಮಾವನ್ನು ಭಾರತ, ಆಫ್ರಿಕಾ, ಅಂಟಾರ್ಕಿಟಾ, ರೋಮ್, ಪ್ಯಾರಿಸ್ ಸೇರಿದಂತೆ ಹಲವು ದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಿಂದೆಂದೂ ನೋಡದ ರೀತಿಯ ಆಕ್ಷನ್ ದೃಶ್ಯಗಳನ್ನು ಈ ಸಿನಿಮಾಕ್ಕಾಗಿ ಚಿತ್ರೀಕರಣ ಮಾಡಲಾಗಿದೆಯಂತೆ. ಸಿನಿಮಾದ ಹೆಸರನ್ನು ‘ವಾರಣಾಸಿ’ ಎಂದು ಕಳೆದ ವರ್ಷ ರಾಜಮೌಳಿ ಘೋಷಣೆ ಮಾಡಿದರು. ಆದರೆ ಈ ಸಿನಿಮಾಕ್ಕೆ ಮೊದಲು ಇಡಬೇಕು ಎಂದುಕೊಂಡಿದ್ದ ಹೆಸರು ಬೇರೆಯದ್ದೇ ಆಗಿತ್ತು. ಆದರೆ ರಾಜಮೌಳಿ ಅದನ್ನು ಬದಲಾವಣೆ ಮಾಡಿದರಂತೆ.
‘ವಾರಣಾಸಿ’ ಸಿನಿಮಾಕ್ಕೆ ‘ಜೆನ್ 63’ ಎಂದು ಹೆಸರಿಡುವ ಆಲೋಚನೆಯನ್ನು ರಾಜಮೌಳಿ ಮಾಡಿದ್ದರಂತೆ. ಇದಕ್ಕೆ ಕಾರಣವೂ ಇದೆ. ಈ ಸಿನಿಮಾನಲ್ಲಿ ರಾಮಾಯಣ ಕತೆ ಬಹಳ ಪ್ರಮುಖವಾದ ಪಾತ್ರ ವಹಿಸಿದೆ. ಸಿನಿಮಾನಲ್ಲಿ ಮಹೇಶ್ ಬಾಬು ಶ್ರೀರಾಮನ ಅವತಾರದಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಟೈಟಲ್ ಟೀಸರ್ನಲ್ಲಿ ಹನುಮಂತನ ಬೃಹತ್ ಮೂರ್ತಿಯನ್ನು ಸಹ ತೋರಿಸಲಾಗಿದೆ. ಈ ಸಿನಿಮಾದ ಕತೆಗೂ ರಾಮಾಯಣದ ಕತೆಗೂ ಲಿಂಕ್ ಇದೆಯಂತೆ. ಇದೇ ಕಾರಣಕ್ಕೆ ಸಿನಿಮಾಕ್ಕೆ ‘ಜೆನ್ 63’ ಎಂದು ಹೆಸರಿಡಲು ನಿರ್ಧಾರ ಮಾಡಿದ್ದರಂತೆ ರಾಜಮೌಳಿ.
‘ಜೆನ್ 63’ ಎಂದರೆ 63ನೇ ಜನರೇಷನ್ ಎಂದರ್ಥ. ಅಂದರೆ ಸಿನಿಮಾನಲ್ಲಿ ಮಹೇಶ್ ಬಾಬು, ಶ್ರೀರಾಮನ ವಂಶಸ್ಥರಾಗಿದ್ದು, ಶ್ರೀರಾಮನ ಬಳಿಕ 63ನೇ ವಂಶಸ್ಥನಾಗಿರುತ್ತಾರೆ. ಹಾಗಾಗಿ ಸಿನಿಮಾಕ್ಕೆ ‘ಜೆನ್ 63’ ಎಂದು ಹೆಸರಿಡಲು ರಾಜಮೌಳಿ ಮುಂದಾಗಿದ್ದರಂತೆ. ಅದು ಮಾತ್ರವೇ ಅಲ್ಲದೆ, ಸಿನಿಮಾದ ವಿಲನ್ ಆಗಿರುವ ಪೃಥ್ವಿರಾಜ್ ಸುಕುಮಾರ್ ಹೆಸರು ಸಹ ‘ಕುಂಭ’ ಎಂದಿದೆ. ವಿಲನ್, ಕುಂಭಕರ್ಣನ ವಂಶಸ್ಥನಾಗಿರಲಿದ್ದಾನೆ ಎನ್ನಲಾಗುತ್ತಿದೆ. ರಾಮಾಯಣ ಕತೆಯಲ್ಲಿ ಕುಂಭಕರ್ಣನನ್ನು ರಾಮ ಕೊಲ್ಲುತ್ತಾನೆ, ಕೊಲ್ಲುವ ಮುಂಚೆ ಕುಂಭಕರ್ಣನ ಕೈಗಳು, ಕಾಲುಗಳನ್ನು ಕತ್ತರಿಸಿ ಆ ಬಳಿಕ ತಲೆ ಕತ್ತರಿಸುತ್ತಾನೆ.
ಇದನ್ನೂ ಓದಿ:‘ಈಗ’ ಚಿತ್ರಕ್ಕೆ ಸುದೀಪ್ ಅವರೇ ಫಸ್ಟ್ ಆ್ಯಂಡ್ ಲಾಸ್ಟ್ ಚಾಯ್ಸ್ ಆಗಿತ್ತು; ರಾಜಮೌಳಿ
ಈಗ ‘ವಾರಣಾಸಿ’ ಸಿನಿಮಾದ ವಿಲನ್ ಕುಂಭನಿಗೂ ಕೈಗಳು, ಕಾಲುಗಳು ಇಲ್ಲ. ಆದರೆ ತಮ್ಮ ಬುದ್ಧಿಶಕ್ತಿಯಿಂದ ಆತ ನಾಯಕನನ್ನು ಎದುರಿಸುತ್ತಾನೆ. ಸಿನಿಮಾನಲ್ಲಿ ಪ್ರಿಯಾಂಕಾ ಚೋಪ್ರಾ ಸಹ ಇದ್ದು, ಅವರ ಪಾತ್ರದ ಹೆಸರು ಮಂದಾಕಿನಿ.
‘ವಾರಣಾಸಿ’ ಸಿನಿಮಾವು ಆಕ್ಷನ್ ಅಡ್ವೇಂಚರ್ ಕತೆಯನ್ನು ಒಳಗೊಂಡಿದ್ದು, ಸಿನಿಮಾದ ಕತೆ ‘ವಾರಣಾಸಿ’ ಯಲ್ಲಿ ಪ್ರಾರಂಭವಾಗಿ ಪ್ಯಾರಿಸ್, ಆಫ್ರಿಕಾ, ಅಂಟಾರ್ಟಿಕಾ, ರೋಮ್ ಇನ್ನೂ ಕೆಲವು ದೇಶಗಳನ್ನು ಸುತ್ತಿಕೊಂಡು ಮತ್ತೆ ವಾರಣಾಸಿಗೆ ಬರುತ್ತದೆಯಂತೆ. ಸಿನಿಮಾದ 80% ಭಾಗ ಚಿತ್ರೀಕರಣ ಮುಗಿದಿದ್ದು, ಕೆಲವು ಸಣ್ಣ-ಪುಟ್ಟ ದೃಶ್ಯಗಳ ಚಿತ್ರೀಕರಣವಷ್ಟೆ ಬಾಕಿ ಇದೆ. ಸಿನಿಮಾ ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ