All posts by nagaraj11081993

ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ: ಜೆಡಿಎಸ್​​ಗೆ 1 ಸೀಟು!

ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ: ಜೆಡಿಎಸ್​​ಗೆ 1 ಸೀಟು!

ಬೆಂಗಳೂರು, (ಮಾರ್ಚ್ 10): ಕರ್ನಾಟಕ ವಿಧಾನಪರಿಷತ್ (Karnataka Legislative Council) ನಾಲ್ಕು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಿಗೆ ಬಿಜೆಪಿ (BJP)  ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಒಟ್ಟು ನಾಲ್ಕು ಸೀಟುಗಳ ಪೈಕಿ ಒಂದು ಸ್ಥಾನವನ್ನು ಮಿತ್ರ ಪಕ್ಷ ಜೆಡಿಎಸ್​​ಗೆ ಬಿಟ್ಟುಕೊಟ್ಟಿದ್ದು, ಇನ್ನುಳಿದ ಮೂರು ಈಶಾನ್ಯ ಶಿಕ್ಷಕರ ಕ್ಷೇತ್ರ, ಪೂರ್ವ ಪದವೀಧರ ಕ್ಷೇತ್ರ ಹಾಗೂ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ.  ಇನ್ನುಳಿದ 1  ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್​​ಗೆ ಬಿಟ್ಟುಕೊಟ್ಟಿದೆ. ಇದರೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್ ಹಾಗೂ ಬಿಜೆಪಿ ವಿಧಾನ ಪರಿಷತ್ ಚುನಾವಣೆಗೂ ತಮ್ಮ ಮೈತ್ರಿಯನ್ನು ಮುಂದುವರೆಸಿದೆ.

ಯಾರು ಯಾವ ಕ್ಷೇತ್ರಕ್ಕೆ?

ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಸುಶೀಲ್ ನಮೋಶಿ, ಪೂರ್ವ ಪದವೀಧರ ಕ್ಷೇತ್ರಕ್ಕೆ ಎಸ್.ವಿ ಸಂಕನೂರ್ ಹಾಗೂ
ಆಗ್ನೇಯ ಪದವೀಧರ ಕ್ಷೇತ್ರದ ಟಿಕೆಟ್ ಕೆ.ಎಂ.ಸುರೇಶ್ ಅವರಿಗೆ ನೀಡಲಾಗಿದೆ. ಇನ್ನುಳಿದ ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್​​ಗೆ ಬಿಟ್ಟುಕೊಟ್ಟಿದ್ದು, ಜೆಡಿಎಸ್ ಯಾರನ್ನು ಕಣಕ್ಕಿಳಿಸಲಿದೆ ಎನ್ನುವುದೇ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಎಲೆಕ್ಷನ್​​​ಗೆ 2 ವರ್ಷ ಮೊದಲೇ ಬಿಜೆಪಿ ಅಭ್ಯರ್ಥಿಗಳ ಘೋಷಣೆ: ಬಿಎಸ್​​ವೈ ವಿರುದ್ಧ ಭುಗಿಲೆದ್ದ ಆಕ್ರೋಶ

ಜೆಡಿಎಸ್​​ಗೆ 1 ಸ್ಥಾನ

ಒಟ್ಟು ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್ ಎರಡಕ್ಕೆ ಬೇಡಿಕೆ ಇಟ್ಟಿತ್ತು. ಬೆಂಗಳೂರು ಶಿಕ್ಷಕರ ಮತ್ತು ಆಗ್ನೇಯ ಪದವೀಧರ ಪದವೀಧರ ಕ್ಷೇತ್ರಗಳನ್ನು ಜೆಡಿಎಸ್ ಕೇಳಿತ್ತು. ಆದ್ರೆ, ಆಗ್ನೇಯ ಪದವೀಧರ ಕ್ಷೇತ್ರವನ್ನು ಬಿಜೆಪಿಯ ಚಿದಾನಂದಗೌಡ ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಈ ಕ್ಷೇತ್ರವನ್ನು ಬಿಜೆಪಿ ಬಿಟ್ಟುಕೊಟ್ಟಿಲ್ಲ. ಇನ್ನು ಕಾಂಗ್ರೆಸ್‌ನ ಪುಟ್ಟಣ್ಣ ಇರುವ ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್​​ಗೆ ಬಿಟ್ಟು ಕೊಡಲಾಗಿದೆ.

ಕಾಂಗ್ರೆಸ್ ಅಭ್ಯರ್ಥಿಗಳು

ಕಾಂಗ್ರೆಸ್ ಈಗಾಗಲೇ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಪುಟ್ಟಣ್ಣ ಮರು ಸ್ಪರ್ಧೆ ಮಾಡಲಿದ್ದಾರೆ. ಪಶ್ಚಿಮ ಪದವೀಧರರ ಕ್ಷೇತ್ರದಿಂದ ಮೋಹನ್ ಲಿಂಬಿಕೈ, ಆಗ್ನೇಯ ಪದವೀಧರರ ಕ್ಷೇತ್ರದಿಂದ ಶಶಿ ಹುಲಿಕುಂಟೆಮಠ ಮತ್ತು ಈಶಾನ್ಯ ಶಿಕ್ಷಕರ ಕ್ಷೇತ್ರದ ಟಿಕೆಟ್ ಶರಣಪ್ಪ ಮಟ್ಟೂರ್ ಅವರಿಗೆ ನೀಡಲಾಗಿದೆ.

2020ರಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರ, ಆಗ್ನೇಯ ಪದವೀಧರರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆಗಳು ನಡೆದವು. ಎರಡು ಪದವೀಧರರ ಕ್ಷೇತ್ರಗಳಿಂದ ಎಸ್ ವಿ ಸಂಕನೂರು ಮತ್ತು ಚಿದಾನಂದ್ ಗೌಡ ಆಯ್ಕೆಯಾದ್ದರು. ಎರಡು ಶಿಕ್ಷಕರ ಕ್ಷೇತ್ರಗಳಿಂದ ಶಶಿಲ್ ನಮೋಶಿ ಮತ್ತು ಪುಟ್ಟಣ್ಣ ಆಯ್ಕೆಯಾದ್ದರು. ನಾಲ್ವರೂ ಬಿಜೆಪಿಯವರಾಗಿದ್ದರು. ಆದರೆ ಪುಟ್ಟಣ್ಣ ಕೇಸರಿ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರಿದ್ದರು. ನಂತರ, ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಅದೇ ಕ್ಷೇತ್ರದಿಂದ ಮರು ಆಯ್ಕೆಯಾದರು. ಇವರೆಲ್ಲರ ಅವಧಿಗಳು 2026ರ ನವೆಂಬರ್ 11 ರಂದು ಕೊನೆಗೊಳ್ಳುತ್ತವೆ. ಆದ್ರೆ, ಅವಧಿ ಮುಗಿಯುವ ಒಂದು ತಿಂಗಳ ಮೊದಲು ಚುನಾವಣೆಗಳನ್ನು ನಡೆಸಬೇಕು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಭಾರತದಲ್ಲಿ ಎಲ್​ಪಿಜಿ ಬಿಕ್ಕಟ್ಟು; ಐಪಿಎಲ್ ಆರಂಭಕ್ಕೆ ವಿಘ್ನ

ಇರಾನ್ ಹಾಗೂ ಇಸ್ರೇಲ್ ನಡುವಿನ ಸಂಘರ್ಷ (Middle East Conflict) ಭಾರತದ ಮೇಲೆ ಗಾಢ ಪರಿಣಾಮ ಬೀರುತ್ತಿದೆ. ಇಂಧನ ಪೂರೈಕೆ ಮೇಲಿನ ನಿರ್ಬಂಧಗಳಿಂದಾಗಿ ದೇಶದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಗಗನಕ್ಕೇರುವ ಮುನ್ಸೂಚನೆ ಸಿಕ್ಕಿದೆ. ಇದೆಲ್ಲದರ ನಡುವೆ ಇದ್ದಕ್ಕಿದ್ದಂತೆ ಹುಟ್ಟಿಕೊಂಡಿರುವ ಎಲ್​ಪಿಜಿ (LPG) ಬಿಕ್ಕಟ್ಟು ಮಧ್ಯಮ ವರ್ಗಕ್ಕೆ ದೊಡ್ಡ ಹೊಡೆತ ನೀಡಿದೆ. ಕಮರ್ಷಿಯಲ್ ಸಿಲಿಂಡರ್​​ ಬೆಲೆ 115 ರೂ ಏರಿಕೆ ಆಗಿದ್ದು, ಇದು ಹೋಟೆಲ್ ಉದ್ಯಮವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಮಾತ್ರವಲ್ಲದೆ ಬೆಲೆ ಏರಿಕೆ ಜನಜೀವನದ ಮೇಲೂ ಪರಿಣಾಮ ಬೀರುತ್ತಿದೆ. ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಾಸ ಆಗಿರುವುದು ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಬೇಕಿರುವ ಐಪಿಎಲ್ (IPL 2026)​ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ- ಧುಮಾಲ್

ದೇಶದಲ್ಲಿ ಉಂಟಾಗಿರುವ ಎಲ್​ಪಿಜಿ ಪೂರೈಕೆಯಲ್ಲಿನ ಬಿಕ್ಕಟ್ಟನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಅರುಣ್ ಧುಮಾಲ್ ಹೇಳಿದ್ದಾರೆ. ‘ನಾವು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದೇವೆ. ಈ ಯುದ್ಧದಲ್ಲಿ ಪ್ರತಿದಿನ ಹೊಸ ಬೆಳವಣಿಗೆಗಳು ನಡೆಯುತ್ತಿವೆ, ಆದ್ದರಿಂದ ಈ ಸಮಯದಲ್ಲಿ ಖಚಿತವಾಗಿ ಏನನ್ನೂ ಹೇಳಲಾಗುವುದಿಲ್ಲ. ಐಪಿಎಲ್ 2026, ಮುಂದಿನ ಕೆಲವು ದಿನಗಳಲ್ಲಿ ಪ್ರಾರಂಭವಾಗಲಿದೆ. ಆ ಸಮಯದಲ್ಲಿ ಪರಿಸ್ಥಿತಿಯ ತೀವ್ರತೆಯನ್ನು ಆಧರಿಸಿ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಧುಮಾಲ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಐಪಿಎಲ್ ವೇಳಾಪಟ್ಟಿ ವಿಳಂಬಕ್ಕೆ ಕಾರಣ

ಐಪಿಎಲ್ 2026 ಮಾರ್ಚ್ 28 ರಂದು ಪ್ರಾರಂಭವಾಗಲಿದೆ. ಆದಾಗ್ಯೂ, ಅದರ ವೇಳಾಪಟ್ಟಿಯನ್ನು ಇನ್ನೂ ಘೋಷಿಸಲಾಗಿಲ್ಲ. ಹಲವಾರು ರಾಜ್ಯಗಳಲ್ಲಿ ನಡೆಯಬೇಕಾಗಿರುವ ಚುನಾವಣೆಗಳಿಂದಾಗಿ ವೇಳಾಪಟ್ಟಿ ಪ್ರಕಟ ವಿಳಂಬವಾಗುತ್ತಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಹೀಗೆ ಮುಂದುವರಿದರೆ ಐಪಿಎಲ್ ಮಾತ್ರವಲ್ಲದೆ ಕೈಗಾರಿಕೆಗಳು, ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಸೇರಿದಂತೆ ಸಮಾಜದ ಪ್ರತಿಯೊಂದು ವಲಯದ ಮೇಲೂ ಪರಿಣಾಮ ಬೀರುತ್ತದೆ.

ಏತನ್ಮಧ್ಯೆ, ಹಲವಾರು ಫ್ರಾಂಚೈಸಿಗಳು ಈಗಾಗಲೇ ತಮ್ಮ ತಮ್ಮ ನಗರಗಳಲ್ಲಿ ತಮ್ಮ ಅಭ್ಯಾಸ ಶಿಬಿರವನ್ನು ಪ್ರಾರಂಭಿಸಿವೆ. ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ತಯಾರಿ ಶುರು ಮಾಡಿದೆ. ರಾಜಸ್ಥಾನ ರಾಯಲ್ಸ್ ಕೂಡ ತಮ್ಮ ತರಬೇತಿ ಶಿಬಿರವನ್ನು ಪ್ರಾರಂಭಿಸಿವೆ. ಪಂಜಾಬ್ ಕಿಂಗ್ಸ್ ಕಳೆದ ಕೆಲವು ದಿನಗಳಿಂದ ಧರ್ಮಶಾಲಾದಲ್ಲಿ ಬೀಡುಬಿಟ್ಟಿದ್ದು, ಸುಮಾರು 10 ಆಟಗಾರರು ಭಾಗವಹಿಸುತ್ತಿದ್ದಾರೆ.

IPL 2026: ಈ ದಿನದಿಂದ 19ನೇ ಆವೃತ್ತಿಯ ಐಪಿಎಲ್ ಆರಂಭ; ಬಿಸಿಸಿಐ ಅಧಿಕೃತ ಮಾಹಿತಿ

ಹೋಟೆಲ್‌ಗಳ ಮೇಲೆ ಪರಿಣಾಮ

ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದ ಪೆಟ್ರೋಲಿಯಂ ಮತ್ತು ಎಲ್‌ಪಿಜಿ ಉತ್ಪನ್ನಗಳ ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಬೆಂಗಳೂರು ಮತ್ತು ಚೆನ್ನೈನಲ್ಲಿರುವ ಹೋಟೆಲ್ ಸಂಘಗಳು ತಮ್ಮಲ್ಲಿ ಒಂದು ಅಥವಾ ಎರಡು ದಿನಗಳು ಮಾತ್ರ ಎಲ್‌ಪಿಜಿ ಸರಬರಾಜು ಉಳಿದಿವೆ ಎಂದು ಹೇಳಿವೆ. ಎಲ್‌ಪಿಜಿ ಬಳಕೆಯನ್ನು ಮಿತಗೊಳಿಸಲು ಅನೇಕ ಹೋಟೆಲ್‌ಗಳು ತಮ್ಮ ಮೆನುಗಳನ್ನು ಸೀಮಿತಗೊಳಿಸಲು ಪ್ರಾರಂಭಿಸಿವೆ. ಇದೇ ಪರಿಸ್ಥಿತಿ ಕೆಲವು ದಿನಗಳವರೆಗೆ ಮುಂದುವರೆದರೆ ಜನಜೀವನ ಸಂಕಷ್ಟಕ್ಕೆ ಸಿಲುಕಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರೂರು ಕಾಲ್ತುಳಿತ ಪ್ರಕರಣ: ನಟ ವಿಜಯ್ ಮತ್ತು ಸೆಂಥಿಲ್ ಬಾಲಾಜಿಗೆ ಸಿಬಿಐ ಸಮನ್ಸ್

ತಮಿಳುನಾಡಿನ ಕರೂರಿನಲ್ಲಿ ನಡೆದ ಭೀಕರ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಹಾಗೂ ‘ತಮಿಳಗ ವೆಟ್ರಿ ಕಳಗಂ’ (TVK) ಸಂಸ್ಥಾಪಕ ದಳಪತಿ ವಿಜಯ್ ಅವರಿಗೆ ಕೇಂದ್ರೀಯ ತನಿಖಾ ದಳ (CBI) ಸಮನ್ಸ್ ಜಾರಿ ಮಾಡಿದೆ. ಇದೇ ಪ್ರಕರಣದಲ್ಲಿ ಡಿಎಂಕೆ ಶಾಸಕ ಸೆಂಥಿಲ್ ಬಾಲಾಜಿ ಅವರಿಗೂ ಮಾರ್ಚ್ 17ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ದೆಹಲಿಯಲ್ಲಿ ಮಾರ್ಚ್ 15ರಂದು ವಿಚಾರಣೆಗೆ ಹಾಜರಾಗುವಂತೆ ದಳಪತಿ ವಿಜಯ್ (Thalapathy Vijay) ಅವರಿಗೆ ಸಮನ್ಸ್ ನೀಡಲಾಗಿದೆ.

ಮಾರ್ಚ್ 15ರಂದು ದೆಹಲಿಯಲ್ಲಿರುವ ಸಿಬಿಐ ಪ್ರಧಾನ ಕಚೇರಿಯಲ್ಲಿ ವಿಚಾರಣೆಗಾಗಿ ಹಾಜರಾಗುವಂತೆ ವಿಜಯ್ ಅವರಿಗೆ ಸೂಚಿಸಲಾಗಿದೆ. ಈ ಹಿಂದೆ ಮಾರ್ಚ್ 10ರಂದು ಹಾಜರಾಗಲು ನೋಟಿಸ್ ನೀಡಲಾಗಿತ್ತು. ಆದರೆ, ರಾಜಕೀಯ ಕಾರ್ಯಕ್ರಮಗಳ ಕಾರಣದಿಂದ ವಿಜಯ್ ಅವರು 15 ದಿನಗಳ ಕಾಲಾವಕಾಶ ಕೋರಿದ್ದರು. ಅಲ್ಲದೇ, ದೆಹಲಿಯ ಬದಲಿಗೆ ಚೆನ್ನೈ ಅಥವಾ ತಮಿಳುನಾಡಿನ ಯಾವುದೇ ಕಚೇರಿಯಲ್ಲಿ ವಿಚಾರಣೆ ನಡೆಸುವಂತೆ ಅವರು ಮನವಿ ಮಾಡಿದ್ದರು.

ವಿಜಯ್ ಅವರ ಈ ಮನವಿಯನ್ನು ಸಿಬಿಐ ಪರಿಶೀಲಿಸಿ ಹೊಸ ದಿನಾಂಕಗಳನ್ನು ನಿಗದಿಪಡಿಸುವ ಸಾಧ್ಯತೆಯಿದೆ. ಇನ್ನೊಂದೆಡೆ, ಕರೂರು ಶಾಸಕ ಸೆಂಥಿಲ್ ಬಾಲಾಜಿ ಅವರಿಗೆ ಮಾರ್ಚ್ 17ರಂದು ಹಾಜರಾಗಲು ಸಮನ್ಸ್ ನೀಡಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಗೊಂದಲಕಾರಿ ವರದಿಗಳ ನಡುವೆ, ಸಿಬಿಐ ನೀಡಿರುವ ಸಮನ್ಸ್‌ನಂತೆ ನಾನು ಮಾರ್ಚ್ 17ರಂದು ಖುದ್ದಾಗಿ ಹಾಜರಾಗಿ ಅಗತ್ಯ ವಿವರಣೆಗಳನ್ನು ನೀಡಲಿದ್ದೇನೆ’ ಎಂದು ತಿಳಿಸಿದ್ದಾರೆ.

ಏನಿದು ಕರೂರು ಕಾಲ್ತುಳಿತ ಪ್ರಕರಣ?

ಕಳೆದ ವರ್ಷ ಸೆಪ್ಟೆಂಬರ್ 27ರಂದು ಕರೂರ್‌ನಲ್ಲಿ ವಿಜಯ್ ಅವರ ಟಿವಿಕೆ ಪಕ್ಷ ಆಯೋಜಿಸಿದ್ದ ಬೃಹತ್ ರಾಜಕೀಯ ಸಮಾವೇಶದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ 41 ಜನರು ಪ್ರಾಣ ಕಳೆದುಕೊಂಡಿದ್ದರು ಮತ್ತು 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಘಟನೆಯು ತಮಿಳುನಾಡು ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು.

ಇದನ್ನೂ ಓದಿ: ದಳಪತಿ ವಿಜಯ್ ವಿಚ್ಛೇದನಕ್ಕೆ ದೊಡ್ಡ ಟ್ವಿಸ್ಟ್: ತ್ರಿಷಾ ಜತೆ ಮದುವೆಗೆ ಹಾಜರಿ

ಈ ಹಿಂದೆ ಜನವರಿ 12 ಮತ್ತು 19ರಂದು ಸಿಬಿಐ ಈಗಾಗಲೇ ವಿಜಯ್ ಅವರನ್ನು ಎರಡು ಬಾರಿ ವಿಚಾರಣೆಗೆ ಒಳಪಡಿಸಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ತನಿಖಾ ಸಂಸ್ಥೆ ಈಗ ಮತ್ತೊಮ್ಮೆ ವಿಚಾರಣೆ ನಡೆಸಲು ಮುಂದಾಗಿದೆ. ಈ ನಡುವೆ ವಿಜಯ್ ಅವರ ಖಾಸಗಿ ಜೀವನ ಕೂಡ ಚರ್ಚೆಯಲ್ಲಿದೆ. ಪತ್ನಿ ಸಂಗೀತಾ ಅವರು ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ. ತ್ರಿಷಾ ಜೊತೆ ವಿಜಯ್ ಕಾಣಿಸಿಕೊಂಡಿದ್ದು ಭಾರಿ ಚರ್ಚೆಗೆ ಕಾರಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದಾವಣಗೆರೆ ವಿಧಾನಸಭಾ ಉಪಚುನಾವಣೆಗೂ ಮುನ್ನವೇ ಕಾಂಗ್ರೆಸ್​​ ಪಾಳೆಯದಲ್ಲಿ ಕೋಲಾಹಲ

ದಾವಣಗೆರೆ, ಮಾರ್ಚ್​ 10: ದಾವಣಗೆರೆ ವಿಧಾನಸಭಾ ಉಪಚುನಾವಣೆಗೂ (Davangere By-election)  ಮೊದಲೇ ಕಾಂಗ್ರೆಸ್ (Congress)​ ಪಾಳೆಯದಲ್ಲಿ ವಿಘ್ನ ಶುರುವಾಗಿದೆ. ಹಿರಿಯ ಶಾಸಕ ಶಾಮನೂರ ಶಿವಶಂಕರಪ್ಪ ನಿಧನದಿಂದ ದಾವಣಗೆರೆ ದಕ್ಷಿಣ ಕ್ಷೇತ್ರ ಖಾಲಿ ಆಗಿದೆ. ಇನ್ನೇನು ಉಪ ಚುನಾವಣೆ ಘೋಷಣೆ ಆಗಲಿದೆ. ಇದು ಕಾಂಗ್ರೆಸ್​​ಗೆ ಪ್ರತಿಷ್ಠೆಯ ಪ್ರಶ್ನೆ. ಹೀಗಾಗಿ 10 ಜನ ಸಚಿವರ ತಂಡ ಕೂಡ ಮಾಡಲಾಗಿದೆ. ಅಖಾಡ ಸಜ್ಜಾಗುವ ಮೊದಲೇ ಜಮೀರ್ ಮತ್ತು ಮಲ್ಲಿಕಾರ್ಜುನ ನಡುವೆ ಪೈಟ್ ಶುರುವಾಗಿದೆ.

ರಾಜ್ಯ ಕಾಂಗ್ರೆಸ್​ನಲ್ಲಿ ಹತ್ತಾರು ಕಿತ್ತಾಟಗಳ ಮಧ್ಯೆ ಉಪಚುನಾವಣೆ ಸಹ ಬಂದಿದೆ. ಇದರಲ್ಲಿ ಇದೀಗ ದಾವಣಗೆರೆ ದಂಗಲ್​​ ಗಮನ ಸೆಳೆಯುತ್ತಿದೆ. ಶಾಮನೂರು ಸತತ ಶಾಸಕರಾಗುತ್ತಿದ್ದರು. ಶಾನನೂರ ನಿಧನದ ಬಳಿಕ ಮುಸ್ಲಿಂ ಸಮಾಜ ನಮಗೆ ಟಿಕೆಟ್ ಕೊಡಿ ಎಂದು ಕೇಳುತ್ತಿದೆ. ಇದು ಶಾಮನೂರು ಪುತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್​ಎಸ್ ಮಲ್ಲಿಕಾರ್ಜುನ ಕಣ್ಣು ಕೆಂಪಗಾಗಿಸಿದೆ. ಇನ್ನೊಂದು ವಿಚಾರ ಅಂದರೆ ಕ್ಷೇತ್ರದ ಉಸ್ತುವಾರಿಗಳನ್ನ ಜಮೀರ್ ಅಹ್ಮದ್ ಖಾನ್, ಈಶ್ವರ ಖಂಡ್ರೆ ಸೇರಿ ಹತ್ತು ಜನ ಸಚಿವರನ್ನ ಕೆಪಿಸಿಸಿ ನೇಮಕ ಮಾಡಿದೆ. ಆದರೆ ಸಚಿವ ಮಲ್ಲಿಕಾರ್ಜುನ ಜಮೀರ್ ವಿರುದ್ಧ ವಾಗ್ದಾಳಿ ನಡೆಸಿದ್ದು ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ ಉಪ ಚುನಾವಣೆಗೂ ಮುನ್ನ ವಿಘ್ನ ಶುರುವಾಗಿದೆ.

ಇದನ್ನೂ ಓದಿ: ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

ನಮ್ಮ ಕ್ಷೇತ್ರದ ಬಗ್ಗೆ ಮಾತಾಡಲು ಆತ ಯಾರು ಎಂದು ಏಕ ವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಇಬ್ಬರು ಪ್ರಭಾವಿ ಸಚಿವ ನಡುವಿನ ಮಾತುಗಳು ಚರ್ಚೆಗೆ ಗ್ರಾಸವಾಗಿದೆ. ಮುಸ್ಲಿಂ ಮತಗಳನ್ನೇ ಮೆಚ್ಚಿಕೊಂಡ ಕಾಂಗ್ರೆಸ್​ಗೆ ಮಲ್ಲಿಕಾರ್ಜುನ ಮಾತು ಬಿಸಿ ತುಪ್ಪವಾಗಿದೆ. ಈಗ ತಾವು ಸಚಿವೆ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ ಸಂಸದೆ ಹಾಗೂ ಪುತ್ರ ಸಮರ್ಥ ಶಾಮನೂರನನ್ನ ಶಾಸಕ ಮಾಡುವ ಪ್ಲಾನ್ ಮಾಡಿದ್ದಾರೆ. ಆದರೆ ಆರಂಭದಲ್ಲಿ ಈ ರೀತಿ ಹೇಳಿಕೆ ನೀಡಿದ್ದು ಮಾತ್ರ ಅಚ್ಚರಿ ಉಂಟುಮಾಡಿದೆ.

ಸಚಿವ ಎಸ್ ಎಸ್ ಮಲ್ಲಿಕಾರ್ಜುನ ತಕ್ಷಣ ಕ್ಷಮೆಯಾಚಿಸಬೇಕು: ಮುಸ್ಲಿಂ ಸಮಾಜ ಆಕ್ರೋಶ

ಸಚಿವ ಜಮೀರ್ ಅಹಮದ್ ಖಾನ್ ಬಗ್ಗೆ ಸಚಿವ ಎಸ್​ಎಸ್ ಮಲ್ಲಿಕಾರ್ಜುನ ಹೇಳಿಕೆ ಮುಸ್ಲಿಂ ಸಮಾಜ ಆಕ್ರೋಶಗೊಂಡಿದೆ. ಈ ಬಗ್ಗೆಸಚಿವ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ತಕ್ಷಣ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ. ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರಕ್ಕೆ ಮುಸ್ಲಿಂ ಸಮಾಜಕ್ಕೆ ಟಿಕೆಟ್ ಕೇಳಿದ್ದಕ್ಕೆ ಈ ರೀತಿ ಆಕ್ರೋಶ ಸರಿಯಿಲ್ಲ. ಜಮೀರ್ ಅಹಮದ್ ಖಾನ್ ಬಗ್ಗೆ ಹಗುರವಾಗಿ ಮಾತಾಡುವುದು ಸರಿಯಲ್ಲ ಎಂದು ಖಂಡಿಸಿದೆ.

ಪಕ್ಷ ಅಂದರೆ ಹೈಕಮಾಂಡ ಇದೆ. ಟಿಕೆಟ್ ಕೊಡುವ ನಿರ್ಧಾರ ಪಕ್ಷ ತೆಗೆದುಕೊಳ್ಳುತ್ತದೆ. ಮುಸ್ಲಿಂ ಸಮಾಜ ಕಾಂಗ್ರೆಸ್​ಗೆ ಟೇಕನ್ ಫಾರ್ ಗ್ರಾಂಟೆಡ್ ಆಗಿದೆ. ಪಕ್ಷದ ವರಿಷ್ಠರು ಇಲ್ಲಾ ಅಂದರೆ ಮಲ್ಲಿಕಾರ್ಜುನ ಅವರೇ ಟಿಕೆಟ್ ಘೋಷಣೆ ಮಾಡಿಕೊಳ್ಳಲಿ. ತಕ್ಷಣ ಸಚಿವ ಮಲ್ಲಿಕಾರ್ಜುನ ಜಮೀರ್ ಅಹ್ಮದ್ ಖಾನ್​ಗೆ ಕ್ಷಮೆ ಕೇಳಬೇಕು, ಇಲ್ಲಾ ಅಂದರೆ ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ. ಜಮೀರ್ ಖಾನ್, ಮುಸ್ಲಿಂ ಸಮಾಜದ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕ. ಸ್ಟಾರ್ ಕ್ಯಾಂಪೇನರ್ ಆಗಿದ್ದಾರೆ ಎಂಬುದು ಮುಸ್ಲಿಂ ಮುಖಂಡರ ವಾದ.

ಇದನ್ನೂ ಓದಿ: ಎಲೆಕ್ಷನ್​​​ಗೆ 2 ವರ್ಷ ಮೊದಲೇ ಬಿಜೆಪಿ ಅಭ್ಯರ್ಥಿಗಳ ಘೋಷಣೆ: ಬಿಎಸ್​​ವೈ ವಿರುದ್ಧ ಭುಗಿಲೆದ್ದ ಆಕ್ರೋಶ

ಇನ್ನೊಂದು ವಿಚಾರ ದಾವಣಗೆರೆಯ ಪ್ರಭಾವಿ ಮುಸ್ಲಿಂ ಸಮಾಜದ ಮುಖಂಡ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಬಗ್ಗೆ ಸಹ ಮಲ್ಲಿಕಾರ್ಜುನ ಹೇಳಿಕೆ ನೀಡಿದ್ದಾರೆ. ಜಬ್ಬಾರ್​ನಿಂದ ಮಾತ್ರ ಇಡಿ ಊರು ಹಾಳಾಗುತ್ತಿದೆ ಎಂದಿದ್ದಾರೆ. ನಾಲ್ಕು ದಶಕಗಳ ಕಾಲ ಕಾಂಗ್ರೆಸ್​ಗೆ ದುಡಿದ ಮುಖಂಡನಿಗೆ ಈ ರೀತಿ ಹೇಳಿಕೆ ನೀಡಿದ್ದು ಸಹ ಮುಸ್ಲಿಂ ಸಮಾಜಕ್ಕೆ ಸಿಟ್ಟು ತರಿಸಿದೆ. ಒಟ್ಟಿನಲ್ಲಿ ಚುನಾವಣೆಗೂ ಮೊದಲೇ ತಿಕ್ಕಾಟ ಶುರುವಾಗಿದ್ದು ಮಾತ್ರ ಕಾಂಗ್ರೆಸ್​​ಗೆ ತಳಮಳ ಹುಟ್ಟಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಎಲ್​ಪಿಜಿ ಪೂರೈಕೆ ಬಿಕ್ಕಟ್ಟು ಬಗೆಹರಿಸಲು ಸರ್ಕಾರದಿಂದ ಸಮಿತಿ ರಚನೆ

ನವದೆಹಲಿ, ಮಾರ್ಚ್ 10: ಚೆನ್ನೈ, ಪುಣೆ, ಮುಂಬೈ ಮತ್ತು ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಾದ್ಯಂತದ ಹೋಟೆಲ್‌ಗಳಲ್ಲಿ ಎಲ್‌ಪಿಜಿ (LPG Supply) ಸಿಲಿಂಡರ್‌ಗಳ ಕೊರತೆ ಹೆಚ್ಚಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಮೂರು ಸದಸ್ಯರ ಸಮಿತಿಯನ್ನು ರಚಿಸಿದೆ. ಸರ್ಕಾರವು ತೈಲ ಮಾರುಕಟ್ಟೆ ಕಂಪನಿಗಳಿಗೆ ರೆಸ್ಟೋರೆಂಟ್ ಸಂಘಗಳೊಂದಿಗೆ ಈ ಸಮಸ್ಯೆಯನ್ನು ಚರ್ಚಿಸಲು ನಿರ್ದೇಶಿಸಿದೆ. ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಪೂರೈಕೆಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ವಿವಿಧ ರೆಸ್ಟೋರೆಂಟ್ ಸಂಘಗಳೊಂದಿಗೆ ಮಾತನಾಡಲಿವೆ.

“ಹೋಟೆಲ್ ಮತ್ತು ರೆಸ್ಟೋರೆಂಟ್​​ನವರ ಕುಂದುಕೊರತೆಗಳನ್ನು ಆಲಿಸಲು ಸರ್ಕಾರವು ಐಒಸಿ, ಎಚ್‌ಪಿಸಿಎಲ್ ಮತ್ತು ಬಿಪಿಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕರನ್ನು ಒಳಗೊಂಡ 3 ಸದಸ್ಯರ ಸಮಿತಿಯನ್ನು ರಚಿಸಿದೆ. ಕಮರ್ಷಿಯಲ್ ಎಲ್‌ಪಿಜಿಯ ಅವಶ್ಯಕತೆಯನ್ನು ಪೂರೈಸಲಾಗುವುದು. ಈ ಸಮಿತಿಯು ಅವಶ್ಯಕತೆಗಳಿಗೆ ಅನುಗುಣವಾಗಿ ಪೂರೈಕೆಗೆ ಮರು ಆದ್ಯತೆ ನೀಡುತ್ತದೆ” ಎಂದು ವರದಿ ತಿಳಿಸಿದೆ. ಭಾರತವು ವಿವಿಧ ಮೂಲಗಳಿಂದ LPG ಮತ್ತು LNG ಆಮದು ಮಾಡಿಕೊಳ್ಳುತ್ತಿದೆ ಮತ್ತು ಹೊಸ ಸರಕುಗಳು ಶೀಘ್ರದಲ್ಲೇ ಬರುವ ನಿರೀಕ್ಷೆಯಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆ ಎಲ್​ಪಿಜಿ ಸಿಲಿಂಡರ್ ಕೊರತೆ: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿಗೆ ಸಿಎಂ ಸಿದ್ದರಾಮಯ್ಯ ಪತ್ರ

ಪೆಟ್ರೋಲಿಯಂ ಸಚಿವಾಲಯವು ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ದೇಶೀಯ ಬಳಕೆಗಾಗಿ ಹೆಚ್ಚುವರಿ ಪ್ರಮಾಣವನ್ನು ಬೇರೆಡೆಗೆ ತಿರುಗಿಸಲು ಸಂಸ್ಕರಣಾಗಾರಗಳಿಗೆ ನಿರ್ದೇಶನ ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಜಾಗತಿಕ ಇಂಧನ ಮಾರುಕಟ್ಟೆಗಳು ಏರಿಳಿತವನ್ನು ಕಾಣುತ್ತಿರುವ ಸಮಯದಲ್ಲಿ, ಮನೆಗಳಿಗೆ ಎಲ್‌ಪಿಜಿ ಸಿಲಿಂಡರ್‌ಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ದೇಶೀಯ ಅಡುಗೆ ಅನಿಲ ಬೇಡಿಕೆಯು ಭಾರತದ ಎಲ್‌ಪಿಜಿ ಬಳಕೆಗೆ ಬೆನ್ನೆಲುಬಾಗಿದೆ.

ಇದನ್ನೂ ಓದಿ: ಅಗತ್ಯ ಸರಕುಗಳ ಕಾಯ್ದೆ ಎಂದರೇನು? ಎಲ್​ಪಿಜಿ, ಪೈಪ್ಡ್ ಗ್ಯಾಸ್, ಸಿಎನ್​ಜಿ ಸರಬರಾಜು ಖಾತ್ರಿಪಡಿಸಲು ಸರ್ಕಾರದ ಸೂತ್ರವೇನು? ಇಲ್ಲಿದೆ ಡೀಟೇಲ್ಸ್

ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಂತಹ ಅಗತ್ಯ ದೇಶೀಯವಲ್ಲದ ವಲಯಗಳಿಗೆ ಅಗತ್ಯವಿರುವಂತೆ ಎಲ್‌ಪಿಜಿ ಸರಬರಾಜುಗಳನ್ನು ಒದಗಿಸುವುದನ್ನು ಮುಂದುವರಿಸಲಾಗುವುದು ಎಂದು ಕಂಪನಿಗಳು ತಿಳಿಸಿವೆ.

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆಗಳ ಮೇಲೆ ಹೆಚ್ಚುತ್ತಿರುವ ಒತ್ತಡದ ನಡುವೆ, ದೇಶೀಯ ಇಂಧನ ಮಾರುಕಟ್ಟೆಯನ್ನು ರಕ್ಷಿಸಲು ಕೇಂದ್ರ ಸರ್ಕಾರ ಅಗತ್ಯ ಸರಕುಗಳ ಕಾಯ್ದೆ (ಇಸಿ ಕಾಯ್ದೆ)ಯನ್ನು ಜಾರಿಗೆ ತಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್ 2’ ನೋಡಲು ಹೋದವರಿಗೆ ರಶ್ಮಿಕಾ ಮಂದಣ್ಣ ಕಾಣಲಿದ್ದಾರೆ: ಹೇಗೆ?

ಧುರಂಧರ್ 2’ (Dhurandhar 2) ಸಿನಿಮಾ ಪ್ರಸ್ತುತ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ. ಮಾರ್ಚ್ 19 ರಂದು ಸಿನಿಮಾ ಬಿಡುಗಡೆ ಆಗುತ್ತಿದೆ. ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಇಂದ ಹಿಂದೆ ಸರಿದ ಬಳಿಕವಂತೂ ಸಿನಿಮಾಕ್ಕೆ ತಡೆಯೇ ಇಲ್ಲದಾಗಿದೆ. ಸಿನಿಮಾದ ಪ್ರೀಮಿಯರ್ ಶೋ ಟಿಕೆಟ್​​ಗಳು ಬಿಸಿ ದೋಸೆಯಂತೆ ಮಾರಾಟವಾಗುತ್ತಿವೆ. ಇದೀಗ ಈ ಸಿನಿಮಾಕ್ಕೆ ಇರುವ ಜನಪ್ರಿಯತೆ, ಪ್ರೇಕ್ಷಕರಲ್ಲಿ ಇರುವ ಕಾತರತೆಯನ್ನು ಬಳಸಿಕೊಳ್ಳಲು ನಿರ್ಮಾಣ ಸಂಸ್ಥೆ ಮುಂದಾಗಿದೆ. ಇದೇ ಕಾರಣಕ್ಕೆ ‘ಧುರಂಧರ್ 2’ ಸಿನಿಮಾ ನೋಡಲು ಹೋದವರಿಗೆ ರಶ್ಮಿಕಾ ಮಂದಣ್ಣ ಜೊತೆಗೆ ಇತರೆ ಕೆಲವು ತಾರೆಯರ ದರ್ಶನ ಆಗಲಿದೆ.

‘ಧುರಂಧರ್ 2’ ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ಸಹ ನಿರ್ಮಾಣ ಮಾಡಿರುವ ಜೊತೆಗೆ ಸಿನಿಮಾದ ಸಂಪೂರ್ಣ ವಿತರಣೆಯ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡಿದೆ. ಇದೇ ಕಾರಣಕ್ಕೆ ತಮ್ಮದೇ ನಿರ್ಮಾಣದ ಇನ್ನೆರಡು ಸಿನಿಮಾಗಳನ್ನು ಸಹ ‘ಧುರಂಧರ್ 2’ ಸಿನಿಮಾದ ಜೊತೆಗೆ ಲಾಂಚ್ ಮಾಡುವ ಜಾಣ ಯೋಜನೆ ಮಾಡಿಕೊಂಡಿದೆ. ಟ್ರೈಲರ್ ಅನ್ನು ‘ಧುರಂಧರ್ 2’ ಜೊತೆಗೆ ಲಾಂಚ್ ಮಾಡುವ ಮೂಲಕ ಭರ್ಜರಿ ಪ್ರಚಾರವನ್ನು ಮಾಡಲಿದೆ.

2012ರ ಸೂಪರ್ ಹಿಟ್ ಚಿತ್ರ ‘ಕಾಕ್‌ಟೈಲ್’ನ ಮುಂದುವರಿದ ಭಾಗವಾದ ‘ಕಾಕ್​​ಟೇಲ್ 2’ ಸಿನಿಮಾದ ಟೀಸರ್ ಕೂಡ ‘ಧುರಂಧರ್ 2’ ಜೊತೆಗೆ ಅನಾವರಣಗೊಳ್ಳಲಿದೆ. ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಯಾನಾ ಪೆಂಟಿ ನಟಿಸಿದ್ದ ಮೊದಲ ಭಾಗದ ಯಶಸ್ಸಿನ ನಂತರ, ಸೀಕ್ವೆಲ್ ಬಗ್ಗೆ ಭಾರಿ ಕುತೂಹಲವಿದೆ. ‘ಕಾಕ್​​ಟೇಲ್ 2’ ಸಿನಿಮಾನಲ್ಲಿ ಶಾಹಿದ್ ಕಪೂರ್, ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ಅವರುಗಳು ಒಟ್ಟಿಗೆ ನಟಿಸುತ್ತಿದ್ದಾರೆ. ಈ ಸಿನಿಮಾದ ಟೀಸರ್ ಸಹ ‘ಧುರಂಧರ್ 2’ ಸಿನಿಮಾದ ನಡುವೆ ಪ್ರದರ್ಶನಗೊಳ್ಳಲಿದೆ.

ಇದನ್ನೂ ಓದಿ:ವಿಜಯ್-ರಶ್ಮಿಕಾ ಮಾನ್ಯವರ್ ‘ಮೇಡ್ ಫಾರ್ ಈಚ್ ಒದರ್ ’ ಕ್ಯಾಂಪೇನ್; 300 ಮಿಲಿಯನ್ ವೀಕ್ಷಣೆ

ರಿತೇಶ್ ದೇಶ್​​ಮುಖ್ ನಟಿಸಿ, ನಿರ್ದೇಶನವನ್ನೂ ಮಾಡಿರುವ ‘ರಾಜಾ ಶಿವಾಜಿ’ ಸಿನಿಮಾಕ್ಕೆ ಜಿಯೋ ಸ್ಟುಡಿಯೋಸ್ ಬಂಡವಾಳ ಹೂಡಿದ್ದು, ಆ ಸಿನಿಮಾದ ವಿತರಣೆಯನ್ನೂ ಸಹ ಜಿಯೋ ಸ್ಟುಡಿಯೋಸ್ ಮಾಡಲಿದೆ. ಇದೇ ಕಾರಣಕ್ಕೆ ‘ರಾಜಾ ಶಿವಾಜಿ’ ಸಿನಿಮಾದ ಟ್ರೈಲರ್ ಅನ್ನು ‘ಧುರಂಧರ್ 2’ ಸಿನಿಮಾಕ್ಕೆ ಅಟ್ಯಾಚ್ ಮಾಡಲಿದ್ದು, ಸಿನಿಮಾ ಪ್ರಾರಂಭಕ್ಕೆ ಮುನ್ನ ಅಥವಾ ಸಿನಿಮಾದ ಇಂಟರ್ವೆಲ್ ಸಮಯದಲ್ಲಿ ‘ರಾಜಾ ಶಿವಾಜಿ’ ಸಿನಿಮಾದ ಟ್ರೈಲರ್ ಪ್ರದರ್ಶನವಾಗಲಿದೆ. ಒಟ್ಟಾರೆಯಾಗಿ, ಮಾರ್ಚ್ 19 ರಂದು ಚಿತ್ರಮಂದಿರಕ್ಕೆ ಹೋಗುವ ಪ್ರೇಕ್ಷಕರಿಗೆ ಕೇವಲ ‘ಧುರಂಧರ್ 2’ ಮಾತ್ರವಲ್ಲದೆ, ಮುಂಬರುವ ಎರಡು ದೊಡ್ಡ ಸಿನಿಮಾಗಳ ಝಲಕ್ ನೋಡುವ ಅವಕಾಶವೂ ಸಿಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕುರ್ಚಿ ಕಾದಾಟದ ನಡುವೆಯೂ ಡಿಕೆಶಿ ಗುಣಗಾನ ಮಾಡಿದ ಸಿದ್ದರಾಮಯ್ಯ: ಕಾರಣ ಇಲ್ಲಿದೆ

ಬೆಂಗಳೂರು, ಮಾರ್ಚ್​​ 10: ಕರ್ನಾಟಕದ ಸಿಎಂ ಕುರ್ಚಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​​ ಅವರ ನಡುವಿನ ತಿಕ್ಕಾಟ ಎಲ್ಲರಿಗೂ ಗೊತ್ತಿರುವ ವಿಷಯ. ಹೀಗಿದ್ದರೂ ಉಭಯ ನಾಯಕರು ಇಲ್ಲಿಯವರೆಗೂ ಎಲ್ಲಿಯೂ ಒಬ್ಬರ ವಿರುದ್ಧ ಮತ್ತೊಬ್ಬರು ಬಹಿರಂಗ ಸಮರ ಸಾರಿಲ್ಲ. ಮೊನ್ನೆ ಮೊನ್ನೆಯಷ್ಟೇ ನಮ್ಮಿಬ್ಬರದ್ದು ಹಾಲು-ಜೇನಿನ ಸಂಬಂಧ ಎಂದು ಸಿದ್ದರಾಮಯ್ಯ ಹೇಳಿದ್ದಿದ್ದು ಹಲವರ ಹುಬ್ಬೇರಿಸಿತ್ತು. ಈ ನಡುವೆ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್​ 6 ವರ್ಷ ಪೂರ್ಣಗೊಳಿಸಿದ ಹಿನ್ನೆಲೆ ಎಕ್ಸ್​ ಖಾತೆಯ ಮೂಲಕ ಮುಖ್ಯಮಂತ್ರಿಗಳು ಅಭಿನಂದನೆ ಸಲ್ಲಿಸಿದ್ದಾರೆ.  ಅಷ್ಟೇ ಅಲ್ಲದೆ ಅಕ್ಷರಶಃ ಕೆಪಿಸಿಸಿ ಅಧ್ಯಕ್ಷರ ಗುಣಗಾನ ಮಾಡಿದ್ದಾರೆ.

ಡಿಕೆಶಿಗೆ ಉಜ್ವಲ ರಾಜಕೀಯ ಭವಿಷ್ಯವಿದೆ ಎಂದ ಸಿಎಂ

ಡಿ.ಕೆ.ಶಿವಕುಮಾರ್​ ಅವರ ಸಂಘಟನಾ ಚಾತುರ್ಯ, ಸೈದ್ಧಾಂತಿಕ ಬದ್ಧತೆ ಮತ್ತು ಕಠಿಣ ಶ್ರಮ ನಮ್ಮ ಪಕ್ಷದ ಎಲ್ಲ ಯುವ ನಾಯಕರಿಗೆ ಮಾದರಿ. ವಿಪಕ್ಷ ಬಿಜೆಪಿ ಸುಳ್ಳು ಕೇಸ್​ಗಳನ್ನು ಹಾಕಿ ಬಗೆಬಗೆಯ ಕಿರುಕುಳ ನೀಡಿದರೂ ಡಿ.ಕೆ.ಶಿವಕುಮಾರ್ ಅವರು ಮಣಿಯದೆ ಪಕ್ಷಕ್ಕೆ ನಿಷ್ಠರಾಗಿ ಉಳಿದಿರುವುದು ಕಾಂಗ್ರೆಸ್ ಪಕ್ಷದ ಬಗ್ಗೆ ಅವರಲ್ಲಿರುವ ರಾಜಿಯಿಲ್ಲದ ನಿಷ್ಠೆಗೆ ಸಾಕ್ಷಿಯಾಗಿದೆ. ಇದು ಕಾಂಗ್ರೆಸ್​​ನ ಕಾರ್ಯಕರ್ತರಿಗೆ ಸ್ಫೂರ್ತಿದಾಯಕ ನಡವಳಿಕೆಯೂ ಹೌದು. ಕೋಮುವಾದಿ ಶಕ್ತಿಗಳನ್ನು ಸೋಲಿಸಿ ಕಾಂಗ್ರೆಸ್​ ಅಧಿಕಾರಕ್ಕೆ ತರುವುದಕ್ಕೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಜೊತೆ ಡಿಕೆಶಿಯವರು ದುಡಿದಿದ್ದಾರೆ. ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ಮತ್ತೆ ಕಟ್ಟುವಲ್ಲಿ ಶಿವಕುಮಾರ್ ನನ್ನ ಹೆಗಲಿಗೆ ಹೆಗಲಾಗಿ ನಿಂತಿದ್ದಾರೆ ಎಂದು ಸಿದ್ದರಾಮಯ್ಯ ಹಾಡಿ ಹೊಗಳಿದ್ದಾರೆ.

ಇದನ್ನೂ ಓದಿ: ದಲಿತ ಸಿಎಂ ಅಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ; ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಬಾಣ!

ನನಗಿಂತ ಕಿರಿಯರಾದ ಡಿ.ಕೆ. ಶಿವಕುಮಾರ್​​ ಅವರಿಗೆ ಉಜ್ವಲವಾದ ರಾಜಕೀಯ ಭವಿಷ್ಯವಿದೆ. 2028ರಲ್ಲಿ ಕಾಂಗ್ರೆಸ್​​ ಪಕ್ಷ ಅಧಿಕಾರಕ್ಕೆ ತರಬೇಕು ಎನ್ನುವುದು ನಮ್ಮ ಬಯಕೆ. ಪಕ್ಷದ ಸಂಘಟನೆ ಮತ್ತು ಹೋರಾಟದಲ್ಲಿ ನಾನು ಕೂಡ ಜೊತೆಯಿರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪೋಸ್ಟ್​​ನಲ್ಲಿ ಬರೆದುಕೊಂಡಿದ್ದಾರೆ. ಸಿಎಂ ಕುರ್ಚಿ ವಿಚಾರದಲ್ಲಿ ಇಬ್ಬರ ನಡುವೆ ಅದೆಷ್ಟೇ ತಿಕ್ಕಾಟಗಳು ನಡೆದು, ವಿಷಯ ಹೈಕಮಾಂಡ್​​ ಅಂಗಳ ತಲುಪಿದ್ದರೂ ಉಭಯ ನಾಯಕರ ನಡೆ ಮಾತ್ರ ಭಾರೀ ಕುತೂಹಲ ಮೂಡಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಶ್ಲೀಲ ಸಂದೇಶ ಕೇಸ್: ಮುಚ್ಚಿದ ಕೊಠಡಿಯಲ್ಲಿ ವಿಚಾರಣೆಗೆ ಹಾಜರಾದ ರಮ್ಯಾ

ಖ್ಯಾತ ನಟಿ ರಮ್ಯಾ ದಿವ್ಯ ಸ್ಪಂದನಾ (Ramya Divya Spandana) ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಸಂದೇಶ ಕಳಿಸಿದ 11 ಆರೋಪಿಗಳ ವಿರುದ್ಧ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಕೆ ಆಗಿದೆ. ಸೈಬರ್ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿರುವ ಹಿನ್ನೆಲೆಯಲ್ಲಿ ರಮ್ಯಾ ಅವರು ಬೆಂಗಳೂರಿನ 46ನೇ ಸಿಸಿಹೆಚ್ ಕೋರ್ಟ್ ಮುಂದೆ ಹಾಜರಾಗಿದ್ದಾರೆ. ಇಂದು (ಮಾರ್ಚ್ 10) ನ್ಯಾಯಾಲಯದಲ್ಲಿ ಸಾಕ್ಷ್ಯ ವಿಚಾರಣೆಗೆ ಹಾಜರಾದ ರಮ್ಯಾ (Ramya) ಅವರು ಫಿರ್ಯಾದಿ ಹೇಳಿಕೆ ದಾಖಲಿಸಿದ್ದಾರೆ.

ವೃತ್ತಿ ಜೀವನ ಮತ್ತು ರಾಜಕೀಯ ಜೀವನದ ಬಗ್ಗೆ ರಮ್ಯಾ ಅವರು ಮಾಹಿತಿ ನೀಡಿದ್ದಾರೆ. ಇನ್‌ಸ್ಟಾಗ್ರಾಂ ಅಕೌಂಟ್ ಬಗ್ಗೆಯೂ ಕೋರ್ಟ್​ನಲ್ಲಿ ಹೇಳಿಕೆ ದಾಖಲಿಸಿದ್ದಾರೆ. ಆರೋಪಿಗಳು ಇನ್‌ಸ್ಟಾಗ್ರಾಂ ಮೂಲಕ ಕಳುಹಿಸಿದ್ದ ಸಂದೇಶದ ಬಗ್ಗೆಯೂ ರಮ್ಯಾ ಮಾಹಿತಿ ನೀಡಿದ್ದಾರೆ. ನಟ ದರ್ಶನ್ ಕೇಸ್ ಬಗ್ಗೆ ರಮ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಅನಿಸಿಕೆ ಹಂಚಿಕೊಂಡ ಬಳಿಕ ಕೆಲವರಿಂದ ಅಶ್ಲೀಲ ಸಂದೇಶ ಬಂದಿತ್ತು.

ಇದನ್ನು ಸೂಕ್ಷ್ಮ ಪ್ರಕರಣವೆಂದು ಪರಿಗಣಿಸಲಾಗಿದೆ. ಹಾಗಾಗಿ ಮುಚ್ಚಿದ ಕೊಠಡಿಯಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಜಡ್ಜ್ ಈ. ರಾಜೀವ ಗೌಡ ಅವರು ಇನ್‌ಕ್ಯಾಮರಾ ಪ್ರೊಸೀಡಿಂಗ್ಸ್ ನಡೆಸಿದ್ದಾರೆ. ಇನ್​ಸ್ಟಾಗ್ರಾಮ್​​ನಲ್ಲಿ ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡಿದ್ದ ಹಲವರು ರಮ್ಯಾಗೆ ಅಸಭ್ಯ ಕಮೆಂಟ್ ಮತ್ತು ಸಂದೇಶ ಕಳಿಸಿದ್ದರು.

ರಮ್ಯಾ ದಿವ್ಯ ಸ್ಪಂದನಾ ಅವರು ಸೋಶಿಯಲ್ ಮೀಡಿಯಾ ಬಳಕೆಯಲ್ಲಿ ತುಂಬಾ ಆಕ್ಟೀವ್ ಆಗಿದ್ದಾರೆ. ಆದರೆ ಅವರನ್ನು ಕೆಲವರು ಟಾರ್ಗೆಟ್ ಮಾಡಿದ್ದರು. ಅಶ್ಲೀಲ ಕಮೆಂಟ್ ಮತ್ತು ಅಸಭ್ಯ ಮೆಸೇಜ್​ಗಳ ಮೂಲಕ ಕಿರುಕುಳ ನೀಡಿದ್ದರು. ಅಂಥವರಿಗೆ ಕಾನೂನಿನ ಮೂಲಕ ಪಾಠ ಕಲಿಸಲು ರಮ್ಯಾ ಮುಂದಾದರು. ಮುಲಾಜಿಲ್ಲದೇ ದೂರು ದಾಖಲಿಸಿದರು.

ಇದನ್ನೂ ಓದಿ: ರಮ್ಯಾ, ವಿಜಯಲಕ್ಷ್ಮಿ ಬೆನ್ನಲ್ಲೇ ಕಾಂಗ್ರೆಸ್ ಶಾಸಕಿಗೂ ಅಶ್ಲೀಲ ಕಾಮೆಂಟ್ ಕಾಟ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರು ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. 50 ಸಾಮಾಜಿಕ ಜಾಲತಾಣ ಅಕೌಂಟ್​​ಗಳನ್ನು ಬಂದ್ ಮಾಡಿಸಿದ್ದರು. ಬಂಧನಕ್ಕೆ ಹೆದರಿ 20ಕ್ಕೂ ಹೆಚ್ಚು ಆರೋಪಿಗಳು ಪರಾರಿ ಆಗಿದ್ದರು. ಬಂಧಿತ ಆರೋಪಿಗಳು ಒಂದು ಲಕ್ಷ ರೂಪಾಯಿ ಬಾಂಡ್ ಹಾಗೂ ಇತರೆ ಭದ್ರತೆಗಳನ್ನು ಒದಗಿಸಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೊಸ ಬಟ್ಟೆ ತರಲು ಹೋಗಿದ್ದ ವಿದ್ಯಾರ್ಥಿ ದುರಂತ ಅಂತ್ಯ: ಚೀಲದಲ್ಲಿ ತುಂಬಿ ಕೆರೆಗೆಸೆದ ಸ್ನೇಹಿತರು

ರಾಯಚೂರು, (ಮಾರ್ಚ್ 10): ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ಹಿನ್ನೆಲೆಯಲ್ಲಿ ಹೊಸ ಬಟ್ಟೆ ಖರೀದಿಗೆ ಸ್ನೇಹಿತರೊಂದಿಗೆ ಹೋದ ಬಾಲಕ ಕರೆಂಟ್ ಶಾಕ್ ತಗುಲಿ ಸಾವನ್ನಪ್ಪಿದ ಘಟನೆ ರಾಯಚೂರು (Raichur)  ಜಿಲ್ಲೆ ಲಿಂಗಸೂಗೂರಿನಲ್ಲಿ ನಡೆದಿದೆ. ಗುಂಡಸಾಗರ ಗ್ರಾಮದ 15 ವರ್ಷದ ಕಾರ್ತಿಕ್ ಸಾವನ್ನಪ್ಪಿದ ಯುವಕ. ಬಟ್ಟೆ ಖರೀದಿಸಿ ವಾಪಸ್ ಬರುವ ವೇಳೆ ನೀರು ಕುಡಿಯಲೆಂದು ಹೋದಾಗ ಕಾರ್ತಿಕ್ ವಿದ್ಯುತ್​ ತಗುಲಿ ಸಾವನ್ನಪ್ಪಿದ್ದು, ಇದರಿಂದ ಆತಂಕಗೊಂಡ ಜೊತೆಗಿದ್ದ ಸ್ನೇಹಿತರು, ತಮ್ಮ ಮೇಲೆ ಬರುತ್ತೆಂಬ ಭಯಕ್ಕೆ ಕಾರ್ತಿಕನ ಶವವನ್ನು ಗೋಣಿಚೀಲದಲ್ಲಿ ತುಂಬಿ ಕಲ್ಲು ಕಟ್ಟಿ ಕೆರೆಗೆ ಎಸೆದಿದ್ದಾರೆ.

ಹೊಸ ಬಟ್ಟೆ ತರಲು ಹೋಗಿದ್ದ ಸ್ನೇಹಿತರು

ಇಂದು (ಮಾರ್ಚ್ 10) ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ಇತ್ತು. ಹೀಗಾಗಿ ಸ್ನೇಹಿತರು ಸೇರಿಕೊಂಡು ನಿನ್ನೆ(ಮಾರ್ಚ್ 09) ಹೊಸ ಬಟ್ಟೆ ಖರೀದಿಸಲು ಬೈಕ್​​ನಲ್ಲಿ ಲಿಂಗಸ್ಗೂರಿಗೆ ಹೋಗಿದ್ದರು. ಬಟ್ಟೆ ಎಲ್ಲಾ ಖರೀದಿಸಿ ವಾಪಸ್ ಗುಂಡಸಾಗರಕ್ಕೆ ಹೊರಟ್ಟಿದ್ದರು. ಆದ್ರೆ, ದಾರಿಯಲ್ಲಿ ಕಾರ್ತಿಕನಿಗೆ ಬಾಯಾರಿಕೆಯಾಗಿದ್ದರಿಂದ ಗುಂಡಸಾಗರಕ್ಕೆ ಇನ್ನೂ ನಾಲ್ಕೈದು ಕಿಮಿ ಇರುವ ಮಾರ್ಗ ಮಧ್ಯೆ ರಸ್ತೆ ಪಕ್ಕದ ಹೊಲದಲ್ಲಿ ನೀರು ಕುಡಿಯಕು ಹೋಗಿದ್ದ. ಆಗ ಬೋರ್ ವೆಲ್ ನ ವಿದ್ಯುತ್ ತಗುಲಿದ್ದು, ಬಿದ್ದು ಒದ್ದಾಡಿದ್ದಾನೆ. ಬಳಿಕ ಸ್ನೇಹಿತರು ಕಾರ್ತಿಕ್​​ ನನ್ನು ಬೈಕ್​​ನಲ್ಲಿ ಕೂರಿಸಿಕೊಂಡು ಚಿಕಿ ಲಿಂಗಸುಗೂರು ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದ್ರೆ ಮಾರ್ಗ ಮಧ್ಯೆ ಕಾರ್ತಿಕ್ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಅನ್ಯಧರ್ಮದವನೊಂದಿಗೆ ಮೊಮ್ಮಗಳು ವಿವಾಹ: ಇದೇ ಸಿಟ್ಟಿನಲ್ಲಿ ಮರಿಮೊಮ್ಮಗನನ್ನ ಕೊಂದ ಅಜ್ಜಿ

ಕಾರ್ತಿಕ್ ಮೃತದೇಹವನ್ನು ಕೆರೆಗೆಸೆದ ಸ್ನೇಹಿತರು

ಈ ವೇಳೆ ಆತನ ಕಾಲುಗಳು ರಸ್ತೆಯುದ್ದಕ್ಕೂ ತಾಗಿ ರಕ್ತ ಗಾಯಗಳಾಗಿವೆ.ಇದರಿಂದ ತಮ್ಮ ಮೇಲೆ ಕೊಲೆ ಆರೋಪ ಬರುತ್ತೆ ಎಂದು ಆತಂಕಗೊಂಡ ಸ್ನೇಹಿತರು, ಕಾರ್ತಿಕ್ ನ ಮೃತದೇಹವನ್ನ ಬೈಕ್ ಮೇಲೆ ಕೂರಿಸಿಕೊಂಡು ಲಿಂಗಸುಗೂರು ಎಪಿಎಂಸಿ ಬಳಿ ತೆರಳಿದ್ದು, ಅಲ್ಲಿ ಚೀಲವೊಂದರಲ್ಲಿ ಕಾರ್ತಿಕ್ ಮೃತದೇಹ ಹಾಕಿ ಮೂಟೆ ಕಟ್ಟಿದ್ದಾರೆ. ಬಳಿಕ ಅದರಲ್ಲಿ ಮೂರ್ನಾಲ್ಕು ಕಲ್ಲುಗಳನ್ನ ಹಾಕಿ ಎಪಿಎಂಸಿ ಬಳಿಯ ಕರಡಕಲ್ ಕೆರೆಯಲ್ಲಿ ಬೀಸಾಡಿದ್ದಾರೆ.ಬಳಿಕ ಊರಿಗೆ ಬಂದು ಮದುವೆ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಆದ್ರೆ ಘಟನೆ ಬಗ್ಗೆ ತುಟಿ ಬಿಚ್ಚಿಲ್ಲ. ಇನ್ನೊಂದೆಡೆ ತಡರಾತ್ರಿ ಆದರೂ ಮಗ ಮನೆ ಬಾರದಕ್ಕೆ ಕಾರ್ತಿಕ್ ಮನೆಯವರು ಹುಡುಕಾಟ ನಡೆಸಿದ್ದು, ಕೊನೆಗೆ ಸಂಬಂಧಿಯೊಬ್ಬರು ಕಾರ್ತಿಕ್ ಸ್ನೇಹಿತರನ್ನು ಪ್ರಶ್ನಿಸಿದಾಗ ಮೂಟೆ ಕಟ್ಟಿ ಕರೆಗೆ ಬೀಸಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ಈ ಮಾಹಿತಿ ತಿಳಿದು ಕರಡಕಲ್ ಕೆರೆ ಬಳಿ ಪೊಲೀಸರು ಭೇಟಿ ನೀಡಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶವಕ್ಕಾಗಿ ಕರೆಯಲ್ಲಿ ಹುಡುಕಾಟ ನಡೆಸಿದ್ದು, ಗೋಣಿ ಚೀಲದಲ್ಲಿ ಕಾರ್ತಿಕ್ ಶವ ಪತ್ತೆಯಾಗಿದೆ. ಇನ್ನು ಕಾರ್ತಿಕ್ ಪೋಷಕರು ಆತನನ್ನ ಕರೆದೊಯ್ದಿದ್ದ ಸ್ನೇಹಿತರ ವಿರುದ್ಧ ಕೊಲೆ ಆರೋಪದಡಿ ಲಿಂಗಸುಗೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸದ್ಯ ಪೊಲೀಸರು ಇಬ್ಬರು ಅಪ್ರಾಪ್ತರನ್ನ ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಶ್ಲೀಲ ಕಮೆಂಟ್ ಕೇಸು, ನ್ಯಾಯಾಲಯಕ್ಕೆ ಬಂದ ನಟಿ ರಮ್ಯಾ: ವಿಡಿಯೋ

ನಟಿ ರಮ್ಯಾ (Ramya) ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಸಂದೇಶದವರ ವಿರುದ್ಧ ನಟಿ ರಮ್ಯಾ ಕಾನೂನು ಸಮರ ಮುಂದುವರೆದಿದೆ. ಈಗಾಗಲೇ 11 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ ಆಗಿದೆ. ಸೈಬರ್ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿರುವ ಹಿನ್ನೆಲೆಯಲ್ಲಿ ರಮ್ಯಾ ಅವರು ಬೆಂಗಳೂರಿನ 46ನೇ ಸಿಸಿಹೆಚ್ ಕೋರ್ಟ್ ಮುಂದೆ ಹಾಜರಾಗಿದ್ದಾರೆ. ಇಂದು (ಮಾರ್ಚ್ 10) ನ್ಯಾಯಾಲಯದಲ್ಲಿ ಸಾಕ್ಷ್ಯ ವಿಚಾರಣೆಗೆ ಹಾಜರಾದ ರಮ್ಯಾ (Ramya) ಅವರು ಫಿರ್ಯಾದಿ ಹೇಳಿಕೆ ದಾಖಲಿಸಿದ್ದಾರೆ. ಮುಚ್ಚಿದ ಕೋಣೆಯಲ್ಲಿ ಈ ವಿಚಾರಣೆ ನಡೆದಿದೆ. ರಮ್ಯಾ ನ್ಯಾಯಾಲಯಕ್ಕೆ ಬಂದ ವಿಡಿಯೋ ಇಲ್ಲಿದೆ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link