ನವದೆಹಲಿ, ಆಗಸ್ಟ್ 7: ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ಬಳಕೆ ದಿನದಿಂದ ದಿನಕ್ಕೆ ವೇಗವಾಗಿ ಹೆಚ್ಚಾಗುತ್ತಿದ್ದು, ಜುಲೈ ತಿಂಗಳ ರಿಟೇಲ್ ಮಾರಾಟದಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಾಣವಾಗಿದೆ. ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ಒಕ್ಕೂಟ (FADA) ನೀಡಿರುವ ಅಂಕಿ-ಅಂಶಗಳ ಪ್ರಕಾರ, ಜುಲೈನಲ್ಲಿ ಒಟ್ಟು 3,27,901 ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿವೆ. ಇದು ಕಳೆದ ವರ್ಷದ (ಜುಲೈ 2025) ಮಾರಾಟಕ್ಕೆ ಹೋಲಿಸಿದರೆ ಶೇ. 66 ಕ್ಕಿಂತ ಹೆಚ್ಚು ವೃದ್ಧಿ ಕಂಡಿದೆ. ಈ ಮೂಲಕ ದೇಶದಲ್ಲಿ ಮಾರಾಟವಾದ ಪ್ರತಿ 8 ವಾಹನಗಳಲ್ಲಿ 1 ಎಲೆಕ್ಟ್ರಿಕ್ ವಾಹನವಾಗಿದೆ. ಅಂದರೆ, ಒಟ್ಟಾರೆ ಕಾರು ಮಾರಾಟದಲ್ಲಿ ಇವಿ ಪಾಲು 12.7% ಆಗಿದೆ.
ಇವಿ ವಾಹನಗಳ ಮಾರಾಟ ವಿವರ:
ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ (Electric Two-Wheelers) ವಿಭಾಗವು ಒಟ್ಟಾರೆಯಾಗಿ ಮೊದಲ ಬಾರಿಗೆ 2 ಲಕ್ಷದ ಗಡಿಯನ್ನು ದಾಟಿದೆ. ಜುಲೈನಲ್ಲಿ 2,04,362 ಇ-ಸ್ಕೂಟರ್/ಬೈಕ್‌ಗಳು ಮಾರಾಟವಾಗಿವೆ. ಕಳೆದ ವರ್ಷಕ್ಕಿಂತ ಇವುಗಳ ಮಾರಾಟದಲ್ಲಿ ಶೇ. 88.3 ರಷ್ಟು ಏರಿಕೆ ಕಂಡಿದೆ.
- ಟಿವಿಎಸ್ ಮೋಟಾರ್: 55,499 ಯುನಿಟ್‌ಗಳು
- ಬಜಾಜ್ ಆಟೋ: 45,613 ಯುನಿಟ್‌ಗಳು
- ಏಥರ್ ಎನರ್ಜಿ: 30,357 ಯುನಿಟ್‌ಗಳು
- ಓಲಾ ಎಲೆಕ್ಟ್ರಿಕ್: 14,106 ಯುನಿಟ್‌ಗಳು.
ಇದನ್ನೂ ಓದಿ: ಆರ್ಥಿಕ ಸಂಕಷ್ಟದಲ್ಲೂ ವಿದೇಶಿಗರ ನೆರವಿನ ಹಸ್ತಕ್ಕೆ ಕೈಚಾಚದ ಬೆಂಗಳೂರು ಸ್ಟಾರ್ಟಪ್; ಭಾರತದ ಮೊದಲ ಎಂಆರ್ಐ ನಿರ್ಮಿಸಿದವನ ಕಥೆ
ಎಲೆಕ್ಟ್ರಿಕ್ ಪ್ರಯಾಣಿಕ ಕಾರುಗಳ ಮಾರಾಟ ವಿವರ
ಎಲೆಕ್ಟ್ರಿಕ್ ಪ್ಯಾಸೆಂಜರ್ ಕಾರುಗಳ ಮಾರಾಟವು ಶೇಕಡಾ 83.1 ರಷ್ಟು ಹೆಚ್ಚಾಗಿದೆ. ಒಟ್ಟು 32,928 ಯುನಿಟ್‌ಗಳು ಮಾರಾಟವಾಗಿವೆ.
- ಟಾಟಾ ಮೋಟಾರ್ಸ್: 13,678 ಕಾರುಗಳು
- ಮಹೀಂದ್ರಾ: 7,742 ಕಾರುಗಳು
- JSW ಎಂಜಿ ಮೋಟಾರ್: 5,689 ಯುನಿಟ್‌ಗಳು
ತ್ರಿಚಕ್ರ ವಾಹನಗಳ ಮಾರಾಟ ವಿವರ
ಇ-ರಿಕ್ಷಾ ಮತ್ತು ಇ-ಆಟೋ ವಿಭಾಗದಲ್ಲಿ ಮಾರಾಟ ಶೇ. 25.3 ರಷ್ಟು ಹೆಚ್ಚಾಗಿದ್ದು, ಒಟ್ಟು 87,055 ಯುನಿಟ್‌ಗಳು ಮಾರಾಟವಾಗಿವೆ. ಈ ವಿಭಾಗದಲ್ಲಿ ಎಲೆಕ್ಟ್ರಿಕ್ ವಾಹನಗಳ ಪಾಲು ಶೇ. 65.1 ಕ್ಕೆ ತಲುಪಿದೆ.
ವಾಣಿಜ್ಯ ವಾಹನಗಳ ಮಾರಾಟ ವಿವರ
ಇ-ವಾಣಿಜ್ಯ ವಾಹನಗಳ (ಟ್ರಕ್/ಬಸ್ – Commercial Vehicles) ಮಾರಾಟವು ಸುಮಾರು ಮೂರು ಪಟ್ಟು ಹೆಚ್ಚಾಗಿದ್ದು, 3,556 ಯುನಿಟ್‌ಗಳು ದಾಖಲಾಗಿವೆ. ಅಂದರೆ, ಇದರ ಮಾರಾಟದಲ್ಲಿ ಶೇ. 181 ರಷ್ಟು ಹೆಚ್ಚಳ ಆಗಿದೆ.
ಇದನ್ನೂ ಓದಿ: ಬಿಎಸ್ಸೆನ್ನೆಲ್ ವೈಫೈ ಯೋಜನೆ ನೀರಲ್ಲಿ ಹೋಮ; ಸಾವಿರಾರು ಕೋಟಿ ರೂ ವೆಚ್ಚಕ್ಕೆ ಬದಲಾಗಿ ಸಿಕ್ಕ ಆದಾಯ ಸೊನ್ನೆ?
ಇವಿಗಳ ಮಾರಾಟ ಹೆಚ್ಚಳಕ್ಕೆ ಮುಖ್ಯ ಕಾರಣಗಳು
ಇಂಧನ ಬೆಲೆ ಏರಿಕೆ, E20 ಪೆಟ್ರೋಲ್ ಬಗೆಗಿನ ಗೊಂದಲ ಮೊದಲಾದ ಅಂಶಗಳು ಗ್ರಾಹಕರ ಆದ್ಯತೆಯನ್ನು ಬದಲಿಸಿರಬಹುದು. ಹಾಗೆಯೇ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿದ್ಯುತ್ ವಾಹನ ಪ್ರೋತ್ಸಾಹ ನೀತಿಗಳು (PM E-DRIVE) ಈ ದಾಖಲೆಯ ಮಾರಾಟಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು FADA ಅಭಿಪ್ರಾಯಪಟ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ