ಜಾಂಬಿಯಾದಲ್ಲಿ ನಡೆಯುತ್ತಿರುವ 2026 ರ ಏಷ್ಯನ್ ಲೆಜೆಂಡ್ಸ್ ಲೀಗ್ನ ಮೊದಲ ಪಂದ್ಯದಲ್ಲಿ ಇಂಡಿಯಾ ರಾಯಲ್ಸ್ ತಂಡವು ಬಾಂಗ್ಲಾದೇಶ ಟೈಗರ್ಸ್ ತಂಡವನ್ನು ಸೋಲಿಸಿ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಇಂಡಿಯಾ ರಾಯಲ್ಸ್ ಪರ ದಿಗ್ಗಜ ಕ್ರಿಕೆಟಿಗರಾದ ಶಿಖರ್ ಧವನ್, ಸುರೇಶ್ ರೈನಾ, ಅಂಬಟಿ ರಾಯುಡು ಮತ್ತು ಹರ್ಭಜನ್ ಸಿಂಗ್ ಯಾರೂ ಭಾಗವಹಿಸುತ್ತಿಲ್ಲ. ಹೀಗಾಗಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ನಮನ್ ಓಜಾ ತಂಡದ ನಾಯಕತ್ವ ವಹಿಸಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ರಾಯಲ್ಸ್ ತಂಡ 135 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಟೈಗರ್ಸ್ 116 ರನ್ ಕಲೆಹಾಕಲಷ್ಟೇ ಶಕ್ತವಾಗಿ 19 ರನ್ಗಳಿಂದ ಸೋಲೊಪ್ಪಿಕೊಂಡಿತು.
135 ರನ್ಗಳ ಅಲ್ಪ ಗುರಿ
ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಡಿಯಾ ರಾಯಲ್ಸ್ ತಂಡದ ನಾಯಕ ನಮನ್ ಓಜಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ನಾಯಕನ ನಿರ್ಧಾರವನ್ನು ಬ್ಯಾಟರ್ಗಳು ಸಮರ್ಥಿಸಿಕೊಳ್ಳಲಿಲ್ಲ. ಸ್ವತಃ ನಾಯಕ ನಮನ್ ಕೂಡ 8 ಎಸೆತಗಳನ್ನು ಎದುರಿಸಿ ಕೇವಲ 1 ರನ್ ಗಳಿಸಿ ಔಟಾದರು. ಅವರ ನಂತರ ಅಭಿಷೇಕ್ ಜಲೋಟಾ 26 ರನ್ ಮತ್ತು ಅಸದ್ ಪಠಾಣ್ 22 ರನ್ ಗಳಿಸಿದರು. ಅಂತಿಮವಾಗಿ, ಸರುಲ್ ಕನ್ವರ್ 40 ರನ್ ಗಳಿಸಿ ಅಜೇಯರಾಗಿ ಉಳಿದರು. ಹೀಗಾಗಿ ಇಂಡಿಯಾ ರಾಯಲ್ಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 135 ರನ್ಗಳ ಅಲ್ಪ ಗುರಿ ನೀಡಿತು.
19 ರನ್ಗಳಿಂದ ಸೋತ ಬಾಂಗ್ಲಾ
ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಟೈಗರ್ಸ್ ತಂಡಕ್ಕೆ ಇಂಡಿಯಾ ರಾಯಲ್ಸ್ ತಂಡದ ವೇಗಿಗಳು ಮುಕ್ತವಾಗಿ ಬ್ಯಾಟ್ ಬೀಸಲು ಅವಕಾಶ ನೀಡಲಿಲ್ಲ. ಆದಾಗ್ಯೂ ಮಧ್ಯಮ ಕ್ರಮಾಂಕದ ಬ್ಯಾಟರ್ ಅಲೋಕ್ ಕಪಾಲಿ 59 ರನ್ ಮತ್ತು ಮುಕ್ತಾರ್ ಅಲಿ 23 ರನ್ಗಳ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲ್ಲಿಸುವಲ್ಲಿ ವಿಫಲರಾದರು. ಇತ್ತ ಇಂಡಿಯಾ ರಾಯಲ್ಸ್ ಪರ ಶದಾಬ್ ಜಕಾತಿ ನಾಲ್ಕು ಓವರ್‌ಗಳಲ್ಲಿ 25 ರನ್‌ಗಳನ್ನು ನೀಡಿ ಮೂರು ವಿಕೆಟ್‌ಗಳನ್ನು ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಅವರ ಜೊತೆಗೆ ಅನುರೀತ್ ಸಿಂಗ್ ಕೂಡ ನಾಲ್ಕು ಓವರ್‌ಗಳಲ್ಲಿ ಕೇವಲ 12 ರನ್‌ಗಳನ್ನು ಬಿಟ್ಟುಕೊಟ್ಟು ಎರಡು ವಿಕೆಟ್‌ಗಳನ್ನು ಪಡೆದರು. ಅಭಿಷೇಕ್ ಜಲೋಟಾ ಕೂಡ ಮೂರು ಓವರ್‌ಗಳಲ್ಲಿ 11 ರನ್ ನೀಡಿ ಒಂದು ವಿಕೆಟ್ ಪಡೆದರು. ಅಂತಿಮವಾಗಿ ಬಾಂಗ್ಲಾದೇಶ ಟೈಗರ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 116 ರನ್‌ಗಳಿಸಲಷ್ಟೇ ಶಕ್ತವಾಯಿತು.
ಪಾಯಿಂಟ್ ಪಟ್ಟಿಯಲ್ಲಿ ಪಾಕ್ಗೆ ಕೊನೆಯ ಸ್ಥಾನ
ಈ ಗೆಲುವಿನೊಂದಿಗೆ ಇಂಡಿಯಾ ರಾಯಲ್ಸ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದರೆ, ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಪ್ಯಾಂಥರ್ಸ್ ತಂಡವನ್ನು ಸೋಲಿಸಿದ ಏಷ್ಯನ್ ಸ್ಟಾರ್ಸ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ತಮ್ಮ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ಪಠಾಣ್ಸ್ ವಿರುದ್ಧ ಜಯಗಳಿಸಿ ಅಭಿಯಾನ ಆರಂಭಿಸಿದ್ದ ಶ್ರೀಲಂಕಾ ಲಯನ್ಸ್ ತಂಡವು ಮೂರನೇ ಸ್ಥಾನವನ್ನು ಕಾಯ್ದುಕೊಂಡಿದ್ದರೆ, ಪಾಕಿಸ್ತಾನ ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.