All posts by nagaraj11081993

PSL 2026: ‘ಅಲ್ಲಿಗೆ ಹೋಗಲೇಬೇಡಿ’; ಪಾಕಿಸ್ತಾನ ಸೂಪರ್ ಲೀಗ್ ನಡೆಯುವುದು ಅನುಮಾನ

PSL 2026: ‘ಅಲ್ಲಿಗೆ ಹೋಗಲೇಬೇಡಿ’; ಪಾಕಿಸ್ತಾನ ಸೂಪರ್ ಲೀಗ್ ನಡೆಯುವುದು ಅನುಮಾನ

ಭಾರತದಲ್ಲಿ ನಡೆಯುವ ಐಪಿಎಲ್​ಗೆ (IPL) ಸೆಡ್ಡು ಹೊಡೆಯುವ ಸಲುವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಾಕಿಸ್ತಾನ ಸೂಪರ್ ಲೀಗ್ (PSL) ಅನ್ನು ಐಪಿಎಲ್ ಆರಂಭವಾಗುವ ಸಮಯದಲ್ಲೇ ನಡೆಸಲು ಮುಂದಾಗಿದೆ. ಅದರಂತೆ 2026 ರ ಐಪಿಎಲ್ ಮಾರ್ಚ್​ 28 ರಿಂದ ಆರಂಭವಾದರೆ, ಅದಕ್ಕೂ ಎರಡು ದಿನ ಮೊದಲು ಅಂದರೆ ಮಾರ್ಚ್​ 26 ರಂದು ಪಾಕಿಸ್ತಾನ ಸೂಪರ್ ಲೀಗ್ ಆರಂಭಿಸಲು ಪಿಸಿಬಿ ತೀರ್ಮಾನಿಸಿತ್ತು. ಆದರೆ ಈ ಲೀಗ್ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಇದಕ್ಕೆ ಕಾರಣ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ನಿರಂತರವಾಗಿ ನಡೆಯುತ್ತಿರುವ ಸಂಘರ್ಷ.

ವಾಸ್ತವವಾಗಿ ಮಾರ್ಚ್ 16 ರಂದು ಪಾಕಿಸ್ತಾನ, ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ವೈಮಾನಿಕ ದಾಳಿ ನಡೆಸಿ 400 ಕ್ಕೂ ಹೆಚ್ಚು ಜನರನ್ನು ಕೊಂದಿದೆ ಎಂದು ವರದಿಯಾಗಿದೆ. ಪಾಕಿಸ್ತಾನ, ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿರುವ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ. ಈ ದಾಳಿಯು ಎರಡು ದೇಶಗಳ ನಡುವೆ ಯುದ್ಧದಂತಹ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಹೀಗಾಗಿ ಆಸ್ಟ್ರೇಲಿಯಾ ಸರ್ಕಾರ ತನ್ನ ನಾಗರಿಕರು ಮತ್ತು ಆಟಗಾರರಿಗೆ ಪಾಕಿಸ್ತಾನದ ಪೇಶಾವರಕ್ಕೆ ಪ್ರಯಾಣಿಸದಂತೆ ಸೂಚಿಸಿದೆ ಎಂದು ವರದಿಯಾಗಿದೆ.

ಪಿಎಸ್​ಎಲ್ ನಡೆಯುವುದು ಅನುಮಾನ

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಈ ಸಂಘರ್ಷ, ಪಿಎಸ್‌ಎಲ್ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಏಕೆಂದರೆ ಪಾಕಿಸ್ತಾನದ ಮೇಲೆ ಅಫ್ಘಾನಿಸ್ತಾನ ಪ್ರತಿಕಾರ ತೀರಿಸಿಕೊಳ್ಳದೆ ಬಿಡದು. ಆದ್ದರಿಂದ ಪಾಕಿಸ್ತಾನ ಸೂಪರ್ ಲೀಗ್ ನಡೆಯುವ ನಗರಗಳ ಮೇಲೆ ಅಫ್ಘಾನಿಸ್ತಾನ ದಾಳಿ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಇದನ್ನು ಮನಗಂಡಿರುವ ಆಸ್ಟ್ರೇಲಿಯಾ ಸರ್ಕಾರ, ಪಿಎಸ್‌ಎಲ್‌ನಲ್ಲಿ ಆಡುವ ಆಸ್ಟ್ರೇಲಿಯಾ ಆಟಗಾರರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಲು ಅನುಮತಿ ನೀಡಿದೆಯಾದರೂ, ದಾಳಿ ನಡೆಯಬಹುದಾಂತಹ ಸ್ಥಳಗಳಿಗೆ ಹೋಗದಂತೆ ಎಚ್ಚರಿಕೆ ನೀಡಿದೆ.

ಪಿಎಸ್‌ಎಲ್‌ನಲ್ಲಿ ಆಸ್ಟ್ರೇಲಿಯಾದ ಅನೇಕ ಪ್ರಮುಖ ಆಟಗಾರರು ಆಡಲಿದ್ದಾರೆ. ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್‌ರಂತಹ ಆಟಗಾರರು ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಜೊತೆಗೆ ತರಬೇತಿ ಮತ್ತು ಸಹಾಯಕ ಸಿಬ್ಬಂದಿಯಲ್ಲಿ ಹಲವಾರು ಆಸ್ಟ್ರೇಲಿಯಾದ ನಾಗರಿಕರು ಇದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ಸರ್ಕಾರದ ಎಚ್ಚರಿಕೆಯನ್ನು ಅನುಸರಿಸಿ ಇವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಪಂದ್ಯಗಳು ನಡೆಯುವ ನಗರಗಳು ಟಾರ್ಗೆಟ್

ಮೇಲೆ ಹೇಳಿದಂತೆ ಪ್ರತೀಕಾರಕ್ಕಾಗಿ ಕಾಯುತ್ತಿರುವ ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲಿ ವಿದೇಶಿಯರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸಬಹುದು. ಅದರಲ್ಲೂ ಪೇಶಾವರ್ ಮತ್ತು ರಾವಲ್ಪಿಂಡಿ ನಗರಗಳು ಅಫ್ಘಾನಿಸ್ತಾನದ ಟಾರ್ಗೆಟ್ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ರಾವಲ್ಪಿಂಡಿಯಲ್ಲಿ 11 ಪಿಎಸ್‌ಎಲ್‌ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಹೀಗಾಗಿ ಆಸ್ಟ್ರೇಲಿಯಾದ ಆಟಗಾರರು ಇದ್ದಕ್ಕಿದ್ದಂತೆ ಪಿಎಸ್‌ಎಲ್‌ನಿಂದ ಹಿಂದೆ ಸರಿದರೆ, ಪಿಎಸ್‌ಎಲ್ ಅನ್ನು ಮುಂದೂಡಬಹುದು, ಏಕೆಂದರೆ ಅನೇಕ ತಂಡಗಳು ಪ್ರಮುಖ ಆಸ್ಟ್ರೇಲಿಯಾದ ಆಟಗಾರರನ್ನು ಹೊಂದಿವೆ. ಹಲವಾರು ಆಟಗಾರರು ಈಗಾಗಲೇ ಪಿಎಸ್‌ಎಲ್‌ನಿಂದ ಹಿಂದೆ ಸರಿದಿದ್ದಾರೆ. ಐಪಿಎಲ್‌ನಲ್ಲಿ ಆಡಲು ಹಲವಾರು ಆಟಗಾರರು ಪಿಎಸ್‌ಎಲ್ ಅನ್ನು ತೊರೆದಿದ್ದಾರೆ. ಒಂದು ವೇಳೆ ಪಿಎಸ್‌ಎಲ್ ರದ್ದಾದರೆ ಅಥವಾ ಮುಂದೂಡಿದರೆ, ಪಿಸಿಬಿ ಕೋಟ್ಯಾಂತರ ರೂಪಾಯಿಗಳ ನಷ್ಟ ಅನುಭವಿಸುವುದು ಖಚಿತ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

3 ತಿಂಗಳ ಮೇಲಿನ ಮಗುವನ್ನು ದತ್ತು ಪಡೆದ ತಾಯಂದಿರಿಗೂ ಹೆರಿಗೆ ರಜೆ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವದೆಹಲಿ, ಮಾರ್ಚ್ 17: ದತ್ತು ಪಡೆಯುವ ತಾಯಂದಿರಿಗೆ ಹೆರಿಗೆ ರಜೆ ನೀಡುವ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ಐತಿಹಾಸಿಕ ತೀರ್ಪು ನೀಡಿದೆ. 3 ತಿಂಗಳಿಗಿಂತ ಹೆಚ್ಚಿನ ವಯಸ್ಸಿನ ಮಗುವನ್ನು ದತ್ತು ತೆಗೆದುಕೊಳ್ಳುವವರಿಗೂ ಪೂರ್ಣ ಹೆರಿಗೆ ರಜೆ ಸಿಗಲಿದೆ. ಇದನ್ನು ಮಾನವ ಹಕ್ಕು ಎಂದು ಕರೆದ ಸುಪ್ರೀಂ ಕೋರ್ಟ್ ದತ್ತು ಪಡೆದ ಮಗು ಆ ತಾಯಿ ಹೆತ್ತ ಮಗುವಿಗಿಂತ ಭಿನ್ನವಾಗಿಲ್ಲ. ದತ್ತು ಪಡೆದ ಮಗು ಕೂಡ ಆ ಮಹಿಳೆಯ ಮಗುವಿನಂತೆಯೇ ಎಂದು ಹೇಳಿದೆ.

ದತ್ತು ಪಡೆದ ಮಗುವಿನ ವಯಸ್ಸನ್ನು ಲೆಕ್ಕಿಸದೆ ದತ್ತು ಪಡೆದ ತಾಯಿಗೆ 12 ವಾರಗಳ ಹೆರಿಗೆ ರಜೆಗೆ ಅರ್ಹತೆ ಇರಬೇಕು ಎಂದು ನ್ಯಾಯಮೂರ್ತಿ ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಮಹಾದೇವನ್ ಅವರ ಪೀಠ ಸ್ಪಷ್ಟಪಡಿಸಿದೆ. ದತ್ತು ಪಡೆದ ತಾಯಂದಿರಿಗೆ ಮೂರು ತಿಂಗಳೊಳಗಿನ ಮಕ್ಕಳನ್ನು ದತ್ತು ತೆಗೆದುಕೊಳ್ಳುವವರಿಗೆ ಮಾತ್ರ ಹೆರಿಗೆ ರಜೆಯನ್ನು ಸೀಮಿತಗೊಳಿಸುವ ಕಾನೂನು ನಿಬಂಧನೆಯನ್ನು ಸುಪ್ರೀಂ ಕೋರ್ಟ್ ಅಸಂವಿಧಾನಿಕ ಎಂದು ಘೋಷಿಸಿದೆ. ಮಗುವಿನ ವಯಸ್ಸನ್ನು ಲೆಕ್ಕಿಸದೆ, ಎಲ್ಲಾ ದತ್ತು ಪಡೆದ ತಾಯಂದಿರು ದತ್ತು ಪಡೆದ ದಿನಾಂಕದಿಂದ 12 ವಾರಗಳ ರಜೆಗೆ ಅರ್ಹರಾಗಿರುತ್ತಾರೆ. ಈ ಸಂದರ್ಭದಲ್ಲಿ ಇಬ್ಬರಿಗೂ ಬಾಂಧವ್ಯ, ಆರೈಕೆ ಮತ್ತು ಹೊಂದಾಣಿಕೆಗೆ ಸಮಯ ಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ: NCERT ಪುಸ್ತಕ ವಿವಾದ; ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಅಧ್ಯಾಯ ಬರೆದ ಲೇಖಕರಿಗೆ ಸುಪ್ರೀಂ ಕೋರ್ಟ್ ನಿಷೇಧ

ಸುಪ್ರೀಂ ಕೋರ್ಟ್‌ನ ಈ ತೀರ್ಪಿನ ಮೊದಲು ಮಗು ಮೂರು ತಿಂಗಳಿಗಿಂತ ದೊಡ್ಡದಾಗಿದ್ದರೆ ದತ್ತು ಪಡೆದ ತಾಯಿಗೆ ಹೆರಿಗೆ ರಜೆಯ ಸೌಲಭ್ಯ ದೊರೆಯುವುದಿಲ್ಲ ಎಂಬ ನಿಯಮವಿತ್ತು. ಈಗ ಮಗುವಿನ ವಯಸ್ಸಿನ ಮಿತಿಯನ್ನು ತೆರವುಗೊಳಿಸಿರುವ ಸುಪ್ರೀಂ ಕೋರ್ಟ್​ ಯಾವುದೇ ವಯೋಮಾನದ ಮಗುವನ್ನು ದತ್ತು ಪಡೆದ ಮಹಿಳೆಯರಿಗೆ ಹೆರಿಗೆ ರಜೆ ನಿರಾಕರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ಹಾಗೇ, ಸುಪ್ರೀಂ ಕೋರ್ಟ್ ಪಿತೃತ್ವ ರಜೆಯ ವಿಷಯವನ್ನು ಆಯಾ ಸರ್ಕಾರಕ್ಕೆ ಬಿಡಲಾಗಿದೆ. ತನ್ನ ತೀರ್ಪಿನಲ್ಲಿ ಪಿತೃತ್ವ ರಜೆಗಾಗಿ ಹೊಸ ನಿಯಮಗಳು ಮತ್ತು ಮಾಡಬೇಕಾದ ಯಾವುದೇ ಬದಲಾವಣೆಗಳನ್ನು ಸರ್ಕಾರ ನಿರ್ಧರಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಲಿವುಡ್ ನಟಿ ಸಾರಾಗೆ ಕೇದಾರನಾಥ, ಬದ್ರಿನಾಥ್​​ ದೇವಾಲಯಕ್ಕೆ ಪ್ರವೇಶವಿಲ್ಲ

ಬಾಲಿವುಡ್ ನಟಿ ಸಾರಾ ಅಲಿ ಖಾನ್ (Sara Ali Khan), ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳಿಗೆ ಪದೇ ಪದೇ ಭೇಟಿ ನೀಡುತ್ತಲೇ ಇರುತ್ತಾರೆ. ಈ ಎರಡೂ ಕ್ಷೇತ್ರಗಳ ಪರಮ ಭಕ್ತೆ ಅವರು. ದೇವಾಲಯಕ್ಕೆ ಭೇಟಿ ನೀಡಿದಾಗ ಅಲ್ಲಿನ ಸಂಪ್ರದಾಯದಂತೆ ಹಣೆಯ ತುಂಬ ಅರಿಶಿಣ ಮೆತ್ತಿ ಅದರ ಮೇಲೆ ವಿಭೂತಿ ಧರಿಸಿ, ಕೊರಳಿಗೆ ಹಾರ ಧರಿಸಿ ದೇವರ ದರ್ಶನ ಮಾಡುತ್ತಾರೆ. ಕೇದಾರನಾಥ, ಬದ್ರಿನಾಥ ಕ್ಷೇತ್ರಕ್ಕೆ ಭೇಟಿ ನೀಡಿದರೆ ತಮಗೆ ನೆಮ್ಮದಿ ಸಿಗುತ್ತದೆ ಎಂದು ಹಲವು ಬಾರಿ ಅವರು ಹೇಳಿಕೊಂಡಿದ್ದಾರೆ. ಆದರೆ ಇನ್ನು ಮುಂದೆ ಸಾರಾ ಅಲಿ ಖಾನ್​​ಗೆ ಕೇದಾರನಾಥ ಮತ್ತು ಬದ್ರಿನಾಥ ದೇವಾಲಯಕ್ಕೆ ಪ್ರವೇಶ ಇರುವುದಿಲ್ಲ. ಹೀಗೆಂದು ಸ್ವತಃ ಬದ್ರಿನಾಥ-ಕೇದಾರ್​​ನಾಥ ಸಮಿತಿಯ ಅಧ್ಯಕ್ಷರು ಹೇಳಿದ್ದು, ಒಂದೊಮ್ಮೆ ಸಾರಾ ಅಲಿ ಖಾನ್ ದೇವಾಲಯಕ್ಕೆ ಬರಬೇಕೆಂದರೆ ಅಫಿಡವಿಟ್ ಸಲ್ಲಿಕೆ ಮಾಡಬೇಕು ಎಂದಿದ್ದಾರೆ.

ಬದ್ರಿನಾಥ-ಕೇದಾರ್​​ನಾಥ ದೇವಾಲಯ ಸಮಿತಿಯು ದೇವಾಲಯಕ್ಕೆ ಆಗಮಿಸುವ ಭಕ್ತರ ಕುರಿತಾಗಿ ಹೊಸ ನಿಯಮ ಜಾರಿಗೆ ತಂದಿದ್ದು, ಹಿಂದೂಯೇತರರು ಕಡ್ಡಾಯವಾಗಿ ದೇವಾಲಯಕ್ಕೆ ಪ್ರವೇಶಿಸುವಂತಿಲ್ಲ ಎಂದಿದ್ದಾರೆ. ಒಂದೊಮ್ಮೆ ದೇವಾಲಯಕ್ಕೆ ಪ್ರವೇಶಿಸುವುದೇ ಆದರೆ ಅವರು ತಾವು ಹಿಂದೂ ಧರ್ಮದಲ್ಲಿ ನಂಬಿಕೆ ಇರಿಸುತ್ತಿದ್ದು, ಹಿಂದೂ ಧರ್ಮವನ್ನು ಆಚರಿಸುವುದಾಗಿ ಅಫಿಡವಿಟ್ ಅನ್ನು ದೇವಾಲಯದ ಆಡಳಿತದ ಬಳಿ ಸಲ್ಲಿಕೆ ಮಾಡಿ ಬಳಿಕವಷ್ಟೆ ಅವರು ದೇವಾಲಯಕ್ಕೆ ತೆರಳಬೇಕಾಗಿದೆ. ದೇವಾಲಯದ ಪಾವಿತ್ರ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ಈ ನಿಯಮ ಮಾಡಿರುವುದಾಗಿ ಅವರು ಹೇಳಿದ್ದಾರೆ. ದೇವಾಲಯದ ಸಮಿತಿಯ ವ್ಯಾಪ್ತಿಯಲ್ಲಿರುವ 47 ದೇವಾಲಯಗಳಲ್ಲಿಯೂ ಇದೇ ನಿಯಮ ಪಾಲಿಸಲಾಗುವುದು ಎಂದಿದ್ದಾರೆ ಅವರು.

ಇದನ್ನೂ ಓದಿ:ಆಸ್ಕರ್​ ಅವಾರ್ಡ್ಸ್​​​​ಗೆ ನೆನಪಾಗಿಲ್ಲ ಬಾಲಿವುಡ್​ ಲೆಜೆಂಡ್ ನಟ ಧರ್ಮೇಂದ್ರ

ಈ ಬಗ್ಗೆ ಮಾಹಿತಿ ನೀಡಿರುವ ಸಮಿತಿಯ ಅಧ್ಯಕ್ಷ ಹೇಮಂತ್ ದ್ವಿವೇದಿ, ಸಾರಾ ಅಲಿ ಖಾನ್ ಅವರನ್ನೇ ಉದಾಹರಣೆಯಾಗಿ ತೆಗೆದುಕೊಂಡು ಮಾತನಾಡಿದ್ದು, ‘ಸಾರಾ ಅಲಿ ಖಾನ್, ಕೇದಾರನಾಥ, ಬದ್ರಿನಾಥ ದೇವಾಲಯಕ್ಕೆ ಭೇಟಿ ನೀಡುವಂತಿಲ್ಲ. ಒಂದೊಮ್ಮೆ ಅವರು ಭೇಟಿ ನೀಡಬೇಕಾದರೆ ಅವರು ಸನಾತನ ಧರ್ಮದಲ್ಲಿ ತಮ್ಮ ನಂಬಿಕೆಯನ್ನು ಖಾತ್ರಿ ಪಡಿಸಬೇಕು. ಅಫಿಡವಿಟ್ ಸಲ್ಲಿಕೆ ಮಾಡಿದ ಬಳಿಕವಷ್ಟೆ ಅವರು ದೇವಾಲಯದ ಒಳಗೆ ಬರಬಹುದು’ ಎಂದಿದ್ದಾರೆ ಅಧ್ಯಕ್ಷರು.

ಬಾಲಿವುಡ್ ನಟಿ ಸಾರಾ ಅಲಿ ಖಾನ್, ಖ್ಯಾತ ನಟ ಸೈಫ್ ಅಲಿ ಖಾನ್ ಅವರ ಪುತ್ರಿ. ಆದರೆ ಅವರ ತಾಯಿ ಅಮೃತಾ ಸಿಂಗ್ ಹಿಂದು. ಸಾರಾ ಅಲಿ ಖಾನ್ ಹೇಳಿರುವಂತೆ ಅವರು ಎಳವೆಯಿಂದಲೂ ಎರಡೂ ಧರ್ಮಗಳನ್ನು ಪಾಲಿಸುತ್ತಾ ಬಂದಿದ್ದಾರೆ. ತಮ್ಮ ತಾಯಿಯೊಡನೆ ಹಲವು ದೇವಾಲಯಗಳನ್ನು ಸುತ್ತಿದ್ದಾರೆ. ಅವರು ಬಾಲಿವುಡ್​​ಗೆ ಎಂಟ್ರಿ ನೀಡಿದ್ದು ‘ಕೇದಾರನಾಥ’ ಸಿನಿಮಾ ಮೂಲಕ. ಆಗ ಇಲ್ಲಿಯೇ ಚಿತ್ರೀಕರಣ ಮಾಡಿದ್ದ ಸಾರಾ ಅಲಿ ಖಾನ್, ಆಗಿನಿಂದಲೂ ಕೇದಾರನಾಥ ಮತ್ತು ಬದ್ರಿನಾಥರ ಭಕ್ತರಾಗಿದ್ದಾರೆ. ವರ್ಷಕ್ಕೆ ಕನಿಷ್ಟ ಒಮ್ಮೆಯಾದರೂ ಈ ದೇವಾಲಯಗಳಿಗೆ ಅವರು ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ ಇನ್ನು ಮುಂದೆ ಅವರು ದೇವಾಲಯಕ್ಕೆ ಭೇಟಿ ನೀಡುತ್ತಾರೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಒಂದೇ ರೂಮ್​ನಲ್ಲಿದ್ದ ಸ್ನೇಹಿತರ ನಡುವೆ ಗಲಾಟೆ: ಸುತ್ತಿಗೆಯಿಂದ ಹೊಡೆದು ಗೆಳೆಯನ ಬರ್ಬರ ಹತ್ಯೆ

ಬೆಂಗಳೂರು, ಮಾರ್ಚ್​ 17: ಸುತ್ತಿಗೆಯಿಂದ ಹೊಡೆದು ಸ್ನೇಹಿತನ (friend) ಬರ್ಬರ ಹತ್ಯೆ (kill) ಮಾಡಿರುವಂತಹ ಘಟನೆ ನಗರದ ಅತ್ತಿಮರ ಗೊರವಿನಗೆರೆಯಲ್ಲಿ ನಡೆದಿದೆ. ಮೊಹಮ್ಮದ್ ನಸ್ರುಲ್ಲಾ(24) ಎಂಬಾತನಿಂದ ಕುನಾಲ್ ಕುಮಾರ್(22)ನನ್ನು ಕೊಲೆ ಮಾಡಲಾಗಿದೆ. ಸದ್ಯ ಆವಲಹಳ್ಳಿ ಪೊಲೀಸರು ಮೊಹಮ್ಮದ್ ನಸ್ರುಲ್ಲಾನನ್ನು ಬಂಧಿಸಿ, ತನಿಖೆ ನಡೆಸಿದ್ದಾರೆ.

ನಡೆದಿದ್ದೇನು?

ಮೊಹಮ್ಮದ್ ನಸ್ರುಲ್ಲಾ, ಕುನಾಲ್ ಕುಮಾರ್​​ ಸೇರಿದಂತೆ ಮೂವರು ಸ್ನೇಹಿತರು ಎಸಿ ಸರ್ವಿಸ್ ಕೆಲಸ ಮಾಡಿಕೊಂಡಿದ್ದು, ಒಂದೇ ರೂಮ್​ನಲ್ಲಿ ವಾಸವಾಗಿದ್ದರು. ನಸ್ರುಲ್ಲಾ ತಾಯಿಯ ಬಗ್ಗೆ ಕುನಾಲ್ ಅವಾಚ್ಯಪದ ಬಳಸಿ ನಿಂದಿಸಿದ್ದಾನೆ. ಇದರಿಂದ ಕುಪಿತಗೊಂಡು ಕುನಾಲ್ ಕುಮಾರ್ ಮೇಲೆ ಸುತ್ತಿಗೆಯಿಂದ ಹಲ್ಲೆ ಮಾಡಿ ಹತ್ಯೆಗೈಯಲಾಗಿದೆ.

ದುರಸ್ತಿ ವೇಳೆ ವಿದ್ಯುತ್​ ಪ್ರವಹಿಸಿ ಲೈನ್​ಮ್ಯಾನ್​ ಸಾವು

ದುರಸ್ತಿ ವೇಳೆ ವಿದ್ಯುತ್​ ಪ್ರವಹಿಸಿ ಲೈನ್​ಮ್ಯಾನ್​ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನ ದಾಸರಹಳ್ಳಿಯಲ್ಲಿ ಅವಘಡ ಸಂಭವಿಸಿದೆ. 53 ವರ್ಷದ ಅಮರೇಶ್ ಟಿ.ಸಿ ಮೃತ ದುರ್ದೈವಿ. ಕೆಂಪಾಪುರ ದಾಸರಹಳ್ಳಿಯ ಕಾಫಿ ಬೋರ್ಡ್ ಲೇಔಟ್ ಮುಖ್ಯರಸ್ತೆಯಲ್ಲಿ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ 11ಕೆವಿ ತಂತಿ ತಗುಲಿ ಮೃತಪಟ್ಟಿದ್ದಾರೆ.

ಲಾರಿ, ಹಾಲಿನ ಕ್ಯಾಂಟರ್ ನಡುವೆ ಡಿಕ್ಕಿ: ಬೈಕ್​ ಸವಾರ ಸಾವು

ರಾಯಚೂರಿನಲ್ಲಿ ಲಾರಿ ಮತ್ತು ಹಾಲಿನ ಕ್ಯಾಂಟರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಅಪಘಾತದಲ್ಲಿ ಪಕ್ಕದಲ್ಲೇ ಹೊರಟಿದ್ದ ಬೈಕ್ ಸವಾರನ ಮೇಲೆ ಲಾರಿ ಹರಿದು ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಹಂಚಿನಾಳ ಬಳಿ ಘಟನೆ ನಡೆದಿದೆ.

ಅಬ್ದುಲ್ ರೆಹಮಾನ್ (23)ಮೃತ ಬೈಕ್ ಸವಾರ. ಸಿಂಧನೂರಿನಿಂದ ಹಂಚಿನಾಳ ಮಾರ್ಗವಾಗಿ ಗೊಬ್ಬರದ ಲಾರಿ ಹೊರಟಿತ್ತು. ಈ ವೇಳೆ ಸಿಂಧನೂರು ಕಡೆ ಹಾಲಿನ ಕ್ಯಾಂಟರ್ ಬರುತ್ತಿತ್ತು. ಅತೀ ವೇಗದಲ್ಲಿದ್ದ ಹಿನ್ನೆಲೆ ಮುಖಾಮುಖಿ ಡಿಕ್ಕಿ ಹೊಡೆದಿವೆ.

ಇದನ್ನೂ ಓದಿ: ಯುವಕನ ಪ್ರಾಣವನ್ನೇ ಬಲಿ ಪಡೆದ ಸ್ನೇಹಿತನ ಸಹೋದರಿ ಜೊತೆಗಿನ ಅಕ್ರಮ ಸಂಬಂಧ: ಗೆಳೆಯನಿಂದಲೇ ನಡೀತು ಭೀಕರ ಹತ್ಯೆ

ಈ ವೇಳೆ ಅದೇ ಮಾರ್ಗವಾಗಿ ಬರ್ತಿದ್ದ ಬೈಕ್ ಸವಾರರ ಮೇಲೆ ಲಾರಿ ಹರಿದಿದೆ. ಘಟನೆಯಲ್ಲಿ ಲಾರಿ ಹಾಗೂ ಕ್ಯಾಂಟರ್ ಚಾಲಕರಿಬ್ಬರಿಗೂ ಗಾಯಗಳಾಗಿವೆ. ಸಿಂಧನೂರು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಸಿಂಧನೂರು ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಂಗಾಳದಲ್ಲಿ ಟಿಎಂಸಿಯಿಂದ 291 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಮತ್ತೆ ಮಮತಾ ಬ್ಯಾನರ್ಜಿ- ಸುವೇಂದು ಅಧಿಕಾರಿ ಮುಖಾಮುಖಿ

ಕೊಲ್ಕತ್ತಾ, ಮಾರ್ಚ್ 17: ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ (West Bengal Assembly Elections)  ತೃಣಮೂಲ ಕಾಂಗ್ರೆಸ್ (ಟಿಎಂಸಿ) ಇಂದು 291 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಟಿಎಂಸಿ ಮುಖ್ಯಸ್ಥೆ ಮತ್ತು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಭದ್ರಕೋಟೆಯಾದ ಭವಾನಿಪುರದಿಂದ ಸ್ಪರ್ಧಿಸಲಿದ್ದಾರೆ. ಇಂದು ಟಿಎಂಸಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ 52 ಮಹಿಳಾ ಅಭ್ಯರ್ಥಿಗಳಿದ್ದಾರೆ. ಇದಲ್ಲದೆ, 95 ಅಭ್ಯರ್ಥಿಗಳು ಎಸ್‌ಸಿ/ಎಸ್‌ಟಿ ಸಮುದಾಯಗಳವರು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ನಡುವಿನ ತೀವ್ರ ಪೈಪೋಟಿಗೆ ಈ ಬಾರಿಯೂ ಭವಾನಿಪುರ ಸಾಕ್ಷಿಯಾಗಲಿದೆ. ಸೋಮವಾರ, ಬಿಜೆಪಿ ತನ್ನ 144 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಸುವೇಂದು ಅಧಿಕಾರಿಯ ಹೆಸರನ್ನು ಘೋಷಿಸಿತ್ತು. ಅವರು ಕಳೆದ ಬಾರಿಯ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯನ್ನು ಸೋಲಿಸಿದ ನಂದಿಗ್ರಾಮದಿಂದಲೂ ಸ್ಪರ್ಧಿಸಲಿದ್ದಾರೆ. ಟಿಎಂಸಿಯ ಪಬಿತ್ರ ಕರ್ ಈ ಬಾರಿ ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿಯ ವಿರುದ್ಧ ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ: ಚುನಾವಣಾ ಆಯೋಗ ಮಾರ್ಚ್​ 16ರಂದು ಪಶ್ಚಿಮ ಬಂಗಾಳ ಚುನಾವಣಾ ದಿನಾಂಕ ಘೋಷಿಸುವ ಸಾಧ್ಯತೆ

2018ರ ವಿಧಾನಸಭಾ ಚುನಾವಣೆಗೆ ಮುನ್ನ ಹಲವಾರು ನಾಯಕರು ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಅವರಲ್ಲಿ ಸುವೇಂದು ಅಧಿಕಾರಿ ಕೂಡ ಒಬ್ಬರು.

ಟಿಎಂಸಿ 3 ಸ್ಥಾನಗಳನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಟ್ಟಿದೆ.
ಟಿಎಂಸಿ ಮೂರು ಸ್ಥಾನಗಳನ್ನು ಅನಿತ್ ಥಾಪಾ ನೇತೃತ್ವದ ಭಾರತೀಯ ಗೂರ್ಖಾ ಪ್ರಜಾತಂತ್ರಿಕ್ ಮೋರ್ಚಾ (ಬಿಜಿಪಿಎಂ)ಗೆ ಬಿಟ್ಟುಕೊಟ್ಟಿದೆ. ಈ ಸ್ಥಾನಗಳೆಂದರೆ, ಕಾಲಿಂಪಾಂಗ್, ಡಾರ್ಜಿಲಿಂಗ್ ಮತ್ತು ಕುರ್ಸಿಯೋಂಗ್.

ಇದನ್ನೂ ಓದಿ: ಬಂಗಾಳ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿ ಕಣಕ್ಕೆ

294 ಸದಸ್ಯರ ಪಶ್ಚಿಮ ಬಂಗಾಳ ವಿಧಾನಸಭೆಗೆ ಏಪ್ರಿಲ್ 23 ಮತ್ತು ಏಪ್ರಿಲ್ 29ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮತ ಎಣಿಕೆ ಮೇ 4ರಂದು ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

40 ವರ್ಷದ ನಂತರ ತಪ್ಪದೆ ಈ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ? ಇಲ್ಲಿದೆ ವೈದ್ಯರ ಸಲಹೆ

40 ವರ್ಷದ ನಂತರ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವುದು ಅತ್ಯಂತ ಮುಖ್ಯವಾಗುತ್ತದೆ. ಈ ವಯಸ್ಸಿನಲ್ಲಿ ದೇಹದ ಮೆಟಾಬಾಲಿಸಮ್ ನಿಧಾನಗೊಳ್ಳಬಹುದು ಮತ್ತು ಜೀವನಶೈಲಿಗೆ ಸಂಬಂಧಿತ ರೋಗಗಳ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ ನಿಯಮಿತ ಆರೋಗ್ಯ ತಪಾಸಣೆಗಳ ಮೂಲಕ ದೇಹದಲ್ಲಿ ನಡೆಯುವ ಬದಲಾವಣೆಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸುವುದು ಅಗತ್ಯ. ತಜ್ಞರ ಪ್ರಕಾರ, ಈ ನಿಯಮಗಳು ಮಹಿಳೆಯರು ಮತ್ತು ಪುರುಷರು ಇಬ್ಬರಿಗೂ ಸಮಾನವಾಗಿ ಅನ್ವಯಿಸುತ್ತವೆ. ವಯಸ್ಸು ಹೆಚ್ಚಾದಂತೆ ದೇಹದ ಅಗತ್ಯತೆಗಳು ಬದಲಾಗುತ್ತವೆ ಮತ್ತು ವಿವಿಧ ಅಂಗಾಂಗಗಳ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ. ನಿಯಮಿತ ಪರೀಕ್ಷೆಗಳ ಮೂಲಕ ದೇಹ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ವೈದ್ಯರು ತಿಳಿದು, ಸರಿಯಾದ ಸಲಹೆ ನೀಡಬಹುದು. ಹಾಗಾದರೆ 40ರ ನಂತರ ಪುರುಷ ಮತ್ತು ಮಹಿಳೆಯರು (Women) ಯಾವ ತಪಾಸಣೆ ಮಾಡಿಸಿಕೊಳ್ಳಬೇಕು, ಇದರಿಂದ ಸಿಗುವ ಉಪಯೋಗಗಳೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪುರುಷರಿಗೆ ಅಗತ್ಯವಿರುವ ತಪಾಸಣೆಗಳು:

ವೈದ್ಯರ ಸಲಹೆಯಂತೆ, 40 ವರ್ಷದ ನಂತರ ಪುರುಷರು ಬ್ಲಡ್ ಪ್ರೆಶರ್, ಬ್ಲಡ್ ಶುಗರ್, ಲಿಪಿಡ್ ಪ್ರೊಫೈಲ್ ಮತ್ತು ಲಿವರ್ ಫಂಕ್ಷನ್ ಟೆಸ್ಟ್‌ಗಳನ್ನು ನಿಯಮಿತವಾಗಿ ಮಾಡಿಸಬೇಕು. ಇವು ಹೃದಯ ಆರೋಗ್ಯ ಮತ್ತು ಮೆಟಾಬಾಲಿಕ್ ಸಮಸ್ಯೆಗಳ ಅಪಾಯವನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತದೆ. ಕಿಡ್ನಿ ಫಂಕ್ಷನ್ ಮತ್ತು ಮೂತ್ರ ಪರೀಕ್ಷೆ ಕೂಡ ಮುಖ್ಯ. ಪ್ರೋಸ್ಟೇಟ್ ಸಮಸ್ಯೆಗಳ ಪತ್ತೆಗೆ ಪಿಎಸ್ಎ (PSA) ಟೆಸ್ಟ್ ಸಹ ಮಾಡಿಸಬಹುದು. ಕಣ್ಣು, ಹಲ್ಲು ಮತ್ತು ಈಸಿಜಿ (ECG) ಪರೀಕ್ಷೆಗಳು ಕೂಡ ಅವಶ್ಯಕ.

ಇದನ್ನೂ ಓದಿ: ಅತಿಯಾಗಿ ಕೂದಲು ಉದುರುತ್ತಿದೆಯೇ? ಹಾಗಿದ್ರೆ ನಿರ್ಲಕ್ಷ್ಯ ಮಾಡ್ಬೇಡಿ ಇದು ಈ ರೋಗದ ಸೂಚನೆಯಾಗಿರಬಹುದು

ಮಹಿಳೆಯರಿಗೆ ಅಗತ್ಯವಿರುವ ತಪಾಸಣೆಗಳು:

ಮಹಿಳೆಯರಲ್ಲಿ 40 ನಂತರ ಹಾರ್ಮೋನಲ್ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಬ್ಲಡ್ ಪ್ರೆಶರ್, ಬ್ಲಡ್ ಶುಗರ್ ಮತ್ತು ಕೊಲೆಸ್ಟ್ರಾಲ್ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸಬೇಕು. ಥೈರಾಯ್ಡ್ ಫಂಕ್ಷನ್ ಟೆಸ್ಟ್ ಕೂಡ ಅಗತ್ಯ. ಮ್ಯಾಮೋಗ್ರಫಿ ಮತ್ತು ಬ್ರೆಸ್ಟ್ ಪರೀಕ್ಷೆಗಳಿಂದ ಸಮಸ್ಯೆಗಳನ್ನು ಬೇಗ ಗುರುತಿಸಬಹುದು. ಪ್ಯಾಪ್ ಸ್ಮಿಯರ್ ಟೆಸ್ಟ್ ಮೂಲಕ ಸರ್ವೈಕಲ್ ಆರೋಗ್ಯವನ್ನು ಪರಿಶೀಲಿಸಬಹುದು. ಜೊತೆಗೆ ಬೋನ್ ಡೆನ್ಸಿಟಿ ಟೆಸ್ಟ್ ಸಹ ಉಪಯುಕ್ತವಾಗಿದೆ.

ಎಷ್ಟು ಬಾರಿ ತಪಾಸಣೆ ಮಾಡಿಸಬೇಕು?

40 ವರ್ಷದ ನಂತರ ವರ್ಷಕ್ಕೆ ಕನಿಷ್ಠ ಒಂದು ಬಾರಿ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಬೇಕು. ಹೈ ಬ್ಲಡ್ ಪ್ರೆಶರ್ ಅಥವಾ ಡಯಾಬಿಟೀಸ್ ಇರುವವರು ವೈದ್ಯರ ಸಲಹೆಯಂತೆ ಹೆಚ್ಚು ಬಾರಿ ಪರೀಕ್ಷೆ ಮಾಡಿಸಬೇಕು. ನಿಯಮಿತ ತಪಾಸಣೆಗಳು ಉತ್ತಮ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿವೆ. ಅಷ್ಟೇ ಅಲ್ಲ ಇದರಿಂದ ಆರೋಗ್ಯ ಸಮಸ್ಯೆಗಳನ್ನು ಮುಂಚಿತವಾಗಿ ಪತ್ತೆಹಚ್ಚಿ ಅದನ್ನು ತಡೆಗಟ್ಟಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೂಡುಬಿದ್ರೆ ಇನ್ಸ್​​ಪೆಕ್ಟರ್ ಸಂದೇಶ್ ಮತ್ತಷ್ಟು ಲೀಲೆಗಳು ಬಯಲು: ಹೊಸ ಆಡಿಯೋ ವೈರಲ್​​

ಮಂಗಳೂರು, ಮಾರ್ಚ್​​ 17: ಮೂಡುಬಿದ್ರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂದೇಶ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಕೇಳಿಬಂದಿರುವ ನಡುವೆ, ಇನ್ಸ್ಪೆಕ್ಟರ್ ಮಹಿಳೆಯೊಂದಿಗೆ ಮಾತನಾಡಿರುವ ಆಡಿಯೋ ಸಂಭಾಷಣೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾನು ಆಕೆಯ ಟಚ್ ಬಿಟ್ಟಿದ್ದೀನಿ, ದೇವರಾಣೆ ನೀನು ಬಿಟ್ರೆ ನನಗೆ ಯಾರೂ ಬೇಡ ಎಂಬಂತಹ ಪದಗಳು ಆಡಿಯೋದಲ್ಲಿದ್ದು, ನೂರಾರು ಮಹಿಳೆಯರಿಗೆ ಸಂದೇಶ್​​ ಕಿರುಕುಳ ನೀಡಿದ್ದಾರೆ ಎಂಬ ಸಂತ್ರಸ್ತೆಯ ಆರೋಪಗಳಿಗೆ ಇಂಬು ನೀಡುವಂತವೆ. ಹಳೆಯಂಗಡಿಯವಳು ಯಾರು ಅಂತಾ ಮಹಿಳೆ ಸಂದೇಶ್​​ರನ್ನು ತರಾಟೆಗೆ ಪಡೆದಿದ್ದು, ಟೀಚರ್ ಜೊತೆ ಏನು ಸಂಬಂಧ ಮತ್ತು ಮನೆ ಕೆಲಸದವಳ ಜೊತೆ ಏನು ನಡೀತಿದೆ ಅಂತಲೂ ಪ್ರಶ್ನಿಸಿರೋದು ಆಡಿಯೋದಲ್ಲಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಒಂದಕ್ಕಿಂತ ಹೆಚ್ಚು ಇಪಿಎಫ್ ಅಕೌಂಟ್​ಗಳನ್ನು ವಿಲೀನಗೊಳಿಸುವ ಸುಲಭ ಕ್ರಮಗಳು

ಇವತ್ತು ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಭವಿಷ್ಯದ ಭದ್ರತೆಗೆ ಇರುವ ಸ್ಕೀಮ್​ಗಳಲ್ಲಿ ಇಪಿಎಫ್ ಅಕೌಂಟ್ ಪ್ರಮುಖವಾದುದು. ಪ್ರತೀ ಉದ್ಯೋಗಿಗೂ ಕಂಪನಿ ವತಿಯಿಂದ ಇಪಿಎಫ್ ಅಕೌಂಟ್ ತೆರೆಯಲಾಗುತ್ತದೆ. ಉದ್ಯೋಗಿಯ ಸಂಬಳದಲ್ಲಿ ಶೇ. 12ರಷ್ಟು ಹಣವನ್ನು ಕಡಿತಗೊಳಿಸಿ ಈ ಅಕೌಂಟ್​ಗೆ ಹಾಕಲಾಗುತ್ತದೆ. ಕಂಪನಿ (ಉದ್ಯೋಗದಾತರು) ವತಿಯಿಂದಲೂ ಅಷ್ಟೇ ಪ್ರಮಾಣದಲ್ಲಿ ಹಣವು ಇಪಿಎಫ್ ಅಕೌಂಟ್​ಗೆ ಸೇರ್ಪಡೆಯಾಗುತ್ತದೆ. ಸರ್ಕಾರದಿಂದ (ಇಪಿಎಫ್​​ಒ ಸಂಸ್ಥೆ) ಪ್ರತೀ ವರ್ಷ ಇಪಿಎಫ್ ಅಕೌಂಟ್​ನಲ್ಲಿರುವ ಹಣಕ್ಕೆ ಬಡ್ಡಿ ಸಂದಾಯ ಆಗುತ್ತದೆ. ಹೀಗೆ ಉದ್ಯೋಗಿ ನಿವೃತ್ತಿಯಾಗುವವರೆಗೂ ಹಣ ಬೆಳೆಯಬೇಕೆನ್ನುವುದು ಉದ್ದೇಶ.

ಇದೇ ವೇಳೆ, ಉದ್ಯೋಗಿಯು ಕಂಪನಿ ಬದಲಿಸಿ ಹೊಸ ಕಂಪನಿ ಸೇರಿದಾಗ ಹೊಸ ಇಪಿಎಫ್ ಅಕೌಂಟ್ ರಚನೆಯಾಗುತ್ತದೆ. ಉದ್ಯೋಗಿಯು ತನ್ನ ವೃತ್ತಿಜೀವನದಲ್ಲಿ ಹಲವು ಕಂಪನಿಗಳಲ್ಲಿ ಕೆಲಸ ಮಾಡಬಹುದಾದ್ದರಿಂದ ಬಹು ಇಪಿಎಫ್ ಅಕೌಂಟ್​ಗಳು ಇದ್ದಿರಲು ಸಾಕು. ಕಂಪನಿ ಬದಲಿಸಿದಾಗ ಹಿಂದಿನ ಕಂಪನಿಯ ಇಪಿಎಫ್ ಅಕೌಂಟ್ ಅನ್ನು ವಿಲೀನಗೊಳಿಸಲು ಹೊಸ ಕಂಪನಿಯ ಎಚ್​ಆರ್​ಗೆ ತಿಳಿಸಿದರೆ ಸುಲಭವಾಗಿ ವಿಲೀನಗೊಳಿಸಬಹುದು. ಇಲ್ಲದಿದ್ದರೆ ಒಬ್ಬ ವ್ಯಕ್ತಿಗೆ ಹಲವು ಇಪಿಎಫ್ ಅಕೌಂಟ್​ಗಳು ಇರುತ್ತವೆ.

ಇದನ್ನೂ ಓದಿ: ಹೂಡಿಕೆಗೆ ಯಾವ ರೀತಿಯ ಮ್ಯೂಚುವಲ್ ಫಂಡ್​ಗಳನ್ನು ಆಯ್ದುಕೊಳ್ಳಬೇಕು? ಗಮನಿಸಬೇಕಾದ ಅಂಶಗಳಿವು

ಒಂದಕ್ಕಿಂತ ಹೆಚ್ಚು ಇಪಿಎಫ್ ಅಕೌಂಟ್​ಗಳಿದ್ದರೆ ಅವನ್ನು ಇತ್ತೀಚಿನ ಇಪಿಎಫ್ ಅಕೌಂಟ್​ಗೆ ವಿಲೀನಗೊಳಿಸಬಹುದು. ಆನ್​ಲೈನ್​ನಲ್ಲೇ ಸುಲಭವಾಗಿ ಈ ಕೆಲಸ ಮಾಡಬಹುದು. ಹಾಗೆ ಮಾಡಲು ಯುಎಎನ್ ಆ್ಯಕ್ಟಿವೇಟ್ ಆಗಿರಬೇಕು. ಇಪಿಎಫ್ ಅಕೌಂಟ್​ಗಳನ್ನು ವಿಲೀನಗೊಳಿಸುವ ಕ್ರಮ ಹೀಗಿದೆ:

  • ಇಪಿಎಫ್​ಒ ವೆಬ್​ಸೈಟ್​ಗೆ ಭೇಟಿ ನೀಡಿ: www.epfindia.gov.in/site_en/index.php
  • ನಿಮ್ಮ ಯುಎಎನ್ ಮತ್ತು ಪಾಸ್ವರ್ಡ್ ಬಳಸಿ ಸೈನ್ ಇನ್ ಆಗಿ
  • ಆನ್​ಲೈನ್ ಸರ್ವಿಸ್ ಟ್ಯಾಬ್​ಗೆ ಹೋಗಿ, ‘ಒನ್ ಮೆಂಬರ್ ಅಂಡ್ ಒನ್ ಇಪಿಎಫ್ ಅಕೌಂಟ್’ ಲಿಂಕ್ ಕ್ಲಿಕ್ ಮಾಡಿ.
  • ಹೊಸ ವಿಂಡೋದಲ್ಲಿ ನಿಮ್ಮ ವೈಯಕ್ತಿಕ ವಿವರ ಮತ್ತು ಈಗಿರುವ ಕಂಪನಿಯ ಇಪಿಎಫ್ ಅಕೌಂಟ್ ಅನ್ನು ನೋಡಬಹುದು.
  • ನೊಂದಾಯಿತ ಫೋನ್ ನಂಬರ್ ಮತ್ತು ಯುಎಎನ್ ಸೇರಿದಂತೆ ಅಲ್ಲಿ ಕೇಳಲಾಗುವ ಮಾಹಿತಿ ಒದಗಿಸಿ.
  • ‘ಜನರೇಟ್ ಒಟಿಪಿ’ ಆಯ್ಕೆ ಆಯ್ದುಕೊಂಡು ವೆರಿಫಿಕೇಶನ್ ಪಡೆಯಿರಿ.
  • ಈಗ ಹೊಸ ಇಪಿಎಫ್ ಅಕೌಂಟ್​ಗೆ ವಿಲೀನವಾಗಬೇಕಿರುವ ಹಳೆಯ ಇಪಿಎಫ್ ಅಕೌಂಟ್​ಗಳ ಮಾಹಿತಿ ಕೇಳಲಾಗುತ್ತದೆ.
  • ಡಿಕ್ಲರೇಶನ್ ಬಾಕ್ಸ್ ಅನ್ನು ಚೆಕ್ ಮಾಡಿ, ‘ಸಬ್ಮಿಟ್’ ಕ್ಲಿಕ್ ಮಾಡಿ.

ಇದನ್ನೂ ಓದಿ: ಮಾರ್ಕೆಟ್ ಟ್ರೆಂಡ್, ಎಕ್ಸ್​ಪೆನ್ಸ್ ರೇಶಿಯೋ, ಎಮರ್ಜೆನ್ ಫಂಡ್ ಇತ್ಯಾದಿ.. ಜನಸಾಮಾನ್ಯರು ಮಾಡುವ ಹೂಡಿಕೆ ತಪ್ಪುಗಳಿವು

ಈಗ ವಿಲೀನಕ್ಕೆ ನೀವು ಅರ್ಜಿ ಸಲ್ಲಿಸಿದಂತಾಗುತ್ತದೆ. ಈ ಅರ್ಜಿಗೆ ನಿಮ್ಮ ಈಗಿನ ಕಂಪನಿಯು ಅನುಮೋದನೆ ನೀಡಬೇಕು. ಆಗ ಈ ಅರ್ಜಿಯನ್ನು ಇಪಿಎಫ್​ಒ ಪರಿಶೀಲಿಸಿ, ಇಪಿಎಫ್ ಅಕೌಂಟ್​ಗಳನ್ನು ವಿಲೀನಗೊಳಿಸುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಾಗಿಣಿ ದ್ವಿವೇದಿ, ವರಲಕ್ಷ್ಮೀ ‘ಪೊಲೀಸ್ ಕಂಪ್ಲೈಂಟ್’: ಸಾಕ್ಷಿಯಾದ ಹಿರಿಯ ನಟಿ ಪ್ರೇಮಾ

ಮಹಿಳಾ ಪ್ರಧಾನ ಆ್ಯಕ್ಷನ್ ಕಹಾನಿ ಇರುವ ‘ಪೊಲೀಸ್ ಕಂಪ್ಲೈಂಟ್’ ಸಿನಿಮಾದಲ್ಲಿ ವರಲಕ್ಷ್ಮೀ ಶರತಕುಮಾರ್ ಹಾಗೂ ರಾಗಿಣಿ ದ್ವಿವೇದಿ (Ragini Dwivedi) ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ನವೀನ್ ಚಂದ್ರ, ಕೃಷ್ಣ ಸಾಯಿ ಅವರು ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ. ರವಿಶಂಕರ್, ಶರತ್ ಲೋಹಿತಾಶ್ವ, ಸಪ್ತಗಿರಿ, ಅನಿಲ್ ರಾಜ್, ಪೃಥ್ವಿರಾಜ್, ಜೆಮಿನಿ ಸುರೇಶ್ ಮುಂತಾದ ಕಲಾವಿದರು ನಟಿಸಿದ್ದಾರೆ. ಈ ಹಿಂದೆ ‘ಅನು’, ‘ದಂಡು’, ‘ಆಪ್ತ’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ್ದ ಸಂಜೀವ ಮೆಗೋಟಿ ಅವರು ‘ಪೊಲೀಸ್ ಕಂಪ್ಲೈಂಟ್’ (Police Complaint) ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ.

‘ಎಂ.ಎಸ್.ಕೆ. ಪ್ರಮೀದಾಶ್ರೀ ಫಿಲ್ಮ್ಸ್’ ಬ್ಯಾನರ್ ಮೂಲಕ ‘ಪೊಲೀಸ್ ಕಂಪ್ಲೈಂಟ್’ ಚಿತ್ರ ನಿರ್ಮಾಣವಾಗಿದೆ. ಈಗಾಗಲೇ ಬಹುತೇಕ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಟೀಸರ್ ಮತ್ತು ಹಾಡೊಂದನ್ನು ಬಿಡುಗಡೆ ಮಾಡಿದೆ. ನಟಿ ಪ್ರೇಮಾ ಟೀಸರ್ ರಿಲೀಸ್ ಮಾಡಿದರು. ಮೊದಲ ಹಾಡನ್ನು ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್.ಆರ್.ಕೆ. ವಿಶ್ವನಾಥ್ ಬಿಡುಗಡೆಗೊಳಿಸಿದರು.

ಈ ವೇಳೆ ನಿರ್ದೇಶಕ ಸಂಜೀವ್ ಮೆಗೋಟಿ ಮಾತನಾಡಿದರು. ‘ಸುಮಾರು 10 ವರ್ಷದ ನಂತರ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೆ ಬರುತ್ತಿರುವುದಕ್ಕೆ ಖುಷಿಯಾಗುತ್ತಿದೆ. ನಾವು ಮಾಡಿದ ಕರ್ಮ ಹೇಗೆ ನಮ್ಮನ್ನು ಕಾಡುತ್ತದೆ ಎಂಬ ಒಂದು ಎಳೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಕನ್ನಡ ಮತ್ತು ತೆಲುಗಿನ ಸುಮಾರು 50ಕ್ಕೂ ಹೆಚ್ಚಿನ ಕಲಾವಿದರು ನಟಿಸಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡುವ ಯೋಜನೆಯಿದೆ’ ಎಂದು ಅವರು ಹೇಳಿದರು.

ನಟಿ ರಾಗಿಣಿ ದ್ವಿವೇದಿ ಅವರು ‘ಪೊಲೀಸ್ ಕಂಪ್ಲೈಂಟ್’ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ‘ನನ್ನ ವೃತ್ತಿಜೀವನದಲ್ಲಿ ಇದೊಂದು ವಿಭಿನ್ನ ಸಿನಿಮಾ. ಇದರಲ್ಲಿ ತಾಯಿ ಮತ್ತು ಮಗುವಿನ ಸಂಬಂಧದ ಸುತ್ತ ನನ್ನ ಪಾತ್ರ ಸಾಗುತ್ತದೆ. ಆ್ಯಕ್ಷನ್, ಹಾರರ್ ಜತೆಗೆ ಎಮೋಶನ್ಸ್ ಸಹ ಈ ಸಿನಿಮಾದಲ್ಲಿದೆ. ಎಲ್ಲಾ ರೀತಿಯ ಪ್ರೇಕ್ಷಕರಿಗೂ ಈ ಸಿನಿಮಾ ಇಷ್ಟವಾಗಲಿದೆ’ ಎಂದು ರಾಗಿಣಿ ಹೇಳಿದರು.

ಇದನ್ನೂ ಓದಿ: ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ

‘ಈವರೆಗೆ ತೆಲುಗಿನಲ್ಲಿ ಕೆಲವು ಚಿತ್ರಗಳಲ್ಲಿ ನಟಿಸಿದ್ದೇನೆ. ಕನ್ನಡದಲ್ಲಿ ಹೀರೋ ಆಗಿ ಇದು ನನಗೆ ಮೊದಲ ಸಿನಿಮಾ. ಸಿನಿಮಾದ ಕಥೆ ಮತ್ತು ಪಾತ್ರ ತುಂಬಾ ಚೆನ್ನಾಗಿದೆ’ ಎಂದು ಕೃಷ್ಣಸಾಯಿ ಹೇಳಿದರು. ಬಿಡುಗಡೆಯಾಗಿರುವ ಹಾಡಿಗೆ ಆರೋಹಣ ಸುಧೀಂದ್ರ ಸಂಗೀತ ನೀಡಿದ್ದು, ಬಿ.ಆರ್. ಛಾಯಾ ಧ್ವನಿಯಾಗಿದ್ದಾರೆ. ಈ ಸಿನಿಮಾಗೆ ಹರೀಶ್ ಸೊಂಡೇಕೊಪ್ಪ ಛಾಯಾಗ್ರಹಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚಾಮರಾಜನಗರ: ವಿದ್ಯುತ್ ಶಾಕ್​​ಗೆ ಹೆಣ್ಣು ಹುಲಿ ಬಲಿ; ಅರಣ್ಯಾಧಿಕಾರಿಗಳ ಕಳ್ಳಾಟಕ್ಕೆ ರೊಚ್ಚಿಗೆದ್ದ ರೈತರು

ಚಾಮರಾಜನಗರ, ಮಾರ್ಚ್​​ 17: ಗಡಿನಾಡು ಚಾಮರಾಜನಗರದಲ್ಲಿ ಮಾನವ ಮತ್ತು ಕಾಡು ಪ್ರಾಣಿ ಸಂಘರ್ಷ ಮತ್ತೆ ಮುಂದುವರೆದಿದೆ. ಕಳೆದ ವಾರ ಮೂರು ಹಸುವನ್ನ ಕೊಂದು ತಿಂದಿದ್ದ 5 ವರ್ಷದ ಹೆಣ್ಣು ಹುಲಿ (tiger) ವಿದ್ಯುತ್ ಶಾಕ್​​ಗೆ ಬಲಿಯಾಗಿರುವಂತಹ (death) ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ನಡೆದಿದೆ. ಜಾನುವಾರು ಸತ್ತಾಗ ಬಾರದ ಅರಣ್ಯ ಸಿಬ್ಬಂದಿ ಇದೀಗ ಹುಲಿ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಓಡೋಡಿ ಬಂದಿದ್ದ ಅರಣ್ಯಾಧಿಕಾರಿಗಳಿಗೆ ರೈತರು ಚಳಿ ಕೂಡ ಬಿಡಿಸಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿಗೆ ಘೇರಾವ್ ಹಾಕಿದ ಅನ್ನದಾತರು 

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದ ಜಮೀನು ಒಂದಕ್ಕೆ ನೀಡಿದ್ದ ವಿದ್ಯುತ್ ಸಂಪರ್ಕದಿಂದ 5 ವರ್ಷ ಪ್ರಾಯದ ಹೆಣ್ಣು ಹುಲಿ ಸಾವನ್ನಪ್ಪಿದೆ. ಈ ಹಿನ್ನಲೆ ಸ್ಥಳಕ್ಕೆ ಬಂದ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿಗೆ ಘೇರಾವ್ ಹಾಕಿ ಅನ್ನದಾತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಚಾಮರಾಜನಗರದಲ್ಲಿ ಹುಲಿ ಸಾವು ಕೇಸ್​: ಉರುಳು ಹಾಕಿದ್ದ ಆರೋಪಿ ಅರೆಸ್ಟ್

ಇನ್ನು ಕಳೆದ 15 ದಿನಗಳಲ್ಲಿ ರವಿಚಂದ್ರ ಎಂಬುವವರ ಜಮೀನಿನಲ್ಲಿ ಮೇಯುತ್ತಿದ್ದ ಮೂರು ಜಾನುವಾರುಗಳ ಮೇಲೆ ವ್ಯಾಘ್ರ ದಾಳಿ ಮಾಡಿತ್ತು. ಮೂರು ಹಸುವನ್ನ ಕೊಂದು ತಿಂದು ತೇಗಿತ್ತು. ಆಗ ಬಂಡೀಪುರ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದರೆ ಸ್ಥಳಕ್ಕೆ ಬಾರದೆ ಉಡಾಫೆ ತೋರಿದ್ದರು. ಆದರೆ ಇಂದು ಹುಲಿ ಸತ್ತ ವಿಚಾರ ತಿಳಿದ ತಕ್ಷಣ ಇಡೀ ಬಂಡೀಪುರ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದರು. ಇದರಿಂದ ರೊಚ್ಚಿಗೆದ್ದ ರೈತ ವರ್ಗ ಅರಣ್ಯ ಸಿಬ್ಬಂದಿಗೆ ಘೇರಾವ್ ಹಾಕಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಹುಲಿಯ ಕಾಟಕ್ಕೆ ಈ ಭಾಗದ ರೈತರು ರೋಸಿಹೋಗಿದ್ದಾರೆ. ಆಗಲೇ ಅರಣ್ಯ ಸಿಬ್ಬಂದಿ ಬೋನಿಟ್ಟು ಹುಲಿಯನ್ನ ಹಿಡಿದಿದ್ದರೆ ಇಂದು ಹುಲಿ ಬಲಿಯಾಗುತ್ತಿರಲಿಲ್ಲ ಎಂದು ರೈತ ದಿನೇಶ್​ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ: ಗಂಡು ಹುಲಿ ಮೃತದೇಹ ಪತ್ತೆ: ಡ್ಯಾಂನಲ್ಲಿ ಶವ ತೇಲುತ್ತಿರುವುದನ್ನು ಕಂಡು ಬೆಚ್ಚಿಬಿದ್ದ ಪ್ರವಾಸಿಗರು

ಜಮೀನಿನಲ್ಲಿ ವಿದ್ಯುತ್ ಕೊಟ್ಟು ಹುಲಿ ಸಾವಿಗೆ ಕಾರಣವಾದವರ ಮೇಲೆ ಎಫ್​ಐಆರ್ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳಿ, ಆದರೆ ಕರ್ತವ್ಯ ಲೋಪ ಎಸಗಿದ ಅರಣ್ಯ ಇಲಾಖೆಯ ಸಿಎಫ್ ಪ್ರಭಾಕರನ್ ಮೇಲೆ ಎಫ್ ಐ ಆರ್ ಮಾಡಿದರೆ ಮಾತ್ರ ರೈತನ ಮೇಲೆ ಎಫ್​ಐಆರ್ ಮಾಡಬೇಕು. ಇಲ್ಲದೆ ಹೋದರೆ ಯಾವುದೇ ಕಾರಣಕ್ಕೂ ಪ್ರಕರಣ ದಾಖಲು ಮಾಡುವುದಕ್ಕೆ ಬಿಡಲ್ಲವೆಂದು ರೈತರು ಪಟ್ಟುಹಿಡಿದರು. ರೈತರ ಉಗ್ರ ರೂಪಕ್ಕೆ ಬೆದರಿದ ಬಂಡೀಪುರ ಸಿಎಫ್ ಪ್ರಭಾಕರನ್, ಪೊಲೀಸ್ ರಕ್ಷಣೆ ಜೊತೆ ಸ್ಥಳಕ್ಕೆ ಬಂದಿದ್ದು ಹಾಸ್ಯಸ್ಪದವಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link