All posts by nagaraj11081993

KCET Result 2026: ಕೆಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್ ನೋಡಲು ಡೈರೆಕ್ಟ್ ಲಿಂಕ್‌ ಇಲ್ಲಿದೆ.. – Kannada News

ಬೆಂಗಳೂರು: ಲಕ್ಷಾಂತರ ವಿದ್ಯಾರ್ಥಿಗಳ ಬಹುದಿನಗಳ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದೆ. 2026ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (UGCET-2026) ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಇಂದು ಅಧಿಕೃತವಾಗಿ ಪ್ರಕಟಿಸಿದೆ.

ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಕೆಇಎ ಸಹಾಧ್ಯಕ್ಷರಾದ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ಇಂದು ಮಧ್ಯಾಹ್ನ 12:00 ಗಂಟೆಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಬಿಡುಗಡೆ ಮಾಡಿದ್ದಾರೆ. ಮಧ್ಯಾಹ್ನ 2:00 ಗಂಟೆಯ ನಂತರ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ತಮ್ಮ ಅಂಕಪಟ್ಟಿ ಮತ್ತು ರ‍್ಯಾಂಕ್ ಅನ್ನು ವೀಕ್ಷಿಸಬಹುದಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

ಈ ಲಿಂಕ್‌ಗಳ ಮೂಲಕ ನೇರವಾಗಿ ಫಲಿತಾಂಶ ವೀಕ್ಷಿಸಿ:

ಹೆಚ್ಚಿನ ಟ್ರಾಫಿಕ್‌ನಿಂದಾಗಿ ವೆಬ್‌ಸೈಟ್ ಕ್ರ್ಯಾಶ್ ಆಗುವುದನ್ನು ತಪ್ಪಿಸಲು ಕೆಇಎ ಈ ಬಾರಿ ಹಲವು ಪರ್ಯಾಯ ಲಿಂಕ್‌ಗಳನ್ನು ನೀಡಿದೆ. ವಿದ್ಯಾರ್ಥಿಗಳು ಕೆಳಗಿನ ಅಧಿಕೃತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ ರಿಸಲ್ಟ್ ಚೆಕ್ ಮಾಡಬಹುದು:

ಫಲಿತಾಂಶ ಪರಿಶೀಲಿಸುವುದು ಹೇಗೆ? (Steps to Check):

ವಿದ್ಯಾರ್ಥಿಗಳು ತಮ್ಮ ಸ್ಕೋರ್‌ಕಾರ್ಡ್ ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

  • ಮೊದಲು ಮೇಲೆ ನೀಡಲಾದ ಯಾವುದೇ ಒಂದು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಮುಖಪುಟದಲ್ಲಿ (Home Page) ಕಾಣಿಸುವ “UGCET 2026 Result” ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ನೋಂದಣಿ ಸಂಖ್ಯೆ (Registration Number) ನಮೂದಿಸಿ.
  • ನಿಮ್ಮ ಹೆಸರಿನ ಮೊದಲ ನಾಲ್ಕು ಅಕ್ಷರಗಳನ್ನು (Capital Letters) ಟೈಪ್ ಮಾಡಿ.
  • ಕೊನೆಯದಾಗಿ ‘Submit’ ಬಟನ್ ಒತ್ತಿ. ಈಗ ನಿಮ್ಮ ಫಲಿತಾಂಶ ಸ್ಕ್ರೀನ್​ ಮೇಲೆ ಕಾಣುತ್ತದೆ.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಮುಖ್ಯ ಮಾಹಿತಿ:

ಮುಂದಿನ ಕೌನ್ಸೆಲಿಂಗ್ ಹಾಗೂ ಸೀಟು ಹಂಚಿಕೆ ಪ್ರಕ್ರಿಯೆಗೆ ಈ ಸ್ಕೋರ್‌ಕಾರ್ಡ್ ಅತ್ಯಂತ ಅಗತ್ಯವಾಗಿರುವುದರಿಂದ, ಫಲಿತಾಂಶದ ಪ್ರತಿಯನ್ನು ಪ್ರಿಂಟ್ (Print) ಅಥವಾ ಪಿಡಿಎಫ್ ರೂಪದಲ್ಲಿ ಡೌನ್‌ಲೋಡ್ ಮಾಡಿಕೊಂಡು ಸುರಕ್ಷಿತವಾಗಿ ಇಟ್ಟುಕೊಳ್ಳಿ.

ಸರ್ವರ್ ನಿಧಾನವಾದರೆ ಆತಂಕ ಬೇಡ:

ಒಂದೇ ಸಮಯದಲ್ಲಿ ರಾಜ್ಯಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ವೆಬ್‌ಸೈಟ್‌ಗೆ ಲಾಗಿನ್ ಆಗುವುದರಿಂದ ಸರ್ವರ್ ಸ್ಲೋ ಆಗುವ ಅಥವಾ ‘Error’ ಬರುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗದೆ, ಸ್ವಲ್ಪ ಸಮಯ ಕಾಯ್ದು ಪರ್ಯಾಯ ಲಿಂಕ್‌ಗಳ ಮೂಲಕ ಮತ್ತೊಮ್ಮೆ ಪ್ರಯತ್ನಿಸುವಂತೆ ಕೆಇಎ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದೆ.

ರಾಜ್ಯದ ಪ್ರಮುಖ ಇಂಜಿನಿಯರಿಂಗ್, ಕೃಷಿ ವಿಜ್ಞಾನ (Agriculture), ಪಶುಸಂಗೋಪನೆ (Veterinary) ಹಾಗೂ ಫಾರ್ಮಸಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಭವಿಷ್ಯವನ್ನು ಈ ಸಿಇಟಿ ಫಲಿತಾಂಶ ನಿರ್ಧರಿಸಲಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: 9 ಟು 5 ಲೈಫ್ ಬೇಡಪ್ಪಾ: ಬೆಂಗಳೂರಲ್ಲಿ 60 ಸಾವಿರ ಸಂಬಳದ ಕೆಲಸಕ್ಕೆ 22ರ ಯುವತಿ ದಿಢೀರ್ ರಿಸೈನ್! – Kannada News

ಬೆಂಗಳೂರಲ್ಲಿ 60 ಸಾವಿರ ಸಂಬಳದ ಕೆಲಸಕ್ಕೆ 22ರ ಯುವತಿ ದಿಢೀರ್ ರಿಸೈನ್!
Image Credit source: dikshaaonly instagram account

ಬೆಂಗಳೂರು, ಜೂನ್ 06: ಇಂದಿನ ದಿನಗಳಲ್ಲಿ ಕೈತುಂಬಾ ಸಂಬಳ ಕೊಡುವ ಐಟಿ ಅಥವಾ ಕಾರ್ಪೊರೇಟ್ ಕೆಲಸ ಸಿಗುವುದೇ ಕಷ್ಟ. ಇಂತಹ ಸಂದರ್ಭದಲ್ಲಿ ಬೆಂಗಳೂರಿನಲ್ಲಿರುವ (Bengaluru) 22 ವರ್ಷದ ದೀಕ್ಷಾ ಎಂಬ ಯುವತಿ, ತನಗಿದ್ದ ತಿಂಗಳ 60 ಸಾವಿರ ರೂ. ಆದಾಯದ ಮಾರ್ಕೆಟಿಂಗ್ ಕೆಲಸಕ್ಕೆ ಯಾವುದೇ ಪರ್ಯಾಯ ಯೋಜನೆ ಇಲ್ಲದೆ ರಾಜೀನಾಮೆ ನೀಡಿ ಎಲ್ಲರ ಗಮನ ಸೆಳೆದಿದ್ದಾಳೆ.

ಮುಖ್ಯಾಂಶಗಳು

  • ಬೆಂಗಳೂರಿನ 22 ವರ್ಷದ ಯುವತಿಯಿಂದ 60 ಸಾವಿರ ಸಂಬಳದ ಕೆಲಸಕ್ಕೆ ರಾಜೀನಾಮೆ.
  • ಯಾವುದೇ ಬ್ಯಾಕಪ್ ಪ್ಲಾನ್ ಇಲ್ಲದೆ ಕಾರ್ಪೊರೇಟ್ ಕೆಲಸ ಬಿಟ್ಟ ದೀಕ್ಷಾ.
  • ಒತ್ತಡದ ದಿನಚರಿಗೆ ಬೇಸತ್ತು ರಿಸ್ಕ್ ತಗೊಡ ಯುವತಿಗೆ ನೆಟ್ಟಿಗರ ಸಾಥ್.

ಕಾಲೇಜು ಪ್ಲೇಸ್‌ಮೆಂಟ್ ಮೂಲಕ ಮಾರ್ಕೆಟಿಂಗ್ ಕೆಲಸ ಗಿಟ್ಟಿಸಿಕೊಂಡಿದ್ದ ದೀಕ್ಷಾ, ಈ ಉದ್ಯೋಗಕ್ಕಾಗಿಯೇ ಬೆಂಗಳೂರಿಗೆ ಶಿಫ್ಟ್ ಆಗಿದ್ದಳು. ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಆಕೆ, ತನ್ನ ನಿರ್ಧಾರದ ಹಿಂದಿನ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾಳೆ.

ಇದು 9 ಟು 5 ಅಲ್ಲ, 9 ಟು 9 ಲೈಫ್

ಅಷ್ಟು ಒಳ್ಳೆಯ ಕೆಲಸಕ್ಕೆ ರಿಸೈನ್ ಕೊಟ್ಟ ದೀಕ್ಷಾ, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಹಂಚಿಕೊಡಿದ್ದಾಳೆ. ನನಗೆ 22 ವರ್ಷಕ್ಕೇ ತಿಂಗಳಿಗೆ 60 ಸಾವಿರ ಸಂಬಳ ಸಿಗುತ್ತಿತ್ತು. ಕೆಲಸವೂ ಸಖತ್ ಮಜವಾಗಿತ್ತು, ಒಳ್ಳೆಯ ಸ್ನೇಹಿತರು ಸಿಕ್ಕಿದ್ದರು. ಆದರೆ ನನಗೆ ಪ್ರತಿದಿನ ಅದೇ ದಿನಚರಿ (Routine) ಸಾಕಾಗಿಹೋಗಿತ್ತು. ಇದು ಕೇವಲ ಬೆಳಗ್ಗೆ 9 ರಿಂದ ಸಂಜೆ 5 ರ ಕೆಲಸವಾಗಿರಲಿಲ್ಲ. ಬದಲಿಗೆ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ದುಡಿಯುವುದು, ಮನೆಗೆ ಬಂದು ಊಟ ಮಾಡಿ ಮಲಗುವುದು. ಮತ್ತೆ ಇದನ್ನೇ ಪುನರಾವರ್ತಿಸುವ ಈ ಜೀವನ ನನಗೆ ಸಾಕೆನ್ನಿಸಿದೆ. ನಮ್ಮದೇ ಸ್ವಂತ ಜೀವನವನ್ನು ಆನಂದಿಸಲು ಕೇವಲ ವೀಕೆಂಡ್‌ಗಾಗಿ ಕಾಯುವ ಪರಿಸ್ಥಿತಿ ನನಗಿಷ್ಟವಿರಲಿಲ್ಲ ಎಂದು ದೀಕ್ಷಾ ಹೇಳಿದ್ದಾಳೆ.

ಯೋಚನೆ ಮಾಡಿ ತಲೆ ಕೆಡಿಸಿಕೊಳ್ಳುವುದಕ್ಕಿಂತ ರಿಸೈನ್ ಮಾಡುವುದೇ ಲೇಸು!

ಯಾವುದೇ ಪ್ಲಾನ್ ಇಲ್ಲದೆ ಕೆಲಸ ಬಿಡುವ ರಿಸ್ಕ್ ಬಗ್ಗೆ ಮಾತನಾಡಿದ ಆಕೆ, ದಿನವೂ ಯೋಚನೆ ಮಾಡಿ ತಲೆ ಕೆಡಿಸಿಕೊಳ್ಳುವುದಕ್ಕಿಂತ, ಯಾವುದೋ ಒಂದು ದಿನ ದಿಢೀರ್ ಎಂದು ಕಂಪನಿಗೆ ರಿಸೈನ್ ಮಾಡಿಬಿಟ್ಟೆ. ನನ್ನ ಬಳಿ ಯಾವುದೇ ಬ್ಯಾಕಪ್ ಪ್ಲಾನ್ ಇಲ್ಲ. ಮುಂದೆ ಜೀವನದಲ್ಲಿ ಏನು ಮಾಡಬೇಕೆಂದೂ ಗೊತ್ತಿಲ್ಲ. ಆದರೆ ಒಂದೇ ಕಡೆ ಇಡೀ ಜೀವನವನ್ನು ಕಳೆಯಲು ನನಗಿಷ್ಟವಿಲ್ಲ. ರಿಸ್ಕ್ ಇಲ್ಲದಿದ್ದರೆ ಲೈಫಲ್ಲಿ ಸ್ಟೋರಿಗಳೇ ಇರಲ್ಲ. ಸದ್ಯಕ್ಕೆ ನಾನು ಸ್ವತಂತ್ರವಾಗಿ ಬದುಕಲು ಬಯಸುತ್ತೇನೆ. ಒಂದು ವೇಳೆ ನನ್ನ ಈ ನಿರ್ಧಾರ ಕೈಕೊಟ್ಟರೆ, ಮತ್ತೆ ಮೊದಲಿನಿಂದ ಜೀವನ ಆರಂಭಿಸುತ್ತೇನೆ ಎಂದು ಧೈರ್ಯವಾಗಿ ಹೇಳಿಕೊಂಡಿದ್ದಾಳೆ.

ದೀಕ್ಷಾ ಧೈರ್ಯಕ್ಕೆ ನೆಟ್ಟಿಗರು ಫಿದಾ!

ದೀಕ್ಷಾ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಕಾರ್ಪೊರೇಟ್ ಜಗತ್ತಿನ ಒತ್ತಡದ ಜೀವನಕ್ಕೆ ಬೇಸತ್ತಿರುವ ಸಾವಿರಾರು ಯುವಜನರು ಈಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನಿಮ್ಮ ವಿಡಿಯೋ ನನಗೂ ಕೆಲಸ ಬಿಡುವ ಧೈರ್ಯ ನೀಡಿದೆ ಎಂದು ಕೆಲವರು ಹೇಳಿದರೆ, ಕೆಲವೊಮ್ಮೆ ಜೀವನದಲ್ಲಿ ಇಂತಹ ಬ್ರೇಕ್ ತಗೊಳ್ಳುವುದು ತುಂಬಾನೇ ಮುಖ್ಯ, ಇದು ನಿಜಕ್ಕೂ ಧೈರ್ಯದ ನಿರ್ಧಾರ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:02 pm, Sat, 6 June 26

Source link

ದೇವದತ್ ಪಡಿಕ್ಕಲ್​ಗೆ ಕೇವಲ 2.6 ಲಕ್ಷ ರೂ..! – Kannada News

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ‘ಇಂಡಿಯನ್ ಪ್ರೀಮಿಯರ್ ಲೀಗ್’ (IPL) ಮುಕ್ತಾಯದ ಬೆನ್ನಲ್ಲೇ, ಕರ್ನಾಟಕದಲ್ಲಿ  ‘ಮಹಾರಾಜ ಟ್ರೋಫಿ ಟಿ20’ ಟೂರ್ನಿಗೆ ವೇದಿಕೆ ಸಿದ್ಧವಾಗಿದೆ. ಇದರ ಮೊದಲ ಹೆಜ್ಜೆಯಾಗಿ ಈಗಾಗಲೇ 6 ತಂಡಗಳ ಹರಾಜು ಪ್ರಕ್ರಿಯೆ ಮುಗಿದಿದೆ. ಈ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್ ಮಾರಾಟವಾಗಿದ್ದು ಕೇವಲ 2.6 ಲಕ್ಷ ರೂ.ಗೆ ಎಂದರೆ ನಂಬಲೇಬೇಕು!

ಮಹಾರಾಜ ಟ್ರೋಫಿ ಟಿ20 ಟೂರ್ನಿಯ ನಿಯಮಗಳ ಪ್ರಕಾರ, ಭಾರತ ತಂಡವನ್ನು ಅಥವಾ ಐಪಿಎಲ್ (IPL) ಪ್ರತಿನಿಧಿಸಿರುವ ಸ್ಟಾರ್ ಆಟಗಾರರನ್ನು ‘ಪೂಲ್ ಎ’ (Pool A) ವಿಭಾಗದಲ್ಲಿ ಸೇರಿಸಲಾಗಿತ್ತು. ಈ ವಿಭಾಗದ ಎಲ್ಲಾ ಆಟಗಾರರ ಕನಿಷ್ಠ ಮೂಲ ಬೆಲೆಯನ್ನು 2 ಲಕ್ಷ ರೂ. ಎಂದು ನಿಗದಿಪಡಿಸಲಾಗಿತ್ತು.

ಅದರಂತೆ 2 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ದೇವದತ್ ಪಡಿಕ್ಕಲ್ ಮಾರಾಟವಾಗಿದ್ದು ಕೇವಲ 2.6 ಲಕ್ಷಕ್ಕೆ. ಇದರ ಬೆನ್ನಲ್ಲೇ ಇಷ್ಟೊಂದು ಕಡಿಮೆ ಮೊತ್ತಕ್ಕೆ ಬಿಡ್ ಆಗಲು ಕಾರಣವೇನು? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ…

ಟೀಮ್ ಇಂಡಿಯಾ ಆಟಗಾರ:

2 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ದೇವದತ್ಬ ಪಡಿಕ್ಕಲ್ ಅವರನ್ನು ಮೈಸೂರು ವಾರಿಯರ್ಸ್ ಫ್ರಾಂಚೈಸಿ 2.6 ಲಕ್ಷ ರೂ.ಗೆ ಖರೀದಿಸಿದ್ದರು. ಅಂದರೆ ಪಡಿಕ್ಕಲ್ ಅವರ ಖರೀದಿಗಾಗಿ ಹೆಚ್ಚಿನ ಫ್ರಾಂಚೈಸಿಗಳು ಆಸಕ್ತಿಯೇ ತೋರಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಟೀಮ್ ಇಂಡಿಯಾ ಆಟಗಾರ.

ಅಂತರರಾಷ್ಟ್ರೀಯ ಪಂದ್ಯಗಳ ವೇಳಾಪಟ್ಟಿಯಿಂದಾಗಿ ದೇವದತ್ ಪಡಿಕ್ಕಲ್ ಟೂರ್ನಿಯ ಎಲ್ಲಾ ಪಂದ್ಯಗಳಿಗೆ ಲಭ್ಯವಿರುವುದಿಲ್ಲ ಎಂಬುದು ಫ್ರಾಂಚೈಸಿಗಳಿಗೆ ಮೊದಲೇ ತಿಳಿದಿತ್ತು. ಮುಂಬರುವ ಭಾರತ ತಂಡದ ಸರಣಿಗಳಲ್ಲಿ ಭಾಗವಹಿಸಬೇಕಿರುವುದರಿಂದ, ಅವರು ಎಷ್ಟು ಪಂದ್ಯಗಳನ್ನು ಆಡಲಿದ್ದಾರೆ ಎಂಬ ಅನಿಶ್ಚಿತತೆ ಇತ್ತು. ಇದೇ ಕಾರಣಕ್ಕೆ ಹರಾಜಿನಲ್ಲಿ ಬೇರೆ ಯಾವುದೇ ತಂಡಗಳು ಇವರ ಮೇಲೆ ಭಾರಿ ಮೊತ್ತದ ಬಿಡ್ ಮಾಡಲು ಮುಂದಾಗಲಿಲ್ಲ.

ಪರಿಣಾಮವಾಗಿ, ಮೈಸೂರು ವಾರಿಯರ್ಸ್ ತಂಡವು ಕೇವಲ ತಲಾ 2.6 ಲಕ್ಷ ರೂ. ಮೂಲ ಬೆಲೆಗೆ ದೇವದತ್ ಪಡಿಕ್ಕಲ್ ಅವರನ್ನು ತಮ್ಮದಾಗಿಸಿಕೊಂಡಿದ್ದಾರೆ.

  • 2025 ಮಹಾರಾಜ ಟಿ20 ಟೂರ್ನಿಯ ಹರಾಜಿನಲ್ಲಿ ದೇವದತ್ ಪಡಿಕ್ಕಲ್ ಬರೋಬ್ಬರಿ 13.20 ಲಕ್ಷ ರೂ.ಗೆ ಮಾರಾಟವಾಗಿದ್ದರು.
  • ಕಳೆದ ಸೀಸನ್​ನಲ್ಲಿ ದೇವದತ್ ಪಡಿಕ್ಕಲ್ ಹುಬ್ಬಳ್ಳಿ ಟೈಗರ್ಸ್ ಪರ ಕಣಕ್ಕಿಳಿದಿದ್ದರು.
  • ಈ ಬಾರಿ ಮೈಸೂರು ವಾರಿಯರ್ಸ್ ಪರ ಆರ್​ಸಿಬಿ ದಾಂಡಿಗ ಬ್ಯಾಟ್ ಬೀಸಲಿದ್ದಾರೆ.

ಇತ್ತ ಮಹಾರಾಜ ಟ್ರೋಫಿ ಸೀಸನ್-5 ಜೂನ್ 20 ರಿಂದ ಜುಲೈ 12, 2026 ರವರೆಗೆ ನಡೆಯಲಿದೆ. ಪಂದ್ಯಗಳು ಮೈಸೂರು, ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಆಯೋಜನೆಗೊಳ್ಳಲಿವೆ. ಇದೇ ವೇಳೆ ದೇವದತ್ ಪಡಿಕ್ಕಲ್ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ: ಟೀಮ್ ಇಂಡಿಯಾ ಗೆದ್ದರೂ ಸೋತರೂ ನೋ ಪ್ರಾಬ್ಲಮ್… ಯಾಕೆ ಗೊತ್ತಾ?

ಅಂದರೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಅವರು ಆಯ್ಕೆಯಾದರೆ ಮಾತ್ರ ಬಹುತೇಕ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಇಲ್ಲದಿದ್ದರೆ ಮೈಸೂರು ವಾರಿಯರ್ಸ್ ಪರ ಎಲ್ಲಾ ಮ್ಯಾಚ್​ಗಳಲ್ಲೂ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

Source link

ರಕ್ಷಿತ್ ಜನ್ಮದಿನಕ್ಕೆ ರಿಷಬ್ ಶೆಟ್ಟಿ ಕಡೆಯಿಂದ ದೊಡ್ಡ ಅಪ್​​ಡೇಟ್

ಸ್ಯಾಂಡಲ್‌ವುಡ್‌ನ ನಟ, ನಿರ್ದೇಶಕ ‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ ಇಂದು (ಜೂನ್ 6) ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನದಂದು ಅವರ ಆತ್ಮೀಯ ಗೆಳೆಯ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಭಿನ್ನವಾಗಿ ವಿಶ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲದೆ, ಕಳೆದ ಕೆಲವು ದಿನಗಳಿಂದ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿದೆ ಎಂದು ಹರಿದಾಡುತ್ತಿದ್ದ ಎಲ್ಲಾ ವದಂತಿಗಳಿಗೂ ರಿಷಬ್ ತಮ್ಮ ಒಂದೇ ಒಂದು ಪೋಸ್ಟ್ ಮೂಲಕ ಪೂರ್ಣವಿರಾಮ ಇಟ್ಟಿದ್ದಾರೆ.

ಮನಸ್ತಾಪದ ಸುದ್ದಿ ಸುಳ್ಳು ಮಾಡಿದ ರಿಷಬ್:

ಚಿತ್ರರಂಗದಲ್ಲಿ ದಶಕಗಳಿಗೂ ಹೆಚ್ಚಿನ ಸ್ನೇಹ ಹೊಂದಿರುವ ಈ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಗಾಂಧಿನಗರದ ತುಂಬೆಲ್ಲಾ ಕೇಳಿಬರುತ್ತಿದ್ದವು. ಆದರೆ ಇಂದು ರಕ್ಷಿತ್ ಹುಟ್ಟುಹಬ್ಬಕ್ಕೆ ಶುಭ ಕೋರಿರುವ ರಿಷಬ್ ಶೆಟ್ಟಿ, ಹಳೆಯ ಸುಂದರ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ.

‘ಕಿರಿಕ್ ಪಾರ್ಟಿ’ ಸೆಟ್​​ನನಲ್ಲಿ ತೆಗೆದ ಫೋಟೋ ಇದಾಗಿದೆ. ಇಬ್ಬರೂ ಮುಗುಳ್ನಗುತ್ತಾ ಇದ್ದಾರೆ. ‘ಬಂದು ಹೋಗುವ ಜನರ ಮಧ್ಯೆ ಈ ಗೆಳೆಯ ಶಾಶ್ವತ ಅಧ್ಯಾಯವಾಗಿದ್ದಾನೆ. ಹ್ಯಾಪಿ ಬರ್ತ್ಡೇ ಮಗ ರಕ್ಷಿತ್ ಶೆಟ್ಟಿ’ ಎಂದು ಬರೆಯುವ ಮೂಲಕ ತಮ್ಮ ನಡುವಿನ ಅಪೂರ್ವ ಸ್ನೇಹವನ್ನು ಜಗತ್ತಿಗೆ ಸಾರಿದ್ದಾರೆ.
ಹೊಸ ಸಿನಿಮಾ ಅಪ್‌ಡೇಟ್

ರಕ್ಷಿತ್ ಶೆಟ್ಟಿ ಅವರ ಮುಂದಿನ ಹೊಸ ಸಿನಿಮಾ ಅನೌನ್ಸ್​​ಮೆಂಟ್ ಆಗಿ ಸಾಕಷ್ಟು ಸಮಯ ಕಳೆದಿದೆ. ಆದರೆ, ಈ ಬಗ್ಗೆ ನಂತರ ಅಪ್​​ಡೇಟ್ ಸಿಕ್ಕಿಲ್ಲ. ಅಭಿಮಾನಿಗಳ ಪ್ರಶ್ನೆಗಳಿಗೂ ಈಗ ರಿಷಬ್ ಶೆಟ್ಟಿ ಅವರೇ ಉತ್ತರ ನೀಡಿದ್ದಾರೆ. ‘ಮೊನ್ನೆ ತಾನೇ ಭೇಟಿ ಮಾಡಿ ಬಂದೆ. ಅವನು ಸದ್ಯದಲ್ಲೇ ಮರಳಿ ಬರಲಿದ್ದಾನೆ’ ಎಂದು ರಿಷಬ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಪೆದ್ದಿ’ ಸಿನಿಮಾ ಟ್ರೈಲರ್ ನೋಡಿ ರಿಷಬ್ ಶೆಟ್ಟಿ ಹೇಳಿದ್ದು ಹೀಗೆ

ರಿಷಬ್ ಅವರ ಈ ಲೇಟೆಸ್ಟ್ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಸಾಲುಗಳು ರಕ್ಷಿತ್ ಅಭಿಮಾನಿಗಳಲ್ಲಿ ಹೊಸ ಜೋಶ್ ತುಂಬಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಎಲ್​ಪಿಜಿ ಬಿಕ್ಕಟ್ಟಿನ ಮಧ್ಯೆ ಭಾರತಕ್ಕೆ ಗುಡ್ ನ್ಯೂಸ್: ಅಂಡಮಾನ್ ಸಮುದ್ರದಲ್ಲಿ ಬೃಹತ್ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆ – Kannada News

ಪರಿಶೋಧನಾ ಬಾವಿಯಲ್ಲಿ ಪರೀಕ್ಷೆ ವೇಳೆ ನೈಸರ್ಗಿಕ ಅನಿಲ ಹೊತ್ತಿ ಉರಿದಿರುವುದು ಹಾಗೂ ಬಲ ಚಿತ್ರದಲ್ಲಿ ಸಚಿವ ಹರ್ದೀಪ್ ಸಿಂಗ್ ಪುರಿImage Credit source: @HardeepSPuri

ನವದೆಹಲಿ, ಜೂನ್ 6: ಭಾರತದ ಇಂಧನ ಕ್ಷೇತ್ರದಲ್ಲಿ (Energy Sector) ಹೊಸದೊಂದು ಆಶಾವಾದ ಮೂಡಿಸುವ ಭಾರಿ ಬೆಳವಣಿಗೆ ನಡೆದಿದೆ. ಅಂಡಮಾನ್ ಸಮುದ್ರದಲ್ಲಿ ಬೃಹತ್ ಪ್ರಮಾಣದ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆಯಾಗಿದ್ದು, ದೇಶೀಯ ಇಂಧನ ಸ್ವಾವಲಂಬನೆಯ ಕನಸಿಗೆ ಹೊಸ ಚಾಲನೆ ಸಿಕ್ಕಂತಾಗಿದೆ. ಸರ್ಕಾರಿ ಸ್ವಾಮ್ಯದ ಆಯಿಲ್ ಇಂಡಿಯಾ ಲಿಮಿಟೆಡ್ (OIL) ಸಂಸ್ಥೆಯು ಅಂಡಮಾನ್ ದ್ವೀಪಗಳ ಸಾಗರೋತ್ತರ ಪರಿಶೋಧನಾ ಬಾವಿಯಲ್ಲಿ ನೈಸರ್ಗಿಕ ಅನಿಲ ಇರುವುದನ್ನು ಅಧಿಕೃತವಾಗಿ ಖಚಿತಪಡಿಸಿದೆ. ಇದು ಕೇಂದ್ರ ಸರ್ಕಾರದ ಸಾಗರೋತ್ತರ ಇಂಧನ ಪರಿಶೋಧನಾ ಯೋಜನೆಗೆ ಸಿಕ್ಕ ಅತ್ಯಂತ ದೊಡ್ಡ ಯಶಸ್ಸು ಎಂದು ಪರಿಗಣಿಸಲಾಗಿದೆ.

ಮುಖ್ಯಾಂಶಗಳು

  • ಅಂಡಮಾನ್ ಕಡಲಿನಲ್ಲಿ ಬೃಹತ್ ಅನಿಲ ನಿಕ್ಷೇಪ ಪತ್ತೆ.
  • ‘ಶ್ರೀ ವಿಜಯಪುರಂ’ ಬಾವಿಯಲ್ಲಿ ನೈಸರ್ಗಿಕ ಅನಿಲ ನಿಕ್ಷೇಪ.
  • ಸಮುದ್ರ ಮಂಥನ ಮಿಷನ್‌ಗೆ ಬಿಗ್ ಬೂಸ್ಟ್.

ಅಂಡಮಾನ್ ದ್ವೀಪಗಳಲ್ಲಿ ಗ್ಯಾಸ್ ಪತ್ತೆಯ ಮಹತ್ವ ಏನು?

ಈ ನೈಸರ್ಗಿಕ ಅನಿಲದ ಆವಿಷ್ಕಾರವು ಕೇವಲ ಒಂದು ಬಾವಿಗೆ ಮಾತ್ರ ಸೀಮಿತವಾಗಿಲ್ಲ, ಇದರ ಮಹತ್ವ ಅತ್ಯಂತ ವಿಸ್ತಾರವಾದುದಾಗಿದೆ. ಅಂಡಮಾನ್ ಬೇಸಿನ್ (ಕೊಳ್ಳ) ಪ್ರದೇಶವು ಭಾರಿ ಪ್ರಮಾಣದ ಹೈಡ್ರೋಕಾರ್ಬನ್ ನಿಕ್ಷೇಪಗಳನ್ನು ಹೊಂದಿರಬಹುದು ಎಂದು ಭೂವಿಜ್ಞಾನಿಗಳು ದಶಕಗಳಿಂದ ನಂಬಿದ್ದರು. ಪ್ರಸ್ತುತ ಪತ್ತೆಯಾಗಿರುವ ಅನಿಲ ನಿಕ್ಷೇಪ ಆ ನಂಬಿಕೆಯನ್ನು ನಿಜವಾಗಿಸಿದೆ. ಆಯಿಲ್ ಇಂಡಿಯಾ ಲಿಮಿಟೆಡ್ ಪ್ರಸ್ತುತ ಕೈಗೊಂಡಿರುವ ಪರಿಶೋಧನಾ ಅಭಿಯಾನದಲ್ಲಿ ಕೊರೆದಿರುವ ಮೂರು ಬಾವಿಗಳಲ್ಲಿ ಈಗಾಗಲೇ ಎರಡು ಬಾವಿಗಳಲ್ಲಿ ಹೈಡ್ರೋಕಾರ್ಬನ್ ಇರುವುದು ವರದಿಯಾಗಿದೆ. ನಿಕ್ಷೇಪದ ಪ್ರಮಾಣ ಇನ್ನೂ ಪೂರ್ಣವಾಗಿ ಲಭ್ಯವಾಗಿಲ್ಲದಿದ್ದರೂ, ಇದು ಭವಿಷ್ಯದ ಇಂಧನ ಭದ್ರತೆಯ ದೃಷ್ಟಿಯಿಂದ ಅತ್ಯಂತ ಸಕಾರಾತ್ಮಕ ಸೂಚನೆಯಾಗಿದೆ.

ಭಾರತದ ಗ್ಯಾಸ್ ಸ್ವಾವಲಂಬನೆಗೆ ನೆರವಾಗಬಹುದೇ?

ಭಾರತವು ಪ್ರಸ್ತುತ ಇಂಧನ ಅಗತ್ಯಗಳಿಗಾಗಿ ವಿದೇಶಿ ಆಮದಿನ ಮೇಲೆ ಅತಿಯಾಗಿ ಅವಲಂಬಿತವಾಗಿದೆ. ದೇಶದ ಕಚ್ಚಾ ತೈಲದ ಶೇಕಡಾ 85 ಕ್ಕಿಂತ ಹೆಚ್ಚು ಅಗತ್ಯವನ್ನು ಆಮದಿನ ಮೂಲಕವೇ ಪೂರೈಸಲಾಗುತ್ತಿದೆ. ನೈಸರ್ಗಿಕ ಅನಿಲದ ಬೇಡಿಕೆಯ ಗಣನೀಯ ಪಾಲನ್ನು ಸಹ ಆಮದು ಮಾಡಿಕೊಳ್ಳಲಾದ ದ್ರವೀಕೃತ ನೈಸರ್ಗಿಕ ಅನಿಲ (LNG) ಮೂಲಕವೇ ಪಡೆದುಕೊಳ್ಳಲಾಗುತ್ತಿದೆ. ಅಂಡಮಾನ್ ಬೇಸಿನ್‌ನಲ್ಲಿ, ವಾಣಿಜ್ಯಿಕವಾಗಿ ಲಾಭದಾಯಕವಾಗಲ್ಲ ನಿಕ್ಷೇಪಗಳು ಅಧಿಕೃತವಾಗಿ ದೃಢಪಟ್ಟರೆ, ಭಾರತದ ಈ ಆಮದು ಅವಲಂಬನೆ ಗಣನೀಯವಾಗಿ ಕಡಿಮೆಯಾಗಲಿದೆ. ದೇಶೀಯ ಉತ್ಪಾದನೆ ಹೆಚ್ಚಳದಿಂದ ಜಾಗತಿಕ ಮಾರುಕಟ್ಟೆಯ ತೈಲ ಏರಿಳಿತಗಳಿಂದ ಭಾರತ ನಿರಾಳವಾಗಬಹುದು. ಆದರೆ ಗ್ರಾಹಕರಿಗೆ ಈ ಗ್ಯಾಸ್ ತಲುಪಬೇಕಿದ್ದರೆ ಅನೇಕ ಪ್ರಕ್ರಿಯೆಗಳಿವೆ. ಹಲವು ಸುತ್ತಿನ ಪರೀಕ್ಷೆಗಳು, ಮೂಲಸೌಕರ್ಯ ಅಭಿವೃದ್ಧಿ ಮತ್ತು ವಾಣಿಜ್ಯ ಅನುಮೋದನೆಗಳ ಸುದೀರ್ಘ ಪ್ರಕ್ರಿಯೆ ಆದ ನಂತರವಷ್ಟೇ ಅದು ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಗಯಾನಾ ಆಗಲಿದೆಯೇ ಅಂಡಮಾನ್?

ಅಂಡಮಾನ್ ಬೇಸಿನ್ ಭಾರತದ ‘ಗಯಾನಾ’ ಆಗಲಿದೆಯೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಗಯಾನಾದಲ್ಲಿ ಕಂಡುಬಂದ ಬೃಹತ್ ತೈಲ ನಿಕ್ಷೇಪಗಳು ಆ ದೇಶದ ಇಂಧನ ಚಿತ್ರಣವನ್ನೇ ಬದಲಾಯಿಸಿದ್ದವು. ಅದೇ ಮಾದರಿಯಲ್ಲಿ ಅಂಡಮಾನ್ ಕೂಡ ಭಾರತದ ಇಂಧನ ಭವಿಷ್ಯವನ್ನು ಬದಲಾಯಿಸಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ. ಈ ಬಗ್ಗೆ ಈ ಹಿಂದೆ ಇಂಧನ ಇಲಾಖೆ ಕೂಡ ವಿಶ್ವಾಸ ವ್ಯಕ್ತಪಡಿಸಿತ್ತು. ಪ್ರಾಥಮಿಕ ಸಮೀಕ್ಷೆಗಳ ಅಂದಾಜಿನ ಪ್ರಕಾರ, ಈ ಬೇಸಿನ್‌ನಲ್ಲಿ 307 ರಿಂದ 370 ಮಿಲಿಯನ್ ಮೆಟ್ರಿಕ್ ಟನ್ ತೈಲ-ಸಮಾನ ಹೈಡ್ರೋಕಾರ್ಬನ್ ಇರಬಹುದು ಎಂದು ಅಂದಾಜಿಸಲಾಗಿದೆ.

ಹರ್ದೀಪ್​ ಸಿಂಗ್ ಪುರಿ ಎಕ್ಸ್ ಸಂದೇಶದಲ್ಲೇನಿದೆ?

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅನಿಲ ನಿಕ್ಷೇಪ ಪತ್ತೆ ಕುರಿತು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. ‘ಅಂಡಮಾನ್ ಸಮುದ್ರದಲ್ಲಿ ಇಂಧನ ಅವಕಾಶಗಳ ಮಹಾಸಾಗರವೇ ಅನಾವರಣಗೊಂಡಿದೆ! ಆಯಿಲ್ ಇಂಡಿಯಾ ಲಿಮಿಟೆಡ್ ಅಂಡಮಾನ್ ದ್ವೀಪಗಳ ಪೂರ್ವ ಕರಾವಳಿಯಿಂದ 15 ಕಿಲೋಮೀಟರ್ ದೂರದಲ್ಲಿ, 355 ಮೀಟರ್ ನೀರಿನ ಆಳದಲ್ಲಿ ಕೊರೆದಿರುವ ‘ಶ್ರೀ ವಿಜಯಪುರಂ-3’ ಪರಿಶೋಧನಾ ಬಾವಿಯಲ್ಲಿ ನೈಸರ್ಗಿಕ ಅನಿಲ ಪತ್ತೆಯಾಗಿದೆ ಎಂಬುದನ್ನು ತಿಳಿಸಲು ಅತ್ಯಂತ ಸಂತೋಷವಾಗುತ್ತಿದೆ. ಬಾವಿಯ ಆರಂಭಿಕ ಉತ್ಪಾದನಾ ಪರೀಕ್ಷೆ ವೇಳೆ ನಿರಂತರ ಜ್ವಾಲೆ ಉರಿಯುವ ಮೂಲಕ ನೈಸರ್ಗಿಕ ಅನಿಲದ ಇರುವಿಕೆಯನ್ನು ದೃಢಪಡಿಸಿದೆ’ ಎಂದು ಸಚಿವರು ಬರೆದುಕೊಂಡಿದ್ದಾರೆ.

‘ಸಮುದ್ರ ಮಂಥನ ಮಿಷನ್’ಗೆ ಸಿಕ್ಕ ದೊಡ್ಡ ಗೆಲುವು

ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ ರಾಷ್ಟ್ರೀಯ ಆಳ ಸಮುದ್ರ ಪರಿಶೋಧನಾ ಯೋಜನೆ ಅಥವಾ ‘ಸಮುದ್ರ ಮಂಥನ ಮಿಷನ್’ಗೆ ಈ ಆವಿಷ್ಕಾರವು ಆರಂಭಿಕ ಮತ್ತು ದೊಡ್ಡ ಯಶಸ್ಸನ್ನು ತಂದುಕೊಟ್ಟಿದೆ. ಮಿಷನ್ ಮೋಡ್‌ನಲ್ಲಿ ಸಮುದ್ರದೊಳಗಿನ ಇಂಧನ ಸಂಪನ್ಮೂಲಗಳನ್ನು ಹೊರತೆಗೆಯಲು ಭಾರತ ಹೆಜ್ಜೆ ಇಟ್ಟಿರುವುದಕ್ಕೆ ಇದು ಪ್ರಬಲ ಸಾಕ್ಷಿಯಾಗಿದೆ. ಪ್ರಸ್ತುತ ಆಯಿಲ್ ಇಂಡಿಯಾ ಸಂಸ್ಥೆಯು ಗ್ಯಾಸ್ ಸ್ಯಾಂಪ್ಲಿಂಗ್ ಮತ್ತು ಐಸೊಟೋಪ್ ಅಧ್ಯಯನಗಳನ್ನು ನಡೆಸುತ್ತಿದ್ದು, ಮುಂಬರುವ ದಿನಗಳಲ್ಲಿ ಜಾಗತಿಕ ಆಳ ಸಮುದ್ರ ಪರಿಶೋಧನಾ ತಜ್ಞರ ಸಹಯೋಗದೊಂದಿಗೆ ಇಲ್ಲಿ ವಾಣಿಜ್ಯ ಕಾರ್ಯಾಚರಣೆ ಕೈಗೊಳ್ಳುವ ಯೋಜನೆಯನ್ನು ಸರ್ಕಾರ ಹೊಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟೀಮ್ ಇಂಡಿಯಾ ಗೆದ್ದರೂ ಸೋತರೂ ನೋ ಪ್ರಾಬ್ಲಮ್… ಯಾಕೆ ಗೊತ್ತಾ? – Kannada News

ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಟೆಸ್ಟ್ ಪಂದ್ಯ ಶುರುವಾಗಿದೆ. ಮುಲ್ಲನ್​ಪುರ್​ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಶುಭ್​​ಮನ್ ಗಿಲ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಈ ಪಂದ್ಯವು ಭಾರತದ ಮುಖ್ಯವಲ್ಲ. ಅಂದರೆ ಈ ಮ್ಯಾಚ್​ನಲ್ಲಿ ಗೆದ್ದರೂ, ಡ್ರಾ ಮಾಡಿಕೊಂಡರೂ ಅಥವಾ ಸೋತರೂ ಟೀಮ್ ಇಂಡಿಯಾ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಏಕೆಂದರೆ ಈ ಪಂದ್ಯವು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಭಾಗವಲ್ಲ.

 WTC ನಲ್ಲಿ ಅಫ್ಘಾನಿಸ್ತಾನ್ ತಂಡಕ್ಕೆ ಸ್ಥಾನವಿಲ್ಲ:

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ನಿಯಮಗಳ ಪ್ರಕಾರ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ (WTC) ಕೇವಲ ವಿಶ್ವದ ಅಗ್ರ 9 ಟೆಸ್ಟ್ ತಂಡಗಳು ಮಾತ್ರ ಆಡಲು ಅರ್ಹತೆ ಪಡೆದಿವೆ. ಅಫ್ಘಾನಿಸ್ತಾನ್ ತಂಡವು ಪೂರ್ಣ ಪ್ರಮಾಣದ ಟೆಸ್ಟ್ ಮಾನ್ಯತೆ ಹೊಂದಿದ್ದರೂ, ಸದ್ಯಕ್ಕೆ ಈ ಒಂಬತ್ತು ತಂಡಗಳ ಪಟ್ಟಿಯಲ್ಲಿಲ್ಲ. ಅಫ್ಘಾನಿಸ್ತಾನದ ಜೊತೆಗೆ ಐರ್ಲೆಂಡ್ ಮತ್ತು ಝಿಂಬಾಬ್ವೆ ತಂಡಗಳೂ ಸಹ WTC ಟೂರ್ನಿಯಿಂದ ಹೊರಗುಳಿದಿವೆ.

 ಕನಿಷ್ಠ 2 ಪಂದ್ಯಗಳ ನಿಯಮ:

ಐಸಿಸಿ ನಿಯಮಾವಳಿಗಳ ಪ್ರಕಾರ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಡಿಯಲ್ಲಿ ಬರುವ ಯಾವುದೇ ಸರಣಿಯಲ್ಲಿ ಕನಿಷ್ಠ 2 ಟೆಸ್ಟ್ ಪಂದ್ಯಗಳು ಇರಬೇಕು. ಆದರೆ ಭಾರತ ಮತ್ತು ಅಫ್ಘಾನಿಸ್ತಾನ್ ನಡುವೆ ನಡೆಯುತ್ತಿರುವುದು ಕೇವಲ ಒಂದು ಪಂದ್ಯದ ದ್ವಿಪಕ್ಷೀಯ ಸರಣಿಯಾಗಿದೆ. ಹೀಗಾಗಿ ಇದು WTC ವ್ಯಾಪ್ತಿಗೆ ಬರಲ್ಲ.

WTC ಪಾಯಿಂಟ್ಸ್ ಮೇಲೆ ಪ್ರಭಾವ ಬೀರಲ್ಲ!

ಈ ಪಂದ್ಯದಲ್ಲಿ ಭಾರತ ಗೆದ್ದರೂ ಅಥವಾ ಸೋತರೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಾಯಿಂಟ್ಸ್ ಟೇಬಲ್‌ನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಭಾರತ ತಂಡವು ಪ್ರಸ್ತುತ WTC ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಶ್ರೀಲಂಕಾ, ವೆಸ್ಟ್ ಇಂಡೀಸ್ ಹಾಗೂ ನ್ಯೂಝಿಲೆಂಡ್ ತಂಡಗಳ ವಿರುದ್ಧದ ಸರಣಿಗಳನ್ನು ಅವಲಂಬಿಸಬೇಕಾಗಿದೆ.

ಮತ್ತೇಕೆ ಪಂದ್ಯವಾಡುತ್ತಿದ್ದಾರೆ?

  •  ಐಸಿಸಿ ರ‍್ಯಾಂಕಿಂಗ್ ಬದಲಾವಣೆ: ಈ ಪಂದ್ಯದಿಂದ WTC ಪಾಯಿಂಟ್ಸ್ ಸಿಗದಿದ್ದರೂ, ತಂಡಗಳ ಮತ್ತು ಆಟಗಾರರ ಅಧಿಕೃತ ಐಸಿಸಿ (ICC) ರ‍್ಯಾಂಕಿಂಗ್ ಮೇಲೆ ಇದು ಪ್ರಭಾವ ಬೀರುತ್ತದೆ.
  •  ಭವಿಷ್ಯದ ಸಿದ್ಧತೆ: ಮುಂಬರುವ ಪ್ರಮುಖ ಟೆಸ್ಟ್ ಸರಣಿಗಳಿಗೆ ಯುವ ಆಟಗಾರರನ್ನು ಸಿದ್ಧಪಡಿಸಲು ಮತ್ತು ಹೊಸ ಸಂಯೋಜನೆಗಳನ್ನು ಪರೀಕ್ಷಿಸಲು ಭಾರತೀಯ ಮ್ಯಾನೇಜ್‌ಮೆಂಟ್‌ಗೆ ಇದೊಂದು ಉತ್ತಮ ಅವಕಾಶವಾಗಿದೆ.
  •  ದ್ವಿಪಕ್ಷೀಯ ಬಾಂಧವ್ಯ: ಅಫ್ಘಾನಿಸ್ತಾನ್ ಕ್ರಿಕೆಟ್ ಬೆಳವಣಿಗೆಗೆ ಭಾರತ ಮೊದಲಿನಿಂದಲೂ ಬೆಂಬಲ ನೀಡುತ್ತಾ ಬಂದಿದ್ದು, ಈ ಪಂದ್ಯವು ಉಭಯ ದೇಶಗಳ ಕ್ರೀಡಾ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲಿದೆ.

ಭಾರತದ ಮುಂದಿನ WTC ಸರಣಿ ಯಾವುದು?

ಭಾರತ ತಂಡದ ಮುಂದಿನ ಅಧಿಕೃತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಸರಣಿಯು ಆಗಸ್ಟ್ 2026 ರಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 2 ಟೆಸ್ಟ್ ಪಂದಗಳನ್ನಾಡಲಿದೆ. ಇದಾದ ಬಳಿಕ ನ್ಯೂಝಿಲೆಂಡ್ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ತಲಾ 2 ಪಂದ್ಯಗಳ ಟೆಸ್ಟ್ ಸರಣಿಗಳನ್ನು ಆಡಲಿದೆ.

ಇದನ್ನೂ ಓದಿ: ಟೀಮ್ ಇಂಡಿಯಾದ ಹೊಸ ಆಶಾಕಿರಣ: ಯಾರು ಈ ಮಾನವ್ ಸುತಾರ್?

ಆ ಬಳಿಕ ಭಾರತ ತಂಡವು ನವೆಂಬರ್-ಡಿಸೆಂಬರ್​ನಲ್ಲಿ ಸೌತ್ ಆಫ್ರಿಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಈ ಸರಣಿಯ ಬೆನ್ನಲ್ಲೇ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಶುರುವಾಗಲಿದೆ. ಈ ಎಲ್ಲಾ ಪಂದ್ಯಗಳು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಭಾಗವಾಗಿದ್ದು, ಟೀಮ್ ಇಂಡಿಯಾ WTC ನಲ್ಲಿ ಫೈನಲ್​ಗೇರಲು ಈ ಮ್ಯಾಚ್​ಗಳು ನಿರ್ಣಾಯಕ.

Published On – 11:14 am, Sat, 6 June 26

Source link

Viral: ಆಟೋ ಬಾಡಿಗೆ 150ರೂ., ಖಾತೆಗೆ ಬಂದಿದ್ದು 15 ಸಾವಿರ; ಪ್ರಯಾಣಿಕನ ಹಣವನ್ನು ಮರಳಿಸಿ ಮಾದರಿಯಾದ ಚಾಲಕ – Kannada News

ಆಟೋ ಚಾಲಕನ ಪ್ರಮಾಣಿಕತೆImage Credit source: Pinterest

ಬೆಂಗಳೂರು: ಇಂದಿನ ಕಾಲದಲ್ಲಿ ಪ್ರಾಮಾಣಿಕತೆ ಎಂಬುದೇ ಇಲ್ಲ ಎಂಬ ಮಾತುಗಳ ನಡುವೆ, ಬೆಂಗಳೂರಿನ ಆಟೋ ಚಾಲಕನೊಬ್ಬ ತನ್ನ ಅಪ್ಪಟ ಪ್ರಾಮಾಣಿಕತೆಯಿಂದ ಇಡೀ ಇಂಟರ್ನೆಟ್ ಜಗತ್ತಿನ ಮನ ಗೆದ್ದಿದ್ದಾನೆ. ಆಟೋ ಬಾಡಿಗೆಯಾಗಿ ಕೇವಲ 150 ರೂಪಾಯಿ ಡಿಜಿಟಲ್ ಪಾವತಿ ಮಾಡಬೇಕಿದ್ದ ಪ್ರಯಾಣಿಕನೊಬ್ಬ, ಆತುರದಲ್ಲಿ ಆಕಸ್ಮಿಕವಾಗಿ ಬರೋಬ್ಬರಿ 15,682 ರೂಪಾಯಿಗಳನ್ನು ಚಾಲಕನ ಖಾತೆಗೆ ವರ್ಗಾಯಿಸಿ ಆತಂಕಕ್ಕೊಳಗಾಗಿದ್ದನು. ಆದರೆ, ಪ್ರಯಾಣಿಕನ ತಪ್ಪು ಅರಿವಾದ ತಕ್ಷಣವೇ ಯಾವುದೇ ಹಿಂಜರಿಕೆಯಿಲ್ಲದೆ ಇಡೀ ಮೊತ್ತವನ್ನು ಪ್ರಾಮಾಣಿಕವಾಗಿ ಮರಳಿ ನೀಡುವ ಮೂಲಕ ಆಟೋ ಚಾಲಕ ಮಾನವೀಯತೆ ಮೆರೆದಿದ್ದಾನೆ. ತನಗಲ್ಲದ ಹಣ ಬೇಡ ಎಂಬ ಚಾಲಕನ ಈ ಉದಾತ್ತ ಗುಣದ ಕುರಿತು ಪ್ರಯಾಣಿಕ ಲಿಂಕ್ಡ್‌ಇನ್ (LinkedIn) ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸದ್ಯ ಈ ಹೃದಯಸ್ಪರ್ಶಿ ಕಥೆ ನೆಟ್ಟಿಗರ ಅಪಾರ ಪ್ರಶಂಸೆಗೆ ಪಾತ್ರವಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಅಸಲಿಗೆ ನಡೆದಿದ್ದೇನು?

ಸಾಮಾನ್ಯ ದಿನದಂತೆ ಪ್ರಯಾಣಿಕನೊಬ್ಬ ಆಟೋದಲ್ಲಿ ಪ್ರಯಾಣಿಸಿದ್ದನು. ಪ್ರಯಾಣ ಮುಗಿದ ಬಳಿಕ ಆಟೋ ಬಾಡಿಗೆಯನ್ನು ಆನ್‌ಲೈನ್ (Digital Payment) ಮೂಲಕ ಪಾವತಿಸುವಾಗ, ಆ ಪ್ರಯಾಣಿಕನಿಂದ ದೊಡ್ಡದೊಂದು ಎಡವಟ್ಟಾಗಿದೆ. ಚಾಲಕನಿಗೆ ಕಳುಹಿಸಬೇಕಾದ ಸಣ್ಣ ಮೊತ್ತ ಅಂದರೆ 156ರೂ. ಬದಲಿಗೆ, ಆಕಸ್ಮಿಕವಾಗಿ ಬರೋಬ್ಬರಿ 15,682ರೂ. ಹಣವನ್ನು ಚಾಲಕನ ಖಾತೆಗೆ ವರ್ಗಾಯಿಸಿದ್ದಾನೆ.

ಟ್ರಾನ್ಸಾಕ್ಷನ್ ಪೂರ್ಣಗೊಂಡ ಮೇಲೆಯೇ ಪ್ರಯಾಣಿಕನಿಗೆ ತಾನು ಮಾಡಿದ ತಪ್ಪು ಅರಿವಿಗೆ ಬಂದಿದೆ. ಅಪರಿಚಿತ ಆಟೋ ಚಾಲಕನಿಂದ ಇಷ್ಟು ದೊಡ್ಡ ಮೊತ್ತದ ಹಣ ಮರಳಿ ಸಿಗುತ್ತದೋ ಇಲ್ಲವೋ ಎಂಬ ಆತಂಕದಲ್ಲೇ ಆತ ಚಾಲಕನನ್ನು ಸಂಪರ್ಕಿಸಲು ಯತ್ನಿಸಿದ್ದಾನೆ.

ತಕ್ಷಣ ಹಣ ಮರಳಿಸಿದ ಚಾಲಕ:

ಆದರೆ, ಪ್ರಯಾಣಿಕನ ಆತಂಕ ಕ್ಷಣಾರ್ಧದಲ್ಲಿ ದೂರಾಗಿದೆ. ಪ್ರಯಾಣಿಕ ಸಂಪರ್ಕಿಸಿದ ತಕ್ಷಣವೇ ಸ್ಪಂದಿಸಿದ ಆಟೋ ಚಾಲಕ, ತನ್ನ ಖಾತೆಗೆ ಹೆಚ್ಚುವರಿ ಹಣ ಬಂದಿರುವುದನ್ನು ಒಪ್ಪಿಕೊಂಡಿದ್ದಾನಲ್ಲದೆ, ಅಲ್ಲದೇ ಸಂಪೂರ್ಣ ಮೊತ್ತವನ್ನು ತಕ್ಷಣವೇ ಪ್ರಯಾಣಿಕನಿಗೆ ಮರಳಿ ವರ್ಗಾಯಿಸಿದ್ದಾನೆ. ತನಗಲ್ಲದ ಹಣ ತನಗೆ ಬೇಡ ಎಂಬ ಚಾಲಕನ ಈ ನಿರ್ಧಾರ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 1BHK ಮನೆಗೆ 45,000 ರೂ ಬಾಡಿಗೆ; ಕಠಿಣ ನಿರ್ಧಾರ ಕೈಗೊಂಡ ಉದ್ಯೋಗಿ

ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ:

ತಮಗೆ ಎದುರಾದ ಈ ಅಪರೂಪದ ಅನುಭವವನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ. ಆಟೋ ಚಾಲಕನ ಪ್ರಾಮಾಣಿಕತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ. “ಇಂತಹ ಘಟನೆಗಳು ಮನುಷ್ಯತ್ವದ ಮೇಲಿನ ನಂಬಿಕೆಯನ್ನು ಮತ್ತೆ ಚಿಗುರಿಸುತ್ತವೆ” ಎಂದು ಸಾವಿರಾರು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ವಿವಾದಾತ್ಮಕ ಸುದ್ದಿಗಳೇ ಸದ್ದು ಮಾಡುತ್ತಿರುವಾಗ, ಈ ಆಟೋ ಚಾಲಕನ ಸರಳ ನಡೆ ಎಲ್ಲರಿಗೂ ಮಾದರಿಯಾಗಿದೆ. ಈತನ ಪ್ರಾಮಾಣಿಕತೆಗೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:51 am, Sat, 6 June 26

Source link

‘ನಾನಿನ್ನ ಬಿಡಲಾರೆ’: ಅತ್ತೆ ಮಾಳವಿಕಾಳ ನಿಜರೂಪ ಕಂಡು ಬೆಚ್ಚಿಬಿದ್ದ ದುರ್ಗಾ – Kannada News

ಜೀ ಕನ್ನಡ ವಾಹಿನಿಯ ಪ್ರೇಕ್ಷಕರ ನೆಚ್ಚಿನ ‘ನಾನಿನ್ನ ಬಿಡಲಾರೆ’ ಧಾರಾವಾಹಿಯು ಈಗ ಅತ್ಯಂತ ರೋಮಾಂಚನಕಾರಿ ತಿರುವು ಪಡೆದುಕೊಂಡಿದೆ. ಇದುವರೆಗೆ ಯಾರನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ನಂಬಿದ್ದಳೋ, ಯಾರನ್ನು ಮನೆಯ ನಂದಾದೀಪ ಎಂದುಕೊಂಡಿದ್ದಳೋ, ಆ ಅತ್ತೆ ಮಾಳವಿಕಾಳ ಅಸಲಿ ಮುಖವಾಡ ಈಗ ದುರ್ಗಾಳ ಎದುರು ಕಳಚಿ ಬಿದ್ದಿದೆ. ಸದಾ ಒಳ್ಳೆಯವಳಂತೆ ನಟಿಸುತ್ತಿದ್ದ ಅತ್ತೆಯ ನಿಜವಾದ ಬಣ್ಣ ಬಯಲಾಗುತ್ತಿದ್ದಂತೆ ದುರ್ಗಾ ತೀವ್ರ ಆಘಾತಕ್ಕೊಳಗಾಗಿದ್ದಾಳೆ.

ದುರ್ಗಾ ತನ್ನ ಇಡೀ ಬದುಕು, ತನ್ನ ಅಪ್ಪ, ಅಕ್ಕನ ಸಾವು ಎಲ್ಲವೂ ನಿಗೂಢತೆಯಿಂದ ಕೂಡಿದೆ ಎಂದುಕೊಂಡಿರುತ್ತಾಳೆ. ಆದರೆ, ತಾನು ಹೆಜ್ಜೆ ಇಟ್ಟಿರುವ ಈ ಮನೆಯಲ್ಲೂ ಇಷ್ಟೊಂದು ನಿಗೂಢತೆ ಅಡಗಿದೆ ಎಂಬ ಸತ್ಯ ಅವಳಿಗೆ ತಡವಾಗಿ ಅರಿವಾಗಿದೆ. ಈ ಮನೆಯ ಸರ್ವನಾಶಕ್ಕೆ ಹೊಂಚು ಹಾಕುತ್ತಿರುವ ಮುಖ್ಯ ಸೂತ್ರಧಾರಿಯೇ ಅತ್ತೆ ಮಾಳವಿಕಾ ಎಂಬ ಕಹಿ ಸತ್ಯ ಈಗ ಅವಳಿಗೆ ಗೊತ್ತಾಗಿದೆ. ಅತ್ತೆಯ ರೂಪದಲ್ಲಿರುವ ಮಾಳವಿಕಾ, ಕುರಿ ಚರ್ಮ ಹೊದ್ದಿರುವ ನರಿ ಎಂಬುದನ್ನು ದುರ್ಗಾ ಪತ್ತೆಹಚ್ಚಿದ್ದಾಳೆ.

ಇದನ್ನೂ ಓದಿ: ‘ಅಮೃತಧಾರೆ’ ಧಾರಾವಾಹಿ: ಮಗಳು ಮಿಂಚು ಕಿಡ್ನ್ಯಾಪ್, ಭದ್ರಕಾಳಿ ಅವತಾರ ತಾಳಿದ ಭೂಮಿಕಾ

ತನ್ನ ಅತ್ತೆಯ ದುಷ್ಟ ಶಕ್ತಿಯ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ನಿರ್ಧರಿಸಿರುವ ದುರ್ಗಾ, ಈಗ ಸತ್ಯ ದರ್ಶನದ ಬೆನ್ನಲ್ಲೇ ಉಗ್ರ ರೂಪ ತಾಳಿದ್ದಾಳೆ. ‘ನಿನ್ನ ದುಷ್ಟ ಶಕ್ತಿಯನ್ನು ನಾಶ ಮಾಡಿ ನನ್ನ ಇಡೀ ವಂಶವನ್ನು ನಾನು ಕಾಪಾಡಿಕೊಳ್ಳುತ್ತೇನೆ, ಇದು ನಿನ್ನ ಅಂತ್ಯದ ಆರಂಭ’ ಎಂದು ಮಾಳವಿಕಾಗೆ ಸವಾಲು ಹಾಕಿದ್ದಾಳೆ.

ತನ್ನವರ ರಕ್ಷಣೆಗಾಗಿ ಕೈಯಲ್ಲಿ ತ್ರಿಶೂಲ ಹಿಡಿದು ಭದ್ರಕಾಳಿಯಂತೆ ನಿಂತಿರುವ ದುರ್ಗಾಳ ಈ ಹೊಸ ಅವತಾರ ಜಬರ್ದಸ್ತ್ ಜೂನ್ ಸಂಚಿಕೆಗಳಲ್ಲಿ ಪ್ರಸಾರವಾಗಲಿದ್ದು, ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಮಹಾ ತಿರುವಿನೊಂದಿಗೆ ಮೂಡಿಬರುತ್ತಿರುವ ಈ ಸಂಚಿಕೆಗಳು ದುಷ್ಟ ಸಂಹಾರಕ್ಕೆ ಹೊಸ ಮುನ್ನುಡಿ ಬರೆಯಲಿವೆ. ಇತ್ತ, ಮಾಳವಿಕಾ ಹಲವು ದುಷ್ಟ ಶಕ್ತಿಗಳನ್ನು ಕರಗತ ಮಾಡಿಕೊಂಡಿದ್ದು, ಆಕೆ ಇದಕ್ಕೆ ಯಾವ ರೀತಿಯಲ್ಲಿ ತಿರುಮಂತ್ರ ಹಾಕುತ್ತಾಳೆ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಡ ಮಕ್ಕಳ ಹೊಟ್ಟೆಮೇಲೆ ಹೊಡೆದ ವಾರ್ಡನ್; 3 ದಿನ ಅನ್ನ-ನೀರಿಲ್ಲದೆ ಪಕ್ಕದ ಹಾಸ್ಟೆಲ್‌ನಲ್ಲಿ ಕೈಚಾಚಿದ ವಿದ್ಯಾರ್ಥಿಗಳು! – Kannada News

ರಾಯಚೂರು, ಜೂನ್ 06: ಕಡು ಬಡತನದ ಹಿನ್ನೆಲೆಯಿಂದ ಬಂದು, ವಿದ್ಯಾಭ್ಯಾಸಕ್ಕಾಗಿ ಸರ್ಕಾರಿ ವಸತಿ ನಿಲಯಗಳನ್ನೇ ನಂಬಿಕೊಂಡಿರುವ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲೊಂದು ಭೀಕರ ಅನ್ಯಾಯ ನಡೆದಿದೆ. ಜಿಲ್ಲೆಯ (Raichur) ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಕಳೆದ ಮೂರು ದಿನಗಳಿಂದ ಊಟ ಮತ್ತು ಕುಡಿಯುವ ನೀರಿಲ್ಲದೆ ವಿದ್ಯಾರ್ಥಿಗಳು ತೀವ್ರ ಪರದಾಟ ನಡೆಸಿದ್ದಾರೆ. ಹಸಿವಿನ ನೋವು ತಾಳಲಾರದೇ ನೂರಾರು ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಕಚೇರಿ ಎದುರು ಬೀದಿಗಿಳಿದು ಆಕ್ರೋಶ ಹೊರಹಾಕಿದ್ದಾರೆ.

ಮುಖ್ಯಾಂಶಗಳು

  • ರಾಯಚೂರಿನ ಸರ್ಕಾರಿ ಹಾಸ್ಟೆಲ್‌ನಲ್ಲಿ ಮೂರು ದಿನಗಳಿಂದ ಅನ್ನ-ನೀರಿಲ್ಲದೆ ವಿದ್ಯಾರ್ಥಿಗಳ ಪರದಾಟ.
  • ಹಸಿವು ತಾಳಲಾರದೆ ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರು ಪ್ರತಿಭಟನೆ.
  • ಬೇಜವಾಬ್ದಾರಿ ವಾರ್ಡನ್ ಮೆಹಬೂಬ್ ವಿರುದ್ಧ ವಿದ್ಯಾರ್ಥಿಗಳಿಂದ ತೀವ್ರ ಆಕ್ರೋಶ.

ಬೇರೆ ಹಾಸ್ಟೆಲ್ ಮುಂದೆ ಅನ್ನಕ್ಕಾಗಿ ಕೈಚಾಚಿದ್ವಿ ಎಂದ ವಿದ್ಯಾರ್ಥಿಗಳು

ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ವಿವಿಧ ಗ್ರಾಮೀಣ ಭಾಗಗಳ ನೂರಾರು ಬಡ ವಿದ್ಯಾರ್ಥಿಗಳು ಈ ಹಾಸ್ಟೆಲ್‌ನಲ್ಲಿದ್ದಾರೆ. ಕಳೆದ ಮೂರು ದಿನಗಳಿಂದ ಇಲ್ಲಿ ಒಂದು ಹೊತ್ತಿನ ಊಟವಾಗಲಿ ಅಥವಾ ಕುಡಿಯುವ ನೀರಾಗಲಿ ಸಿಕ್ಕಿಲ್ಲ. ಆರಂಭದಲ್ಲಿ ವಿದ್ಯಾರ್ಥಿಗಳು ತಮ್ಮ ಕೈಲಿದ್ದ ಅಲ್ಪಸ್ವಲ್ಪ ಹಣದಲ್ಲೇ ಹೋಟೆಲ್‌ನಲ್ಲಿ ತಿಂದಿದ್ದಾರೆ. ಹಣ ಖಾಲಿಯಾದ ಮೇಲೆ ವಿಧಿಯಿಲ್ಲದೇ ಪಕ್ಕದ ಮತ್ತೊಂದು ಹಾಸ್ಟೆಲ್‌ಗೆ ತೆರಳಿ, ಅಲ್ಲಿನ ಮಕ್ಕಳ ಬಳಿ ಆಹಾರ ಕೇಳಿ ಪಡೆದು ಹಸಿವು ನೀಗಿಸಿಕೊಂಡಿದ್ದಾರೆ. ಬಿರು ಬಿಸಿಲಿನ ನಡುವೆಯೂ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಎದುರು ಧರಣಿ ಕುಳಿತ ವಿದ್ಯಾರ್ಥಿಗಳು, ನಮಗೆ ಅನ್ನ ಕೊಡಿ, ನೀರು ಕೊಡಿ ಎಂದು ಕಣ್ಣೀರಿಟ್ಟಿದ್ದಾರೆ.

ವಾರ್ಡನ್ ಮಹಾಶಯನ ಉಡಾಫೆ ವರ್ತನೆ!

ವಿದ್ಯಾರ್ಥಿಗಳ ಈ ದುಸ್ಥಿತಿಗೆ ಹಾಸ್ಟೆಲ್ ವಾರ್ಡನ್ ಮೆಹಬೂಬ್ ಎಂಬಾತನೇ ನೇರ ಕಾರಣ ಎಂದು ಮಕ್ಕಳು ಆರೋಪಿಸಿದ್ದಾರೆ. ವಾರ್ಡನ್ ತಾನೇ ಖುದ್ದಾಗಿ ವಿದ್ಯಾರ್ಥಿಗಳಿಗೆ ಫೋನ್ ಮಾಡಿ ಹಾಸ್ಟೆಲ್ ಆರಂಭವಾಗಿದೆ, ಬನ್ನಿ ಎಂದು ಕರೆಸಿಕೊಂಡಿದ್ದನು. ಆದರೆ ಮಕ್ಕಳು ಬಂದ ಮೇಲೆ ಕನಿಷ್ಠ ಸೌಲಭ್ಯವನ್ನೂ ನೀಡಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ನೀವು ಯಾರಿಗೆ ಬೇಕಾದರೂ ದೂರು ಕೊಡಿ, ಡಿಸಿಗೆ (DC) ಬೇಕಾದರೂ ಹೇಳಿ, ಡಿಡಿಗೆ (DD) ಬೇಕಾದರೂ ಹೇಳಿ ಎಂದು ಉಡಾಫೆಯಾಗಿ ಉತ್ತರಿಸಿದ್ದಾನೆ ಎಂದು ವಿದ್ಯಾರ್ಥಿ ವಿಕಾಸ್ ರಾಠೋಡ್ ಆರೋಪಿಸಿದ್ದಾರೆ.

ಇದನ್ನೂ ಓದಿ ಸರ್ಕಾರಿ ಅಧಿಕಾರಿಗಳಿನ್ನು ಬೆಳಗ್ಗೆ 10 ಗಂಟೆಗೆ ಆಫೀಸ್​ನಲ್ಲಿರಲೇಬೇಕು: ಇಲ್ಲಾಂದ್ರೆ ಇಲಾಖಾ ಮುಖ್ಯಸ್ಥರಿಗೆ ಹೋಗುತ್ತೆ AI ರಿಪೋರ್ಟ್!

ವಾರ್ಡನ್ ವರ್ಗಾವಣೆಗೆ ವಿದ್ಯಾರ್ಥಿಗಳ ಪಟ್ಟು

ವಿದ್ಯಾರ್ಥಿಗಳು ಇಲಾಖೆಯ ಕಚೇರಿ ಎದುರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಂತೆ ಎಚ್ಚೆತ್ತ ವಾರ್ಡನ್ ಮೆಹಬೂಬ್ ದಿಢೀರನೆ ಸ್ಥಳದಲ್ಲಿ ಪ್ರತ್ಯಕ್ಷನಾಗಿದ್ದಾನೆ. ಆದರೆ ಆಕ್ರೋಶಗೊಂಡಿರುವ ವಿದ್ಯಾರ್ಥಿಗಳು, ನಮಗೆ ಇಂತಹ ಬೇಜವಾಬ್ದಾರಿ ವಾರ್ಡನ್ ಬೇಡವೇ ಬೇಡ, ತಕ್ಷಣ ಇವನನ್ನು ವರ್ಗಾವಣೆ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

2 ದಿನಗಳಲ್ಲಿ 33 ವಿಕೆಟ್ ಪತನ: ರೋಚಕ ಘಟ್ಟದಲ್ಲಿ ‘ಲಾರ್ಡ್ಸ್’​ ಟೆಸ್ಟ್

ಲಾರ್ಡ್ಸ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯವು ರೋಚಕಘಟ್ಟದತ್ತ ಸಾಗಿದೆ. ಅದು ಕೂಡ ಕೇವಲ 2 ದಿನಗಳಲ್ಲಿ 33 ವಿಕೆಟ್​ಗಳ ಪತನದೊಂದಿಗೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲ ಇನಿಂಗ್ಸ್ ಆಡಿದ ಇಂಗ್ಲೆಂಡ್ ತಂಡವು ಕೇವಲ 140 ರನ್​ಗಳಿಗೆ ಆಲೌಟ್ ಆಗಿದ್ದರು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ನ್ಯೂಝಿಲೆಂಡ್ ಕೇವಲ 113 ರನ್​ಗಳಿಗೆ ಸರ್ಪಪತನ ಕಂಡಿತು.

27 ರನ್​ಗಳ ಅಲ್ಪ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್  226 ರನ್​​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ದ್ವಿತೀಯ ಇನಿಂಗ್ಸ್​ನಲ್ಲಿ ನ್ಯೂಝಿಲೆಂಡ್ ತಂಡಕ್ಕೆ 254 ರನ್​ಗಳ ಗುರಿ ನೀಡಿದೆ.

ಈ ಗುರಿ ಬೆನ್ನತ್ತಿರುವ ನ್ಯೂಝಿಲೆಂಡ್ ತಂಡವು ದ್ವಿತೀಯ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು ಕೇವಲ 36 ರನ್​ ಕಲೆಹಾಕಿದೆ.

ಇನ್ನೂ 3 ದಿನದಾಟಗಳು ಬಾಕಿಯಿದ್ದು, ನ್ಯೂಝಿಲೆಂಡ್ ತಂಡವು ಗೆಲ್ಲಲು 218 ರನ್​​ ಕಲೆಹಾಕಬೇಕಿದೆ. ಅತ್ತ ಇಂಗ್ಲೆಂಡ್ ತಂಡಕ್ಕೆ 7 ವಿಕೆಟ್​ಗಳ ಅವಶ್ಯಕತೆಯಿದೆ. ಹೀಗಾಗಿ ಮೂರನೇ ದಿನದಾಟದಲ್ಲಿ ಫಲಿತಾಂಶ ನಿರ್ಧಾರವಾಗುವ ಸಾಧ್ಯತೆ ಹೆಚ್ಚಿದೆ.

 

Source link