ಗಾತ್ರದಲ್ಲಿ ದೈತ್ಯವಾಗಿದ್ದರೂ ಆನೆಗಳು (Elephant) ತುಂಬಾ ಸೌಮ್ಯ ಸ್ವಭಾವದ ಪ್ರಾಣಿ. ಅಷ್ಟೇ ಅಲ್ಲದೆ ಇವು ಬುದ್ಧಿವಂತ ಹಾಗೆಯೇ ಸಂಘಜೀವಿಯೂ ಹೌದು. ಕುಟುಂಬದೊಂದಿಗೆ ಒಟ್ಟಾಗಿ ಜೀವಿಸುವ ಆನೆಗಳು ಪರಿಸರ ವ್ಯವಸ್ಥೆಯ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇಂದು ಅರಣ್ಯ ನಾಶ, ವಿದ್ಯುತ್ ಅಪಘಾತ, ರೈಲ್ವೆ ಅಪಘಾತ ಇತ್ಯಾದಿ ಕಾರಣಗಳಿಂದ ಆನೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಗಂಭೀರ ಸಮಸ್ಯೆಯನ್ನು ಪರಿಗಣಿಸಿ, ಗಜರಾಜನ ಸಂತತಿಯನ್ನು ಸಂರಕ್ಷಿಸುವ ಉದ್ದೇಶದಿಂದ ಹಾಗೂ ಪರಿಸರ ವ್ಯವಸ್ಥೆಯಲ್ಲಿ ಆನೆಗಳ ಮಹತ್ವವನ್ನು ಗುರುತಿಸುವ ಉದ್ದೇಶದಿಂದ ವಿಶ್ವದಾದ್ಯಂತ ಪ್ರತಿವರ್ಷ ಆಗಸ್ಟ್ 12ರಂದು ವಿಶ್ವ ಆನೆ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಆನೆ ದಿನದ ಇತಿಹಾಸವೇನು?
2011ರಲ್ಲಿ ಸಿಮ್ಸ್ ಮತ್ತು ಎಲಿಫೆಂಟ್ ಇಂಟ್ರಡಕ್ಷನ್ ಫೌಂಡೇಶನ್ ವಿಶ್ವ ಆನೆ ದಿನವನ್ನು ಆಚರಿಸಲು ನಿರ್ಧರಿಸಿತು. ಹಾಗೂ ಆಗಸ್ಟ್ 12, 2012 ರಂದು ವಿಶ್ವ ಆನೆ ದಿನವನ್ನು ಆಚರಿಸಲು ಅಧಿಕೃತವಾಗಿ ಘೋಷಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಆಗಸ್ಟ್ 12 ರಂದು ಆಚರಿಸಲಾಗುವ ವಿಶ್ವ ಆನೆ ದಿನದ ಮುಖ್ಯ ಉದ್ದೇಶವು ಆನೆಗಳನ್ನು ರಕ್ಷಿಸುವುದು ಮತ್ತು ಅವುಗಳ ಆವಾಸಸ್ಥಾನವಾದ ಕಾಡುಗಳನ್ನು ರಕ್ಷಿಸುವುದಾಗಿದೆ. ಇದರೊಂದಿಗೆ ಆನೆಗಳ ಸಂರಕ್ಷಣಾ ಕ್ರಮಗಳು, ಪುನರ್ವಸತಿ, ಅವುಗಳ ಉತ್ತಮ ಆರೋಗ್ಯದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ಆನೆಗಳ ಅಕ್ರಮ ಸಾಗಣೆಯನ್ನು ತಡೆಯುವುದು ಈ ದಿನದ ಆಚರಣೆಯ ಮುಖ್ಯ ಉದ್ದೇಶವಾಗಿದೆ.
ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿಡುವಲ್ಲಿ ಆನೆಗಳ ಪಾತ್ರವೇನು?
ಆನೆಗಳನ್ನು ಸಾಮಾನ್ಯವಾಗಿ ಕಾಡಿನ “ಪರಿಸರ ವ್ಯವಸ್ಥೆಯ ಎಂಜಿನಿಯರ್ಗಳು” ಎಂದು ಕರೆಯಲಾಗುತ್ತದೆ. ಕಾಡಿನಲ್ಲಿ ವಾಸಿಸುವ ಇತರ ವನ್ಯಜೀವಿಗಳಿಗೆ ಪರಿಸರ ವ್ಯವಸ್ಥೆಯನ್ನು ನಿರ್ವಹಿಸಲು ಆನೆಗಳು ಸಹಾಯ ಮಾಡುತ್ತದೆ. ಆನೆಗಳು ಹಿಂಡುಗಳಲ್ಲಿ ನಡೆಯುತ್ತದೆ, ಇದು ದಟ್ಟವಾದ ಕಾಡುಗಳ ಮೂಲಕ ದಾರಿ ಮಾಡುತ್ತದವೆ, ಇದು ಇತರ ಪ್ರಾಣಿಗಳಿಗೆ ತುಂಬಾ ಸಹಾಯವಾಗುತ್ತದೆ. ಅಲ್ಲದೆ ಆನೆಗಳು ಮರಗಳು ಮತ್ತು ಪೊದೆಗಳಿಗೆ ಹಾನಿ ಮಾಡುವ ಮೂಲಕ ಸಸ್ಯವರ್ಗದ ಹರಡುವಿಕೆಗೆ ಕೊಡುಗೆ ನೀಡುತ್ತವೆ.
ಆನೆಗಳ ಉಪಸ್ಥಿತಿಯು ಹಸಿರುಮನೆ ಅನಿಲಗಳನ್ನು ಉತ್ತಮವಾಗಿ ಹೀರಿಕೊಳ್ಳುವ ದೊಡ್ಡ ಮರಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಎಂದು ವಿಜ್ಞಾನಿಗಳು ತಮ್ಮ ಅಧ್ಯಯನದಲ್ಲಿ ಹೇಳಿದ್ದಾರೆ. ಅರಣ್ಯ ಆನೆಗಳು ಉಷ್ಣವಲಯದ ಕಾಡುಗಳನ್ನು ಹಲವು ವಿಧಗಳಲ್ಲಿ ರಕ್ಷಿಸುತ್ತವೆ. ಅವುಗಳ ಆಹಾರ ಪದ್ಧತಿಗಳು ಹೆಚ್ಚಿನ ಇಂಗಾಲದ ಸಾಂದ್ರತೆಯಿರುವ ಮರಗಳು ಮಾತ್ರ ಬೆಳೆಯಲು ಅವಕಾಶ ನೀಡುತ್ತವೆ. ಆನೆಗಳು ಈ ಕಡಿಮೆ ಇಂಗಾಲದ ಸಾಂದ್ರತೆಯ ಸಸ್ಯ ಮತ್ತು ಮರಗಳ ಎಲೆಗಳನ್ನು ಹೆಚ್ಚಾಗಿ ತಿನ್ನುತ್ತವೆ, ಇದರಿಂದಾಗಿ ಹೆಚ್ಚಿನ ಇಂಗಾಲದ ಸಾಂದ್ರತೆಯ ಸಸ್ಯಗಳು ಅಭಿವೃದ್ಧಿ ಹೊಂದಲು ಹೆಚ್ಚಿನ ಅವಕಾಶವನ್ನು ನೀಡುತ್ತವೆ. ಹೌದು ಆನೆಗಳು ಕಾಡಿನಲ್ಲಿಆಹಾರಕ್ಕಾಗಿ ಅಳೆದಾಡುತ್ತಾ, ಅವು ಕಡಿಮೆ ಇಂಗಾಲ ಸಾಂದ್ರತೆಯಿರುವ ಸಣ್ಣ ಮರದ ಎಲೆಗಳನ್ನು ತಿಂದು ಆ ಮರಗಳನ್ನು ತುಳಿದು ಹಾಕುತ್ತವೆ. ಇದರಿಂದಾಗಿ ದೊಡ್ಡ ಮತ್ತು ಹೆಚ್ಚಿನ ಇಂಗಾಲ ಸಾಂದ್ರತೆಯ ಮರಗಳು ಬೆಳೆಯಲು ಸಾಕಷ್ಟು ಸ್ಥಳಾವಕಾಶ ಮತ್ತು ಸೂರ್ಯನ ಬೆಳಕು ದೊರೆಯುತ್ತದೆ. ಹೀಗೆ ಆನೆಗಳ ಚಟುವಟಿಕೆಗಳು ಅರಣ್ಯ ಪರಿಸರ ವ್ಯವಸ್ಥೆಯ ಹಲವು ಅಂಶಗಳ ಮೇಲೆ ಪರಿಣಾಮ ಬೀರುತ್ತವೆ.
ಇದನ್ನೂ ಓದಿ: ನೀವು ತಿಳಿದಿರದ ಸಿಂಹಗಳ ಕುರಿತಾದ ಆಸಕ್ತಿದಾಯಕ ಸಂಗತಿಗಳು
ಭಾರತದಲ್ಲಿ ಆನೆಗಳ ಸಂಖ್ಯೆ ಎಷ್ಟಿದೆ?
ಭಾರತವು ಶೇಕಡಾ 50 ಕ್ಕಿಂತ ಹೆಚ್ಚು ಏಷ್ಯನ್ ಆನೆಗಳ ಸಂತತಿಗೆ ನೆಲೆಯಾಗಿದ್ದು, ಇವುಗಳನ್ನು ರಕ್ಷಿಸುವಲ್ಲಿ ಭಾರತ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ. ಭಾರತ ಸರ್ಕಾರದ ‘ಪ್ರಾಜೆಕ್ಟ್ ಎಲಿಫೆಂಟ್’ (1992) ಅಡಿಯಲ್ಲಿ, ದೇಶದಲ್ಲಿ 33 ಆನೆ ಮೀಸಲು ಪ್ರದೇಶಗಳು ಮತ್ತು 150 ಕ್ಕೂ ಹೆಚ್ಚು ಆನೆ ಕಾರಿಡಾರ್ಗಳನ್ನು ಸ್ಥಾಪಿಸಲಾಗಿದೆ. ಭಾರತದ ಮೊದಲ ಡಿಎನ್ಎ ಆಧಾರಿತ ವೈಜ್ಞಾನಿಕ ಆನೆ ಗಣತಿಯ ಪ್ರಕಾರ (ಅಕ್ಟೋಬರ್ 2025 ರಲ್ಲಿ ಬಿಡುಗಡೆಯಾದ ವರದಿ), ದೇಶದಲ್ಲಿ ಒಟ್ಟು 22,446 ಕಾಡು ಆನೆಗಳು ಇವೆಯೆಂದು ದಾಖಲಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ