ಬೆಂಗಳೂರು, ಏಪ್ರಿಲ್ 09: ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತೀರ್ಪನ್ನು ಏಪ್ರಿಲ್ 15ಕ್ಕೆ ಮುಂದೂಡಿದೆ. ಪ್ರಮುಖ ಆರೋಪಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಭವಿಷ್ಯ ಇಂದು ನಿರ್ಧಾರವಾಗುವ ನಿರೀಕ್ಷೆಯಿತ್ತು, ಆದರೆ ತೀರ್ಪು ಸಿದ್ಧಪಡಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ವಿಸ್ತೃತ ಪರಾಮರ್ಶೆಯ ಅಗತ್ಯವಿರುವುದರಿಂದ ಮುಂದೂಡಲಾಗಿದೆ. ವಾದ-ಪ್ರತಿವಾದದ ಸಮಯದಲ್ಲಿ ಎರಡೂ ಕಡೆಯ ವಕೀಲರು ಸಾವಿರಾರು ಪುಟಗಳ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದ್ದು, ಪ್ರಕರಣದಲ್ಲಿ ಅನೇಕ ದಾಖಲೆಗಳು ಮತ್ತು ಸಾಕ್ಷ್ಯಗಳಿವೆ. ಇವೆಲ್ಲವನ್ನೂ ಪರಿಶೀಲಿಸಿ, ತೀರ್ಪಿನಲ್ಲಿ ಯಾವುದೇ ಗೊಂದಲಗಳಾಗದಂತೆ ತಿದ್ದುಪಡಿ ಕಾರ್ಯ ನಡೆಯುತ್ತಿದೆ. ಹೀಗಾಗಿ ಏಪ್ರಿಲ್ 15ರಂದು ವಿನಯ್ ಕುಲಕರ್ಣಿ ದೋಷಿ ಅಥವಾ ನಿರ್ದೋಷಿ ಎಂಬುದು ಸ್ಪಷ್ಟವಾಗಲಿದೆ.
ಅಲ್ಲು ಅರ್ಜುನ್ (Allu Arjun) ನಟಿಸಿ ಅಟ್ಲಿ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದ ಟೈಟಲ್ ಪೋಸ್ಟರ್ ನಿನ್ನೆಯಷ್ಟೆ ಬಿಡುಗಡೆ ಆಯ್ತು. ಸಿನಿಮಾಕ್ಕೆ ‘ರಾಕಾ’ ಎಂದು ಹೆಸರಿಟ್ಟಿದ್ದು, ಪೋಸ್ಟರ್ನಲ್ಲಿ ರಾಕ್ಷಸನ ರೀತಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ಬಗ್ಗೆ ಅಲ್ಲು ಅರ್ಜುನ್ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಪೋಸ್ಟರ್ ಬಿಡುಗಡೆ ಆದ ಬಳಿಕ ಜೂ ಎನ್ಟಿಆರ್ ಜೊತೆಗೆ ಸಿನಿಮಾ ಮಾಡಿದ್ದ ನಿರ್ದೇಶಕ ಟ್ರೆಂಡ್ ಆಗಲು ಆರಂಭಿಸಿದ್ದು, ಹಠಾತ್ತನೆ ಆ ನಿರ್ದೇಶಕನ ವಿಡಿಯೋಗಳು, ಹಳೆ ಸಂದರ್ಶನಗಳು ವೈರಲ್ ಆಗುತ್ತಿವೆ.
ಜೂ ಎನ್ಟಿಆರ್ ‘ಶಕ್ತಿ’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದರು. ಆ ಸಿನಿಮಾ ಪೌರಾಣಿಕ ಹಿನ್ನೆಲೆಯುಳ್ಳ ಆಕ್ಷನ್ ಸಿನಿಮಾ ಆಗಿತ್ತು. ಸಿನಿಮಾನಲ್ಲಿ ಜೂ ಎನ್ಟಿಆರ್ ದ್ವಿಪಾತ್ರದಲ್ಲಿ ನಟಿಸಿದ್ದರು. ದಿವ್ಯ ಶಕ್ತಿ, ದುಷ್ಟ ಶಕ್ತಿ ಹೀಗೇ ಸಾಕಷ್ಟು ಕುತೂಹಲಕಾರಿ ಕತೆಯನ್ನು ಸಿನಿಮಾ ಒಳಗೊಂಡಿತ್ತು. ಆದರೆ ಆ ಸಿನಿಮಾ ಫ್ಲಾಪ್ ಆಯ್ತು. ಫ್ಲಾಪ್ ಆದರೂ ಸಹ ಸಿನಿಮಾ ಕಲ್ಟ್ ಎನಿಸಿಕೊಂಡಿತು. ಹಿಂದಿಗೆ ಡಬ್ ಆಗಿ ಸಾಕಷ್ಟು ಜನ ಮನ್ನಣೆಯನ್ನೂ ಸಹ ಗಳಿಸಿಕೊಂಡಿತು.
‘ಶಕ್ತಿ’ ಸಿನಿಮಾವನ್ನು ಮೆಹರ್ ರಮೇಶ್ ನಿರ್ದೇಶನ ಮಾಡಿದ್ದರು. ಈಗ ಅಲ್ಲು ಅರ್ಜುನ್ ಅವರ ‘ರಾಕಾ’ ಸಿನಿಮಾದ ಪೋಸ್ಟರ್ ಬಿಡುಗಡೆ ಆಗುತ್ತಿದ್ದಂತೆ ಮೆಹರ್ ರಮೇಶ್ ಟ್ರೆಂಡ್ ಆಗುತ್ತಿದ್ದಾರೆ. ಅಲ್ಲು ಅರ್ಜುನ್ ನಟಿಸುತ್ತಿರುವ ಸಿನಿಮಾದ ಹೆಸರು ‘ರಾಕಾ’. ಮೆಹರ್ ರಮೇಶ್ ನಿರ್ದೇಶಿಸಿದ್ದ ‘ಶಕ್ತಿ’ ಸಿನಿಮಾನಲ್ಲಿ ವಿಲನ್ ಹೆಸರು ಸಹ ರಾಕಾ. ರಾಜಮೌಳಿ ನಿರ್ದೇಶನ ಮಾಡುತ್ತಿರುವ ‘ವಾರಣಾಸಿ’ ಸಿನಿಮಾನಲ್ಲಿ ನಾಯಕನ ಹೆಸರು ‘ರುದ್ರ’, ಮೆಹರ್ ನಿರ್ದೇಶಿಸಿದ್ದ ‘ಶಕ್ತಿ’ ಸಿನಿಮಾನಲ್ಲಿ ನಾಯಕನ ಹೆಸರು ಸಹ ರುದ್ರ ಆಗಿತ್ತು. ಇದೇ ಕಾರಣಕ್ಕೆ ಮೆಹರ್ ರಮೇಶ್ ಅವರು ಟ್ರೆಂಡ್ ಆಗುತ್ತಿದ್ದಾರೆ.
‘ರಾಕಾ’ ಸಿನಿಮಾನಲ್ಲಿ ಅಲ್ಲು ಅರ್ಜುನ್ ಅವರದ್ದು ದ್ವಿಪಾತ್ರ ಎನ್ನಲಾಗುತ್ತಿದೆ. ರಾಕ್ಷಸನ ಪಾತ್ರದಲ್ಲಿಯೂ ಅಲ್ಲು ಅರ್ಜುನ್ ನಟಿಸಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಾಯಕಿ. ರಶ್ಮಿಕಾ ಮಂದಣ್ಣ ಸಹ ಸಿನಿಮಾನಲ್ಲಿದ್ದಾರೆ. ಅಟ್ಲಿ ನಿರ್ದೇಶಿಸುತ್ತಿರುವ ಈ ಸಿನಿಮಾಕ್ಕೆ ಕಲಾನಿಧಿ ಮಾರನ್ ಬಂಡವಾಳ ಹೂಡಿದ್ದಾರೆ. ಹಾಲಿವುಡ್ನ ಕೆಲವು ಖ್ಯಾತನಾಮ ಸಂಸ್ಥೆಗಳು ಸಿನಿಮಾಕ್ಕಾಗಿ ಕೆಲಸ ಮಾಡಿವೆ. ಸಿನಿಮಾ ಇದೇ ವರ್ಷಾಂತ್ಯಕ್ಕೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಭರ್ಜರಿ ಜಯ ಸಾಧಿಸಿರುವ ರಾಯಲ್ ಚಾಲೆಂಜರ್ಸ್ (RCB) ತಂಡಕ್ಕೆ ಮೂರನೇ ಪಂದ್ಯಕ್ಕೂ ಮುನ್ನ ಆನೆಬಲ ಬಂದಂತಾಗಿದೆ. ಏಕೆಂದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ವೇಗಿ ಜೋಶ್ ಹೇಝಲ್‌ವುಡ್ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
ಗಾಯದ ಸಮಸ್ಯೆ ಮತ್ತು ಪುನರಾಗಮನ:
ಹ್ಯಾಮ್‌ಸ್ಟ್ರಿಂಗ್ ಮತ್ತು ಅಕಿಲಿಸ್ ಸ್ನಾಯು ಸೆಳೆತದಿಂದಾಗಿ ಜೋಶ್ ಹೇಝಲ್‌ವುಡ್ ಈ ಸೀಸನ್‌ನ ಆರಂಭಿಕ ಪಂದ್ಯಗಳಿಂದ ಹೊರಗುಳಿದಿದ್ದರು. ಇತ್ತೀಚಿನ ವರದಿಗಳ ಪ್ರಕಾರ, ಅವರು ನೆಟ್ಸ್‌ನಲ್ಲಿ ಪೂರ್ಣ ಪ್ರಮಾಣದ ಬೌಲಿಂಗ್ ಅಭ್ಯಾಸ ಆರಂಭಿಸಿದ್ದು, ಪೂರ್ಣ ಫಿಟ್ನೆಸ್ ಮರಳಿಸಿಕೊಂಡಿದ್ದಾರೆ. ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೇ ಅವರು ಲಭ್ಯರಿರಬೇಕಿತ್ತಾದರೂ, ಮುನ್ನೆಚ್ಚರಿಕೆ ಕ್ರಮವಾಗಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.
ಇದೀಗ ಸಂಪೂರ್ಣ ಫಿಟ್ನೆಸ್ ಸಾಧಿಸಿರುವ ಜೋಶ್ ಹೇಝಲ್‌ವುಡ್ ಅವರನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಅದರಂತೆ ಏಪ್ರಿಲ್ 10 ರಂದು ಗುವಾಹಟಿಯಲ್ಲಿ ನಡೆಯಲಿರುವ ಪಂದ್ಯದ ಮೂಲಕ ಕಂಬ್ಯಾಕ್ ಮಾಡುವ ಸಾಧ್ಯತೆಯಿದೆ.
ಹೇಝಲ್‌ವುಡ್ ಏಕೆ ಮುಖ್ಯ?
ಪವರ್‌ಪ್ಲೇ ನಿಯಂತ್ರಣ: ಈ ಬಾರಿ ಆರ್‌ಸಿಬಿ ಆರಂಭಿಕ ಓವರ್‌ಗಳಲ್ಲಿ ಹೆಚ್ಚು ರನ್ ಬಿಟ್ಟುಕೊಡುತ್ತಿದೆ. ಹೇಝಲ್‌ವುಡ್ ಅವರ ನಿಖರ ಲೈನ್ ಮತ್ತು ಲೆಂತ್ ರನ್ ವೇಗಕ್ಕೆ ಬ್ರೇಕ್ ಹಾಕಬಲ್ಲದು.
ಡೆತ್ ಓವರ್‌ಗಳ ಪರಿಣಿತಿ: ಪಂದ್ಯದ ಅಂತಿಮ ಹಂತದಲ್ಲಿ ಯಾರ್ಕರ್ ಮತ್ತು ಬೌನ್ಸರ್‌ಗಳ ಮೂಲಕ ವಿಕೆಟ್ ಪಡೆಯುವ ಕಲೆ ಹೇಝಲ್ವುಡ್ಗೆ ಕರಗತವಾಗಿದೆ.
ಆಡುವ ಬಳಗದಿಂದ ಯಾರು ಔಟ್?
ಜೋಶ್ ಹೇಝಲ್‌ವುಡ್ ತಂಡಕ್ಕೆ ಮರಳಿದರೆ, ಕಳೆದ ಪಂದ್ಯಗಳಲ್ಲಿ ಆಡಿದ್ದ ನ್ಯೂಝಿಲೆಂಡ್‌ನ ವೇಗಿ ಜೇಕ್ಕಬ್ ಡಫಿ ಅವರು ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಡಫಿ ವಿಕೆಟ್ ಪಡೆದಿದ್ದರೂ, ಹೇಝಲ್‌ವುಡ್ ಅವರಷ್ಟು ಪ್ರಭಾವಶಾಲಿಯಾಗಿರಲಿಲ್ಲ. ಹೀಗಾಗಿ ಡಫಿ ಅವರನ್ನು ಹೊರಗಿಟ್ಟು ಹೇಝಲ್ವುಡ್ಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚು.
ರಾಜಸ್ಥಾನ್ ರಾಯಲ್ಸ್ ಸವಾಲು:
ರಾಜಸ್ಥಾನ್ ತಂಡದ ಅಗ್ರ ಕ್ರಮಾಂಕದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಅವರಂತಹ ಬಲಿಷ್ಠ ಬ್ಯಾಟರ್‌ಗಳಿದ್ದಾರೆ. ಇವರನ್ನು ಕಟ್ಟಿಹಾಕಲು ಹೇಝಲ್‌ವುಡ್ ಅವರ ಎತ್ತರದ ಬೌನ್ಸ್ ಮತ್ತು ಸ್ವಿಂಗ್ ಆರ್‌ಸಿಬಿಗೆ ಅಸ್ತ್ರವಾಗಲಿದೆ. ಗುವಾಹಟಿಯ ಪಿಚ್ ವೇಗಿಗಳಿಗೆ ತುಸು ನೆರವು ನೀಡುವುದರಿಂದ ಹೇಝಲ್‌ವುಡ್ ಆಟ ಇಲ್ಲಿ ನಿರ್ಣಾಯಕವಾಗಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಜೋಶ್ ಹೇಝಲ್‌ವುಡ್ ಅವರ ಆಗಮನವು ಆರ್‌ಸಿಬಿ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಿಷ್ಠಗೊಳಿಸುವುದರಲ್ಲಿ ಅನುಮಾನವೇ ಇಲ್ಲ. ಈ ಮೂಲಕ ಆರ್ಆರ್ ಪಡೆಯನ್ನು ಬಗ್ಗು ಬಡಿದು ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆಯಾ ಕಾದು ನೋಡಬೇಕಿದೆ.
ಬಾಗಲಕೋಟೆ, ಏ.9: ಉಪಚುನಾವಣೆಗೆ ಮತದಾನ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಬೆಳ್ಳಂಬೆಳಿಗ್ಗೆಯೇ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದು, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ತಮ್ಮ ಕುಟುಂಬ ಸಮೇತರಾಗಿ ಮತದಾನ ಮಾಡಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಾರಿಯೂ ಗೆಲುವಿನ ಕುರಿತು ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋಲುಂಡಿದ್ದ ವೀರಣ್ಣ ಚರಂತಿಮಠ ಅವರು, ಈ ಬಾರಿಯ ವಾತಾವರಣ ಚೆನ್ನಾಗಿದೆ ಎಂದರು. ಇದೇ ವೇಳೆ, ಕಾಂಗ್ರೆಸ್ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದರು. ಕಾಂಗ್ರೆಸ್‌ನವರು ಲಕ್ಷಾಂತರ, ಕೋಟ್ಯಂತರ ರೂಪಾಯಿ ಹಣ ಹಂಚಿಕೆ ಮಾಡಿದ್ದಾರೆ ಎಂಬ ಮಾಹಿತಿ ಇದೆ ಎಂದು ಹೇಳಿದ್ದಾರೆ. ಅಲ್ಲದೆ, ಗೋಕಾಕ್, ಅರಬಾವಿ ಮತ್ತು ಬೆಳಗಾವಿ ಜಿಲ್ಲೆಗಳಿಂದ ಹೊರಗಿನವರು ಬಂದು ಬೀಡುಬಿಟ್ಟಿದ್ದಾರೆ ಎಂದು ಚುನಾವಣಾಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ತಿಳಿಸಿದರು. ಎಲ್ಲ ಯುವಕ, ಯುವತಿಯರು, ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾರತೀಯ ಜನತಾ ಪಕ್ಷದ ಕಮಲದ ಗುರುತಿಗೆ ಮತ ಹಾಕುವಂತೆ ಮನವಿ ಮಾಡಿದರು.
ವಿಘ್ನೇಶ್ ಶಿವನ್ ನಿರ್ದೇಶನದ ‘ಎಲ್ಯುಕೆ’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಈ ಚಿತ್ರ ಏಪ್ರಿಲ್ 10ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ರಿಲೀಸ್ಗೂ ಮೊದಲು ವಿಘ್ನೇಶ್ ಹಾಗೂ ನಯನತಾರಾ ಅವರು ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಆ ಸಂದರ್ಭದ ವಿಡಿಯೋ ಲಭ್ಯವಾಗಿದೆ. ಆ ವಿಡಿಯೋ ಇಲ್ಲಿದೆ.
ಆನೇಕಲ್, ಏಪ್ರಿಲ್ 09: ಪಲ್ಲಕ್ಕಿ ಹೊತ್ತ ಟ್ರ್ಯಾಕ್ಟರ್ ಹರಿದ ಪರಿಣಾಮ ಹಸೆಮಣೆ ಏರಬೇಕಿದ್ದ ಯುವಕ ದಾರುಣವಾಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಹುಳಿಮಾವು ಜಾತ್ರೆಯಲ್ಲಿ ನಡೆದಿದೆ. ಹುಳಿಮಾವು ಗ್ರಾಮದ ಶ್ರೀ ಕೋದಂಡ ರಾಮಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ನಿನ್ನೆ ನಡೆದಿದ್ದು, ರಥೋತ್ಸವ ಹಿನ್ನಲೆ ರಾತ್ರಿ ಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪಲ್ಲಕ್ಕಿಗಳನ್ನ ನೋಡುತ್ತಾ ನಿಂತಿದ್ದ ಯುವಕನ ಮೇಲೆ ಟ್ರ್ಯಾಕ್ಟರ್ ಹರಿದಿದ್ದು, ಅಕ್ಷತ್ (27) ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಗಿತ್ತಾದರೂ ಮಾರ್ಗ ಮಧ್ಯೆಯೇ ಉಸಿರು ಚೆಲ್ಲಿದ್ದಾರೆ.
ಬನಶಂಕರಿ ನಿವಾಸಿಯಾಗಿರುವ ಅಕ್ಷತ್, ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಮದುವೆಯ ಅಹ್ವಾನ ಪತ್ರಿಕೆ ವಿತರಿಸಲೆಂದು ಬಂದಿದ್ದರು. ಹಾಗೆ ಜಾತ್ರೆಯನ್ನೂ ನೋಡಿ ಹೋಗೊಣ ಎಂದು ಅಲ್ಲಿಯೇ ಉಳಿದುಕೊಂಡಿದ್ದರು ಎನ್ನಲಾಗಿದೆ. ಇನ್ನು ಟ್ರ್ಯಾಕ್ಟರ್ ಚಾಲಕನ ಅಜಾಗರೂಕತೆಯಿಂದಲೇ ಅಪಘಾತ ನಡೆದಿದೆ ಎನ್ನಲಾಗಿದ್ದು, ಘಟನೆ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಹುಳಿಮಾವು ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದ್ದು, ಸ್ಥಳಕ್ಕೆ ಬೆಂಗಳೂರು ದಕ್ಷಿಣ ಸಂಚಾರ ಡಿಸಿಪಿ ಗೋಪಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುರ್ಘಟನೆ ನಡೆದು ಓರ್ವ ಮೃತಪಟ್ಟಿದ್ದರೂ ದೇವಾಲಯದ ಟ್ರಸ್ಟಿಗಳು ಸ್ಥಳಕ್ಕೆ ಬಂದಿಲ್ಲ ಎನ್ನಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕೆಂದನಹಳ್ಳಿ ಗೇಟ್ ಬಳಿ ಕಾರು ಡಿಕ್ಕಿಯಾದ ಪರಿಣಾಮ ಬೈಕ್ನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ವಿಜಯ್, ದೊಡ್ಡಗೌಡ, ಅಂಬರೀಶ್ ಗಾಯಾಳುಗಳಾಗಿದ್ದು, ಇವರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಈಗಾಗಲೇ 14 ಪಂದ್ಯಗಳು ಮುಗಿದಿವೆ. ಇದಾಗ್ಯೂ ಕೆಲ ಸ್ಟಾರ್ ಆಟಗಾರರು ಇನ್ನೂ ಕೂಡ ತಂಡವನ್ನು ಕೂಡಿಕೊಂಡಿಲ್ಲ. ಅಂದರೆ ಗಾಯದ ಸಮಸ್ಯೆಯ ಕಾರಣ ಐಪಿಎಲ್ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇದೀಗ ಈ ಆಟಗಾರರ ಇಂಜುರಿ ಅಪ್ಡೇಟ್ ಹೊರಬಿದಿದ್ದು, ಯಾವ ಆಟಗಾರ ಯಾವಾಗ ಕಣಕ್ಕಿಳಿಯಲಿದ್ದಾರೆ ಎಂದು ನೋಡುವುದಾದರೆ…
ಎಂ.ಎಸ್. ಧೋನಿ (CSK): ಸತತ ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಿಂತೆ ಮುಂದಿನ ಪಂದ್ಯದಲ್ಲೂ ಮುಂದುವರೆಯಲಿದೆ. ಏಕೆಂದರೆ ಕಾಲಿನ ಸ್ನಾಯು ಸೆಳೆತದಿಂದ (Calf Strain) ಧೋನಿ ಇನ್ನೂ ಚೇತರಿಸಿಕೊಂಡಿಲ್ಲ. ಸದ್ಯದ ವರದಿಗಳ ಪ್ರಕಾರ, ಏಪ್ರಿಲ್ 11 ರಂದು ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ಧೋನಿ ಅಲಭ್ಯರಾಗಲಿದ್ದಾರೆ.
ಮಿಚೆಲ್ ಸ್ಟಾರ್ಕ್ (DC): ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಬೌಲರ್ ಮಿಚೆಲ್ ಸ್ಟಾರ್ಕ್ ಭುಜ ಮತ್ತು ಮೊಣಕೈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸದ್ಯ ಆಸ್ಟ್ರೇಲಿಯಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಟಾರ್ಕ್ ಏಪ್ರಿಲ್ 21ರ ಸುಮಾರಿಗೆ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ.
ಡೆವಾಲ್ಡ್ ಬ್ರೆವಿಸ್ (CSK): ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಸ್ಫೋಟಕ ದಾಂಡಿಗ ಡೆವಾಲ್ಡ್ ಬ್ರೆವಿಸ್ ಅವರು ತಮ್ಮ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಏಪ್ರಿಲ್ 11ರಂದು ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಅವರು ಲಭ್ಯವಿರಲಿದ್ದಾರೆ ಎಂದು ಸಿಎಸ್‌ಕೆ ತಂಡ ಖಚಿತಪಡಿಸಿದೆ.
ವನಿಂದು ಹಸರಂಗ (LSG): ಶ್ರೀಲಂಕಾದ ಆಲ್ರೌಂಡರ್ ಹಸರಂಗ ಅವರ ವಿಷಯದಲ್ಲಿ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಕಾಲಿನ ಸ್ನಾಯು ಹರಿತದ (Hamstring tear) ಸಮಸ್ಯೆಯಿಂದ ಬಳಲುತ್ತಿರುವ ಅವರು ಇನ್ನೂ ಫಿಟ್ನೆಸ್ ಟೆಸ್ಟ್ ಪೂರ್ಣಗೊಳಿಸಬೇಕಿದೆ. ಹೀಗಾಗಿ ಅವರು ಈ ಸೀಸನ್ನಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ.
ಮಥೀಶ ಪತಿರಾಣ (KKR): ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವೇಗಿ ಪತಿರಾಣ ಅವರು ಫಿಟ್ನೆಸ್ ಪರೀಕ್ಷೆಗೆ ಒಳಗಾಗಬೇಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಏಪ್ರಿಲ್ 16ರ ಪಂದ್ಯಕ್ಕೆ ಅವರು ಕೊಲ್ಕತ್ತಾ ನೈಟ್ ರೈಡರ್ಸ್ ಪರ ಮೈದಾನಕ್ಕಿಳಿಯಲಿದ್ದಾರೆ.
ಚಿಕ್ಕಮಗಳೂರು, ಏ.9: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಮನ ಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ. 77 ವರ್ಷದ ಸಿರಿಲ್ ಮೋನಿಸ್ ಎಂಬುವವರು ಅನಾರೋಗ್ಯದಿಂದ ಮಲಗಿದ್ದಲ್ಲೇ ಮೃತಪಟ್ಟಿದ್ದರು. ಆದರೆ, ಅವರ ಪತ್ನಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕಾರಣ, ಪತಿ ಸಾವನ್ನಪ್ಪಿರುವುದು ಅವರಿಗೆ ತಿಳಿದಿರಲೇ ಇಲ್ಲ. ಸುಮಾರು 10 ದಿನಗಳ ಕಾಲ ಅವರು ಕೊಳೆತು ಹುಳ ಹಿಡಿದಿದ್ದ ಪತಿಯ ಶವದ ಪಕ್ಕದಲ್ಲೇ ಕಾಲ ಕಳೆದಿದ್ದಾರೆ.
ಮನೆಯಿಂದ ವಿಪರೀತ ದುರ್ವಾಸನೆ ಬಂದಾಗ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದಾಗ ಪತ್ನಿ “ನನ್ನ ಗಂಡ ನನಗೆ ಬೇಕು, ಯಾರೂ ಮುಟ್ಟಬೇಡಿ” ಎಂದು ಶವವನ್ನು ಮುಟ್ಟಲು ಬಿಡದೆ ಹಠ ಹಿಡಿದಿದ್ದರು. ಮಗ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರೆ, ಮಗಳು ದುಬೈನಲ್ಲಿ ಶಿಕ್ಷಕಿಯಾಗಿದ್ದಾರೆ. ಮಗ ನಿತ್ಯ ಕರೆ ಮಾಡಿದಾಗಲೂ ತಾಯಿ “ಅಪ್ಪ ಚೆನ್ನಾಗಿದ್ದಾರೆ” ಎಂದೇ ಹೇಳುತ್ತಿದ್ದರು. ಅಪ್ಪ ಸತ್ತ 10 ದಿನಗಳ ನಂತರ ಮಗ ಬಂದರೂ, ತಂದೆಯ ಮುಖ ನೋಡುವ ಭಾಗ್ಯ ಆತನಿಗೆ ಸಿಗಲಿಲ್ಲ. ಇನ್ನು ಮಗಳು ಅಪ್ಪ ಸತ್ತರೂ ಬಂದು ನೋಡಿಲ್ಲ.
ಶವ ಸಂಪೂರ್ಣ ಕೊಳೆತು ಹೋಗಿದ್ದರಿಂದ ಸ್ಥಳೀಯರು ಮುಟ್ಟಲು ಹಿಂಜರಿದರು. ಈ ವೇಳೆ ಸಮಾಜ ಸೇವಕ ಆರೀಫ್ ಅವರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿ, ಅಂತ್ಯಸಂಸ್ಕಾರಕ್ಕೆ ನೆರವಾದರು.ಬಣಕಲ್ ಕ್ರೈಸ್ತ ಸ್ಮಶಾನದಲ್ಲಿ ಸಂಜೆ ವೇಳೆಗೆ ಮೋನಿಸ್ ಅವರ ಅಂತ್ಯಸಂಸ್ಕಾರ ನೆರವೇರಿತು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬೆಂಗಳೂರು, ಏಪ್ರಿಲ್ 09: ಆಟವಾಡುವಾಗ ಮೊದಲನೇ ಮಹಡಿಯಿಂದ ಬಿದ್ದು ಮಗುವೊಂದು ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರಿನ (Bengaluru) ನಾಯಂಡಳ್ಳಿಯಲ್ಲಿ ನಡೆದಿದೆ. ಆಯತಪ್ಪಿ ಬಿದ್ದ ಪರಿಣಾಮ ಒಂದೂವರೆ ವರ್ಷದ ಹೆಣ್ಣು ಮಗು ಸಹನಾಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಏಪ್ರಿಲ್ 6ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮಹಡಿಯಿಂದ ಹೆಣ್ಣು ಮಗು ಬೀಳುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಗುವಿನ ಆರೋಗ್ಯದಲ್ಲಿ ಚೇತರಿಕೆ
ಇನ್ನು ಗಂಭೀರ ಗಾಯಗೊಂಡಿರುವ ಮಗು ಸಹನಾ ನವೀನ್ ಮತ್ತು ಜಯಶ್ರೀ ದಂಪತಿಯದ್ದಾಗಿದ್ದು, ಮಗಳ ಸದ್ಯದ ಆರೋಗ್ಯದ ಬಗ್ಗೆ ತಂದೆ ನವೀನ್ ಮಾಹಿತಿ ನೀಡಿದ್ದಾರೆ. ಬಸವನಗುಡಿಯ ರಂಗದೊರೆ ಸ್ಮಾರಕ ಆಸ್ಪತ್ರೆಯ ಐಸಿಯುನಲ್ಲಿ ಸಹನಾಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಕೆಯ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿನ ತಲೆ ಭಾಗಕ್ಕೆ ಸ್ವಲ್ಪ ಗಾಯವಾಗಿದ್ದು ಬಿಟ್ಟರೆ ಮತ್ತೆಲ್ಲಿಯೂ ಏನೂ ಆಗಿಲ್ಲ. ತಲೆಗೆ ಮೂರು ಹೊಲಿಗೆ ಹಾಕಲಾಗಿದ್ದು, ಸಹನಾ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದು ತಿಳಿಸಿದ್ದಾರೆ.
ಮಗುವಿನ ಜೊತೆಗೇ ಇದ್ದ ತಾಯಿ ಜಯಶ್ರೀ ಹಾಲು ಕಾಯಿಸಲು ಇಟ್ಟಿದ್ದರು. ಹೀಗಾಗಿ ಹಾಲು ಉಕ್ಕಿತಾ ಎಂದು ನೋಡಿ ಬರಲು ಅರೆಕ್ಷಣ ಅವರು ತೆರಳಿದ್ದರು. ಅಷ್ಟರಲ್ಲಿ ಮಗು ಸಹನಾ ಮಹಡಿಯಿಂದ ಬಿದ್ದು ಗಾಯಗೊಂಡಿದೆ. ಹೊರಗಡೆ ಇದ್ದ ಚೇರ್ ಹತ್ತಿದ ಪರಿಣಾಮ ಮಗುವಿಗೆ ಆಯತಪ್ಪಿದೆ. ಮಗು ಕೆಳಗಡೆ ಬಿದ್ದಿದ್ದನ್ನು ಕಂಡ ರಸ್ತೆಯಲ್ಲಿ ತೆರಳುತ್ತಿದ್ದ ಜನ ಕಿರುಚಾಡುತ್ತಿದ್ದಂತೆ ಹೊರಬಂದು ಮಗುವಿನ ಸ್ಥಿತಿ ಕಂಡ ಜಯಶ್ರೀ ಲೋ ಬಿಪಿ ಉಂಟಾಗಿ ಅಸ್ವಸ್ಥರಾಗಿದ್ದರು. ಸದ್ಯಕ್ಕೆ ಅವರೂ ಚೇತರಿಸಿಕೊಂಡಿದ್ದು, ದಂಪತಿಗೆ ಸಹನಾ ಏಕೈಕ ಮಗು ಎನ್ನಲಾಗಿದೆ. ಮಗು ಸಹಾನಳ ತಂದೆ ನವಿನ್ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿರುವ ವ್ಯಕ್ತಿ ಎಂಬ ವಿಚಾರವೂ ಈ ವೇಳೆ ಗೊತ್ತಾಗಿದೆ.
ಪುದುಚೇರಿ, ಏಪ್ರಿಲ್ 09: ಇಂದು ಎರಡು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಅದರಲ್ಲಿ ಪುದುಚೇರಿ ಕೂಡ ಒಂದು. ಇಂದು ಬೆಳಗ್ಗೆಯಿಂದಲೇ ಮತದಾನ ಶುರುವಾಗಿದೆ. ಮತದಾರರು ಮತಗಟ್ಟೆಗೆ ಬರುತ್ತಿದ್ದಂತೆ ಒಂದು ಅಚ್ಚರಿ ಕಾದಿತ್ತು. ರೋಬೋಟ್ ನೀಲಾ ಕೈಯಲ್ಲಿ ಹೂವು, ಸ್ವೀಟುಗಳನ್ನು ಹಿಡಿದು ಮತದಾರರನ್ನು ಸ್ವಾಗತಿಸುತ್ತಿರುವುದು ಕಂಡು ಬಂತು. ಪುದುಚೇರಿಯ ಸರ್ಕಾರಿ ಶಾಲೆಯ ಮತದಾನ ಕೇಂದ್ರದಲ್ಲಿ ನೀಲಾ ಎಂಬ ರೋಬೋಟ್ ಮತದಾರರನ್ನು ಸ್ವಾಗತಿಸುತ್ತಿದೆ, ಮತದಾನದ ಅನುಭವಕ್ಕೆ ತಂತ್ರಜ್ಞಾನದ ಟಚ್ ಸಿಕ್ಕಂತಾಗಿದೆ.