All posts by nagaraj11081993

ಬೆಂಗಳೂರಲ್ಲಿ ‘ಉಸ್ತಾದ್ ಭಗತ್ ಸಿಂಗ್’ ಅಡ್ವಾನ್ಸ್ ಬುಕಿಂಗ್ ಪ್ರಾರಂಭ: ಟಿಕೆಟ್ ಬೆಲೆ ಎಷ್ಟು?

ಬೆಂಗಳೂರಲ್ಲಿ ‘ಉಸ್ತಾದ್ ಭಗತ್ ಸಿಂಗ್’ ಅಡ್ವಾನ್ಸ್ ಬುಕಿಂಗ್ ಪ್ರಾರಂಭ: ಟಿಕೆಟ್ ಬೆಲೆ ಎಷ್ಟು?

ಪವನ್ ಕಲ್ಯಾಣ್ (Pawan Kalyan) ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಬಿಡುಗಡೆ ಮಾರ್ಚ್ 19ರಂದು ಆಗಲಿದೆ. ಸಾಮಾನ್ಯವಾಗಿ ಸಿನಿಮಾ ಬಿಡುಗಡೆಯ ಹಿಂದಿನ ದಿನ ಪ್ರೀಮಿಯರ್ ಶೋಗಳನ್ನು ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಮಾರ್ಚ್ 18ರಂದು ‘ಧುರಂಧರ್ 2’ ಪೇಯ್ಡ್ ಪ್ರೀಮಿಯರ್ ಶೋ ಆಯೋಜನೆ ಮಾಡಿರುವ ಕಾರಣ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಸ್ಪೆಷನ್ ಶೋಗಳನ್ನು ಮಾತ್ರವೇ ಪ್ರದರ್ಶಿಸುತ್ತಿದೆ. ಬಿಡುಗಡೆಯ ದಿನ ಅಂದರೆ ಮಾರ್ಚ್ 19ರಂದು ಬೆಳಿಗಿನ ಜಾವ ಸಿನಿಮಾದ ಸ್ಪೆಷಲ್ ಶೋಗಳನ್ನು ಆಯೋಜಿಸಲಾಗಿದ್ದು, ಬೆಂಗಳೂರಿನಲ್ಲಿ ಸಹ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದೆ.

ಪ್ರತಿ ಬಾರಿ ಪವನ್ ಸಿನಿಮಾಕ್ಕೆ ಭಾರಿ ಸಂಖ್ಯೆಯ ಶೋಗಳು ಬೆಂಗಳೂರಿನಲ್ಲಿ ಸಿಗುತ್ತಿದ್ದವು, ಆದರೆ ಈ ಬಾರಿ ಹಾಗಾಗಿಲ್ಲ. ‘ಧುರಂಧರ್ 2’ ಸಿನಿಮಾದ ಕಾರಣಕ್ಕಾಗಿ ಸಿನಿಮಾಕ್ಕೆ ಹೆಚ್ಚಿನ ಶೋಗಳು ಸಿಕ್ಕಿಲ್ಲ ಹಾಗೆಂದು ತೀರ ಕಡಿಮೆ ಶೋಗಳು ಮಾತ್ರವೇ ದೊರೆತಿವೆ ಎಂದೂ ಸಹ ಅಲ್ಲ. ಸಾಧಾರಣ ಸಂಖ್ಯೆಯ ಶೋಗಳು ಸಿಕ್ಕಿದ್ದು, ಹಲವಾರು ಚಿತ್ರಮಂದಿರಗಳಲ್ಲಿ ಬೆಳಗಿನ ಜಾವ ಸ್ಪೆಷಲ್ ಶೋಗಳನ್ನು ಸಹ ಆಯೋಜನೆ ಮಾಡಿಕೊಳ್ಳಲಾಗಿದೆ.

ಬೆಂಗಳೂರಿನಲ್ಲಿ ಬೆಳಿಗಿನ ಜಾವ 6:30 ಇಂದ ಶೋಗಳು ಆರಂಭವಾಗುತ್ತಿವೆ. ಕೆಲವು ಚಿತ್ರಮಂದಿರಗಳಲ್ಲಿ 7 ಗಂಟೆಗೆ ಶೋ ಪ್ರದರ್ಶಿಸಲಾಗುತ್ತಿದೆ. ವಿಶೇಷ ಶೋಗಳಿಗೆ ಬೆಂಗಳೂರಿನಲ್ಲಿ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ. ಆದರೆ ತೀರ ದುಬಾರಿ ಬೆಲೆಗೆ ಟಿಕೆಟ್ ಮಾರಾಟ ಮಾಡಲಾಗುತ್ತಿಲ್ಲ. ‘ಧುರಂಧರ್ 2’ ಸಿನಿಮಾದ ಟಿಕೆಟ್​​ ಬೆಲೆಗೆ ಹೋಲಿಸಿದರೆ ‘ಉಸ್ತಾದ್ ಭಗತ್ ಸಿಂಗ್’ನ ವಿಶೇಷ ಶೋನ ಟಿಕೆಟ್ ಬೆಲೆಗಳು ಕಡಿಮೆಯೇ ಇವೆ. ವಿಶೇಷ ಶೋಗೆ ಕೆಲವೆಡೆ 400 ಹಾಗೂ 500 ರೂಪಾಯಿಗಳಿವೆ. ಅದೇ ಚಿತ್ರಮಂದಿರದ 10 ಗಂಟೆ ಶೋಗೆ ಟಿಕೆಟ್ ಬೆಲೆ 350 ಅಥವಾ 250 ರೂಪಾಯಿಗಳಿವೆ. ಕೆಲವೆಡೆ ಇನ್ನೂ ಕಡಿಮೆ ಇವೆ.

ಇದನ್ನೂ ಓದಿ:‘ಕಾಲರ್ ಎತ್ತರ’ ಎಂದು ಕುಣಿದ ಪವನ್ ಕಲ್ಯಾಣ್: ಸ್ಟೆಪ್ಪು ನೋಡಿ

ಈ ಬಾರಿ ಪವನ್ ಕಲ್ಯಾಣ್ ಸಿನಿಮಾಕ್ಕೆ ಬಹಳ ಕಡಿಮೆ ಶೋಗಳು ದೊರೆತಿವೆ. ಮಂಗಳವಾರ ಬುಕ್​​ಮೈಶೋನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಕ್ಕೆ 150ಕ್ಕೂ ಕಡಿಮೆ ಶೋಗಳು ದೊರೆತಿವೆ. ಸ್ಕ್ರೀನ್​​ಗಳ ಸಂಖ್ಯೆ 35 ದಾಟಿಲ್ಲ. ಈ ಹಿಂದಿನ ‘ಓಜಿ’ ಸಿನಿಮಾಕ್ಕೆ ಬೆಂಗಳೂರಿನಲ್ಲಿ ಭಾರಿ ಸಂಖ್ಯೆಯ ಸ್ಕ್ರೀನ್​​ಗಳು ಮತ್ತು ಶೋಗಳು ಲಭ್ಯವಾಗಿದ್ದವು. ಆದರೆ ಈ ಬಾರಿ ‘ಧುರಂಧರ್ 2’ ಹೊಡೆತಕ್ಕೆ ‘ಉಸ್ತಾದ್ ಭಗತ್ ಸಿಂಗ್’ ಭಾರಿ ಪೆಟ್ಟುಣ್ಣುತ್ತಿದೆ.

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾವನ್ನು ಪವನ್ ಕಲ್ಯಾಣ್ ಅವರ ಆಪ್ತ ಹರೀಶ್ ಶಂಕರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಶ್ರೀಲೀಲಾ ಜೊತೆಗೆ ರಾಶಿ ಖನ್ನಾ ಸಹ ಇದ್ದಾರೆ. ಈ ಸಿನಿಮಾನಲ್ಲಿ ವಿಂಟೇಜ್ ಪವನ್ ಕಲ್ಯಾಣ್ ಅವರನ್ನು ಕಾಣುತ್ತೀರಿ ಎಂದು ನಿರ್ದೇಶಕ ಹರೀಶ್ ಭರವಸೆ ಕೊಟ್ಟಿದ್ದಾರೆ. ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್ ಅಮೆರಿಕ ಯುದ್ಧ ನಿಲ್ಲಿಸಲು ಭಾರತ ಮಧ್ಯಸ್ಥಿಕೆ ವಹಿಸಲಿ: ಫಿನ್​ಲ್ಯಾಂಡ್

ನವದೆಹಲಿ, ಮಾರ್ಚ್ 17: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಯತ್ನಿಸುವಂತೆ ಭಾರತಕ್ಕೆ ಫಿನ್​ಲ್ಯಾಂಡ್ ಕರೆ ನೀಡಿದೆ. ಅಮೆರಿಕ ಮತ್ತು ಇರಾನ್ ಮಧ್ಯೆ ಶಾಂತಿ ಏರ್ಪಡಿಸಿ, ಬಿಕ್ಕಟ್ಟು ಶಮನಗೊಳಿಸಲು ಭಾರತ ಮಧ್ಯಸ್ಥಿಕೆ ವಹಿಸಲಿ ಎಂದು ಫಿನ್​ಲ್ಯಾಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ (Alexander Stubb) ಸಲಹೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಅವರು, ಯುದ್ಧ ನಿಲುಗಡೆಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಕರೆ ನೀಡಿರುವ ಸಂಗತಿಯನ್ನು ಉಲ್ಲೇಖಿಸಿದ್ದಾರೆ.

‘ನಮಗೆ ಈಗ ಯುದ್ಧವಿರಾಮ ಬೇಕಿದೆ. ಇದರಲ್ಲಿ ಭಾರತ ಭಾಗಿಯಾಗಬಹುದಾ ಎನ್ನುವ ಕುತೂಹಲ ಇದೆ. ಬಿಕ್ಕಟ್ಟು ಶಮನಗೊಳಿಸಲು ಯುದ್ಧವಿರಾಮ ಏರ್ಪಡುವಂತೆ ಜೈಶಂಕರ್ ಕರೆ ಕೊಟ್ಟಿರುವುದನ್ನು ನಾವು ನೋಡಿದ್ದೇವೆ’ ಎಂದು ಅಲೆಕ್ಸಾಂಡರ್ ಸ್ಟಬ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಶೆಲ್ ಪೆಟ್ರೋಲ್ ಬೆಲೆ 10 ದಿನದಲ್ಲಿ 4.50 ರೂ ಏರಿಕೆ; ಇಲ್ಲಿದೆ ದರಪಟ್ಟಿ

ಭಾರತ ಹೆಚ್ಚಿನ ದೇಶಗಳೊಂದಿಗೆ ಉತ್ತಮ ಸಂಬಂಧ ಇರಿಸಿಕೊಂಡಿದೆ. ಅಮೆರಿಕ, ಇರಾನ್ ಮತ್ತು ಇಸ್ರೇಲ್, ಈ ಮೂರೂ ದೇಶಗಳೊಂದಿಗೆ ಭಾರತದ ಉತ್ತಮ ಸಂಬಂಧ ಇದೆ. ಯಾರೊಂದಿಗೆ ಬೇಕಾದರೂ ಮಾತುಕತೆ ನಡೆಸುವ ಸ್ಥಿತಿಯಲ್ಲಿ ಭಾರತ ಇದೆ. ಇರಾನ್ ಜೊತೆ ಎಸ್ ಜೈಶಂಕರ್ ಮತ್ತು ನರೇಂದ್ರ ಮೋದಿ ಸಂಪರ್ಕದಲ್ಲಿದ್ದಾರೆ.

ಇರಾನ್ ವಿದೇಶಾಂಗ ಸಚಿವ ಸಯದ್ ಅಬ್ಬಾಸ್ ಅರಾಗ್ಚಿ ಜೊತೆ ಜೈಶಂಕರ್ ದೂರವಾಣಿಯಲ್ಲಿ ಮಾತನಾಡಿ ವಿಚಾರ ವಿನಿಮಯ ಮಾಡಿದ್ದಾರೆ. ಹಾಗೆಯೇ, ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಜೊತೆ ಮಾತನಾಡಿ, ಪರಿಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪಿಎನ್​ಜಿ ಗ್ಯಾಸ್​ಗೂ ಎಲ್​ಪಿಜಿಗೂ ಏನು ವ್ಯತ್ಯಾಸ? ನೀವು ಪಿಎನ್​ಜಿ ಕನೆಕ್ಷನ್ ಪಡೆಯುವುದು ಹೇಗೆ?

ಅಮೆರಿಕ ಮತ್ತು ಇಸ್ರೇಲ್​ನ ಆಕ್ರಮಣಕಾರಿ ವರ್ತನೆಯ ಫಲಶ್ರುತಿಯಾಗಿದೆ ಈ ಯುದ್ಧದ ಸ್ಥಿತಿ. ಇರಾನ್ ಕೇವಲ ತನ್ನ ಆತ್ಮರಕ್ಷಣೆ ಮಾಡಿಕೊಳ್ಳುತ್ತಿದೆ ಎಂದು ಇರಾನ್ ವಿದೇಶಾಂಗ ಸಚಿವರು ಭಾರತಕ್ಕೆ ತಿಳಿಸಿದ್ದಾರೆ. ಮೋದಿ ಮತ್ತು ಜೈಶಂಕರ್ ಅವರ ಮಾತುಕತೆಯ ಪರಿಣಾಮವಾಗಿ ಹಾರ್ಮುಜ್ ಜಲಸಂಧಿ ಮೂಲಕ ಕೆಲ ಭಾರತೀಯ ಗ್ಯಾಸ್ ಟ್ಯಾಂಕರ್​ಗಳಿಗೆ ಸಾಗಲು ಇರಾನ್ ಅನುಮತಿಸಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪುನೀತ್ ಸಮಾಧಿಗೆ ಪೂಜೆ ಮಾಡಿದ ಕುಟುಂಬಸ್ಥರು; ಅಪ್ಪುನ ನೆನಪಿಸಿಕೊಂಡ ಕುಟುಂಬ

ಪುನೀತ್ ರಾಜ್​​​ಕುಮಾರ್ ಅವರು ಇಂದು ನಮ್ಮ ಜೊತೆ ಇಲ್ಲ. ಆದರೆ, ಅವರ ಜನ್ಮದಿನವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಇದೇ ವೇಳೆ ಕುಟುಂಬದವರು ಪುನೀತ್ ಸ್ಮಾರಕದ ಬಳಿ ತೆರಳಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಈ ಮೂಲಕ ಅಪ್ಪುನ ನೆನಪಿಸಿಕೊಳ್ಳಲಾಗಿದೆ. ಈ ವಿಡಿಯೋ ವೈರಲ್ ಆಗಿದೆ. ಫ್ಯಾನ್ಸ್ ಈ ದೃಶ್ಯವನ್ನು ನೋಡಿ ಭಾವುಕರಾಗಿದ್ದಾರೆ. ಅಪ್ಪು ಇಂದು ನಮ್ಮ ಜೊತೆ ಇರಬೇಕಿತ್ತು ಎಂಬ ಅಭಿಪ್ರಾಯ ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Hindu Traditions: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಮುಯ್ಯಿ ನೀಡುವಾಗ ಸಾಮಾನ್ಯವಾಗಿ ಕೊಡುವ ದುಡ್ಡಿಗೆ ಒಂದು ರೂಪಾಯಿಯನ್ನು ಸೇರಿಸಿ ನೀಡುವ ಪದ್ಧತಿ ಇದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಹಿಂದಿನ ಕಾಲದಲ್ಲಿ ಮುಯ್ಯಿ ಪುಸ್ತಕಗಳನ್ನು ನಿರ್ವಹಿಸುವ ಪದ್ಧತಿಯಿತ್ತು. ಕೆಲವು ವಿವಾಹಗಳಲ್ಲಿ ಮುಯ್ಯಿ ಬರೆಯಲುಂದೇ ವ್ಯಕ್ತಿಗಳಿರುತ್ತಿದ್ದರು. ಈ ಪುಸ್ತಕಗಳನ್ನು ವಂಶಪಾರಂಪರ್ಯವಾಗಿ ಸಂರಕ್ಷಿಸಿ, ಸಂಬಂಧಗಳ ಇತಿಹಾಸ ಮತ್ತು ಸಹಕಾರದ ಸ್ಮರಣೆಯಾಗಿ ಬಳಸಲಾಗುತ್ತಿತ್ತು.

ಗುರೂಜಿಯವರು ಹೇಳುವಂತೆ, ಮುಯ್ಯಿ ನೀಡುವಾಗ ಸಾಮಾನ್ಯವಾಗಿ ಒಂದು ರೂಪಾಯಿಯನ್ನು ಸೇರಿಸಿ (ಉದಾಹರಣೆಗೆ 101, 501, 1001) ನೀಡುವ ಪದ್ಧತಿ ಇದೆ. ಇದಕ್ಕೆ ಒಂದು ವಿಶಿಷ್ಟ ಅರ್ಥವಿದೆ. ಸೊನ್ನೆಯು ಅಂತ್ಯದ ಸಂಕೇತವಲ್ಲ, ಅದು ಪರಿಪೂರ್ಣತೆ ಅಥವಾ ಬೆಳವಣಿಗೆಯ ಕೊರತೆಯನ್ನು ಸೂಚಿಸಬಹುದು ಎಂಬ ಭಾವನೆ ಇದೆ. ಆದರೆ “ಒಂದು” ಪ್ರಾರಂಭ, ಅಭಿವೃದ್ಧಿ, ಸೂರ್ಯನ ಸಂಕೇತವಾಗಿದೆ. “ನೀವು ನೂರು ಮುಗಿಸಿ ಒಂದಕ್ಕೆ ಹೋಗುತ್ತಿದ್ದೀರಿ, ನಿಮ್ಮ ಜೀವನದಲ್ಲಿ ಶುಭವಾಗಲಿ, ಮುನ್ನಡೆಯಿರಿ” ಎಂಬ ಆಶಯವನ್ನು ಈ ಒಂದು ರೂಪಾಯಿ ಸೂಚಿಸುತ್ತದೆ. ಇದು ಶುಭ ಹಾರೈಕೆಯ ಒಂದು ಸಂಕೇತವಾಗಿದೆ.

ಇದನ್ನೂ ಓದಿ: ಈ ವರ್ಷ ಯುಗಾದಿ ಹಬ್ಬ ಯಾವಾಗ ? ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?

ಆದ್ದರಿಂದ ‘ಸೊನ್ನೆ’ ಅಪೂರ್ಣತೆಯನ್ನು ಸೂಚಿಸುತ್ತದೆ. ಈ ಒಂದು ರೂಪಾಯಿ ನಿಮ್ಮ ಜೀವನದಲ್ಲಿ ಶುಭವಾಗಲಿ, ಮುನ್ನಡೆಯಿರಿ ಎಂಬ ಆಶಯವನ್ನು ಬಿಂಬಿಸುತ್ತದೆ. ಇದು ಸಂಪ್ರದಾಯದ ಆರ್ಥಿಕ ಸಹಕಾರ ಮತ್ತು ಶುಭ ಹಾರೈಕೆಯ ಸಂಕೇತವಾಗಿದೆ. ಹೀಗೆ, ಮುಯ್ಯಿ ಪದ್ಧತಿಯು ನಮ್ಮ ಸಂಪ್ರದಾಯದಲ್ಲಿ ಆರ್ಥಿಕ ಸಹಕಾರ, ಸಂಬಂಧಗಳ ಬಲವರ್ಧನೆ ಮತ್ತು ಶುಭ ಹಾರೈಕೆಗಳ ಆಳವಾದ ಅರ್ಥವನ್ನು ಒಳಗೊಂಡಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಸರ್ಕಾರದಿಂದಲೇ ಸಿಗಲಿದೆ ಉಚಿತ ನೀಟ್ ಕೋಚಿಂಗ್!

ಬೆಂಗಳೂರು, ಮಾರ್ಚ್ 17: ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಹಳ್ಳಿಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ನೀಟ್ (NEET) ತರಬೇತಿ ನೀಡಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ (Dr Sharanaprakash R Patil) ವಿಧಾನ ಪರಿಷತ್ತಿನಲ್ಲಿ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್‌ನ ಪ್ರಶ್ನೋತ್ತರ ಅವಧಿಯಲ್ಲಿ ಸೋಮವಾರ ಕಾಂಗ್ರೆಸ್ ಸದಸ್ಯ ಐವನ್ ಡಿಸೋಜಾ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ನೀಟ್ ಪದ್ಧತಿಯು ಗ್ರಾಮೀಣ ವಿದ್ಯಾರ್ಥಿಗಳನ್ನು ವೈದ್ಯಕೀಯ ಶಿಕ್ಷಣದಿಂದ ವಂಚಿಸುತ್ತಿದೆ. ಕೇವಲ 3 ಲಕ್ಷ ರೂಪಾಯಿ ಸಹಾಯಧನದಿಂದ ಬಡ ವಿದ್ಯಾರ್ಥಿಗಳು ಕೋಚಿಂಗ್ ಪಡೆಯಲು ಸಾಧ್ಯವೇ ಎಂದು ಐವನ್ ಡಿಸೋಜಾ ಆತಂಕ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಸ್ಪಷ್ಟನೆ ನೀಡಿದ ಸಚಿವ ಪಾಟೀಲ್, ನೀಟ್ ವ್ಯವಸ್ಥೆಯಿಂದ ರಾಜ್ಯದ ವೈದ್ಯಕೀಯ ಸೀಟುಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ನಾವು ನೀಟ್ ಪದ್ಧತಿಯನ್ನು ರದ್ದುಗೊಳಿಸಲು ನಿರ್ಧರಿಸಿದ್ದೆವು. ಆದರೆ ಸುಪ್ರೀಂ ಕೋರ್ಟ್ ಈ ಪದ್ಧತಿಯ ಪರವಾಗಿ ತೀರ್ಪು ನೀಡಿದೆ. ಆದ್ದರಿಂದ, ರಾಜ್ಯದ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳು ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರವು ಹಂತ ಹಂತವಾಗಿ ಪರಿಣಾಮಕಾರಿ ಕೋಚಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಿದೆ ಎಂದು ಭರವಸೆ ನೀಡಿದರು.

ವೈದ್ಯಕೀಯ ಶಿಕ್ಷಣ ಪಡೆಯಲು ನೀಟ್ ಪರೀಕ್ಷೆ ಕಡ್ಡಾಯವಾದಾಗಿನಿಂದ, ಕರ್ನಾಟಕದ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದ ಸವಾಲು ಎದುರಾಗಿದೆ. ನಗರ ಪ್ರದೇಶದ ವಿದ್ಯಾರ್ಥಿಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಖಾಸಗಿ ತರಬೇತಿ ಕೇಂದ್ರಗಳಲ್ಲಿ ಕೋಚಿಂಗ್ ಪಡೆಯುತ್ತಿದ್ದರೆ, ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳು ಸರಿಯಾದ ಮಾರ್ಗದರ್ಶನವಿಲ್ಲದೆ ವೈದ್ಯಕೀಯ ಸೀಟು ಪಡೆಯಲು ಪರದಾಡುತ್ತಿದ್ದಾರೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರವು ನೀಟ್ ಪದ್ಧತಿಯನ್ನು ವಿರೋಧಿಸಿ ರದ್ದುಗೊಳಿಸಲು ಈ ಹಿಂದೆ ಚಿಂತನೆ ನಡೆಸಿತ್ತು. ಆದರೆ, ನೀಟ್ ಪರೀಕ್ಷೆಯ ಬಗ್ಗೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿರುವ ಹಿನ್ನೆಲೆಯಲ್ಲಿ, ಈಗ ಪರೀಕ್ಷೆಯನ್ನು ಎದುರಿಸುವುದೊಂದೇ ವಿದ್ಯಾರ್ಥಿಗಳ ಮುಂದಿರುವ ದಾರಿಯಾಗಿದೆ.

ಇದನ್ನೂ ಓದಿ: ವೈದ್ಯಕೀಯ ಆಕಾಂಕ್ಷಿಗಳಿಗೆ ಗುಡ್​ ನ್ಯೂಸ್​​; 11,000ಕ್ಕೂ ಹೆಚ್ಚು MBBS ಸೀಟುಗಳ ಭರ್ಜರಿ ಹೆಚ್ಚಳ!

ಹೀಗಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ನೆರವಾಗುವ ದೃಷ್ಟಿಯಿಂದ ಕರ್ನಾಟಕ ಸರ್ಕಾರವು ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿಯೇ ವಿಶೇಷ ತರಬೇತಿ ನೀಡುವುದು ಮತ್ತು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಗಳನ್ನು ರೂಪಿಸುತ್ತಿದೆ. ಸಚಿವರು ಈಗ ನೀಡಿರುವ ಉಚಿತ ತರಬೇತಿ ಭರವಸೆಯು ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಂಚ ಪಡೆಯುವಾಗ ಲೋಕಾಯುಕ್ತ ಟ್ರ್ಯಾಪ್: ಸಿಕ್ಕಿಬೀಳುತ್ತಿದ್ದಂತೆ ಕೈ ಕೊಯ್ದುಕೊಂಡು ಮಹಿಳಾ ಪಿಡಿಒ ಹೈಡ್ರಾಮಾ!

ಮೈಸೂರು, ಮಾ.17: ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳು ಲಂಚ ಸ್ವೀಕಾರ ಮಾಡುತ್ತಿರುವ ಹಾಗೂ ಅಕ್ರಮ ಆಸ್ತಿಗಳನ್ನು ಹೊಂದಿರುವ ಪ್ರಕರಣಗಳು ಆಗ್ಗಾಗೆ ಬೆಳಕಿಗೆ ಬರುತ್ತಿದೆ. ಅಧಿಕಾರಿಗಳು ಹಣ ಸ್ವೀಕಾರ ಮಾಡುತ್ತಿರುವಾಗ ಲೋಕಾಯುಕ್ತ ಕೈ ಸಿಕ್ಕಿ ಬಿದ್ದಿರುವ ಅದೆಷ್ಟೋ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಮಹಿಳಾ ಅಧಿಕಾರಿ ಲೋಕ ಬಲೆಗೆ ಬಿದ್ದಿದ್ದಾರೆ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು (PDO), ಬಂಧನದಿಂದ ತಪ್ಪಿಸಿಕೊಳ್ಳಲು ಹರಿತವಾದ ಆಯುಧದಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಯ ನಾಟಕವಾಡಿದ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಮುಳ್ಳೂರು ಗ್ರಾ.ಪಂ. ಕಚೇರಿಯಲ್ಲಿ ನಡೆದಿದೆ.

ಮುಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿದ್ದ ಸ್ವಾಮಿ ಎಂಬುವವರು ನಿಧನರಾದ ಬಳಿಕ, ಅವರ ಪುತ್ರ ಮಹದೇವ್ ಅವರಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಸಿಕ್ಕಿತ್ತು. ಮೃತ ಸ್ವಾಮಿ ಅವರ ಎರಡು ವರ್ಷದ ಬಾಕಿ ಸಂಬಳ ಸುಮಾರು 4 ಲಕ್ಷ ರೂಪಾಯಿ ಬಿಡುಗಡೆ ಮಾಡಲು ಪಿಡಿಒ ಮಂಜುಳಾ ಅವರು 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಲಂಚ ನೀಡಲು ಇಚ್ಛಿಸದ ಮಹದೇವ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ, ಕಚೇರಿಯಲ್ಲಿ ಮುಂಗಡವಾಗಿ 25 ಸಾವಿರ ರೂ. ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಂಜುಳಾ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಇದನ್ನೂ ಓದಿ: ಇರಾನ್-ಇಸ್ರೇಲ್ ಸಮರಕ್ಕೆ ಬಳ್ಳಾರಿ ಜೀನ್ಸ್ ಉದ್ಯಮ ತತ್ತರ: ರಫ್ತು ಸ್ಥಗಿತ, ಉತ್ಪಾದನೆ ಕುಸಿತ

ಲೋಕಾಯುಕ್ತ ಬಲೆಗೆ ಬೀಳುತ್ತಿದ್ದಂತೆ ಕಂಗಾಲಾದ ಮಂಜುಳಾ, ಕಚೇರಿಯಲ್ಲೇ ಹರಿತವಾದ ಆಯುಧದಿಂದ ಕೈ ಕೊಯ್ದುಕೊಂಡು ರಾದ್ಧಾಂತ ಮಾಡಿದ್ದಾರೆ. ಅಧಿಕಾರಿಗಳ ಮುಂದೆಯೇ ಹೈಡ್ರಾಮಾ ಸೃಷ್ಟಿಸಿ ತನಿಖೆಗೆ ಅಡ್ಡಿಪಡಿಸಲು ಯತ್ನಿಸಿದ್ದಾರೆ. ಗಾಯಗೊಂಡ ಪಿಡಿಒ ಮಂಜುಳಾ ಅವರನ್ನು ತಕ್ಷಣವೇ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆಯ ನಂತರ ಲೋಕಾಯುಕ್ತ ಪೊಲೀಸರು ವಿಚಾರಣೆ ಮುಂದುವರಿಸಲಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶ್ರೀಲೀಲಾ ಜೊತೆ ಕಾಣಿಸಿಕೊಳ್ಳುವುದು ಇಷ್ಟವಿಲ್ಲ ಎಂದ ಪವನ್ ಕಲ್ಯಾಣ್: ಕಾರಣ?

ಪವನ್ ಕಲ್ಯಾಣ್ (Pawan Kalyan), ತೆಲುಗು ರಾಜ್ಯಗಳಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ. ಆಂಧ್ರ ಡಿಸಿಎಂ ಆಗಿದ್ದರೂ ಸಹ ಸಿನಿಮಾಗಳಲ್ಲಿ ನಟಿಸುತ್ತಿರುವ ಪವನ್ ಕಲ್ಯಾಣ್ ಅವರ ಹೊಸ ಸಿನಿಮಾ ‘ಉಸ್ತಾದ್ ಭಗತ್ ಸಿಂಗ್’ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಪವನ್ ಕಲ್ಯಾಣ್ ಜೊತೆಗೆ ಕನ್ನಡದ ನಟಿ ಶ್ರೀಲೀಲಾ ಸಹ ನಟಿಸಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅದ್ಧೂರಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್, ಶ್ರೀಲೀಲಾ, ರಾಶಿ ಖನ್ನಾ ಇನ್ನೂ ಹಲವರು ಭಾಗಿ ಆಗಿದ್ದರು. ಈ ವೇಳೆ ಪವನ್ ಕಲ್ಯಾಣ್ ಮಾತನಾಡಿ ತಮಗೆ ಶ್ರೀಲೀಲಾ ಜೊತೆ ನನ್ನನ್ನು ಒಂದೇ ಫ್ರೇಮ್​​ನಲ್ಲಿ ತೋರಿಸಬೇಡಿ ಎಂದು ನಿರ್ದೇಶಕರ ಬಳಿ ಹೇಳಿಬಿಟ್ಟಿದ್ದೆ ಎಂದರು. ಅದಕ್ಕೆ ಕಾರಣವೇನು?

ಕಾರ್ಯಕ್ರಮ ಆರಂಭಕ್ಕೂ ಮುನ್ನ, ನಿರೂಪಕಿ ಸುಮಾ ಕನಕಾಲ ಅವರು ಪವನ್ ಅವರೊಟ್ಟಿಗೆ ಮಾತನಾಡುತ್ತಾ, ನೀವು ಸಖತ್ ಆಗಿ ಡ್ಯಾನ್ಸ್ ಮಾಡಿದ್ದೀರಿ, ಶ್ರೀಲೀಲಾ ಡ್ಯಾನ್ಸ್ ಸಹ ಟ್ರೈಲರ್​​ನಲ್ಲಿ ಅಲ್ಲಲ್ಲಿ ಕಾಣಿಸಿದೆ ಎಂದರು. ಅದಕ್ಕೆ ಪವನ್ ಕಲ್ಯಾಣ್, ‘ನಾನು ನಿರ್ದೇಶಕರ ಬಳಿ ಕಡ್ಡಾಯವಾಗಿ ಹೇಳಿಬಿಟ್ಟಿದ್ದೆ, ನನ್ನನ್ನು ಶ್ರೀಲೀಲಾ ಜೊತೆಗೆ ಡ್ಯಾನ್ಸ್ ಮಾಡಿಸಬೇಡಿ, ನಾನು ಒಬ್ಬನೇ ಡ್ಯಾನ್ಸ್ ಮಾಡಬೇಕು ಅಥವಾ ಶ್ರೀಲೀಲಾ ಒಬ್ಬರೇ ಡ್ಯಾನ್ಸ್ ಮಾಡಬೇಕು, ಹಾಡುಗಳಲ್ಲಿ ನನ್ನ ಶ್ರೀಲೀಲಾ ಜೊತೆ ತೋರಿಸಲೇಬೇಡಿ. ಏಕೆಂದರೆ ಶ್ರೀಲೀಲಾ ಅದ್ಭುತವಾದ ಡ್ಯಾನ್ಸರ್, ಡ್ಯಾನ್ಸ್​​ನಲ್ಲಿ ಅವರು ನನ್ನನ್ನು ಸುಲಭವಾಗಿ ಡಾಮಿನೇಟ್ ಮಾಡಿಬಿಡುತ್ತಾರೆ’ ಎಂದರು ಪವನ್ ಕಲ್ಯಾಣ್.

ಶ್ರೀಲೀಲಾ ಅದ್ಭುತವವಾದ ಡ್ಯಾನ್ಸರ್ ಎಂಬುದರಲ್ಲಿ ಅನುಮಾನವೇ ಇಲ್ಲ. ಹಲವಾರು ಮಂದಿ ನಟರು ಈ ವಿಷಯವನ್ನು ಒಪ್ಪಿಕೊಂಡು, ಶ್ರೀಲೀಲಾರ ಪ್ರತಿಭೆಯನ್ನು ಕೊಂಡಾಡಿದ್ದಾರೆ. ಇದೀಗ ಪವನ್ ಕಲ್ಯಾಣ್ ಸಹ ತಮ್ಮದೇ ಶೈಲಿಯಲ್ಲಿ ಶ್ರೀಲೀಲಾ ಡ್ಯಾನ್ಸ್ ಅನ್ನು ಕೊಂಡಾಡಿದ್ದಾರೆ.

ಇದನ್ನೂ ಓದಿ:ಮಹೇಶ್ ಬಾಬು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಪವನ್ ಕಲ್ಯಾಣ್ ಆಪ್ತ ನಿರ್ದೇಶಕ

ಅದೇ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಲೀಲಾ, ಪವನ್ ಕಲ್ಯಾಣ್ ಅವರ ಗುಣಗಾನ ಮಾಡುತ್ತಾ ಅವರನ್ನು ‘ಅಜ್ಞಾತವಾಸಿ’ ಎಂದು ಕರೆದರು. ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾನಲ್ಲಿ ನಟಿಸುವಾಗ ನಾನು ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದೆ, ಅಲ್ಲೆಲ್ಲ ಪವನ್ ಅವರು ಹೇಗೆ ಎಂದೆಲ್ಲ ಕೇಳುತ್ತಿದ್ದರು, ಆಗ ನಾನು, ‘ಪವನ್ ಕಲ್ಯಾಣ್ ಒಂದು ರೀತಿ ಅಜ್ಞಾತವಾಸಿ’ ಎಂದೆ. ಹಾಗೆಂದರೇನು ಎಂದು ಕೇಳಿದರು, ಚಾಟ್​​ಜಿಪಿಟಿ ಮಾಡಿಕೊಳ್ಳಿ ಎಂದು ಅವರಿಗೆ ಹೇಳಿದೆ. ನಿಮ್ಮಿಂದ ಸಾಕಷ್ಟು ಕಲಿತೆ, ಎಲ್ಲದರಲ್ಲೂ ಧನಾತ್ಮಕವಾಗಿ ಇರುವುದು ಕಲಿತೆ, ನಿಮ್ಮಿಂದ ಪರಿಸರ ಪ್ರೇಮ ಕಲಿತೆ. ಸಮಾಜದ ಬಗ್ಗೆ ಕಾಳಜಿ ಇರಬೇಕು ಎಂಬುದನ್ನು ಕಲಿತೆ. ನೀವು ಸಿನಿಮಾಗಳಲ್ಲಿ ನಟಿಸುವುದರಿಂದ ಸಿನಿಮಾ ರಂಗಕ್ಕೆ ಒಳ್ಳೆಯದಾಗುತ್ತದೆ. ನೀವು ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿರಬೇಕು’ ಎಂದರು ಶ್ರೀಲೀಲಾ.

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾವನ್ನು ಪವನ್ ಅವರ ಆಪ್ತ ಹರೀಶ್ ಶಂಕರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಶ್ರೀಲೀಲಾ ಜೊತೆಗೆ ರಾಶಿ ಖನ್ನಾ ಸಹ ಇದ್ದಾರೆ. ಈ ಸಿನಿಮಾನಲ್ಲಿ ವಿಂಟೇಜ್ ಪವನ್ ಕಲ್ಯಾಣ್ ಅವರನ್ನು ಕಾಣುತ್ತೀರಿ ಎಂದು ನಿರ್ದೇಶಕ ಹರೀಶ್ ಭರವಸೆ ಕೊಟ್ಟಿದ್ದಾರೆ. ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಡುಗೆ ಮನೆಯಲ್ಲಿ ಹೆಡೆ ಎತ್ತಿ ಕುಳಿತಿದ್ದ ನಾಗಪ್ಪ! ಸುಮಾರು ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ

ಕೋಲಾರ, ಮಾ.17: ಜಿಲ್ಲೆಯ ಜಯನಗರ ಬಡಾವಣೆಯಲ್ಲಿ ಇಂದು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮನೆಯ ಅಡುಗೆ ಕೋಣೆಯೊಳಗೆ ಬೃಹತ್ ಗಾತ್ರದ ನಾಗರಹಾವೊಂದು ಪ್ರತ್ಯಕ್ಷವಾಗಿದ್ದು, ಮನೆಯವರನ್ನು ಬೆಚ್ಚಿಬೀಳಿಸಿದೆ. ಕೋಲಾರದ ಜಯನಗರ ಬಡಾವಣೆಯ ನಿವಾಸಿ ಮಂಜುನಾಥ್ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಎಂದಿನಂತೆ ಅಡುಗೆ ಕೆಲಸಕ್ಕಾಗಿ ಅಡುಗೆ ಮನೆಗೆ ಹೋದಾಗ, ಅಲ್ಲಿದ್ದ ಸಾಮಗ್ರಿಗಳ ನಡುವೆ ನಾಗರಹಾವು ಅಡಗಿ ಕುಳಿತಿರುವುದು ಪತ್ತೆಯಾಗಿದೆ. ಹಾವನ್ನು ಕಂಡು ಮನೆಯವರು ದಿಕ್ಕಾಪಾಲಾಗಿ ಓಡಿದ್ದು, ಕೂಡಲೇ ಸ್ಥಳೀಯ ಉರಗ ರಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಖ್ಯಾತ ಉರಗ ರಕ್ಷಕ ನಾಗರಾಜ್, ಸುಮಾರು ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹಾವನ್ನು ಸುರಕ್ಷಿತವಾಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅಡುಗೆ ಮನೆಯ ಪುಟ್ಟ ಜಾಗದಲ್ಲಿ ಕುಳಿತಿದ್ದ ಹಾವನ್ನು ಚಾಕಚಕ್ಯತೆಯಿಂದ ಹಿಡಿದಾಗ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ. ರಕ್ಷಿಸಲಾದ ನಾಗರಹಾವನ್ನು ಉರಗ ರಕ್ಷಕ ನಾಗರಾಜ್ ಅವರು ಜನವಸತಿ ಪ್ರದೇಶದಿಂದ ದೂರವಿರುವ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಮ್ಮ ಈ ಕೃತ್ಯ ಅಸಹ್ಯಕರ: ಪಾಕ್ ವಿರುದ್ಧ ಅಫ್ಘಾನ್ ಕ್ರಿಕೆಟಿಗರ ಆಕ್ರೋಶ

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮೇಲೆ ಸೋಮವಾರ (ಮಾರ್ಚ್ 16, 2026) ರಾತ್ರಿ ಪಾಕಿಸ್ತಾನ್ ನಡೆಸಿದ ವೈಮಾನಿಕ ದಾಳಿಯಲ್ಲಿ 400 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.  ಕಾಬೂಲ್‌ನಲ್ಲಿರುವ ಓಮಿದ್ ಮಾದಕ ವ್ಯಸನ ಮುಕ್ತಿ ಕೇಂದ್ರ (Omid Addiction Treatment Hospital) ಎಂಬ 2,000 ಹಾಸಿಗೆಗಳ ಆಸ್ಪತ್ರೆಯನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ಈ ಭೀಕರ ದಾಳಿಯಿಂದಾಗಿ ನಾನೂರಕ್ಕೂ ಅಧಿಕ ಮಂದಿ ಮೃತಪಟ್ಟರೆ, ಸುಮಾರು 250ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಅಫ್ಘಾನ್ ಕ್ರಿಕೆಟಿಗರ ಆಕ್ರೋಶ

ಪಾಕಿಸ್ತಾನ್ ಸೇನೆ ನಡೆಸಿದ ಈ ಭೀಕರ ದಾಳಿಯನ್ನು ಅಫ್ಘಾನಿಸ್ತಾನ್ ತಂಡದ ಪ್ರಮುಖ ಆಟಗಾರರು ಸೋಷಿಯಲ್ ಮೀಡಿಯಾ ಮೂಲಕ ಖಂಡಿಸಿದ್ದಾರೆ. ಅಲ್ಲದೆ ಪಾಕ್  ಕ್ರಮವನ್ನು “ಯುದ್ಧಾಪರಾಧ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಶೀದ್ ಖಾನ್: “ನಾಗರಿಕ ವಸತಿಗಳು ಅಥವಾ ವೈದ್ಯಕೀಯ ಕೇಂದ್ರಗಳನ್ನು ಗುರಿಯಾಗಿಸುವುದು ಯುದ್ಧಾಪರಾಧ. ರಂಝಾನ್ ಸಮಯದಲ್ಲಿ ಇಂತಹ ಅಮಾನುಷ ಕೃತ್ಯ ಎಸಗಿರುವುದು ಅಸಹ್ಯಕರ,” ಎಂದು ಅಫ್ಘಾನ್ ತಂಡದ ಸ್ಟಾರ್ ಆಟಗಾರ ರಶೀದ್ ಖಾನ್ ಕಿಡಿಕಾರಿದ್ದಾರೆ.

ಮೊಹಮ್ಮದ್ ನಬಿ: “ಚಿಕಿತ್ಸೆ ಪಡೆಯುತ್ತಿದ್ದ ಯುವಕರನ್ನು ಕೊಲೆ ಮಾಡಲಾಗಿದೆ. ಆಸ್ಪತ್ರೆಯ ಹೊರಗೆ ಕಾಯುತ್ತಿದ್ದ ತಾಯಂದಿರ ಆಕ್ರಂದನ ಕೇಳುವವರಿಲ್ಲ,” ಎಂದು ಮೊಹಮ್ಮದ್ ನಬಿ ಬೇಸರ ವ್ಯಕ್ತಪಡಿಸಿದ್ದಾರೆ.

ನವೀನ್-ಉಲ್-ಹಕ್: “ಇಸ್ರೇಲ್ ಮತ್ತು ಪಾಕಿಸ್ತಾನ ಸರ್ಕಾರದ ನಡುವೆ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ,” ಎಂದು ಅಫ್ಘಾನ್ ವೇಗಿ ನವೀನ್ ಉಲ್ ಹಕ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಅಝ್ಮತುಲ್ಲಾ ಒಮರ್​ಝಾಹಿ: ಅಮಾಯಕ ಜೀವಗಳ ಬಲಿದಾನಕ್ಕೆ ನ್ಯಾಯ ಸಿಗಬೇಕು ಎಂದು ಅಫ್ಘಾನಿಸ್ತಾನ್ ತಂಡದ ಆಲ್​ರೌಂಡರ್ ಅಝ್ಮತುಲ್ಲಾ ಒಮರ್​ಝಾಹಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸರ್ಕಾರಗಳ ಪ್ರತಿಕ್ರಿಯೆ

  • ಪಾಕಿಸ್ತಾನದ ಸಮರ್ಥನೆ: ಪಾಕಿಸ್ತಾನದ ರಕ್ಷಣಾ ಸಚಿವಾಲಯವು ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡಿಲ್ಲ ಎಂದು ವಾದಿಸಿದೆ. ಭಯೋತ್ಪಾದಕರ ಅಡಗುದಾಣಗಳು ಮತ್ತು ಶಸ್ತ್ರಾಸ್ತ್ರ ಸಂಗ್ರಹಣಾ ಕೇಂದ್ರಗಳ ಮೇಲೆ ಮಾತ್ರ “ನಿಖರ ದಾಳಿ” ನಡೆಸಿರುವುದಾಗಿ ಹೇಳಿಕೊಂಡಿದೆ.
  • ಅಫ್ಘಾನಿಸ್ತಾನದ ಎಚ್ಚರಿಕೆ: ಇದು ಮಾನವೀಯತೆಯ ವಿರುದ್ಧದ ಅಪರಾಧವಾಗಿದ್ದು, ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಸಂಬಂಧಗಳು ಮಿತಿ ಮೀರಿವೆ ಮತ್ತು ಇದಕ್ಕೆ ತಕ್ಕ ಪ್ರತಿಕಾರ ತೀರಿಸಿಕೊಳ್ಳಲಾಗುವುದು ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ದಿ ಹಂಡ್ರೆಡ್ ಲೀಗ್​ನ 8 ತಂಡಗಳು ಪ್ರಕಟ

ಅಫ್ಘಾನಿಸ್ತಾನ್ ಮೇಲೆ ಪಾಕಿಸ್ತಾನ್ ನಡೆಸಿದ ಈ ದಾಳಿಯು ಫೆಬ್ರವರಿ 2026 ರಿಂದ ಉಭಯ ದೇಶಗಳ ನಡುವೆ ನಡೆಯುತ್ತಿರುವ ಗಡಿ ಸಂಘರ್ಷದ ಒಂದು ಭಾಗವಾಗಿದ್ದು, ಪರಿಸ್ಥಿತಿ ಈಗ “ಮುಕ್ತ ಯುದ್ಧ”ಕ್ಕೆ ಆಹ್ವಾನ ನೀಡಿದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

 

 

Source link

ಶೆಲ್ ಪೆಟ್ರೋಲ್ ಬೆಲೆ 10 ದಿನದಲ್ಲಿ 4.50 ರೂ ಏರಿಕೆ; ಇಲ್ಲಿದೆ ದರಪಟ್ಟಿ

ನವದೆಹಲಿ, ಮಾರ್ಚ್ 17: ಇರಾನ್ ಯುದ್ಧದ ಪರಿಣಾಮ ತೈಲ ಬೆಲೆಗಳು ಏರಿಕೆ ಆಗುತ್ತಿದ್ದು, ಜಾಗತಿಕವಾಗಿ ಪೆಟ್ರೋಲ್, ಡೀಸಲ್ ಇತ್ಯಾದಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೂ ಏರಿಕೆ ಆಗುತ್ತಿದೆ. ಭಾರತದಲ್ಲಿ ಪೆಟ್ರೋಲ್, ಡೀಸಲ್ ಬೆಲೆ (Petrol and Diesel Rates) ಏರಿಕೆ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದೇ ವೇಳೆ, ಖಾಸಗಿ ಪೆಟ್ರೋಲಿಯಂ ಕಂಪನಿಯಾದ ಶೆಲ್ ಸತತವಾಗಿ ಪೆಟ್ರೋಲ್, ಡೀಸಲ್ ಬೆಲೆ ಏರಿಸಿದೆ. ಮೂರು ದಿನಗಳ ಹಿಂದೆ ದರ ಪರಿಷ್ಕರಣೆ ಮಾಡಿದ್ದ ಶೆಲ್ 2 ರೂ ಹೆಚ್ಚಿಸಿದೆ. ಹತ್ತು ದಿನದಲ್ಲಿ ಶೆಲ್​ನಲ್ಲಿ ಪೆಟ್ರೋಲ್ ಬೆಲೆ 4.50 ರೂ ಹೆಚ್ಚಳ ಆಗಿರುವುದು ತಿಳಿದುಬಂದಿದೆ. ಆದರೆ, ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳು ಪೆಟ್ರೋಲ್ ಬೆಲೆ ಏರಿಕೆ ಮಾಡಿಲ್ಲ.

ಶೆಲ್ ಸಂಸ್ಥೆ ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿಯೂ ಪೆಟ್ರೋಲ್ ಬೆಲೆ ಏರಿಕೆ ಆಗಿದೆ. ಸಿಂಗಾಪುರದಲ್ಲಿ ಗರಿಷ್ಠ ಮಟ್ಟಕ್ಕೆ ಪೆಟ್ರೋಲ್ ಬೆಲೆ ಏರಿದೆ. 2022ರ ಉಕ್ರೇನ್ ರಷ್ಯಾ ಯುದ್ಧದ ತಾರಕ ಸ್ಥಿತಿಯಲ್ಲಿ ಸಿಂಗಾಪುರದಲ್ಲಿ ಪೆಟ್ರೋಲ್ ಬೆಲೆ ಗರಿಷ್ಠ ಮಟ್ಟಕ್ಕೆ ಹೋಗಿತ್ತು. ಈಗ ಇರಾನ್ ಯುದ್ಧದ ಸಂದರ್ಭದಲ್ಲಿ ಪೆಟ್ರೋಲ್ ಬೆಲೆ ಆ ಮಟ್ಟವನ್ನು ಮುಟ್ಟಿದೆ.

ಇದನ್ನೂ ಓದಿ: ಪಿಎನ್​ಜಿ ಗ್ಯಾಸ್​ಗೂ ಎಲ್​ಪಿಜಿಗೂ ಏನು ವ್ಯತ್ಯಾಸ? ನೀವು ಪಿಎನ್​ಜಿ ಕನೆಕ್ಷನ್ ಪಡೆಯುವುದು ಹೇಗೆ?

ಭಾರತದಲ್ಲಿ ಶೆಲ್ ಸಂಸ್ಥೆ ಮಾರ್ಚ್ 14ರಂದು ದರ ಪರಿಷ್ಕರಣೆ ಮಾಡಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸಲ್ ದರ ಹಾಗೂ ವಿಪವರ್ ಡೀಸಲ್ ಮತ್ತು ಪೆಟ್ರೋಲ್ ದರಗಳ ವಿವರ ಈ ಕೆಳಕಂಡಂತಿದೆ:

ಬೆಂಗಳೂರಿನಲ್ಲಿ ಮಾ. 14ರಂದು ಶೆಲ್ ಪೆಟ್ರೋಲ್ ದರಗಳು

  • ಪೆಟ್ರೋಲ್: 108.41 ರೂ
  • ಡೀಸಲ್: 93.49 ರೂ
  • ವಿಪವರ್ ಪೆಟ್ರೋಲ್: 118.41 ರೂ
  • ವಿಪವರ್ ಡೀಸಲ್: 104.64 ರೂ

ಇದನ್ನೂ ಓದಿ: ಸರ್ಕಾರದಿಂದ ಎಲ್​ಪಿಜಿ ಪೂರೈಕೆ ನಿಯಮದಲ್ಲಿ ಬದಲಾವಣೆ; ಈ ಕುಟುಂಬಗಳಿಗೆ ಎಲ್​ಪಿಜಿ ಗ್ಯಾಸ್ ಸಿಗಲ್ಲ

ವಿವಿಧ ನಗರಗಳಲ್ಲಿ ಶೆಲ್ ಪೆಟ್ರೋಲ್ ಬೆಲೆ

  • ಬೆಂಗಳೂರು: 108.41 ರೂ
  • ಮೈಸೂರು: 107.95 ರೂ
  • ಬೆಳಗಾವಿ: 108.73 ರೂ
  • ಮಂಗಳೂರು: 108.10 ರೂ
  • ಮುಂಬೈ: 116.36 ರೂ
  • ಚೆನ್ನೈ: 106.29 ರೂ
  • ಅಹ್ಮದಾಬಾದ್: 99.98 ರೂ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link