ವಡೋದರಾದಲ್ಲಿ ನಡೆದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಸತತ ಗೆಲುವಿನ ಮೂಲಕ ಪ್ಲೇಆಫ್ಗೆ ಮೊದಲ ತಂಡವಾಗಿ ಅರ್ಹತೆ ಪಡೆದುಕೊಂಡಿದೆ. ಗುಜರಾತ್ ಜೈಂಟ್ಸ್ನ ತವರು ನೆಲದಲ್ಲಿ ನಡೆದ ಈ ಪಂದ್ಯದಲ್ಲಿ ಗುಜರಾತ್ ತಂಡದಿಂದ ಹೋರಾಟದ ಪ್ರದರ್ಶನ ನಿರೀಕ್ಷಿಸಲಾಗಿತ್ತು. ಏಕೆಂದರೆ ಈ ಉಭಯ ತಂಡಗಳ ಮೊದಲ ಮುಖಾಮುಖಿಯಲ್ಲಿ ಆರ್ಸಿಬಿ ಗೆಲುವು ಸಾಧಿಸಿತ್ತು. ಹೀಗಾಗಿ ಈ ಪಂದ್ಯದಲ್ಲಿ ಗುಜರಾತ್ ಸೇಡು ತೀರಿಸಿಕೊಳ್ಳಲಿದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಆರ್ಸಿಬಿ ಸಾಂಘಿಕ ದಾಳಿಗೆ ತತ್ತರಿಸಿದ ಗುಜರಾತ್ ಬರೋಬ್ಬರಿ 61 ರನ್ಗಳಿಂದ ಸೋಲೊಪ್ಪಿಕೊಂಡಿತು.