ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ದಂಪತಿಯ ಪುತ್ರಿ ರಾಧ್ಯಾ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ರಿಷಬ್ ಶೆಟ್ಟಿ (Rishab Shetty) ಅವರು ಸಿನಿಮಾದ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಕುಟುಂಬಕ್ಕೆ ಸಮಯ ನೀಡುತ್ತಾರೆ. ಮಕ್ಕಳ ಹುಟ್ಟುಹಬ್ಬವನ್ನು ಅವರು ಸಂಭ್ರಮದಿಂದ ಆಚರಿಸುತ್ತಾರೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ದೊಡ್ಡ ಯಶಸ್ಸಿನ ಬಳಿಕ ಅವರಿಗೆ ಇನ್ನಷ್ಟು ಬೇಡಿಕೆ ಹೆಚ್ಚಿದೆ. ಹೊಸ ಸಿನಿಮಾದ ಕೆಲಸಗಳತ್ತ ಅವರು ಗಮನ ಹರಿಸಿದ್ದಾರೆ. ಪರಭಾಷೆಯಿಂದಲೂ ಅವರಿಗೆ ಬೇಡಿಕೆ ಬಂದಿದೆ. ಈ ಎಲ್ಲ ಕೆಲಸಗಳ ನಡುವೆ ಅವರು ಪುತ್ರಿ ರಾಧ್ಯಾ (Raadya) ಹುಟ್ಟುಹಬ್ಬವನ್ನು ಭರ್ಜರಿಯಾಗಿ ಸೆಲಬ್ರೇಟ್ ಮಾಡಿದ್ದಾರೆ.
ಸುರಪುರ, ಮಾ.31: ಕೇವಲ ಎರಡು ಎಕರೆ ತುಂಡು ಭೂಮಿಗಾಗಿ ದಶಕಗಳಿಂದ ನಡೆಯುತ್ತಿದ್ದ ಕೌಟುಂಬಿಕ ಕಲಹವೊಂದು ಯುವಕನ ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಸುರಪುರ ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ 27 ವರ್ಷದ ಪರಮೇಶ್ವರ ಎಂಬ ಯುವಕನನ್ನು ಆತನ ದೊಡ್ಡಪ್ಪ ಹನುಮಂತರಾಯ ಮತ್ತು ಆತನ ಮಕ್ಕಳು ಸೇರಿ ತಲ್ವಾರ್, ಬರ್ಚಿ ಹಾಗೂ ಕಲ್ಲುಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಕೊಲೆಯಾದ ಪರಮೇಶ್ವರನ ತಂದೆ ಮಲ್ಲಪ್ಪ ಮತ್ತು ಆರೋಪಿ ಹನುಮಂತರಾಯ ಸಹೋದರರು. ತಲಾ 13 ಎಕರೆ ಜಮೀನು ಹಂಚಿಕೆಯಾಗಿದ್ದರೂ, ಮಲ್ಲಪ್ಪನ ಹೆಸರಿಗಿದ್ದ ಹೆಚ್ಚುವರಿ 2 ಎಕರೆ ಜಮೀನನ್ನು ಹನುಮಂತರಾಯ ಕಳೆದ 20 ವರ್ಷಗಳಿಂದ ಬಲವಂತವಾಗಿ ಉಳುಮೆ ಮಾಡುತ್ತಿದ್ದ. ತಂದೆಯ ಸಾವಿನ ನಂತರ ಮಗ ಪರಮೇಶ್ವರ ಪಂಚಾಯಿತಿ ನಡೆಸಿ, ಕಾನೂನು ಹೋರಾಟದ ಮೂಲಕ ಆ 2 ಎಕರೆ ಜಮೀನನ್ನು ವಾಪಸ್ ಪಡೆದಿದ್ದ. ಇದು ಹನುಮಂತರಾಯನ ಕುಟುಂಬದ ಆಕ್ರೋಶಕ್ಕೆ ಕಾರಣವಾಗಿತ್ತು.
ನಿನ್ನೆ ರಾತ್ರಿ ಪರಮೇಶ್ವರ ಮನೆ ಬಳಿ ನಿಂತಿದ್ದಾಗ, ಹನುಮಂತರಾಯ ತನ್ನ ಮಕ್ಕಳು ಮತ್ತು ಸಂಬಂಧಿಕರ ಗುಂಪು ಕಟ್ಟಿಕೊಂಡು ಅಟ್ಯಾಕ್ ಮಾಡಿದ್ದಾನೆ. ಗ್ರಾಮದ ರೇವಣಸಿದ್ದೇಶ್ವರ ದೇವಸ್ಥಾನದ ಮುಂಭಾಗದಲ್ಲೇ ಪರಮೇಶ್ವರನನ್ನು ಎಳೆದಾಡಿ, ಕಲ್ಲು ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಪರಮೇಶ್ವರನ ಸಹೋದರ ರೇವಣಸಿದ್ದನ ಮೇಲೂ ಹಲ್ಲೆ ನಡೆದಿದ್ದು, ಆತ ಗಾಯಗೊಂಡಿದ್ದಾನೆ. ತೀವ್ರ ರಕ್ತಸ್ರಾವವಾದ ಕಾರಣ ಪರಮೇಶ್ವರ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಮಾರಕಾಸ್ತ್ರಗಳ ಆರ್ಭಟಕ್ಕೆ ಹೆದರಿ ಗ್ರಾಮಸ್ಥರು ಜಗಳ ಬಿಡಿಸಲು ಹೋಗದ ಸ್ಥಿತಿ ನಿರ್ಮಾಣವಾಗಿತ್ತು.
ಘಟನಾ ಸ್ಥಳಕ್ಕೆ ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಒಟ್ಟು 21 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಕನ್ನಡದ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ (Rakshit Shetty) ಅವರ ನಿರ್ಮಾಣ ಸಂಸ್ಥೆಯಾದ ‘ಪರಂವಾ ಸ್ಟುಡಿಯೋಸ್’ಗೆ ದೆಹಲಿ ಹೈಕೋರ್ಟ್ ದೊಡ್ಡ ಮೊತ್ತದ ದಂಡ ವಿಧಿಸಿದೆ. ‘ಬ್ಯಾಚುಲರ್ ಪಾರ್ಟಿ’ (Bachelor Party) ಚಿತ್ರದಲ್ಲಿ ಅನುಮತಿಯಿಲ್ಲದೆ ಎರಡು ಹಾಡುಗಳನ್ನು ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 25 ಲಕ್ಷ ರೂಪಾಯಿ ಪಾವತಿಸುವಂತೆ ಕೋರ್ಟ್ ಆದೇಶಿಸಿದೆ ಎಂದು ‘ಬಾರ್ ಆ್ಯಂಡ್ ಬೆಂಚ್’ ವರದಿ ಮಾಡಿದೆ.
ಖ್ಯಾತ ಮ್ಯೂಸಿಕ್ ಕಂಪನಿ ‘ಎಮ್‌ಆರ್‌ಟಿ ಮ್ಯೂಸಿಕ್’ ಈ ದೂರು ದಾಖಲಿಸಿತ್ತು. 2020ರ ಹಕ್ಕುಸ್ವಾಮ್ಯ ಒಪ್ಪಂದದ ಪ್ರಕಾರ ‘ನ್ಯಾಯ ಎಲ್ಲಿದೆ’ ಮತ್ತು ‘ಒಮ್ಮೆ ನಿನ್ನನ್ನು’ ಎರಡು ಹಾಡುಗಳ ಮಾಲೀಕತ್ವ ತಮ್ಮದಾಗಿದೆ ಎಂದು ಸಂಸ್ಥೆ ವಾದಿಸಿತ್ತು. ಆದರೆ ‘ಬ್ಯಾಚುಲರ್ ಪಾರ್ಟಿ’ ಚಿತ್ರದಲ್ಲಿ ಈ ಹಾಡುಗಳನ್ನು ಅನುಮತಿ ಪಡೆಯದೇ ಬಳಸಿಕೊಳ್ಳಲಾಗಿತ್ತು ಎಂದು ಎಮ್‌ಆರ್‌ಟಿ ಮ್ಯೂಸಿಕ್ ಆರೋಪಿಸಿತ್ತು.
ವಿಚಾರಣೆ ವೇಳೆ ರಕ್ಷಿತ್ ಶೆಟ್ಟಿ ಮತ್ತು ತಂಡವು ತಮ್ಮ ಸಮರ್ಥನೆಯಾಗಿ ಕೆಲವು ವಾದಗಳನ್ನು ಮಂಡಿಸಿತ್ತು. ‘ನ್ಯಾಯ ಎಲ್ಲಿದೆ’ ಹಾಡನ್ನು ಕೇವಲ 7 ಸೆಕೆಂಡ್ ಮತ್ತು ‘ಒಮ್ಮೆ ನಿನ್ನನ್ನು’ ಹಾಡನ್ನು 31 ಸೆಕೆಂಡ್ ಮಾತ್ರ ಬಳಸಲಾಗಿದೆ. ಇದು ಅತೀ ಕಡಿಮೆ ಅವಧಿ ಆಗಿರುವುದರಿಂದ ಹಕ್ಕುಸ್ವಾಮ್ಯ ಉಲ್ಲಂಘನೆಯಾಗುವುದಿಲ್ಲ ಎಂದು ವಾದಿಸಲಾಗಿತ್ತು.
ಈ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ, ‘ಹಾಡುಗಳ ಬಳಕೆಯು ಕೇವಲ ಕಾಕತಾಳೀಯವಲ್ಲ. ಬದಲಾಗಿ ಸಿನಿಮಾದ ಕಥೆಯ ನಿರೂಪಣೆಗೆ ಪೂರಕವಾಗಿ ಮತ್ತು ವಾಣಿಜ್ಯ ಲಾಭಕ್ಕಾಗಿ ಉದ್ದೇಶಪೂರ್ವಕವಾಗಿ ಬಳಸಲಾಗಿದೆ’ ಎಂದು ಅಭಿಪ್ರಾಯಪಟ್ಟಿತು. ನಾಯಕ ಸಂಕಷ್ಟದಲ್ಲಿರುವಾಗ ‘ನ್ಯಾಯ ಎಲ್ಲಿದೆ’ ಹಾಡನ್ನು ಹಿನ್ನೆಲೆಯಲ್ಲಿ ಹಾಕಿರುವುದು ಒಂದು ಸೃಜನಾತ್ಮಕ ನಿರ್ಧಾರವಾಗಿದ್ದು, ಇದು ಹಕ್ಕುಸ್ವಾಮ್ಯದ ಅಡಿ ಬರುತ್ತದೆ ಎಂದು ಕೋರ್ಟ್ ಹೇಳಿದೆ.
ನ್ಯಾಯಾಲಯವು ರಕ್ಷಿತ್ ಶೆಟ್ಟಿ ಅವರಿಗೆ ಜೈಲು ಶಿಕ್ಷೆ ವಿಧಿಸುವುದರಿಂದ ವಿನಾಯಿತಿ ನೀಡಿದೆಯಾದರೂ, ಹಣಕಾಸಿನ ವಿಚಾರದಲ್ಲಿ ಕಟ್ಟುನಿಟ್ಟಿನ ಆದೇಶ ನೀಡಿದೆ. ಹಕ್ಕುಸ್ವಾಮ್ಯ ಉಲ್ಲಂಘನೆಗಾಗಿ ಈಗಾಗಲೇ ಠೇವಣಿ ಇರಿಸಲಾಗಿರುವ 20 ಲಕ್ಷ ರೂಪಾಯಿಗಳನ್ನು ಎಮ್‌ಆರ್‌ಟಿ ಮ್ಯೂಸಿಕ್‌ಗೆ ನೀಡಲು ಸೂಚಿಸಿದೆ. ನ್ಯಾಯಾಲಯದ ಆದೇಶವನ್ನು ಸಮಯಕ್ಕೆ ಸರಿಯಾಗಿ ಪಾಲಿಸದ ಕಾರಣಕ್ಕೆ ಹೆಚ್ಚುವರಿಯಾಗಿ 5 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಬೆಂಗಳೂರು, (ಮಾರ್ಚ್ 31): ಈಗಾಗಲೇ ಬೆಂಗಳೂರು ಕರಗ ಶಕ್ತ್ಯೋತ್ಸವ (Bengaluru Karaga 2026) ಶುರುವಾಗಿದ್ದು, ನಾಳೆ (ಏ.1) ಕರ್ಪೂರ ಪೂಜೆ ನೆರವೇರಲಿದ್ದು, ಬಳಿಕ ಬುಧವಾರ ಮಧ್ಯರಾತ್ರಿ 12.30ರಿಂದ ಹೂವಿನ ಕರಗದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ ಏಪ್ರಿಲ್ 1ರ ರಾತ್ರಿ 9 ರಿಂದ ಮರುದಿನ ಅಂದರೆ ಏಪ್ರಿಲ್ ಬೆಳಗ್ಗೆ 7 ರವರೆಗೆ ಕರಗ ಉತ್ಸವ ಹೊರಡುವ ಕೆಲವು ರಸ್ತೆಯಲ್ಲಿ ವಾಹನ ಸಂಚಾರ ಬದಲಾವಣೆ ಮಾಡಲಾಗಿದೆ. ಹೀಗಾಗಿ ವಾಹನ ಸವಾರರು ಈ ಕೆಳಗೆ ನೀಡಿರುವ ರಸ್ತೆಗಳಲ್ಲಿ ಸಂಚರಿಸುವ ಬದಲು ಬೇರೆ ಮಾರ್ಗವಾಗಿ ತೆರಳಬೇಕು.
ಯಾವೆಲ್ಲಾ ರಸ್ತೆಯ ಮಾರ್ಗ ಬದಲು?
ಮಾರ್ಕೆಟ್ ಸರ್ಕಲ್ನಿಂದ ಅವೆನ್ಯೂ ಸರ್ಕಲ್ ಹಾಗೂ ಮೈಸೂರು ಬ್ಯಾಂಕ್ ಸರ್ಕಲ್ವರೆಗೂ ರಸ್ತೆ ಏಪ್ರಿಲ್ 1ರ ರಾತ್ರಿ 9ರಿಂದ ಏಪ್ರಿಲ್ 2ರ ಬೆಳಗ್ಗೆ 7ರವರೆಗೆ ಬಂದ್ ಇರಲಿದೆ. ಹೀಗಾಗಿ SPG ರಸ್ತೆ, ಟೌನ್ ಹಾಲ್ ಹಾಗೂ ಕೆಂಪೇಗೌಡ ರಸ್ತೆ ಮಾರ್ಗದಲ್ಲಿ ಸಂಚರಿಸಬೇಕೆಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಕರಗ ದೇಗುಲದಿಂದ ಹೊರಟು ಮರಳಿ ಬರುವವರಿಗೆ ಅಕ್ಕಿಪೇಟೆ, ಓಟಿಸಿ ಮುಖ್ಯ ರಸ್ತೆಗಳು ಸಹ ಸಂಪೂರ್ಣ ಬಂದ್ ಆಗಲಿವೆ. ಇದರಿಂದ ಈ ರಸ್ತೆ ಬದಲಿಗೆ ಪರ್ಯಾಯ ಮಾರ್ಗ ಬಳಸಬೇಕು ಎಂದು ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ.
ಬೆಂಗಳೂರು ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಅವರು ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು ಪೊಲೀಸ್ ಕಮಿಷನರ್ ಗೆ ಜಂಟಿ ಪೊಲೀಸ್ ಆಯುಕ್ತ ವಂಶೀಕೃಷ್ಣ, ಡಿಸಿಪಿ ಅಕ್ಷಯ್, ಯತೀಶ್ ಎನ್ ಸಾಥ್ ನೀಡಿದ್ದು, ಈ ವೇಳೆ ಕಗರ ಭದ್ರತೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಕರಗ ಸಾಗುವ ಮಾರ್ಗದುದ್ದಕ್ಕೂ ಸಿಸಿಟಿವಿ ಕಣ್ಗಾವಲು
ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್, ಕರಗ ಬೆಂಗಳೂರಿನ ಕೇಂದ್ರ ಹಾಗೂ ಪಶ್ಚಿಮ ಭಾಗದಲ್ಲಿ ಸುಮಾರು 22 ಕಿ.ಲೋ. ದೂರ ಸಾಗಲಿದೆ. ಹೀಗಾಗಿ ಯಾವುದೇ ಅಹಿತಕ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಮಾರ್ಗದುದ್ದಕ್ಕೂ ಸಿಸಿಟಿವಿ ಅಳವಡಿಸಲಾಗಿದೆ. ಹಾಗೇ ಪೊಲೀಸರನ್ನು ಸಹ ನಿಯೋಜಿಸಲಾಗಿದೆ. ಇನ್ನು ಕರಗ ಭದ್ರತೆಗೆಗಾಗಿ 2 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಬಾಲಿವುಡ್‌ನ ಸ್ಟಾರ್ ನಟ ರಣವೀರ್ ಸಿಂಗ್ ಅಭಿನಯದ ಮತ್ತು ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2: ದ ರಿವೆಂಜ್’ (Dhurandhar 2: The Revenge) ಚಿತ್ರ ಈಗ ಕಾನೂನು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಈ ಚಿತ್ರದ ಕಥೆಯು ತಾವು 2023ರಲ್ಲಿ ಬರೆದ ಸ್ಕ್ರಿಪ್ಟ್ ಅನ್ನು ಆಧರಿಸಿದೆ ಎಂದು ನಿರ್ದೇಶಕ ಸಂತೋಷ್ ಕುಮಾರ್ ಆರ್.ಎಸ್. ಅವರು ಆರೋಪಿಸಿದ್ದಾರೆ. ಅಲ್ಲದೇ ‘ಧುರಂಧರ್ 2’ (Dhurandhar 2) ಚಿತ್ರತಂಡದ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಅವರು ಆಕ್ರೋಶ ಹೊರಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂತೋಷ್ ಕುಮಾರ್ ಈ ಬಗ್ಗೆ ಪೂರ್ತಿ ವಿವರ ನೀಡಿದ್ದಾರೆ. ‘ನೀವೆಲ್ಲರೂ ಧುರಂಧರ್ 2 ಸಿನಿಮಾ ನೋಡಿರಬಹುದು. ಅದು ಎಲ್ಲೆಡೆ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಆದರೆ ಆ ಸಿನಿಮಾ ನೋಡಿದ ನಂತರವಷ್ಟೇ ಅದು ನನ್ನ ಕಥೆ ಎಂಬುದು ನನಗೆ ತಿಳಿಯಿತು. ನಾನು 2023ರಲ್ಲಿ ತುಂಬಾ ಕಷ್ಟಪಟ್ಟು ಈ ಸ್ಕ್ರಿಪ್ಟ್ ಬರೆದಿದ್ದೆ. ದೊಡ್ಡ ನಟರನ್ನು ಆಯ್ಕೆ ಮಾಡಬೇಕು ಎಂದರೆ ಕಾರ್ಪೊರೇಟ್ ಸಂಸ್ಥೆಗಳ ಬೆಂಬಲ ಬೇಕು ಎಂದು ತಿಳಿಸಿದ್ದರಿಂದ ನಾನು ಹಲವು ದೊಡ್ಡ ಪ್ರೊಡಕ್ಷನ್ ಕಂಪನಿಗಳಿಗೆ ಈ ಕಥೆ ವಿವರಿಸಿದ್ದೆ’ ಎಂದು ಹೇಳಿದ್ದಾರೆ.
ಸಂತೋಷ್ ಕುಮಾರ್ ಪ್ರಕಾರ ಅವರು ಈ ಸ್ಕ್ರಿಪ್ಟ್ ಅನ್ನು ಸೋನಿ ಪಿಕ್ಚರ್ಸ್, ಜೀ ಸ್ಟುಡಿಯೋಸ್, ಟಿ-ಸಿರೀಸ್ ಮತ್ತು ಧರ್ಮಾ ಪ್ರೊಡಕ್ಷನ್ಸ್ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳಿಗೆ ಹೋಗಿ ಹೇಳಿದ್ದರು. ಅಷ್ಟೇ ಅಲ್ಲದೇ, ಈ ಚಿತ್ರಕ್ಕೆ ನಟ ಆದಿತ್ಯ ರಾಯ್ ಕಪೂರ್ ಅವರನ್ನು ನಾಯಕನನ್ನಾಗಿ ಮಾಡುವ ಉದ್ದೇಶ ಹೊಂದಿದ್ದರು.
Writer Director Santosh Kumar RS accuses Aditya Dhar of being a
“Chindi Chor”..
Says, he had written the script as a cinema entertainment back in 2023 but Aditya Dhar stole it and showed it as a Political Propaganda.. Dhurandhar pic.twitter.com/LkgIZCDkM5
ಈ ಆರೋಪಕ್ಕೆ ಸಂಬಂಧಿಸಿದಂತೆ ಎಲ್ಲಾ ಪುರಾವೆಗಳು ತಮ್ಮ ಬಳಿ ಇವೆ ಎಂದು ಅವರು ಹೇಳಿದ್ದಾರೆ. ‘ನಾನು ನನ್ನ ಕಥೆಯನ್ನು ನವೆಂಬರ್ 2023ರಲ್ಲಿ ಸ್ಕ್ರೀನ್ ರೈಟರ್ಸ್ ಅಸೋಸಿಯೇಷನ್‌ನಲ್ಲಿ ನೋಂದಾಯಿಸಿದ್ದೇನೆ. ಇದಕ್ಕೆ ಸಂಬಂಧಿಸಿದ ಇಮೇಲ್ ದಾಖಲೆಗಳು ಮತ್ತು ಇತರ ಪುರಾವೆಗಳು ನನ್ನ ಬಳಿ ಇವೆ. ಕಥೆಯನ್ನು ಕಳ್ಳತನ ಮಾಡಿ ಈಗ ಸಿನಿಮಾ ಮಾಡಿದ್ದಾರೆ’ ಎಂದು ಅವರು ದೂರಿದ್ದಾರೆ.
ಸಿನಿಮಾದ ಬಗ್ಗೆ ಮತ್ತೊಂದು ಗಂಭೀರ ಆರೋಪ ಮಾಡಿರುವ ಸಂತೋಷ್, ‘ನಾನು ಈ ಕಥೆಯನ್ನು ಸಿನಿಮಾ ಮತ್ತು ಮನರಂಜನೆಗಾಗಿ ಬರೆದಿದ್ದೆ. ಆದರೆ ಅವರು ಇದನ್ನು ರಾಜಕೀಯ ಪ್ರಚಾರದ ವಸ್ತುವನ್ನಾಗಿ ಮಾಡಿದ್ದಾರೆ. ಇದು ನನಗೆ ತುಂಬಾ ನೋವುಂಟು ಮಾಡಿದೆ. ನನ್ನ ಕಥೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ನನಗೆ ಆದ ಅನ್ಯಾಯ ಯಾರಿಗೂ ಆಗಬಾರದು. ಅದಕ್ಕಾಗಿಯೇ ನಾನು ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದ್ದೇನೆ’ ಎಂದು ಹೇಳಿದ್ದಾರೆ.
ಬಾಗಲಕೋಟೆ, ಮಾ.31: ಉಪಚುನಾವಣೆ ಹಿನ್ನೆಲೆಯಲ್ಲಿ ಮುಗಳ್ಳೊಳ್ಳಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿ ಯವರಿಗೆ ಬಡವರ, ದಲಿತರ, ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಬಗ್ಗೆ ಯಾವುದೇ ಕಳಕಳಿ ಅಥವಾ ಕಾಳಜಿ ಇಲ್ಲ ಎಂದು ಅವರು ಆರೋಪಿಸಿದರು. ಬಿಜೆಪಿಯು ಬಡವರ ವಿರೋಧಿಗಳು ಮತ್ತು ಮಹಿಳೆಯರ ವಿರೋಧಿಗಳು ಎಂದು ಸಿಎಂ ಬಣ್ಣಿಸಿದರು. ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವ ವಿಚಾರದಲ್ಲಿ ಕಾಂಗ್ರೆಸ್‌ನ ಕೊಡುಗೆಯನ್ನು ಸಿಎಂ ಸಿದ್ದರಾಮಯ್ಯ ನೆನಪಿಸಿದರು. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ನಗರಸಭೆ, ಪುರಸಭೆ ಹಾಗೂ ನಗರಪಾಲಿಕೆಗಳಲ್ಲಿ ಇವತ್ತು 50% ಮೀಸಲಾತಿ ಜಾರಿಯಲ್ಲಿದ್ದರೆ, ಅದಕ್ಕೆ ರಾಜೀವ್ ಗಾಂಧಿಯವರು ಸಂವಿಧಾನಕ್ಕೆ ತಂದ 73ನೇ ಮತ್ತು 74ನೇ ತಿದ್ದುಪಡಿಗಳೇ ಕಾರಣ ಎಂದು ಅವರು ಹೇಳಿದರು. ಬಿಜೆಪಿ ಯವರಿಗೆ ಬಡವರ ಕಷ್ಟ ಸುಖ ಗೊತ್ತಿಲ್ಲ ಎಂದು ಪ್ರತಿಪಾದಿಸಿದರು.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಪಕ್ಷದ ಪಾತ್ರದ ಬಗ್ಗೆಯೂ ಸಿಎಂ ಸಿದ್ದರಾಮಯ್ಯ ಪ್ರಶ್ನೆಗಳನ್ನು ಎತ್ತಿದರು. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್. ಬಿಜೆಪಿ ಎಂದಾದರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿತ್ತೇ ಎಂದು ಅವರು ಕೇಳಿದರು. 1925ರಲ್ಲಿ ಆರ್.ಎಸ್.ಎಸ್ ಉದ್ಭವವಾಗಿದ್ದರೂ, ಸ್ವಾತಂತ್ರ್ಯ ಹೋರಾಟದಲ್ಲಿ ಎಂದಿಗೂ ಭಾಗವಹಿಸಿರಲಿಲ್ಲ ಎಂದು ಅವರು ಆರೋಪಿಸಿದರು. ಬದಲಾಗಿ, ಬಿಜೆಪಿಯವರು ಬ್ರಿಟಿಷರ ಜೊತೆ ಸೇರಿಕೊಂಡಿದ್ದರು. ಬ್ರಿಟಿಷರನ್ನು ಈ ದೇಶದಿಂದ ತೊಲಗಿಸಿದವರು ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಕಾಂಗ್ರೆಸ್‌ನವರು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಕಾಂಗ್ರೆಸ್ ಪಕ್ಷವು ಇಂದಿರಾ ಗಾಂಧಿ, ನೆಹರು, ರಾಜೀವ್ ಗಾಂಧಿ, ನರಸಿಂಹರಾವ್ ಮತ್ತು ಮನ್ಮೋಹನ್ ಸಿಂಗ್ ಅವರ ಕಾಲದಿಂದಲೂ ದೇಶದಲ್ಲಿ ಜಾತಿ ಪದ್ಧತಿ, ಬಡತನ, ನಿರುದ್ಯೋಗ ಮತ್ತು ಅನಕ್ಷರತೆ ನಿವಾರಣೆಗೆ ಸತತವಾಗಿ ಶ್ರಮಿಸುತ್ತಿದೆ ಎಂದು ಅವರು ತಿಳಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದ ವಿಧಾನದ ಬಗ್ಗೆಯೂ ಸಿಎಂ ಟೀಕಿಸಿದರು. ಬಿಜೆಪಿಯವರು ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದರೇ ಹೊರತು, ಜನರ ಆಶೀರ್ವಾದದ ಮೂಲಕ ನೇರವಾಗಿ ಅಧಿಕಾರಕ್ಕೆ ಬರಲಿಲ್ಲ ಎಂದು ಅವರು ಹೇಳಿದರು. 2008ರಲ್ಲಿ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾದಾಗ 110 ಸ್ಥಾನಗಳನ್ನು ಮಾತ್ರ ಗೆದ್ದಿದ್ದರು. ನಂತರ ಜಗದೀಶ್ ಶೆಟ್ಟರ್ ಮತ್ತು ಸದಾನಂದ ಗೌಡರು ಮುಖ್ಯಮಂತ್ರಿಗಳಾದರು. ಈ ಮೂವರೂ ಮುಖ್ಯಮಂತ್ರಿಗಳಾದರೂ ಯಾವುದೇ ಗಣನೀಯ ಕೆಲಸ ಮಾಡಲಿಲ್ಲ ಎಂದು ಸಿಎಂ ಆರೋಪಿಸಿದರು. 2019ರಲ್ಲಿ ಮತ್ತೆ ಅಧಿಕಾರಕ್ಕೆ ಬಂದರೂ, ನಾಲ್ಕು ವರ್ಷ ಅಧಿಕಾರದಲ್ಲಿದ್ದುಕೊಂಡು ಯಾವುದೇ ಪ್ರಮುಖ ಕೆಲಸ ಮಾಡಲಿಲ್ಲ ಎಂದು ದೂರಿದರು. ನಿರ್ದಿಷ್ಟವಾಗಿ, ಅಪ್ಪರ್ ಕೃಷ್ಣ ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಿಸುವ ಕಾರ್ಯವನ್ನು ಬಿಜೆಪಿ ಸರಕಾರ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಒತ್ತಿ ಹೇಳಿದರು. 2010ರಲ್ಲಿ ಸುಪ್ರೀಂ ಕೋರ್ಟ್‌ನಿಂದ ತೀರ್ಪು ಬಂದಿದ್ದರೂ, ಕಳೆದ 13 ವರ್ಷಗಳಿಂದ ಗೆಜೆಟ್ ನೋಟಿಫಿಕೇಶನ್ ಮಾಡಿಲ್ಲ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದರೂ (ಡಬಲ್ ಇಂಜಿನ್ ಸರಕಾರ) ಈ ಕೆಲಸವನ್ನು ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ರೈತರು ಜಮೀನು ಕಳೆದುಕೊಂಡಿದ್ದರೂ ಅವರಿಗೆ ಪರಿಹಾರವನ್ನೂ ನೀಡಿಲ್ಲ. ತಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ, ಸಚಿವ ಎಸ್.ಆರ್. ನಾಯಕ್, ಎಸ್.ಆರ್. ಪಾಟೀಲ್, ತಿಮ್ಮಾಪುರ, ಶಿವಾನಂದ ಪಾಟೀಲ್ ಅವರೊಂದಿಗೆ ಸೇರಿ ರೈತ ಮುಖಂಡರ ಜೊತೆ ಮಾತುಕತೆ ನಡೆಸಿ ಪರಿಹಾರ ನೀಡಲು ತೀರ್ಮಾನ ಮಾಡಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ನೀರಾವರಿ ಜಮೀನಿಗೆ ಪ್ರತಿ ಎಕರೆಗೆ 40 ಲಕ್ಷ ರೂಪಾಯಿ, ಒಣ ಜಮೀನಿಗೆ 30 ಲಕ್ಷ ರೂಪಾಯಿ ಪರಿಹಾರ ನೀಡಲು ನಿರ್ಧರಿಸಲಾಗಿದ್ದು, 16 ಮಂದಿಗೆ ಈಗಾಗಲೇ ಚೆಕ್‌ಗಳನ್ನು ನೀಡಲಾಗಿದೆ ಎಂದರು. ಬಿಜೆಪಿ ಯವರು ಇದನ್ನು ಮಾಡಿಲ್ಲ, ಹಾಗಾಗಿ ಅವರಿಗೆ ಮತ ನೀಡಬಾರದು ಎಂದು ಸಿದ್ದರಾಮಯ್ಯ ಜನರಿಗೆ ಕರೆ ನೀಡಿದರು.
ಇತ್ತೀಚಿನ ಕೆಲವು ವರ್ಷಗಳಲ್ಲಿ ಲಿವರ್‌ಗೆ ಸಂಬಂಧಿಸಿದ ರೋಗಗಳು ಗಮನಾರ್ಹವಾಗಿ ಹೆಚ್ಚುತ್ತಿವೆ. ಅದರಲ್ಲಿಯೂ ಲಿವರ್ ಸಮಸ್ಯೆಗಳು ಸಾಮಾನ್ಯವಾಗಿ ಫ್ಯಾಟಿ ಲಿವರ್‌ನಿಂದ (Fatty Liver) ಆರಂಭವಾಗುತ್ತವೆ, ಇದರ ಅರ್ಥ, ಲಿವರ್‌ನಲ್ಲಿ ಅಗತ್ಯಕ್ಕಿಂತ ಹೆಚ್ಚು ಕೊಬ್ಬು (ಫ್ಯಾಟ್) ಸಂಗ್ರಹವಾಗಿರುವುದು. ಆರಂಭದಲ್ಲಿ ಇದು ಹೆಚ್ಚಿನ ತೊಂದರೆ ನೀಡದಿದ್ದರೂ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು. ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಬಗ್ಗೆ ಸರಿಯಾಗಿ ತಿಳಿದುಕೊಂಡು ಅದರ ಲಕ್ಷಣಗಳನ್ನು ಅರಿತುಕೊಂಡು ಅದನ್ನು ತಡೆಗಟ್ಟಲು ಪ್ರಯತ್ನಿಸಬೇಕು. ಇಲ್ಲವಾದಲ್ಲಿ ಈ ರೀತಿಯ ಆರೋಗ್ಯ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುತ್ತದೆ.
ಫ್ಯಾಟಿ ಲಿವರ್ ಪ್ರಕಾರಗಳು
ನಾನ್- ಅಲ್ಕೊಹಾಲಿಕ್ ಫ್ಯಾಟಿ ಲಿವರ್
ಅಲ್ಕೊಹಾಲಿಕ್ ಫ್ಯಾಟಿ ಲಿವರ್ (ಮದ್ಯಪಾನದ ಪರಿಣಾಮ)
ಹಿಂದೆ ಹೆಚ್ಚು ಮದ್ಯಪಾನ ಮಾಡುವವರಲ್ಲಿ ಈ ಸಮಸ್ಯೆ ಕಂಡುಬರುತ್ತಿತ್ತು. ಆದರೆ ಈಗ ಮದ್ಯಪಾನ ಮಾಡದವರಲ್ಲೂ ಫ್ಯಾಟಿ ಲಿವರ್ ಕಾಣಿಸಿಕೊಳ್ಳುತ್ತಿದೆ. ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು, ಸ್ಥೂಲತೆ, ಹಾಗೂ ಅಸ್ವಸ್ಥ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಅಷ್ಟೇಅಲ್ಲ ಫಾಸ್ಟ್ ಫುಡ್ ಸೇವನೆ ಮತ್ತು ಶಾರೀರಿಕ ಚಟುವಟಿಕೆಯ ಕೊರತೆಯಿಂದ ಮಕ್ಕಳಲ್ಲೂ ಈ ಸಮಸ್ಯೆ ಹೆಚ್ಚುತ್ತಿದೆ.
ಫ್ಯಾಟಿ ಲಿವರ್ ಯಾವಾಗ ಅಪಾಯಕಾರಿಯಾಗಬಹುದು?
ಸಾಮಾನ್ಯವಾಗಿ ಫ್ಯಾಟಿ ಲಿವರ್ ಅಪಾಯಕಾರಿಯಾಗುವುದು ಲಿವರ್‌ನಲ್ಲಿ ಕೇವಲ ಕೊಬ್ಬು ಸಂಗ್ರಹವಾಗುವುದರಿಂದ ಮಾತ್ರವಲ್ಲ, ಅದರ ಜೊತೆಗೆ ಉರಿಯೂತ (ಇನ್ಫ್ಲಮೇಶನ್) ಉಂಟಾದಾಗ. ಈ ಸ್ಥಿತಿ ನಿಯಂತ್ರಣದಲ್ಲಿರದಿದ್ದರೆ ಲಿವರ್‌ಗೆ ಗಂಭೀರವಾಗಿ ಹಾನಿ ಉಂಟಾಗಬಹುದು. ಇದು ಫ್ಯಾಟಿ ಲಿವರ್‌ನ ಆರಂಭಿಕ ಹಂತದಲ್ಲಿ ಅಥವಾ ಮುಂದಿನ ಹಂತಗಳಲ್ಲಿ ಉಂಟಾಗಬಹುದು. ಹೈ ಬಿಪಿ ಅಥವಾ ಡಯಾಬಿಟಿಸ್ ಇರುವವರಲ್ಲಿ ಇದು ಇನ್ನಷ್ಟು ಅಪಾಯಕಾರಿಯಾಗಬಹುದು. ಇಂತಹ ಸಂದರ್ಭಗಳಲ್ಲಿ ಲಕ್ಷಣಗಳು ಬಹುಬೇಗ ಹೆಚ್ಚಾಗಬಹುದು ಮತ್ತು ಲಿವರ್‌ಗೆ ದೊಡ್ಡ ಮಟ್ಟದ ಹಾನಿ ಉಂಟಾಗುವ ಸಾಧ್ಯತೆ ಇದೆ.
ಯಾವುದೇ ಸಮಸ್ಯೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಫ್ಯಾಟಿ ಲಿವರ್ ಸಮಸ್ಯೆಯನ್ನು ಆರಂಭದಲ್ಲಿಯೇ ಗುರುತಿಸಿ ಸರಿಯಾದ ಕ್ರಮ ತೆಗೆದುಕೊಳ್ಳುವುದು ಅತ್ಯಂತ ಮುಖ್ಯ. ಆರೋಗ್ಯಕರ ಜೀವನಶೈಲಿ ಮತ್ತು ಸರಿಯಾದ ಆಹಾರ ಪದ್ಧತಿಯಿಂದ ಈ ಸಮಸ್ಯೆಯನ್ನು ನಿಯಂತ್ರಿಸಬಹುದು.
ಕಾರವಾರ, (ಮಾರ್ಚ್ 31): ಗಲ್ಫ್ ರಾಷ್ಟ್ರಗಳ ಕಾಳಗ ಕೊನೆ ಆಗುತ್ತಿಲ್ಲ. ಜನರ ಪರದಾಟ ಅಂತ್ಯವಾಗುತ್ತಿಲ್ಲ. ಗ್ಯಾಸ್ ಅಭಾವದಿಂದ ಹತ್ತಾರು ಸಮಸ್ಯೆ ಉದ್ಭವ ಆಗಿವೆ. ಗ್ಯಾಸ್ ಸಿಲಿಂಡರ್ (lpg Gas cylinder) ಸಿಗದಿದ್ದಕ್ಕೆ ಹಳ್ಳಿ ಕಡೆ ಜನರು ಸೌದೆ ಒಲೆ ಮೊರೆ ಹೋಗಿದ್ದು, ಸೌದೆಗಾಗಿ (Wood) ಅರಣ್ಣದಲ್ಲಿ ಮುಗಿಬಿದ್ದಿದ್ದಾರೆ. ಹೌದು…ಉತ್ತರ ಕನ್ನಡ (Uttara Kananda) ಜಿಲ್ಲೆಯ ಮುಂಡಗೋಡಿನ ಕೆಎಫ್ಡಿಸಿ ಅರಣ್ಯ ಪ್ರದೇಶದಲ್ಲಿ ಜನರು ಸೌದೆಗಾಗಿ ಮುಗಿದ್ದಿದ್ದಾರೆ.
ಪ್ರತಿ ವರ್ಷ ಅಕೇಶಿಯಾ ಮರಗಳ ಕಟಾವಿನ ಬಳಿಕ ಅರಣ್ಯ ಇಲಾಖೆ, ಸಣ್ಣಪುಟ್ಟ ಕಟ್ಟಿಗೆಗೆ ಬೆಂಕಿ ಹಾಕುತ್ತಿತ್ತು.ಆದ್ರೆ ಇದೀಗ ಗ್ಯಾಸ್ ಸಿಗದಿದ್ದಕ್ಕೆ ಸೌದೆಯನ್ನ ಕೊಂಡೊಯ್ಯಲು ಜನರಿಗೆ ಅನುಮತಿ ಕೊಟ್ಟಿದೆ. ಹೀಗಾಗಿ, ಜನರು ವಾಹನದ ಜತೆ ಅರಣ್ಯಕ್ಕೆ ಬಂದು ಕಟ್ಟಿಗೆ ತುಂಬಿಕೊಂಡು ಹೋಗಿದ್ದಾರೆ.
ರಾಯಚೂರು, ಮಾ.31: ಮಂತ್ರಾಲಯಕ್ಕೆ ಭೇಟಿ ನೀಡುವ ಕನ್ನಡಿಗರಿಗಾಗಿ ನಿರ್ಮಿಸಲಾದ ‘ಕರ್ನಾಟಕ ಅತಿಥಿ ಗೃಹ’ವು ಈಗ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ಅತಿಥಿ ಗೃಹದ ದುರವಸ್ಥೆಯನ್ನು ಕಂಡು ಆಘಾತಕ್ಕೊಳಗಾದ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರ ಸೂಚನೆಯಂತೆ, ರಾಯಚೂರು ಲೋಕಾಯುಕ್ತ ಡಿವೈಎಸ್‌ಪಿ ರವಿ ಪುರುಷೋತ್ತಮ್ ಅವರು ನೀಡಿದ ವರದಿಯ ಆಧಾರದ ಮೇಲೆ ಇದೀಗ ಸ್ವಯಂಪ್ರೇರಿತ ದೂರು ದಾಖಲಾಗಿದೆ.
2022ರ ಆಗಸ್ಟ್‌ನಲ್ಲಿ ಲೋಕಾರ್ಪಣೆಗೊಂಡ ಈ ಸುಸಜ್ಜಿತ ಅತಿಥಿ ಗೃಹವು ಕೇವಲ ಮೂರೇ ವರ್ಷಗಳಲ್ಲಿ ಪಾಳುಬಿದ್ದಂತಾಗಿದೆ. ಲೋಕಾಯುಕ್ತರ ತನಿಖಾ ವರದಿಯಲ್ಲಿ ಈ ಕೆಳಗಿನ ಗಂಭೀರ ಲೋಪಗಳು ಪತ್ತೆಯಾಗಿವೆ. 50 ಶೌಚಾಲಯಗಳ ಸ್ವಚ್ಛತೆಗೆ ಇರುವುದು ಕೇವಲ ಇಬ್ಬರು ಸಿಬ್ಬಂದಿ. ಫ್ಲಷ್ ವ್ಯವಸ್ಥೆಯೇ ಇಲ್ಲದೆ ಶೌಚಾಲಯಗಳು ನಾರುತ್ತಿವೆ.
ನೀರಿಗಾಗಿ ಇಟ್ಟಿದ್ದ 8 ಸಿಂಟೆಕ್ಸ್ ಪೈಕಿ 5 ಒಡೆದು ಹೋಗಿವೆ. ಡ್ರೈನೇಜ್ ಪೈಪ್‌ಗಳು ಒಡೆದು ಯಾತ್ರಾರ್ಥಿಗಳು ದುರ್ವಾಸನೆಯಲ್ಲಿ ಕಾಲ ಕಳೆಯುವಂತಾಗಿದೆ. ಗೀಸರ್ ವೈರಿಂಗ್ ಲೋಪದಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗುತ್ತಿದ್ದು, ನಲ್ಲಿ ನೀರಿನಲ್ಲಿ ವಿದ್ಯುತ್ ಪ್ರವಹಿಸುತ್ತಿದೆ. ಇದು ಜೀವಹಾನಿಗೆ ಆಹ್ವಾನ ನೀಡುವಂತಿದೆ.
ಇನ್ನು ಸ್ನಾನಕ್ಕೆ ಒಂದು ಬಕೆಟ್ ಬಿಸಿನೀರಿಗೆ 30 ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಹಾಸಿಗೆಗಳಲ್ಲಿ ತಿಗಣೆ ಮತ್ತು ಸೊಳ್ಳೆಗಳ ಕಾಟವಿದ್ದು, ಬೆಡ್ ಶೀಟ್‌ಗಳನ್ನು ದಿನನಿತ್ಯ ಸ್ವಚ್ಛಗೊಳಿಸುತ್ತಿಲ್ಲ. 10 ಎಸಿ ರೂಮ್‌ಗಳಲ್ಲಿ 6 ಎಸಿಗಳು ಕೆಟ್ಟುಹೋಗಿದ್ದರೂ ಯಾತ್ರಾರ್ಥಿಗಳಿಂದ ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದೆ.
ಈ ಭ್ರಷ್ಟಾಚಾರ ಮತ್ತು ದುರಾಡಳಿತದ ಹಿನ್ನೆಲೆಯಲ್ಲಿ ಅತಿಥಿ ಗೃಹದ ಪತ್ರಾಂಕಿತ ವ್ಯವಸ್ಥಾಪಕ ಆಂಜನೇಯಲು ಮತ್ತು ಸಹಾಯಕ ನರಸನಗೌಡ ವಿರುದ್ಧ ಪ್ರಕರಣ ದಾಖಲಿಸಲು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಆದೇಶಿಸಿದ್ದಾರೆ. ಅಲ್ಲದೆ, ಈ ಆದೇಶದ ಪ್ರತಿಯನ್ನು ಮುಜರಾಯಿ ಸಚಿವರಿಗೂ ಕಳುಹಿಸಲು ಸೂಚಿಸಲಾಗಿದೆ.
ಬೇಸಿಗೆ ಸಮಯದಲ್ಲಿ ಯಥೇಚ್ಛವಾಗಿ ಲಭ್ಯವಿರುವಂತಹ ಮಾವಿನ ಹಣ್ಣನ್ನು ಬಹುತೇಕ ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಹಣ್ಣುಗಳ ರಾಜ (mango) ತಿನ್ನಲಷ್ಟೇ ಅಲ್ಲ, ಆರೋಗ್ಯಕ್ಕೂ ಹಿತಕರ. ಅದೇ ರೀತಿ ಬೇಸಿಗೆಯಲ್ಲಿ ಹೇರಳವಾಗಿ ಲಭ್ಯವಿರುವಂತಹ ಮಾವಿನ ಕಾಯಿ ಕೂಡ ಆರೋಗ್ಯಕ್ಕೆ ಹಿತಕರ ಎಂಬುದು ನಿಮಗೆ ತಿಳಿದಿದೆಯಾ? ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಸತು, ನಾರು, ತಾಮ್ರ, ಪೊಟ್ಯಾಸಿಯಮ್ ಮತ್ತು ಸೋಡಿಯಂನಂತಹ ಪ್ರಮುಖ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಸಿ ಮಾವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆಯಂತೆ. ಹಾಗಿದ್ರೆ ಮಾವಿನಕಾಯಿಯ ಹಿತಮಿತ ಸೇವನೆಯಿಂದ ಲಭಿಸುವ ಆರೋಗ್ಯ ಪ್ರಯೋಜನಗಳೇನು ಎಂಬುದನ್ನು ನೋಡೋಣ ಬನ್ನಿ.
ಮಾವಿನಕಾಯಿ ಸೇವನೆಯಿಂದ ಲಭಿಸುವ ಪ್ರಯೋಜನಗಳೇನು?
ದೃಷ್ಟಿ ಸುಧಾರಿಸುತ್ತದೆ: ವಿಟಮಿನ್ ಎ ಯಿಂದ ಸಮೃದ್ಧವಾಗಿರುವ ಹಸಿ ಮಾವು ದೃಷ್ಟಿ ಸುಧಾರಿಸಲು ಮತ್ತು ಕಣ್ಣುಗಳ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಅಲ್ಲದೆ ಮಾವಿನಕಾಯಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಅನ್ನು ಹೊಂದಿದ್ದು, ಇದು ಮೂಳೆಗಳ ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿಯಾಗಿದೆ.
ಶಾಖದ ಹೊಡೆತದಿಂದ ರಕ್ಷಣೆ: ಬೇಸಿಗೆಯಲ್ಲಿ ಬಿಸಿಲಿನ ಹೊಡೆತ ಮತ್ತು ಶಾಖದ ಹೊಡೆತಕ್ಕೆ ಹಸಿ ಮಾವು ಅತ್ಯುತ್ತಮ ಪರಿಹಾರವಾಗಿದೆ. ಹಸಿ ಮಾವಿನಕಾಯಿಯ ಪಾನೀಯವನ್ನು ಕುಡಿಯುವುದರಿಂದ ಶಾಖದ ಹೊಡೆತದಿಂದ ದೇಹವನ್ನು ರಕ್ಷಿಸಿಕೊಳ್ಳಬಹುದು. ಇದಲ್ಲದೆ ಈ ಸಮಯದಲ್ಲಿ ಚಟ್ನಿ, ಆಮ್ ಪನ್ನಾ ರೂಪದಲ್ಲಿಯೂ ಮಾವಿನಕಾಯಿ ಸೇವನೆ ಮಾಡಬಹುದು. ಮಾವಿನಕಾಯಿಯ ಸೇವನೆಯು ದೇಹವನ್ನು ತಂಪಾಗಿಸುತ್ತದೆ ಮತ್ತು ದೇಹಕ್ಕೆ ಜಲಸಂಚಯನವನ್ನು ಒದಗಿಸುತ್ತದೆ.
ಆಮ್ಲೀಯತೆಯನ್ನು ನಿವಾರಿಸುತ್ತದೆ: ಮಾವಿನಕಾಯಿ ಆಮ್ಲೀಯತೆಯನ್ನು ನಿವಾರಿಸಲು ತುಂಬಾನೇ ಸಹಕಾರಿ. ಆಮ್ಲೀಯತೆಯನ್ನು ನಿವಾರಿಸಲು, ಕಪ್ಪು ಉಪ್ಪಿನೊಂದಿಗೆ ಹಸಿ ಮಾವಿನಹಣ್ಣನ್ನು ಸೇವಿಸಿ.. ಇದಲ್ಲದೆ, ಇದು ತೂಕ ನಷ್ಟಕ್ಕೂ ಪ್ರಯೋಜನಕಾರಿಯಾಗಿದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಹಸಿ ಮಾವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮತ್ತು ಅದನ್ನು ಬಲಪಡಿಸುವ ಅನೇಕ ಅಂಶಗಳನ್ನು ಒಳಗೊಂಡಿದೆ. ಆದ್ದರಿಂದ, ಬೇಸಿಗೆಯಲ್ಲಿ ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು, ಮಾವಿನಕಾಯಿಯನ್ನು ಮಿತ ಪ್ರಮಾಣದಲ್ಲಿ ಸೇವಿಸಿ.
ಜೀರ್ಣಕ್ರಿಯೆಗೆ ಸಹಕಾರಿ: ಹಸಿ ಮಾವು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಫೈಬರ್ ಮತ್ತು ಪೆಕ್ಟಿನ್ ಇದ್ದು, ಇದು ಮಲಬದ್ಧತೆ, ಗ್ಯಾಸ್ ಮತ್ತು ಅಜೀರ್ಣವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಯಕೃತ್ತನ್ನು ನಿರ್ವಿಷಗೊಳಿಸುತ್ತದೆ: ಹಸಿ ಮಾವು ಯಕೃತ್ತಿಗೆ ತುಂಬಾ ಪ್ರಯೋಜನಕಾರಿ. ಇದು ಯಕೃತ್ತನ್ನು ನಿರ್ವಿಷಗೊಳಿಸುತ್ತದೆ ಮತ್ತು ಪಿತ್ತರಸ ಸ್ರವಿಸುವಿಕೆಯನ್ನು ನಿಯಂತ್ರಿಸುತ್ತದೆ. ಇದು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಯಕೃತ್ತಿನ ಕಾರ್ಯವನ್ನು ಉತ್ತಮಗೊಳಿಸುತ್ತದೆ.
ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ: ಹಸಿ ಮಾವಿನಲ್ಲಿರುವ ಉತ್ಕರ್ಷಣ ನಿರೋಧಕ ಜೀವಸತ್ವಗಳು ಚರ್ಮ ಮತ್ತು ಕೂದಲನ್ನು ಬಲಪಡಿಸುತ್ತವೆ ಮತ್ತು ಹೊಳಪು ನೀಡುತ್ತವೆ. ಇದು ದೇಹವನ್ನು ನಿರ್ವಿಷಗೊಳಿಸುತ್ತದೆ, ಚರ್ಮವನ್ನು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.