ಬೆಂಗಳೂರು, (ಮಾರ್ಚ್ 26): ಶಾಲೆ ದಾಖಲಿಗೆ ಮಕ್ಕಳಿಗೆ ನಿಗದಿಪಡಿಸಿದ್ದ ವಯೋಮಿತಿಯನ್ನು ಸರ್ಕಾರ ಸಡಿಲಿಕೆ ಮಾಡಿದೆ. 1 ನೇ ತರಗತಿಗೆ 6 ವರ್ಷ ತುಂಬಿರಬೇಕು ಎಂಬ ನಿಯಮದಲ್ಲಿ 60 ದಿನ ವಿನಾಯಿತಿ ನೀಡಲಾಗಿದೆ. ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಂದು (ಮಾರ್ಚ್ 26)ವಿಧಾನಸಭೆಯಲ್ಲಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಯುಕೆಜಿ ಮುಗಿಸಿದರೂ 6 ವರ್ಷ ಪೂರ್ಣಗೊಂಡಿಲ್ಲವೆಂದು ಚಿಂತೆಯಲ್ಲಿದ್ದ ಪೋಷಕರು ನಿರಾಳರಾಗಿದ್ದಾರೆ.
ಗುರುವಾರ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಶಿಕ್ಷಣ ಸಚಿವ ಮಧುಬಂಗಾರಪ್ಪ, ಪ್ರಸಕ್ತ ವರ್ಷಕ್ಕೆ ಅನ್ವಯವಾಗುವಂತೆ ಮಕ್ಕಳ ಶಾಲಾ ಪ್ರವೇಶಕ್ಕೆ ನಿಗದಿಪಡಿಸಿದ್ದ 6 ವರ್ಷಗಳ ವಯೋಮಿತಿಗೆ 60 ದಿನಗಳ ಕಾಲ ವಿನಾಯಿತಿ ನೀಡಲಾಗಿದೆ. ಪ್ರತಿ ವರ್ಷ ಪೋಷಕರಿಗೆ ಈ ಬಗ್ಗೆ ಗೊಂದಲವಾಗುತ್ತಿದೆ. ಎಲ್‌ಕೆಜಿ ಮತ್ತು ಯುಕೆಜಿ ಸೇರ್ಪಡೆಗೆ ಸೂಕ್ತ ವಯೋಮಿತಿ ಕಾನೂನು ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಎಲ್‌ಕೆಜಿ, ಯುಕೆಜಿ ಸೇರ್ಪಡೆಗೆ ಸಂಬಂಧಿಸಿದಂತೆ ಕಾನೂನು ಜಾರಿ ಮಾಡುತ್ತೇವೆ. ಈ ಬಗ್ಗೆ ಅಗತ್ಯ ಸಭೆ ನಡೆಸಲಾಗುತ್ತದೆ ಹೇಳಿದರು.
ಪ್ರಥಮ್ ಅವರು ನಟಿಸಿದ ‘ಫಸ್ಟ್ ನೈಟ್ ವಿತ್ ದೆವ್ವ’ (First Night With Devva) ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಈ ಸಿನಿಮಾದ ಶೀರ್ಷಿಕೆಗೆ ‘ಸುಬ್ಬ ಸುಬ್ಬಿ ಹಾರರ್ ಸ್ಟೋರಿ’ ಎಂಬ ಟ್ಯಾಗ್ ಲೈನ್ ಇದೆ. ಈ ಕಥೆ ಯಾರಿಗಾದರೂ ಲಿಂಕ್ ಆಗುತ್ತಾ ಎಂಬ ಅನುಮಾನ ಮೂಡಿದೆ. ಆ ಬಗ್ಗೆ ಪ್ರಥಮ್ ಅವರು ಉತ್ತರ ನೀಡಿದ್ದಾರೆ. ‘ಮೊದಲ ದೃಶ್ಯದಲ್ಲೇ ಮದುವೆ. ಮದುವೆ ಆಗಿ 10 ನಿಮಿಷದ ಬಳಿಕ ನನ್ನ ಹೆಂಡತಿ ಮೈ ಮೇಲೆ ದೆವ್ವ ಇದೆ ಎಂಬುದು ಗೊತ್ತಾಗುತ್ತದೆ. ಹನಿಮೂನ್ ಆಗುತ್ತಾ ಅಥವಾ ಆ ದೆವ್ವ ಸೇಡು ತೀರಿಸಿಕೊಳ್ಳುತ್ತಾ ಎಂಬುದೇ ಕಥೆ. ಕಥೆಗೆ ಸೂಕ್ತ ಎಂಬ ಕಾರಣಕ್ಕೆ ಸುಬ್ಬ ಸುಬ್ಬಿ ಅಂತ ಇಟ್ಟಿದ್ದೇವೆ. ಕರ್ನಾಟಕದಲ್ಲಿ 7 ಕೋಟಿ ಜನರು ಇದ್ದಾರೆ. ಒಬ್ಬರ ಕಥೆ, ಮಾತು ಇನ್ನೊಬ್ಬರಿಗೆ ಲಿಂಕ್ ಆಗುತ್ತದೆ’ ಎಂದು ಪ್ರಥಮ್ (Pratham) ಅವರು ಹೇಳಿದ್ದಾರೆ.
ಆನೇಕಲ್, ಮಾರ್ಚ್ 26: ಬಾವನಿಂದ ಬಾಮೈದನ ಕೊಲೆ ನಡೆದಿರುವಂತಹ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಬಿಲ್ವಾರದಳ್ಳಿಯ ನಿರ್ಜನ ಪ್ರದೇಶದಲ್ಲಿ ನಡೆದಿದೆ. ಶ್ರೀನಿವಾಸ್ನಿಂದ ರಂಜಿತ್ (24)ನ ಕೊಲೆ(kill) ಮಾಡಲಾಗಿದೆ. ಆಸಾಮಿ ಕೊಲೆ ಮಾಡಿದಲ್ಲದೇ ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿ ಹಾಕಿದ್ದಾನೆ. ಬಳಿಕ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಸ್ಥಳಕ್ಕೆ ಬನ್ನೇರುಘಟ್ಟ ಪೋಲಿಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಡೆದಿದ್ದೇನು?
ರಂಜಿತ್ನ ಸ್ವಂತ ಅಕ್ಕ ಪವಿತ್ರರನ್ನು ಶ್ರೀನಿವಾಸ್ ಮದುವೆ ಮಾಡಿಕೊಂಡಿದ್ದಾರೆ. ಶ್ರೀನಿವಾಸ್ ತಂಗಿ ಕೋಮಲ್ ಜೊತೆಗೆ ರಂಜಿತ್ ಸಂಬಂಧ ಹೊಂದಿದ್ದ. ಕೋಮಲ್ನ್ನು ಬೇರೊಬ್ಬರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಗಂಡನನ್ನ ಬಿಟ್ಟು ರಂಜಿತ್ ಜೊತೆಗೆ ಪರಾರಿಯಾಗಿದ್ದಳು. ಈ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು.
ಶ್ರೀನಿವಾಸ್ ರಂಜಿತ್ನ ಕರೆದು ವಾರ್ನಿಂಗ್ ಕೂಡ ಮಾಡಿದ್ದ. ಇದೆಲ್ಲದರಿಂದ ಕೋಪಗೊಂಡ ಶ್ರೀನಿವಾಸ್ ರಂಜಿತ್ ಮೇಲೆ ಸೇಡು ಬೆಳೆಸಿಕೊಂಡಿದ್ದ. ಇಂದು ಸಂಜೆ ವೇಳೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಬಿಲ್ವಾರದಹಳ್ಳಿಯ ನಿರ್ಜನ ಪ್ರದೇಶಕ್ಕೆ ರಂಜಿತ್ನನ್ನು ಕರೆತಂದಿದ್ದ ಶ್ರೀನಿವಾಸ್ ಕೊಲೆ ಮಾಡಿದ್ದಾನೆ. ಸದ್ಯ ಬನ್ನೇರುಘಟ್ಟ ಪೊಲೀಸರಿಂದ ಆರೋಪಿ ಶ್ರೀನಿವಾಸನನ್ನು ವಶಕ್ಕೆ ಪಡೆಯಲಾಗಿದೆ.
ಠಾಣೆ ಇನ್ಸ್‌ಪೆಕ್ಟರ್ ಕೃಷ್ಣಕುಮಾರ್ ಹೇಳಿದ್ದಿಷ್ಟು
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಮೋಹನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಬಗ್ಗೆ ಬನ್ನೇರುಘಟ್ಟ ಠಾಣೆ ಇನ್ಸ್‌ಪೆಕ್ಟರ್ ಕೃಷ್ಣಕುಮಾರ್ ಮಾಹಿತಿ ನೀಡಿದ್ದು, ಸೋಕೋ ಟೀಮ್ನಿಂದ ಸಾಕ್ಷ್ಯ ಸಂಗ್ರಹಿಸಲಾಗಿದೆ. ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ಮೃತದೇಹದ ಜೊತೆ ಕಬ್ಬಿಣದ ರಾಡ್ ಪತ್ತೆ ಆಗಿದೆ ಎಂದರು.
ಕೊಲೆ ಬಳಿಕ ಮೃತದೇಹ ಕಾರಿನ ಡಿಕ್ಕಿಗೆ ಹಾಕಲಾಗಿದೆ. ರಂಜಿತ್ನ ಕೊಲೆ ಮಾಡಿದ ಶ್ರೀನಿವಾಸ್ ನೇರವಾಗಿ ಬನ್ನೇರುಘಟ್ಟ ಠಾಣೆಗೆ ಬಂದಿದ್ದಾನೆ ಎಂದು ಬನ್ನೇರುಘಟ್ಟ ಠಾಣೆ ಇನ್ಸ್‌ಪೆಕ್ಟರ್ ಕೃಷ್ಣಕುಮಾರ್ ಮಾಹಿತಿ ನೀಡಿದ್ದಾರೆ.
ನವದೆಹಲಿ, ಮಾರ್ಚ್ 26: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ವಿರುದ್ಧ ಶುರು ಮಾಡಿದ ಯುದ್ಧದಿಂದ ಯಾರಿಗೆ ಲಾಭ, ಯಾರಿಗೆ ನಷ್ಟ ಆಗುತ್ತಿದೆಯೋ ಸ್ಪಷ್ಟ ಇಲ್ಲ, ಆದರೆ ರಷ್ಯಾ ಮತ್ತು ಇರಾನ್ನ ಆಯಿಲ್ ಬ್ಯುಸಿನೆಸ್ ಬಹಳ ಜೋರಾಗಿ ನಡೆಯುತ್ತಿದೆ. ಎರಡೂ ದೇಶಗಳು ತೈಲ ಮಾರಾಟದಿಂದ ಸಾವಿರಾರು ಕೋಟಿ ರೂ ಲಾಭ ಮಾಡುತ್ತಿವೆ. ತಂತಮ್ಮ ಯುದ್ಧ ಮುಂದುವರಿಸಲು ಈ ದೇಶಗಳಿಗೆ ಫಂಡಿಂಗ್ ಸಿಕ್ಕಂತಾಗಿದೆ.
ವಿಶ್ವದ ಶೇ. 20ಕ್ಕಿಂತಲೂ ಹೆಚ್ಚು ತೈಲ ಪೂರೈಕೆಯಾಗುವ ಹಾರ್ಮುಜ್ ಜಲಸಂಧಿಯ ಸಂಪೂರ್ಣ ನಿಯಂತ್ರಣವು ಈಗ ಇರಾನ್ ಬಳಿ ಇದೆ. ಈ ಕಿರು ಜಲಮಾರ್ಗದಲ್ಲಿ ಇರಾನ್ ಬಿಟ್ಟು ಬೇರೆ ದೇಶಗಳ ಹಡಗುಗಳು ಸಾಗುತ್ತಿಲ್ಲ. ಯುದ್ಧ ಶುರುವಾದಾಗಿನಿಂದ ತೈಲಕ್ಕೆ ಬಂದಿರುವ ಬೇಡಿಕೆಯು ಇರಾನ್ಗೆ ಒಳ್ಳೆಯ ಬ್ಯುಸಿನೆಸ್ ತಂದಿದೆ.
ಇರಾನ್ ಈಗ ದಿನಕ್ಕೆ 16 ಲಕ್ಷ ಬ್ಯಾರಲ್ ಕಚ್ಛಾ ತೈಲವನ್ನು ಮಾರುತ್ತಿದೆ. ಯುದ್ಧಕ್ಕೆ ಮುಂಚೆ ಇರಾನ್ಗೆ ವಿವಿಧ ನಿಷೇಧಗಳನ್ನು ಹಾಕಿದ್ದ ಅಮೆರಿಕವು ಈಗ ತೈಲ ಮಾರುವಂತೆ ಇರಾನ್ಗೆ ದುಂಬಾಲು ಬಿದ್ದಿದೆ. ಯುದ್ಧ ಮುಂದುವರಿಸಲು ಬೇಕಾದ ಫಂಡಿಂಗ್ ಅನ್ನು ಇರಾನ್ಗೆ ಸಿಗುತ್ತಿರಬಹುದು. ಇರಾನ್ನಿಂದ ಅತಿಹೆಚ್ಚು ತೈಲ ಪಡೆಯುತ್ತಿರುವುದು ಚೀನಾ.
ರಷ್ಯಾ ತೈಲಕ್ಕೆ ಬಹಳ ಡಿಮ್ಯಾಂಡ್
ಇರಾನ್ ಯುದ್ಧ ಶುರುವಾದ ಬಳಿಕ ರಷ್ಯಾ ತೈಲಕ್ಕೆ ವಿಪರೀತ ಬೇಡಿಕೆ ಬಂದಿದೆ. ರಷ್ಯನ್ ತೈಲ ಖರೀದಿಸಲು ಎಲ್ಲಾ ದೇಶಗಳಿಗೂ ಅಮೆರಿಕವೇ ಹಸಿರು ನಿಶಾನೆ ತೋರಿದೆ. ವರದಿ ಪ್ರಕಾರ ರಷ್ಯಾಗೆ ದಿನವೊಂದಕ್ಕೆ 760 ಮಿಲಿಯನ್ ಡಾಲರ್ ಆದಾಯವು ಸಿಗುತ್ತಿದೆ. ಅಂದರೆ, ತೈಲ ಮಾರಾಟದಿಂದ ರಷ್ಯಾ ದಿನಕ್ಕೆ 7,000 ಕೋಟಿ ರೂ ಹಣ ಗಳಿಸುತ್ತಿದೆ.
ಉಕ್ರೇನ್ ಯುದ್ಧ ಶುರುವಾದ ಬಳಿಕ ರಷ್ಯಾ ಮೇಲೆ ಅಮೆರಿಕ ನಿಷೇಧ ಹಾಕಿದ ಪರಿಣಾಮ ರಷ್ಯಾ ಕಡಿಮೆ ಬೆಲೆಗೆ ತೈಲ ಪೂರೈಕೆ ಮಾಡುತ್ತಿತ್ತು. ಚೀನಾ ಮತ್ತು ಭಾರತ ಹಾಗೂ ಇನ್ನೂ ಇತರ ಕೆಲ ದೇಶಗಳು ಅಗ್ಗದ ಬೆಲೆಗೆ ರಷ್ಯನ್ ತೈಲ ಪಡೆಯುತ್ತಿದ್ದವು. ಈಗ ತೈಲಕ್ಕೆ ಬೇಡಿಕೆ ಹೆಚ್ಚಿರುವುದರಿಂದ ರಷ್ಯನ್ ತೈಲ ಡಿಸ್ಕೌಂಟ್ನಲ್ಲಿ ಸಿಗುತ್ತಿಲ್ಲ. ಹೆಚ್ಚುವರಿ ಬೆಲೆಗೆ ರಷ್ಯಾ ತನ್ನ ತೈಲವನ್ನು ಮಾರುತ್ತಿದೆ. ಭಾರತಕ್ಕೆ ಈ ಹಿಂದೆ ಸಿಗುತ್ತಿದ್ದ ಡಿಸ್ಕೌಂಟ್ ಈಗ ಇಲ್ಲ. ಚೀನಾಗೆ ನೀಡಿದ್ದ ಡಿಸ್ಕೌಂಟ್ ಅರ್ಧದಷ್ಟು ಕಡಿಮೆ ಆಗಿದೆ.
ಕಾರವಾರ, ಮಾರ್ಚ್ 26: ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯ್ಕ (Gopalakrishna Naik) ಹತ್ಯೆ ಯತ್ನ ಘಟನೆಗೆ ಸಂಬಂಧಿಸಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈಗಾಗಲೇ ಬಂಧಿತ ನಾಲ್ವರ ವಿಚಾರಣೆ ತೀವ್ರಗೊಂಡಿದೆ. ಈ ನಡುವೆ ಬಂಧಿತರ ಫೋಟೋ ಮತ್ತು ಓಡಾಡುವ ದೃಶ್ಯ ವೈರಲ್ ಆಗಿದ್ದು, ಎಲ್ಲರೂ ಗೋವಾ ಮೂಲದವರಾಗಿದ್ದಾರೆ. ಆದರೆ ಯಾವ ಕಾರಣಕ್ಕೆ ದಾಳಿ ಮಾಡಿದ್ದಾರೆ ಎಂಬುದನ್ನ ತಿಳಿದುಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಕೊಲೆಗೆ ಯತ್ನಿಸಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ
ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯ್ಕ ಕೊಲೆಗೆ ಯತ್ನಿಸಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಹಾಡಹಗಲೇ ವ್ಯಕ್ತಿ ಓರ್ವನನ್ನ ಅಟ್ಟಾಡಿಸಿ ಹೊಡೆದಿರುವ ದೃಶ್ಯ ನಿಜಕ್ಕೂ ಎದೆ ಝಲ್ ಎಣಿಸುವಂತಹದು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಿನ್ನೆ ನಡೆದ ಘಟನೆ ಬೆನ್ನಲ್ಲೇ ಎಲ್ಲೆಡೆ ಆತಂಕದ ವಾತಾವರಣ ನಿರ್ಮಾಣವಾಗಿದೆ.
ದಶಕಗಳ ನಂತರ ಅಂಕೋಲಾದಲ್ಲಿ ಕಾಂಗ್ರೆಸ್ ಮುಖಂಡನೋರ್ವನ ಹತ್ಯೆ ಯತ್ನದ ಘಟನೆ ನಡೆದಿದೆ. ನಿನ್ನೆ ಬೆಳಿಗ್ಗೆ ಹೇರ್ ಸಲೂನ್ಗೆ ಬಂದು ವಾಪಾಸಾಗುತ್ತಿದ್ದ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯ್ಕ ಅವರ ಮೇಲೆ ಆರೇಳು ಜನರ ಗುಂಪು ಸುತ್ತವರಿದಿದೆ. ಅಲ್ಲದೆ ಅವರ ಹತ್ಯೆಗೆ ಪ್ರಯತ್ನಿಸಿತ್ತು. ಗೋಪಾಲರನ್ನ ರಕ್ಷಿಸಲು ಸಹೋದರ ರಾಘವೇಂದ್ರ ಮುಂದಾಗಿದ್ದರಿಂದ ಅದೃಷ್ಟವಶಾತ್ ಗೋಪಾಲ್ ಅವರು ಓಡಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಗಾಯಗೊಂಡಿರುವ ಅವರು ಸದ್ಯ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಲ್ವರ ಬಂಧನ
ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನ ಕಾರವಾರದ ಮಾಜಾಳಿ ಚೆಕ್ ಪೋಸ್ಟ್ ಬಳಿ ವಶಕ್ಕೆ ಪಡೆಯಲಾಗಿತ್ತು. ದಾಳಿಕೋರರು ಅಂಕೋಲಾದಲ್ಲಿ ಓಡಾಡಿದ ದೃಶ್ಯ ಆಯಾ ಕಡೆಗಳಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೇ ಬಂಧಿತರ ಫೋಟೋ ಕೂಡ ವೈರಲ್ ಆಗಿದೆ. ಬಂಧಿತ ನಾಲ್ವರು ಗೋವಾ ಮೂಲದವರಾಗಿದ್ದಾರೆ. ಜಾಕೀರ್, ನೈಜಲ್, ಸದ್ದಾಂ ಹಾಗೂ ಇರ್ಪಾನ್ ಬಂಧಿತರು. ಘಟನೆಗೆ ಸಂಬಂಧಿಸಿದಂತೆ ಎರಡು ಬೈಕ್ ಹಾಗೂ ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ದೀಪನ್ ಎಂ ಎನ್ ಹೇಳಿದ್ದಾರೆ.
ಬಂಧಿತರು ಗೋವಾದವರಾಗಿದ್ದು, ಓರ್ವ ಬೌನ್ಸರ್, ಇನ್ನೋರ್ವ ವೆಲ್ಡರ್, ಮತ್ತೋರ್ವ ರಿಯಲ್ ಎಸ್ಟೇಟ್ ಮತ್ತು ಇನ್ನೋರ್ವ ಡ್ರೈವರ್ ಆಗಿದ್ದಾರೆ. ಆದರೆ ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ನಾಲ್ಕು ತಂಡಗಳನ್ನ ರಚನೆ ಮಾಡಿದ್ದಾರೆ. ಗೋವಾ ಸೇರಿದಂತೆ ಇತರೆಡೆ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಆರೋಪಿಗಳು ಆಗಾಗ ಅಂಕೋಲಾಕ್ಕೆ ಬಂದು ಹೋಗುತ್ತಿದ್ದರು. ಮೂರು ದಿನಗಳ ಹಿಂದೆ ಇಲ್ಲಿನ ಅಂಕೋಲಾದಲ್ಲಿ ಬೀಡುಬಿಟ್ಟದ್ದು ನಿನ್ನೆ ಬೆಳಗಿನ ವೇಳೆ ಹತ್ಯೆಗೆ ಪ್ರಯತ್ನಿಸಿದ್ದಾರೆ. ಒಟ್ಟಿನಲ್ಲಿ ಹತ್ಯೆಗೆ ಯತ್ನಿಸಿರುವುದು ರಾಜಕೀಯ ಕಾರಣಕ್ಕಾ, ವ್ಯವಹಾರ ಸಂಬಂಧನಾ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.
ಒಟ್ಟಿನಲ್ಲಿ ಹಾಡಹಗಲೇ ಅಂಕೋಲಾ ಪಟ್ಟಣದಲ್ಲಿ ನಡೆದ ಈ ದಾಳಿ ಎಲ್ಲರನ್ನ ಬೆಚ್ಚಿಬೀಳಿಸಿದೆ. ರಾಜಕೀಯದಲ್ಲಿ ಕಳೆದ ಕೆಲ ದಿನಗಳಿಂದ ಯುವ ಸಮುದಾಯದ ಸ್ನೇಹವನ್ನ ಗಳಿಸುತ್ತಿದ್ದ ಗೋಪಾಲಕೃಷ್ಣ ಅವರಿಗೆ ಸಹಿಸಲಾಗದವರು ಅಥವಾ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಕೊಂಡವರಿಂದ ಈ ಕೃತ್ಯ ನಡೆದಿದೆಯಾ ಎಂಬುದು ಗೊತ್ತಾಗಬೇಕಿದೆ. ಪೊಲೀಸರು ಪ್ರಕರಣ ಸಂಬಂಧ ತನಿಖೆಯನ್ನ ಚುರುಕುಗೊಳಿಸಿದ್ದು, ಮುಂದಿನ ದಿನಗಳಲ್ಲಿ ಯಾವ ಸಂಬಂಧ ಈ ಘಟನೆ ನಡೆದಿದೆ ಎಂಬುದು ಗೊತ್ತಾಗಲಿದೆ.
ದಾವಣಗೆರೆ , (ಮಾರ್ಚ್ 26): ದಾವಣಗೆರೆ ದಕ್ಷಿಣ ಕ್ಷೇತ್ರ (Davanagere South ) ಶಾಮನೂರು ಕುಟುಂಬದ ಭದ್ರಕೋಟೆ. ಕಳೆದ 30 ವರ್ಷಗಳಿಂದ್ಲೂ ಶಾಮನೂರು ಕುಟುಂಬದ ಕೈಯಲ್ಲಿಯೇ ಇಲ್ಲಿನ ಆಡಳಿತ. ಆದ್ರೆ ಶಾಮನೂರು ಶಿವಶಂಕರಪ್ಪನವರ ನಿಧನ ಬಳಿಕ ಈ ಕ್ಷೇತ್ರ ತೆರವಾಗಿದ್ದು, ತಂದೆಯ ಸ್ಥಾನವನ್ನ ಮಗನಿಗೆ ಕೊಡಿಸುವಲ್ಲಿ ಸಚಿವ SS ಮಲ್ಲಿಕಾರ್ಜುನ ಸಫಲರಾಗಿದ್ದಾರೆ. ಆದ್ರೆ,ನಮಗೆ ಟಿಕೆಟ್ ಕೊಡಿ ಎಂದಿದ್ದ ಮುಸ್ಲಿಂ ಸಮುದಾಯ ಕಾಂಗ್ರೆಸ್ (Congress) ವಿರುದ್ಧ ಬಂಡಾಯ ಸಾರಿದೆ. ಹೌದು..ಕೈ ಹೈಕಮಾಂಡ್ ತಮ್ಮ ಸಮುದಾಯವನ್ನ ಬಿಟ್ಟು ಶಾಮನೂರು ಕುಟುಂಬಕ್ಕೆ ಮಣೆ ಹಾಕಿರುವುದ ವಿರುದ್ಧ ಸೆಟೆದು ನಿಂತಿದ್ದು, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಹೀಗಾಗಿ ಕೈ ಪಡೆ ಕೂಡ ಬಂಡಾಯ ಶಮನದ ಸಹಜ ಪ್ರಯತ್ನ ನಡೆಸಿದೆ. ಖುದ್ದು ಸಿಎಂ ಸಿದ್ದರಾಮಯ್ಯ ಸಾದಿಕ್ ಮನವೊಲಿಕೆಗೆ ಯತ್ನಿಸಿದ್ರು. ಕಳೆದ ರಾತ್ರಿ ಕರೆ ಮಾಡಿ ಮಾತನಾಡಿದ್ರು. ಆದ್ರೆ ಪೈಲ್ವಾನ್ ಮಾತ್ರ ತಮ್ಮ ಪಟ್ಟು ಸಡಿಲಿಸುತ್ತಿಲ್ಲ.
ಪೈಲ್ವಾನ್ ಮನವೊಲಿಸುವ ಯತ್ನ ವಿಫಲ
ಮುಸ್ಲಿಮರನ್ನು ಮನವೊಲಿಸಲು ಕಾಂಗ್ರೆಸ್ನ ಅಲ್ಪಸಂಖ್ಯಾತ ನಾಯಕರು ಇವತ್ತು ದಾವಣಗೆರೆಗೆ ಎಂಟ್ರಿ ಕೊಟ್ಟಿದ್ದು, ಸಾದಿಕ್ ಮನೆಗೆ ಬಂದು ಮನವೊಲಿಸಲು ಯತ್ನಿಸಿದ್ದಾರೆ. ಆದ್ರೆ ಸಾದಿಕ್ ಬೆಂಬಲಿಗರು ಗೋ ಬ್ಯಾಕ್ ಘೋಷಣೆ ಕೂಗಿದ್ದಾರೆ. ಹೀಗಾಗಿ ಶಾಸಕ ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹ್ಮದ್ ಬಂದ ದಾರಿಗೆ ಸುಂಕ ಇಲ್ಲ ಎನ್ನುವಂತೆ ವಾಪಸ್ ಆಗಿದ್ದಾರೆ. ಆದರೆ ಮನವೊಲಿಸುವ ತಮ್ಮ ಆತ್ಮವಿಶ್ವಾಸವನ್ನ ಮಾತ್ರ ಬಿಡುತ್ತಿಲ್ಲ. ನಾಮಪತ್ರ ವಾಪಸ್ ಪಡೆಯುವ ಅವಧಿ ಮುಗಿದರೂ ಮಾತುಕತೆ ನಡೆಸುತ್ತೇವೆ ಎಂದಿದ್ದಾರೆ.
ಮತ್ತೊಂದ್ಕಡೆ ಸಾದಿಕ್, ಕ್ಷೇತ್ರದಲ್ಲಿ ನಿರ್ಣಾಯಕವಾಗಿರೋ ಮುಸ್ಲಿಂ ಮತದಾರರು ತಮ್ಮ ಕೈ ಹಿಡಿಯುತ್ತಾರೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಸಮುದಾಯ ನನ್ನ ಹಿಂದೆ ಇದೆ, ನಾನು ಹಿಂದೆ ಸರಿಯಲ್ಲ ಎಂದು ಮಿನಿ ಸಮರದಲ್ಲಿ ಕದನದಲ್ಲಿ ಧೂಳೆಬ್ಬಿಸಿದ್ದಾರೆ. ಇನ್ನು ಸಚಿವ ಜಮೀರ್ ಅಹ್ಮದ್ ಅವರು ಟಿಕೆಟ್ ವಿಚಾರದಲ್ಲಿ ಮುನಿಸಿಕೊಂಡಿದ್ದಾರೆ ಎನ್ನುವ ಮಾತುಗಳು ಹರಿದಾಡ್ತಿವೆ. ಈ ಕಾರಣಕ್ಕೆ ಅಂತರ ಕಾಪಾಡಿಕೊಳ್ಳುತ್ತಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ. ಇದಕ್ಕೆ ಇಂಬು ನೀಡುವಂತೆ ನಿನ್ನೆ (ಮಾರ್ಚ್ 25) ಸಿಎಂ ನಿವಾಸದಲ್ಲಿ ನಡೆದಿದ್ದ ಮುಸ್ಲಿಂ ಸಚಿವರು, ಶಾಸಕರು, MLCಗಳ ಸಭೆಗಳಿಗೆ ಜಮೀರ್ ಗೈರಾಗಿದ್ದರು. ಅಲ್ಲದೇ ಪೈಲ್ವಾನ್ ಮನವೊಲಿಸುವ ಪ್ರಯತ್ನ ಸಹ ಮಾಡಿಲ್ಲ.
ಕಣದಲ್ಲಿ ಒಟ್ಟು 25 ಅಭ್ಯರ್ಥಿಗಳ
ಏಪ್ರಿಲ್ 9ರಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಒಟ್ಟು 36 ಅಭ್ಯರ್ಥಿಗಳ ನಾಮಪತ್ರ ಸಿಂಧು ಆಗಿದ್ದವು. ಈ ಪೈಕಿ ಇಂದು (ಮಾರ್ಚ್ 26) 11 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ. ಇದರೊಂದಿಗೆ ಅಂತಿಮವಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 25 ಅಭ್ಯರ್ಥಿಗಳ ಪೈಕಿ ಓರ್ವ ಮಹಿಳಾ ಅಭ್ಯರ್ಥಿ ಕಣದಲ್ಲಿದ್ದಾರೆ. ಸಾದಿಕ್ ಪೈಲ್ವಾನ್ ಪಕ್ಷೇತರ ಅಭ್ಯರ್ಥಿ ಆಗಿ ಉಳಿದುಕೊಂಡಿದ್ದಾರೆ . ಇದರೊಂದಿಗೆ 14 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದ್ರೆ, ಮುಸ್ಲಿಂ ಅಭ್ಯರ್ಥಿಗಳು ಸಾಧಿಕ್ ಪೈಲ್ವಾನ್ ಅವರಿಗೆ ಬೆಂಬಲಿಸುವುದಾಗಿ ಹೇಳಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ಟೆನ್ಷನ್ ಶುರುವಾಗಿದೆ.
ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.
ಈ ಬಗ್ಗೆ ಮಾತನಾಡಿದ ಸಾದಿಕ್ ಪೈಲ್ವಾನ್, ಮೊದಲೇ ರಾಜ್ಯ ನಾಯಕರು ಬಂದು ನಮ್ಮ ಅಹಿಂದ ಮುಖಂಡರು ಹಾಗೂ ನನ್ನ ಜೊತೆ ಸಭೆ ನಡೆಸಬೇಕಿತ್ತು. ನಾವು ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನನಗೆ ಕಾಂಗ್ರೆಸ್ ಹಾಗೂ ಬಿಜೆಪಿ ಯಾವುದು ಪ್ರತಿಸ್ಪರ್ಧಿ ಅಲ್ಲ. ಈ ಬಾರಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ನಾವು ಗೆದ್ದೇ ಗೆಲ್ಲುತ್ತೇನೆ ಕಾಂಗ್ರೆಸ್‌ಗೆ ಪಾಠ ಕಲಿಸುತ್ತೇವೆ ಎಂದು ಸವಾಲು ಎಸೆದಿದ್ದಾರೆ.
ಹರೈಯಾ, ಮಾರ್ಚ್ 26: ವ್ಯಕ್ತಿಯೊಬ್ಬರು ಸಾವಿರ ಲೀಟರ್ ಟ್ಯಾಂಕ್ ಹಿಡಿದು ಪೆಟ್ರೋಲ್ ಬಂಕ್ಗೆ ಬಂದಿರುವ ವಿಡಿಯೋ ವೈರಲ್ ಆಗಿದ್ದು, ಈ ಘಟನೆ ಉತ್ತರ ಪ್ರದೇಶದ ಹರೈಯಾದಲ್ಲಿ ನಡೆದಿದೆ. ಘಟನೆ NH-28 ರ ಭದವಾಲ್ ಪೆಟ್ರೋಲ್ ಪಂಪ್‌ನಲ್ಲಿ ನಡೆದಿದೆ. ಪೆಟ್ರೋಲ್ ತುಂಬಿಸಲು ಒಬ್ಬ ವ್ಯಕ್ತಿ 1,000 ಲೀಟರ್ ದೊಡ್ಡ ಟ್ಯಾಂಕ್‌ನೊಂದಿಗೆ ಅಲ್ಲಿಗೆ ಬಂದಿದ್ದರು. ಇನ್ನೂ ಅಚ್ಚರಿಯ ಸಂಗತಿಯೆಂದರೆ ಆ ಯುವಕ ತನ್ನ ಹೆಗಲ ಮೇಲೆ ಭಾರವಾದ ಟ್ಯಾಂಕ್ ಅನ್ನು ಪೆಟ್ರೋಲ್ ಪಂಪ್‌ಗೆ ಹೊತ್ತುಕೊಂಡು ಹೋಗಿದ್ದಾರೆ.
15000 ಕೋಟಿ ರೂಗೆ ಮಾರಾಟವಾಗಿ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತಿ ದುಬಾರಿ ತಂಡ ಎಂಬ ದಾಖಲೆ ಬರೆದಿದ್ದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಹೊಸ ಸಂಕಷ್ಟವೊಂದು ಎದುರಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡದ ವ್ಯಾಪಾರ ಒಪ್ಪಂದವನ್ನು ಕೂಡಲೇ ರದ್ದುಗೊಳಿಸುವಂತೆ ತಂಡದ ಮಾಜಿ ಮಾಲೀಕ ರಾಜ್ ಕುಂದ್ರಾ, ಬಿಸಿಸಿಐ ಬಳಿ ಮನವಿ ಮಾಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯಲ್ಲಿರುವ ನನ್ನ 11.7% ಪಾಲನ್ನು ಇತ್ಯರ್ಥಪಡಿಸುವವರೆಗೆ ಫ್ರಾಂಚೈಸಿಯ ಮಾಲೀಕರು ಬದಲಾಗಲು ಸಾಧ್ಯವಿಲ್ಲ. ತಂಡವನ್ನು ಯಾರಿಗೂ ಮಾರಾಟ ಮಾಡಲು ಸಾಧ್ಯವಿಲ್ಲ. ಹೀಗಾಗಿ ಒಪ್ಪಂದವನ್ನು ತಿರಸ್ಕರಿಸಬೇಕೆಂದು ಒತ್ತಾಯಿಸಿ ರಾಜ್ ಕುಂದ್ರಾ ಈಗ ಬಿಸಿಸಿಐಗೆ ಪತ್ರ ಬರೆದಿದ್ದಾರೆ.
ರಾಜ್ ಕುಂದ್ರಾ ಅವರ ಆರೋಪವೇನು?
ವಾಸ್ತವವಾಗಿ ರಾಜ್ ಕುಂದ್ರಾ 2009 ರಲ್ಲಿ ರಾಜಸ್ಥಾನ್ ರಾಯಲ್ಸ್‌ನಲ್ಲಿ 11.7% ಪಾಲನ್ನು ಖರೀದಿಸಿದ್ದರು. ಆ ಸಮಯದಲ್ಲಿ ಅವರು ತಂಡದ ಮೇಲೆ ಸುಮಾರು 70-75 ಕೋಟಿ ಹೂಡಿಕೆ ಮಾಡಿ ಮಾಲೀಕರ ಪೈಕಿ ಒಬ್ಬರಾಗಿದ್ದರು. ಉಳಿದಂತೆ ಆ ಸಮಯದಲ್ಲಿ, ಸುರೇಶ್ ಚೆಲ್ಲಾರಾಮ್ ಬಳಿ ತಂಡದ 44.2% ಷೇರು ಹೊಂದಿದ್ದರೆ, ಮನೋಜ್ ಬಡಾಲೆ 32.4% ಷೇರು ಹೊಂದಿದ್ದರು. ಆದರೆ 2013 ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿಕೊಂಡಿದ್ದ ರಾಜ್ ಕುಂದ್ರಾ, ಆ ನಂತರ ತಂಡದಿಂದ ಹೊರಹೋಗಬೇಕಾಯಿತು. ಆದಾಗ್ಯೂ ರಾಜ್ ಕುಂದ್ರಾ ತಂಡದಲ್ಲಿರುವ ತನ್ನ 11.7% ಪಾಲನ್ನು ಪಡೆಯಲು ಕಾನೂನು ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಕಾನೂನುಬದ್ಧವಾಗಿ, ಇದು ಬಗೆಹರಿಯುವವರೆಗೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯನ್ನು ಬೇರೊಬ್ಬರಿಗೆ ಮಾರಾಟ ಮಾಡದಂತೆ ಬಿಸಿಸಿಐಗೆ ಪತ್ರ ಬರೆದಿದ್ದಾರೆ.
ರಾಜ್ ಕುಂದ್ರಾಗೆ ಐಪಿಎಲ್ನಿಂದ ನಿಷೇಧ
2013 ರಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾಗಿದ್ದವು. ಅದರಂತೆ ದೆಹಲಿ ಪೊಲೀಸರ ವಿಚಾರಣೆಯ ಸಮಯದಲ್ಲಿ ರಾಜ್ ಕುಂದ್ರಾ ಐಪಿಎಲ್ ಪಂದ್ಯಗಳ ಮೇಲೆ ಬೆಟ್ಟಿಂಗ್ ನಡೆಸಿರುವುದು ಖಚಿತವಾಗಿತ್ತು. ಇದರ ನಂತರ, ಬಿಸಿಸಿಐ ತಕ್ಷಣವೇ ರಾಜ್ ಕುಂದ್ರಾ ಅವರನ್ನು ಐಪಿಎಲ್ನಿಂದ ಅಮಾನತುಗೊಳಿಸಿತ್ತು. ಇತ್ತ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ಇತರ ಮಾಲೀಕರು, ಒಂದು ವೇಳೆ ರಾಜ್ ಕುಂದ್ರಾ ಈ ಪ್ರಕರಣದಲ್ಲಿ ತಪ್ಪಿತಸ್ಥರೆಂಬುದು ಸಾಭೀತಾದರೆ ಅವರ ಷೇರುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಅದರಂತೆ ವಿಚಾರಣೆಯ ಬಳಿಕ2015 ರಲ್ಲಿ ಲೋಧಾ ಸಮಿತಿಯು ಕುಂದ್ರಾ ತಪ್ಪಿತಸ್ಥರೆಂದು ತೀರ್ಪು ನೀಡಿತ್ತು. ಇದರ ನಂತರ, ಬಿಸಿಸಿಐ ರಾಜ್ ಕುಂದ್ರಾ ಅವರನ್ನು ಯಾವುದೇ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸದಂತೆ ನಿಷೇಧ ಹೇರಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಅನಾನಸ್ (pineapple) ಬೇಸಿಗೆಯ ಸೀಸನ್‌ನಲ್ಲಿ ಹೇರಳವಾಗಿ ಸಿಗುವಂತಹ ಹಣ್ಣು. ಹೊರಗಿನಿಂದ ಒರಟಾಗಿ ಮತ್ತು ಮುಳ್ಳಿನಿಂದ ಕೂಡಿರುವ ಈ ಹಣ್ಣು ತಿನ್ನಲು ರುಚಿಕರ ಮಾತ್ರವಲ್ಲದೆ ಆರೋಗ್ಯಕ್ಕೂ ಸಖತ್ ಪ್ರಯೋಜನಕಾರಿ. ಹೌದು ಕ್ಯಾಲ್ಸಿಯಂ, ಫೈಬರ್, ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಈ ಹಣ್ಣು, ಅನೇಕ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಅನಾನಸ್ ತಿನ್ನುವುದಕ್ಕಿಂತ ಹೆಚ್ಚಾಗಿ ಅದರ ಜ್ಯೂಸ್ ಕುಡಿಯಲು ಬಹುತೇಕ ಹೆಚ್ಚಿನವರು ಇಷ್ಟಪಡುತ್ತಾರೆ. ಸುಡು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವ ಈ ಜ್ಯೂಸ್ ಆರೋಗ್ಯಕ್ಕೂ ಸಖತ್ ಪ್ರಯೋಜನಕಾರಿ. ಬೇಸಿಗೆಯಲ್ಲಿ ಅನಾನಸ್ ಜ್ಯೂಸ್ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ನೋಡೋಣ ಬನ್ನಿ.
ದೇಹಕ್ಕೆ ಜಲಸಂಚಯನವನ್ನು ಒದಗಿಸುತ್ತದೆ: ಈ ಸುಡು ಬೇಸಿಗೆಯಲ್ಲಿ ಆಗಾಗ್ಗೆ ನಿರ್ಜಲೀಕರಣ ಸಮಸ್ಯೆ ಕಾಣಿಸಿಕೊಳ್ಳುತ್ತಿರುತ್ತವೆ. ಹೀಗಿರುವಾಗ ಅನಾನಸ್ ಜ್ಯೂಸ್ ದೇಹದಲ್ಲಿನ ನೀರಿನ ಕೊರತೆಯನ್ನುನೀಗಿಸಲು ಸಹಾಯ ಮಾಡುತ್ತದೆ. ಈ ಹಣ್ಣಿನಲ್ಲಿ ನೀರಿನ ಅಂಶ ಹೇರಳವಾಗಿದ್ದು, ಇದು ಬೇಸಿಗೆಯ ಶಾಖದಲ್ಲಿ ದೇಹವನ್ನು ತಂಪಾಗಿಸುತ್ತದೆ ಮತ್ತು ದೇಹ ಶಕ್ತಿಯನ್ನು ಕಾಪಾಡಿಕೊಳ್ಳಲೂ ಸಹಕಾರಿಯಾಗಿದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಅನಾನಸ್ ಜ್ಯೂಸ್ ತುಂಬಾ ಪ್ರಯೋಜನಕಾರಿಯಾಗಿದೆ. ನೀವು ಅತಿಸಾರ, ಹೊಟ್ಟೆ ನೋವು, ಮಲಬದ್ಧತೆ ಅಥವಾ ಹೊಟ್ಟೆ ಉಬ್ಬರ ಸಮಸ್ಯೆಯಿಂದ ಬಳಲುತ್ತಿದ್ದರೆ, ಅನಾನಸ್ ಜ್ಯೂಸ್ ಕುಡಿಯಿರಿ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಅನಾನಸ್ ಜ್ಯೂಸ್ ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ನಮ್ಮನ್ನು ಆರೋಗ್ಯವಾಗಿಡುತ್ತದೆ. ಅನಾನಸ್ ಜ್ಯೂಸ್‌ನಲ್ಲಿರುವ ವಿಟಮಿನ್ ಸಿ ಅಂಶವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಕಾಲೋಚಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ: ಬೇಸಿಗೆಯಲ್ಲಿ ಟ್ಯಾನಿಂಗ್ ಮತ್ತು ಕಲೆಗಳು ಸಾಮಾನ್ಯ. ಈ ಸಮಸ್ಯೆಯಿಂದ ಮುಕ್ತಿ ನೀಡಲು ಅನಾನಸ್ ಜ್ಯೂಸ್ ತುಂಬಾನೇ ಸಹಕಾರಿ. ಅನಾನಸ್ ರಸದಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಚರ್ಮವನ್ನು ಹೈಡ್ರೇಟ್ ಮಾಡಲು ಮತ್ತು ತ್ವಚೆಗೆ ನೈಸರ್ಗಿಕ ಹೊಳಪನ್ನು ನೀಡಲು ಸಹಾಯ ಮಾಡುತ್ತದೆ.
ತೂಕ ಇಳಿಕೆಗೆ ಸಹಕಾರಿ: ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಅನಾನಸ್ ಜ್ಯೂಸ್ ನಿಮಗೆ ತುಂಬಾನೇ ಪ್ರಯೋಜನಕಾರಿ. ಇದರಲ್ಲಿ ಕ್ಯಾಲೋರಿಗಳು ಕಡಿಮೆ ಮತ್ತು ಫೈಬರ್ ಅಧಿಕವಾಗಿದ್ದು, ಇದು ಹಸಿವನ್ನು ನಿಯಂತ್ರಿಸಲು ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ದೃಷ್ಟಿ ತೀಕ್ಷ್ಣವಾಗುತ್ತದೆ: ಅನಾನಸ್ ಜ್ಯೂಸ್ ನಲ್ಲಿ ವಿಟಮಿನ್ ಎ ಇದ್ದು, ಇದು ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ. ಮಕ್ಕಳಿಗೆ ಅನಾನಸ್ ಜ್ಯೂಸ್ ನೀಡುವುದರಿಂದ ಅವರ ದೃಷ್ಟಿ ಸುಧಾರಿಸುತ್ತದೆ.
ಬಾಲಿವುಡ್‌ನ ಸ್ಟೈಲಿಶ್ ನಟಿ ಮಲೈಕಾ ಅರೋರಾ (Malaika Arora) ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ವೈಯಕ್ತಿಕ ಜೀವನ, ಒಂಟಿತನ ಮತ್ತು ಹರಿದಾಡುತ್ತಿರುವ ಡೇಟಿಂಗ್ ವದಂತಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸಿನಿಮಾ ರಂಗದಲ್ಲಿ ಯಾರ ಜೊತೆ ಕಂಡರೂ ಲಿಂಕ್-ಅಪ್ ವದಂತಿಗಳು ಹರಡುವುದು ಸಾಮಾನ್ಯ. ಇತ್ತೀಚೆಗೆ ಮಲೈಕಾ ಅವರು ಸೋರಬ್ ಬೇಡಿ (Sorab Bedi) ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈಗ ಇವೆಲ್ಲವೂ ಕಿರಿಕಿರಿ ಎನಿಸುತ್ತದೆ. ನಾನು ಇವುಗಳನ್ನು ಕೇವಲ ಒಂದು ಜೋಕ್ ಎಂದು ಪರಿಗಣಿಸುತ್ತೇನೆ’ ಎಂದಿದ್ದಾರೆ.
ಅಚ್ಚರಿಯ ವಿಷಯವೆಂದರೆ, ಈ ವದಂತಿಗಳನ್ನು ನೋಡಿ ಮಲೈಕಾ ಮತ್ತು ಅವರ ಪುತ್ರ ಅರ್ಹಾನ್ ಖಾನ್ ಇಬ್ಬರೂ ಒಟ್ಟಾಗಿ ನಗುತ್ತಾರಂತೆ. ‘ಅರ್ಹಾನ್ ಮತ್ತು ನಾನು ಇಂತಹ ವಿಷಯಗಳ ಬಗ್ಗೆ ಸಾಕಷ್ಟು ತಮಾಷೆ ಮಾಡುತ್ತೇವೆ’ ಎಂದು ಮಲೈಕಾ ಅರೋರಾ ಅವರು ಹೇಳಿದ್ದಾರೆ. ಈಗಾಗಲೇ ಸೋರಬ್ ಬೇಡಿ ಕೂಡ ‘ನಾವು ಜಸ್ಟ್ ಫ್ರೆಂಡ್ಸ್’ ಎಂದು ಸ್ಪಷ್ಟನೆ ನೀಡಿದ್ದಾರೆ.
ಒಬ್ಬ ಸಿಂಗಲ್ ಮದರ್ ಆಗಿ ಹೊಸ ಸಂಗಾತಿಯನ್ನು ಹುಡುಕುವುದು ಕಷ್ಟವೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಲೈಕಾ, ‘ಯಾರೋ ಒಬ್ಬ ಪುರುಷ ನನ್ನ ಜೀವನಕ್ಕೆ ಬಂದು ನನ್ನ ಅಸ್ತಿತ್ವವನ್ನು ಸಾಬೀತುಪಡಿಸುವ ಅಗತ್ಯವಿಲ್ಲ. ಮೊದಲು ನಾನು ಒಬ್ಬ ವ್ಯಕ್ತಿಯಾಗಿ ನನ್ನನ್ನು ನಾನು ಕಂಡುಕೊಳ್ಳಬೇಕು. ನನ್ನ ಎಲ್ಲಾ ಸಂಬಂಧಗಳು ನನ್ನದೇ ಆದ ರೀತಿಯಲ್ಲಿ ಇರಬೇಕು’ ಎಂದು ತಿಳಿಸಿದ್ದಾರೆ.
ಮಲೈಕಾ ಅರೋರಾ ಅವರು ಅರ್ಬಾಜ್ ಖಾನ್ ಅವರೊಂದಿಗೆ 19 ವರ್ಷಗಳ ವೈವಾಹಿಕ ಜೀವನದ ನಂತರ 2017ರಲ್ಲಿ ವಿಚ್ಛೇದನ ಪಡೆದಿದ್ದರು. ಬಳಿಕ ನಟ ಅರ್ಜುನ್ ಕಪೂರ್ ಜೊತೆ 6 ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದರು. ಆದರೆ 2024ರಲ್ಲಿ ಇವರಿಬ್ಬರೂ ಬೇರ್ಪಟ್ಟಿದ್ದಾರೆ ಎಂಬುದು ಖಚಿತವಾಯಿತು. ಈಗ ಮಲೈಕಾ ಸಿಂಗಲ್ ಆಗಿದ್ದಾರೆ. ಹಾಗಾಗಿ ಅವರು ಯಾರ ಜೊತೆ ಕಾಣಿಸಿಕೊಂಡರೂ ಸುದ್ದಿ ಆಗುತ್ತದೆ.
ಮಲೈಕಾ ಅರೋರಾ ಅವರಿಗೆ ಈಗ 52 ವರ್ಷ ವಯಸ್ಸು. ಅವರಿಗೆ ಇಷ್ಟ ವಯಸ್ಸು ಆಗಿದೆ ಎಂದು ಯಾರೂ ಕೂಡ ಹೇಳಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಅವರು ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ. ಹಾಗಾಗಿ ಅವರಿಗೆ ಚಿತ್ರರಂಗದಲ್ಲಿ ಈಗಲೂ ಬೇಡಿಕೆ ಇದೆ. ಅನೇಕ ಬ್ರ್ಯಾಂಡ್ಗಳಿಗೆ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ.