Headlines

ಜಲ ಮಾಲಿನ್ಯದ ಆತಂಕ: ಗ್ರಾಮ ಪಂಚಾಯತ್​​ ವ್ಯಾಪ್ತಿಯಲ್ಲಿ ಪಿಒಪಿ ಗಣೇಶ ಮೂರ್ತಿ ಸ್ಥಾಪನೆಗಿಲ್ಲ ಅವಕಾಶ – Kannada News | Eco Friendly Ganeshotsava: Karnataka Bans PoP Ganesha Idols in Gram Panchayats to Prevent Water Pollution

ಬೆಂಗಳೂರು, ಆಗಸ್ಟ್​​ 06: ಗ್ರಾಮ ಪಂಚಾಯತ್​​ ವ್ಯಾಪ್ತಿಯಲ್ಲಿ ಪಿಒಪಿ ಗಣೇಶ ಮೂರ್ತಿ ಸ್ಥಾಪನೆಗೆ ಅವಕಾಶ ನಿರಾಕರಿಸುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಸಚಿವ ಈಶ್ವರ್​​ ಖಂಡ್ರೆ ನಿರ್ದೇಶನ ನೀಡಿದ್ದಾರೆ. ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ, ದಾಸ್ತಾನು ಮತ್ತು ಸಾಗಾಟಕ್ಕೆ ತಡೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೆರವು ಪಡೆಯುವಂತೆಯೂ ಅವರು ತಿಳಿಸಿದ್ದಾರೆ. ಕೆರೆ, ನದಿಗಳಲ್ಲಿ ಪಿಒಪಿ ಮೂರ್ತಿ ವಿಸರ್ಜಿಸಿದರೆ ಜಲಚರಗಳಿಗೆ ಕಂಟಕವಾಗಲಿರುವ ಕಾರಣ ಜಲಮಾಲಿನ್ಯ ತಡೆ ಕಾಯ್ದೆ 1974ರ ಕಲಂ 33(ಎ)ರಡಿ ವಿಸರ್ಜನೆಗೆ ನಿಷೇಧ ವಿಧಿಸಲಾಗಿದೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಒಪಿ ಬಳಕೆ ವಿರುದ್ಧ ಜಾಗೃತಿಗೂ ಸಚಿವರು ಸೂಚಿಸಿದ್ದು, 2023ರ ಸೆ.15ರ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ತಿಳಿಸಲಾಗಿದೆ. ಹೈಕೋರ್ಟ್ ನಿರ್ದೇಶನದಂತೆ ಪಿಒಪಿ ಮೂರ್ತಿ ಸಾಗಾಟ, ಮಾರಾಟ ಬಂದ್ ಸಂಬಂಧ ಧಾರ್ಮಿಕ ಭಾವನೆಗೆ ನೋವಾಗದಂತೆ ಈಗಿನಿಂದಲೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು ಗ್ರಾಮೀಣ ಭಾಗದ ಜಲ ಮೂಲಗಳು ಹಾಗೂ ಪರಿಸರ ರಕ್ಷಣೆಗೆ ಇಲಾಖೆ ನಿರ್ಧರಿಸಿದೆ.

ಇದನ್ನೂ ಓದಿ: ಬೆಂಗಳೂರಿಗೆ ಪಿಒಪಿ ಗಣೇಶ ಮೂರ್ತಿಗಳ ಎಂಟ್ರಿ: ಪ್ರಧಾನಿ ಮೋದಿ ಕರೆಗೂ ಇಲ್ಲ ಬೆಲೆ!

ಸಚಿವರ ನಿರ್ದೇಶನ ಪತ್ರದಲ್ಲಿ ಏನಿದೆ?

ಸೆಪ್ಟೆಂಬರ್ 13 ಮತ್ತು 14ರಂದು ನಾಡಿನಾದ್ಯಂತ ಗೌರಿ ಮತ್ತು ಗಣೇಶ ಹಬ್ಬವನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಕ್ಯಾಲ್ಸಿಯಂ, ಸಟ್, ಹೆಮಿಹೈಡ್ರೆಟ್ ಯುಕ್ತ ಪುಡಿಯಿಂದ ಕೂಡಿದ ಪ್ಲಾಸ್ಟರ್ ಆಫ್ ಪ್ಯಾರಿಸ್ -ಪಿಓಪಿಯಿಂದ ತಯಾರಿಸಲಾಗುತ್ತದೆ. ಇದರಲ್ಲಿ ಗಂಧಕ, ರಂಜಕ, ಜಿಪ್ಸಮ್ ಮತ್ತು ಮ್ಯಾಗ್ನಿಷಿಯಂ ಸೇರಿದಂತೆ ಅನೇಕ ಅಪಾಯಕಾರಿ ಅಂಶಗಳಿರುವುದರ ಜೊತೆಗೆ ಈ ಮೂರ್ತಿಗಳಿಗೆ ಪಾದರಸ, ಕ್ಯಾಡ್ಮಿಯಂ, ಸೀಸ ಮತ್ತು ಇಂಗಾಲ ಒಳಗೊಂಡ ರಾಸಾಯನಿಕ ಬಣ್ಣ ಲೇಪಿಸುವುದರಿಂದ ಪರಿಸರಕ್ಕೆ ಹಾನಿಕಾರಕವಾಗಿರುತ್ತದೆ. ಈ ಪಿಓಪಿ ಮೂರ್ತಿಗಳನ್ನು ಕೆರೆ, ಬಾವಿ, ನದಿ ಸೇರಿದಂತೆ ಜಲ ಮೂಲಗಳಲ್ಲಿ ವಿಸರ್ಜಿಸಿದಾಗ ಭಾರ ಲೋಹ ಕರಗಿ ಜನ ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜಲಚರಗಳ ಸಾವಿಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಜಲ ಮಾಲಿನ್ಯ (ತಡೆ ಮತ್ತು ನಿಯಂತ್ರಣ)ಕಾಯಿದೆ 1974ರ ಕಲಂ 33(ಎ) ಅಡಿಯಲ್ಲಿ ರಾಜ್ಯದ ನದಿ, ಸರೋವರ, ಕೆರೆ, ಕಟ್ಟೆ, ಬಾವಿ ಸೇರಿದಂತೆ ಯಾವುದೇ ಜಲ ಮೂಲದಲ್ಲಿ ಪಿಓಪಿ ಮೂರ್ತಿಗಳ ವಿಸರ್ಜನೆ ನಿಷೇಧಿಸಲಾಗಿದೆ. ಪರಿಸರಕ್ಕೆ ಮಾರಕವಾದ ಪಿಓಪಿ ಮೂರ್ತಿಗಳ ತಯಾರಿಕೆ, ಸಾಗಾಟ, ಮಾರಾಟ ಮತ್ತು ವಿಸರ್ಜನೆ ನಿಷೇಧಿಸಿ 2023ರ ಸೆ.15ರಂದು ಸರ್ಕಾರಿ ಆದೇಶ ಹೊರಡಿಸಲಾಗಿದೆ, ರಾಜ್ಯ ಘನ ಹೈಕೋರ್ಟ್ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ನಿರ್ದೇಶನ ನೀಡಿರುತ್ತದೆ.

ಗಣೇಶ ಪರಿಸರ (ಮಣ್ಣಿನಿಂದ)ದಿಂದಲೇ ಹುಟ್ಟಿದ ದೇವರಾಗಿದ್ದು, ಪರಿಸರ ಮತ್ತು ಜಲ ಮೂಲಗಳ ಸಂರಕ್ಷಣೆಯ ದೃಷ್ಟಿಯಿಂದ ಪರಿಸರ ಸ್ನೇಹಿ ಗೌರಿ, ಗಣೇಶ ಮೂರ್ತಿಗಳ ಪೂಜೆ ಹಾಗೂ ವಿಸರ್ಜನೆಗೆ ಮಾತ್ರ ಅವಕಾಶ ನೀಡುವುದು ಸೂಕ್ತವಾಗಿರುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಪಂಚಾಯತಿಗಳ ಮಟ್ಟದಲ್ಲಿ ಮಾಡುವ ಅಗತ್ಯವನ್ನು ಸರ್ಕಾರ ಮನಗಂಡಿದೆ. ಈ ನಿಟ್ಟಿನಲ್ಲಿ ಹಬ್ಬದ ಸಂಭ್ರಮದಲ್ಲಿ ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವಾಗದ ರೀತಿಯಲ್ಲಿ ಈಗಿನಿಂದಲೇ ಪಿಓಪಿ ಗಣೇಶ ಮೂರ್ತಿಗಳ ತಯಾರಿಕೆ, ದಾಸ್ತಾನು, ಸಾಗಾಟ ಮತ್ತು ಮಾರಾಟಕ್ಕೆ ಕಡಿವಾಣ ಹಾಕಲು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನೆರವು ಪಡೆಯಲು ಹಾಗೂ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ, ವಿಸರ್ಜನೆಗೆ ಮಾತ್ರ ಅನುಮತಿ ನೀಡಲು ಈ ಮೂಲಕ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *