All posts by nagaraj11081993

ಹೇರ್‌ ಫಾಲ್‌ ಸಮಸ್ಯೆಯಿಂದ ಮುಕ್ತಿ ಪಡೆಯಲು ತಲೆಸ್ನಾನಕ್ಕೂ ಮುನ್ನ ಕೂದಲಿಗೆ ಈ ಒಂದು ವಸ್ತುವನ್ನು ಹಚ್ಚಿ – Kannada News | To get rid of hair fall, apply curd to your hair before showering

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆ (hair fall), ತಲೆಹೊಟ್ಟು, ದುರ್ಬಲ ಕೂದಲಿನ  ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಒತ್ತಡ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಜೀವನಶೈಲಿ, ಧೂಳು, ಮಾಲಿನ್ಯ, ಕೂದಲಿಗೆ ಅತಿಯಾದ ರಾಸಾಯನಿಕ ಉತ್ಪನ್ನಗಳ ಬಳಕೆ ಇವೆಲ್ಲವೂ ಕೂದಲು ಉದುರಲು ಪ್ರಮುಖಖ ಕಾರಣವಾಗಿದೆ. ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಅನೇಕರು ದುಬಾರಿ ಶಾಂಪೂ, ಚಿಕಿತ್ಸೆಗಳ ಮೊರೆ ಹೋಗ್ತಾರೆ. ಇವುಗಳ ಬದಲು ಆರೋಗ್ಯಕ ಆಹಾರವನ್ನು ಸೇವನೆ ಮಾಡುವ ಮೂಲಕ ಹಾಗೂ ರಾಸಾಯನಿಕ ಉತ್ಪನ್ನಗಳ ಬದಲು ಸ್ನಾನಕ್ಕೂ ಮುನ್ನ ಕೂದಲಿಗೆ ಮೊಸರನ್ನು ಹಚ್ಚುವ ಮೂಲಕ ಕೂದಲು ಉದುರುವಿಕೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇದು ಕೂದಲನ್ನು ಪೋಷಿಸುವುದು ಮಾತ್ರವಲ್ಲದೆ ಆರೋಗ್ಯಕರ ನೆತ್ತಿಯನ್ನು ಕಾಪಾಡಿಕೊಳ್ಳಲು, ಕೂದಲನ್ನು ಮೃದು ಮತ್ತು ಬಲವಾಗಿಸಲು ಸಹಾಯ ಮಾಡುತ್ತದೆ. ಕೂದಲಿಗೆ ಮೊಸರು ಹಚ್ಚುವುರಿಂದಾಗುವ ಪ್ರಯೋಜನಗಳು ಮತ್ತು ಅದನ್ನು ಬಳಸುವ ಸರಿಯಾದ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.

ಕೂದಲಿಗೆ ಮೊಸರು ಹಚ್ಚುವುರಿಂದ ಏನಾಗುತ್ತದೆ?

ಮೊಸರಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ 5 ಮತ್ತು ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳು ಇದ್ದು, ಇವು ನೆತ್ತಿ ಮತ್ತು ಕೂದಲಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ನೆತ್ತಿಯನ್ನು ತೇವಗೊಳಿಸಲು, ಶುಷ್ಕತೆ ಮತ್ತು ತಲೆಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೊಸರು ಕೂದಲನ್ನು ನೈಸರ್ಗಿಕವಾಗಿ ಮೃದು ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಮೊಸರು ನೆತ್ತಿಯಿಂದ ಕೊಳಕು ಮತ್ತು ಹೆಚ್ಚುವರಿ ಎಣ್ಣೆಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಮೊಸರು ನೆತ್ತಿಯನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ, ಕೂದಲಿನ ಬೇರುಗಳು ಬಲವಾಗಿಸುತ್ತದೆ.  ಈ ಮನೆಮದ್ದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಮತ್ತು ರಾಸಾಯನಿಕ ಶಾಂಪೂಗಳ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೆಲವೊಮ್ಮೆ ಹಾರ್ಮೋನುಗಳ ಬದಲಾವಣೆಗಳು, ಒತ್ತಡ, ಪೌಷ್ಟಿಕಾಂಶದ ಕೊರತೆಗಳು ಮತ್ತು ವೈದ್ಯಕೀಯ ಕಾರಣಗಳಿಂದಲೂ ಕೂದಲು ಉದುರುತ್ತವೆ. ಆದ್ದರಿಂದ, ಕೂದಲು ಉದುರುವಿಕೆ ಅತಿಯಾಗಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.

ಕೂದಲಿಗೆ ಮೊಸರು ಹಚ್ಚುವುದರಿಂದ ಏನು ಪ್ರಯೋಜನ?

ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ: ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲವಿದ್ದು, ಇದು ನೆತ್ತಿಯಿಂದ ಕೊಳಕು, ಬೆವರು ಮತ್ತು ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ರಂಧ್ರಗಳನ್ನು ತೆರೆಯುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ. ಸ್ವಚ್ಛವಾದ ನೆತ್ತಿಯು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ.

ಕೂದಲನ್ನು ಬಲಪಡಿಸುತ್ತದೆ ಮತ್ತು ದಪ್ಪವಾಗಿಸುತ್ತದೆ: ಮೊಸರಿನಲ್ಲಿರುವ ಪ್ರೋಟೀನ್‌ಗಳು ಮತ್ತು ವಿಟಮಿನ್‌ಗಳು ಕೂದಲಿನ ಬೇರುಗಳನ್ನು ಪೋಷಿಸುತ್ತವೆ. ಇದು ಕೂದಲು ಒಡೆಯುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಇದರಲ್ಲಿರುವ ಬಯೋಟಿನ್, ಸತು ಕೂದಲನ್ನು ಬೇರುಗಳಿಂದ ಬಲಪಡಿಸುತ್ತದೆ, ಇದರಿಂದಾಗಿ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಪ್ರತಿದಿನ ದೇವಸ್ಥಾನಕ್ಕೆ ಹೋಗೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳು ಲಭಿಸುತ್ತವೆ ನೋಡಿ

ತಲೆಹೊಟ್ಟು ಮತ್ತು ತುರಿಕೆಯನ್ನು ನಿವಾರಿಸುತ್ತದೆ: ನೀವು ದೀರ್ಘಕಾಲದವರೆಗೆ ತಲೆಹೊಟ್ಟು ಮತ್ತು ತುರಿಕೆಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಸ್ನಾನಕ್ಕೂ ಮುನ್ನ ನೆತ್ತಿಗೆ ಕೆಲ ಹೊತ್ತು ಮೊಸರನ್ನು ಹಚ್ಚಿ. ಇದರ ಉರಿಯೂತ ನಿವಾರಕ ಗುಣಗಳು ನೆತ್ತಿಯ ಕಿರಿಕಿರಿಯನ್ನು ಶಮನಗೊಳಿಸಲು ಮತ್ತು ತಲೆಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನೈಸರ್ಗಿಕ ಕಂಡಿಷನರ್: ಕೂದಲಿಗೆ ಮೊಸರು ಹಚ್ಚುವುದರಿಂದ  ಮೃದು ಮತ್ತು  ಹೊಳೆಯುವ ಹೊಳೆಯುವ ಕೂದಲನ್ನು ನೀವು ಪಡೆಯಬಹುದು. ಇದರ ನಿಯಮಿತ ಬಳಕೆಯು ಕೂದಲಿನ ವಿನ್ಯಾಸವನ್ನು ಸುಧಾರಿಸುತ್ತದೆ ಮತ್ತು ಆರೋಗ್ಯಕರವಾಗಿ ಕಾಣುವಂತೆ ಮಾಡುತ್ತದೆ.

ಕೂದಲಿಗೆ ಮೊಸರನ್ನು ಹಚ್ಚುವ ಸರಿಯಾದ ಮಾರ್ಗ ಯಾವುದು?

ಮೊದಲು, ಒಂದು ಬಟ್ಟಲಿನಲ್ಲಿ ತಾಜಾ ಮೊಸರನ್ನು ತೆಗೆದುಕೊಳ್ಳಿ. ನೀವು ಅದಕ್ಕೆ ಸ್ವಲ್ಪ ಅಲೋವೆರಾ ಜೆಲ್ ಅಥವಾ ಮೆಂತ್ಯ ಪುಡಿಯನ್ನು ಕೂಡ ಸೇರಿಸಬಹುದು. ಈ ಮಿಶ್ರಣವನ್ನು ನೆತ್ತಿ ಮತ್ತು ಕೂದಲಿಗೆ ಹಚ್ಚಿ ಸುಮಾರು 20 ರಿಂದ 30 ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ. ಅಗತ್ಯವಿದ್ದರೆ, ಸೌಮ್ಯವಾದ ಶಾಂಪೂ ಬಳಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಉತ್ತರ ಜಿಲ್ಲೆಯಾಗುವುದೇ ತುಮಕೂರು? ಮತ್ತೆ ಮುನ್ನೆಲೆಗೆ ಬರಲು ಕಾರಣವೇನು? – Kannada News | Will Tumakuru Become Bengaluru North? Why the Debate Has Resurfaced

ತುಮಕೂರು, ಮೇ 20: ಜಿಲ್ಲೆಯ ಹೆಸರು ಬದಲಾಗುತ್ತದೆಯೇ, ಬೆಂಗಳೂರು ಉತ್ತರಕ್ಕೆ ಸೇರ್ಪಡೆಗೊಂಡು ಅದರ ಅಸ್ತಿತ್ವ ಕಣ್ಮರೆಯಾಗುತ್ತದೆಯೇ ಎಂಬ ಚರ್ಚೆ ಇದೀಗ ಜಿಲ್ಲೆಯಲ್ಲಿ ಜೋರಾಗಿದೆ. ತುಮಕೂರು (tumakuru) ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ (Dr. G Parameshwara) , ತುಮಕೂರನ್ನು ಬೆಂಗಳೂರು ಉತ್ತರವಾಗಿ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು. ತುಮಕೂರು ಬೆಂಗಳೂರಿಗೆ ಸಮೀಪವಿದ್ದು, ಅಭಿವೃದ್ಧಿಗಾಗಿ ದೆಹಲಿ ಎನ್‌ಸಿಆರ್ ಮಾದರಿ ಕಾನ್ಸೆಪ್ಟ್ ಅಗತ್ಯ ಎಂದು ಅವರು ಹೇಳಿದರು. ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಮುಖ್ಯಾಂಶಗಳು

  • ಕಾಂಗ್ರೆಸ್​ ಸಾಧನಾ ಸಮಾವೇಶದ ವೇದಿಕೆಯಲ್ಲಿ ಸೃಷ್ಟಿಯಾಯ್ತು ಹೊಸ ಚರ್ಚೆ!
  • ಅಭಿವೃದ್ಧಿ ಕಾನ್ಸೆಪ್ಟ್ ಬೆನ್ನಲ್ಲೇ ಎದ್ದಿತು ವಿರೋಧದ ಬಿರುಗಾಳಿ
  • ಗೃಹ ಸಚಿವರ ಪ್ರಸ್ತಾಪಕ್ಕೆ ಆರ್ ಅಶೋಕ್ ವ್ಯಂಗ್ಯ

ತುಮಕೂರು ಬೆಂಗಳೂರಿಗೆ ಸಮೀಪವಿದೆ. ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ಹೀಗಾಗಿ ತುಮಕೂರನ್ನು ಬೆಂಗಳೂರು ಉತ್ತರವಾಗಿ ಸೇರ್ಪಡೆ ಮಾಡಿಕೊಳ್ಳಬೇಕೆಂದು ಗೃಹ ಸಚಿವ ಹಾಗೂ ತುಮಕೂರು ಉಸ್ತುವಾರಿ ಸಚಿವ ಜಿ. ಪರಮೇಶ್ವರ್​​ ಒತ್ತಾಯಿಸಿದ್ದಾರೆ. ಇದು ಇದೀಗ ಭಾರಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಯಾವುದೇ ಕಾರಣಕ್ಕೂ ತುಮಕೂರು ಹೆಸರು ಬದಲಾಯಿಸುವುದಿಲ್ಲ: ಜಿ. ಪರಮೇಶ್ವರ್

ಅಸಲಿಗೆ ಗೃಹ ಸಚಿವರು ತುಮಕೂರನ್ನು ಬೆಂಗಳೂರು ಉತ್ತರ ಮಾಡುವ ಮಾತು ಇದೇ ಮೊದಲಲ್ಲ. ಈ ಹಿಂದೆ ಅಂದರೆ 2025ರ ಜೂನ್​​ನಲ್ಲಿ ಸಹ ಪ್ರಸ್ತಾಪಿಸಿದ್ದರು. ಆ ವೇಳೆ ತುಮಕೂರು ಜಿಲ್ಲೆಯ ಹೆಸರೇ ಬೆಂಗಳೂರು ಉತ್ತರ ಎಂದು ಮರುನಾಮಕರಣ ಆಗಲಿದೆ ಎನ್ನುವ ಮಾತು ಆರಂಭವಾಗಿತ್ತು. ಇದಕ್ಕೆ ವೇದಿಕೆ ಕಾರ್ಯಕ್ರಮವೊಂದರಲ್ಲಿ ಸ್ಪಷ್ಟೀಕರಣ ನೀಡುವ ಮೂಲಕ ಜಿ. ಪರಮೇಶ್ವರ್, ಗೊಂದಲಕ್ಕೆ ತೆರೆ ಎಳೆದಿದ್ದರು. ಆದರೆ ಇದೀಗ ಮತ್ತೆ ಬೆಂಗಳೂರು ಉತ್ತರ ವಿಚಾರ ಪ್ರಸ್ತಾಪಿಸಿದ್ದು, ತುಮಕೂರು ಅಭಿವೃದ್ಧಿಗಾಗಿ ದೆಹಲಿಯ ಎನ್​ಸಿಆರ್ ಮಾದರಿ ಬೆಂಗಳೂರಿಗೆ ಸೇರ್ಪಡೆ ಮಾಡುವ ಪರಿಕಲ್ಪನೆ ಇದಾಗಿದ್ದು, ಯಾವುದೇ ಕಾರಣಕ್ಕೂ ತುಮಕೂರು ಹೆಸರು ಬದಲಾಯಿಸುವುದಿಲ್ಲ ಎಂದಿದ್ದಾರೆ.

ಇಡೀ ಕರ್ನಾಟಕಕ್ಕೆ ನೀವು ಬೆಂಗಳೂರು ಎಂದು ಹೆಸರಿಟ್ಟು ಬಿಡಿ: ಆರ್​​ ಅಶೋಕ್

ತುಮಕೂರನ್ನು ಬೆಂಗಳೂರು ಉತ್ತರವಾಗಿ ಸೇರ್ಪಡೆ ಮಾಡುವ ಈ ವಿಚಾರಕ್ಕೆ ಬಿಜೆಪಿ ಸಹ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ವಿಧಾನಸಭೆಯ ವಿಪಕ್ಷ ನಾಯಕ ಆರ್​​ ಅಶೋಕ್ ಪ್ರತಿಕ್ರಿಯಿಸಿದ್ದು, ಬೆಂಗಳೂರು ಹೆಸರು ಸೇರಿಸಿಕೊಳ್ಳುವುದು ಈಗ ಸ್ಪರ್ಧೆಯಾಗಿ ಬಿಟ್ಟಿದೆ. ಇಡೀ ಕರ್ನಾಟಕಕ್ಕೆ ನೀವು ಬೆಂಗಳೂರು ಎಂದು ಹೆಸರಿಟ್ಟು ಬಿಡಿ. ಬೆಂಗಳೂರು ಹೆಸರನ್ನು ಬೇರೆ ಕಡೆ ಹಂಚಿದರೆ ಬೆಂಗಳೂರು ಜನ ನಿಮಗೆ ಶಾಪ ಹಾಕುತ್ತಾರೆ. ಅಷ್ಟೇ ಅಲ್ಲ ಮುಂದಿನ ಪಾಲಿಕೆ ಚುನಾವಣೆಯಲ್ಲಿ ಸೋತು ಹೋಗುತ್ತೀರಾ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತುಮಕೂರಿಗೆ ಬೆಂಗಳೂರು ಉತ್ತರ ಅಂತ ಮರುನಾಮಕರಣಕ್ಕೆ ಭಾರಿ ವಿರೋಧ

ಇನ್ನು ತುಮಕೂರನ್ನು ಬೆಂಗಳೂರು ಉತ್ತರವಾಗಿ ಸೇರ್ಪಡೆ ಮಾಡುವ ವಿಚಾರದಲ್ಲಿ ತುಮಕೂರು ಜನರ ವಿರೋಧವಿದ್ದು, ಅಭಿವೃದ್ಧಿ ನೆಪದಲ್ಲಿ ಬೆಂಗಳೂರಿಗೆ ಸೇರಿಸುವುದು ಸರಿಯಲ್ಲ. ತುಮಕೂರನ್ನು ತುಮಕೂರಾಗಿಯೇ ಅಭಿವೃದ್ಧಿ ಮಾಡಿ ಎಂದು ಒತ್ತಾಯಿಸುವುದರ ಜೊತೆಗೆ ಬೆಂಗಳೂರು ಉತ್ತರ ಎಂಬ ಚಿಂತನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲೇ ತುಮಕೂರನ್ನು ಬೆಂಗಳೂರು ನಾರ್ಥ್ ಘೋಷಣೆಗೆ ಒತ್ತಾಯಿಸುವ ಮೂಲಕ ಹೊಸ ಚರ್ಚೆಗೆ ದಾರಿ ಮಾಡಿದ್ದು, ಇದು ಮುಂದೆ ಯಾವ ಬೆಳವಣಿಗೆಗೆ ಕಾರಣವಾಗತ್ತೆ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮೋದಿ, ಬಿಜೆಪಿ, ಆರ್​ಎಸ್​ಎಸ್ ದೇಶದ್ರೋಹಿಗಳು ಎಂದ ರಾಹುಲ್​​ಗೆ ಜೋಶಿ ತಿರುಗೇಟು – Kannada News | Pralhad Joshi Hits back at Congress Leader Rahul Gandhi Over Traitor Remark Against PM Modi And amit shah

ನವದೆಹಲಿ, (ಮೇ 20): ಪ್ರಧಾನಿ ನರೇಂದ್ರ ಮೋದಿ (Narendra Modi) , ಗೃಹ ಸಚಿವ ಅಮಿತ್ ಶಾ ಮತ್ತು ಆರ್‌ಎಸ್‌ಎಸ್ ಸಂಘಟನೆಯನ್ನು ರಾಹುಲ್ ಗಾಂಧಿ ಅವರು “ದೇಶದ್ರೋಹಿಗಳು” ಎಂದು ಕರೆದಿರುವುದು ಕೇವಲ ನಾಚಿಕೆಗೇಡಿನ ಸಂಗತಿಯಲ್ಲ. ಇದು ಪ್ರಾಮಾಣಿಕತೆ ಮತ್ತು ಸಮರ್ಪಣಾ ಭಾವದಿಂದ ಭಾರತ ಮಾತೆಯ ಸೇವೆ ಮಾಡುವ ಪ್ರತಿಯೊಬ್ಬ ರಾಷ್ಟ್ರವಾದಿಗೂ ಮಾಡಿದ ಅವಮಾನವಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ (Pralhad Joshi ) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಾಂಶಗಳು

  • ಪ್ರಧಾನಿ ಮೋದಿ,  ಶಾ, ಬಿಜೆಪಿ, ಆರ್‌ಎಸ್‌ಎಸ್‌ ದೇಶದ್ರೋಹಿ ಎಂದ ರಾಹುಲ್ ಗಾಂಧಿ
  • ಲೋಕಸಭಾ ವಿಪಕ್ಷ ನಾಯಕ ರಾಹುಲ್ ಹೇಳಿಕೆಗೆ ಕೇಂದ್ರ ಸಚಿವ ಜೋಶಿ ತಿರುಗೇಟು
  • ಮೋದಿ ಸರ್ಕಾರದ ಬಲಿಷ್ಠ ಆಡಳಿತದಿಂದ ರಾಹುಲ್ ಗಾಂಧಿಗೆ ಹತಾಶೆ

ರಾಹುಲ್ ಗಾಂಧಿ ಹೇಳಿಗೆ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಕ್ರಿಯಿಸಿರುವ ಜೋಶಿ, ತುರ್ತು ಪರಿಸ್ಥಿತಿಯನ್ನು ಹೇರಿ, ಪ್ರಜಾಪ್ರಭುತ್ವವನ್ನು ಹತ್ತಿಕ್ಕಿದ ಅದೇ ಕಾಂಗ್ರೆಸ್ ಪಕ್ಷದ ನಾಯಕರೊಬ್ಬರು ಈಗ ಪ್ರಜಾಪ್ರಭುತ್ವವನ್ನು ಉಳಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಮಾಧ್ಯಮಗಳನ್ನು ಬಾಯಿ ಮುಚ್ಚಿಸಿ , ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ತಳ್ಳಿ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಿದ್ದು ಇದೇ ಕಾಂಗ್ರೆಸ್. ಈಗ ಇತರರಿಗೆ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಪಾಠ ಹೇಳುತ್ತಿದೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದೇಶದ ಹಿತಾಸಕ್ತಿಯ ರಕ್ಷಕನಂತೆ ನಟಿಸುತ್ತಿದೆ

ಚೀನಾವನ್ನು ನಿಭಾಯಿಸಲು ವಿಫಲವಾಗಿ 1962ರ ಯುದ್ಧಕ್ಕೆ ಕಾರಣವಾದ ತಪ್ಪುಗಳಿಂದ ಹಿಡಿದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಭಾರತಕ್ಕೆ ಸಿಗಬೇಕಿದ್ದ ಖಾಯಂ ಸ್ಥಾನದ ಆಯಕಟ್ಟಿನ ಅವಕಾಶಗಳನ್ನು ಬಿಟ್ಟುಕೊಡುವವರೆಗೆ, ಭಾರತದ ಜಾಗತಿಕ ಸ್ಥಾನಮಾನವನ್ನು ದುರ್ಬಲಗೊಳಿಸಿದ್ದು ಕಾಂಗ್ರೆಸ್. ಈಗ ದೇಶದ ಹಿತಾಸಕ್ತಿಯ ರಕ್ಷಕನಂತೆ ನಟಿಸುತ್ತಿದೆ. 2008ರಲ್ಲಿ ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ರಹಸ್ಯವಾಗಿ ಒಪ್ಪಂದಕ್ಕೆ (MoU) ಸಹಿ ಹಾಕಿ ಕಚ್ಚತೀವು ದ್ವೀಪವನ್ನು ಬಿಟ್ಟುಕೊಟ್ಟರು. ಹಾಗೇ ಭಾರತವನ್ನು ಬಲಪಡಿಸಲು ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟ ಜನರನ್ನು ದೇಶದ್ರೋಹಿ ಎಂದು ಕರೆಯುವ ಮೂಲಕ ಆಯಕಟ್ಟಿನ ಹಿತಾಸಕ್ತಿಗಳೊಂದಿಗೆ ಪದೇ ಪದೇ ರಾಜಿ ಮಾಡಿಕೊಂಡದ್ದು ಇದೇ ಕಾಂಗ್ರೆಸ್ ಎಂದು ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿಗೆ ಹತಾಶೆ

ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತವು ಹಿಂದೆಂದಿಗಿಂತಲೂ ಹೆಚ್ಚು ಬಲಿಷ್ಠ, ಸುರಕ್ಷಿತ, ಆರ್ಥಿಕವಾಗಿ ಶಕ್ತಿಯುತ ಮತ್ತು ಜಾಗತಿಕವಾಗಿ ಗೌರವಾನ್ವಿತ ದೇಶವಾಗಿ ಬೆಳೆಯುತ್ತಿರುವುದರಿಂದ ರಾಹುಲ್ ಗಾಂಧಿಗೆ ಹತಾಶೆ ಹೆಚ್ಚಾಗುತ್ತಿದೆ. ರಾಷ್ಟ್ರವಾದಿ ಶಕ್ತಿಗಳನ್ನು ದೇಶದ್ರೋಹಿಗಳು ಎಂದು ಕರೆಯುವುದರಿಂದ ಕಾಂಗ್ರೆಸ್ ತನ್ನದೇ ಆದ ದ್ರೋಹ, ಬೂಟಾಟಿಕೆ ಹಾಗೂ ಸರಣಿ ದಾಳಿಗಳ ಇತಿಹಾಸವನ್ನು ಅಳಿಸಿಹಾಕಲು ಸಾಧ್ಯವಿಲ್ಲ. ದೇಶದ ಪರವಾಗಿ ಯಾರು ನಿಂತಿದ್ದರು? ಮತ್ತು ಕೇವಲ ಒಂದು ಕುಟುಂಬಕ್ಕಾಗಿ ಯಾರು ನಿಂತಿದ್ದರು ಎಂಬುವುದು ಈ ದೇಶದ ಜನರಿಗೆ ಚೆನ್ನಾಗಿ ಗೊತ್ತಿದೆ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.

ರಾಹುಲ್ ಗಾಂಧಿ ಹೇಳಿದ್ದೇನು?

ಪ್ರಧಾನಿ ಮೋದಿ, ಅಮಿತ್ ಶಾ, ಬಿಜೆಪಿ, ಆರ್‌ಎಸ್‌ಎಸ್‌ ದೇಶದ್ರೋಹಿಗಳಾಗಿದ್ದು, ರಾಷ್ಟ್ರದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ-ಆರ್‌ಎಸ್‌ಎಸ್ ಸಂವಿಧಾನದ ಮೇಲೆ ದಾಳಿ ಮಾಡಿದೆ. ಪಂಚ ರಾಜ್ಯಗಳ ಚುನಾವಣೆ ಮೊದಲು ಇಂಧನ ಕೊರತೆ ಇಲ್ಲ ಅಂದಿದ್ರಿ. ಪೆಟ್ರೋಲ್‌, ಡೀಸೆಲ್ ದರ ಹೆಚ್ಚಳವಾಗಲ್ಲ ಅಂತಾ ಹೇಳಿದ್ರಿ. ಆದರೆ ಈಗ ದೇಶದಲ್ಲಿ ಪೆಟ್ರೋಲ್‌, ಡೀಸೆಲ್ ದರ ಹೆಚ್ಚಳವಾಗುತ್ತಿದೆ. ಅಂಬಾನಿ ರಷ್ಯಾದಿಂದ ಪೆಟ್ರೋಲ್ ಖರೀದಿಸಿ ಹೊರಗೆ ಮಾರಾಟ ಮಾಡ್ತಾರೆ. ಇದರಿಂದ ಆ ಹಣದಿಂದ ಪ್ರಧಾನಿ ನರೇಂದ್ರ ಮೋದಿಗೆ ಹಣಕಾಸು ಒದಗಿಸುತ್ತಾರೆ ಎಂದು ಹೇಳಿದ್ದರು.

Source link

‘ಧುರಂಧರ್’ ಚಿತ್ರದಲ್ಲಿ ದೇಶದ ಭದ್ರತೆಯ ರಹಸ್ಯ ಮಾಹಿತಿ ಸೋರಿಕೆ ಆರೋಪ; ಹೈಕೋರ್ಟ್ ಮಹತ್ವದ ಆದೇಶ – Kannada News | Ranveer Singh Dhurandhar The Revenge legal trouble Delhi High Court CBFC

ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಸಿನಿಮಾ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಭಾರತೀಯ ಸಶಸ್ತ್ರ ಪಡೆಗಳ ಸೂಕ್ಷ್ಮ ಕಾರ್ಯಾಚರಣೆಯ ವಿವರಗಳನ್ನು ಈ ಚಿತ್ರದಲ್ಲಿ ಬಹಿರಂಗಪಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಮತ್ತು ಸೆನ್ಸಾರ್ ಮಂಡಳಿಗೆ (CBFC) ದೆಹಲಿ ಹೈಕೋರ್ಟ್ ಬುಧವಾರ (ಮೇ 20) ನಿರ್ದೇಶನ ನೀಡಿದೆ. ಸಶಸ್ತ್ರ ಸೀಮಾ ಬಲ (SSB) ಹೆಡ್ ಕಾನ್ಸ್‌ಟೇಬಲ್ ದೀಪಕ್ ಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿದೆ.

ಅರ್ಜಿದಾರರ ಪ್ರಕಾರ, ಈ ಸಿನಿಮಾದಿಂದ Official Secrets Act ಉಲ್ಲಂಘನೆ ಆಗಿದೆ. ಚಿತ್ರದಲ್ಲಿ ದೇಶದ ಭದ್ರತೆಗೆ ಧಕ್ಕೆ ತರುವಂತಹ ಹಲವು ಅಂಶಗಳಿವೆ ಎಂದು ಅವರು ವಾದಿಸಿದ್ದಾರೆ. DRDO ರಹಸ್ಯವಾಗಿ ತಯಾರಿಸುತ್ತಿರುವ ಔಷಧಗಳ ಕುರಿತಾದ ವಿವರಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಭಾರತೀಯ ಸೇನೆಯ ಸೂಕ್ಷ್ಮ ಕಾರ್ಯಾಚರಣೆಯ ಸ್ಥಳಗಳು ಮತ್ತು ಮಿಲಿಟರಿ ತಂತ್ರಗಳನ್ನು ಸಿನಿಮಾದಲ್ಲಿ ಬಹಿರಂಗಪಡಿಸಲಾಗಿದೆ ಎಂದು ಆರೋಪಿಸಲಾಗಿದೆ.

ಮೃತ ಯೋಧರು ಹಾಗೂ ಹಿರಿಯ ರಕ್ಷಣಾ ಅಧಿಕಾರಿಗಳಿಂದ ಪ್ರೇರಿತವಾದ ಪಾತ್ರಗಳನ್ನು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ಬಿಂಬಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ‘ಸಿನಿಮಾವು ಕೇವಲ ಕಾಲ್ಪನಿಕ ಮತ್ತು ಮನರಂಜನೆಗಾಗಿ ಮಾಡಲ್ಪಟ್ಟಿದ್ದರೂ ಸಹ, ಸಮಾಜ ಮತ್ತು ದೇಶದ ಭದ್ರತೆಯ ಮೇಲೆ ಅದರ ಪ್ರಭಾವವನ್ನು ಅಲ್ಲಗಳೆಯುವಂತಿಲ್ಲ’ ಎಂದು ವಿಚಾರಣೆ ವೇಳೆ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

‘ರಕ್ಷಣಾ ಇಲಾಖೆಯ ಕಾರ್ಯಾಚರಣೆಯ ವಿವರಗಳು ಮತ್ತು ಮಿಲಿಟರಿ ತಂತ್ರಗಳನ್ನು ಬಹಿರಂಗಪಡಿಸುವ ವಿಷಯಗಳ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಬೇಕಾಗಿದೆ. ಈ ಬಗ್ಗೆ ಸೆನ್ಸಾರ್ ಮಂಡಳಿ ಕೆಲವು ನಿರ್ದಿಷ್ಟ ಮಾರ್ಗಸೂಚಿಗಳನ್ನು ಹೊಂದಿರಬೇಕು. ಸದ್ಯಕ್ಕೆ ನಾವು ಈ ಅರ್ಜಿಯನ್ನು ಪರಿಶೀಲಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತಿದ್ದೇವೆ’ ಎಂದು ಪೀಠವು ಹೇಳಿದೆ.

ಇದನ್ನೂ ಓದಿ: ಧುರಂಧರ್ ಗೆಲುವಿನ ಎಫೆಕ್ಟ್: ನೋರಾ ಫತೇಹಿ ಜೊತೆ ಡ್ಯಾನ್ಸ್ ಮಾಡಿದ ರಾಕೇಶ್ ಬೇಡಿ

ನ್ಯಾಯಾಲಯವು ಚಿತ್ರದ ಪ್ರದರ್ಶನಕ್ಕೆ ನೇರ ನಿಷೇಧ ಹೇರದೆ, ಅರ್ಜಿದಾರರ ಅರ್ಜಿಯನ್ನೇ ಅಧಿಕೃತ ಮನವಿ ಎಂದು ಪರಿಗಣಿಸಿ, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಸೆನ್ಸಾರ್ ಮಂಡಳಿಗೆ ಸೂಚಿಸಿ ಅರ್ಜಿಯನ್ನು ವಿಲೇವಾರಿ ಮಾಡಿದೆ. ನೈಜ ಘಟನೆಗಳಿಂದ ಪ್ರೇರಿತರಾಗಿ ಸಿನಿಮಾ ಮಾಡುವಾಗ ಸೃಜನಶೀಲ ಸ್ವಾತಂತ್ರ್ಯ ಎಷ್ಟು ಮುಖ್ಯವೋ, ದೇಶದ ಭದ್ರತೆಯೂ ಅಷ್ಟೇ ಮುಖ್ಯ ಎಂಬ ಚರ್ಚೆ ಈಗ ಚಿತ್ರರಂಗದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ಒಂದೇ ಒಂದು ಪಂದ್ಯವನ್ನಾಡದೆ ರಾಂಚಿಗೆ ವಾಪಸ್ಸಾದ ಧೋನಿ

Source link

ಕಿಡ್ನಿ ವೈಫಲ್ಯಕ್ಕೆ ಟ್ರಾನ್ಸ್‌ಪ್ಲಾಂಟ್ ಯಾವಾಗ ಅಗತ್ಯ ಎಂಬುದನ್ನು ಡಾ. ರವಿಶಂಕರ್ ಅವರಿಂದ ತಿಳಿದುಕೊಳ್ಳಿ – Kannada News | End Stage Renal Disease Treatment: Signs You May Need A Kidney Transplant

ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ಅನೇಕರಿಗೆ ಡಯಾಲಿಸಿಸ್ ಅನಿವಾರ್ಯವಾಗುತ್ತದೆ. ಇದು ಹಾನಿಗೊಳಗಾದ ಕಿಡ್ನಿ (Kidney) ಮಾಡಲಾಗದ ಕೆಲಸವನ್ನು ಮಾಡುತ್ತದೆ. ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಲು ಮತ್ತು ದ್ರವಗಳ ಸಮತೋಲನ, ಹಾಗೂ ಆರೋಗ್ಯವನ್ನು ಕಾಪಾಡಲು ಇದು ಸಹಕಾರಿ. ಆದರೆ, ಡಯಾಲಿಸಿಸ್ ಕೇವಲ ಚಿಕಿತ್ಸೆಯಲ್ಲ, ಇದು ವ್ಯಕ್ತಿಯ ವೃತ್ತಿ, ಸಂಬಂಧಗಳು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನೇ ಬದಲಾಯಿಸುತ್ತದೆ. ವೈದ್ಯರ ಪ್ರಕಾರ, ಡಯಾಲಿಸಿಸ್ ಅಂತಿಮ ಹಂತ ಎಂದು ಪರಿಗಣಿಸುವುದು ಸರಿಯಲ್ಲ, ಬದಲಿಗೆ ರೋಗಿಗಳಿಗೆ ಹೊಸ ಜೀವನದ ದಾರಿ ಎಂದು ಪರಿಗಣಿಸಬೇಕು. ಆದರೆ ಹಲವು ರೋಗಿಗಳಲ್ಲಿ ದೀರ್ಘಕಾಲದ ಪರಿಹಾರಕ್ಕಾಗಿ ಕಿಡ್ನಿ ಕಸಿ ಉತ್ತಮ ಆಯ್ಕೆಯಾಗಿರುತ್ತದೆ. ಹಾಗಾದರೆ ಜೀವಂತ ದಾನಿಗಳಿಂದ ಕಿಡ್ನಿ ಕಸಿ ಏಕೆ ಮುಖ್ಯವಾಗುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಎಚ್ಚರಿಕೆಯ ಲಕ್ಷಣಗಳು:

  • ನಿರಂತರ ಆಯಾಸ ಮತ್ತು ಸುಸ್ತು.
  • ಮುಖ ಮತ್ತು ಪಾದಗಳಲ್ಲಿ ಊತ.
  • ಹಸಿವು ಕಡಿಮೆಯಾಗುವುದು ಮತ್ತು ವಾಕರಿಕೆ.
  • ರಕ್ತದೊತ್ತಡ ನಿಯಂತ್ರಣಕ್ಕೆ ಬಾರದಿರುವುದು.
  • ಮೂತ್ರ ವಿಸರ್ಜನೆಯ ಕ್ರಮದಲ್ಲಿ ಬದಲಾವಣೆ.

ಸೂಚನೆ ನೀಡದೇ ಆವರಿಸುತ್ತದೆ ಕಿಡ್ನಿ ಸಮಸ್ಯೆ;

ಕನಕಪುರ ರೋಡ್ ಮಣಿಪಾಲ್ ಆಸ್ಪತ್ರೆಯ ಯುರಾಲಜಿ, ಆಂಡ್ರಾಲಜಿ, ರೋಬೋಟಿಕ್ ಮತ್ತು ರೀನಲ್ ಟ್ರಾನ್ಸ್‌ಪ್ಲಾಂಟ್ ಸರ್ಜರಿಯ ಕನ್ಸಲ್ಟಂಟ್ ಡಾ. ರವಿಶಂಕರ್ ಜೆ.ಸಿ. ಅವರು ತಿಳಿಸಿರುವ ಮಾಹಿತಿ ಅನುಸಾರ, ಮೂತ್ರಪಿಂಡದ ಹಾನಿಯು ಸಾಮಾನ್ಯವಾಗಿ ಸೂಚನೇ ನೀಡದೇ ಆವರಿಸುತ್ತದೆ. ವಿಶೇಷವಾಗಿ ದೀರ್ಘಕಾಲದ ಮಧುಮೇಹ ಮತ್ತು ರಕ್ತದೊತ್ತಡ ಸಮಸ್ಯೆ ಇರುವವರಲ್ಲಿ. ರೋಗ ಲಕ್ಷಣಗಳು ಗೋಚರಗವಾಗುವ ಹಂತದಲ್ಲಿ, ಮೂತ್ರಪಿಂಡದ ಕಾರ್ಯದಲ್ಲಿ ಸಾಕಷ್ಟು ಸಮಸ್ಯೆ ಎದುರಾಗಿರುತ್ತದೆ. ಈ ರೀತಿ ಮೂತ್ರಪಿಂಡದ ವೈಫಲ್ಯವು ತೀವ್ರ ಹಂತಕ್ಕೆ ತಲುಪಿದಾಗ ಡಯಾಲಿಸಿಸ್ ಅನಿವಾರ್ಯವಾಗುತ್ತದೆ. ಆದರೆ ಹಲವು ರೋಗಿಗಳಲ್ಲಿ ದೀರ್ಘಕಾಲದ ಪರಿಹಾರಕ್ಕಾಗಿ ಕಿಡ್ನಿ ಕಸಿ ಉತ್ತಮ ಆಯ್ಕೆಯಾಗಿರುತ್ತದೆ. ಇದಕ್ಕೊಂದು ಉದಾಹರಣೆಯೆಂದರೆ ಒಬ್ಬ 54 ವರ್ಷದ ವ್ಯಕ್ತಿಗೆ ಮಧುಮೇಹ ಮತ್ತು ರಕ್ತದೊತ್ತಡದಿಂದಾಗಿ ಮೂತ್ರಪಿಂಡದ ವೈಫಲ್ಯ ಉಂಟಾಗಿತ್ತು. ಆರು ತಿಂಗಳ ಕಾಲ ಡಯಾಲಿಸಿಸ್ ಪಡೆಯುತ್ತಿದ್ದರು. ಈ ಹಂತದಲ್ಲಿ, ಅವರ ಕುಟುಂಬವು ಶಾಶ್ವತ ಪರಿಹಾರಕ್ಕಾಗಿ ಕಿಡ್ನಿ ಕಸಿಯ ಬಗ್ಗೆ ಯೋಚಿಸಿತು. ವ್ಯಕ್ತಿಯ ಪತ್ನಿ ತಮ್ಮ ಒಂದು ಕಿಡ್ನಿಯನ್ನು ದಾನ ಮಾಡಲು ಮುಂದೆ ಬಂದರು. ವೈದ್ಯಕೀಯ ತಪಾಸಣೆ ಮತ್ತು ನೈತಿಕ ಅನುಮತಿಗಳ ನಂತರ, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಯಿತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಅಪ್ಪಿತಪ್ಪಿಯೂ ಈ ಆಹಾರಗಳ ಸೇವನೆ ಮಾಡಬೇಡಿ ಇದು ಕಿಡ್ನಿ ಸ್ಟೋನ್ ಆಗಲು ಕಾರಣವಾಗುತ್ತೆ ಎಚ್ಚರ!

ಜೀವಂತ ದಾನಿಗಳಿಂದ ಕಿಡ್ನಿ ಕಸಿ ಏಕೆ ಮುಖ್ಯ?

ಡಾ. ರವಿಶಂಕರ್ ಜೆ.ಸಿ. ಅವರ ಪ್ರಕಾರ, ಯಶಸ್ವಿ ಕಿಡ್ನಿ ಕಸಿಯು ರೋಗಿಗೆ ಸ್ವಾತಂತ್ರ್ಯ ಮತ್ತು ಗುಣಮಟ್ಟದ ಜೀವನವನ್ನು ಮರಳಿ ನೀಡುತ್ತದೆ. ಜೀವಂತ ದಾನಿಗಳಿಂದ ಕಿಡ್ನಿ ಪಡೆದಾಗ ಚಿಕಿತ್ಸೆಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಮತ್ತು ಯಶಸ್ಸಿನ ಪ್ರಮಾಣವೂ ಹೆಚ್ಚಿರುತ್ತದೆ.

ಕಿಡ್ನಿ ಕಸಿಯ ಪ್ರಯೋಜನಗಳು:

  • ಡಯಾಲಿಸಿಸ್‌ನಿಂದ ಮುಕ್ತಿ
  • ಉತ್ತಮ ಗುಣಮಟ್ಟದ ಜೀವನಶೈಲಿ
  • ಹಸಿವು ಮತ್ತು ಶಕ್ತಿಯ ಮಟ್ಟದಲ್ಲಿ ಸುಧಾರಣೆ
  • ವೃತ್ತಿ ಜೀವನಕ್ಕೆ ಶೀಘ್ರವಾಗಿ ಮರಳುವ ಅವಕಾಶ
  • ದೀರ್ಘಕಾಲದ ಉತ್ತಮ ಆರೋಗ್ಯ ಫಲಿತಾಂಶಗಳು

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವರುಣಾರ್ಭಟಕ್ಕೆ ಚಿಕ್ಕಮಗಳೂರಲ್ಲಿ ಮುಳುಗಿದ ರೈಲ್ವೇ ಅಂಡರ್​​ ಪಾಸ್​​, ಹೊಳೆಯಂತಾದ ರಸ್ತೆಗಳು

ಚಿಕ್ಕಮಗಳೂರು, ಮೇ 20: ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಹಲವೆಡೆ ಅವಾಂತರಗಳು ನಡೆದಿವೆ.  ಕಡೂರು, ಬೀರೂರು ಭಾಗದಲ್ಲಿ ಭಾರಿ ಮಳೆಗೆ ರಸ್ತೆಗಳು ಹಾಗೂ ರೈಲ್ವೆ ಅಂಡರ್​ಪಾಸ್ ಜಲಾವೃತವಾಗಿ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಕಡೂರು ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದ ರಸ್ತೆ ಸಂಪೂರ್ಣ ಮುಳುಗಿದ್ದರೆ, ಬಸವೇಶ್ವರ ಸರ್ಕಲ್ ಕೆರೆಯಂತಾಗಿದೆ. ಕಡೂರು-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ 173ರ ರೈಲ್ವೆ ಅಂಡರ್​ಪಾಸ್‌ನಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

WTC Points Table: ಪಂದ್ಯವನ್ನಾಡದೆ 6ನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ – Kannada News | WTC Points Table Shake up: Bangladesh’s Historic Win Pushes India to 6th Rank, Facing Challenge

ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯನ್ನು ಬಾಂಗ್ಲಾದೇಶ (BAN vs PAK) 2-0 ಅಂತರದಿಂದ ಗೆದ್ದುಕೊಂಡಿದೆ. ಈ ಸರಣಿಯ ಅಂತ್ಯದೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ (World Test Championship) ಪಾಯಿಂಟ್ ಪಟ್ಟಿಯಲ್ಲೂ ಸಾಕಷ್ಟು ಎರಿಳಿತಗಳಾಗಿವೆ. ಅದರಲ್ಲೂ ಟೆಸ್ಟ್ ಕ್ರಿಕೆಟ್​ನಲ್ಲಿ ಸೋಲುಗಳಿಂದ ಕಂಗೆಟ್ಟಿರುವ ಟೀಂ ಇಂಡಿಯಾದ ಸ್ಥಾನ ಹದೆಗೆಟ್ಟಿದೆ. ಇದೀಗ ಪಾಕಿಸ್ತಾನದ ವಿರುದ್ಧ ಬಾಂಗ್ಲಾದೇಶ ಟೆಸ್ಟ್ ಸರಣಿ ಗೆದ್ದಿರುವುದು ಟೀಂ ಇಂಡಿಯಾ ಸ್ಥಾನಕ್ಕೆ ಕುತ್ತು ತಂದಿದೆ. ಬಾಂಗ್ಲಾದೇಶದ ಗೆಲುವಿನಿಂದ ಒಂದು ಸ್ಥಾನ ಕುಸಿತ ಕಂಡಿರುವ ಟೀಂ ಇಂಡಿಯಾ (Team India) ಇದೀಗ 6ನೇ ಸ್ಥಾನಕ್ಕೆ ಬಂದು ನಿಂತಿದೆ. ಹೀಗಾಗಿ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೇರುವುದು ಕಷ್ಟಕರವಾಗಿದೆ.

9 ಪಂದ್ಯಗಳಲ್ಲಿ 4 ಗೆಲುವು

ಮಿರ್ಪುರದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 104 ರನ್‌ಗಳ ಬೃಹತ್ ಜಯ ಸಾಧಿಸಿದ್ದ ಬಾಂಗ್ಲಾದೇಶ, ಎರಡನೇ ಟೆಸ್ಟ್‌ನಲ್ಲಿ ಪಾಕಿಸ್ತಾನವನ್ನು 78 ರನ್‌ಗಳಿಂದ ಸೋಲಿಸಿತು. ಇದೀಗ ಬಾಂಗ್ಲಾದೇಶ ಆಡಿರುವ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಎರಡು ಗೆಲುವು, ಒಂದು ಸೋಲು ಮತ್ತು ಒಂದು ಡ್ರಾದೊಂದಿಗೆ 58.33 ರ ಗೆಲುವಿನ ಶೇಕಡಾವಾರು ಹೊಂದಿದೆ. ಇತ್ತ ಟೀಂ ಇಂಡಿಯಾ ಇದುವರೆಗೆ ಆಡಿರುವ ಒಂಬತ್ತು ಟೆಸ್ಟ್ ಪಂದ್ಯಗಳಲ್ಲಿ ನಾಲ್ಕು ಗೆಲುವು ಮತ್ತು ಅಷ್ಟೇ ಸೋಲು ಹಾಗೂ ಒಂದು ಡ್ರಾದೊಂದಿಗೆ 48.15 ರ ಗೆಲುವಿನ ಶೇಕಡಾವಾರು ಹೊಂದಿದೆ.

ಮೊದಲ ಎರಡು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗಳಲ್ಲಿ ಫೈನಲ್ ತಲುಪಿದ್ದ ಭಾರತ ತಂಡ ಈ ವರ್ಷ ಇನ್ನೂ ಟೆಸ್ಟ್ ಪಂದ್ಯವನ್ನು ಆಡಿಲ್ಲ. ಭಾರತ ತಂಡ ಜೂನ್ 6 ರಿಂದ ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಪಂದ್ಯವನ್ನು ಆಡಲಿದೆ, ಆದರೆ ಅದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿಲ್ಲ. ಈ ವರ್ಷದ ಕೊನೆಯಲ್ಲಿ ಭಾರತ ತಂಡ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧ ತಲಾ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ನಂತರ 2027 ರಲ್ಲಿ ತವರಿನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

4 ತಂಡಗಳನ್ನು ಹಿಂದಿಕ್ಕಿದ ಬಾಂಗ್ಲಾ

ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಬಾಂಗ್ಲಾದೇಶ ಕ್ಲೀನ್ ಸ್ವೀಪ್ ಮಾಡಿದ್ದು ಪಾಕಿಸ್ತಾನ ಮತ್ತು ಟೀಂ ಇಂಡಿಯಾಗೆ ಹೊಡೆತ ನೀಡಿದ್ದು ಮಾತ್ರವಲ್ಲದೆ, ಇತರ ಎರಡು ತಂಡಗಳಾದ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್‌ಗಳನ್ನು ಹಿಂದಿಕ್ಕಿದೆ. ಸರಳವಾಗಿ ಹೇಳುವುದಾದರೆ, ಬಾಂಗ್ಲಾದೇಶ ಈಗ WTC ಪಾಯಿಂಟ್‌ ಪಟ್ಟಿಯಲ್ಲಿ 4 ದೇಶಗಳಿಗಿಂತ ಮುಂದಿದೆ.

ಲಾರ್ಡ್ಸ್​ನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟ

WTC ಪಾಯಿಂಟ್‌ ಪಟ್ಟಿ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025-2027 ಪಾಯಿಂಟ್‌ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡವು ಈವರೆಗೆ ಆಡಿರುವ ಎಂಟು ಟೆಸ್ಟ್ ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು ಒಂದು ಪಂದ್ಯದಲ್ಲಿ ಸೋತಿದೆ. ಡಬ್ಲ್ಯೂಟಿಸಿ ಅಂಕಗಳ ಪಟ್ಟಿಯಲ್ಲಿ 87.50 ಗೆಲುವಿನ ಶೇಕಡಾವಾರುವಿನೊಂದಿಗೆ ಅಗ್ರಸ್ಥಾನದಲ್ಲಿದೆ. ನ್ಯೂಜಿಲೆಂಡ್ ತಂಡವು ಮೂರು ಟೆಸ್ಟ್‌ಗಳಲ್ಲಿ ಎರಡು ಗೆಲುವು ಮತ್ತು ಒಂದು ಡ್ರಾ ದೊಂದಿಗೆ 77.78 ಗೆಲುವಿನ ಶೇಕಡಾವಾರುವಿನೊಂದಿಗೆ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಮೂರನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ ನಾಲ್ಕನೇ ಸ್ಥಾನದಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜಧನ ವಂಚಿಸಿದ ಕ್ವಾರಿಗಳಿಗೆ ಕೋಟ್ಯಂತರ ರೂ ದಂಡ: ರಾಜಕೀಯ ಪ್ರಭಾವಿಗಳಿಗೂ ಶಾಕ್! – Kannada News | Quarries That Defrauded State Revenue Face Crores in Fines; Political Leaders Left Shocked

ಕೊಪ್ಪಳ, ಮೇ 20: ಸರ್ಕಾರದ ಪರವಾನಿಗೆ ಪಡೆದು ರಾಜಧನ ಪಾವತಿಸದೆ ಕಲ್ಲು ಗಣಿಗಾರಿಕೆ (Stone mining) ನಡೆಸುತ್ತಿದ್ದವರ ವಿರುದ್ಧ ಗಣಿ ಮತ್ತು ಭೂವಿಜ್ಞಾನ ಇಲಾಖೆ ಇದೀಗ ಕಠಿಣ ಕ್ರಮಕ್ಕೆ ಮುಂದಾಗಿದೆ. ನಿಯಮ ಉಲ್ಲಂಘಿಸಿದ ಗಣಿ ಮಾಲೀಕರಿಗೆ ಭಾರೀ ದಂಡ (fine) ವಿಧಿಸುವ ಮೂಲಕ ಸರ್ಕಾರ ತನ್ನ ಖಜಾನೆ ತುಂಬಿಸಲು ಸಜ್ಜಾಗಿದೆ. ರಾಜ್ಯಾದ್ಯಂತ ಜಾರಿಯಾಗಬೇಕಿದ್ದ ಈ ಆದೇಶ ಸದ್ಯಕ್ಕೆ ಕೊಪ್ಪಳದಲ್ಲಿ ಮಾತ್ರ ಜಾರಿಯಾಗಿದ್ದು, ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಇನ್ನು ಇದರಲ್ಲಿ ಪ್ರಭಾವಿ ರಾಜಕಾರಣಿಗಳು ಇರುವುದು ಸದ್ಯ ಸಂಚಲನ ಮೂಡಿಸಿದೆ.

ಮುಖ್ಯಾಂಶಗಳು

  • ಕಲ್ಲು ಗಣಿಗಾರಿಕೆ: ಕಠಿಣ ಕ್ರಮಕ್ಕೆ ಮುಂದಾದ ಗಣಿ ಮತ್ತು ಭೂವಿಜ್ಞಾನ ಇಲಾಖೆ
  • 60 ಕ್ವಾರಿಗಳಿಗೆ ಬರೋಬ್ಬರಿ 110 ಕೋಟಿ ರೂ ದಂಡದ ಬಿಸಿ!
  • ಪ್ರಭಾವಿ ರಾಜಕಾರಣಿಗಳೂ ನೋಟಿಸ್ ಜಾರಿ

ರಾಜ್ಯದಲ್ಲಿ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿ ಮಾಡಿಕೊಂಡಿದೆ ಎನ್ನುವ ಆರೋಪವಿದೆ. ಸದ್ಯ ಈ ಆರೋಪದಿಂದ ಹೊರ ಬರಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಲ್ಲು ಕ್ವಾರಿಗಳ ಮೇಲೆ ಕಣ್ಣಿಟ್ಟಿದೆ. ಸರ್ಕಾರ ಪರವಾಣಿಗೆ ಪಡೆದು ಗಣಿಗಾರಿಕೆ ಮಾಡುತ್ತಿದ್ದ ಗಣಿ ಮಾಲೀಕರು ರಾಜಧನ ಪಾವತಿಸದೆ ಇರುವವರಿಗೆ, ನೋಟಿಸ್ ನೀಡಿ ರಾಜಧನ ಪಾವತಿ ಮಾಡುವಂತೆ ಎಚ್ಚರಿಕೆ ನೀಡಲಾಗಿದೆ. ಇನ್ನು ಈ ಆದೇಶ ರಾಜ್ಯಾದ್ಯಂತ ಪಾಲನೆ ಮಾಡಬೇಕಿ ಕೊಪ್ಪಳದಲ್ಲಿ ಮಾತ್ರ ಜಾರಿಯಾಗಿದೆ. ಇದರಲ್ಲಿ ಕೊಪ್ಪಳದ ಪ್ರಭಾವಿ ರಾಜಕಾರಣಿ ಹಿಟ್ನಾಳ್​ ಬ್ರದರ್ಸ್​​ಗೂ ಶಾಕ್ ಎದುರಾಗಿದೆ. ಏಕೆಂದರೆ ಗಣಿ ಇಲಾಖೆ ಅವರಿಗೂ ನೋಟಿಸ್ ನೀಡಿದೆ.

60 ಕ್ವಾರಿಗಳಿಗೆ ಗಣಿ ಇಲಾಖೆ ಶಾಕ್​! 110 ಕೋಟಿ ರೂ ದಂಡ

ಜಿಲ್ಲೆಯೊಂದರಲ್ಲೇ ಒಟ್ಟು 60 ಕ್ವಾರಿಗಳಿಗೆ ಗಣಿ ಇಲಾಖೆ ದಂಡದ ಬಿಸಿ ಮುಟ್ಟಿಸಿದೆ. ಬರೋಬ್ಬರಿ 110 ಕೋಟಿ ರೂ ದಂಡವನ್ನು ವಿಧಿಸಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಇದರಲ್ಲಿ ಅತ್ಯಂತ ಗಮನಾರ್ಹ ಸಂಗತಿ ಎಂದರೆ, ಕೊಪ್ಪಳದ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ವಾರಿಗಳಿಗೂ ದಂಡ ಬಿದ್ದಿದೆ. ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್ ಹಾಗೂ ಅವರ ಸಹೋದರ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಒಡೆತನದ ಕ್ವಾರಿಗೆ ಇಲಾಖೆ ಭಾರೀ ಮೊತ್ತದ ದಂಡ ವಿಧಿಸಿದೆ. ಜನಪ್ರತಿನಿಧಿಗಳ ಕ್ವಾರಿಗೆ ದಂಡ ಬಿದ್ದಿರುವುದು ಈಗ ಜಿಲ್ಲೆಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇನ್ನು ಜಿಲ್ಲೆಯಾದ್ಯಂತ 300 ಕೋಟಿಗೂ ಅಧಿಕ ದಂಡ ಹಾಕಿರಬಹುದು ಎನ್ನುವುದು ಸಂಸದರ ಮಾತು.

ಸರ್ಕಾರದ ಮಟ್ಟದಲ್ಲಿ ಮಾತುಕತೆ ಮಾಡುತ್ತೇವೆ ಎಂದ ರಾಜಶೇಖರ್ ಹಿಟ್ನಾಳ್

ಇಲಾಖೆಯ ಈ ದಿಢೀರ್ ಕ್ರಮದಿಂದ ಎಚ್ಚೆತ್ತುಕೊಂಡಿರುವ ಹಿಟ್ನಾಳ್ ಬ್ರದರ್ಸ್, ಸದ್ಯಕ್ಕೆ ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂದಾಗಿದ್ದಾರೆ. ಈ ದಂಡದ ಪ್ರಕ್ರಿಯೆ ಕುರಿತಂತೆ ನಾವು ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸುತ್ತೇವೆ ಎಂದು ಸಂಸದ ರಾಜಶೇಖರ್ ಹಿಟ್ನಾಳ್​ ಹೇಳಿದ್ದಾರೆ. ರಾಜಧನ ಪಾವತಿ ಮಾಡಬೇಕಾದರೆ ಸರ್ಕಾರಿ ಕೆಲಸಗಳಿಗೆ ಉಪಯೋಗಿಸಿದ ಜಲ್ಲಿ, ಕಲ್ಲುಗಳಿಗೆ, ಗುತ್ತಿಗೆದಾರರು ರಾಜಧನ ಪಾವತಿ ಮಾಡಬೇಕು, ಆದರೆ ಅದು ಗುತ್ತಿಗೆದಾರರು ಪಾವತಿಸಿಲ್ಲ. ಏಕೆಂದರೆ ಸರ್ಕಾರಿ ಕೆಲಸಗಳನ್ನ ಮಾಡಿರುವ ಗುತ್ತಿಗೆದಾರರಿಗೆ ಸರ್ಕಾರ ಹಣ ಪಾವತಿ ಮಾಡದಿರುವುದಕ್ಕೆ ರಾಜಧನ ಪಾವತಿಸಿಲ್ಲ ಎಂಬುದು ಸಂಸದರ ವಾದವಾಗಿದೆ.

ಇದನ್ನೂ ಓದಿ: ಜನರ ಬದುಕಿಗೆ ಮಾರಕವಾದ ಗಣಿಗಾರಿಕೆ ಧೂಳು: ಸರ್ಕಾರ ಸೈಲೆಂಟ್, ಸಿಡಿದೆದ್ದ ರೈತಸಂಘ

ಸದ್ಯ ರಾಜ್ಯದ ಬೊಕ್ಕಸ ತುಂಬಿಸಲು ಸರ್ಕಾರ ಗಣಿ ಇಲಾಖೆಯ ಮೇಲೆ ಅಸ್ತ್ರ ಪ್ರಯೋಗ ಮಾಡಿದರೆ ಇದಕ್ಕೆ ಗುತ್ತಿಗೆದಾರರು ಬಿಲ್ ಪಾವತಿ ಮಾಡಿದರೆ ಮಾತ್ರ ರಾಜಧನ ಸಂದಾಯ ಆಗತ್ತೆ ಎನ್ನುವ ಮಾತು ಕೇಳಿಬರುತ್ತಿದೆ. ಸದ್ಯ ಗುತ್ತಿಗೆದಾರರು, ಗಣಿ ಮಾಲಿಕರು ಹಾಗೂ ಸರ್ಕಾರದ ನಡುವಿನ ಸಮಸ್ಯೆ ಮುಂದೆ ಯಾವ ಹಂತ ತಲುಪತ್ತೆ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನೀಟ್ ಮರುಪರೀಕ್ಷೆ: ಭದ್ರತೆ, ಗುಪ್ತಚರ ಮತ್ತು ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳೊಂದಿಗೆ ಸಚಿವ ಧರ್ಮೇಂದ್ರ ಪ್ರಧಾನ್ ಸಭೆ – Kannada News | Neet UG re exam: Dharmendra Pradhan chairs high level meeting with Security and Intelligence agencies

ನವದೆಹಲಿ, ಮೇ 20: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ಮುಂಬರುವ ನೀಟ್-ಯುಜಿ (NEET-UG) ಮರು-ಪರೀಕ್ಷೆಯ (Re-examination) ಹಿನ್ನೆಲೆಯಲ್ಲಿ ಕೇಂದ್ರ ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ್ದಾರೆ. ಪರೀಕ್ಷೆಯನ್ನು ಸುರಕ್ಷಿತ, ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ನಡೆಸಲು ಕಟ್ಟುನಿಟ್ಟಿನ ನಿಗಾ ಮತ್ತು ದೋಷರಹಿತ ಭದ್ರತಾ ವ್ಯವಸ್ಥೆಗಳನ್ನು ಮಾಡುವಂತೆ ಅವರು ಒತ್ತಿಹೇಳಿದ್ದಾರೆ.

ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಮಹಾನಿರ್ದೇಶಕರು ಸಹ ಈ ಸಭೆಯಲ್ಲಿ ಭಾಗವಹಿಸಿದ್ದರು. ಪರೀಕ್ಷಾ ಪ್ರಕ್ರಿಯೆಯಲ್ಲಿ ಎದುರಾಗಬಹುದಾದ ಯಾವುದೇ ರೀತಿಯ ಲೋಪದೋಷಗಳನ್ನು ಮುಂಚಿತವಾಗಿಯೇ ಗುರುತಿಸಲು ಮತ್ತು ಸಮಯಕ್ಕೆ ಸರಿಯಾಗಿ ತಡೆಗಟ್ಟುವ ಹಾಗೂ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧತೆಗಳನ್ನು ವಿವರವಾಗಿ ಪರಿಶೀಲಿಸಲಾಯಿತು.

ಧರ್ಮೇಂದ್ರ ಪ್ರಧಾನ್ ಸಭೆ ನಡೆಸುತ್ತಿರುವ ವಿಡಿಯೋ

ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳೊಂದಿಗೆ ಸಭೆ

ಇದೇ ಸಂದರ್ಭದಲ್ಲಿ ಪ್ರಮುಖ ಸಾಮಾಜಿಕ ಮಾಧ್ಯಮಗಳಾದ ಮೆಟಾ (Meta), ಗೂಗಲ್ (Google) ಮತ್ತು ಟೆಲಿಗ್ರಾಮ್ (Telegram) ಪ್ರತಿನಿಧಿಗಳೊಂದಿಗೆ ಮತ್ತೊಂದು ಪ್ರತ್ಯೇಕ ಸಭೆ ನಡೆಸಲಾಯಿತು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ, ವಿಶೇಷವಾಗಿ ಟೆಲಿಗ್ರಾಮ್ ಚಾನೆಲ್‌ಗಳು ಮತ್ತು ಅನಾಮಧೇಯ ಆನ್‌ಲೈನ್ ಗ್ರೂಪ್‌ಗಳ ಮೂಲಕ ಹರಡುತ್ತಿರುವ ಸುಳ್ಳು ಸುದ್ದಿಗಳ (Misinformation) ಬಗ್ಗೆ ಸಭೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಲಾಯಿತು.

ಇದನ್ನೂ ಓದಿ: ಒಂದು ರಾಷ್ಟ್ರ, ಒಂದು ಚುನಾವಣೆಯಿಂದ 7 ಲಕ್ಷ ಕೋಟಿ ರೂ ಉಳಿತಾಯ, ಜಿಡಿಪಿ ಶೇ. 1.6 ವೃದ್ಧಿ: ಜೆಪಿಸಿ ಅನಿಸಿಕೆ

ಸುಳ್ಳು ಸುದ್ದಿಗಳ ಜಾಲ ಮತ್ತು ತನಿಖೆ

ಅಧಿಕಾರಿಗಳು ಗಮನಿಸಿದಂತೆ, ಪ್ರಮುಖ ಪರೀಕ್ಷೆಗಳು ಹತ್ತಿರ ಬರುತ್ತಿದ್ದಂತೆ ಇಂತಹ ಹಲವಾರು ಚಾನೆಲ್‌ಗಳು ಸಕ್ರಿಯಗೊಳ್ಳುತ್ತವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಸುಳ್ಳು ಹಕ್ಕುಗಳು, ಕ್ಲಿಕ್‌ಬೈಟ್ (clickbait) ಕಂಟೆಂಟ್‌ಗಳು ಮತ್ತು ಧೃಢೀಕರಿಸದ ಮಾಹಿತಿಗಳನ್ನು ಹರಡುವ ಮೂಲಕ ಇವು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮತ್ತು ಗೊಂದಲವನ್ನು ಸೃಷ್ಟಿಸುತ್ತವೆ. ಇಂತಹ ಲಿಂಕ್‌ಗಳು ಬಳಕೆದಾರರನ್ನು ಸ್ವಯಂಚಾಲಿತ ಬೋಟ್‌ಗಳು (bots) ಮತ್ತು ಸುಳ್ಳು ಮಾಹಿತಿಯನ್ನು ಹರಡುವ ನಕಲಿ ಗ್ರೂಪ್‌ಗಳಿಗೆ ಕರೆದೊಯ್ಯುತ್ತವೆ ಎಂದು ಸಭೆಯಲ್ಲಿ ಎತ್ತಿ ತೋರಿಸಲಾಯಿತು.

ಗುಪ್ತಚರ ಸಂಸ್ಥೆಗಳು ನೀಡಿದ ಮಾಹಿತಿಯ ಪ್ರಕಾರ, ಕೇವಲ ಕೆಲವು ನಿರ್ದಿಷ್ಟ ಫೋನ್ ಸಂಖ್ಯೆಗಳನ್ನು ಬಳಸಿಕೊಂಡು ಇಂತಹ ನಕಲಿ ಮತ್ತು ಸಂಶಯಾಸ್ಪದ ಚಾನೆಲ್‌ಗಳನ್ನು ನಿರ್ವಹಿಸಲಾಗುತ್ತಿದೆ. ಇದು ವ್ಯವಸ್ಥಿತ ಮತ್ತು ಸಂಘಟಿತ ಜಾಲವಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಸೂಚಿಸುತ್ತದೆ.

ಇದನ್ನೂ ಓದಿ: ಭಾರತ-ಇಟಲಿ ನಡುವೆ ವಿಶೇಷ ಕಾರ್ಯತಂತ್ರಾತ್ಮಕ ಪಾಲುದಾರಿಕೆ: ಪಿಎಂ ಮೋದಿ ಘೋಷಣೆ

ಶಿಕ್ಷಣ ಸಚಿವರ ಕಡಕ್ ಸೂಚನೆಗಳು

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂತಹ ಜಾಲಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ:

  • ಪರೀಕ್ಷೆಗೂ ಮುನ್ನ ಸುಳ್ಳು ಮಾಹಿತಿ, ಪ್ರಚಾರ ಮತ್ತು ಆತಂಕವನ್ನು ಹರಡುವ ಚಾನೆಲ್‌ಗಳನ್ನು ಮುಂಚಿತವಾಗಿಯೇ ಗುರುತಿಸಿ, ಬ್ಲಾಕ್ ಮಾಡಲು ಮತ್ತು ಅವುಗಳನ್ನು ಡಿಲೀಟ್ (takedown) ಮಾಡಲು ಆದೇಶಿಸಿದ್ದಾರೆ.
  • ಸುಳ್ಳು ಸುದ್ದಿಗಳನ್ನು ತಕ್ಷಣವೇ ತಡೆಗಟ್ಟಲು ಮತ್ತು ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಕಾಪಾಡಲು ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಶಿಕ್ಷಣ ಸಚಿವಾಲಯ, ಎನ್‌ಟಿಎ (NTA) ಮತ್ತು ಕಾನೂನು ಜಾರಿ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡಬೇಕು ಎಂದು ಸಚಿವರು ಒತ್ತಿಹೇಳಿದ್ದಾರೆ.
  • ವಿದ್ಯಾರ್ಥಿಗಳನ್ನು ಇಂತಹ ದಾರಿ ತಪ್ಪಿಸುವ ಜಾಲಗಳಿಂದ ರಕ್ಷಿಸುವುದು ಮತ್ತು ಪರೀಕ್ಷಾ ಪ್ರಕ್ರಿಯೆಯ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಉಳಿಸಿಕೊಳ್ಳುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 7:02 pm, Wed, 20 May 26

Source link