ಬೆಂಗಳೂರು, ಆ.7: ನಗರದ ಕುಂಬಳಗೋಡು ಸಮೀಪದ ಗೇರುಪಾಳ್ಯದಲ್ಲಿ ಕಳೆದ ತಿಂಗಳು ಜುಲೈ 25ರಂದು ನಡೆದಿದ್ದ ಬಿಹಾರ ಮೂಲದ ರೀಮಾಕುಮಾರಿ (24) ಭೀಕರ ಕೊಲೆ ಪ್ರಕರಣದ ಅಸಲಿ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣದ ಆರೋಪಿ, ಆಕೆಯ ಪತಿ ಧೀರಜ್ ಕುಮಾರ್ (24) ಎಂಬಾತನನ್ನು ಬಿಹಾರದಲ್ಲಿ ಬಂಧಿಸಿ ಕರೆತಂದ ಕುಂಬಳಗೋಡು ಠಾಣೆ ಪೊಲೀಸರು ಸುದೀರ್ಘ ವಿಚಾರಣೆಗೆ ಒಳಪಡಿಸಿದಾಗ ಕೊಲೆಗೆ ಕಾರಣ ಬಹಿರಂಗವಾಗಿದೆ.
ಪ್ರೀತಿಸಿ ಮದುವೆಯಾಗಿದ್ದ ದಂಪತಿ ನಡುವೆ ಬಿರುಕು:
ಬಿಹಾರ ಮೂಲದ ಧೀರಜ್ ಮತ್ತು ರೀಮಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಜೀವನೋಪಾಯಕ್ಕಾಗಿ ಸುಮಾರು 10 ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಕುಂಬಳಗೋಡಿನ ಗೇರುಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಬೆಂಗಳೂರಿಗೆ ಬಂದ ಕೆಲವೇ ತಿಂಗಳುಗಳಲ್ಲಿ ರೀಮಾ ಪತಿ ಧೀರಜ್ ಮೇಲೆ ಆಸಕ್ತಿ ಕಳೆದುಕೊಂಡಿದ್ದಳು. ಮನೆಯಲ್ಲಿದ್ದಾಗ ಸದಾ ಮೊಬೈಲ್ನಲ್ಲಿ ‘ರೀಲ್ಸ್’ (Reels) ಮಾಡುತ್ತಾ ಕಾಲ ಕಳೆಯುತ್ತಿದ್ದಳು.
ದಾಂಪತ್ಯ ಜೀವನದಲ್ಲೂ ಪತಿಯೊಂದಿಗೆ ಸಹಕರಿಸದೆ ಲೈಂಗಿಕ ಕ್ರಿಯೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಳು. ರೀಮಾ ದಿನನಿತ್ಯ ತನಗೆ ಬೇಕಾಗುವಷ್ಟು ಮಾತ್ರ ಅಡುಗೆ ಮಾಡಿ ತಿಂದು ಮಲಗುತ್ತಿದ್ದಳು. ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಪತಿ ಧೀರಜ್ಗೆ ಊಟ ನೀಡುತ್ತಿರಲಿಲ್ಲ. ಅಲ್ಲದೆ, ತನಗೆ ಬೆಂಗಳೂರು ಬೇಡ, ವಾಪಸ್ ಬಿಹಾರಕ್ಕೆ ಹೋಗಬೇಕೆಂದು ಪಟ್ಟು ಹಿಡಿದಿದ್ದಳು. ಇದರಿಂದ ದಂಪತಿ ನಡುವೆ ನಿತ್ಯ ಗಲಾಟೆ ನಡೆಯುತ್ತಿತ್ತು.
ಜುಲೈ 25ರಂದು ನಡೆದಿದ್ದೇನು?:
ಕೊಲೆಯಾದ ದಿನ ಧೀರಜ್ ಕೆಲಸ ಮುಗಿಸಿ ಮನೆಗೆ ಬಂದಾಗ ಮನೆಯಲ್ಲಿ ಊಟ ಇರಲಿಲ್ಲ. ಈ ವಿಚಾರವಾಗಿ ಇಬ್ಬರ ನಡುವೆ ಸಣ್ಣದಾಗಿ ಗಲಾಟೆ ಆರಂಭವಾಗಿದೆ. ಬಳಿಕ ಧೀರಜ್ ‘ಮಲಗೋಣ ಬಾ’ ಎಂದು ಪತ್ನಿಯನ್ನು ಕರೆದಾಗ ಆಕೆ ನಿರಾಕರಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಇಬ್ಬರ ನಡುವೆ ಜಗಳ ತೀವ್ರಗೊಂಡಿದೆ. ಜಗಳದ ಭರದಲ್ಲಿ ರೀಮಾ ಮೊದಲು ದೊಣ್ಣೆಯಿಂದ ಪತಿ ಧೀರಜ್ಗೆ ಹೊಡೆದಿದ್ದಾಳೆ. ಇದರಿಂದ ತೀವ್ರ ಕುಪಿತಗೊಂಡ ಧೀರಜ್, ಪತ್ನಿಯ ವೇಲ್ನಿಂದ (ದುಪಟ್ಟಾ) ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಮುಖಕ್ಕೆ ಪ್ಲಾಸ್ಟಿಕ್ ಪೇಪರ್ ಸುತ್ತಿ, ಶವವನ್ನು ಮನೆಯಲ್ಲೇ ಬಿಟ್ಟು ಬಿಹಾರಕ್ಕೆ ಪರಾರಿಯಾಗಿದ್ದ.
ಇದನ್ನೂ ಓದಿ: ಕಲಾಸಿಪಾಳ್ಯ ಗ್ಯಾಂಗ್ವಾರ್ ಪ್ರಕರಣಕ್ಕೆ ಟ್ವಿಸ್ಟ್: ತನಿಖೆ ವೇಳೆ ಅಸಲಿ ಕಾರಣ ಬಯಲು
ಬಿಹಾರದಲ್ಲಿ ಆರೋಪಿ ಬಂಧನ:
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕುಂಬಳಗೋಡು ಪೊಲೀಸರು, ತಾಂತ್ರಿಕ ಕಾರ್ಯಾಚರಣೆ ನಡೆಸಿ ಬಿಹಾರದಲ್ಲಿದ್ದ ಆರೋಪಿ ಧೀರಜ್ನನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ವಿಚಾರಣೆ ವೇಳೆ ಆರೋಪಿ ಧೀರಜ್ ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ