ಕೇಂದ್ರ ಸರ್ಕಾರ, CBIಗೆ ಸುಪ್ರೀಂ ಕೋರ್ಟ್ನಿಂದ ನೋಟಿಸ್ ಜಾರಿImage Credit source: Getty Images
ನವದೆಹಲಿ, ಆಗಸ್ಟ್ 12: ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರ ‘ಜಿರಳೆ’ (Cockroach) ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿ, ಬಳಿಕ ‘ಕಾಕ್ರೋಚ್ ಜನತಾ ಪಾರ್ಟಿ’ ಹುಟ್ಟಿಕೊಂಡು NEET-UG ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಜೆನ್ ಜಿ ಪ್ರತಿಭಟನೆಗೆ ಕಾರಣವಾದ ಘಟನೆಯ ಮೂರು ತಿಂಗಳ ಬಳಿಕ, ಈ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ಎಡಿಟ್ ಮಾಡಿ ವಾಣಿಜ್ಯವಾಗಿ ಬಳಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು CBIಯಿಂದ ಪ್ರತಿಕ್ರಿಯೆ ಕೇಳಿದೆ.
ಅರ್ಜಿದಾರರ ವಾದವೇನು?
ಅರ್ಜಿದಾರ ಹಾಗೂ ವಕೀಲ ರಾಜಾ ಚೌಧರಿ, ನ್ಯಾಯಾಲಯದ ಕಲಾಪದ ವೇಳೆ ಸಂಪೂರ್ಣ ವಿಭಿನ್ನ ಸಂದರ್ಭದಲ್ಲೇ ಬಳಸಲಾಗಿದ್ದ ‘ಜಿರಳೆ’ ಎಂಬ ಪದವನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಿ, ವರ್ಚುವಲ್ ಕೋರ್ಟ್ ಕಲಾಪದ ವಿಡಿಯೋವನ್ನು ಎಡಿಟ್ ಮಾಡಿ, ವಾಣಿಜ್ಯ ಲಾಭಕ್ಕಾಗಿ ಬಳಸಿಕೊಳ್ಳಲಾಗಿದೆ. ಇದರಿಂದ ನ್ಯಾಯಾಂಗದ ಘನತೆಗೆ ಧಕ್ಕೆ ಉಂಟಾಗಿದ್ದು, ಸಂಸ್ಥೆಯ ಸಮಗ್ರತೆಗೆ ಹಾನಿಯಾಗಿದೆ ಎಂದು ಆರೋಪಿಸಿದ್ದರು. ನ್ಯಾಯಾಲಯದ ಮೌಖಿಕ ಹೇಳಿಕೆಗಳು ಅಥವಾ ರೂಪಕಗಳನ್ನು ವಾಣಿಜ್ಯವಾಗಿ ದುರುಪಯೋಗಪಡಿಸಿಕೊಳ್ಳುವ, ಟ್ರೇಡ್ಮಾರ್ಕ್ ಆಗಿ ಬಳಸುವ, ಹಣಗಳಿಕೆಯ ಉದ್ದೇಶದಿಂದ ಪ್ರಸಾರ ಮಾಡುವ ಅಥವಾ ಅನುಮತಿಯಿಲ್ಲದೆ ವಾಣಿಜ್ಯ ಬಳಕೆ ಮಾಡುವ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧ ಕಾನೂನು ಪ್ರಕಾರ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.
ಇದನ್ನೂ ಓದಿ: ಕಾಕ್ರೋಚ್ ಜನತಾ ಪಾರ್ಟಿಯಿಂದ ‘ಕ್ಯಾ ಬೋಲ್ತಿ ಪಬ್ಲಿಕ್’ ದೇಶವ್ಯಾಪಿ ಅಭಿಯಾನ ಘೋಷಣೆ
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಸುಮಾರು ಅರ್ಧ ಗಂಟೆ ಅರ್ಜಿಯ ವಿಚಾರಣೆ ನಡೆಸಿತು.
ಯಾವ ಸಂದರ್ಭದಲ್ಲಿ ‘ಜಿರಳೆ’ ಹೇಳಿಕೆ ಪ್ರಸ್ತಾಪವಾಗಿತ್ತು?
ಮೇ 15ರಂದು ದೆಹಲಿ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ಗೆ ಸಂಬಂಧಿಸಿದ ‘ಸಂಜಯ್ ದುಬೆ ವರ್ಸಸ್ ರಿಜಿಸ್ಟ್ರಾರ್ ಜನರಲ್ ಆಫ್ ದೆಹಲಿ ಹೈಕೋರ್ಟ್’ ಪ್ರಕರಣದ ವಿಚಾರಣೆ ವೇಳೆ CJI ನೇತೃತ್ವದ ಪೀಠ ಈ ಹೇಳಿಕೆ ನೀಡಿತ್ತು. ಆ ಸಂದರ್ಭದಲ್ಲಿ ನಕಲಿ ವಕೀಲರ ವಿಚಾರವನ್ನು ಪ್ರಸ್ತಾಪಿಸುವ ಸಂದರ್ಭದಲ್ಲಿ CJI ಸೂರ್ಯಕಾಂತ್ ಅವರು ‘ಜಿರಳೆ’ ಎಂಬ ಪದವನ್ನು ಬಳಸಿದ್ದರು. ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗ, ವೃತ್ತಿಪರ ಗುಣಮಟ್ಟದ ಕುಸಿತ ಮತ್ತು ಇದರಿಂದ ನ್ಯಾಯಾಂಗ ಸಂಸ್ಥೆಯ ಮೇಲೆ ಉಂಟಾಗುತ್ತಿರುವ ಪರಿಣಾಮದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದರು ಎಂದು ಚೌಧರಿ ವಿವರಿಸಿದ್ದಾರೆ.
ಮೇ 15ರ ವಿಚಾರಣೆಯ ಬಳಿಕ ನ್ಯಾಯಾಲಯದ ಕಲಾಪಗಳ ಆಯ್ದ ಭಾಗಗಳನ್ನು ಎಡಿಟ್ ಮಾಡಿ ಪ್ರಸಾರ ಮಾಡುವ ವಿಡಿಯೋ ಕ್ಲಿಪ್ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ. ನ್ಯಾಯಾಲಯದ ಕಲಾಪದ ವೇಳೆ ಮಾಡಿದ ಮೌಖಿಕ ಹೇಳಿಕೆಗಳನ್ನು ಸಂದರ್ಭದಿಂದ ಬೇರ್ಪಡಿಸಿ, ತಿರುಚಿದ ರೀತಿಯಲ್ಲಿ ವಿಡಿಯೋಗಳು ಹಾಗೂ ಮೀಮ್ಗಳಾಗಿ ರೂಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಇದನ್ನು ಕೆಲವರು ವಾಣಿಜ್ಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ದೂರಿದ್ದಾರೆ. ನ್ಯಾಯಾಲಯಗಳು ಮತ್ತು ನ್ಯಾಯಮೂರ್ತಿಗಳ ಬಗ್ಗೆ ಸಾರ್ವಜನಿಕರ ವಿಶ್ವಾಸವನ್ನು ಕುಗ್ಗಿಸುವ ಉದ್ದೇಶದಿಂದ ಇಂತಹ ವಿಡಿಯೋಗಳನ್ನು ತಿರುಚಿ ಪ್ರಸಾರ ಮಾಡುವ ಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರಸ್ತುತ ಯಾವುದೇ ಪರಿಣಾಮಕಾರಿ ವ್ಯವಸ್ಥೆ ಇಲ್ಲ ಎಂದು ಅರ್ಜಿದಾರರು ತಿಳಿಸಿರೋದಾಗಿ ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.