All posts by nagaraj11081993

ಕೋಲಾರದಲ್ಲಿ ಜೀರೋ ಹೆಸರಿನಲ್ಲಿ ಭೂ ಹಗರಣ: ವಾರಸುದಾರರಿಲ್ಲದ ಭೂಮಿ ಲಪಟಾಯಿಸಿದ ಪ್ರಭಾವಿಗಳು – Kannada News | Kolar Land Grab: Shivarapattana 80 Cr Zero Bin Zero Scam Exposed

ಕೋಲಾರ, ಫೆಬ್ರವರಿ 02: ಅದು ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಕೈಗಾರಿಕಾ ಪ್ರದೇಶ. ಅಲ್ಲಿ ಭೂಮಿಗೆ (Land) ಬಂಗಾರದ ಬೆಲೆ ಇದೆ. ಅಂಥ ಜಾಗದಲ್ಲಿ ಯಾರೂ ವಾರಸುದಾರರಿಲ್ಲದ ಭೂಮಿ ಇದೆ ಎಂದಾಗ ಭೂಗಳ್ಳರು, ಪ್ರಭಾವಿಗಳು ಸುಮ್ಮನೆ ಬಿಡುತ್ತಾರಾ, ಸಾಧ್ಯವೇ ಇಲ್ಲ. ಇಂಥಾದೊಂದು ಜಾಗ ಇದೇ ಅಂಥ ಗೊತ್ತಾಗಿದ್ದೇ ನೋಡಿ ಅಧಿಕಾರಿಗಳನ್ನು ಶಾಮೀಲು ಮಾಡಿಕೊಂಡು ಕೋಟ್ಯಂತರ ರೂ. ಭೂಮಿಯನ್ನು ತಿಂದು ತೇಗಿದ್ದಾರೆ.

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಶಿವಾರಪಟ್ಟಣ ಶಿಲ್ಪಿಗಳ ತವರೂರು. ಇದಕ್ಕೆ ಇಂಥದೊಂದು ಇತಿಹಾಸವಿದೆ. ಸಾವಿರಾರು ವರ್ಷಗಳಿಂದ ಶಿವಾರಪಟ್ಟಣ ಗ್ರಾಮದಲ್ಲಿನ ಜನರು ವಿವಿಧ ಶಿಲ್ಪಕಲೆಗಳಿಂದಲೇ ಇಡೀ ದೇಶವಿದೇಶದಲ್ಲಿ ಹೆಸರು ಮಾಡಿದ್ದಾರೆ. ಆದರೆ ಇಂದಿಗೆ ಇದೇ ಶಿವಾರಪಟ್ಟಣ ಗ್ರಾಮದ ಬಳಿ ಹೊಸದಾಗಿ ಕೈಗಾರಿಕಾ ಪ್ರದೇಶ ನಿರ್ಮಾಣವಾಗುತ್ತಿದೆ. ಜೊತೆಗೆ ನರಸಾಪುರ ಕೈಗಾರಿಕಾ ಪ್ರದೇಶವೂ ಶಿವಾರಪಟ್ಟಣ ಗ್ರಾಮದವರೆಗೂ ವಿಸ್ತಾರಗೊಂಡಿದೆ. ಪರಿಣಾಮ ಈ ಪ್ರದೇಶದಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ಎಕರೆ ಭೂಮಿಗೆ ಸುಮಾರು 4 ರಿಂದ 5 ಕೋಟಿ ರೂ ಮಾರಾಟವಾಗುತ್ತಿದೆ.

ಇದನ್ನೂ ಓದಿ: ಸರ್ಕಾರಿ ಶಾಲೆಯ ಜಾಗ ಕಬಳಿಸಿ ನಿರ್ಮಾಣವಾಗ್ತಿದೆ ಮಸೀದಿ! ಮುಳಬಾಗಿಲು ಗುಂಡ್ಲಹಳ್ಳಿ ಗ್ರಾಮದಲ್ಲಿ ಭಾರಿ ವಿವಾದ

ಇಂಥ ಪ್ರದೇಶದಲ್ಲಿ ಭೂಗಳ್ಳರು ಹಾಗೂ ಕೆಲವು ಪ್ರಭಾವಿ ರಾಜಕಾರಣಿಗಳ ಮಕ್ಕಳಿಗೆ ಜೀರೋ ಬಿನ್ ಜೀರೋ ಹೆಸರಿನಲ್ಲಿ ಪಹಣಿಯಲ್ಲಿ ಯಾವುದೇ ವಾರಸುದಾರರಿಲ್ಲದ ಸುಮಾರು 49 ಎಕರೆಯಷ್ಟು ಭೂಮಿ ಇರುವ ವಿಷಯ ತಿಳಿದ ಹಿನ್ನೆಲೆಯಲ್ಲಿ ಆ ಭೂಮಿಯನ್ನು ಕಬಳಿಕೆ ಮಾಡಲು ಅಧಿಕಾರಿಗಳನ್ನು ಶಾಮೀಲು ಮಾಡಿಕೊಂಡು ಸುಮಾರು 16 ಎಕರೆಯಷ್ಟು ಭೂಮಿಯನ್ನು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ನಕಲಿ ವ್ಯಕ್ತಿಯ ಹೆಸರಿಗೆ ಭೂಮಿಯ ದಾಖಲೆಗಳನ್ನು ಸಿದ್ದಮಾಡಿಕೊಂಡು ಅವರಿಂದ ಭೂಮಿಯನ್ನು ಖರೀದಿ ಮಾಡಿದಂತೆ ಮಾಡಿ ಕೋಟ್ಯಂತರ ರೂ ಬೆಲೆ ಬಾಳುವ ಭೂಮಿಯನ್ನು ಲಪಾಟಾಯಿಸಿದ್ದಾರೆ ಎನ್ನುವುದು ಸಾಮಾಜಿಕ ಕಾರ್ಯಕರ್ತ ನವೀನ್​ ಅವರ ಆರೋಪವಾಗಿದೆ.

ಏನಿದು ಜೀರೋ ಬಿನ್ ಜೀರೋ?

ಕಂದಾಯ ಇಲಾಖೆಯ ದಾಖಲಾತಿಗಳಲ್ಲಿ ಹಲವು ವರ್ಷಗಳಿಂದ ತೆರಿಗೆ ಪಾವತಿಯಾಗದ ಹಾಗೂ ಸ್ವಾಧೀನದಲ್ಲಿ ಇಲ್ಲದ ಭೂಮಿಯ ಪಹಣಿಯಲ್ಲಿ ಜೀರೋ ಬಿನ್ ಜೀರೋ ಎಂದು ಸೇರಿಸಲಾಗಿರುತ್ತದೆ. ಶಿವಾರಪಟ್ಟಣದ ಬಹಳ ಹಿಂದೆ ಇದ್ದ ಮುಸ್ಲಿಂ ಸಮುದಾಯಕ್ಕೆ ಸೇರಿದಂತೆ ಕೆಲವು ಕುಟುಂಬಸ್ಥರು ವಲಸೆ ಹೋದವರು ಮತ್ತೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಲಿ ಶಿವಾರಪಟ್ಟಣ ಸರ್ವೆ ನಂ-151 ರಿಂದ 172 ರವರೆಗೆ ವಿವಿಧ ಸರ್ವೆ ನಂಬರ್​ಗಳಲ್ಲಿ ಸುಮಾರು 49 ಎಕರೆ ಭೂಮಿ ಇದೆ. ಅದೆಲ್ಲವೂ ಪಹಣಿಯಲ್ಲಿ ಇಂದಿಗೂ ಜೀರೋ ಬಿನ್​ ಜೀರೋ ಅಥವಾ ಡಾಟ್ ಎಂದು ಬರುತ್ತಿದೆ.

ಅಧಿಕಾರಿಗಳು ಶಾಮೀಲು?

ಈ ವಿಷಯ ತಿಳಿದ ಮಾಲೂರಿನ ಒಬ್ಬ ಪ್ರಭಾವಿ  ರಾಜಕಾರಣಿಯೊಬ್ಬರ ಸಂಬಂಧಿಕರು ಹಾಗೂ ಮಕ್ಕಳು ಕೋಲಾರದ ಕೆಲವು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಶಾಮೀಲು ಮಾಡಿಕೊಂಡು ಮೂಲ ಕಂದಾಯ ಕರ್ದಾ ದಾಖಲೆಯಲ್ಲಿ ಸೈಯದ್ ಇಬ್ರಾಹಿಂ ಸಾಬ್ ಹೆಸರನ್ನು ಖಾಜಿ ಸೈಯದ್ ಇಬ್ರಾಹಿಂ ಎಂದು ತಿದ್ದಿ ಆ ಹೆಸರಿನ ನಕಲಿ ವ್ಯಕ್ತಿಗಳಿಂದ ಭೂಮಿ ನಮ್ಮದು ನಮ್ಮ ಹೆಸರಿಗೆ ಮಾಡಿಕೊಡುವಂತೆ ಉಪವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಿ, ನಂತರ ಅದನ್ನು ಅರ್ಜಿದಾರರ ಹೆಸರಿಗೆ ಮಾಡಿ, ಪಹಣಿಯಲ್ಲಿ ಅವರ ಹೆಸರು ನಮೂದಾಗುತ್ತಿದ್ದಂತೆ ಕೂಡಲೇ ಆ ಭೂಮಿಯನ್ನು ಪ್ರಭಾವಿಗಳು ಖರೀದಿ ಮಾಡಿದಂತೆ ತೋರಿಸಲಾಗಿದೆ.

ಸದ್ಯ ಶಿವಾರಪಟ್ಟಣ ಸರ್ವೆ ನಂ-168 ರಲ್ಲಿ 8.32 ಎಕರೆ, 170 ರಲ್ಲಿ 4.5 ಎಕರೆ ಹಾಗೂ 171 ರಲ್ಲಿ 1.32 ಎಕರೆ ಭೂಮಿಯನ್ನು ಖಾಜಿ ಸೈಯದ್ ಇಬ್ರಾಹಿಂ ಹೆಸರಿಗೆ ಮಾಡಿ ಅವರ ವಂಶಸ್ಥರು ಎಂದು ವಂಶವೃಕ್ಷ ಸೃಷ್ಟಿ ಮಾಡಿ ಸುಮಾರು 80 ಕೋಟಿ ರೂ ಬೆಲೆ ಬಾಳುವ ಭೂಮಿಯನ್ನು ಲಪಟಾಯಿಸಲಾಗಿದೆ. ವಾರಸುದಾರರಿಲ್ಲದ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಬೇಕಿತ್ತು ಅಥವಾ ಈ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶಕ್ಕೆ ನೀಡಬಹುದಾಗಿದ್ದ ಬಂಗಾರದ ಬೆಲೆ ಬಾಳುವ ಭೂಮಿ ಇಂದು ಪ್ರಭಾವಿಗಳ ಪಾಲಾಗಿದೆ. ಸದ್ಯ ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ನಾಮಕಾವಸ್ಥೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಭೈರತಿ ಸುರೇಶ್​ ತನಿಖೆ ಮಾಡಿಸುವ ಭರವಸೆ ನೀಡುತ್ತಿದ್ದಾರೆ. ಆದರೆ ಸರ್ಕಾರಿ ಭೂಮಿಯನ್ನು ಉಳಿಸಬೇಕು ಎನ್ನುವ ಕೂಗು ಜಿಲ್ಲೆಯಲ್ಲಿ ಕೇಳಿಬಂದಿದೆ.

ಇದನ್ನೂ ಓದಿ: ಕೋಗಿಲು ಬೆನ್ನಲ್ಲೇ ನಾಗವಾರ ಬಳಿ ಬೃಹತ್ ಒತ್ತುವರಿ ತೆರವು ಕಾರ್ಯಾಚರಣೆ: 30ಕ್ಕೂ ಹೆಚ್ಚು ಮನೆ, ಶೆಡ್, ಗ್ಯಾರೇಜ್ ಧ್ವಂಸ

ಕಂದಾಯ ಇಲಾಖೆ ಅಧಿಕಾರಿಗಳು ಕೈಜೋಡಿಸಿದರೆ ಜೀರೋಯಿಂದ ಕೋಟಿ ಕೋಟಿ ರೂ. ಹಣ ಮಾಡೋದು ಹೇಗೆ ಅನ್ನೋದು ಈ ಪ್ರಕರಣದಲ್ಲಿ ತಿಳಿದುಬಂದಿದೆ. ಸದ್ಯ 16 ಎಕರೆಯಷ್ಟು ಭೂಮಿಗೆ ಈಗಾಗಲೇ ದಾಖಲಾತಿಗಳನ್ನು ಸೃಷ್ಟಿಸಿದ್ದು, ಉಳಿದ ಭೂಮಿ ಕಬಳಿಕೆ ಮಾಡುವ ಕೆಲಸ ನಡೆಯುತ್ತಿದೆ. ಕೂಡಲೇ ಕಂದಾಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಸರ್ಕಾರಿ ಭೂಮಿಯನ್ನು ಉಳಿಸುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Viral Video: ಮಗಳ ಡ್ಯಾನ್ಸ್‌ನ್ನು ಕೀಪ್ಯಾಡ್ ಮೊಬೈಲ್‌ನಲ್ಲಿ ಸೆರೆಹಿಡಿದ ತಂದೆ, ವೈರಲ್‌ ಆಯ್ತು ದೃಶ್ಯ – Kannada News | Viral Video | Father records video of daughter dancing on stage with keypad mobile phone

ಮಗಳ ಪಾಲಿಗೆ ಅಪ್ಪ (father) ಎಲ್ಲವೂ ಆಗಿರುತ್ತಾನೆ. ಇತ್ತ ಕಷ್ಟಪಟ್ಟು ದುಡಿದು ಮಗಳ ಇಷ್ಟಗಳನ್ನು ಈಡೇರಿಸುವ ಅಪ್ಪನಿಗೆ ಆಕೆಗಿಂತ ದೊಡ್ಡ ಪ್ರಪಂಚ ಮತ್ತೊಂದಿಲ್ಲ. ಮಗಳ ಖುಷಿಯಲ್ಲೇ ತನ್ನ ಖುಷಿ ಕಾಣುವ ತಂದೆಯ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಗಣರಾಜ್ಯೋತ್ಸವ ದಿನ ತನ್ನ ಮಗಳು ಸ್ಟೇಜ್‌ನಲ್ಲಿ ಡ್ಯಾನ್ಸ್ ಮಾಡುತ್ತಿದ್ದರೆ, ಇತ್ತ ತಂದೆ ಕೀಪ್ಯಾಡ್ ಫೋನ್‌ನಲ್ಲಿ ರೆಕಾರ್ಡ್ ಮಾಡಲು ನಿಂತುಕೊಂಡಿದ್ದು, ಈ ವಿಡಿಯೋ ಸದ್ಯ ವೈರಲ್ ಆಗಿದೆ.

ಜಿತೇಂದರ್ ಸರಸ್ವತ್ (Jitendar Sarswat) ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟ್ಟ ಹುಡುಗಿಯೊಬ್ಬಳು ಸ್ಟೇಜ್ ಮೇಲೆ ಡ್ಯಾನ್ಸ್ ಮಾಡುತ್ತಿದ್ದಾಳೆ. ಮಕ್ಕಳ ಗುಂಪಿನ ನಡುವೆ ನಿಂತಿರುವ ವ್ಯಕ್ತಿಯೂ ಮಗಳ ಡ್ಯಾನ್ಸ್‌ನ್ನು ಕೀಪ್ಯಾಡ್ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಲು ಪ್ರಯತ್ನಿಸುತ್ತಿದ್ದಾನೆ. ತನ್ನ ಬಳಿ ಸ್ಮಾರ್ಟ್ ಫೋನ್ ಇಲ್ಲದಿದ್ದರೆ ಮಗಳ ಡ್ಯಾನ್ಸ್ ಅನ್ನು ಸೆರೆ ಹಿಡಿಯಬೇಕೆನ್ನುವ ತಂದೆಯ ಪ್ರಯತ್ನವು ಈ ವಿಡಿಯೋದಲ್ಲಿ ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಕೆಟ್ಟ ಅಭ್ಯಾಸಗಳಿಗೆ ಅಪ್ಪನ ಹಣವೆಲ್ಲಾ ಖರ್ಚು ಮಾಡಿ, ತಂದೆಯನ್ನೇ ನಿರ್ದಯಿಯಾಗಿ ಥಳಿಸಿದ ಮಗಳು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಮಗಳ ಖುಷಿಯಲ್ಲಿ ಅಡಗಿದೆ ತಂದೆಯ ನಗು ಎಂದಿದ್ದಾರೆ. ಇನ್ನೊಬ್ಬರು, ಇರುವುದರಲ್ಲಿ ಖುಷಿ ಕಾಣುವುದು ಅಂದ್ರೆ ಇದೇನೇ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ತಂದೆಗೆ ಮಗಳೇ ಪ್ರಪಂಚವಾಗಿರುತ್ತಾಳೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:24 pm, Mon, 2 February 26

Source link

ಮತ್ತೆ ನಿಫಾ ಟೆನ್ಷನ್​: ಕರ್ನಾಟಕದಲ್ಲಿ ಹೈ ಅಲರ್ಟ್​, ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ರಿಲೀಸ್​ – Kannada News | Nipah Virus Alert: Karnataka on High Watch Amid Rising Cases

ಬೆಂಗಳೂರು, ಫೆಬ್ರವರಿ 02: ದೇಶದ ವಿವಿಧ ರಾಜ್ಯಗಳಲ್ಲಿ ನಿಫಾ ವೈರಸ್​​ ಮತ್ತೆ ಸದ್ದು ಮಾಡುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಆರೋಗ್ಯ ಇಲಾಖೆ ಫುಲ್​​ ಅಲರ್ಟ್​​ ಆಗಿದೆ. ಈ ವೈರಸ್​ ಸೋಂಕಿತ ಬಾವಲಿಗಳು ತಿಂದಿರು ಹಣ್ಣುಗಳನ್ನು ತಿಂದರೆ ಅಥವಾ ಹಂದಿಗಳ ಮಾಂಸವನ್ನು ಸೇವನೆ ಮಾಡುವುದರಿಂದ ಹೆಚ್ಚಾಗಿ ಹರಡಲಿದೆ. ಮನುಷ್ಯರಿಂದ ಮನುಷ್ಯರಿಗೂ ಕೆಲವವೊಮ್ಮೆ ಇದು ವರ್ಗಾವಣೆ ಆಗಬಹುದು ಎನ್ನಲಾಗಿದೆ. ಅತ್ಯಂತ ಭಯಾನಕ ಅಂಶವೆಂದರೆ ನಿಫಾ ವೈರಸ್ ಸೋಂಕಿತರ ಮರಣ ಪ್ರಮಾಣ ಶೇ. 60-75 ರಷ್ಟಿರುವ ಕಾರಣ, ಈ ವೈರಸ್​​ ರಾಜ್ಯದಲ್ಲಿ ಕಾಲಿಡದಂತೆ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಶಂಕಿತ ಪ್ರಕರಣಗಳ ಬಗ್ಗೆ ನಿಗಾ ವಹಿಸಲು ಆರೋಗ್ಯಾಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ.

ನಿಫಾ ಸೋಂಕಿನ ಲಕ್ಷಣಗಳೇನು?

  • ಜ್ವರ
  • ಮೈ ಕೈ ನೋವು
  • ಸುಸ್ತು
  • ತಲೆನೋವು
  • ಶೀತ
  • ಗಂಟಲು ಕೆರೆತ ಅಥವಾ ಗಂಟಲಿನಲ್ಲಿ ನೋವು
  • ತಲೆನೋವು
  • ಕುತ್ತಿಗೆಯ ಹಿಂದಿನ ಭಾಗದಲ್ಲಿ ಸೆಳೆತ

ಇದನ್ನೂ ಓದಿ: ನಿಫಾ ವೈರಸ್ ಸೋಂಕಿತರಲ್ಲಿ ಮರಣ ಪ್ರಮಾಣ ಕೋವಿಡ್​ಗಿಂತಲೂ ಹೆಚ್ಚು; ಆತಂಕಕಾರಿ ಮಾಹಿತಿ ಬಹಿರಂಗಪಡಿಸಿದ ಐಸಿಎಂಆರ್

ಆಗ್ನೇಯ ಏಷ್ಯಾದ ಹಲವು ದೇಶಗಳಲ್ಲಿ ನಿಫಾ ವೈರಸ್​​ ಆತಂಕ ಮನೆ ಮಾಡಿರುವ ಹಿನ್ನೆಲೆ ಸೋಂಕಿನ ಗುಣ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಬಾವಲಿಗಳು ಹೆಚ್ಚಿರುವ ಪ್ರದೇಶಗಳಲ್ಲಿ ಓಡಾಟ ಬೇಡ, ಮರಗಳಿಂದ ತಯಾರಿಸುವ ನೀರಾಗಳ ಸೇವನೆಯಿಂದ ಸದ್ಯಕ್ಕೆ ದೂರವಿರಿ. ಜೊತೆಗೆ ಬಾವಲಿಗಳು ತಿಂದ ಹಣ್ಣುಗಳನ್ನ ಸೇವಿಸದಂತೆ ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಏನು ಮಾಡಬೇಕು?

  • ಹಣ್ಣುಗಳನ್ನ ತಿನ್ನುವ ಮೊದಲು ಚೆನ್ನಾಗಿ ತೊಳೆಯಬೇಕು
  • ಕುದಿಸಿ ಆರಿಸಿದ ನೀರನ್ನ ಕುಡಿಯಬೇಕು
  • ಸಾಕು ಪ್ರಾಣಿಗಳ ಆಹಾರವು ಬಾವಲಿಗಳ ಸಂಪರ್ಕಕ್ಕೆ ಬಾರದಂತೆ ನೋಡಿಕೊಳ್ಳಬೇಕು
  • ಪ್ರಾಣಿಗಳನ್ನ ಸಂಪರ್ಕಿಸುವಾಗ ರಕ್ಷಣಾತ್ಮಕ ಉಡುಪುಗಳನ್ನ ಧರಿಸಬೇಕು
  • ಮರಗಳಿಂದ ತೆಗೆಯುವ ಹಣ್ಣಿನ ರಸದ ಸಂಪರ್ಕಕ್ಕೆ ಬಾವಲಿಗಳು ಬಾರದಂತೆ ನೋಡಿಕೊಳ್ಳಬೇಕು
  • ಸೊಂಕಿತ ವ್ಯಕ್ತಿಗಳನ್ನ ಸಂಪರ್ಕಿಸುವಾಗ ರಕ್ಷಣಾತ್ಮಕ ಕ್ರಮ ವಹಿಸಬೇಕು

ಏನು ಮಾಡಬಾರದು?

  • ಮರದಿಂದ ಬಿದ್ದ ಹಾಗೂ ಪ್ರಾಣಿಗಳು ಕಚ್ಚಿದ ಹಣ್ಣುಗಳನ್ನ ತಿನ್ನಬಾರದು
  • ತೆರೆದ ಪಾತ್ರೆಗಳಲ್ಲಿ ಇಟ್ಟ ಪಾನೀಯಗಳನ್ನ ಸೇವಿಸಬಾರದು
  • ನಿಫಾ ಬಂದಿರುವ ವ್ಯಕ್ತಿಯ ಸಂಪರ್ಕ ಮಾಡಬಾರದು
  • ಖಾಯಿಲೆ ಬಂದ ಅಥ್ವಾ ಸತ್ತ ಪ್ರಾಣಿಗಳ ಹತ್ತಿರ ಹೋಗಬಾರದು
  • ಬಾವಲಿಗಳ ಸಂಪರ್ಕದಿಂದ ದೂರ ಇರಬೇಕು

ಇನ್ನು ನಿಫಾ ವೈರಸ್​​ನ ರೋಗ ಲಕ್ಷಣಗಲು ತಕ್ಷಣಕ್ಕೆ ಗೋಚರಿಸುವುದಿಲ್ಲ. ಸಾಮಾನ್ಯವಾಗಿ 4 ರಿಂದ 14 ದಿನಗಳಲ್ಲಿ ಇವು ಗಮನಕ್ಕೆ ಬರಲಿದ್ದು, ಆರೋಗ್ಯ ಇಲಾಖೆಯ ಸಲಹೆ ಮತ್ತು ಸೂಚನೆಗಳನ್ನು ಪಾಲಿಸುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ. ಸೋಂಕಿತರು ಕಂಡುಬಂದಲ್ಲಿ ಅಂತವರ ಚಿಕಿತ್ಸೆಗೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

33 ವರ್ಷದ ಸಂಪಾದನೆ ಹೋಯ್ತು: 18 ಕೋಟಿ ರೂ. ಮೌಲ್ಯದ ಚಿನ್ನ ಕಳೆದುಕೊಂಡ ಬೆಂಗಳೂರಿನ ಬಿಲ್ಡರ್​​ನ ಕಣ್ಣೀರಿನ ಕಥೆ – Kannada News | Builder Shivakumar Tears afer Nepali couple Loots Valuables Worth Rs 18 Crore From Bengaluru House

ಚಿನ್ನ ಕಳೆದುಕೊಂಡ ಉದ್ಯಮಿ ಶಿವಕುಮಾರ್

ಬೆಂಗಳೂರು, (ಫೆಬ್ರವರಿ 02): ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಯಲ್ಲಿ ಉದ್ಯಮಿ ಶಿವಕುಮಾರ್ ಎನ್ನುವ ಮನೆಯಲ್ಲಿ ಬರೋಬ್ಬರಿ 18 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರವಣ ಕಳ್ಳತನವಾಗಿದ್ದು, ಮನೆಗೆಲಸ ಮಾಡುತ್ತಿದ್ದ ನೇಪಾಳಿ ದಂಪತಿಯೇ ದೋಚಿಕೊಂಡು ಹೋಗಿದೆ ಎಂದು ಪೊಲೀಸರ ತನಿಖೆಯನ್ನು ತಿಳಿದುಬಂದಿದ್ದು, ಈ ಸಂಬಂಧ ಪೊಲೀಸರು, ನೇಪಾಳಿ ದಂಪತಿ ಬಂಧನಕ್ಕೆ ಬಲೆ ಬೀಸಿದೆ. ಇನ್ನು ತಮ್ಮ 33 ವರ್ಷದ ಸಂಪಾದನೆಯನ್ನು ದೋಚಿದ್ದಾರೆ ಎಂದು ಉದ್ಯಮಿ ಕಣ್ಣೀರಿಟ್ಟಿದ್ದಾರೆ. ಕಳವಾದ ಚಿನ್ನ ನಾನು ಹೇಗಾದರೂ ಮತ್ತೆ ಸಂಪಾದನೆ ಮಾಡುತ್ತೇನೆ. ಆದ್ರೆ, ನನ್ನ ತಾಯಿ‌ಯ ಕಿವಿಯೋಲೆ ಮತ್ತು ಸರ ಕಳವಾಗಿದ್ದಕ್ಕೆ ದುಃಖವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಕಳವಾದ ಚಿನ್ನ ನೆನೆದು ಬಿಲ್ಡರ್ ಕಣ್ಣೀರು

33 ವರ್ಷದ ನನ್ನ ಸಂಪಾದನೆಯನ್ನ ಕಳ್ಳತನ ಮಾಡಿದ್ದಾರೆ. 1988 ಸೆಪ್ಟೆಂಬರ್ 12 ರಂದು ನನ್ನ ಜೀವನದಲ್ಲಿ ದೊಡ್ಡ ದುರಂತವಾಗಿತ್ತು. ಹೆಮ್ಮಲೂರು ಬಳಿ ನಾವು ವಾಸವಿದ್ದ ಮನೆ ಮಳೆಯಿಂದ ಕುಸಿತವಾಗಿತ್ತು. ಮನೆ ಕುಸಿದಾದ ನನ್ನ ಕುಟುಂಬದ ಐದು ಜನ ಸಾವನ್ನಪ್ಪಿದ್ರು. ಮನೆಯಿಲ್ಲದೆ ಕೋಳಿ ಫಾರ್ಮ್ ನಲ್ಲಿ ಮಲಗಿಕೊಂಡಿದ್ವಿ. 1989 ಮೇ 31ಕ್ಕೆ ಮಾಲಿನ ಅವ್ರನ್ನ ನಾನು ಮದುವೆ ಆದೆ. ಆಗ ನನ್ನ ಬಳಿ ಊಟಕ್ಕೂ ದುಡ್ಡಿಲ್ಲದ ಪರಿಸ್ಥಿತಿ ಇತ್ತು. ಆದರೂ ಮಾಲಿನಿ ಅವರ ತಂದೆ ನನಗೆ ಮಗಳನ್ನ ಮದುವೆ ಮಾಡಿ ಕೊಟ್ರು. ಮದುವೆಯಾದ ಮರುದಿನವೇ ಸಾಲಕೊಟ್ಟವರು ಮನೆ ಬಳಿಗೆ ಬಂದಿದ್ರು. ಆಗ ನನ್ನ ಪತ್ನಿ ಬಳಿಯಿದ್ದ ಚಿನ್ನ ಅಡವಿಟ್ಟು ಸಾಲ ತೀರಿಸಿದ್ದೆ.ಆಗ ನನ್ನ ತಾಯಿ 15 ದಿನವಾದ್ರೂ ನಾವು ಸ್ವಂತ ಮನೆಯಲ್ಲಿ ಇರ್ಬೆಕು ಮಗ ಅಂದಿದ್ರು. ನಂತರ ನಾನು ಬಡವರಿಗೆ ಕಂತಿನ ರೂಪದಲ್ಲಿ ಮನೆ ಜಾಗ ನೀಡುವ‌ ಕೆಲಸ ಮಾಡಿದ್ದೆ‌. ಈಗ ಸಾವಿರಾರು ಜನ ಬಡವರು ಸ್ವಂತ ಮನೆಯಲ್ಲಿ ಜೀವನ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ 18 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ನೇಪಾಳಿ ದಂಪತಿಗೆ ಬಲೆ ಬೀಸಿದ ಪೊಲೀಸರು!

ಕಳವಾದ ಚಿನ್ನ ನಾನು ಹೇಗಾದ್ರೂ ಮತ್ತೆ ಸಂಪಾದನೆ ಮಾಡುತ್ತೇನೆ. ಆದ್ರೆ ನನ್ನ ತಾಯಿ‌ಯ ಕಿವಿಯೋಲೆ ಮತ್ತು ಸರ ಕಳವಾಗಿದ್ದಕ್ಕೆ ದುಃಖವಾಗಿದೆ.ನನ್ನ ಮಕ್ಕಳ ಮತ್ತು ಪತ್ನಿಯ ಎಲ್ಲಾ ಚಿನ್ನವನ್ನ ಕಳ್ಳತನ ಮಾಡಿದ್ದಾರೆ. ನಮ್ಮ ಮನೆಯಲ್ಲಿ ಹಿಂದೆ ನೇಪಾಳಿ ಕುಟುಂಬ ಕೆಲಸ ಮಾಡುತ್ತಿತ್ತು. ಹೊಸ ಮನೆ ಗೃಹ ಪ್ರವೇಶ ವೇಳೆ ಎಲ್ಲವನ್ನ ಅವರು ಗಮನಿಸಿದ್ದಾರೆ. ಮನೆಯ ಲಾಕರ್ ಮತ್ತು ಬಳಿಯಿರುವ ಚಿನ್ನದ ಬಗ್ಗೆ ನೋಡಿಕೊಂಡಿದ್ದರು. ನಂತರ ನಾವು ಕೆಲಸ ಬಿಡುತ್ತೇವೆ ಎಂದು ನನ್ನ ಬಳಿ ಹೇಳಿದ್ದರು.ಆಗ ಬೇರೆ ಯಾರನ್ನಾದ್ರೂ ಸೇರಿಸಿ ಹೋಗು ಅಂತ ಹೇಳಿದ್ದೆ. ಆಗ ದಿನೇಶ್ ಮತ್ತು ಕಮಲಾಳನ್ನ ಕರೆತಂದು ಬಿಟ್ಟಿದ್ದ. ಇವರೆಲ್ಲ ಮೊದಲೇ ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ನನಗೆ ಗೊತ್ತಾಗಲಿಲ್ಲ ಎಂದು ಘಟನೆ ನೆನೆದು ಬೇಸರ ಹೊರಹಾಕಿದ್ದಾರೆ.

ದಂಪತಿ ದರೋಡೆ ಪ್ಲ್ಯಾನ್ ಬಿಚ್ಚಿಟ್ಟ ಉದ್ಯಮಿ

ನಾನು ದಿನೇಶ್ ಹಾಗು ಕಮಲಾಳ ಆಧಾರ್ ಕಾರ್ಡ್ ಕೊಡಲು ಹೇಳಿದ್ದೆ‌.ಹಳೆ ಮಾಲೀಕರಿಗೆ ನಾವು ಹಣ ಕೊಡಬೇಕಿರುವುದರಿಂದ ಅವರ ಬಳಿ ಇದೆ. ಒಂದು ತಿಂಗಳು ಬಿಟ್ಟು ಕೊಡುತ್ತೇವೆ ಎಂದು ಹೇಳಿದ್ದರು. 20 ದಿನ ನಮ್ಮ ಮನೆಯಲ್ಲಿ ಹೇಳಿದ ಕೆಲಸ ಮಾಡಿಕೊಂಡಿದ್ದರು. ನಾನು ಸ್ನೇಹಿತರ ಜೊತೆ ಫಾರಿನ್ ಟ್ರಿಪ್ ಹೋದಾಗ ಇವರು ಪ್ಲಾನ್ ಮಾಡಿದ್ದರು. ಬೇರೆಡೆಯಿಂದ ನಾಲ್ಕು ಜನರನ್ನ ಮನೆಗೆ ಕರೆಸಿಕೊಂಡು ನಮ್ಮ ಮನೆಕೆಲಸದವಳನ್ನು ಕಮಲಾ ಬೇಕಂತಲೆ ಅಂಗಡಿಗೆ ಕರೆದೊಯ್ದಿದ್ಲು. ಆಗ 35 ನಿಮಿಷದಲ್ಲಿ ಲಾಕ್ ಒಡೆದು ಚಿನ್ನ ಕಳ್ಳತನ ಮಾಡಿದ್ದಾರೆ. ಮನೆಕೆಲಸದವಳನ್ನು ಅಂಗಡಿಯಲ್ಲೇ ಬಿಟ್ಟು ಕಮಲಾ ಹೋಗಿದ್ದಳು. ಬಿಲ್ ಕೊಡಲು ಹಣವಿಲ್ಲದೆ ಆಕೆ ಅಲ್ಲಿಂದ ನಡೆದು ಮನೆಗೆ ಬಂದಾಗ ಕಳ್ಳತನ ಗೊತ್ತಾಗಿತ್ತು. ನಂತರ ನನಗೆ ಕರೆ ಮಾಡಿ ಕಳ್ಳತನ ಆಗಿರೊ ಬಗ್ಗೆ ಹೇಳಿದ್ದಳು ಎಂದು ಘಟನೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಕಳವಾದ ಎಲ್ಲಾ ಚಿನ್ನಕ್ಕೂ ಬಿಲ್ ಇದೆ


ಕಳ್ಳತನ ಸುದ್ದಿ ತಿಳಿಯುತ್ತಿದ್ದಂತೆಯೇ ತಕ್ಷಣ ನಾನು ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ರಿಗೆ ಕರೆ ಮಾಡಿ ತಿಳಿಸಿದ್ದೆ. ಅವರು ಕೂಡಲೇ ವೈಟ್ ಫಿಲ್ಡ್ ಡಿಸಿಪಿ ಎಸಿಪಿಯವರಿಗೆ ತಿಳಿಸಿದ್ದರು. ಪೊಲೀಸರು ಮೂರು ಗಂಟೆಗೆ ಮನೆ ಬಳಿ ಬಂದು ತನಿಖೆ ನಡೆಸಿದ್ದರು. ನನಗೆ ಪೊಲೀಸರ ಮೇಲೆ ಸಂಪೂರ್ಣ ನಂಬಿಕೆ ಇದೆ. ಆದಷ್ಟು ಬೇಗ ಕಳ್ಳರನ್ನ ಪತ್ತೆ ಮಾಡುತ್ತಾರೆ. ಕಳವಾದ ಎಲ್ಲಾ ಚಿನ್ನಕ್ಕೂ ನಮ್ಮ ಬಳಿ ಬಿಲ್ ಇದೆ. ಒಂದಷ್ಟು ಅಮ್ಮನ ಕಾಲದ ಚಿನ್ನಾಭರಣ ಇದೆ‌. ಹಾಗೇ ಎಲ್ಲದಕ್ಕೂ ನಾನು ಟ್ಯಾಕ್ಸ್ ಕಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಿಗರೇಟ್ ಮೇಲೆ ಹೊಸ ಅಬಕಾರಿ ಸುಂಕ; ಧೂಮಪಾನಿಗಳಿಗೆ ಮತ್ತಷ್ಟು ದುಬಾರಿ ಜೀವನ – Kannada News | Budget 2026, additional excise duty on Cigarette, prices surge upto Rs 55 per pack

ಧೂಮಪಾನದ ಸಾಂದರ್ಭಿಕ ಚಿತ್ರImage Credit source: TV9 Network

ನವದೆಹಲಿ, ಫೆಬ್ರುವರಿ 2: ಹೆಚ್ಚವರಿ ಅಬಕಾರಿ ಸುಂಕ (Excise duty) ಜಾರಿಗೆ ತಂದ ಬೆನ್ನಲ್ಲೇ ಸಿಗರೇಟ್ ಬೆಲೆ (Cigarettes prices) ಪ್ಯಾಕ್​ಗೆ 22 ರೂನಿಂದ 55 ರೂವರೆಗೂ ಏರಿಕೆ ಆಗಿದೆ. ಸರ್ಕಾರ ಸುಂಕ ಹೇರಿಕೆ ಹಾಕಿದ ಬೆನ್ನಲ್ಲೇ ವಿತರಕರು (distributors) ತಮ್ಮಲ್ಲಿರುವ ಹಳೆಯ ಸಿಗರೇಟು ಪ್ಯಾಕ್​ಗಳಿಗೆ ನಿನ್ನೆ ಭಾನುವಾರದಿಂದಲೇ ಹೊಸ ದರ ಇಟ್ಟು ರೀಟೇಲ್ ಮಾರಾಟಗಾರರಿಗೆ ಮಾರತೊಡಗಿದ್ದಾರೆ. ಸಿಗರೇಟು ತಯಾರಕರು ಇಂದಿನಿಂದ ಹೊಸ ಎಂಆರ್​ಪಿ ದರದ ಸಿಗರೇಟು ಪ್ಯಾಕುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು.

84 ಎಂಎಂ ಉದ್ದದ ಐಟಿಸಿ ಕಿಂಗ್, ಗೋಲ್ಡ್ ಫ್ಲೇಕ್ ಲೈಟ್ಸ್, ವಿಲ್ಸ್ ಕ್ಲಾಸಿಕ್, ಮೈಲ್ಡ್ಸ್ ಇತ್ಯಾದಿ ಸಿಗರೇಟ್​ಗಳ ಪ್ಯಾಕ್ ಬೆಲೆ 170 ರೂನಿಂದ 220-225 ರೂಗೆ ಏರುವ ನಿರೀಕ್ಷೆ ಇದೆ. 97 ಮಿಲಿಮೀಟರ್ ಉದ್ದದ ಕ್ಲಾಸಿಕ್ ಕನೆಕ್ಟ್​ನಂತಹ ಸ್ಲಿಮ್ ಸ್ಇಗರೇಟ್​ಗಳ ಬೆಲೆ 300 ರೂನಿಂದ 350 ರೂಗೆ ಏರುವ ನಿರೀಕ್ಷೆ ಇದೆ. 76ಎಂಎಂ ಉದ್ದದ ವಿಲ್ಸ್ ನೇವಿ ಕಟ್​ನ ಬೆಲೆ ಒಂದು ಪ್ಯಾಕ್​ಗೆ 95 ರೂನಿಂದ 120 ರೂಗೆ ಏರುವ ನಿರೀಕ್ಷೆ ಇದೆ.

ಇದನ್ನು ಓದಿ: ಟ್ಯಾಕ್ಸ್ ಪಾಲು ಕರ್ನಾಟಕಕ್ಕೆ ಅತಿಹೆಚ್ಚು ಏರಿಕೆ ಆಗಿದ್ದು ಯಾಕೆ? ಇಲ್ಲಿದೆ ಕಾರಣ, ಮತ್ತು ವಿವಿಧ ರಾಜ್ಯಗಳ ತೆರಿಗೆ ಪಟ್ಟಿ

ಸಣ್ಣ ಅಂಗಡಿಗಳಿಗೆ ತೊಂದರೆ…

ಭಾರತದಲ್ಲಿ ಸಿಗರೇಟು ಮತ್ತು ತಂಬಾಕು ಉತ್ಪನ್ನಗಳಿಗೆ ಸುಮಾರು 8,000-9,000 ಸ್ಟಾಕಿಸ್ಟ್ಸ್ ಇದ್ದಾರೆ. 4.5 ಲಕ್ಷ ವಿತರಕರು, 1.3 ಕೋಟಿ ರೀಟೇಲ್ ಮಾರಾಟಗಾರರಿದ್ದಾರೆ. ಹೆಚ್ಚಿನ ಸಣ್ಣ ಅಂಗಡಿಗಳಿಗೆ ಸಿಗರೇಟ್ ಮಾರಾಟವೇ ಪ್ರಮುಖ ಆದಾಯ ಮೂಲವಾಗಿದೆ. ಸರ್ಕಾರವು ಸಿಗರೇಟು ಹಾಗು ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಿದರೆ ನಕಲಿ ಮಾಲುಗಳು ಅಥವಾ ಕಳ್ಳ ಮಾಲುಗಳು ಮಾರುಕಟ್ಟೆ ಪ್ರವೇಶಿಸುವ ಅಪಾಯ ಇರುತ್ತದೆ. ಇದರಿಂದ ರೀಟೇಲ್ ವ್ಯಾಪಾರಿಗಳ ಬದುಕಿಗೆ ತೊಂದರೆ ಆಗಬಹುದು ಎಂದು ಅಖಿಲ ಭಾರತ ಗ್ರಾಹಕ ಉತ್ಪನ್ನಗಳ ವಿತರಕರ ಒಕ್ಕೂಟವಾದ ಎಐಸಿಪಿಡಿಎಫ್ ಆತಂಕ ವ್ಯಕ್ತಪಡಿಸಿದೆ.

ಸಿಗರೇಟ್ ಮೇಲೆ ಎಷ್ಟಿದೆ ಟ್ಯಾಕ್ಸ್?

ಸಿಗರೇಟು ಇತ್ಯಾದಿ ತಂಬಾಕು ಉತ್ಪನ್ನಗಳನ್ನು ಸಿನ್ ಗೂಡ್ಸ್ ಅಥವಾ ಪಾಪದ ಸರಕುಗಳೆಂದು ಪರಿಗಣಿಸಲಾಗುತ್ತದೆ. ಹಳೆಯ ಜಿಎಸ್​ಟಿ ವ್ಯವಸ್ಥೆಯಲ್ಲಿ ಪಾಪದ ಸರಕುಗಳಿಗೆ ಶೇ. 28 ಜಿಎಸ್​ಟಿ ಹಾಗೂ ಹೆಚ್ಚುವರಿ ಸೆಸ್, ಅಬಕಾರಿ ಸುಂಕಗಳನ್ನು ವಿಧಿಸಲಾಗುತ್ತಿತ್ತು. ಹೊಸ ಜಿಎಸ್​ಟಿ ಸಿಸ್ಟಂನಲ್ಲಿ ತಂಬಾಕು ಉತ್ಪನ್ನಗಳಿಗೆ ಶೇ. 40ರಷ್ಟು ಜಿಎಸ್​ಟಿ ಹಾಗೂ ಹೆಚ್ಚುವರಿ ಅಬಕಾರಿ ಸುಂಕ ಹಾಕಾಗುತ್ತದೆ.

ಇದನ್ನೂ ಓದಿ: ಜನವರಿಯಲ್ಲಿ 1.93 ಲಕ್ಷ ಕೋಟಿ ರೂ ಜಿಎಸ್​ಟಿ ಸಂಗ್ರಹ; ಈ ವರ್ಷ 18 ಲಕ್ಷ ಕೋಟಿ ರೂ ಟ್ಯಾಕ್ಸ್ ಕಲೆಕ್ಷನ್

ಫಿಲ್ಟರ್​ಲೆಸ್ ಸಿಗರೇಟುಗಳಿಗೆ ಒಂದು ಸಿಗರೇಟ್​ಗೆ 2.05ರಷ್ಟು ಹೆಚ್ಚುವರಿ ಸುಂಕ ಇರುತ್ತದೆ. ಚಿಕ್ಕ ಫಿಲ್ಟರ್ ಸಿಗರೇಟ್​ಗೆ ಒಂದಕ್ಕೆ 2.10 ರೂ ಅಬಕಾರಿ ಸುಂಕ ಹಾಕಲಾಗುತ್ತಿದೆ. ಇನ್ನೂ ದೊಡ್ಡ ಸಿಗರೇಟುಗಳಿಗೆ 3.6 ರೂನಿಂದ 8.50 ರೂವರೆಗೆ ಅಬಕಾರಿ ಸುಂಕ ಇರುತ್ತದೆ. ಇದು ಶೇ 40 ಜಿಎಸ್​ಟಿಗೆ ಹೆಚ್ಚುವರಿಯಾಗಿ ವಿಧಿಸುವ ಸುಂಕ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಿಮ್ಮ ದೇಹದಲ್ಲಿ ಪ್ರೋಟೀನ್ ಕಡಿಮೆ ಇದೆ ಎಂಬುದನ್ನು ದೇಹ ನೀಡುವ ಈ 6 ಲಕ್ಷಣಗಳ ಮೂಲಕ ತಿಳಿಯಬಹುದು! – Kannada News | Protein Deficiency: How Diet Can Help

ಸಾಮಾನ್ಯವಾಗಿ ಪ್ರೋಟೀನ್ (Protein) ದೇಹದ ಬಿಲ್ಡಿಂಗ್ ಬ್ಲಾಕ್ ಆಗಿ ಕೆಲಸ ಮಾಡುತ್ತದೆ ಎಂಬುದು ಕೆಲವರಿಗೆ ತಿಳಿದಿರುವುದಿಲ್ಲ. ಹೌದು, ಮನೆ ಕಟ್ಟಲು ಇಟ್ಟಿಗೆಗಳು ಬೇಕಾದಂತೆ, ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ಪ್ರೋಟೀನ್ ಅಗತ್ಯವಿದೆ. ಆದರೆ ನಮ್ಮಲ್ಲಿ ಅನೇಕರು ಪ್ರೋಟೀನ್‌ಗಿಂತ ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬಿನಿಂದ ಸಮೃದ್ಧವಾಗಿರುವ ಆಹಾರಗಳಿಗೆ ಆದ್ಯತೆ ನೀಡುತ್ತಾರೆ. ನಾವು ಸೇವಿಸುವ ಆಹಾರದಲ್ಲಿ ಪ್ರೋಟೀನ್ ಪ್ರಮಾಣ ಕಡಿಮೆಯಾದರೆ, ಸ್ನಾಯುಗಳು ಮಾತ್ರವಲ್ಲದೆ ರೋಗನಿರೋಧಕ ಶಕ್ತಿ, ಮಾನಸಿಕ ಸ್ಥಿತಿ ಮತ್ತು ಅಂತಿಮವಾಗಿ ನಿಮ್ಮ ಸೌಂದರ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ದೇಹದಲ್ಲಿ ಪ್ರೋಟೀನ್ ಕಡಿಮೆ ಆದಾಗ ಕಂಡುಬರುವ ಲಕ್ಷಣಗಳನ್ನು ಸರಿಯಾಗಿ ಗುರುತಿಸಿ ಆಹಾರಕ್ರಮಗಳನ್ನು ಬದಲಾಯಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

ಪ್ರೋಟೀನ್ ಕಡಿಮೆ ಆದಾಗ ಕಂಡುಬರುವ ಲಕ್ಷಣಗಳು:

ದೇಹವು ಆಹಾರದಿಂದ ಅಗತ್ಯವಿರುವ ಪ್ರೋಟೀನ್ ಪಡೆದುಕೊಳ್ಳಲು ಸಾಧ್ಯವಾಗದಿದ್ದಾಗ, ಅದು ಸ್ನಾಯುಗಳಲ್ಲಿ ಸಂಗ್ರಹವಾಗಿರುವ ಪ್ರೋಟೀನ್ ಅನ್ನು ಬಳಸಲು ಪ್ರಾರಂಭಿಸುತ್ತದೆ. ಆಗ ಸ್ನಾಯುಗಳು ದುರ್ಬಲಗೊಳ್ಳುತ್ತದೆ. ಅದರಲ್ಲಿಯೂ ವಯಸ್ಸಾದವರು ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್ ಸೇವಿಸದಿದ್ದರೆ, ದೇಹದಲ್ಲಿನ ಶಕ್ತಿ ಕಡಿಮೆಯಾಗುತ್ತದೆ ಮತ್ತು ಬೇಗನೆ ದಣಿವಾಗುತ್ತದೆ. ಅಷ್ಟೇಅಲ್ಲ, ದೇಹದಲ್ಲಿ ರೋಗಗಳ ವಿರುದ್ಧ ಹೋರಾಡುವುದಕ್ಕೆ ಪ್ರತಿಕಾಯಗಳು ಸಹ ಪ್ರೋಟೀನ್‌ನಿಂದ ಮಾಡಲ್ಪಟ್ಟಿದ್ದು ಇದರ ಕೊರತೆಯಾದಾಗ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಪರಿಣಾಮವಾಗಿ, ಆಗಾಗ ಶೀತ, ಕೆಮ್ಮು ಮತ್ತು ಸೋಂಕುಗಳು ಕಂಡುಬರುತ್ತದೆ. ಸಣ್ಣ ಗಾಯಗಳಾದರೆ ಗುಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ.

ಮೂಳೆಗಳ ವಿಷಯಕ್ಕೆ ಬಂದರೆ, ಎಲ್ಲರೂ ಕ್ಯಾಲ್ಸಿಯಂ ಬಗ್ಗೆ ಮಾತ್ರ ಯೋಚಿಸುತ್ತಾರೆ. ಆದರೆ ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳುವಲ್ಲಿ ಪ್ರೋಟೀನ್ ತುಂಬಾ ಮುಖ್ಯವಾಗುತ್ತದೆ. ಜೊತೆಗೆ ಚರ್ಮ, ಕೂದಲು ಮತ್ತು ಉಗುರುಗಳು ಕೆರಾಟಿನ್ ಮತ್ತು ಕಾಲಜನ್ ನಂತಹ ಪ್ರೋಟೀನ್‌ಗಳಿಂದ ಮಾಡಲ್ಪಟ್ಟಿದ್ದು, ಆಹಾರದಲ್ಲಿ ಪ್ರೋಟೀನ್ ಕೊರತೆಯಾದರೆ ಕೂದಲು ದುರ್ಬಲವಾಗುವುದು, ಬಣ್ಣ ಬದಲಾವಣೆ, ಒಣ ಚರ್ಮ ಮತ್ತು ಬಿರುಕುಗಳು ಕಾಣಿಸಿಕೊಳ್ಳುವಂತಹ ಲಕ್ಷಣಗಳು ಕಂಡುಬರುತ್ತವೆ. ಉಗುರುಗಳು ಸಹ ಸುಲಭವಾಗಿ ಮುರಿಯುತ್ತವೆ. ಪ್ರೋಟೀನ್ ನಮಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ತಿಂದ ಸ್ವಲ್ಪ ಸಮಯದ ನಂತರ ನಿಮಗೆ ಮತ್ತೆ ಹಸಿವಾದರೆ ಅಥವಾ ಸಿಹಿತಿಂಡಿಗಳ ಹಂಬಲವಾದರೆ, ನಿಮ್ಮ ದೇಹಕ್ಕೆ ಸಾಕಷ್ಟು ಪ್ರೋಟೀನ್ ಸಿಗುತ್ತಿಲ್ಲ ಎಂದರ್ಥ. ನೀವು ಬಹಳಷ್ಟು ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಿದಾಗ ಈ ಸಮಸ್ಯೆ ಇನ್ನಷ್ಟು ಸ್ಪಷ್ಟವಾಗಿ ಗೋಚರಿಸುತ್ತದೆ. ಇದೆಲ್ಲದರ ಜೊತೆಗೆ ಆಲಸ್ಯ ಹೆಚ್ಚಾಗುವುದಕ್ಕೂ ಕೂಡ ಇದೆ ಕಾರಣ.

ಇದನ್ನೂ ಓದಿ: ಪ್ರೋಟೀನ್ ಹೆಚ್ಚಾದರೆ ಮೂತ್ರಪಿಂಡಕ್ಕೆ ಹಾನಿ, ಇದರ ಆರಂಭಿಕ ಲಕ್ಷಣಗಳು ಯಾವುವು?

ಯಾವ ಆಹಾರದಲ್ಲಿ ಪ್ರೋಟೀನ್ ಅಂಶ ಅಧಿಕವಾಗಿರುತ್ತದೆ?

ಚಿಯಾ ಬೀಜ, ಕುಂಬಳಕಾಯಿ ಬೀಜಗಳು, ಹಾಲು ಮತ್ತು ಮೊಸರು ಸೇವನೆ ಮಾಡುವುದರಿಂದ ಪ್ರೋಟೀನ್ ಕೊರತೆಯನ್ನು ನೀಗಿಸಿಕೊಳ್ಳಬಹುದು. ಇವು ನೈಸರ್ಗಿಕವಾಗಿ ನಮಗೆ ಶಕ್ತಿಯನ್ನು ಒದಗಿಸುತ್ತವೆ. ನಮ್ಮ ಆರೋಗ್ಯ ನಾವು ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಪ್ರೋಟೀನ್ ಕೊರತೆಯನ್ನು ಕೇವಲ ಸಮಸ್ಯೆಯಾಗಿ ಮಾತ್ರವಲ್ಲದೆ ದೇಹದ ಮೂಲಭೂತ ಅವಶ್ಯಕತೆಯಾಗಿ ಗುರುತಿಸಬೇಕು. ಇಂದಿನಿಂದಲೇ ನಿಮ್ಮ ಊಟದಲ್ಲಿ ಪ್ರೋಟೀನ್ ಸೇರಿಸಲು ಪ್ರಾರಂಭಿಸಿ. ಆರೋಗ್ಯ ಹಾಳಾಗುವುದನ್ನು ತಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಧ್ಯಾಹ್ನ ಬಿಸಿಯೂಟಕ್ಕೆ ಕಾದಿದ್ದ ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ – Kannada News | Hubballi: government school Students Find Worms in Sambar, Parents Outraged

ಹುಬ್ಬಳ್ಳಿ, ಫೆಬ್ರವರಿ 02: ಹುಬ್ಬಳ್ಳಿ ತಾಲೂಕಿನ ತಾರಿಹಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟದ ಸಾಂಬಾರಿನಲ್ಲಿ ನುಸಿ ಹುಳ ಪತ್ತೆ ಆಗಿರುವಂತಹ ಘಟನೆ ನಡೆದಿದೆ. ತಾರಿಹಾಳ ಸೇರಿ ವಿವಿಧ ಶಾಲೆಗೆ ಮಧ್ಯಾಹ್ನ ಬಿಸಿ ಊಟ ಅನ್ನ ಮತ್ತು ಸಾಂಬಾರು ಪೂರೈಕೆ ಮಾಡಲಾಗಿತ್ತು. ಬಹುತೇಕ ಶಾಲೆಗಳಿಗೆ ಪೂರೈಕೆ ಮಾಡಿದ್ದ ಸಾಂಬಾರನಲ್ಲಿ ನುಸಿ ಹುಳ ಪತ್ತೆ ಆಗಿದೆ. ಸಾಂಬಾರಿನಲ್ಲಿ ನುಸಿ ನೋಡಿದ ವಿದ್ಯಾರ್ಥಿಗಳು ಊಟ ಬಿಟ್ಟು ಮನೆಗೆ ಹೋಗಿ ಊಟ ಮಾಡಿ ಬಂದಿದ್ದಾರೆ. ಊಟ ಪೂರೈಸುವ ಸಂಸ್ಥೆ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಬಾವಿಯೊಳಗೆ ಕಸದ ಮಧ್ಯೆ ವ್ಯಕ್ತಿಯ ಶವದ ಕತ್ತರಿಸಿದ ಭಾಗಗಳು ಪತ್ತೆ – Kannada News | Chopped body parts of a man found in well in Telangana viral news

ತೆಲಂಗಾಣ, ಫೆಬ್ರವರಿ 2: ತೆಲಂಗಾಣದಲ್ಲಿ ಪೊಲೀಸರು ಬಾವಿಯೊಳಗೆ ವ್ಯಕ್ತಿಯೊಬ್ಬರ ಕತ್ತರಿಸಿದ ದೇಹದ ಭಾಗಗಳನ್ನು ಪತ್ತೆ ಮಾಡಿದ್ದಾರೆ. ಇಲ್ಲಿನ ಕಾಮರೆಡ್ಡಿ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಬಾವಿಯಲ್ಲಿ ಸುಮಾರು 35 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಕತ್ತರಿಸಿದ ದೇಹದ (Deadbody) ಭಾಗಗಳನ್ನು ಕಾಮರೆಡ್ಡಿ ಪೊಲೀಸರು ಪತ್ತೆ ಮಾಡಿದ್ದಾರೆ.

ನೀರಿಲ್ಲದ ಬಾವಿಯೊಳಗೆ ಸುರಿಯಲಾಗಿದ್ದ ಕಸದಿಂದ ತ್ಯಾಜ್ಯ ಕಾಗದಗಳು ಮತ್ತು ಇತರ ವಸ್ತುಗಳನ್ನು ಸಂಗ್ರಹಿಸಲು ಬಂದ ವ್ಯಕ್ತಿಯೊಬ್ಬರು ಅದರ ನಡುವೆ ಪ್ಲಾಸ್ಟಿಕ್ ಚೀಲವನ್ನು ಗಮನಿಸಿದ್ದರು. ಆ ಚೀಲವನ್ನು ತೆರೆದು ನೋಡಿದಾ ಈ ಘಟನೆ ಬೆಳಕಿಗೆ ಬಂದಿದೆ. ಅದನ್ನು ತೆರೆದ ನಂತರ, ಅದರೊಳಗೆ ದೇಹದ ಕೆಳಗಿನ ಭಾಗಗಳು ಪತ್ತೆಯಾಗಿವೆ. ತಲೆ ಮತ್ತು ಕೈಗಳು ಕಾಣೆಯಾಗಿವೆ. ನಂತರ ಅವರು ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಇದನ್ನೂ ಓದಿ: ಹೆಂಡತಿಗೆ ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಜ್ಯುವೆಲರಿ ಶಾಪ್​ನಿಂದ 7 ಕೋಟಿ ರೂ. ಚಿನ್ನ ಕದ್ದ ಗಂಡ!

ಮೃತ ವ್ಯಕ್ತಿಗೆ ತಿಳಿದಿರುವ ವ್ಯಕ್ತಿಗಳು ಆ ವ್ಯಕ್ತಿಯನ್ನು ಕೊಂದು, ದೇಹವನ್ನು ಬೇರೆಡೆ ಕೊಡಲಿಯಿಂದ ಕತ್ತರಿಸಿ ನಂತರ ಗುರುತನ್ನು ಮರೆಮಾಚಲು ದೇಹದ ಭಾಗಗಳನ್ನು ಬಾವಿಗೆ ಎಸೆದಿದ್ದಾರೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

“ಈ ಸ್ಥಳದಲ್ಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಳವಡಿಸಲಾದ ಕಣ್ಗಾವಲು ಕ್ಯಾಮೆರಾಗಳಿಂದ ಸಂಗ್ರಹಿಸಲಾದ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ. ಇದರಿಂದಾಗಿ ಪ್ಲಾಸ್ಟಿಕ್ ಚೀಲವನ್ನು ಬಾವಿಗೆ ಎಸೆದ ವ್ಯಕ್ತಿಗಳನ್ನು ಪತ್ತೆಹಚ್ಚಲು ನಾವು ಪ್ರಯತ್ನಿಸುತ್ತಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರೈಲು ವಿಳಂಬದಿಂದ ಪರೀಕ್ಷೆ ಮಿಸ್​​​: ವಿದ್ಯಾರ್ಥಿನಿಗೆ ರೈಲ್ವೆಯಿಂದ 9 ಲಕ್ಷ ರೂ. ಪರಿಹಾರ – Kannada News | Indian Railways Fined 9.1 Lakh for Train Delay; Student Missed Exam, 8 Year Legal Battle Ends

ಉತ್ತರ ಪ್ರದೇಶ, ಫೆ.2: ರೈಲು ವಿಳಂಬದಿಂದಾಗಿ ಪರೀಕ್ಷೆ ತಪ್ಪಿಸಿಕೊಂಡ ಉತ್ತರ ಪ್ರದೇಶದ ವಿದ್ಯಾರ್ಥಿನಿಗೆ ಭಾರತೀಯ ರೈಲ್ವೆಯು (Indian Railways) 9 ಲಕ್ಷ ರೂ. ಪರಿಹಾರ ನೀಡಿರುವ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. 2018ರಿಂದ ಈ ವಿಚಾರವಾಗಿ ಗ್ರಾಹಕ ಆಯೋಗ ತನಿಖೆ ನಡೆಸಿತ್ತು. ಇದೀಗ ಈ ವಿಚಾರಗಾಗಿ ಗ್ರಾಹಕ ಆಯೋಗ​​ ಮಹತ್ವದ ಆದೇಶ ನೀಡಿದೆ. ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಸಮೃದ್ಧಿ ಎಂಬ ವಿದ್ಯಾರ್ಥಿನಿ 2018ರಲ್ಲಿ ಲಕ್ನೋದಲ್ಲಿ ನಡೆಯಬೇಕಿದ್ದ ಬಿ.ಎಸ್ಸಿ ಬಯೋಟೆಕ್ನಾಲಜಿ ಪ್ರವೇಶ ಪರೀಕ್ಷೆಗೆ ಹಾಜರಾಗಬೇಕಿತ್ತು. ಇದಕ್ಕಾಗಿ ಅವರು ಬಸ್ತಿಯಿಂದ ಲಕ್ನೋಗೆ ಇಂಟರ್‌ಸಿಟಿ ಸೂಪರ್‌ಫಾಸ್ಟ್ ರೈಲಿನಲ್ಲಿ ಟಿಕೆಟ್ ಕಾಯ್ದಿರಿಸಿದ್ದರು.

ಬೆಳಿಗ್ಗೆ 11 ಗಂಟೆಗೆ ಲಕ್ನೋ ತಲುಪಬೇಕಿದ್ದ ರೈಲು ಸುಮಾರು 2.5 ಗಂಟೆ ತಡವಾಗಿ ತಲುಪಿತು. ಪರೀಕ್ಷಾ ಕೇಂದ್ರಕ್ಕೆ ಮಧ್ಯಾಹ್ನ 12:30ರೊಳಗೆ ಹೋಗಬೇಕಿದ್ದ ರೈಲು ವಿಳಂಬವಾದ ಕಾರಣ ಸಮೃದ್ಧಿ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗಲಿಲ್ಲ, ಇದರಿಂದಾಗಿ ಅವರ ಒಂದು ವರ್ಷದ ಎಲ್ಲ ಪರಿಶ್ರಮ ಕೂಡ ವ್ಯರ್ಥವಾಗಿದೆ. ಈ ಅನ್ಯಾಯದ ವಿರುದ್ಧ ಸಮೃದ್ಧಿ ಜಿಲ್ಲಾ ಗ್ರಾಹಕ ಆಯೋಗದ ಮೊರೆ ಹೋದರು. ಸುಮಾರು 8 ವರ್ಷಗಳ ಕಾಲ ಈ ವಿಚಾರವಾಗಿ ಸುದೀರ್ಘ ಕಾನೂನು ಹೋರಾಟ ನಡೆಯಿತು. ಜಿಲ್ಲಾ ಗ್ರಾಹಕ ಆಯೋಗವು ರೈಲ್ವೆ ಇಲಾಖೆಯ ಸೇವೆಯಲ್ಲಿ ಲೋಪವಿದೆ ಎಂದು ಹೇಳಿದೆ. ವಿದ್ಯಾರ್ಥಿನಿಯ ಶೈಕ್ಷಣಿಕ ನಷ್ಟ ಮತ್ತು ಮಾನಸಿಕ ಕಿರಿಕಿರಿಗಾಗಿ 9.10 ಲಕ್ಷ ರೂ. ಪರಿಹಾರ ನೀಡುವಂತೆ ರೈಲ್ವೆಗೆ ಆದೇಶ ನೀಡಿದೆ.

ಈ ಹಣವನ್ನು 45 ದಿನಗಳ ಒಳಗೆ ಪಾವತಿಸಬೇಕು. ತಪ್ಪಿದಲ್ಲಿ, ವಾರ್ಷಿಕ 12% ಬಡ್ಡಿಯನ್ನು ಸೇರಿಸಿ ನೀಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸಾಮಾನ್ಯವಾಗಿ ರೈಲು ವಿಳಂಬವಾದರೆ ನಾವು ಸುಮ್ಮನಿರುತ್ತೇವೆ. ಆದರೆ ಈ ತೀರ್ಪು ರೈಲ್ವೆ ಇಲಾಖೆಯು ಸಮಯ ಪಾಲನೆ ಮಾಡದಿದ್ದರೆ ಮತ್ತು ಅದರಿಂದ ಪ್ರಯಾಣಿಕರಿಗೆ ಗಂಭೀರ ನಷ್ಟವಾದರೆ ಅವರು ಹೊಣೆಗಾರರಾಗುತ್ತಾರೆ ಎಂಬುದನ್ನು ತಿಳಿಸಿಕೊಟ್ಟಿದೆ.

ಇದನ್ನೂ ಓದಿ: ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್​​​ ನ್ಯೂಸ್​: ಇನ್ಮುಂದೆ ಈ ರೈಲಿನಲ್ಲಿ ಊಟ ಉಚಿತ

8 ವರ್ಷಗಳ ಹೋರಾಟ:

ಈ ಬಗ್ಗೆ ನೊಂದ ಸಮೃದ್ಧಿ ತನ್ನ ವಕೀಲರ ಮೂಲಕ 20 ಲಕ್ಷ ರೂ. ಪರಿಹಾರ ಅರ್ಜಿ ಸಲ್ಲಿಸಿದರು. ರೈಲ್ವೆ ಸಚಿವಾಲಯ, ಜನರಲ್ ಮ್ಯಾನೇಜರ್ ಮತ್ತು ನಿಲ್ದಾಣದ ಸೂಪರಿಂಟೆಂಡೆಂಟ್‌ಗೆ ನೋಟಿಸ್‌ಗಳನ್ನು ನೀಡಲಾಯಿತು, ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ, ಜಿಲ್ಲಾ ಗ್ರಾಹಕ ಆಯೋಗವು ರೈಲ್ವೆ ಇಲಾಖೆಯು ಸಕಾಲಿಕ ಸೇವೆಯನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಹೇಳಿತ್ತು. ಇದಕ್ಕಾಗಿ ಸಮೃದ್ಧಿ 8 ವರ್ಷಗಳ ಕಾಲ ಹೋರಾಟ ಮಾಡಿದ್ದಾರೆ. ರೈಲ್ವೆ ಇಲಾಖೆಯು ವಿಳಂಬ ಬಗ್ಗೆ ಒಪ್ಪಿಕೊಂಡಿದೆ. ಅದರೂ ಅದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದ ಉರ್ದು ಪ್ರಾಥಮಿಕ ಹಾಗು ಪ್ರೌಢ ಶಾಲೆ ಅವಧಿ ಬದಲಾವಣೆ, ಕಾರಣವೇನು? – Kannada News | Karnataka Governmnet revises school timings for Urdu medium schools during Ramzan

ಬೆಂಗಳುರು, (ಫೆಬ್ರವರಿ 02): ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಹಬ್ಬ (Ramzan Festival)  ಹಿನ್ನೆಲೆಯಲ್ಲಿ ಕರ್ನಾಟಕದ ಉರ್ದು ಮಾಧ್ಯಮ ಕಿರಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಶಾಲಾ ಸಮಯವನ್ನು ಪರಿಷ್ಕರಿಸಲಾಗಿದೆ. ರಂಜಾನ್ ತಿಂಗಳಲ್ಲಿ ಉರ್ದು ಮಾಧ್ಯಮ ಕಿರಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಶಾಲಾ (Urdu medium school) ಸಮಯವನ್ನು ಬದಲಾವಣೆ ಮಾಡಲಾಗಿದ್ದು, ಬೆಳಿಗ್ಗೆ 8 ರಿಂದ ಮಧ್ಯಾಹ್ನ 12.45 ರವರೆಗೆ ಮಾತ್ರ ತರಗತಿ ನಡೆಸಲು ಆದೇಶಿಸಲಾಗಿದೆ. ಈ ಕುರಿತು ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ ಅಧಿಕೃತವಾಗಿ ಸುತ್ತೋಲೆ ಹೊರಡಿಸಿದೆ.

ಬೆಳಿಗ್ಗೆ 8ರಿಂದ ಮಧ್ಯಾಹ್ನ 12.45ರವರೆಗೆ ತರಗತಿ

ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯ ಪ್ರಕಾರ, ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಉರ್ದು ಮಾಧ್ಯಮದ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಈ ಪರಿಷ್ಕೃತ ಸಮಯ ಅನ್ವಯವಾಗಲಿದೆ. ರಂಜಾನ್ ತಿಂಗಳು ಆರಂಭವಾಗುವ ದಿನದಿಂದ 2026ರ ಮಾರ್ಚ್ 20ರವರೆಗೆ ಶಾಲೆಗಳು ಬೆಳಿಗ್ಗೆ 8.00 ಗಂಟೆಯಿಂದ ಮಧ್ಯಾಹ್ನ 12.45ರವರೆಗೆ ಕಾರ್ಯನಿರ್ವಹಿಸಲಿವೆ. ಸಾಮಾನ್ಯ ದಿನಗಳಲ್ಲಿ ಶಾಲೆಗಳು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4.20ರವರೆಗೆ ನಡೆಯುತ್ತಿದ್ದವು. ಆದರೆ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮನವಿಯನ್ನು ಪುರಸ್ಕರಿಸಿ ಮತ್ತು 2002ರಲ್ಲಿದ್ದ ಹಳೆಯ ಆದೇಶವನ್ನು ಪರಿಶೀಲಿಸಿ ಸರ್ಕಾರ ಈ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಇದನ್ನೂ ಓದಿ: ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಶಿಕ್ಷಣ ಇಲಾಖೆ ವಿಶೇಷ ಕಾಳಜಿ: ಇಲ್ಲಿದೆ ಮಾರ್ಗಸೂಚಿ

ಸುತ್ತೋಲೆತಲ್ಲೇನಿದೆ?

2025-26ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಉರ್ದು ಮಾಧ್ಯಮದ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಗಳು ರಂಜಾನ್ ತಿಂಗಳು ಪ್ರಾರಂಭವಾದ ದಿನಾಂದಿಂದ ದಿನಾಂಕ: 20-03-2026ರವರೆಗೆ ಮಾತ್ರ ಶಾಲಾ ಅವಧಿಯ ವೇಳಾಪಟ್ಟಿಯ ಬದಲಾವಣೆ ಮಾಡಲಾಗಿದೆ.

ಈ ವ್ಯವಸ್ಥೆಯಿಂದ ಶಾಲೆಗಳ ಕೆಲಸದ ಅವಧಿಯಲ್ಲಿ ಕಡಿಮೆ ಆಗುವ ಅವಧಿಯನ್ನು ಇತರೇ ರಜಾ ದಿನಗಳಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಸರಿದೂಗಿಸಿಕೊಳ್ಳತಕ್ಕದ್ದು. ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ರಂಜಾನ್ ಮಾಹೆಯಲ್ಲಿ ಉಪವಾಸ ವ್ರತವನ್ನು ಕೈಗೊಳ್ಳುವುದರಿಂದ ಅವರುಗಳಿಗೆ ರಂಜಾನ್ ಮಾಹೆಯಲ್ಲಿ ಪ್ರತಿದಿನ ಸಂಜೆ ಅರ್ಧ ಗಂಟೆ ಮುಂಚಿತವಾಗಿ ತೆರಳಲು ಅನುಮತಿಸಬಹುದು.

2025-26ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಪರೀಕ್ಷಾ ವೇಳಾಪಟ್ಟಿಯಂತೆ ನಡೆಸುವಂತೆ ಕ್ರಮವಹಿಸುವುದು. 2025-26ನೇ ಸಾಲಿಗೆ ನಿಗದಿಪಡಿಸಿರುವ ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರ ಮತ್ತು ಪರೀಕ್ಷಾ ಕರ್ತವ್ಯ ನಿರತ ಉರ್ದು ಮಾಧ್ಯಮದ ಶಿಕ್ಷಕರಿಗೆ ಈ ಆದೇಶವು ಅನ್ವಯಿಸುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಬಿಜೆಪಿ ಆಕ್ಷೇಪಕ್ಕೆ ಗೃಹ ಸಚಿವ ತಿರುಗೇಟು

ಭಾರತೀಯ ಜನತಾ ಪಕ್ಷವು ಈ ಕ್ರಮವನ್ನು ತೀವ್ರವಾಗಿ ಆಕ್ಷೇಪಿಸಿದ್ದು, ಕಾಂಗ್ರೆಸ್ ತುಷ್ಟೀಕರಣ ರಾಜಕೀಯದಲ್ಲಿ ತೊಡಗಿದೆ. ಯಾವುದೇ ಹಿಂದೂ ಹಬ್ಬಕ್ಕೂ ಅದು ಅದೇ ಕ್ರಮವನ್ನು ತೆಗೆದುಕೊಳ್ಳುತ್ತದೆಯೇ ಎಂದೂ ಬಿಜೆಪಿ ಪ್ರಶ್ನಿಸಿದೆ. ಇನ್ನು ಇದಕ್ಕೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಇದು ಅಲ್ಪಸಂಖ್ಯಾತರ ಓಲೈಕೆಯ ಪ್ರಶ್ನೆಯಲ್ಲ. ಸಂವಿಧಾನದಲ್ಲಿ ಎಸ್ಸಿ/ಎಸ್ಟಿ ಸಮುದಾಯಗಳಿಗೆ ಮೀಸಲಾತಿ ನೀಡಿರುವುದು ಮತ್ತು ಹಿಂದುಳಿದ ವರ್ಗಗಳನ್ನು ಪರಿಗಣಿಸಿರುವುದು ಅವರನ್ನು ಇತರರಿಗೆ ಸಮಾನರನ್ನಾಗಿ ಮಾಡಲು. ಸಾವಿರಾರು ವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾದ ಸಮುದಾಯಗಳನ್ನು ಮೇಲೆತ್ತಲು ಇಂತಹ ಪ್ರೋತ್ಸಾಹ ಅಗತ್ಯ,” ಎಂದು ಅವರು ಹೇಳಿದ್ದಾರೆ. ಉರ್ದು ಮಾಧ್ಯಮದ ಮಕ್ಕಳು ಇತರರೊಂದಿಗೆ ಸಮಾನವಾಗಿ ಬೆಳೆಯಬೇಕು ಎಂಬ ಉದ್ದೇಶದಿಂದ ಸರ್ಕಾರ ಇಂತಹ ಕಾರ್ಯಕ್ರಮಗಳ ಮೂಲಕ ಸಣ್ಣ ಪ್ರೋತ್ಸಾಹ ನೀಡುತ್ತಿದೆ. ಇದನ್ನು ಸಹಿಸದಿದ್ದರೆ, ನೀವು ಸಮಾನತೆಯ ವಿರೋಧಿಗಳು ಎಂದು ಅರ್ಥವಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link