Headlines

ನೀರಿನ ಸೆಳೆತಕ್ಕೆ ಸಿಲುಕಿದ್ದ ಪ್ರವಾಸಿಗ ಪಾರು: ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ – Kannada News | Durga Falls Incident: Karkala Locals Act Fast, Prevent Tragedy at Udupi’s Dangerous Waterfall

ಉಡುಪಿ, ಆ.18: ಪ್ರವಾಸಿಗರನ್ನು ಆಕರ್ಷಿಸುವ ಕಾರ್ಕಳ ತಾಲೂಕಿನ ದುರ್ಗಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಸಿದ್ಧ ದುರ್ಗಾ ಫಾಲ್ಸ್ (Durga Falls) ನಲ್ಲಿ ಭಾರಿ ದುರಂತವೊಂದು ಸ್ಥಳೀಯರ ಸಮಯಪ್ರಜ್ಞೆಯಿಂದ ತಪ್ಪಿದೆ. ನೀರಿನ ರಭಸವನ್ನು ಲೆಕ್ಕಿಸದೆ ನೀರಿಗಿಳಿದು ಕೊಚ್ಚಿ ಹೋಗುತ್ತಿದ್ದ ಯುವಕನನ್ನು ಸ್ಥಳೀಯರು ಸಾಹಸಮಯವಾಗಿ ರಕ್ಷಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಾಗದಿಂದ ದುರ್ಗಾ ಫಾಲ್ಸ್‌ನ ಸೌಂದರ್ಯವನ್ನು ಸವಿಯಲು ಯುವಕನೊಬ್ಬ ಆಗಮಿಸಿದ್ದ. ಮಳೆಗಾಲದಲ್ಲಿ ಹರಿಯುವ ನೀರಿನ ರಭಸ ಹಾಗೂ ಅಪಾಯದ ಅರಿವಿಲ್ಲದೆ ಯುವಕ ಫಾಲ್ಸ್ ನೀರಿನೊಳಗೆ ಇಳಿದಿದ್ದಾನೆ. ಈ ವೇಳೆ ಏಕಾಏಕಿ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಲು ಆರಂಭಿಸಿದ್ದಾನೆ. ಯುವಕ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ ತಕ್ಷಣವೇ ಸ್ಥಳೀಯರಾದ ಸುನಿಲ್ ಮತ್ತು ಗಣೇಶ್ ಕಾರ್ಯಪ್ರವೃತ್ತರಾಗಿದ್ದಾರೆ. ತಮ್ಮ ಜೀವವನ್ನು ಲೆಕ್ಕಿಸದೆ ಸಮಯಪ್ರಜ್ಞೆಯಿಂದ ತಕ್ಷಣವೇ ನೆರವಿಗೆ ಧಾವಿಸಿದ ಸುನಿಲ್ ಹಾಗೂ ಗಣೇಶ್, ಕೊಚ್ಚಿ ಹೋಗುತ್ತಿದ್ದ ಯುವಕನನ್ನು ಸುರಕ್ಷಿತವಾಗಿ ದಂಡೆಗೆ ಎಳೆದು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ವರ್ಷಧಾರೆಯ ಸಮಯದಲ್ಲಿ ಜಲಪಾತಗಳ ಬಳಿ ತೆರಳುವ ಪ್ರವಾಸಿಗರು ಜಾಗರೂಕರಾಗಿರಬೇಕು ಎಂದು ಅರಣ್ಯ ಇಲಾಖೆ ಹಾಗೂ ಪೊಲೀಸರು ಸೂಚಿಸುತ್ತಿದ್ದರೂ, ಪ್ರವಾಸಿಗರ ನಿರ್ಲಕ್ಷ್ಯ ಮುಂದುವರಿಯುತ್ತಲೇ ಇದೆ. ಯುವಕನ ಪ್ರಾಣ ಉಳಿಸಿದ ಸುನಿಲ್ ಮತ್ತು ಗಣೇಶ್ ಅವರ ಸಾಹಸಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *