Headlines

ಐವಿಎಫ್ ಬಳಿಕ ಬಾಣಂತಿಯರು ಮಗುವಿಗೆ ಹಾಲುಣಿಸಬಹುದೇ? ತಜ್ಞರು ನೀಡಿರುವ ಉತ್ತರವೇನು? – Kannada News | Can IVF Affect Breastfeeding After Delivery? Know What Doctors Say

ಐವಿಎಫ್ (IVF) ಮೂಲಕ ಗರ್ಭಧಾರಣೆ ಮಾಡಿಕೊಂಡ ಮಹಿಳೆಯರಲ್ಲಿ ಡೆಲಿವರಿ ನಂತರ ಮಗುವಿಗೆ ಸ್ತನ್ಯಪಾನ ಮಾಡಿಸಲು ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆ ಹಲವರಲ್ಲಿದೆ. ಐವಿಎಫ್ ವೇಳೆ ಹಾರ್ಮೋನ್‌ ಆಧಾರಿತ ಔಷಧಿಗಳನ್ನು ನೀಡುವುದರಿಂದ, ನಂತರ ಎದೆಹಾಲು ಉತ್ಪಾದನೆಗೆ ತೊಂದರೆಯಾಗಬಹುದೇ ಎಂಬ ಆತಂಕವೂ ಇರುತ್ತದೆ. ಹಾಗಾದರೆ ಐವಿಎಫ್ ನಂತರ ಸ್ತನ್ಯಪಾನ ಮಾಡುವಾಗ ನಿಜವಾಗಿಯೂ ಸಮಸ್ಯೆ ಉಂಟಾಗಬಹುದೇ, ಯಾವ ಅಂಶಗಳು ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ತಜ್ಞರು ನೀಡಿರುವ ಮಾಹಿತಿ ಸ್ಟೋರಿಯಲ್ಲಿದೆ.

ಐವಿಎಫ್ ಬಳಸುವ ಹಾರ್ಮೋನ್‌ ಔಷಧಿಗಳು ಸಾಮಾನ್ಯವಾಗಿ ಚಿಕಿತ್ಸೆಯ ನಿರ್ದಿಷ್ಟ ಹಂತದಲ್ಲಿ ಮಾತ್ರ ಅಗತ್ಯವಿರುತ್ತವೆ. ಗರ್ಭಧಾರಣೆಯ ನಂತರ ವೈದ್ಯರ ಸಲಹೆಯಂತೆ ಅವುಗಳನ್ನು ಕ್ರಮೇಣ ನಿಲ್ಲಿಸಲಾಗುತ್ತದೆ. ಮಗುವಿನ ಜನನದ ವೇಳೆಗೆ ಸ್ತನ್ಯಪಾನವನ್ನು ನಿಯಂತ್ರಿಸುವ ದೇಹದ ಸ್ವಾಭಾವಿಕ ಹಾರ್ಮೋನ್‌ ಪ್ರಕ್ರಿಯೆಯೇ ಪ್ರಮುಖವಾಗಿರುತ್ತದೆ. ಅದರಲ್ಲಿಯೂ ಐವಿಎಫ್ ಮೂಲಕ ಗರ್ಭಧಾರಣೆಯಾದ ಕಾರಣಕ್ಕೆ ಮಾತ್ರ ಸ್ತನ್ಯಪಾನದಲ್ಲಿ ಸಮಸ್ಯೆ ಉಂಟಾಗುತ್ತದೆ ಎಂಬುದಕ್ಕೆ ಬಲವಾದ ವೈಜ್ಞಾನಿಕ ಸಾಕ್ಷ್ಯವಿಲ್ಲ.

ಐವಿಎಫ್ ನಂತರ ಸ್ತನ್ಯಪಾನ ಮಾಡಿಸಬಹುದೇ?

ಸಾಮಾನ್ಯವಾಗಿ ಐವಿಎಫ್ ಮೂಲಕ ಪ್ರೇಗ್ನೆಂಟ್ ಆದ ಮಹಿಳೆಯರೂ ಸಾಮಾನ್ಯವಾಗಿ ಮಗುವಿಗೆ ಸ್ತನ್ಯಪಾನ ಮಾಡಿಸಬಹುದು. ಮಗುವಿನ ಜನನದ ನಂತರ ಪ್ಲಾಸೆಂಟಾ ಹೊರಬಂದಾಗ ಗರ್ಭಾವಸ್ಥೆಯಲ್ಲಿ ಹೆಚ್ಚಾಗಿದ್ದ ಕೆಲವು ಹಾರ್ಮೋನ್‌ಗಳ ಮಟ್ಟ ಕಡಿಮೆಯಾಗುತ್ತದೆ. ಪ್ರೊಲ್ಯಾಕ್ಟಿನ್‌ (Prolactin) ಹಾರ್ಮೋನ್ ಎದೆಹಾಲು ಉತ್ಪಾದನೆಗೆ ಸಹಾಯ ಮಾಡುತ್ತದೆ. ಮಗು ಸ್ತನಕ್ಕೆ ಹಾಲು ಕುಡಿಯಲು ಅಂಟಿಕೊಂಡಾಗ ಆಕ್ಸಿಟೋಸಿನ್‌ (Oxytocin) ಬಿಡುಗಡೆಯಾಗಿ ಹಾಲು ಹೊರಬರಲು ಸಹಾಯ ಮಾಡುತ್ತದೆ. ಈ ಪ್ರಕ್ರಿಯೆ ಸ್ವಾಭಾವಿಕವಾಗಿ ಗರ್ಭಧಾರಣೆಯಾದ ಮಹಿಳೆಯರಲ್ಲಿಯೂ, IVF ಮೂಲಕ ಗರ್ಭಧಾರಣೆಯಾದ ಮಹಿಳೆಯರಲ್ಲಿಯೂ ಒಂದೇ ರೀತಿಯಾಗಿದೆ.

ತಜ್ಞರು ಏನು ಹೇಳುತ್ತಾರೆ?

ಐವಿಎಫ್ ತಜ್ಞೆ ಡಾ. ಸುತಪಾ ಸೇನ್ ಅವರ ಪ್ರಕಾರ, ಮಗುವಿನ ಜನನದ ನಂತರ ಸ್ತನ್ಯಪಾನ ಯಾವ ವಿಧಾನದಿಂದ ಆಯಿತು ಎನ್ನುವುದಕ್ಕಿಂತ, ಹೆರಿಗೆ ನಂತರ ತಾಯಿ ಮತ್ತು ಮಗುವಿಗೆ ಸಿಗುವ ಆರೈಕೆಯ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ಮಗುವಿನ ಜನನದ ಮೊದಲ ಗಂಟೆಯೊಳಗೆ ಸ್ತನ್ಯಪಾನ ಆರಂಭಿಸುವುದು, ತಾಯಿ-ಮಗುವಿನ Skin-to-Skin Contact, ಸರಿಯಾದ ರೀತಿಯಲ್ಲಿ ಮಗುವನ್ನು ಸ್ತನಕ್ಕೆ ಅಂಟಿಸುವುದು ಮತ್ತು ಮಗುವಿಗೆ ಆಗಾಗ ಹಾಲುಣಿಸುವುದು ಸ್ತನ್ಯಪಾನ ಯಶಸ್ವಿಯಾಗಲು ಸಹಾಯ ಮಾಡಬಹುದು.

ಮಹಿಳೆಯ ವಯಸ್ಸು ಹೆಚ್ಚಿರುವುದು, ಸಿಸೇರಿಯನ್ ಹೆರಿಗೆ, ಅವಳಿ ಗರ್ಭಧಾರಣೆ, ಅವಧಿಗೂ ಮುನ್ನ ಹೆರಿಗೆ, ಗರ್ಭಾವಸ್ಥೆಯ ಮಧುಮೇಹ ಅಥವಾ ಅಧಿಕ ರಕ್ತದೊತ್ತಡದಂತಹ ಅಂಶಗಳು ಸ್ತನ್ಯಪಾನ ಆರಂಭದ ಮೇಲೆ ಪರಿಣಾಮ ಬೀರಬಹುದು. ಮಗುವಿನ ಜನನದ ನಂತರ ಸಾಧ್ಯವಾದಷ್ಟು ಬೇಗ ಸ್ತನ್ಯಪಾನ ಆರಂಭಿಸುವುದು, ಮಗುವನ್ನು ತಾಯಿಯೊಂದಿಗೆ ಹೆಚ್ಚು ಸಮಯ ಇರಿಸುವುದು ಮತ್ತು ಮಗುವಿಗೆ ಅಗತ್ಯಕ್ಕೆ ಅನುಗುಣವಾಗಿ ಆಗಾಗ ಹಾಲುಣಿಸುವುದು ಸಹಾಯಕವಾಗಬಹುದು.

ಮಗುವಿಗೆ ಹಾಲು ಸರಿಯಾಗಿ ಸಿಗುತ್ತಿಲ್ಲ ಎಂದು ಅನಿಸಿದರೆ, ಹಾಲಿನ ಪ್ರಮಾಣ ಕಡಿಮೆಯಾಗಿದೆ ಎಂದು ಅನುಮಾನವಿದ್ದರೆ ಅಥವಾ ಸ್ತನಗಳಲ್ಲಿ ನೋವು ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ. ಸ್ತ್ರೀರೋಗ ತಜ್ಞರು, ಫರ್ಟಿಲಿಟಿ ತಜ್ಞರು ಅಥವಾ ಲ್ಯಾಕ್ಟೇಶನ್‌ ಕನ್ಸಲ್ಟೆಂಟ್‌ರನ್ನು ಸಂಪರ್ಕಿಸುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *