All posts by nagaraj11081993

‘ದಿ ರಾಜಾ ಸಾಬ್’ ಸೋಲಿನ ಬಳಿಕ ಹೊಸ ಸಿನಿಮಾ ಘೋಷಿಸಿದ ನಿರ್ದೇಶಕ ಮಾರುತಿ

‘ದಿ ರಾಜಾ ಸಾಬ್’ ಸೋಲಿನ ಬಳಿಕ ಹೊಸ ಸಿನಿಮಾ ಘೋಷಿಸಿದ ನಿರ್ದೇಶಕ ಮಾರುತಿ

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ (The Raja Saab) ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆ ಚಿತ್ರಕ್ಕೆ ನಿರ್ದೇಶಕ ಮಾರುತಿ ಅವರು ಆ್ಯಕ್ಷನ್-ಕಟ್ ಹೇಳಿದ್ದರು. ಪ್ರಭಾಸ್ ಅವರ ಮೊದಲ ಹಾರರ್ ಸಿನಿಮಾ ಎಂಬ ಕಾರಣಕ್ಕೆ ಹೈಪ್ ಹೆಚ್ಚಿತ್ತು. ಆದರೆ ಬಾಕ್ಸ್ ಆಫೀಸ್‌ನಲ್ಲಿ ಆ ಸಿನಿಮಾ ಮಕಾಡೆ ಮಲಗಿತು. ‘ದಿ ರಾಜಾ ಸಾಬ್’ ಸಿನಿಮಾದ ಸೋಲನ್ನು ಒಪ್ಪಿಕೊಂಡಿರುವ ನಿರ್ದೇಶಕ ಮಾರುತಿ (Director Maruthi) ಈಗ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ.

2026ರ ಆರಂಭದಲ್ಲಿ ಬಿಡುಗಡೆಯಾದ ‘ದಿ ರಾಜಾ ಸಾಬ್’ ಹಾರರ್ ಕಾಮಿಡಿ ಸಿನಿಮಾ ಆದ್ದರಿಂದ ಭಾರಿ ಕುತೂಹಲ ಮೂಡಿಸಿತ್ತು. ಮೊದಲ ದಿನವೇ ವಿಶ್ವದಾದ್ಯಂತ 100 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದರೂ, ಕಳಪೆ ವಿಮರ್ಶೆ ಮತ್ತು ಪ್ರೇಕ್ಷಕರ ನಕಾರಾತ್ಮಕ ಪ್ರತಿಕ್ರಿಯೆಯಿಂದಾಗಿ ಚಿತ್ರದ ಕಲೆಕ್ಷನ್ ಕುಸಿಯಿತು. ಒಟ್ಟಾರೆ 200 ಕೋಟಿ ರೂಪಾಯಿ ಗಳಿಸಿದರೂ ಸಹ, ವಿತರಕರಿಗೆ ಸುಮಾರು 160-170 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಈ ಎಲ್ಲ ಬೆಳವಣಿಗೆಗಳ ನಂತರ ಸೋಶಿಯಲ್ ಮೀಡಿಯಾದಿಂದ ದೂರವಿದ್ದ ಮಾರುತಿ, ಶ್ರೀರಾಮನವಮಿಯ ಶುಭ ಸಂದರ್ಭದಲ್ಲಿ ಅಭಿಮಾನಿಗಳಿಗೆ ಅಪ್‌ಡೇಟ್ ನೀಡಿದ್ದಾರೆ. ತಮ್ಮ ಮನೆಯ ದೇವರ ಕೋಣೆಯಲ್ಲಿ ಪೂಜೆ ಸಲ್ಲಿಸುತ್ತಿರುವ ಫೋಟೋ ಹಂಚಿಕೊಂಡಿರುವ ಅವರು, ದೇವರ ಮುಂದಿರುವ ಸ್ಕ್ರಿಪ್ಟ್ ಪುಸ್ತಕದ ಮೇಲೆ ಹೂವುಗಳನ್ನು ಇರಿಸಿ ಹೊಸ ಚಿತ್ರದ ಸುಳಿವು ನೀಡಿದ್ದಾರೆ.

‘ಪ್ರತಿಯೊಂದು ಪ್ರಯಾಣವೂ ಒಂದು ಕಲಿಕೆಯ ಅನುಭವ. ಈ ಪವಿತ್ರ ಶ್ರೀರಾಮನವಮಿಯ ಸಂದರ್ಭದಲ್ಲಿ, ದೇವರ ಆಶೀರ್ವಾದದೊಂದಿಗೆ ನನ್ನ ಮುಂದಿನ ಚಿತ್ರದ ಸ್ಕ್ರಿಪ್ಟ್‌ಗೆ ಅಂತಿಮ ಸ್ಪರ್ಶ ನೀಡುತ್ತಿರುವುದಕ್ಕೆ ನನಗೆ ಹೆಮ್ಮೆಯಿದೆ’ ಎಂದು ಮಾರುತಿ ಅವರು ಪೋಸ್ಟ್ ಮಾಡಿದ್ದಾರೆ. ಸದ್ಯಕ್ಕೆ ಈ ಚಿತ್ರದಲ್ಲಿ ಯಾರು ನಟಿಸಲಿದ್ದಾರೆ ಅಥವಾ ಇದು ಯಾವ ರೀತಿಯ ಕಥೆ ಎಂಬ ಬಗ್ಗೆ ಮಾರುತಿ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

ಇದನ್ನೂ ಓದಿ: ದಿ ರಾಜಾ ಸಾಬ್: ಚಿತ್ರಮಂದಿರದಲ್ಲಿ ಪ್ರಭಾಸ್ ಸಿನಿಮಾ ಫ್ಲಾಪ್, ಒಟಿಟಿಯಲ್ಲಿ ಸೂಪರ್ ಹಿಟ್

ಕೇವಲ ಹೊಸ ಸಿನಿಮಾ ಮಾತ್ರವಲ್ಲದೆ, ‘ದಿ ರಾಜಾ ಸಾಬ್’ ಚಿತ್ರಕ್ಕೆ ಸಿಕ್ಕ ವಿಮರ್ಶೆಗಳ ಬಗ್ಗೆಯೂ ಮಾರುತಿ ಮೃದುವಾಗಿ ಪ್ರತಿಕ್ರಿಯಿಸಿದ್ದಾರೆ. ‘ನನ್ನನ್ನು ಸದಾ ಬೆಂಬಲಿಸುವ ಮತ್ತು ಅಮೂಲ್ಯವಾದ ಪ್ರತಿಕ್ರಿಯೆಗಳನ್ನು ನೀಡಿದ ಪ್ರೇಕ್ಷಕರಿಗೆ, ಮಾಧ್ಯಮ ಮಿತ್ರರಿಗೆ ಧನ್ಯವಾದಗಳು. ನಿಮ್ಮ ಪ್ರತಿಯೊಂದು ಟೀಕೆಯನ್ನು ನಾನು ಗೌರವಿಸುತ್ತೇನೆ. ಮುಂದಿನ ದಿನಗಳಲ್ಲಿ ನಿಮ್ಮ ಮೆಚ್ಚುಗೆ ಗಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಧುರಂಧರ್’ ಸಿನಿಮಾದಲ್ಲಿನ ಹಲವು ತಪ್ಪುಗಳ ಪಟ್ಟಿ ನೀಡಿದ ಪಾಕಿಸ್ತಾನಿ ಪ್ರೇಕ್ಷಕರು

ರಣವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ಬಗ್ಗೆ ಎಲ್ಲ ಕಡೆಗಳಲ್ಲಿ ಚರ್ಚೆ ಆಗುತ್ತಿದೆ. ಪಾಕಿಸ್ತಾನದಲ್ಲಿ ಈ ಸಿನಿಮಾ ಬಿಡುಗಡೆ ಆಗಿಲ್ಲ. ಹಾಗಿದ್ದರೂ ಕೂಡ ಪಾಕ್ ಜನರು ಬೇರೆ ದೇಶಗಳಲ್ಲಿ ಹಾಗೂ ಪೈರಸಿ ಮೂಲಕ ಈ ಸಿನಿಮಾವನ್ನು ವೀಕ್ಷಿಸಿದ್ದಾರೆ. ‘ಧುರಂಧರ್’ (Dhurandhar) ಹೇಗಿದೆ ಎಂದು ಪಾಕ್ ಪ್ರೇಕ್ಷಕರು ವಿಮರ್ಶೆ ನೀಡುತ್ತಿದ್ದಾರೆ. ಅಂಥ ವಿಡಿಯೋಗಳು ಸಖತ್ ಸದ್ದು ಮಾಡುತ್ತಿವೆ. ಈ ಸಿನಿಮಾದಲ್ಲಿ ಯಾವೆಲ್ಲ ತಪ್ಪುಗಳು ಇವೆ ಎಂಬುದರ ಬಗ್ಗೆ ಪಾಕ್ (Pakistan) ಪ್ರಜೆಗಳಿಬ್ಬರು ಮಾತನಾಡಿದ ವಿಡಿಯೋ ಈಗ ವೈರಲ್ ಆಗಿದೆ.

‘ಧುರಂಧರ್ ಒಂದು ಓವರ್​ ರೇಟೆಡ್ ಸಿನಿಮಾ. ಈ ಚಿತ್ರದಲ್ಲಿ ಒಂದು ಡೈಲಾಗ್ ಇದೆ. ಯಾರು ಲಿಯಾರಿ ನಿಯಂತ್ರಣ ಮಾಡುತ್ತಾರೋ ಅವರು ಕರಾಚಿ ನಿಯಂತ್ರಿಸುತ್ತಾರೆ. ಯಾರು ಕರಾಚಿ ನಿಯಂತ್ರಿಸುತ್ತಾರೋ ಅವರು ಪಾಕಿಸ್ತಾನವನ್ನೇ ನಿಯಂತ್ರಿಸುತ್ತಾರೆ. ನಮಗೆ ಈ ಡೈಲಾಗ್ ಸಖತ್ ಫನ್ನಿ ಎನಿಸಿತು. ಕರಾಚಿಯು ಮೂಲ ನಿವಾಸಿಗಳ ನಗರ ಅಲ್ಲ. ಅದು ಅನಾಥರ ನಗರ’ ಎಂದು ಪ್ರೇಕ್ಷಕರು ಹೇಳಿದ್ದಾರೆ.

‘ನಮ್ಮ ಕುಟುಂಬದ ಮೂಲ ಇರುವುದು ಲಿಯಾರಿಯಲ್ಲಿ. ಅಲ್ಲಿ ಗ್ಯಾಂಗ್ ವಾರ್ ಇದ್ದಿದ್ದು ಮತ್ತು ಇರುವುದು ನಿಜ. ಆದರೆ ಅದು ನೆರೆಹೊರೆಯವರ ಸಣ್ಣ ಗ್ಯಾಂಗ್ ವಾರ್ ಅಷ್ಟೇ. ಮಿನಿ ಸ್ಕರ್ಟ್ ಧರಿಸಿ ಲಿಯಾರಿಯಲ್ಲಿ ಸಿನಿಮಾದ ಹೀರೋಯಿನ್ ಓಡಾಡುತ್ತಾಳೆ. ಅದು ಲಿಯಾರಿಯಲ್ಲಿ ಸಾಧ್ಯವೇ ಇಲ್ಲ. ಹಾಗೆ ಒಬ್ಬಳೇ ಮಹಿಳೆ ಮಿನಿ ಸ್ಕರ್ಟ್ ಧರಿಸಿ ಸುತ್ತಾಡೋಕೆ ಆಗಲ್ಲ’ ಎಂದ ಕೂಡ ಅವರು ಹೇಳಿದ್ದಾರೆ.

‘ಒಂದು ಹಾಡಿನಲ್ಲಿ ರೇವ್ ಪಾರ್ಟಿ ನಡೆಯೋದು ತೋರಿಸಿದ್ದಾರೆ. ಅಲ್ಲಿ ಸೂಚನಾ ಫಲಕಗಳು ಉರ್ದು ಭಾಷೆಯಲ್ಲಿ ಕಾಣಿಸಿದೆ. ಆದರೆ ನಿಜವಾಗಿಯೂ ಇಂಗ್ಲಿಷ್ ಸೂಚನಾ ಫಲಕಗಳು ಇರುತ್ತವೆ’ ಎಂದು ಈ ಪ್ರೇಕ್ಷಕರಿಬ್ಬರು ತಕರಾರು ತೆಗೆದಿದ್ದಾರೆ. ಅಲ್ಲದೇ, ರಣವೀರ್ ಸಿಂಗ್ ಧರಿಸಿ ಕಾಸ್ಟ್ಯೂಮ್ ಕೂಡ ಸೂಕ್ತವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನಮಗೆ ರಸ್ತೆ ಇಲ್ಲ, 500 ಕೋಟಿ ರೂ. ಕೊಡಿ: ‘ಧುರಂಧರ್ 2’ ತಂಡಕ್ಕೆ ಪಾಕಿಸ್ತಾನಿಗಳ ಮನವಿ

‘ಪಾಕಿಸ್ತಾನದ ಮಿನಿಸ್ಟರ್ ಮಗಳ ಜೊತೆ ಹೀರೋ ಮದುವೆ ಆಗುತ್ತಾನೆ. ಪಾಕಿಸ್ತಾನದಲ್ಲಿ ಹಾಗೆಲ್ಲ ಆಗಲು ಸಾಧ್ಯವಿಲ್ಲ. ದೊಡ್ಡ ಬಂಗಲೆಯಲ್ಲಿ ಇರುವ ಆಕೆ ಮದುವೆ ಬಳಿಕ ಚಿಕ್ಕ ಮನೆಗೆ ಹೋಗೋಕೆ ಆಗಲ್ಲ’ ಎಂದು ಪ್ರೇಕ್ಷಕರಿಬ್ಬರು ಚರ್ಚೆ ಮಾಡಿದ್ದಾರೆ. ಒಟ್ಟಿನಲ್ಲಿ ಪಾಕಿಸ್ತಾನದ ಪ್ರೇಕ್ಷಕರಿಗೆ ‘ಧುರಂಧರ್’ ಸಿನಿಮಾದಲ್ಲಿ ಇಂಥ ಹಲವು ತಪ್ಪುಗಳು ಕಾಣಿಸಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತನ್ನ ಗೆಳೆಯನ ಜೊತೆ ಸಂಬಂಧದ ಅನುಮಾನ; ಮುಂಬೈ ವಿದ್ಯಾರ್ಥಿನಿಯನ್ನು ಎಳೆದು, ಕೂದಲು ಕತ್ತರಿಸಿದ ಯುವತಿ

ಮುಂಬೈ, ಮಾರ್ಚ್ 27: ಮುಂಬೈನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ವಿದ್ಯಾರ್ಥಿನಿಯೊಬ್ಬಳು ತನ್ನ ಗೆಳೆಯನೊಂದಿಗೆ ಸಂಬಂಧ ಹೊಂದಿದ್ದಾಳೆಂದು ಶಂಕಿಸಿದ ಮತ್ತೊಬ್ಬಳು ಯುವತಿ ಆಕೆಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ಬಂದು, ಆಕೆಯ ಕೂದಲು ಕತ್ತರಿಸಿದ್ದಾಳೆ. ಮುಂಬೈನ (Mumbai News) ಉಪನಗರ ಅಪಾರ್ಟ್‌ಮೆಂಟ್‌ನಲ್ಲಿ ನಿನ್ನೆ ತಡರಾತ್ರಿ ಈ ಅಮಾನವೀಯ ಘಟನೆ ನಡೆದಿದೆ. ಈ ಘಟನೆ ಬಳಿಕ ಹಿಂಸಾಚಾರಕ್ಕೆ ಕಾರಣವಾಯಿತು. ಇದು ಕಾಲೇಜು ವಿದ್ಯಾರ್ಥಿನಿಯನ್ನು ಆಘಾತಕ್ಕೀಡು ಮಾಡಿದೆ.

ನಿನ್ನೆ 20 ವರ್ಷದ ವಿದ್ಯಾರ್ಥಿನಿಯನ್ನು ಆಕೆಯ ನಿವಾಸದಿಂದ ಹೊರಗೆಳೆದು ಆಕೆಯ ಕೂದಲು ಕತ್ತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಈ ವಿಡಿಯೋವನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿದ್ದಾರೆ. ಸಂತ್ರಸ್ತೆಯ ಮಾನಹಾನಿ ಮಾಡಲು ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋವನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: 5 ವರ್ಷ ಹಿಂದಿನ ಕೊಲೆ ಪ್ರಕರಣದಲ್ಲಿ 7 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಪೊಲೀಸರು 20ರಿಂದ 21 ವರ್ಷದೊಳಗಿನ ಮೂವರು ಕಾಲೇಜು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಈ ಘಟನೆ ಸಂತ್ರಸ್ತೆ ತನ್ನ ಮನೆಯ ಸಹಾಯಕಿಯೊಂದಿಗೆ ಮನೆಯಲ್ಲಿದ್ದಾಗ ನಡೆದಿದೆ. ಆಕೆಯ ಪೋಷಕರು ಕುಟುಂಬದ ಕಾರ್ಯಕ್ರಮಕ್ಕೆ ಹೋಗಿದ್ದರು. ಆಗ ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ. ಸಂತ್ರಸ್ತಳ ದೂರಿನ ಮೇರೆಗೆ ಮೂವರು ಹುಡುಗಿಯರ ವಿರುದ್ಧ ತನಿಖೆ ಆರಂಭಿಸಲಾಗಿದೆ ಎಂದು ವರ್ಸೋವಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂತ್ರಸ್ತೆಯನ್ನು ಆಕೆಯ ಫ್ಲಾಟ್‌ನಿಂದ ಹೊರಗೆ ಎಳೆದುಕೊಂಡು ಹೋಗಲಾಗಿದೆ. ಆಕೆ ಸಹಾಯಕ್ಕಾಗಿ ಕೂಗಿದಾಗ ಆಕೆಗೆ ಬೆದರಿಕೆ ಹಾಕಲಾಗಿದೆ. ಹಲ್ಲೆ ನಡೆಸಿದ ಯುವತಿಯ ಬಾಯ್​ಫ್ರೆಂಡ್ ಜೊತೆ ಸಂತ್ರಸ್ತೆ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನವೇ ಈ ಕೃತ್ಯಕ್ಕೆ ಕಾರಣ ಎಂದು ಪೊಲೀಸ್ ಹೇಳಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಈ ಕೃತ್ಯ ನಡೆದಿದೆ.

ಇದನ್ನೂ ಓದಿ: ಮದುವೆಯಾದ ಪುರುಷ ಲಿವ್-ಇನ್ ಸಂಬಂಧ ಇಟ್ಟುಕೊಳ್ಳುವುದು ಅಪರಾಧವಲ್ಲ; ಹೈಕೋರ್ಟ್ ತೀರ್ಪು

ಹಲ್ಲೆಗೂ ಸುಮಾರು 18 ದಿನಗಳ ಮೊದಲು ಆರೋಪಿ ಯುವತಿ ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಆಕೆಯ ಫೋನ್ ಪರಿಶೀಲಿಸಿದ್ದಳು. ಆದರೆ ತನ್ನ ಬಾಯ್​ಫ್ರೆಂಡ್ ಜೊತೆಗಿನ ಆಕೆಯ ಸಂಬಂಧದ ಬಗ್ಗೆ ಏನೂ ಸಾಕ್ಷಿ ಸಿಗಲಿಲ್ಲ. ಕೊನೆಗೆ ಅವಳು ಇತರ ಇಬ್ಬರು ಯುವತಿಯರೊಂದಿಗೆ ರಾತ್ರಿ ಆಕೆಯ ಮನೆಗೆ ಬಂದು ಹಲ್ಲೆ ನಡೆಸಿದ್ದಾಳೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

24 ಗಂಟೆಯಲ್ಲೇ ಬಗೆಹರಿದ ಶಾಸಕರ IPL ಟಿಕೆಟ್ ಜ್ವಲಂತ ಸಮಸ್ಯೆ, ಒಬ್ಬರಿಗೆ ಎಷ್ಟು ಗೊತ್ತಾ?

ಬೆಂಗಳೂರು, (ಮಾರ್ಚ್ 27): ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ವಿಪಕ್ಷ ನಾಯಕ ಅಶೋಕ್ , ಐಪಿಎಲ್  ಮ್ಯಾಚ್​ಗಳ ಟಿಕೆಟ್ (IPL Ticket)  ವಿಚಾರವಾಗಿ ಸದನದಲ್ಲಿ ಎತ್ತಿದ ಪ್ರಶ್ನೆ ಈಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಟಾಪಟಿಗೆ ವೇದಿಕೆಯಾಗಿದೆ. ಹೌದು..ನಿನ್ನೆ (ಮಾರ್ಚ್ 26) ವಿಧಾನಸಭೆ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಐಪಿಎಲ್​ ಮ್ಯಾಚ್​ಗಳ ಟಿಕೆಟ್​ ಬಗ್ಗೆ ಕೇಳಿದ ಪ್ರಶ್ನೆ ಈಗ ರಾಜಕೀಯ ಜಟಾಪಟಿಗೆ ತಿರುಗಿದೆ. ಏನೋ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದಂತೆ ಸದನದಲ್ಲಿ ಐಪಿಎಲ್ ಟಿಕೆಟ್​ ಬೇಡಿಕೆ ಇಟ್ಟಿದ್ದರು.  ಇದಕ್ಕೆ ಪ್ರತಿಪಕ್ಷದ ನಾಯಕ ಆರ್ ಅಶೋಕ್ ಸಹ ಧ್ವನಿಗೂಡಿಸಿದ್ದರು.  ಇದರ ಬೆನ್ನಲ್ಲೇ 24 ಗಂಟೆಗಳಲ್ಲಿ ಶಾಸಕರ ಐಪಿಎಲ್ ಟಿಕೆಟ್ ಸಮಸ್ಯೆ ಬಗೆಹರಿದಿದೆ.

ಶಾಸಕರು ತಮ್ಮ ಸ್ವಾರ್ಥಕ್ಕಾಗಿ ಐಪಿಎಲ್ ಟಿಕೆಟ್​​ಗಾಗಿ ಅಧಿವೇಶನದಲ್ಲಿ ಧ್ವನಿ ಎತ್ತಿದ ಬೆನ್ನಲ್ಲೇ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಇಂದು (ಮಾರ್ಚ್ 27) ವಿಧಾನಸೌಧದಲ್ಲಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದರು. ಈ ವೇಳೆ ನಾಳೆಯ (ಮಾರ್ಚ್ 28) ಉದ್ಘಾಟನಾ ಪಂದ್ಯಕ್ಕೆ ಶಾಸಕರಿಗೆ 1+1 ಒಟ್ಟು 2 ಟಿಕೆಟ್ ನೀಡಲು ಕೆಎಸ್‌ಸಿಎ ಒಪ್ಪಿಕೊಂಡಿದೆ. ಸದ್ಯ ಒಬ್ಬ ಶಾಸಕರಿಗೆ ಎರಡು ಟಿಕೆಟ್ ನೀಡಲು ಒಪ್ಪಿರುವ ಕೆಎಸ್‌ಸಿಎ, ಮುಂದಿನ‌ ಐಪಿಎಲ್‌ ಪಂದ್ಯಕ್ಕೆ 4 ಟಿಕೆಟ್ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದೆ.

ಇದನ್ನೂ ಓದಿ: ಸದನದಲ್ಲೂ ಐಪಿಎಲ್ ಟಿಕೆಟ್ ಬಗ್ಗೆ ಚರ್ಚೆ: ಮ್ಯಾಚ್‌ ಟಿಕೆಟ್‌ಗಾಗಿ ಸರ್ಕಾರವನ್ನು ಬೇಡಿದ ಶಾಸಕರು!

Source link

ಒಳ್ಳೆ ಹುಡ್ಗ ಪ್ರಥಮ್ ಬೆಂಗಳೂರು ಬಿಟ್ಟಿದ್ದೇಕೆ? ಅವರೇ ಕೊಟ್ಟರು ಕಾರಣ

ಒಳ್ಳೆ ಹುಡ್ಗ ಪ್ರಥಮ್ (Olle Hudga Pratham) ಅವರು ಬೆಂಗಳೂರು ಬಿಟ್ಟಿದ್ದಾರೆ. ಅವರೀಗ ಬೆಂಗಳೂರಿನಲ್ಲಿಲ್ಲ, ಇದಕ್ಕೆ ಕಾರಣ ಒಬ್ಬ ನಟ ಎಂದೆಲ್ಲ ಸುದ್ದಿಗಳು ಹರಡಿದ್ದವು. ಇದೀಗ ಪ್ರಥಮ್ ಅವರು ಟಿವಿ9 ಮೂಲಕ ಅದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ತಾವು ಬೆಂಗಳೂರು ಬಿಟ್ಟಿದ್ದೇಕೆ ಎಂಬುದನ್ನು ವಿವರಿಸಿದ್ದಾರೆ. ತಮಗೆ ಬೆಂಗಳೂರು ಸಾಕಷ್ಟು ಕೊಟ್ಟಿದೆ, ಆದರೆ ಬೆಂಗಳೂರು ಬಿಟ್ಟು ಹೋಗಲೇ ಬೇಕಾದ ಸ್ಥಿತಿ ಒದಗಿತ್ತು ಎಂದು ಪ್ರಥಮ್ ಹೇಳಿಕೊಂಡಿದ್ದಾರೆ. ಪ್ರಥಮ್ ಹೇಳಿದ್ದೇನು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೈ ಎಲೆಕ್ಷನ್​​: BJP ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬರ್ತಾರಾ ಹೆಚ್​​.ಡಿ. ಕುಮಾರಸ್ವಾಮಿ?

ಬೆಂಗಳೂರು, ಮಾರ್ಚ್​​ 27: ಬೈ ಎಲೆಕ್ಷನ್‌ಗಳಿಗೆ ಸಂಬಂಧಿಸಿದಂತೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪ್ರಚಾರದ ಬಗ್ಗೆ ವಿಜಯೇಂದ್ರ ಅವರು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಬಾಗಲಕೋಟೆ ಮತ್ತು ದಾವಣಗೆರೆಗಳಲ್ಲಿ ಜೆಡಿಎಸ್ ಮುಖಂಡರು ಭಾಗವಹಿಸಿದ್ದರು. ತಾವು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಕುಮಾರಸ್ವಾಮಿ ಅವರು ಪ್ರಚಾರಕ್ಕಾಗಿ ಸಮಯ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ವಿಜಯೇಂದ್ರ ದೃಢಪಡಿಸಿದ್ದಾರೆ. ಇದರಿಂದ ಬೈ ಎಲೆಕ್ಷನ್‌ಗಳಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಜೆಡಿಎಸ್ ನಾಯಕರ ಬೆಂಬಲ ಮತ್ತು ಸಹಭಾಗಿತ್ವ ಖಚಿತವಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಷ್ಯನ್ ಎಲ್​ಎನ್​ಜಿಯನ್ನು ಖರೀದಿಸಲಿರುವ ಭಾರತ; ಎಲ್​ಪಿಜಿ, ಪಿಎನ್​ಜಿ, ಎಲ್​ಎನ್​ಜಿಗಿರುವ ವ್ಯತ್ಯಾಸಗಳೇನು?

ನವದೆಹಲಿ, ಮಾರ್ಚ್ 27: ಇರಾನ್ ಯುದ್ಧದ ಪರಿಣಾಮ ಇಂಧನ ಬಿಕ್ಕಟ್ಟು ಉದ್ಭವವಾಗಿದೆ. ಕಚ್ಛಾ ತೈಲ, ಎಲ್​ಪಿಜಿ, ಎಲ್​ಎನ್​ಜಿಗಳ (LNG – Liquefied Natural Gas) ಪೂರೈಕೆ ವ್ಯತ್ಯಯಗೊಂಡಿದೆ. ಈ ಸಂದರ್ಭದಲ್ಲಿ ಭಾರತಕ್ಕೆ ರಷ್ಯಾ ಆಪದ್ಬಾಂಧವ ಎನಿಸಿದೆ. ರಷ್ಯಾದಿಂದ ಕಚ್ಛಾ ತೈಲದ ಖರೀದಿಯನ್ನು ಭಾರತ ಪುನಾರಂಭಿಸಿದೆ. ಇದೇ ವೇಳೆ ಎಲ್​ಎನ್​ಜಿಯನ್ನೂ ರಷ್ಯಾದಿಂದ ಪಡೆಯಲು ಭಾರತ ಯೋಜಿಸಿದೆ. ಅಮೆರಿಕದ ಅನುಮತಿ ಪಡೆದೇ ಭಾರತವು ರಷ್ಯಾದಿಂದ ತೈಲ ಖರೀದಿ ಮಾಡುತ್ತಿದೆ. ಈಗ ಎಲ್​ಎನ್​ಜಿ ಖರೀದಿಗೂ ಅಮೆರಿಕದ ಅನುಮತಿ ಸಿಗುವ ನಿರೀಕ್ಷೆ ಇದೆ.

ರಷ್ಯಾದಿಂದ ಎಲ್​ಎನ್​ಜಿ ಸಿಕ್ಕರೆ ಭಾರತದ ಇಂಧನ ಬಿಕ್ಕಟ್ಟಿನ ಸಮಸ್ಯೆಗೆ ಒಂದು ಮಟ್ಟಕ್ಕೆ ಪರಿಹಾರ ಸಿಗಬಹುದು. ಉಕ್ರೇನ್ ಯುದ್ಧ ಶುರುವಾದಾಗಿನಿಂದ ರಷ್ಯಾದಿಂದ ಭಾರತಕ್ಕೆ ಎಲ್​ಎನ್​ಜಿ ಪೂರೈಕೆ ನಿಂತಿತ್ತು. ಕೇವಲ ಕಚ್ಛಾ ತೈಲದ ಪೂರೈಕೆ ಮಾತ್ರವೇ ನಡೆಯುತ್ತಿದ್ದುದು. ಈಗ ಭಾರತಕ್ಕೆ ರಷ್ಯಾದ ಎಲ್​ಎನ್​ಜಿ ಪೂರೈಕೆ ಪುನಾರಂಭಗೊಳ್ಳುವುದು ಬಹುತೇಕ ಖಚಿತವಾಗಿದೆ. ಭಾರತವು ಎಲ್​ಎನ್​ಜಿ ಪಡೆಯಲು ಒಪ್ಪಿಕೊಂಡಿದ್ದೇ ಆದಲ್ಲಿ ಕೆಲವೇ ವಾರಗಳಲ್ಲಿ ವ್ಯವಸ್ಥೆ ಪೂರ್ಣವಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಆಪರೇಷನ್ ಊರ್ಜಾ ಸುರಕ್ಷಾ; ಏನಿದು ವಿಶೇಷ ಕಾರ್ಯಾಚರಣೆ?

ಏನಿದು ಎಲ್​ಎನ್​ಜಿ? ಎಲ್​ಪಿಜಿಗೂ ಅದಕ್ಕೂ ಏನು ವ್ಯತ್ಯಾಸ?

ಎಲ್​ಎನ್​ಜಿ ಒಂದು ನೈಸರ್ಗಿಕ ಅನಿಲ. ಎಲ್​ಪಿಜಿ ಒಂದು ಪೆಟ್ರೋಲಿಯಂ ಗ್ಯಾಸ್. ಎರಡೂ ಕೂಡ ಧ್ರವರೂಪಕ್ಕೆ ಇಳಿಸಲಾಗಿರುವ ಅನಿಲಗಳೇ ಆಗಿವೆ. ಹಾಗೆಯೇ ಎರಡೂ ಕೂಡ ಬೇರೆ ಬೇರೆ ಗುಣ ಇರುವ ಗ್ಯಾಸ್ ಆಗಿವೆ.

ತೈಲ ಸಂಸ್ಕರಣೆ ಪ್ರಕ್ರಿಯೆ ವೇಳೆ ಬರುವ ಪ್ರೊಪೇನ್, ಬುಟೇನ್ ಇತ್ಯಾದಿ ಅನಿಲಗಳು ಪೆಟ್ರೋಲಿಯಂ ಗ್ಯಾಸ್ ಎನಿಸುತ್ತವೆ. ಇದು ಗಾಳಿಗಿಂತ ಭಾರದ್ದಾಗಿರುತ್ತದೆ. ಈ ಪ್ರೊಪೇನ್, ಬುಟೇನ್ ಅನ್ನು ಧ್ರವ ರೂಪಕ್ಕೆ ಇಳಿಸಿ ಸಾಗಿಸಲಾಗುತ್ತದೆ.

ಎಲ್​ಎನ್​ಜಿಯಲ್ಲಿ ನೈಸರ್ಗಿಕ ಅನಿಲವಾದ ಮೀಥೇನ್ ಇರುತ್ತದೆ. ಕ್ರಯೋಜೆನಿಕ್ ವಿಧಾನದಲ್ಲಿ ಮೈನಸ್ 162 ಡಿಗ್ರಿ ಸೆಲ್ಷಿಸ್ ಶೀತದಲ್ಲಿ ಇದನ್ನು ಧ್ರವರೂಪಕ್ಕೆ ತರಲಾಗುತ್ತದೆ. ಈ ಅನಿಲವನ್ನು ಹಡಗುಗಳಲ್ಲಿ ಸಾಗಿಸಲೆಂದೇ ಧ್ರವರೂಪಕ್ಕೆ ತರಲಾಗುವುದು. ಅದಕ್ಕೆ ಇದನ್ನು ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್ ಎನ್ನುವುದು.

ಇದನ್ನೂ ಓದಿ: ಗೃಹೇತರ ಬಳಕೆಯ ಎಲ್​ಪಿಜಿ, ಹೆಚ್ಚುವರಿ ಶೇ. 20 ಹಂಚಿಕೆ; ಒಟ್ಟು ಪೂರೈಕೆ ಶೇ. 70ಕ್ಕೆ ಏರಿಕೆ

ಪಿಎನ್​ಜಿಗೂ ಎಲ್​ಎನ್​ಜಿಗೂ ಏನು ವ್ಯತ್ಯಾಸ?

ಪಿಎನ್​ಜಿ ಮತ್ತು ಎಲ್​ಎನ್​ಜಿ ಎರಡೂ ಕೂಡ ಮೀಥೇನ್​ಯುಕ್ತ ನೈಸರ್ಗಿಕ ಅನಿಲಗಳೇ. ಒಂದೇ ವ್ಯತ್ಯಾಸ ಎಂದರೆ ಮೀಥೇನ್ ಅನ್ನು ಧ್ರವರೂಪಕ್ಕೆ ತಂದರೆ ಅದು ಎಲ್​ಎನ್​ಜಿ ಆಗುತ್ತದೆ. ಈ ಎಲ್​ಎನ್​ಜಿಯನ್ನು ಬಳಸಬೇಕಾದರೆ ಅದನ್ನು ಮತ್ತೆ ಗ್ಯಾಸ್ ರೂಪಕ್ಕೆ ತರಬೇಕು. ಈ ಗ್ಯಾಸ್ ಅನ್ನು ಪೈಪ್​ಗಳ ಮೂಲಕ ಸರಬರಾಜು ಮಾಡಿದರೆ ಅದು ಪಿಎನ್​ಜಿ ಎನಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಯುವಕನ ನೃತ್ಯಕ್ಕೆ ಮರುಳಾದ ಗಜರಾಜ! ಕಾಡಾನೆಯೂ ಹೆಜ್ಜೆ ಹಾಕಿದ ಅಪರೂಪದ ದೃಶ್ಯ

ಒಡಿಶಾ, ಮಾ.27: ಇತ್ತೀಚಿನ ದಿನಗಳಲ್ಲಿ ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷದ ಸುದ್ದಿಗಳೇ ಹೆಚ್ಚಾಗಿ ಕೇಳಿಬರುತ್ತಿವೆ. ಆದರೆ, ಇದರ ನಡುವೆ ಮನುಷ್ಯ ಮತ್ತು ಆನೆಯ ನಡುವಿನ ಅಚ್ಚರಿಯ ಬಾಂಧವ್ಯವನ್ನು ಸಾರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಯುವಕನೊಬ್ಬನ ನೃತ್ಯವನ್ನು ಕಂಡ ಕಾಡಾನೆಯೊಂದು, ಅಷ್ಟೇ ಪ್ರೀತಿಯಿಂದ ಪ್ರತಿಕ್ರಿಯಿಸಿ ತಾನೂ ಹೆಜ್ಜೆ ಹಾಕಿರುವ ಮನಮೋಹಕ ದೃಶ್ಯವಿದು. ಒಡಿಶಾದ ಕಿಯೋಂಜರ್ ಜಿಲ್ಲೆಯ ಚಂಪುಆ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ರಸ್ತೆಯ ಪಕ್ಕದಲ್ಲಿ ನಿಂತಿದ್ದ ಒಂಟಿ ಸಲಗವೊಂದರ ಮುಂದೆ ಯುವಕನೊಬ್ಬ ಆನಂದದಿಂದ ನೃತ್ಯ ಮಾಡಲು ಶುರು ಮಾಡುತ್ತಾನೆ. ಆನೆಯನ್ನು ‘ರಾಜು’ ಎಂದು ಪ್ರೀತಿಯಿಂದ ಕರೆಯುತ್ತಾ, ಕೈಮುಗಿದು ನಮಸ್ಕರಿಸಿ ಕುಣಿಯುತ್ತಾನೆ. ಆರಂಭದಲ್ಲಿ ಯುವಕನನ್ನು ಶಾಂತವಾಗಿ ಗಮನಿಸುತ್ತಿದ್ದ ಆನೆ, ಕೆಲವೇ ಕ್ಷಣಗಳಲ್ಲಿ ಆತನ ನೃತ್ಯದ ತಾಳಕ್ಕೆ ತಕ್ಕಂತೆ ತನ್ನ ತಲೆ ಮತ್ತು ದೇಹವನ್ನು ಆಡಿಸುತ್ತಾ ‘ಡ್ಯಾನ್ಸ್’ ಮಾಡಿದೆ. ಈ ಅಪರೂಪದ ಜುಗಲ್‌ಬಂದಿಯನ್ನು ಕಂಡ ಸ್ಥಳೀಯರು ಅಚ್ಚರಿಗೊಂಡಿದ್ದಾರೆ. ಯಾವುದೇ ಹಿಂಸೆ ಅಥವಾ ಭಯವಿಲ್ಲದೆ ಆನೆಯು ಅತ್ಯಂತ ಶಾಂತವಾಗಿ ಮತ್ತು ಖುಷಿಯಿಂದ ಪ್ರತಿಕ್ರಿಯಿಸಿದ್ದು ನೋಡುಗರ ಮನ ಗೆದ್ದಿದೆ.”ಸಂತೋಷ ಎಂಬುದು ಸಾಂಕ್ರಾಮಿಕ” ಎಂಬುದಕ್ಕೆ ಈ ವೀಡಿಯೊ ಸಾಕ್ಷಿಯಾಗಿದೆ. “ಪ್ರೀತಿ ನೀಡಿದರೆ ಪ್ರಾಣಿಗಳೂ ಸ್ಪಂದಿಸುತ್ತವೆ” ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಈ ವೀಡಿಯೊ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದ್ದು, ಇಂದಿನ ಒತ್ತಡದ ಬದುಕಿನಲ್ಲಿ ಒಂದು ರೀತಿಯ ನೆಮ್ಮದಿ ನೀಡುವ ದೃಶ್ಯವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಚಿನ್ನಸ್ವಾಮಿ ಮೈದಾನದಲ್ಲಿ ಆರ್​ಸಿಬಿ ಎಷ್ಟು ಪಂದ್ಯಗಳನ್ನಾಡಿದೆ? ತವರಿನಲ್ಲಿ ದಾಖಲೆ ಹೇಗಿದೆ?

2026 ರ ಐಪಿಎಲ್ (IPL 2026) ಆರಂಭಕ್ಕೂ ಮುನ್ನ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದ ಆರ್​ಸಿಬಿ (RCB) ಇದೀಗ ಎಲ್ಲವನ್ನು ಇತ್ಯರ್ಥ ಮಾಡಿಕೊಂಡು, ಹೊಸ ಆವೃತ್ತಿಯಲ್ಲಿ ಕಣಕ್ಕಿಳಿಯಲು ಮುಂದಾಗಿದೆ. ಇದರ ಜೊತೆಗೆ ಆರ್​ಸಿಬಿ ತವರಿನಲ್ಲಿ ತನ್ನ ಪಂದ್ಯಗಳನ್ನು ಆಡುತ್ತಿರುವುದು ಅಭಿಮಾನಿಗಳ ಸಂತಸವನ್ನು ಇಮ್ಮಡಿಗೊಳಿಸಿದೆ. ತವರಿನಲ್ಲಿ ಅಭಿಮಾನಿಗಳ ಮುಂದೆ 19ನೇ ಆವೃತ್ತಿಯನ್ನು ಗೆಲುವಿನೊಂದಿಗೆ ಆರಂಭಿಸಲು ನೋಡುತ್ತಿರುವ ಆರ್​ಸಿಬಿಗೆ, ಸನ್‌ರೈಸರ್ಸ್ ಹೈದರಾಬಾದ್‌ ಎದುರಾಗುತ್ತಿದೆ. ಬಲಿಷ್ಠ ಬ್ಯಾಟಿಂಗ್‌ ವಿಭಾಗವನ್ನು ಹೊಂದಿರವ ಸನ್‌ರೈಸರ್ಸ್ ಹೈದರಾಬಾದ್‌ ತಂಡವನ್ನು ಮಣಿಸಬೇಕೆಂದರೆ ಆರ್​ಸಿಬಿ ತನ್ನ ಬಲಿಷ್ಠ ಪ್ಲೇಯಿಂಗ್ 11 ಕಟ್ಟಿಕೊಂಡು ಸಾಂಘಿಕ ಪ್ರದರ್ಶನ ನೀಡಬೇಕಿದೆ. ಆದರೆ ಅದಕ್ಕೂ ಮುನ್ನ ತವರು ಮೈದಾನದಲ್ಲಿ ಆರ್​ಸಿಬಿ ದಾಖಲೆ ಹೇಗಿದೆ ಎಂಬುದನ್ನು ನೋಡೋಣ..

  • ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ತವರು ಮೈದಾನದಲ್ಲಿ ಅಂದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದುವರೆಗೆ 96 ಪಂದ್ಯಗಳನ್ನು ಅಡಿದೆ. ಇದರಲ್ಲಿ 45 ಪಂದ್ಯಗಳನ್ನು ಗೆದ್ದಿರುವ ಆರ್​ಸಿಬಿ, 46 ಪಂದ್ಯಗಳಲ್ಲಿ ಸೋಲು ಕಂಡಿದೆ. ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡರೆ, ಉಳಿದ 4 ಪಂದ್ಯಗಳು ಫಲಿತಾಂಶವಿಲ್ಲದೆ ಅಂತ್ಯಗೊಂಡಿವೆ.
  • ಈ ಮೈದಾನದಲ್ಲಿ ಆರ್​ಸಿಬಿಯ ಅತ್ಯಧಿಕ ಸ್ಕೋರ್ ಎಷ್ಟು ಎಂಬುದನ್ನು ನೋಡುವುದಾದರೆ.. 2013 ರ ಐಪಿಎಲ್​ನಲ್ಲಿ ಪುಣೆ ವಾರಿಯರ್ಸ್​ ವಿರುದ್ಧ 5 ವಿಕೆಟ್​ಗಳ ನಷ್ಟಕ್ಕೆ 263 ರನ್ ಕಲೆಹಾಕಿತ್ತು.
  • ಹಾಗೆಯೇ 2008 ರ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ 82 ರನ್​ಗಳಿಗೆ ಆಲೌಟ್ ಆಗಿದ್ದು ತಂಡದ ಅತ್ಯಂತ ಕಡಿಮೆ ಮೊತ್ತವಾಗಿದೆ.
  • ಈ ಮೈದಾನದಲ್ಲಿ ಅಜೇಯ 175 ರನ್​ಗಳ ಇನ್ನಿಂಗ್ಸ್ ಆಡಿರುವ ಕ್ರಿಸ್ ಗೇಲ್ ಅತ್ಯಧಿಕ ವೈಯಕ್ತಿಕ ಮೊತ್ತ ಕಲೆಹಾಕಿದ ದಾಖಲೆ ಮಾಡಿದ್ದಾರೆ.
  • 2017 ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 9 ರನ್​ಗಳಿಗೆ 4 ವಿಕೆಟ್ ಉರುಳಿಸಿದ್ದ ಸ್ಯಾಮ್ಯುಯೆಲ್ ಬದ್ರಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ದಾಖಲೆ ಹೊಂದಿದ್ದಾರೆ.
  • 40.03 ರ ಸರಾಸರಿಯಲ್ಲಿ 3202 ರನ್ ಕಲೆಹಾಕಿರುವ ವಿರಾಟ್ ಕೊಹ್ಲಿ ಈ ಮೈದಾನದಲ್ಲಿ ಅತಿ ಹೆಚ್ಚು ರನ್ ಕಲೆಹಾಕಿರುವ ದಾಖಲೆ ಮಾಡಿದ್ದಾರೆ.
  • ಹಾಗೆಯೇ 41 ಕ್ಯಾಚ್​ಗಳನ್ನು ಹಿಡಿಯುವ ಮೂಲಕ ಅತಿ ಹೆಚ್ಚು ಕ್ಯಾಚ್ ಹಿಡಿದ ದಾಖಲೆಯಲ್ಲೂ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.
  • ಈ ಮೈದಾನದಲ್ಲಿ ಆಡಿರುವ 43 ಪಂದ್ಯಗಳಲ್ಲಿ 54 ವಿಕೆಟ್ ಪಡೆದಿರುವ ಯುಜ್ವೇಂದ್ರ ಚಾಹಲ್ ಅತ್ಯಧಿಕ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
  • 2016 ರ ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್ ವಿರುದ್ಧ ವಿರಾಟ್ ಕೊಹ್ಲಿ ಹಾಗೂ ಅಬಿ ಡಿವಿಲಿಯರ್ಸ್ 229 ರನ್​ಗಳ ಜೊತೆಯಾಟವನ್ನಾಡಿರುವುದು ಇದುವರೆಗಿನ ದಾಖಲೆಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅರಣ್ಯ ಇಲಾಖೆ ಹೆಸರಲ್ಲಿ ನಕಲಿ ತರಬೇತಿ ಕೇಂದ್ರ: ಖದೀಮರ ಸೆಟ್​​ ಅಪ್​​ ಕಂಡು ಅಧಿಕಾರಿಗಳೇ ಕಂಗಾಲು

ತುಮಕೂರು, ಮಾರ್ಚ್​​ 27: ಅರಣ್ಯ ಇಲಾಖೆ ನೇಮಕಾತಿ ಹೆಸರಲ್ಲಿ ನಕಲಿ ತರಬೇತಿ ಕೇಂದ್ರ ನಡೆಸುತ್ತಿದ್ದ ಜಾಲವೊಂದು ತುಮಕೂರಿನಲ್ಲಿ ಪತ್ತೆಯಾಗಿದೆ. ಬೆಳಗಾವಿ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳ 15 ಯುವಕರ ಕರೆತಂದಿದ್ದ ತಂಡ, ಇವರನ್ನು ಮೈಸೂರು ವಿಭಾಗದ ಅರಣ್ಯ ಇಲಾಖೆಯ ವಿವಿಧ ಹಂತಗಳ ಸೇವೆಗೆ ನೇಮಕಾತಿ ಪ್ರಕ್ರಿಯೆಯಲ್ಲಿ ಕೆಲಸದ ಆದೇಶ ಸಿಕ್ಕಿರುವ ರೀತಿ ನಂಬಿಸಿತ್ತು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿಯವರ ಲೆಟರ್ ಹೆಡ್, ಅರಣ್ಯ ಇಲಾಖೆಯ ಲೋಗೊ ಸೇರಿದಂತೆ ಪ್ರಧಾನ ಕಾರ್ಯದರ್ಶಿ ಸಹಿ ಹಾಗೂ ಸೀಲ್​​ನ ನಕಲು ಮಾಡಿದ್ದ ಖದೀಮರು, ನೇಮಕಾತಿ ಆದೇಶ ಪತ್ರಗಳನ್ನು ಯುವಕರಿಗೆ ವಾಟ್ಸ್ ಆ್ಯಪ್ ಮುಖಾಂತರ ಕಳುಹಿಸಿದ್ದರು ಎಂಬುದು ಬಯಲಾಗಿದೆ.

ತುಮಕೂರು ತಾಲೂಕಿನ ವಡ್ಡರಹಳ್ಳಿಯ ಪ್ರಭಾವಿ ವ್ಯಕ್ತಿ ವಾಲೆ ಚಂದ್ರರವರ ಪುತ್ರನ ತೋಟದ ಮನೆಯನ್ನು ಬಾಡಿಗೆ ಪಡೆದ ಗ್ಯಾಂಗ್ ಈ ರೀತಿಯ ಕೃತ್ಯ ಎಸಗಿದ್ದು, ಆರಂಭದಲ್ಲೇ ವಿಚಾರ ಬೆಳಕಿಗೆ ಬಂದಿದೆ. ತಿಂಗಳಿಗೆ 30 ಸಾವಿರ ಬಾಡಿಗೆಯಂತೆ ಮಾತನಾಡಿದ್ದ ಕೆಲವೇ ದಿನದಲ್ಲಿ ತೋಟದ ಮನೆಯಲ್ಲಿ ನಾನಾ ಬದಲಾವಣೆಯಾಗಿದ್ದವು. ಗೋಡೆಗಳಿಗೆ ಬಳಿದ ಬಣ್ಣ, ಬೋರ್ಡ್, ಅಪರಿಚಿತ 15 ಯುವಕರ ವಾಸ ಅನುಮಾನ ಮೂಡಿಸಿದ್ದ ಕಾರಣ, ತೋಟದ ಮಾಲೀಕ ಹಾಗೂ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಸ್ಥಳ ಪರಿಶೀಲನೆಗೆ ಬಂದ ಅರಣ್ಯ ಅಧಿಕಾರಿಗಳೇ ಇವರ ಸೆಟ್​​ ಅಪ್​​ ಕಂಡು ಒಂದು ಕ್ಷಣ ದಂಗಾಗಿದ್ದಾರೆ. ವ್ಯವಸ್ಥಿತವಾಗಿ 15 ಯುವಕರ ಯಾಮಾರಿಸಿ ಹಣ ಪಡೆದ ಜೊತೆಗೆ ಇಲಾಖೆ ಹೆಸರು ಬಳಸಿಕೊಂಡು ತರಬೇತಿ ನೆಪದಲ್ಲಿ ಕರೆತಂದು ವಂಚಿಸಿರೋದು ಈ ವೇಳೆ ಗೊತ್ತಾಗಿದೆ. ಕೂಡಲೇ ಈ ಬಗ್ಗೆ ಪೊಲೀಸರಿಗೆ ಅರಣ್ಯ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಕ್ಲಾಸಲ್ಲೇ ಮೆಡಿಕಲ್ ವಿದ್ಯಾರ್ಥಿನಿಗೆ ಲವ್‌ ಯು ಎಂದ ಪ್ರೊಪೋಸರ್ ಅರೆಸ್ಟ್

ಇನ್ನು ಈ ವಂಚನೆ ಜಾಲದಲ್ಲಿ ತುಮಕೂರಿನ ನಮಸ್ತೆ ಕೆಫೆಯ ಪವನ್, ನೆಲಮಂಗಲದ ಕಿರಣ್ ಹಾಗೂ ವಿನಯ್ ಎಂಬ ಮೂವರ ಹೆಸರು ಕೇಳಿ ಬಂದಿದೆ. ಸದ್ಯ ಘಟನೆ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರೆ, ತರಬೇತಿಗೆಂದು ಬಂದಿದ್ದ ಯುವಕರು ಮೋಸ ಹೊದ ಬಗ್ಗೆ ತಿಳಿದು ಕಂಗಾಲಾಗಿ ಊರಿನತ್ತ ತೆರಳಿದ್ದಾರೆ. ಆದರೇ ಹೀಗೆ ವ್ಯವಸ್ಥಿತವಾಗಿ ಹಾಗೂ ಅಕ್ರಮವಾಗಿ ತರಬೇತಿ ಕೇಂದ್ರ ನಡೆಸುತಿದ್ದವರ ಹಿಂದೆ ಇರೋದ್ಯಾರು? ಯುವಕರು ವಂಚಕರ ಬಲೆಗೆ ಬಿದ್ದಿರೋದು ಹೇಗೆ? ಈ ರೀತಿಯ ಹಲವು ಪ್ರಶ್ನೆಗಳು ಮೂಡಿದ್ದು, ಪ್ರಕರಣದ ಮತ್ತಷ್ಟು ಮಾಹಿತಿ ಪೊಲೀಸರ ತನಿಖೆ ನಂತರವಷ್ಟೇ ತಿಳಿದು ಬರಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link