ಬಾಲಿವುಡ್ನ ಹಿರಿಯ ನಟ ಗೋವಿಂದ (Govinda) ಹಾಗೂ ಅವರ ಪತ್ನಿ ಸುನೀತಾ ಅಹುಜಾ ನಡುವಿನ ಕೌಟುಂಬಿಕ ಕಲಹ ಈಗ ಸಾರ್ವಜನಿಕವಾಗಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಕಿರಿಯ ವಯಸ್ಸಿನ ನಟಿ ಕೋಮಲ್ ರಾಣಿ (Komal Rani) ಜೊತೆ ಕಾಣಿಸಿಕೊಂಡಿದ್ದ ಗೋವಿಂದ ಅವರನ್ನು ಸುನೀತಾ ಅವರು ‘ಶುಗರ್ ಡ್ಯಾಡಿ’ (Sugar Daddy) ಎಂದು ಕಾಲೆಳೆದಿದ್ದರು. ಈ ಟೀಕೆಗೆ ಈಗ ತೀವ್ರವಾಗಿ ತಿರುಗೇಟು ನೀಡಿರುವ ಗೋವಿಂದ, ಪತ್ನಿ ಸುನೀತಾಗೆ ‘ನಿಮ್ಮ ಮಿತಿಯಲ್ಲಿ ಇರಿ’ ಎಂದು ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಪಾಪರಾಜಿಗಳ ಮುಂದೆ ಮಾತನಾಡಿದ್ದ ಸುನೀತಾ, ‘ಮೊದಲು ಸಿನಿಮಾ ನಿರ್ಮಾಣವಾಗಲಿ, ಪ್ರಚಾರ ಆಮೇಲೆ. ಆದರೆ ಈಗಿನಿಂದಲೇ ತನ್ನ ಮಗಳ ವಯಸ್ಸಿನ ಹುಡುಗಿಯ ಜೊತೆ ಸುತ್ತಾಡುತ್ತಿದ್ದಾರೆ. ಅವರಿಗೆ ಕೊಂಚವೂ ಮಾನಮರ್ಯಾದೆ ಇಲ್ಲವೇ? ಕನಿಷ್ಠ ಉಡುಪು ಧರಿಸುವ ಪ್ರಜ್ಞೆಯಾದರೂ ಇರಬೇಕು. ನಿಮ್ಮ ಶುಗರ್ ಡ್ಯಾಡಿ ಅಷ್ಟೊಂದು ಶ್ರೀಮಂತನಾಗಿದ್ದರೆ ಸರಿಯಾಗಿ ಬಟ್ಟೆ ಧರಿಸಿ. ನಮ್ಮನ್ನು ನೋಡಿ, ಎಷ್ಟು ಸ್ಟೈಲಿಶ್ ಆಗಿ ಡ್ರೆಸ್ ಮಾಡಿಕೊಂಡಿದ್ದೇವೆ. ಅವರು ತಲೆ ಕೆಡಿಸಿಕೊಂಡಿದ್ದಾರೆ’ ಎಂದು ವ್ಯಂಗ್ಯವಾಡಿದ್ದರು.
ಖಡಕ್ ತಿರುಗೇಟು ನೀಡಿದ ಗೋವಿಂದ
ಸುನೀತಾ ಅಹುಜಾ ಅವರು ಆಡಿದ ಮಾತುಗಳನ್ನು ಗೋವಿಂದ ಖಂಡಿಸಿದ್ದಾರೆ. ಇದು ತಮ್ಮ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ಎಂದು ಅವರು ಹೇಳಿದ್ದಾರೆ. ‘ನಾನೀಗ ಹೊಸ ಸಿನಿಮಾವನ್ನು ಪ್ರಾರಂಭಿಸಿದ್ದೇನೆ. ಆದರೆ ನೀವು ನನ್ನ ಗೌರವವನ್ನು ಹಾಳುಮಾಡಲು, ಸಾರ್ವಜನಿಕವಾಗಿ ನನ್ನ ಇಮೇಜ್ ಹಾಳುಮಾಡಲು ಮತ್ತು ನನ್ನ ವ್ಯವಹಾರಕ್ಕೆ ಹಾನಿ ಮಾಡಲು ಸಕಲ ಪ್ರಯತ್ನ ನಡೆಸುತ್ತಿದ್ದೀರಿ’ ಎಂದಿದ್ದಾರೆ ಗೋವಿಂದ.
‘ಬಡ ಕುಟುಂಬಗಳ ನಟರ ನಿಂದನೆ ಬೇಡ’
‘ಚಿತ್ರರಂಗಕ್ಕೆ ಬಡ ಕುಟುಂಬಗಳಿಂದ ಅನೇಕರು ಬರುತ್ತಾರೆ. ಅವರ ಬಳಿ ಅಧಿಕಾರ ಅಥವಾ ಹಣ ಇಲ್ಲದಿರಬಹುದು. ಆದರೆ ದೇವರು ನಿಮಗೆ ಎಲ್ಲವನ್ನೂ ನೀಡಿದ್ದಾನೆ ಎಂದಮಾತ್ರಕ್ಕೆ ಬೇರೆಯವರನ್ನು ಈ ಮಟ್ಟಕ್ಕೆ ಅವಮಾನಿಸುವುದು ಶೋಭೆಯಲ್ಲ. ದೇಶದ ಅನೇಕ ಹಿರಿಯ ನಟರು ತಮಗಿಂತ ಕಿರಿಯ ನಟಿಯರ ಜೊತೆ ನಟಿಸಿದ್ದಾರೆ. ಇದರಿಂದ ಅವರಿಗೆ ಯಶಸ್ಸು ಮತ್ತು ಯಂಗ್ ಲುಕ್ ಸಿಕ್ಕಿದೆ. ಆದರೆ ನಾನು ಯಂಗ್ ಆಗಿ ಕಾಣಿಸಿಕೊಳ್ಳುವುದು ನಿಮಗೆ ಇಷ್ಟವಿಲ್ಲದಂತಿದೆ’ ಎಂದು ಗೋವಿಂದ ಹೇಳಿದ್ದಾರೆ.
ಇದನ್ನೂ ಓದಿ: 7 ವರ್ಷಗಳ ಬಳಿಕ ಚಿತ್ರರಂಗಕ್ಕೆ ನಟ ಗೋವಿಂದ ಕಮ್ಬ್ಯಾಕ್; ಹೊಸ ಸಿನಿಮಾ ‘ರೂಪಾ’ ಘೋಷಣೆ
‘ನಿಮ್ಮ ಬೆನ್ನ ಹಿಂದಿರುವ ಗ್ಯಾಂಗ್ ಶೀಘ್ರವೇ ಬಯಲಾಗಲಿದೆ’
ಸುನೀತಾಗೆ ವಾರ್ನಿಂಗ್ ನೀಡಿದ ಗೋವಿಂದ, ‘ನಿಮ್ಮ ಪಾಡ್ಕಾಸ್ಟ್ ಹಾಗೂ ಹೇಳಿಕೆಗಳ ಹಿಂದೆ ಯಾವ ಗುಂಪು ಅಥವಾ ಗ್ಯಾಂಗ್ ಕೆಲಸ ಮಾಡುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಶೀಘ್ರದಲ್ಲೇ ಅವರೆಲ್ಲರೂ ಹೊರಬರಲಿದ್ದಾರೆ. ಭವಿಷ್ಯದಲ್ಲಿ ನಿಮಗೂ ನನ್ನ ಅಗತ್ಯ ಬರಬಹುದು. ಆದ್ದರಿಂದ ನನ್ನನ್ನು ನಿಂದಿಸುವುದನ್ನು ನಿಲ್ಲಿಸಿ, ನಿಮ್ಮ ಮಿತಿಯಲ್ಲಿರಿ’ ಎಂದು ಎಚ್ಚರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.