ಬೆಂಗಳೂರು, ಮಾರ್ಚ್ 23: ಬೆಂಗಳೂರು ನಗರದ ಸೂರ್ಯ ಮ್ಯಾನೇಜ್ಮೆಂಟ್ ಸರ್ವಿಸ್ ಸಂಸ್ಥೆಯ ಮಾಲೀಕ ರಾಮಾಂಜಿ ಎಂಬಾತ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಇತರ ಮಹಿಳೆಯರಿಗೆ ಮದುವೆಯಾಗುವ ನೆಪದಲ್ಲಿ ವಂಚಿಸಿರುವ ಆರೋಪದ ಮೇಲೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 38 ವರ್ಷದ ರಾಮಾಂಜಿ ಐವರು ಹೆಣ್ಣುಮಕ್ಕಳಿಗೆ ಮೋಸ ಮಾಡಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ.
ಪತಿ ಕಳೆದುಕೊಂಡವರು, ಪತಿಯಿಂದ ವಿಚ್ಛೇದನ ಪಡೆದು ದೂರವಾದವರು ಅಥವಾ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಹಿಳೆಯರನ್ನು ಈತ ಬಲೆಗೆ ಕೆಡವುತ್ತಿದ್ದ ಎನ್ನಲಾಗಿದೆ. ಮದುವೆಯ ಭರವಸೆ ನೀಡಿ ಅವರೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ನಂತರ ಹಣ ಮತ್ತು ಚಿನ್ನಾಭರಣಗಳನ್ನು ಪಡೆದು ಮೋಸ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈತ ಹೌಸ್ ಕೀಪಿಂಗ್ ಮತ್ತು ಸೆಕ್ಯೂರಿಟಿ ಸೇವೆಗಳನ್ನು ಒದಗಿಸುತ್ತಿದ್ದ ಸಂಸ್ಥೆಯ ಮುಖ್ಯಸ್ಥನಾಗಿದ್ದು, 60ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದ. ಪ್ರಸ್ತುತ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್: ದಿ ರಿವೆಂಜ್’ ಚಿತ್ರವು ಪ್ರಸ್ತುತ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಕೇವಲ ನಾಲ್ಕು ದಿನಗಳಲ್ಲಿ, ಚಿತ್ರವು 400 ಕೋಟಿ ರೂ.ಗಳನ್ನು ದಾಟಿದೆ. ಚಿತ್ರದಲ್ಲಿನ ರಣವೀರ್ ಸಿಂಗ್ ಅವರ ಅಭಿನಯವನ್ನು ಹೆಚ್ಚು ಪ್ರಶಂಸಿಸಲಾಗುತ್ತಿದೆ. ಅಭಿಮಾನಿಗಳಿಂದ ಹಿಡಿದು ಸೆಲೆಬ್ರಿಟಿಗಳವರೆಗೆ, ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಅವರಿಗಾಗಿ ಪೋಸ್ಟ್‌ಗಳನ್ನು ಬರೆದಿದ್ದಾರೆ. ಏತನ್ಮಧ್ಯೆ, ರಣವೀರ್ ಅವರ ಪತ್ನಿ ಮತ್ತು ನಟಿ ದೀಪಿಕಾ ಪಡುಕೋಣೆ ‘ಧುರಂಧರ್ 2’ ಯಶಸ್ಸಿನ ಬಗ್ಗೆ ಯಾವುದೇ ಕಾಮೆಂಟ್ ಮಾಡದಿದ್ದಾಗ ಕೆಲವು ಅಭಿಮಾನಿಗಳು ಅಸಮಾಧಾನಗೊಂಡರು. ಕೆಲವರು ಇದಕ್ಕಾಗಿ ಅವರನ್ನು ಟ್ರೋಲ್ ಕೂಡ ಮಾಡಿದರು. ಇದು ಮಾತ್ರವಲ್ಲದೆ, ದೀಪಿಕಾ ಮತ್ತು ರಣವೀರ್ ನಡುವೆ ಯಾವುದೂ ಸರಿ ಇಲ್ಲ ಎಂಬ ಚರ್ಚೆಗಳೂ ನಡೆದವು. ಆದರೆ ಈಗ ಈ ಎಲ್ಲಾ ಚರ್ಚೆಗಳು ಕೊನೆಗೊಂಡಿವೆ. ಏಕೆಂದರೆ ದೀಪಿಕಾ ಮತ್ತು ರಣವೀರ್ ಇತ್ತೀಚೆಗೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಮುಂಬೈನ ಸಾಮಾನ್ಯ ರೆಸ್ಟೋರೆಂಟ್‌ನಲ್ಲಿ ಇವರಿಬ್ಬರು ಊಟದ ಡೇಟ್‌ಗೆ ಹೋಗಿದ್ದರು. ಅವರು ರೆಸ್ಟೋರೆಂಟ್‌ನಿಂದ ಹೊರಬರುತ್ತಿರುವ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವರ್ಲಿಯಲ್ಲಿ ಸೀಫುಡ್ ರೆಸ್ಟೋರೆಂಟ್ ಇದೆ ಮತ್ತು ಅದರ ಹೆಸರು ‘ಮಸ್ಲಿ’. ದೀಪಿಕಾಗೆ ಮೀನು ತುಂಬಾ ಇಷ್ಟ. ಹಾಗಾಗಿ, ‘ಧುರಂಧರ್ 2’ ಯಶಸ್ಸನ್ನು ಆಚರಿಸಲು, ಇಬ್ಬರೂ ತಮ್ಮ ನೆಚ್ಚಿನ ರೆಸ್ಟೋರೆಂಟ್‌ನಲ್ಲಿ ಊಟ ಮಾಡಲು ಹೋದರು. ಅಲ್ಲಿ ಇಬ್ಬರೂ ಮೀನನ್ನು ಸವಿದರು.
ಊಟದ ಡೇಟ್ ನಂತರ ಇಬ್ಬರೂ ರೆಸ್ಟೋರೆಂಟ್‌ನಿಂದ ಹೊರಬಂದಾಗ, ಅಭಿಮಾನಿಗಳು ಅಲ್ಲಿ ಜಮಾಯಿಸಿದ್ದರು. ಮೊದಲು, ದೀಪಿಕಾ ಹೊರಬಂದು ತಮ್ಮ ಕಾರಿನಲ್ಲಿ ಕುಳಿತರು. ಅವರ ಮುಖದಲ್ಲಿ ಸಂತೋಷ ಸ್ಪಷ್ಟವಾಗಿ ಗೋಚರಿಸಿತು. ನಂತರ ರಣವೀರ್ ಅಭಿಮಾನಿಗಳನ್ನು ಸ್ವಾಗತಿಸಲು ಮುಂದೆ ಬಂದರು. ರೆಸ್ಟೋರೆಂಟ್ ಹೊರಗೆ ಜಮಾಯಿಸಿದ್ದ ಅಭಿಮಾನಿಗಳು ರಣವೀರ್ ಮುಂದೆ ‘ಬಬ್ಬರ್ ಶೇರ್’ ಎಂದು ಘೋಷಣೆ ಕೂಗಿದರು. ಅವರೊಂದಿಗೆ ಕೈಕುಲುಕಿದ ನಂತರ, ಅವರು ಕೂಡ ಕಾರು ಹತ್ತಿದರು.
ಈ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಇದಕ್ಕೆ ವಿವಿಧ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ‘ನನಗೆ ಈ ಇಬ್ಬರ ಸರಳತೆ ತುಂಬಾ ಇಷ್ಟವಾಯಿತು’ ಎಂದು ಒಬ್ಬರು ಬರೆದಿದ್ದಾರೆ. ‘ರಣವೀರ್ ಬಗ್ಗೆ ದೀಪಿಕಾ ತುಂಬಾ ಹೆಮ್ಮೆಪಡುತ್ತಾರೆ, ಅವರ ಮುಖದಲ್ಲಿನ ನಗುವೇ ಇದಕ್ಕೆ ಸ್ಪಷ್ಟವಾಗಿದೆ’ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ. ‘ಧುರಂಧರ್ 2’ ಬಗ್ಗೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳಿಂದ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ಅಲ್ಲು ಅರ್ಜುನ್, ಆಲಿಯಾ ಭಟ್, ಮಹೇಶ್ ಬಾಬು, ರಾಮ್ ಚರಣ್, ರಾಮ್ ಗೋಪಾಲ್ ವರ್ಮಾ, ಅರ್ಜುನ್ ಕಪೂರ್, ಆಯುಷ್ಮಾನ್ ಖುರಾನಾ, ರಾಜ್‌ಕುಮಾರ್ ರಾವ್ ಅವರಂತಹ ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಗಳನ್ನು ಬರೆದಿದ್ದಾರೆ.
ಬೆಂಗಳೂರು. ಮಾ.23: ಐಪಿಎಲ್ 2026ರ ಉದ್ಘಾಟನಾ ಪಂದ್ಯ ಮಾರ್ಚ್ 28ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ನಡುವಿನ ಪಂದ್ಯದ ಟಿಕೆಟ್ ಬೆಲೆ ಎಷ್ಟು? ಎಲ್ಲಿ ಬುಕ್ ಮಾಡಬೇಕು? ಮೆಟ್ರೋ ಪ್ರಯಾಣ ಉಚಿತವೇ? ಇಲ್ಲಿದೆ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ. ಇನ್ನು ಟಿಕೆಟ್ ಖರೀದಿಯ ಬಗ್ಗೆ RCB ಮಹತ್ವದ ಹೇಳಿಕೆಯನ್ನು ಕೂಡ ನೀಡಿದೆ. ವಂಚನೆಯ ವಿರುದ್ಧ ಎಚ್ಚರಿಕೆ ನೀಡಿದೆ ಮತ್ತು shop.royalchallengers.com ಮೂಲಕ ಖರೀದಿಸಿದ ಟಿಕೆಟ್‌ಗಳು ಮಾತ್ರ ಮಾನ್ಯವಾಗಿರುತ್ತವೆ ಎಂದು ಹೇಳಿದೆ.
RCB IPL 2026 ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಎಲ್ಲಿ ಬುಕ್ ಮಾಡಬೇಕು?
RCB vs SRH ಪಂದ್ಯ ಸೇರಿದಂತೆ RCB ಹೋಮ್ ಪಂದ್ಯಗಳ ಟಿಕೆಟ್‌ಗಳನ್ನು ಅಧಿಕೃತ RCB ವೆಬ್‌ಸೈಟ್ ಮತ್ತು shop.royalchallengers.com ನ ಅಪ್ಲಿಕೇಶನ್ ಮೂಲಕ ಮಾತ್ರ ಖರೀದಿಸಬಹುದು. “ನಮ್ಮಿಂದ ಅಧಿಕೃತವಲ್ಲದ RCB ಪಂದ್ಯದ ಟಿಕೆಟ್‌ಗಳನ್ನು ಮಾರಾಟ ಮಾಡುವುದಾಗಿ ಹೇಳಿಕೊಳ್ಳುವ ಯಾವುದೇ ವ್ಯಕ್ತಿ ಅಥವಾ ವೆಬ್‌ಸೈಟ್ ಮೇಲೆ ಕಠಿಣ ಕಾನೂನು ಮತ್ತು ಪೊಲೀಸ್ ಕ್ರಮವನ್ನು ಎದುರಿಸಬೇಕಾಗುತ್ತದೆ.” ಎಂದು ಎಚ್ಚರಿಕೆಯನ್ನು ಕೂಡ ಆರ್‌ಸಿಬಿ ಹೇಳಿದೆ. ಈ ಮೂಲಕ ಅಣಭಿಮಾನಿಗಳಿಗೆ ಅಮಾನ್ಯ ಟಿಕೆಟ್‌ಗಳು ಮತ್ತು ಆರ್ಥಿಕ ನಷ್ಟವನ್ನು ತಡೆಗಟ್ಟಲು ಅಭಿಮಾನಿಗಳು ಅನಧಿಕೃತ ಮಾರಾಟಗಾರರನ್ನು ತಪ್ಪಿಸಲು ಸಲಹೆಯನ್ನು ಕೂಡ ನೀಡಿದೆ.
RCB vs SRH ಟಿಕೆಟ್‌ಗಳು ಯಾವಾಗ ಪಡೆಯಬಹುದು?
RCB ಟಿಕೆಟ್ ಮಾರಾಟ ಶೀಘ್ರದಲ್ಲೇ ಪ್ರಾರಂಭಿಸಲಿದೆ. ಈ ಬಗ್ಗೆ ನಿಖರವಾದ ದಿನಾಂಕವನ್ನು ಘೋಷಣೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಮಾರ್ಚ್ 28 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ IPL 2026 ರ ಉದ್ಘಾಟನಾ ಪಂದ್ಯಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ, ಅಭಿಮಾನಿಗಳು ಅಧಿಕೃತ RCB ವೆಬ್‌ಸೈಟ್ ಅನ್ನು ಮೇಲ್ವಿಚಾರಣೆ ಮಾಡಲು ಮತ್ತು ಬುಕಿಂಗ್ ವಿಂಡೋ ಪ್ರಕಟಣೆಗಾಗಿ ಅಪ್ಲಿಕೇಶನ್ ಅನ್ನು ಬಳಸಲು ಶಿಫಾರಸು ಮಾಡಲಾಗಿದೆ.
IPL 2026 ಟಿಕೆಟ್ ಬೆಲೆ ಶ್ರೇಣಿ: RCB vs SRH ನಡುವಿನ VIP ಬಾಕ್ಸ್‌ಗಳ ಬಜೆಟ್
RCB vs SRH ಪಂದ್ಯ ಸೇರಿದಂತೆ IPL 2026 ರ ನಿಖರವಾದ ಟಿಕೆಟ್ ಬೆಲೆಗಳು ಇನ್ನೂ ಬಹಿರಂಗಗೊಂಡಿಲ್ಲ. ಆದರೆ ಕಳೆದ ಸೀಸನ್‌ಗಳಲ್ಲಿ ಬಜೆಟ್ ಸ್ನೇಹಿ ಸ್ಟ್ಯಾಂಡ್‌ಗಳಿಂದ ಹಿಡಿದು ಪ್ರೀಮಿಯಂ VIP ಬಾಕ್ಸ್‌ಗಳು ಮತ್ತು ಆತಿಥ್ಯ ಪ್ಯಾಕೇಜ್‌ಗಳವರೆಗೆ ವ್ಯಾಪಕ ಏರಿಕೆ ಕಾಣಲಿದೆ ಎಂದು ಹೇಳಲಾಗಿದೆ. ಇನ್ನು ಈ ಬೆಲೆಗಳು ಸಾಮಾನ್ಯವಾಗಿ ಆಸನ ಶ್ರೇಣಿಗಳನ್ನು ಆಧರಿಸಿ ಬದಲಾಯಿಸಲಾಗುತ್ತದೆ. ಸಾಮಾನ್ಯ ಪ್ರವೇಶ ಕಡಿಮೆ ಬೆಲೆ ಇರುತ್ತದೆ ಮತ್ತು ಕಾರ್ಪೊರೇಟ್/VIP ಗ್ಯಾಲರಿಗಳಿಗೆ ಬೆಲೆ ಗಮನಾರ್ಹವಾಗಿ ಹೆಚ್ಚಾಗಿರುತ್ತವೆ. ಮಾರಾಟ ತೆರೆದ ನಂತರ ಅಧಿಕೃತ ಬೆಲೆಗಳನ್ನು shop.royalchallengers.com ನಲ್ಲಿ ಪ್ರದರ್ಶಿಸಲಾಗುತ್ತದೆ.
RCB vs SRH ಟಿಕೆಟ್ ಬುಕ್ ಮಾಡುವುದು ಹೇಗೆ? ಎಲ್ಲಿ?
shop.royalchallengers.com ನಲ್ಲಿ ಅಧಿಕೃತ ಬುಕಿಂಗ್ ಪ್ಲಾಟ್‌ಫಾರ್ಮ್‌ಗೆ ಭೇಟಿ ನೀಡಿ ಅಥವಾ RCB ಅಪ್ಲಿಕೇಶನ್ ತೆರೆಯಿರಿ.
ಪಂದ್ಯ ಲೈವ್ ಆದ ನಂತರ RCB vs SRH ಪಂದ್ಯವನ್ನು ಆಯ್ಕೆ ಮಾಡಿ
ನಿಮ್ಮ ಆದ್ಯತೆಯ ಆಸನ ವರ್ಗ ಮತ್ತು ಟಿಕೆಟ್‌ಗಳ ಸಂಖ್ಯೆಯನ್ನು ಆರಿಸಿ
ಅಗತ್ಯವಿದ್ದರೆ ಪಾರ್ಕಿಂಗ್ ಅನ್ನು ಮೊದಲೇ ಬುಕ್ ಮಾಡಿ. ಗರುಡ ಮಾಲ್, ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್, ಸೇಂಟ್ ಜೋಸೆಫ್ಸ್ ಬಾಯ್ಸ್ ಹೈಸ್ಕೂಲ್ ಮತ್ತು ಫ್ರೀಡಂ ಪಾರ್ಕ್ ಸೀಮಿತ ಸ್ಥಳಗಳು ಲಭ್ಯವಿದೆ
ನಂತರ ಪಾವತಿಯನ್ನು ಪೂರ್ಣಗೊಳಿಸಿ ಮತ್ತು ನಿಮ್ಮ ಇ-ಟಿಕೆಟ್ ಅನ್ನು ಸ್ವೀಕರಿಸಿ.
ಪಂದ್ಯದ ದಿನದಂದು, ಪ್ರವೇಶಕ್ಕಾಗಿ QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಮತ್ತು ಮೆಟ್ರೋ ಗೇಟ್‌ನಲ್ಲಿ ನಿಮ್ಮ ಪಂದ್ಯದ ಟಿಕೆಟ್ QR ಅನ್ನು ಸ್ಕ್ಯಾನ್ ಮಾಡುವ ಮೂಲಕ ಉಚಿತ ಮೆಟ್ರೋ ಪ್ರಯಾಣ ಸೌಲಭ್ಯವನ್ನು ಪಡೆಯಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 23: ಕೋರ್ಟ್‌ಗಳಲ್ಲಿ ಸರ್ಕಾರಿ ಉದ್ಯೋಗ (Government Job) ಕೊಡಿಸುವುದಾಗಿ ಭರವಸೆ ನೀಡಿ ನೂರಾರು ಜನರನ್ನು ವಂಚಿಸಿದ್ದ ಖತರ್ನಾಕ್ ದಂಪತಿಯನ್ನು ಸೆಂಟ್ರಲ್ ಕ್ರೈಂ ಬ್ರಾಂಚ್ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಜೇಸನ್ ಡಿಸೋಜಾ ಮತ್ತು ಲವೀನಾ ದಂಪತಿ ಸುಮಾರು 25 ಕೋಟಿ ರೂ.ಗೂ ಹೆಚ್ಚು ಹಣ ವಂಚನೆ ಮಾಡಿದ್ದು, ಸದ್ಯ ಸಿಸಿಬಿ ಪೊಲೀಸರು ಅವರನ್ನು ವಿಚಾರಣೆಗೊಳಪಡಿಸಿದ್ದಾರೆ.
ನಿರುದ್ಯೋಗಿಗಳೇ ಟಾರ್ಗೆಟ್!
ನಿರುದ್ಯೋಗಿಗಳು ಹಾಗೂ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಗುರಿಯಾಗಿಸಿಕೊಂಡು ಆರೋಪಿಗಳು ದೊಡ್ಡ ಮಟ್ಟದ ಮೋಸದ ಜಾಲವನ್ನು ನಿರ್ಮಿಸಿದ್ದ ದಂಪತಿ, ಕೋರ್ಟ್‌ಗಳಲ್ಲಿ ಡಿ-ಗ್ರೂಪ್ ಉದ್ಯೋಗ ಕೊಡಿಸುವುದಾಗಿ ಹೇಳಿ ಒಬ್ಬೊಬ್ಬರಿಂದ 10ರಿಂದ 25 ಲಕ್ಷ ರೂಪಾಯಿಯವರೆಗೆ ಹಣ ವಸೂಲಿ ಮಾಡುತ್ತಿದ್ದರು ಎಂದು ಪೊಲೀಸರು ಹೆಳಿದ್ದಾರೆ.
ಏಜೆಂಟ್‌ಗಳ ಮೂಲಕ ಕಾರ್ಯ
ನಂಬಿಕೆ ಮೂಡಿಸಲು ನ್ಯಾಯಾಧೀಶರ ಸಹಿಯನ್ನು ನಕಲಿ ಮಾಡಿ ನೇಮಕಾತಿ ಆದೇಶ ಪತ್ರಗಳನ್ನು ನೀಡುತ್ತಿದ್ದರು. ನಂತರ ಉದ್ಯೋಗದ ಬಗ್ಗೆ ವಿಚಾರಿಸಿದಾಗ ನಾಳೆ, ನಾಡಿದ್ದು ಎಂದು ಕಾಲಹರಣ ಮಾಡಿ, ಕೊನೆಗೆ ಕರೆಗಳಿಗೆ ಸ್ಪಂದಿಸದೇ ತಪ್ಪಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಏಜೆಂಟ್‌ಗಳ ಮೂಲಕ ಜನರನ್ನು ಬಲೆಗೆ ಬೀಳಿಸುತ್ತಿದ್ದ ಆರೋಪಿಗಳು ಕೆಲವರನ್ನು ಖಾಸಗಿ ಹೋಟೆಲ್‌ಗಳಿಗೆ ಕರೆಸಿ ದಾಖಲೆ ಪರಿಶೀಲನೆ ಹೆಸರಿನಲ್ಲಿ ನಕಲಿ ಆಫರ್ ಲೆಟರ್ ತೋರಿಸಿ ಮೋಸ ಮಾಡಿದ್ದಾರೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಈ ಕುರಿತು ಸಂತ್ರಸ್ತರು ದೂರು ನೀಡಿದ ಹಿನ್ನೆಲೆ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳು ಈ ಹಿಂದೆಯೂ 2024ರಲ್ಲಿ ಇದೇ ರೀತಿಯ ಪ್ರಕರಣದಲ್ಲಿ ಬಂಧಿತರಾಗಿ, ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಮತ್ತೆ ವಂಚನೆ ಮುಂದುವರಿಸಿದ್ದರು. ಸದ್ಯ ಪೊಲೀಸರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದು, ಇನ್ನಷ್ಟು ಬಲಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.
ಚಾಮರಾಜನಗರ, ಮಾರ್ಚ್ 23: ಅಣ್ಣಾವ್ರ ಹುಟ್ಟೂರಾಗಿರುವ, ಕರ್ನಾಟಕ-ತಮಿಳುನಾಡು ಗಡಿ ಭಾಗದ ತಾಳವಾಡಿ ತಾಲೂಕಿನ ದೊಡ್ಡ ಗಾಜನೂರಿನಲ್ಲಿ ನಟ ಕಿಚ್ಚ ಸುದೀಪ್ ಅಭಿಮಾನಿಯೊಬ್ಬರು ಇದೀಗ ಕನ್ನಡಿಗರ ಗಮನ ಸೆಳೆಯುವಂತೆ ಮಾಡಿದ್ದಾರೆ. ದೊಡ್ಡ ಗಾಜನೂರು ಗ್ರಾಮದ ಸಿದ್ದರಾಜು ಎಂಬ ಅಭಿಮಾನಿ, ಸುದೀಪ್ ಮೇಲೆ ಅಪಾರ ಭಕ್ತಿ ಹೊಂದಿದ್ದಾರೆ. ಐಸ್ ಕ್ಯಾಂಡಿ ಮಾರಾಟ ಮಾಡುತ್ತಾ ಜೀವನ ನಡೆಸುವ ಸಿದ್ದರಾಜುಗೆ ‘ಕಿಚ್ಚ’ ಸುದೀಪ್ ಎಂದರೆ ಪಂಚಪ್ರಾಣ. ಇದಕ್ಕಾಗಿ ಅವರು ಮನೆ ಬಳಿ ಸುದೀಪ್‌ಗಾಗಿ ಗುಡಿ ನಿರ್ಮಿಸಿದ್ದು, ಪ್ರತಿದಿನವೂ ನಿತ್ಯ ಆರಾಧನೆ ಮಾಡುತ್ತಾರೆ! ಸೋಮವಾರ ಮತ್ತು ಶುಕ್ರವಾರ ವಿಶೇಷ ಪೂಜೆ ಕೂಡ ನಡೆಸುತ್ತಾರೆ. ಸುದೀಪ್ ಜೊತೆಗೆ ಮಹರ್ಷಿ ವಾಲ್ಮೀಕಿ ಹಾಗೂ ವೀರ ಮದಕರಿ ನಾಯಕ ಅವರನ್ನೂ ಗುಡಿಯಲ್ಲಿ ಆರಾಧಿಸುತ್ತಾ ಬರುತ್ತಿದ್ದಾರೆ.
ಸುದೀಪ್ ಅವರ ಪ್ರತಿಯೊಂದು ಸಿನಿಮಾವನ್ನೂ ‘ಫಸ್ಟ್ ಡೇ ಫಸ್ಟ್ ಶೋ’ ನೋಡುವ ಸಿದ್ದರಾಜುವಿನ ಈ ಅಭಿಮಾನಕ್ಕೆ ಅವರ ಕುಟುಂಬದವರು ಕೂಡ ಸಂಪೂರ್ಣ ಬೆಂಬಲ ನೀಡಿದ್ದಾರೆ.
ಸುದೀಪ್ ಮಾತ್ರವಲ್ಲದೆ ವರನಟ ಡಾ. ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಬಗ್ಗೆಯೂ ಸಿದ್ದರಾಜು ಅಪಾರ ಅಭಿಮಾನವಿರಿಸಿಕೊಂಡಿದ್ದಾರೆ. ಸದ್ಯ, ನಟ ಸುದೀಪ್ ಮೇಲಿನ ಸಿದ್ದರಾಜು ಅವರ ಈ ವಿಶಿಷ್ಟ ಅಭಿಮಾನ ವೈರಲ್ ಆಗುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಒಂದು ಸಿನಿಮಾ ರಿಲೀಸ್ ಆಗಿ ಹಿಟ್ ಆದ ಬಳಿಕ ಕೆಲವರು ನಿರ್ದೇಶಕರ ಮೇಲೆ ಕೃತಿಚೌರ್ಯದ ಆರೋಪ ಹೊರಿಸಿದ ಉದಾಹರಣೆ ಇದೆ. ಕೆಲವು ನಿಜವಾದರೆ, ಕೆಲವು ಸುಳ್ಳಾಗಿದೆ. ಈಗ ಇತ್ತೀಚೆಗೆ ರಿಲೀಸ್ ಆಗಿ ಹಿಟ್ ಆದ ಸಿನಿಮಾ ಮೇಲೆ ‘ಮಾರಿಗೋಲ್ಡ್’ ಸಿನಿಮಾ ನಿರ್ದೇಶಕ ರಾಘವೇಂದ್ರ ನಾಯಕ್ ದೀರ್ಘ ಪೋಸ್ಟ್ ಬರೆದಿದ್ದಾರೆ. ಅವರು ಆರೋಪ ಮಾಡಿರೋದು ‘ಲವ್ ಮಾಕ್ಟೇಲ್ 3’ ಚಿತ್ರದ ಮೇಲೆ ಇರಬಹುದು ಎಂಬ ಚರ್ಚೆ ಕೂಡ ನಡೆದಿದೆ.
‘ಸಿನಿಮಾ ಬರಹಗಾರರೇ ಮತ್ತು ಭವಿಷ್ಯದ ನಿರ್ದೇಶಕರೇ, ನನ್ನದೊಂದು ಸಣ್ಣ ಕಿವಿಮಾತು: ನೀವು ಯಾವುದೇ ಕಥೆ ಸಿದ್ಧಪಡಿಸಿದಾಗ, ಮೊದಲು ಅದನ್ನು SWA (Screenwriters Association) ನಲ್ಲಿ ನೋಂದಾಯಿಸಿಕೊಳ್ಳಿ. ಕಥೆ ಮತ್ತು ಚಿತ್ರಕಥೆ ಸಿದ್ಧವಾಗುವ ಪ್ರತಿ ಹಂತದ ಕಡತವನ್ನೂ (File) ನಿಮ್ಮ ಸ್ವಂತ ಇಮೇಲ್ ವಿಳಾಸಕ್ಕೆ ಕಳುಹಿಸಿ ಸುರಕ್ಷಿತವಾಗಿಟ್ಟುಕೊಳ್ಳಿ. ಎಲ್ಲಕ್ಕಿಂತ ಮುಖ್ಯವಾಗಿ, ನೀವು ಯಾರಿಗಾದರೂ ಕಥೆ ವಿವರಿಸುವ (Narration) ಮೊದಲು ಅದರ ಆಡಿಯೋ ರೆಕಾರ್ಡ್ ಮಾಡಿಕೊಳ್ಳುವುದನ್ನು ಮರೆಯಬೇಡಿ. ಕಥೆ ಹೇಳುವ ಮುನ್ನ ನಡೆಸುವ ಸಂಭಾಷಣೆ ಹಾಗೂ ಕಥೆ ಮುಗಿದ ನಂತರದ ಚರ್ಚೆಗಳೂ ಅದರಲ್ಲಿ ದಾಖಲಾಗಿರಲಿ. ಮೀಟಿಂಗ್ ಮುಗಿದ ಕೂಡಲೇ ಆ ಆಡಿಯೋ ಫೈಲ್ ಅನ್ನು ನಿಮಗೆ ನೀವೇ ಇಮೇಲ್ ಮಾಡಿಕೊಳ್ಳಿ. ಆಗ ನೀವು ನಾಯಕನಿಗಾಗಲಿ, ನಿರ್ಮಾಪಕರಿಗಾಗಲಿ ಅಥವಾ ನಿರ್ದೇಶಕರಿಗಾಗಲಿ ಕಥೆ ವಿವರಿಸಿದ್ದೀರಿ ಎಂಬುದಕ್ಕೆ ಭದ್ರವಾದ ದಾಖಲೆ ಇರುತ್ತದೆ’ ಎಂದು ರಾಘವೇಂದ್ರ ನಾಯಕ್ ಬರಹ ಆರಂಭಿಸಿದ್ದಾರೆ.
‘ಇಂತಹ ಮುನ್ನೆಚ್ಚರಿಕೆ ವಹಿಸದ ಕಾರಣ ಇಂದು ನನಗೆ ದೊಡ್ಡ ದ್ರೋಹವಾಗಿದೆ. ನನ್ನ ಕಥೆಯ ಇಡೀ ದ್ವಿತೀಯಾರ್ಧವನ್ನು (Second Half) ಬಳಸಿಕೊಂಡು ಸಿನಿಮಾ ಮಾಡಿ ಬಿಡುಗಡೆಗೊಳಿಸಿದ್ದಾರೆ; ಆ ಸಿನಿಮಾ ಈಗ ಯಶಸ್ವಿಯಾಗಿ ಪ್ರದರ್ಶನವನ್ನೂ ಕಾಣುತ್ತಿದೆ. ಈ ಕಥೆ ನನ್ನದು ಎಂಬುದು ನನ್ನ ಆಪ್ತ ವಲಯದ ಬಹಳಷ್ಟು ನಿರ್ಮಾಪಕರಿಗೆ, ತಂತ್ರಜ್ಞರಿಗೆ ಹಾಗೂ ಸ್ನೇಹಿತರಿಗೆ ತಿಳಿದಿದೆ. ಕನ್ನಡದ ಖ್ಯಾತ ನಿರ್ದೇಶಕರು ಮತ್ತು ನಿರ್ಮಾಪಕರು ಈ ಕಥೆಯನ್ನು ಸಿನಿಮಾ ಮಾಡಲು ನಿರ್ಧರಿಸಿ, ನನಗೆ ಮುಂಗಡ ಸಂಭಾವನೆಯನ್ನೂ ನೀಡಿದ್ದರು. ಇದೇ ನಿರ್ಮಾಪಕ-ನಿರ್ದೇಶಕರ ಜೊತೆಗೂಡಿ ಎರಡು ವರ್ಷಗಳ ಹಿಂದೆಯೇ ನಾನು ಆ ‘ನಿರ್ದೇಶಕ, ನಿರ್ಮಾಪಕ ಕಮ್ ನಟ’ನಿಗೆ ಕಥೆ ಹೇಳಿದ್ದೆ’ ಎಂದು ಆರೋಪಿಸಿದ್ದಾರೆ ಅವರು.
‘ನನ್ನ ಬಳಿ ಆ ಕಥೆ ನನ್ನದೇ ಎನ್ನುವುದಕ್ಕೆ ಸೂಕ್ತ ದಾಖಲೆಗಳಿವೆಯಾದರೂ, “ನಾನು ಅವರಿಗೆ ಈ ಕಥೆಯನ್ನೇ ಹೇಳಿದ್ದೆ” ಎನ್ನುವುದಕ್ಕೆ ಪೂರಕ ದಾಖಲೆಗಳಿಲ್ಲ. ಈ ತಾಂತ್ರಿಕ ಕಾರಣದಿಂದಾಗಿ ನಾನು ಅಸಹಾಯಕನಾಗಿ ಸುಮ್ಮನಿರಬೇಕಾಗಿದೆ. ಭವಿಷ್ಯದಲ್ಲಿ ಬೇರೆ ಯಾವ ಬರಹಗಾರರಿಗೂ ಇಂತಹ ಮೋಸ ಆಗಬಾರದು ಎಂಬ ಸದಾಶಯದಿಂದ ಮತ್ತು ಅವರು ಮುನ್ನೆಚ್ಚರಿಕೆ ವಹಿಸಲಿ ಎಂಬ ಕಾರಣಕ್ಕೆ ಈ ಪೋಸ್ಟ್ ಹಾಕುತ್ತಿದ್ದೇನೆ. ದಯವಿಟ್ಟು ಬರಹಗಾರರೇ, ನಿಮ್ಮ ಕಲ್ಪನೆಗೆ ಕನ್ನ ಬೀಳದಂತೆ ಜಾಗ್ರತೆ ವಹಿಸಿ. ನಿಮಗೆ ಶುಭವಾಗಲಿ’ ಎಂದು ಅವರು ಬರಹ ಪೂರ್ಣಗೊಳಿಸಿದ್ದಾರೆ.
ಇತ್ತೀಚೆಗೆ ರಿಲೀಸ್ ಆಗಿ ಹಿಟ್ ಆದ ಕನ್ನಡದ ಸಿನಿಮಾ ಎಂದರೆ ಅದು ‘ಲವ್ ಮಾಕ್ಟೇಲ್ 3’. ಅಲ್ಲದೆ, ನಿರ್ದೇಶಕ, ನಿರ್ಮಾಪಕ ಕಮ್ ನಟ ಎಂದರೆ ಅದು ಡಾರ್ಲಿಂಗ್ ಕೃಷ್ಣ ಇರಬಹುದು ಎಂದು ಅನೇಕರು ಊಹಿಸಿದ್ದಾರೆ. ಇದಕ್ಕೆ ಕೃಷ್ಣ ಅವರ ಕಡೆಯಿಂದ ಯಾವ ರೀತಿಯ ಸ್ಪಷ್ಟನೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಬಾಗಲಕೋಟೆ, ಮಾರ್ಚ್ 23: ದಾವಣಗೆರೆ ಹಾಗೂ ಬಾಗಲಕೋಟೆ ಉಪಚುನಾವಣೆಗಳ ಹಿನ್ನೆಲೆ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಾಯಕರ ನಡುವೆ ವಾಕ್ಸಮರ ಜೋರಾಗಿದೆ. ಈ ಮಧ್ಯೆ, ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ವಿಜಯೇಂದ್ರ, ದಾವಣಗೆರೆಯಲ್ಲಿ ಸೂಟ್‌ಕೇಸ್‌ನಲ್ಲಿ ಹಣ ತರುವುದಿಲ್ಲ, ಸಚಿವರೊಬ್ಬರು ಗೋಣಿಚೀಲದಲ್ಲಿ ಹಣ ತಂದು ಕೂರುತ್ತಾರೆ ಎಂದು ಆರೋಪಿಸಿದರು. ಅಲ್ಲಿನ ರಾಜಕೀಯದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದು ನನಗೆ ತಿಳಿದಿದೆ ಎಂದು ಹೇಳಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
‘ರಾಜ್ಯದ ಜನ ಕಾಂಗ್ರೆಸ್ ಸರ್ಕಾರದಿಂದ ಬೇಸತ್ತಿದ್ದಾರೆ. ಇದು ಬಡವರು ಮತ್ತು ದೀನದಲಿತರ ವಿರೋಧಿ ಸರ್ಕಾರ’ ಎಂದು ಅವರು ಆರೋಪಿಸಿದರು. ಸದ್ಯದ ರಾಜಕೀಯ ವಾತಾವರಣ ನೋಡಿದರೆ ಬಿಜೆಪಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಪಚುನಾವಣೆಯಲ್ಲಿ ಬಿಜೆಪಿ ಗೆಲುವೇ ಗುರಿ: ವಿಜಯೇಂದ್ರ
ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ. ಕಮಲದ ಹೂವು ಅರಳುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಈ ಹಿಂದೆ ಸಿರಾ ಮತ್ತು ಕೆಆರ್ ಪೇಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕುತಂತ್ರ ಮಾಡಿತ್ತು ಎಂದು ಆರೋಪಿಸಿದ ಅವರು, ಮತದಾನ ಕೊನೆಯ ದಿನದವರೆಗೆ ಕಾರ್ಯಕರ್ತರು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ.
ವಿಜಯೇಂದ್ರ ಮಾತಿನ ವಿಡಿಯೋ
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಶೀರ್ವಾದ ಪಡೆದು ಬಂದಿದ್ದಾಗಿ ತಿಳಿಸಿದ ವಿಜಯೇಂದ್ರ, ಅವರೆಂದೂ ಇಟ್ಟ ಹಿಜ್ಜೆಯಿಂದ ಹಿಂದೆ ಸರಿದವರಲ್ಲ. ಪಕ್ಷದ ಗುರಿ ಸಾಧನೆಗೆ ದಿಟ್ಟ ಹೆಜ್ಜೆ ಇಡಲಾಗುತ್ತಿದೆ ಎಂದರು.
ಬಾಗಲಕೋಟೆ ಕ್ಷೇತ್ರದಲ್ಲಿ ಇದ್ದ ಸಣ್ಣಪುಟ್ಟ ಗೊಂದಲಗಳನ್ನು ಬಗೆಹರಿಸಲಾಗುವುದು. ಎಲ್ಲ ನಾಯಕರು ಒಟ್ಟಾಗಿ ಕೆಲಸ ಮಾಡಿ ಬಿಜೆಪಿ ಅಭ್ಯರ್ಥಿ ಚರಂತಿಮಠರ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ವಿಜಯೇಂದ್ರ ಹೇಳಿದರು. ಒಟ್ಟಿನಲ್ಲಿ, ಉಪಚುನಾವಣೆ ಸಮೀಪಿಸುತ್ತಿದ್ದಂತೆ ಆರೋಪ-ಪ್ರತ್ಯಾರೋಪಗಳ ನಡುವೆ ರಾಜ್ಯ ರಾಜಕೀಯ ಕಾವು ಹೆಚ್ಚಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಇತ್ತೀಚೆಗೆ ಹೃದಯ ಸಂಬಂಧ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಅದರಲ್ಲೂ ಹೃದಯಾಘಾತಕೇಸ್ಗಳು ಯುವಕರಲ್ಲೂ ಗಣನೀಯವಾಗಿ ಹೆಚ್ಚುತ್ತಿವೆ. ಈ ಹಾರ್ಟ್ ಅಟ್ಯಾಕ್ಗೆ ಹೃದಯದ ನರಗಳಲ್ಲಿ ಉಂಟಾಗುವ ಬ್ಲಾಕೇಜ್ ಕೂಡ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಅಷ್ಟಕ್ಕೂ ಹೃದಯದಲ್ಲಿ ಬ್ಲಾಕೇಜ್ ಏಕೆ ಉಂಟಾಗುತ್ತದೆ? ಅದರ ಆರಂಭಿಕ ಲಕ್ಷಣಗಳು ಯಾವುವು ಮತ್ತು ಅದನ್ನು ಹೇಗೆ ನಿಯಂತ್ರಿಸಬಹುದು? ಎಂಬುದನ್ನು ತಿಳಿದುಕೊಳ್ಳುವ ಅಗತ್ಯ ಇಂದಿಗಿದೆ.
ಹೃದಯದ ನರಗಳಲ್ಲಿ ಕೊಬ್ಬು (ಫ್ಯಾಟ್) ಅಥವಾ ಕೊಲೆಸ್ಟ್ರಾಲ್ ಶೇಖರೆಯಾಗುವುದರಿಂದ ರಕ್ತದ ಹರಿವು ಸರಿಯಾಗಿ ಆಗುವುದಿಲ್ಲ. ಇದರಿಂದ ಹೃದಯಕ್ಕೆ ಬೇಕಾದಷ್ಟು ರಕ್ತ ಮತ್ತು ಆಮ್ಲಜನಕ ಸಿಗದೆ ಹೃದಯಾಘಾತದ ಸಾಧ್ಯತೆ ಹೆಚ್ಚಾಗುತ್ತದೆ. ಇದನ್ನೇ ವೈದ್ಯಕೀಯ ಭಾಷೆಯಲ್ಲಿ ಕೋರೊನರಿ ಆರ್ಟರಿ ಡಿಸೀಸ್ ಎಂದು ಕರೆಯಲಾಗುತ್ತದೆ. ಇಲ್ಲಿ ತಿಳಿಯಬೇಕಾದ ಪ್ರಮುಖ ವಿಚಾರವೆಂದರೆ ಹೃದಯದಲ್ಲಿ ಬ್ಲಾಕೇಜ್ ಅಚಾನಕ್ ಆಗಿ ಉಂಟಾಗುವುದಿಲ್ಲ. ಬದಲಾಗಿ ದೀರ್ಘಕಾಲದ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದ ಇದು ಆಗುವಂತಹದ್ದು. ಈ ಸಮಸ್ಯೆಯ ಲಕ್ಷಣಗಳು ಬಹಳ ಹಿಂದಿನಿಂದಲೇ ಕಾಣಿಸಿಕೊಳ್ಳುತ್ತವೆಯಾದರೂ ಅವನ್ನು ನಿರ್ಲಕ್ಷ್ಯ ಮಾಡುವವರ ಸಂಖ್ಯೆಯೇ ದೊಡ್ಡದಿದೆ ಎಂಬುದು ವಿಪರ್ಯಾಸ.
ಹೃದಯದಲ್ಲಿ ಬ್ಲಾಕೇಜ್‌ನ ಅತ್ಯಂತ ಸಾಮಾನ್ಯ ಲಕ್ಷಣವೆಂದರೆ ಎದೆನೋವು. ವಿಶೇಷವಾಗಿ, ಎದೆಯ ಮೇಲೆ ಒತ್ತಡ ಇಟ್ಟಂತಾಗುವ ನೋವು ಕಾಣಿಸಬಹುದು. ಈ ನೋವು ಕೆಲವೊಮ್ಮೆ ಎಡಗೈ, ಭುಜ, ಕುತ್ತಿಗೆ ಅಥವಾ ದವಡೆವರೆಗೆ ಹರಡಬಹುದು.
ಕೆಲವರಲ್ಲಿ ಸಾಮಾನ್ಯವಾಗಿ ನಡೆಯುವಾಗಲೂ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಹೃದಯಕ್ಕೆ ಸರಿಯಾದ ಪ್ರಮಾಣದಲ್ಲಿ ರಕ್ತ ತಲುಪದ ಕಾರಣ ದೇಹದಲ್ಲಿ ಆಮ್ಲಜನಕದ ಕೊರತೆ ಉಂಟಾಗುತ್ತದೆ. ಇದರಿಂದ ಸ್ವಲ್ಪ ಶಾರೀರಿಕ ಚಟುವಟಿಕೆ ಮಾಡಿದರೂ ಉಸಿರಾಟ ವೇಗವಾಗಬಹುದು.
ಇದರ ಜೊತೆಗೆ ಅಚಾನಕ್ ತಲೆಸುತ್ತು, ಕಾರಣವಿಲ್ಲದೆ ಬೆವರುವುದು ಕೂಡ ಹೃದಯ ಸಂಬಂಧಿತ ಸಮಸ್ಯೆಗಳ ಸೂಚನೆಗಳಾಗಿರಬಹುದು.
ಯಾರಿಗೆ ಹೆಚ್ಚು ಅಪಾಯ?
ವೈದ್ಯರ ಪ್ರಕಾರ ಕುಟುಂಬದಲ್ಲಿ ಹೃದಯ ರೋಗದ ಇತಿಹಾಸ ಇರುವವರು, ಹೈ ಬಿಪಿ (ರಕ್ತದೊತ್ತಡ) ಇರುವವರು ಮತ್ತು ದೇಹದಲ್ಲಿ ಹೆಚ್ಚಿದ ಕೊಲೆಸ್ಟ್ರಾಲ್ ಇರುವವರಿಗೆ ಅಪಾಯ ಹೆಚ್ಚು ಎನ್ನಲಾಗಿದೆ.
ಇನ್ನು ಇವೆಲ್ಲವೂ ಕೋರೊನರಿ ಆರ್ಟರಿ ಡಿಸೀಸ್ ಲಕ್ಷಣ ಮತ್ತು ಯಾರಿಗೆ ಅಪಾಯ ಹೆಚ್ಚೆಂಬ ಮಾಹಿತಿಯಾದರೆ ಹೃದಯ ಸಂಬಂಧಿ ರೋಗಗಳಿಂದಲೇ ದೂರ ಉಳಿಯಲು ನಾವೇನು ಮಾಡಬಹುದು ಎಂಬೂದನ್ನೂ ತಿಳಿದುಕೊಳ್ಳಬೇಕಿದೆ. ಆರೋಗ್ಯಕರ ಆಹಾರ ಪದ್ಧತಿ ಅನುಸರಿಸುವ ಜೊತೆಗೆ ಪ್ರತಿದಿನ ವ್ಯಾಯಾಮ ಮಾಡುವುದು, ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಅಗತ್ಯವಿದೆ ಎಂಬುದು ವೈದ್ಯರ ಮಾತು.
ಆನೆಗಳ (elephants) ಆಟ ತುಂಟಾಟಗಳ ಮನಸ್ಸಿಗೆ ಹೇಗೆ ಖುಷಿ ಕೊಡುತ್ತದೆ. ಕೆಲವೊಮ್ಮೆ ಮನುಷ್ಯರೊಂದಿಗೆ ಈ ಆನೆಗಳು ಮುದ್ದಾಗಿ ವರ್ತಿಸುತ್ತವೆ. ಗಜರಾಜ ಹಾಗೂ ಮನುಷ್ಯನ ನಡುವಿನ ಮುದ್ದಾದ ವಿಡಿಯೋ ನೆಟ್ಟಿಗರ ಹೃದಯ ಗೆಲ್ಲುತ್ತವೆ. ಇದೀಗ ಇಂತಹದ್ದೇ ವಿಡಿಯೋ ವೈರಲ್ ಆಗಿದ್ದು, ರಸ್ತೆ ದಾಟಲು ಅನುವು ಮಾಡಿಕೊಟ್ಟ ವ್ಯಕ್ತಿಯೊಬ್ಬನಿಗೆ ತಾಯಿ ಆನೆಗಳು ಸೊಂಡಿಲೆತ್ತಿ ನಮಸ್ಕರಿಸಿ ಕೃತಜ್ಞತೆ ಸಲ್ಲಿಸಿದೆ. ಈ ಹೃದಯಸ್ಪರ್ಶಿ ವಿಡಿಯೋ ನೋಡಿ ನೆಟ್ಟಿಗರು ಕಳೆದೇ ಹೋಗಿದ್ದಾರೆ.
ನಿವೃತ್ತ ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತಾ ನಂದಾ ಅವರು ತಮ್ಮ @susantananda3 ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ರಸ್ತೆಯಲ್ಲಿ ವಾಹನಗಳನ್ನು ತಡೆದು ಆನೆಗಳ ಹಿಂಡು ಹೋಗಲು ಅನುವು ಮಾಡಿಕೊಡುತ್ತಿರುವುದನ್ನು ಕಾಣಬಹುದು. ಅದೇ ವ್ಯಕ್ತಿಯೂ ಆನೆಗಳ ಹಿಂಡು ರಸ್ತೆಯನ್ನು ದಾಟುವವರೆಗೂ ಕಾದು ನಿಂತಿದ್ದು, ಈ ಹಿಂಡಿನಲ್ಲಿದ್ದ ತಾಯಿ ಆನೆಗಳು ವ್ಯಕ್ತಿಯ ಸಹಾಯಕ್ಕೆ ಸೊಂಡಿಲೆತ್ತಿ ನಮಸ್ಕರಿಸಿ ಧನ್ಯವಾದ ತಿಳಿಸಿ ಮುಂದಕ್ಕೆ ಸಾಗಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
Man stops traffic to allow safe passage to the elephant’s herd…
ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿವೆ. ಒಬ್ಬ ಬಳಕೆದಾರ ಸಹಾಯ ಮಾಡಿದ್ದಕ್ಕೆ ಎಷ್ಟು ಮುದ್ದಾಗಿ ಕೃತಜ್ಞತೆ ಸಲ್ಲಿಸಿವೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ದೃಶ್ಯ ಮುದ್ದಾಗಿವೆ ಎಂದು ಹೇಳಿದರೆ, ಮತ್ತೊಬ್ಬರು, ಸೂಪರ್ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 23: ನಗರದಲ್ಲಿ ಡಿಜಿಟಲ್ ಅರೆಸ್ಟ್ (Digital Arrest)ಹೆಸರಿನ ವಂಚನೆ ಜಾಲ ಬೆಳೆಯುತ್ತಲೇ ಇದೆ. ಕೆಲ ದಿನಗಳ ಹಿಂದೆಯಷ್ಟೇ ವೃದ್ಧ ಉದ್ಯಮಿಗೆ ಇದೇ ರೀತಿ 15 ಕೋಟಿ ರೂ. ವಂಚಿಸಲಾಗಿತ್ತು. ಇದೀಗ ಮತ್ತೊಮ್ಮೆ ಅದೇ ರೀತಿಯ ಸೈಬರ್ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ. ನಗರದ ನಿವೃತ್ತ ಸಂಶೋಧಕರೊಬ್ಬರಿಗೆ ಬರೋಬ್ಬರಿ 5 ಕೋಟಿ ರೂ. ಸೈಬರ್ ವಂಚನೆ ಮಾಡಿದ್ದು, ವೃದ್ಧನನ್ನು ಬೆದರಿಸಿ ಹಣ ವರ್ಗಾಯಿಸಿಕೊಳ್ಳಲಾಗಿದೆ ಎನ್ನಲಾಗಿದೆ.
ಮಾನವ ಕಳ್ಳಸಾಗಾಣಿಗೆ ಮಾಡಿದ್ದೀರೆಂದು ನಕಲಿ ಎಫ್‌ಐಆರ್ ಕಳಿಸಿದ ವಂಚಕರು
94 ವರ್ಷದ ನಿವೃತ್ತ ಸಂಶೋಧಕರಿಗೆ ಅಪರಿಚಿತ ವ್ಯಕ್ತಿಯೊಬ್ಬ ಲ್ಯಾಂಡ್ ಲೈನ್‌ಗೆ ಕರೆ ಮಾಡಿ, ನಿಮ್ಮ ವಿರುದ್ಧ ಬಳ್ಳಾರಿಯಲ್ಲಿ ಮಾನವ ಕಳ್ಳ ಸಾಗಾಣಿಕೆ ಪ್ರಕರಣ ದಾಖಲಾಗಿದೆ ಎಂದು ಹೇಳಿ ಬೆದರಿಕೆ ಹಾಕಿದ್ದಾನೆ. ನಂತರ ತಾನು ಸಿಬಿಐ ಅಧಿಕಾರಿ ಎಂದು ಹೇಳಿಕೊಂಡ ಮತ್ತೊಬ್ಬ ವ್ಯಕ್ತಿ ‘ಸಂದೀಪ್ ರಾವ್’ ಎಂಬ ಹೆಸರಿನಲ್ಲಿ ಕರೆ ಮಾಡಿ, ಆಧಾರ್ ಕಾರ್ಡ್ ವಿವರಗಳನ್ನು ವಾಟ್ಸಪ್ ಮೂಲಕ ಪಡೆದಿದ್ದಾನೆ. ಬಳಿಕ ನಕಲಿ ಎಫ್‌ಐಆರ್ ಕಳುಹಿಸಿ, ಸಿಬಿಐ ಅಧಿಕಾರಿಗಳಂತೆ ವೇಷ ಹಾಕಿಕೊಂಡು ವಿಡಿಯೋ ಕಾಲ್ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ವೃದ್ಧ ಆರೋಪಿಸಿದ್ದಾರೆ.
ಕೇಸ್ ಕೈ ಬಿಡಲು ಹಣ ನೀಡಬೇಕು ಎಂದು ಒತ್ತಾಯಿಸಿದ ಆರೋಪಿಗಳು, ಜನವರಿ 17ರಿಂದ ಫೆಬ್ರವರಿ 23ರವರೆಗೆ ಹಂತ ಹಂತವಾಗಿ ಒಟ್ಟು 4.91 ಕೋಟಿ ರೂಪಾಯಿಯನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಬಳಿಕ ಇನ್ನಷ್ಟು ಹಣ ಕೇಳಿದಾಗ ಅನುಮಾನಗೊಂಡ ವೃದ್ಧ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಈ ಸಂಬಂಧ ಸೆಂಟ್ರಲ್ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.