All posts by nagaraj11081993

Karnataka Weather Forecast: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗಾಳಿ, ಮಳೆಯಬ್ಬರ! – Kannada News | Karnataka Weather Forecast: Thunderstorm and Gusty wind all over Karnataka

ಸಾಂದರ್ಭಿಕ ಚಿತ್ರImage Credit source: theconversation.com

ಬೆಂಗಳೂರು, ಜೂನ್ 18: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹಾಗೂ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮುಂಬರುವ ದಿನಗಳಲ್ಲಿ ರಾಜ್ಯದ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ (Weather) ಸಾಧ್ಯತೆಯಿದೆ. ಇದರೊಂದಿಗೆ ಕೆಲವು ಪ್ರದೇಶಗಳಲ್ಲಿ ಬಲವಾದ ಬಿರುಗಾಳಿ ಬೀಸುವ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ.

ಮುಖ್ಯಾಂಶಗಳು

  • ಕರಾವಳಿಯ ಮೂರು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
  • ಉತ್ತರ ಒಳನಾಡಿನ ಎಂಟು ಜಿಲ್ಲೆಗಳಲ್ಲಿ ಬಲವಾದ ಬಿರುಗಾಳಿ ಬೀಸಲಿದೆ.
  • ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯ ಮುನ್ಸೂಚನೆ ನೀಡಲಾಗಿದೆ.

ಕರಾವಳಿಯಲ್ಲಿ ಗಾಳಿ- ಮಳೆ

ಕರಾವಳಿ ತೀರದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮಳೆಯ ಜೊತೆಗೆ, ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಬಿರುಗಾಳಿ ಬೀಸುವ ಸಂಭವವಿರುವುದರಿಂದ ಸಾರ್ವಜನಿಕರು ಹಾಗೂ ಮೀನುಗಾರರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

ಎಲ್ಲೆಲ್ಲಿ ಮಳೆ?

ಉತ್ತರ ಒಳನಾಡಿನ ಜಿಲ್ಲೆಗಳಾದ ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಇನ್ನುಳಿದಂತೆ, ಬಿರುಗಾಳಿಯ ತೀವ್ರತೆ ಇಲ್ಲಿ ಹೆಚ್ಚಾಗಿರಲಿದ್ದು, ರಾಯಚೂರು, ವಿಜಯಪುರ, ಧಾರವಾಡ, ಬೆಳಗಾವಿ, ಗದಗ, ಕಲಬುರಗಿ, ಬೀದರ್ ಮತ್ತು ಬಾಗಲಕೋಟೆ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ವಿಸ್ತರಣೆ ಹೆಚ್ಚಾಗಿರಲಿದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ.

ಇದಲ್ಲದೆ, ಮೈಸೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳ ಒಂದು ಅಥವಾ ಎರಡು ಕಡೆಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟೀಮ್ ಇಂಡಿಯಾ ದಾಂಡಿಗರ ಆರ್ಭಟ… 11 ದಾಖಲೆಗಳು ನಿರ್ಮಾಣ – Kannada News | India vs Afghanistan 2nd ODI All Records list

ಲಕ್ನೋನ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಆಫ್ಘಾನಿಸ್ತಾನ್ ತಂಡವನ್ನು ಟೀಮ್ ಇಂಡಿಯಾ 170 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು 3 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ್ ತಂಡ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 49.5 ಓವರ್​ಗಳಲ್ಲಿ 402 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ್ ತಂಡವು 232 ರನ್​ಗಳಿಗೆ ಆಲೌಟ್ ಆಗಿದೆ. ಈ ಗೆಲುವಿನೊಂದಿಗೆ ಭಾರತ ತಂಡ ಹಾಗೂ ಭಾರತೀಯ ಆಟಗಾರರು ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ…

  • ಅತ್ಯಧಿಕ ಮೊತ್ತ: ಭಾರತ ಗಳಿಸಿದ 402 ರನ್, ಆಫ್ಘಾನಿಸ್ತಾನ್ ವಿರುದ್ಧ ಯಾವುದೇ ತಂಡ ಗಳಿಸಿದ ಅತ್ಯಧಿಕ ಏಕದಿನ ಮೊತ್ತವಾಗಿದೆ.
  • 400+ ರನ್ ವಿಶ್ವ ದಾಖಲೆ: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಬಾರಿ 400ಕ್ಕೂ ಅಧಿಕ ರನ್ ಗಳಿಸಿದ ಜಾಗತಿಕ ದಾಖಲೆಯಲ್ಲಿ ಭಾರತ ಈಗ ಸೌತ್ ತಂಡವನ್ನು ಸರಿಗಟ್ಟಿದೆ. ಉಭಯ ತಂಡಗಳು 8 ಬಾರಿ 400+ ರನ್​ ಕಲೆಹಾಕಿದೆ.
  • ಹೀನಾಯ ಸೋಲು: 170 ರನ್‌ಗಳ ಈ ಸೋಲು ಏಕದಿನ ಇತಿಹಾಸದಲ್ಲೇ ಅಫ್ಘಾನಿಸ್ತಾನ್ ತಂಡ ಎರಡನೇ ಅತಿ ದೊಡ್ಡ ರನ್ ಅಂತರದ ಸೋಲಾಗಿದೆ. ಇದಕ್ಕೂ ಮುನ್ನ 2015ರಲ್ಲಿ ಆಸ್ಟ್ರೇಲಿಯಾ ವಿರುದ್ಧ 275 ರನ್‌ಗಳಿಗೆ ಸೋತು ಭಾರೀ ಮುಖಭಂಗ ಅನುಭವಿಸಿತ್ತು.

ಆಟಗಾರರ ದಾಖಲೆಗಳು:

  • ಶುಭ್​ಮನ್ ಗಿಲ್ (154) ದಾಖಲೆಗಳು:
  • 7,000 ರನ್‌: ಶುಭ್​​ಮನ್ ಗಿಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನ (ಎಲ್ಲಾ ಮಾದರಿ ಸೇರಿ) 7,000 ರನ್‌ಗಳನ್ನು ಪೂರೈಸಿದ್ದಾರೆ.
  • ನಾಯಕನಾಗಿ ಮೊದಲ ಶತಕ: ಏಕದಿನ ಕ್ರಿಕೆಟ್‌ನಲ್ಲಿ ನಾಯಕನ ಜವಾಬ್ದಾರಿ ವಹಿಸಿಕೊಂಡ ನಂತರ ಗಿಲ್ ಬಾರಿಸಿದ ಮೊದಲ ಶತಕ ಇದಾಗಿದೆ (154 ರನ್).
  •  ವೇಗದ 150 ರನ್: ಕೇವಲ 108 ಎಸೆತಗಳಲ್ಲಿ 150 ರನ್ ಪೂರೈಸುವ ಮೂಲಕ, ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಮೂರನೇ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.

  • ಇಶಾನ್ ಕಿಶನ್ (125) ದಾಖಲೆಗಳು:
  •  1,000 ಏಕದಿನ ರನ್: ಇಶಾನ್ ಕಿಶನ್ ಏಕದಿನ ಕ್ರಿಕೆಟ್​ನಲ್ಲಿ 1000 ರನ್​ಗಳನ್ನು ಪೂರೈಸಿದ್ದಾರೆ.
  • ನಾಲ್ಕನೇ ಭಾರತೀಯ: ಭಾರತದ ಪರ ಅತ್ಯಂತ ವೇಗವಾಗಿ 1,000 ಏಕದಿನ ರನ್ ಪೂರೈಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಇಶಾನ್ ಕಿಶನ್ ನಾಲ್ಕನೇ ಸ್ಥಾನ ಪಡೆದಿದ್ದಾರೆ.
  • ಶ್ರೇಯಸ್ ಅಯ್ಯರ್ (26) ದಾಖಲೆಗಳು:
  • 3,000 ರನ್‌: ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 3,000 ರನ್ ಪೂರೈಸಿದ ಎರಡನೇ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಶ್ರೇಯಸ್ ಅಯ್ಯರ್ ಈ ಪಂದ್ಯದ ಮೂಲಕ ತಮ್ಮದಾಗಿಸಿಕೊಂಡಿದ್ದಾರೆ.
  • ರೋಹಿತ್ ಶರ್ಮಾ (48) ದಾಖಲೆಗಳು:
  • 14,000 ರನ್: ಲಿಸ್ಟ್-ಎ ಕ್ರಿಕೆಟ್‌ನಲ್ಲಿ 14,000 ರನ್ ಪೂರೈಸಿದ ಐದನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನು ರೋಹಿತ್ ಶರ್ಮಾ ಈ ಪಂದ್ಯದ ಮೂಲಕ ತಮ್ಮದಾಗಿಸಿಕೊಂಡಿದ್ದಾರೆ.
  • ಇತರ ದಾಖಲೆಗಳು:
  • ದಾಖಲೆಯ ಜೊತೆಯಾಟ: 3ನೇ ವಿಕೆಟ್‌ಗೆ ಶುಭ್‌ಮನ್ ಗಿಲ್ ಮತ್ತು ಇಶಾನ್ ಕಿಶನ್ ಜೋಡಿ 224 ರನ್​ಗಳಿಸಿದ್ದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ 3ನೇ ವಿಕೆಟ್‌ಗೆ ದಾಖಲಾದ ಮೂರನೇ ಅತ್ಯಧಿಕ ಮೊತ್ತದ ಜೊತೆಯಾಟವಾಗಿದೆ.

ಇದನ್ನೂ ಓದಿ: ಬರೋಬ್ಬರಿ 27 ಪಂದ್ಯಗಳು… ಟೀಮ್ ಇಂಡಿಯಾದ ವಿಶ್ವಕಪ್​ ಸಿದ್ಧತೆ ಶುರು!

ಒಟ್ಟಾರೆಯಾಗಿ ಹೇಳುವುದಾದರೆ, ಲಕ್ನೋದ ಏಕನಾ ಮೈದಾನದಲ್ಲಿ ನಡೆದ ಈ ಪಂದ್ಯವು ಕೇವಲ ಭಾರತ ತಂಡದ ಗೆಲುವಷ್ಟೇ ಅಲ್ಲದೆ, ದಾಖಲೆಗಳ ಮಹಾಪೂರಕ್ಕೇ ಸಾಕ್ಷಿಯಾಗಿದೆ.

Source link

ಭಾರಿ ಸಂಭಾವನೆ ಕಾರಣಕ್ಕೆ ಅಜಿತ್‌ಗೆ ಸಿಗುತ್ತಿಲ್ಲ ನಿರ್ಮಾಪಕರು; ಅಸಲಿ ವಿಷಯ ರಿವೀಲ್ – Kannada News | Ajith Kumar’s Salary Standoff: Why His Next Film Announcement is Delayed in Kollywood

ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ (Ajith Kumar) ಮುಂದಿನ ಸಿನಿಮಾ ಘೋಷಣೆ ತಡವಾಗುತ್ತಿರುವುದಕ್ಕೆ ಅವರ ಭಾರಿ ಸಂಭಾವನೆಯ ಬೇಡಿಕೆಯೇ ಕಾರಣ ಎಂಬ ವದಂತಿ ಇತ್ತೀಚೆಗೆ ಹರಿದಾಡಿತ್ತು. ಅಜಿತ್ ತಮ್ಮ ಸಂಭಾವನೆಯನ್ನು 150 ಕೋಟಿ ರೂಪಾಯಿ ಇಂದ 125 ಕೋಟಿ ರೂಪಾಯಿಗೆ ಇಳಿಕೆ ಮಾಡಿಕೊಂಡಿದ್ದರು. ಆದರೆ, ನಿರ್ಮಾಪಕರು ಇಷ್ಟು ಹಣ ನೀಡಲು ರೆಡಿ ಇಲ್ಲ ಎಂದು ವರದಿ ಆಗಿದೆ. ಈ ಬಗ್ಗೆ ತಮಿಳು ಸಿನಿಮಾಗಳ ಪ್ರಮುಖ ವಿತರಕ ಹಾಗೂ ಫೈನಾನ್ಶಿಯರ್ ತಿರುಪ್ಪೂರ್ ಸುಬ್ರಮಣಿಯನ್ ಮಾತನಾಡಿದ್ದಾರೆ.

‘ಅಜಿತ್ ಕುಮಾರ್ ತಮಗೆ ಸರಿ ಹೊಂದುವ ಸಂಭಾವನೆಯನ್ನೇ ಕೇಳುತ್ತಿದ್ದಾರೆ. ಆದರೆ ಅಷ್ಟೊಂದು ದೊಡ್ಡ ಮೊತ್ತವನ್ನು ನೀಡಲು ಇಂದು ಚಿತ್ರರಂಗದಲ್ಲಿ ಯಾರೂ ಸಿದ್ಧರಿಲ್ಲ’ ಎಂದು ಸುಬ್ರಮಣಿಯನ್ ತಿಳಿಸಿದ್ದಾರೆ. ಸದ್ಯ ತಮಿಳು ಚಿತ್ರರಂಗದಲ್ಲಿ ದೊಡ್ಡ ಬಂಡವಾಳ ಹೂಡುವ ನಿರ್ಮಾಣ ಸಂಸ್ಥೆಗಳ ಕೊರತೆಯಿದೆ. ಸನ್ ಪಿಕ್ಚರ್ಸ್, ಎಜಿಎಸ್ ಎಂಟರ್‌ಟೈನ್‌ಮೆಂಟ್ಸ್, ರೆಡ್ ಜೈಂಟ್ ಸ್ಟುಡಿಯೋಸ್‌ನಂತಹ ಕೆಲವು ದೊಡ್ಡ ಸಂಸ್ಥೆಗಳು ಮಾತ್ರ ಸಕ್ರಿಯವಾಗಿವೆ. ಆದರೆ, ಈ ಸಂಸ್ಥೆಗಳು ಅಷ್ಟೊಂದು ದೊಡ್ಡ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿಲ್ಲ. ಅವರು ಲಾಭದಲ್ಲಿ ಪಾಲು ಕೊಡುವ ಮಾದರಿಗೆ ಆದ್ಯತೆ ನೀಡುತ್ತಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.

90 ಕೋಟಿ ಆಫರ್?

ಚಿತ್ರರಂಗದ ವರದಿಗಳ ಪ್ರಕಾರ, ಪ್ರಮುಖ ನಿರ್ಮಾಣ ಸಂಸ್ಥೆಗಳು ಅಜಿತ್ ಅವರಿಗೆ 80-90 ಕೋಟಿ ರೂಪಾಯಿ ಸಂಭಾವನೆ ನೀಡಲು ಮುಂದೆ ಬಂದಿವೆ. ಆದರೆ, ಅಜಿತ್ ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಕಡ್ಡಾಯವಾಗಿ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಹಣಕಾಸಿನ ಭಿನ್ನಾಭಿಪ್ರಾಯದಿಂದಾಗಿಯೇ ಅವರ ಹೊಸ ಸಿನಿಮಾ ಒಪ್ಪಂದಗಳು ಅಂತಿಮಗೊಳ್ಳುತ್ತಿಲ್ಲ ಎನ್ನಲಾಗಿದೆ.

ರೇಸಿಂಗ್‌ನಲ್ಲಿ ಬ್ಯುಸಿ, ಸಿನಿಮಾಗೆ ಸಲಹೆ

ಅಜಿತ್ ಅವರ ಕೊನೆಯ ಚಿತ್ರ ‘ಗುಡ್ ಬ್ಯಾಡ್ ಅಗ್ಲಿ’ ಸಾಧಾರಣ ಎನಿಸಿಕೊಂಡಿತು. ಈ ಸಿನಿಮಾ ರಿಲೀಸ್ ಆಗಿ ವರ್ಷಗಳೇ ಕಳೆದೂ ಅವರ 64ನೇ ಸಿನಿಮಾ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಈ ಬಗ್ಗೆ ಸಲಹೆ ನೀಡಿರುವ ಸುಬ್ರಮಣಿಯನ್, ‘ಅಜಿತ್ ಈಗಾಗಲೇ ಚಿತ್ರರಂಗದಲ್ಲಿ ನೆಲೆಸಿದ್ದಾರೆ. ಅವರಿಗೆ ರೇಸಿಂಗ್ ಹಾಗೂ ಜಾಹೀರಾತುಗಳಿಂದಲೂ ಉತ್ತಮ ಆದಾಯವಿದೆ. ಹೀಗಾಗಿ ಅವರು ಚಿತ್ರರಂಗದ ಹಿತದೃಷ್ಟಿಯಿಂದ ಲಾಭದಲ್ಲಿ ಪಾಲು ಪಡೆಯುವ ಆಧಾರದ ಮೇಲೆ ಸಿನಿಮಾ ಮಾಡಬೇಕು. ಇದರಿಂದ ತಮಿಳು ಚಿತ್ರರಂಗಕ್ಕೆ ವರ್ಷಕ್ಕೆ ಕನಿಷ್ಠ 2 ರಿಂದ 3 ದೊಡ್ಡ ಸಿನಿಮಾಗಳು ಸಿಗುತ್ತವೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೇಗಿದೆ ನೋಡಿ ನಟ ಅಜಿತ್ ಕುಟುಂಬ; ಇಲ್ಲಿವೆ ಸುಂದರ ಫೋಟೋಸ್

ಮತ್ತೊಂದೆಡೆ, ನಟ ವಿಜಯ್ ರಾಜಕೀಯಕ್ಕೆ ಪ್ರವೇಶಿಸಿ ಚಿತ್ರರಂಗದಿಂದ ದೂರ ಸರಿಯುತ್ತಿರುವುದರಿಂದ, ಅಜಿತ್ ಆ ಜಾಗವನ್ನು ತುಂಬಲಿದ್ದಾರೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಆದರೆ ಸಂಭಾವನೆ ವಿವಾದ ಬಗೆಹರಿಯದ ಹೊರತು ಅಜಿತ್ ಅವರ ಮುಂದಿನ ಚಿತ್ರದ ಶೂಟಿಂಗ್ ಆರಂಭವಾಗುವುದು ಅನುಮಾನ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಾನು ಅಸಹಾಯಕ ಸ್ವಾಮಿ, ಪಡಿತರ ಚೀಟಿಗಾಗಿ ದಿವ್ಯಾಂಗ ಪತ್ನಿಯನ್ನು ಬೆನ್ನ ಮೇಲೆ ಹೊತ್ತು ಜಿಲ್ಲಾಧಿಕಾರಿ ಕಚೇರಿಗೆ ಬಂದ ಪತಿ – Kannada News | Panna Man Carries Disabled Wife for Ration Card: 10 Year Welfare Denial

ಪತ್ನಿಯ ಹೊತ್ತುಬಂದ ಪತಿImage Credit source: India Today

ಪನ್ನಾ, ಜೂನ್ 18: ಸರ್ಕಾರಿ ಯೋಜನೆಗಳು ಮತ್ತು ಸೌಲಭ್ಯಗಳು ತಳಮಟ್ಟದ ಬಡವರಿಗೆ ತಲುಪಲು ಎಷ್ಟು ಕಷ್ಟಪಡಬೇಕಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಹತ್ತಾರು ವರ್ಷಗಳಿಂದ ಪಡಿತರ ಚೀಟಿ(Ration Card) ಸಿಗದೆ ವಂಚಿತರಾಗಿರುವ ಕುಟುಂಬವೊಂದರ ವ್ಯಕ್ತಿ ದಿವ್ಯಾಂಗ ಪತ್ನಿಯನ್ನು ಬೆನ್ನ ಮೇಲೆ ಹೊತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದಿದೆ.
ಪನ್ನಾ ಜಿಲ್ಲೆಯ ಕಲೆಕ್ಟರೇಟ್‌ಗೆ ಆಗಮಿಸಿದ ಪುಷ್ಪೇಂದ್ರ ಸಿಂಗ್ ಎಂಬ ವ್ಯಕ್ತಿ ತನ್ನ ಮಕ್ಕಳು ಹಾಗೂ ಪತ್ನಿ ನೀಲು ರಾಜಾ ಅವರೊಂದಿಗೆ ಅಧಿಕಾರಿಗಳ ಮುಂದೆ ತಮ್ಮ ಕಳವಳ ತೋಡಿಕೊಂಡಿದ್ದಾರೆ.

ಅಧಿಕಾರಿಗಳ ಮುಂದೆ ಕಣ್ಣೀರಿಟ್ಟ ನೀಲು ರಾಜಾ, ನಾವು ಅತ್ಯಂತ ಬಡವರಾಗಿದ್ದರೂ ನಮ್ಮ ಗ್ರಾಮ ಪಂಚಾಯತ್ ಅಧಿಕಾರಿಗಳು ನಮಗೆ ತಿಳಿಯದಂತೆ 10 ವರ್ಷಗಳ ಹಿಂದೆ ನಮ್ಮಲ್ಲಿದ್ದ ‘ಅಂತ್ಯೋದಯ ಅನ್ನ ಯೋಜನೆ’ ಕಾರ್ಡನ್ನು ಸಾಮಾನ್ಯ ಬಿಪಿಎಲ್ ಕಾರ್ಡ್ ಆಗಿ ಬದಲಾಯಿಸಿದ್ದರು. ಅದಾದ ನಂತರ ನಮಗೆ ಹೊಸ ಪಡಿತರ ಚೀಟಿಯನ್ನೇ ನೀಡಿಲ್ಲ. ಇದರಿಂದಾಗಿ ಕಳೆದ ಒಂದು ದಶಕದಿಂದ ನಮ್ಮ ಕುಟುಂಬಕ್ಕೆ ಸಿಗಬೇಕಿದ್ದ ರಿಯಾಯಿತಿ ದರದ ಆಹಾರ ಧಾನ್ಯಗಳು ಸಿಗದೆ ನಾವು ವಂಚಿತರಾಗಿದ್ದೇವೆ ಎಂದು ದೂರಿದ್ದಾರೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY-G) ಅಡಿಯಲ್ಲಿ ಸಿಗಬೇಕಿದ್ದ ಮನೆ ಮತ್ತು ಶೌಚಾಲಯ ನಿರ್ಮಾಣದ ಸಹಾಯ ಧನವನ್ನೂ ಈ ಕುಟುಂಬಕ್ಕೆ ನಿರಾಕರಿಸಲಾಗಿದೆ. ನೀಲು ರಾಜಾ ಅವರು ಪ್ರಸ್ತುತ ಭೋಪಾಲ್‌ನ ಏಮ್ಸ್ಆ ಸ್ಪತ್ರೆಯಲ್ಲಿ ತೀವ್ರ ಕಿಡ್ನಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದಲ್ಲಿ ಉದ್ಯೋಗವಿಲ್ಲದೆ, ಇತ್ತ ರೇಷನ್ ಕಾರ್ಡ್ ಇಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಇವರ ಪರಿಸ್ಥಿತಿ ಮಕ್ಕಳ ಶಿಕ್ಷಣದ ಮೇಲೂ ಭಾರಿ ಪರಿಣಾಮ ಬೀರಿದೆ.

ಮತ್ತಷ್ಟು ಓದಿ: BPL ಕಾರ್ಡ್​​ದಾರರಿಗೆ ಶೀಘ್ರವೇ ಗುಡ್​​ನ್ಯೂಸ್​?: ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ

ಸ್ಥಳೀಯ ಪಂಚಾಯತ್ ಕಾರ್ಯದರ್ಶಿ, ಸರಪಂಚ್‌ನಿಂದ ಹಿಡಿದು ಮುಖ್ಯಮಂತ್ರಿ ಕಚೇರಿ  ವರೆಗೂ ಹತ್ತಾರು ಬಾರಿ ದೂರು ನೀಡಿದರೂ ಯಾರೂ ತಮ್ಮ ಸಮಸ್ಯೆಯನ್ನು ಆಲಿಸಿಲ್ಲ ಎಂದು ದಂಪತಿಗಳು ಅಳಲು ತೋಡಿಕೊಂಡಿದ್ದಾರೆ. ಸಾರ್ವಜನಿಕ ವಿಚಾರಣೆಯ ವೇಳೆ ಮಹಿಳೆ ಭಾವುಕರಾಗಿ ತಕ್ಷಣದ ನೆರವಿಗಾಗಿ ಕೈಮುಗಿದು ಬೇಡಿಕೊಂಡಿದ್ದಾರೆ.

ದಂಪತಿ ಕಷ್ಟದ ಕಥೆಯನ್ನು ಆಲಿಸಿದ ಪನ್ನಾ ಜಿಲ್ಲಾಧಿಕಾರಿ ಉಷಾ ಪರ್ಮಾರ್ ಅವರು, ಈ ಪ್ರಕರಣವನ್ನು ತಕ್ಷಣವೇ ತನಿಖೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಕುಟುಂಬಕ್ಕೆ ಅಗತ್ಯವಿರುವ ಪಡಿತರ ದಾಖಲೆಗಳನ್ನು ಒದಗಿಸಲು ಮತ್ತು ಅವರು ಅರ್ಹರಾಗಿರುವ ಎಲ್ಲಾ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ತಕ್ಷಣವೇ ತಲುಪಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Horoscope Today: ಇಂದು ಈ ರಾಶಿಯವರಿಗೆ ಗಜಕೇಸರಿ ಯೋಗ!

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 18, ಗುರುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಪರಾಭವನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲಪಕ್ಷದ ಚೌತಿ ಮತ್ತು ಪುಷ್ಯಾ ನಕ್ಷತ್ರ ಹೊಂದಿರುವ ಈ ದಿನವು ಜ್ಯೋತಿಷ್ಯದ ಪ್ರಕಾರ ಅತ್ಯಂತ ವಿಶೇಷವಾಗಿದೆ.

ಈ ದಿನ ರಾಹುಕಾಲವು ಮಧ್ಯಾಹ್ನ 1:55 ರಿಂದ 3:22 ರವರೆಗೆ ಇರಲಿದ್ದು, ಸರ್ವಸಿದ್ಧಿ, ಸಂಕಲ್ಪ ಹಾಗೂ ಶುಭ ಕಾಲಗಳು ಮಧ್ಯಾಹ್ನ 12:20 ರಿಂದ 1:57 ರವರೆಗೆ ವ್ಯಾಪಿಸಿವೆ. ಇದೊಂದು ಪರ್ವ ದಿನವಾಗಿದ್ದು, ಗುರು ಪುಷ್ಯ ಯೋಗದ ಪ್ರಾರಂಭವು 61 ದಿನಗಳ ಕಾಲ ಇರಲಿದೆ. ಇದು ಅದ್ಭುತವಾದ ಮತ್ತು ವಿಶೇಷವಾದ ದಿನವಾಗಿದೆ ಎಂದು ಬಸವರಾಜ ಗುರೂಜಿ ತಿಳಿಸಿದ್ದಾರೆ.

Source link

ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋದ ‘ಬ್ಲೂ ಲೈನ್’ ಕಾಮಗಾರಿ ವಿಳಂಬಕ್ಕೆ ಕಾರಣ ಬಿಚ್ಚಿಟ್ಟ ಎಂಜಿನಿಯರ್‌ – Kannada News | ORR Airport Metro Project: Bengaluru Blue Line Faces Major Construction Challenges

ಬೆಂಗಳೂರು, ಜೂ.18: ಬೆಂಗಳೂರಿನ ಬಹುನಿರೀಕ್ಷಿತ ಯೋಜನೆ ನಮ್ಮ ಮೆಟ್ರೋದ ‘ಬ್ಲೂ ಲೈನ್’ (ఔಟರ್ ರಿಂಗ್ ರೋಡ್ – ಏರ್‌ಪೋರ್ಟ್ ಸಂಪರ್ಕ) ಕಾಮಗಾರಿ ಭಾರೀ ಸಂಕಷ್ಟದಲ್ಲಿ ಸಾಗುತ್ತಿದೆ. ಇದೀಗ ನಿಗದಿತ ಕಾಲಮಿತಿಯೊಳಗೆ ಈ ಪ್ರಾಜೆಕ್ಟ್ ಪೂರ್ಣಗೊಳ್ಳಲಿದೆಯೇ? ಎಂಬ ದೊಡ್ಡ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಈ ಬಗ್ಗೆ ಬೆಂಗಳೂರು ಪೋಸ್ಟ್​​ (Bengaluru Post) ಎಂಬ ಎಕ್ಸ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ​​​ವಿಶೇಷವಾಗಿ, ನಾಗವಾರ-ಹೆಬ್ಬಾಳ ನಡುವಿನ ರಸ್ತೆ ಮಾರ್ಗದಲ್ಲಿ ಮೆಟ್ರೋ ಕಾಮಗಾರಿ ಪ್ರಗತಿಯು ನಿಧಾನಗತಿಯಲ್ಲಿ ಸಾಗುತ್ತಿದೆ.

ಇನ್ನು ಈ ಕಾಮಗಾರಿಯ ಬಗ್ಗೆ ಎಂಜಿನಿಯರ್​​​​​​ರೊಬ್ಬರು ಹಲವು ಸವಾಲುಗಳನ್ನು ಚಿಚ್ಚಿಟ್ಟಿದ್ದಾರೆ.
ಸ್ಥಳೀಯವಾಗಿ ನಡೆಸಿದ ರಿಯಾಲಿಟಿ ಚೆಕ್ ಹಾಗೂ ಗ್ರೌಂಡ್ ವಿಸಿಟ್ ವೇಳೆ, ಹೆಸರು ಹೇಳಲು ಇಚ್ಛಿಸದ ಸೈಟ್ ಎಂಜಿನಿಯರ್‌ ಕಾಮಗಾರಿ ವಿಳಂಬಕ್ಕೆ ಕಾರಣವಾಗಿರುವ ಪ್ರಮುಖ ತಾಂತ್ರಿಕ ಮತ್ತು ಆಡಳಿತಾತ್ಮಕ ಸವಾಲುಗಳನ್ನು ಬಿಚ್ಚಿಟ್ಟಿದ್ದಾರೆ.

ಯುಟಿಲಿಟಿ ಶಿಫ್ಟಿಂಗ್ ಸಮಸ್ಯೆ: ಭೂಗತ ನೀರಿನ ಪೈಪ್‌ಲೈನ್, ವಿದ್ಯುತ್ ಕೇಬಲ್ ಹಾಗೂ ಗ್ಯಾಸ್ ಲೈನ್‌ಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದೆ.

ಟ್ರಾಫಿಕ್ ಮ್ಯಾನೇಜ್‌ಮೆಂಟ್: ಕರಾವಳಿ ಹಾಗೂ ಉತ್ತರ ಬೆಂಗಳೂರನ್ನು ಸಂಪರ್ಕಿಸುವ ಹೆಬ್ಬಾಳ ಭಾಗದಲ್ಲಿ ಭಾರಿ ವಾಹನ ದಟ್ಟಣೆ ಇರುವುದರಿಂದ, ಸಂಚಾರ ನಿಯಂತ್ರಣದೊಂದಿಗೆ ಕಾಮಗಾರಿ ನಡೆಸುವುದು ದೊಡ್ಡ ಸವಾಲಾಗಿದೆ.

ವಿನ್ಯಾಸ ಪರಿಷ್ಕರಣೆ ಮತ್ತು ಕಾರ್ಮಿಕರ ಕೊರತೆ: ಮೆಟ್ರೋ ನಿಲ್ದಾಣಗಳ ವಿನ್ಯಾಸದಲ್ಲಿನ ಪದೇ ಪದೇ ಬದಲಾವಣೆಗಳು ಮತ್ತು ಕುಶಲ ಕಾರ್ಮಿಕರ ತೀವ್ರ ಕೊರತೆಯು ಯೋಜನೆಗೆ ಮುಳ್ಳಾಗಿದೆ.

ವಿಶೇಷವಾಗಿ ಕೆಂಪುಪುರ ಭಾಗದಲ್ಲಿ ಮೆಟ್ರೋ ಪ್ರಗತಿ ಸಂಪೂರ್ಣ ಕುಂಠಿತಗೊಂಡಿರುವುದು ಕಣ್ಣಿಗೆ ಕಟ್ಟಿದಂತೆ ಕಾಣಿಸುತ್ತಿದೆ. ಇದರೊಂದಿಗೆ ವೀರಣ್ಣಪಾಳ್ಯ ಮತ್ತು ನಾಗವಾರ ನಡುವಿನ ಕೆಲವು ಆಯ್ದ ಸ್ಥಳಗಳಲ್ಲಿ ಕಾಮಗಾರಿ ಚಟುವಟಿಕೆಗಳು ಭಾರೀ ನಿಧಾನವಾಗಿ ಸಾಗುತ್ತಿದೆ.

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್:

ಇನ್ನು ಈ ಕಾರಿಡಾರ್​​​ನಿಂದ ನಗರದ ಬಹುದೊಡ್ಡ ಬದಲಾವಣೆಗಳು ಹಾಗೂ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ. ಹೀಗಿರುವಾಗ, ಬಿಎಂಆರ್‌ಸಿಎಲ್ ಈ ಸಮಸ್ಯೆಗಳಿಗೆ ಹಾಗೂ ಕಾಮಗಾರಿ ವೇಗಕ್ಕೆ ಹೆಚ್ಚಿನ ಗಮನ ನೀಡುವುದು ಅಗತ್ಯವಾಗಿದೆ. ಅದಕ್ಕಾಗಿ ‘ಪ್ಯಾಕೇಜ್ 1’ ಕಾಮಗಾರಿಯನ್ನು ಸ್ಥಗಿತವಾಗಿರುವುದಕ್ಕೆ ಹಾಗೂ ನಿಧಾನವಾಗುತ್ತಿರುವುದಕ್ಕೆ ಅಸಲಿ ಕಾರಣಗಳೇನು ಎಂಬುದನ್ನು ನೋಡಬೇಕಿದೆ. ಅಲ್ಲದೆ ದಿನಂಪ್ರತಿ ಸಂಚರಿಸುವ ಪ್ರಯಾಣಿಕರಿಗೆ ಕಾಮಗಾರಿ ಮುಕ್ತಾಯದ ಸಮಯದ ಬಗ್ಗೆ ತಿಳಿಸುವ ಅಗತ್ಯ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಐಐಎಂ ಕ್ಯಾಂಪಸ್​ನಲ್ಲಿ ಹೊಸ ಕಾಲೇಜು; ಎರಡು ಪದವಿ ಕೋರ್ಸ್​ಗಳು ಆಫರ್; ಟಾಟಾ ಟ್ರಸ್ಟ್ಸ್​ನಿಂದ ಅನುದಾನ

ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಬ್ಲೂ ಲೈನ್‌ನ ಎಲ್ಲಾ ಸೆಕ್ಷನ್‌ಗಳ ಪೈಕಿ ಪ್ಯಾಕೇಜ್ 1 ಅತ್ಯಂತ ಹೆಚ್ಚು ವಿಳಂಬವಾಗಿರುವ ಭಾಗವಾಗಿ ಗೋಚರಿಸುತ್ತಿದೆ. ಆರಂಭದಲ್ಲೇ ಈ ಬೃಹತ್ ಪ್ಯಾಕೇಜ್ ಅನ್ನು ಸಣ್ಣ ಸಣ್ಣ ಗುತ್ತಿಗೆ ಒಪ್ಪಂದಗಳಾಗಿ ವಿಭಜಿಸಿದ್ದರೆ, ಇಂತಹ ದೊಡ್ಡ ತೊಂದರೆಗಳನ್ನು ತಪ್ಪಿಸಬಹುದಿತ್ತಲ್ಲವೇ? ಎಂಬ ಚರ್ಚೆ ಈಗ ತಜ್ಞರ ವಲಯದಲ್ಲಿ ನಡೆಯುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ದೃಶ್ಯಂ 3’ ಒಟಿಟಿ ರಿಲೀಸ್‌ಗೆ ಬಿಗ್ ಶಾಕ್; ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ – Kannada News | Drishyam 3 Telugu OTT Release Stalled by Madras HC: Legal Battle Halts Streaming

ಮೋಹನ್‌ಲಾಲ್ ನಟನೆಯ ಬಹುನಿರೀಕ್ಷಿತ ಕ್ರೈಮ್ ಥ್ರಿಲ್ಲರ್ ಸಿನಿಮಾ ‘ದೃಶ್ಯಂ 3’ (Drishaym 3) ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಹೀಗಿರುವಾಗಲೇ ಒಟಿಟಿ ಪ್ರಿಯರಿಗೆ ತೀವ್ರ ನಿರಾಶೆಯುಂಟುಮಾಡುವ ಸುದ್ದಿಯೊಂದು ಹೊರಬಿದ್ದಿದೆ. ಚಿತ್ರದ ತೆಲುಗು ವರ್ಷನ್‌ ಒಟಿಟಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಉಳಿದ ಭಾಷೆಯಲ್ಲಿ ಸಿನಿಮಾ ಪ್ರಸಾರ ಕಾಣಲು ಯಾವುದೇ ತೊಂದರೆ ಇಲ್ಲ. ಹೀಗಾಗಿ, ತೆಲುಗು ಮಂದಿಗೆ ಕೊಂಚ ಬೇಸರ ಆಗಿದೆ.

‘ದೃಶ್ಯಂ’ ಮೊದಲ ಭಾಗವನ್ನು ತೆಲುಗಿನಲ್ಲಿ ರಿಮೇಕ್ ಮಾಡಿದ್ದ ಹಿರಿಯ ನಿರ್ದೇಶಕಿ ಶ್ರೀಪ್ರಿಯಾ ಹಾಗೂ ಅವರ ಒಡೆತನದ ‘ರಾಜ್‌ಕುಮಾರ್ ಥಿಯೇಟರ್ಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆ ಕೋರ್ಟ್ ಮೆಟ್ಟಿಲೇರಿದೆ. ಈ ಫ್ರಾಂಚೈಸಿಯ ತೆಲುಗು ರಿಮೇಕ್ ಮತ್ತು ಹಕ್ಕುಗಳು ಕಾನೂನಾತ್ಮಕವಾಗಿ ತಮಗೆ ಸೇರಿದ್ದಾಗಿದೆ ಎಂದು ಅವರು ವಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಒಟಿಟಿಯಲ್ಲಿ ತೆಲುಗು ವರ್ಷನ್ ಪ್ರಸಾರವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಕೋರಿ ಶ್ರೀಪ್ರಿಯಾ ಹಾಗೂ ರಾಜ್‌ಕುಮಾರ್ ಸೇತುಪತಿ ಜಂಟಿಯಾಗಿ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಜೂನ್ 18 ರಂದು ‘ದೃಶ್ಯಂ 3’ ಚಿತ್ರವು ಅಮೆಜಾನ್ ಪ್ರೈಮ್ ಒಟಿಟಿ ವೇದಿಕೆಯಲ್ಲಿ ಭರ್ಜರಿಯಾಗಿ ಸ್ಟ್ರೀಮಿಂಗ್ ಆಗಲು ಸಜ್ಜಾಗಿತ್ತು. ಆದರೆ, ಒಟಿಟಿ ರಿಲೀಸ್ ಆಗುವ ಸಮಯದಲ್ಲೇ ಚಿತ್ರತಂಡಕ್ಕೆ ಈ ತೊಂದರೆ ಎದುರಾಗಿದೆ.

ಅರ್ಜಿಯ ತುರ್ತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಕುಮರೇಶ್ ಬಾಬು ಅವರಿದ್ದ ಪೀಠವು ಈ ಮಹತ್ವದ ಆದೇಶ ನೀಡಿದೆ. ಪ್ರತಿವಾದಿಗಳಿಗೆ ಮುಂಚಿತವಾಗಿಯೇ ಖಾಸಗಿ ನೋಟಿಸ್ ಕಳುಹಿಸಿದ್ದರೂ ಸಹ, ಚಿತ್ರದ ತಯಾರಕರು ಅಥವಾ ಅವರ ಪ್ರತಿನಿಧಿಗಳು ಯಾರೂ ನ್ಯಾಯಾಲಯಕ್ಕೆ ಹಾಜರಾಗದ ಕಾರಣ, ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ದೃಶ್ಯಂ 3: ಮೋಹನ್​ಲಾಲ್ ಕಾರ್ ನಂಬರ್​ನಿಂದ ರೈತನಿಗೆ ಮಾನಸಿಕ ಕಿರಿಕಿರಿ; ದಾಖಲಾಯ್ತು ದೂರು

ಚಿತ್ರವು ಜೂನ್ 18 ರಂದೇ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವುದನ್ನು ಗಮನಿಸಿದ ಕೋರ್ಟ್, ತಕ್ಷಣವೇ ಜಾರಿಗೆ ಬರುವಂತೆ ತೆಲುಗು ವರ್ಷನ್ ಒಟಿಟಿ ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ ವಿಧಿಸಿದೆ. ಹೀಗಾಗಿ, ತೆಲುಗು ಪ್ರೇಕ್ಷಕರು ಈ ಥ್ರಿಲ್ಲರ್ ಸಿನೆಮಾವನ್ನು ವೀಕ್ಷಿಸಲು ಇನ್ನು ಕೆಲವು ದಿನ ಕಾಯುವುದು ಅನಿವಾರ್ಯವಾಗಿದೆ. ಕನ್ನಡದಲ್ಲಿ ಸಿನಿಮಾ ಪ್ರಸಾರ ಕಾಣಲು ಯಾವುದೇ ಅಡ್ಡಿಯಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ಇಂದಿನಿಂದ ಗುರುಪುಷ್ಯ ಯೋಗ; ಯಾವ ರಾಶಿಗೆ ಏನೇನು ಫಲ? – Kannada News | Guru Pushya Mahayoga 2026: Auspicious 61 Day Period and its Impact on Zodiac Signs

ಟಿವಿ9 ಕನ್ನಡ ಡಿಜಿಟಲ್​ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಇಂದಿನಿಂದ ಗುರುಪುಷ್ಯ ಯೋಗ; ಯಾವ ರಾಶಿಗೆ ಏನೇನು ಫಲ ಎಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಮಹತ್ವಪೂರ್ಣ ಘಟನೆಯಾಗಿ ಗುರುತಿಸಲ್ಪಟ್ಟಿರುವ ಗುರು ಪುಷ್ಯ ಮಹಾಯೋಗವು 2026ರಲ್ಲಿ 61 ದಿನಗಳ ಕಾಲ ಸಂಭವಿಸಲಿದೆ. ಈ ವಿಶೇಷ ಯೋಗವು ಜೂನ್ 18, 2026, ಗುರುವಾರ ರಾತ್ರಿ 9:32 ರಿಂದ ಆಗಸ್ಟ್ 19, 2026, ಬುಧವಾರ ಬೆಳಗಿನ ಜಾವ 3:37 ರವರೆಗೆ ಇರುತ್ತದೆ. ಈ ಅವಧಿಯಲ್ಲಿ ಗುರು ಗ್ರಹವು ಪುಷ್ಯ ನಕ್ಷತ್ರದಲ್ಲಿ ಸಂಚರಿಸುತ್ತದೆ. ಪುಷ್ಯ ನಕ್ಷತ್ರದ ಅಧಿಪತಿ ಶನಿ ಗ್ರಹವಾಗಿರುವುದರಿಂದ, ಧರ್ಮ ಕಾರಕನಾದ ಗುರು ಮತ್ತು ಕರ್ಮ ಕಾರಕನಾದ ಶನಿಯ ಈ ಸಂಯೋಗವು ಮಹಾ ಅದೃಷ್ಟದ ಯೋಗವೆಂದು ಪರಿಗಣಿಸಲಾಗಿದೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

Source link

ದಿನ ಭವಿಷ್ಯ: ಇಂದು ಈ ರಾಶಿಯವರ ಮನಸ್ಸನ್ನು ಗೆಲ್ಲುವ ಪ್ರಯತ್ನ… – Kannada News | Dina Rashi Bhavishya June 18, 2026: Daily Horoscope Predictions for Thursday

ಮೇಷ ರಾಶಿ:

ಇಂದು ನಿಮ್ಮ ಸಾಧಾರಣ ಬಟ್ಟೆಯನ್ನು ಕಂಡು ನಿಮ್ಮನ್ನು ಅಳೆಯಬಹುದು.‌ ಅಂಧಾನುಕರಣೆ ಬೇಡ. ಸಮಾರಂಭಕ್ಕೆ ಹೋಗುವಾಗ ಉತ್ತಮ‌ ಬಟ್ಟೆಯು ಇರಲಿ. ಕಾರ್ಯವಾಗದಿದ್ದಾಗ ಬೇಸರ, ಹತಾಶೆ ಕಾಣಿಸುವುದು. ಸ್ತ್ರೀಯರಿಗೆ ತವರುಮನೆಯ ಕಡೆಯಿಂದ ಶುಭವಾದ ಸುದ್ದಿಯು ಬರಲಿದೆ. ಸ್ವಾಭಿಮಾನಕ್ಕೆ ಧಕ್ಕೆ ಬರುವ ಕೆಲಸವು ಎಂತದ್ದೇ ಆಗಿದ್ದರೂ ಇಂದು ಮಾಡಲಾರಿರಿ. ದೊಡ್ಡ ವಿಚಾರವನ್ನು ಸಣ್ಣದಾಗಿ ಮಾಡಿ, ಯಾರಿಗೂ ಗೊತ್ತಾಗದಂತೆ ಮಾಡುವಿರಿ.

ವೃಷಭ ರಾಶಿ:

ಸಾಲವನ್ನು ಮಾಡಬೇಕಾಗಿ ಬಂದರೆ ಅಗತ್ಯವನ್ನು ನೋಡಿ ಮಾಡಿ. ನಿಮಗೆ ಬಾಣಲಿಯಿಂದ ಬೆಂಕಿಗೆ ಬಿದ್ದ ಅನುಭವವಾಗಬಹುದು. ಮನಸ್ಸು ಒಂದು ಕಡೆ ನಿಲ್ಲದೇ ಓಡಾಡುವುದು. ಕಳೆದುಕೊಂಡದ್ದನ್ನು ಪಡೆಯುವ ಹಠವಿರುವುದು. ಅದು ನಿಮ್ಮ ವ್ಯಕ್ತಿತ್ವವನ್ನೂ ತೋರಿಸುವುದು. ಪ್ರೀತಿಸುವವರನ್ನು ಮುಕ್ತವಾಗಿ ಬಿಡುವಿರಿ. ಉದ್ಯೋಗದಲ್ಲಿ ನೀವು ಸಡಿಲಾಗುವುದು ಬೇಡ. ನಿಮ್ಮ ಸ್ಥಾನವನ್ನು ಬಿಡುವುದು ಬೇಡ. ಒತ್ತಡವನ್ನು ನೀವಾಗಿಯೇ ತಂದುಕೊಳ್ಳುವ ಸಾಧ್ಯತೆ ಇದೆ.

ಮಿಥುನ ರಾಶಿ:

ನಿಮ್ಮ ಮಗುವಿನ ಬಗ್ಗೆ ನೀವು ಹೆಮ್ಮೆಪಡುತ್ತೀರಿ. ನೀವು ಕೆಲವು ನಷ್ಟಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಬೇಕು. ಐತಿಹಾಸಿಕ ದೇವಾಲಯವನ್ನು ನೋಡುವ ಹಂಬಲವಿರುವುದು. ನಿಮ್ಮಲ್ಲಿರವ ದುರ್ಗುಣಗಳು ನಿಮಗೆ ಅರ್ಥವಾಗಲಿದೆ. ಅತಿಯಾದರೆ ಅಮೃತವೂ ವಿಷ. ದುರಭ್ಯಾಸವು ಗೊತ್ತಾಗದಂತೆ ನಿಮಗೆ ಬರಲಿದೆ. ಬಿಡಿಸಲು ಮನೆಯವರ ಪ್ರಯತ್ನ ಮಾಡುವರು. ಅಸಾಧ್ಯವಾದ ಕಾರ್ಯವನ್ನು ಮಾಡಿ ಸಮಯವನ್ನು ವ್ಯರ್ಥ ಮಾಡುವುದು ಬೇಡ. ಶರೀರಪೀಡೆಯನ್ನು ನೀವು ಅನುಭವಿಸುವುದು ಕಷ್ಡವಾಗಬಹುದು.‌

ಕರ್ಕಾಟಕ ರಾಶಿ:

ಯಾರನ್ನೂ ಅವಲಂಬಿಸಬೇಕು ಅನ್ನಿಸದು. ನೀವು ಹಣಕಾಸಿನ ಲಾಭವನ್ನು ಆನಂದಿಸುವ ಸಾಧ್ಯತೆ ಇದೆದೆ. ಹುಟ್ಟಿನಿಂದ ಬಂದ ಸ್ವಭಾವವನ್ನು ತಿದ್ದಲಾಗದು. ಸಮಯವನ್ನು ತಿನ್ನುವವರಿಗೆ ಸಿಗದೇ ಇದ್ದರೆ ಒಳ್ಳೆಯದು. ಮನೆಯಲ್ಲಿ ನಿಮ್ಮ ಸ್ವಭಾವವನ್ನು ತಿದ್ದಲು ಪ್ರಯತ್ನಿಸುವರು. ಮಾಡಬೇಕು ಎಂದು ಅನ್ನಿಸಿದ್ದನ್ನು ಮಾಡಿ‌ಮುಗಿಸಿ. ಸ್ನೇಹಿತರ ಜೊತೆ ಎಲ್ಲಿಗಾದರೂ ಹೋಗಬೇಕು ಎನಿಸುವುದು. ವಿದ್ಯಾರ್ಥಿಗಳು ಕೆಲವುದರಲ್ಲಿ ಸೋಲಬಹುದು.

ಸಿಂಹ ರಾಶಿ:

ಸಮಯ ಮುಂದುವರೆದಂತೆ ನಿಮ್ಮ ಆಲೋಚನೆಗಳನ್ನು ಅಳವಡಿಸಿಕೊಳ್ಳುವುದು ಯಶಸ್ಸಿಗೆ ಕಾರಣವಾಗುತ್ತದೆ. ಹೊಸವಾಹನ ಖರೀದಿಗೆ ಮನಸ್ಸು ಮಾಡಿದರೆ ಸ್ವಲ್ಪ ಮುಂದೂಡುವುದು ಉಚಿತ. ಯಾರಿಗೂ ತಿಳಿಸದೇ ಎಲ್ಲಿಗೋ ಹೋಗುವಿರಿ. ನಿಮ್ಮ ವಿರುದ್ಧ ಮಾತುಗಳು ಕೇಳಿಬರಬಹುದು. ಸಮಾರಂಭದಲ್ಲಿ ಮುಖ್ಯಸ್ಥಾನವನ್ನು ಪಡೆಯುವಿರಿ. ಅಪವಾದಗಳನ್ನು ಕೇಳುವ ಸ್ಥಿತಿಯೂ ಬರಬಹುದು. ಮನಸ್ಸಿನಲ್ಲಿ ದೃಢತೆ ಇರಲಿ. ನಿಮ್ಮನ್ನು ಅಳೆಯುತ್ತಿರುವರು ಎಂಬುದನ್ನು ಗಮನಿಸಿ. ಬಹಳ‌ ದಿನಗಳ ಅನಂತರ ಪುಣ್ಯ ಸ್ಥಳಗಳಿಗೆ ಹೋಗುವಿರಿ.

ಕನ್ಯಾ ರಾಶಿ:

ನಿಮ್ಮ ಬಿಡುವಿನ ವೇಳೆಯನ್ನು ಸ್ವಯಂ ಸೇವಕರಾಗಿ ಅಥವಾ ಇತರರಿಗೆ ಸಹಾಯ ಮಾಡಲು ಕಳೆಯಿರಿ. ನೀವು ಅಂದುಕೊಂಡಂತೆ ಎಲ್ಲವೂ ನಡೆಯುತ್ತಿದ್ದು ನಿಮಗೆ ಅಚ್ಚರಿಯಾಗಬಹುದು. ನಿಮ್ಮ ಮಾತು ಕೇಳುವುದಿಲ್ಲ ಎಂದೆನಿಸುವುದು. ಸದ್ಯ ಗ್ರಹಗತಿಗಳ ಬದಲಾವಣೆಯಿಂದ ಇದು ಸಾಧ್ಯವಾಗಿದೆ. ಅದನ್ನು ದುರುಪಯೋಗಪಡಿಸಿಕೊಳ್ಳಬೇಡಿ. ಸಮಯ ಸರಿದಾಗ ಎಲ್ಲವೂ ಅರಿವಾಗುವುದು. ಮನೆಯಲ್ಲಿ ನಿಮ್ಮ ಮಾತಿಗೆ ಯಾವ ಉತ್ತರವೂ ಕೊಡದೇ ಇರುವುದು ನಿಮಗೆ ನೋವಾಗುವುದು.

ತುಲಾ ರಾಶಿ:

ವಾಹನದ ಖರೀದಿಗೆ ಸಾಲ ಮಾಡುವಂತೆ ಪ್ರೇರಣೆ ಬರಲಿದೆ. ಮಕ್ಕಳಿಗೆ ಹೆಚ್ಚಿನ ಗಮನವನ್ನು ಕೊಡಬೇಕಾಗುವುದು. ಪುಣ್ಯಸ್ಥಳಕ್ಕೆ ಹೊರಟ ನಊರಿಂದ ಊರಿಗೆ ವರ್ಗಾವಣೆಯಾಗುತ್ತಿರುವುದಕ್ಕೆ ಬೇಸರ ಮಾಡಿಕೊಳ್ಳುವಿರಿ. ಅದಕ್ಕೆ ನಿಮ್ಮ ಸ್ನೇಹಿತರು ಸಮಾಧಾನವನ್ನು ಮಾಡುವುದು ಬಿಟ್ಟು ಸೊಪ್ಪು ಹಾಕುವರು. ಎಷ್ಟೋ ದಿನದ ಹಿಂದೆ ಹೊಸ ವಸ್ತುಗಳನ್ನು ಖರೀದಿಸಿದ್ದು ಇಂದು ನಿಮಗೆ ನೆನಪಾಗುವುದು. ಪ್ರೇಮವನ್ನು ನಿಭಾಯಿಸುವುದು ಕಷ್ಟವಾಗುವುದು. ಇಷ್ಟಪಟ್ಟ ವಸ್ತುವನ್ನು ಪಡೆಯಲು ಹಣದ ಅಭಾವವು ಕಾಣಿಸಬಹುದು.

ವೃಶ್ಚಿಕ ರಾಶಿ:

ಹೊಸ ಒಪ್ಪಂದಗಳು ಬರುವ ಸಾಧ್ಯತೆ ಇದೆ. ಹುಣ್ಣನ್ನು ಕೆದಕಿದಷ್ಟೂ ಅದು ದೊಡ್ಡ ಗಾಯವಾಗುವುದು. ಮಾತನಾಡದೇ ಸುಮ್ಮನಿರಿ. ತಾನಾಗಿಯೇ ತಣ್ಣಗಾಗುವುದು. ಯೋಜನೆಯಿಲ್ಲದೇ ಖರ್ಚನ್ನು ಹೆಚ್ಚು ಮಾಡಿಕೊಳ್ಳುವಿರಿ. ಅಸಂಭಾವ್ಯ ವಿಚಾರವನ್ನು ಸಂಭಾವ್ಯ ಮಾಡಿಕೊಂಡು ಹತಾಶರಾಗುವಿರಿ. ನಿಧಾನಗತಿಯ ಕೆಲಸವು ನಿಮ್ಮ ಮನಃಸ್ಥಿತಿಗೆ ಹೊಂದಿಕೆಯಾಗಲಿದೆ. ಸಹೋದರರ ಸಹಕಾರವು ನಿಮಗೆ ಬಲವನ್ನು ಕೊಡಬಹುದು. ತಾಯಿಯ ಪ್ರೀತಿಯು ನಿಮಗೆ ಅಪರೂಪವೆನಿಸುವಂತೆ ಆಗುವುದು.

ಧನು ರಾಶಿ:

ದುರಭ್ಯಾಸದ ಜನರ ಸಹವಾಸ ಇರುವುದು. ಒಳ್ಳೆಯ ಕಾಲ ಬರುವುದೆಂದು ಕಾದು ಕುಳಿತರೆ ಪ್ರಯೋಜನವಿಲ್ಲ. ಅಗ್ನಿಯ ಭಯದಿಂದ ಏನನ್ನೂ ಮಾಡಲು ಬೆಚ್ಚುವಿರಿ. ನಿಮ್ಮ ಕೆಲಸವನ್ನು ನೀವು ಮಾಡಿ. ಕಾಲ ಬಂದಾಗ ಅದು ಮಾಡಬೇಕಾದುದನ್ನು ಮಾಡುತ್ತದೆ. ಮಕ್ಕಳ ಭವಿಷ್ಯವು ಚೆನ್ನಾಗಿರಲು ಅವರ ಹೆಸರಿನಲ್ಲಿ ಹೂಡಿಕೆ ಮಾಡುವಿರಿ. ಕಷ್ಟವಾದರೂ ಇರುವ ಉದ್ಯೋಗವು ಯಥಾಸ್ಥಿತಿಯಲ್ಲಿ ಇರಲಿ. ಹತ್ತಾರು ಊರು ಸುತ್ತಿದರೂ ನಿಮಗೆ ಮನಯೇ ಶ್ರೇಷ್ಠ ಎನ್ನಿಸಬಹುದು. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸೋಲುವಿರಿ.

ಮಕರ ರಾಶಿ:

ಹೆಚ್ಚುವರಿ ಆದಾಯವನ್ನು ಗಳಿಸಲು ನಿಮ್ಮ ಕ್ರೀಯಾಶೀಲತೆ ಅಗತ್ಯವಾಗಿ ಬೇಕು. ಹಿರಿಯರ ಸೇವೆಯನ್ನು ಬಲವಾದ ಕಾರಣವಿಲ್ಲದೇ ಮಾಡಲಾರಿರಿ. ಭೂಮಿಯ ವ್ಯವಹಾರವನ್ನು ಸದ್ಯ ಮುಂದುವರಿಸಬೇಡಿ. ನ್ಯಾಯಾಲಯದ ಮೆಟ್ಟಿಲೇರಿದ ದೂರು ಇಂದು ಇತ್ಯರ್ಥವಾದೀತು. ಕಲೆಗಳಲ್ಲಿ ಆಸಕ್ತಿ ಇಲ್ಲದೇ ನೀರಸವಾಗಿ ಇರುವಿರಿ. ಕಛೇರಿಯಲ್ಲಿ ಗೌರವ ಸಿಗಲಿದೆ. ಎಂದೂ ನಂಬದವರ ಮಾತನ್ನು ನೀವು ಇಂದು ನಂಬಬೇಕಾಗುವುದು. ಹೂಡಿಕೆಯ ವಿಚಾರದಲ್ಲಿ ನಿಮಗೆ ಪೂರ್ಣ ಆಸಕ್ತಿ ಇರದು.

ಕುಂಭ ರಾಶಿ:

ಮನೆಗೆ ಅತಿಥಿಗಳ ಆಗಮನವು ಹೊಸ ಹೊಳಪು ಕೊಡುವುದು. ಗೆಲುವು ಸಣ್ಣದಾದರೂ ಸಂಭ್ರಮ ಮಾತ್ರ ದೊಡ್ಡದಾಗಿರುವುದು. ಮೇಲಧಿಕಾರಿಗಳ ವರ್ತನೆಯಿಂದ ಉದ್ಯೋಗವನ್ನು ಬಿಡುವ ಯೋಚನೆ ಮಾಡುವಿರಿ ಮತ್ತು ಮುಂದಿನ ವೃತ್ತಿಜೀವನದ ಬಗ್ಗೆ ಗೊಂದಲವೂ ಇರಬಹುದು. ಮಿತ್ರರ ಸಹಾಯದಿಂದ ಬಂದೊದಗಿದ ಅಪಾಯವನ್ನು ದೂರಮಾಡಿಕೊಳ್ಳುವಿರಿ. ಯಾರಾದರೂ ನಿಮ್ಮವರ ಬಗ್ಗೆ ಬಂದು ಕಿವಿಚುಚ್ಚಬಹುದು. ಸಾಲ ಬಾಧೆಯ ಕಾರಣ ಕಣ್ತಪ್ಪಿಸಿ ಓಡಾಡುವಿರಿ.

ಮೀನ ರಾಶಿ:

ಇಂದು ನಿಮ್ಮ ಸಂತೋಷದ ಕ್ಷಣಗಳನ್ನು ನೀವೇ ಸೃಷ್ಟಿಸಿಕೊಳ್ಳುವಿರಿ. ಮನೆಯಲ್ಲಿ ನಿಮ್ಮ ಮಕ್ಕಳು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲಾರರು. ಅನುರೂಪ ಸಂಗಾತಿಯ ಭೇಟಿ ಮಾಡುವಿರಿ. ಆದರೆ ಅದು ನಿಮಗೆ ಗೊತ್ತಾಗದು. ಕುಟುಂಬದ ಹಿರಿಯರಿಗೆ ನೀಡಬೇಕಾದ ಗೌರವವನ್ನು ನೀಡಿ. ನಿದ್ರಾಹೀನತೆಯಿಂದ ಬಳಲುತ್ತಿದ್ದು ವಾತಾವರಣವು ನಿಮ್ಮ ನಿದ್ರೆಗೆ ಪೂರಕವಾಗಿರದೇ ಇರುವುದು ಕಾರಣವಾಗಿದೆ. ಕುಟುಂಬದಿಂದ ನಿರೀಕ್ಷಿಸುವ ವಸ್ತುವು ನಿಮಗೆ ಸಿಗಲಿದೆ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಮೃಗಶಿರಾ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಪುಷ್ಯ, ಯೋಗ : ಗಂಡ, ಕರಣ : ಬಾಲವ, ಸೂರ್ಯೋದಯ – 05 – 55 am, ಸೂರ್ಯಾಸ್ತ – 06 – 46 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:57 – 15:34, ಯಮಗಂಡ ಕಾಲ 05:55 – 07:32, ಗುಳಿಕ ಕಾಲ 09:48 – 10:44

-ಲೋಹಿತ್ ಹೆಬ್ಬಾರ್ – 8762924271 (what’s app only)

Source link

ಮೋದಿ ರಾಜತಾಂತ್ರಿಕತೆ ಯಶಸ್ವಿ; ಬ್ರಿಟನ್ ಜೊತೆಗಿನ ವ್ಯಾಪಾರ ಒಪ್ಪಂದ ಜುಲೈ 15ರಿಂದ ಜಾರಿ – Kannada News | PM Modi’s Multi Alignment Approach Delivers Economic Outcomes India UK Trade Agreement will enter into force from July 15

ನವದೆಹಲಿ, ಜೂನ್ 17: ಪ್ರಧಾನಿ ನರೇಂದ್ರ ಮೋದಿ (PM Modi in France) ಮತ್ತು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ನಡುವೆ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಅತ್ಯಂತ ಪ್ರಮುಖ ನಿರ್ಧಾರವೊಂದನ್ನು ಕೈಗೊಳ್ಳಲಾಗಿದೆ. ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ (UK) ನಡುವಿನ ಬಹುನಿರೀಕ್ಷಿತ ‘ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ’ (CETA) ಮುಂಬರುವ ಜುಲೈ 15ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಇದರೊಂದಿಗೆ ಭಾರತದಿಂದ ಬ್ರಿಟನ್‌ಗೆ ರಫ್ತಾಗುವ ಶೇ. 99ರಷ್ಟು ಉತ್ಪನ್ನಗಳಿಗೆ ತೆರಿಗೆ ಮುಕ್ತ ಪ್ರವೇಶ ಸಿಗಲಿದ್ದು, ಐಟಿ, ಫೈನಾನ್ಸ್ ಸೇರಿದಂತೆ 137ಕ್ಕೂ ಹೆಚ್ಚು ಸೇವಾ ವಲಯಗಳ ಉದ್ಯೋಗಿಗಳಿಗೆ ಮತ್ತು ಕಂಪನಿಗಳಿಗೆ ಭಾರಿ ಆರ್ಥಿಕ ಲಾಭವಾಗಲಿದೆ.

2021ರ ಮೇ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ಕೈಗೊಂಡಿದ್ದ ‘ಭಾರತ-ಯುಕೆ ರೋಡ್‌ಮ್ಯಾಪ್ 2030’ರ ಅಡಿಯಲ್ಲಿ, 2030 ರ ವೇಳೆಗೆ ಉಭಯ ದೇಶಗಳ ದ್ವಿಪಕ್ಷೀಯ ವ್ಯಾಪಾರವನ್ನು 100 ಬಿಲಿಯನ್ ಡಾಲರ್‌ಗೆ ದ್ವಿಗುಣಗೊಳಿಸುವ ಗುರಿಯೊಂದಿಗೆ ಈ ಒಪ್ಪಂದವನ್ನು ರೂಪಿಸಲಾಗಿದೆ. 14 ಸುತ್ತುಗಳ ಸುದೀರ್ಘ ಮಾತುಕತೆಯ ನಂತರ 2025ರ ಜುಲೈನಲ್ಲಿ ಇದಕ್ಕೆ ಸಹಿ ಹಾಕಲಾಗಿತ್ತು, ಈಗ ಇದು ಜಾರಿಗೆ ಸಿದ್ಧವಾಗಿದೆ.

ಈ ಒಪ್ಪಂದದ ಅಡಿಯಲ್ಲಿ ಬ್ರಿಟನ್ ಮಾರುಕಟ್ಟೆಗೆ ರಫ್ತಾಗುವ ಭಾರತದ ಶೇ. 99ರಷ್ಟು ಸರಕುಗಳ ಮೇಲಿನ ಭಾರಿ ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಸಂಸ್ಕರಿಸಿದ ಆಹಾರ ಉತ್ಪನ್ನಗಳ ಮೇಲಿದ್ದ ಶೇ. 70ರವರೆಗೆ ಇದ್ದ ಸುಂಕ ಶೂನ್ಯವಾಗಲಿದೆ. ಕಡಲ ಉತ್ಪನ್ನಗಳ ಮೇಲಿನ ಶೇ. 21.5, ಎಂಜಿನಿಯರಿಂಗ್ ಮತ್ತು ಆಟೋ ಬಿಡಿಭಾಗಗಳ ಮೇಲಿನ ಶೇ. 18, ಚರ್ಮ ಮತ್ತು ಪಾದರಕ್ಷೆಗಳ ಮೇಲಿನ ಶೇ. 16 ಹಾಗೂ ಜವಳಿ ಮೇಲಿನ ಶೇ. 12ರಷ್ಟು ಸುಂಕಗಳು ಸಂಪೂರ್ಣ ರದ್ದಾಗಲಿವೆ.

ಇದನ್ನೂ ಓದಿ: ಸಿಗರೇಟ್ ಬಿಟ್ಟ ಮೆಲೋನಿ, ವಾಚ್ ಮರೆತ ಮ್ಯಾಕ್ರನ್, ಮತ್ತೆ ಮೆಲೋಡಿ ಮೋಡಿ; ಜಿ7 ಶೃಂಗಸಭೆಯ ವೈರಲ್ ಕ್ಷಣಗಳಿವು

ಇತ್ತೀಚಿನ ರಾಜತಾಂತ್ರಿಕ ಬಿಕ್ಕಟ್ಟುಗಳ ನಡುವೆಯೂ ಭಾರತ ಮತ್ತು ಕೆನಡಾ ನಡುವಿನ ಆರ್ಥಿಕ ಬಾಂಧವ್ಯ ಸುಧಾರಿಸುತ್ತಿರುವುದಕ್ಕೆ ಜಿ7 ಶೃಂಗಸಭೆ ಸಾಕ್ಷಿಯಾಗಿದೆ. ಉಭಯ ದೇಶಗಳ ನಾಯಕರ ಸಭೆಯ ಬಳಿಕ ಬಿಡುಗಡೆ ಮಾಡಲಾದ ಜಂಟಿ ಪ್ರಕಟಣೆಯಲ್ಲಿ, ‘ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ’ (CEPA) ಕುರಿತು ನಡೆಯುತ್ತಿರುವ ಮಾತುಕತೆಗಳ ಪ್ರಗತಿಯ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಪ್ರಸಕ್ತ 2026ರ ವರ್ಷದ ಅಂತ್ಯದೊಳಗೇ ಈ ಮಹತ್ವದ ಒಪ್ಪಂದವನ್ನು ಅಂತಿಮಗೊಳಿಸುವ ಹಂಚಿಕೆಯ ಗುರಿಯನ್ನು ಉಭಯ ದೇಶಗಳು ಪುನರುಚ್ಚರಿಸಿವೆ.

ಇದನ್ನೂ ಓದಿ: ಮೋದಿ ಬಹಳ ಸುಂದರ ವ್ಯಕ್ತಿ, ಕೆಲಸದ ವಿಷಯದಲ್ಲಿ ಮಾತ್ರ ಕಿಲ್ಲರ್; ಗೆಳೆಯನನ್ನು ಹೊಗಳಿದ ಟ್ರಂಪ್

ಯಾವುದೇ ಒಂದು ನಿರ್ದಿಷ್ಟ ಜಾಗತಿಕ ಬಣಕ್ಕೆ ಸೀಮಿತವಾಗದೆ ಜಗತ್ತಿನ ಎಲ್ಲಾ ಪ್ರಮುಖ ರಾಷ್ಟ್ರಗಳೊಂದಿಗೆ ಸಮಾನ ಮತ್ತು ಸೌಹಾರ್ದಯುತ ಸಂಬಂಧವನ್ನು ಕಾಯ್ದುಕೊಳ್ಳುವ ಪ್ರಧಾನಿ ಮೋದಿಯವರ ‘ಮಲ್ಟಿ-ಅಲೈನ್‌ಮೆಂಟ್’ ವಿದೇಶಾಂಗ ನೀತಿಯು ಭಾರತಕ್ಕೆ ದೊಡ್ಡ ಮಟ್ಟದ ಆರ್ಥಿಕ ಯಶಸ್ಸನ್ನು ತಂದುಕೊಡುತ್ತಿದೆ. ಬ್ರಿಟನ್, ಕೆನಡಾ ಮತ್ತು ಇಡೀ ಯುರೋಪ್ ಮಾರುಕಟ್ಟೆಗಳು ಭಾರತದ ಪಾಲಿಗೆ ಮುಕ್ತವಾಗುತ್ತಿರುವುದು ಮುಂಬರುವ ದಿನಗಳಲ್ಲಿ ದೇಶದಲ್ಲಿ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಪ್ರಗತಿಗೆ ಭಾರಿ ಕೊಡುಗೆ ನೀಡಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:20 pm, Wed, 17 June 26

Source link