
ಗಾಲೆಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ತಮ್ಮ ತಮ್ಮ ಮೊದಲ ಇನ್ನಿಂಗ್ಸ್ ಆಡಿ ಮುಗಿಸಿವೆ. ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ 462 ರನ್ ಕಲೆಹಾಕಿದರೆ, ಆತಿಥೇಯ ಶ್ರೀಲಂಕಾ 284 ರನ್ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 178 ರನ್ಗಳ ಮುನ್ನಡೆ ಪಡೆದುಕೊಂಡಿದೆ. ಶ್ರೀಲಂಕಾ ಪರ ಯುವ ಬ್ಯಾಟರ್ ಸೋನಾಲ್ ದಿನುಷಾ ಚೊಚ್ಚಲ ಟೆಸ್ಟ್ ಶತಕ ಬಾರಿಸಿದರೆ, ನಿರೋಷನ್ ಡಿಕ್ವೆಲ್ಲಾ 80 ರನ್ಗಳ ಇನ್ನಿಂಗ್ಸ್ ಆಡಿದರು. ಇವರಿಬ್ಬರ ಆಟದಿಂದ ಶ್ರೀಲಂಕಾ ತಂಡ ಫಾಲೋ ಆನ್ನಿಂದ ಪಾರಾಯಿತು. ಇತ್ತ ಟೀಂ ಇಂಡಿಯಾ ಪರ ಮಾನವ್ ಸುತಾರ್ 4 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 3 ವಿಕೆಟ್ ಪಡೆದರು. ಉಳಿದಂತೆ ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಹಾಗೂ ಕುಲ್ದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.