Headlines

Akasa Air: ಬೆಂಗಳೂರಿನಿಂದ ಭುವನೇಶ್ವರಕ್ಕೆ ಹೊರಟಿದ್ದ ಆಕಾಶ ಏರ್ ವಿಮಾನದಲ್ಲಿ ಇಂಧನ ಕೊರತೆ, ಲಕ್ನೋದಲ್ಲಿ ತುರ್ತು ಭೂಸ್ಪರ್ಶ

ಲಕ್ನೋ. ಮೇ 28: ಬೆಂಗಳೂರಿನಿಂದ ಭುವನೇಶ್ವರಕ್ಕೆ 194 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತು ಸಾಗುತ್ತಿದ್ದ ಆಕಾಶ ಏರ್(Akasa Air) ಸಂಸ್ಥೆಯ ವಿಮಾನ ಇಂಧನ ಕೊರತೆಯಿಂದಾಗಿ ಲಕ್ನೋ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪೈಲಟ್‌ನ ಸಮಯಪ್ರಜ್ಞೆಯಿಂದಾಗಿ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ದೊಡ್ಡದೊಂದು ವಿಮಾನ ಅಪಘಾತ ತಪ್ಪಿದಂತಾಗಿದೆ.

ಘಟನೆಗೆ ಕಾರಣವೇನು?

ನಿಗದಿತ ವೇಳಾಪಟ್ಟಿಯಂತೆ ವಿಮಾನವು ಭುವನೇಶ್ವರಕ್ಕೆ ತಲುಪಬೇಕಿತ್ತು. ಆದರೆ ಅಲ್ಲಿ ಹವಾಮಾನ ಅತ್ಯಂತ ಕೆಟ್ಟದಾಗಿದ್ದ ಕಾರಣ, ರಾತ್ರಿ 8.40 ರ ಸುಮಾರಿಗೆ ವಿಮಾನವನ್ನು ಲಕ್ನೋ ವಿಮಾನ ನಿಲ್ದಾಣದ ಕಡೆಗೆ ತಿರುಗಿಸಲಾಯಿತು. ಈ ಮಾರ್ಗಮಧ್ಯೆ ವಿಮಾನದ ಇಂಧನ ಮಟ್ಟ ಅತ್ಯಂತ ವೇಗವಾಗಿ ಕಡಿಮೆಯಾಗುತ್ತಿರುವುದನ್ನು ಪೈಲಟ್ ಗಮನಿಸಿದರು. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ, ಪೈಲಟ್ ತಕ್ಷಣವೇ ಪ್ಯಾನ್ ಪ್ಯಾನ್ (Pan-Pan) ತುರ್ತು ಕರೆ ನೀಡಿ, ವಾಯು ಸಂಚಾರ ನಿಯಂತ್ರಣ (ATC) ಸಂಸ್ಥೆಯಿಂದ ಆದ್ಯತೆಯ ಮೇರೆಗೆ ವಿಮಾನ ಇಳಿಸಲು ಅನುಮತಿ ಕೋರಿದರು.

ವಿಮಾನ ನಿಲ್ದಾಣದಲ್ಲಿ ಪೂರ್ಣ ತುರ್ತು ಪರಿಸ್ಥಿತಿ

ರಾತ್ರಿ 9.02 ಕ್ಕೆ ಪೈಲಟ್‌ನಿಂದ ಸಂದೇಶ ಸಿಗುತ್ತಿದ್ದಂತೆ ಎಚ್ಚೆತ್ತ ಲಕ್ನೋ ಎಟಿಸಿ, ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಿಸಿತು. ರನ್‌ವೇಯನ್ನು ತಕ್ಷಣವೇ ಮುಕ್ತಗೊಳಿಸಿ, ಮುನ್ನೆಚ್ಚರಿಕೆ ಕ್ರಮವಾಗಿ ಸಿಆರ್‌ಪಿಎಫ್ (CRPF) ಸಿಬ್ಬಂದಿ, ಅಗ್ನಿಶಾಮಕ ದಳದ ವಾಹನಗಳು, ವೈದ್ಯಕೀಯ ತಂಡ ಹಾಗೂ ಆಂಬ್ಯುಲೆನ್ಸ್‌ಗಳನ್ನು ರನ್‌ವೇ ಸುತ್ತಲೂ ಸನ್ನದ್ಧವಾಗಿ ನಿಲ್ಲಿಸಲಾಯಿತು.

ಮತ್ತಷ್ಟು ಓದಿ: ದೆಹಲಿ-ಗೋವಾ ಆಕಾಶ ಏರ್​ ವಿಮಾನದ ವಾಶ್​ರೂಂನಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದ ಪ್ರಯಾಣಿಕ

ನೆಮ್ಮದಿಯ ನಿಟ್ಟುಸಿರು ಬಿಟ್ಟ ಪ್ರಯಾಣಿಕರು

ಎಲ್ಲಾ ಆತಂಕಗಳ ಮಧ್ಯೆ, ಬೋಯಿಂಗ್ 737 ಮ್ಯಾಕ್ಸ್ ವಿಮಾನವು ರಾತ್ರಿ 9.21 ಕ್ಕೆ ರನ್‌ವೇ 09 ರಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ವಿಮಾನ ಇಳಿದ ತಕ್ಷಣ ಎಲ್ಲವೂ ಸಾಮಾನ್ಯವಾಗಿದೆ ಎಂದು ಪೈಲಟ್ ತಿಳಿಸಿದ ನಂತರ ಅಧಿಕಾರಿಗಳು ನಿಟ್ಟುಸಿರು ಬಿಟ್ಟರು. ರಾತ್ರಿ 9.30 ರ ಸುಮಾರಿಗೆ ತುರ್ತು ಪರಿಸ್ಥಿತಿಯನ್ನು ಹಿಂಪಡೆಯಲಾಯಿತು.

ಈ ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ವಿಮಾನ ಇಳಿದ ಬಳಿಕ ಮೂವರು ಪ್ರಯಾಣಿಕರು ಲಕ್ನೋದಲ್ಲೇ ಇಳಿದುಕೊಂಡರು. ನಂತರ ವಿಮಾನಕ್ಕೆ ಮತ್ತೊಮ್ಮೆ ಇಂಧನ ತುಂಬಿಸಿ, ಭುವನೇಶ್ವರಕ್ಕೆ ಕಳುಹಿಸಿಕೊಡಲು ಮುಂದಿನ ಪ್ರಕ್ರಿಯೆಗಳನ್ನು ಕೈಗೊಳ್ಳಲಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *