All posts by nagaraj11081993

ಅಡುಗೆಗೆ ಗರಂ ಮಸಾಲವನ್ನು ಯಾವಾಗ, ಎಷ್ಟು ಪ್ರಮಾಣದಲ್ಲಿ ಹಾಕಬೇಕು ಗೊತ್ತಾ? – Kannada News | When and how much garam masala should be added to dishes while cooking?

ಭಾರತೀಯ ಅಡುಗೆಮನೆಯಲ್ಲಿ ಗರಂ ಮಸಾಲಕ್ಕೆ (garam masala) ವಿಶೇಷ ಸ್ಥಾನವಿದೆ. ಗರಂ ಮಸಾಲವು ದಾಲ್ಚಿನ್ನಿ, ಲವಂಗ, ಏಲಕ್ಕಿ, ಮೆಣಸು, ಪಲಾವ್‌ ಎಲೆ, ಸೋಂಪು ಮುಂತಾದ ಮಸಾಲೆಗಳ ಮಿಶ್ರಣವಾಗಿದ್ದು, ಇದು ಸಸ್ಯಹಾರವೇ ಇರಲಿ ಮಾಂಸಹಾರವೇ ಇರಲಿ ಪ್ರತಿಯೊಂದು ಅಡುಗೆಯ ಘಮ, ರುಚಿಯನ್ನು ದ್ವಿಗುಣಗೊಳಿಸುವ ವಿಶೇಷ ಸಾಮರ್ಥ್ಯವನ್ನು ಹೊಂದಿದೆ. ಆದರೆ ಅಡುಗೆಗೆ ಅದನ್ನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಸೇರಿಸುವುದು ತುಂಬಾನೇ ಮುಖ್ಯವಾಗಿರುತ್ತದೆ. ಇದಲ್ಲದಿದ್ದರೆ ಅಡುಗೆಯ ರುಚಿ ಕಳೆದುಹೋಗುವ ಅಥವಾ ಪದಾರ್ಥ ಕಹಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಅಡುಗೆಯ ರುಚಿಯನ್ನು ದುಪ್ಪಟ್ಟುಗೊಳಿಸಲು ಗರಂ ಮಸಾಲವನ್ನು ಯಾವ ಸಮಯದಲ್ಲಿ ಸೇರಿಸಬೇಕು ಎಂಬುದನ್ನು ತಪ್ಪದೇ ತಿಳಿದುಕೊಳ್ಳಿ.

ಅಡುಗೆಗೆ ಗರಂ ಮಸಾಲ ಸೇರಿಸಲು ಸರಿಯಾದ ಸಮಯ ಯಾವುದು?

ಅತ್ಯಂತ ಮುಖ್ಯವಾದ ವಿಷಯವೆಂದರೆ ಗರಂ ಮಸಾಲವನ್ನು ಯಾವಾಗಲೂ ಅಡುಗೆಯ ಕೊನೆಯಲ್ಲಿ ಸೇರಿಸಬೇಕು. ಪದಾರ್ಥ ಬಹುತೇಕ ಬೆಂದ ನಂತರ, ಕೊನೆಯ 2 ರಿಂದ 3 ನಿಮಿಷಗಳಲ್ಲಿ ಗರಂ ಮಸಾಲ ಸೇರಿಸಿ. ಇತರೆ ಮಸಾಲೆಗಳೊಂದಿಗೆ ಬೇಗನೆ ಗರಂ ಮಸಾಲೆ ಸೇರಿಸುವುದರಿಂದ ಖಾದ್ಯದ ಮೂಲ ರುಚಿ ಮತ್ತು ಸುವಾಸನೆ ಹಾಳಾಗುತ್ತದೆ. ಕೊನೆಯಲ್ಲಿ ಸೇರಿಸುವುದರಿಂದ ಅಡುಗೆಯ ಘಮ, ರುಚಿ ದ್ವಿಗುಣಗೊಳ್ಳುತ್ತದೆ.

ಅಡುಗೆಯ ಆರಂಭದಲ್ಲಿ ಗರಂ ಮಸಾಲವನ್ನು ಏಕೆ ಸೇರಿಸಬಾರದು?

ಇತರೆ ಮಸಾಲೆ, ತರಕಾರಿ ಇತ್ಯಾದಿಗಳೊಂದಿಗೆ ಆರಂಭದಲ್ಲಿ ಗರಂ ಮಸಾಲವನ್ನು ಸೇರಿಸಿದರೆ, ಮಸಾಲೆ ಫ್ರೈ ಮಾಡುವ ಸಂದರ್ಭದಲ್ಲಿ ಅದು ಹುರಿಯುತ್ತದೆ,  ಅದರ ಪರಿಮಳ ಕಳೆದುಹೋಗುತ್ತದೆ ಮತ್ತು ಕೆಲವೊಮ್ಮೆ ಇದರಿಂದ ಪದಾರ್ಥ ಕಹಿಯಾಗುತ್ತದೆ. ಆದ್ದರಿಂದ   ಗರಂ ಮಸಾಲವನ್ನು ಯಾವಾಗಲೂ ಅಡುಗೆಯ ಕೊನೆಯಲ್ಲಿಯೇ ಸೇರಿಸಬೇಕು.

ಇದನ್ನೂ ಓದಿ: ಪ್ರತಿದಿನ ಊಟದ ಬಳಿಕ ಒಂದು ಸ್ಪೂನ್‌ ಸೋಂಪು ತಿನ್ನಿ, ಅದ್ಭುತ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ

ಅಡುಗೆಗೆ ಗರಂ ಮಸಾಲೆ ಸೇರಿಸುವ ಸರಿಯಾದ ವಿಧಾನ:

  • ಗರಂ ಮಸಾಲ ಸೇರಿಸಿದ ನಂತರ, ಪದಾರ್ಥವನ್ನು ನಿಧಾನವಾಗಿ ಬೆರೆಸಿ. ಹೆಚ್ಚು ಹೊತ್ತು ಬೇಯಿಸಬೇಡಿ. ಕೇವಲ 1-2 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಲು ಬಿಡಿ. ಕೊನೆಗೆ, ಒಲೆ ಆಫ್ ಮಾಡಿ ಮತ್ತು ಪಾತ್ರೆಯ ಮುಚ್ಚಳ ಮುಚ್ಚಿಡಿ.
  • ಹೆಚ್ಚು ಗರಂ ಮಸಾಲ ಸೇರಿಸುವುದರಿಂದ ಅಡುಗೆಯ ರುಚಿ ಹಾಳಾಗಬಹುದು, ಆದ್ದರಿಂದ ಪ್ರಮಾಣವನ್ನು ಮಿತಿಗೊಳಿಸಿ.ಯಾವಾಗಲೂ ಸಣ್ಣ ಪ್ರಮಾಣದಲ್ಲಿ ಗರಂ ಮಸಾಲ ಸೇರಿಸಬೇಕು. 1/2 ರಿಂದ 1 ಟೀಸ್ಪೂನ್ ಸಾಕು. ಹೆಚ್ಚು ಗರಂ ಸೇರಿಸುವುದರಿಂದ ಅಡುಗೆ ಕಹಿಯಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೇ ತಿಂಗಳಲ್ಲಿ ರಫ್ತು ಶೇ. 18 ಹೆಚ್ಚಳ; ಆಮದು ಹೊರೆ ಇನ್ನೂ ಏರಿಕೆ; ಟ್ರೇಡ್ ಡೆಫಿಸಿಟ್ ಕೂಡ ಅಧಿಕ – Kannada News | May 2026 Trade: India’s Merchandise & Services Exports Rise, Positive Outlook from RBI

ನವದೆಹಲಿ, ಜೂನ್ 15: ಎಂಜಿನಿಯರಿಂಗ್ ಸರಕುಗಳು, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲೆಕ್ಟ್ರಾನಿಕ್ಸ್ ಸರಕುಗಳ ಭರ್ಜರಿ ಮಾರಾಟದ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಭಾರತದ ಸರಕು ರಫ್ತು (Merchandise Exports) ಶೇ. 18 ರಷ್ಟು ಹೆಚ್ಚಾಗಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಬಿಡುಗಡೆ ಮಾಡಿರುವ ತಾತ್ಕಾಲಿಕ ಅಂಕಿ-ಅಂಶಗಳ ಪ್ರಕಾರ, ಕಳೆದ ವರ್ಷದ ಮೇ ತಿಂಗಳಿನಲ್ಲಿದ್ದ $38.30 ಬಿಲಿಯನ್‌ಗೆ ಹೋಲಿಸಿದರೆ ಈ ಬಾರಿ ರಫ್ತು $45.20 ಬಿಲಿಯನ್‌ಗೆ ತಲುಪಿದೆ.

ಆದರೆ, ಇದೇ ಅವಧಿಯಲ್ಲಿ ಆಮದು (Imports) ಕೂಡ ಶೇ. 20.6 ರಷ್ಟು ಏರಿಕೆಯಾಗಿದ್ದು, $60.86 ಬಿಲಿಯನ್‌ನಿಂದ $73.41 ಬಿಲಿಯನ್‌ಗೆ ತಲುಪಿದೆ. ಇದರ ಪರಿಣಾಮವಾಗಿ, ದೇಶದ ವ್ಯಾಪಾರ ಕೊರತೆ (Trade Deficit – ಆಮದು ಮತ್ತು ರಫ್ತಿನ ನಡುವಿನ ವ್ಯತ್ಯಾಸ) ಕಳೆದ ವರ್ಷದ ಮೇ ತಿಂಗಳಿನಲ್ಲಿದ್ದ $22.56 ಬಿಲಿಯನ್‌ನಿಂದ ಈ ಬಾರಿ $28.21 ಬಿಲಿಯನ್‌ಗೆ ಏರಿಕೆಯಾಗಿದೆ.

ಸೇವಾ ವಲಯದ ರಫ್ತು ಮತ್ತು ಒಟ್ಟಾರೆ ವ್ಯಾಪಾರ

ಮೇ ತಿಂಗಳಲ್ಲಿ ಸೇವಾ ವಲಯದ ರಫ್ತು $32.46 ಬಿಲಿಯನ್‌ನಿಂದ $36.76 ಬಿಲಿಯನ್‌ಗೆ ಏರಿದೆ. ಸೇವೆಗಳ ಆಮದು ಕೂಡ $16.70 ಬಿಲಿಯನ್‌ನಿಂದ $19.06 ಬಿಲಿಯನ್‌ಗೆ ಹೆಚ್ಚಾಗಿದೆ.

ಇದನ್ನೂ ಓದಿ: ಸಂಬಳ ₹15,000 ಇದ್ದರೂ ಸಾಲವಿಲ್ಲದೆ ಬದುಕಬಹುದೇ? ಹೌದು ಎನ್ನುತ್ತದೆ ಈ ಸರಳ ಬಜೆಟ್ ಸೂತ್ರ

ಸರಕು ಮತ್ತು ಸೇವೆಗಳೆರಡನ್ನೂ ಒಳಗೊಂಡಂತೆ ಭಾರತದ ಒಟ್ಟು ರಫ್ತು $81.96 ಬಿಲಿಯನ್ ತಲುಪಿದೆ (ಕಳೆದ ವರ್ಷ $70.76 ಬಿಲಿಯನ್ ಇತ್ತು). ಒಟ್ಟು ಆಮದು $92.47 ಬಿಲಿಯನ್‌ಗೆ ಏರಿದೆ (ಕಳೆದ ವರ್ಷ $77.55 ಬಿಲಿಯನ್ ಇತ್ತು). ಸೇವೆಗಳನ್ನೂ ಒಳಗೊಂಡ ಒಟ್ಟಾರೆ ವ್ಯಾಪಾರ ಕೊರತೆಯು $10.51 ಬಿಲಿಯನ್‌ಗೆ ವಿಸ್ತರಿಸಿದೆ.

ಇರಾನ್-ಯುಎಸ್ ಒಪ್ಪಂದದ ಸಕಾರಾತ್ಮಕ ನಿರೀಕ್ಷೆ

ಅಮೆರಿಕ ಮತ್ತು ಇರಾನ್ ನಡುವೆ ಇತ್ತೀಚೆಗೆ ಏರ್ಪಟ್ಟಿರುವ ಶಾಂತಿ ಒಪ್ಪಂದದ ಬೆನ್ನಲ್ಲೇ ಈ ಅಂಕಿ-ಅಂಶಗಳು ಹೊರಬಿದ್ದಿವೆ. ಜಾಗತಿಕ ವ್ಯಾಪಾರ ಮತ್ತು ಇಂಧನ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿದ್ದ (Strait of Hormuz) ಸಂಘರ್ಷ ತಿಳಿಯಾಗುತ್ತಿರುವುದರಿಂದ, ಮುಂಬರುವ ದಿನಗಳಲ್ಲಿ ಭಾರತದ ರಫ್ತುದಾರರಿಗೆ ಸರಕು ಸಾಗಣೆ ವೆಚ್ಚ (Freight Costs) ಕಡಿಮೆಯಾಗಲಿದೆ ಹಾಗೂ ಪೂರೈಕೆ ಸರಪಳಿ ಸುಗಮವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಹಿಂದೆ ಗಲ್ಫ್ ಪ್ರಾಂತ್ಯದ ಉದ್ವಿಗ್ನತೆಯಿಂದಾಗಿ ಭಾರತದ ಸಣ್ಣ ರಫ್ತುದಾರರು (ದೇಶದ ಒಟ್ಟು ರಫ್ತಿನಲ್ಲಿ ಶೇ 48 ರಷ್ಟು ಪಾಲು ಹೊಂದಿರುವವರು) ಭಾರಿ ತೊಂದರೆ ಅನುಭವಿಸಿದ್ದರು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ವಿಶ್ಲೇಷಣೆ

ಜೂನ್ 5 ರಂದು ಆರ್‌ಬಿಐ ನೀಡಿದ ಹೇಳಿಕೆಯ ಪ್ರಕಾರ, ಜಾಗತಿಕ ಆರ್ಥಿಕತೆಯಲ್ಲಿನ ಅನಿಶ್ಚಿತತೆ ಮತ್ತು ಇಂಧನ ಬೆಲೆಗಳ ಏರಿಕೆಯು ಭಾರತದ ಚಾಲ್ತಿ ಖಾತೆ ಕೊರತೆಯ (Current Account Deficit) ಮೇಲೆ ಸಣ್ಣ ಮಟ್ಟದ ಅಪಾಯವನ್ನು ಉಂಟುಮಾಡುತ್ತಲೇ ಇರುತ್ತದೆ. ಆದಾಗ್ಯೂ, ಭಾರತದ ಸೇವಾ ವಲಯದ ರಫ್ತು ಹೆಚ್ಚಿರುವುದು ಮತ್ತು ವಿದೇಶಗಳಿಂದ ಭಾರತೀಯರು ದೇಶಕ್ಕೆ ಕಳುಹಿಸುವ ಹಣ (Remittances) ದೇಶದ ಆರ್ಥಿಕತೆಗೆ ದೊಡ್ಡ ಬಲ ತರಲಿದೆ ಎಂದು ಆರ್‌ಬಿಐ ಹೇಳಿದೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಭೀತಿಯ ನಡುವೆಯೂ ಭಾರತದ ಐಟಿ ಮತ್ತು ಸೇವಾ ವಲಯಕ್ಕೆ ಜಾಗತಿಕವಾಗಿ ಉತ್ತಮ ಬೇಡಿಕೆ ಮುಂದುವರಿದಿದೆ.

ಇದನ್ನೂ ಓದಿ: ಹಳೆಯ ಕಾರಿಗೆ ಇ20 ಪೆಟ್ರೋಲ್ ಹಾಕಿಸಿದ್ರೆ ಇನ್ಷೂರೆನ್ಸ್ ಸಿಗಲ್ಲವಾ? ವಿಮಾ ಕಂಪನಿ ಹೇಳಿದ್ದಿದು

2031ರ ಹಣಕಾಸು ವರ್ಷದ ವೇಳೆಗೆ ಭಾರತದ ಒಟ್ಟು ರಫ್ತನ್ನು $2 ಟ್ರಿಲಿಯನ್‌ಗೆ (ಸರಕುಗಳಲ್ಲಿ $1 ಟ್ರಿಲಿಯನ್ ಮತ್ತು ಸೇವೆಗಳಲ್ಲಿ $1 ಟ್ರಿಲಿಯನ್) ದ್ವಿಗುಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇದಕ್ಕಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (MSME), ಕೃಷಿ ಉತ್ಪನ್ನಗಳು ಮತ್ತು ‘ಬ್ರಾಂಡ್ ಇಂಡಿಯಾ’ ಪ್ರಚಾರದ ಮೇಲೆ ಹೆಚ್ಚಿನ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಉದ್ಧವ್ ಠಾಕ್ರೆಯವರ ಶಿವಸೇನೆಯಲ್ಲಿ ಬಿರುಕು; ಪ್ರತ್ಯೇಕ ಗುಂಪು ರಚಿಸುತ್ತಾರಾ ಯುಟಿಬಿ ಸಂಸದರು? – Kannada News | Rift in Uddhav Thackerays Shiv Sena Will UBT MPs form a separate group?

ನವದೆಹಲಿ, ಜೂನ್ 15: ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಪ್ರಮುಖ ಬೆಳವಣಿಗೆಗಳು ನಡೆಯುತ್ತಿವೆ. ಏಕನಾಥ್ ಶಿಂಧೆ (Eknath Shinde) ಅವರ ಶಿವಸೇನಾ ಬಣ ಆಪರೇಷನ್ ಟೈಗರ್ ಅನ್ನು ಜಾರಿಗೊಳಿಸುತ್ತಿದೆ. ಈ ಅಭಿಯಾನದ ಅಡಿಯಲ್ಲಿ ಠಾಕ್ರೆ ಅವರ ಪಕ್ಷದ ಕೆಲವು ಸಂಸದರನ್ನು ವಿಭಜಿಸಲು ಪ್ರಯತ್ನ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮುಂಬೈನಲ್ಲಿ ಪಕ್ಷದ ಎಲ್ಲಾ ಸಂಸದರ ತುರ್ತು ಸಭೆಯನ್ನು ಕರೆದಿದ್ದರು. ಇದೇ ಉದ್ಧವ್ ಠಾಕ್ರೆ ಬಣದ ಶಿವಸೇನಾ ಸಂಸದರು ವಿಭಜನೆಯಾಗುವ ಬಲವಾದ ಸಾಧ್ಯತೆ ಕಂಡುಬರುತ್ತಿದೆ. ಕೆಲವು ಸಂಸದರು ಪ್ರತ್ಯೇಕ ಗುಂಪನ್ನು ರಚಿಸಬಹುದು ಎಂದು ಹೇಳಲಾಗುತ್ತಿದೆ.

ಉದ್ಧವ್ ಠಾಕ್ರೆ ಅವರ ಪಕ್ಷದ ಕೆಲವು ಸಂಸದರು ಹೊಸ ಗುಂಪನ್ನು ರಚಿಸುವ ಸಾಧ್ಯತೆಯಿದೆ. ನಿನ್ನೆ, ಠಾಕ್ರೆ ಬಣದ ಸಂಸದರ ಸಭೆ ನಡೆಯಿತು. ಈ ಸಭೆಯ ನಂತರ, ನಮ್ಮ ಎಲ್ಲಾ ಸಂಸದರು ನಮ್ಮೊಂದಿಗಿದ್ದಾರೆ, ಠಾಕ್ರೆ ಗುಂಪು ಪಕ್ಷವನ್ನು ಬಿಡುವುದಿಲ್ಲ ಎಂದು ಹೇಳಿಕೊಂಡಿದೆ. ಆಪರೇಷನ್ ಟೈಗರ್ ಇಲ್ಲ. ನಾವು ಆಪರೇಷನ್ ವುಲ್ಫ್ ಅನ್ನು ಪ್ರಾರಂಭಿಸಲಿದ್ದೇವೆ ಎಂದು ಸಂಜಯ್ ರಾವತ್ ಹೇಳಿದ್ದರು. ಆದರೆ ಈಗ ಠಾಕ್ರೆ ಬಣದ ಕೆಲವು ಸಂಸದರು ನೇರವಾಗಿ ಹೊಸ ಗುಂಪನ್ನು ರಚಿಸಲು ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಉದ್ಧವ್ ಠಾಕ್ರೆ ಬಣದ ಕೆಲವು ಸಂಸದರು ಲೋಕಸಭಾ ಸ್ಪೀಕರ್‌ಗೆ ಪತ್ರವನ್ನು ಸಲ್ಲಿಸುವ ಸಾಧ್ಯತೆಯಿದೆ. ಉದ್ಧವ್ ಠಾಕ್ರೆ ಅವರ ಕೆಲವು ಸಂಸದರು ಏಕನಾಥ್ ಶಿಂಧೆ ಅವರ ಪಕ್ಷದ ಸಂಸದ ಮತ್ತು ಕೇಂದ್ರ ರಾಜ್ಯ ಸಚಿವ ಪ್ರತಾಪ್‌ರಾವ್ ಜಾಧವ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ. ಆದ್ದರಿಂದ, ಈ ಸಂಸದರು ಶೀಘ್ರದಲ್ಲೇ ಹೊಸ ಗುಂಪನ್ನು ರಚಿಸಬಹುದು ಎಂದು ಮೂಲಗಳು ತಿಳಿಸಿವೆ. ದೆಹಲಿಯಲ್ಲಿನ ಪ್ರಸ್ತುತ ಬೆಳವಣಿಗೆಗಳನ್ನು ಪರಿಗಣಿಸಿ, ಠಾಕ್ರೆ ಪಕ್ಷದ ನಾಯಕ ಮತ್ತು ಸಂಸದ ಸಂಜಯ್ ರಾವತ್ ತಕ್ಷಣ ದೆಹಲಿಗೆ ತೆರಳಿದ್ದಾರೆ.

ಇದನ್ನೂ ಓದಿ: ಉದ್ಧವ್ ಠಾಕ್ರೆ, ರಾಜ್ ಠಾಕ್ರೆ ‘ಮಹಾ’ ಸಂಗಮ: ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ

ಜೂನ್ 14ರಂದು ಉದ್ಧವ್ ಠಾಕ್ರೆ ಆಯೋಜಿಸಿದ್ದ ಸಂಸದರ ಸಭೆಗೆ ಒಟ್ಟು 5 ಸಂಸದರು ಗೈರುಹಾಜರಾಗಿದ್ದರು. ಆದ್ದರಿಂದ, ಶೀಘ್ರದಲ್ಲೇ ಈ ಪಕ್ಷದಲ್ಲಿ ಮಹತ್ವದ ಬೆಳವಣಿಗೆ ಸಂಭವಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಏನಿದು ಘಟನೆ?:

ಮಹಾರಾಷ್ಟ್ರದಲ್ಲಿ ಶಿವಸೇನೆ (ಯುಬಿಟಿ) ಬಣದ 9 ಲೋಕಸಭಾ ಸಂಸದರಲ್ಲಿ 7 ಮಂದಿ ಪಕ್ಷಾಂತರಕ್ಕೆ ಸಜ್ಜಾಗಿದ್ದಾರೆ ಮತ್ತು ಅವರು ದೆಹಲಿಗೆ ತೆರಳಿ ಏಕನಾಥ್ ಶಿಂಧೆ ಬಣ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ ಎಂಬ ವರದಿಗಳು ಹರಡಿದ್ದವು. ಇದನ್ನು ‘ಆಪರೇಷನ್ ಟೈಗರ್’ ಎಂದು ಕರೆಯಲಾಗುತ್ತಿದೆ. ಈ ಮೂಲಕ ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೂ ಮುನ್ನ ಪಕ್ಷದೊಳಗೆ ಒಡಕು ಮೂಡಿಸಲು ಪ್ರಯತ್ನ ನಡೆಯುತ್ತಿದೆ ಎಂಬುದು ಆರೋಪ. ಈ ವದಂತಿಗಳನ್ನು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ತಳ್ಳಿಹಾಕಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಏಕನಾಥ್ ಶಿಂದೆ ನೇತೃತ್ವದ ‘ಮಹಾಯುತಿ’ ಸರ್ಕಾರ ಮುಂದಿನ 5 ವರ್ಷಗಳ ಕಾಲ ಮತ್ತಷ್ಟು ಬಲಗೊಳ್ಳಲಿದೆ ಎಂದು ಠಾಕ್ರೆ ಬಣದ ಹಲವು ಸಂಸದರು ಆತಂಕಗೊಂಡಿದ್ದಾರೆ ಎನ್ನಲಾಗಿದೆ. ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರದಿಂದ ಧನಸಹಾಯ ಮತ್ತು ಅನುದಾನ ಪಡೆಯಲು ಕಷ್ಟವಾಗುತ್ತಿರುವುದರಿಂದ, ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಅವರು ಆಡಳಿತಾರೂಢ ಮೈತ್ರಿಕೂಟದತ್ತ ಮುಖ ಮಾಡಿದ್ದಾರೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿವೆ.

ಇದನ್ನೂ ಓದಿ: ಮುಂಬೈ ಕಿರೀಟವನ್ನು ಮುಡಿಗೇರಿಸಿಕೊಂಡ ಬಿಜೆಪಿ ನೇತೃತ್ವದ ಮಹಾಯುತಿ; 25 ವರ್ಷಗಳ ಬಳಿಕ ಠಾಕ್ರೆ ಭದ್ರಕೋಟೆ ಪತನ

ಇತ್ತೀಚೆಗೆ ನಡೆದ ದೆಹಲಿ ಪ್ರವಾಸದ ವೇಳೆ ಠಾಕ್ರೆ ಬಣದ ಸುಮಾರು 7 ಸಂಸದರು ಮುಖ್ಯಮಂತ್ರಿ ಏಕನಾಥ್ ಶಿಂದೆ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ರಹಸ್ಯವಾಗಿ ಭೇಟಿಯಾಗಿದ್ದಾರೆ ಎಂಬ ಸುದ್ದಿಗಳು ಮರಾಠಿ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ಪಕ್ಷಾಂತರ ನಿಷೇಧ ಕಾಯ್ದೆಯಿಂದ ಪಾರಾಗಲು ಒಟ್ಟು 9 ಸಂಸದರಲ್ಲಿ ಕನಿಷ್ಠ ಮೂರನೇ ಎರಡರಷ್ಟು ಅಂದರೆ 6 ಸಂಸದರು ಒಟ್ಟಿಗೆ ಹೊರಬರಬೇಕಾಗುತ್ತದೆ. ಸದ್ಯ ಅದಕ್ಕೆ ಬೇಕಾದ ಸಂಖ್ಯೆಯನ್ನು ಕ್ರೋಢೀಕರಿಸಿ ಹೊಸ ಗುಂಪು ರಚಿಸಲು ಸಂಸದರು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ.

ಈ ಬಿರುಕಿನ ವದಂತಿಗಳು ದಟ್ಟವಾಗುತ್ತಿದ್ದಂತೆಯೇ ಎಚ್ಚೆತ್ತ ಉದ್ಧವ್ ಠಾಕ್ರೆ ಭಾನುವಾರ ಮುಂಬೈನ ತಮ್ಮ ನಿವಾಸ ‘ಮಾತೋಶ್ರೀ’ಯಲ್ಲಿ ಪಕ್ಷದ ಎಲ್ಲಾ 9 ಲೋಕಸಭಾ ಸಂಸದರ ತುರ್ತು ಸಭೆ ಕರೆದಿದ್ದರು. ಆದರೆ, ಈ ಸಭೆಗೆ ಕೇವಲ 4 ಸಂಸದರು ಮಾತ್ರ ಖುದ್ದಾಗಿ ಹಾಜರಾಗಿದ್ದು, ಉಳಿದ 5 ಸಂಸದರು ಆನ್‌ಲೈನ್ (ವಿಡಿಯೋ ಕಾನ್ಫರೆನ್ಸ್) ಮತ್ತು ಫೋನ್ ಮೂಲಕ ಭಾಗವಹಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೈಸೂರಿನ ಪಬ್​​​​ನಲ್ಲಿ ಭಾರೀ ಅಗ್ನಿ ಅವಘಡ: ಇಬ್ಬರು ಸಜೀವ ದಹನ, 7 ಜನರಿಗೆ ಗಂಭೀರ ಗಾಯ – Kannada News | Several Death And Injured after massive fire breaks out in Pub at Mysuru

ಮೈಸೂರು, (ಜೂನ್ 15): ಮೈಸೂರಿನ (Mysuru) ದಟ್ಟಗಳ್ಳಿ 4ನೇ ಹಂತದ ಬಳಿಯಿರುವ ಪಬ್ ನಲ್ಲಿ (Pub) ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಈ ಬೆಂಕಿ ದುರಂತದಲ್ಲಿ ಇಬ್ಬರು ಸಜೀವ ದಹನವಾಗಿದ್ದರೆ, ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಪಬ್​ನಲ್ಲಿ ಕೆಲಸ ಮಾಡುತ್ತಿದ್ದ ಶಾಹಿಲ್, ಪ್ರಕಾಶ್ ಮೃತ ದುರ್ವೈವಿಗಳು. ಇನ್ನು ಗಾಯಗೊಂಡಿರುವ ಏಳು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Source link

ಕೊಪ್ಪಳದಲ್ಲಿ ಪತ್ತೆಯಾದ ಶಿವಲಿಂಗಕ್ಕೂ ಸಿಎಂ ಡಿಕೆ ಶಿವಕುಮಾರ್​​ಗೂ ಲಿಂಕ್: ಉದ್ಯಮಿ ಕನಸಲ್ಲಿ ಕಂಡಿದ್ದೇನು? – Kannada News | Shivalinga Discovery: Businessman’s Dream and CM DK Shivakumar Connection Explained

ಸಿಎಂ ಡಿಕೆ ಶಿವಕುಮಾರ್​, ಶಿವಲಿಂಗImage Credit source: tv9 kannada

ಕೊಪ್ಪಳ, ಜೂನ್​​ 15: ಜಿಲ್ಲೆಯಲ್ಲಿ ಕುತೂಹಲಕಾರಿ ಮತ್ತು ದೈವಿಕ ಪವಾಡದಂತಹ ಘಟನೆಯೊಂದು ನಡೆದಿದೆ. ಉದ್ಯಮಿಯೊಬ್ಬರ ಜಮೀನಿನಲ್ಲಿ ಶಿವಲಿಂಗ (Shivalinga) ಪತ್ತೆಯಾಗಿದೆ. ವಿಶೇಷ ಅಂದರೆ ಈ ಶಿವಲಿಂಗಕ್ಕೂ ರಾಜ್ಯದ ನೂತನ ಸಿಎಂ ಡಿಕೆ ಶಿವಕುಮಾರ್​​ಗೂ (DK Shivakumar) ಒಂದು ಅಪೂರ್ವ ಸಂಬಂಧ ಬೆಸೆದುಕೊಂಡಿದೆ. ಕನಸಿನಲ್ಲಿ ಕಂಡಂತೆ ಜಮೀನಿನಲ್ಲಿ ಶಿವಲಿಂಗ ಸಿಕ್ಕಿದ್ದು, ಇದೀಗ ಇಡೀ ಜಿಲ್ಲೆಯ ಜನರ ಹಿತದೃಷ್ಟಿ ಹಿನ್ನೆಲೆ ಈ ಅಪರೂಪದ ಲಿಂಗವನ್ನು ಸಿಎಂ ಕೈಗಿಡಲು ಉದ್ಯಮಿ ಸಜ್ಜಾಗಿದ್ದಾರೆ.

ಮುಖ್ಯಾಂಶಗಳು

  • ಕೊಪ್ಪಳದ ಉದ್ಯಮಿ ಜಮೀನಿನಲ್ಲಿ ಶಿವಲಿಂಗ ಪತ್ತೆ
  • ಸಿಎಂ ಡಿಕೆ ಶಿವಕುಮಾರ್​ಗೆ ಕೊಡಲು ಮುಂದಾದ ಉದ್ಯಮಿ
  • ಶಿವಲಿಂಗ ಪತ್ತೆಯಾದ ಸ್ಥಳದಲ್ಲಿ ನಾಗರ ಹಾವು ಪ್ರತ್ಯಕ್ಷ

ಕನಸು ಬಿದ್ದ ಮರುದಿನವೇ ಜಮೀನಿನಲ್ಲಿ ಶಿವಲಿಂಗ ಪತ್ತೆ 

ಕೊಪ್ಪಳ ತಾಲೂಕಿನ ಬಸಾಪೂರದ ಬಳಿ ಇರುವ ನಗರದ ಉದ್ಯಮಿ ವಿಪಿನ್ ಕುಮಾರ್ ಅವರಿಗೆ ಸೇರಿದ ಜಮೀನಿನಲ್ಲಿ ಈ ದೈವಿಕ ಶಿವಲಿಂಗ ಸಿಕ್ಕಿದೆ. ಈ ಲಿಂಗ ಪತ್ತೆಯಾಗುವುದಕ್ಕೂ ಮುನ್ನ ವಿಪಿನ್ ಕುಮಾರ್ ಅವರಿಗೆ ವಿಚಿತ್ರ ಕನಸೊಂದು ಬಿದ್ದಿತ್ತಂತೆ. ಆ ಕನಸಿನಲ್ಲಿ, ತಮಗೆ ಸಿಗುವ ಶಿವಲಿಂಗವನ್ನು ಪರಮ ಶಿವಭಕ್ತರಾಗಿರುವ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹಸ್ತಾಂತರಿಸಬೇಕು ಎಂಬ ಸಂದೇಶ ಸಿಕ್ಕಿತ್ತು ಎನ್ನಲಾಗಿದೆ. ಅಚ್ಚರಿಯ ಸಂಗತಿಯೆಂದರೆ, ಕನಸು ಬಿದ್ದ ಮರುದಿನವೇ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಜಡಿಯಪ್ಪ ಎಂಬ ರೈತನಿಗೆ ಈ ಪವಿತ್ರ ಶಿವಲಿಂಗ ಪ್ರತ್ಯಕ್ಷವಾಗಿದೆ. ಅಂದಿನಿಂದ ಆ ಶಿವಲಿಂಗವನ್ನು ಉದ್ಯಮಿ ಜೋಪಾನವಾಗಿಟ್ಟುಕೊಂಡಿದ್ದು, ಲಿಂಗವಿರುವ ಜಾಗಕ್ಕೆ ನಾಗರಹಾವೊಂದು ಪದೇಪದೇ ಬರುತ್ತಿರುವುದು ಸ್ಥಳೀಯರಲ್ಲಿ ಮತ್ತಷ್ಟು ವಿಸ್ಮಯ ಮೂಡಿಸಿದೆ.

ಇದನ್ನೂ ಓದಿ: ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ, ಜನಾರ್ದನ ರೆಡ್ಡಿ ನಿರಾಳ

ಕನಸಿನಲ್ಲಿ ಬಂದ ಆದೇಶದಂತೆ ಉದ್ಯಮಿ ವಿಪಿನ್ ಕುಮಾರ್ ಈಗ ಶಿವಲಿಂಗವನ್ನು ಡಿ.ಕೆ. ಶಿವಕುಮಾರ್ ಅವರಿಗೆ ಹಸ್ತಾಂತರಿಸಲು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಈ ಭಕ್ತಿಯ ಹಿಂದೆ ಕೊಪ್ಪಳ ಜಿಲ್ಲೆಯ ಜನರ ಮತ್ತು ರೈತರ ಹಿತದೃಷ್ಟಿಯೂ ಅಡಗಿದೆ. ಬಸಾಪೂರ ಭಾಗದಲ್ಲಿ ಬಲ್ಡೋಟಾ ಕಾರ್ಖಾನೆ ವಿಸ್ತರಣೆಯಾಗದಂತೆ ತಡೆಯಬೇಕು ಎನ್ನುವುದು ಇಡೀ ಜಿಲ್ಲೆಯ ಜನರ ಹಾಗೂ ಸ್ಥಳೀಯರ ಒತ್ತಾಯವಾಗಿದೆ. ಒಂದು ವೇಳೆ ಕಾರ್ಖಾನೆ ವಿಸ್ತರಣೆಯಾದರೆ ಕೊಪ್ಪಳದ ಜನರಿಗೆ ಶುದ್ಧ ಗಾಳಿ ಸಿಗುವುದು ಕಷ್ಟವಾಗುತ್ತದೆ ಮತ್ತು ರೈತರಿಗೂ ಭಾರೀ ತೊಂದರೆಯಾಗುತ್ತದೆ ಎನ್ನುವುದು ಇವರ ಕಳಕಳಿಯಾಗಿದೆ.

ಸಿಎಂ ಡಿಕೆ ಶಿವಕುಮಾರ್​​ ಕೈ ಸೇರಲಿದೆ ಶಿವಲಿಂಗ

ಈಗಾಗಲೇ ಬಲ್ಡೋಟಾ ಕಾರ್ಖಾನೆ ವಿಸ್ತರಣೆಯನ್ನು ವಿರೋಧಿಸಿ ಕೊಪ್ಪಳದಲ್ಲಿ ಕಳೆದ 225 ದಿನಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ, ಪರಿಸರ ಮತ್ತು ರೈತರ ರಕ್ಷಣೆಗಾಗಿ ಶಿವಲಿಂಗವನ್ನೇ ಮುಂದಿಟ್ಟುಕೊಂಡು ಮುಖ್ಯಮಂತ್ರಿಗಳಿಗೆ ಮನವಿ ಮಾಡಲು ವಿಪಿನ್ ಕುಮಾರ್ ಮುಂದಾಗಿದ್ದಾರೆ. ಜಿಲ್ಲೆಯ ಜನರ ಸಾಮಾಜಿಕ ಕಳಕಳಿಯ ಸಂಕೇತವಾಗಿ ಈ ಶಿವಲಿಂಗವು ಸದ್ಯದಲ್ಲೇ ಡಿ.ಕೆ. ಶಿವಕುಮಾರ್ ಅವರ ಕೈ ಸೇರಲಿದೆ.

ಇದನ್ನೂ ಓದಿ: ಕೊನೆಗೂ ಕೊಪ್ಪಳದಲ್ಲಿ ಎರಡು ಕಾರ್ಖಾನೆಗಳು ಸೀಜ್: ದಶಕಗಳ ಹೋರಾಟಕ್ಕೆ ಜಯ!

ಒಟ್ಟಿನಲ್ಲಿ ಕೊಪ್ಪಳದಲ್ಲಿ ಪತ್ತೆಯಾಗಿರುವ ಈ ಶಿವಲಿಂಗ ಇದೀಗ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಪರಿಸರ ಮಾಲಿನ್ಯ ಮುಕ್ತ ಕೊಪ್ಪಳಕ್ಕಾಗಿ ಉದ್ಯಮಿ ಕೈಗೊಂಡಿರುವ ಈ ದೈವಿಕ ನಿರ್ಧಾರಕ್ಕೆ ಸ್ಥಳೀಯರು ಕೂಡ ಸಾಥ್ ನೀಡಿದ್ದಾರೆ. ಶಿವನ ಭಕ್ತ ಸಿಎಂ ಡಿಕೆ ಶಿವಕುಮಾರ್​ ಈ ಶಿವಲಿಂಗವನ್ನು ಸ್ವೀಕರಿಸಿ, ಕಾರ್ಖಾನೆ ವಿಸ್ತರಣೆಗೆ ಬ್ರೇಕ್ ಹಾಕುತ್ತಾರೆ ಕಾದು ನೋಡಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನಿಧನರಾಗಿ ಆರೇ ವರ್ಷಕ್ಕೆ ಸುಶಾಂತ್ ಸಿಂಗ್ ರಜಪೂತ್ ಯಾರಿಗೂ ನೆನಪಿಲ್ಲ; ಪುಣ್ಯತಿಥಿಗೆ ಬಾಲಿವುಡ್ ಮೌನ – Kannada News | Hindi Cinema Celebrities silent on Sushant Singh Rajput sixth Death Anniversary Fans react

ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ನಿಧನರಾಗಿ ಭರ್ತಿ ಆರು ವರ್ಷಗಳು ಸಂದಿವೆ. ಆದರೆ ಈ ಬಾರಿ ಅವರ ಪುಣ್ಯತಿಥಿಯಂದು (ಜೂನ್ 14) ಬಾಲಿವುಡ್ ಚಿತ್ರರಂಗ ತೋರಿದ ಮೌನವು ಅವರ ಲಕ್ಷಾಂತರ ಅಭಿಮಾನಿಗಳ ಆಕ್ರೋಶ ಮತ್ತು ಬೇಸರಕ್ಕೆ ಕಾರಣವಾಗಿದೆ. ‘ಹಿಂದಿ ಚಿತ್ರರಂಗ (Bollywood) ಸುಶಾಂತ್ ಅವರನ್ನು ಸಂಪೂರ್ಣವಾಗಿ ಮರೆತುಬಿಟ್ಟಿತೇ?’ ಎಂಬ ಪ್ರಶ್ನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ. ಈ ಮೊದಲು ನಟನಿಗೆ ಆಪ್ತವಾಗಿದ್ದವರು ಕೂಡ ಈಗ ಮರೆತುಬಿಟ್ಟಿದ್ದಾರೆ ಎಂಬುದು ವಿಪರ್ಯಾಸ.

ಹಿಂದಿನ ವರ್ಷಗಳಲ್ಲಿ ಕೃತಿ ಸನನ್, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ಪರಿಣೀತಿ ಚೋಪ್ರಾ, ರಾಜ್‌ಕುಮಾರ್ ರಾವ್, ಅಮಿತ್ ಸಾಧ್, ನಿರ್ದೇಶಕ ಅಭಿಷೇಕ್ ಕಪೂರ್, ದಿಶಾ ಪಟಾನಿ, ರಿಯಾ ಚಕ್ರವರ್ತಿ ಸೇರಿದಂತೆ ಹಲವರು ಸುಶಾಂತ್ ಅವರನ್ನು ನೆನೆದು ಪೋಸ್ಟ್ ಮಾಡುತ್ತಿದ್ದರು. ಆದರೆ ಈ ಬಾರಿ ಇವರಾರೂ ಯಾವುದೇ ಪ್ರತ್ಯೇಕ ಸಂದೇಶಗಳನ್ನು ಹಂಚಿಕೊಂಡಿಲ್ಲ.

ಬಾಲಿವುಡ್‌ನ ಪ್ರಮುಖ ತಾರೆಯರ ಪೈಕಿ ನಟಿ ಭೂಮಿ ಪೆಡ್ನೇಕರ್ ಮಾತ್ರ ಸುಶಾಂತ್ ಅವರನ್ನು ಬಹಿರಂಗವಾಗಿ ಸ್ಮರಿಸಿದ ಏಕೈಕ ನಟಿಯಾಗಿದ್ದಾರೆ. ಸುಶಾಂತ್ ಜೊತೆ ತಾವು ನಟಿಸಿದ್ದ ಸೂಪರ್ ಹಿಟ್ ‘ಸೋಂಚಿಡಿಯಾ’ ಚಿತ್ರದ ನೆನಪುಗಳನ್ನು ಅವರು ಹಂಚಿಕೊಂಡಿದ್ದಾರೆ. ಇನ್ನು ಸುಶಾಂತ್ ಅವರ ಮಾಜಿ ಗೆಳತಿ ಅಂಕಿತಾ ಲೋಖಂಡೆ ಅವರು ನೇರವಾಗಿ ಯಾವುದೇ ಪೋಸ್ಟ್ ಮಾಡದಿದ್ದರೂ, ಅಭಿಮಾನಿಗಳು ಸಿದ್ಧಪಡಿಸಿದ್ದ ಅವರ ಹಳೆಯ ಕಿರುತೆರೆ ಶೋಗಳ ವಿಡಿಯೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮರುಹಂಚಿಕೊಂಡಿದ್ದಾರೆ.

ಬಾಲಿವುಡ್ ಮೌನ ವಹಿಸಿದ್ದರೂ, ಸುಶಾಂತ್ ಅವರ ಕುಟುಂಬದವರು ತಮ್ಮ ಸೋದರನ ನೆನಪನ್ನು ಹಸಿರಾಗಿಟ್ಟಿದ್ದಾರೆ. ಸುಶಾಂತ್ ಸಹೋದರಿಯರಾದ ಶ್ವೇತಾ ಸಿಂಗ್ ಕೀರ್ತಿ ಮತ್ತು ಪ್ರಿಯಾಂಕಾ ಸಿಂಗ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಭಾವುಕ ಸಂದೇಶಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಪ್ರೀತಿಯ ಸಹೋದರನ ಪರಂಪರೆ ಮತ್ತು ನೆನಪುಗಳನ್ನು ಕೊಂಡಾಡಿದ್ದಾರೆ.

ಇದನ್ನೂ ಓದಿ: ಸುಶಾಂತ್ ಸಿಂಗ್ ಪ್ರಕರಣ: ವರ್ಷಗಳ ಬಳಿಕ ರಿಯಾಗೆ ಸಿಕ್ತು ಹಣದ ಮೇಲೆ ಹಕ್ಕು

2020ರ ಜೂನ್ 14ರಂದು ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರು 34ನೇ ವಯಸ್ಸಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರು ತೀವ್ರ ಖಿನ್ನತೆ ಹಾಗೂ ಬೈಪೋಲಾರ್ ಡಿಸಾರ್ಡರ್‌ನಿಂದ ಬಳಲುತ್ತಿದ್ದರು ಎಂದು ಆಗಿನ ವರದಿಗಳು ತಿಳಿಸಿದ್ದವು. ಈ ಸಾವು ಇಡೀ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ತದನಂತರ 2020ರ ಜುಲೈನಲ್ಲಿ ಸುಶಾಂತ್ ಕುಟುಂಬದವರು ಪಾಟ್ನಾದಲ್ಲಿ ಪೊಲೀಸರಿಗೆ ದೂರು ನೀಡಿ, ನಟಿ ರಿಯಾ ಚಕ್ರವರ್ತಿ ಸೇರಿದಂತೆ ಐವರ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಗಂಭೀರ ಆರೋಪ ಹೊರಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

RSS ವಿಚಾರವಾಗಿ ಮೋಹನ್ ಭಾಗವತ್​ಗೆ ಪ್ರಿಯಾಂಕ್ ಖರ್ಗೆ ಪತ್ರ, ಈ 8 ಅಂಶಗಳಿಗೆ ವಿವರ ನೀಡುವಂತೆ ಆಗ್ರಹ – Kannada News | Minister Priyank Kharge Asks some Details from Mohan bhagwat about RSS via Letter

ಬೆಂಗಳೂರು, (ಜೂನ್ 15): ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಆರ್​​ಎಸ್​​ಎಸ್ (Rashtriya Swayamsevak Sangh)​ ನೋಂದಣಿ ವಿಚಾರವನ್ನು ಎತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಆರೋಪ ಪ್ರತ್ಯಾರೋಪಗಳು ಜೋರಾಗಿವೆ. ಇದರ ನಡುವೆ ಇದೀಗ ಪ್ರಿಯಾಂಕ್ ಖರ್ಗೆ, ಇದೇ ವಿಚಾರವಾಗಿ ಆರ್​​ಎಸ್​​ಎಎಸ್​ ಮುಖ್ಯಸ್ಥ ಮೋಹನ್ ಭಾಗವತ್ (Mohan bhagwat) ಅವರಿಗೆ ಪತ್ರ ಬರೆದಿದ್ದು, ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡುವಂತೆ ಆಗ್ರಹಿಸಿದ್ದಾರೆ. ಇಷ್ಟು ದೊಡ್ಡ ಸಂಘಟನೆ ಯಾವ ಕಾನೂನಿನ ಆಧಾರದಲ್ಲಿ ನಿರ್ವಹಿಸುತ್ತಿದೆ. ಏಕೆ ನೋಂದಾಯಿತ ಕಾನೂನು ಬದ್ಧ ಸಂಸ್ಥೆಯಾಗಿ ಕಾರ್ಯ ನಿರ್ವಹಿಸ್ತಿಲ್ಲ. ಈ ಬಗ್ಗೆ ವಿವರಣೆ ನೀಡುವಂತೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಮುಖ್ಯಾಂಶಗಳು

  • RSS ಮುಖ್ಯಸ್ಥ ಮೋಹನ್ ಭಾಗವತ್​​ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪತ್ರ
  • ಸಂಘ ನೋಂದಣಿ, ಆದಾಯ, ಆಸ್ತಿಪಾಸ್ತಿ ಸೇರಿದಂತೆ 8 ಅಂಶಗಳನ್ನು ಆಗ್ರಹಿಸಿ ಪತ್ರ
  • 8 ವಿವರಗಳ ಮಾಹಿತಿ ನೀಡುವಂತೆ ಮೋಹನ್ ಭಾಗವತ್ ಗೆ ಖರ್ಗೆ ಒತ್ತಾಯ

ಕಳೆದ ವರ್ಷವೂ ಸಹ ಪ್ರಿಯಾಂಕ್ ಖರ್ಗೆ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಮೋಹನ್ ಭಾಗವತ್ ಅವರಿಗೆ ಆರ್​​​ಎಸ್​​ಎಸ್​​​ ಬಗ್ಗೆ ಕೆಲವೊಂದಿಷ್ಟು ವಿವರಣೆ ಕೇಳಿದ್ದರು. ಇದೀಗ ಪತ್ರದ ಮೂಲಕ ಮತ್ತೆ ಸಂಘದ ಕೆಲವೊಂದಿಷ್ಟು ವಿಚಾರಗಳ ಬಗ್ಗೆ ವಿವರಣೆ ನೀಡುವಂತೆ ಆಗ್ರಹಿಸಿದ್ದಾರೆ. ಸಂಘದ ಕಾರ್ಯಚಟುವಟಿಕೆಗಳು, ಸಂಘಕ್ಕೆ ಬರುವ ಆದಾಯದ ಮೂಲ, ಆಸ್ತಿಪಾಸ್ತಿ ಬಗ್ಗೆ ಬಹಿರಂಗಪಡಿಸುವಂತೆ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: RSS ವಿರುದ್ಧ ಮತ್ತೆ ಸಮರ ಸಾರಿದ ಪ್ರಿಯಾಂಕ್​​ ಖರ್ಗೆ: ಏಕಾಏಕಿ ಖಡಕ್​​ ಎಚ್ಚರಿಕೆ ಕೊಟ್ಟಿದ್ದೇಕೆ ಗೃಹ ಸಚಿವ?

ಪ್ರಿಯಾಂಕ್ ಖರ್ಗೆ ಪತ್ರದಲ್ಲೇನಿದೆ?

ರಾಷ್ಟ್ರೀಯತೆ, ಶಿಸ್ತು ಮತ್ತು ಕರ್ತವ್ಯದ ಕುರಿತು ನಿರಂತರವಾಗಿ ಮಾತನಾಡುವ ಸಂಘಟನೆಯೊಂದು ಪಾರದರ್ಶಕತೆ, ಕಾನೂನಿನ ಅನುಸರಣೆ ಮತ್ತು ಭಾರತದ ಸಂವಿಧಾನದ ಬಗೆಗಿನ ಗೌರವವನ್ನೂ ಅಷ್ಟೇ ದೃಢವಾಗಿ ಪ್ರದರ್ಶಿಸಬೇಕು. ಸಾಮಾನ್ಯ ಭಾರತೀಯರು ನಿಯಮಗಳನ್ನು ಪಾಲಿಸಬೇಕು. ತಾನು ಮಾತ್ರ ಅದೇ ನಿಯಮಗಳಿಂದ ವಿನಾಯಿತಿ ಪಡೆದುಕೊಳ್ಳುವ ನೈತಿಕ ಹಕ್ಕು ಆರ್‌ಎಸ್‌ಎಸ್‌ಗೆ ಇಲ್ಲ. ಕಾರ್ಮಿಕರು, ಸಣ್ಣ ಸಂಘ-ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ಎನ್‌ಜಿಒಗಳು, ಟ್ರಸ್ಟ್‌ಗಳು, ಕಂಪನಿಗಳು ಮತ್ತು ನಾಗರಿಕರು ನೋಂದಣಿ, ಬಹಿರಂಗಪಡಿಸುವಿಕೆ, ಲೆಕ್ಕಪರಿಶೋಧನೆ ಮತ್ತು ತೆರಿಗೆ ಪಾವತಿಗೆ ಬದ್ಧರಾಗಿದ್ದಾರೆ. ಆದ್ದರಿಂದ ಆರ್‌ಎಸ್‌ಎಸ್ ಕೂಡ ದೇಶದ ಕಾನೂನಿಗೆ ಮಾದರಿಯಾಗಿ ಬದ್ಧವಾಗಿರಬೇಕು ಎಂದಿದ್ದಾರೆ.

ಆರ್‌ಎಸ್‌ಎಸ್ ತನ್ನ ಶತಮಾನೋತ್ಸವದ ಈ ಸಂದರ್ಭವನ್ನು ಕೇವಲ ಆಚರಣೆಗಾಗಿ ಮಾತ್ರವಲ್ಲ. ಸಾಂವಿಧಾನಿಕ ಆತ್ಮಾವಲೋಕನಕ್ಕಾಗಿಯೂ ಬಳಸಿಕೊಳ್ಳಬೇಕೆಂದು ನಾವು ಆಗ್ರಹಿಸುತ್ತೇವೆ. ಭಾರತದ ಈ ನೂರನೇ ವರ್ಷದಲ್ಲಿ ದೇಶಕ್ಕೆ ಆರ್‌ಎಸ್‌ಎಸ್ ನೀಡಬಹುದಾದ ಅತ್ಯುತ್ತಮ ಗೌರವವೆಂದರೆ, ತನ್ನನ್ನು ತಾನು ನೋಂದಾಯಿಸಿಕೊಳ್ಳುವುದು , ತನ್ನ ಚಟುವಟಿಕೆಗಳು ಮತ್ತು ಆರ್ಥಿಕ ವ್ಯವಹಾರಗಳನ್ನು ಬಹಿರಂಗಪಡಿಸುವುದು ಅನ್ವಯವಾಗುವ ಎಲ್ಲ ತೆರಿಗೆಗಳನ್ನು ಪಾವತಿಸುವುದು ಮತ್ತು ಭಾರತೀಯ ಕಾನೂನಿನ ಚೌಕಟ್ಟಿನೊಳಗೆ ಪಾರದರ್ಶಕ ಹಾಗೂ ಜವಾಬ್ದಾರಿಯುತ ಸಂಘಟನೆಯಾಗಿ ಕಾರ್ಯನಿರ್ವಹಿಸುವುದು. ನಿಮ್ಮ ಅಧಿಕೃತ ಪ್ರತಿನಿಧಿಗಳನ್ನು ಕಳುಹಿಸಿ ಮೇಲಿನ ವಿಷಯಗಳ ಕುರಿತು ಚರ್ಚೆ ನಡೆಸಲು ನಾವು ಔಪಚಾರಿಕ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪತ್ರದಲ್ಲಿ ಉಲ್ಲೇಖಿಸಿದ 8 ಅಂಶಗಳು

  1. RSSನ ಕಾನೂನಾತ್ಮಕ ಸ್ಥಾನಮಾನ ಮತ್ತು ಸಂಘಟನೆಯ ರಚನೆ ವಿವರ
  2.  ಪದಾಧಿಕಾರಿಗಳು ಮತ್ತು ಅಧಿಕೃತ ಪ್ರತಿನಿಧಿಗಳ ವಿವರಗಳು
  3. ದೇಣಿಗೆ, ಕೊಡುಗೆ ಮತ್ತು ಆದಾಯದ ಮೂಲಗಳು
  4. ವೆಚ್ಚ ಮತ್ತು ಆಸ್ತಿಪಾಸ್ತಿಗಳ ವಿವರಗಳು
  5. ಕಾನೂನಿನ ಪ್ರಕಾರ ಅನ್ವಯವಾಗುವ ತೆರಿಗೆಗಳನ್ನು ಸಕ್ರಮವಾಗಿ ಪಾವತಿಸಲಾಗುತ್ತಿದೆಯೇ ಎಂಬ ವಿಷಯ.
  6. ಔಪಚಾರಿಕ ನೋಂದಣಿಯಿಲ್ಲದೆ ತನ್ನ ಚಟುವಟಿಕೆಗಳನ್ನು ನಡೆಸಲು ಯಾವ ಕಾನೂನಾತ್ಮಕ ಆಧಾರವನ್ನು ಅವಲಂಬಿಸಲಾಗಿದೆ ಎಂಬ ವಿಷಯ.
  7. ಯಾವುದೇ ಸಾರ್ವಜನಿಕ ಜವಾಬ್ದಾರಿಯಿಲ್ಲದೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವ ಹಕ್ಕನ್ನು ಯಾವ ಸಾಂವಿಧಾನಿಕ ಮತ್ತು ಶಾಸನಾತ್ಮಕ ಚೌಕಟ್ಟಿನ ಅಡಿಯಲ್ಲಿ ಪಡೆದುಕೊಳ್ಳಲಾಗಿದೆ ಎಂಬ ವಿಷಯ.
  8.  ರೂಟ್ ಮಾರ್ಚ್, ಸಾರ್ವಜನಿಕರ ಸೇರ್ಪಡೆ ಸಂದರ್ಭದಲ್ಲಿ ಪಡೆಯಲಾಗಿರುವ ಅನುಮತಿಗಳು.

ಹೀಗೆ ಒಟ್ಟು 8 ಅಂಶಗಳನ್ನು ಪತ್ರದಲ್ಲಿ ಉಲ್ಲೇಖಿಸಿ ಇವುಗಳಿಗೆ ವಿವರಣೆ ನೀಡುವಂತೆ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಂಬಳ ₹15,000 ಇದ್ದರೂ ಸಾಲವಿಲ್ಲದೆ ಬದುಕಬಹುದೇ? ಹೌದು ಎನ್ನುತ್ತದೆ ಈ ಸರಳ ಬಜೆಟ್ ಸೂತ್ರ – Kannada News | Budgeting on ₹15,000 Salary: Smart Financial Planning for a Debt Free Life

ಇಂದಿನ ದುಬಾರಿ ಕಾಲದಲ್ಲಿ ₹15,000 ಸಂಬಳದಲ್ಲಿ ಬದುಕು ನಡೆಸುವುದು ದೊಡ್ಡ ಸವಾಲಿನ ಕೆಲಸ. ಅದರಲ್ಲೂ ಬೆಂಗಳೂರಿನಂಥ ದುಬಾರಿ ಜೀವನ ವೆಚ್ಚದ (lifestyle expense) ನಗರದಲ್ಲಿ ಲಕ್ಷಾಂತರ ಸಂಬಳ ತೆಗೆಯುವ ಟೆಕ್ಕಿಗಳೇ ಹಣ ಉಳಿಸಲಾಗದೆ ಪರದಾಡುತ್ತಿರುತ್ತಾರೆ. ಅಂಥದ್ದರಲ್ಲಿ ಬಹಳ ಅಲ್ಪ ಸಂಬಳದಲ್ಲಿ ಬದುಕು ನಡೆಸುವುದೆಂದರೆ ಖಂಡಿತ ಸುಮ್ಮನೆ ಅಲ್ಲ. ಆದರೆ, ಸರಿಯಾದ ಹಣಕಾಸಿನ ಯೋಜನೆ ಮತ್ತು ಕಟ್ಟುನಿಟ್ಟಾದ ಶಿಸ್ತು ಇದ್ದರೆ ಸಾಲದ ಸುಳಿಗೆ ಸಿಲುಕದೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಿದೆ. ಅದಕ್ಕಾಗಿ ಹಣಕಾಸು ತಜ್ಞರು 50-30-20, 60-30-10 ಇತ್ಯಾದಿ ಬಜೆಟ್ ಸೂತ್ರಗಳನ್ನು ಬಳಸಲು ಸಲಹೆ ನೀಡುತ್ತಾರೆ.

ನಿಮ್ಮ ₹15,000 ಸಂಬಳವನ್ನು 50-30-20 ಸೂತ್ರದ ಪ್ರಕಾರ ಹೇಗೆ ವಿಂಗಡಿಸಬಹುದು ಎನ್ನುವ ವಿವರ ಇಲ್ಲಿದೆ. ಶೇ. 50 ಅಗತ್ಯ ವೆಚ್ಚಗಳಿಗೆ ನಿಗದಿ ಮಾಡಿಕೊಳ್ಳಿ. ಶೇ. 30 ಸಂಬಳವನ್ನು ವೈಯಕ್ತಿಕ ಅಭೀಷ್ಟೆಗಳಿಗೆ ಬಳಸಿ. ಶೇ. 20ರಷ್ಟನ್ನು ಕಟ್ಟುನಿಟ್ಟಾಗಿ ಉಳಿತಾಯ ಮಾಡಿ ಹೂಡಿಕೆಗೆ ಬಳಸಿ. ಆಗ ಹಣಕಾಸು ಶಿಸ್ತು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ.

ಅಗತ್ಯಗಳ ವೆಚ್ಚಗಳೆಂದರೆ ಯಾವುವು?

ಜೀವನ ನಿರ್ವಹಣೆಗೆ ಬಹಳ ಅವಶ್ಯಕತೆ ಇರುವ ವೆಚ್ಚಗಳಿವು. ಮನೆ ಬಾಡಿಗೆ, ದಿನಸಿ ಸಾಮಾನು, ವಿದ್ಯುತ್ ಮತ್ತು ನೀರಿನ ಬಿಲ್, ಮೊಬೈಲ್ ರೀಚಾರ್ಜ್ ಮತ್ತು ದಿನನಿತ್ಯದ ಪ್ರಯಾಣದ ವೆಚ್ಚ ಇತ್ಯಾದಿ ಇವೆ.

ಗಮನಿಸಬೇಕಾದ ಸಂಗತಿ ಎಂದರೆ, ಮನೆ ಬಾಡಿಗೆ, ಸಾರಿಗೆ ಇವೆಲ್ಲವುಗಳ ಬಗ್ಗೆ ನಿಗಾ ಇರಬೇಕು. ಬ್ಯಾಚಲರ್ ಆಗಿದ್ದರೆ ಸ್ನೇಹಿತರ ಜೊತೆ ಸೇರಿ ಮನೆ ಮಾಡಿಕೊಂಡರೆ ಬಾಡಿಗೆ ಉಳಿಸಬಹುದು. ಹೋಟೆಲ್​ನಲ್ಲಿ ಊಟಕ್ಕೆ ವೆಚ್ಚ ಕಡಿಮೆ ಮಾಡಬಹುದು. ಬಸ್ಸು, ರೈಲು ಇತ್ಯಾದಿ ಸಾರ್ವಜನಿಕ ಸಾರಿಗೆ ಬಳಸುವುದು ಇತ್ಯಾದಿ ಮೂಲಕ ಅಗತ್ಯ ವೆಚ್ಚಗಳನ್ನೂ ಕಡಿಮೆ ಮಾಡಬಹುದು.

ಇದನ್ನೂ ಓದಿ: ಹಳೆಯ ಕಾರಿಗೆ ಇ20 ಪೆಟ್ರೋಲ್ ಹಾಕಿಸಿದ್ರೆ ಇನ್ಷೂರೆನ್ಸ್ ಸಿಗಲ್ಲವಾ? ವಿಮಾ ಕಂಪನಿ ಹೇಳಿದ್ದಿದು

ವೈಯಕ್ತಿಕ ಇಚ್ಛೆಗಳಿಗೆ ಒಂದಷ್ಟು ಮಿತಿ ಹಾಕಿ

ಜೀವನ ಕೇವಲ ಅಗತ್ಯಗಳನ್ನು ಪೂರೈಸುವುದಷ್ಟೇ ಅಲ್ಲ, ಸ್ವಲ್ಪ ಮನರಂಜನೆಯೂ ಬೇಕು. ಅದಕ್ಕಾಗಿ ಶೇ 30 ರಷ್ಟು ಹಣವನ್ನು ಬಳಸಬಹುದು. ಒಮ್ಮೊಮ್ಮೆ ಹೊರಗಡೆ ಊಟ ಮಾಡುವುದು, ಸಿನಿಮಾ ನೋಡುವುದು, ಬಟ್ಟೆ ಖರೀದಿ ಅಥವಾ ಒಟ್ಟಾರೆ ಲೈಫ್‌ಸ್ಟೈಲ್ ವೆಚ್ಚಗಳು.

ಇದು ನಿಮ್ಮ ಇಷ್ಟದ ವೆಚ್ಚವಾಗಿದ್ದರೂ, ತಿಂಗಳ ಕೊನೆಯಲ್ಲಿ ಹಣದ ಕೊರತೆಯಾದರೆ ಈ ವಿಭಾಗದ ವೆಚ್ಚವನ್ನು ಕಡಿತಗೊಳಿಸಿ ಅಗತ್ಯತೆಗಳಿಗೆ ಬಳಸಬೇಕಾಗುತ್ತದೆ.

ಶೇ. 20 ಉಳಿತಾಯ ಮತ್ತು ಹೂಡಿಕೆ

ಸಾಲ ಮುಕ್ತವಾಗಿರಲು ಅತ್ಯಂತ ಪ್ರಮುಖವಾದ ಹಂತವೇ ಈ ಉಳಿತಾಯ. ನಿಮ್ಮ ತಿಂಗಳ ಆದಾಯ 15,000 ರೂದ್ದರೆ ತಿಂಗಳಿಗೆ ಕನಿಷ್ಠ ₹3,000 ಅನ್ನು ಭವಿಷ್ಯಕ್ಕಾಗಿ ಕಾಯ್ದಿರಿಸಬೇಕು. ಪ್ರತಿ ತಿಂಗಳು ಆರ್‌ಡಿ (Recurring Deposit) ಅಥವಾ ಸಣ್ಣ ಮೊತ್ತದ ಎಸ್‌ಐಪಿ (SIP) ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು.

ಈ ಉಳಿತಾಯದ ಒಂದು ಭಾಗವನ್ನು ತುರ್ತು ವೈದ್ಯಕೀಯ ವೆಚ್ಚಗಳು ಅಥವಾ ಹಠಾತ್ ಖರ್ಚುಗಳಿಗಾಗಿ ಬ್ಯಾಂಕ್ ಖಾತೆಯಲ್ಲೇ ಇಡಬೇಕು. ಇದು ಎಮರ್ಜೆನ್ಸಿ ಫಂಡ್ ಆಗಿರುತ್ತದೆ. ಇದು ನಿಮ್ಮನ್ನು ಸಾಲ ಮಾಡುವುದರಿಂದ ರಕ್ಷಿಸುತ್ತದೆ. ನಿಮಗೆ ತುರ್ತು ಅಗತ್ಯ ಬಿದ್ದಾಗ ಈ ಹಣ ಬಳಸಿ, ನಂತರದ ತಿಂಗಳುಗಳಲ್ಲಿ ಅದನ್ನು ಮತ್ತೆ ಕೂಡಿಡುವ ಜವಾಬ್ದಾರಿ ಇರಬೇಕು.

ಸಾಲ ಮುಕ್ತವಾಗಿರಲು ಟಿಪ್ಸ್‌

  • ಕ್ರೆಡಿಟ್ ಕಾರ್ಡ್ ಬೇಡ: ಕ್ರೆಡಿಟ್ ಕಾರ್ಡ್‌ಗಳು ಮತ್ತು ‘Buy Now, Pay Later’ ಆಫರ್‌ಗಳಿಂದ ಸಂಪೂರ್ಣವಾಗಿ ದೂರವಿರಿ. ಇವು ಸಣ್ಣ ಸಂಬಳದವರನ್ನು ಸುಲಭವಾಗಿ ಸಾಲದ ಸುಳಿಗೆ ಸಿಲುಕಿಸುತ್ತವೆ.
  • ಬಜೆಟ್ ಟ್ರ್ಯಾಕ್ ಮಾಡಿ: ಮೊಬೈಲ್ ಆಪ್‌ಗಳು ಅಥವಾ ಸರಳವಾದ ಡೈರಿಯಲ್ಲಿ ನಿಮ್ಮ ದಿನನಿತ್ಯದ ಪ್ರತಿಯೊಂದು ರೂಪಾಯಿಯ ಖರ್ಚನ್ನು ಬರೆದಿಡುವ ಅಭ್ಯಾಸ ಮಾಡಿಕೊಳ್ಳಿ.
  • ಸಣ್ಣದಾಗಿ ಹೂಡಿಕೆ ಆರಂಭಿಸಿ: ₹500 ಅಥವಾ ₹1000 ದಿಂದಲೂ ಇಂದಿನ ದಿನಗಳಲ್ಲಿ ಮ್ಯೂಚುವಲ್ ಫಂಡ್ ಎಸ್‌ಐಪಿ ಆರಂಭಿಸಬಹುದು. ದೀರ್ಘಾವಧಿಯಲ್ಲಿ ಇದು ದೊಡ್ಡ ಮೊತ್ತವಾಗಿ ಬೆಳೆಯುತ್ತದೆ.
  • ಇನ್ಷೂರೆನ್ಸ್ ಇರಲಿ: ಒಂದು ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಮಾಡಿಸುವುದು ನಿಮ್ಮ ಸೇವಿಂಗ್ಸ್​ಗೆ ವಿಮೆ ಮಾಡಿಸಿದಂತೆ. ಪೂರ್ತಿ ಆರೋಗ್ಯವಂತರಾಗಿದ್ದೀರಿ ಎಂದಾದರೂ ಹೆಲ್ತ್ ಇನ್ಷೂರೆನ್ಸ್ ಮಾಡಿಸಿ. ಯಾವಾಗ ಬೇಕಾದರೂ, ಯಾರಿಗೆ ಬೇಕಾದರೂ ಕಾಯಿಲೆ ಬರಬಹುದು ಜಾಗ್ರತೆ. ಹೆಲ್ತ್ ಇನ್ಷೂರೆನ್ಸ್ ಇದ್ದರೆ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ನಿಶ್ಚಿಂತೆ ಇಲ್ಲದೆ ಚಿಕಿತ್ಸೆ ಪಡೆಯಬಹುದು.

ಇದನ್ನೂ ಓದಿ: ಇರಾನ್-ಅಮೆರಿಕ ಒಪ್ಪಂದದ ಎಫೆಕ್ಟ್; ತೈಲ ಬೆಲೆ ಇಳಿಕೆ; ರೂಪಾಯಿಗೆ ಜೀವ; ಚಿನ್ನ, ಷೇರುಗಳ ಜಿಗಿತ

ಕಡಿಮೆ ಸಂಬಳವಿದ್ದಾಗ ಹಣದ ಮೌಲ್ಯ ಅರಿತು, ಇಷ್ಟಗಳಿಗಿಂತ ಅಗತ್ಯಗಳಿಗೆ ಮೊದಲ ಆದ್ಯತೆ ನೀಡಿದರೆ ಯಾವುದೇ ಸಾಲವಿಲ್ಲದೆ ನಿಶ್ಚಿಂತೆಯಾಗಿ ಬದುಕಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಲೆಬನಾನ್‌ನಿಂದ ಹಿಂದೆ ಸರಿಯಲ್ಲ; ಅಮೆರಿಕ-ಇರಾನ್ ಶಾಂತಿ ಒಪ್ಪಂದವನ್ನು ತಿರಸ್ಕರಿಸಿದ ಇಸ್ರೇಲ್ – Kannada News | Trump’s Agreement Does Not Bind Us; Israel Rejects US Iran Deal says won’t retreat from Lebanon

ಜೆರುಸಲೇಂ, ಜೂನ್ 15: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವನ್ನು ಕೊನೆಗೊಳಿಸಲು ಸಿದ್ಧವಾಗಿರುವ ಶಾಂತಿ ಒಪ್ಪಂದದ ಕುರಿತು ಇಸ್ರೇಲ್ ತನ್ನ ಮೊದಲ ಅಧಿಕೃತ ಮತ್ತು ಆಕ್ರೋಶದ ಪ್ರತಿಕ್ರಿಯೆಯನ್ನು ನೀಡಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಮಧ್ಯಸ್ಥಿಕೆಯಲ್ಲಿ ನಡೆದಿರುವ ಈ ಒಪ್ಪಂದವು ಇಸ್ರೇಲ್ ಅನ್ನು ಯಾವುದೇ ರೀತಿಯಲ್ಲೂ ಕಟ್ಟಿಹಾಕಲು ಸಾಧ್ಯವಿಲ್ಲ ಎಂದು ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಚಿವ ಇತಾಮರ್ ಬೆನ್-ಗ್ವಿರ್ ಸ್ಪಷ್ಟಪಡಿಸಿದ್ದಾರೆ.

ಜೂನ್ 19ರ ಶುಕ್ರವಾರದಂದು ಸ್ವಿಜರ್ಲೆಂಡ್‌ನಲ್ಲಿ ಅಧಿಕೃತವಾಗಿ ಸಹಿ ಆಗಲಿರುವ ಈ ಒಪ್ಪಂದವು, ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲೂ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಉಲ್ಲೇಖಿಸಿದೆ. ಆದರೆ, ಇಸ್ರೇಲ್ ಮಾತ್ರ ತನ್ನದೇ ಆದ ಸ್ವತಂತ್ರ ರಕ್ಷಣಾ ನೀತಿಯನ್ನು ಮುಂದುವರಿಸುವುದಾಗಿ ಹೇಳಿದೆ.

“ಟ್ರಂಪ್ ಅವರ ಒಪ್ಪಂದ ನಮಗೆ ಅನ್ವಯಿಸುವುದಿಲ್ಲ. ಇಸ್ರೇಲ್ ದೇಶವು ಅಮೆರಿಕದ ಅಧೀನದಲ್ಲಿಲ್ಲ. ನಮ್ಮದು ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರ! ನಮಗೆ ಅಮೆರಿಕದ ಮೇಲೆ ಅಪಾರ ಪ್ರೀತಿ ಇದೆ ಮತ್ತು ಅಧ್ಯಕ್ಷ ಟ್ರಂಪ್ ಅವರಿಗೆ ನಾವು ಕೃತಜ್ಞರಾಗಿದ್ದೇವೆ. ಹಾಗಂತ ಇಸ್ರೇಲ್ ದೇಶವೇನೂ ಯಾವುದೇ ದುರ್ಬಲ ದೇಶವಲ್ಲ” ಎಂದು ಇಸ್ರೇಲ್ ಭದ್ರತಾ ಸಚಿವ ಇತಾಮರ್ ಬೆನ್-ಗ್ವಿರ್ ಹೇಳಿದ್ದಾರೆ.

ಇದನ್ನೂ ಓದಿ: Video: ಅಮೆರಿಕ-ಇರಾನ್ ಶಾಂತಿ ಒಪ್ಪಂದ: 108 ದಿನಗಳ ಯುದ್ಧಕ್ಕೆ ತೆರೆ, ಪ್ರಮುಖ ಷರತ್ತುಗಳೇನು?

ವಿದೇಶಿ ಒತ್ತಡಗಳಿಗೆ ಮಣಿಯುವುದು ಇಸ್ರೇಲ್‌ನ ಭದ್ರತೆಗೆ ಮಾರಕ ಎಂಬುದನ್ನು ಇತಿಹಾಸ ಸಾಬೀತುಪಡಿಸಿದೆ ಎಂದು ಬೆನ್-ಗ್ವಿರ್ ವಾದಿಸಿದ್ದಾರೆ. “ಹಿಂದೆಲ್ಲಾ ನಾವು ಇಸ್ರೇಲ್‌ನ ಭದ್ರತೆಯನ್ನು ಪಣಕ್ಕಿಟ್ಟು ಅಂತಾರಾಷ್ಟ್ರೀಯ ಒತ್ತಡಗಳಿಗೆ ತಲೆಬಾಗಿದಾಗಲೆಲ್ಲಾ, ನಾವು ರಕ್ತದ ಮೂಲಕ ಭಾರಿ ಬೆಲೆ ತೆರಬೇಕಾಗಿ ಬಂದಿದೆ” ಎಂದ ಅವರು 2006ರ ಓಸ್ಲೋ ಒಪ್ಪಂದ ಮತ್ತು ಗಾಜಾದಲ್ಲಿ ಈ ಹಿಂದೆ ತೋರಿದ್ದ ಸಂಯಮವನ್ನು ಉದಾಹರಣೆಯಾಗಿ ನೀಡಿದ್ದಾರೆ.

ಲೆಬನಾನ್‌ನಲ್ಲಿ ಇರಾನ್ ಬೆಂಬಲಿತ ಹೆಜ್ಬುಲ್ಲಾ ಉಗ್ರಗಾಮಿ ಸಂಘಟನೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವವರೆಗೂ ಯಾವುದೇ ತರಹದ ರಾಜಿ ಮಾಡಿಕೊಳ್ಳುವುದಿಲ್ಲ. ಯುದ್ಧದ ಸಮಯದಲ್ಲಿ ವಶಪಡಿಸಿಕೊಂಡಿರುವ ಲೆಬನಾನ್ ಭೂಭಾಗದಿಂದ ಇಸ್ರೇಲಿ ಪಡೆಗಳು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇಸ್ರೇಲ್‌ನ ಉತ್ತರದ ಗಡಿ ಗ್ರಾಮಗಳ ಬಳಿ ಮತ್ತೆ ಉಗ್ರರು ಬಂದು ನೆಲೆಸುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿರುವ ಸಚಿವರು, “ಲೆಬನಾನ್‌ನಿಂದ ಇಸ್ರೇಲ್ ಕಡೆಗೆ ಒಂದೇ ಒಂದು ಡ್ರೋನ್ ಅಥವಾ ಕ್ಷಿಪಣಿ ಹಾರಿಬಂದರೂ, ಅದಕ್ಕೆ ಪ್ರತಿಯಾಗಿ ಲೆಬನಾನ್‌ನ ರಾಜಧಾನಿ ಬೈರೂತ್‌ನ ಹೆಜ್ಬುಲ್ಲಾ ಭದ್ರಕೋಟೆಯಾದ ದಹಿಯಾ ಮೇಲೆ ಇಸ್ರೇಲ್ ಭೀಕರ ದಾಳಿ ನಡೆಸಲಿದೆ. ಈ ಹಿಂದೆ ಇದ್ದ ಅದೇ ಆಕ್ರಮಣಕಾರಿ ಶೈಲಿಯನ್ನು ನಾವು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ” ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಭಾರತದ ಸ್ವಾಗತ; ಪಶ್ಚಿಮ ಏಷ್ಯಾದಲ್ಲಿ ಶಾಂತಿಗೆ ಕರೆ ನೀಡಿದ ಮೋದಿ

ಒಂದು ಕಡೆ ಪಾಕಿಸ್ತಾನ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ಅಮೆರಿಕ-ಇರಾನ್ ಒಪ್ಪಂದವು ಅಂತಿಮ ಹಂತ ತಲುಪಿದ್ದು, ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಹಾಗೂ ಇರಾನ್ ಮೇಲಿನ ಅಮೆರಿಕದ ನೌಕಾ ದಿಗ್ಬಂಧನವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ಅಲ್ಲದೆ, ಇರಾನ್‌ನ ಪರಮಾಣು ಯೋಜನೆಯ ಬಗ್ಗೆ ಚರ್ಚಿಸಲು 60 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ.

ಆದರೆ, ಇರಾನ್ ತನ್ನ ಯುರೇನಿಯಂ ದಾಸ್ತಾನನ್ನು ತನ್ನ ಬಳಿಯೇ ಇಟ್ಟುಕೊಳ್ಳಲು ಹಠ ಹಿಡಿದಿದೆ, ಅಮೆರಿಕ ಅದನ್ನು ತೆಗೆದುಹಾಕಲು ಒತ್ತಾಯಿಸುತ್ತಿದೆ. ಇದರ ನಡುವೆ, ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಪರಮ ಮಿತ್ರ ರಾಷ್ಟ್ರವಾಗಿರುವ ಇಸ್ರೇಲ್ ಈ ಒಪ್ಪಂದವನ್ನು ಬಹಿರಂಗವಾಗಿಯೇ ತಿರಸ್ಕರಿಸಿರುವುದರಿಂದ, ಈ ಶಾಂತಿ ಒಪ್ಪಂದವು ಇಸ್ರೇಲ್ ಮತ್ತು ಹೆಜ್ಬುಲ್ಲಾ ನಡುವಿನ ಯುದ್ಧವನ್ನು ನಿಲ್ಲಿಸುವಲ್ಲಿ ಎಷ್ಟು ಯಶಸ್ವಿಯಾಗಲಿದೆ ಎಂಬ ದೊಡ್ಡ ಪ್ರಶ್ನೆ ಎದುರಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಹಗಲು ದರೋಡೆ: ಬೀದರ್​ನಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಕೆಂಪು ಕಲ್ಲು ಗಣಿಗಾರಿಕೆ – Kannada News | Red Stone Scandal: Illegal Mining Runs Unchecked Across Border District

ಕೆಂಪು ಕಲ್ಲು ಗಣಿಗಾರಿಕೆImage Credit source: tv9 kannada

ಬೀದರ್​​, ಜೂನ್​​ 15: ಎರಡು ರಾಜ್ಯದ ಗಡಿ ಹಂಚಿಕೊಂಡಿರುವ ಜಿಲ್ಲೆಯಲ್ಲಿ ಅಕ್ರಮವಾಗಿ ಕೆಂಪು ಕಲ್ಲು ಗಣಿಗಾರಿಕೆ (illegal mining) ಅವ್ಯಾಹತವಾಗಿ ನಡೆಯುತ್ತಿದೆ. ಬೀದರ್‌ (bidar) ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ 40ಕ್ಕೂ ಹೆಚ್ಚು ಸ್ಥಳದಲ್ಲಿ  ಭೂಮಿಯ ಒಡಲನ್ನ ಬಗೆದು ಕೆಂಪು ಕಲ್ಲು ತೆಗೆಯಲಾಗುತ್ತಿದೆ. ಇಷ್ಟೇಲ್ಲಾ ನಡೆಯುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾತ್ರ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಮುಖ್ಯಾಂಶಗಳು

  • ಬೀದರ್‌ನಲ್ಲಿ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಹೆಚ್ಚಳ
  • ಮೌನಕ್ಕೆ ಶರಣಾದ ಅಧಿಕಾರಿಗಳು
  • ಕಾನೂನು ಗಾಳಿಗೆ ತೂರಿ ರಸ್ತೆ ಪಕ್ಕದಲ್ಲೇ ನಡೆಯುತ್ತಿದೆ ಗಣಿಗಾರಿಕೆ

ಬೀದರ್, ಭಾಲ್ಕಿ ತಾಲೂಕಿನಲ್ಲಿಯೇ ಅತೀ ಹೆಚ್ಚು ಗಣಿಗಾರಿಕೆ

ಗಡಿ ಜಿಲ್ಲೆ ಬೀದರ್​ನಲ್ಲಿ ಕೆಂಪು ಕಲ್ಲು ಕೊರೆಯುವ ಧಂದೆ ಜೋರಾಗಿದ್ದು, ಹಾಡಹಗಲೇ ಗಣಿಗಾರಿಕೆ ಮಾಡಲಾಗುತ್ತಿದೆ. ಬೀದರ್ ಹಾಗೂ ಭಾಲ್ಕಿ ತಾಲೂಕಿನಲ್ಲಿಯೇ ಅತೀ ಹೆಚ್ಚು ಗಣಿಗಾರಿಕೆ ನಡೆಯುತ್ತಿದ್ದು, ಈ  ಬಗ್ಗೆ ಯಾರೂ ಕೂಡ ಚಕಾರ ಎತ್ತುತ್ತಿಲ್ಲ. ಬೀದರ್ ತಾಲೂಕಿನ ಸಿರ್ಸಿ, ಔರಾದ್, ಚಟ್ನಳ್ಳಿ, ಅಣದೂರು ವಾಡಿ, ಸಗೋಳ್ಳಗಿ ತಾಂಡಾ ಹಾಗೂ ಭಾಲ್ಕಿ ತಾಲೂಕಿನ ಖಾನಾಪುರ ಸುತ್ತಮುತ್ತ ಭಾರೀ ಪ್ರಮಾಣದಲ್ಲಿ ಕೆಂಪು ಕಲ್ಲು ಕೊರೆಯುವ ಕೆಲಸ ನಡೆಯುತ್ತಿದೆ. ದೊಡ್ಡ ದೊಡ್ಡ ಮಿಷನ್​​ಗಳನ್ನ ಬಳಸಿಕೊಂಡು ಭೂಮಿಯ ಒಡಲಿನಿಂದ ಕಲ್ಲನ್ನ ಹೆಕ್ಕಿ ತೆಗೆಯುತ್ತಿದ್ದಾರೆ.

ಇದನ್ನೂ ಓದಿ: ಜನರ ಬದುಕಿಗೆ ಮಾರಕವಾದ ಗಣಿಗಾರಿಕೆ ಧೂಳು: ಸರ್ಕಾರ ಸೈಲೆಂಟ್, ಸಿಡಿದೆದ್ದ ರೈತಸಂಘ

ಪೋಲೀಸರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಈ ವಿಚಾರಗೊತ್ತಿದ್ದರು ಕಂಡು ಕಾಣದವರಂತೆ ಕುಳಿತಿದ್ದಾರೆ. ಸರಕಾರದ ನೀತಿ ನಿಯಮಗಳನ್ನ ಗಾಳಿಗೆ ತೂರಿ ಅಕ್ರಮವಾಗಿ ಕಲ್ಲು ಕೊರೆಯುವ ದಂಧೆಯನ್ನ ಯಾರ ಅಂಜಿಕೆ, ಅಳುಕ್ಕಿಲ್ಲದೇ ನಡೆಸಲಾಗುತ್ತಿದೆ. ಗ್ರಾಮದ ಅಕ್ಕಪಕ್ಕದಲ್ಲಿ ಫಲವತ್ತಾದ ಜಮೀನುಗಳಲ್ಲಿ ಅಕ್ರಮ ದಂಧೆ ನಡೆಯುತ್ತಿದ್ದರು ಅಧಿಕಾರಿಗಳು ಮಾತ್ರ ಸುಮ್ಮನೆ ಕುಳಿತ್ತಿದ್ದಾರೆ.

ಒಂದು ಕಲ್ಲಿಗೆ 25 ರೂ. ಮಾರಾಟ

ಜಿಲ್ಲೆಯಲ್ಲಿ ಕಳೆದ ಹತ್ತಾರು ವರ್ಷದಿಂದ ಕೆಂಪು ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಕೆಲವು ರೈತರಿಂದ ಜಮೀನನ್ನ ಖರೀದಿಸಿ ಅಲ್ಲಿಯೂ ಕಲ್ಲು ಗಣಿಗಾರಿಕೆ ಮಾಡುತ್ತಿದ್ದಾರೆ. ಇನ್ನು ಕೆಲವು ರೈತರು ತಮ್ಮ ಹೊಲದಲ್ಲಿಯೇ ಕಲ್ಲು ಕೊರೆಯುವವರನ್ನ ಕರೆದುಕೊಂಡು ಬಂದು ಕಲ್ಲು ತೆಗೆದು 25 ರೂ.ಗೆ ಒಂದರಂತೆ ಮಾರಾಟ ಮಾಡುತ್ತಿದ್ದಾರೆ. ಗಣಿಗಾರಿಕೆ ಮಾಡುವವರು ಅಕ್ಕಪಕ್ಕದ ಪೊಲೀಸ್ ಠಾಣಾ ಅಧಿಕಾರಿಗಳಿಗೆ ತಿಂಗಳಿಗೆ ಹಣ ಕೊಟ್ಟು ಗಣಿಗಾರಿಕೆ ನಡೆಯುವ ಸ್ಥಳಕ್ಕೆ ಭೇಟಿ ನೀಡದಂತೆ ಮಾಡಿದ್ದಾರೆ ಎಂಬುವುದು ಇಲ್ಲಿನ ಜನರ ಮಾತು.

ಅಕ್ರಮ ಗಣಿಗಾರಿಯಿಂದ ಪರಿಸರ ಹಾಳು

ಅಷ್ಟಕ್ಕೂ ಯಾರಾದರು ಅಧಿಕಾರಿಗಳು ಗಣಿ ಬಂದ್ ಮಾಡುವಂತೆ ಒತ್ತಡ ಹಾಕಿದರೆ ಒಂದೆರಡು ದಿನ ಬಂದ್ ಮಾಡಿ ಮತ್ತೆ ಆರಂಭಿಸುತ್ತಾರೆ. ಹೀಗಾಗಿ ಪೊಲೀಸರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಪೊಲ್ಯೂಷನ್ ಕಂಟ್ರೋಲ್ ಬೋರ್ಟ್​​ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ. ಜೊತೆಗೆ ಇಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಯಿಂದ ಪರಿಸರ ಹಾಳಾಗುತ್ತಿದ್ದು, ಈ ಬಗ್ಗೆ ಮಾತ್ರ ಯಾರೊಬ್ಬರು ತುಟಿಕ್ ಪಿಟಿಕ್ ಅನ್ನುತ್ತಿಲ್ಲ. ಫಲವತ್ತಾದ ಜಮೀನಿನಲ್ಲಿ ಯಾವುದೆ ರೀತಿಯ ಗಣಿಗಾರಿಕೆ ಮಾಡಬಾರದು, ಊರು ಪ್ರವಾಸಿ ಸ್ಥಳ ಹಾಗೂ ರಸ್ತೆಯ ಅಕ್ಕಪಕ್ಕದಲ್ಲಿ ಗಣಿಗಾರಿಕೆ ಮಾಡಲೇಬಾರದು ಎನ್ನುವುದು ಸಹ ಕಾನೂನಿನಲ್ಲಿದೆ. ಆದರೆ ಸರಕಾರ ನಿಯಮಗಳನ್ನ ಉಲ್ಲಂಘಿಸಿ ಈ ದಂಧೆ ಮಾಡುತ್ತಿದ್ದಾರೆಂದು ಜನರ ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ: ಜನಾರ್ದನ ರೆಡ್ಡಿಗೆ ಮತ್ತೆ ‘ಗಣಿ’ ಉರುಳು? ಮಾಜಿ ಸಚಿವನಿಂದ 884 ಕೋಟಿ ನಷ್ಟ ವಸೂಲಿ?

ಬೀದರ್ ಜಿಲ್ಲೆ ಗಡಿನಾಡು ಆಗಿದ್ದರಿಂದ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುತ್ತಿಲ್ಲ. ಆದ್ದರಿಂದಲೇ ಇಂತಹ ಅಕ್ರಮ ದಂಧೆಗಳು ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಬಳ್ಳಾರಿ ಜಿಲ್ಲೆಗಾದ ಪರಿಸ್ಥಿತಿ ಬೀದರ್ ಜಿಲ್ಲೆಗೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link