All posts by nagaraj11081993

Chanakya Niti: ಕೆಲಸದ ಸ್ಥಳದಲ್ಲಿ ಗೌರವ, ಪ್ರಗತಿ ಸಾಧಿಸಬೇಕೆಂದರೆ ಚಾಣಕ್ಯರ ಈ ತತ್ವಗಳನ್ನು ಪಾಲಿಸಿ – Kannada News | Chanakya Niti: What should you do to gain respect and success in the workplace?

ವೃತ್ತಿ ಜೀವನದಲ್ಲಿ ಯಶಸ್ಸಿನ  (success) ಮೆಟ್ಟಿಲೇರಬೇಕು ಎಂಬ ಕನಸ್ಸು ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಕೆಲವೊಮ್ಮೆ, ಕಠಿಣ ಪರಿಶ್ರಮದ ಹೊರತಾಗಿಯೂ,  ಅರ್ಹವಾದ ಗೌರವ ಮತ್ತು ಪ್ರಗತಿ ಸಿಗುವುದಿಲ್ಲ. ಯಶಸ್ಸು ಸಾಧಿಸಲು, ಕೆಲಸದ ಸ್ಥಳದಲ್ಲಿ ಗೌರವ ಗಳಿಸಲು ಕೇವಲ ಕಠಿಣ ಪರಿಶ್ರಮ ಸಾಕಾಗುವುದಿಲ್ಲ, ನಿಮ್ಮ ಬುದ್ಧಿವಂತಿಕೆ ಮತ್ತು ಒಂದಷ್ಟು ನಡವಳಿಕೆಗಳನ್ನು ಅಳವಡಿಸಿಕೊಳ್ಳುವುದು ತುಂಬಾ ಮುಖ್ಯ ಎಂದು ಆಚಾರ್ಯ ಚಾಣಕ್ಯರು ಶತಮಾನಗಳ ಹಿಂದೆಯೇ ತಿಳಿಸಿಕೊಟ್ಟಿದ್ದಾರೆ. ನೀವು ಸಹ ಕೆಲಸದಲ್ಲಿ ಯಶಸ್ಸನ್ನು ಗಳಿಸಲು ಬಯಸಿದರೆ ಚಾಣಕ್ಯರ ಈ ಕೆಲವು ರಹಸ್ಯ ಮಂತ್ರಗಳನ್ನು ತಪ್ಪದೆ ಪಾಲಿಸಿ.

ಕೆಲಸದ ಸ್ಥಳದಲ್ಲಿ ಗೌರವ ಗಳಿಸಲು ಪಾಲಿಸಬೇಕಾದ ತತ್ವಗಳು:

ನಮ್ಮ ದೌರ್ಬಲ್ಯವನ್ನು ಯಾರಿಗೂ ಹೇಳಬೇಡಿ: ಆಚಾರ್ಯ ಚಾಣಕ್ಯ ಹೇಳುವಂತೆ, ಒಬ್ಬ ವ್ಯಕ್ತಿಯು ತನ್ನ ದೌರ್ಬಲ್ಯಗಳನ್ನು ಎಂದಿಗೂ ಇತರರಿಗೆ ಬಹಿರಂಗಪಡಿಸಬಾರದು. ನೀವು ಕಚೇರಿಯಲ್ಲಿ ನಿಮ್ಮ ನ್ಯೂನತೆಗಳನ್ನು ಬಹಿರಂಗವಾಗಿ ಹೇಳಿದರೆ, ನಿಮ್ಮ ವಿರೋಧಿಗಳು ಅವುಗಳನ್ನು ಬಳಸಿಕೊಳ್ಳಬಹುದು. ಹಾಗಾಗಿ ನಿಮ್ಮ ದೌರ್ಬಲ್ಯಗಳ ಬಗ್ಗೆ ಕೆಲಸದ ಸ್ಥಳದಲ್ಲಿ ಯಾರೊಂದಿಗೂ ಹಂಚಿಕೊಳ್ಳಬೇಡಿ. ಬದಲಿಗೆ ನಿಮ್ಮ ಕಠಿಣ ಪರಿಶ್ರಮ ಮತ್ತು ಸಾಮರ್ಥ್ಯಗಳನ್ನು ನಂಬಿರಿ.

ಇತರರ ತಪ್ಪುಗಳಿಂದ ಕಲಿಯಿರಿ: ಆಚಾರ್ಯ ಚಾಣಕ್ಯರು  ಹೇಳುವಂತೆ ಬುದ್ಧಿವಂತ ವ್ಯಕ್ತಿ ಎಂದರೆ ಆತ ಇತರರ ತಪ್ಪುಗಳಿಂದ ಕಲಿಯುವವನು. ಕಚೇರಿ ವಾತಾವರಣವನ್ನು ಅರ್ಥಮಾಡಿಕೊಳ್ಳಿ, ಇತರರು ವಿಫಲರಾದಾಗ ಅದಕ್ಕೆ ಕಾರಣಗಳೇನು ಎಂಬುದನ್ನು ಗಮನಿಸಿ ಮತ್ತು ಅದೇ ತಪ್ಪುಗಳನ್ನು  ನೀವು ಪುನರಾವರ್ತಿಸುವುದನ್ನು ತಪ್ಪಿಸಿ.

ನಿಮ್ಮ ಯೋಜನೆಗಳನ್ನು ರಹಸ್ಯವಾಗಿಡಿ: ನಿಮ್ಮ ಕೆಲಸ ಅಥವಾ ಯೋಜನೆ ಪೂರ್ಣಗೊಳ್ಳುವವರೆಗೆ ಅದರ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳಬೇಡಿ. ಇದರಿಂದ ನಿಮ್ಮ ಪ್ರಗತಿಗೆ ಅಡ್ಡಿಯಾಗಬಹುದು. ನಿಮ್ಮ ಯೋಜನೆಗಳನ್ನು ಹಂಚಿಕೊಳ್ಳಲೇಬೇಕೆಂದರೆ ನಿಮ್ಮ ಮುಂದಿನ ಹೆಜ್ಜೆಗಳನ್ನು ವಿಶ್ವಾಸಾರ್ಹ ವ್ಯಕ್ತಿಗಳೊಂದಿಗೆ ಮಾತ್ರ ಹಂಚಿಕೊಳ್ಳಿ.

ಶಿಸ್ತು ಮತ್ತು ಸಮಯಕ್ಕೆ ಗೌರವ: ಸಮಯವನ್ನು ಗೌರವಿಸದವರಿಗೆ ಯಶಸ್ಸು ಸಿಗುವುದಿಲ್ಲ. ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವುದು ಮತ್ತು ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸಗಳನ್ನು ಪೂರ್ಣ ಗೊಳಿಸುವುದು, ಇದು ನಿಮಗೆ ವೃತ್ತಿಪರ ಇಮೇಜ್ ನೀಡುತ್ತದೆ. ಅಷ್ಟೇ ಅಲ್ಲದೆ ಇದು ನಿಮಗೆ ಕೆಲಸದ ಸ್ಥಳದಲ್ಲಿ ಯಶಸ್ಸು ಮತ್ತು ಗೌರವವನ್ನು ತಂದುಕೊಡುತ್ತದೆ.

ಇದನ್ನೂ ಓದಿ: ತಪ್ಪಿಯೂ ಇಂತಹ ಜನರಿಗೆ ಸಹಾಯ ಮಾಡಬಾರದು

ಕೆಲಸ ಪ್ರಾರಂಭಿಸುವ ಮೊದಲು ನಿಮ್ಮನ್ನು ನೀವು  ಕೇಳಬೇಕಾದ 3 ಪ್ರಶ್ನೆಗಳು:

ಚಾಣಕ್ಯನ ಪ್ರಕಾರ, ಯಾವುದೇ ದೊಡ್ಡ ಯೋಜನೆ ಅಥವಾ ಕೆಲಸವನ್ನು ಕೈಗೆತ್ತಿಕೊಳ್ಳುವ ಮೊದಲು, ನಿಮ್ಮನ್ನು ನೀವು ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳಿ.

  • ನಾನು ಈ ಕೆಲಸ ಏಕೆ ಮಾಡುತ್ತಿದ್ದೇನೆ?
  • ಇದರ ಫಲಿತಾಂಶ ಏನಾಗುತ್ತದೆ?
  • ನಾನು ಇದರಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆಯೇ?

ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳು ನಿಮ್ಮಲ್ಲಿ ಇದ್ದಾಗ ಮಾತ್ರ ನೀವು ಮುಂದುವರಿಯಬೇಕು. ಈ ಸ್ಪಷ್ಟತೆಯು ನಿಮ್ಮನ್ನು ಕಚೇರಿಯಲ್ಲಿ ಹೆಚ್ಚು ಗಂಭೀರವಾಗಿ ಮತ್ತು ಸಂಯಮದಿಂದ ಕಾಣುವಂತೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದುಬೈನಿಂದ ಬೆಂಗಳೂರಿಗೆ ಆಗಮಿಸಿದ ಮತ್ತೊಂದು ವಿಮಾನ: ಇಲ್ಲಿಯವರೆಗೆ ತಾಯ್ನಡಿಗೆ ಬಂದ 1,053 ಪ್ರಯಾಣಿಕರು – Kannada News | Middle East Rescue: Over 1000 Kannadigas Evacuated from Dubai and Abu Dhabi to KIA

ದೇವನಹಳ್ಳಿ, ಮಾ.3: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧದ ಭೀತಿಯ ನಡುವೆ ಅತಂತ್ರರಾಗಿದ್ದ ಅನಿವಾಸಿ ಕನ್ನಡಿಗರನ್ನು ರಕ್ಷಿಸುವ ಕಾರ್ಯ ಸಮರೋಪಾದಿಯಲ್ಲಿ ಸಾಗುತ್ತಿದೆ. ಇಂದು ದುಬೈನಿಂದ ಹೊರಟಿದ್ದ ಎಮಿರೇಟ್ಸ್ (Emirates) EK-566 ವಿಮಾನವು 350 ಪ್ರಯಾಣಿಕರೊಂದಿಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಬಂದಿಳಿದಿದೆ. ಇಂದು ಮುಂಜಾನೆಯಷ್ಟೇ ದುಬೈನಿಂದ 490 ಪ್ರಯಾಣಿಕರನ್ನು ಹೊತ್ತು ಮೊದಲ ವಿಮಾನ ಬಂದಿಳಿದಿತ್ತು. ಇದೀಗ ಮಧ್ಯಾಹ್ನ 3 ಗಂಟೆಗೆ ದುಬೈನಿಂದ ಹೊರಟಿದ್ದ ಎರಡನೇ ವಿಮಾನ (EK-566) ಸಂಜೆ ಬೆಂಗಳೂರಿಗೆ ಆಗಮಿಸಿದೆ.

ಈ ವಿಮಾನದಲ್ಲಿ ಒಟ್ಟು 350 ಕನ್ನಡಿಗರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ಅಧಿಕಾರಿಗಳು ಸಂತ್ರಸ್ತ ಪ್ರಯಾಣಿಕರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಕಳೆದ ರಾತ್ರಿ ಅಬುಧಾಬಿಯಿಂದಲೂ 213 ಪ್ರಯಾಣಿಕರು ಬೆಂಗಳೂರಿಗೆ ಬಂದಿಳಿದಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮನ್ವಯದೊಂದಿಗೆ ಈ ‘ರೆಸ್ಕ್ಯೂ ಮಿಷನ್’ ಸಾಗುತ್ತಿದೆ. ಯುದ್ಧದ ಭೀತಿಯಿಂದಾಗಿ ಆತಂಕದಲ್ಲಿದ್ದ ಪ್ರಯಾಣಿಕರು ಬೆಂಗಳೂರಿನ ಮಣ್ಣಿಗೆ ಕಾಲಿಡುತ್ತಿದ್ದಂತೆ ನಿಟ್ಟುಸಿರು ಬಿಟ್ಟರು. ವಿಮಾನ ನಿಲ್ದಾಣದ ಹೊರಗೆ ಕಾಯುತ್ತಿದ್ದ ಕುಟುಂಬ ಸದಸ್ಯರ ಮೊಗದಲ್ಲಿ ಮಂದಹಾಸ ಮೂಡಿದೆ.

ಇದನ್ನೂ ಓದಿ: ಖಮೇನಿ ಸಾವಿನ ಕುರಿತಾದ ಪ್ರತಿಭಟನೆಗಳನ್ನು ಖಂಡಿಸಿದ ಮುಂಬೈನ ಶಿಯಾ ನಾಯಕ ಮೌಲಾನಾ ಹಸನ್ ಅಲಿ

ಕಳೆದ ರಾತ್ರಿಯಿಂದ ಇಲ್ಲಿಯವರೆಗೆ 1,053 ಪ್ರಯಾಣಿಕರು ಆಗಮಿಸಿದ್ದಾರೆ. ಅಬುಧಾಬಿಯಿಂದ ಮೊದಲ ವಿಮಾನದಲ್ಲಿ ಆಗಮಿಸಿದ್ದ 213 ಜನ ಬಂದಿದ್ದರು. ಮುಂಜಾನೆ ದುಬೈನಿಂದ ಆಗಮಿಸಿದ್ದ ವಿಮಾನದಲ್ಲಿ 490 ಪ್ರಯಾಣಿಕರು ಇದ್ದರು. ಇದೀಗ ದುಬೈನಿಂದ ಬಂದಿಳಿದ ವಿಮಾನದಲ್ಲಿ 350 ಜನರ ಆಗಮನ ಆಗಿದೆ. ಇನ್ನು ಈ ಪ್ರಯಾಣಿಕರನ್ನು ಕೆಐಎಬಿ ಸಿಬ್ಬಂದಿಗಳು ಆತ್ಮೀಯತೆಯಿಂದ ಬರಮಾಡಿಕೊಂಡಿದ್ದಾರೆ. ಇನ್ನು ಪ್ರಯಾಣಿಕರನ್ನು ಅವರವರ ಮನೆಗಳಿಗೆ ಕಳುಹಿಸಿದ ಕೆಲಸವನ್ನೂ ಕೂಡ ಮಾಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತುಂಬ ತಡವಾಗಿದೆ, ಇರಾನ್ ಜೊತೆ ಮಾತುಕತೆ ಸಾಧ್ಯವಿಲ್ಲ; ಟ್ರಂಪ್ ಘೋಷಣೆ – Kannada News | Donald Trump declares too late for talks with Iran as US Israel strikes escalate conflict

ವಾಷಿಂಗ್ಟನ್, ಮಾರ್ಚ್ 3: ಇಂದು ಸಂಜೆ ಡೊನಾಲ್ಡ್ ಟ್ರಂಪ್ (Donald Trump) ಯುದ್ಧದ ಅಂತ್ಯದ ಬಗ್ಗೆ ಮಾತನಾಡಿದ್ದಾರೆ. ಇರಾನ್‌ನ ವಾಯುಪಡೆ ಮತ್ತು ನೌಕಾಪಡೆ ನಾಶವಾಯಿತು. ಇರಾನ್​ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿಯಿಂದ ಪ್ರಾರಂಭಿಸಿ ಇರಾನ್​ನ ಎಲ್ಲ ನಾಯಕರನ್ನೂ ಹತ್ಯೆ ಮಾಡಲಾಗಿದೆ. ಹೀಗಾಗಿ ತನ್ನಿಂದ ತಾನಾಗೇ ಯುದ್ಧ ನಿಲ್ಲುತ್ತದೆ. ಈಗಾಗಲೇ ತಡವಾಗಿರುವುದರಿಂದ ಮಾತುಕತೆ ಸಾಧ್ಯವಿಲ್ಲ ಎಂದಿದ್ದಾರೆ.

ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್‌ನ ಪ್ರಭಾವಿ ಮುಖ್ಯಸ್ಥ ಅಲಿ ಲಾರಿಜಾನಿ, ಇರಾನ್ ಅಮೆರಿಕದ ಜೊತೆ ಮಾತುಕತೆ ನಡೆಸುವುದಿಲ್ಲ ಎಂದು ಹೇಳಿದ ಒಂದು ದಿನದ ನಂತರ ಟ್ರಂಪ್ ಅವರ ಈ ಘೋಷಣೆ ಹೊರಬಿದ್ದಿದೆ. ಇರಾನಿನ ಅಧಿಕಾರಿಗಳು ಟ್ರಂಪ್ ಜೊತೆ ಮಾತುಕತೆ ನಡೆಸಲು ಪ್ರಯತ್ನಿಸಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಅಮೆರಿಕ ನಿರಾಕರಿಸಿದೆ.

ಇದನ್ನೂ ಓದಿ: ಇಸ್ರೇಲ್-ಯುಎಸ್ ದಾಳಿಯಿಂದಾಗಿ ಇರಾನ್​ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತ ಸ್ಥಳಕ್ಕೆ ಶಿಫ್ಟ್

ಯುಎಸ್-ಇಸ್ರೇಲ್ ದಾಳಿಗಳು ಗಣ್ಯ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ ಸೇರಿದಂತೆ ಟೆಹ್ರಾನ್‌ನಲ್ಲಿರುವ ಇರಾನ್ ಆಡಳಿತ ಕಟ್ಟಡಗಳನ್ನು ಗುರಿಯಾಗಿಸಿಕೊಂಡವು. ಬಾಲಕಿಯರ ಶಾಲೆ ಸೇರಿದಂತೆ ನಾಗರಿಕ ಕೇಂದ್ರಗಳನ್ನು ಸಹ ಹೊಡೆದವು ಎಂದು ವರದಿಯಾಗಿದೆ. ಇದರಲ್ಲಿ ಮಕ್ಕಳು ಸೇರಿದಂತೆ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.

ಇಂದು ಕ್ಷಿಪಣಿಗಳು ಮತ್ತು ದಾಳಿ ಡ್ರೋನ್‌ಗಳು ಟೆಹ್ರಾನ್‌ನ ಹಲವಾರು ಗುರಿಗಳ ಮೇಲೆ ದಾಳಿ ಮಾಡಿದವು, ಅವುಗಳಲ್ಲಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರಿರುವ ಕಟ್ಟಡ ಕೂಡ ಸೇರಿತ್ತು. ನಂತರ ಅವರನ್ನು ಕೊಲ್ಲಲಾಗಿದೆ ಎಂದು ದೃಢಪಡಿಸಲಾಯಿತು. ಇರಾನ್ ಟೆಲ್ ಅವೀವ್, ಇತರ ಇಸ್ರೇಲಿ ನಗರಗಳು ಮತ್ತು ಪಶ್ಚಿಮ ಏಷ್ಯಾದಾದ್ಯಂತದ ಯುಎಸ್ ಮಿಲಿಟರಿ ನೆಲೆಗಳು ಮತ್ತು ರಾಯಭಾರ ಕಚೇರಿಗಳ ಮೇಲೆ ದಾಳಿ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿತು. ಸೌದಿ ಅರೇಬಿಯಾದಲ್ಲಿನ ತೈಲ ಸಂಸ್ಕರಣಾಗಾರ ಮತ್ತು ದುಬೈನಲ್ಲಿರುವ ಐಷಾರಾಮಿ ಹೋಟೆಲ್ ಸೇರಿದಂತೆ ನಾಗರಿಕ ಮತ್ತು ಇಂಧನ ಸೌಲಭ್ಯಗಳು ಸಹ ಹಾನಿಗೊಳಗಾದವು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ ಸಚಿವ ವಿ. ಸೋಮಣ್ಣ – Kannada News | V Somanna released Sarkari Nyaya Bele Angadi movie poster

ಕುಮಾರ್ ಬಂಗಾರಪ್ಪ, ದೊಡ್ಡಣ್ಣ, ರಾಗಿಣಿ ದ್ವಿವೇದಿ (Ragini Dwivedi) ಮುಂತಾದವರು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಈಗಾಗಲೇ ಶೂಟಿಂಗ್ ಪೂರ್ಣಗೊಂಡಿದೆ. ಚಿತ್ರದ ಶೀರ್ಷಿಕೆಯೇ ತಿಳಿಸುತ್ತಿರುವಂತೆ ಸರ್ಕಾರಿ ನ್ಯಾಯಬೆಲೆ ಅಂಗಡಿ (Sarkari Nyaya Bele Angadi) ಮತ್ತು ಪಡಿತರ ವ್ಯವಸ್ಥೆಯ ಸುತ್ತ ನಡೆಯುವಂತಹ ಕಥಾಹಂದರವನ್ನು ಈ ಸಿನಿಮಾ ತೆರೆದಿಡಲಿದೆ. ಗ್ರಾಮೀಣ ಸೊಗಡಿನ ಕಥೆಯಿರುವ ಈ ಸಿನಿಮಾದ ಸಂಪೂರ್ಣ ಚಿತ್ರೀಕರಣವನ್ನು ಮಂಡ್ಯ ಜಿಲ್ಲೆಯಲ್ಲಿ ಮಾಡಲಾಗಿದೆ. ಕೇಂದ್ರ ಜಲ ಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ (V Somanna) ಅವರು ಈ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

ಭಾ.ಮ. ಹರೀಶ್‌, ಭಾ.ಮ. ಗಿರೀಶ್‌, ಚೆಲುವ ಮೂರ್ತಿ ಸೇರಿದಂತೆ ಚಿತ್ರರಂಗ ಮತ್ತು ರಾಜಕೀಯದ ಅನೇಕ ಗಣ್ಯರು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಪೋಸ್ಟರ್ ಬಿಡುಗಡೆ ವೇಳೆ ಹಾಜರಿದ್ದರು. ಪೋಸ್ಟರ್ ಬಿಡುಗಡೆ ಬಳಿಕ ಸಿನಿಮಾ ಬಗ್ಗೆ ವಿ. ಸೋಮಣ್ಣ ಅವರು ಮಾತನಾಡಿದರು. ಚಿತ್ರತಂಡ ಪ್ರಯತ್ನವನ್ನು ಮೆಚ್ಚಿ ಅವರು ಶುಭ ಹಾರೈಸಿದರು.

‘ಬಡವರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸರ್ಕಾರಿ ನ್ಯಾಯಬೆಲೆ ಅಂಗಡಿ ಮೂಲಕ ದಿನಸಿ ಮತ್ತು ಆಹಾರವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಆದರೆ ಈ ವ್ಯವಸ್ಥೆಯಲ್ಲಿರುವ ಕೆಲವು ಲೋಪಗಳಿಂದ ಇದರ ಉದ್ದೇಶ ಪರಿಣಾಮಕಾರಿಯಾಗಿ ಈಡೇರುತ್ತಿಲ್ಲ. ಇದೇ ವಿಷಯವನ್ನು ಇಟ್ಟುಕೊಂಡು ಸಿನಿಮಾ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಸಾಮಾಜಿಕ ಕಳಕಳಿಯ ವಿಷಯಗಳನ್ನು ಸಿನಿಮಾ ಮೂಲಕ ಹೇಳಿದಾಗ ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ತಲುಪುತ್ತದೆ’ ಎಂದು ವಿ. ಸೋಮಣ್ಣ ಹೇಳಿದರು.

ನಟ ಕುಮಾರ್ ಬಂಗಾರಪ್ಪ ಅವರು ಮಾತನಾಡಿ, ‘ಪಡಿತರ ವ್ಯವಸ್ಥೆಯ ಮೇಲೆ ಮೂಡಿಬರುತ್ತಿರುವ ಮೊಟ್ಟ ಮೊದಲ ಸಿನಿಮಾ ಇದು. ಮನರಂಜನೆ ಜೊತೆಗೆ ಒಂದು ಒಳ್ಳೆಯ ಸಂದೇಶ ಸಹ ಈ ಸಿನಿಮಾದಲ್ಲಿದೆ. ನ್ಯಾಯಬೆಲೆ ಅಂಗಡಿಯಲ್ಲಿ ಏನೇನು ಅವ್ಯವಹಾರಗಳು ನಡೆಯುತ್ತದೆ ಎಂಬುದನ್ನು ಸಮಾಜಕ್ಕೆ ತೋರಿಸುವಂಥ ಕಥೆ ಈ ಸಿನಿಮಾದಲ್ಲಿದೆ’ ಎಂದು ಹೇಳಿದರು.

ಇದನ್ನೂ ಓದಿ: ‘ಡೆವಿಲ್​​ನಲ್ಲಿ ನಾನು ನಟಿಸಬೇಕಿತ್ತು, ಆದರೆ..’; ವಿವರಿಸಿದ ರಾಗಿಣಿ ದ್ವಿವೇದಿ

ನಟಿ ರಾಗಿಣಿ ದ್ವಿವೇದಿ ಅವರು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದಲ್ಲಿ ಪಾರ್ವತಿ ಎಂಬ ಗ್ರಾಮೀಣ ಮಹಿಳೆಯ ಪಾತ್ರವನ್ನು ಮಾಡಿದ್ದಾರೆ. ‘ಜಯಶಂಕರ ಟಾಕೀಸ್‌’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ತೇಜು ಮೂರ್ತಿ ಹಾಗೂ ಪದ್ಮಾವತಿ ಚಂದ್ರಶೇಖರ್‌ ಅವರು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಅನಂತ್‌ ಆರ್ಯನ್‌ ಸಂಗೀತ ನೀಡಿದ್ದಾರೆ. ಬಿ. ರಾಮಮೂರ್ತಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಸಾತ್ವಿಕ್‌ ಪವನ್‌ ಕುಮಾರ್‌ ಅವರು ಛಾಯಾಗ್ರಹಣ ಹಾಗೂ ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಾಂಗ್ಲಾ ವೇಗಿ ಮುಸ್ತಾಫಿಜುರ್ ರೆಹಮಾನ್​ಗಾಗಿ ಬೇಡಿಕೆ ಇಟ್ಟ ಐಪಿಎಲ್ ಫ್ರಾಂಚೈಸಿಗಳು

Source link

ಖಮೇನಿ ಸಾವಿನ ಕುರಿತಾದ ಪ್ರತಿಭಟನೆಗಳನ್ನು ಖಂಡಿಸಿದ ಮುಂಬೈನ ಶಿಯಾ ನಾಯಕ ಮೌಲಾನಾ ಹಸನ್ ಅಲಿ – Kannada News | Shia Leader Maulana Hasan Ali Rajani In Mumbai Condemns Protests Over Khamenei Death

ಮುಂಬೈ, ಮಾರ್ಚ್ 3: ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯ (Ayatollah Ali Khamenei) ಸಾವಿನ ಬಗ್ಗೆ ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಮಹಾರಾಷ್ಟ್ರದ ಮುಂಬೈನಲ್ಲಿ ಪ್ರತಿಕ್ರಿಯೆ ನೀಡಿರುವ ಅಖಿಲ ಭಾರತ ಶಿಯಾ ವೈಯಕ್ತಿಕ ಕಾನೂನು ಮಂಡಳಿಯ ಉಪಾಧ್ಯಕ್ಷ ಮೌಲಾನಾ ಹಸನ್ ಅಲಿ ರಜನಿ, “ಅಲ್ಲಿ ಮಡಿದವರಿಗೆ ನಾವು ನಮ್ಮ ಸಂತಾಪ ಸೂಚಿಸುತ್ತೇವೆ. ನಾವು ಕೂಡ ಅವರ ದುಃಖವನ್ನು ಹಂಚಿಕೊಳ್ಳುತ್ತೇವೆ. ಆದರೆ ಪ್ರತಿಯೊಂದು ದೇಶವು ತನ್ನ ವಿವಾದಗಳನ್ನು ತನ್ನ ದೇಶದೊಳಗೆ ಇಟ್ಟುಕೊಳ್ಳಬೇಕು, ಅವುಗಳನ್ನು ಬೇರೆಡೆಗೆ ತರಬಾರದು” ಎಂದು ಹೇಳಿದ್ದಾರೆ.

“ಇಂದು ಪ್ರಪಂಚದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ, ಅವು ಭಾರತದಲ್ಲಿರಲಿ ಅಥವಾ ಪಾಕಿಸ್ತಾನದಲ್ಲಿರಲಿ, ಏಕೆಂದರೆ ಸಾಯುತ್ತಿರುವವರು ನಮ್ಮ ನಾಯಕರಲ್ಲ. ನಾವು ನಮ್ಮ ದೇಶಕ್ಕೆ ನಿಷ್ಠರಾಗಿರಬೇಕು. ಬೇರೆ ದೇಶದ ಹಿಂಸಾಚಾರಗಳು ನಮ್ಮ ದೇಶದೊಳಗೆ ಪ್ರವೇಶಿಸಬಾರದು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

‘ಮೆಜೆಸ್ಟಿಕ್ 2’ ಸಿನಿಮಾದ ಬಿಡುಗಡೆಯ ಖುಷಿಯಲ್ಲಿ ನಟಿ ಸಂಹಿತಾ ವಿನ್ಯಾ – Kannada News | Actress Samhita Vinya excited to know audience reaction for Majestic 2 movie

ಶೀರ್ಷಿಕೆ ಕಾರಣದಿಂದಲೇ ‘ಮೆಜೆಸ್ಟಿಕ್ 2’ (Majestic 2) ಸಿನಿಮಾ ಗಮನ ಸೆಳೆದಿದೆ. ದರ್ಶನ್ ಅವರು ನಟಿಸಿದ ‘ಮೆಜೆಸ್ಟಿಕ್’ ಸಿನಿಮಾ 2002ರಲ್ಲಿ ಬಿಡುಗಡೆ ಆಗಿತ್ತು. ಈಗ ‘ಮೆಜೆಸ್ಟಿಕ್ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ನಟ ಭರತ್ ಕುಮಾರ್ ಅವರಿಗೆ ಜೋಡಿಯಾಗಿ ನಟಿ ಸಂಹಿತಾ ವಿನ್ಯಾ ಅಭಿನಯಿಸಿದ್ದಾರೆ. ರಾಮು ಎಸ್. ಅವರು ನಿರ್ದೇಶನ ಮಾಡಿದ ಈ ಸಿನಿಮಾದಲ್ಲಿ ತಮ್ಮ ಪಾತ್ರ ವಿಶೇಷವಾಗಿದೆ ಎಂದು ಸಂಹಿತಾ ವಿನ್ಯಾ (Samhita Vinya) ಅವರು ಖುಷಿಯಾಗಿದ್ದಾರೆ. ಬಿಡುಗಡೆ ಹೊಸ್ತಿಲಲ್ಲಿ ಅವರ ಎಗ್ಸೈಟ್​ಮೆಂಟ್ ಹೆಚ್ಚಿದೆ.

2026ರ ವರ್ಷವನ್ನು ತಮ್ಮ ಪಾಲಿನ ಲಕ್ಕಿ ಇಯರ್ ಎನ್ನುತ್ತಿದ್ದಾರೆ ನಟಿ ಸಂಹಿತಾ ವಿನ್ಯಾ. ‘ಮೆಜೆಸ್ಟಿಕ್ 2’ ಸಿನಿಮಾದಲ್ಲಿ ಅವರ ಪಾತ್ರ ಹೇಗಿರಲಿದೆ ಎಂಬುದು ಟ್ರೇಲರ್ ಮೂಲಕ ಗೊತ್ತಾಗಿದೆ. ಎರಡು ತಿಂಗಳ‌ ಹಿಂದಷ್ಟೇ ಸಂಹಿತಾ ಅಭಿನಯದ ‘ಜಿ.ಎಸ್.ಟಿ’ ಸಿನಿಮಾ ರಿಲೀಸ್ ಆಗಿತ್ತು. ಅಲ್ಲದೇ, ಕಳೆದ ತಿಂಗಳು ‘ಮಿಕ್ಸಿಂಗ್ ಪ್ರೀತಿ’ ಸಿನಿಮಾ ತೆರೆಕಂಡಿತ್ತು.

ಹೀಗೆ ಒಂದರ ಮೇಲೊಂದರಂತೆ ಸಿನಿಮಾಗಳು ಬಿಡುಗಡೆ ಆಗುತ್ತಿರುವುದು ಸಂಹಿತಾ ವಿನ್ಯಾ ಅವರಿಗೆ ಖುಷಿ ನೀಡಿದೆ. ‘ಮೆಜೆಸ್ಟಿಕ್ 2’ ಸಿನಿಮಾಗೆ ಜನರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ತಿಳಿಯಲು ಅವರು ಕಾದಿದ್ದಾರೆ. ಈಗಾಗಲೇ ಕನ್ನಡ, ತೆಲುಗು, ತಮಿಳು ಸೇರಿದಂತೆ 18ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲೂ ಅವರು ಸಕ್ರಿಯರಾಗಿದ್ದಾರೆ.

‘ಮೆಜೆಸ್ಟಿಕ್ 2’ ಸಿನಿಮಾದ ಟ್ರೇಲರ್:

‘ಮೆಜೆಸ್ಟಿಕ್ 2’ ಸಿನಿಮಾದಲ್ಲಿ ತಮ್ಮ ಪಾತ್ರ ಹೇಗಿರಲಿದೆ ಎಂಬುದನ್ನು ಸಂಹಿತಾ ವಿನ್ಯಾ ಅವರು ವಿವರಿಸಿದ್ದಾರೆ. ಕೆಲಸ ಹುಡುಕಿಕೊಂಡು ಹಳ್ಳಿಯಿಂದ ಮಹಾನಗರಕ್ಕೆ ಬರುವ ಬಡ ಯುವತಿಯ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಮಾಲಾಶ್ರೀ, ಶ್ರುತಿ ಮುಂತಾದ ಅನುಭವಿ ಕಲಾವಿದರ ನಟಿಸಿದ್ದಾರೆ. ಅವರ ಜೊತೆ ಅಭಿನಯಿಸಿದ್ದಕ್ಕೆ ಸಂಹಿತಾ ವಿನ್ಯಾ ಖುಷಿಯಾಗಿದ್ದಾರೆ.

ಇದನ್ನೂ ಓದಿ: ಭಯಾನಕ ಪೋಸ್ಟರ್​ನಿಂದ ಗಮನ ಸೆಳೆದ ‘ಯೂ ಆರ್​ ಮೈ ಹೀರೋ’; ಕನ್ನಡತಿ ಸಂಹಿತಾ ವಿನ್ಯಾ ನಾಯಕಿ

‘ಮೊದಲ ಬಾರಿಗೆ ಮೆಜೆಸ್ಟಿಕ್​ಗೆ ಬಂದಿಳಿಯುವ ಬಡ ಹುಡುಗಿಗೆ, ರೌಡಿಸಂ ಮಾಡಿಕೊಂಡಿದ್ದ ನಾಯಕ ಮರಿದಾಸನ ಪರಿಚಯ ಆಗುತ್ತದೆ. ಆತನ ಜತೆ ಲವ್ ಕೂಡ ಆಗಿ ನಂತರ ಏನೇನೆಲ್ಲ ನಡೆದು ಹೋಗುತ್ತದೆ ಎನ್ನುವುದೇ ‘ಮೆಜೆಸ್ಟಿಕ್ 2’ ಚಿತ್ರದ ಕಥೆಯ ಒಂದೆಳೆ. ಮಾಲಾಶ್ರೀ, ಶೃತಿಯಂಥ ಹಿರಿಯ ನಟಿಯರ ಜೊತೆ ಅಭಿನಯಿಸಿದ್ದು ನನ್ನ ಜೀವನದ ಮರೆಯಲಾಗದ ಅನುಭವ’ ಎಂದು ಸಂಹಿತಾ ವಿನ್ಯಾ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆಲ್ಕೋಹಾಲ್ ಸೇವನೆ ಮಾಡದೇ ಇದ್ರೂ ಲಿವರ್ ಡ್ಯಾಮೇಜ್ ಆಗೋದಕ್ಕೆ ಕಾರಣವೇನು ಗೊತ್ತಾ? – Kannada News | Liver Damage Without Alcohol: What’s Going On?

ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಮಾಡದವರಲ್ಲಿಯೂ ಲಿವರ್ (Liver) ಸಂಬಂಧಿತ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಆದರೆ ಮದ್ಯ ಸೇವನೆ ಮಾಡದಿದ್ದರೂ ಲಿವರ್ ಗೆ ಹೇಗೆ ಡ್ಯಾಮೇಜ್ (Liver Damage) ಅಥವಾ ಹಾನಿಯಾಗುತ್ತದೆ ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತದೆ. ಈ ಬಗ್ಗೆ ಆರೋಗ್ಯ ತಜ್ಞರು ಕೆಲವು ಮಾಹಿತಿ ಹಂಚಿಕೊಂಡಿದ್ದು, ಲಿವರ್ ಸಮಸ್ಯೆಗಳ ಲಕ್ಷಣಗಳು ಪ್ರಾರಂಭಿಕ ಹಂತದಲ್ಲಿ ಸ್ವಲ್ಪಮಟ್ಟಿಗೆ ಮಾತ್ರ ಕಾಣಿಸಿಕೊಳ್ಳುತ್ತವೆ. ಇದರಿಂದಾಗಿ ಹಲವರು ಅದನ್ನು ಲಘುವಾಗಿ ತೆಗೆದುಕೊಳ್ಳುತ್ತಾರೆ. ಆದರೆ ಇದು ನಿಧಾನವಾಗಿ ದೇಹದಲ್ಲಿ ದೌರ್ಬಲ್ಯ ಹೆಚ್ಚಿಸುತ್ತದೆ, ಹಸಿವು ಕಡಿಮೆಯಾಗುವುದು ಮತ್ತು ಹೊಟ್ಟೆಯ ಬಲಭಾಗದಲ್ಲಿ ಭಾರವಾಗಿರುವ ಅನುಭವವಾಗುತ್ತದೆ. ಕೆಲವರಿಗೆ ಗ್ಯಾಸ್, ಅಜೀರ್ಣ, ತೂಕ ಹೆಕ್ಕಾಗುವುದು ಸೇರಿದಂತೆ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದರ ಜೊತೆಗೆ ಚರ್ಮ ಮತ್ತು ಕಣ್ಣುಗಳಲ್ಲಿ ಹಳದಿ ಬಣ್ಣ ಕಾಣಿಸಿಕೊಳ್ಳುವುದು, ಮೂತ್ರದ ಬಣ್ಣ ಗಾಢವಾಗುವುದು ಮತ್ತು ಕಾಲುಗಳಲ್ಲಿ ಊತ ಉಂಟಾಗುವುದು ಕೂಡ ಲಿವರ್ ಸರಿಯಾಗಿ ಕಾರ್ಯನಿರ್ವಹಿಸದಿರುವ ಸೂಚನೆಗಳಾಗಿವೆ. ಆದ್ದರಿಂದ ಮದ್ಯಪಾನ ಮಾಡದವರಾದರೂ ಲಿವರ್ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದಿರುವುದು ಅಗತ್ಯವಾಗಿದೆ. ಹಾಗಾದರೆ ಲಿವರ್ ಡ್ಯಾಮೇಜ್ ಆಗುವುದಕ್ಕೆ ಕಾರಣಗಳೇನು, ಯಾರಲ್ಲಿ ಈ ರೀತಿಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ, ಇದನ್ನು ತಡೆಯಲು ಏನು ಮಾಡಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಿ. ಮಾಹಿತಿ ಸ್ಟೋರಿಯಲ್ಲಿದೆ.

ಮದ್ಯವಿಲ್ಲದೇ ಲಿವರ್ ಡ್ಯಾಮೇಜ್ ಆಗುವುದಕ್ಕೆ ಕಾರಣಗಳು:

ಲೆಡಿ ಹಾರ್ಡಿಂಗ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಹಾಗೂ ಮುಖ್ಯಸ್ಥರಾದ ಡಾ. ಎಲ್.ಎಚ್. ಘೋಟೇಕರ್ ಹೇಳುವ ಪ್ರಕಾರ, ಮದ್ಯಪಾನ ಮಾತ್ರವೇ ಲಿವರ್ ಹಾನಿಗೆ ಕಾರಣವಲ್ಲ. ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು, ಹೆಚ್ಚಾಗಿ ಎಣ್ಣೆಯಲ್ಲಿ ಕರಿದ ಪದಾರ್ಥಗಳು ಹಾಗೂ ಜಂಕ್ ಫುಡ್ ಸೇವನೆ ಲಿವರ್ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತದೆ. ಜೊತೆಗೆ ಚಟುವಟಿಕೆ ಕೊರತೆ ಮತ್ತು ಅತಿಯಾದ ತೂಕ ಕೂಡ ಲಿವರ್ ಸಮಸ್ಯೆಗಳಿಗೆ ಕಾರಣವಾಗಬಹುದು. ವೈದ್ಯರ ಸಲಹೆಯಿಲ್ಲದೆ ದೀರ್ಘಕಾಲ ಔಷಧಿಗಳನ್ನು ಸೇವಿಸುವುದು ಕೂಡ ಲಿವರ್‌ಗೆ ಹಾನಿ ಮಾಡಬಹುದು.

ಇದರ ಹೊರತಾಗಿ ವೈರಲ್ ಸೋಂಕುಗಳು, ಮಾಲಿನ್ಯಗೊಂಡ ನೀರು ಅಥವಾ ಆಹಾರದಿಂದ ಹರಡುವ ರೋಗಗಳು ಕೂಡ ಲಿವರ್ ಮೇಲೆ ಪರಿಣಾಮ ಬೀರುತ್ತವೆ. ಒತ್ತಡ, ದಿನಚರಿ ಸರಿಯಾಗಿ ಇಲ್ಲದಿರುವುದು ಮತ್ತು ನಿದ್ರೆಯ ಕೊರತೆ ದೇಹದ ಮೆಟಾಬಾಲಿಸಂ ಅನ್ನು ಅಸ್ಥಿರಗೊಳಿಸಿ ಲಿವರ್ ಆರೋಗ್ಯವನ್ನು ಹಾಳುಮಾಡಬಹುದು. ಕೆಲವೊಮ್ಮೆ ಕುಟುಂಬದಲ್ಲಿ ಲಿವರ್ ಕಾಯಿಲೆಯ ಇತಿಹಾಸವಿದ್ದರೂ ಅಪಾಯ ಹೆಚ್ಚಾಗಿರಬಹುದು.

ಇದನ್ನೂ ಓದಿ: ಫ್ಯಾಟಿ ಲಿವರ್‌ ಸಮಸ್ಯೆಯನ್ನು ತಡೆಯಲು ಎಣ್ಣೆ, ತುಪ್ಪ ಸೇವನೆ ಮಾಡುವುದನ್ನು ಬಿಡಬೇಕೇ?

ಯಾರಲ್ಲಿ ಈ ಅಪಾಯ ಹೆಚ್ಚಾಗಿ ಕಂಡುಬರುತ್ತದೆ?

ಅತಿಯಾಗಿ ತೂಕ ಇರುವವರು, ಮಧುಮೇಹ ಅಥವಾ ಥೈರಾಯ್ಡ್ ಸಮಸ್ಯೆ ಹೊಂದಿರುವವರು ಹೆಚ್ಚಿನ ಅಪಾಯದಲ್ಲಿರುತ್ತಾರೆ. ದೈಹಿಕ ಚಟುವಟಿಕೆ ಕಡಿಮೆ ಇರುವವರು ಹಾಗೂ ನಿರಂತರವಾಗಿ ಹೊರಗಿನ ಆಹಾರ ಸೇವಿಸುವವರಲ್ಲೂ ಲಿವರ್ ಸಮಸ್ಯೆಗಳು ಕಂಡುಬರುವ ಸಾಧ್ಯತೆ ಹೆಚ್ಚಿರುತ್ತದೆ. ಅಷ್ಟೇಅಲ್ಲ ದೀರ್ಘಕಾಲದಿಂದ ಔಷಧಿ ಸೇವಿಸುವವರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವಿವರಲ್ಲಿಯೂ ಲಿವರ್ ಸಮಸ್ಯೆ ಕಂಡುಬರುತ್ತದೆ. ಅದೆಲ್ಲದರ ಜೊತೆಗೆ ಕುಟುಂಬದಲ್ಲಿ ಲಿವರ್ ಕಾಯಿಲೆಯ ಇತಿಹಾಸವಿದ್ದರೆ ವಿಶೇಷ ಎಚ್ಚರಿಕೆ ವಹಿಸುವುದು ಅಗತ್ಯ.

ಹಾಗಾಗಿ ಲಿವರ್ ಆರೋಗ್ಯ ಕಾಪಾಡಿಕೊಳ್ಳಲು ಸಮತೋಲನಯುತ ಮತ್ತು ಮನೆಯಲ್ಲೇ ತಯಾರಿಸಿದ ಆಹಾರ ಸೇವಿಸುವುದು ಬಹಳ ಮುಖ್ಯ. ಎಣ್ಣೆಯಲ್ಲಿ ಕರಿದ ಹಾಗೂ ಪ್ರಾಸೆಸ್ಡ್ ಆಹಾರಗಳಿಂದ ದೂರವಿರಬೇಕು. ಪ್ರತಿದಿನ ಸ್ವಲ್ಪ ವ್ಯಾಯಾಮ ಅಥವಾ ವಾಕಿಂಗ್ ಮಾಡಬೇಕು. ಸಾಕಷ್ಟು ಪ್ರಮಾಣದಲ್ಲಿ ನೀರು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದನ್ನು ಮರೆಯಬಾರದು. ವೈದ್ಯರ ಸಲಹೆಯಿಲ್ಲದೆ ಔಷಧಿ ಸೇವನೆ ಮಾಡಬಾರದು. ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಒತ್ತಡ ಕಡಿಮೆ ಮಾಡಲು ಯೋಗ ಮತ್ತು ಧ್ಯಾನ ಮಾಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Auqib Nabi: ರಣಜಿ ಹೀರೋ ಆಕಿಬ್ ನಬಿ ಶೀಘ್ರದಲ್ಲೇ ಟೀಂ ಇಂಡಿಯಾಗೆ ಎಂಟ್ರಿ

Source link

ಮಟ್ಕಾ ಅಡ್ಡೆ ಮೇಲೆ ದಾಳಿ ಮಾಡಿ ಬುಕ್ಕಿಯನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ‌ ಶಾಸಕ – Kannada News | Haveri MLA Rudrappa lamani raids Matka den in guttala Town And hands over accused to police

ಹಾವೇರಿ, (ಮಾರ್ಚ್ 03): ಅಪರಾಧ ಕೃತ್ಯಗಳ ಜೊತೆಗೆ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವುದು ಪೊಲೀಸ್ (Police) ಇಲಾಖೆಯ ಕರ್ತವ್ಯವಾಗಿದೆ. ಆದ್ರೆ, ಹಳ್ಳಿಗಳಲ್ಲಿ ಪೊಲೀಸರೇ ಮಟ್ಕಾ (Matka), ಇಸ್ಪಿಟ್ ದಂಧೆಕೋರರ ಜೊತೆ ಶಾಮೀಲಾಗಿ ಹಣ ಮಾಡುವ ಕೆಲಸಕ್ಕಿಳಿದಿದ್ದಾರೆ. ಇದರ ಮಧ್ಯೆ ಪೊಲೀಸರು ಮಾಡಬೇಕಾದ ಕೆಲಸವನ್ನು ಶಾಸಕರೊಬ್ಬರು ಮಾಡಿ ತೋರಿಸಿದ್ದಾರೆ. ಹೌದು… ನಿನ್ನೆ (ಮಾರ್ಚ್ 02) ಕಾರ್ಯ ನಿಮಿತ್ತ ಹಾವೇರಿ (Haveri) ತಾಲೂಕಿನ ಗುತ್ತಲ ಪಟ್ಟಣಕ್ಕೆ ಆಗಮಿಸಿದ್ದು, ಈ ವೇಳೆ ಸ್ಥಳೀಯರಿಂದ  ಕೇಳಿಬಂದ ದೂರಿನ ಮೇರೆಗೆ ಸ್ವತಃ ಉಪಸಭಾಧ್ಯಕ್ಷರು ಶಾಸಕರಾದ ರುದ್ರಪ್ಪ ಲಮಾಣಿಯವರು (Rudrappa lamani )ಮಟ್ಕಾ ಬರೆಯುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿ ಬುಕ್ಕಿಯನ್ನ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಇದಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಾವೇರಿ ತಾಲೂಕಿನ ಗುತ್ತಲ ಪಟ್ಟಣದ ಪ್ರಾಥಮಿಕ ಮಕ್ಕಳ ಶಾಲೆ ಸಮೀದ ಕೊಠಡಿಯೊಂದರಲ್ಲಿ ಮಟ್ಕಾ ಬರೆಯುತ್ತಿದ್ದಾರೆ. ಇದನ್ನು ಯಾರೊಬ್ಬರೂ ತಡೆಯುತ್ತಿಲ್ಲ ಎಂದು ಸ್ಥಳೀಯ ಮಹಿಳೆಯರು ಶಾಸಕ ರುದ್ರಪ್ಪ ಲಮಾಣಿಗೆ ಅವರಿಗೆ ಸೋಮವಾರ ಮನವಿ ಮಾಡಿದ್ದಾರೆ. ಇದರಿಂದ ಎಚ್ಚೆತ್ತ ರುದ್ರಪ್ಪ ಲಮಾಣಿ ಕೂಡಲೇ ಆ ಕೊಠಡಿ ಮೇಲೆ ದಾಳಿ ಮಾಡಿದ್ದು, ಆ ವೇಳೆ ವ್ಯಕ್ತಿಯೋರ್ವ ಮಟ್ಕಾ ಬರೆಯುತ್ತಿರುವುದು ಕಂಡುಬಂದಿದೆ. ಕೂಡಲೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಶಾಲೆ ಶಿಕ್ಷಕಿಯಾಗಿ ಖಾಸಗಿ ಕಾಲೇಜಿನಲ್ಲಿ ಮೂಗು ತೂರಿಸಿದ ಟೀಚರ್ ಸಸ್ಪೆಂಡ್

ಶಾಸಕರ ಬಳಿ ಅಳಲು ತೋಡಿಕೊಂಡ ಮಹಿಳೆಯರು

ನಾಡ ಕಚೇರಿ ಉದ್ಘಾಟನೆ ಮತ್ತು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ರುದ್ರಪ್ಪ ಲಮಾಣಿ ಮತ್ತು ತಹಶೀಲ್ದಾರ್ ಆಗಮಿಸಿದ್ದರು. ಆಗ ಶಾಸಕರನ್ನು ಅಡ್ಡಗಟ್ಟಿದ ಮಹಿಳೆಯರು,ಮೀನು ಮಾಂಸದಂಗಡಿಯವರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದು, ಇದರಿಂದ ದುರ್ವಾಸನೆ ಬರುತ್ತಿದೆ. ಇದನ್ನು ತಿನ್ನಲು ಬರುವ ಬೀದಿ ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡುತ್ತಿವೆ. ಇದನ್ನು ತಡೆಟ್ಟಬೇಕೆಂದು ಮನವಿ ಮಾಡಿದ್ದರು. ಜೊತೆಗೆ ಮಟ್ಕಾ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದರು. ಅಲ್ಲದೇ ಇಲ್ಲೇ ರೂಮ್​​ನಲ್ಲಿ ಮಟ್ಕಾ ಬರೆಯುತ್ತಾರೆ ಯಾರು ಏನು ಮಾಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಕಾರ್ಯಕ್ರಮಕ್ಕೆ ಬಂದಿದ್ದ ವೇಳೆ ದಾಳಿ

ಬಳಿಕ ರುದ್ರಪ್ಪ ಲಮಾಣಿಯವರು ಮಹಿಳೆಯರನ್ನು ಸಮಾಧಾನಪಡಿಸಿ ಕೂಡಲೇ ಆ ಕ್ಷಣವೇ ಮಟ್ಕಾ ಅಡ್ಡೆ ಮೇಲೆ ದಾಳಿ ಮಾಡಿದ್ದು, ಈ ವೇಳೆ ವ್ಯಕ್ತಿಯೋರ್ವ ರೂಮ್​​​ನಲ್ಲಿ ಕುಳಿತು ಮಟ್ಕಾ ಬರೆಯುತ್ತಿರುವುದು ಕಂಡುಬಂದಿದೆ. ಇದರಿಂದ ಗರಂ ಆದ ರುದ್ರಪ್ಪ ಲಮಾಣಿ ಕೂಡಲೇ ಪಿಎಸ್​​ಐಗೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡು ಮಟ್ಕಾ ಬುಕ್ಕಿಯನ್ನು ಒಪ್ಪಿಸಿದ್ದಾರೆ. ಈ ವೇಳೆ ಪಿಎಸ್​​ಐಗೆ ತರಾಟೆಗೆ ತೆಗೆದುಕೊಂಡಿದ್ದು, ತಹಶೀಲ್ದಾರ್ ಶರಣಮ್ಮ ಹಾಗೂ ಗುತ್ತಲ ಪೊಲೀಸ್ ಠಾಣೆಯ ಸಿಬ್ಬಂದಿಗೆ ಮಟ್ಕಾ ದಂಧೆಗೆ ಕಡಿವಾಣ ಹಾಕಬೇಕೆಂದು ಖಡಕ್ ಸೂಚನೆ ನೀಡಿದ್ದಾರೆ.

ಎಷ್ಟೋ ರಾಜಕಾರಣಿಗಳು ಇಂತಹ ಅಕ್ರಮ ದಂಧೆಕೋರರ ಬೆನ್ನಿಗೆ ನಿಂತಿರುವರ ನಡುವೆ ಪೊಲೀಸರು ಮಾಡಬೇಕಾದ ಈ ಕೆಲಸವನ್ನು ಮಾಡಿ  ಶಾಸಕ ರುದ್ರಪ್ಪ ಲಮಾಣಿ ಮಾದರಿಯಾಗಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:32 pm, Tue, 3 March 26

Source link