IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ಉದ್ಘಾಟನಾ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ದ್ವಿತೀಯ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ಆರ್‌ಸಿಬಿ ತನ್ನ ಎರಡನೇ ಪಂದ್ಯದಲ್ಲಿ ಬದ್ಧ ವೈರಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ಎದುರಿಸಲಿದೆ. ಹೈವೋಲ್ಟೇಜ್ ಪಂದ್ಯವೆಂದೇ ಬಿಂಬಿತವಾಗಿರುವ ಈ ಮ್ಯಾಚ್ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
ಪಂದ್ಯ ಯಾವಾಗ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯವು ಏಪ್ರಿಲ್ 5 ರಂದು ನಡೆಯಲಿದೆ. ಅಂದರೆ ಮುಂದಿನ ಭಾನುವಾರ ಬದ್ಧವೈರಿಗಳು ಮುಖಾಮುಖಿಯಾಗಲಿದ್ದಾರೆ.
ಪಂದ್ಯ ನಡೆಯುವುದು ಎಲ್ಲಿ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಎರಡನೇ ಪಂದ್ಯವನ್ನು ಸಹ ತವರಿನಲ್ಲೇ ಆಡಲಿದೆ. ಅಂದರೆ ಆರ್‌ಸಿಬಿ-ಸಿಎಸ್‌ಕೆ ನಡುವಣ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸಲಿದೆ.
ಎಷ್ಟು ಗಂಟೆಗೆ ಮ್ಯಾಚ್ ಶುರು?
ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಣ ಪಂದ್ಯವು ಭಾನುವಾರ ರಾತ್ರಿ 7.30 ರಿಂದ ಶುರುವಾಗಲಿದೆ. ಇನ್ನು ಈ ಪಂದ್ಯದ ಟಾಸ್ ಪ್ರಕ್ರಿಯೆ 7 ಗಂಟೆಗೆ ನಡೆಯಲಿದೆ.
ರಣರೋಚಕದ ಪೈಪೋಟಿ ನಿರೀಕ್ಷೆ:
ಆರ್‌ಸಿಬಿ ತಂಡದ ತವರು ಮೈದಾನವಾದ ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಈ ಪಂದ್ಯವು ಅತ್ಯಂತ ರೋಚಕವಾಗಿರಲಿದೆ. ಭಾನುವಾರ ಪಂದ್ಯವಿರುವುದರಿಂದ ಕ್ರೀಡಾಂಗಣವು ಕಿಕ್ಕಿರಿದು ತುಂಬುವ ನಿರೀಕ್ಷೆಯಿದೆ. ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಹಣಾಹಣಿಯು ಯಾವಾಗಲೂ “ಸೌತ್ ಡರ್ಬಿ” ಎಂದೇ ಪ್ರಸಿದ್ಧವಾಗಿದ್ದು, ಅಭಿಮಾನಿಗಳಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.
ಅದರಲ್ಲೂ ಉಭಯ ತಂಡಗಳ ನಡುವಣ ಪೈಪೋಟಿಯು ಸದಾ ಪೈಪೋಟಿಯಿಂದ ಕೂಡಿರುವುದರಿಂದ ಈ ಬಾರಿ ಕೂಡ ಜಿದ್ದಾಜಿದ್ದಿ ಹೋರಾಟವನ್ನು ನಿರೀಕ್ಷಿಸಬಹುದು.
ಜೀ ಕನ್ನಡದಲ್ಲಿ ಹೊಸ ಹೊಸ ರಿಯಾಲಿಟಿ ಶೋಗಳು ಪ್ರಸಾರ ಕಾಣುತ್ತಾ ಇರುತ್ತವೆ. ಎಲ್ಲಾ ರಿಯಾಲಿಟಿ ಶೋಗಳು ಸಾಕಷ್ಟು ಮನರಂಜನೆ ನೀಡುವ ರೀತಿಯಲ್ಲಿ ಇದೆ. ಈಗ ಹೊಸ ರಿಯಾಲಿಟಿ ಶೋ ಪ್ರಸಾರ ಕಾಣಲು ರೆಡಿ ಆಗಿದೆ. ಅದುವೇ ‘ಜೋಡಿ ನಂಬರ್ 1’. ಏಪ್ರಿಲ್ 4ರಂದು ರಾತ್ರಿ 9 ಗಂಟೆಗೆ ಈ ಶೋ ಪ್ರಸಾರ ಕಾಣಲಿದೆ. ‘ಅಮೃತಧಾರೆ’ ಧಾರಾವಾಹಿ ಜೋಡಿ ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ಸೇರಿದಂತೆ ಅನೇಕರು ಜಡ್ಜ್ ಸ್ಥಾನದಲ್ಲಿ ಇದ್ದಾರೆ ಅನ್ನೋದು ವಿಶೇಷ.
ಜೀ ಕನ್ನಡದಲ್ಲಿ ಕಾಮಿಡಿ ಕಿಲಾಡಿಗಳು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಸರಿಗಮಪ ಸೇರಿದಂತೆ ಅನೇಕ ರಿಯಾಲಿಟಿ ಶೋಗಳು ಪ್ರಸಾರ ಕಂಡಿವೆ. ಇದರ ಮೂಲಕ ಅನೇಕ ಪ್ರತಿಭೆಗಳಿಗೆ ವಾಹಿನಿ ವೇದಿಕೆ ಆಗಿದೆ. ಈಗ ಸೆಲೆಬ್ರಿಟಿ ಜೋಡಿಯನ್ನು ಪ್ರೇಕ್ಷಕರ ಎದುರು ತರುವ ಪ್ರಯತ್ನ ನಡೆದಿದೆ. ಈ ಶೋಗೆ ‘ಜೋಡಿ ನಂಬರ್ 1’ ಎಂದು ಹೆಸರು ಇಡಲಾಗಿದೆ.
ಹಿರಿಯ ಹಾಗೂ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೆಲೆಬ್ರಿಟಿ ಜೋಡಿಯನ್ನು ಈ ಶೋನಲ್ಲಿ ಕರೆತರಲಾಗುತ್ತಿದೆ. ಮನರಂಜನೆ ಜೊತೆಗೆ ಜೋಡಿಯ ಹಿನ್ನೆಲೆ, ಪರಸ್ಪರ ಭೇಟಿ ಆದ ಕಥೆ ಹಾಗೂ ಮದುವೆ ಆದ ಬಳಿಕ ಜೀವನದಲ್ಲಿ ಆದ ಬದಲಾವಣೆಯನ್ನು ರಿಯಾಲಿಟಿ ಶೋನಲ್ಲಿ ಹೇಳಲಾಗುತ್ತಿದೆ.
ಈ ಶೋನಲ್ಲಿ ತೀರ್ಪುಗಾರರೇ ಹೈಲೈಟ್. ಏಕೆಂದರೆ ಹಿರಿಯ ನಟಿ ಮಾಳವಿಕಾ ಅವಿನಾಶ್ ಜಡ್ಜ್ ಸ್ಥಾನದಲ್ಲಿದ್ದಾರೆ. ‘ಅಮೃತಧಾರೆ’ ಧಾರಾವಾಹಿ ಮೂಲಕ ಎಲ್ಲರ ಮೆಚ್ಚುಗೆ ಪಡೆದ ಭೂಮಿಕಾ-ಗೌತಮ್ ಅಲಿಯಾಸ್ ಛಾಯಾ ಸಿಂಗ್ ಮತ್ತು ರಾಜೇಶ್ ನಟರಂಗ, ನೆನಪಿರಲಿ ಪ್ರೇಮ್ ಈ ಶೋ ನ ತೀರ್ಪುಗಾರರು. ಇವರು ಸ್ಪರ್ಧಿಗಳಿಗೆ ಮಾರ್ಗದರ್ಶಕರೂ ಆಗಿರಲಿದ್ದಾರೆ. ತೀರ್ಪುಗಾರರು ಶೋನಲ್ಲಿರೋ ಜೋಡಿಗಳಿಗೆ ಮಾತ್ರವಲ್ಲ, ವೀಕ್ಷಕರ ದಾಂಪತ್ಯಕ್ಕೂ ಟಿಪ್ಸ್ ನೀಡುವ ಕೆಲಸ ಮಾಡಲಿದ್ದಾರೆ. ಈ ಶೋನ ಕುರಿ ಪ್ರತಾಪ್ ಮತ್ತು ಚೆಲುವೆ ಶ್ವೇತಾ ಚೆಂಗಪ್ಪ ಅವರು ನಿರೂಪಿಸಲಿದ್ದಾರೆ. ಹೀಗಾಗಿ, ಇಲ್ಲಿ ಹಾಸ್ಯಕ್ಕೆ ಯಾವುದೇ ಕೊರತೆ ಇರೋದಿಲ್ಲ.
ರುದ್ರ ಮಾಸ್ಟರ್ – ನಿರೀಕ್ಷ, ಧನರಾಜ್ – ಪ್ರಜ್ಞಾ, ರಜನಿ-ಅರುಣ್ ಗೌಡ, ನಯನಾ ನಾಗರಾಜ್ – ಸುಹಾಸ್, ಬಾಳು ಬೆಳಗುಂದಿ – ಮಾಲಾಶ್ರೀ, ಜಗ್ಗಪ್ಪ – ಸುಶ್ಮಿತಾ, ಮಿಮಿಕ್ರಿ ಗೋಪಿ – ಉಷಾರಾಣಿ, ಗೀತಾ ಭಾರತೀ ಭಟ್ – ರಾಜಾರಾಮ್ ಭಟ್, ಕೋಟೆ ಪ್ರಭಾಕರ್ – ಮಾಲತಿ ಹಾಗೂ ಅಭಿಲಾಷ್ – ಅಪೂರ್ವ ಅವರು ಜೋಡಿ.ನಂ.1 ನಲ್ಲಿ ಸ್ಪರ್ಧಿಗಳಾಗಿದ್ದಾರೆ. ಇವರಿಗೆ ವಿವಿಧ ಟಾಸ್ಕ್ಗಳು,ರ‍್ಯಾಪಿಡ್ ಫೈಯರ್ ರೀತಿಯ ಟಾಸ್ಕ್ ಇರಲಿದೆ. ಜೀ ಕನ್ನಡದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಶೋ ಪ್ರಸಾರ ಕಾಣಲಿದೆ.
ತುಮಕೂರು, ಏಪ್ರಿಲ್ 01: ದೇಶದ ವಿಕಾಸಕ್ಕೆ ಸಿದ್ಧಗಂಗಾ ಮಠದ ಪಾತ್ರ ಬಹುದೊಡ್ಡದಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ. ಸಿದ್ಧಗಂಗಾಮಠದ ವಸ್ತು ಪ್ರದರ್ಶನಾಲಯ ಮೈದಾನದಲ್ಲಿ ನಡೆದ ಡಾ.ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸಿದ್ಧಗಂಗಾ ಮಠಕ್ಕೆ ಬಂದಿರುವುದಕ್ಕೆ ನನಗೆ ಖುಷಿಯಾಗಿದೆ. ಬಡ ಮಕ್ಕಳಿಗೆ ಶಿಕ್ಷಣ, ದಾಸೋಹ ಆಶ್ರಯದ ಮೂಲಕ ಮಠ ಸೇವೆ ಸಲ್ಲಿಸಿದ್ದು, ದಯವೇ ಧರ್ಮದ ಮೂಲವಯ್ಯ ಎಂಬಂತೆ ಶ್ರೀಮಠ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
‘ಸ್ವಾಮೀಜಿಗಳ ದಾರಿ ಪವಾಡ ಎನ್ನಬಹುದು
ವೀರಶೈವ-ಲಿಂಗಾಯತ ಮಠಗಳು ತಮ್ಮದೇ ಆದ ಸೇವೆ ಸಲ್ಲಿಸುತ್ತಾ ಬಂದಿದ್ದು, ಅದರಲ್ಲಿ ಸಿದ್ಧಗಂಗಾಮಠ ಮುಂಚೂಣಿಯಲ್ಲಿದೆ. ಶಿವಕುಮಾರ ಸ್ವಾಮೀಜಿಗಳು ಇಷ್ಟು ವರ್ಷಗಳು ಒಂದೇ ಸ್ಥಳದಲ್ಲಿ ಒಂದೇ ಕಾರ್ಯ ನಿರಂತರವಾಗಿ ಮಾಡುವ ಮೂಲಕ ಜೀವನ ಸಮರ್ಪಣೆ ಮಾಡಿದ್ದಾರೆ. ಸ್ವಾಮೀಜಿಗಳ ದಾರಿಯನ್ನು ವಿಸ್ಮಯ ಹಾಗೂ ಪವಾಡ ಎನ್ನಬಹುದು ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದಲಿಂಗಸ್ವಾಮೀಜಿ ಹೇಳಿದ್ದಾರೆ. ಶಿವಕುಮಾರ ಸ್ವಾಮೀಜಿಗಳ ಬದುಕಿನಲ್ಲಿ 2 ಘಟನೆಗಳಿವೆ. ಅವೆಂದರೆ ಬಡಮಕ್ಕಳಿಗೆ ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡೋದು ಎಂದು ಶ್ರೀಗಳು ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿದ ರಾಜ್ಯಪಾಲ ಗೆಹ್ಲೋಟ್, ಮಾನವತಾ ಕಲ್ಯಾಣಕ್ಕಾಗಿ ದುಡಿದ ಶಿವಕುಮಾರ ಶ್ರಿಗಳ ಸೇವೆ ಅನನ್ಯವಾಗಿದೆ. ಸಬಕ್ ಸಾಥ್ ಸಬ್ ಕಾ ವಿಕಾಸ್ ರೀತಿ ಶ್ರೀಗಳು ಸೇವೆ ಮಾಡುತಿದ್ದರು ಎಂದು ಗುಣಗಾನ ಮಾಡಿದ್ದಾರೆ. ಶಿವಕುಮಾರ ಸ್ವಾಮಿಜಿಗಳು ಒಂದು ಶಕ್ತಿಯಾಗಿದ್ದರು. ಅನಾಥ ಮಕ್ಕಳ ಅಪ್ಪನಾಗಿ ಸಲಹಿದ ಕಥೆ ಅವರದ್ದು. ಸ್ವಾಮೀಜಿ ಮನ್ಯಷ್ಯನಿಂದ ಮಹದೇವರಾದವರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ. ತ್ರಿವಿಧ ದಾಸೋಹದ ಮೂಲಕ ಸಿದ್ಧಗಂಗಾ ಮಠ ಪ್ರಸಿದ್ಧಿಯಾಗಿದ್ದು, ಆಧ್ಯಾತ್ಮಿಕ ಕ್ಷೇತ್ರವಾಗಿ ಸಿದ್ಧಗಂಗಾ ಮಠ ಜನಪರ ಕೆಲಸ ಮಾಡಿದೆ. ಸಿದ್ಧಗಂಗಾ ಮಠ ಕೇವಲ ಧರ್ಮ ಕ್ಷೇತ್ರವಲ್ಲ. ಬದಲಾಗಿ ಶೈಕ್ಷಣಿಕ ಮತ್ತು ಸಾಮಾಜಿಕ ಕ್ರಾಂತಿಯ ಕ್ಷೇತ್ರ ಎಂದು ಗೃಹ ಸಚಿವ ಡಾ.ಪರಮೇಶ್ವರ್ ಕೂಡ ಶ್ರೀಗಳ ಸಮಾಜ ಸೇವೆಯನ್ನು ಕೊಂಡಾಡಿದ್ದಾರೆ. ಇದೇ ವೇಳೆ ರಾಷ್ಟ್ರಪತಿಗಳಿಗೆ ಮಠದ ಪರವಾಗಿ ಬಸವಣ್ಣನ ಮೂರ್ತಿಯನ್ನ ಸಿದ್ದಲಿಂಗ ಸ್ವಾಮೀಜಿ ಉಡುಗೊರೆಯಾಗಿ ನೀಡಿದ್ದಾರೆ.
ಬೆಂಗಳೂರು (ಏ. 01): ಸೈಬರ್ ಅಪರಾಧಿಗಳು (Cyber Attack) ಜನರನ್ನು ವಂಚಿಸಲು ನಿರಂತರವಾಗಿ ಹೊಸ ವಿಧಾನಗಳನ್ನು ಬಳಸುತ್ತಿದ್ದಾರೆ. ಡಿಜಿಟಲ್ ಬಂಧನದ ನಂತರ, ಹೊಸ ರೀತಿಯ ವಂಚನೆಗಳು ಇದೀಗ ಚಾಲ್ತಿಯಲ್ಲಿದೆ. ಹ್ಯಾಕರ್‌ಗಳು ಬಳಕೆದಾರರ ಫೋನ್‌ಗಳನ್ನು ಹೈಜಾಕ್ ಮಾಡಿ ವಂಚನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಹ್ಯಾಕರ್‌ಗಳು ಮಹಿಳೆಯೊಬ್ಬರಿಗೆ 13 ರೂಪಾಯಿ ಪಾವತಿಸಲು ಕೇಳಿದರು. ಇದರ ಬೆನ್ನಲ್ಲೇ ಹ್ಯಾಕರ್ಸ್ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿದ್ದಾರೆ. ಇದು ನಿಮಗೆ ಆಗದಂತೆ ತಡೆಯಲು, ನೀವು ಏನೆಲ್ಲ ಎಚ್ಚರವಹಿಸಬೇಕು ಎಂಬುದನ್ನು ನಾವು ಹೇಳುತ್ತೇವೆ.
ಫೋನ್ ಅನ್ನು ಹೇಗೆ ಹೈಜಾಕ್ ಮಾಡುತ್ತಾರೆ?
ವರದಿಗಳ ಪ್ರಕಾರ, ಸೈಬರ್ ಅಪರಾಧಿಗಳು ಮುಂಬೈನಲ್ಲಿ 78 ವರ್ಷದ ಮಹಿಳೆಯ ಫೋನ್ ಅನ್ನು ಹೈಜಾಕ್ ಮಾಡಿ ಲಕ್ಷಾಂತರ ರೂಪಾಯಿಗಳನ್ನು ಕದ್ದಿದ್ದಾರೆ. ವಂಚಕರು ಚಾಣಾಕ್ಷತನದಿಂದ ಅವರ ಬ್ಯಾಂಕ್ ಖಾತೆ ವಿವರಗಳನ್ನು ಪಡೆದು 2.5 ಮಿಲಿಯನ್ ರೂಪಾಯಿಗಳನ್ನು ಕದ್ದಿದ್ದಾರೆ. ಸೈಬರ್ ಅಪರಾಧಿಗಳು ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ಪ್ರಕಾರ, ಸೈಬರ್ ಅಪರಾಧಿಗಳು ತ್ವರಿತ ಸಂದೇಶ ವೇದಿಕೆ ವಾಟ್ಸ್ಆ್ಯಪ್ ಮೂಲಕ ಮಹಿಳೆಯನ್ನು ಸಂಪರ್ಕಿಸಿ ಫೈಲ್ ಡೌನ್‌ಲೋಡ್ ಮಾಡಲು ಕೇಳಿಕೊಂಡಿದ್ದಾರೆ.
ವಿದ್ಯುತ್ ಇಲಾಖೆಯ ಅಧಿಕಾರಿಗಳಂತೆ ನಟಿಸಿದ ಹ್ಯಾಕರ್‌ಗಳು, ಮಹಿಳೆಯ ವಿದ್ಯುತ್ ಸಂಪರ್ಕದಲ್ಲಿ ತಮ್ಮ ಹೆಸರನ್ನು ನವೀಕರಿಸಲು ಕೇಳಿಕೊಂಡರು. ಆ ಸಮಯದಲ್ಲಿ ಮಹಿಳೆ ಕೇರಳಕ್ಕೆ ಪ್ರವಾಸದಲ್ಲಿದ್ದರು. ಕರೆ ಸರ್ಕಾರಿ ಇಲಾಖೆಯಿಂದ ಬಂದಿದೆ ಎಂದು ಭಾವಿಸಿ, ಹ್ಯಾಕರ್‌ಗಳು ಒದಗಿಸಿದ ವಿವರಗಳನ್ನು ಬಳಸಿಕೊಂಡು ರೂ. 13 ಪಾವತಿಸಿದರು. ನಂತರ ಹ್ಯಾಕರ್‌ಗಳು ಮಹಿಳೆಯ ಫೋನ್ ಅನ್ನು ಹೈಜಾಕ್ ಮಾಡಿ, ಅವರ ಬ್ಯಾಂಕಿಂಗ್ ವಿವರಗಳನ್ನು ಕದ್ದು ಅವರ ಖಾತೆಯಿಂದ ₹2.5 ಮಿಲಿಯನ್ ಪಡೆದುಕೊಂಡಿದ್ದಾರೆ.
ಸೈಬರ್ ಅಪರಾಧಿಗಳು ಎಸ್ಎಮ್ಎಸ್, ವಾಟ್ಸ್ಆ್ಯಪ್ ಸಂದೇಶಗಳು, ಇಮೇಲ್‌ಗಳು, ನಕಲಿ ಕರೆಗಳು ಇತ್ಯಾದಿಗಳ ಮೂಲಕ ಜನರನ್ನು ಸಂಪರ್ಕಿಸುತ್ತಾರೆ. ಅವರು ಸರ್ಕಾರಿ ಇಲಾಖೆ, ಬ್ಯಾಂಕ್ ಅಥವಾ ಮೊಬೈಲ್ ಕಂಪನಿಯ ಅಧಿಕಾರಿಗಳಂತೆ ನಟಿಸಿ ನಂತರ ಅವರನ್ನು ವಂಚಿಸುತ್ತಾರೆ.
ಯಾರಾದರೂ ನಿಮ್ಮನ್ನು ಎಸ್ಎಮ್ಎಸ್, ವಾಟ್ಸ್ಆ್ಯಪ್ ಅಥವಾ ಇಮೇಲ್ ಮೂಲಕ ಫೈಲ್ ಡೌನ್‌ಲೋಡ್ ಮಾಡಲು ಅಥವಾ ಲಿಂಕ್ ತೆರೆಯಲು ಕೇಳಿದರೆ, ಅದನ್ನು ನಿರ್ಲಕ್ಷಿಸಿ.
ಅಂತಹ ಲಿಂಕ್‌ಗಳು ಮತ್ತು ಫೈಲ್‌ಗಳು ಮಾಲ್‌ವೇರ್‌ಗಳನ್ನು ಒಳಗೊಂಡಿರುತ್ತವೆ ಮತ್ತು ನಿಮ್ಮ ಫೋನ್ ಅನ್ನು ಹ್ಯಾಕ್ ಮಾಡಬಹುದು.
ಇದಲ್ಲದೆ, ನಿಮ್ಮ ಪಿನ್, ಒಟಿಪಿ ಇತ್ಯಾದಿಗಳನ್ನು ನೀವು ಯಾರೊಂದಿಗೂ ಹಂಚಿಕೊಳ್ಳಬಾರದು.
ನಿಮ್ಮ ವೈಯಕ್ತಿಕ ದಾಖಲೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಹ್ಯಾಕರ್‌ಗಳು ಕೆಲವೊಮ್ಮೆ ನಿಮ್ಮ ದಾಖಲೆಗಳನ್ನು ಬಳಸಿಕೊಂಡು ನಕಲಿ ಸಿಮ್ ಕಾರ್ಡ್ ಪಡೆಯಬಹುದು ಮತ್ತು ನಂತರ ನಿಮ್ಮನ್ನು ವಂಚಿಸಬಹುದು.
ಬೆಂಗಳೂರು, ಏಪ್ರಿಲ್ 1: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತವಾಗಿ ಏರಿಕೆ ಕಂಡಿವೆ. ನಿನ್ನೆ ಗ್ರಾಮ್ಗೆ 185 ರೂ ಹೆಚ್ಚಿದ್ದ ಚಿನ್ನದ ಬೆಲೆ ಇಂದು ಬುಧವಾರ 200 ರೂ ಏರಿದೆ. ಎರಡು ದಿನದಲ್ಲಿ ಬಹುತೇಕ 400 ರೂಗಳಷ್ಟು ಹೆಚ್ಚಳ ಆಗಿದೆ. ಅಪರಂಜಿ ಚಿನ್ನದ ಬೆಲೆ (Gold Rates) 15,000 ರೂ ಗಡಿದಾಟಿದೆ. ವಿದೇಶಗಳಲ್ಲೂ ಅನೇಕ ಕಡೆ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿದೆ. ಇದೇ ವೇಳೆ, ಬೆಳ್ಳಿ ಬೆಲೆಯೂ ನಿನ್ನೆಯಂತೆ ಇವತ್ತೂ 5 ರೂ ಹೆಚ್ಚಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,38,850 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,51,480 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,38,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 25,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 1ಕ್ಕೆ)
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,148 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,885 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,361 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 255 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,148 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,885 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 255 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಈಗ ಕನ್ನಡದಲ್ಲಿ ಹಲವಾರು ಯೂಟ್ಯೂಬರ್ಗಳಿದ್ದಾರೆ, ಆದರೆ ಕೋವಿಡ್ಗೆ ಮುಂಚೆ ಕನ್ನಡದಲ್ಲಿ ಇಷ್ಟೋಂದು ಯೂಟ್ಯೂಬರ್ಗಳು (YouTube) ಇರಲಿಲ್ಲ. ಇದ್ದರೂ ಒಳ್ಳೆಯ ಕಂಟೆಂಟ್ಗಳನ್ನೇನೂ ನೀಡುತ್ತಿರಲಿಲ್ಲ. ಎಲ್ಲೋ ಕೆಲವು ಯೂಟ್ಯೂಬರ್ಗಳು ಅಥವಾ ಯೂಟ್ಯೂಬ್ ಚಾನೆಲ್ಗಳು ಮಾತ್ರವೇ ಒಳ್ಳೆಯ ಕಂಟೆಂಟ್ ಅನ್ನು ಕೊಡುತ್ತಿದ್ದವು. ಅವುಗಳಲ್ಲಿ ‘ಕೆಇಬಿ’ (ಕರ್ನಾಟಕ ಎಂಟರ್ಟೈನ್ಮೆಂಟ್ ಬೋರ್ಡ್) ಸಹ ಒಂದು. ಡಾಲಿ ಧನಂಜಯ್ ಮತ್ತು ಗೆಳೆಯರು ಪ್ರಾರಂಭಿಸಿದ್ದ ಯೂಟ್ಯೂಬ್ ಚಾನೆಲ್ ಇದಾಗಿತ್ತು. ಈ ಯೂಟ್ಯೂಬ್ ಚಾನೆಲ್ನಲ್ಲಿ ಕೆಲಸ ಮಾಡಿದ್ದ ಹಲವರು ಈಗ ಕನ್ನಡ ಚಿತ್ರರಂಗದ ಜನಪ್ರಿಯ ನಟ, ನಿರ್ದೇಶಕರಾಗಿದ್ದಾರೆ. ಆದರೆ ಇದೀಗ ಹಲವಾರು ವರ್ಷಗಳ ಬಳಿಕ ಮತ್ತೆ ‘ಕೆಇಬಿ’ ಸಕ್ರಿಯವಾಗಿದ್ದು, ‘ಕೆಇಬಿ’ ಮೂಲಕ ಸಿನಿಮಾ ಮಾಡುತ್ತಿದ್ದಾರೆ.
ಡಾಲಿ ಧನಂಜಯ್, ಮೈಸೂರು ಪೂರ್ಣ, ನಾಗಭೂಷಣ್, ಶಶಾಂಕ್ ಸೋಗಾಲ, ಮಹದೇವ ಪ್ರಸಾದ್ ಇನ್ನೂ ಹಲವಾರು ಪ್ರತಿಭಾವಂತರು ಕೆಇಬಿಗೆ ಕೆಲಸ ಮಾಡುತ್ತಿದ್ದರು. ಆದರೆ ಕಳೆದ ಏಳು ವರ್ಷಗಳಿಂದಲೂ ಈ ಚಾನೆಲ್ನಲ್ಲಿ ಯಾವುದೇ ವಿಡಿಯೋ ಹಂಚಿಕೊಂಡಿರಲಿಲ್ಲ. ಆದರೆ ಇದೀಗ ‘ಕೆಇಬಿ’ಯ ಹಳೆಯ ಸದಸ್ಯರೆಲ್ಲ ಸೇರಿ ಹೊಸದೊಂದು ವಿಡಿಯೋವನ್ನು ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದ್ದು, ‘ಕೆಇಬಿ’ ಈಗ ಯೂಟ್ಯೂಬ್ ವಿಡಿಯೋ ಅಲ್ಲ ಬದಲಿಗೆ ಸಿನಿಮಾ ಮಾಡಲಿದೆ ಎಂದು ಘೋಷಿಸಿದ್ದಾರೆ.
‘ಕೆಇಬಿ’ ತಂಡದವರು ಸೇರಿಕೊಂಡು ಇದೀಗ ಹಾಸ್ಯಮಯ ಸಿನಿಮಾ ಮಾಡುತ್ತಿದ್ದು, ಮೈಸೂರು ಪೂರ್ಣ ಅವರು ಈ ಸಿನಿಮಾದ ಚಿತ್ರಕತೆ ಬರೆದಿದ್ದಾರೆ. ಡಾಲಿ ಧನಂಜಯ್ ಅವರು ಸಿನಿಮಾದ ನಿರ್ಮಾಣ ಮಾಡಲಿದ್ದಾರೆ. ಕೆಇಬಿ ಮತ್ತು ಡಾಲಿ ಪಿಚರ್ಸ್ ಒಟ್ಟಿಗೆ ಈ ಸಿನಿಮಾವನ್ನು ಪ್ರೆಸೆಂಟ್ ಮಾಡಲಿದ್ದಾರೆ. ಸಿನಿಮಾದ ಪೋಸ್ಟರ್ ಒಂದನ್ನು ಇಂದು (ಏಪ್ರಿಲ್ 01) ಬಿಡುಗಡೆ ಮಾಡಲಾಗಿದೆ. ಪೋಸ್ಟರ್ನಲ್ಲಿ ಸಿನಿಮಾದ ಹೆಸರನ್ನು ಚೈನೀಸ್ ಭಾಷೆಯಲ್ಲಿ ನೀಡಲಾಗಿದ್ದು, ‘ನಮ್ಮದು ಪ್ಯಾನ್ ಯೂನಿವರ್ಸ್’ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ.
ಡಾಲಿ ಧನಂಜಯ್ ಅವರು ಸಹ ಈ ಸಿನಿಮಾ ಬಗ್ಗೆ ಬರೆದುಕೊಂಡಿದ್ದು, ‘ಮೈಸೂರು ಪೂರ್ಣ ಅವರು ಬರೆದಿದ್ದ ಈ ಚಿತ್ರಕತೆ ಹಲವು ತಿಂಗಳುಗಳಿಂದ ನನ್ನ ಬಳಿ ಇತ್ತು, ಆದರೆ ಓದಿರಲಿಲ್ಲ, ಇತ್ತೀಚೆಗೆ ಓದಿದಾಗ ಇದು ಖಂಡಿತ ಸಿನಿಮಾ ಆಗಬೇಕಾದ ಸಿನಿಮಾ ಎನಿಸಿತು. ಇದೊಂದು ಅದ್ಭುತವಾದ ಕತೆ’ ಎಂದಿದ್ದಾರೆ. ಸಿನಿಮಾ ಬಗ್ಗೆ ಕೆಇಬಿ ಹಂಚಿಕೊಂಡಿರುವ ವಿಡಿಯೋನಲ್ಲಿ ಡಾಲಿ ಧನಂಜಯ್ ಅವರ ಧ್ವನಿಯೂ ಇದ್ದು, ‘ಚಿತ್ರಕತೆ ಓದಿದ್ದೇನೆ, ಸಿನಿಮಾ ಮಾಡೋಣ’ ಎಂದಿದ್ದಾರೆ ಡಾಲಿ.
ಮಹಿಳಾ ಏಕದಿನ ಅಂತರಾಷ್ಟ್ರೀಯ (ODI) ಕ್ರಿಕೆಟ್ ಇತಿಹಾಸದಲ್ಲಿ ನ್ಯೂಝಿಲೆಂಡ್ ತಂಡ ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ವೆಲ್ಲಿಂಗ್ಟನ್ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಝಿಲೆಂಡ್ ಮಹಿಳಾ ತಂಡವು 347 ರನ್‌ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ಈ ವಿಶ್ವ ದಾಖಲೆ ಬರೆದಿದೆ.
ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವು ಮೊದಲು ಬ್ಯಾಟ್ ಮಾಡಿ 6 ವಿಕೆಟ್ ನಷ್ಟಕ್ಕೆ 346 ರನ್‌ಗಳ ಸವಾಲಿನ ಮೊತ್ತವನ್ನು ಪೇರಿಸಿತ್ತು. ಇದನ್ನು ಬೆನ್ನಟ್ಟಿದ ನ್ಯೂಝಿಲೆಂಡ್ ತಂಡವು ಕೇವಲ 2 ಎಸೆತಗಳು ಬಾಕಿ ಇರುವಂತೆಯೇ 350/8 ರನ್ ಗಳಿಸಿ ಐತಿಹಾಸಿಕ ಜಯ ದಾಖಲಿಸಿದೆ.
ಅಮೆಲಿಯಾ ಕೆರ್ ಸ್ಮರಣೀಯ ಇನ್ನಿಂಗ್ಸ್:
ಈ ಗೆಲುವಿನ ರೂವಾರಿ ನ್ಯೂಝಿಲೆಂಡ್ ತಂಡದ ನಾಯಕಿ ಅಮೆಲಿಯಾ ಕೆರ್. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆರ್ ಕೇವಲ 139 ಎಸೆತಗಳಲ್ಲಿ ಅಜೇಯ 179 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇವರಿಗೆ ಸಾಥ್ ನೀಡಿದ ವಿಕೆಟ್ ಕೀಪರ್ ಇಸಾಬೆಲ್ಲಾ ಗೇಜ್ 48 ಎಸೆತಗಳಲ್ಲಿ ಭರ್ಜರಿ 68 ರನ್ ಗಳಿಸಿದರು.
ಹಳೆಯ ದಾಖಲೆ ಉಡೀಸ್:
ಈ ಹಿಂದೆ 2025ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 341 ರನ್ ಬೆನ್ನಟ್ಟಿದ್ದು ಇದುವರೆಗಿನ ದಾಖಲೆಯಾಗಿತ್ತು. ಈಗ 347 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ನ್ಯೂಝಿಲೆಂಡ್ ಆ ದಾಖಲೆಯನ್ನು ಅಳಿಸಿ ಹಾಕಿ ಅಗ್ರಸ್ಥಾನಕ್ಕೇರಿದೆ.
ಬೆಂಗಳೂರು (ಏ. 01): ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕೌಂಟರ್‌ಪಾಯಿಂಟ್ ವರದಿಯ ಪ್ರಕಾರ, 2026 ರ ಮೊದಲ ಒಂಬತ್ತು ವಾರಗಳಲ್ಲಿ (ಮಾರ್ಚ್ ಮೊದಲ ವಾರದವರೆಗೆ) ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ ಕುಸಿತ ಕಂಡುಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮಾರಾಟವು ಶೇ. 9 ರಷ್ಟು ಕಡಿಮೆಯಾಗಿದೆ. ಫೋನ್ ಮಾರಾಟದಲ್ಲಿನ ಕುಸಿತಕ್ಕೆ ಪ್ರಮುಖ ಕಾರಣವೆಂದರೆ ಮೆಮೊರಿ ಘಟಕಗಳ ಬೆಲೆಗಳ ಏರಿಕೆ ಎಂದು ಹೇಳಲಾಗುತ್ತದೆ. ಮೆಮೊರಿಯ ಬೆಲೆ ಏರಿಕೆಯಿಂದಾಗಿ, ವಿವೋ (Vivo) ಮತ್ತು ಒಪ್ಪೋದಂತಹ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ತಯಾರಕರು ತಮ್ಮ ಅಸ್ತಿತ್ವದಲ್ಲಿರುವ ಮಾದರಿಗಳ ಬೆಲೆಗಳನ್ನು ಹೆಚ್ಚಿಸಿದ್ದಾರೆ. ಹೀಗಿದ್ದರೂ ಫೋನುಗಳ ಬಿಡುಗಡೆ ಕಾರ್ಯಕ್ರಮ ಭರ್ಜರಿ ಆಗಿದೆ.
ಏಪ್ರಿಲ್ ಮೊದಲ ವಾರವೇ ಒಂದು ಅಥವಾ ಎರಡು ಅಲ್ಲ, ನಾಲ್ಕು ಹೊಸ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗುತ್ತಿವೆ. ಈ ವಾರ, ಐಕ್ಯೂ, ರಿಯಲ್ ಮಿ ಮತ್ತು ವಿವೋನಿಂದ ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಪಾದಾರ್ಪಣೆ ಮಾಡಲಿವೆ.
ಐಕ್ಯೂ 15 ಅಪೆಕ್ಸ್
ಐಕ್ಯೂ ನಿಂದ ಈ ಹೊಸ ಮತ್ತು ಮುಂಬರುವ ಫೋನ್ ಇಂದು ಏಪ್ರಿಲ್ 1 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ. ಈ ಹ್ಯಾಂಡ್‌ಸೆಟ್‌ಗಾಗಿ ಅಮೆಜಾನ್‌ನಲ್ಲಿ ಮೈಕ್ರೋಸೈಟ್ ರಚಿಸಲಾಗಿದ್ದು, ಇದು 4 ಮಿಲಿಯನ್‌ಗಿಂತ ಹೆಚ್ಚಿನ AnTuTu ಸ್ಕೋರ್‌ನೊಂದಿಗೆ ಸ್ನಾಪ್‌ಡ್ರಾಗನ್ 8 ಎಲೈಟ್ ಜನರೇಷನ್ 5 ಪ್ರೊಸೆಸರ್‌ನೊಂದಿಗೆ ಬರಲಿದೆ. ಹೆಚ್ಚುವರಿಯಾಗಿ, ಫೋನ್ ಕಂಪನಿಯಿಂದ ಐದು ವರ್ಷಗಳ OS ನವೀಕರಣಗಳು ಮತ್ತು ಏಳು ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯುತ್ತದೆ. ಈ ಹ್ಯಾಂಡ್‌ಸೆಟ್ 2K M14 OLED ಡಿಸ್ಪ್ಲೇ, ಸೂಪರ್ ಕಂಪ್ಯೂಟಿಂಗ್ Q3 ಚಿಪ್ ಮತ್ತು 50-ಮೆಗಾಪಿಕ್ಸೆಲ್ ಪೆರಿಸ್ಕೋಪ್ ಕ್ಯಾಮೆರಾವನ್ನು ಹೊಂದಿರುತ್ತದೆ.
ರಿಯಲ್ ಮಿ 16 5G
ಈ ಮುಂಬರುವ ರಿಯಲ್‌ಮಿ ಫೋನ್ ನಾಳೆ, ಏಪ್ರಿಲ್ 2 ರಂದು ಮಧ್ಯಾಹ್ನ 12 ಗಂಟೆಗೆ ಗ್ರಾಹಕರಿಗಾಗಿ ಬಿಡುಗಡೆಯಾಗಲಿದೆ. ಇದು ಫ್ಲಿಪ್‌ಕಾರ್ಟ್ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ. ಈ ಹ್ಯಾಂಡ್‌ಸೆಟ್‌ನ ಮೈಕ್ರೋಸೈಟ್ ಇದು ಸೆಲ್ಫಿ ಮಿರರ್ ಹೊಂದಿರುವ ಭಾರತದ ಮೊದಲ ಫೋನ್ ಆಗಿದೆ. ಇದು 6.57-ಇಂಚಿನ ಡಿಸ್ಪ್ಲೇ, ದೊಡ್ಡ 7000 mAh ಬ್ಯಾಟರಿ, 50-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಮತ್ತು 50-ಮೆಗಾಪಿಕ್ಸೆಲ್ ಸೋನಿ ಹಿಂಭಾಗದ ಕ್ಯಾಮೆರಾವನ್ನು ಒಳಗೊಂಡಿದೆ.
200-ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾ ಸೆನ್ಸರ್ ಹೊಂದಿರುವ ಈ ವಿವೋ ಫೋನ್ ನಾಳೆ, ಏಪ್ರಿಲ್ 2 ರಂದು ಮಧ್ಯಾಹ್ನ 12 ಗಂಟೆಗೆ ಗ್ರಾಹಕರಿಗೆ ಬಿಡುಗಡೆಯಾಗಲಿದೆ. ಡಾರ್ಕ್ನೆಸ್ ಗ್ಲೋ ತಂತ್ರಜ್ಞಾನ ಹೊಂದಿರುವ ವಿವೋದ ಮೊದಲ ಫೋನ್ ಇದಾಗಿದೆ. ಇದು 50-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 8-ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ, 200-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 7000 mAh ಬ್ಯಾಟರಿ, 90-ವ್ಯಾಟ್ ವೇಗದ ಚಾರ್ಜಿಂಗ್ ಮತ್ತು 120 Hz ರಿಫ್ರೆಶ್ ದರದಂತಹ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ. ಈ ಫೋನ್ ಕಂಪನಿಯ ವೆಬ್‌ಸೈಟ್‌ನಲ್ಲಿ ಹಾಗೂ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ.
ರಿಯಲ್ ಮಿ ನೋಟ್ 15 SE 5G
ಈ ವಿಶೇಷ ಆವೃತ್ತಿಯ ರೆಡ್‌ಮಿ ನಾಳೆ, ಏಪ್ರಿಲ್ 2 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಮುಂಬರುವ ಫೋನ್‌ಗಾಗಿ ಫ್ಲಿಪ್‌ಕಾರ್ಟ್‌ನಲ್ಲಿ ಮೈಕ್ರೋಸೈಟ್ ರಚಿಸಲಾಗಿದ್ದು, ಇದು 7.35mm ತೆಳ್ಳಗಿರುತ್ತದೆ. ಇದು ಮೂರು ಬಣ್ಣ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ. ಇದು 4K ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುವ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದೊಂದಿಗೆ ಬರುತ್ತದೆ. ಇದಲ್ಲದೆ, 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5800 mAh ಬ್ಯಾಟರಿಯಿಂದ ಚಾಲಿತವಾಗಲಿದೆ. ವೇಗ ಮತ್ತು ಬಹುಕಾರ್ಯಕ್ಕಾಗಿ, ಇದು ಸ್ನಾಪ್‌ಡ್ರಾಗನ್ 6 ನೇ ಜನರೇಷನ್ 3 ಪ್ರೊಸೆಸರ್‌ನಿಂದ ಚಾಲಿತವಾಗಲಿದೆ. ಈ ಫೋನ್ Mi.com ಜೊತೆಗೆ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುತ್ತದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಒಂದು ಸಿಹಿ ಸುದ್ದಿ ನೀಡಿದೆ. ಪ್ರಸ್ತುತ ಬ್ಯಾಂಕ್‌ನಲ್ಲಿ ಖಾಲಿ ಇರುವ ‘ಸ್ಥಳೀಯ ಬ್ಯಾಂಕ್ ಅಧಿಕಾರಿ’ (Local Bank Officer – LBO) ಹುದ್ದೆಗಳ ಭರ್ತಿಗೆ ಅಧಿಕೃತವಾಗಿ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 1,000 ಹುದ್ದೆಗಳು ಲಭ್ಯವಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಸಲು ಪ್ರಮುಖ ಮಾಹಿತಿ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ punjabandsind.bank.inಗೆ ಭೇಟಿ ನೀಡುವ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ನೆನಪಿಡಿ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 2026ರ ಏಪ್ರಿಲ್ 20 ಕೊನೆಯ ದಿನಾಂಕವಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:
ಶೈಕ್ಷಣಿಕ ಅರ್ಹತೆ: ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Degree) ಅಥವಾ ಅದಕ್ಕೆ ಸಮಾನವಾದ ವಿದ್ಯಾರ್ಹತೆಯನ್ನು ಹೊಂದಿರಬೇಕು.
ವಯೋಮಿತಿ: ಅಭ್ಯರ್ಥಿಗಳ ವಯಸ್ಸು ಕನಿಷ್ಠ 20 ವರ್ಷ ಹಾಗೂ ಗರಿಷ್ಠ 30 ವರ್ಷಗಳ ಒಳಗಿರಬೇಕು. ಅಂದರೆ, ಅಭ್ಯರ್ಥಿಗಳು 1996ರ ಮಾರ್ಚ್ 2ಕ್ಕಿಂತ ಮೊದಲು ಮತ್ತು 2006ರ ಮಾರ್ಚ್ 1ರ ನಂತರ ಜನಿಸಿರಬಾರದು. ಸರ್ಕಾರದ ನಿಯಮಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.
ಬ್ಯಾಂಕ್ ಅಧಿಕಾರಿಗಳ ಆಯ್ಕೆಯು ಅತ್ಯಂತ ಪಾರದರ್ಶಕವಾಗಿ ನಡೆಯಲಿದ್ದು, ಪ್ರಕ್ರಿಯೆಯು ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ:
ಲಿಖಿತ ಪರೀಕ್ಷೆ: 120 ಅಂಕಗಳಿಗೆ ಪರೀಕ್ಷೆ ನಡೆಯಲಿದ್ದು, ಒಟ್ಟು 120 ಪ್ರಶ್ನೆಗಳಿರುತ್ತವೆ. ಅಭ್ಯರ್ಥಿಗಳಿಗೆ 2 ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ. ಇದರಲ್ಲಿ ಇಂಗ್ಲಿಷ್ ಭಾಷೆ, ಬ್ಯಾಂಕಿಂಗ್ ಜ್ಞಾನ, ಸಾಮಾನ್ಯ ಅರಿವು (General Awareness), ಅರ್ಥಶಾಸ್ತ್ರ ಮತ್ತು ಕಂಪ್ಯೂಟರ್ ಯೋಗ್ಯತೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಅರ್ಹತಾ ಅಂಕಗಳು: ಸಾಮಾನ್ಯ ಮತ್ತು EWS ವರ್ಗದವರು ಕನಿಷ್ಠ ಶೇ.40 ಅಂಕಗಳನ್ನು ಪಡೆಯಬೇಕು. ಇನ್ನುಳಿದ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 35% ಅಂಕಗಳನ್ನು ನಿಗದಿಪಡಿಸಲಾಗಿದೆ.
ನಂತರದ ಹಂತಗಳು: ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಸ್ಕ್ರೀನಿಂಗ್, ವೈಯಕ್ತಿಕ ಸಂದರ್ಶನ ಮತ್ತು ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆಗಳನ್ನು ನಡೆಸಲಾಗುವುದು. ಇವೆಲ್ಲದರ ಆಧಾರದ ಮೇಲೆ ಅಂತಿಮ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕದ ವಿವರ:
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಶುಲ್ಕ ಪಾವತಿಸಬೇಕಾಗುತ್ತದೆ.
SC/ST/PWD ಅಭ್ಯರ್ಥಿಗಳಿಗೆ: 100 ರೂ.
ಸಾಮಾನ್ಯ, OBC ಮತ್ತು ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ: 850ರೂ.
ಗಮನಿಸಿ: ನಗದು, ಚೆಕ್ ಅಥವಾ ಡಿಡಿ ರೂಪದಲ್ಲಿ ಶುಲ್ಕವನ್ನು ಸ್ವೀಕರಿಸಲಾಗುವುದಿಲ್ಲ. ಕೇವಲ ಆನ್‌ಲೈನ್ ಪಾವತಿಗೆ ಮಾತ್ರ ಅವಕಾಶವಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಪರಸ್ಪರ ಪ್ರೀತಿ ಮಾಡಿದರು ನಂತರ ಬೇರೆ ಆದರು, ಈಗ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುವುದಿಲ್ಲ, ಅನುಷ್ಕಾ ಮೋಸ ಮಾಡಿದರು.. ಹೀಗೆ ವದಂತಿಗಳ ಪಟ್ಟಿ ದೊಡ್ಡದಾಗುತ್ತಲೇ ಹೋಗುತ್ತದೆ. ಆದರೆ, ಯಾವುದಕ್ಕೂ ಇವರು ಸ್ಪಷ್ಟನೆ ನೀಡಿಲ್ಲ. ಈಗ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಗೆಳೆತನ ಹೇಗಿದೆ ಎಂಬುದರ ಸ್ಪಷ್ಟ ಚಿತ್ರಣ ಸಿಕ್ಕಿದೆ. ಇಬ್ಬರೂ ಒಳ್ಳೆಯ ಬಾಂಧವ್ಯವನ್ನು ಮುಂದುವರಿಸಿಕೊಂಡು ಹೋಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಅನುಷ್ಕಾ ಶೆಟ್ಟಿ ಅವರು ‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ಬಳಿಕ ಅಪಾರ ಜನಪ್ರಿಯತೆ ಪಡೆದರು. ಅವರಿಗೆ ಸಿಕ್ಕ ಜನಪ್ರಿಯತೆಗೆ ಅವರು ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳಬೇಕಿತ್ತು. ಆದರೆ, ಹಾಗೆ ಮಾಡಿಲ್ಲ. ಬದಲಿಗೆ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆದರು. ಅಲ್ಲೊಂದು, ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸಿದರು. ಈಗ ಅನುಷ್ಕಾ ಶೆಟ್ಟಿ ಅವರ ಹೊಸ ಸಿನಿಮಾ ‘ಕಥನಾರ್’ ರಿಲೀಸ್ಗೆ ರೆಡಿ ಇದೆ. ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಇದಕ್ಕೆ ಪ್ರಭಾಸ್ ಬೆಂಬಲ ಕೊಟ್ಟಿದ್ದಾರೆ.
‘ಕಥನಾರ್’ ಸಿನಿಮಾದ ಟ್ರೇಲರ್ ಅನ್ನು ಪ್ರಭಾಸ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಟ್ರೇಲರ್ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಈ ಪೋಸ್ಟ್ ಅಲ್ಲಿ ಅವರು ಅನುಷ್ಕಾ ಶೆಟ್ಟಿ ಅವರನ್ನು ಟ್ಯಾಗ್ ಮಾಡಿದ್ದಾರೆ. ಇವರ ಗೆಳೆತನ ನೋಡಿ ಅನೇಕರು ಸಂತಸ ಹೊರಹಾಕಿದ್ದಾರೆ.
ಫ್ಯಾಂಟಸಿ ಶೈಲಿಯಲ್ಲಿ ‘ಕಥನಾರ್’ ಸಿನಿಮಾ ಮೂಡಿ ಬಂದಿದೆ. ಈ ಚಿತ್ರದಲ್ಲಿ ಜಯಸೂರ್ಯ ನಾಯಕನಾಗಿ ನಟಿಸಿದ್ದಾರೆ. ಅನುಷ್ಕಾ ಶೆಟ್ಟಿ, ನೀಲಿ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಭುದೇವ, ವಿನೀತ್ ಮತ್ತು ಸಂದೀಪ್ ಮಾಸ್ಟರ್ ಸೇರಿದಂತೆ ಇನ್ನೂ ಅನೇಕರು ಸಿನಿಮಾದಲ್ಲಿದ್ದು, ಮೋಹನ್‌ಲಾಲ್ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ರೋಜನ್ ಥಾಮಸ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.