ಪ್ಯಾರಿಸ್, ಮೇ 26: ಫ್ರಾನ್ಸ್ನಲ್ಲಿ ಕಳೆದ ಕೆಲವು ದಿನಗಳಿಂದ ಬಿಸಿಲ ತಾಪ ಹೆಚ್ಚಾಗಿದೆ. ಯುರೋಪ್‌ನಲ್ಲಿ ಆವರಿಸಿರುವ ತೀವ್ರ ಬಿಸಿಗಾಳಿಯ ಭೀಕರತೆಗೆ ಫ್ರಾನ್ಸ್‌ನ ಪ್ಯಾರಿಸ್‌ನಿಂದ ನೈಸ್ ನಗರಕ್ಕೆ ಸಂಚರಿಸುತ್ತಿದ್ದ ರೈಲಿನ ನೂರಾರು ಪ್ರಯಾಣಿಕರು ತೀವ್ರವಾಗಿ ಕಂಗಾಲಾದ ಘಟನೆ ನಡೆದಿದೆ. ತಾಂತ್ರಿಕ ದೋಷದಿಂದ ನಿಂತ ರೈಲು ಎಸಿಯೂ ಇಲ್ಲದೆ ರೈಲಿನಲ್ಲೂ ಕೂರಲಾರದೆ ಪ್ರಯಾಣಿಕರು ಕೆಳಗಿಳಿದು ಬಂದಿರುವ ವಿಡಿಯೋ ವೈರಲ್ ಆಗಿದೆ.
ದುರದೃಷ್ಟವಶಾತ್, ಆ ರೈಲಿನ ಬೋಗಿಗಳಲ್ಲಿ ಹವಾನಿಯಂತ್ರಣ (Air-Condition) ವ್ಯವಸ್ಥೆ ಇರಲಿಲ್ಲ. ಧಗಧಗಿಸುವ ಸೂರ್ಯನ ತಾಪಕ್ಕೆ ರೈಲಿನ ಒಳಗಿನ ತಾಪಮಾನವು ಅಪಾಯಕಾರಿ ಮಟ್ಟಕ್ಕೆ ಏರತೊಡಗಿತು. ಬೋಗಿಗಳ ಒಳಗೆ ಉಸಿರಾಡಲು ಗಾಳಿ ಸಿಗದೆ ಸಣ್ಣ ಮಕ್ಕಳು ಮತ್ತು ವೃದ್ಧರು ಸೇರಿದಂತೆ ಇಡೀ ಪ್ರಯಾಣಿಕರು ನರಕಯಾತನೆ ಅನುಭವಿಸಿದರು.
ಕೊನೆಗೆ ಉಸಿರುಗಟ್ಟುವ ವಾತಾವರಣದಿಂದ ಪಾರಾಗಲು ಮತ್ತು ಕೇವಲ ಉಸಿರಾಡುವ ಶುದ್ಧ ಗಾಳಿಗಾಗಿ ಪ್ರಯಾಣಿಕರು ರೈಲಿನಿಂದ ಕೆಳಗೆ ಇಳಿದು ಹಳಿಗಳ ಪಕ್ಕದಲ್ಲಿ ಆಶ್ರಯ ಪಡೆಯಬೇಕಾಯಿತು. ತೀವ್ರ ಹವಾಮಾನದ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ಮುನ್ನೆಚ್ಚರಿಕೆ ಮತ್ತು ಸೌಲಭ್ಯಗಳ ಕೊರತೆಯ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಮೇ,26: ಮೇಕೆದಾಟು ಯೋಜನೆ ಕುರಿತು ತಮಿಳುನಾಡು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ನವದೆಹಲಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇದು ಕರ್ನಾಟಕದ ಜನತೆಗೆ ಸಿಕ್ಕ ಜಯ ಎಂದು ಹೇಳಿದರು. ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರತಿಯು ತಮಗೆ ಕ್ಷಣಮಾತ್ರದಲ್ಲಿ ದೊರೆತಿದ್ದು, ಮೂವರು ನ್ಯಾಯಾಧೀಶರ ಪೀಠವು ಈ ಅರ್ಜಿಯನ್ನು ಪರಿಶೀಲಿಸಿ ತಿರಸ್ಕರಿಸಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು. ಈ ತೀರ್ಪು ಕರ್ನಾಟಕದ ಪಾಲಿಗೆ ಶುಭಸುದ್ದಿಯಾಗಿದ್ದು, ರಾಜ್ಯದ ಪರವಾಗಿ ಜನತೆಗೆ ಧನ್ಯವಾದಗಳನ್ನು ಸಲ್ಲಿಸುವುದಾಗಿ ಅವರು ಹೇಳಿದರು. ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಕರ್ನಾಟಕದ ಪರವಾಗಿಯೇ ಇತ್ತು. ಇದೀಗ ತಮಿಳುನಾಡಿನ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿರುವುದರಿಂದ, ಮೇಕೆದಾಟು ಯೋಜನೆಯನ್ನು ಮುಂದುವರಿಸಲು ಕರ್ನಾಟಕಕ್ಕೆ ಹೆಚ್ಚಿನ ಅನುಕೂಲವಾಗಿದೆ. ನಾವು ಈಗಾಗಲೇ ಹೊಸ ಡಿಪಿಆರ್ ಸಲ್ಲಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಅವರು ವಿವರಿಸಿದರು.
ಬೆಂಗಳೂರು, ಮೇ 26: ಕರ್ನಾಟಕ ಕಾಂಗ್ರೆಸ್ನಲ್ಲಿ ಮತ್ತೆ ಕುರ್ಚಿ ಕದನ ತಾರಕಕ್ಕೇರುತ್ತಿದೆ. ಸಿಎಂ ಸಿದ್ದರಾಮಯ್ಯ ಹಲವು ಮಂದಿ ಸಚಿವರೊಂದಿಗೆ ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಮಾಡಿದ್ದರೆ, ಡಿಸಿಎಂ ಡಿಕೆ ಶಿವಕುಮಾರ್ ಸಹ ಉನ್ನತ ಮಟ್ಟದ ನಾಯಕರ ಜತೆ ಚರ್ಚೆ ಮಾಡುತ್ತಿದ್ದಾರೆ. ಹೈಕಮಾಂಡ್ ನಾಯಕರಿಂದ ಹೈವೋಲ್ಟೇಜ್ ಸಭೆ ನಡೆಯುತ್ತಿದೆ. ಅತ್ತ ರಾಷ್ಟ್ರ ರಾಜಧಾನಿಯಲ್ಲಿ ರಾಜ್ಯದ ಪಟ್ಟದ ಪಗಡೆಯಾಟ ಜೋರಾಗಿದ್ದರೆ ಇತ್ತ ಬೆಂಗಳೂರಿನಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಸಿಎಂ ಆಗಲಿ ಎಂಬ ಕೂಗು ಕೇಳಿಬಂದಿದೆ. ಎರಡು ವಾರಗಳ ಹಿಂದೆ ಬೆಂಗಳೂರಿನಲ್ಲಿ ಮುಸ್ಲಿಂ ನಾಯಕರ ಸಭೆಯ ವೇಳೆ ಮಹೇಶ್ವರಾನಂದ ಸ್ವಾಮೀಜಿ ಸಚಿವ ಜಮೀರ್ ಅಹ್ಮದ್ ಅವರನ್ನು ಭೇಟಿಯಾಗಿದ್ದರು. ಇದೇ ವೇಳೆ, ಬಹಿರಂಗವಾಗಿ ಜಮೀರ್ ಅವರನ್ನು ಬೆಂಬಲಿಸಿದ್ದರು. ಜಮೀರ್ ಅಹ್ಮದ್ ಖಾನ್ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಬೇಕು ಎಂದು ಸ್ವಾಮೀಜಿ ಹೇಳಿದ್ದರು. ಇದೀಗ ಆ ವಿಡಿಯೋ ಮತ್ತೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಸಿನಿಮಾ ಹಿನ್ನೆಲೆಯಿಂದ ಬಂದು ಮುಖ್ಯಮಂತ್ರಿಯಾದವರು ಚಿತ್ರರಂಗದ ಕಷ್ಟ-ನಷ್ಟಗಳನ್ನು ಬೇಗ ಅರ್ಥಮಾಡಿಕೊಳ್ಳುತ್ತಾರೆ ಎಂಬುದು ಅನೇಕರ ನಂಬಿಕೆ. ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರ ನಿರ್ಧಾರ ಈ ನಂಬಿಕೆಯನ್ನು ನಿಜ ಮಾಡಿದೆ. ಚಿತ್ರರಂಗ ಎದುರಿಸುತ್ತಿರುವ ಆರ್ಥಿಕ ಸಂಕಷ್ಟವನ್ನು ಅರಿತಿರುವ ತಮಿಳುನಾಡು ಮುಖ್ಯಮಂತ್ರಿ ಹಾಗೂ ಮಾಜಿ ನಟ ವಿಜಯ್ ಅವರು, ಚಿತ್ರಮಂದಿರಗಳ ಮಾಲೀಕರು ಮತ್ತು ಪ್ರೇಕ್ಷಕರಿಗೆ ಭರ್ಜರಿ ಕೊಡುಗೆಯೊಂದನ್ನು ನೀಡಿದ್ದಾರೆ. ರಾಜ್ಯದಲ್ಲಿ ಬಿಡುಗಡೆಯಾಗುವ ಯಾವುದೇ ಹೊಸ ತಮಿಳು ಸಿನಿಮಾಗಳಿಗೆ ಮೊದಲ 7 ದಿನಗಳವರೆಗೆ ದಿನಕ್ಕೆ 5 ಶೋಗಳನ್ನು ನಡೆಸಲು ಅಧಿಕೃತವಾಗಿ ಅನುಮತಿ ನೀಡಿದ್ದಾರೆ. ತಮಿಳುನಾಡು ಸರ್ಕಾರ ಈ ಮಹತ್ವದ ಆದೇಶವನ್ನು ಹೊರಡಿಸಿದೆ.
ಮೇ 16ರಂದು ತಮಿಳು ಚಿತ್ರರಂಗದ ವಿವಿಧ ಒಕ್ಕೂಟಗಳ ಪದಾಧಿಕಾರಿಗಳು ಮತ್ತು ಚಿತ್ರಮಂದಿರಗಳ ಮಾಲೀಕರ ಸಂಘದ ಪ್ರತಿನಿಧಿಗಳು ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ತೋಡಿಕೊಂಡಿದ್ದರು. ಚಿತ್ರಮಂದಿರಗಳ ಆದಾಯ ಹೆಚ್ಚಿಸಲು ಮತ್ತು ಚಿತ್ರರಂಗವನ್ನು ನಷ್ಟದಿಂದ ರಕ್ಷಿಸಲು ದಿನಕ್ಕೆ 5 ಪ್ರದರ್ಶನಗಳಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು.
ವಿಜಯ್ ಕೂಡ ಸಿನಿಮಾ ಹಿನ್ನೆಲೆಯವರೇ ಆಗಿರುವುದರಿಂದ, ಸಿನಿಮಾ ನಿರ್ಮಾಪಕರು ಹಾಗೂ ಥಿಯೇಟರ್ ಮಾಲೀಕರ ಪ್ರಾಯೋಗಿಕ ಕಷ್ಟಗಳನ್ನು ಚೆನ್ನಾಗಿ ಅರಿತಿದ್ದಾರೆ. ಹೀಗಾಗಿ, ಸಿಎಂ ವಿಜಯ್, ಈ ಬೇಡಿಕೆ ನ್ಯಾಯಯುತವಾಗಿದೆ ಎಂದು ಪರಿಗಣಿಸಿ ತಕ್ಷಣವೇ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಹಳೆಯ ನಿಯಮ ಏನಾಗಿತ್ತು?
1957ರ ತಮಿಳುನಾಡು ಸಿನಿಮಾಸ್ (ರೆಗ್ಯುಲೇಶನ್) ನಿಯಮಾವಳಿಗಳ ಪ್ರಕಾರ, ರಾಜ್ಯದ ಚಿತ್ರಮಂದಿರಗಳಲ್ಲಿ ದಿನಕ್ಕೆ ಕೇವಲ 4 ಪ್ರದರ್ಶನಗಳನ್ನು ನೀಡಲು ಮಾತ್ರ ಅವಕಾಶವಿತ್ತು. ಹಬ್ಬದ ದಿನಗಳಲ್ಲಿ ಅಥವಾ ಸಾರ್ವಜನಿಕ ರಜಾದಿನಗಳಲ್ಲಿ 5ನೇ ವಿಶೇಷ ಪ್ರದರ್ಶನವನ್ನು ಪ್ರದರ್ಶಿಸಲು ಅವಕಾಶವಿತ್ತಾದರೂ, ಅದಕ್ಕಾಗಿ ಚಿತ್ರಮಂದಿರಗಳ ಮಾಲೀಕರು ಅಥವಾ ಚಿತ್ರದ ನಿರ್ಮಾಪಕರು ಆಯಾ ಜಿಲ್ಲಾಧಿಕಾರಿಗಳಿಂದ ಅಥವಾ ಚೆನ್ನೈನಲ್ಲಿ ಸಿಟಿ ಪೊಲೀಸ್ ಕಮಿಷನರ್ ಅವರಿಂದ ಪ್ರತ್ಯೇಕವಾಗಿ ಅನುಮತಿ ಪಡೆಯಬೇಕಾಗಿತ್ತು. ಸರ್ಕಾರ ಕೂಡ ಪ್ರತಿ ಬಾರಿಯೂ ವಿಶೇಷ ಆದೇಶವನ್ನು ಹೊರಡಿಸಬೇಕಾಗಿತ್ತು. ಇದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿತ್ತಲ್ಲದೆ, ಸಿನಿಮಾಗಳ ಮುಂಗಡ ಬುಕಿಂಗ್ ಪ್ರಕ್ರಿಯೆಗೂ ತಡವಾಗುವಂತೆ ಮಾಡುತ್ತಿತ್ತು.
ಮುಖ್ಯಮಂತ್ರಿ ವಿಜಯ್ ಅವರ ಹೊಸ ಆದೇಶದ ಪ್ರಕಾರ, ಇನ್ಮುಂದೆ ಹೊಸ ಸಿನಿಮಾ ಬಿಡುಗಡೆಯಾದ ಮೊದಲ ವಾರ (7 ದಿನಗಳು) ಐದು ಪ್ರದರ್ಶನಗಳನ್ನು ಯಾವುದೇ ಅನುಮಪತಿ ಪಡೆಯದೆ ನಡೆಸಬಹುದು. ಬೇರೆ ಭಾಷೆಯಿಂದ ಡಬ್ ಆದ ಚಿತ್ರಗಳು, ಮರು-ಬಿಡುಗಡೆಯಾಗುವ ಸಿನಿಮಾಗಳಿಗೂ ಈ ವಿನಾಯಿತಿ ಸಿಗಲಿದೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಿಂದ ಪಂಜಾಬ್ ಕಿಂಗ್ಸ್ ಹೊರಬೀಳುತ್ತಿದ್ದಂತೆ ತಂಡದ ಪ್ರಮುಖ ವೇಗಿ ಅರ್ಷದೀಪ್ ಸಿಂಗ್ ತನ್ನ ಇನ್ಸ್ಟಾಗ್ರಾಮ್ ಖಾತೆಗೆ ಮೇಜರ್ ಸರ್ಜರಿ ಮಾಡಿದ್ದಾರೆ. ಅದು ಕೂಡ ಬರೋಬ್ಬರಿ 234 ಪೋಸ್ಟ್‌ಗಳನ್ನು ಡಿಲೀಟ್ ಅಥವಾ ಆರ್ಕೈವ್ ಮಾಡುವ ಮೂಲಕ ಎಂಬುದೇ ಅಚ್ಚರಿ.
ಇತ್ತ 234 ಪೋಸ್ಟ್‌ಗಳನ್ನು ಡಿಲೀಟ್ ಅಥವಾ ಆರ್ಕೈವ್ ಮಾಡಿರುವ ಕಾರಣ ಅವರ ಪ್ರೊಫೈಲ್‌ನಲ್ಲಿ ಈಗ ಕೇವಲ 44 ಪೋಸ್ಟ್ಗಳು ಮಾತ್ರ ಕಾಣಿಸಿಕೊಳ್ಳುತ್ತಿದೆ. ಇದರ ಜೊತೆಗೆ ಅರ್ಷದೀಪ್ ಸಿಂಗ್ ತಮ್ಮ ಪ್ರೊಫೈಲ್ ಚಿತ್ರವನ್ನು (DP) ಬದಲಾಯಿಸಿದ್ದು, ಬಯೋದಲ್ಲಿದ್ದ ಪ್ರಮುಖ ವಿವರಗಳನ್ನೂ ತೆಗೆದುಹಾಕಿದ್ದಾರೆ.
ಪಂಜಾಬ್ ಕಿಂಗ್ಸ್ ಆಟಗಾರನ ಈ ದಿಢೀರ್ ಬದಲಾವಣೆಗೆ ಏನು ಕಾರಣ ಎಂಬುದು ಇನ್ನೂ ಕೂಡ ಬಹಿರಂಗವಾಗಿಲ್ಲ. ಇದಾಗ್ಯೂ ಐಪಿಎಲ್ ವೇಳೆ ನಡೆದ ಕೆಲ ಘಟನೆಗಳಿಂದಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಐಪಿಎಲ್ ವೇಳೆ ಏನಾಗಿತ್ತು?
ಅರ್ಷದೀಪ್ ಸಿಂಗ್ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಕ್ಕೂ ಮುನ್ನ ಮಾಡಿದ ವಿಡಿಯೋದಲ್ಲಿ ತಿಲಕ್ ವರ್ಮಾ ಅವರನ್ನು ಅಂಧೇರಾ ಎಂದು ಕರೆಯುತ್ತಿರುವುದು ಸೆರೆಯಾಗಿತ್ತು. ತಿಲಕ್ ವರ್ಮಾ ಅವರ ಮೈ ಬಣ್ಣವನ್ನು ಪ್ರಸ್ತಾಪಿಸಿ ಮಾಡಲಾಗಿದ್ದ ಈ ವಿಡಿಯೋ ವಿರುದ್ಧ ಭಾರೀ ಆಕ್ರೋಶಗಳು ವ್ಯಕ್ತವಾಗಿದ್ದವು.
ಹಾಗೆಯೇ ಪಂಜಾಬ್ ಕಿಂಗ್ಸ್ ತಂಡದ ಸಹ-ಆಟಗಾರ ಪ್ರಿಯಾಂಶ್ ಆರ್ಯ ಅವರನ್ನು ಅಣಕಿಸುವಂತೆ ಅವರು ಕೆಲ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಇದರ ಜೊತೆಗೆ ಅರ್ಷದೀಪ್ ಸಿಂಗ್ ಹಂಚಿಕೊಂಡ ವಿಡಿಯೋದಲ್ಲಿ ಯುಜ್ವೇಂದ್ರ ಚಹಲ್ ವೇಪ್ ಮಾಡುತ್ತಿರುವುದು ಕೂಡ ಕಂಡು ಬಂದಿತ್ತು. ಹೀಗೆ ಮೈದಾನದಲ್ಲಿನ ಪಂದ್ಯಕ್ಕಿಂತ ಹೆಚ್ಚಾಗಿ ಅರ್ಷದೀಪ್ ಸಿಂಗ್ ತನ್ನ ವಿಡಿಯೋಗಳ ಮೂಲಕ ಸುದ್ದಿಯಲ್ಲಿದ್ದರು.
ಕಳಪೆ ಪ್ರದರ್ಶನ:
ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ವೇಗಿಯಾಗಿ ಗುರುತಿಸಿಕೊಂಡಿದ್ದ ಅರ್ಷದೀಪ್ ಸಿಂಗ್ ಈ ಬಾರಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಆಡಿದ 14 ಪಂದ್ಯಗಳಿಂದ ಪಡೆದಿರುವುದು ಕೇವಲ 14 ವಿಕೆಟ್ಗಳು ಮಾತ್ರ. ಅಲ್ಲದೆ ಪ್ರತಿ ಓವರ್ಗೆ 10 ಕ್ಕಿಂತ ಹೆಚ್ಚಿನ ಸರಾಸರಿಯನ್ನು ರನ್ ಬಿಟ್ಟು ಕೊಟ್ಟಿದ್ದರು.
ಈ ಎಲ್ಲಾ ಕಳಪೆ ಪ್ರದರ್ಶನ ನಡುವೆ ಅರ್ಷದೀಪ್ ಸಿಂಗ್ ಮಾತ್ರ ವಿಡಿಯೋ ಚಿತ್ರೀಕರಣದೊಂದಿಗೆ ಸುದ್ದಿಯಲ್ಲಿದ್ದರು. ಇದೀಗ ಪಂಜಾಬ್ ಕಿಂಗ್ಸ್ ತಂಡ ಸೋತು ಐಪಿಎಲ್ನಿಂದ ನಿರ್ಗಮಿಸಿದೆ. ಈ ನಿರ್ಗಮನದೊಂದಿಗೆ ಅರ್ಷದೀಪ್ ಸಿಂಗ್ ಮನೆಗೆ ತೆರಳಿದ್ದಾರೆ. ಅತ್ತ ಮನೆಗೆ ತೆರಳಿದ ಬೆನ್ನಲ್ಲೇ ಅರ್ಷದೀಪ್ ಸಿಂಗ್ ಬರೋಬ್ಬರಿ 234 ವಿಡಿಯೋಗಳನ್ನು ಡಿಲೀಟ್ ಅಥವಾ ಅಥವಾ ಆರ್ಕೈವ್ ಮಾಡಿರುವುದು ವಿಶೇಷ.
ಸಾಂದರ್ಭಿಕ ಚಿತ್ರImage Credit source: amexessentials.com
ಬೆಂಗಳೂರು, ಮೇ 26: ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ಗಳ ಅಭಾವದಿಂದಾಗಿ ತಿಂಡಿ-ತಿನಿಸುಗಳ ಬೆಲೆಯನ್ನು ಈಗಾಗಲೇ ಹೋಟೆಲ್‌ಗಳು ಏರಿಕೆ ಮಾಡಿರೋದು ಗ್ರಾಹಕರ ಕೈ ಸುಡುತ್ತಿದೆ. ಈ ನಡುವೆ ಹೋಟೆಲ್‌ಗಳು ಮತ್ತೊಂದು ಎಚ್ಚರಿಕೆ ನೀಡಿದ್ದು, ರಾಜ್ಯ ಸರ್ಕಾರ ಪರಿಷ್ಕರಿಸಿರುವ ಕನಿಷ್ಠ ವೇತನ ನಿಯಮಗಳಿಂದ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರ ದರ ಹೆಚ್ಚಳ ಅನಿವಾರ್ಯವಾಗಲಿದೆ ಎಂದು ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ (KSHA) ಹೇಳಿದೆ. ಈ ನಿರ್ಧಾರದಿಂದ ಒಂದು ಪ್ಲೇಟ್ ಬಿರಿಯಾನಿ ದರ 500 ರೂ. ಆಗಬಹುದು. ಜೊತೆಗೆ ಇಡ್ಲಿ, ಮಸಾಲೆ ದೋಸೆ ಸೇರಿದಂತೆ ಜನಪ್ರಿಯ ಉಪಹಾರಗಳ ಬೆಲೆಯೂ ಭಾರೀ ಏರಿಕೆಯಾಗಬಹುದು ಎಂಬ ಮುನ್ಸೂಚನೆಯನ್ನು ನೀಡಿದೆ. ಇದರಿಂದ ಗ್ರಾಹಕರ ಜೊತೆಗೆ ಸಣ್ಣ ಹೋಟೆಲ್ ಮಾಲೀಕರ ಮೇಲೂ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಸಂಘ ತಿಳಿಸಿದೆ.
ಕೆಎಸ್ಹೆಚ್ಎ ಅಧ್ಯಕ್ಷ ಜಿ.ಕೆ. ಶೆಟ್ಟಿ ಈ ಬಗ್ಗೆ ಮಾಹಿತಿ ನೀಡಿದ್ದು,ಸುಮಾರು ಶೇಕಡಾ 60ರಷ್ಟು ವೇತನ ಹೆಚ್ಚಳದಿಂದ ಈಗಾಗಲೇ ಹೆಚ್ಚುತ್ತಿರುವ ಕಾರ್ಯಾಚರಣೆ ವೆಚ್ಚದ ಒತ್ತಡದಲ್ಲಿರುವ ಆತಿಥ್ಯ ವಲಯಕ್ಕೆ ಭಾರೀ ಹೊಡೆತ ಬೀಳಲಿದೆ. ಪರಿಷ್ಕೃತ ವೇತನದ ಪ್ರಕಾರ, ಕಾರ್ಮಿಕರಿಗೆ 19,300ರಿಂದ ಆರಂಭವಾಗಿ, ಅತ್ಯುನ್ನತ ಕೌಶಲ್ಯ ಹೊಂದಿದ ಕಾರ್ಮಿಕರಿಗೆ 31,100ರವರೆಗೆ ಕನಿಷ್ಠ ವೇತನ ನಿಗದಿಯಾಗಿದೆ. ಈ ವೇತನ ವ್ಯವಸ್ಥೆಯನ್ನು ಈಗಿನ ರೂಪದಲ್ಲೇ ಜಾರಿಗೆ ತಂದರೆ ಉಪಹಾರಗಳ ದರದಲ್ಲಿ ತೀವ್ರ ಏರಿಕೆ ಆಗಲಿದೆ. ಈಗ 50 ರೂ. ಇರುವ ಒಂದು ಪ್ಲೇಟ್ ಇಡ್ಲಿ ಬೆಲೆ 80-90ಕ್ಕೆ ಏರಬಹುದು. 80-90 ರೂ. ಇರುವ ಮಸಾಲೆ ದೋಸೆ ದರ 150ಕ್ಕೆ ತಲುಪಬಹುದು ಎಂದು ಅವರು ತಿಳಿಸಿದ್ದಾರೆ. ಅದೇ ರೀತಿ 150-200 ರೂ. ಇರುವ ಶಾಕಾಹಾರಿ ಊಟದ ದರ 250-300ಕ್ಕೆ ಏರಬಹುದು. ಬೆಂಗಳೂರಿನಲ್ಲಿ 300-350 ರೂ.ಗಳಿಗೆ ಸಿಗುತ್ತಿರುವ ಬಿರಿಯಾನಿ ಬೆಲೆ ಸುಮಾರು 500ಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.
ವಾಣಿಜ್ಯ LPG ಸಿಲಿಂಡರ್ ದರ ಏರಿಕೆಯೂ ಹೋಟೆಲ್‌ಗಳ ಮೇಲೆ ಈಗಾಗಲೇ ಆರ್ಥಿಕ ಹೊರೆ ಹೆಚ್ಚಿಸಿವೆ. ಕೆಲವೇ ತಿಂಗಳಲ್ಲಿ LPG ಸಿಲಿಂಡರ್ ದರ 1,884 ರೂ.ಗಳಿಂದ 3,152ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ದಿನಸಿ ಸಾಮಗ್ರಿಗಳ ಬೆಲೆ ಏರಿಕೆ, ವಿದ್ಯುತ್ ದರ ಹೆಚ್ಚಳ ಮತ್ತು ಕಸ ಸಂಗ್ರಹ ಸೆಸ್ ಶುಲ್ಕಗಳೂ ಹೋಟೆಲ್ ಉದ್ಯಮಕ್ಕೆ ಹೊರೆ ತಂದಿವೆ ಎಂದರು ತಿಳಿಸಿದ್ದಾರೆ. ಹೋಟೆಲ್‌ಗಳು ಈಗಾಗಲೇ ಕಾರ್ಮಿಕರಿಗೆ ಊಟ, ವಸತಿ, ಯೂನಿಫಾರ್ಮ್ ಸೌಲಭ್ಯ ನೀಡುತ್ತಿರುವುದರಿಂದ ಈ ವಲಯವನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಶಿವರಾಜ್ ಕುಮಾರ್ (Shiva Rajkumar) ಕನ್ನಡ ಚಿತ್ರರಂಗದ ಹಿರಿಯ ನಟ. ಹಲವು ಯಂಗ್ ನಟರು, ನಟನೆ, ಫೈಟ್ಸ್, ಡ್ಯಾನ್ಸು ಎಲ್ಲ ರೀತಿಯಲ್ಲಿಯೂ ತಯಾರಾಗಿ ಚಿತ್ರರಂಗಕ್ಕೆ ಬರುತ್ತಿದ್ದರೂ ಈ ಮೂರೂ ವಿಭಾಗಗಳಲ್ಲಿ ಶಿವಣ್ಣನ ಹಿಂದಿಕ್ಕಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ವಯಸ್ಸಾದಂತೆ ಶಿವಣ್ಣನ ಖದರ್ ಹೆಚ್ಚಾಗಿದ್ದು, ಕಣ್ಣಿನಲ್ಲೇ ಖದರ್ ತೋರಿಸುತ್ತಾ ತೆರೆಯನ್ನು ಆವರಿಸಿಕೊಳ್ಳುತ್ತಾರೆ. ಇದೀಗ ಶಿವರಾಜ್ ಕುಮಾರ್ ಅವರು ‘ಪೆದ್ದಿ’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸಿನಿಮಾನಲ್ಲಿ ಶಿವಣ್ಣನ ಜೊತೆಗೆ ರಾಮ್ ಚರಣ್, ಜಾನ್ಹವಿ ಕಪೂರ್ ಅವರುಗಳು ನಟಿಸಿದ್ದಾರೆ. ನಿನ್ನೆ ‘ಪೆದ್ದಿ’ ಚಿತ್ರತಂಡ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿತ್ತು. ಈ ವೇಳೆ ನಟಿ ಜಾನ್ಹವಿ ಕಪೂರ್ ಅವರು ಶಿವರಾಜ್ ಕುಮಾರ್ ಅವರ ಬಗ್ಗೆ ತಾವು ಗಮನಿಸಿದ ಅಂಶವನ್ನು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಜಾನ್ಹವಿ ಕಪೂರ್, ‘ಶಿವರಾಜ್ ಕುಮಾರ್ ಅವರು ಹಿರಿಯ ನಟ, ‘ಪೆದ್ದಿ’ಯಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ದರಾದೃಷ್ಟವಷಾತ್ ನನ್ನದು ಅವರೊಟ್ಟಿಗೆ ಕೇವಲ ಒಂದು ಸೀನ್ ಅಷ್ಟೆ ಇತ್ತು. ಅದರೆ ಆ ಒಂದು ಸೀನ್ನಲ್ಲೇ ಅವರು ಎಂಥಹಾ ಅದ್ಭುತ ಕಲಾವಿದ ಎಂಬುದನ್ನು ನಾನು ಅರಿತುಕೊಂಡೆ. ಅವರು ಬಹಳ ಗಾಢವಾಗಿ ತಮ್ಮ ನಟನೆ ನೀಡುತ್ತಾರೆ ಅವರ ಕಣ್ಣುಗಳು ಬಹಳ ಪವರ್ಫುಲ್ ಆಗಿವೆ’ ಎಂದಿದ್ದಾರೆ.
‘ಪೆದ್ದಿ’ ಸಿನಿಮಾನಲ್ಲಿ ಅವರೊಟ್ಟಿಗೆ ಹೆಚ್ಚು ನಟಿಸಲು ನನಗೆ ಅವಕಾಶ ಸಿಗಲಿಲ್ಲ ಆದರೆ ಮುಂದಿನ ದಿನಗಳಲ್ಲಿ ಅವರಂಥಹಾ ಮಹಾನ್ ನಟನೊಡನೆ ನಟಿಸಲು ಹೆಚ್ಚು ಅವಕಾಶ ಸಿಗಲಿದೆ ಎಂದು ಆಶಿಸುತ್ತೇನೆ’ ಎಂದು ನಟಿ ಜಾನ್ಹವಿ ಕಪೂರ್ ಹೇಳಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ನಟಿ ಜಾನ್ಹವಿ ಕಪೂರ್ ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದರು. ಸಾಕಷ್ಟು ಅಭ್ಯಾಸ ಮಾಡಿ ಕೆಲ ಕನ್ನಡದ ಮಾತುಗಳನ್ನು ನಟಿ ಮಾತನಾಡಿದ್ದು ವಿಶೇಷ.
‘ಪೆದ್ದಿ’ ಸಿನಿಮಾನಲ್ಲಿ ರಾಮ್ ಚರಣ್ ನಾಯಕ. ಸಿನಿಮಾನಲ್ಲಿ ಅವರು ಕ್ರಿಕೆಟಿಗನಾಗಿ ಮತ್ತು ಕುಸ್ತಿ ಪಟುವಾಗಿ ನಟಿಸಿದ್ದಾರೆ. ಸಿನಿಮಾನಲ್ಲಿ ಶಿವಣ್ಣ ಗೌಡನಾಯ್ಡು ಪಾತ್ರದಲ್ಲಿ ನಟಿಸಿದ್ದು, ರಾಮ್ ಚರಣ್ಗೆ ಕುಸ್ತಿ ಹೇಳಿಕೊಡುವ ಪಾತ್ರ ಅವರದ್ದು. ಜಾನ್ಹವಿ ಕಪೂರ್ ನಾಯಕಿ. ಜಗಪತಿ ಬಾಬು, ಬಾಲಿವುಡ್ ನಟ ದಿವ್ಯೇಂದು ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದು, ಸಿನಿಮಾ ನಿರ್ದೇಶನ ಮಾಡಿರುವುದು ಬುಚ್ಚಿಬಾಬು ಸನಾ. ನಿರ್ಮಾಣ ಮಾಡಿರುವುದು ಮೈತ್ರಿ ಮೂವಿ ಮೇಕರ್ಸ್.
ಬೆಂಗಳೂರು, ಮೇ 26: ಬೆಂಗಳೂರು (Bengaluru) ಅಂದ್ರೆ ದುಬಾರಿ. ಇಲ್ಲಿ ಕೈ ತುಂಬಾ ಸಂಬಳ ಇರುವ ಉದ್ಯೋಗವೇನೋ ಸಿಗುತ್ತದೆ. ಆದರೆ ಖರ್ಚು ಅಷ್ಟೇ ಇದೆ ಅನ್ನೋದು ಅನೇಕರ ಅಭಿಪ್ರಾಯ. ಮಾಯಾನಗರದಲ್ಲಿ ತಿಂಗಳ ಖರ್ಚು ವೆಚ್ಚಗಳನ್ನು ತೂಗಿಸಿಕೊಂಡು ಉಳಿತಾಯ ಮಾಡುವುದು ಸುಲಭವಲ್ಲ. ಆದರೆ ಬೆಂಗಳೂರಿನ ವ್ಯಕ್ತಿಯೊಬ್ಬರು ತನ್ನ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿದ್ದಾರೆ. ಉತ್ತಮ ಅಭ್ಯಾಸಗಳು ಚುರುಕಾದ ಆಯ್ಕೆಗಳಿಂದ ದುಡ್ಡು ಖರ್ಚಾಗುವುದನ್ನು ತಪ್ಪಿಸಿದ್ದಾರೆ. ತಾನು ಅಳವಡಿಸಿಕೊಂಡ ಏಳು ಅಭ್ಯಾಸಗಳನ್ನು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿವೆ.
@bangalore_viral ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಕ್ಷಯ್ ಸಿಎನ್ ಅವರು ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪ್ ನ ಶೀರ್ಷಿಕೆಯಲ್ಲಿ “ನನ್ನ ಜೀವನಶೈಲಿಯನ್ನು ಹಾಳು ಮಾಡಿಕೊಳ್ಳದೆ ನನ್ನ ಬೆಂಗಳೂರಿನ ಖರ್ಚುಗಳನ್ನು ನಾನು ಹೇಗೆ ಕಡಿಮೆ ಮಾಡಿಕೊಂಡೆ” ಎಂದು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
ಈ ವಿಡಿಯೋದಲ್ಲಿ ಅಕ್ಷಯ್ ಅವರು, ಹೆಚ್ಚು ಇಷ್ಟವಾದ ಸ್ಥಳವನ್ನು ಆಯ್ಕೆ ಮಾಡುವ ಬದಲು ಮೆಟ್ರೋ ಹತ್ತಿರಕ್ಕೆ ಬದಲಾಯಿಸಿದ್ದು ತಾನು ಮಾಡಿದ ದೊಡ್ಡ ಬದಲಾವಣೆಗಳಲ್ಲಿ ಒಂದಾಗಿದೆ. ಆರಂಭದಲ್ಲಿ ಬಾಡಿಗೆ ಸ್ವಲ್ಪ ಹೆಚ್ಚೇ ಇದ್ದಂತೆ ಕಂಡಿತು. ಆದರೆ ಅಂತಿಮವಾಗಿ ಇದು ದೈನಂದಿನ ಪ್ರಯಾಣ, ಇಂಧನ ಮತ್ತು ಆಟೋಗಳಲ್ಲಿ ವೆಚ್ಚ ಹಾಗೂ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡಿತು ಎಂದು ಬರೆದಿದ್ದಾರೆ.
ನಾನು ದೈನಂದಿನ ಖರ್ಚುಗಳಿಗೆ ಅನುಕೂಲತೆಯನ್ನು ನೆಪವಾಗಿ ಬಳಸುವುದನ್ನು ನಿಲ್ಲಿಸಿದೆ. ತ್ವರಿತ ವಿತರಣೆಗಳು, ಆಟೋಗಳು, ಚಂದಾದಾರಿಕೆಗಳು ಮತ್ತು ‘ಸಣ್ಣ’ ಆನ್‌ಲೈನ್ ಖರೀದಿಗಳು ಬೆಂಗಳೂರಿನಲ್ಲಿ ನನ್ನ ಅತಿದೊಡ್ಡ ಮಾಸಿಕ ವೆಚ್ಚಗಳಲ್ಲಿ ಒಂದಾದವು. ನಾನು ಯಾದೃಚ್ಛಿಕ ಖರ್ಚು ಮಾಡುವ ಬದಲು ನನ್ನ ವಾರಾಂತ್ಯಗಳನ್ನು ಯೋಜಿಸಲು ಪ್ರಾರಂಭಿಸಿದೆ. ಯೋಜಿತವಲ್ಲದ ಕೆಫೆ ಹಾಪಿಂಗ್, ಪಬ್‌ಗಳು ಮತ್ತು ಹಠಾತ್ ಪ್ರವಾಸಗಳು ಬೆಂಗಳೂರಿನಲ್ಲಿ ಜನರು ಅರಿತುಕೊಳ್ಳುವುದಕ್ಕಿಂತ ವೇಗವಾಗಿ ಉಳಿತಾಯವನ್ನು ಸದ್ದಿಲ್ಲದೆ ನಾಶಮಾಡುತ್ತವೆ ಎಂದು ವಿವರಿಸಿದ್ದಾರೆ.
ನನ್ನ ಸುತ್ತಲಿನ ಎಲ್ಲರೂ ಗ್ಯಾಜೆಟ್‌ಗಳಂತೆ ಇದ್ದ ಕಾರಣ ನಾನು ಗ್ಯಾಜೆಟ್‌ಗಳನ್ನು ಅಪ್‌ಗ್ರೇಡ್ ಮಾಡುವುದನ್ನು ನಿಲ್ಲಿಸಿದೆ. ಬೆಂಗಳೂರಿನ ಕೆಲಸದ ಸಂಸ್ಕೃತಿಯು ಸದ್ದಿಲ್ಲದೆ ಅನಗತ್ಯ ಜೀವನಶೈಲಿಯ ಒತ್ತಡವನ್ನು ಸೃಷ್ಟಿಸಬಹುದು. ಬೆಂಗಳೂರಿನ ಜೀವನಶೈಲಿಯ ಪ್ರವೃತ್ತಿಗಳೊಂದಿಗೆ ಮುಂದುವರಿಯಲು ಪ್ರಯತ್ನಿಸುವುದನ್ನು ನಿಲ್ಲಿಸಿದ್ದೇನೆ. ಅನೇಕ ಜನರು ಸಾಮಾಜಿಕವಾಗಿ ನವೀಕೃತವಾಗಿರಲು ಮಾತ್ರ ಹಣವನ್ನು ಖರ್ಚು ಮಾಡುತ್ತಾರೆ ಎಂದು ಉಲ್ಲೇಖಿಸಿರುವುದು ಕಾಣಬಹುದು.
ಇನ್ನೊಂದು ಪ್ರಮುಖ ಬದಲಾವಣೆಯೆಂದರೆ, ಪ್ರತಿದಿನ ಹೊರಗೆ ತಿನ್ನುವ ಬದಲು ಕೆಲವೊಮ್ಮೆ ಅಡುಗೆ ಮಾಡುವುದು. ಇದು ನನ್ನ ಆರೋಗ್ಯ ಹಾಗೂ ಉಳಿತಾಯ ಎರಡನ್ನೂ ನಿಜವಾಗಿಯೂ ಬದಲಾಯಿಸಿತು. ಹೆಚ್ಚಿನ ಸಂಬಳ ಮಾತ್ರ ಹಣದ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ ಎಂದು ನಾನು ಕಲಿತಿದ್ದೇನೆ. ಬೆಂಗಳೂರಿನಲ್ಲಿ ಉತ್ತಮ ಅಭ್ಯಾಸಗಳು ಹೆಚ್ಚು ಮುಖ್ಯ ಎಂದು ಕಟು ಸತ್ಯವನ್ನು ಹೇಳಿದ್ದಾರೆ.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬೇರೆಯವರನ್ನು ನೋಡಿ ಬದುಕುವುದನ್ನು ಬಿಟ್ಟರೆ ಖರ್ಚು ಹಿಡಿತದಲ್ಲಿರುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಲೈಫ್ ಸ್ಟೈಲ್ ಬದಲಾಯಿಸಿದರೆ ಖರ್ಚಿಗೆ ಬ್ರೇಕ್ ಹಾಕ್ಬಹುದು ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮೇ.26: ಸೈಬರ್ ವಂಚಕರ ಕೈಚಳಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೊದಲು ಸಾಮಾನ್ಯ ಜನರೇ ಇವರ ಟಾರ್ಗೆಟ್ ಆಗಿತ್ತು. ಆದರೆ ಇದೀಗ ಸೆಲೆಬ್ರಿಟಿಗಳನ್ನು ಬಿಡುತ್ತಿಲ್ಲ. ಈಗ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪುರಸ್ಕೃತರನ್ನೂ ಬಿಡದೆ ವಂಚಿಸಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಖ್ಯಾತ ಪ್ಯಾರಾ ಅಥ್ಲೀಟ್ ಕೆ. ವೈ. ವೆಂಕಟೇಶ್ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕಿರುವ ಸೈಬರ್ ಖದೀಮರು, ಸುಮಾರು 90 ಸಾವಿರ ರೂಪಾಯಿ ಹಣವನ್ನು ಲೂಟಿ ಮಾಡಿದ್ದಾರೆ.
ಹುಟ್ಟಿನಿಂದಲೇ ಅಕೊಂಡ್ರೋಪ್ಲಾಸಿಯಾ (Achondroplasia – ಕುಬ್ಜತೆ) ಸಮಸ್ಯೆಯಿಂದ ಬಳಲುತ್ತಿದ್ದರೂ, ಅದನ್ನೇ ಸವಾಲಾಗಿ ಸ್ವೀಕರಿಸಿದ ಕೆ. ವೈ. ವೆಂಕಟೇಶ್ ಅವರು ದೇಶ ಕಂಡ ಅಪರೂಪದ ಪ್ಯಾರಾ ಅಥ್ಲೀಟ್ ಆಗಿದ್ದಾರೆ. 50ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ದೇಶಕ್ಕೆ ಕೀರ್ತಿ ತಂದಿರುವ ಇವರ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರವು 2021ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.
ಇದೀಗ ಅವರ ಮೇಲೆಯೂ ಈ ವಂಚಕರ ಜಾಲದ ದೃಷ್ಟಿ ಬಿದ್ದಿದೆ. ಕಳೆದ ಕೆಲವು ದಿನಗಳ ಹಿಂದೆ ಮಧ್ಯರಾತ್ರಿ ಸುಮಾರು 12 ಗಂಟೆಯ ಅವಧಿಯಲ್ಲಿ ಕೆ. ವೈ. ವೆಂಕಟೇಶ್ ಅವರ ಮೊಬೈಲ್ ಸಂಖ್ಯೆಗೆ ನಿರಂತರವಾಗಿ ಒಟಿಪಿ (OTP) ಸಂದೇಶಗಳು ಬರತೊಡಗಿವೆ. ಅಸಮಯದಲ್ಲಿ ಸತತವಾಗಿ ಒಟಿಪಿ ಬರುತ್ತಿರುವುದನ್ನು ಕಂಡು ಅನುಮಾನಗೊಂಡ ವೆಂಕಟೇಶ್ ಅವರು, ಮಾರನೇ ದಿನ ಬೆಳಗ್ಗೆ ತಕ್ಷಣವೇ ತಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿದ್ದಾರೆ.
ಬ್ಯಾಂಕ್‌ಗೆ ತೆರಳಿ ತಮ್ಮ ಖಾತೆಯ ವಿವರಗಳನ್ನು (Account Statement) ಪರಿಶೀಲಿಸಿದಾಗ ವೆಂಕಟೇಶ್ ಅವರಿಗೆ ತೀವ್ರ ಆಘಾತ ಕಾದಿತ್ತು. ಅವರ ಗಮನಕ್ಕೆ ಬಾರದೆಯೇ ಖಾತೆಯಿಂದ ಹಂತ ಹಂತವಾಗಿ ಒಟ್ಟು 90 ಸಾವಿರ ರೂಪಾಯಿ ಹಣ ಕಟ್ ಆಗಿರುವುದು ಪತ್ತೆಯಾಗಿದೆ. ಯಾವುದೇ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳದಿದ್ದರೂ ಸಹ ಸೈಬರ್ ಕಳ್ಳರು ಕೆಲವೊಂದು ತಂತ್ರಗಳನ್ನು ಬಳಸಿಕೊಂಡು ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಈ ಸೈಬರ್ ದರೋಡೆಗೆ ಸಂಬಂಧಿಸಿದಂತೆ ಕೆ. ವೈ. ವೆಂಕಟೇಶ್ ಅವರು ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರ ಬ್ಯಾಂಕ್ ಖಾತೆ ಹಾಗೂ ಐಪಿ ಅಡ್ರೆಸ್ ಪತ್ತೆಹಚ್ಚಲು ಸೈಬರ್ ಕ್ರೈಮ್ ವಿಭಾಗದ ನೆರವು ಪಡೆದು ತನಿಖೆ ಚುರುಕುಗೊಳಿಸಿದ್ದಾರೆ.
ಮೊರಾದಾಬಾದ್, ಮೇ 26: ತನ್ನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಪತಿ(Husband)ಯನ್ನು ಪತ್ನಿಯೇ ತನ್ನ ಪ್ರಿಯಕರ ಮತ್ತು ತಂಗಿಯ ಸಹಾಯದಿಂದ ಅತ್ಯಂತ ಕ್ರೂರವಾಗಿ ಚಿತ್ರಹಿಂಸೆ ನೀಡಿ ಕೊಲೆ(Murder) ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ನಡೆದಿದೆ.ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದ ಪತ್ನಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ದುರ್ದೈವಿಯನ್ನು ಪವನ್ ಎಂದು ಗುರುತಿಸಲಾಗಿದೆ. ಪವನ್ ಮತ್ತು ಆಂಚಲ್ (24) ದಂಪತಿಗೆ 6 ವರ್ಷಗಳ ಹಿಂದೆ ಮದುವೆಯಾಗಿದ್ದು, 3 ವರ್ಷದ ಹೆಣ್ಣು ಮಗಳಿದ್ದಾಳೆ. ಆದರೆ, ಆಂಚಲ್‌ಗೆ ಆಕೆಯ ಸ್ವಂತ ಸೋದರಳಿಯ ಅಂಕಿತ್ (21) ಎಂಬಾತನೊಂದಿಗೆ ವಿವಾಹೇತರ ಸಂಬಂಧವಿತ್ತು. ಈ ವಿಷಯ ಪವನ್‌ಗೆ ತಿಳಿದಿದ್ದರಿಂದ ಇಬ್ಬರ ನಡುವೆ ಪ್ರತಿದಿನ ತೀವ್ರ ಕೌಟುಂಬಿಕ ಜಗಳಗಳು ನಡೆಯುತ್ತಿದ್ದವು. ಇದೇ ಕಾರಣಕ್ಕೆ ಆಂಚಲ್ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆಗೆ ಪ್ಲಾನ್ ಮಾಡಿದ್ದಳು.
ಈ ಪಕ್ಕಾ ಸ್ಕೆಚ್‌ಗೆ ಸಹಾಯ ಮಾಡಲು ಆಂಚಲ್ ತಂಗಿ ಶಿಖಾ (18) ನಾಲ್ಕು ದಿನಗಳ ಮೊದಲೇ ಇವರ ಮನೆಗೆ ಬಂದಿದ್ದಳು. ಅಷ್ಟೇ ಅಲ್ಲದೆ ಶಿಖಾ ತನ್ನ ಗೆಳೆಯ ಅಜಯ್ (19) ಎಂಬಾತನನ್ನು ಕೂಡ ಈ ಅಪರಾಧ ಕೃತ್ಯಕ್ಕೆ ಬಳಸಿಕೊಂಡಿದ್ದಳು.
ನಡೆದಿದ್ದೇನು?
ಕೊಲೆಯ ದಿನದಂದು ಈ ನಾಲ್ವರ ಗ್ಯಾಂಗ್ ಪವನ್‌ಗೆ ಬಲವಂತವಾಗಿ ವಿಷ ಕುಡಿಸಲು ಯತ್ನಿಸಿದೆ. ಪವನ್ ತೀವ್ರವಾಗಿ ಪ್ರತಿರೋಧ ಒಡ್ಡಿದಾಗ, ಆತನನ್ನು ಹಗ್ಗದಿಂದ ಕಟ್ಟಿಹಾಕಿ ಬರ್ಬರವಾಗಿ ಥಳಿಸಿದ್ದಾರೆ. ಅಷ್ಟಕ್ಕೇ ನಿಲ್ಲಿಸದೆ ಸುಮಾರು ಮೂರು ಗಂಟೆಗಳ ಕಾಲ ಪವನ್‌ನನ್ನು ಒತ್ತೆಯಾಳಾಗಿ ಇರಿಸಿಕೊಂಡು, ಆತನಿಗೆ ಸತತವಾಗಿ ವಿದ್ಯುತ್ ಆಘಾತಗಳನ್ನು ನೀಡಿದ್ದಾರೆ. ಪವನ್ ತೀವ್ರವಾಗಿ ಜರ್ಜರಿತನಾದಾಗ, ಕೊನೆಗೆ ಆತನಿಗೆ ಬಲವಂತವಾಗಿ ವಿಷ ಪ್ರಾಶನ ಮಾಡಿಸಿದ್ದಾರೆ.
ಪವನ್ ಮೃತಪಟ್ಟ ನಂತರ ಕೊಲೆಯನ್ನು ಮುಚ್ಚಿಹಾಕಲು, ಶವವನ್ನು ಮೆಟ್ಟಿಲುಗಳ ಮೇಲಿಂದ ತಳ್ಳಿ ಹಾಕಿದ್ದಾರೆ. ನಂತರ ನೆರೆಹೊರೆಯವರಿಗೆ ಪವನ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಂಬಿಸಲು ಕಥೆ ಕಟ್ಟಿದ್ದಾರೆ.
ಪವನ್ ಕುಟುಂಬಸ್ಥರ ಪ್ರಕಾರ, ಆತನಿಗೆ ಮೊದಲೇ ಜೀವ ಬೆದರಿಕೆ ಇತ್ತು. ಮೂರು ತಿಂಗಳ ಹಿಂದೆಯೇ ಪವನ್ ತನ್ನ ಸಹೋದರಿಗೆ ಕರೆ ಮಾಡಿ ತನಗೆ ಏನಾದರೂ ಅಪಾಯ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದನು. ಸದ್ಯ ಪೊಲೀಸರು ಆಂಚಲ್, ಅಂಕಿತ್, ಶಿಖಾ ಮತ್ತು ಅಜಯ್ ನಾಲ್ವರನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.