ಬೆಂಗಳೂರು, ಮೇ 30: ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಹೊಸ ಮುಖ್ಯಮಂತ್ರಿಯ ಆಯ್ಕೆಗೆ ಇಡೀ ರಾಜ್ಯ ಕಾತುರದಿಂದ ಕಾಯುತ್ತಿದೆ. ರಾಜೀನಾಮೆ ಘೊಷಿಸಿದ ನಂತರ, ಮುಂದಿನ ಸಿಎಂ ಆಗಿ ಡಿಕೆ ಶಿವಕುಮಾರ್ ಕುರ್ಚಿ ಏರಲಿದ್ದಾರೆ ಎಂದು ಸಿದ್ದರಾಮಯ್ಯ ಸುಳಿವು ನೀಡಿದ್ದರು. ಅದರಂತೆಯೇ ಇಂದು ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ (CLP) ನಡೆಯಲಿದ್ದು, ಈ ವೇಳೆ ಮುಖ್ಯಮಂತ್ರಿಯಾಗಿ ಯಾರು ರಾಜ್ಯಭಾರ ಮಾಡಲಿದ್ದಾರೆ ಎಂಬ ಪ್ರಶ್ನೆಗೆ ತೆರೆ ಬೀಳಲಿದೆ. ನೂತನ ಮುಖ್ಯಮಂತ್ರಿಯ ಪ್ರಮಾಣವಚನದ ಮುಹೂರ್ತವೂ ಸಹ ಇಂದು ಫಿಕ್ಸ್ ಆಗಲಿದೆ. ಕರ್ನಾಟಕ ರಾಜಕಾರಣದ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಅಪ್ಡೇಟ್ ಆಗಲಿದ್ದು, ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಜ್ಯೋತಿಷ್ಯ ಶಾಸ್ತ್ರದಲ್ಲಿ ರತ್ನಗಳಿಗೆ ವಿಶೇಷ ಸ್ಥಾನವಿದೆ. ಅದರಲ್ಲಿಯೂ ಬಿಳಿ ಮುತ್ತುಗಳನ್ನು ಶುದ್ಧತೆ, ಪ್ರಶಾಂತತೆ, ಸೌಂದರ್ಯ ಮತ್ತು ಸೌಭಾಗ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ತನ್ನ ನೈಸರ್ಗಿಕ ಹೊಳಪಿನಿಂದ ಆಭರಣ ಲೋಕದಲ್ಲಿ ಸದಾ ರಾಜನಾಗಿರುವ ಮುತ್ತು, ಕೇವಲ ಸೌಂದರ್ಯವರ್ಧಕ ಮಾತ್ರವಲ್ಲ; ಧರಿಸುವವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಅದ್ಭುತ ರತ್ನವೂ ಹೌದು. ಇದಲ್ಲದೆ, ಮುತ್ತುಗಳನ್ನು ಧರಿಸುವುದರಿಂದ ಮನಸ್ಸಿನ ಶಾಂತಿ, ಅದೃಷ್ಟ ಮತ್ತು ಸಕಾರಾತ್ಮಕ ಶಕ್ತಿ ಬರುತ್ತದೆ ಎಂದು ಹಲವರು ನಂಬುತ್ತಾರೆ.
ಜ್ಯೋತಿಷ್ಯ ಶಾಸ್ತ್ರ ಹೇಳುವುದೇನು?
ಜ್ಯೋತಿಷ್ಯದ ಪ್ರಕಾರ, ಬಿಳಿ ಮುತ್ತು ಚಂದ್ರ ಗ್ರಹಕ್ಕೆ ಸಂಬಂಧಿಸಿದ ರತ್ನವಾಗಿದೆ. ನಮ್ಮ ಮನಸ್ಸು, ಭಾವನೆಗಳು, ಆಲೋಚನೆಗಳು ಮತ್ತು ಮಾನಸಿಕ ಶಾಂತಿಗೆ ಚಂದ್ರನೇ ಕಾರಕ ಎಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಚಂದ್ರನು ದುರ್ಬಲನಾಗಿದ್ದಾಗ, ಅತಿಯಾದ ಆತಂಕ, ಅಸ್ಥಿರತೆ ಅಥವಾ ಮಾನಸಿಕ ಗೊಂದಲ ಎದುರಿಸುವವರಿಗೆ ಜ್ಯೋತಿಷಿಗಳು ಮುತ್ತನ್ನು ಧರಿಸಲು ಶಿಫಾರಸು ಮಾಡುತ್ತಾರೆ. ಇದು ಮನಸ್ಸಿಗೆ ಶಾಂತಿ, ಚಿಂತನೆಯಲ್ಲಿ ಸ್ಪಷ್ಟತೆ ಮತ್ತು ಜೀವನದಲ್ಲಿ ಸಕಾರಾತ್ಮಕ ದೃಷ್ಟಿಕೋನವನ್ನು ತರುತ್ತದೆ ಎಂದು ನಂಬಲಾಗಿದೆ.
ಇತರ ರತ್ನಗಳಂತೆ ಮುತ್ತು ಭೂಮಿಯ ಒಳಗಿನಿಂದ ಸಿಗುವುದಿಲ್ಲ, ಬದಲಿಗೆ ಸಮುದ್ರದ ಜೀವಿಗಳಿಂದ ನೈಸರ್ಗಿಕವಾಗಿ ರೂಪುಗೊಳ್ಳುತ್ತದೆ. ಸಿಂಪಿಗಳ (Oysters) ಒಳಗೆ ಮರಳಿನ ಕಣ ಅಥವಾ ಸಣ್ಣ ಪರಾವಲಂಬಿ ಜೀವಿ ಪ್ರವೇಶಿಸಿದಾಗ, ಆ ಜೀವಿಯು ತನ್ನ ರಕ್ಷಣೆಗಾಗಿ “ನ್ಯಾಕ್ರೆ” (Nacre) ಎಂಬ ವಿಶೇಷ ರಸವನ್ನು ಬಿಡುಗಡೆ ಮಾಡುತ್ತದೆ. ಈ ವಸ್ತುವು ವರ್ಷಗಳ ಕಾಲ ಪದರ ಪದರವಾಗಿ ಸಂಗ್ರಹಗೊಂಡು ಅಂತಿಮವಾಗಿ ಸುಂದರವಾದ ಮುತ್ತಾಗಿ ಬದಲಾಗುತ್ತದೆ.
ಆಧ್ಯಾತ್ಮಿಕ ಮಾತ್ರವಲ್ಲದೆ ಮಾನಸಿಕ ಪ್ರಯೋಜನ:
ಮುತ್ತು ಧರಿಸುವುದರಿಂದ ಕೇವಲ ಆಧ್ಯಾತ್ಮಿಕ ಮಾತ್ರವಲ್ಲದೆ ಮಾನಸಿಕ ಪ್ರಯೋಜನಗಳೂ ಇವೆ. ಅತಿಯಾದ ಕೋಪ, ಕಿರಿಕಿರಿ ಮತ್ತು ಮಾನಸಿಕ ಒತ್ತಡದಿಂದ ಬಳಲುತ್ತಿರುವವರು ಮುತ್ತು ಧರಿಸುವುದರಿಂದ ಅವರ ಮನಸ್ಸು ಶಾಂತವಾಗಲು ಸಹಾಯವಾಗುತ್ತದೆ. ಇದು ಸುತ್ತಮುತ್ತಲಿನ ನಕಾರಾತ್ಮಕ ಯೋಚನೆಗಳನ್ನು ದೂರವಿಟ್ಟು, ಧರಿಸಿದವರಲ್ಲಿ ಆತ್ಮವಿಶ್ವಾಸ ಮತ್ತು ಮಾನಸಿಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಅದೃಷ್ಟವನ್ನು ತರುತ್ತದೆ. ಸಾಮಾನ್ಯವಾಗಿ ಜನರು ಇದನ್ನು ಉಂಗುರ, ಹಾರ ಅಥವಾ ಬಳೆಯ ರೂಪದಲ್ಲಿ ಧರಿಸುತ್ತಾರೆ.
ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಮುತ್ತು ದೇಹದ ಆರೋಗ್ಯದ ಮೇಲೆಯೂ ಧನಾತ್ಮಕ ಪರಿಣಾಮ ಬೀರುತ್ತದೆ. ಇದು ರಕ್ತದೊತ್ತಡವನ್ನು (Blood Pressure) ನಿಯಂತ್ರಿಸಲು ಮತ್ತು ನಿದ್ರಾಹೀನತೆಯ ಸಮಸ್ಯೆಯನ್ನು ನಿವಾರಿಸಿ ಗಾಢವಾದ ನಿದ್ರೆ ಬರುವಂತೆ ಮಾಡಲು ಸಹಕಾರಿಯಾಗಿದೆ ಎಂದು ನಂಬಲಾಗಿದೆ. ಇದರೊಂದಿಗೆ, ನವದಂಪತಿಗಳು ಮುತ್ತುಗಳನ್ನು ಧರಿಸುವುದರಿಂದ ಅವರ ನಡುವೆ ಪ್ರೀತಿ, ವಾತ್ಸಲ್ಯ ಮತ್ತು ಪರಸ್ಪರ ತಿಳುವಳಿಕೆ ಹೆಚ್ಚುತ್ತದೆ, ಇದು ಸುಖಮಯ ದಾಂಪತ್ಯ ಜೀವನಕ್ಕೆ ದಾರಿಯಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ.
ಜ್ಯೋತಿಷಿಗಳ ಪ್ರಕಾರ, ಮೀನ, ಧನು ಮತ್ತು ಸಿಂಹ ರಾಶಿಯವರಿಗೆ ಬಿಳಿ ಮುತ್ತು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಬಲಗೈಯ ಕಿರುಬೆರಳಿಗೆ (Little Finger) ಧರಿಸುವುದು ವಾಡಿಕೆ. ಆದಾಗ್ಯೂ, ಮುತ್ತು ಚಂದ್ರನಿಗೆ ಸಂಬಂಧಿಸಿರುವುದರಿಂದ, ಅದನ್ನು ಧರಿಸುವ ಮುನ್ನ ನಿಮ್ಮ ಜಾತಕ ಮತ್ತು ರಾಶಿಚಕ್ರದ ಆಧಾರದ ಮೇಲೆ ಒಮ್ಮೆ ಪರಿಣಿತ ಜ್ಯೋತಿಷಿಗಳನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಯಾವಾಗಲೂ ಸೂಕ್ತವಾಗಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮೇ 30: ಇಸ್ರೇಲ್, ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದ ಜಾಗತಿಕ ಪರಿಣಾಮವಾಗಿ ದೇಶದಲ್ಲಿ ಇಂಧನ ದರಗಳು ಪದೇಪದೆ ಏರಿಕೆಯಾಗುತ್ತಿದ್ದು, ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ಕೇವಲ ಹತ್ತು ದಿನಗಳಲ್ಲಿ ಬರೋಬ್ಬರಿ ನಾಲ್ಕು ಬಾರಿ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಹೆಚ್ಚಿಸಲಾಗಿದೆ. ಈ ಹಠಾತ್ ದರ ಏರಿಕೆಯಿಂದ ಕಂಗಾಲಾಗಿರುವ ದಕ್ಷಿಣ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟರ್ಸ್ ಅಸೋಸಿಯೇಷನ್ (SIMTA) ಹಾಗೂ ವಾಹನ ಮಾಲೀಕರು, ಪ್ರಧಾನಿ ನರೇಂದ್ರ ಮೋದಿ (Narendra Modi)ಅವರಿಗೆ ತುರ್ತು ಪತ್ರ ಬರೆದಿದ್ದಾರೆ. ಇಂಧನ ಬೆಲೆ ಏರಿಕೆಗೆ ಪರ್ಯಾಯವಾಗಿ ಮುಂದಿನ ಆರು ತಿಂಗಳ ಕಾಲ ಟೋಲ್ ದರ ಮತ್ತು ವ್ಯಾಟ್ (VAT) ತೆರಿಗೆಯನ್ನು ಕಡಿತಗೊಳಿಸಬೇಕು, ಇಲ್ಲದಿದ್ದರೆ ಅನಿವಾರ್ಯವಾಗಿ ಸರಕು ಸಾಗಣೆ ದರವನ್ನು ಹೆಚ್ಚಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಗಡುವು ನೀಡಿ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಾಂಶಗಳು
ಜಾಗತಿಕ ಯುದ್ಧದ ಹಿನ್ನೆಲೆಯಲ್ಲಿ ಕಳೆದ 10 ದಿನಗಳಲ್ಲಿ 4 ಬಾರಿ ತೈಲ ದರ ಏರಿಕೆ.
ಪೆಟ್ರೋಲ್ ₹7.97 ಹಾಗೂ ಡೀಸೆಲ್ ₹7.81 ರಷ್ಟು ದುಬಾರಿ.
ಇಂಧನ ಹೊರೆ ತಪ್ಪಿಸಲು ಕನಿಷ್ಠ 6 ತಿಂಗಳು ಟೋಲ್ ಶುಲ್ಕ ಮತ್ತು ವ್ಯಾಟ್ ಕಡಿತಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ‘ಸಿಮ್ಟಾ’ ಮನವಿ.
ಬೆಲೆ ಏರಿಕೆಯ ಬಿಸಿ: ಕನಕಪುರ ಟು ಬೆಂಗಳೂರು ಬಾಡಿಗೆ ದುಬಾರಿ
ಯುದ್ಧದ ಪ್ರಕ್ಷುಬ್ಧ ವಾತಾವರಣದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಾಗಿದ್ದು, ದೇಶದಲ್ಲಿ ಪೆಟ್ರೋಲ್ ಬೆಲೆ 7.97 ರೂ. ಹಾಗೂ ಡೀಸೆಲ್ ದರ 7.81 ರೂ.ನಷ್ಟು ಏರಿಕೆ ಕಂಡಿದೆ. ಇದರಿಂದಾಗಿ ಲಾರಿ ಮತ್ತು ಟ್ರಕ್ ಮಾಲೀಕರು ತೀವ್ರ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಲಾರಿ ಮಾಲೀಕರಾದ ಶಿವಶಂಕರ್, ‘ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚುತ್ತಿರುವುದರಿಂದ ವಾಹನ ನಿರ್ವಹಣೆ ಕಷ್ಟವಾಗಿದೆ. ಉದಾಹರಣೆಗೆ, ಕನಕಪುರದಿಂದ ಬೆಂಗಳೂರಿಗೆ 50 ಕೆಜಿ ತೂಕದ ಒಂದು ಚೀಲ ಸಾಗಿಸಲು ಈ ಹಿಂದೆ 50 ರೂ. ಬಾಡಿಗೆ ಪಡೆಯುತ್ತಿದ್ದೆವು. ಆದರೆ ಈಗಿನ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿ ಆ ದರವನ್ನು 70 ರೂ.ಗೆ ಏರಿಕೆ ಮಾಡಲು ಸಿದ್ಧತೆ ನಡೆಸುತ್ತಿದ್ದೇವೆ’ ಎಂದು ಅಳಲು ತೋಡಿಕೊಂಡಿದ್ದಾರೆ.
ಗ್ರಾಹಕರ ಜೇಬಿಗೆ ಕತ್ತರಿ ಬೀಳುವ ಆತಂಕ
ಲಾರಿ ಮಾಲೀಕರ ಸಂಘಟನೆಯು ಪ್ರಧಾನಿ ಅವರಿಗೆ ಬರೆದಿರುವ ಪತ್ರದಲ್ಲಿ, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಟೋಲ್ ದರಗಳನ್ನು ಇಳಿಸದಿದ್ದರೆ ಸಾಗಣೆ ವೆಚ್ಚ ಹೆಚ್ಚಿಸುವುದು ಅನಿವಾರ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಸರಕು ಸಾಗಣೆ ದರಗಳು ಏರಿಕೆಯಾದರೆ ಅದರ ನೇರ ಪರಿಣಾಮ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯ ಮೇಲೆ ಬೀರಲಿದೆ. ಈ ಕುರಿತು ಆತಂಕ ವ್ಯಕ್ತಪಡಿಸಿರುವ ಹೋಲ್ ಸೇಲ್ ವ್ಯಾಪಾರಿ ಅಣ್ಣೋಜಿ ರಾವ್, ‘ವಾಹನ ಮಾಲೀಕರು ಸಾಗಣೆ ವೆಚ್ಚವನ್ನು ಹೆಚ್ಚಿಸಿದರೆ, ಮಾರುಕಟ್ಟೆಗೆ ಬರುವ ಧಾನ್ಯಗಳು, ತರಕಾರಿ ಸೇರಿದಂತೆ ಪ್ರತಿಯೊಂದು ವಸ್ತುವಿನ ಬೆಲೆಯೂ ಹೆಚ್ಚಾಗುತ್ತದೆ. ಅಂತಿಮವಾಗಿ ಇದರ ಸಂಪೂರ್ಣ ಹೊರೆ ಮತ್ತು ಎಫೆಕ್ಟ್ ಸಾಮಾನ್ಯ ಗ್ರಾಹಕರ ಮೇಲೆಯೇ ಬೀಳಲಿದೆ’ ಎಂದಿದ್ದಾರೆ.
ತೈಲ ದರ ಏರಿಕೆಯ ಸರಣಿ ಪ್ರಭಾವದಿಂದಾಗಿ ಸದ್ಯದಲ್ಲೇ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುವ ಲಕ್ಷಣಗಳು ಕಾಣಿಸುತ್ತಿದ್ದು, ಕೇಂದ್ರ ಸರ್ಕಾರ ಸೂಕ್ತ ಪರಿಹಾರ ಮಾರ್ಗ ಪ್ರಕಟಿಸುತ್ತದೆಯೇ ಎಂದು ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಸಾಕುಪ್ರಾಣಿಗಳು ನಮ್ಮ ಕುಟುಂಬದ ಸದಸ್ಯರಂತೆಯೇ ಇದ್ದುಬಿಡುತ್ತವೆ. ನಮ್ಮ ಜತೆಯೇ ಆಟ, ನಮ್ಮ ಜತೆಯೇ ಊಟ, ನಮ್ಮ ಜತೆಯೇ ನಿದ್ರೆ ಕೂಡ. ಅವುಗಳ ವಯಸ್ಸಾಗುತ್ತಾ ಬಂದಂತೆ, ಅವುಗಳನ್ನು ಕಳೆದುಕೊಳ್ಳುವ ಭಯ ನಮ್ಮನ್ನು ಸದಾ ಕಾಡುತ್ತಿರುತ್ತದೆ. ಇಂತಹದೇ ಒಂದು ಭಾವನಾತ್ಮಕ ಕ್ಷಣ ಮಹಿಳೆಯೊಬ್ಬರ ಜೀವನದಲ್ಲಿ ಎದುರಾಯಿತು.
ಆಕೆಯ ಮನೆಯಲ್ಲಿದ್ದ 19 ವರ್ಷದ ಮುದ್ದಿನ ಬೆಕ್ಕು ಸ್ವಲ್ಪ ಹೊತ್ತು ಯಾವುದೇ ಚಲನೆಯಿಲ್ಲದೆ ಮಲಗಿತ್ತು. ವಯಸ್ಸಾಗಿದ್ದರಿಂದ, ಅದು ನಿದ್ದೆಯಲ್ಲೇ ಶಾಂತವಾಗಿ ಕೊನೆಯುಸಿರೆಳೆದಿದೆ ಎಂದು ಆಕೆ ಭಾವಿಸಿದ್ದರು. ಆಳವಾದ ದುಃಖ ಮತ್ತು ಮೌನ ಇಡೀ ಮನೆಯನ್ನು ಆವರಿಸಿತ್ತು. ಆಕೆ ತನ್ನ ಪ್ರೀತಿಯ ಜೀವ ಇನ್ನು ನೆನಪು ಮಾತ್ರ ಎಂದುಕೊಂಡು, ನಡುಗುವ ಕೈಗಳಿಂದ ಅದರ ಮೃದುವಾದ ದೇಹದ ಮೇಲೆ ಕೈಯಿಟ್ಟರು.
ಆದರೆ, ಆ ಕ್ಷಣ ಪವಾಡವೊಂದು ಸಂಭವಿಸಿತು, ಬೆಕ್ಕಿನ ದೇಹದೊಳಗಿಂದ ಸಣ್ಣದಾಗಿ ಹೃದಯ ಬಡಿತ (Heartbeat) ಕೇಳಿಸಿತು. ಅದು ಸತ್ತಿರಲಿಲ್ಲ, ಕೇವಲ ಗಾಢವಾದ ನಿದ್ದೆಗೆ ಜಾರಿತ್ತು. ಪ್ರೀತಿಯ ಬೆಕ್ಕಿಗೆ ಹೊಸ ಜೀವ ಬಂದಂತೆ ಆಕೆಗೆ ಭಾಸವಾಯಿತು. ಈ ಅಪರೂಪದ ಕ್ಷಣ ಪ್ರಾಣಿ ಮತ್ತು ಮನುಷ್ಯನ ನಡುವಿನ ಅವಿನಾಭಾವ ಸಂಬಂಧಕ್ಕೆ ಸಾಕ್ಷಿಯಾಗಿದೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮೂರು ಬಾರಿ ಹಿಟ್ ವಿಕೆಟ್ ಆಗಿ ಔಟಾದ ಏಕೈಕ ಬ್ಯಾಟರ್ ಸಾಯಿ ಸುದರ್ಶನ್. ಅದರಲ್ಲೂ ಬ್ಯಾಕ್ ಟು ಬ್ಯಾಕ್ ಹೀಗೆ ವಿಕೆಟ್ ಒಪ್ಪಿಸಿದ ಏಕೈಕ ಆಟಗಾರ ಕೂಡ ಸಾಯಿ ಸುದರ್ಶನ್. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಹಿಟ್ ವಿಕೆಟ್ ಆಗಿದ್ದ ಸಾಯಿ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹಿಟ್ ವಿಕೆಟ್ ಆಗಿ ವಿಕೆಟ್ ಕೈಚೆಲ್ಲಿದ್ದಾರೆ. ಹೀಗಾಗಿಯೇ ಫೈನಲ್ ಪಂದ್ಯದಲ್ಲಿ ಕೈಗೆ ಗ್ಲೂ (ಗಮ್) ಹಾಕಿ ಬ್ಯಾಟಿಂಗ್ ಮಾಡ್ತೀರಾ? ಎಂಬ ಪ್ರಶ್ನೆ ಮುಂದಿಡಲಾಗಿದೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಸಾಯಿ ಸುದರ್ಶನ್ಗೆ, ಅಹಮದಾಬಾದ್ನಲ್ಲಿ ನಡೆಯಲಿರುವ ಪಂದ್ಯದಲ್ಲಿ ನೀವು ಕೈಗೆ ಗಮ್ ಹಾಕಿ ಬ್ಯಾಟಿಂಗ್ ಮಾಡ್ತೀರಾ? ಎಂದು ನಿರೂಪಕರು ಕೇಳಿದ್ದಾರೆ. ಇದಕ್ಕೆ ನಗುತ್ತಾ ಉತ್ತರಿಸಿದ ಸಾಯಿ, ನಾನು ಹೊಸದಾಗಿ ಏನನ್ನಾದರೂ ಮಾಡಬೇಕಿದೆ. ಈ ಸಮಸ್ಯೆಗೆ ಪರಿಹಾರವಾಗಿ ಹೊಸದಾಗಿ ‘ಗ್ರಿಪ್ ಟೆಕ್’ ಬಳಸಿ ನೆಟ್ಸ್‌ನಲ್ಲಿ ಕೆಲವು ಎಸೆತಗಳನ್ನು ಎದುರಿಸಿ ಪರೀಕ್ಷಿಸಲು ನಿರ್ಧರಿಸಿದ್ದೇನೆ ಎಂದಿದ್ದಾರೆ.
ಇದೇ ವೇಳೆ ಎರಡು ಬಾರಿ ಹಿಟ್ ವಿಕೆಟ್ ಆದ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಾಯಿ ಸುದರ್ಶನ್, ಕಳೆದ ಪಂದ್ಯದಲ್ಲಿ ಚೆಂಡು ಬೌನ್ಸ್ ಆಗಿದ್ದ ಪರಿಣಾಮ ಬ್ಯಾಟ್ ಜಾರಿ ಸ್ಟಂಪ್ಗೆ ಬಡಿಯಿತು. ಈ ಬಾರಿ ನಾನು ನೇರವಾಗಿ ಶಾಟ್ ಬಾರಿಸಲು ಬಯಸ್ಸಿದ್ದೆ. ದುರಾದೃಷ್ಟವಶಾತ್ ಹಿಟ್ ವಿಕೆಟ್ ಆದ ಎಂದರು.
ಇನ್ನು ಶುಭ್ಮನ್ ಗಿಲ್ ಜೊತೆಗಿನ ಜೊತೆಯಾಟದ ಬಗ್ಗೆ ಮಾತನಾಡಿದ ಸಾಯಿ ಸುದರ್ಶನ್, ನಮ್ಮ ನಡುವೆ ಏನು ಮಾಡಬೇಕು ಎಂಬುದುರ ಬಗ್ಗೆ ಸ್ಪಷ್ಟತೆ ಇತ್ತು. ಮೊದಲ ಓವರ್ನಿಂದಲೇ ಆಕ್ರಮಣಕಾರಿ ಆಟದೊಂದಿಗೆ ಬೌಲರ್ಗಳಿಗೆ ಒತ್ತಡ ಹೇರುವುದು ನಮ್ಮ ಯೋಜನೆಯಾಗಿತ್ತು. ಅದರಂತೆ ಪವರ್ಪ್ಲೇನಲ್ಲಿ ರನ್ ವೇಗ ಹೆಚ್ಚಿಸಲು ಯಶಸ್ವಿಯಾದೆವು. ಶುಭ್ಮನ್ ಗಿಲ್ ಅತ್ಯದ್ಭುತವಾಗಿ ಬ್ಯಾಟ್ ಬೀಸಿದರು. ನಿಜ ಹೇಳಬೇಕೆಂದರೆ ನಾವೇನು ಅಂದುಕೊಂಡೆವು ಅದೆಲ್ಲಾವೂ ಸಾಧ್ಯವಾಯಿತು ಎಂದು ಸಾಯಿ ಸುದರ್ಶನ್ ಸಂತಸ ವ್ಯಕ್ತಪಡಿಸಿದ್ದಾರೆ.
ಈ ವೇಳೆ 215 ರನ್ಗಳನ್ನು ಚೇಸ್ ಮಾಡಬಹುದು ಎಂದೆನಿಸಿತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಾಯಿ, ನಿಜ ಹೇಳಬೇಕೆಂದರೆ, ನಾವು ಸ್ಕೋರ್ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಸ್ಕೋರ್ ಎಷ್ಟೇ ಇರಲಿ. ನಮ್ಮ ಗಮನ ಕೇವಲ ಪ್ರತಿ ಎಸೆತದ ಮೇಲಿತ್ತು. ಪ್ರತಿ ಎಸೆತಗಳಲ್ಲೂ ರನ್ಗಳಿಸಲು ನಿರ್ಧರಿಸಿದ್ದವು. ಇದುವೇ ನಮ್ಮನ್ನು ಯಶಸ್ಸಿನತ್ತ ಮುನ್ನಡೆಸಿದೆ ಎಂದು ಭಾವಿಸುತ್ತೇನೆ ಎಂದು ಸಾಯಿ ಸುದರ್ಶನ್ ಹೇಳಿದ್ದಾರೆ.
ಅರ್ಚಕ ವೃತ್ತಿಗೆ ನಮ್ಮ ಸಂಸ್ಕೃತಿಯಲ್ಲಿ ಅತೀವ ಮಹತ್ವವಿದೆ. “ಅರ್ಚಕಸ್ಯ ಪ್ರಭಾವೇನ ಶಿಲಾಭವತಿ ಶಂಕರ” ಎಂಬ ಸೂಕ್ತಿ ಹೇಳುವಂತೆ, ಅರ್ಚಕರು ಮನಸ್ಸು ಮಾಡಿದರೆ ಒಂದು ಶಿಲೆಯಲ್ಲಿನ ಮೂರ್ತಿಯಲ್ಲೂ ಕೂಡ ಭಗವಂತನ ಶಕ್ತಿ ನೆಲೆಸುತ್ತದೆ. ಅರ್ಚಕರು ಭಗವಂತ ಮತ್ತು ನಮ್ಮ ನಡುವೆ ಇರುವ ಬಹುದೊಡ್ಡ ಶಕ್ತಿ. ಈ ವೃತ್ತಿಯು ಒಂದು ವಿಶೇಷವಾದ ಪುಣ್ಯದ ವೃತ್ತಿ. ಈ ಅರ್ಚಕ ವೃತ್ತಿಯಲ್ಲಿ ಮಹಿಳೆಯರು ಅರ್ಚಕರಾಗಬಹುದೇ ಎಂಬುದು ಪ್ರಸ್ತುತ ಪ್ರಶ್ನೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಕೆಲವು ದೇವಾಲಯಗಳಲ್ಲಿ, ಹಳ್ಳಿಗಳಲ್ಲಿ ಮಹಿಳೆಯರು ಬೆಳಗಿನ ಜಾವ ಎದ್ದು ಪೂಜೆ, ಅಭಿಷೇಕ, ಅಷ್ಟೋತ್ರಗಳನ್ನು ಮಾಡಿ ಭಗವಂತನಿಗೆ ಅರ್ಪಣೆ ಮಾಡುವ ಸಾಧ್ಯತೆಗಳನ್ನು ನಾವು ನೋಡಿದ್ದೇವೆ. ಆದರೆ, ಕೆಲವರ ಮನಸ್ಸಿನಲ್ಲಿ ಇದು ಸರಿನಾ ಎಂಬ ಗೊಂದಲವಿದೆ. ಆದರೆ, ಅರ್ಚಕ ವೃತ್ತಿಯಲ್ಲಿ ಪುರುಷಲಿಂಗ ಅಥವಾ ಸ್ತ್ರೀಲಿಂಗಕ್ಕೆ ಪ್ರಾಶಸ್ತ್ಯ ಎಂಬುದು ಎಲ್ಲೂ ಇಲ್ಲ. ಅರ್ಚಕರಿಗೆ ಪಂಡಿತ, ಪುರೋಹಿತ, ಪೂಜಾರಿ ಎಂದು ಹಲವು ಹೆಸರುಗಳಿಂದ ಕರೆಯಲಾಗುತ್ತದೆ.
ದೇವಾಲಯ ಪೂಜೆಗಳು, ದೊಡ್ಡ ಯಜ್ಞ ಯಾಗಾದಿಗಳು, ಹೋಮಗಳು, ಪ್ರತಿಷ್ಠಾಪನೆಗಳ ವಿಚಾರದಲ್ಲಿ ಮಹಿಳೆಯರು ಈ ವೃತ್ತಿಯನ್ನು ನಿರ್ವಹಿಸಬಹುದೇ ಎಂದು ನೋಡಿದರೆ, ಖಂಡಿತವಾಗಿಯೂ ಮಹಿಳೆಯರು ಈ ಎಲ್ಲಾ ಕಾರ್ಯಗಳನ್ನು ಮಾಡಬಹುದು. ಇಂತಹ ಕಾರ್ಯಗಳನ್ನು ಮಾಡಲು ಬೇಕಾದ ಯೋಗ ಮತ್ತು ಸಾಮರ್ಥ್ಯ ತಾಯಿಯಲ್ಲಿ ಇರುತ್ತದೆ. ಇದಕ್ಕೆ ಯಾವುದೇ ನಿಬಂಧನೆಗಳಿಲ್ಲ. ಅರ್ಹತೆ ಮಾತ್ರ ಮುಖ್ಯ. ಈ ಅರ್ಹತೆ ಎಂದರೆ ತಾಳ್ಮೆ, ಶಾಂತಿ ಮತ್ತು ಶುದ್ಧ ಮನಸ್ಸು. ಇದನ್ನೂ ಕೂಡ ಅರ್ಹತೆಯ ಒಂದು ಭಾಗವೆಂದು ಪರಿಗಣಿಸಬಹುದು.
ವೇದಗಳು ಮತ್ತು ಧಾರ್ಮಿಕ ಆಚರಣೆಗಳಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಹಿಂದೆ ಅನೇಕ ಮಹಿಳಾ ವಿದ್ವಾಂಸರು ಇದ್ದ ಉದಾಹರಣೆಗಳಿವೆ. ಋಷಿಮುನಿಗಳ ಪತ್ನಿಯರು ಕೂಡ ಮಹಾ ಮೇಧಾವಿಗಳು ಮತ್ತು ವಿದ್ವಾಂಸರಾಗಿದ್ದರು. ಯಾಜ್ಞವಲ್ಕ್ಯ ಋಷಿಗಳ ಮಗಳು ಮೈತ್ರೇಯಿ ಮತ್ತು ವೇದಗಳ ಸಂಕೀರ್ಣ ಸ್ತೋತ್ರಗಳನ್ನು ರಚಿಸಿದ ಲೋಪಮುದ್ರಾ ದೇವಿ ಇದಕ್ಕೆ ಉತ್ತಮ ಉದಾಹರಣೆಗಳು. ಆಧ್ಯಾತ್ಮಿಕ ವಿಷಯಗಳಲ್ಲಿ ಲಿಂಗಭೇದವಿಲ್ಲ. ಮಠಾಧೀಶರು ಪುರುಷರೇ ಆಗಬೇಕೆಂಬ ನಿಯಮವಿಲ್ಲ, ಸಾಕಷ್ಟು ಮಹಿಳೆಯರು ಈಗಾಗಲೇ ಮಠಾಧೀಶರಾಗಿ ಯಶಸ್ವಿಯಾಗಿ ಧರ್ಮ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿ ಅರ್ಹತೆ ಮತ್ತು ಅಧ್ಯಯನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಆದ್ದರಿಂದ, ಮಹಿಳೆಯರು ಅರ್ಚಕರಾಗಬಹುದು, ಪೂಜಾರಿಗಳಾಗಬಹುದು, ಪಂಡಿತರಾಗಬಹುದು, ಹೋಮ ಯಜ್ಞ ಯಾಗಾದಿಗಳನ್ನು ಮಾಡಬಹುದು. ಅವರಿಗೆ ಅರ್ಹತೆ ಮತ್ತು ಯೋಗ ಇದ್ದಾಗ ಇದನ್ನು ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮೈಸೂರು, ಮಂಗಳೂರು ಸೇರಿ ಕರ್ನಾಟಕದ ಇಂದಿನ ಏರ್ ಕ್ವಾಲಿಟಿ ಹೇಗಿದೆ?
ಬೆಂಗಳೂರು, ಮೇ 30: ಇಂದು ಬೆಂಗಳೂರಿನ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು (AQI) 53 ರಿಂದ 71 ರ ಆಸುಪಾಸಿನಲ್ಲಿ ದಾಖಲಾಗಿದ್ದು, ಇದು ‘ಸಾಧಾರಣ’ (Moderate) ವಲಯಕ್ಕೆ ಸೇರುತ್ತದೆ. ಇತ್ತೀಚೆಗೆ ನಗರದ ಕೆಲವು ಭಾಗಗಳಲ್ಲಿ ಬಿದ್ದ ಮಳೆ ಮತ್ತು ಬೀಸುತ್ತಿರುವ ಗಾಳಿಯ ಕಾರಣದಿಂದಾಗಿ ವಾಯು ಮಾಲಿನ್ಯದ ಮಟ್ಟವು ನಿಯಂತ್ರಣದಲ್ಲಿದೆ.
ಮುಖ್ಯಾಂಶಗಳು
ಬೆಂಗಳೂರಿನ ಇಂದಿನ ವಾಯು ಗುಣಮಟ್ಟ ಸೂಚ್ಯಂಕವು ಸಾಧಾರಣ ಮಟ್ಟದಲ್ಲಿ ದಾಖಲಾಗಿದೆ.
ರಾಜ್ಯದ ಬಹುತೇಕ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯ ನಿಯಂತ್ರಣದಲ್ಲಿದೆ.
ಇತ್ತೀಚಿನ ಮಳೆಯು ಧೂಳನ್ನು ನಿಯಂತ್ರಿಸಿ ಗಾಳಿಯ ಗುಣಮಟ್ಟ ಸುಧಾರಿಸಲು ಸಹಕಾರಿಯಾಗಿದೆ.
ನಗರದ ಪ್ರಮುಖ ಮಾಲಿನ್ಯಕಾರಕ ಘಟಕಗಳಾದ PM2.5 ಮತ್ತು PM10 ಕಣಗಳು ನಿಯಂತ್ರಿತ ಮಟ್ಟದಲ್ಲಿವೆ. ಆದಾಗ್ಯೂ, ಬಿಟಿಎಂ ಲೇಔಟ್, ಬಸವನಗುಡಿ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶಗಳಲ್ಲಿ ಎಕ್ಯೂಐ ಮಟ್ಟವು 65-74 ರಷ್ಟಿದ್ದು, ಉಳಿದ ವಸತಿ ಪ್ರದೇಶಗಳಲ್ಲಿ ವಾಯು ಗುಣಮಟ್ಟವು ಉತ್ತಮವಾಗಿದೆ (Good). ಉಸಿರಾಟದ ತೊಂದರೆ ಇರುವವರು ಮತ್ತು ಹಿರಿಯ ನಾಗರಿಕರು ಮುಂಜಾನೆ ಹೊರಾಂಗಣ ಚಟುವಟಿಕೆಗಳನ್ನು ಮಾಡುವಾಗ ಸ್ವಲ್ಪ ಜಾಗ್ರತೆ ವಹಿಸುವುದು ಸೂಕ್ತ.
ಕರ್ನಾಟಕದ ಇತರೆ ನಗರಗಳ ಎಕ್ಯೂಐ ಸ್ಥಿತಿಗತಿ
ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರೆ ಪ್ರಮುಖ ನಗರಗಳಲ್ಲೂ ಇಂದು ವಾಯು ಗುಣಮಟ್ಟವು ತೃಪ್ತಿದಾಯಕ ಹಾಗೂ ಸಾಧಾರಣ ಮಟ್ಟದಲ್ಲಿದೆ. ಕರ್ನಾಟಕದ ಪ್ರಮುಖ ನಗರಗಳ ಇಂದಿನ ರಿಯಲ್-ಟೈಮ್ ಎಕ್ಯೂಐ (AQI) ವಿವರಗಳು ಈ ಕೆಳಗಿನಂತಿವೆ:
ಬಾಗಲಕೋಟೆ: 74 AQI (ಸಾಧಾರಣ)
ಮಡಿಕೇರಿ: 60 AQI (ಸಾಧಾರಣ)
ಮಂಗಳೂರು: 58 AQI (ಸಾಧಾರಣ)
ಬೆಳಗಾವಿ: 55 AQI (ಸಾಧಾರಣ)
ಮೈಸೂರು: 54 AQI (ಸಾಧಾರಣ)
ಕಲಬುರಗಿ: 46 AQI (ಉತ್ತಮ)
ರಾಜ್ಯದ ಬಹುತೇಕ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು 100 ರ ಒಳಗಿರುವುದರಿಂದ ಸಾರ್ವಜನಿಕ ಆರೋಗ್ಯಕ್ಕೆ ಯಾವುದೇ ಗಂಭೀರ ಆತಂಕವಿಲ್ಲ. ಪ್ರಸ್ತುತ ರಾಜ್ಯದಲ್ಲಿ ವರದಿಯಾಗುತ್ತಿರುವ ಪ್ರೀ-ಮಾನ್ಸೂನ್ (ಮುಂಗಾರು ಪೂರ್ವ) ಮಳೆಯು ಧೂಳಿನ ಕಣಗಳನ್ನು ನಿಯಂತ್ರಿಸಲು ಮತ್ತು ಗಾಳಿಯನ್ನು ಶುದ್ಧವಾಗಿಡಲು ಸಹಕಾರಿಯಾಗಿದೆ.
ಗಾಂಧಿನಗರದಲ್ಲಿರುವ ಕಾರಾಗೃಹ ಇಲಾಖೆಯ ಜಾಗImage Credit source: tv9
ಬೆಂಗಳೂರು, ಮೇ 30: ರಾಜಧಾನಿ ಬೆಂಗಳೂರಿನಲ್ಲಿ (Bengaluru)ಭೂ ಮಾಫಿಯಾ ಕೈಚಳಕ ಎಷ್ಟರಮಟ್ಟಿಗೆ ಬೆಳೆದಿದೆ ಎಂದರೆ, ಸಾರ್ವಜನಿಕರು ತಪ್ಪು ಮಾಡಿದರೆ ಜೈಲಿಗೆ ಹಾಕುವ ಕಾರಾಗೃಹ ಇಲಾಖೆಗೆ (Prisons Department) ಸೇರಿದ ಜಾಗವನ್ನೇ ಖದೀಮರ ತಂಡವೊಂದು ಅತಿಕ್ರಮಣ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ನಗರದ ಹೃದಯಭಾಗವಾದ ಗಾಂಧಿನಗರದಲ್ಲಿರುವ ಕಾರಾಗೃಹ ಇಲಾಖೆಯ ಬರೋಬ್ಬರಿ 10,000 ಚದರ ಅಡಿ ವಿಸ್ತೀರ್ಣದ ಪ್ರೈಮ್ ಲೊಕೇಶನ್ ಜಾಗವನ್ನು ಕಬಳಿಸಲು ಯತ್ನಿಸಲಾಗಿದೆ. ಈ ಕೋಟ್ಯಂತರ ರೂಪಾಯಿ ಮೌಲ್ಯದ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದ ಆರೋಪಿಗಳ ವಿರುದ್ಧ ಕಾರಾಗೃಹ ಇಲಾಖೆ ನೀಡಿದ ದೂರಿನನ್ವಯ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಈಗ ಅಧಿಕೃತವಾಗಿ ಎಫ್‌ಐಆರ್ (FIR) ದಾಖಲಾಗಿದೆ.
ಮುಖ್ಯಾಂಶಗಳು
ಮೈಸೂರು ಅರಸರು ಕಾರಾಗೃಹ ಇಲಾಖೆಗೆ ದಾನವಾಗಿ ನೀಡಿದ್ದ 40 ರಿಂದ 50 ಕೋಟಿ ರೂ. ಮೌಲ್ಯದ 10 ಸಾವಿರ ಚದರ ಅಡಿ ಜಾಗದ ಮೇಲೆ ಭೂಮಾಫಿಯಾ ಕಣ್ಣು.
ಕಳೆದ 20 ವರ್ಷಗಳಿಂದ ಪಾಳುಬಿದ್ದಿದ್ದ ಜಾಗವನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡು ಗುಜರಿ ಉದ್ಯಮ ನಡೆಸುತ್ತಿದ್ದ ಕಲೀಂ ಮತ್ತು ಅನಿಲ್ ಎಂಬ ಕಿಲಾಡಿಗಳು.
ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಕಟ್ಟುನಿಟ್ಟಿನ ಆದೇಶದ ಬೆನ್ನಲ್ಲೇ ಉಪ್ಪಾರಪೇಟೆ ಪೊಲೀಸರಿಂದ ಆರೋಪಿಗಳಿಗೆ ನೋಟಿಸ್ ಜಾರಿ.
ಮೈಸೂರು ಅರಸರು ನೀಡಿದ್ದ ಆಸ್ತಿ ಮೇಲೆ ಕಣ್ಣಿಟ್ಟ ಖದೀಮರು
ಗಾಂಧಿನಗರದ 2ನೇ ಕ್ರಾಸ್‌ನಲ್ಲಿರುವ ರಾಮಮಂದಿರದ ಎದುರು ಇರುವ ಈ ಜಾಗಕ್ಕೆ ಬರೋಬ್ಬರಿ 70 ರಿಂದ 80 ವರ್ಷಗಳ ಇತಿಹಾಸವಿದೆ. ಹಿಂದೆ ಮೈಸೂರು ಮಹಾರಾಜರು ಈ ಜಾಗವನ್ನು ಕಾರಾಗೃಹ ಇಲಾಖೆಗೆ ದಾನವಾಗಿ ನೀಡಿದ್ದರು. ಇಲಾಖೆಯು ಇಲ್ಲಿ ಕೆಲವು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿತ್ತು. ಆದರೆ, ಕಳೆದ 20 ವರ್ಷಗಳಿಂದ ಇಲಾಖೆಯ ಹಿರಿಯ ಅಧಿಕಾರಿಗಳು ಈ ಕಡೆ ಗಮನ ಹರಿಸದ ಕಾರಣ ಕಟ್ಟಡಗಳು ಹಳೆಯದಾಗಿ ಪಾಳು ಬಿದ್ದಿದ್ದವು. ಇದನ್ನೇ ಬಂಡವಾಳ ಮಾಡಿಕೊಂಡ ಕಲೀಂ ಮತ್ತು ಅನಿಲ್ ಎಂಬುವವರು ಜಾಗಕ್ಕೆ ಬೇಲಿ ಹಾಕಿ, ಗುಜರಿ ಸಾಮಗ್ರಿಗಳನ್ನು ಇಟ್ಟುಕೊಂಡು ಅಕ್ರಮವಾಗಿ ಕಬ್ಜಾ ಮಾಡಿಕೊಂಡಿದ್ದರು.
ಅಲೋಕ್ ಕುಮಾರ್ ಮಾಸ್ಟರ್ ಪ್ಲಾನ್ನಿಂದ ಬಯಲಾದ ಅಕ್ರಮ!
ಇತ್ತೀಚೆಗೆ ಕಾರಾಗೃಹ ಇಲಾಖೆಯ ಮುಖ್ಯಸ್ಥರಾದ ಡಿಜಿಪಿ ಅಲೋಕ್ ಕುಮಾರ್ (DGP Alok Kumar) ಅವರ ಗಮನಕ್ಕೆ ಈ ಜಾಗದ ವಿಚಾರ ಬಂದಾಗ, ಅವರು ಸ್ಥಳ ಪರಿಶೀಲನೆ ನಡೆಸಿದ್ದರು. ಈ ಪ್ರೈಮ್ ಏರಿಯಾದಲ್ಲಿ ಇಲಾಖೆಯ ವತಿಯಿಂದ ಹೊಸ ಕಟ್ಟಡ ನಿರ್ಮಿಸಿ, ಜೈಲಿನ ಕೈದಿಗಳು ಸಿದ್ಧಪಡಿಸುವ ಬೇಕರಿ ತಿನಿಸುಗಳು ಹಾಗೂ ಬಟ್ಟೆಗಳ ಮಾರಾಟ ಮಳಿಗೆಯನ್ನು (Prison Outlet) ಆರಂಭಿಸಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಜಾಗ ಖಾಲಿ ಮಾಡುವಂತೆ ಅತಿಕ್ರಮಣದಾರರಿಗೆ ನೋಟಿಸ್ ನೀಡಲಾಗಿತ್ತಾದರೂ, ಅವರು ಜಾಗ ಖಾಲಿ ಮಾಡಲು ನಿರಾಕರಿಸಿದ್ದರು.
ಇದೀಗ ಕಠಿಣ ನಿಲುವು ತಳೆದಿರುವ ಇಲಾಖೆಯು ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಇಬ್ಬರೂ ಆರೋಪಿಗಳಿಗೆ ತಕ್ಷಣ ಜಾಗ ಖಾಲಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ. ಸದ್ಯ ಮುನ್ನೆಚ್ಚರಿಕೆ ಕ್ರಮವಾಗಿ ಇಲಾಖೆಯು ಆ ಜಾಗದಲ್ಲಿ ‘ಇದು ಕಾರಾಗೃಹ ಇಲಾಖೆಗೆ ಸೇರಿದ ಸ್ವತ್ತು’ ಎಂದು ಬೋರ್ಡ್ ಅಳವಡಿಸಿ, ಇಬ್ಬರು ಸಶಸ್ತ್ರ ಭದ್ರತಾ ಸಿಬ್ಬಂದಿಯನ್ನು ಕಾವಲಿಗೆ ನಿಯೋಜಿಸಿದೆ. ಈ ಹಿಂದೆ ಮಲ್ಲೇಶ್ವರಂ ಮುಖ್ಯರಸ್ತೆಯಲ್ಲೂ ಪೊಲೀಸ್ ಇಲಾಖೆಯ ಒಂದು ಎಕರೆ ಜಾಗವನ್ನು ಕಬಳಿಸಲು ಯತ್ನಿಸಲಾಗಿತ್ತು. ರಕ್ಷಣೆ ನೀಡಬೇಕಾದ ಪೊಲೀಸ್ ಹಾಗೂ ಕಾರಾಗೃಹ ಇಲಾಖೆಯ ಆಸ್ತಿಗಳಿಗೇ ಈ ಪರಿಸ್ಥಿತಿ ಬಂದರೆ ಸಾಮಾನ್ಯ ಜನರ ಆಸ್ತಿಪಾಸ್ತಿಗಳ ಗತಿ ಏನು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನಿರ್ದೇಶಕ ನಿತೇಶ್ ತಿವಾರಿ ಅವರ ಮಹತ್ವಾಕಾಂಕ್ಷೆಯ ‘ರಾಮಾಯಣ’ ಚಿತ್ರದಲ್ಲಿ (Ramayana Movie) ಪ್ರಭು ಶ್ರೀರಾಮನ ಪಾತ್ರ ನಿರ್ವಹಿಸುತ್ತಿರುವ ನಟ ರಣಬೀರ್ ಕಪೂರ್, ಈ ಚಿತ್ರವು ತಮ್ಮ ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನದ ಮೇಲೆ ಬೀರಿದ ಆಳವಾದ ಪ್ರಭಾವವನ್ನು ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಈ ಐತಿಹಾಸಿಕ ಪಾತ್ರಕ್ಕೆ ತಾವು ನ್ಯಾಯ ಒದಗಿಸಬಲ್ಲರೇ ಎಂಬ ಆತಂಕ ತಮಗಿತ್ತೆಂದು ಅವರು ಒಪ್ಪಿಕೊಂಡಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ರಣಬೀರ್, ‘ರಾಮಾಯಣ ಸಿನಿಮಾ ನನ್ನ ಜೀವನವನ್ನೇ ಬದಲಾಯಿಸಿದೆ. ಶ್ರೀರಾಮನ ಪಾತ್ರ ನನ್ನ ಯೋಚನಾ ಲಹರಿ, ಮೌಲ್ಯಗಳು ಹಾಗೂ ಧರ್ಮವನ್ನು ನೋಡುವ ದೃಷ್ಟಿಕೋನವನ್ನೇ ಬದಲಿಸಿತು. ಇದು ನನ್ನಲ್ಲಿದ್ದ ಕೆಟ್ಟ ಅಭ್ಯಾಸಗಳನ್ನು ದೂರವಾಗಿಸಿ, ಒಬ್ಬ ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿದೆ. ಮಗಳು ರಾಹಾ ನನ್ನ ಜೀವನಕ್ಕೆ ಬಂದ ಮೇಲೆ ನಾನು ಒಳ್ಳೆಯ ತಂದೆಯಾಗಬೇಕೆಂದು ಬಯಸಿದ್ದೆ, ಅದಕ್ಕೆ ಸರಿಯಾಗಿ ರಾಮಾಯಣ ಚಿತ್ರ ನನ್ನನ್ನು ರಾಹಾಳಿಗಾಗಿ ಮತ್ತಷ್ಟು ಉತ್ತಮ ಮಾನವನನ್ನಾಗಿ ಬದಲಾಯಿಸಿತು’ ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.
ಶ್ರೀರಾಮನ ಗುಣಗಳನ್ನು ಕೊಂಡಾಡಿದ ಅವರು, ‘ರಾಮನ ಅಸಲಿ ಶಕ್ತಿ ಅವನ ಸ್ನಾಯುಬಲ ಅಥವಾ ಅತಿಮಾನುಷ ಶಕ್ತಿಯಲ್ಲ; ಬದಲಿಗೆ ಅವನ ಶಾಂತತೆ, ಸಂಯಮ, ಕ್ಷಮಾಗುಣ ಮತ್ತು ಧರ್ಮಪಾಲನೆ. ಇಂದಿನ ಉದ್ವೇಗದ ಜಗತ್ತಿನಲ್ಲಿ ಅಹಂಕಾರ ಬದಿಗಿಟ್ಟು ಕರುಣೆಯಿಂದ ಪ್ರತಿಕ್ರಿಯಿಸುವ ಶ್ರೀರಾಮನ ಗುಣ ನಮಗೆ ದೊಡ್ಡ ಪಾಠ’ ಎಂದಿದ್ದಾರೆ. ನಮ್ಮ ಇತಿಹಾಸ ಮತ್ತು ಸಂಸ್ಕೃತಿಯನ್ನು ಅತ್ಯಂತ ಅಧಿಕೃತವಾಗಿ ತೆರೆಗೆ ತರುತ್ತಿರುವ ಈ ಚಿತ್ರದ ಭಾಗವಾಗಿರುವುದಕ್ಕೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಭಾರಿ ಬಜೆಟ್‌ನ ಈ ‘ರಾಮಾಯಣ’ ಚಿತ್ರ ಎರಡು ಭಾಗಗಳಲ್ಲಿ ಮೂಡಿಬರಲಿದ್ದು, ಮೊದಲ ಭಾಗವು ಅಕ್ಟೋಬರ್ 2026ರಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಸಿದ್ಧ ಸಂಗೀತ ನಿರ್ದೇಶಕರಾದ ಎ.ಆರ್. ರೆಹಮಾನ್ ಮತ್ತು ಹ್ಯಾನ್ಸ್ ಜಿಮ್ಮರ್ ಈ ಚಿತ್ರಕ್ಕೆ ಒಟ್ಟಾಗಿ ಸಂಗೀತ ನೀಡುತ್ತಿರುವುದು ವಿಶೇಷ.
ಬೆಂಗಳೂರು, ಮೇ 30: ರಾಜ್ಯದ ಕರಾವಳಿ ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ (Weather) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ವರುಣನ ಆರ್ಭಟ ಹೆಚ್ಚಿರಲಿದ್ದು, ಕೆಲವು ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯಲಿದೆ.
ಮುಖ್ಯಾಂಶಗಳು
ಕರಾವಳಿಯ ಮೂರು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಒಳನಾಡಿನ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯ ಮುನ್ಸೂಚನೆ.
ಸಾರ್ವಜನಿಕರು ಹಾಗೂ ರೈತರು ಸಿಡಿಲು ಮತ್ತು ಗಾಳಿಗೆ ಎಚ್ಚರಿಕೆ ವಹಿಸಿ.
ಎಲ್ಲೆಲ್ಲಿ ಮಳೆ?
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಹಾವೇರಿ, ಗದಗ, ಕೊಪ್ಪಳ, ಧಾರವಾಡ ಮತ್ತು ರಾಯಚೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಬಿರುಗಾಳಿ (ಗಂಟೆಗೆ 40-50 ಕಿ.ಮೀ ವೇಗ) ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯಲಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದ ಬಲವಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ರಾಜ್ಯದ ಪ್ರಮುಖ ಭಾಗಗಳಲ್ಲಿ, ವಿಶೇಷವಾಗಿ ದಕ್ಷಿಣ ಒಳನಾಡಿನಲ್ಲಿ ವರುಣನ ಆರ್ಭಟ ಹೆಚ್ಚಿರಲಿದ್ದು, ಸಾರ್ವಜನಿಕರು ಮತ್ತು ರೈತರು ಬಿರುಗಾಳಿ ಹಾಗೂ ಸಿಡಿಲಿನ ಬಗ್ಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಉಳಿದಂತೆ ಉತ್ತರ ಒಣ ಹವೆಯೂ ಕೆಲವು ಜಿಲ್ಲೆಗಳಲ್ಲಿ ಮುಂದುವರಿಯಲಿದೆ.