ಐಪಿಎಲ್ 2027ರ ಮೆಗಾ ಹರಾಜಿಗೆ ಮುನ್ನವೇ ಫ್ರಾಂಚೈಸಿಗಳ ನಡುವೆ ಒಳಗೊಳಗೇ ಭಾರಿ ತಂತ್ರಗಾರಿಕೆಗಳು ಆರಂಭವಾಗಿವೆ. ಇದರ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಹಾಗೂ ಪ್ರಮುಖ ವಿಶ್ಲೇಷಕ ಆಕಾಶ್ ಚೋಪ್ರಾ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವೆ ನಡೆಯಬಹುದಾದ ಒಂದು ಬ್ಲಾಕ್‌ಬಸ್ಟರ್ ‘ಪ್ಲೇಯರ್ ಸ್ವಾಪ್’ (ಆಟಗಾರರ ಅದಲು-ಬದಲು) ಐಡಿಯಾವನ್ನು ಹಂಚಿಕೊಂಡಿದ್ದಾರೆ.
ಈ ಸಂಭಾವ್ಯ ಟ್ರೇಡ್ ಡೀಲ್ ಭಾರತದ ಇಬ್ಬರು ಸ್ಟಾರ್ ಫಿನಿಷರ್‌ಗಳಾದ ರಿಂಕು ಸಿಂಗ್ ಮತ್ತು ರಮಣ್ದೀಪ್ ಸಿಂಗ್ ಅವರ ಭವಿಷ್ಯಕ್ಕೆ ಸಂಬಂಧಿಸಿದ್ದಾಗಿದೆ. ಹಾಗೆಯೇ ಇಲ್ಲಿ ಸ್ವಾಪ್ ಆಗಬೇಕಿರುವುದು ಟೀಮ್ ಇಂಡಿಯಾ ವೇಗಿ ಎಂಬುದು ವಿಶೇಷ.
ಗುಜರಾತ್ ಟೈಟನ್ಸ್‌ನ ಅಗತ್ಯತೆ:
ಕಳೆದ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ಕೆಳ-ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ತೀರಾ ದುರ್ಬಲವಾಗಿತ್ತು. ಹೀಗಾಗಿ ಫಿನಿಷರ್ ಸ್ಥಾನ ತುಂಬಲು ಅವರಿಗೆ ರಿಂಕು ಸಿಂಗ್ ಅಥವಾ ರಮಣ್ದೀಪ್ ಸಿಂಗ್ ಅವರಂತಹ ಬಲಿಷ್ಠ ಭಾರತೀಯ ಆಟಗಾರನ ಅವಶ್ಯಕತೆ ಇದೆ
ಕೊಲ್ಕತ್ತಾ ನೈಟ್ ರೈಡರ್ಸ್ ಬೇಡಿಕೆ:
ಕೆಕೆಆರ್ ಈಗಾಗಲೇ ಸಮತೋಲಿತ ಆಟಗಾರರನ್ನು ಹೊಂದಿದೆ. ಆದ್ದರಿಂದ ಅವರು ತಮ್ಮ ಸ್ಟಾರ್ ಬ್ಯಾಟರ್‌ಗಳನ್ನು ಬಿಟ್ಟುಕೊಡಬೇಕಾದರೆ, ಪ್ರತಿಯಾಗಿ ಗುಜರಾತ್ ಟೈಟಾನ್ಸ್ ತಂಡದಿಂದ ಒಬ್ಬ ಅಗ್ರ ದರ್ಜೆಯ ಭಾರತೀಯ ವೇಗದ ಬೌಲರ್ಗಾಗಿ ಬೇಡಿಕೆಯಿಡಬಹುದು. ಏಕೆಂದರೆ ಗುಜರಾತ್ ಟೈಟಾನ್ಸ್ ತಂಡದಲ್ಲಿ ಟೀಮ್ ಇಂಡಿಯಾ ವೇಗಿಗಳಾದ ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಹಾಗೂ ಗುರ್ನೂರ್ ಬ್ರಾರ್ ಇದ್ದಾರೆ. ಇವರಲ್ಲಿ ಸಿರಾಜ್ ಅಥವಾ ಪ್ರಸಿದ್ಧ್ ಕೃಷ್ಣ ಮೇಲೆ ಕೆಕೆಆರ್ ಕಣ್ಣಿಡಲಿದೆ.
ಯಾವ ತಂಡಕ್ಕೆ ಲಾಭ?
ಈ ಅದಲು-ಬದಲು ಪ್ರಕ್ರಿಯೆ ನಡೆದರೆ ಎರಡೂ ತಂಡಗಳ ದೌರ್ಬಲ್ಯಗಳು ತಕ್ಷಣವೇ ಪರಿಹಾರವಾಗಲಿವೆ. ಗುಜರಾತ್ ಟೈಟಾನ್ಸ್ ತಂಡಕ್ಕೆ ಭರವಸೆಯ ಫಿನಿಷರ್ ಸಿಕ್ಕರೆ, ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಪ್ರಮುಖ ದೇಶಿ ವೇಗದ ಬೌಲಿಂಗ್ ಅಸ್ತ್ರ ಲಭ್ಯವಾಗಲಿದೆ. ಹೀಗಾಗಿ ಇಂತಹದೊಂದು ಟ್ರೇಡ್ಗೆ ಎರಡು ಫ್ರಾಂಚೈಸಿಗಳು ಮುಂದಾಗುವ ಸಾಧ್ಯತೆಯಿದೆ ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.
ಇದನ್ನೂ ಓದಿ: ದುಲೀಪ್ ಟ್ರೋಫಿ ಟೂರ್ನಿಗೆ 6 ತಂಡಗಳು ಪ್ರಕಟ
ಸದ್ಯದ ಪರಿಸ್ಥಿತಿ ಏನು?
ಕೆಕೆಆರ್ ಮತ್ತು ಜಿಟಿ ನಡುವೆ ಈ ಟ್ರೇಡ್ ಬಗ್ಗೆ ಯಾವುದೇ ಒಪ್ಪಂದ ನಡೆಯದಿದ್ದರೂ, ಮುಂಬರುವ ಟ್ರೇಡ್ ವಿಂಡೋದಲ್ಲಿ ಇಂತಹದೊಂದು ದೊಡ್ಡ ಬದಲಾವಣೆ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇಲ್ಲಿ ಆಕಾಶ್ ಚೋಪ್ರಾ ನೀಡಿರುವ ಟ್ರೇಡ್ ಐಡಿಯಾ ಉಭಯ ಫ್ರಾಂಚೈಸಿಗಳಿಗೆ ಲಾಭದಾಯಕವಾಗಿರುವುದರಿಂದ ಈ ಟ್ರೇಡ್ಗಾಗಿ ಮಾತುಕತೆ ನಡೆಯುವ ಸಾಧ್ಯತೆಯಿದೆ.