All posts by nagaraj11081993

‘ಧುರಂಧರ್ 2’ ಸಿನಿಮಾ ಬಜೆಟ್ ಹಾಗೂ ಸ್ಟಾರ್​​ಗಳ ಸಂಭಾವನೆ ವಿವರ

‘ಧುರಂಧರ್ 2’ ಸಿನಿಮಾ ಬಜೆಟ್ ಹಾಗೂ ಸ್ಟಾರ್​​ಗಳ ಸಂಭಾವನೆ ವಿವರ

ಆದಿತ್ಯ ಧಾರ್ ನಿರ್ದೇಶನದ ಮತ್ತು ರಣವೀರ್ ಸಿಂಗ್ ನಾಯಕನಾಗಿ ನಟಿಸಿರುವ ‘ಧುರಂಧರ್ 2’ (Dhurandhar 2) ಬಿಡುಗಡೆ ಸಮೀಪಿಸುತ್ತಿದೆ. ಪ್ರೇಕ್ಷಕರು ಕಾತರದಿಂದ ಕಾಯುತ್ತಿರುವ ಈ ಚಿತ್ರವು ಮಾರ್ಚ್ 19ರಂದು ಯುಗಾದಿಗೆ ಉಡುಗೊರೆಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅದಕ್ಕೂ ಒಂದು ದಿನ ಮೊದಲು ಅಂದರೆ ಮಾರ್ಚ್ 18ರಂದು, ‘ಧುರಂಧರ್ 2’ ಪ್ರೀಮೀಯರ್​ಗಳನ್ನು ಆಯೋಜಿಸಲಾಗಿದೆ. ಮೊದಲ ಭಾಗವು ಬ್ಲಾಕ್ಬಸ್ಟರ್ ಆಗಿದ್ದರಿಂದ, ಈ ಮುಂದುವರಿದ ಭಾಗದ ಮೇಲೆ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆಗಳಿವೆ. ರಣವೀರ್ ಸಿಂಗ್, ಸಂಜಯ್ ದತ್, ಆರ್. ಮಾಧವನ್, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್ ಮತ್ತು ಇತರ ತಾರೆಯರು ಈ ಬಹುತಾರಾಗಣದ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಬಜೆಟ್ 275 ಕೋಟಿ ರೂಪಾಯಿ. ಕಲಾವಿದರ ಸಂಭಾವನೆ ಬಗ್ಗೆ ಇಲ್ಲಿದೆ ವಿವರ.

ಕೆಲವು ಮಾಧ್ಯಮ ವರದಿಗಳ ಪ್ರಕಾರ, ‘ಧುರಂಧರ್ 2’ ಚಿತ್ರಕ್ಕಾಗಿ ರಣವೀರ್ ಸಿಂಗ್ ಅವರಿಗೆ 50 ಕೋಟಿ ರೂ. ಸಂಭಾವನೆ ನೀಡಲಾಗಿದೆ. ಈ ಚಿತ್ರದಲ್ಲಿ ಅವರು ಅತಿ ಹೆಚ್ಚು ಸಂಭಾವನೆ ಪಡೆದಿರೋ ನಟ. ಈ ಚಿತ್ರದಲ್ಲಿ ರಣವೀರ್ ಹಮ್ಜಾ ಮತ್ತು ಜಸ್ಕಿರತ್ ಸಿಂಗ್ ರಂಗಿ ಎಂಬ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚೌಧರಿ ಅಸ್ಲಾಂ ಪಾತ್ರದಲ್ಲಿ ನಟಿಸಿರುವ ಸಂಜಯ್ ದತ್ ಗೆ 10 ಕೋಟಿ ರೂ. ಅರ್ಜುನ್ ರಾಂಪಾಲ್ ಈ ಚಿತ್ರದಲ್ಲಿ ಅತ್ಯಂತ ಕ್ರೂರ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದಕ್ಕಾಗಿ ಅವರಿಗೆ 3 ಕೋಟಿ ರೂ. ಸಂಭಾವನೆ ನೀಡಲಾಗಿದೆ. ಸಾರಾ ಅರ್ಜುನ್ ಗೆ 1 ಕೋಟಿ ರೂ. ಹಮ್ಜಾ ಅವರ ಪತ್ನಿ ಯಲಿನಾ ಜಮಾಲಿ ಪಾತ್ರದಲ್ಲಿ ನಟಿಸಿದ್ದಾರೆ. ಇದಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ: ಕ್ರಿಕೆಟರ್ ಆಗ ಹೊರಟಿದ್ದ ‘ಧುರಂಧರ್’ ನಿರ್ದೇಶಕ; ರಾಜಕೀಯದಿಂದ ಎಲ್ಲವೂ ಬದಲಾಯ್ತು

ಈ ಚಿತ್ರದಲ್ಲಿ ನಟ ಆರ್. ಮಾಧವನ್ ಅಜಯ್ ಸನ್ಯಾಲ್ ಪಾತ್ರವನ್ನು ನಿರ್ವಹಿಸಿದ್ದಾರೆ. ಇದಕ್ಕಾಗಿ ಅವರು 9 ಕೋಟಿ ರೂ. ಸಂಭಾವನೆ ಪಡೆದರು. ‘ಧುರಂಧರ್’ ಚಿತ್ರದಲ್ಲಿ ಅಕ್ಷಯ್ ಖನ್ನಾ ಅವರ ಪಾತ್ರವು ಒಂದು ಹೈಲೈಟ್ ಆಗಿತ್ತು. ಮೊದಲ ಭಾಗದಲ್ಲಿ, ಅಕ್ಷಯ್, ರೆಹಮಾನ್ ಡಕಾಯಿತ ಪಾತ್ರ ಸಾಯುತ್ತದೆ. ಆದರೆ ಈಗ ಎರಡನೇ ಭಾಗದಲ್ಲಿ ಅಕ್ಷಯ್ ಫ್ಲ್ಯಾಷ್‌ಬ್ಯಾಕ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಅವರು 2 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ‘ಧುರಂಧರ್’ ಚಿತ್ರದ ಮೊದಲ ಭಾಗವು ಡಿಸೆಂಬರ್ 2025 ರಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 1300 ಕೋಟಿ ರೂ.ಗಳಿಗೂ ಹೆಚ್ಚು ಸಂಗ್ರಹಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

LPG ಸಿಲಿಂಡರ್ ಬಿಕ್ಕಟ್ಟು: ಕಾಳಸಂತೆಯಲ್ಲಿ ಏಜೆನ್ಸಿಗಳು, ದಂಧೆಕೋರರ ಕಳ್ಳಾಟ, 15 ಸಾವಿರ ಸಿಲಿಂಡರ್ ಜಪ್ತಿ

ಬೆಂಗಳೂರು, ನವದೆಹಲಿ, ಮಾರ್ಚ್ 18: ಇರಾನ್-ಇಸ್ರೇಲ್, ಮಧ್ಯಪ್ರಾಚ್ಯ ಸಂಘರ್ಷ ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಗ್ಯಾಸ್ ಸಿಲಿಂಡರ್‌ಗಳ ತೀವ್ರತರದ ಅಭಾವಕ್ಕೆ ಕಾರಣವಾಗಿದೆ. ಈ ಪರಿಸ್ಥಿತಿಯು ಹೋಟೆಲ್ ಮಾಲೀಕರನ್ನು ದಿಕ್ಕೆಡಿಸಿದ್ದು, ಕಮರ್ಷಿಯಲ್ ಸಿಲಿಂಡರ್‌ಗಳ ಕೊರತೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಿಕ್ಕಟ್ಟನ್ನು ದುರ್ಬಳಕೆ ಮಾಡಿಕೊಂಡ ಕೆಲ ಖದೀಮರು ಗೃಹಬಳಕೆ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಅಕ್ರಮಗಳ ವಿರುದ್ಧ ದೇಶಾದ್ಯಂತ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಕರ್ನಾಟಕ, ದೆಹಲಿ, ಜಮ್ಮು ಕಾಶ್ಮೀರ, ಕೇರಳ ಸೇರಿದಂತೆ 12 ಸಾವಿರಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದಾರೆ. ಈ ದಾಳಿಗಳಲ್ಲಿ ಸುಮಾರು 15 ಸಾವಿರ ಗ್ಯಾಸ್ ಸಿಲಿಂಡರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ದೆಹಲಿಯಲ್ಲಿ 600 ಸಿಲಿಂಡರ್‌ಗಳು, ಉತ್ತರ ಪ್ರದೇಶದಲ್ಲಿ 405 ತಪಾಸಣೆಗಳು ನಡೆದಿವೆ ಹಾಗೂ 10 ಜನರನ್ನು ಬಂಧಿಸಲಾಗಿದೆ. ಜಮ್ಮು ಕಾಶ್ಮೀರದಲ್ಲಿ 504 ದಾಳಿ ನಡೆಸಿ ಎಫ್‌ಐಆರ್‌ ದಾಖಲಿಸಲಾಗಿದೆ.

ಕರ್ನಾಟಕದಲ್ಲಿ ಬೀದರ್‌ನಲ್ಲಿ 105, ದಾವಣಗೆರೆ ಮತ್ತು ಯಾದಗಿರಿಯಲ್ಲಿ ತಲಾ 20 ಸಿಲಿಂಡರ್‌ಗಳನ್ನು ಜಪ್ತಿ ಮಾಡಲಾಗಿದೆ. ಏತನ್ಮಧ್ಯೆ, ಕಮರ್ಷಿಯಲ್ ಗ್ಯಾಸ್ ಬಿಕ್ಕಟ್ಟು ಹಿನ್ನೆಲೆಯಲ್ಲಿ ಹೋಟೆಲ್ ಅಸೋಸಿಯೇಷನ್ ಹೈಕೋರ್ಟ್ ಮೆಟ್ಟಿಲೇರಿದ್ದು, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಸಮರ್ಪಕ ಗ್ಯಾಸ್ ಪೂರೈಕೆಗೆ ನಿರ್ದೇಶನ ನೀಡುವಂತೆ ಮನವಿ ಸಲ್ಲಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ 9ನೇ ದಿನಕ್ಕೆ ಕಾಲಿಟ್ಟ ಎಲ್​ಪಿಜಿ ಸಿಲಿಂಡರ್ ಕೊರತೆ: ಜಿಲ್ಲೆ ಜಿಲ್ಲೆಗಳಲ್ಲೂ ಬಿಗಡಾಯಿಸಿದ ಪರಿಸ್ಥಿತಿ

ಬೆಂಗಳೂರು, ಮಾರ್ಚ್ 18: ಇರಾನ್–ಇಸ್ರೇಲ್ ಯುದ್ಧದ (Iran-Israel War) ಪರಿಣಾಮವಾಗಿ ಉಂಟಾದ ಅಡುಗೆ ಅನಿಲ (ಕಮರ್ಷಿಯಲ್ LPG) ಕೊರತೆ ಕರ್ನಾಟಕದಲ್ಲಿ (Karnataka) ತೀವ್ರ ಸಮಸ್ಯೆ ಸೃಷ್ಟಿಸಿದೆ. ಕಳೆದ 9 ದಿನಗಳಿಂದ ಮುಂದುವರಿದಿರುವ ಈ ಸಂಕಷ್ಟದಿಂದ ದೊಡ್ಡ ದೊಡ್ಡ ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳು ಬಾಗಿಲು ಮುಚ್ಚುವ ಹಂತಕ್ಕೆ ಬಂದಿವೆ. ಹೋಟೆಲ್ ಆಹಾರಕ್ಕೆ ಅವಲಂಬಿತವಾಗಿದ್ದ ಜನರು ಈಗ ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಲೆದಾಡುವಂತಾಗಿದೆ. 6 ಸಾವಿರ ರೂಪಾಯಿ ಕೊಟ್ಟರೂ ಕಮರ್ಷಿಯಲ್ ಸಿಲಿಂಡರ್‌ ಒಂದು ಪಡೆಯಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಅಡುಗೆ ಎಣ್ಣೆ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದೆ.

ರಾಜಧಾನಿ ಬೆಂಗಳೂರಿನ ಪ್ರಸಿದ್ಧ ಹೋಟೆಲ್‌ಗಳಿಗೂ ಗ್ಯಾಸ್ ಕೊರತೆಯ ಹೊಡೆತ ಬಿದ್ದಿದ್ದು, ವಿ.ವಿ.ಪುರಂನ ಖ್ಯಾತ ‘ನ್ಯೂ ಮಾಡರ್ನ್ ಹೋಟೆಲ್’ ಬಾಗಿಲು ಮುಚ್ಚಿದೆ. ಇನ್ನೊಂದೆಡೆ, ‘ನಾಗಾರ್ಜುನ ಹೋಟೆಲ್’ ಮೆನು ಕಡಿತಗೊಳಿಸಿ ಗ್ರಾಹಕರ ಸಹಕಾರ ಕೋರಿದೆ.

ಜಿಲ್ಲೆಗಳಲ್ಲೂ ಸಮಸ್ಯೆ: ಇಂದಿರಾ ಕ್ಯಾಂಟೀನ್‌ಗೂ ತಟ್ಟಿದ ಗ್ಯಾಸ್ ಬಿಸಿ

ಧಾರವಾಡದಲ್ಲಿ ಗ್ಯಾಸ್ ಲಭ್ಯವಿಲ್ಲದ ಕಾರಣ ನಗರದ ಹಳೆಯ ಹೋಟೆಲ್ ‘ವಿಜಯಸಾಗರ್’ ಕೂಡ ಬಂದ್ ಆಗಿದ್ದು, ಸುಮಾರು 20 ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ಎದುರಿಸಿದ್ದಾರೆ. ತುಮಕೂರಿನಲ್ಲಿ ಹೋಟೆಲ್‌ಗಳ ಜೊತೆಗೆ ಇಂದಿರಾ ಕ್ಯಾಂಟೀನ್‌ಗಳೂ ಕಾರ್ಯನಿರ್ವಹಣೆ ನಿಲ್ಲಿಸಿದ್ದರಿಂದ ಅನೇಕರು ಬೇರೆ ಉದ್ಯೋಗಗಳತ್ತ ಮುಖಮಾಡಿದ್ದಾರೆ. ರಂಜಾನ್ ಹಿನ್ನೆಲೆ ಆಹಾರ ತಯಾರಿಕೆಗೆ ಗ್ಯಾಸ್ ಸಿಗದ ಕಾರಣ, ಸೌದೆ ಒಲೆಗಳತ್ತ ಮೊರೆ ಹೋಗಲಾಗಿದೆ.

ವಿಜಯಪುರದಲ್ಲೂ ರೊಟ್ಟಿ ತಯಾರಿಕೆಗೆ ಗ್ಯಾಸ್ ಕೊರತೆ ತಟ್ಟಿದ್ದು, ಅನಿವಾರ್ಯವಾಗಿ ಸೌದೆ ಮತ್ತು ಇದ್ದಿಲು ಒಲೆಗಳನ್ನು ಬಳಸಲಾಗುತ್ತಿದೆ.

ರಫ್ತು ಸ್ಥಗಿತ: ಲಕ್ಷಾಂತರ ರೂ. ಮೌಲ್ಯದ ಆಹಾರೋತ್ಪನ್ನ ಹಾಸನಕ್ಕೆ ವಾಪಸ್

ಹಾಸನದಲ್ಲಿ ಗರ್ಕಿನ್, ಬೇಬಿಕಾರ್ನ್, ಮಿಡಿ ಸೌತೆ ಉಪ್ಪಿನಕಾಯಿ ಸೇರಿದಂತೆ ವಿವಿಧ ಆಹಾರ ಉತ್ಪನ್ನಗಳನ್ನು ಗಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿತ್ತು. ಆದರೆ ಹಾರ್ಮುಜ್ ಜಲಮಾರ್ಗದ ಅಡಚಣೆಗಳಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಉತ್ಪನ್ನಗಳು ಕಂಟೇನರ್‌ಗಳಲ್ಲೇ ವಾಪಸ್ ಆಗುತ್ತಿರುವುದು ಉದ್ಯಮಿಗಳಿಗೆ ಭಾರೀ ನಷ್ಟ ಉಂಟುಮಾಡಿದೆ.

ತತ್ತರಿಸಿದ ಕುಕ್ಕುಟೋದ್ಯಮ: ಮೊಟ್ಟೆ ಬೆಲೆ ದಿಢೀರ್ ಕುಸಿತ

ಕುಕ್ಕುಟೋದ್ಯಮಕ್ಕೂ ದೊಡ್ಡ ಹೊಡೆತ ಬಿದ್ದಿದೆ. ಬೆಂಗಳೂರಿನಲ್ಲಿ ಪ್ರತಿದಿನ 1.25 ಕೋಟಿ ಮೊಟ್ಟೆಗಳಿಗೆ ಇದ್ದ ಬೇಡಿಕೆ, ಹೋಟೆಲ್‌ಗಳು ಬಂದ್ ಆಗಿದ್ದರಿಂದ 80 ಲಕ್ಷಕ್ಕೆ ಇಳಿದಿದೆ. ಗಲ್ಫ್ ರಾಷ್ಟ್ರಗಳಿಗೆ ರಫ್ತು ಕಡಿಮೆಯಾಗಿರುವುದರಿಂದ ಮೊಟ್ಟೆ ದರ 6 ರೂಪಾಯಿಯಿಂದ 4 ರೂಪಾಯಿಗೆ ಕುಸಿದಿದೆ.

ಇದನ್ನೂ ಓದಿ: ಗ್ಯಾಸ್​​ ಅಭಾವವನ್ನೇ ಬಂಡವಾಳ ಮಾಡಿಕೊಂಡ ಕಿಡಿಗೇಡಿಗಳು: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ನೂರಾರು ಸಿಲಿಂಡರ್​​ ಸೀಜ್​​​

ಒಟ್ಟಾರೆ, ಮಧ್ಯಪ್ರಾಚ್ಯ ಪ್ರದೇಶದ ಯುದ್ಧದ ಪರಿಣಾಮ ಕೇವಲ LPG ಸಿಲಿಂಡರ್ ಕೊರತೆಗಷ್ಟೇ ಸೀಮಿತವಾಗದೆ ಹೋಟೆಲ್ ಉದ್ಯಮ, ರಫ್ತು ವಲಯ ಮತ್ತು ಪೌಲ್ಟ್ರಿ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಭಾರೀ ಹೊಡೆತ ನೀಡಿದೆ. ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳಬೇಕೆಂದು ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಜಯ್ ಜೊತೆ ತ್ರಿಷಾ ಮದುವೆ ಆಗೋದು ತಾಯಿಗೂ ಇಷ್ಟ?

ತಮಿಳು ಸ್ಟಾರ್ ಹೀರೋ ದಳಪತಿ ವಿಜಯ್ ಅವರ ಹೆಸರು ಈಗ ಕಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಮನೆಮಾತಾಗಿದೆ. ಜನರು ವಿಜಯ್ ಮತ್ತು ತ್ರಿಷಾ ಬಗ್ಗೆ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ನಾಯಕ ವಿಜಯ್ ಅವರ ಪತ್ನಿ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ . ವಿಜಯ್ ನಾಯಕಿಯೊಂದಿಗೆ ಸಂಬಂಧ ಹೊಂದಿದ್ದಾರೆಂದು ಆರೋಪಿಸಿ ಅವರು ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಮಧ್ಯೆ ವಿಜಯ್ ಹಾಗೂ ತ್ರಿಷಾ ವಿವಾಹ ಆಗುತ್ತಾರಾ ಎನ್ನುವ ಪ್ರಶ್ನೆ ಚರ್ಚೆ ಹುಟ್ಟುಹಾಕಿದೆ.

ವಿಜಯ್ ಮತ್ತು ತ್ರಿಷಾ ನಡುವೆ ಏನೋ ಇದೆ ಎಂಬ ಸುದ್ದಿ ಜೋರಾಗಿದೆ. ವಿಜಯ್ ಅವರ ಪತ್ನಿ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದು, ವಿಜಯ್ ನಟಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಇವರು ಮದುವೆ ಆಗೋದು ತ್ರಿಷಾ ಅಮ್ಮನಿಗೂ ಇಷ್ಟವೇ ಎನ್ನುವ ಪ್ರಶ್ನೆ ಮುಡಿದೆ.

ಇತ್ತೀಚೆಗೆ ವಿಜಯ್ ಮತ್ತು ತ್ರಿಷಾ ಒಟ್ಟಿಗೆ ಮದುವೆಗೆ ಹೋಗಿದ್ದರು. ಇದು ದೊಡ್ಡ ಸಂಚಲನವನ್ನೇ ಸೃಷ್ಟಿಸಿತು. ವಿಜಯ್ ಮತ್ತು ತ್ರಿಷಾ ಐದು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಇಬ್ಬರ ನಡುವೆ ಉತ್ತಮ ಸ್ನೇಹವಿದೆ. ಈ ಮಧ್ಯೆ ಕೆಲವು ವಿಜಯ್ ಫ್ಯಾನ್ಸ್ ವಿಜಯ್ ಮತ್ತು ತ್ರಿಶಾ ಅವರ ಫೋಟೋಗಳನ್ನು ಕೊಲ್ಯಾಜ್ ಮಾಡುತ್ತಿದ್ದಾರೆ. ಎಐ ಮೂಲಕ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವಿವಾಹ ಆಗುವಂತೆ ತೋರಿಸಲಾಗಿದೆ.

ಇದನ್ನೂ ಓದಿ: ‘ಇಂಥವರಿಗೆಲ್ಲ ತ್ರಿಷಾ ಉತ್ತರಿಸಬೇಕಿಲ್ಲ’; ಖಡಕ್ ಆಗಿ ಹೇಳಿದ ಖುಷ್ಬೂ ಸುಂದರ್

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ತ್ರಿಷಾ ಅವರ ತಾಯಿ ಈ ವಿಡಿಯೋನ ಲೈಕ್ ಮಾಡಿರೋದು ಈಗ ಚರ್ಚೆಯ ವಿಷಯವಾಗಿದೆ. ಅದರೊಂದಿಗೆ, ವಿಜಯ್ ಮತ್ತು ತ್ರಿಷಾ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ದೊಡ್ಡ ಸುದ್ದಿ ಹರಿದಾಡುತ್ತಿದೆ. ತ್ರಿಷಾ ಅವರ ತಾಯಿ ವಿಜಯ್ ಜೊತೆಗಿನ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಅವರು ಇಷ್ಟಪಟ್ಟ ಪೋಸ್ಟ್ ವೈರಲ್ ಆಗುತ್ತಿದೆ. ವಿಜಯ್ ಮತ್ತು ತ್ರಿಷಾ ಸಂಬಂಧದ ಬಗ್ಗೆ ಶೀಘ್ರದಲ್ಲೇ ಸ್ಪಷ್ಟತೆ ಬರುವ ಸಾಧ್ಯತೆಯಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

RCB ತಂಡದ ಖರೀದಿಗೆ ಹಿಂದೇಟು: ಫೈನಲ್​​ ರೇಸ್​ನಲ್ಲಿ ಇಬ್ಬರು ಬೆಂಗಳೂರಿಗರು!

ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL) ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ಮಾಲೀಕರು ಯಾರು? ಈ ಕುತೂಹಲಕಾರಿ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ದೊರೆಯಲಿದೆ. ಏಕೆಂದರೆ  RCB ಫ್ರಾಂಚೈಸಿ ಮಾರಾಟ ಪ್ರಕ್ರಿಯೆಯು ಇದೀಗ ಅಂತಿಮ ಹಂತಕ್ಕೆ ತಲುಪಿದೆ. ಆದರೆ ಈ ಹಿಂದೆ ಇದ್ದ ಪ್ರಮುಖ ಕಂಪೆನಿಗಳು ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಖರೀದಿಯಿಂದ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ.

ಈ ಹಿಂದೆ ಮ್ಯಾಂಚೆಸ್ಟರ್ ಯುನೈಟೆಡ್ ಮಾಲೀಕ ಅವ್ರಾಮ್ ಗ್ಲೇಝರ್ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್‌ನ ಅದಾರ್ ಪೂನಾವಾಲಾ ಅವರು ಆರ್​ಸಿಬಿ ಫ್ರಾಂಚೈಸಿ ಖರೀದಿಗೆ ಆಸಕ್ತಿ ತೋರಿದ್ದರು. ಆದರೆ ಇದೀಗ ಇವರು ಅಂತಿಮ ಬಿಡ್ ಸಲ್ಲಿಸದೆ ಹಿಂದೆ ಸರಿದಿದ್ದಾರೆ.

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಸಹ ಮಾಲೀಕರಾದ ಪಾರ್ಥ್ ಜಿಂದಾಲ್ ಕೂಡ ಆರ್​ಸಿಬಿ ಮೇಲೆ ಕಣ್ಣಿಟ್ಟಿದ್ದಾರೆ ಎಂದು ವರದಿಯಾಗಿತ್ತು. ಆದರೀಗ ಅವರ ಹೆಸರು ಕೂಡ ಕಾಣಿಸುತ್ತಿಲ್ಲ.

ಇನ್ನೊಂದೆಡೆ ಅದಾನಿ ಗ್ರೂಪ್ ಕೂಡ ಆರ್​ಸಿಬಿ ಫ್ರಾಂಚೈಸಿಯನ್ನು ಖರೀದಿಸಿ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಎಂಟ್ರಿ ಕೊಡಲು ಪ್ಲ್ಯಾನ್ ಹೊಂದಿದ್ದರು. ಇದೀಗ ಅದಾನಿ ಗ್ರೂಪ್​ ಕಡೆಯಿಂದಲೂ ಬಿಡ್ ಸಲ್ಲಿಕೆಯಾಗಿಲ್ಲ ಎಂದು ವರದಿಯಾಗಿದೆ.

ರೇಸ್​ನಲ್ಲಿ ಇಬ್ಬರು:

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖರೀದಿಗಾಗಿ ಈಗ ಇಬ್ಬರು ಮಾತ್ರ ರೇಸ್​ನಲ್ಲಿದ್ದಾರೆ. ಇಬ್ಬರೂ ಸಹ ಬೆಂಗಳೂರು ಮೂಲದವರು ಎಂಬುದು ವಿಶೇಷ. ಅವರೆಂದರೆ…

  • EQT ಮತ್ತು ಪ್ರೇಮ್‌ಜಿ ಇನ್ವೆಸ್ಟ್: ಸ್ವೀಡನ್ ಮೂಲದ ಇಕ್ವಿಟಿ ಸಂಸ್ಥೆ ‘EQT’ ಮತ್ತು ಅಝೀಂ ಪ್ರೇಮ್‌ಜಿ ಅವರ ‘ಪ್ರೇಮ್‌ಜಿ ಇನ್ವೆಸ್ಟ್’ ಜಂಟಿಯಾಗಿ ಸುಮಾರು $2.1 ಬಿಲಿಯನ್ ಬಿಡ್ ಮಾಡಿವೆ ಎಂದು ವರದಿಯಾಗಿದೆ.
  • ರಂಜನ್ ಪೈ ಮತ್ತು ಕೆಕೆಆರ್ (KKR): ಮಣಿಪಾಲ್ ಗ್ರೂಪ್‌ನ ಡಾ. ರಂಜನ್ ಪೈ ನೇತೃತ್ವದ ತಂಡದಲ್ಲಿ ಅಮೆರಿಕದ ಕೆಕೆಆರ್ ಮತ್ತು ಸಿಂಗಾಪುರದ ಟೆಮಾಸೆಕ್ (Temasek) ಕಂಪನಿ ಕೂಡ ಅಂತಿಮ ರೇಸ್​ನಲ್ಲಿದೆ.
  • ಅಝೀಂ ಪ್ರೇಮ್​ಜಿ ಹಾಗೂ ಡಾ. ರಂಜನ್ ಪೈ ಬೆಂಗಳೂರು ಮೂಲದವರಾಗಿರುವುದರಿಂದ ಆರ್​ಸಿಬಿ ಫ್ರಾಂಚೈಸಿ ಬೆಂಗಳೂರಿನಲ್ಲೇ ಉಳಿಯುವುದು ಖಚಿತವಾಗಿದೆ.

ರೇಸ್‌ನಿಂದ ಹೊರಬಂದವರು:

  • ಜೆಎಸ್​ಡಬ್ಲ್ಯೂ ಗ್ರೂಪ್ (ಪಾರ್ಥ್ ಜಿಂದಾಲ್)
  • ಅದಾನಿ ಗ್ರೂಪ್ (ಗೌತಮ್ ಅದಾನಿ)
  • ಪೂನಾವಾಲ ಗ್ರೂಪ್ (ಆದಾರ್ ಪೂನಾವಾಲ)
  • ನಿಖಿಲ್ ಕಾಮತ್ (ಝೆರೋಧಾ ಕಂಪೆನಿ)
  • ದೇವಯಾನಿ ಇಂಟರ್ನ್ಯಾಷನಲ್ ಗ್ರೂಪ್ (ರವಿಕಾಂತ್ ಜೈಪುರಿಯಾ)

ಆರ್​ಸಿಬಿ ಮೌಲ್ಯ ಎಷ್ಟು?

ಆರ್​ಸಿಬಿ ಫ್ರಾಂಚೈಸಿಯ ಆರಂಭಿಕ ಬಿಡ್ಡಿಂಗ್ ಮೊತ್ತ ಸುಮಾರು $2 ಬಿಲಿಯನ್ (ಅಂದಾಜು ₹18,500 ಕೋಟಿ) ಎಂದು ಘೋಷಿಸಲಾಗಿದೆ. EQT ಮತ್ತು ಪ್ರೇಮ್‌ಜಿ ಇನ್ವೆಸ್ಟ್ ಕಂಪೆನಿಯು $2.1 ಬಿಲಿಯನ್ ಬಿಡ್ ಮಾಡಿವೆ ಎಂದು ವರದಿಯಾಗಿದೆ. ಇದಾಗ್ಯೂ ರಂಜನ್ ಪೈ ಮತ್ತು ಕೆಕೆಆರ್ (KKR) ಸಲ್ಲಿಸಿರುವ ಬಿಡ್ ಮೊತ್ತದ ಮಾಹಿತಿ ಬಹಿರಂಗವಾಗಿಲ್ಲ. ಹೀಗಾಗಿ ಆರ್​ಸಿಬಿ ಯಾರ ಪಾಲಾಗಲಿದೆ ಎಂಬುದೇ ಕುತೂಹಲ.

ಇದನ್ನೂ ಓದಿ: IPL 2026: 10 ತಂಡಗಳು ರೆಡಿ: ಯಾರು ಬಲಿಷ್ಠ?

ಇಷ್ಟು ದೊಡ್ಡ ಮೊತ್ತಕ್ಕೆ ಕಾರಣವೇನು?

  • ಬ್ರ್ಯಾಂಡ್ ಮೌಲ್ಯ: ಐಪಿಎಲ್‌ನಲ್ಲಿ ಆರ್‌ಸಿಬಿ ಅತ್ಯಂತ ಹೆಚ್ಚು ಬ್ರ್ಯಾಂಡ್ ಮೌಲ್ಯ ($269 ಮಿಲಿಯನ್) ಹೊಂದಿರುವ ತಂಡವಾಗಿದೆ.
  • ಚಾಂಪಿಯನ್ ಪಟ್ಟ: 2025ರ ಐಪಿಎಲ್‌ನಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಅದರ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
  • ವಿರಾಟ್ ಕೊಹ್ಲಿ: ತಂಡದ ಅತಿದೊಡ್ಡ ಆಕರ್ಷಣೆಯಾಗಿರುವ ವಿರಾಟ್ ಕೊಹ್ಲಿ ಅವರ ಜನಪ್ರಿಯತೆ ಈ ದೊಡ್ಡ ಮೊತ್ತಕ್ಕೆ ಪ್ರಮುಖ ಕಾರಣ.

 

Source link

ವಿಚ್ಛೇದನ ನೀಡಿದ್ದಕ್ಕೆ ಪತ್ನಿಯನ್ನು ಅಟ್ಟಾಡಿಸಿಕೊಂಡು ಹೋಗಿ ಆಸಿಡ್ ಹಾಕಿದ ಪತಿ; ಭಯಾನಕ ವಿಡಿಯೋ ವೈರಲ್

ಚೆನ್ನೈ, ಮಾ.18: ಪ್ರೀತಿಸಿ ಮದುವೆಯಾದ ಪತಿಯೇ ಪತ್ನಿಯ ಜೀವನವನ್ನು ಅಂಧಕಾರಕ್ಕೆ ತಳ್ಳಿದ ಘಟನೆ ಪಲ್ಲವರಂನ ಭಾರತಿ ನಗರದಲ್ಲಿ ನಡೆದಿದೆ. 29 ವರ್ಷದ ಸನಾ ಫಾತಿಮಾ ಸಂತ್ರಸ್ತ ಮಹಿಳೆಯಾಗಿದ್ದು, ಪತಿ ಮೊಹಮ್ಮದ್ ಅಲಿ ಸದ್ಯ ತಲೆಮರೆಸಿಕೊಂಡಿದ್ದಾನೆ.ಸನಾ ಫಾತಿಮಾ ಮತ್ತು ಅನಾಕಪುತ್ತೂರು ನಿವಾಸಿ ಮೊಹಮ್ಮದ್ ಅಲಿ 2020ರಲ್ಲಿ ಪ್ರೀತಿಸಿ ವಿವಾಹವಾಗಿದ್ದರು. ಇವರಿಗೆ ನಾಲ್ಕು ವರ್ಷದ ಮಗನಿದ್ದಾನೆ.ಮೊಹಮ್ಮದ್ ಅಲಿ ಮದ್ಯವ್ಯಸನಿಯಾಗಿದ್ದು, ಪ್ರತಿದಿನ ಕುಡಿದು ಬಂದು ಪತ್ನಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಫಾತಿಮಾ ಪತಿಯಿಂದ ದೂರವಾಗಿ ತಾಯಿ ಮನೆಯಲ್ಲಿ ವಾಸವಿದ್ದರು ಮತ್ತು ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪತ್ನಿ ನ್ಯಾಯಾಲಯಕ್ಕೆ ಹೋಗಿದ್ದರಿಂದ ಆಕ್ರೋಶಗೊಂಡಿದ್ದ ಮೊಹಮ್ಮದ್ ಅಲಿ, ಶೌಚಾಲಯ ಸ್ವಚ್ಛಗೊಳಿಸುವ ಆಸಿಡ್ ತಂದು ಫಾತಿಮಾ ಅವರ ಮುಖಕ್ಕೆ ನೇರವಾಗಿ ಎರಚಿದ್ದಾನೆ. ನೋವಿನಿಂದ ಕಿರುಚುತ್ತಾ ಫಾತಿಮಾ ಓಡಲು ಯತ್ನಿಸಿದರೂ ಬಿಡದ ಪತಿ, ಆಕೆಯನ್ನು ಬೆನ್ನಟ್ಟಿ ದಾಳಿ ಮಾಡಿದ್ದಾನೆ. ತಕ್ಷಣ ಸ್ಥಳೀಯರು ಮಧ್ಯಪ್ರವೇಶಿಸಿ ಫಾತಿಮಾ ಅವರನ್ನು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಾರ್ಚ್ 15 ರಂದು ಫಾತಿಮಾ ಅವರು ತಮ್ಮ ತಾಯಿ ಮನೆಯ ಬಳಿ ಒಬ್ಬರೇ ನಡೆದುಕೊಂಡು ಹೋಗುತ್ತಿದ್ದಾಗ ಈ ಘೋರ ಕೃತ್ಯ ನಡೆದಿದೆ. ಆಸಿಡ್ ಫಾತಿಮಾ ಅವರ ಎಡಗಣ್ಣಿಗೆ ತಗುಲಿದ ಪರಿಣಾಮ ಅವರು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ. ಪಲ್ಲವರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಮೊಹಮ್ಮದ್ ಅಲಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Devotion and Destiny: ಪೂಜೆ ಪುನಸ್ಕಾರ ಮಾಡುವುದರಿಂದ ನಿಜವಾಗಿಯೂ ಕಷ್ಟಗಳಿಂದ ಮುಕ್ತಿ ಸಿಗುತ್ತಾ?

ಪೂಜೆ ಪುನಸ್ಕಾರಗಳಿಂದ ಕಷ್ಟಗಳು ನಿವಾರಣೆಯಾಗುತ್ತವೆಯೇ ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಉತ್ತರ ನೀಡಿದ್ದಾರೆ. ಮಾನವರಾಗಿ ಹುಟ್ಟಿದ ಮೇಲೆ ಕಷ್ಟ-ಸುಖಗಳು ಜೀವನದ ಸಹಜ ಭಾಗ. ಅವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಪೂರ್ವಜನ್ಮದ ಕರ್ಮಫಲ ಅಥವಾ ಹಣೆಬರಹವನ್ನು ಹರಿಹರರೂ ಸಹ ಬದಲಾಯಿಸಲು ಸಾಧ್ಯವಿಲ್ಲ ಎಂಬ ನಂಬಿಕೆಯಿದೆ.

ಆದರೂ, ಈ ಪೂಜೆ, ಪುನಸ್ಕಾರ, ಹವನ, ಹೋಮ, ಯಜ್ಞ, ಯಾಗಾದಿ, ಜಪಗಳನ್ನು ಆಚರಿಸುವುದರಿಂದ ಆ ಸಮಸ್ಯೆಗಳನ್ನು, ಕಷ್ಟಗಳನ್ನು ಸಹಿಸಿಕೊಳ್ಳುವ, ಎದುರಿಸುವ ವಿಶೇಷ ಶಕ್ತಿ ನಮ್ಮಲ್ಲಿ ಉದ್ಭವಿಸುತ್ತದೆ. “ಮನನಾತ್ ತ್ರಾಯತೇ ಇತಿ ಮಂತ್ರಃ” ಎಂಬಂತೆ, ಮಂತ್ರ ಅಥವಾ ಪೂಜೆ ಮಾಡುವ ಸಮಯದಲ್ಲಿ, ಕಷ್ಟಗಳಿಂದ ಆಚೆ ಬರುತ್ತಿದ್ದೇನೆ, ಪರಿಹಾರ ಸಿಗುತ್ತದೆ ಎಂಬ ಧನಾತ್ಮಕ ಆಲೋಚನೆಗಳು ಫಲ ನೀಡುತ್ತವೆ ಎಂದು ಗುರೂಜಿ ತಿಳಿಸಿದ್ದಾರೆ.

ಭಗವಂತನಿಗೆ ಕಷ್ಟಗಳನ್ನು ನಿವಾರಣೆ ಮಾಡುವಂತೆ ನೇರವಾಗಿ ಕೇಳುವುದು ಸೂಕ್ತವಲ್ಲ. ಬದಲಿಗೆ, “ನನಗೆ ತುಂಬಾ ಕಷ್ಟವಾಗುತ್ತಿದೆ, ಕುಟುಂಬದಲ್ಲಿ ಸಮಸ್ಯೆಗಳಿವೆ, ಈ ಕಷ್ಟಗಳಿಂದ ಹೊರಬರಲು ಶಕ್ತಿ ನೀಡು” ಎಂದು ಪ್ರಾರ್ಥಿಸುವುದು ಸರಿಯಾದ ವಿಧಾನ. ನಿತ್ಯ ಪೂಜೆ, ಪ್ರತಿನಿತ್ಯದ ಪ್ರಾರ್ಥನೆಗಳು, ನಾಮಸ್ಮರಣೆ, ಜಪ, ತಪ ಇವೆಲ್ಲವೂ ಕೂಡ ಅವಶ್ಯಕವೇ ಆದರೂ, ಸರ್ವಾಂತರ್ಯಾಮಿ, ಸರ್ವವ್ಯಾಪಿ, ಸರ್ವಶಕ್ತನಾದ ಭಗವಂತನನ್ನು ನೆನೆಯಲು ಈ ಎಲ್ಲ ಬಾಹ್ಯ ಆಚರಣೆಗಳಿಗಿಂತ ಮಾನಸಿಕ ಪೂಜೆಗೆ ಹೆಚ್ಚು ಪ್ರಾಶಸ್ತ್ಯವಿದೆ. ಯಾವುದೇ ವಸ್ತುಗಳ ಅಗತ್ಯವಿಲ್ಲದೆ, ಮನಸ್ಸಿನಲ್ಲೇ ಭಗವಂತನನ್ನು ಪ್ರಾರ್ಥಿಸಿದಾಗಲೂ ದಾರಿಗಳು ದೊರೆಯುತ್ತವೆ.

ಇದನ್ನೂ ಓದಿ: ಈ ವರ್ಷ ಯುಗಾದಿ ಹಬ್ಬ ಯಾವಾಗ ? ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?

ಪ್ರತಿಯೊಬ್ಬ ವ್ಯಕ್ತಿಯು ಜನನ ಮತ್ತು ಮರಣದ ಮಧ್ಯೆ ವಿಚಿತ್ರ ಸಂಕಷ್ಟಗಳನ್ನು ಎದುರಿಸುತ್ತಾನೆ. ಇವುಗಳು ಪೂರ್ವಜನ್ಮದ ಕರ್ಮಗಳ ಫಲವೂ ಆಗಿರಬಹುದು. ಸತ್ಯವೇನೆಂದರೆ, ಈ ಪೂಜೆ, ಜಪ, ತಪ ಮತ್ತು ನಿತ್ಯಾನುಷ್ಠಾನಗಳಿಂದ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಬಂದೇ ಬರುತ್ತದೆ. ಅಂದರೆ ಕಷ್ಟಗಳು ಪರಿಪೂರ್ಣವಾಗಿ ನಿವಾರಣೆಯಾಗುವುದಿಲ್ಲ, ಬದಲಿಗೆ ಅವುಗಳಿಗೆ ಸೂಕ್ತ ಮಾರ್ಗಗಳು ಸಿಗುತ್ತವೆ.

ಕಷ್ಟಗಳ ನಿವಾರಣೆಗೆ ಪೂಜೆಗಳು, ಮಾರ್ಗಗಳನ್ನು ಹುಡುಕಲು ನೆರವಾಗುವ ಒಂದು ಹಡಗು ಇದ್ದಂತೆ. ನಿರಂತರ ನಾಮಸ್ಮರಣೆಯನ್ನು ಎಂದಿಗೂ ಬಿಡಬಾರದು. ನಾವು ಕಷ್ಟವನ್ನು ಪಕ್ಕಕ್ಕಿಟ್ಟು ಭಗವಂತನ ಸ್ಮರಣೆ ಮಾಡಿದಾಗ, ಆ ಕಷ್ಟವೂ ಕರಗಿ ಹೋಗುತ್ತದೆ. ಭಗವಂತನ ಪೂಜೆ ಎಂಬುದು, ನಮಗೆ ನಾವೇ ಮಾಡಿಕೊಳ್ಳುವಂಥದ್ದಾಗಿದ್ದು, “ಯದ್ಭಾವಂ ತದ್ಭವತಿ” ಎಂಬಂತೆ, ನಿಮ್ಮ ಸರಳ ಮತ್ತು ಪರಿಶುದ್ಧ ಹೃದಯದ ಭಕ್ತಿಗೆ ಭಗವಂತ ಒಲಿಯುತ್ತಾನೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಜನರಿಗೆ ಗುಡ್​​ ನ್ಯೂಸ್​: ಇಂದು ಗಾಳಿಯ ಗುಣಮಟ್ಟ ಉತ್ತಮ, ಕಾರಣ ಏನು ಗೊತ್ತಾ?

ಬೆಂಗಳೂರು, ಮಾ.18: ಇಂದು ಬೆಂಗಳೂರಿನ ಜನರಿಗೆ ಸಂತೋಷದ ಸುದ್ದಿಯನ್ನು ಗಾಳಿ ಗುಣಮಟ್ಟ ನೀಡಿದೆ. ಪ್ರತಿದಿನ ಕಳಪೆ ಮಟ್ಟದ ವರದಿಯನ್ನು ನೋಡಿ ಇದೀಗ ಉತ್ತಮ ಮಟ್ಟದ ಗಾಳಿಯನ್ನು ಹೊಂದಿದೆ ಎಂಬ ವರದಿಯನ್ನು ನೀಡಲಾಗಿದೆ. ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಸಾಧಾರಣದಿಂದ ಉತ್ತಮ ಮಟ್ಟದಲ್ಲಿದೆ. ಬೇಸಿಗೆಯ ಬಿಸಿಲಿನ ನಡುವೆಯೂ ಕೆಲವು ಭಾಗಗಳಲ್ಲಿ ಕಂಡುಬಂದ ಹಗುರ ಮಳೆಯು ಗಾಳಿಯಲ್ಲಿನ ಧೂಳಿನ ಕಣಗಳನ್ನು ಕಡಿಮೆ ಮಾಡಲು ಸಹಾಯ ಮಾಡಿದೆ.

ಬೆಂಗಳೂರಿನಲ್ಲಿ ಇಂದು ಗಾಳಿಯ ಗುಣಮಟ್ಟವು ‘ಸಾಧಾರಣ’ ಮಟ್ಟದಲ್ಲಿದೆ. ವಾಹನ ದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಮಾಲಿನ್ಯ ಸ್ವಲ್ಪ ಹೆಚ್ಚಿರಬಹುದು. ಶ್ವಾಸಕೋಶದ ಸಮಸ್ಯೆ ಇರುವವರು ಮತ್ತು ಮಕ್ಕಳು ಹೊರಗಡೆ ಹೆಚ್ಚು ಸಮಯ ಕಳೆಯುವಾಗ ಜಾಗರೂಕರಾಗಿರುವುದು ಉತ್ತಮ ಎಂದು ಹೇಳಲಾಗಿದೆ. ವಯಸ್ಕರು ಮತ್ತು ಮಕ್ಕಳಿಗೆ ಇದು ಹೆಚ್ಚಿನ ಅಪಾಯಕಾರಿಯಲ್ಲದಿದ್ದರೂ, ಶ್ವಾಸಕೋಶದ ಕಾಯಿಲೆ ಇರುವವರು ದೀರ್ಘಕಾಲದ ಹೊರಾಂಗಣ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು.

ರಾಜ್ಯದ ಹಲವೆಡೆ ಇಂದು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇರುವುದರಿಂದ, ಮಳೆಯ ನಂತರ ಗಾಳಿಯಲ್ಲಿನ ಧೂಳಿನ ಕಣಗಳು (PM10) ಕಡಿಮೆಯಾಗಿ ಗಾಳಿಯ ಗುಣಮಟ್ಟ ಸುಧಾರಿಸುವ ನಿರೀಕ್ಷೆಯಿದೆ. ವಿಶೇಷವಾಗಿ ಉತ್ತರ ಕರ್ನಾಟಕ ಮತ್ತು ಮಲೆನಾಡು ಭಾಗಗಳಲ್ಲಿ ಮಳೆಯಿಂದಾಗಿ ವಾಯು ಮಾಲಿನ್ಯ ತಗ್ಗಲಿದೆ. ಸಂಸ್ಕೃತಿ ಮತ್ತು ಪರಂಪರೆಯ ನಗರಿ ಮೈಸೂರಿನಲ್ಲಿ ಇಂದು ಗಾಳಿಯ ಶುದ್ಧತೆ ತುಸು ಏರುಪೇರಾಗಿದೆ. ಮೈಸೂರಿನಲ್ಲಿ 103 – 110 ಗಾಳಿಯ ಮಟ್ಟವನ್ನು ಹೊಂದಿದೆ. ಉಸಿರಾಟದ ತೊಂದರೆ ಇರುವವರು ಅಥವಾ ಹಿರಿಯ ನಾಗರಿಕರು ದೀರ್ಘಕಾಲದವರೆಗೆ ಹೊರಗಡೆ ಸಂಚರಿಸುವಾಗ ಮಾಸ್ಕ್ ಧರಿಸುವುದು ಸೂಕ್ತ ಎಂದು ಹೇಳಲಾಗಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮೈಸೂರಿಗಿಂತ ಗಾಳಿಯ ಗುಣಮಟ್ಟ ಉತ್ತಮವಾಗಿದ್ದರೂ, ಮಧ್ಯಾಹ್ನದ ಬಿಸಿಲು ಮತ್ತು ಧೂಳಿನಿಂದಾಗಿ ಸೂಚ್ಯಂಕವು ಸಾಧಾರಣ ಮಟ್ಟದಲ್ಲಿದೆ. ಇಲ್ಲಿ ಗಾಳಿಯ ಗುಣಮಟ್ಟ 69 – 88 ವರೆಗೆ ಇದೆ. ಇಲ್ಲಿನ ಗಾಳಿಯು ಹೆಚ್ಚಿನ ಜನರಿಗೆ ಸುರಕ್ಷಿತವಾಗಿದೆ. ಆದರೂ ರಸ್ತೆ ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ಧೂಳಿನ ಪ್ರಮಾಣ ಹೆಚ್ಚಿರಬಹುದು. ಇಂದು ಹುಬ್ಬಳ್ಳಿಯಲ್ಲಿ ಆಕಾಶವು ತಿಳಿಯಾಗಿದ್ದು, ತಾಪಮಾನವು 33.5°C ವರೆಗೆ ತಲುಪುವ ಸಾಧ್ಯತೆಯಿದೆ.

ಇದನ್ನೂ ಓದಿ: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ; ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಸ್ಥಿತಿ ಏನು?

ಇತರ ಪ್ರಮುಖ ನಗರಗಳ AQI ವಿವರ

ನಗರ / ಜಿಲ್ಲೆ AQI ಮಟ್ಟ ವರ್ಗ (Category)
ಮೈಸೂರು 106 – 110 ಕಳಪೆ (Poor / Moderate)
ಮಂಗಳೂರು 45 – 52 ಉತ್ತಮ (Good)
ಹುಬ್ಬಳ್ಳಿ-ಧಾರವಾಡ 82 – 94 ಸಾಧಾರಣ (Moderate)
ಯಾದಗಿರಿ 107 ಕಳಪೆ (Poor)
ದಾವಣಗೆರೆ 104 ಕಳಪೆ (Poor)
ಚಾಮರಾಜನಗರ 25 ಉತ್ತಮ (Good)

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು: ಯುಗಾದಿ ಹಬ್ಬಕ್ಕೆ ಖರೀದಿ ಭರಾಟೆ ಜೋರು, ಹೂವು-ಹಣ್ಣಿನ ದರ ಏರಿಕೆ

ಬೆಂಗಳೂರು, ಮಾರ್ಚ್ 18: ಮಾರ್ಚ್ 19 ರಂದು ನಾಡಿನಾದ್ಯಂತ ಹೊಸ ವರ್ಷದ ಸಂಭ್ರಮ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನ (Bangalore) ಹೃದಯಭಾಗವಾದ ಕೆಆರ್ ಮಾರುಕಟ್ಟೆಯಲ್ಲಿ (KR Market) ಬುಧವಾರ ಬೆಳ್ಳಂಬೆಳಿಗ್ಗೆಯಿಂದಲೇ ಖರೀದಿ ಭರಾಟೆ ಜೋರಾಗಿದೆ. ಹಬ್ಬಕ್ಕೆ ಬೇಕಾದ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳನ್ನು ಕೊಳ್ಳಲು ಜನ ಸಾಗರವೇ ಹರಿದುಬಂದಿದೆ.

ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂವು ಮತ್ತು ಹಣ್ಣುಗಳ ದರ ಕೊಂಚ ಏರಿಕೆ ಕಂಡಿದೆ. ವಿಶೇಷವಾಗಿ ಮಲ್ಲಿಗೆ ಹೂವು ಸಾಮಾನ್ಯ ದಿನಗಳಿಗಿಂತ ದುಬಾರಿಯಾಗಿದ್ದು, ಕೆಜಿಗೆ 1,000 ರೂಪಾಯಿ ತನಕ ಮಾರಾಟವಾಗುತ್ತಿದೆ. ಹಬ್ಬದ ಪ್ರಮುಖ ಆಕರ್ಷಣೆಯಾದ ಬೇವು ಮತ್ತು ಮಾವಿನ ಸೊಪ್ಪಿಗೂ ಭಾರಿ ಬೇಡಿಕೆ ಸೃಷ್ಟಿಯಾಗಿದೆ.

ಹೂವು ದರ ವಿವರ (ಕೆಜಿಗೆ ರೂ.ಗಳಲ್ಲಿ)

  • ಮಲ್ಲಿಗೆ – 1,000
  • ಮಲ್ಲಿಗೆ ಹೂವಿನ ಹಾರ – 100
  • ಸೇವಂತಿಗೆ – 200-250
  • ಗುಲಾಬಿ – 250
  • ಚೆಂಡು ಹೂ – 40-50
  • ಒಂದು ಕಟ್ಟು ಬೇವಿನ ಸೊಪ್ಪು – 20
  • ಒಂದು ಕಟ್ಟು ಮಾವಿನ ಸೊಪ್ಪು- 25

ಹಣ್ಣುಗಳ ದರ ವಿವರ (ಕೆಜಿಗೆ ರೂ.ಗಳಲ್ಲಿ)

  • ಖರಬೂಜ – 100
  • ಬೇಲದ ಹಣ್ಣು – 50
  • ದ್ರಾಕ್ಷಿ- 120
  • ದಾಳಿಂಬೆ – 220

ಇದನ್ನೂ ಓದಿ: ಯುಗಾದಿ ಹಬ್ಬದಂದು ಬೇವು-ಬೆಲ್ಲ ಹಂಚುವುದರ ಹಿಂದಿನ ಆಧ್ಯಾತ್ಮಿಕ, ವೈಜ್ಞಾನಿಕ ಮಹತ್ವವೇನು?

ಬೆಲೆ ಏರಿಕೆಯ ನಡುವೆಯೂ ಜನರು ಹಬ್ಬದ ಸಂಭ್ರಮಕ್ಕೆ ಖರೀದಿಗಾಗಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಾರೆ. ಕೆಆರ್ ಮಾರ್ಕೆಟ್ ಮಾತ್ರವಲ್ಲದೆ ಮಲ್ಲೇಶ್ವರಂ, ಗಾಂಧಿ ಬಜಾರ್ ಹಾಗೂ ಯಶವಂತಪುರ ಮಾರುಕಟ್ಟೆಗಳಲ್ಲೂ ಯುಗಾದಿ ಹಬ್ಬದ ಖರೀದಿ ಸಡಗರ ಕಂಡುಬರುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಜನಿಕಾಂತ್ ರಾಜಕೀಯಕ್ಕೆ ಬರದಿರಲು ಆ ವ್ಯಕ್ತಿಯ ಒತ್ತಡ ಕಾರಣ? ಮೌನ ಮುರಿದ ಸೂಪರ್​ ಸ್ಟಾರ್

ತಮಿಳುನಾಡಿನಲ್ಲಿ ಚುನಾವಣೆ ಕಾವು ಜೋರಾಗಿದೆ. ಎಲ್ಲಾ ಪಕ್ಷದವರು ಪ್ರಚಾರಕ್ಕೆ ಇಳಿದಿದ್ದಾರೆ. ಈಗ ಚುನಾವಣೆ ಪ್ರಚಾರದ ವೇಳೆ ದಳಪತಿ ವಿಜಯ್ ಅವರ ಟಿವಿಕೆ ಪಕ್ಷದ ನಾಯಕ ಆಧವ್ ಅರ್ಜುನ ಗಂಭೀರ ಆರೋಪ ಮಾಡಿದ್ದಾರೆ. ಚುನಾವಣೆಗೆ ಬರದಿರಲು ರಜನಿಗೆ ಒತ್ತಡ ಇತ್ತು ಎಂದಿದ್ದಾರೆ. ಇದು ಚರ್ಚೆಯನ್ನು ಹುಟ್ಟುಹಾಕಿದೆ. ಅಲ್ಲದೆ, ವಿಜಯ್​​ಗೆ ಈ ರೀತಿಯ ಬೆದರಿಕೆ ಬಂದರೂ ಅವರು ಎದುರಿಸಿ ನಿಲ್ಲುತ್ತಿದ್ದಾರೆ ಎಂದಿದ್ದಾರೆ. ಈ ಹೇಳಿಕೆಗೆ ಈಗ ರಜನಿಕಾಂತ್ (Rajinikanth) ಅವರೇ ಉತ್ತರ ನೀಡಿದ್ದಾರೆ

ನಟ ರಜನಿಕಾಂತ್ ರಾಜಕೀಯ ಪ್ರವೇಶಿಸಲು ಪ್ರಯತ್ನಿಸಿದ್ದರು.ಇದಕ್ಕಾಗಿ ಎಲ್ಲಾ ಸಿದ್ಧತೆ ನಡೆಯಿತು. ಆದರೆ, ಆ ಸಂದರ್ಭದ ಅನಾರೋಗ್ಯ ಕಾಡಿತು. ಇದನ್ನೇ ಮುಂದಿಟ್ಟುಕೊಂಡು ಅವರು ರಾಕೀಯದಿಂದ ಹಿಂದೆ ಸರಿದರು. ಆದರೆ, ಇದಕ್ಕೆ ಬೇರೆಯದೇ ಕಾರಣ ಇದೆ ಎಂದು ಆಧವ್ ಅರ್ಜುನ್ ಹೇಳಿದ್ದಾರೆ. ‘ರಜನಿಕಾಂತ್ ಚುನಾವಣೆಗೆಗೆ ಬರಲು ಪ್ರಯತ್ನಿಸಿದಾಗ ಡಿಎಂಕೆ ಕುಟುಂಬ ಅವರಿಗೆ ಬೆದರಿಕೆ ಹಾಕಿದೆ. ರಜನಿಕಾಂತ್ ಅವರನ್ನು ಟೀಕಿಸುತ್ತಿಲ್ಲ ಆದರೆ ವಿಜಯ್ ಅವರಿಗೆ ಅಂತಹ ಒತ್ತಡವನ್ನು ತಡೆದುಕೊಳ್ಳುವ ಧೈರ್ಯವಿದೆ’ ಎಂದು ಅರ್ಜುನ ವಿವರಿಸಿದ್ದರು.

ಈ ವಿಷಯಕ್ಕೆ ರಜನಿಕಾಂತ್ ಉತ್ತರಿಸಿದ್ದಾರೆ. ಟಿವಿಕೆ ನಾಯಕನ ಹೇಳಿಕೆಯನ್ನು ಟೀಕಿಸಿದ ಎಲ್ಲರಿಗೂ ರಜನಿಕಾಂತ್ ಧನ್ಯವಾದ ಹೇಳಿದ್ದಾರೆ. ‘ಸಮಯ ಮಾತನಾಡುವುದಿಲ್ಲ. ಆದರೆ ಅದು ಕಾದು ನಂತರ ಉತ್ತರ ನೀಡುತ್ತದೆ’ ಎಂದು ರಜನಿಕಾಂತ್ ಹೇಳಿದ್ದಾರೆ.

ಇದನ್ನೂ ಓದಿ:  ಆಪ್ತ ಗೆಳೆಯನಿಗೂ ಇಲ್ಲ ರಿಯಾಯಿತಿ, ಕಮಲ್ ಜೊತೆ ಸಿನಿಮಾಕ್ಕೆ ರಜನಿಕಾಂತ್ ಪಡೆದ ಸಂಭಾವನೆ ಎಷ್ಟು?

‘ಅವರ ಅವಹೇಳನಕಾರಿ ಹೇಳಿಕೆಗಳನ್ನು ಖಂಡಿಸಿ ನನ್ನ ಪರವಾಗಿ ಧ್ವನಿ ಎತ್ತಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ, ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ, ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್, ಕೇಂದ್ರ ಸಚಿವ ಎಲ್. ಮುರುಗನ್, ತಮಿಳುನಾಡು ಸಚಿವ ರಘುಪತಿ, ನನ್ನ ಗೆಳೆಯ ಅಣ್ಣಮಲೈ ಸೇರಿ ಎಲ್ಲರಿಗೂ ಧನ್ಯವಾದ’ ಎಂದು ಅವರು ಹೇಳಿದ್ದಾರೆ.

ಅರ್ಜುನ್ ಹೇಳಿಕೆ ಏನು?

ಡಿಎಂಕೆ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ವಿಫಲ ಆಗುತ್ತಿದೆ ಎಂದು ಆರೋಪಿಸಲಾಗಿದೆ. ಪ್ರತಿಭಟನೆಯಲ್ಲಿ ಮಾತನಾಡಿದ ಅರ್ಜುನ, ‘ಎಂಜಿಆರ್ ನಂತರ, ರಾಜಕೀಯ ಪ್ರವೇಶಿಸಲು ಉದ್ದೇಶಿಸಿದ್ದ ಅತ್ಯಂತ ಜನಪ್ರಿಯ ನಟರಲ್ಲಿ ರಜನಿಕಾಂತ್ ಒಬ್ಬರು . ರಜನಿಕಾಂತ್ ತಮಿಳುನಾಡು ರಾಜಕೀಯ ಪ್ರವೇಶಿಸಲು ಮತ್ತು ವ್ಯವಸ್ಥೆಯನ್ನು ಬದಲಾಯಿಸಲು ಬಯಸಿದ್ದರು. ಆದಾಗ್ಯೂ, ಡಿಎಂಕೆ ಕುಟುಂಬವು ರಜನಿಕಾಂತ್ ಅವರಿಗೆ ಹಲವಾರು ಬೆದರಿಕೆಗಳನ್ನು ಹಾಕಿತು. ಅವರು ರಾಜಕೀಯ ಪ್ರವೇಶಿಸದಂತೆ ತಡೆದಿತು. ಈಗ ಅವರು ಸಿನಿಮಾ ಮಾಡಿಕೊಂಡಿದ್ದಾರೆ’ ಎಂದಿದ್ದರು ಅರ್ಜುನ. ಈ ಹೇಳಿಕೆಯನ್ನು ಅನೇಕರು ಖಂಡಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link