All posts by nagaraj11081993

ಕೂದಲಿಗೆ ಹೇರ್ ಡೈ ಹಚ್ಚುತ್ತೀರಾ? ಹಾಗಿದ್ರೆ ಮಿಸ್ ಮಾಡ್ದೆ ಈ ಸ್ಟೋರಿ ಓದಿ

ಕೂದಲಿಗೆ ಹೇರ್ ಡೈ ಹಚ್ಚುತ್ತೀರಾ? ಹಾಗಿದ್ರೆ ಮಿಸ್ ಮಾಡ್ದೆ ಈ ಸ್ಟೋರಿ ಓದಿ

ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲೇ ಕೂದಲು ಬಿಳಿಯಾಗುವ ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿದೆ. ಬದಲಾಗುತ್ತಿರುವ ಜೀವನಶೈಲಿ, ಹೆಚ್ಚುತ್ತಿರುವ ಒತ್ತಡ, ಆಹಾರ ಪದ್ಧತಿಯಲ್ಲಿ ಮಾಡಿಕೊಂಡಿರುವ ಬದಲಾವಣೆಗಳು ಮತ್ತು ಮಾಲಿನ್ಯ (Pollution) ಈ ಸಮಸ್ಯೆಯ ಹೆಚ್ಚಳಕ್ಕೆ ಪ್ರಮುಖ ಕಾರಣಗಳೆಂದು ಹೇಳಲಾಗುತ್ತದೆ. ಈ ರೀತಿ ಕಂಡುಬರುವ ಬಿಳಿ ಕೂದಲನ್ನು ಮರೆಮಾಡಲು ಹೇರ್ ಡೈ ಬಳಸುತ್ತಾರೆ. ಹಿಂದೆ ವಯಸ್ಸಾದವರು ಮಾತ್ರ ಹೇರ್ ಡೈ (Hair Dye) ಬಳಸುತ್ತಿದ್ದರು. ಆದರೆ ಈಗ ಹಾಗಲ್ಲ. ಯುವಕ, ಯುವತಿಯರೂ ಕೂಡ ನಿಯಮಿತವಾಗಿ ಬಳಸಲು ಆರಂಭಿಸಿದ್ದಾರೆ. ಮಾರುಕಟ್ಟೆಯಲ್ಲಿ ಕೆಮಿಕಲ್ ಆಧಾರಿತ ಡೈ, ಹರ್ಬಲ್ ಡೈ ಹಾಗೂ ಇನ್‌ಸ್ಟಂಟ್ ಕಲರ್ ಸೇರಿದಂತೆ ಹಲವು ರೀತಿಯ ಹೇರ್ ಡೈಗಳು ಲಭ್ಯವಿದ್ದು, ಜನ ಇದರ ಬಳಕೆ ಮಾಡುವಾಗ ಸಾಮಾನ್ಯವಾಗಿ ಕೂದಲಿನ ಬಣ್ಣದ ಬಗ್ಗೆ ಮಾತ್ರ ಗಮನ ಕೊಡುತ್ತಾರೆ. ಆದರೆ ಇದರಿಂದ ಚರ್ಮಕ್ಕೂ ಪರಿಣಾಮ ಬೀರುವ ಸಾಧ್ಯತೆ ಇದೆ. ಕೂದಲಿಗೆ ಡೈ ಹಾಕುವಾಗ ಕೆಲವೊಮ್ಮೆ ನೆತ್ತಿ, ಕಿವಿಗಳ ಸುತ್ತ ಮತ್ತು ಕುತ್ತಿಗೆಯ ಚರ್ಮದ ಸಂಪರ್ಕಕ್ಕೆ ಬರುತ್ತದೆ. ಇದರಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಇದರಿಂದ ಯಾವ ರೀತಿಯ ಸಮಸ್ಯೆಗಳು ಬರುತ್ತದೆ, ಚರ್ಮವನ್ನು ರಕ್ಷಿಸಿಕೊಳ್ಳಲು ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ.

ಹೇರ್ ಡೈ ಚರ್ಮಕ್ಕೆ ಮಾಡುವ ಹಾನಿಗಳು:

ಪಿಎಸ್‌ಆರ್‌ಐ ಆಸ್ಪತ್ರೆಯ ಡರ್ಮಟಾಲಜಿ ವಿಭಾಗದ ಡಾ. ಭಾವುಕ್ ಧೀರ್ ಅವರ ಪ್ರಕಾರ, ಹೇರ್ ಡೈಯಲ್ಲಿ ಇರುವ ಹಲವು ರಾಸಾಯನಿಕ ಪದಾರ್ಥಗಳು ಚರ್ಮಕ್ಕೆ ಹಾನಿಕಾರಕವಾಗಬಹುದು. ಕೆಲವರಿಗೆ ಇದರಿಂದ ಅಲರ್ಜಿ, ತುರಿಕೆ ಮತ್ತು ಉರಿ ಕಾಣಿಸಬಹುದು. ಡೈ ಚರ್ಮದ ಸಂಪರ್ಕಕ್ಕೆ ಬಂದಾಗ ಚರ್ಮ ಹೆಚ್ಚು ಸಂವೇದನಶೀಲವಾಗಬಹುದು. ಕೆಲ ಸಂದರ್ಭಗಳಲ್ಲಿ ಚರ್ಮದಲ್ಲಿ ಕೆಂಪು ದದ್ದುಗಳು ಅಥವಾ ಊತ ಕೂಡ ಕಾಣಿಸಬಹುದು. ಹೆಚ್ಚು ಸಮಯ ಅಥವಾ ಪದೇ ಪದೇ ಹೇರ್ ಡೈ ಬಳಸುವುದರಿಂದ ಚರ್ಮದ ಸಹಜ ತೇವಾಂಶದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಚರ್ಮ ಒಣಗುತ್ತದೆ. ಕೆಲವರಿಗೆ ಡೈ ಬಳಸಿದ ಬಳಿಕ ತಲೆಯ ಚರ್ಮದಲ್ಲಿ ಉರಿ ಅಥವಾ ಚುಚ್ಚುವಿಕೆ ಅನುಭವವಾಗಬಹುದು. ಸಂವೇದನಶೀಲ ಚರ್ಮ ಹೊಂದಿರುವವರಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳಬಹುದು. ಆದ್ದರಿಂದ ಹೇರ್ ಡೈ ಬಳಸುವಾಗ ಎಚ್ಚರಿಕೆ ವಹಿಸುವುದು ಅಗತ್ಯ.

ಇದನ್ನೂ ಓದಿ: ಬೋಳುತಲೆ ಮಹಿಳೆಯರಿಗಿಂತ ಪುರುಷರಲ್ಲಿಯೇ ಹೆಚ್ಚಾಗಿ ಕಂಡುಬರಲು ಇದೆ ಕಾರಣ

ಚರ್ಮವನ್ನು ಹೇಗೆ ರಕ್ಷಿಸಿಕೊಳ್ಳಬೇಕು?

ಹೇರ್ ಡೈ ಬಳಸುವ ಮೊದಲು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿದರೆ ಚರ್ಮದ ಹಾನಿಯನ್ನು ತಪ್ಪಿಸಬಹುದು. ಡೈ ಹಾಕುವ ಮೊದಲು ಪ್ಯಾಚ್ ಟೆಸ್ಟ್ ಮಾಡುವುದು ಮುಖ್ಯ. ಇದರಿಂದ ಚರ್ಮಕ್ಕೆ ಅಲರ್ಜಿ ಆಗುತ್ತದೆಯೇ ಎಂಬುದು ತಿಳಿದುಬರುತ್ತದೆ. ಕೂದಲಿಗೆ ಡೈ ಹಾಕುವಾಗ ನೆತ್ತಿ, ಕಿವಿ ಮತ್ತು ಕುತ್ತಿಗೆಯ ಸುತ್ತ ವಾಸಲಿನ್ ಅಥವಾ ಕ್ರೀಮ್ ಹಚ್ಚಬಹುದು. ಇದರಿಂದ ಡೈ ನೇರವಾಗಿ ಚರ್ಮಕ್ಕೆ ತಗುಲುವುದನ್ನು ತಪ್ಪಿಸಬಹುದು. ಜೊತೆಗೆ ಉತ್ತಮ ಬ್ರ್ಯಾಂಡ್ ಮತ್ತು ಕಡಿಮೆ ರಾಸಾಯನಿಕಗಳಿರುವ ಉತ್ಪನ್ನಗಳನ್ನು ಬಳಸುವುದು ಉತ್ತಮ. ಡೈ ಬಳಸಿ ಮುಗಿದ ನಂತರ ಕೂದಲು ಮತ್ತು ಚರ್ಮವನ್ನು ಚೆನ್ನಾಗಿ ತೊಳೆಯುವುದು ಕೂಡ ಅಗತ್ಯ.

ಸಮಸ್ಯೆ ಕಂಡುಬಂದರೆ ಏನು ಮಾಡಬೇಕು?

ಹೇರ್ ಡೈ ಬಳಸಿದ ನಂತರ ಚರ್ಮದಲ್ಲಿ ಬದಲಾವಣೆ ಕಂಡುಬಂದರೆ ಅದನ್ನು ನಿರ್ಲಕ್ಷಿಸಬಾರದು. ಇಂತಹ ಸಂದರ್ಭಗಳಲ್ಲಿ ತಕ್ಷಣವೇ ಕೂದಲನ್ನು ಸ್ವಚ್ಛವಾದ ನೀರಿನಿಂದ ತೊಳೆಯುವುದು ಉತ್ತಮ. ಸಮಸ್ಯೆ ಮುಂದುವರಿದರೆ ವೈದ್ಯರ ಸಲಹೆ ಪಡೆಯುವುದು ಅಗತ್ಯ. ಸಾಧ್ಯವಾದಷ್ಟು ಕೂದಲಿನ ಆರೈಕೆಗೆ ನೈಸರ್ಗಿಕ ವಿಧಾನಗಳನ್ನು ಅನುಸರಿಸಿದರೆ ಕೂದಲು ಮತ್ತು ಚರ್ಮ ಎರಡೂ ಆರೋಗ್ಯಕರವಾಗಿರಲು ಸಹಾಯವಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೈಪುರದಲ್ಲಿ ಮೈ ಮೇಲೆ ಟ್ರಕ್ ಹರಿದು 22 ವರ್ಷದ ಮಹಿಳೆ ಸಾವು

ಜೈಪುರ, ಮಾರ್ಚ್ 10: ಜೈಪುರದಲ್ಲಿ ಟ್ರಕ್ (Truck Accident) ಹರಿದು 22 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಮಹಿಳೆಯನ್ನು ನಾಗಾಲ್ಯಾಂಡ್ ಮೂಲದ ಲಿಗಾ ಜಿಮೋ ಎಂದು ಗುರುತಿಸಲಾಗಿದೆ. ಅವರು ಕಳೆದ ಎರಡು ವರ್ಷಗಳಿಂದ ಮಾಲ್ವಿಯಾ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅಲ್ಲಿನ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಸೋಮವಾರ ರಾತ್ರಿ ಅವರು ಬೈಕ್ ಟ್ಯಾಕ್ಸಿಯಲ್ಲಿ ಮಾಲ್ವಿಯಾ ನಗರಕ್ಕೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಗೋಪಾಲಪುರ ಪುಲಿಯಾ ಬಳಿ ಬೈಕ್​ ನಿಯಂತ್ರಣ ಕಳೆದುಕೊಂಡಿದ್ದರಿಂದ ಮಹಿಳೆ ರಸ್ತೆಗೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Video: ಡಬ್ರಾ-ಗ್ವಾಲಿಯರ್ ಹೆದ್ದಾರಿಯಲ್ಲಿ ಕಾರಿಗೆ ಡಿಕ್ಕಿ ಹೊಡೆದು 1.5 ಕಿ.ಮೀ ಎಳೆದೊಯ್ದ ಟ್ರಕ್

ಇದೇ ವೇಳೆ ಹಿಂದೆ ಬಂದ ಗ್ಯಾಸ್ ಸಿಲಿಂಡರ್‌ಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಅವರ ಮೇಲೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಡಿರಾಷ್ಟ್ರಗಳಿಗೆ ಇದ್ದ ಎಫ್​ಡಿಐ ಬಿಗಿನಿಯಮ ಸಡಿಲಿಸಿದ ಭಾರತ; ಇನ್ಮುಂದೆ ಚೀನೀ ಹೂಡಿಕೆ ಒಳಹರಿವು ಸರಾಗ

ನವದೆಹಲಿ, ಮಾರ್ಚ್ 10: ದೇಶದೊಂದಿಗೆ ಗಡಿ ಹಂಚಿಕೊಂಡಿರುವ ದೇಶಗಳಿಗೆ (border countries) ಇದ್ದ ಎಫ್​ಡಿಐ ನಿರ್ಬಂಧವನ್ನು ಭಾರತ ತೆರವುಗೊಳಿಸುತ್ತಿದೆ. ಎಫ್​ಡಿಐ ನಿಯಮಗಳನ್ನು ಸಡಿಲಗೊಳಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 2020ರಲ್ಲಿ ಗಾಲ್ವನ್​ನಲ್ಲಿ ಚೀನಾ ಜೊತೆ ಜಟಾಪಟಿ ನಡೆದ ಬಳಿಕ ಭಾರತವು ಗಡಿ ದೇಶಗಳ ಹೂಡಿಕೆಗಳ ಮೇಲೆ ನಿರ್ಬಂಧ ಹಾಕಿತ್ತು.

2020ರ ಪ್ರೆಸ್ ನೋಟ್-3 ನಿಯಮಗಳ ಪ್ರಕಾರ ಗಡಿ ದೇಶಗಳ ಸಂಸ್ಥೆಗಳಿಂದ ಭಾರತದಲ್ಲಿ ಹೂಡಿಕೆ ಮಾಡಲು ಸರ್ಕಾರದ ಅನುಮತಿ ಅಗತ್ಯ ಇದೆ. ಚೀನಾ ವಿರುದ್ಧ ಪ್ರತಿಕ್ರಮದ ಭಾಗವಾಗಿ ಭಾರತ ಈ ನಿಯಮ ರೂಪಿಸಿತ್ತು. ಈಗ ಆರು ವರ್ಷದ ಬಳಿಕ ಆ ನಿರ್ಬಂಧವನ್ನು ಭಾರತ ಸಡಿಲಗೊಳಿಸಿದೆ. ಪ್ರೆಸ್ ನೋಟ್-3 ನಿಯಮಗಳನ್ನು ತಿದ್ದುಪಡಿ ಮಾಡಿದೆ.

ಇದನ್ನೂ ಓದಿ: ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ರಾಜೀನಾಮೆ; ರಾಹುಲ್ ಭಾಟಿಯಾ ಹಂಗಾಮಿ ಮುಖ್ಯಸ್ಥ

ಹೊಸ ನಿಯಮಗಳ ಪ್ರಕಾರ ನೆರೆಯ ಗಡಿ ದೇಶಗಳ ಕಂಪನಿಗಳು ಭಾರತದಲ್ಲಿ ಶೇ. 10ರವರೆಗೆ ಹೂಡಿಕೆ ಮಾಡಲು ಸರ್ಕಾರದಿಂದ ಕಡ್ಡಾಯ ಅನುಮೋದನೆ ಪಡೆಯುವ ಅವಶ್ಯಕತೆ ಇರುವುದಿಲ್ಲ. ನಿರ್ದಿಷ್ಟ ಪ್ರಸ್ತಾವಗಳನ್ನು 60 ದಿನದೊಳಗಾಗಿ ನಿರ್ಧರಿಸಲಾಗುತ್ತದೆ. ಚೀನಾ, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ, ಅಫ್ಗಾನಿಸ್ತಾನ, ಭೂತಾನ್ ಮತ್ತು ಮಯನ್ಮಾರ್ ದೇಶಗಳು ಭಾರತದ ಜೊತೆ ಗಡಿ ಹಂಚಿಕೊಂಡಿವೆ. ಈ ಹೊಸ ನಿಯಮ ಸಡಿಲಿಕೆಯು ಚೀನಾದಿಂದ ಹೂಡಿಕೆ ಹರಿದುಬರಲು ಎಡೆ ಮಾಡಿಕೊಡುವ ನಿರೀಕ್ಷೆ ಇದೆ.

ಭಾರತದಲ್ಲಿ ಕಳೆದ ಐದು ವರ್ಷದಲ್ಲಿ ಕಡಿಮೆಗೊಂಡ ಚೀನಾದ ಎಫ್​ಡಿಐ

2000ರ ಏಪ್ರಿಲ್​ನಿಂದ 2025ರ ಡಿಸೆಂಬರ್​ವರೆಗೆ ಭಾರತದ ಈಕ್ವಿಟಿಗಳಿಗೆ ಚೀನಾದಿಂದ ಬಂದ ಎಫ್​ಡಿಐ 2.51 ಬಿಲಿಯನ್ ಡಾಲರ್ ಮಾತ್ರವೇ. ಈ ಅವಧಿಯಲ್ಲಿ ಬಂದ ಒಟ್ಟು ವಿದೇಶೀ ನೇರ ಹೂಡಿಕೆಯಲ್ಲಿ ಚೀನಾದ ಪಾಲು ಶೇ. 0.32 ಮಾತ್ರ. ಅತಿಹೆಚ್ಚು ಹೂಡಿಕೆ ಮಾಡಿದ ದೇಶಗಳ ಪಟ್ಟಿಯಲ್ಲಿ ಚೀನಾ 23ನೇ ಸ್ಥಾನ ಪಡೆಯುತ್ತದೆ.

ಇದನ್ನೂ ಓದಿ: ನಾವ್ಯಾಕೆ ತೈಲ ನೀಡಬೇಕು? ಬಿಕ್ಕಟ್ಟಿಗೆ ಕಾರಣರಾದವರು ಜವಾಬ್ದಾರರು: ಐಇಎಗೆ ಭಾರತದ ಉತ್ತರ

ಭಾರತದಲ್ಲಿ ಚೀನಾದ ಎಫ್​ಡಿಐ ಬಹಳ ಕಡಿಮೆಗೊಂಡಿದೆಯಾದರೂ, ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಬಹಳ ಹೆಚ್ಚಿದೆ. ಭಾರತಕ್ಕೆ ಚೀನಾದ ರಫ್ತುಗಳು ಕೂಡ ಗಣನೀಯವಾಗಿ ಹೆಚ್ಚಿದೆ. 2024-25ರಲ್ಲಿ ಒಂದೇ ವರ್ಷದಲ್ಲಿ ಚೀನಾದ 113.45 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ಭಾರತ ಆಮದು ಮಾಡಿಕೊಂಡಿತು. ಆದರೆ, ಭಾರತದಿಂದ ಚೀನಾಗೆ ರಫ್ತಾಗುತ್ತಿರುವುದು ಮಾತ್ರ ನಗಣ್ಯ. ಹೀಗಾಗಿ, ಎರಡು ದೇಶಗಳ ಮಧ್ಯೆ ಟ್ರೇಡ್ ಡೆಫಿಸಿಟ್ ಬರೋಬ್ಬರಿ 99.2 ಬಿಲಿಯನ್ ಡಾಲರ್​ನಷ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಒಳಮೀಸಲಾತಿ ಬಿಕ್ಕಟ್ಟು ಕ್ಲೈಮ್ಯಾಕ್ಸ್ ಹಂತಕ್ಕೆ: ಸಭೆಯಲ್ಲಿ ಮಹತ್ವದ ತೀರ್ಮಾನ

ಬೆಂಗಳೂರು, (ಮಾರ್ಚ್ 10): ದಲಿತ ಒಳಮೀಸಲಾತಿ (Internal reservation )ನೀಡಿಕೆಯು ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಜಟಾಪಟಿಗೆ ಕಾರಣವಾಗಿದೆ. ಸರ್ಕಾರ ಒಳ ಮೀಸಲಾತಿ ನೀಡದೇ ಸರ್ಕಾರಿ ನೌಕರರ ನೇಮಕಾತಿಗೆ ಮುಂದಾಗಿದೆ. ಇದಕ್ಕೆ ದಲಿತ ಎಡಗೈ ನಾಯಕರು ವಿರೋಧಿಸುತ್ತಿದ್ದಾರೆ. ಇದರಿಂದ ಸ್ವಪಕ್ಷದಲ್ಲೇ ಹೊತ್ತಿಕೊಂಡ ಈ ಭಿನ್ನಾಭಿಪ್ರಾಯದ ಕಿಡಿ, ಪರಿಸ್ಥಿತಿ ಕೈಮೀರಿಸುತ್ತಿದೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕಚೇರಿಯಲ್ಲಿ ದಲಿತ ಸಚಿವರು ಮಹತ್ವದ ಸಭೆ ನಡೆಸಿದ್ದು, ಗೊಂದಲ ಪರಿಹಾರ ಕುರಿತು ಸಿದ್ದರಾಮಯ್ಯ ಜೊತೆಗೆ ಚರ್ಚಿಸಿದ್ದಾರೆ.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಚಿವ ಮುನಿಯಪ್ಪ, ಒಳಮೀಸಲಾತಿ ಆಧರಿಸಿ ನೇಮಕಾತಿ ಮಾಡಿಕೊಳ್ಳುವುದಾಗಿ ಸಿಎಂ ಕೂಡ ಭರವಸೆ ನೀಡಿದ್ದಾರೆ. ಮಾರ್ಚ್ 27ರಂದು ವಿಶೇಷ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನವಾಗುತ್ತೆ. ಬಲ ಸಮುದಾಯ ‌ನಾಯಕರು ಒಳಮೀಸಲಾತಿಗೆ ಒಪ್ಪಿಕೊಂಡಿದ್ದಾರೆ. ಎಡ, ಬಲ ಸಮುದಾಯಗಳಿಗೆ ಸರಿಸಮವಾಗಿ ಒಳಮೀಸಲಾತಿ ಹಂಚಿಕೆ ಮಾಡಲಾಗುತ್ತೆ. ಮಾ.27ರವರೆಗೆ ಯಾವುದೇ ನೇಮಕಾತಿ ಅಧಿಸೂಚನೆ ಪ್ರಕಟಣೆ ಆಗಲ್ಲ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಒಂದೇ ಒಂದು ಕಿಡಿಗೆ ಸತತ 22 ಗಂಟೆ ಕಾಲ ಹೊತ್ತಿ ಉರಿದ ಕೇಬಲ್​​​ ಫ್ಯಾಕ್ಟರಿ

ದೇವನಹಳ್ಳಿ, ಮಾರ್ಚ್​ 10: ಸಣ್ಣ ಕಿಡಿಯಿಂದ ಹೊತ್ತಿಕೊಂಡ ಬೆಂಕಿ ಕೇಬಲ್​​​ ಫ್ಯಾಕ್ಟರಿಯನ್ನೇ ಸಂಪೂರ್ಣವಾಗಿ ಸುಟ್ಟು (cable factory fire) ಬೂದಿ ಮಾಡಿದ್ದು, ಕೋಟ್ಯಂತರ ರೂ ಮೌಲ್ಯದ ಕೇಬಲ್ ವೈರ್​​ಗಳು ಬೆಂಕಿಗಾಹುತಿಯಾಗಿದೆ. ಸತತ 22 ಗಂಟೆಗಳ‌‌ ನಿರಂತರ ಕಾರ್ಯಾಚರಣೆ ಬಳಿಕ ಬೆಂಕಿ ಹತೋಟಿಗೆ ಬಂದಿದ್ದು,  ಸ್ಥಳಿಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹೊರವಲಯದ ಬಾಶೆಟ್ಟಹಳ್ಳಿ ಕೈಗಾರಿಕಾ‌ ಪ್ರದೇಶದ ಅಡ್ವಾನ್ಸ್ ಕೇಬಲ್ ಟೆಕ್ನಾಲಜಿಸ್ ಫ್ಯಾಕ್ಟರಿಯಲ್ಲಿ ನಿನ್ನೆ ಘಟನೆ ನಡೆದಿದೆ.

ನಿನ್ನೆ ಸಂಜೆ ಐದು ಗಂಟೆ ಸಮಯಕ್ಕೆ ಕಾರ್ಮಿಕರೆಲ್ಲಾ ಕೆಲಸ ಮುಗಿಸಿ ಮನೆಗೆ ತೆರಳುವ ತವಕದಲ್ಲಿರುವಾಗಲೇ ಮೂಲೆಯೊಂದರಲ್ಲಿ ಹೊತ್ತಿಕೊಂಡ ಬೆಂಕಿ ನೋಡನೋಡುತ್ತಿದ್ದಂತೆ ಸಂಪೂರ್ಣ ಫ್ಯಾಕ್ಟರಿಯನ್ನೇ ಆವರಿಸಿತ್ತು. ಹೆದ್ದಾರಿ‌ಯ ಫ್ಲೈಓವರ್ ಮೇಲೆ ನಿಂತ್ತು ನೋಡಿದ ಜನರಿಗೆ ಅಕ್ಷರಶಃ ಯಾವುದೋ ಬಾಂಬ್ ಬಿದ್ದಂತೆ ಬಾನೆತ್ತರಕ್ಕೆ ದಟ್ಟ ಹೊಗೆ ಆವರಿಸಿರುವ ದೃಶ್ಯ ಕಂಡುಬಂದಿದ್ದು ಎಲ್ಲರೂ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಿರು. ಇನ್ನು ಅಗ್ನಿ ಅವಘಡಕ್ಕೆ ಸಂಪೂರ್ಣ ಕೈಗಾರಿಕಾ ಫ್ಯಾಕ್ಟರಿ ಸುಟ್ಟು ಭಸ್ಮವಾಗಿದ್ದು, 22 ಗಂಟೆಗೂ ಅಧಿಕ ಕಾಲ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ.

ಕೋಟ್ಯಂತರ ರೂ ನಷ್ಟ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹೊರವಲಯದ ಬಾಶೆಟ್ಟಹಳ್ಳಿ ಕೈಗಾರಿಕಾ‌ ಪ್ರದೇಶದ ಅಡ್ವಾನ್ಸ್ ಕೇಬಲ್ ಟೆಕ್ನಾಲಜಿಸ್ ಫ್ಯಾಕ್ಟರಿಯಲ್ಲಿ ನಿನ್ನೆ ಸಂಜೆ 05:30ರ‌ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ಕಾಣಿಸುತ್ತಿದ್ದಂತೆ ಎಚ್ಚೆತ್ತ ಕಾರ್ಮಿಕರು ಆಡಳಿತ ಮಂಡಳಿ ಮೊದಲಿಗೆ ಬೆಂಕಿ ನಂದಿಸುವ ಯತ್ನ ಮಾಡಿದರು ರಬ್ಬರ್ ಮತ್ತು ಪ್ಲಾಸ್ಟಿಕ್​ಗೆ ಬೆಂಕಿ ಹೊತ್ತಿಕೊಂಡ ಕಾರಣ ಬೆಂಕಿ ನಂದಿಸಲು ವಿಫಲವಾಗಿ ಫ್ಯಾಕ್ಟರಿಯಿಂದ ಹೊರಗಡೆ ಬಂದಿದ್ದಾರೆ.

ಇದನ್ನೂ ಓದಿ: ಸ್ಕೂಟರ್ ನೀಡಲು ನಿರಾಕರಿಸಿದ್ದಕ್ಕೆ ಗೆಳತಿ ಮತ್ತು ಆಕೆಯ ಪೋಷಕರ ಮೇಲೆ ಬೆಂಕಿ ಹಚ್ಚಿದ ಬೆಂಗಳೂರಿನ ವ್ಯಕ್ತಿ

ಇನ್ನು ಕಾರ್ಮಿಕರು ಹೊರಗಡೆ ಬರುತ್ತಿದ್ದಂತೆ ಬೆಂಕಿ ತನ್ನ‌ ರುದ್ರ ನರ್ತನವನ್ನೆ ತೋರಿದ್ದು, ಕ್ಷಣ ಮಾತ್ರದಲ್ಲೇ ಒಂದು ಎಕರೆಯಷ್ಟು ವಿಸ್ತೀರ್ಣದಲ್ಲಿರುವ ಸಂಪೂರ್ಣ ಫ್ಯಾಕ್ಟರಿಗೆ ಬೆಂಕಿ ಆವರಿಸಿದೆ. ಬೆಂಕಿಯ ಕೆನ್ನಾಲೆಗೆ ಫ್ಯಾಕ್ಟರಿ ಧಗಧಗನೆ ಹೊತ್ತಿ ಉರಿದು ಕೆಲ‌ ಸಿಲಿಂಡರ್​​ ಸಹ ಸ್ಪೋಟಗೊಂಡಿವೆ ಎನ್ನಲಾಗ್ತಿದ್ದು, ಬೆಂಕಿಯ ರುದ್ರ ನರ್ತನಕ್ಕೆ ಫ್ಯಾಕ್ಟರಿ ಸುಟ್ಟು ಕರಕಲಾಗಿದೆ.

ಫ್ಯಾಕ್ಟರಿಗೆ ಬೆಂಕಿ ಬಿದ್ದ ವಿಚಾರ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸಹ ಸ್ಥಳಕ್ಕೆ ದೌಡಾಯಿಸಿ ಬಂದಿದ್ದು, ಮೊದಲಿಗೆ ಬೆಂಕಿ ನಂದಿಸುವ ಕೆಲಸ‌ ಮಾಡಿದ್ದಾರೆ. ಆದರೆ ಎಷ್ಟೇ ನೀರು ಹೊಡೆದರು ಬೆಂಕಿ ಹತೋಟಿಗೆ ಬಾರದ ಕಾರಣ ಚಿಕ್ಕಬಳ್ಳಾಪುರ, ಕೋಲಾರ, ಗೌರಿಬಿದನೂರು, ಯಲಹಂಕ, ವೈಟ್ ಫೀಲ್ಡ್, ನೆಲಮಂಗಲ, ದೇವನಹಳ್ಳಿ ಸೇರಿದಂತೆ ಹಲವು ಭಾಗಗಳಿಂದ 15ಕ್ಕೂ ಅಧಿಕ ಅಗ್ನಿಶಾಮಕ ವಾಹನ ಹಾಗೂ ನೂರಕ್ಕೂ ಅಧಿಕ ಸಿಬ್ಬಂದಿಯನ್ನ ಕರೆಸಿಕೊಂಡಿದ್ದಾರೆ. ಜೊತೆಗೆ ಫ್ಯಾಕ್ಟರಿ ಪಕ್ಕದಲ್ಲೇ ಇದ್ದ ರೈತನ ಕೃಷಿ ಹೊಂಡದಿಂದ ನೀರನ್ನ ತುಂಬಿಕೊಂಡು ಬಂದು ರಾತ್ರಿ ಪೂರ್ತಿ ನೀರು ಹೊಡೆದರ ಬೆಂಕಿ ಹಾರಿಲ್ಲ. ಕೊನೆಗೆ ಸತತ 22 ಗಂಟೆಗಳ‌‌ ಕಾಲ‌ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ನಂದಿಸಿದ್ದರು ಸಹ ಅಲ್ಲಲ್ಲಿ ಹೊಗೆ ಹಾಡುತ್ತಲ್ಲಿದ್ದು, ಅದನ್ನ ಸಹ ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಏರ್​ಪೋರ್ಟ್​ಗೆ ಬಂತು ಬೆತ್ತಲೆ ಫೋಟೋಗಳ ಪಾರ್ಸೆಲ್! ವಾಮಾಚಾರದ ಬಾಕ್ಸ್​ ನೋಡಿ ಸಿಬ್ಬಂದಿ ಶಾಕ್

ಇನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಫ್ಯಾಕ್ಟರಿಯಲ್ಲಿ ಬೆಂಕಿ ಹೊತ್ತಿಕೊಳ್ಳಲು ಸೂಕ್ತ ತುರ್ತು ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳದಿರುವುದು ಕಾರಣ ಎನ್ನಲಾಗುತ್ತಿದೆ. ಆಕಸ್ಮಿಕ ಅಗ್ನಿ ಅವಘಡಕ್ಕೆ ಕೋಟಿ ಕೋಟಿ ಮೌಲ್ಯದ ಕೇಬಲ್ ಹಾಗೂ ಕಚ್ಚಾ ವಸ್ತುಗಳು ಸುಟ್ಟು ಕರಕಲಾಗಿವೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದ್ದು, ತನಿಖೆ ಬಳಿಕ ಬೆಂಕಿ ಅವಘಡಕ್ಕೆ ಕಾರಣ ಏನು ಅನ್ನೋದು ಬೆಳಕಿಗೆ ಬರಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಶ್ಲೀಲ ಕಮೆಂಟ್ ಪ್ರಕರಣ: ಹಠ ಹಿಡಿದು ಕೇಸ್ ಹಾಕಿದ್ದಕ್ಕೆ ಕಾರಣ ತಿಳಿಸಿದ ರಮ್ಯಾ

ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ಮತ್ತು ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ (Ramya Divya Spandana) ಅವರು ಕಾನೂನು ಸಮರ ಸಾರಿದ್ದಾರೆ. ಆ ಪ್ರಕರಣದ ವಿಚಾರಣೆ ಸಲುವಾಗಿ ಇಂದು (ಮಾರ್ಚ್ 10) ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ‘ಇವತ್ತು ಸಾಕ್ಷಿ ನೀಡಬೇಕಿತ್ತು. ಕ್ರಾಸ್ ಎಕ್ಸಾಮಿನೇಷನ್​ಗೆ ಮುಂದಿನ ದಿನಾಂಕದಲ್ಲಿ ಕರೆದಿದ್ದಾರೆ. ನನಗೆ ಈ ಕೇಸ್ ಮಾಡಬೇಕು ಅಂತ ಆಸೆ ಇಲ್ಲ. ಆರೋಪಿಗಳನ್ನು ನೋಡಿದರೆ ಬೇಜಾರಾಗುತ್ತದೆ. ಆದರೆ ನಾನು ಇದನ್ನು ನನಗೋಸ್ಕರ ಮಾಡುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹೆಣ್ಮಕ್ಕಳಿಗೆ ತುಂಬಾ ಕಿರುಕುಳ ನೀಡುತ್ತಾರೆ. ಅದನ್ನು ನಿಲ್ಲಿಸಬೇಕು. ಹೆಣ್ಮಕ್ಕಳಿಗೆ ರಕ್ಷಣೆ ನೀಡಬೇಕು. ಆ ಕಾರಣಕ್ಕಾಗಿ ಕೇಸ್ ಹಾಕಿದ್ದೇನೆ’ ಎಂದು ರಮ್ಯಾ (Ramya) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ಐಪಿಎಲ್ ಆರಂಭಕ್ಕೆ 15 ದಿನಗಳ ವೇಳಾಪಟ್ಟಿ?

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಇದಾಗ್ಯೂ ಐಪಿಎಲ್​ನ ವೇಳಾಪಟ್ಟಿ ಪ್ರಕಟವಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಕೆಲ ರಾಜ್ಯಗಳಲ್ಲಿನ ಚುನಾವಣೆ. ಮುಂಬರುವ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸೇರಿದಂತೆ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ವೇಳಾಪಟ್ಟಿಗೆ ದಿನಾಂಕ ನಿಗದಿ ಮಾಡಲು ಸಮಸ್ಯೆ ಎದುರಾಗಿದೆ. ಹೀಗಾಗಿ ಐಪಿಎಲ್ ಆರಂಭಿಸಲು ಮೊದಲು 15 ದಿನಗಳ ವೇಳಾಪಟ್ಟಿ ಪ್ರಕಟಿಸಲು ಬಿಸಿಸಿಐ ಚಿಂತಿಸಿದೆ.

15 ದಿನಗಳ ವೇಳಾಪಟ್ಟಿ:

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಮಾರ್ಚ್ 28 ರಿಂದ ಶುರುವಾಗಲಿದೆ. ಇದಕ್ಕಾಗಿ ಮೊದಲಿಗೆ 15 ದಿನಗಳ ವೇಳಾಪಟ್ಟಿಯನ್ನು ಪ್ರಕಟಿಸಲು ಪ್ಲ್ಯಾನ್ ರೂಪಿಸಲಾಗುತ್ತಿದೆ. ಇನ್ನು ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ನಿಗದಿಯಾದ ಬಳಿಕ ಉಳಿದ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ವಿಳಂಬ ಯಾಕೆ?

ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಚುನಾವಣಾ ಸಮಯದಲ್ಲಿ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಮತದಾನದ ಕರ್ತವ್ಯದಲ್ಲಿ ಇರುತ್ತಾರೆ. ಇದರಿಂದಾಗಿ ಪಂದ್ಯಗಳಿಗೆ ಅಗತ್ಯವಿರುವ ಹೆಚ್ಚಿನ ಭದ್ರತೆಯನ್ನು ಒದಗಿಸುವುದು ಕಷ್ಟವಾಗುತ್ತದೆ.

ಭಾರತೀಯ ಚುನಾವಣಾ ಆಯೋಗವು ಈ ರಾಜ್ಯಗಳ ಮತದಾನದ ದಿನಾಂಕಗಳನ್ನು ಇನ್ನೂ ಅಂತಿಮಗೊಳಿಸಿಲ್ಲ. ದಿನಾಂಕಗಳು ತಿಳಿದ ನಂತರವಷ್ಟೇ ಪಂದ್ಯಗಳ ಸ್ಥಳ ಮತ್ತು ಸಮಯವನ್ನು ಬಿಸಿಸಿಐ  ಖಚಿತಪಡಿಸಿಕೊಳ್ಳಲು ಸಾಧ್ಯ.

ಬಿಸಿಸಿಐ ಈ ಹಿಂದೆಯೂ (ಉದಾಹರಣೆಗೆ 2024 ಮತ್ತು 2019 ರಲ್ಲಿ) ಸಾರ್ವತ್ರಿಕ ಚುನಾವಣೆಗಳ ಕಾರಣದಿಂದ ಇದೇ ರೀತಿಯಲ್ಲಿ ಹಂತ-ಹಂತವಾಗಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು.

ಇದೀಗ ಕೇವಲ ಮೊದಲ 15 ದಿನಗಳ (ಮಾರ್ಚ್ 28 ರಿಂದ ಏಪ್ರಿಲ್ ಮಧ್ಯಭಾಗದವರೆಗೆ) ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಲು ಬಿಸಿಸಿಐ ಚಿಂತಿಸಿದೆ. ಉಳಿದ ಪಂದ್ಯಗಳ ಪಟ್ಟಿಯು ಮಾರ್ಚ್ ತಿಂಗಳ ಅಂತ್ಯದೊಳಗೆ ಹೊರಬರುವ ನಿರೀಕ್ಷೆಯಿದೆ.

ಉದ್ಘಾಟನಾ ಪಂದ್ಯ ಎಲ್ಲಿ?

ಈ ಬಾರಿಯ ಐಪಿಎಲ್​ನ ಉದ್ಘಾಟನಾ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ. ಅಲ್ಲದೆ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು  ಪಂಜಾಬ್ ಕಿಂಗ್ಸ್ ಅಥವಾ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕಣಕ್ಕಿಳಿಯಲಿದೆ ಎಂದು ವರದಿಯಾಗಿದೆ.

ಫೈನಲ್ ಯಾವಾಗ?

ಪ್ರಸ್ತುತ ಮಾಹಿತಿಯಂತೆ ಈ ಬಾರಿಯ ಐಪಿಎಲ್​ನ ಫೈನಲ್ ಪಂದ್ಯವು ಮೇ 31 ರಂದು ನಡೆಯಲಿದೆ. ಈ ಪಂದ್ಯವನ್ನೂ ಕೂಡ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಆಯೋಜಿಸಲು ಚಿಂತಿಸಲಾಗಿದೆ.

ಇದನ್ನೂ ಓದಿ: ಅಬ್ಬಾ ಇಷ್ಟೊಂದಾ! ಟೀಮ್ ಇಂಡಿಯಾಗೆ ಬಹುಮಾನ ಘೋಷಣೆ

ಅಂದರೆ ಮುಂಬರುವ ಐಪಿಎಲ್​ನ ಉದ್ಘಾಟನಾ ಪಂದ್ಯ ಮತ್ತು ಫೈನಲ್​ ಮ್ಯಾಚ್​ಗೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸುವುದು ಬಹುತೇಕ ಖಚಿತವಾಗಿದೆ.

 

Source link

ಪವನ್ ಕಲ್ಯಾಣ್ ಅನುಪಸ್ಥಿತಿಯಲ್ಲಿ ಪ್ರಚಾರದ ಜವಾಬ್ದಾರಿ ಹೊತ್ತ ಶ್ರೀಲೀಲಾ

ಪವನ್ ಕಲ್ಯಾಣ್ (Pawan Kalyan) ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ರಣ್ವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ಅದೇ ದಿನ ಬಿಡುಗಡೆ ಆಗಲಿದ್ದು, ದೊಡ್ಡ ಪ್ರತಿಸ್ಪರ್ಧೆಯನ್ನು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಕ್ಕೆ ಒಡ್ಡಿದೆ. ಸಿನಿಮಾದ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿದೆ. ಸಿನಿಮಾದ ನಾಯಕ ಪವನ್ ಕಲ್ಯಾಣ್ ರಾಜಕೀಯದಲ್ಲಿ ಬ್ಯುಸಿಯಾಗಿದ್ದು, ಪ್ರಚಾರಗಳಲ್ಲಿ ಪಾಲ್ಗೊಳ್ಳುವಷ್ಟು ಸಮಯ ಅವರಿಗಿಲ್ಲ. ಆಡಳಿತದ ದೃಷ್ಟಿಯಿಂದ ಅದು ಉಚಿತವೂ ಅಲ್ಲ. ಆದರೆ ಪವನ್ ಕಲ್ಯಾಣ್ ಗೈರು ಹಾಜರಿಯಲ್ಲಿ ನಟಿ ಶ್ರೀಲೀಲಾ ಸಿನಿಮಾದ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡಿದ್ದಾರೆ.

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾನಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದು, ಇದೀಗ ಸಿನಿಮಾದ ಪ್ರಚಾರದ ಜವಾಬ್ದಾರಿಯನ್ನು ಶ್ರೀಲೀಲಾ ವಹಿಸಿಕೊಂಡಿದ್ದು, ತಾವೇ ಆಂಧ್ರ-ತೆಲಂಗಾಣದ ಪ್ರಮುಖ ನಗರಗಳಿಗೆ ತೆರಳಿ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಅವರು ಹೈದರಾಬಾದ್​​ನ ಗುರುನಾನಕ್ ವಿಶ್ವವಿದ್ಯಾಲಯಕ್ಕೆ ತೆರಳಿ, ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಪ್ರಚಾರ ಮಾಡಿದ್ದಾರೆ. ವಿಶೇಷವೆಂದರೆ ಸಿನಿಮಾದ ನಾಯಕ, ನಿರ್ದೇಶಕ ಇತರೆ ಯಾರೂ ಇಲ್ಲದೇ ಕೇವಲ ತಮ್ಮ ತಂಡದೊಂದಿಗೆ ಒಬ್ಬರೇ ಹೋಗಿ ಸಿನಿಮಾ ಪ್ರಚಾರ ಮಾಡಿದ್ದಾರೆ. ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾನಲ್ಲಿ ರಾಶಿ ಖನ್ನಾ ಸಹ ನಾಯಕಿಯಾಗಿ ನಟಿಸಿದ್ದಾರೆ. ಆದರೆ ಅವರೂ ಸಹ ಪ್ರಚಾರದಲ್ಲಿ ಪಾಲ್ಗೊಂಡಿರಲಿಲ್ಲ.

ಗುರುನಾನಕ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಟ್ಟಿಗೆ ಸಂವಾದ ಮಾಡಿದ್ದಲ್ಲದೆ, ಸಿನಿಮಾದ ಡೈಲಾಗ್ ಹೇಳಿ, ಹಾಡುಗಳ ಸಾಲುಗಳನ್ನು ಹೇಳಿ ಸಖತ್ ಕ್ರೇಜ್ ಹುಟ್ಟಿಸಿದ್ದಾರೆ. ವಿದ್ಯಾರ್ಥಿಗಳಿಂದ ಸಿನಿಮಾದ ಹಾಡಿನ ಸಾಲುಗಳನ್ನು ಸಹ ಹಾಡಿಸಿದ್ದು, ತಮ್ಮ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ವೀಕ್ಷಿಸುವಂತೆ ಮನವಿ ಮಾಡಿದ್ದಾರೆ. ಶ್ರೀಲೀಲಾರ ಈ ಶ್ರಮವನ್ನು ಗುರುತಿಸಿರುವ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ಹಂಚಿಕೊಂಡು, ಶ್ರೀಲೀಲಾರನ್ನು ಕೊಂಡಾಡಿದೆ.

ಇದನ್ನೂ ಓದಿ:ತೆಲುಗು ರಾಜ್ಯಗಳಲ್ಲಿ ಪವನ್ ಕಲ್ಯಾಣ್ ಚಿತ್ರಕ್ಕೆ ಹೊಡೆತ ಕೊಟ್ಟ ‘ಧುರಂಧರ್ 2’

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಕ್ಕೆ ಯು/ಎ ಪ್ರಮಾಣ ಪತ್ರ ದೊರೆತಿದ್ದು, ಇಂದಷ್ಟೆ ಸಿನಿಮಾದ ಹಾಡಿನ ಸಣ್ಣ ತುಣಕನ್ನು ಸಹ ಬಿಡುಗಡೆ ಮಾಡಿದೆ. ‘ಧುರಂಧರ್ 2’ ಎದುರಿಗೆ ‘ಉಸ್ತಾದ್ ಭಗತ್ ಸಿಂಗ್’ ಸ್ಪರ್ಧೆ ಇದ್ದು, ಸಿನಿಮಾಕ್ಕೆ ಭರ್ಜರಿ ಪ್ರಚಾರದ ಅವಶ್ಯಕತೆ ಇದೆ. ಈಗಾಗಲೇ ‘ಧುರಂಧರ್ 2’ ಸಿನಿಮಾದಿಂದಾಗಿ ಪ್ರೀಮಿಯರ್ ಶೋ ಆಯೋಜಿಸುವ ಯೋಜನೆಯನ್ನು ಚಿತ್ರತಂಡ ಕೈಬಿಟ್ಟಿದೆ. ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ನಿರ್ಮಾಣ ಸಂಸ್ಥೆ ಶೀಘ್ರವೇ ಹಮ್ಮಿಕೊಳ್ಳಲಿದ್ದು ನಟ ಪವನ್ ಕಲ್ಯಾಣ್ ಅವರು ಆ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾವನ್ನು ಪವನ್ ಕಲ್ಯಾಣ್​​ರ ಆಪ್ತ ಹರೀಶ್ ಶಂಕರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಹಾಡುಗಳನ್ನು ನಿರ್ದೇಶಿಸಿರುವುದು ದೇವಿಶ್ರೀ ಪ್ರಸಾದ್, ಹಿನ್ನೆಲೆ ಸಂಗೀತ ನೀಡಿರುವುದು ಎಸ್ ತಮನ್. ಸಿನಿಮಾನಲ್ಲಿ ಶ್ರೀಲೀಲಾ ಜೊತೆಗೆ ರಾಶಿ ಖನ್ನಾ ಸಹ ನಟಿಸಿದ್ದಾರೆ. ಇವರುಗಳ ಜೊತೆಗೆ ಆರ್ ಪಾರ್ತಿಬನ್, ಆಶುತೋಶ್ ರಾಣಾ, ನವಾಬ್ ಶಾ, ರಾಜೀವ್ ಕನಕಾಲ ಇನ್ನೂ ಕೆಲವು ಕಲಾವಿದರು ನಟಿಸಿದ್ದಾರೆ. ಸಿನಿಮಾ ಮಾರ್ಚ್ 19ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಾರ್ಚ್​ 14ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಲಿರುವ ಟೀಂ ಇಂಡಿಯಾ ಸ್ಟಾರ್ ಆಟಗಾರ

ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ (T20 World Cup) ಎತ್ತಿಹಿಡಿದಿದೆ. ಈ ಸಂಭ್ರಮದೊಂದಿಗೆ ತಂಡದ ಎಲ್ಲಾ ಆಟಗಾರರು ತಮ್ಮ ತಮ್ಮ ಮನೆಗಳತ್ತ ಪ್ರಯಾಣ ಬೆಳೆಸಿದ್ದಾರೆ. ಬಳಿಕ ಎಲ್ಲಾ ಆಟಗಾರರು ಮುಂಬರುವ ಐಪಿಎಲ್​ನಲ್ಲಿ (IPL) ಕಣಕ್ಕಿಳಿಯಲಿದ್ದಾರೆ. ಆದರೆ ಅದಕ್ಕೂ ಮುನ್ನ ಟೀಂ ಇಂಡಿಯಾದ ಆಟಗಾರನೊಬ್ಬನಿಗೆ ಕಂಕಣ ಭಾಗ್ಯ ಕೂಡಿಬಂದಿದ್ದು ವೈಯಕ್ತಿಕ ಜೀವನದಲ್ಲಿ ಹೊಸ ಇನ್ನಿಂಗ್ಸ್ ಪ್ರಾರಂಭಿಸಲಿದ್ದಾರೆ. ತಂಡದ ಸ್ಟಾರ್ ಸ್ಪಿನ್ನರ್ ಕುಲ್ದೀಪ್ ಯಾದವ್ (Kuldeep Yadav) ಮಾರ್ಚ್ 14, 2026 ರಂದು ವಂಶಿಕಾ (Vanshika) ಅವರನ್ನು ವಿವಾಹವಾಗಲಿದ್ದಾರೆ. ವಿವಾಹ ಸಮಾರಂಭವು ಉತ್ತರಾಖಂಡದ ಮುಸ್ಸೂರಿಯ ಸುಂದರ ಗಿರಿಧಾಮದಲ್ಲಿರುವ ಐಷಾರಾಮಿ ರೆಸಾರ್ಟ್‌ನಲ್ಲಿ ನಡೆಯಲಿದೆ. ಈ ವಿಶೇಷ ಸಂದರ್ಭದಲ್ಲಿ ನಿಕಟ ಸಂಬಂಧಿಗಳು ಮತ್ತು ಎರಡೂ ಕುಟುಂಬಗಳ ಆಯ್ದ ಅತಿಥಿಗಳು ಭಾಗವಹಿಸಲಿದ್ದಾರೆ.

ಕುಲ್ದೀಪ್​ಗೆ ಕೂಡಿಬಂತು ಕಂಕಣ ಭಾಗ್ಯ

ಮದುವೆಗೆ ಒಂದು ದಿನ ಮೊದಲು ಮಾರ್ಚ್ 13 ರಂದು ಅರಿಶಿನ ಮತ್ತು ಮೆಹೆಂದಿ ಸಮಾರಂಭವನ್ನು ಆಯೋಜಿಸಲಾಗಿದೆ. ಈ ಸಾಂಪ್ರದಾಯಿಕ ಸಮಾರಂಭದಲ್ಲಿ ಕುಟುಂಬ ಮತ್ತು ಆಪ್ತರು ಭಾಗವಹಿಸಲಿದ್ದಾರೆ. ವಾಸ್ತವವಾಗಿ ಜೂನ್ 4, 2025 ರಂದು ಕುಲ್ದೀಪ್ ಮತ್ತು ವಂಶಿಕಾ ಲಕ್ನೋದ ಹೋಟೆಲ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹಾಗೆಯೇ ಇಬ್ಬರ ವಿವಾಹವು ನವೆಂಬರ್ 2025 ಕ್ಕೆ ನಿಗದಿಯಾಗಿತ್ತು. ಆದರೆ ಭಾರತೀಯ ಕ್ರಿಕೆಟ್ ತಂಡದ ಕಾರ್ಯನಿರತ ಕ್ಯಾಲೆಂಡರ್ ಮತ್ತು ಟಿ20 ವಿಶ್ವಕಪ್ ತಂಡದಲ್ಲಿ ಕುಲ್ದೀಪ್ ಅವರ ಆಯ್ಕೆಯಿಂದಾಗಿ, ವಿವಾಹ ದಿನಾಂಕವನ್ನು ಮುಂದೂಡಲಾಯಿತು.

ಸಮಾರಂಭದಲ್ಲಿ ಗಣ್ಯರು ಬಾಗಿ

ಕುಲ್ದೀಪ್ ಯಾದವ್ ಅವರ ತಂದೆ ರಾಮ್‌ಸಿನ್ಹ್ ಯಾದವ್ ಅವರು ಮಾರ್ಚ್ 8 ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ವಿವಾಹ ಆರತಕ್ಷತೆಗೆ ಹಾಜರಾಗಲು ಆಹ್ವಾನ ನೀಡಿದ್ದಾರೆ. ವಿವಾಹದ ನಂತರ, ಮಾರ್ಚ್ 17 ರಂದು ಲಕ್ನೋದ ಹೋಟೆಲ್ ಸೆಂಟ್ರಮ್‌ನಲ್ಲಿ ಭವ್ಯ ಆರತಕ್ಷತೆ ಏರ್ಪಡಿಸಲಾಗಿದೆ. ಈ ಸಮಾರಂಭದಲ್ಲಿ ಬಿಸಿಸಿಐ ಮತ್ತು ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್‌ನ ಅಧಿಕಾರಿಗಳು, ಭಾರತೀಯ ಕ್ರಿಕೆಟ್ ತಂಡದ ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಮತ್ತು ಇತರ ಅತಿಥಿಗಳು ಭಾಗವಹಿಸಬಹುದು.

Team India: ಕಳೆದ 21 ತಿಂಗಳಲ್ಲಿ 365 ಕೋಟಿ ರೂ. ಬಹುಮಾನ ಗೆದ್ದ ಟೀಂ ಇಂಡಿಯಾ

ಕುಲ್ದೀಪ್ ವೃತ್ತಿಜೀವನ

ಕುಲ್ದೀಪ್ ಯಾದವ್ ಭಾರತ ಟಿ20 ವಿಶ್ವಕಪ್ ತಂಡದಲ್ಲಿದ್ದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದ ಕುಲ್ದೀಪ್ ಕೇವಲ 14 ರನ್‌ ನೀಡಿ ಒಂದು ವಿಕೆಟ್ ಪಡೆದಿದ್ದರು. ಆದರೆ ಈ ಪಂದ್ಯದ ನಂತರ ಕುಲ್ದೀಪ್​ಗೆ ಆಡುವ ಅವಕಾಶ ಸಿಗಲಿಲ್ಲ ಆದಾಗ್ಯೂ ಕುಲ್ದೀಪ್ ಯಾದವ್ ಮೂರು ಸ್ವರೂಪಗಳಲ್ಲಿ 191 ಪಂದ್ಯಗಳನ್ನು ಆಡಿದ್ದು, 22.50 ಸರಾಸರಿ ಮತ್ತು 4.84 ರ ಎಕಾನಮಿ ದರದಲ್ಲಿ 365 ವಿಕೆಟ್‌ಗಳನ್ನು ಪಡೆದಿದ್ದಾರೆ. 31 ವರ್ಷದ ಕುಲ್ದೀಪ್ ಯಾದವ್ ಇದುವರೆಗೆ 9 ಬಾರಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಎಫೆಕ್ಟ್: ರಿಲೀಸ್ ದಿನಾಂಕ ಬದಲಾಯಿಸಿಕೊಂಡ ಬಾಲಿವುಡ್ ಸ್ಟಾರ್ ಹೀರೋ

ಬಾಲಿವುಡ್ ನಟ ವರುಣ್ ಧವನ್ (Varun Dhawan) ಅಭಿನಯದ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಬಿಡುಗಡೆ ದಿನಾಂಕದಲ್ಲಿ ಮಹತ್ವದ ಬದಲಾವಣೆಯಾಗಿದೆ. ‘ರಾಕಿಂಗ್ ಸ್ಟಾರ್’ ಯಶ್ (Yash) ಅವರ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್’ ಚಿತ್ರದೊಂದಿಗೆ ಬಾಕ್ಸ್ ಆಫೀಸ್ ಕ್ಲ್ಯಾಶ್ ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವರುಣ್ ಧವನ್ ನಟನೆಯ ಚಿತ್ರವು ಈ ಮೊದಲು ಜೂನ್ 5ರಂದು ಬಿಡುಗಡೆ ಆಗುವುದಾಗಿ ಘೋಷಿಸಿತ್ತು. ಆದರೆ, ಈಗ ಒಂದು ವಾರ ತಡವಾಗಿ ಅಂದರೆ ಜೂನ್ 12ರಂದು ತೆರೆಗೆ ಬರಲಿದೆ. ‘ಟಿಪ್ಸ್ ಫಿಲ್ಮ್ಸ್’ ಸಂಸ್ಥೆಯು ಈ ಕುರಿತು ಅಧಿಕೃತ ಮಾಹಿತಿ ನೀಡಿದೆ.

‘ನಮ್ಮ ಚಿತ್ರವು ಜೂನ್ 5ರಂದು ಬಿಡುಗಡೆ ಆಗಬೇಕೆಂದು ತಿಂಗಳುಗಳ ಹಿಂದೆಯೇ ನಿರ್ಧರಿಸಲಾಗಿತ್ತು. ಆದರೆ, ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ನಾವು ಬಿಡುಗಡೆಯನ್ನು ಮುಂದೂಡುವುದು ಸೂಕ್ತ ಎಂದು ಭಾವಿಸಿದ್ದೇವೆ. ಚಿತ್ರರಂಗದ ಆರೋಗ್ಯಕರ ಬೆಳವಣಿಗೆಗಾಗಿ ನಿರ್ಮಾಪಕರು ಪರಸ್ಪರ ಸಹಕರಿಸುವುದು ಮುಖ್ಯ’ ಎಂದು ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಚಿತ್ರತಂಡ ಹೇಳಿದೆ.

ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರವು ಮಾರ್ಚ್ 19ರಂದು ಬಿಡುಗಡೆಯಾಗಬೇಕಿತ್ತು. ಆದರೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿ ಸದ್ಯಕ್ಕೆ ಹತೋಟಿಗೆ ಬರುವಂತೆ ಕಾಣುತ್ತಿಲ್ಲ. ಆದ್ದರಿಂದ ಚಿತ್ರತಂಡವು ಬಿಡುಗಡೆಯನ್ನು ಜೂನ್ 4ಕ್ಕೆ ಮುಂದೂಡಿದೆ. ಮಾರ್ಚ್ 19ರಂದು ರಣವೀರ್ ಸಿಂಗ್ ಅಭಿನಯದ ‘ಧುರಂಧರ್: ದಿ ರಿವೇಂಜ್’ ಚಿತ್ರದೊಂದಿಗೆ ಇದು ಸಂಘರ್ಷಕ್ಕಿಳಿಯಬೇಕಿತ್ತು. ಆದರೆ ಕ್ಲ್ಯಾಶ್ ತಪ್ಪಿದೆ.

‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾದಲ್ಲಿ ವರುಣ್ ಧವನ್, ಮೃಣಾಲ್ ಠಾಕೂರ್ ಮತ್ತು ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಚಂಕಿ ಪಾಂಡೆ, ಮೌನಿ ರಾಯ್, ರೋಹಿತ್ ಸರಾಫ್ ಮತ್ತು ಜಿಮ್ಮಿ ಶೇರ್ಗಿಲ್ ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಹಿರಿಯ ನಿರ್ದೇಶಕ ಡೇವಿಡ್ ಧವನ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ.

ಇದನ್ನೂ ಓದಿ: ರಾಧಿಕಾ ಜೊತೆ ಮುಂಬೈನಲ್ಲಿ ಯಶ್ ಸುತ್ತಾಟ; ಗಮನ ಸೆಳೆದ ಹೊಸ ಲುಕ್

‘ಟಾಕ್ಸಿಕ್’ ಚಿತ್ರತಂಡವು ಏಕಾಏಕಿ ಬಿಡುಗಡೆ ದಿನಾಂಕ ಬದಲಾಯಿಸಿದ್ದರಿಂದ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾ ತಂಡಕ್ಕೆ ಬೇಸರ ಆಗಿತ್ತು. ಆ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗಿತ್ತು. ಈಗ ಈ ಚಿತ್ರದ ರಿಲೀಸ್ ದಿನಾಂಕ ಬದಲಾಗಿದೆ. ಒಂದು ವಾರ ತಡವಾಗಿ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link