ಮಂಗಳೂರಿನ KFC ಔಟ್ಲೆಟ್ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿImage Credit source: Tv9 Kannada
ಮಂಗಳೂರು, ಆಗಸ್ಟ್ 16: ಬೆಂಗಳೂರಿನಲ್ಲಿ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಹೋಟೆಲ್ಗಳ ಮೇಲೆ ದಾಳಿ ನಡೆಸಿ ಬಿಸಿ ಮುಟ್ಟಿಸುತ್ತಿರುವ ನಡುವೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ತವರು ಜಿಲ್ಲೆ ಮಂಗಳೂರಲ್ಲಿಯೂ (Mangaluru) ಇದೇ ಮಾದರಿಯ ತಪಾಸಣೆ ನಡೆದಿದೆ. ಮಂಗಳೂರಿನ ಸಿಟಿ ಸೆಂಟರ್ ಮಾಲ್ನಲ್ಲಿರುವ ಕೆಎಫ್ಸಿ ಔಟ್ಲೆಟ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಸ್ಟೋರೇಜ್ನಲ್ಲಿ ಹಳೇ ಮಾಂಸ, ಅವಧಿ ಮೀರಿದ ಎಣ್ಣೆ ಪತ್ತೆಯಾಗಿದೆ. ಗ್ರಾಹಕರೊಬ್ಬರು ಇಲ್ಲಿಂದ ಚಿಕನ್ ಫೆರಿ ಫೆರಿ ತರಿಸಿದ್ದರು. ಬಂದ ಫುಡ್ನಿಂದ ವಿಪರೀತ ದುರ್ವಾಸನೆ ಬರುತ್ತಿದ್ದ ಕಾರಣ ಅವರು ಆರೋಗ್ಯ ಇಲಾಖೆಗೆ ಈ ಬಗ್ಗೆ ದೂರು ನೀಡಿದ್ದರು ಎನ್ನಲಾಗಿದೆ.
ಪರಿಶೀಲನೆ ವೇಳೆ ಅಧಿಕಾರಿಗಳಿಗೆ ಶಾಕ್
ಕೆಎಫ್ಸಿ ಔಟ್ಲೆಟ್ನಲ್ಲಿ ಪರಿಶೀಲನೆ ವೇಳೆ ಸುಮಾರು 4-8 ತಿಂಗಳ ಮಾಂಸವನ್ನು ದಾಸ್ತಾನಿಟ್ಟಿರೋದು ಬೆಳಕಿಗೆ ಬಂದಿದೆ. ಅಧಿಕಾರಿಗಳು ಸ್ಟೋರೆಜ್ ರೂಂ ಪ್ರವೇಶಿಸುತ್ತಿದ್ದಾಗಲೇ ಗಬ್ಬು ವಾಸನೆ ಬಂದಿದ್ದು, ಔಟ್ಲೆಟ್ಗೆ ಬೆಂಗಳೂರಿನಿಂದ ಕೋಳಿ ಮಾಂಸ ರವಾನೆಯಾಗುತ್ತಿದೆ ಎಂಬುದು ಗೊತ್ತಾಗಿದೆ. ಸ್ಟೊರೇಜ್ನಲ್ಲಿ ಚಿಲ್ಲ್ ಚಿಕನ್, ಪ್ರೊಝನ್ ಚಿಕನ್ ಸೇರಿದಂತೆ 3 ಮಾದರಿಯ ಚಿಕನ್ಗಳನ್ನು ದಾಸ್ತಾನು ಮಾಡಲಾಗಿದ್ದು, 3 ದಿನಗಳಿಂದ ಒಂದೇ ಎಣ್ಣೆಯನ್ನು ಬಳಕೆ ಮಾಡುತ್ತಿರುವ ಮಾಹಿತಿ ಸಿಕ್ಕಿದೆ. ಎಣ್ಣೆ ಕಪ್ಪು ಬಣ್ಣಕ್ಕೆ ತಿರುಗಿದ್ದ ಕಾರಣ ಅಧಿಕಾರಿಗಳು ಸಿಬ್ಬಂದಿಯನ್ನು ತರಾಟೆಗೆ ಪಡೆದಿದ್ದಾರೆ.
ಇದನ್ನೂ ಓದಿ: ಆಹಾರ ಸುರಕ್ಷತಾ ತಪಾಸಣೆ: ಹೋಂ ಬೇಕರ್ಸ್, ಟಿಫಿನ್ ಸೇವೆಗಳು, ಕ್ಲೌಡ್ ಕಿಚನ್ಗಳ ಮೇಲೂ ಕಣ್ಣಿಟ್ಟ FDA
ಔಟ್ಲೆಟ್ ಕ್ಲೋಸ್
ತಪಾಸಣೆ ವೇಳೆ ಕಳಪೆ ಗುಣಮಟ್ಟದ ಆಹಾರಗಳು ಪತ್ತೆಯಾಗಿರುವ ಹಿನ್ನೆಲ ಸದ್ಯ ಮಳಿಗೆಯನ್ನು ಅಧಿಕಾರಿಗಳು ಬಂದ್ ಮಾಡಿಸಿದ್ದಾರೆ. ಕೋಳಿ ಮಾಂಸ ಮತ್ತು ಎಣ್ಣೆಯ ಮಾದರಿಯನ್ನು ಔಟ್ಲೆಟ್ನಿಂದ ಸಂಗ್ರಹಿಸಲಾಗಿದ್ದು, ಈ ಸ್ಯಾಂಪಲ್ಗಳನ್ನು ಮೈಸೂರಿನ ಲ್ಯಾಬ್ಗೆ ರವಾನಿಸಲಾಗಿದೆ. ಅಲ್ಲಿಂದ ಅಂತಿಮ ವರದಿ ಬಂದ ಬಳಿಕ ಇನ್ನಷ್ಟು ಅಸಲಿಯತ್ತು ಬಯಲಾಗಬೇಕಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.