All posts by nagaraj11081993

‘ಸಿಟಿ ಲೈಟ್ಸ್’ ಸಿನಿಮಾ: ದುನಿಯಾ ವಿಜಯ್ ನಿರ್ದೇಶನ ಮಾಡುವ ಸ್ಟೈಲ್ ನೋಡಿ

ದುನಿಯಾ ವಿಜಯ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 3ನೇ ಸಿನಿಮಾ ‘ಸಿಟಿ ಲೈಟ್ಸ್’ (City Lights) ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ‘ಸಲಗ’, ‘ಭೀಮ’ ಬಳಿಕ ವಿಜಯ್ ಕುಮಾರ್ ಅವರು ಆ್ಯಕ್ಷನ್-ಕಟ್ ಹೇಳಿರುವ ಸಿನಿಮಾ ಇದು. ಈ ಸಿನಿಮಾದಿಂದ ಇತ್ತೀಚೆಗೆ ‘ಬಾವ ಬಾವ’ ಹಾಡನ್ನು ಬಿಡುಗಡೆ ಮಾಡಲಾಗಿತ್ತು. ಆ ಮೂಲಕ ‘ಸಿಟಿ ಲೈಟ್ಸ್‌’ ಸಿನಿಮಾದ ಪ್ರಚಾರಕ್ಕೆ ಚುರುಕು ಮುಟ್ಟಿಸಲಾಯಿತು. ಈ ಚಿತ್ರದ ಮೂಲಕ ಪುತ್ರಿ ಮೋನಿಷಾ ವಿಜಯ್‌ ಕುಮಾ‌ರ್ (Monisha Vijay Kumar) ಅವರನ್ನು ಚಿತ್ರರಂಗಕ್ಕೆ ಪರಿಚಯಿಸಲಾಗುತ್ತಿದೆ. ಅವರ ಜೊತೆ ವಿನಯ್ ರಾಜ್​ಕುಮಾರ್ ಅವರು ನಟಿಸುತ್ತಿದ್ದಾರೆ. ಹಳ್ಳಿಯಿಂದ ಬೆಂಗಳೂರಿಗೆ ಬಂದ ಇಬ್ಬರು ಏನೆಲ್ಲ ಕಷ್ಟಗಳನ್ನು ಎದುರಿಸುತ್ತಾರೆ ಎನ್ನುವ ಕಥೆ ಈ ಸಿನಿಮಾದಲ್ಲಿ ಇರಲಿದೆ. ಈ ಸಿನಿಮಾಗೆ ಶಿವಸೇನಾ ಅವರ ಛಾಯಾಗ್ರಹಣ ಇದೆ. ದೀಪು ಎಸ್. ಕುಮಾರ್ ಅವರು ಸಂಕಲನ ಮಾಡುತ್ತಿದ್ದಾರೆ. ಮಾಸ್ತಿ ಅವರು ಸಂಭಾಷಣೆ ಬರೆದಿದ್ದಾರೆ. ಚರಣ್ ರಾಜ್ ಅವರು ಸಂಗೀತ ನೀಡಿದ್ದಾರೆ. ಚಿತ್ರತಂಡದಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಸೆಟ್​ನಲ್ಲಿ ದುನಿಯಾ ವಿಜಯ್ (Duniya Vijay) ಅವರ ನಿರ್ದೇಶನ ಯಾವ ರೀತಿ ಇರುತ್ತದೆ ಎಂಬುದರ ಝಲಕ್ ಈ ವಿಡಿಯೋದಲ್ಲಿ ಕಾಣಿಸುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನೀವು ಪದೇ ಪದೇ ಎಸಿ ಆನ್, ಆಫ್ ಮಾಡುತ್ತಿದ್ದರೆ ಏನಾಗುತ್ತದೆ?

ನವದೆಹಲಿ, ಮೇ 27: ಈ ಬಾರಿಯ ಬೇಸಿಗೆ ಜೋರಾಗಿದೆ. ಹಲವೆಡೆ ಉಷ್ಣಅಲೆ (Heat Wave)  ಉಂಟಾಗಿದೆ. ಬಿಸಿಲಿನಿಂದಾಗಿ ಜನರು ಪರದಾಡುತ್ತಿದ್ದಾರೆ. ಸೆಖೆಯನ್ನು ಸಹಿಸಲಾಗದೆ ಫ್ಯಾನ್‌ಗಳು, ಕೂಲರ್‌ಗಳು ಮತ್ತು ಎಸಿಗಳನ್ನು (AC) ಬಳಸುತ್ತಿದ್ದಾರೆ. ಫ್ಯಾನ್​ನಲ್ಲೂ ಸೆಖೆ ನೀಗದೆ ಎಸಿ ಬಳಸುತ್ತಿದ್ದಾರೆ. ಆದರೆ, ಕೆಲವರಿಗೆ ರೂಂ ತಂಪಾದಾಗ ಎಸಿ ಆಫ್ ಮಾಡಿ, ಮತ್ತೆ ಸೆಖೆ ಅನಿಸಿದಾಗ ಅದನ್ನು ಆನ್ ಮಾಡುವ ಅಭ್ಯಾಸವಿದೆ. ನಿಮಗೂ ಆ ಅಭ್ಯಾಸವಿದೆಯೇ? ಈ ರೀತಿ ಪದೇ ಪದೇ ಎಸಿ ಆನ್ ಮತ್ತು ಆಫ್ ಮಾಡುವುದರಿಂದ ಗಂಭೀರ ಹಾನಿ ಉಂಟಾಗುತ್ತದೆ ಎಂದು ನಿಮಗೆ ಗೊತ್ತಾ?

ಪದೇಪದೆ ಎಸಿ ಆಫ್ ಮತ್ತು ಆನ್ ಮಾಡುವುದರಿಂದ ಏನಾಗುತ್ತದೆ?:

ವಿದ್ಯುತ್ ಬಿಲ್ ತೀವ್ರವಾಗಿ ಹೆಚ್ಚಾಗುತ್ತದೆ:

ಅನೇಕರು ರೂಮ್ ತಣ್ಣಗಾದ ತಕ್ಷಣ ಏಸಿ ಆಫ್ ಮಾಡಿ, ಮತ್ತೆ ಸೆಖೆಯಾದಾಗ ಆನ್ ಮಾಡುತ್ತಾರೆ. ಹೀಗೆ ಮಾಡುವುದರಿಂದ ಕರೆಂಟ್ ಬಿಲ್ ಉಳಿಯುವುದಿಲ್ಲ, ಬದಲಿಗೆ ಹೆಚ್ಚಾಗುತ್ತದೆ. ಪ್ರತಿ ಬಾರಿ ನಾವು ಎಸಿ ಆಫ್ ಮಾಡಿ ಮತ್ತೆ ಆನ್ ಮಾಡಿದಾಗ, ಎಸಿ ಮೋಟಾರ್ ಮತ್ತೆ ಕೊಠಡಿಯನ್ನು ತಂಪಾಗಿಸಲು ಹೆಚ್ಚಿನ ಶಕ್ತಿಯನ್ನು ಬಳಸಬೇಕಾಗುತ್ತದೆ. ಇದು ವಿದ್ಯುತ್ ಬಳಕೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಮತ್ತು ನಿಮ್ಮ ತಿಂಗಳ ವಿದ್ಯುತ್ ಬಿಲ್ ಅನಿರೀಕ್ಷಿತವಾಗಿ ಹೆಚ್ಚಾಗುತ್ತದೆ.

ಇದನ್ನೂ ಓದಿ: ಹೆಚ್ಚು ಸಮಯ ಎಸಿಯಲ್ಲಿ ಇರುವವರಿಗೆ ಉಸಿರಾಟ ಮತ್ತು ಚರ್ಮದ ಸಮಸ್ಯೆ ಕಂಡುಬರುವುದಕ್ಕೆ ಕಾರಣ ಏನ್ ಗೊತ್ತಾ?

ಕಂಪ್ರೆಸರ್ ಮೇಲೆ ಒತ್ತಡ ಬೀಳುತ್ತದೆ:

ನೀವು ಪದೇ ಪದೇ ಆನ್-ಆಫ್ ಮಾಡಿದಾಗ ಕಂಪ್ರೆಸರ್ ಪ್ರತಿ ಬಾರಿಯೂ ತೀವ್ರ ಪ್ರಮಾಣದ ವಿದ್ಯುತ್ ಬಳಸಿಕೊಳ್ಳುತ್ತದೆ. ಅದೇ ಎಸಿ ಸತತವಾಗಿ ಆನ್ ಆಗಿದ್ದರೆ, ರೂಮ್ ತಾಪಮಾನಕ್ಕೆ ತಕ್ಕಂತೆ ಅದು ಕಡಿಮೆ ಕರೆಂಟ್ ಬಳಸುತ್ತದೆ. ಪದೇ ಪದೇ ಎಸಿ ಆಫ್ ಮಾಡಿ ಆನ್ ಮಾಡುವುದರಿಂದ ಅದರ ಮುಖ್ಯ ಘಟಕವಾದ ಕಂಪ್ರೆಸರ್ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಇದು ಅಧಿಕ ಬಿಸಿಯಾಗಲು ಕಾರಣವಾಗುತ್ತದೆ ಮತ್ತು ಕಂಪ್ರೆಸರ್‌ನ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ.

ಆಂತರಿಕ ಘಟಕಗಳು ಹಾನಿಗೊಳಗಾಗುತ್ತವೆ:

ACಯನ್ನು ಪದೇ ಪದೇ ಆನ್ ಮತ್ತು ಆಫ್ ಮಾಡುವುದರಿಂದ ACಯಲ್ಲಿರುವ ಆಂತರಿಕ ವಿದ್ಯುತ್ ಘಟಕಗಳು, ವೈರಿಂಗ್ ಮತ್ತು ಕೆಪಾಸಿಟರ್‌ಗಳು ಹಾನಿಗೊಳಗಾಗಬಹುದು. ಕೆಲವೊಮ್ಮೆ, ಶಾರ್ಟ್ ಸರ್ಕ್ಯೂಟ್‌ಗಳಿಂದಾಗಿ ಅವು ಸುಟ್ಟುಹೋಗುವ ಅಪಾಯವಿರುತ್ತದೆ.

ರೂಮ್ ಸರಿಯಾಗಿ ತಂಪಾಗುವುದಿಲ್ಲ:

ಎಸಿ ಆನ್ ಮಾಡಿದ ತಕ್ಷಣ ಇಡೀ ರೂಮ್ ತಂಪಾಗುವುದಿಲ್ಲ. ರೂಮಿನಲ್ಲಿರುವ ಗೋಡೆಗಳು, ಪೀಠೋಪಕರಣಗಳು ಎಲ್ಲವೂ ತಣ್ಣಗಾಗಲು ಸ್ವಲ್ಪ ಸಮಯ ಬೇಕಾಗುತ್ತದೆ. ನೀವು ರೂಮ್ ತಣ್ಣಗಾಗುವ ಮುನ್ನವೇ ಪದೇ ಪದೇ ಆಫ್ ಮಾಡುತ್ತಿದ್ದರೆ, ರೂಮಿನ ತಾಪಮಾನ ಏರುಪೇರಾಗುತ್ತಲೇ ಇರುತ್ತದೆ. ಇದರಿಂದ ನಿಮಗೆ ಸರಿಯಾದ ತಂಪು ವಾತಾವರಣ ಸಿಗುವುದಿಲ್ಲ.

ಇದನ್ನೂ ಓದಿ: ಸೆಖೆ ತಡೆಯಲಾಗದೆ ಎಸಿ ಕೊಡಿಸಿ ಎಂದ ಪತ್ನಿಗೆ ನೋ ಎಂದ ಗಂಡ; ಆಮೇಲಾಗಿದ್ದು ದುರಂತ!

ಆದ್ದರಿಂದ, ಎಸಿಯನ್ನು ಪದೇ ಪದೇ ಆನ್-ಆಫ್ ಮಾಡುವ ಬದಲು, ಒಂದು ನಿರ್ದಿಷ್ಟ ಮತ್ತು ಆರಾಮದಾಯಕ ತಾಪಮಾನಕ್ಕೆ (ಉದಾಹರಣೆಗೆ: 24C ಅಥವಾ 25C) ಸೆಟ್ ಮಾಡಿ ಹಾಗೇ ಬಿಡುವುದು ವಿದ್ಯುತ್ ಉಳಿತಾಯ ಮತ್ತು ಎಸಿಯ ಆಯಸ್ಸಿನ ದೃಷ್ಟಿಯಿಂದ ಅತ್ಯಂತ ಒಳ್ಳೆಯದು.

AC ಬಳಸುವ ಸರಿಯಾದ ವಿಧಾನ:

ಎಸಿಯನ್ನು ಪದೇ ಪದೇ ಆಫ್ ಮಾಡಿ ಆನ್ ಮಾಡುವ ಬದಲು, ಅದನ್ನು ಯಾವಾಗಲೂ 24ರಿಂದ 26 ಡಿಗ್ರಿ ಸೆಲ್ಸಿಯಸ್‌ನ ಸ್ಥಿರ ತಾಪಮಾನದಲ್ಲಿ ಚಲಾಯಿಸುವುದು ಉತ್ತಮ. ಈ ತಾಪಮಾನವು ನಮ್ಮ ದೇಹಕ್ಕೆ ಆರಾಮದಾಯಕವಾಗುವುದಲ್ಲದೆ, ವಿದ್ಯುತ್ ಬಿಲ್ ಅನ್ನು ಸಹ ಕಡಿಮೆ ಮಾಡುತ್ತದೆ. ನಿಮ್ಮ ಎಸಿ ರಿಮೋಟ್‌ನಲ್ಲಿ ಸ್ಲೀಪ್ ಮೋಡ್, ಇಕೋ ಮೋಡ್ ಮತ್ತು ಟೈಮರ್‌ನಂತಹ ವೈಶಿಷ್ಟ್ಯಗಳನ್ನು ಬಳಸುವ ಅಭ್ಯಾಸವನ್ನು ಮಾಡಿಕೊಳ್ಳಿ. ಕೋಣೆಯ ತಾಪಮಾನವನ್ನು ಅವಲಂಬಿಸಿ ಇವು ಸ್ವಯಂಚಾಲಿತವಾಗಿ ವಿದ್ಯುತ್ ಅನ್ನು ಸರಿಹೊಂದಿಸುತ್ತವೆ. ಅಲ್ಲದೆ, ಎಸಿ ಆನ್ ಆಗಿರುವಾಗ ಕೋಣೆಯ ಕಿಟಕಿಗಳು ಮತ್ತು ಬಾಗಿಲುಗಳು ಸಂಪೂರ್ಣವಾಗಿ ಮುಚ್ಚಲು ಮರೆಯಬೇಡಿ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SRH vs RR: ಅತಿ ಹೆಚ್ಚು ಸಿಕ್ಸರ್; ಕ್ರಿಸ್ ಗೇಲ್ ದಾಖಲೆ ಮುರಿದ ವೈಭವ್ ಸೂರ್ಯವಂಶಿ

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸಿಕ್ಸರ್ ಮತ್ತು ಬೌಂಡರಿಗಳ ಮಳೆ ಸುರಿಸಿ ಕೇವಲ 29 ಎಸೆತಗಳಲ್ಲಿ 97 ರನ್ ಬಾರಿಸಿದರು. ಕೂದಲೆಳೆ ಅಂತರದಲ್ಲಿ ಶತಕ ವಂಚಿತರಾದ ವೈಭವ್ ಕೇವಲ 3 ರನ್‌ಗಳಿಂದ ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಶತಕವನ್ನು ತಪ್ಪಿಸಿಕೊಂಡರು. ವೈಭವ್ ಈ ಶತಕವನ್ನು ಪೂರೈಸಿದ್ದರೆ, ಅದು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕವಾಗುತ್ತಿತ್ತು. ಈ ಮೂಲಕ ವೈಭವ್ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿಯುತ್ತಿದ್ದರು. 2013 ರ ಐಪಿಎಲ್‌ನಲ್ಲಿ ಕ್ರಿಸ್ ಗೇಲ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೇವಲ 30 ಎಸೆತಗಳಲ್ಲಿ ಶತಕ ಬಾರಿಸಿದ್ದರು. ವೈಭವ್ ಕೇವಲ 29 ಎಸೆತಗಳಲ್ಲಿ ಈ ದಾಖಲೆ ಮುರಿಯುವುದರಲ್ಲಿದ್ದರು. ಆದರೆ ಅದು ಆಗಲಿಲ್ಲ. ಆದಾಗ್ಯೂ ಶತಕದ ವಿಚಾರದಲ್ಲಿ ವೈಭವ್, ಗೇಲ್ ಅವರ ದಾಖಲೆ ಮುರಿಯಲು ಸಾಧ್ಯವಾಗದಿದ್ದರೂ, ಸಿಕ್ಸರ್​ಗಳ ವಿಚಾರದಲ್ಲಿ ಗೇಲ್ ಅವರ ದಾಖಲೆ ಮುರಿದರು.

ವಾಸ್ತವವಾಗಿ ಒಂದು ಐಪಿಎಲ್‌ನಲ್ಲಿ ಸೀಸನ್​ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಇದುವರೆಗೆ ಕ್ರಿಸ್ ಗೇಲ್ ಅವರ ಹೆಸರಿನಲ್ಲಿತ್ತು. 2012 ರ ಐಪಿಎಲ್‌ನಲ್ಲಿ ಕ್ರಿಸ್ ಗೇಲ್ ಬರೋಬ್ಬರಿ 59 ಸಿಕ್ಸರ್‌ಗಳನ್ನು ಬಾರಿಸಿ ಈ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದರು. ಆದರೆ 2026 ರ ಐಪಿಎಲ್‌ನಲ್ಲಿ ವೈಭವ್ 60 ಕ್ಕೂ ಅಧಿಕ ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಒಂದು ಆವೃತ್ತಿಯಲ್ಲಿ ಅಧಿಕ ಸಿಕ್ಸರ್ ಬಾರಿಸಿದ ಆಟಗಾರನೆಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು.

Source link

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ಜೂನ್ 1-4ಕ್ಕೆ ಭಾರತದಲ್ಲಿರಲಿದ್ದಾರೆ ಟ್ರಂಪ್ ಆಪ್ತ ಸಲಹೆಗಾರರು

ನವದೆಹಲಿ, ಮೇ 27: ಭಾರತ ಮತ್ತು ಅಮೆರಿಕ ನಡುವಿನ ಮುಕ್ತ ವ್ಯಾಪಾರ ಒಪ್ಪಂದವನ್ನು (India US free trade agreement) ಅಂತಿಮಗೊಳಿಸುವ ನಿಟ್ಟಿನಲ್ಲಿ ಗಮನಾರ್ಹ ಬೆಳವಣಿಗೆಯೊಂದು ನಡೆಯಲಿದ್ದು, ಟ್ರಂಪ್ ಸರ್ಕಾರದ ಉನ್ನತ ಮಟ್ಟದ ಅಧಕಾರಿಗಳ ತಂಡವೊಂದು ಭಾರತಕ್ಕೆ ಭೇಟಿ ನೀಡಲಿದೆ. ಟ್ರಂಪ್ ಅವರಿಗೆ ಆಪ್ತರಾಗಿರುವ ಅಮೆರಿಕದ ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಸಲಹೆಗಾರರ ತಂಡವು ಭಾರತ-ಅಮೆರಿಕ ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದದ (Bilateral Trade Agreement) ಕುರಿತು ನಿರ್ಣಾಯಕ ಮಾತುಕತೆ ನಡೆಸಲು ಬರುವ ಸೋಮವಾರ ನವದೆಹಲಿಗೆ ಭೇಟಿ ನೀಡಲಿದ್ದಾರೆ. ಜೂನ್ 1ರಿಂದ 4ರವರೆಗೆ ಭಾರತದ ತಂಡದೊಂದಿಗೆ ಇದು ಸತತ ಮಾತುಕತೆಗಳಲ್ಲಿ ನಿರತವಾಗಿರಲಿದೆ.

ಭೇಟಿಯ ಪ್ರಮುಖ ಉದ್ದೇಶ ಮತ್ತು ಅಜೆಂಡಾ

ಭಾರತ ಮತ್ತು ಅಮೆರಿಕ ನಡುವೆ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ಸಮಗ್ರ ವ್ಯಾಪಾರ ಒಪ್ಪಂದಕ್ಕೆ ಒಂದು ಅಂತಿಮ ರೂಪ ನೀಡುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ. ಉಭಯ ದೇಶಗಳ ನಡುವಿನ ಸುಂಕ (Tariffs) ಮತ್ತು ರಫ್ತು-ಆಮದು ನಿಯಮಗಳ ಸರಳೀಕರಣದ ಕುರಿತು ಇಲ್ಲಿ ಚರ್ಚೆಯಾಗಲಿದೆ.

ಇದನ್ನೂ ಓದಿ: ಎಚ್​ಡಿಎಫ್​ಸಿಯಿಂದ 45 ಕೋಟಿ ರೂ ಅಕ್ರಮ ಬಡ್ಡಿ ಪಾವತಿ ವಿವಾದ; ಆರೋಪ ನಿರಾಕರಿಸಿದ ಬ್ಯಾಂಕ್

ರಕ್ಷಣೆ (Defence), ಸೆಮಿಕಂಡಕ್ಟರ್, ಕೃತಕ ಬುದ್ಧಿಮತ್ತೆ (AI), ನವೀಕರಿಸಬಹುದಾದ ಇಂಧನ ಹಾಗೂ ತಂತ್ರಜ್ಞಾನ ವಲಯಗಳಲ್ಲಿ ಅಮೆರಿಕದ ಹೂಡಿಕೆಯನ್ನು ಭಾರತದಲ್ಲಿ ಹೆಚ್ಚಿಸುವ ಹಾಗೂ ಭಾರತೀಯ ಕಂಪನಿಗಳಿಗೆ ಅಮೆರಿಕದ ಮಾರುಕಟ್ಟೆಯಲ್ಲಿ ಹೆಚ್ಚಿನ ಮುಕ್ತ ಅವಕಾಶ ಕಲ್ಪಿಸುವ ಬಗ್ಗೆ ಉನ್ನತ ಮಟ್ಟದ ಮಾತುಕತೆ ನಡೆಯಲಿದೆ.

ಡೊನಾಲ್ಡ್ ಟ್ರಂಪ್ ಅವರು “ಅಮೆರಿಕಾ ಫಸ್ಟ್” (America First) ನೀತಿಯನ್ನು ಅನುಸರಿಸುತ್ತಿದ್ದರೂ, ಚೀನಾಕ್ಕೆ ಪರ್ಯಾಯವಾಗಿ ಜಾಗತಿಕ ಪೂರೈಕೆ ಸರಪಳಿಯಲ್ಲಿ (Supply Chain) ಭಾರತವನ್ನು ಅತ್ಯಂತ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರವನ್ನಾಗಿ ನೋಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ದ್ವಿಪಕ್ಷೀಯ ಮಾತುಕತೆ ಜಾಗತಿಕವಾಗಿ ಭಾರಿ ಮಹತ್ವ ಪಡೆದುಕೊಂಡಿದೆ.

ಭಾರತದ ನಿರೀಕ್ಷೆಗಳೇನು?

ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಉನ್ನತ ಅಧಿಕಾರಿಗಳು ಅಮೆರಿಕ ನಿಯೋಗವನ್ನು ಎದುರುಗೊಳ್ಳಲಿದ್ದು, ಭಾರತೀಯ ಉತ್ಪನ್ನಗಳ ಮೇಲಿನ ಸುಂಕ ಕಡಿತಕ್ಕೆ ಒತ್ತಾಯಿಸುವ ಸಾಧ್ಯತೆಯಿದೆ. ವಿಶೇಷವಾಗಿ ಐಟಿ ಸೇವೆಗಳು, ಔಷಧ ಉತ್ಪಾದನೆ (Pharmaceuticals) ಮತ್ತು ಕೃಷಿ ಉತ್ಪನ್ನಗಳ ರಫ್ತಿಗೆ ಅಮೆರಿಕದಲ್ಲಿ ಹೆಚ್ಚಿನ ವಿನಾಯಿತಿಗಳನ್ನು ಪಡೆಯಲು ಭಾರತ ಯೋಜಿಸಿದೆ.

ಇದನ್ನೂ ಓದಿ: ಷೇರುಬಜಾರಲ್ಲಿ ಅದಾನಿ ಪವರ್ ಅಬ್ಬರ; ಮಾರುಕಟ್ಟೆ ಮೌಲ್ಯದಲ್ಲಿ ಇನ್ಫೋಸಿಸ್ ಹಿಂದಿಕ್ಕಿದ್ದು ಹೇಗೆ?

ಸೋಮವಾರ ಆರಂಭವಾಗಲಿರುವ ಈ ಉನ್ನತ ಮಟ್ಟದ ಸಭೆಯು ಮುಂಬರುವ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ನಡೆಯಬಹುದಾದ ಅಧಿಕೃತ ಶೃಂಗಸಭೆಗೆ ದಾರಿಯಾಗಲಿದ್ದು, ಉಭಯ ದೇಶಗಳ ಆರ್ಥಿಕ ಪ್ರಗತಿಗೆ ಹೊಸ ವೇಗ ನೀಡುವ ನಿರೀಕ್ಷೆಯಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಯುವ ಲೇಖಕಿಯ “ದಿ ಮಿಸ್ಟಿಕಲ್ ವೇವ್ಸ್” ಕೃತಿ ಬಿಡುಗಡೆ ಮಾಡಿದ ಸಿ.ಎನ್.ಆರ್.ರಾವ್

ಬೆಂಗಳೂರು, (ಮೇ 27): ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ಪುರಸ್ಕೃತ, ಖ್ಯಾತ ವಿಜ್ಞಾನಿ ಪ್ರೊಫೆಸರ್ ಸಿ.ಎನ್.ಆರ್. ರಾವ್ (CNR Rao) ಅವರು “ದಿ ಮಿಸ್ಟಿಕಲ್ ವೇವ್ಸ್” ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ನ ಗೌರವಾಧ್ಯಕ್ಷರು ಹಾಗೂ ಲೈನಸ್ ಪಾಲಿಂಗ್ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರು ಹಾಗೂ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಗೌರವ ಪ್ರಾಧ್ಯಾಪಕರಾಗಿರುವ ಸಿ.ಎನ್.ಆರ್. ರಾವ್, ಕಿರಿಯ ಲೇಖಕಿ ಅಮನ ಜೆ. ಕುಮಾರ್ ಅವರ ಕಾವ್ಯ ಪ್ರತಿಭೆಯನ್ನು ಶ್ಲಾಘಿಸಿದರು.

ದಿ ಮಿಸ್ಟಿಕಲ್ ವೇವ್ಸ್”  ಬಗ್ಗೆ

ಅಂತರರಾಷ್ಟ್ರೀಯ ಬುಕ್ಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ಟಾಕ್ ಅವರು “ದಿ ಮಿಸ್ಟಿಕಲ್ ವೇವ್ಸ್” ಪುಸ್ತಕದ ಮುನ್ನುಡಿಯನ್ನು ಬರೆದಿದ್ದಾರೆ. ದಿ ಮಿಸ್ಟಿಕಲ್ ವೇವ್ಸ್ ಒಬ್ಬ ವ್ಯಕ್ತಿಯ ಜೀವನ ಪಯಣದ ಪ್ರತಿಬಿಂಬದಂತಿದೆ. ಅನುಭವಗಳು, ನಿರೀಕ್ಷೆಗಳು ಮತ್ತು ಅಪಾರ ಆನಂದದ ಸಂಯೋಜನೆಯಾಗಿರುವ ಈ ಕೃತಿ ಬ್ಲ್ಯಾಕ್‌ಔಟ್ ಕವನಗಳು ಮತ್ತು ಸೊನೆಟ್‌ಗಳ ಸಮನ್ವಯವಾಗಿದೆ.

ಕಾವ್ಯದ ಎರಡು ವಿಭಿನ್ನ ಶೈಲಿಗಳ ಅದ್ಭುತ ಸಂಯೋಜನೆಯಾದ ಈ ಕೃತಿ ಓದುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಪ್ರತಿಯೊಂದು ಪದವೂ ತನ್ನೊಳಗೆ ಆಳವಾದ ಅರ್ಥ ಮತ್ತು ಚಿಂತನೆಯ ಸಾಗರವನ್ನು ಹೊಂದಿದ್ದು, ಓದುಗರ ಕಲ್ಪನೆ ಹಾಗೂ ಬುದ್ಧಿವಂತಿಕೆಯಿಂದ ಅನಾವರಣಗೊಳ್ಳುವಂತಹ ವಿಶಿಷ್ಟತೆಯನ್ನು ಹೊಂದಿದೆ. ಕಡಿಮೆ ಪದಗಳಲ್ಲಿ ಹೆಚ್ಚು ಅರ್ಥವನ್ನು ವ್ಯಕ್ತಪಡಿಸುವ ಈ ಕೃತಿ ಅನೇಕ ಕಥೆಗಳ ನೇಯ್ಗೆಯಂತಿದೆ.

ಲೇಖಕಿ ಅಮನ ಜೆ ಕುಮಾರ್ ಬಗ್ಗೆ

ಲೇಖಕಿ ಅಮನ ಜೆ ಕುಮಾರ್ ಅವರು ಇತ್ತೀಚೆಗೆ ಆರ್.ವಿ. ಪಿಯು ಕಾಲೇಜು, ಜಯನಗರದಲ್ಲಿ 12ನೇ ತರಗತಿಯನ್ನು ಪೂರ್ಣಗೊಳಿಸಿದ್ದಾರೆ. ಇನ್ನು ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ಸ್ ಸ್ಕೂಲ್‌ನಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ, 11ನೇ ವಯಸ್ಸಿನಲ್ಲಿಯೇ ಅವರು ಕವನಗಳು ಹಾಗೂ ಪುಸ್ತಕಗಳನ್ನು ಬರೆಯಲು ಪ್ರಾರಂಭಿಸಿದ್ದು , ಇದುವರೆಗೆ ಅವರ ನಾಲ್ಕು ಪುಸ್ತಕಗಳು ಪ್ರಕಟವಾಗಿದ್ದು, ಮೂರು ಇಂಗ್ಲಿಷ್ ಮತ್ತು‌ ಒಂದು ಹಿಂದಿ ಭಾಷೆಯಲ್ಲಿ ಪ್ರಕಟಗೊಂಡಿವೆ.

ಅವರ ಮೊದಲ ಪುಸ್ತಕ “Echoes of Soulful Poems”ಎರಡನೇ ಪುಸ್ತಕ “World Amidst the Words” ಮೂರನೇ ಹಿಂದಿ ಸಾಹಿತ್ಯ ಕೃತಿ “Lafzon Ki Mehphil” ನಾಲ್ಕನೇ ಪುಸ್ತಕ “Galore of Mysteries” . ಅವರ ಅನೇಕ ಲೇಖನಗಳು ಮತ್ತು ಕಥೆಗಳು ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ ಹಾಗೂ ಆನ್‌ಲೈನ್ ಪೋರ್ಟಲ್‌ಗಳಲ್ಲಿ ಪ್ರಕಟವಾಗಿವೆ. ಸಾಹಿತ್ಯದ ಜೊತೆಗೆ ಅವರು ವಿದ್ಯಾಭ್ಯಾಸದಲ್ಲಿಯೂ ಉತ್ತಮ ಸಾಧನೆ ತೋರಿದ್ದಾರೆ.

ಅಮನ ಅವರ ಸಾಧನೆಗಳು

  •  India Book of Records ನಿಂದ “ಭಾರತದ ಅತಿ ಕಿರಿಯ ಕವಯಿತ್ರಿ” ಎಂಬ ಗೌರವ.
  •  Asia Book of Records ನಿಂದ “ಗ್ರ್ಯಾಂಡ್ ಮಾಸ್ಟರ್” ಪ್ರಶಸ್ತಿ.
  •  Kautilya Youngest Poetess of the Year Award — ಗೋವಾ ರಾಜ್ಯಪಾಲರಿಂದ ಪ್ರದಾನ.
  •  Noble Book of World Record ನಿಂದ “ಅತ್ಯಂತ ಹೆಚ್ಚು ಕವನಗಳನ್ನು ರಚಿಸಿದ ಕವಯಿತ್ರಿ” ಎಂಬ ಗೌರವ (ಏಪ್ರಿಲ್ 2020ರಿಂದ ನವೆಂಬರ್ 2021ರವರೆಗೆ 337 ಕವನಗಳು).
  •  World Record University ನಿಂದ “ಅತಿ ಕಿರಿಯ ಕವಯಿತ್ರಿ” ಪ್ರಶಸ್ತಿ.
  •  International Book of World Record ನಿಂದ “ಅತಿ ಕಿರಿಯ ಕವಯಿತ್ರಿ” ಎಂಬ ಮಾನ್ಯತೆ.
  •  Wonder Book of World Record ನಿಂದ “ಅತಿ ಕಿರಿಯ ಲೇಖಕಿ” ಗೌರವ.
  •  Golden Book of World Records ನಿಂದ ಸತತ ವರ್ಷಗಳಲ್ಲಿ ಕವನ ಸಂಕಲನಗಳನ್ನು ಪ್ರಕಟಿಸಿದ ಅತಿ ಕಿರಿಯ ಕವಯಿತ್ರಿ ಎಂಬ ಗೌರವ ಪಡೆದಿರುತ್ತಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಕ್ರೀದ್ ಹಬ್ಬದ ವೇಳೆ ಗೋಹತ್ಯೆ ತಡೆಗೆ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ: ಕಸಾಯಿಖಾನೆಗಳ ಬಂದ್​​ಗೆ ಒತ್ತಾಯ

ಹಿಂದೂ ಸಂಘಟನೆಗಳಿಂದ ಪ್ರತಿಭಟನೆImage Credit source: tv9 kannada

ಬಾಗಲಕೋಟೆ, ಮೇ 27: ನಾಳೆ (ಮೇ 28) ನಾಡಿನಾದ್ಯಂತ ಬಕ್ರೀದ್ (Bakrid) ಹಬ್ಬದ ಸಂಭ್ರಮ. ಮುಸ್ಲಿಂ ಸಮಾಜದ ಬಾಂಧವರು ಸಂಭ್ರಮದಿಂದ ಬಕ್ರೀದ್ ಆಚರಣೆಗೆ ಸಿದ್ದರಾಗಿದ್ದಾರೆ. ಆದರೆ ಈ ವೇಳೆ ಯಾವುದೇ ಕಾರಣಕ್ಕೂ ಗೋತ್ಯೆಗೆ ಅವಕಾಶ ನೀಡಬಾರದು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ. ಪ್ರತಿಭಟನೆ ಮೂಲಕ ಪೊಲೀಸ್ ಮೇಲಾಧಿಕಾರಿಗಳಿಗೆ ಮನವಿ ನೀಡಿದ್ದು, ಆ ಮೂಲಕ ಗೋಹತ್ಯೆ ತಡೆಗೆ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ ಕಸಾಯಿಖಾನೆಗಳ ಪಟ್ಟಿ ಮಾಡಿ ಬಂದ್​​ಗೆ ಒತ್ತಾಯಿಸಿದ್ದಾರೆ.

ಮುಖ್ಯಾಂಶಗಳು

  • ಬಕ್ರೀದ ಹಬ್ಬ ಬೆನ್ನಲ್ಲೇ ಕಸಾಯಿಖಾನೆಗಳ ವಿರುದ್ಧ ಧ್ವನಿ ಎತ್ತಿದ ಹಿಂದೂ ಪರಸಂಘಟನೆ ಕಾರ್ಯಕರ್ತರು
  • ಬಾಗಲಕೋಟೆ ಜಿಲ್ಲೆಯಲ್ಲಿನಲ್ಲಿ ಕಸಾಯಿಖಾನೆಗಳ ಬಂದ್​​ಗೆ ಒತ್ತಾಯ
  • ಶ್ರೀರಾಮ ಸೇನೆ ಹಾಗೂ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದ ಆಗ್ರಹ

ನಾಳೆ ಎಲ್ಲೆಡೆ ಬಕ್ರೀದ್ ಹಬ್ಬದ ಸಂಭ್ರಮ. ಮುಸ್ಲಿಂ ಸಮುದಾಯದವರು ಅದ್ಧೂರಿಯಾಗಿ ಹಬ್ಬ ಆಚರಣೆಗೆ ಮುಂದಾಗಿದ್ದಾರೆ. ಬಾಗಲಕೋಟೆಯಲ್ಲಿ ಹಿಂದೂಪರ ಸಂಘಟನೆಗಳು ಬಕ್ರೀದ್ ಹಬ್ಬದ ವೇಳೆ ಯಾವುದೇ ಕಾರಣಕ್ಕೂ ಗೋ ಹತ್ಯೆಗೆ ಅವಕಾಶ ನೀಡಬಾರದು ಎಂದು ಪ್ರತಿಭಟಿಸಿದ್ದಾರೆ. ಶ್ರೀರಾಮ ಸೇನೆಯ ಸಂಘಟನೆಯ ಕಾರ್ಯಕರ್ತರು ಡಿಸಿ ಕಚೇರಿ ಎದುರು ಪ್ರತಿಭಟನೆ ಮಾಡಿ ಡಿಸಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಹಿಂದೂ ಜಾಗರಣವೇದಿಕೆ ಕಾರ್ಯಕರ್ತರು ಗೋ ಅಕ್ರಮ ಸಾಗಾಣಿಕೆ ವಿಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ. 2023ರ ಗೋಹತ್ಯೆ ನಿಷೇಧ ಕಾಯ್ದೆ ಬಾಗಲಕೋಟೆಯಲ್ಲಿ ಪಾಲನೆಯಾಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಪೊಲೀಸರು ವಿರುದ್ಧ ಆಕ್ರೋಶ

ಇನ್ನು ಗಿರೀಶ್ ಫೌಂಡೇಶನ್ ಎಂಬ ಎನ್‌ಜಿಒ ಮೂಲಕ ಎಸ್​​ಪಿ ಅವರಿಗೆ ಗೋ ಹತ್ಯೆ ತಡೆಯುವಂತೆ ಮನವಿ ಸಲ್ಲಿಸಲಾಗಿದೆ. ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಬಾಗಲಕೋಟೆ ಜಿಲ್ಲಾದ್ಯಂತ ಕಸಾಯಿಖಾನೆಗಳಿಗೆ ಸಾಗಿಸುವ ಗೋವುಗಳ ವಿಡಿಯೋಗಳನ್ನು ಹರಿಬಿಟ್ಟಿದ್ದಾರೆ. ಬಾಗಲಕೋಟೆ ಜಿಲ್ಲಾದ್ಯಂತ 60ಕ್ಕೂ ಹೆಚ್ಚು ಕಸಾಯಿಖಾನೆಗಳಿವೆ. ಅದರ ಜೊತೆಗೆ ಪರ ಜಿಲ್ಲೆ, ಪರ ರಾಜ್ಯಗಳಿಗೆ ಕೂಡ ಗೋವುಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವಂತೆ‌ ಆಗ್ರಹಿಸಿ ಮುಸ್ಲಿಂ ಸಂಘಟನೆಯಿಂದ ಪ್ರತಿಭಟನೆ

ಈ ಬಗ್ಗೆ ವಿಡಿಯೋ ಸಾಕ್ಷಿ ಸಮೇತ ಕೊಟ್ಟರು ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ, ಕಾಟಾಚಾರಕ್ಕೆ ಭೇಟಿ ನೀಡ್ತಾರೆ ಎಂದು ಕೂಡ ಆಕ್ರೋಶ ಹೊರಹಾಕಿದ್ದಾರೆ. ಆಯಾ ಠಾಣೆ ವ್ಯಾಪ್ತಿಯ ಪೊಲೀಸರಿಗೆ ಪೊಲೀಸ್ ಮೇಲಾಧಿಕಾರಿಗಳು ಸ್ಪಷ್ಟವಾಗಿ ನಿರ್ದೇಶನ ಕೊಡಬೇಕು. ದೂರು ನೀಡಿದ ತಕ್ಷಣ ಗೋ ಹತ್ಯೆ ತಡೆಯುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಬಾಗಲಕೋಟೆ ಎಸ್​​ಪಿ ಸಿದ್ದಾರ್ಥ್ ಗೋಯೆಲ್ ಹೇಳಿದ್ದಿಷ್ಟು 

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಗಲಕೋಟೆ ಎಸ್​​ಪಿ ಸಿದ್ದಾರ್ಥ್ ಗೋಯೆಲ್​​, ಗೋ ಸಾಗಾಣಿಕೆ ತಡೆಯಲು 26 ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ದಾಖಲಾತಿ ಇಲ್ಲದೆ ಗೋಸಾಗಾಣಿಕೆ ಹಿನ್ನೆಲೆ ಎರಡು ಕೇಸ್ ದಾಖಲಿಸಲಾಗಿದೆ. ಗೋಸಾಗಾಣಿಕೆ ಬಗ್ಗೆ ಕಂಟ್ರೋಲ್ ರೂಮ್​ಗೂ ಕರೆ ಮಾಡಬಹುದು. ಕೂಡಲೇ ಕ್ರಮಕೈಗೊಳ್ಳುತ್ತೇವೆ‌‌. ಇನ್ನು ಬಕ್ರೀದ್​ ಹಬ್ಬದ ಭದ್ರತೆಗೆ 600 ಜನ ಪೊಲೀಸ್, 300 ಜನ ಹೋಮ್ ಗಾರ್ಡ್, 3 ಕೆಎಸ್​ಆರ್​ಪಿ, 10 ಡಿಎಆರ್ ತುಕಡಿ ನಿಯೋಜಿಸಲಾಗಿದೆ. 147 ಕಡೆ ಪ್ರಾರ್ಥನೆ ನಡೆಯಲಿದ್ದು, 18 ಕಡೆ‌ ಮೆರವಣಿಗೆ ಇದೆ. 6 ಕಡೆ ಸೂಕ್ಷ್ಮ ಸ್ಥಳ ಎಂದು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಗೋ ಹತ್ಯೆ ಮಾಡುವವರನ್ನು ಗುಂಡಿಕ್ಕಬೇಕು: ಸಚಿವ ಮಂಕಾಳು ವೈದ್ಯ ಹೇಳಿಕೆಗೆ ಪರಮೇಶ್ವರ ಹೇಳಿದ್ದಿಷ್ಟು

ಒಟ್ಟಿನಲ್ಲಿ ಒಂದು ಕಡೆ ಬಕ್ರೀದ್​ ಹಬ್ಬಕ್ಕೆ ಮುಸ್ಲಿಮರು ಸಜ್ಜಾಗಿದ್ದರೆ, ಹಿಂದೂ ಕಾರ್ಯಕರ್ತರು ಬಕ್ರೀದ್ ವೇಳೆ ಗೋಹತ್ಯೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ನನಗೆ ಹಲವು ಸಂಗಾತಿಗಳಿದ್ದಾರೆ’: ಮುಚ್ಚುಮರೆ ಇಲ್ಲದೇ ಎಲ್ಲವನ್ನೂ ಹೇಳಿದ ನಟಿ ಶಹನಾ ಗೋಸ್ವಾಮಿ

‘ರಾಕ್ ಆನ್’, ‘ಹೀರೋಯಿನ್’ ಮುಂತಾದ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ ಬಾಲಿವುಡ್ (Bollywood) ನಟಿ ಶಹನಾ ಗೋಸ್ವಾಮಿ (Shahana Goswami) ಪ್ರೀತಿ ಮತ್ತು ಸಂಬಂಧಗಳ ಕುರಿತಾದ ತಮ್ಮ ವಿಭಿನ್ನ ದೃಷ್ಟಿಕೋನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಖ್ಯಾತ ನಿರೂಪಕ ಸಿದ್ಧಾರ್ಥ್ ಕಣ್ಣನ್ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ಅವರು, ತಾವು ಈಗ ಓಪನ್ ರಿಲೇಶನ್‌ಶಿಪ್​ನಲ್ಲಿ (Open Relationship) ಇರುವುದಾಗಿ ಒಪ್ಪಿಕೊಂಡಿದ್ದಾರೆ. ತಮ್ಮ ಜೀವನದಲ್ಲಿ ಹಲವು ಸಂಗಾತಿಗಳು ಇದ್ದಾರೆ ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.

ಸಾಂಪ್ರದಾಯಿಕ ಸಂಬಂಧಗಳು ತಮಗೆ ಎಂದಿಗೂ ಸರಿಹೊಂದುವುದಿಲ್ಲ ಎಂದು ಶಹನಾ ಹೇಳಿದ್ದಾರೆ. ಏಕೆಂದರೆ ಅವರು ಪ್ರೀತಿ ಮತ್ತು ವೈಯಕ್ತಿಕ ಸ್ವಾತಂತ್ರ್ಯ ಎರಡನ್ನೂ ಸಮಾನವಾಗಿ ನಂಬುತ್ತಾರೆ. ಈ ಹಿಂದೆ ನಟ ಮಿಲಿಂದ್ ಸೋಮನ್ ಜೊತೆಗಿನ ಬ್ರೇಕಪ್ ನೆನಪಿಸಿಕೊಂಡ ಅವರು, ಆ ಬಳಿಕ ತಮಗೆ ಸಾಂಪ್ರದಾಯಿಕ ಸಂಬಂಧದ ಸೂತ್ರಗಳು ಅರ್ಥಹೀನ ಎನಿಸಿದವು ಎಂದಿದ್ದಾರೆ. ತದನಂತರ ತಾವು ರೆಸ್ಟೋರೆಂಟ್ ಉದ್ಯಮಿ ಮೌರೊ ಗಾಜಿ ಅವರನ್ನು ಭೇಟಿಯಾದಾಗ, ಯಾವುದೇ ಕಟ್ಟುನಿಟ್ಟಾದ ನಿಯಮಗಳು ಅಥವಾ ಲೇಬಲ್‌ಗಳಿಲ್ಲದ ಮುಕ್ತ ಸಂಬಂಧವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದ್ದಾಗಿ ಅವರು ತಿಳಿಸಿದ್ದಾರೆ.

ತಮ್ಮ ಮುಕ್ತ ಸಂಬಂಧದ ಅರ್ಥವನ್ನು ವಿವರಿಸಿದ ನಟಿ, ‘ಇದರರ್ಥ ನಮ್ಮ ಸಂಗಾತಿಯೊಂದಿಗೆ ಮುಕ್ತ ಮತ್ತು ಪ್ರಾಮಾಣಿಕವಾದ ಸಂವಹನವನ್ನು ಹೊಂದುವುದು. ಸದ್ಯಕ್ಕೆ ನನ್ನ ಜೀವನದಲ್ಲಿ ಒಬ್ಬನೇ ಪ್ರಮುಖ ಸಂಗಾತಿ ಅಂತ ಯಾರೂ ಇಲ್ಲ. ನನ್ನೊಂದಿಗೆ ದೀರ್ಘಕಾಲದ ಒಡನಾಟ ಹೊಂದಿರುವ ಹಲವು ಜನರಿದ್ದಾರೆ. ಆದರೆ ಅವುಗಳಲ್ಲಿ ಯಾವುದೂ ಸಾಮಾನ್ಯ ಅಲ್ಲ. ಪ್ರತಿಯೊಂದು ಸಂಬಂಧವೂ ನನಗೆ ಮುಖ್ಯವಾದದ್ದು’ ಎಂದಿದ್ದಾರೆ.

‘ನಾವು ಹೇಗೆ ಹಲವು ಸ್ನೇಹಿತರನ್ನು ಹೊಂದಿರುತ್ತೇವೆಯೋ ಮತ್ತು ಪ್ರತಿಯೊಬ್ಬ ಸ್ನೇಹಿತನೊಂದಿಗೂ ವಿಭಿನ್ನ ಒಡನಾಟ ಇರುತ್ತದೆಯೋ ಇದೂ ಹಾಗೆಯೇ. ನನಗೆ ಈ ಹಂತದಲ್ಲಿ ಮುಕ್ತತೆ ಎಂದರೆ ಯಾರೊಂದಿಗೂ ನಿರ್ದಿಷ್ಟವಾದ ಗಟ್ಟಿ ಪಾಲುದಾರಿಕೆ ಇಲ್ಲದಿರುವುದು. ಆದರೆ ದೀರ್ಘಕಾಲದ ಬಾಂಧವ್ಯ ಮತ್ತು ಸಂಪರ್ಕದ ಭಾವನೆ ನಮ್ಮೊಂದಿಗಿರುತ್ತದೆ. ಕೆಲವೊಮ್ಮೆ ಅದು ಕೇವಲ ಸ್ನೇಹವಾಗಿರುತ್ತದೆ, ಕೆಲವೊಮ್ಮೆ ದೈಹಿಕವಾಗಿಯೂ ಇರಬಹುದು. ಅದನ್ನು ಯಾವುದೋ ಒಂದು ನಿರ್ದಿಷ್ಟ ದಿಕ್ಕಿಗೆ ತಿರುಗಿಸುವ ಅಗತ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಾಲಿವುಡ್​​ನ ‘ಕಿರಿ ಕಿರಿ’ ಕಪಲ್ ಬಗ್ಗೆ ಮಾತನಾಡಿದ ನಿರ್ಮಾಪಕ; ಈ ಜೋಡಿ ಮೇಲೆ ಅನುಮಾನ

‘ಇದರ ಮೂಲ ಸಿದ್ಧಾಂತ ಸರಳ: ಪ್ರೀತಿ ಮತ್ತು ಸ್ನೇಹ. ನನ್ನಲ್ಲಿ ನೀಡಲು ಅಪಾರವಾದ ಪ್ರೀತಿ ಇರುವಾಗ, ನಾನು ಅದನ್ನು ಕೇವಲ ಒಬ್ಬ ವ್ಯಕ್ತಿಗೆ ಮಾತ್ರ ಏಕೆ ಸೀಮಿತಗೊಳಿಸಬೇಕು?’ ಎಂದು ಶಹನಾ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಜೀವನದಲ್ಲಿ ಯಾವುದೂ ರಹಸ್ಯವಾಗಿಲ್ಲ ಮತ್ತು ತಾವು ಇತರ ಸಂಗಾತಿಗಳೊಂದಿಗೆ ಆತ್ಮೀಯವಾಗಿರುವುದರ ಬಗ್ಗೆ ತಮ್ಮ ಎಲ್ಲ ಪಾರ್ಟ್‌ನರ್‌ಗಳಿಗೂ ತಿಳಿದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

SRH vs RR: ಶಹಬ್ಬಾಸ್ ಸೂರ್ಯವಂಶಿ; ಶತಕ ವಂಚಿತರಾದ್ರೂ ವಿಶ್ವ ಕ್ರಿಕೆಟ್​ನ ಹೃದಯ ಗೆದ್ದ ವೈಭವ್

ವೈಭವ್ ಸೂರ್ಯವಂಶಿ (Vaibhav Sooryavanshi).. ತಾನು ಕ್ರೀಸ್​ನಲ್ಲಿ ಇರುವವರೆಗೂ ಎದುರಾಳಿಗಳ ಗುಂಡಿಗೆಯ ಬಡಿತ ಹೆಚ್ಚಿಸುವ ಹದಿನೈದೇ ವರ್ಷದ ಹಾಲ್ಗೆನ್ನೆಯ ಯುವಕ. ಬರೀ ಹೊಡಿಬಡಿ ಆಟವನ್ನೇ ಕೇಳುವ ಟಿ20 ಕ್ರಿಕೆಟ್​ಗೆ ಹೇಳಿ ಮಾಡಿಸಿದ ಆಟಗಾರನೆನಿಸಿಕೊಂಡಿರುವ ವೈಭವ್, ಐಪಿಎಲ್ 2026 (IPL 2026) ರ ಎಲಿಮಿನೇಟರ್ ಪಂದ್ಯದಲ್ಲೂ ಅದೇ ಆಟವನ್ನು ಪ್ರದರ್ಶಿಸಿದರು. ಈ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಸನ್‌ರೈಸರ್ಸ್, ಪಂದ್ಯ ಆರಂಭಕ್ಕೂ ಮುನ್ನವೇ ವೈಭವ್ ಸೂರ್ಯವಂಶಿಯನ್ನು ಕಟ್ಟಿಹಾಕಲು ನಾನಾ ರಣತಂತ್ರವನ್ನು ಹೆಣೆದುಕೊಂಡು ಮೈದಾನಕ್ಕಿಳಿದಿತ್ತು. ಆದರೆ ವೈಭವ್ ಸೂರ್ಯವಂಶಿ ಎಂಬ ಸುನಾಮಿಯ ಮುಂದೆ ಸನ್‌ರೈಸರ್ಸ್ ಬೌಲರ್​ಗಳು ಅಕ್ಷರಶಃ ನಲುಗಿ ಹೋದರು.

16 ಎಸೆತಗಳಲ್ಲಿ ಅರ್ಧಶತಕ

ತಂತ್ರಗಾರಿಕೆಯಲ್ಲಿ ನಿಸ್ಸೀಮನೆನಿಸಿಕೊಂಡಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್​ನ ದುಃಸ್ವಪ್ನದಂತೆ ಕಾಡಿದ ವೈಭವ್, ಹ್ಯಾಟ್ರಿಕ್ ಸಿಕ್ಸರ್​ಗಳನ್ನು ಬಾರಿಸುವುದರ ಜೊತೆಗೆ ಅವರ ಓವರ್​ನಲ್ಲಿ ಬರೋಬ್ಬರಿ 25 ರನ್ ಕಲೆಹಾಕಿದರು. ವೈಭವ್ ಹೊಡೆದ ಒಂದೊಂದು ಹೊಡೆತವೂ ಎಸ್‌ಆರ್‌ಎಚ್ ಆಟಗಾರರನ್ನು ತಲೆ ಮೇಲೆ ಕೈಹೊತ್ತು ಕೂರುವಂತೆ ಮಾಡಿತು ಎಂಬುದರಲ್ಲಿ ಅತಿಶಯೋಕ್ತಿ ಇಲ್ಲ. ಬೌಲರ್​ಗಳನ್ನು ದಂಡಿಸುವುದಕ್ಕೆ ನಾನು ಕ್ರೀಸ್​ನಲ್ಲಿ ನಿಂತಿರುವುದು ಎಂಬುದನ್ನು ಪ್ರತಿ ಹೊಡೆತದಲ್ಲೂ ಸಾಭೀತು ಪಡಿಸಿದವರಂತೆ ಬ್ಯಾಟ್ ಬೀಸಿದ ವೈಭವ್ ಕೇವಲ 16 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು.

28 ಎಸೆತಗಳಲ್ಲಿ 97 ರನ್

ಈ ಅರ್ಧಶತಕದ ಇನ್ನಿಂಗ್ಸ್​ನಲ್ಲಿ ವೈಭವ್ ಬಾರಿಸಿದ ಸಿಕ್ಸರ್​ಗಳು ಬರೋಬ್ಬರಿ 8. ಇದರ ಜೊತೆಗೆ 1 ಬೌಂಡರಿಯೂ ಸೇರಿತ್ತು. ಅಂದರೆ ವೈಭವ್ ಬರಿ ಬೌಂಡರಿ ಹಾಗೂ ಸಿಕ್ಸರ್​ಗಳಿಂದಲೇ ತಮ್ಮ ಅರ್ಧಶತಕ ಪೂರೈಸಿದರು. ಈ ಮೂಲಕ ವೈಭವ್, ಪ್ಲೇಆಫ್‌ ಪಂದ್ಯದಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಆಟಗಾರನೆಂಬ ದಾಖಲೆಯನ್ನು ನಿರ್ಮಿಸಿದರು. ಅರ್ಧಶತಕದ ಬಳಿಕ ಮತ್ತಷ್ಟು ಉಗ್ರರೂಪ ತಾಳಿದ ವೈಭವ್ ಕೇವಲ 28 ಎಸೆತಗಳಲ್ಲಿ 97 ರನ್ ಕಲೆಹಾಕಿದರು. ಅಂದರೆ ವೈಭವ್ ತಮ್ಮ ಅರ್ಧಶತಕದಿಂದ 97 ರನ್ ಬಾರಿಸಲು ಕೇವಲ 12 ಎಸೆತಗಳನ್ನಷ್ಟೇ ತೆಗೆದುಕೊಂಡರು. ವೈಭವ್ ಅವರ ಈ ಅಬ್ಬರದಿಂದಾಗಿ ರಾಜಸ್ಥಾನ್ ಕೇವಲ 8 ಓವರ್​ಗಳಲ್ಲಿ 125 ರನ್​ಗಳ ಗಡಿ ದಾಟಿತು.

ಶತಕ ವಂಚಿತರಾದ ವೈಭವ್

ಅಂದರೆ ರಾಜಸ್ಥಾನ್ ದಾಖಲಿಸಿದ 125 ರನ್​ಗಳಲ್ಲಿ ವೈಭವ್ ಒಬ್ಬರೇ 97 ರನ್ ಕಲೆಹಾಕಿದರು. ವೈಭವ್ ಔಟಾದ 8ನೇ ಓವರ್​ನಲ್ಲಿ 3 ಸಿಕ್ಸರ್ ಹಾಗೂ 2 ಬೌಂಡರಿಗಳನ್ನು ಬಾರಿಸಿದರು. ಹೀಗಾಗಿ ವೈಭವ್ ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಶತಕ ಬಾರಿಸುತ್ತಾರೆ ಎಂಬ ನಿರೀಕ್ಷೆಯೊಂದಿಗೆ ಎಲ್ಲರೂ ಕಾದು ಕುಳಿತಿದ್ದರು. ಆದರೆ ಓವರ್​ನ ಕೊನೆಯ ಎಸೆತದಲ್ಲಿ ವೈಭವ್ ಮಾಡಿದ ತಪ್ಪು ಅವರನ್ನು ಶತಕ ವಂಚಿತರನ್ನಾಗಿಸಿತು. ವೈಭವ್ ಶತಕವನ್ನು ಕಣ್ತುಂಬಿಕೊಳ್ಳಲು ಖುಷಿಯಿಂದ ಕಾಯುತ್ತಿದ್ದ ಅಭಿಮಾನಿಗಳು ಅವರು ಔಟಾಗುತ್ತಿದ್ದಂತೆ ಒಂದು ಕ್ಷಣ ಆಘಾತಕ್ಕೊಳಗಾದರು. ಎಲ್ಲೆಲ್ಲೂ ನೀರವ ಮೌನ ಆವರಿಸಿತು.

IPL 2026 Eliminator SRH vs RR Live: ರಾಜಸ್ಥಾನ್ 200 ರನ್ ಪೂರ್ಣ

ಸ್ವತಃ ವೈಭವ್ ಅವರೇ ಅಯ್ಯೋ ಎಂತಾ ಕೆಲಸ ಮಾಡಿದೆ ಎಂದು ತಲೆಯ ಮೇಲೆ ಕೈ ಇಟ್ಟುಕೊಂಡರು. ಇತ್ತ ಎದುರಾಳಿ ತಂಡದ ಆಟಗಾರರು ವೈಭವ್ ಅವರ ಆಟಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ವೈಭವ್ ಬೇಸರದಿಂದ ಪೆವಿಲಿಯನ್​ತ್ತ ಹೆಜ್ಜೆ ಹಾಕುತ್ತಿದ್ದರೆ, ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ 15 ವರ್ಷದ ಪೋರನ ಆಟಕ್ಕೆ ಶಹಬ್ಬಾಸ್​ ಗಿರಿ ಹೇಳುತ್ತಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:55 pm, Wed, 27 May 26

Source link

ಆನ್​ಲೈನ್ ಗೇಮಿಂಗ್ ಕಂಪನಿಗಳಿಗೆ ಸುಪ್ರೀಂ ಶಾಕ್; ಶೇ 28 ಜಿಎಸ್​ಟಿ ಪೂರ್ವಾನ್ವಯ ತೆರಿಗೆ ಸಿಂಧು ಎಂದು ಕೋರ್ಟ್ ತೀರ್ಪು

ನವದೆಹಲಿ, ಮೇ 27: ಭಾರತದ ಆನ್‌ಲೈನ್ ಗೇಮಿಂಗ್ (Online Gaming) ಕಂಪನಿಗಳಿಗೆ ಸುಪ್ರೀಂ ಕೋರ್ಟ್ ಬುಧವಾರದಂದು (ಮೇ 27, 2026) ಬಿಗ್ ಶಾಕ್ ನೀಡಿದೆ. ಆನ್‌ಲೈನ್ ಗೇಮಿಂಗ್ ಮೇಲಿನ ಶೇ. 28 ರಷ್ಟು ಜಿಎಸ್‌ಟಿ (GST) ವಿಧಿಸುವ ಸರ್ಕಾರದ ತೀರ್ಮಾನದ ಸಾಂವಿಧಾನಿಕ ಸಿಂಧುತ್ವವನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಒಂದೂವರೆ ಲಕ್ಷ ಕೋಟಿ ರೂ ಮೊತ್ತವಾಗುವ ಪೂರ್ವಾನ್ವಯ ತೆರಿಗೆ (Retrospective Tax) ಪಾವತಿಸುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ. ಈ ಮೂಲಕ ಗೇಮಿಂಗ್ ಕಂಪನಿಗಳ ತೀವ್ರ ವಿರೋಧದ ನಡುವೆಯೂ, ಹಿಂದಿನ ಬಾಕಿ ವಹಿವಾಟಿಗೂ ಇದು ಅನ್ವಯವಾಗುತ್ತದೆ ಎಂದು ಪೂರ್ವಾನ್ವಯ ತೆರಿಗೆ ಬೇಡಿಕೆಯನ್ನು ಕೋರ್ಟ್ ಮಾನ್ಯ ಮಾಡಿದೆ. ಇದರಿಂದಾಗಿ ಗೇಮಿಂಗ್ ಉದ್ಯಮದ ಮೇಲೆ ಸುಮಾರು 1.5 ಲಕ್ಷ ಕೋಟಿ ರೂಗೂ ಅಧಿಕ ಮೊತ್ತದ ಬೃಹತ್ ತೆರಿಗೆ ಬಾಕಿಯ ತೂಗುಗತ್ತಿ ಮುಂದುವರಿದಂತಾಗಿದೆ.

ಸುಪ್ರೀಂ ಕೋರ್ಟ್ ಪೀಠ ಗಮನಿಸಿದ ಕೆಲ ಅಂಶಗಳು

  • ಕೌಶಲ್ಯ vs ಅದೃಷ್ಟದ ಆಟ (Skill vs Chance): “ಒಮ್ಮೆ ಹಣವನ್ನು ಪಣವಾಗಿ ಇಟ್ಟಾಗ (Staking Money), ಆ ಆಟವು ‘ಕೌಶಲ್ಯದ ಆಟವೋ’ ಅಥವಾ ‘ಅದೃಷ್ಟದ ಆಟವೋ’ ಎಂಬ ವ್ಯತ್ಯಾಸ ಜಿಎಸ್‌ಟಿ ವ್ಯಾಪ್ತಿಯಲ್ಲಿ ಇರುವುದಿಲ್ಲ. ಅನಿಶ್ಚಿತ ಫಲಿತಾಂಶಗಳ ಮೇಲೆ ಹಣವನ್ನು ಒಟ್ಟಿಗೆ ಪಣಕ್ಕಿಡುವುದು ಜಿಎಸ್‌ಟಿ ಕಾಯ್ದೆಯಡಿ ಬೆಟ್ಟಿಂಗ್ ಮತ್ತು ಜೂಜಿಗೆ (Betting & Gambling) ಸಮಾನವಾಗಿರುತ್ತದೆ” ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹದೇವನ್ ಅವರಿದ್ದ ಪೀಠವು ಸ್ಪಷ್ಟಪಡಿಸಿದೆ.
  • ಕೇವಲ ಮಧ್ಯವರ್ತಿಗಳಲ್ಲ: ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು ಕೇವಲ ಇಬ್ಬರು ಗ್ರಾಹಕರ ನಡುವಿನ ವಹಿವಾಟಿಗೆ ವೇದಿಕೆ ಒದಗಿಸುವ ಮಧ್ಯವರ್ತಿಗಳಲ್ಲ (Intermediaries). ಅವುಗಳೇ ಸ್ವತಃ ತೆರಿಗೆ ವ್ಯಾಪ್ತಿಗೆ ಬರುವ ‘ಆಕ್ಷನೇಬಲ್ ಕ್ಲೈಮ್ಸ್’ (Actionable Claims) ಅನ್ನು ಪೂರೈಸುವ ಸಂಸ್ಥೆಗಳಾಗಿವೆ ಎಂದು ಕೋರ್ಟ್ ಹೇಳಿದೆ.
  • ಸ್ಪಷ್ಟೀಕರಣ ಕಾಯ್ದೆ: 2023 ರ ಜಿಎಸ್‌ಟಿ ತಿದ್ದುಪಡಿಗಳು ಕೇವಲ ಅಸ್ತಿತ್ವದಲ್ಲಿದ್ದ ಕಾನೂನಿನ ಸ್ಪಷ್ಟೀಕರಣವಾಗಿದ್ದರಿಂದ, ಇವುಗಳನ್ನು ಹಿಂದಿನ ಅವಧಿಗೂ ಅನ್ವಯಿಸಿ (Retrospectively) ತೆರಿಗೆ ವಸೂಲಿ ಮಾಡುವುದು ಕಾನೂನುಬದ್ಧವಾಗಿದೆ ಎಂದು ಸರ್ಕಾರಿ ವಾದವನ್ನು ಕೋರ್ಟ್ ಪುರಸ್ಕರಿಸಿದೆ.

ಇದನ್ನೂ ಓದಿ: ಪ.ಬಂಗಾಳದಲ್ಲಿ ತೈಲ ನಿಕ್ಷೇಪ; ಉತ್ಪಾದನೆ ದಿಕ್ಕು ಕಾಣಲು ಬೇಕಾಯ್ತು 7 ವರ್ಷ

ಏನಿದು ವಿವಾದ?

Dream11, Gameskraft ಮತ್ತು Games24x7 ನಂತಹ ಪ್ರಮುಖ ಆನ್‌ಲೈನ್ ಗೇಮಿಂಗ್ ಮತ್ತು ಫ್ಯಾಂಟಸಿ ಸ್ಪೋರ್ಟ್ಸ್ ಕಂಪನಿಗಳು ಸರ್ಕಾರದ ಈ ನಿಯಮದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದವು.

ಹೊಸ ವ್ಯವಸ್ಥೆ vs ಹಳೆಯ ವ್ಯವಸ್ಥೆ

ಹಳೆಯ ವ್ಯವಸ್ಥೆಯಲ್ಲಿ (Old Regime) ಕೇವಲ ಪ್ಲಾಟ್‌ಫಾರ್ಮ್ ಶುಲ್ಕದ ಮೇಲೆ (Gross Gaming Revenue – GGR) 18% GST ವಿಧಿಸಲಾಗುತ್ತಿತ್ತು. ಹೊಸ ವ್ಯವಸ್ಥೆಯಲ್ಲಿ (New Regime) ಒಟ್ಟು ಠೇವಣಿ ಇಡುವ ಪೂರ್ಣ ಮೊತ್ತದ ಮೇಲೆ (Full Face Value) 28% GST ವಿಧಿಸಲಾಗುತ್ತದೆ.

ಉದಾಹರಣೆಗೆ, ಒಬ್ಬ ಆಟಗಾರ ₹1,000 ಹಣವನ್ನು ಆಟಕ್ಕಾಗಿ ಠೇವಣಿ ಇಟ್ಟರೆ, ಹಳೆಯ ನಿಯಮದಂತೆ ಕಂಪನಿಯ ಕಮಿಷನ್ ₹100 ಆಗಿದ್ದರೆ ಅದರ ಮೇಲೆ ಮಾತ್ರ ತೆರಿಗೆ ಇರುತ್ತಿತ್ತು. ಆದರೆ ಈಗ ಹೊಸ ನಿಯಮದ ಪ್ರಕಾರ ಆಟಗಾರ ಠೇವಣಿ ಇಡುವ ಸಂಪೂರ್ಣ ₹1,000 ಮೇಲೆ ₹280 ಜಿಎಸ್‌ಟಿ ಕಟ್ಟಬೇಕಾಗುತ್ತದೆ.

ಗೇಮಿಂಗ್ ಕಂಪನಿಗಳು ತಿದ್ದುಪಡಿ ಜಾರಿಗೆ ಬಂದ ಅಕ್ಟೋಬರ್ 1, 2023 ರ ನಂತರದ ವಹಿವಾಟಿಗೆ ತೆರಿಗೆ ಕಟ್ಟಲು ಸಿದ್ಧವಿದ್ದವು. ಆದರೆ ತೆರಿಗೆ ಇಲಾಖೆಯು ಅದಕ್ಕಿಂತ ಹಿಂದಿನ ಅವಧಿಗೂ ಅನ್ವಯವಾಗುವಂತೆ ಭಾರಿ ಮೊತ್ತಕ್ಕೆ ಡಿಮ್ಯಾಂಡ್ ಇಟ್ಟು ಶೋಕಾಸ್ ನೋಟಿಸ್‌ಗಳನ್ನು ಜಾರಿ ಮಾಡಿತ್ತು. ಇದನ್ನು ಕಂಪನಿಗಳು ತೀವ್ರವಾಗಿ ವಿರೋಧಿಸಿದ್ದವು.

ಇದನ್ನೂ ಓದಿ: ‘ನಾನು ಯಾವ ತಪ್ಪು ಮಾಡಿಲ್ಲ’- 6 ತಿಂಗಳು ಜೈಲು ಶಿಕ್ಷೆ ವಿಧಿಸಿದ ಸಿಂಗಾಪುರ್ ಕೋರ್ಟ್ ತೀರ್ಪಿಗೆ ಬೈಜು ಬೇಸರ

ಉದ್ಯಮದ ಮೇಲಾಗುವ ಪರಿಣಾಮಗಳು

ಈ ಹಿಂದೆ ಕರ್ನಾಟಕ ಹೈಕೋರ್ಟ್ ಗೇಮ್ಸ್‌ಕ್ರಾಫ್ಟ್ (Gameskraft) ಕಂಪನಿಗೆ ನೀಡಿದ್ದ ₹21,000 ಕೋಟಿ ತೆರಿಗೆ ನೋಟಿಸ್ ರದ್ದತಿ ರಿಲೀಫ್ ಅನ್ನು ಸುಪ್ರೀಂ ಕೋರ್ಟ್ ಈಗ ರದ್ದುಗೊಳಿಸಿದೆ. ಸರ್ಕಾರದ ಮಾಹಿತಿ ಪ್ರಕಾರ, ಒಟ್ಟು 90 ಕ್ಕೂ ಹೆಚ್ಚು ಗೇಮಿಂಗ್ ಕಂಪನಿಗಳು ಮತ್ತು ಕ್ಯಾಸಿನೋಗಳಿಗೆ ಸುಮಾರು ₹1.44 ಲಕ್ಷ ಕೋಟಿಗಿಂತಲೂ ಅಧಿಕ ಮೊತ್ತದ ನೋಟಿಸ್‌ಗಳನ್ನು ನೀಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗುಜರಾತ್‌ನಲ್ಲಿ ಎಬೋಲಾ ಭೀತಿ; ಕಾಂಗೋದಿಂದ ಬಂದ ವ್ಯಕ್ತಿ ಅಹಮದಾಬಾದ್‌ನಲ್ಲಿ ಕ್ವಾರಂಟೈನ್

ಅಹಮದಾಬಾದ್, ಮೇ 27: ಇಡೀ ಜಗತ್ತನ್ನು ಆತಂಕಕ್ಕೆ ದೂಡಿರುವ ಎಬೋಲಾ (Ebola)  ವೈರಸ್ ಭಾರತಕ್ಕೂ ಎಂಟ್ರಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಆಫ್ರಿಕಾದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಿಂದ ಗುಜರಾತ್‌ಗೆ ಮರಳಿದ್ದ 37 ವರ್ಷದ ಬ್ಯಾಂಕರ್ ಒಬ್ಬರಲ್ಲಿ ಎಬೋಲಾ ರೋಗದ ಲಕ್ಷಣಗಳು ಕಂಡುಬಂದಿವೆ. ಇದು ಗುಜರಾತ್ ರಾಜ್ಯದಲ್ಲೇ ವರದಿಯಾಗಿರುವ ಮೊದಲ ಶಂಕಿತ ಪ್ರಕರಣವಾಗಿದೆ.

ಈ ವ್ಯಕ್ತಿ ಕಾಂಗೋದಿಂದ ಮುಂಬೈ ಮಾರ್ಗವಾಗಿ ವಡೋದರಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ವಡೋದರಾದಲ್ಲಿದ್ದಾಗ ಅವರಿಗೆ ತೀವ್ರ ಜ್ವರ ಸೇರಿದಂತೆ ಎಬೋಲಾ ಮಾದರಿಯ ಲಕ್ಷಣಗಳು ಕಾಣಿಸಿಕೊಂಡಿವೆ. ತಕ್ಷಣವೇ ಅವರನ್ನು ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಿ, ವಿಶೇಷವಾಗಿ ಸಿದ್ಧಪಡಿಸಲಾದ ಎಬೋಲಾ ಐಸೊಲೇಶನ್ ವಾರ್ಡ್‌ನಲ್ಲಿ ಇರಿಸಲಾಗಿದೆ. ವೈದ್ಯಕೀಯ ತಂಡಗಳು ಅವರ ಮೇಲೆ ನಿರಂತರ ನಿಗಾ ಇಟ್ಟಿವೆ. ಪ್ರಾಥಮಿಕ ವರದಿಯಲ್ಲಿ ನೆಗೆಟಿವ್ ಬಂದಿದ್ದರೂ, ಮುಂದಿನ ಎಲ್ಲಾ ಪರೀಕ್ಷಾ ವರದಿಗಳು ನೆಗೆಟಿವ್ ಬರುವವರೆಗೂ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಎಬೋಲಾ ಆತಂಕ; ಕಾಂಗೋ, ಉಗಾಂಡಾ, ದಕ್ಷಿಣ ಸುಡಾನ್‌ ಪ್ರಯಾಣಿಕರಿಗೆ ಭಾರತದಿಂದ ಮಾರ್ಗಸೂಚಿ ಬಿಡುಗಡೆ

ಬೆಂಗಳೂರಿನ ಶಂಕಿತ ಪ್ರಕರಣ ನೆಗೆಟಿವ್:

ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಇತ್ತೀಚೆಗೆ ಆತಂಕ ಮೂಡಿಸಿದ್ದ ಉಗಾಂಡಾದ 28 ವರ್ಷದ ಮಹಿಳೆಯ ಎಬೋಲಾ ಪರೀಕ್ಷಾ ವರದಿ ‘ನೆಗೆಟಿವ್’ ಬಂದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಆಕೆಗೆ ಮೈಕೈ ನೋವು ಸೇರಿದಂತೆ ಸಣ್ಣಪುಟ್ಟ ಲಕ್ಷಣಗಳು ಕಾಣಿಸಿಕೊಂಡಾಗ ಬೆಂಗಳೂರಿನ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ದಾಖಲಿಸಿ, ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (NIV) ಸಂಸ್ಥೆಗೆ ಕಳುಹಿಸಲಾಗಿತ್ತು. ಸದ್ಯ ಆಕೆ ಸುರಕ್ಷಿತವಾಗಿದ್ದಾರೆ.

ಆಫ್ರಿಕಾದ ಕೆಲವು ಭಾಗಗಳಲ್ಲಿ ಎಬೋಲಾ ಹರಡುತ್ತಿರುವುದರಿಂದ ಜಾಗತಿಕವಾಗಿ ಆತಂಕ ಸೃಷ್ಟಿಯಾಗಿದೆ. ಆಫ್ರಿಕಾದಲ್ಲಿ ಪರಿಸ್ಥಿತಿ ಗಂಭೀರವಾಗಿರುವುದರಿಂದ, ಅಲ್ಲಿಂದ ಭಾರತಕ್ಕೆ ಬರುವ ಪ್ರಯಾಣಿಕರು ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಮತ್ತು ಕನಿಷ್ಠ 21 ದಿನಗಳ ಕಾಲ ತಮ್ಮ ಆರೋಗ್ಯದ ಮೇಲೆ ನಿಗಾ ಇಡಬೇಕು ಎಂದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಇದನ್ನೂ ಓದಿ: ಎಬೋಲಾ ಎಂಟ್ರಿ ಆತಂಕದಲ್ಲಿದ್ದ ಕರ್ನಾಟವೀಗ ನಿರಾಳ: ಉಗಾಂಡಾ ಮೂಲದ ಮಹಿಳೆಯ ಸ್ಯಾಂಪಲ್​​ ವರದಿ ನೆಗೆಟಿವ್​​

ಎಬೋಲಾ ಎಂದರೇನು?:

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಎಬೋಲಾ ಪ್ರಾಣಿಗಳಿಂದ (ಮುಖ್ಯವಾಗಿ ಬಾವಲಿ, ಮುಳ್ಳುಹಂದಿ ಇತ್ಯಾದಿ) ಮನುಷ್ಯರಿಗೆ ಮತ್ತು ನಂತರ ಮನುಷ್ಯರಿಂದ ಮನುಷ್ಯರ ದೈಹಿಕ ದ್ರವಗಳ (ಬೆವರು, ರಕ್ತ) ಸಂಪರ್ಕದ ಮೂಲಕ ಹರಡುವ ಅತ್ಯಂತ ಅಪಾಯಕಾರಿ ಸಾಂಕ್ರಾಮಿಕ ಕಾಯಿಲೆಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸದ್ಯದ ಮಾಹಿತಿಯ ಪ್ರಕಾರ ಭಾರತದಲ್ಲಿ ಇದುವರೆಗೆ ಯಾವುದೇ ಅಧಿಕೃತ ಎಬೋಲಾ ಪ್ರಕರಣಗಳು ದೃಢಪಟ್ಟಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:37 pm, Wed, 27 May 26

Source link