All posts by nagaraj11081993

ಚುನಾವಣೆ ಇಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ, ಯಾರ್ಯಾರು? – Kannada News

ಬೆಂಗಳೂರು, (ಜೂನ್ 09): ಕರ್ನಾಟಕ ರಾಜ್ಯಸಭೆಯ (Karnataka Rajyasabha) ನಾಲ್ಕು ಸ್ಥಾನಗಳಿಗೆ ಸ್ಪರ್ಧಿಸಿದ್ದ ಮೂವರು ಕಾಂಗ್ರೆಸ್ (Congress) ಅಭ್ಯರ್ಥಿಗಳು ಹಾಗೂ ಓರ್ವ ಬಿಜೆಪಿ (BJP) ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮಲ್ಲಿಕಾರ್ಜುನ್ ಖರ್ಗೆ, ಪವನ್ ಖೇರಾ,ಮನ್ಸೂರ್ ಆಲಿ ಖಾನ್ ಹಾಗೂ ಬಿಜೆಪಿಯ ನಾಗರಾಜ್ ಅವರು ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ. ರಾಜ್ಯಸಭೆ ಚುನಾವಣೆಗೆ ಸಲ್ಲಿಕೆಯಾಗಿದ್ದ ಎಲ್ಲಾ ನಾಮಪತ್ರಗಳನ್ನು ಇಂದು (ಜೂನ್ 09) ಚುನಾವಣಾಧಿ ಕಾರಿ ಕೆ.ಎಂ.ವಿಶಾಲಾಕ್ಷಿ ಅವರು ಪರಿಶೀಲನೆ ನಡೆಸಿದ್ದು, ನಾಲ್ವರ ನಾಪತ್ರಗಳು ಕ್ರಮಬದ್ಧವಾಗಿವೆ. ಆದ್ರೆ, ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದ ಭೋಜಣ್ಣ ಸೋಮಣ್ಣ ನಾಮಪತ್ರ ತಿರಸ್ಕೃತವಾಗಿದೆ. ಹೀಗಾಗಿ ಚುನಾವಣೆ ಇಲ್ಲದೇ ನಾಲ್ವರು ಅವಿರೋಧ ಆಯ್ಕೆಯಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

ಮುಖ್ಯಾಂಶಗಳು

  • ಕರ್ನಾಟಕದಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ
  • ಕಾಂಗ್ರೆಸ್​ನ ಮೂವರು, ಓರ್ವ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆ
  • ನಾಲ್ವರು ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರ ಕ್ರಮಬದ್ಧವಾಗಿದೆ
  • ನಾಮಪತ್ರ ಪರಿಶೀಲನೆ ನಡೆಸಿದ್ದ ಚುನಾವಣಾಧಿಕಾರಿ ಕೆ.ಎಂ.ವಿಶಾಲಾಕ್ಷಿ
  • ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ, ಮನ್ಸೂರ್ ಅಲಿಖಾನ್, ಪವನ್ ಖೇರಾ, ಬಿಜೆಪಿಯ ನಾಗರಾಜು ನಾಮಪತ್ರ ಸಲ್ಲಿಸಿದ್ದರು

ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆ ನಾಲ್ಕು ಸ್ಥಾನ ಹಾಗೂ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅವಧಿ ಸೋಮವಾರ ಮುಕ್ತಾಯಗೊಂಡಿದ್ದು, ರಾಜ್ಯಸಭೆ ಚುನಾವಣೆಗೆ ನಾಲ್ಕು ಮಂದಿ ಹಾಗೂ ಪರಿಷತ್‌ ಚುನಾವಣೆಗೆ 8 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಇಂದು (ಜೂನ್‌ 09) ನಾಮಪತ್ರಗಳ ಪರಿಶೀಲನೆ ಪ್ರಕ್ರಿಯೆ ನಡೆದಿದ್ದು, ರಾಜ್ಯಸಭೆಗೆ ಪಕ್ಷೇತರ ಅಭ್ಯರ್ಥಿಯ ಸ್ಪರ್ಧಿಸಿದ್ದ ಭೋಜಣ್ಣ ಸೋಮಣ್ಣ ಅವರ ನಾಮಪತ್ರ ತಿರಸ್ಕೃತವಾಗಿದೆ. ಯಾವುದೇ ಅನುಮೋದಕರ ಸಹಿ ಇಲ್ಲದ ಕಾರಣ ಪಕ್ಷೇತರ ಅಭ್ಯರ್ಥಿ ಭೋಜಣ್ಣ ಸೋಮಣ್ಣ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ಕೆ.ಎಂ.ವಿಶಾಲಾಕ್ಷಿ ಅವರು ತಿರಸ್ಕೃತ ಮಾಡಿದ್ದಾರೆ.

ಇದನ್ನೂ ಓದಿ: ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್​​ ಕೈತಪ್ಪಿದ್ದೇಕೆ?: ಅಸಲಿ ಸತ್ಯ ಬಹಿರಂಗಪಡಿಸಿದ ಕುಮಾರಸ್ವಾಮಿ

ನಾಲ್ವರು ಅವಿರೋಧವಾಗಿ ಆಯ್ಕೆ

ನಾಲ್ಕು ಸ್ಥಾನಗಳಿಗೆ ಕಾಂಗ್ರೆಸ್‌ನಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪವನ್‌ ಖೇರಾ, ಮನ್ಸೂರ್‌ ಅಲಿ ಖಾನ್‌ ಹಾಗೂ ಬಿಜೆಪಿಯಿಂದ ಪ್ರೊ.ಎಂ.ನಾಗರಾಜ್‌ ನಾಮಪತ್ರ ಸರಿಯಾಗಿದೆ. ಇನ್ನು ನಾಲ್ಕು ಸ್ಥಾನಗಳಿಗೆ ನಾಲ್ವರು ಅಭ್ಯರ್ಥಿಗಳಿದ್ದಾರೆ. ಹೀಗಾಗಿ ಯಾವುದೇ ಪ್ರತಿಸ್ಪರ್ಧಿಗಳಿಲ್ಲದಿದ್ದರಿಂದ ಮತದಾನ ನಡೆಯದೇ ನಾಲ್ವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆದ್ರೆ, ಜೂನ್ 11 ನಾಮಪತ್ರ ವಾಪಸ್‌ ಕೊನೆಯ ದಿನವಾಗಿದ್ದು, ಯಾರು ನಾಮಪತ್ರ ಪಡೆಯದಿದ್ದಲ್ಲಿ ಅಂದು ನಾಲ್ವರ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆಯಾಗಲಿದೆ.

ಪರಿಷತ್‌ನ ಏಳು ಸ್ಥಾನಗಳಿಗೆ ಚುನಾವಣೆ

ಇನ್ನು ಪರಿಷತ್‌ನ ಏಳು ಸ್ಥಾನಗಳಿಗೆ ಕಾಂಗ್ರೆಸ್‌ನಿಂದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ , ತಿಪ್ಪಣ್ಣಪ್ಪ ಕಮಕನೂರ, ಮಳವಳ್ಳಿ ಶಿವಣ್ಣ, ಪಿ.ವಿ.ಮೋಹನ್‌, ಕಾಂಗ್ರೆಸ್‌ನಿಂದ ಐದನೇ ಅಭ್ಯರ್ಥಿಯಾಗಿ ವಿನಯ್‌ ಕಾರ್ತಿಕ್‌ ನಾಮಪತ್ರ ಸಲ್ಲಿಸಿದರೆ, ಬಿಜೆಪಿಯಿಂದ ಲಿಂಗರಾಜ್‌ ಪಾಟೀಲ್‌, ರಘು ಕೌಟಿಲ್ಯ ಹಾಗೂ ಜೆಡಿಎಸ್‌ನಿಂದ ಗೋವಿಂದರಾಜು ಅವರು ನಾಮಪತ್ರ ಸಲ್ಲಿಸಿದ್ದು, ಜೂ. 11ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಯಾರೊಬ್ಬರೂ ನಾಮಪತ್ರ ಹಿಂಪಡೆಯದಿದ್ದರೆ ಜೂ.18ರಂದು ಮತದಾನ ನಡೆಯಲಿದೆ. ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ ಆಧರಿಸಿ ಕಾಂಗ್ರೆಸ್‌ನ ನಾಲ್ಕು ಹಾಗೂ ಬಿಜೆಪಿಯ ಇಬ್ಬರು ಅನಾಯಾಸವಾಗಿ ಗೆಲುವು ಸಾಧಿಸಬಹುದಾಗಿದೆ. ಬಾಕಿ ಒಂದು ಸ್ಥಾನಕ್ಕೆ ಕಾಂಗ್ರೆಸ್‌ನ ವಿನಯ್‌ ಕಾರ್ತಿಕ್‌ ಹಾಗೂ ಜೆಡಿಎಸ್‌ನ ಗೋವಿಂದರಾಜು ನಡುವೆ ಸ್ಪರ್ಧೆ ನಡೆಯಲಿದ್ದು, ಯಾರು ಗೆಲುವು ಸಾಧಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Vasthu Shastra: ಮನೆಯಲ್ಲಿ ಬೆಕ್ಕು ಸಾಕುವುದು ಅಶುಭವೇ? ವಾಸ್ತು ಮತ್ತು ಜ್ಯೋತಿಷ್ಯ ತಜ್ಞರು ಹೇಳುವುದೇನು? – Kannada News

ಮನೆಯಲ್ಲಿ ಬೆಕ್ಕು ಸಾಕುವುದು ಅಶುಭವೇ? Image Credit source: Pinterest

ಇತ್ತೀಚಿನ ದಿನಗಳಲ್ಲಿ ಸಾಕುಪ್ರಾಣಿಗಳನ್ನು ಸಾಕುವುದು ಅನೇಕರ ನೆಚ್ಚಿನ ಹವ್ಯಾಸವಾಗಿದೆ. ಅದರಲ್ಲೂ ವಿಶೇಷವಾಗಿ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರು ಜಾಗದ ಅಭಾವ ಅಥವಾ ನಿರ್ವಹಣೆಯ ಕಾರಣಗಳಿಂದಾಗಿ ನಾಯಿಗಳಿಗಿಂತ ಬೆಕ್ಕುಗಳನ್ನು ಸಾಕುವುದರಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಆದಾಗ್ಯೂ, ಮನೆಯಲ್ಲಿ ಬೆಕ್ಕನ್ನು ಸಾಕುವುದು ಅದೃಷ್ಟವನ್ನು ತರುತ್ತದೆಯೇ ಅಥವಾ ದುರದೃಷ್ಟವನ್ನು ಉಂಟುಮಾಡುತ್ತದೆಯೇ ಎಂಬ ಗೊಂದಲ ಇಂದಿಗೂ ಅನೇಕರಲ್ಲಿದೆ. ಈ ಬಗ್ಗೆ ವಾಸ್ತು ಮತ್ತು ಜ್ಯೋತಿಷ್ಯ ತಜ್ಞರು ಏನು ಹೇಳುತ್ತಾರೆ ಎಂಬ ಸಂಪೂರ್ಣ ವಿವರ ಇಲ್ಲಿದೆ.

ಬೆಕ್ಕು ಮತ್ತು ರಾಹು ಗ್ರಹದ ನಂಟು: ಅಶುಭ ಎಂಬುದು ಕೇವಲ ಭ್ರಮೆಯೇ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬೆಕ್ಕುಗಳನ್ನು ರಾಹು ಗ್ರಹಕ್ಕೆ ಸಂಬಂಧಿಸಿದ ಜೀವಿಯೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಹಳೇ ಕಾಲದಿಂದಲೂ ಬೆಕ್ಕು ದಾರಿಗಡ್ಡ ಬಂದರೆ ಅಶುಭ ಎನ್ನುವ ನಂಬಿಕೆ ಬಲವಾಗಿ ಬೆಳೆದುಬಂದಿದೆ. ಆದರೆ, ಜ್ಯೋತಿಷಿಗಳ ಪ್ರಕಾರ ಇದು ಕೇವಲ ತಪ್ಪು ಕಲ್ಪನೆ ಅಷ್ಟೇ. ವಾಸ್ತವವಾಗಿ, ಬೆಕ್ಕುಗಳಿಗೆ ನಿಯಮಿತವಾಗಿ ಆಹಾರ ನೀಡುವುದು ಮತ್ತು ಅವುಗಳನ್ನು ಪ್ರೀತಿಯಿಂದ ನೋಡಿಕೊಳ್ಳುವುದರಿಂದ ಜಾತಕದಲ್ಲಿರುವ ರಾಹು ಸಂಬಂಧಿತ ದೋಷಗಳು ಹಾಗೂ ಋಣಾತ್ಮಕ ಪ್ರಭಾವಗಳು ಕಡಿಮೆಯಾಗುತ್ತವೆ ಎಂದು ತಜ್ಞರು ಹೇಳುತ್ತಾರೆ.

ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಬೆಕ್ಕುಗಳು:

ಮನೆಯಲ್ಲಿ ಬೆಕ್ಕನ್ನು ಸಾಕುವುದರಿಂದ ಯಾವುದೇ ರೀತಿಯ ಪ್ರಮುಖ ನಕಾರಾತ್ಮಕ ಪರಿಣಾಮಗಳು ಬೀರುವುದಿಲ್ಲ ಎಂದು ವಾಸ್ತು ತಜ್ಞರು ಸ್ಪಷ್ಟಪಡಿಸುತ್ತಾರೆ. ಕೆಲವು ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಬೆಕ್ಕುಗಳು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು (Negative Energy) ತಾವೇ ಹೀರಿಕೊಂಡು, ಮನೆಯುದ್ದಕ್ಕೂ ಸಕಾರಾತ್ಮಕ ವಾತಾವರಣವನ್ನು ಹೆಚ್ಚಿಸುತ್ತವೆ. ಅಷ್ಟೇ ಅಲ್ಲದೆ, ಇಂದಿನ ಜಂಜಾಟದ ಜೀವನದಲ್ಲಿ ಸಾಕುಪ್ರಾಣಿಗಳೊಂದಿಗೆ ಸಮಯ ಕಳೆಯುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಶಾಂತಿ ಸಿಗುತ್ತದೆ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.

ಇದನ್ನೂ ಓದಿ: ಅನುಷ್ಕಾ ಶರ್ಮಾ ಕತ್ತಿನಲ್ಲಿರುವ ತುಳಸಿ ಮಾಲೆ ಗಮನಿಸಿದ್ದೀರಾ? ಧರಿಸುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ

ವಾಸ್ತು ಪ್ರಕಾರ ಬೆಕ್ಕಿನ ನಿವಾಸಕ್ಕೆ ಯಾವ ದಿಕ್ಕು ಉತ್ತಮ?

ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ವಸ್ತುವಿಗೂ ದಿಕ್ಕುಗಳ ವಿಶೇಷ ಮಹತ್ವವಿರುವಂತೆ, ಸಾಕುಪ್ರಾಣಿಗಳ ಮಲಗುವ ಜಾಗಕ್ಕೂ ನಿಯಮಗಳಿವೆ. ಮನೆಯಲ್ಲಿ ಬೆಕ್ಕನ್ನು ಸಾಕುವವರು ಅದರ ವಿಶ್ರಾಂತಿ ಅಥವಾ ಮಲಗುವ ಸ್ಥಳವನ್ನು ವಾಯುವ್ಯ (North-West) ಅಥವಾ ಉತ್ತರ (North) ದಿಕ್ಕಿನಲ್ಲಿ ಜೋಡಿಸುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕುಗಳು ಸ್ವಾತಂತ್ರ್ಯ, ಚುರುಕುತನ ಮತ್ತು ಸಂತೋಷವನ್ನು ಸಂಕೇತಿಸುತ್ತವೆ. ಆದರೆ, ಯಾವುದೇ ಕಾರಣಕ್ಕೂ ಮನೆಯ ಆಗ್ನೇಯ (South-East) ಮತ್ತು ನೈಋತ್ಯ (South-West) ದಿಕ್ಕುಗಳಲ್ಲಿ ಬೆಕ್ಕಿನ ಮಲಗುವ ವ್ಯವಸ್ಥೆ ಮಾಡಬೇಡಿ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.

ಮೂಢನಂಬಿಕೆಗಿಂತ ಪ್ರಾಣಿ ಮೇಲಿನ ಪ್ರೀತಿಯೇ ಶ್ರೇಷ್ಠ:

ವಾಸ್ತು ಅಥವಾ ಜ್ಯೋತಿಷ್ಯ ಏನೇ ಹೇಳಿದರೂ, ಅಂತಿಮವಾಗಿ ಯಾವುದೇ ಒಂದು ಜೀವಿಯನ್ನು ನಾವು ಎಷ್ಟು ಪ್ರೀತಿಯಿಂದ ಬೆಳೆಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಯಾವುದೇ ಪ್ರಾಣಿಯನ್ನು ದಯೆಯಿಂದ ಕಾಣುವುದರಿಂದ ನಮ್ಮ ಜೀವನಕ್ಕೆ ಸಕಾರಾತ್ಮಕತೆ ಬರುತ್ತದೆ. ಮನೆಯನ್ನು ಸ್ವಚ್ಛವಾಗಿಟ್ಟುಕೊಂಡು, ಸಾಕುಪ್ರಾಣಿಗಳನ್ನು ಆರೋಗ್ಯವಾಗಿ ನೋಡಿಕೊಂಡರೆ ಅಲ್ಲಿ ಯಾವುದೇ ವಾಸ್ತು ದೋಷ ಸುಳಿಯುವುದಿಲ್ಲ. ಆದ್ದರಿಂದ ಬೆಕ್ಕುಗಳನ್ನು ಪ್ರೀತಿಯಿಂದ ಸಾಕಿ, ಅವುಗಳೊಂದಿಗೆ ಕಳೆಯುವ ಪ್ರತಿ ಕ್ಷಣವನ್ನು ಆನಂದಿಸಿ. ಏಕೆಂದರೆ ಮೂಕ ಜೀವಿಗಳ ಕಡೆಗೆ ತೋರುವ ಕರುಣೆಯೇ ನಿಜವಾದ ಸಂತೋಷದ ಮೂಲ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:09 pm, Tue, 9 June 26

Source link

ರಾಷ್ಟ್ರ ಪ್ರಶಸ್ತಿ ಸಿಕ್ಕ ಬಳಿಕವೂ ನನಗೆ ಕೆಲಸ ಸಿಗಲಿಲ್ಲ: ಸತ್ಯ ತೆರೆದಿಟ್ಟ ಕಂಗನಾ ರಣಾವತ್ – Kannada News

ಬಾಲಿವುಡ್‌ನ ಖ್ಯಾತ ನಟಿ, ಮಂಡಿ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಚಿತ್ರರಂಗದಲ್ಲಿ ತಮಗಿದ್ದ ಕಠಿಣ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ‘ಫ್ಯಾಷನ್’ ಚಿತ್ರದ ಭರ್ಜರಿ ಯಶಸ್ಸು ಮತ್ತು ಅದಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ನಂತರವೂ ತಮಗೆ ಚಿತ್ರರಂಗದಲ್ಲಿ ಕೆಲಸ ಸಿಗುತ್ತಿರಲಿಲ್ಲ ಎಂದು ಅವರು ಬಹಿರಂಗಪಡಿಸಿದ್ದಾರೆ. ಆ ಸಮಯದಲ್ಲಿ ಕೇವಲ ಬದುಕುಳಿಯಲು ತಮ್ಮ ಸಾಮರ್ಥ್ಯಕ್ಕೆ ಹೊಂದದ ಕಳಪೆ ಸಿನಿಮಾಗಳನ್ನೂ ಮಾಡಬೇಕಾಗಿ ಬಂದಿತ್ತು ಎಂದು ಅವರು ಹೇಳಿದ್ದಾರೆ.

2006ರಲ್ಲಿ ಅನುರಾಗ್ ಬಸು ನಿರ್ದೇಶನದ ‘ಗ್ಯಾಂಗ್‌ಸ್ಟರ್: ಎ ಲವ್ ಸ್ಟೋರಿ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಕಂಗನಾ, ಚಿತ್ರರಂಗದಲ್ಲಿ ಈಗ ಯಶಸ್ವಿಯಾಗಿ 20 ವರ್ಷಗಳನ್ನು ಪೂರೈಸಿದ್ದಾರೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ‘ಭಾರತ್ ಭಾಗ್ಯ ವಿಧಾತ’ ಚಿತ್ರದ ಪ್ರಚಾರದ ವೇಳೆ ಅವರು ತಮ್ಮ ಹಳೆಯ ದಿನಗಳ ಹೋರಾಟವನ್ನು ಬಿಚ್ಚಿಟ್ಟಿದ್ದಾರೆ.

ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಕಂಗನಾ, ‘ಜೀವನದಲ್ಲಿ ಹೋರಾಟದ ದಿನಗಳು ಎದುರಾದಾಗ ಅದನ್ನು ಧನಾತ್ಮಕವಾಗಿ ತೆಗೆದುಕೊಳ್ಳಬೇಕು. ಯಾಕೆಂದರೆ ಆ ಸಂದರ್ಭದಲ್ಲಿ ಜೀವನ ನಮಗೆ ಏನನ್ನೋ ಕಲಿಸಲು ಪ್ರಯತ್ನಿಸುತ್ತಿರುತ್ತದೆ. 2007-2008ರ ಅವಧಿಯಲ್ಲಿ, ಅಂದರೆ ಫ್ಯಾಷನ್ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಬಂದ ನಂತರವೂ ನನಗೆ ಚಿತ್ರರಂಗದಲ್ಲಿ ಯಾವುದೇ ಕೆಲಸ ಸಿಗುತ್ತಿರಲಿಲ್ಲ. ಆಗ ನಾನು ಯಾಕೆ ನನಗೆ ಕೆಲಸ ಸಿಗುತ್ತಿಲ್ಲ? ನಾನೇಕೆ ಇದಕ್ಕಿಂತ ಉತ್ತಮವಾದುದನ್ನು ಮಾಡಲು ಸಾಧ್ಯವಾಗುತ್ತಿಲ್ಲ ಅಂತ ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತಿದ್ದೆ’ ಎಂದು ಹೇಳಿದ್ದಾರೆ.

‘ಆ ಸಮಯದಲ್ಲಿ ದೊಡ್ಡ ಸ್ಟಾರ್ ಕಲಾವಿದರ ಮ್ಯಾನೇಜರ್‌ಗಳನ್ನು ಕೆಲಸಕ್ಕೆ ಇಟ್ಟುಕೊಳ್ಳುವಂತೆ ನನಗೆ ಹಲವರು ಸಲಹೆ ನೀಡಿದರು. ನಾನು ಹಾಗೆಯೇ ಮಾಡಿದೆ. ಆದರೆ ಅದರ ಪರಿಣಾಮವಾಗಿ ನನಗೆ ‘ರಾಸ್ಕಲ್ಸ್’ ಮತ್ತು ‘ಡಬಲ್ ಧಮಾಲ್’ ರೀತಿಯ ಕಮರ್ಷಿಯಲ್ ಸಿನಿಮಾಗಳು ಸಿಕ್ಕವು. ನಾನು ನನ್ನ ಬುದ್ಧಿಮತ್ತೆಗಿಂತ ತೀರಾ ಕೆಳಮಟ್ಟದ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ ಎಂಬುದು ನನಗೆ ಚೆನ್ನಾಗಿ ಗೊತ್ತಿತ್ತು. ಆದರೆ ಬದುಕಲು ನನಗೆ ಬೇರೆ ದಾರಿ ಇರಲಿಲ್ಲ. ಇವತ್ತಿನ ದಿನಗಳಲ್ಲಿ ಜನರು ನಿಮಗೆ ಇಷ್ಟ ಬಂದಿದ್ದನ್ನು ಮಾತ್ರ ಮಾಡಿ ಎಂದು ಸುಲಭವಾಗಿ ಹೇಳುತ್ತಾರೆ. ಆದರೆ ಅದು ತೀರಾ ಮೂರ್ಖತನದ ಹೇಳಿಕೆ. ಆಯಾ ಪರಿಸ್ಥಿತಿಗೆ ಏನು ಅಗತ್ಯವಿದೆಯೋ ಮತ್ತು ನಮ್ಮಿಂದ ಏನು ಸಾಧ್ಯವೋ ಅದನ್ನು ನಾವು ಮಾಡಬೇಕಾಗುತ್ತದೆ’ ಎಂದು ಕಂಗನಾ ಮಾರ್ಮಿಕವಾಗಿ ನುಡಿದಿದ್ದಾರೆ.

ಕಂಗನಾ ರಣಾವತ್ ‘ವೋ ಲಮ್ಹೆ’, ಲೈಫ್ ಇನ್ ಎ ಮೆಟ್ರೋ’ ಚಿತ್ರಗಳ ಮೂಲಕ ಗುರುತಿಸಿಕೊಂಡು, ‘ಕ್ವೀನ್’ ಸಿನಿಮಾ ಮೂಲಕ ಸ್ಟಾರ್ ನಟಿಯಾಗಿ ಹೊರಹೊಮ್ಮಿದರು. ನಂತರ ‘ಮಣಿಕರ್ಣಿಕಾ’, ‘ಪಂಗಾ’ ಮತ್ತು ‘ಎಮರ್ಜೆನ್ಸಿ’ ರೀತಿಯ ಮಹಿಳಾ ಪ್ರಧಾನ ಚಿತ್ರಗಳ ಮೂಲಕ ಜನರನ್ನು ರಂಜಿಸುವ ಪ್ರಯತ್ನ ಮಾಡಿದರು.

ಇದನ್ನೂ ಓದಿ: 26/11 ಮುಂಬೈ ಉಗ್ರರ ದಾಳಿ ನಡೆದಾಗ ಪಾರ್ಟಿ ಮಾಡುತ್ತಿದ್ದ ನಟಿ ಕಂಗನಾ ರಣಾವತ್

ಕಂಗನಾ ರಣಾವತ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಭಾರತ್ ಭಾಗ್ಯ ವಿಧಾತ’ ಸಿನಿಮಾ ಜೂನ್ 12ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಮುಂಬೈನ ಕಾಮಾ ಆಸ್ಪತ್ರೆಯ ಹಿನ್ನೆಲೆಯಲ್ಲಿ ಈ ಕಥೆ ನಡೆಯುತ್ತದೆ. 26/11 ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ನರ್ಸ್‌ಗಳು ಮತ್ತು ವಾರ್ಡ್ ಬಾಯ್‌ಗಳ ನಡೆಸಿದ ಧೀರತನದ ಕಥೆಯನ್ನು ಈ ಸಿನಿಮಾ ಅನಾವರಣಗೊಳಿಸಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನಲ್ಲಿ ಮತ್ತೊಂದು ಅವೈಜ್ಞಾನಿಕ ಕಾಮಗಾರಿ: ರಸ್ತೆ ಮಧ್ಯೆ ಇರೋ ಕಂಬ ತೆಗೆಯದೇ ವೈಟ್‌ಟ್ಯಾಪಿಂಗ್; ಸಾರ್ವಜನಿಕರ ಆಕ್ರೋಶ – Kannada News

ಬೆಂಗಳೂರು, ಜೂ.9: ದೊಮ್ಮಲೂರು ವಾರ್ಡ್, ಶಾಂತಿನಗರ ವಿಧಾನಸಭಾ ಕ್ಷೇತ್ರದ ಯು. ಆರ್. ರಾವ್ ಸರ್ಕಲ್ ಬಳಿ ಕೈಗೊಂಡಿರುವ ರಸ್ತೆ ಕಾಮಗಾರಿಯೊಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೇಂಬ್ರಿಡ್ಜ್ ಲೇಔಟ್‌ನಲ್ಲಿ ರಸ್ತೆಗೆ ವೈಟ್‌ ಟ್ಯಾಪಿಂಗ್ ಮೂಲಕ ಕಾಂಕ್ರೀಟ್ ಹಾಕಲಾಗಿದ್ದು, ಒಂದು ತಿಂಗಳ ಹಿಂದೆಯೇ ಈ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ರಸ್ತೆಯ ಮಧ್ಯೆ ನಿಂತಿರುವ ಬೃಹತ್ ವಿದ್ಯುತ್ ಕಂಬವನ್ನು ತೆರವುಗೊಳಿಸದೆ ಹಾಗೆಯೇ ಬಿಟ್ಟು ರಸ್ತೆಯನ್ನು ನಿರ್ಮಿಸಲಾಗಿದೆ. ಕಾಮಗಾರಿಯ ಆರಂಭದಲ್ಲಿ ವಿದ್ಯುತ್ ಕಂಬವನ್ನು ತೆರವುಗೊಳಿಸಬೇಕಾಗಿತ್ತು. ಆದರೆ, ಅದನ್ನು ಮಾಡದೆ ಈಗ ಕಾಂಕ್ರೀಟ್ ರಸ್ತೆ ಹಾಕಿದ ಒಂದು ತಿಂಗಳ ಬಳಿಕ ಕಂಬ ತೆರವಿಗೆ ಮುಂದಾಗಿರುವುದು ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯ ಮತ್ತು ಅವೈಜ್ಞಾನಿಕ ಕಾರ್ಯವಿಧಾನವನ್ನು ಎತ್ತಿ ತೋರಿಸುತ್ತದೆ. ಈ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಈಗಾಗಲೇ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ಟ್ರಾಫಿಕ್ ಜಾಮ್ ಹಾಗೂ ವಾಹನಗಳಿಗೆ ಹಾನಿಗಳಾಗಿವೆ. ಇದು ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡುವುದರ ಜೊತೆಗೆ ತೆರಿಗೆ ಹಣದ ದುರುಪಯೋಗವೂ ಆಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಬೆಂಗಳೂರು ಕೇಂದ್ರ ನಗರ ಪಾಲಿಕೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಇಂತಹ ದುಂದುವೆಚ್ಚ ಮತ್ತು ಅವೈಜ್ಞಾನಿಕ ಕಾಮಗಾರಿಗಳಿಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿಎಂಸಿಯಲ್ಲೇ ಇದ್ದಿದ್ದರೆ ನನ್ನ ಕೊಲ್ಲುತ್ತಿದ್ದರು; ಮಮತಾ ಬ್ಯಾನರ್ಜಿ ವಿರುದ್ಧ ಸುಖೇಂದು ಶೇಖರ್ ರಾಯ್ ಗಂಭೀರ ಆರೋಪ – Kannada News

ಕೊಲ್ಕತ್ತಾ, ಜೂನ್ 9: ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಟಿಎಂಸಿ ಮಾಜಿ ನಾಯಕ ಸುಖೇಂದು ಶೇಖರ್ ರಾಯ್ ಅವರ ಹೇಳಿಕೆ ಭಾರಿ ಸಂಚಲನ ಮೂಡಿಸಿದೆ. ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಮಾಜಿ ಹಿರಿಯ ನಾಯಕ ಸುಖೇಂದು ಶೇಖರ್ ರಾಯ್ ಅವರ ಸ್ಫೋಟಕ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. “ನಾನು ಟಿಎಂಸಿಯಲ್ಲೇ ಇದ್ದಿದ್ದರೆ ಸುಪಾರಿ ಕಿಲ್ಲರ್​​ಗಳು ನನ್ನನ್ನು ಕೊಲ್ಲುವ ಸಾಧ್ಯತೆಯಿತ್ತು!” ಎಂದು ಟಿಎಂಸಿ ತೊರೆದ ಕೆಲವೇ ದಿನಗಳಲ್ಲಿ ಮಮತಾ ಬ್ಯಾನರ್ಜಿ ಪಕ್ಷದ ವಿರುದ್ಧ ಸುಖೇಂದು ಶೇಖರ್ ರಾಯ್ ಆರೋಪ ಮಾಡಿದ್ದಾರೆ.

ದೀರ್ಘಕಾಲ ಟಿಎಂಸಿ ಪಕ್ಷದ ಪ್ರಮುಖ ಧ್ವನಿಯಾಗಿದ್ದ ಸುಖೇಂದು ಶೇಖರ್ ರಾಯ್ ಅವರು ಇತ್ತೀಚೆಗೆ ಪಕ್ಷಕ್ಕೆ ಮತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಮಾಧ್ಯಮಗಳ ಮುಂದೆ ಮುಕ್ತವಾಗಿ ಮಾತನಾಡಿರುವ ಅವರು, ಪಕ್ಷದ ಒಳಗಿನ ಕೆಲವು ಶಕ್ತಿಗಳಿಂದ ತಮಗೆ ಜೀವಭಯವಿತ್ತು ಎಂದು ಬಹಿರಂಗಪಡಿಸಿದ್ದಾರೆ. “ನಾನು ಪಕ್ಷದ ಕೆಲವು ನಿರ್ಧಾರಗಳು ಮತ್ತು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ಆರಂಭಿಸಿದಾಗಿನಿಂದ ನನ್ನನ್ನು ಟಾರ್ಗೆಟ್ ಮಾಡಲಾಗಿತ್ತು. ನಾನು ಪಕ್ಷದಲ್ಲೇ ಮುಂದುವರಿದಿದ್ದರೆ ನನ್ನನ್ನು ಕೊಲ್ಲುವ ಸಾಧ್ಯತೆಯಿತ್ತು. ನನ್ನ ಸುರಕ್ಷತೆಗಾಗಿ ಮತ್ತು ಆತ್ಮಸಾಕ್ಷಿಯ ಕರೆಗೆ ಓಗೊಟ್ಟು ನಾನು ಪಕ್ಷದಿಂದ ಹೊರಬರಬೇಕಾಯಿತು” ಎಂದು ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ದೊಡ್ಡ ಶಾಕ್; 20 ಟಿಎಂಸಿ ಸಂಸದರಿಂದ ಸ್ಪೀಕರ್‌ಗೆ ಪತ್ರ, ಎನ್​ಡಿಎ ಸೇರ್ಪಡೆ ಸಾಧ್ಯತೆ

ಟಿಎಂಸಿ ಪಕ್ಷದಲ್ಲಿ ಪ್ರಜಾಪ್ರಭುತ್ವವೇ ಉಳಿದಿಲ್ಲ, ಹಿರಿಯ ನಾಯಕರ ಆಲೋಚನೆಗಳಿಗೆ ಮತ್ತು ಸಲಹೆಗಳಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ. ಕೇವಲ ಕೆಲವು ವ್ಯಕ್ತಿಗಳ ಹಿತಾಸಕ್ತಿಗಾಗಿ ಇಡೀ ಪಕ್ಷ ಕೆಲಸ ಮಾಡುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಕೊಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದಾಗ, ಸುಖೇಂದು ಶೇಖರ್ ರಾಯ್ ಕೊಲ್ಕತ್ತಾ ಪೊಲೀಸ್ ಕಮಿಷನರ್ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಬಹಿರಂಗವಾಗಿ ಒತ್ತಾಯಿಸಿದ್ದರು. ಇದು ಪಕ್ಷದ ನಾಯಕತ್ವದ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ಆರ್​ಜಿ ಕರ್ ಪ್ರಕರಣದಲ್ಲಿ ಟಿಎಂಸಿ ತೋರಿದ ನಿರ್ಲಕ್ಷ್ಯ ಧೋರಣೆಯೂ ಸುಖೇಂದು ಅವರ ರಾಜೀನಾಮೆಗೆ ಮುಖ್ಯ ಕಾರಣ.

ಇದನ್ನೂ ಓದಿ: ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ಶಾಕ್; ಟಿಎಂಸಿಯಿಂದ ಉಚ್ಚಾಟಿತರಾಗಿದ್ದ ರಿತಬ್ರತಾ ಬ್ಯಾನರ್ಜಿ ಈಗ ಪ್ರತಿಪಕ್ಷ ನಾಯಕ!

ಸುಖೇಂದು ಶೇಖರ್ ರಾಯ್ ಅವರ ಈ ಗಂಭೀರ ಆರೋಪಗಳನ್ನು ತೃಣಮೂಲ ಕಾಂಗ್ರೆಸ್ ತಳ್ಳಿಹಾಕಿದೆ. ಅವರಿಗೆ ವಯಸ್ಸಾಗಿರುವುದರಿಂದ ಮತ್ತು ವೈಯಕ್ತಿಕ ಹತಾಶೆಯಿಂದ ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಟಿಎಂಸಿ ವಕ್ತಾರರು ಹೇಳಿದ್ದಾರೆ. ಇದೇ ವೇಳೆ, ಪಶ್ಚಿಮ ಬಂಗಾಳದ ವಿರೋಧ ಪಕ್ಷವಾದ ಬಿಜೆಪಿ ಸುಖೇಂದು ಅವರ ಹೇಳಿಕೆಯನ್ನು ಅಸ್ತ್ರವಾಗಿ ಬಳಸಿಕೊಂಡಿದೆ. “ಟಿಎಂಸಿ ಪಕ್ಷವು ಸಮಾಜವಿರೋಧಿಗಳು ಮತ್ತು ಅಪರಾಧಿಗಳ ಅಡ್ಡಯಾಗಿದೆ ಎಂಬುದಕ್ಕೆ ಅವರದೇ ಪಕ್ಷದ ಹಿರಿಯ ನಾಯಕರ ಹೇಳಿಕೆಯೇ ಸಾಕ್ಷಿ” ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.

ಸುಖೇಂದು ರಾಯ್ ಅವರು ಮಾಡಿರುವ ‘ಜೀವಭಯ’ದ ಹೇಳಿಕೆಯ ಬೆನ್ನಲ್ಲೇ ಅವರಿಗೆ ಕೇಂದ್ರ ಸಚಿವಾಲಯದಿಂದ ಸೂಕ್ತ ಭದ್ರತೆ ಒದಗಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಬಂಗಾಳದ ರಾಜಕಾರಣದ ಅತ್ಯಂತ ಪ್ರಭಾವಿ ಹಾಗೂ ಹಿರಿಯ ರಾಜಕಾರಣಿಯೊಬ್ಬರು ಆಡಳಿತ ಪಕ್ಷದ ವಿರುದ್ಧವೇ ಈ ಮಟ್ಟದ ಸ್ಫೋಟಕ ಹೇಳಿಕೆ ನೀಡಿರುವುದು ಮುಂಬರುವ ಚುನಾವಣೆಗಳ ದೃಷ್ಟಿಯಿಂದ ತೃಣಮೂಲ ಕಾಂಗ್ರೆಸ್‌ಗೆ ಭಾರಿ ಮುಖಭಂಗ ಉಂಟುಮಾಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 3:28 pm, Tue, 9 June 26

Source link

Viral: ಒಂದೇ ಕಂಪನಿಯಲ್ಲಿ 11 ವರ್ಷ ಕೆಲಸ ಮಾಡಿದ್ರೂ ಜಾಬ್‌ನಿಂದ ತೆಗೆದು ಹಾಕಿದ ಕಂಪನಿ – Kannada News

ಕೈಯಲ್ಲೊಂದು ಉದ್ಯೋಗ (job) ಇದ್ರೇನೆ ಮರ್ಯಾದೆ. ಆದರೆ ಕಾರ್ಪೋರೇಟ್, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡೋ ಉದ್ಯೋಗಿಗಳಿಗೆ ತಮ್ಮ ಕೆಲಸದ ಬಗ್ಗೆ ಗ್ಯಾರಂಟಿ ಇರಲ್ಲ. ಒಂದು ವೇಳೆ ಕೆಲಸ ಹೋದ್ರೆ ಇಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿದ್ರೂ ಬೆಲೆ ಇಲ್ವಾ ಎನ್ನುವ ಪ್ರಶ್ನೆಯೊಂದು ಮೂಡುತ್ತದೆ. ಇದೀಗ ಇಲ್ಲೊಬ್ಬ ಉದ್ಯೋಗಿಗೂ ಅದೇ ರೀತಿ ಆಗಿದೆ. ಕಳೆದ ಹನ್ನೊಂದು ವರ್ಷದಿಂದ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದು, ಈ ಬಗ್ಗೆ ವೃತ್ತಿಪರರೊಬ್ಬರು ಲಿಂಕ್ಡ್ ಇನ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಇದು ಕೆಲಸದ ಸ್ಥಳದ ನಿಷ್ಠೆ, ಉದ್ಯೋಗ ಭದ್ರತೆ ಹಾಗೂ ವೃತ್ತಿ ಬೆಳವಣಿಗೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

ಸುರೇಶ್ ಪಂತ್ (Suresh Pant) ಎಂಬ ವ್ಯಕ್ತಿ ತಮ್ಮ ಲಿಂಕ್ಡ್ ಇನ್ ಖಾತೆಯಲ್ಲಿ ವೃತ್ತಿ ಜೀವನದಲ್ಲಾದ ಬದಲಾವಣೆಯ ಬಗ್ಗೆ ಹೇಳಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ, ಒಂದೇ ಕಂಪನಿಯಲ್ಲಿ 11 ವರ್ಷ ಕೆಲಸ ಮಾಡಿದ ನಂತರ ಇತ್ತೀಚೆಗೆ ನನ್ನ 2 ತಿಂಗಳ ನೋಟಿಸ್ ಅವಧಿಯ ಸಂಬಳವನ್ನು ನೀಡದೇ ನನ್ನನ್ನು ಕೆಲಸದಿಂದ ತೆಗೆದುಹಾಕಲಾಯಿತು. ಈ ಅನುಭವವು ನನಗೆ ಕಠಿಣವಾಗಿತ್ತು. ಆದರೆ ಮುಖ್ಯವಾದ ಪಾಠವನ್ನು ಕಲಿಸಿತು. ನಿಮ್ಮ ಎಲ್ಲಾ ಸಮಯ ಹಾಗೂ ನಿಷ್ಠೆಯನ್ನು ಎಂದಿಗೂ ಒಂದು ಕಂಪನಿಗೆ ಮಾತ್ರ ನೀಡಬೇಡಿ ಎಂದು ಹೇಳಿದ್ದಾರೆ.

ಲಿಂಕ್ಡ್ ಇನ್ ಪೋಸ್ಟ್ ಇಲ್ಲಿದೆ

ಯಾವುದೇ ಕಂಪನಿ ಶಾಶ್ವತವಲ್ಲ. ಯಾವುದೇ ಸಮಯದಲ್ಲಿ ಉದ್ಯೋಗಿಗಳನ್ನು ಬದಲಾಯಿಸಬಹುದು. ಹೀಗಾಗಿ ವೃತ್ತಿಪರರು ತಮ್ಮ ಕೌಶಲ್ಯಗಳನ್ನು ಸುಧಾರಿಸಲು, ಸಂಪರ್ಕಗಳನ್ನು ನಿರ್ಮಿಸಲು ಮತ್ತು ಭವಿಷ್ಯಕ್ಕಾಗಿ ತಯಾರಿ ನಡೆಸಲು ಹೂಡಿಕೆ ಮಾಸಬೇಕು. ನಿಮ್ಮ ಕೌಶಲ್ಯ ಮತ್ತು ಅನುಭವವೇ ನಿಮ್ಮ ನಿಜವಾದ ಭದ್ರತೆ, ಯಾವುದೇ ಕಂಪನಿಯಲ್ಲ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ತಿಂಗಳಿಗೆ ಲಕ್ಷ ಸಂಪಾದನೆಯಿದ್ರೂ ವೀಕೆಂಡ್‌ನಲ್ಲಿ ರ‍್ಯಾಪಿಡೋ ಬೈಕ್ ಓಡಿಸುವ ಬೆಂಗಳೂರಿನ ಸಾಫ್ಟ್‌ವೇರ್‌ ಇಂಜಿನಿಯರ್

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕಂಪನಿಯು ನಿಷ್ಠಾವಂತ ಮತ್ತು ಕಠಿಣ ಪರಿಶ್ರಮಿ ಉದ್ಯೋಗಿಗಳನ್ನು ನಿರೀಕ್ಷಿಸುತ್ತದೆ. ಆದರೆ ಉದ್ಯೋಗಿಗಳ ಪ್ರಯತ್ನಗಳಿಗೆ ಕಡಿಮೆ ಫಲಿತಾಂಶ ಬಂದಾಗ ವೆಚ್ಚ ಕಡಿತ ಮತ್ತು ವಜಾಗೊಳಿಸುವ ನೆಪಗಳನ್ನು ನೀಡುತ್ತಾರೆ ಎಂದು ವಾಸ್ತವ ಸ್ಥಿತಿಯ ಬಗ್ಗೆ ಕಾಮೆಂಟ್ ನಲ್ಲಿ ಹೇಳಿದ್ದಾರೆ. ಇನ್ನೊಬ್ಬರು, ಖಾಸಗಿ ಕಂಪನಿಯಲ್ಲಿ ದುಡಿಯುವವರು ಎಲ್ಲಾದಕ್ಕೂ ಸಿದ್ಧವಾಗಿರಬೇಕು ಎಂದು ಹೇಳಿದ್ದಾರೆ. ಮತ್ತೊಬ್ಬರು, ಹನ್ನೊಂದು ವರ್ಷ ಕೆಲಸ ಮಾಡಿದ ಅನುಭವ ನಿಮ್ಮಲ್ಲಿದೆ. ನೀವು ನಿಮ್ಮ ಕೌಶಲ್ಯ ಅಭಿವೃದ್ಧಿ ಪಡಿಸಿ ಬೇರೆ ಕೆಲಸ ಹುಡುಕಿ. ನಿಮ್ಮ ಪ್ರತಿಭೆಗೆ ತಕ್ಕ ಕೆಲಸ ಸಿಗುತ್ತದೆ ಎಂದು ಧೈರ್ಯ ತುಂಬಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

12 ವರ್ಷಗಳ ಅಭಿವೃದ್ಧಿ, ವಿಶ್ವಾಸ ಮತ್ತು ಸಾರ್ವಜನಿಕ ಕಲ್ಯಾಣ: ದೇಶವನ್ನು ಬಲಪಡಿಸುವಲ್ಲಿ ಯಾವುದೇ ಅವಕಾಶ ಬಿಟ್ಟುಕೊಟ್ಟಿಲ್ಲ: ಪ್ರಧಾನಿ ಮೋದಿ – Kannada News

ನವದೆಹಲಿ, ಜೂನ್ 09: ಭಾರತದ ಪ್ರಧಾನಿಯಾಗಿ ಅತ್ಯಂತ ಯಶಸ್ವಿಯಾಗಿ ಮತ್ತು ಗೌರವಾನ್ವಿತವಾಗಿ 12 ವರ್ಷಗಳ ಸುದೀರ್ಘ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಐತಿಹಾಸಿಕ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ದೇಶದ ಜನತೆಗೆ ಭಾವುಕ ಹಾಗೂ ಕೃತಜ್ಞತೆಯ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಭಾರತದ ಇತಿಹಾಸದಲ್ಲೇ ಸತತವಾಗಿ ಅತಿ ದೀರ್ಘ ಅವಧಿಗೆ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅವರು, ಮುಂಬರುವ ದಿನಗಳಲ್ಲೂ ದೇಶವನ್ನು ಸಮೃದ್ಧಿಯ ಪಥದಲ್ಲಿ ಮುನ್ನಡೆಸುವ ಅಚಲ ಸಂಕಲ್ಪವನ್ನು ಪುನರುಚ್ಚರಿಸಿದ್ದಾರೆ.

ಮಂಗಳವಾರ (ಜೂನ್ 9, 2026) ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಆಡಳಿತದ ಸಾಧನೆ ಮತ್ತು ದೇಶದ ಪರಿವರ್ತನೆಯನ್ನು ಸ್ಮರಿಸುತ್ತಾ ಪ್ರಧಾನಿ ಮೋದಿ ಅವರು ಹಂಚಿಕೊಂಡಿರುವ ದೇಶಪ್ರೇಮದ ಸಂದೇಶದ ಮುಖ್ಯಾಂಶಗಳು ಇಲ್ಲಿವೆ.

ದೇಶದ ಆಶೀರ್ವಾದವೇ ನನ್ನ ಶಕ್ತಿ
ತಮ್ಮ ಸುದೀರ್ಘ ಆಡಳಿತದ ಯಶಸ್ಸನ್ನು ದೇಶದ ಜನತೆಗೆ ಸಮರ್ಪಿಸಿದ ಪ್ರಧಾನಿ ಮೋದಿ, ರಾಷ್ಟ್ರದ ಪ್ರತಿಯೊಬ್ಬ ನಾಗರಿಕನ ಸಬಲೀಕರಣವೇ ತಮ್ಮ ಸರ್ಕಾರದ ಪರಮೋಚ್ಚ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

ನಮ್ಮ ಸರ್ಕಾರದ ಕಳೆದ 12 ವರ್ಷಗಳು ಸಂಪೂರ್ಣವಾಗಿ ಜನರ ನಂಬಿಕೆ, ದೇಶದ ಅಭಿವೃದ್ಧಿ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಮೀಸಲಾಗಿವೆ. 1.4 ಶತಕೋಟಿ ದೇಶವಾಸಿಗಳ ಅಚಲವಾದ ಆಶೀರ್ವಾದ ಮತ್ತು ‘ಮೊದಲು ರಾಷ್ಟ್ರ’ ಎಂಬ ದೃಢ ಮನೋಭಾವದೊಂದಿಗೆ, ನಾವು ನಮ್ಮ ದೇಶದ ಯುವಕರು, ಮಹಿಳೆಯರು ಹಾಗೂ ಅನ್ನದಾತ ರೈತ ಸಹೋದರ ಸಹೋದರಿಯರನ್ನು ಸಬಲೀಕರಣಗೊಳಿಸುವಲ್ಲಿ ಯಾವುದೇ ಅವಕಾಶವನ್ನು ಬಿಟ್ಟುಕೊಟ್ಟಿಲ್ಲ ಎಂದಿದ್ದಾರೆ.

ಮತ್ತಷ್ಟು ಓದಿ: ಸುದೀರ್ಘ ಪ್ರಧಾನಿ: ನೆಹರು ದಾಖಲೆ ಮುರಿದ ನರೇಂದ್ರ ಮೋದಿ ನಾಯಕತ್ವ ಕೊಂಡಾಡಿದ ಚಂದ್ರಬಾಬು ನಾಯ್ಡು, ಹೆಚ್.ಡಿ. ದೇವೇಗೌಡ

ಜಾಗತಿಕ ರಂಗದಲ್ಲಿ ಭಾರತಕ್ಕೆ ಹೊಸ ಗುರುತು
ಮೂಲಸೌಕರ್ಯಗಳ ಆಧುನೀಕರಣದಿಂದ ಹಿಡಿದು ಜಗತ್ತೇ ಬೆರಗಾಗುವಂತೆ ಮಾಡಿರುವ ಡಿಜಿಟಲ್ ಕ್ರಾಂತಿಯವರೆಗೆ ಭಾರತದ ಅವಿರತ ಪ್ರಯತ್ನಗಳನ್ನು ಪ್ರಧಾನಿ ಉಲ್ಲೇಖಿಸಿದ್ದಾರೆ. ಈ ಬಹುಮುಖಿ ಪ್ರಗತಿಯ ಫಲವಾಗಿ ಇಂದು ಇಡೀ ಪ್ರಪಂಚದಾದ್ಯಂತ ಭಾರತವು ಅತ್ಯಂತ ಗೌರವಾನ್ವಿತ ಮತ್ತು ಹೊಸ ಗುರುತನ್ನು ಗಳಿಸಿದೆ ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ. 2047 ರ ವೇಳೆಗೆ ‘ವಿಕಸಿತ ಭಾರತ’ (ಅಭಿವೃದ್ಧಿ ಹೊಂದಿದ ಭಾರತ) ಎಂಬ ಮಹತ್ವಾಕಾಂಕ್ಷೆಯ ಸಂಕಲ್ಪವನ್ನು ಸಾಕಾರಗೊಳಿಸಲು ನಾವು ಸೇವೆ, ಉತ್ತಮ ಆಡಳಿತ ಮತ್ತು ಸಮೃದ್ಧಿಯ ಇದೇ ಹಾದಿಯಲ್ಲಿ ಇನ್ನಷ್ಟು ವೇಗವಾಗಿ ಮುಂದುವರಿಯಲಿದ್ದೇವೆ ಎಂದು ಅವರು ಭರವಸೆ ನೀಡಿದ್ದಾರೆ.

ಭಾರತದ ರಾಜಕೀಯ ಇತಿಹಾಸದಲ್ಲೇ ಅಪ್ರತಿಮ ಮೈಲಿಗಲ್ಲು
ಮೇ 26, 2014 ರಂದು ಪ್ರಧಾನಿ ಮೋದಿ ಅವರು ಮೊದಲ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ತದನಂತರ ಜೂನ್ 9, 2024 ರಂದು ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಜನಾಶೀರ್ವಾದ ಪಡೆಯುವ ಮೂಲಕ ಅವರು ಸ್ವತಂತ್ರ ಭಾರತದ ರಾಜಕೀಯ ಇತಿಹಾಸದಲ್ಲೇ ಭವ್ಯ ಚರಿತ್ರೆ ಬರೆದರು.

ಐತಿಹಾಸಿಕ ಮೈಲಿಗಲ್ಲು: ಜೂನ್ 9, 2026 ರ ಇಂದಿನ ದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರದಲ್ಲಿ ನಿರಂತರವಾಗಿ 4,398 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ದೀರ್ಘಾವಧಿಯೊಂದಿಗೆ, ಸ್ವತಂತ್ರ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಹೊಂದಿದ್ದ ಸತತ ಆಡಳಿತದ ದಾಖಲೆಯನ್ನು ಹಿಂದಿಕ್ಕಿರುವ ನರೇಂದ್ರ ಮೋದಿ ಅವರು, ಭಾರತದಲ್ಲಿ ಸತತವಾಗಿ ಅತಿ ಹೆಚ್ಚು ಕಾಲ ಚುನಾಯಿತರಾದ ಮೊದಲ ಪ್ರಧಾನಿ ಎಂಬ ಅಪ್ರತಿಮ ಜಾಗತಿಕ ಕೀರ್ತಿಗೆ ಪಾತ್ರರಾಗಿದ್ದಾರೆ.

ದಶಕದ ಸುಸ್ಥಿರ ಆಡಳಿತ, ಆರ್ಥಿಕ ಸ್ಥಿರತೆ ಮತ್ತು ಬಡವರ ಕಲ್ಯಾಣ ಯೋಜನೆಗಳ ಮೂಲಕ ನವ ಭಾರತದ ನಾಯಕನಾಗಿ ಹೊರಹೊಮ್ಮಿರುವ ಪ್ರಧಾನಿ ಮೋದಿಯವರ ಈ ಯಶಸ್ಸು ಇಡೀ ದೇಶದ ಪ್ರಜಾಪ್ರಭುತ್ವದ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ವಿಶ್ಲೇಷಕರು ಬಣ್ಣಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 3:16 pm, Tue, 9 June 26

Source link

Karnataka Teaching Jobs: ಅತಿಥಿ ಉಪನ್ಯಾಸಕ ಹುದ್ದೆಗಳ ಆಕಾಂಕ್ಷಿಗಳಿಗೆ ಸುವರ್ಣಾವಕಾಶ; ನೇಮಕಾತಿ ವೇಳಾಪಟ್ಟಿ ಪ್ರಕಟ! – Kannada News

ಅತಿಥಿ ಉಪನ್ಯಾಸಕರ ಹುದ್ದೆImage Credit source: Pinterest

ಕಾಲೇಜು ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರವು ಭರ್ಜರಿ ಸುದ್ದಿ ನೀಡಿದೆ. ಕಾಲೇಜು ಶಿಕ್ಷಣ ಇಲಾಖೆಯು 2026-27ನೇ ಶೈಕ್ಷಣಿಕ ಸಾಲಿಗಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಸರ್ಕಾರಿ ಸಂಸ್ಕೃತ ಮತ್ತು ಚಿತ್ರಕಲಾ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ (Guest Lecturers) ಹುದ್ದೆಗಳ ಆಯ್ಕೆ ಪ್ರಕ್ರಿಯೆಯ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಬೋಧನಾ ಕಾರ್ಯಭಾರಕ್ಕೆ ಅನುಗುಣವಾಗಿ ಮೆರಿಟ್ ಮತ್ತು ಕೌನ್ಸೆಲಿಂಗ್ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.

ಜೂನ್ 21 ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ:

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜೂನ್ 21 ರಿಂದ ಇಲಾಖೆಯ ಅಧಿಕೃತ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅತಿಥಿ ಉಪನ್ಯಾಸಕ ಹುದ್ದೆಗಳಿಗೆ (ಗ್ರಂಥಪಾಲಕರು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರು ಸೇರಿದಂತೆ) ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ತಮ್ಮ ಅರ್ಜಿಯನ್ನು ಪೂರ್ಣಗೊಳಿಸಬೇಕಾಗಿದ್ದು, ಅರ್ಜಿ ಸಲ್ಲಿಸಲು ಜೂನ್ 27 ಕೊನೆಯ ದಿನಾಂಕವಾಗಿರುತ್ತದೆ.

ಜೂನ್ 28 ಕ್ಕೆ ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟ:

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ವಿದ್ಯಾರ್ಹತೆ ಮತ್ತು ಅರ್ಹತೆಯ ಆಧಾರದ ಮೇಲೆ ಸಿದ್ಧಪಡಿಸಲಾದ ತಾತ್ಕಾಲಿಕ ಮೆರಿಟ್ ಪಟ್ಟಿಯನ್ನು (Temporary Merit List) ಜೂನ್ 28 ರಂದು ಅಧಿಕೃತವಾಗಿ ಪ್ರಕಟಿಸಲಾಗುವುದು. ಅಭ್ಯರ್ಥಿಗಳು ತಮ್ಮ ಅರ್ಜಿಯಲ್ಲಿ ಯಾವುದೇ ಬದಲಾವಣೆ ಅಥವಾ ತಪ್ಪುಗಳಿದ್ದಲ್ಲಿ ಅವುಗಳನ್ನು ಸರಿಪಡಿಸಲು ಜೂನ್ 29 ಮತ್ತು 30 ರವರೆಗೆ ಎರಡು ದಿನಗಳ ಕಾಲ ಅರ್ಜಿ ತಿದ್ದುಪಡಿ (Edit Option) ಮಾಡಲು ಇಲಾಖೆಯು ಅವಕಾಶ ನೀಡಿದೆ.

ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ; 6,565 ಟೆಕ್ನೀಷಿಯನ್ ಹುದ್ದೆಗೆ ಅರ್ಜಿ ಆಹ್ವಾನ

ಜುಲೈ 1 ಕ್ಕೆ ಕಾರ್ಯಭಾರ (Workload) ವಿವರ ಬಿಡುಗಡೆ:

ರಾಜ್ಯದ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಲಭ್ಯವಿರುವ ಒಟ್ಟು ಬೋಧನಾ ಕಾರ್ಯಭಾರದ (Workload) ಸಂಪೂರ್ಣ ವಿವರಗಳನ್ನು ಜುಲೈ 01, 2026 ರಂದು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಇದರಿಂದ ಅಭ್ಯರ್ಥಿಗಳು ತಮಗೆ ಸೂಕ್ತವಾದ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲು ಸುಲಭವಾಗುತ್ತದೆ. ತದನಂತರ ಮೆರಿಟ್ ಪಟ್ಟಿಯ ಆಧಾರದ ಮೇಲೆ ಕಾಲೇಜು ಆಯ್ಕೆಗಾಗಿ ಜುಲೈ 07 ರಿಂದ ಆನ್‌ಲೈನ್ ಕೌನ್ಸೆಲಿಂಗ್ (Online Counselling) ಪ್ರಕ್ರಿಯೆಯು ಅಧಿಕೃತವಾಗಿ ಆರಂಭವಾಗಲಿದೆ.

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ:

ಅತಿಥಿ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ, ಅರ್ಜಿ ಸಲ್ಲಿಕೆ ಮತ್ತು ಮುಂದಿನ ಅಪ್‌ಡೇಟ್‌ಗಳಿಗಾಗಿ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್‌ ಆದ dce.karnataka.gov.in ಗೆ ಭೇಟಿ ನೀಡಲು ಕೋರಲಾಗಿದೆ. ಕೊನೆಯ ದಿನದ ವರೆಗೆ ಕಾಯದೇ ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೋಮವಾರದ ಪರೀಕ್ಷೆಯಲ್ಲಿ ಹಿನ್ನಡೆ ಕಂಡ ಬಾಬಿ ಡಿಯೋಲ್ ನಟನೆಯ ‘ಬಂದರ್’ ಸಿನಿಮಾ – Kannada News

ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಹೊಸ ಸಿನಿಮಾ ‘ಬಂದರ್’ (Bandar) ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಿಲ್ಲ. ಬಾಬಿ ಡಿಯೋಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಕ್ರೈಮ್ ಥ್ರಿಲ್ಲರ್ ಸಿನಿಮಾ ಜೂನ್ 4ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಯಿತು. ಚಿತ್ರದಲ್ಲಿ ಬಾಬಿ ಡಿಯೋಲ್ (Bobby Deol) ಅವರ ನಟನೆಗೆ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆಯಾದರೂ, ಇದು ಗಲ್ಲಾಪೆಟ್ಟಿಗೆಯ ಗಳಿಕೆಯಲ್ಲಿ ದೊಡ್ಡ ಮಟ್ಟದ ಯಶಸ್ಸು ತರುತ್ತಿಲ್ಲ. ಮೊದಲ ಸೋಮವಾರ (ಜೂನ್ 9) ಚಿತ್ರದ ಕಲೆಕ್ಷನ್‌ನಲ್ಲಿ ಭಾರಿ ಕುಸಿತ ಕಂಡುಬಂದಿದೆ.

ಪ್ರಸಿದ್ಧ ಬಾಕ್ಸ್ ಆಫೀಸ್ ಟ್ರ್ಯಾಕರ್ ‘ಸ್ಯಾಕ್ನಿಲ್ಕ್’ ವರದಿಯ ಪ್ರಕಾರ, ‘ಬಂದರ್’ ಸಿನಿಮಾ ತನ್ನ ನಾಲ್ಕನೇ ದಿನವಾದ ಸೋಮವಾರದಂದು ಅತ್ಯಂತ ಕಡಿಮೆ ಗಳಿಕೆಯನ್ನು ದಾಖಲಿಸಿದೆ. ಚಿತ್ರವು ಸೋಮವಾರ ಕೇವಲ 24 ಲಕ್ಷ ರೂಪಾಯಿ ಗಳಿಸಲಷ್ಟೇ ಶಕ್ತವಾಗಿದೆ. ಮೊದಲ ದಿನ (ಗುರುವಾರ) 50 ಲಕ್ಷ ರೂಪಾಯಿ ಕಲೆಕ್ಷನ್ ಆಗಿತ್ತು. ಶನಿವಾರ 95 ಲಕ್ಷ ರೂಪಾಯಿ, ಭಾನುವಾರ 1 ಕೋಟಿ ರೂಪಾಯಿ ಗಳಿಸಿತ್ತು.

ವಿಭಿನ್ನ ಕಥಾಹಂದರ ಹೊಂದಿರುವ ‘ಬಂದರ್’ ಸಿನಿಮಾಗೆ ಚಿತ್ರಮಂದಿರಗಳಲ್ಲಿ ಇತರ ದೊಡ್ಡ ಸಿನಿಮಾಗಳಿಂದ ಭಾರಿ ಪೈಪೋಟಿ ಎದುರಾಗಿದೆ. ವರುಣ್ ಧವನ್ ನಟನೆಯ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’, ಹಾಲಿವುಡ್ ಹಾರರ್ ಸಿನಿಮಾ ‘ಒಬ್ಸೆಷನ್’, ರಾಮ್ ಚರಣ್ ನಟನೆಯ ತೆಲುಗು ಚಿತ್ರ ‘ಪೆದ್ದಿ’ ಮತ್ತು ಹೊಸ ಹೀ-ಮ್ಯಾನ್ ಸಿನಿಮಾ ‘ಮಾಸ್ಟರ್ಸ್ ಆಫ್ ದಿ ಯೂನಿವರ್ಸ್’ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿ ನೀಡುತ್ತಿವೆ.

ಇದನ್ನೂ ಓದಿ: ‘ಹಸಿಬಿಸಿ ಸೀನ್ ಬಗ್ಗೆ ಪತ್ನಿಗೆ ಆಮೇಲೆ ಗೊತ್ತಾಗಿದ್ದರೆ ಸಂಕಷ್ಟಕ್ಕೆ ಸಿಲುಕುತ್ತಿದ್ದೆ’: ಬಾಬಿ ಡಿಯೋಲ್

ನೈಜ ಘಟನೆಗಳಿಂದ ಪ್ರೇರಿತವಾಗಿರುವ ಈ ಕ್ರೈಮ್ ಥ್ರಿಲ್ಲರ್ ಚಿತ್ರಕ್ಕೆ ಸುದೀಪ್ ಶರ್ಮಾ ಮತ್ತು ಅಭಿಷೇಕ್ ಬ್ಯಾನರ್ಜಿ ಕಥೆ ಬರೆದಿದ್ದಾರೆ. ಚಿತ್ರದಲ್ಲಿ ಬಾಬಿ ಡಿಯೋಲ್ ಅವರು ಚಲನಚಿತ್ರ ರಂಗದಲ್ಲಿ ಸತತ ಸೋಲುಗಳನ್ನು ಕಂಡು ಕೆರಿಯರ್‌ನಲ್ಲಿ ಹಿನ್ನಡೆ ಅನುಭವಿಸುತ್ತಿರುವ ಗಾಯಕ ಮತ್ತು ನಟ ಸಮರ್ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಗಾಯತ್ರಿ (ಸಪ್ನಾ ಪಬ್ಬಿ) ಎಂಬ ಮಹಿಳೆ ಸಮರ್ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದಾಗ ಆತನ ಜೀವನ ಸಂಪೂರ್ಣವಾಗಿ ಬದಲಾಗುತ್ತದೆ. ಕಾನೂನು ಹೋರಾಟದ ಚಕ್ರವ್ಯೂಹದಲ್ಲಿ ಸಿಲುಕುವ ಸಮರ್, ‘ಬಂದರ್’ (ಕೋತಿ) ರೀತಿ ಒಂದೊಂದೇ ಅಡೆತಡೆಗಳನ್ನು ಹೇಗೆ ದಾಟಬೇಕಾಗುತ್ತದೆ ಎಂಬುದೇ ಚಿತ್ರದ ಮುಖ್ಯ ಕಥಾಹಂದರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರೈಲುಗಳಲ್ಲಿ ಇನ್ಮುಂದೆ ಮತ್ತೆ ಅಡುಗೆ ಶುರು; ಆದರೆ, ಎಲ್​ಪಿಜಿ ಬದಲು ಇಂಡಕ್ಷನ್ ಸ್ಟೌವ್ ಬಳಲು ನಿರ್ಧಾರ – Kannada News

ನವದೆಹಲಿ, ಜೂನ್ 9: ಎಲ್‌ಪಿಜಿ (LPG) ಅನಿಲ ಪೂರೈಕೆಯಲ್ಲಿನ ನಿರ್ಬಂಧ ಮತ್ತು ಸುರಕ್ಷತೆಯ ದೃಷ್ಟಿಯಿಂದ, ರೈಲುಗಳಲ್ಲಿ ಅಡುಗೆ ಮಾಡುವ ವಿಧಾನವನ್ನು ಬದಲಾಯಿಸಲು ಭಾರತೀಯ ರೈಲ್ವೆ ಮತ್ತು ಐಆರ್‌ಸಿಟಿಸಿ (IRCTC) ಮುಂದಾಗಿವೆ. ಇನ್ನು ಮುಂದೆ ರೈಲು ಪ್ರಯಾಣಿಕರಿಗೆ ಒದಗಿಸಲು ಆಹಾರ ತಯಾರಿಕೆಗೆ ಎಲ್​ಪಿಜಿ ಬದಲು ಇಂಡಕ್ಷನ್ ಸ್ಟೌವ್ ಬಳಸುವ ಪ್ರಸ್ತಾಪ ಇದೆ. ಹಾಗೆಯೇ, ರೈಲುಗಳ ಅಡುಗೆ ಕೋಣೆಯಲ್ಲೂ (ಪ್ಯಾಂಟ್ರಿ ರೂಮ್) ಇಂಡಕ್ಷನ್ ಸ್ಟೌವ್‌ಗಳನ್ನು (Induction Stoves) ಬಳಸಲು ನಿರ್ಧರಿಸಲಾಗಿದೆ. ಇದರೊಂದಿಗೆ ವರ್ಷಗಳ ನಂತರ ರೈಲು ಪ್ಯಾಂಟ್ರಿಯಲ್ಲಿ ಅಡುಗೆ ಭಾಗ್ಯ ಮರಳಿದಂತಾಗಿದೆ.

ರೈಲುಗಳಲ್ಲಿ ಎಲ್​ಪಿಜಿ ಸಿಲಿಂಡರ್‌ಗಳನ್ನು ಒಯ್ಯುವುದು ಅಗ್ನಿ ಅವಘಡಗಳ ದೃಷ್ಟಿಯಿಂದ ಅಪಾಯಕಾರಿ. ಈ ಕಾರಣಕ್ಕೆ ರೈಲಿನೊಳಗೆ ಎಲ್​ಪಿಜಿ ಇಡುವುದನ್ನು ಇಲಾಖೆ ನಿರ್ಬಂಧಿಸಿತ್ತು. ಈಗ ಗ್ಯಾಸ್ ಸಿಲಿಂಡರ್​ಗೆ ಪರ್ಯಾಯವಾಗಿರುವ ವಿದ್ಯುತ್ ಚಾಲಿತ ಇಂಡಕ್ಷನ್ ಸ್ಟೌವ್ ಬಳಸಲು ಅನುಮತಿಸುತ್ತಿದೆ. ಅಲ್ಲದೆ, ಗ್ಯಾಸ್ ಸಿಲಿಂಡರ್‌ಗಳ ಲಭ್ಯತೆಯ ಸಮಸ್ಯೆ ಇರುವುದರಿಂದ ಎಲೆಕ್ಟ್ರಿಕ್ ಸ್ಟೌವ್​ಗೆ ಮಣೆ ಹಾಕಲಾಗುತ್ತಿದೆ.

ಇದನ್ನೂ ಓದಿ: ಹೊಸ DL, ವಾಹನ ನಿಯಮ: ಪರವಾನಗಿ ಅವಧಿ ವಿಸ್ತರಣೆ, ಆನ್​ಲೈನ್​ನಲ್ಲೇ ವಾಹನ ಮಾಲಕತ್ವ ವರ್ಗಾವಣೆ

ರೈಲ್ವೆ ಅಡುಗೆ ವ್ಯವಸ್ಥೆಯನ್ನು ಹೆಚ್ಚು ಸುಸ್ಥಿರ ಮತ್ತು ಆಧುನಿಕವನ್ನಾಗಿ ಮಾಡುವ ಉದ್ದೇಶದಿಂದ ಈ ಬದಲಾವಣೆಯನ್ನು ತರಲಾಗುತ್ತಿದೆ. ಆರಂಭಿಕ ಹಂತದಲ್ಲಿ ಆಯ್ಕೆಮಾಡಿದ ಮಾರ್ಗಗಳಲ್ಲಿ ಮತ್ತು ರೈಲುಗಳಲ್ಲಿ ಇಂಡಕ್ಷನ್ ಆಧಾರಿತ ಅಡುಗೆ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಇದರಿಂದ ಅಡುಗೆ ಮಾಡುವ ಸ್ಥಳದಲ್ಲಿನ ಬಿಸಿಯನ್ನು ಕಡಿಮೆ ಮಾಡಲು ಮತ್ತು ಅಡುಗೆಯ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ.

ಸದ್ಯ ಇರುವ ವ್ಯವಸ್ಥೆಯಲ್ಲಿ ರೈಲುಗಳ ಪ್ಯಾಂಟ್ರಿಯಲ್ಲಿ ಹಲವು ವರ್ಷಗಳಿಂದ ಗ್ಯಾಸ್ ಸ್ಟೌವ್ ಬಳಸಲಾಗುತ್ತಿಲ್ಲ. ಅಡುಗೆ ಕೂಡ ಮಾಡಲಾಗುತ್ತಿಲ್ಲ. ಪ್ರಯಾಣಿಕರಿಗೆ ಊಟ ಸರಬರಾಜು ಮಾಡಲು ನಿರ್ದಿಷ್ಟ ರೈಲ್ವೆ ನಿಲ್ದಾಣಗಳಲ್ಲಿ ಕೇಂದ್ರೀಕೃತ ಅಡುಗೆ ಕೋಣೆಗಳ ವ್ಯವಸ್ಥೆ ಮಾಡಲಾಗಿರುತ್ತದೆ. ಈ ಸ್ಟೇಷನ್​ಗಳಲ್ಲಿರುವ ಅಡುಗೆ ಕೋಣೆಗಳಲ್ಲಿ ತಯಾರಾಗುವ ಆಹಾರವನ್ನು ಪ್ರಯಾಣಿಕರಿಗೆ ಒದಗಿಸಲಾಗುತ್ತದೆ. ಈಗ ಈ ಸೆಂಟ್ರಲೈಸ್ಡ್ ಕಿಚನ್​ಗಳಲ್ಲೂ ಎಲ್​ಪಿಜಿ ಬದಲು ಇಂಡಕ್ಷನ್ ಸ್ಟೌವ್ ತರುವ ವ್ಯವಸ್ಥೆ ಮಾಡಲಾಗುತ್ತಿದೆ.

ಇದನ್ನೂ ಓದಿ: ನಿಜವಾದ ಶ್ರೀಮಂತಿಕೆ ಲಕ್ಷುರಿ ಕಾರು, ಬಂಗಲೆಗಳಲ್ಲ; ಏನೆಲ್ಲಾ ಅಂಶಗಳಲ್ಲಿ ನೀವು ಪಾಸಾಗಬೇಕು?

ವಿದ್ಯುತ್ ಚಾಲಿತ ಇಂಡಕ್ಷನ್ ಸ್ಟೌವ್‌ಗಳನ್ನು ಬಳಸುವುದು ಸುಲಭವಾಗಿದ್ದು, ರೈಲುಗಳಲ್ಲಿನ ವಿದ್ಯುತ್ ವ್ಯವಸ್ಥೆಯನ್ನು ಇದಕ್ಕೆ ಅನುಗುಣವಾಗಿ ಮೇಲ್ದರ್ಜೆಗೇರಿಸಲಾಗುತ್ತದೆ. ಈ ಬದಲಾವಣೆಯು ಪ್ರಯಾಣಿಕರಿಗೆ ನೀಡುವ ಆಹಾರದ ತಯಾರಿಕೆಯನ್ನು ಹೆಚ್ಚು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link