ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಕಪ್ಪು ಬೆಕ್ಕು ಅಡ್ಡ ಬಂದರೆ ಏನಾಗುತ್ತೆ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ದೈನಂದಿನ ಜೀವನದಲ್ಲಿ ಎದುರಾಗುವ ಕೆಲವು ಘಟನೆಗಳು ಶುಭವೋ ಅಶುಭವೋ ಎಂಬ ಕುತೂಹಲ ಸಾಮಾನ್ಯ. ಅದರಲ್ಲೂ ಕಪ್ಪು ಬೆಕ್ಕು ದಾರಿಗೆ ಅಡ್ಡ ಬರುವುದು ಶುಭವೋ ಅಶುಭವೋ ಎಂಬುದು ವ್ಯಾಪಕ ಚರ್ಚೆಯ ವಿಷಯ.
ಪುರಾತನ ನಂಬಿಕೆಗಳ ಪ್ರಕಾರ, ಕಪ್ಪು ಬೆಕ್ಕು ಶನಿ, ರಾಹು ಮತ್ತು ಕೇತು ಗ್ರಹಗಳ ಪ್ರತೀಕವಾಗಿದೆ. ಕಪ್ಪು ಬಣ್ಣವನ್ನು ನಿಧಾನ, ಅಜ್ಞಾನದ ಸಂಕೇತ ಎಂದೂ ಪರಿಗಣಿಸಲಾಗುತ್ತದೆ. ಶುಭ ಕಾರ್ಯಗಳಿಗೆ ಅಥವಾ ಹೊಸ ವಾಹನ ಖರೀದಿಗೆ ಹೊರಟಾಗ ಕಪ್ಪು ಬೆಕ್ಕು ಅಡ್ಡ ಬಂದರೆ, ಅದು ಕಲಹಗಳು, ಗಲಾಟೆಗಳು, ಮನಸ್ಸಿನಲ್ಲಿ ನಕಾರಾತ್ಮಕ ಭಾವನೆಗಳು ಮತ್ತು ಕೆಲಸ ಕಾರ್ಯಗಳಲ್ಲಿ ಅಡೆತಡೆಗಳನ್ನು ಸೂಚಿಸುತ್ತದೆ ಎಂದು ನಂಬಲಾಗುತ್ತದೆ ಎಂದು ಗುರೂಜಿ ಹೇಳಿದ್ದಾರೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್ 31, ಮಂಗಳವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ತ್ರಯೋದಶಿ ತಿಥಿಯಾಗಿದೆ. ಇಂದು ಡಾ. ಬಸವರಾಜ ಗುರೂಜಿಯವರು ಪ್ರತಿ ರಾಶಿಯವರಿಗೂ ಆರೋಗ್ಯ, ಆರ್ಥಿಕ ಸ್ಥಿತಿ, ಉದ್ಯೋಗ, ವ್ಯಾಪಾರ, ಕುಟುಂಬ ಮತ್ತು ವೈಯಕ್ತಿಕ ಸಂಬಂಧಗಳ ಕುರಿತು ವಿವರವಾದ ಸಲಹೆಗಳನ್ನು ನೀಡಿದ್ದಾರೆ. ರವಿ ಮೀನ ರಾಶಿಯಲ್ಲಿ ಮತ್ತು ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸಲಿದ್ದಾನೆ ಎಂಬುದನ್ನು ಅವರು ವಿವರಿಸಿದ್ದಾರೆ.
ಬೆಂಗಳೂರು, ಮಾರ್ಚ್ 31: ಬೆಂಗಳೂರು (Bangalore) ನಗರದ ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ (Karaga Shaktyotsava) ಕೌಂಟ್‌ಡೌನ್ ಆರಂಭವಾಗಿದೆ. ಇಂದು (ಮಾರ್ಚ್ 31) ತಡರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಸಂಪಂಗಿರಾಮನಗರದ ಸಂಪಂಗಿಕೆರೆ ಅಂಗಳದಲ್ಲಿರುವ ಶಕ್ತಿಪೀಠದಲ್ಲಿ ಹಸಿಕರಗ ನಡೆಯಲಿದೆ. ಬಳಿಕ ಏಪ್ರಿಲ್ 1ರ ಚೈತ್ರ ಪೂರ್ಣಿಮೆಯಂದು ಮಧ್ಯರಾತ್ರಿ ಪೇಟೆ ಕರಗ ನಡೆಯಲಿದ್ದು, ಭಕ್ತರಿಗೆ ದರ್ಶನ ದೊರೆಯಲಿದೆ. ತಿಗಳರಪೇಟೆಯ ಶ್ರೀ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ನಡೆಯುವ ದ್ರೌಪದಿ ದೇವಿಯ ಕರಗ ಶಕ್ತ್ಯೋತ್ಸವವು ಬೆಂಗಳೂರಿನ ಪ್ರಮುಖ ಸಂಪ್ರದಾಯಿಕ ಉತ್ಸವಗಳಲ್ಲಿ ಒಂದಾಗಿದೆ. ಈ ಬಾರಿ ಉತ್ಸವದಲ್ಲಿ ಸುಮಾರು 10 ರಿಂದ 15 ಲಕ್ಷ ಭಕ್ತರು ಭಾಗವಹಿಸಿ ಕರಗದ ದರ್ಶನ ಪಡೆಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಎಚ್ಚರ: ಕರಗದ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ನಡೀತಿದೆ ವಂಚನೆ
ಇದರ ನಡುವೆಯೇ, ವಿಶ್ವವಿಖ್ಯಾತ ಬೆಂಗಳೂರು ಕರಗದ ಹೆಸರಿನಲ್ಲಿ ಕೆಲ ಕಿಡಿಗೇಡಿಗಳು ಹಣ ಸಂಗ್ರಹಿಸಲು ಮುಂದಾಗಿರುವುದು ಗಮನಕ್ಕೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ 2,500 ರೂಪಾಯಿ ಹಣ ನೀಡಿದರೆ ಕರಗವನ್ನು ಸಂಪೂರ್ಣವಾಗಿ ತೋರಿಸುತ್ತೇವೆ, ಜೊತೆಗೆ ಒಂದು ಹೊತ್ತಿನ ಊಟ ಮತ್ತು ಕರಗದ ಜೊತೆ ಓಡಾಟಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಪೋಸ್ಟ್‌ಗಳನ್ನು ಹಾಕಲಾಗಿದೆ. ಈ ಕುರಿತು ಶ್ರೀ ಧರ್ಮರಾಯ ಸ್ವಾಮಿ ದೇವಾಲಯದ ವ್ಯವಸ್ಥಾಪನ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ದೇವಾಲಯದ ವತಿಯಿಂದ ಕರಗ ಉತ್ಸವಕ್ಕಾಗಿ ಭಕ್ತರಿಂದ ಯಾವುದೇ ರೀತಿಯ ಹಣ ವಸೂಲಿ ಮಾಡುವುದಿಲ್ಲ. ಕೆಲವರು ದುಡ್ಡು ಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಚಲಕರಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಮೈಸೂರು ದಸರಾ ಮಾದರಿಯಲ್ಲಿ ದೀಪಾಲಂಕಾರ
ಇನ್ನೊಂದೆಡೆ, ಈ ಬಾರಿ ಬೆಂಗಳೂರು ಕರಗ ಶಕ್ತ್ಯೋತ್ಸವವನ್ನು ವಿಶೇಷವಾಗಿ ಆಚರಿಸಲು ಮೈಸೂರು ದಸರಾ ಮಾದರಿಯಲ್ಲಿ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಕೆಂಪೇಗೌಡರು ನಿರ್ಮಿಸಿದ ಹಳೆಯ ಬೆಂಗಳೂರಿನ ಭಾಗಗಳಲ್ಲಿ ಬಣ್ಣ ಬಣ್ಣದ ದೀಪಾಲಂಕಾರಗಳು ಜಗಮಗಿಸುತ್ತಿದ್ದು, ನಗರವು ಉತ್ಸವದ ಸಂಭ್ರಮದಲ್ಲಿ ಮಿಂಚುತ್ತಿದೆ.
ಧರ್ಮರಾಯ ಸ್ವಾಮಿ ದೇವಸ್ಥಾನ
ದೇವಾಲಯದ ಒಳಾಂಗಣದ ವೆಚ್ಚವನ್ನು ಮುಜರಾಯಿ ಇಲಾಖೆ ನೋಡಿಕೊಳ್ಳುತ್ತಿದ್ದರೆ, ಉತ್ಸವದ ಇತರೆ ವೆಚ್ಚಗಳನ್ನು ಜಿಬಿಎ (GBA) ಭರಿಸುತ್ತಿದೆ ಎಂದು ತಿಳಿದುಬಂದಿದೆ. ಈ ಬಾರಿ ಉತ್ಸವವನ್ನು ಇನ್ನಷ್ಟು ಅದ್ಧೂರಿಯಾಗಿ ಆಚರಿಸಲಾಗುತ್ತಿರುವುದಕ್ಕೆ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿದ್ದು, ಮೈಸೂರು ದಸರಾ ಶೈಲಿಯ ದೀಪಾಲಂಕಾರದಿಂದ ಈ ಬಾರಿ ಉತ್ಸವ ಮತ್ತಷ್ಟು ವಿಶೇಷವಾಗಲಿದೆ. ನಗರದೆಲ್ಲೆಡೆ ಬಣ್ಣ ಬಣ್ಣದ ಲೈಟಿಂಗ್ಸ್‌ಗಳಿಂದ ಸಿಂಗಾರಗೊಂಡಿದ್ದು, ಭಕ್ತರು ಕರಗ ದರ್ಶನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 31ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಬಗ್ಗೆ ಗಾಸಿಪ್ ಹರಿದಾಡಲಿದೆ. ಅದರ ಮೂಲ ಯಾವುದು, ಯಾರು ಈ ರೀತಿ ವದಂತಿ ಹಬ್ಬಿಸುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚುವುದಕ್ಕೆ ಹರಸಾಹಸ ಪಡುವಂತೆ ಆಗಲಿದೆ. ಮನೆಯ ಮಟ್ಟಿಗೆ ಮಾಡೋಣ ಎಂದುಕೊಂಡಿದ್ದ ಕಾರ್ಯಕ್ರಮ ಒಂದನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಸಂಗೀತಗಾರರಿಗೆ ದೂರದ ಊರುಗಳಿಂದ ಆಹ್ವಾನ ಬರಲಿದೆ. ನಿಮಗೆ ಆ ಸ್ಥಳಕ್ಕೆ ಪದೇಪದೇ ಹೋಗಬೇಕಾಗುವ ರೀತಿಯಲ್ಲಿ ಬಾಂಧವ್ಯ ಗಟ್ಟಿ ಆಗಲಿದೆ. ಉದ್ಯೋಗಸ್ಥರಿಗೆ ಕೆಲವು ಸಮಯದ ಮಟ್ಟಿಗೆ ಬೇರೆ ವಿಭಾಗದಲ್ಲಿಯೋ ಅಥವಾ ಬೇರೆ ಕ್ಲೈಂಟ್ ಗಾಗಿಯೋ ಕೆಲಸ ಮಾಡುವಂತೆ ಹೇಳಬಹುದು.
ಯಾರು ಏನೆಂದುಕೊಂಡರೆ ನನಗೇನು ಅನಿಸಿದ್ದನ್ನು ನೇರಾನೇರಾ ಹೇಳಿಬಿಡುತ್ತೇನೆ ಎಂಬ ಮನಸ್ಥಿತಿಯಲ್ಲಿ ಈ ದಿನ ನೀವು ಇರಲಿದ್ದೀರಿ. ನಿಮ್ಮ ಈ ಸ್ವಭಾವದಿಂದ ಕುಟುಂಬ ಸದಸ್ಯರಲ್ಲಿ ಆತಂಕ ಎದುರಾಗಲಿದೆ. ಕೆಲವರು ನಿಮಗೆ ತಿಳಿಹೇಳುವುದಕ್ಕೆ ಸಹ ಪ್ರಯತ್ನ ಮಾಡಲಿದ್ದಾರೆ. ತಾತ್ಕಾಲಿಕ ಉದ್ಯೋಗದಲ್ಲಿ ಇರುವಂಥವರಿಗೆ ಈಗ ಇರುವಂಥ ಕೆಲಸವೇ ಕಾಯಂ ಆಗುವ ಅಥವಾ ಬೇರೆಡೆ ಉದ್ಯೋಗ ಸಿಗುವ ಸಾಧ್ಯತೆ ಇದೆ. ನಿಮಗೆ ಸಂಬಂಧ ಇಲ್ಲದ ವಿಷಯ ಎಂದುಕೊಂಡು ದೂರ ಇದ್ದುಬಿಟ್ಟಿದ್ದ ಕೆಲವು ಸಂಗತಿಗಳನ್ನು ನೀವೇ ಮುಂದೆ ನಿಂತು ತುರ್ತಾಗಿ ಬಗೆಹರಿಸಬೇಕಾದ ಸನ್ನಿವೇಶ ಎದುರಾಗಲಿದೆ.
ಹೊಸ ವಿಚಾರಗಳು, ನೀವು ಈ ತನಕ ಕಂಡಿರದ ಕೆಲವು ಸನ್ನಿವೇಶಗಳನ್ನು ಕಾಣಲಿದ್ದೀರಿ. ಇವು ನಿಮ್ಮ ಬಾಳಿನಲ್ಲಿ ಹೊಸ ಬದಲಾವಣೆಗಳನ್ನು ತರಲಿವೆ. ಒಂದು ಬಗೆಯ ಸುರಕ್ಷತೆ ಭಾವ ನಿಮ್ಮಲ್ಲಿ ಮನೆ ಮಾಡಲಿದೆ. ಸ್ನೇಹಿತರ ಸಲಹೆ ನಿಮಗೆ ದೊಡ್ಡ ಮಟ್ಟದಲ್ಲಿ ಸಹಾಯಕ್ಕೆ ಬರಲಿದೆ. ದಾನ- ಧರ್ಮಕ್ಕಾಗಿ ಸ್ವಲ್ಪ ಮೊತ್ತದ ಹಣವನ್ನಾದರೂ ಖರ್ಚು ಮಾಡಲಿದ್ದೀರಿ. ಏನಾದರೂ ಒಂದು ಕಾರಣಕ್ಕೆ ಮನೆಯ ಹೊರಗಿನ ಊಟ- ತಿಂಡಿಯನ್ನೇ ಮಾಡಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ನೀವು ಬಹಳ ಕಾಲದಿಂದ ತಿಳಿದುಕೊಳ್ಳಬೇಕು ಎಂದು ಬಯಸುತ್ತಿದ್ದ ಮಾಹಿತಿಯ ಬಗ್ಗೆ ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬರಲಿದೆ.
ಕುಟುಂಬದಲ್ಲಿ ಆಗುವಂಥ ಕೆಲವು ಬೆಳವಣಿಗೆಗಳಿಂದ ನಿಮಗೆ ನಿರಾಶೆ ಮೂಡಲಿದೆ. ಅದರಲ್ಲೂ ನೀವು ನೀಡಿದ ಸಲಹೆಗಳಿಂದ ಅನುಕೂಲ ಆಗಲಿದೆ ಎಂದು ಗೊತ್ತಾದರೂ ನಿರ್ಲಕ್ಷ್ಯ ಮಾಡುವವರಿಂದ ಬೇಸರ ಆಗಲಿದೆ. ಮಕ್ಕಳಿಗೆ ಏನು ಆಹಾರ ನೀಡುತ್ತೀರಿ ಎಂಬ ಬಗ್ಗೆ ಸಾಮಾನ್ಯ ದಿನಕ್ಕಿಂತ ಹೆಚ್ಚಿನ ಲಕ್ಷ್ಯವನ್ನು ವಹಿಸಿ. ಉದ್ಯೋಗಸ್ಥರಿಗೆ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗಲಿವೆ. ಕೆಲಸ- ಕಾರ್ಯ ಪೂರ್ಣ ಮಾಡುವುದಕ್ಕೆ ವಿಳಂಬ ಆಗಲಿದೆ. ಇಷ್ಟು ಸಮಯದೊಳಗೆ ಕೆಲಸ ಮಾಡಿಕೊಡುವುದಾಗಿ ಮಾತು ನೀಡುವ ಮುಂಚೆ ಅದು ಸಾಧ್ಯವಾ ಎಂಬ ಬಗ್ಗೆ ಆಲೋಚನೆ ಮಾಡುವುದು ಮುಖ್ಯವಾಗುತ್ತದೆ.
ಹೊಸದಾಗಿ ಕೆಲಸದ ಹುಡುಕಾಟದಲ್ಲಿ ಇರುವವರು ಉದ್ಯೋಗ ಬದಲಾವಣೆಗಾಗಿ ತೀವ್ರವಾದ ಪ್ರಯತ್ನ ಮಾಡಲು ಆರಂಭಿಸುವಿರಿ. ಸಿ.ವಿ. ಸಿದ್ಧತೆ ಮಾಡಿಕೊಳ್ಳುವುದು ಹಾಗೂ ಸೋಷಿಯಲ್ ನೆಟ್ ವರ್ಕ್ ಮೂಲಕ ಏನು ರೆಫರೆನ್ಸ್ ಪಡೆದುಕೊಳ್ಳಲು ಸಾಧ್ಯವೋ ಆ ಎಲ್ಲವನ್ನೂ ಒಂದರ ನಂತರ ಒಂದರಂತೆ ಎಂಬ ರೀತಿಯಲ್ಲಿ ತೆಗೆದುಕೊಳ್ಳುವುದು ಇಂಥವುಗಳನ್ನು ಮಾಡುವುದಕ್ಕೆ ದಿನದ ಹೆಚ್ಚಿನ ಸಮಯ ಹೋಗಲಿದೆ. ಮನೆಗೆ ಬೇಕಾದ ಕೆಲವು ಯಂತ್ರಗಳು, ಗ್ಯಾಜೆಟ್ ಗಳನ್ನು ಖರೀದಿ ಮಾಡುವುದಕ್ಕೆ ಹಣವನ್ನು ವೆಚ್ಚ ಮಾಡಲಿದ್ದೀರಿ. ಸೋದರ ಸಂಬಂಧಿಗಳು ನಿಮ್ಮ ಹಣಕಾಸು ಅಗತ್ಯಗಳನ್ನು ಪೂರೈಸುವುದಕ್ಕೆ ಮುಂದೆ ಬರಲಿದ್ದಾರೆ.
ಆನ್ ಲೈನ್ ವ್ಯವಹಾರಗಳನ್ನು ಮಾಡುವಾಗ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕು. ಏಕೆಂದರೆ ಡಬಲ್ ಪೇಮೆಂಟ್ ಆಗಿ, ಆ ನಂತರ ಅದನ್ನು ವಾಪಸ್ ಪಡೆಯುವುದಕ್ಕೆ ಹರಸಾಹಸ ಪಡಬೇಕಾಗುತ್ತದೆ. ಉದ್ಯೋಗ ಸ್ಥಳದಲ್ಲಿ ಈ ಹಿಂದಿನ ಯಾವಾಗಿನದೋ ಪ್ರತೀಕಾರವನ್ನು ಈಗ ತೆಗೆದುಕೊಳ್ಳಲು ಅವಕಾಶ ಸಿಕ್ಕಿಬಿಡುತ್ತದೆ, ಆದರೆ ಆ ಭಾವನೆಯಿಂದ ಹೊರಬಂದು ಬಿಡುವುದರಿಂದ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ. ಲಾರಿ ಅಥವಾ ಭಾರೀ ವಾಹನಗಳ ಚಾಲನೆ ಮಾಡುವಂಥವರಿಗೆ ಒಂದಲ್ಲ ಒಂದು ರೀತಿ ಒತ್ತಡ ಅನುಭವಕ್ಕೆ ಬರಲಿದೆ. ನೀವು ತೋರಿದ ನಿರ್ಲಕ್ಷ್ಯದಿಂದ ನಷ್ಟ ಕಾಣುವಂತಾಯಿತು ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಾರೆ.
ಬಡ್ಡಿಗೆ ಹಣ ನೀಡುವವರು, ಗಿರವಿ ಅಂಗಡಿ ನಡೆಸುತ್ತಾ ಇರುವವರು, ಸಿನಿಮಾ ಫೈನಾನ್ಷಿಯರ್ ಗಳಾಗಿ ಇರುವವರಿಗೆ ಈ ದಿನ ಆದಾಯದಲ್ಲಿ ಹೆಚ್ಚಳ ಆಗುವಂಥ ಯೋಗ ಇದೆ. ನಿಮ್ಮ ಪ್ರಭಾವ ವಿಸ್ತಾರ ಆಗುವಂಥ ಸಾಧ್ಯತೆ ಸಹ ಇದೆ. ಒಂದು ವೇಳೆ ಪಾರ್ಟನರ್ ಷಿಪ್ ನಲ್ಲಿ ವ್ಯವಹಾರ ಮಾಡುತ್ತಾ ಬಂದಿದ್ದೀರಿ ಅಂತಾದಲ್ಲಿ ಸ್ವತಂತ್ರವಾಗಿ ವ್ಯವಹಾರ ಆರಂಭಿಸುವ ನಿರ್ಧಾರಕ್ಕೆ ಬರುತ್ತೀರಿ. ನೀವು ನಿರೀಕ್ಷೆ ಕೂಡ ಮಾಡಿರದಂಥ ಹಣ ಕೈ ಸೇರಲಿದೆ. ಪ್ರತಿ ತಿಂಗಳು ಇಂತಿಷ್ಟು ಆದಾಯ ಬರುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಆಲೋಚಿಸುತ್ತಾ ಇರುವವರು ಅದಕ್ಕೆ ಬೇಕಾದ ಪ್ರಯತ್ನ ಆರಂಭ ಮಾಡುತ್ತೀರಿ.
ನಿಮ್ಮಷ್ಟಕ್ಕೆ ನೀವು ಅಂತ ಇದ್ದರೂ ಕೆಲವು ವಾದ- ವಿವಾದಗಳಿಗೆ ಕೆಲವರು ಎಳೆಯುತ್ತಾರೆ. ದೊಡ್ಡ ಗುಂಪಿನಲ್ಲಿ ಜನರು ಇರುವ ಕಡೆಗೆ ನೀವು ಹೋಗದಿರುವುದು ಉತ್ತಮ. ಇದನ್ನು ಮೀರಿಯೂ ಅಂಥ ಸ್ಥಳದಲ್ಲಿ ನೀವು ಇದ್ದೀರಿ ಅಂತಾದಲ್ಲಿ ಮೌನವಾಗಿ ಇರುವುದು ಕ್ಷೇಮ. ಸಹನೆ ಇಟ್ಟುಕೊಂಡು ಬಹಳ ಸಮಯದಿಂದ ಕಾಯುತ್ತಾ ಬಂದಿದ್ದಕ್ಕೂ ಸಾರ್ಥಕ ಎಂಬಂತೆ ಕೆಲವು ಕಾರ್ಯಗಳು ನಿಮ್ಮಂತೆಯೇ- ನಿಮಗೆ ಬೇಕಾದಂತೆಯೇ ಆಗಲಿದೆ. ನಿರ್ಧಾರಿತ ಧ್ವನಿಯಲ್ಲಿ ಹೇಳುವ ಮೂಲಕ ಕೆಲವು ವ್ಯಕ್ತಿಗಳಿಂದ ನೀವಾಗಿಯೇ ಅಂತರವನ್ನು ಕಾಯ್ದುಕೊಳ್ಳಲಿದ್ದೀರಿ.
ನಿಮ್ಮ ಮೇಲೆ ದೈವಾನುಗ್ರಹ ಇರಲಿದೆ. ಬಹಳ ಕಷ್ಟ ಆಗಬಹುದು ಎಂದುಕೊಂಡ ಕೆಲಸ- ಕಾರ್ಯ, ವ್ಯವಹಾರಗಳು ನಿರೀಕ್ಷೆಗಿಂತ ಸಲೀಸಾಗಿ ಪೂರ್ಣಗೊಳ್ಳಲಿದೆ. ಹಳೇ ವಸ್ತುಗಳ ಖರೀದಿ- ಮಾರಾಟದಲ್ಲಿ ತೊಡಗಿರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಬ್ರ್ಯಾಂಡೆಡ್ ವಸ್ತುಗಳನ್ನು ಉಡುಗೊರೆಯಾಗಿ ಪಡೆದುಕೊಳ್ಳುವ ಯೋಗ ಇದೆ. ಈ ದಿನ ಪಾಲ್ಗೊಳ್ಳುವ ಕಾರ್ಯಕ್ರಮ ಅಥವಾ ಸಮಾರಂಭದಲ್ಲಿ ವಿವಾಹ ವಯಸ್ಕರಿಗೆ ಮನಸ್ಸಿಗೆ ಒಪ್ಪುವಂಥ ವಧು ಅಥವಾ ವರ ದೊರೆಯುವಂಥ ಯೋಗ ಇದೆ. ದೂರದ ಊರಿಂದ ಸಂಬಂಧಿಗಳು ನಿಮ್ಮ ಮನೆಗೆ ಬರಲಿದ್ದಾರೆ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಉತ್ತರಾಭಾದ್ರ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಮಘಾ, ಯೋಗ : ಶೂಲಿ, ಕರಣ : ಬವ, ಸೂರ್ಯೋದಯ – 06 – 22 am, ಸೂರ್ಯಾಸ್ತ – 06 – 35 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:32 – 17:04, ಯಮಗಂಡ ಕಾಲ 09:25 – 10:57, ಗುಳಿಕ ಕಾಲ 12:29 – 14:00
ಮೇಷ ರಾಶಿ :
ನಿಮ್ಮ ನಡವಳಿಕೆಯು ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುವುದು. ಕಛೇರಿಯ ಕೆಲಸಗಳನ್ನು ಯಾವುದೇ ನಿರ್ಬಂಧವಿಲ್ಲದೇ ಮಾಡುವಿರಿ. ಹೂಡಿಕೆಯ ವಿಚಾರವಾಗಿ ಚರ್ಚಿಸುವಿರಿ. ಹಳೆಯ ಪ್ರೇಮಿಗಳ ಅನಿರೀಕ್ಷಿತ ಭೇಟಿ, ಮನದೊಳಗೆ ಆನಂದ. ಸಹಾಯ ಮಾಡಲು ಹೋಗಿ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ಜಾಣ್ಮೆಯ ವ್ಯವಹಾರದಿಂದ ಇಂದು ವ್ಯಾಪಾರದಲ್ಲಿ ಲಾಭ ಪಡೆಯುವಿರಿ. ಅನಿರೀಕ್ಷಿತವಾಗಿ ಸಿಕ್ಕ ಸಂಪತ್ತನ್ನು ಯಾರಿಗಾದರೂ ಕೊಡುವಿರಿ. ದುರ್ವ್ಯಸನವು ನಿಮ್ಮನ್ನು ಅಂಟಿಕೊಳ್ಳಬಹುದು.
ವೃಷಭ ರಾಶಿ :
ವೈವಾಹಿಕ ಸುಖವು ಕ್ಷೀಣಿಸಬಹುದು. ದಾಂಪತ್ಯದಲ್ಲಿ ಸ್ವಪ್ರತಿಷ್ಠೆಯು ಕಾಣಿಸಿಕೊಳ್ಳಬಹುದು. ಬಂಧುಗಳು ನಿಮ್ಮ ಕಷ್ಟಕ್ಕೆ ನೆರವಾಗುವರು. ಹೊಸ ಪರಿಚಯದಲ್ಲಿ ಆತ್ಮೀಯತೆ ಬೆಳೆಯುವುದು. ಅತಿಯಾದ ಆಸೆಯಿಂದಾಗಿ ದುಃಖಿಸಬೇಕಾದೀತು. ವಿದ್ಯಾರ್ಥಿಗಳು ಶುಭ ಫಲಿತಾಂಶದಿಂದ ಸಂತೋಷಗೊಳ್ಳುವರು. ನಿಮ್ಮ ಅಪೂರ್ಣ ಕಾರ್ಯಗಳನ್ನು ಇಂದು ಪೂರ್ಣಮಾಡಿಕೊಳ್ಳುವಿರಿ. ಪೂರ್ವಪುಣ್ಯವು ನಿಮ್ಮನ್ನು ಕಾಪಾಡಲಿದೆ.
ಮಿಥುನ ರಾಶಿ :
ಉದ್ಯಮವನ್ನು ಚುರುಕುಗೊಳಿಸುವ ಅಗತ್ಯವಿದೆ. ನಿಮ್ಮ ವ್ಯಕ್ತಿತ್ವ ಮತ್ತು ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಕಿವಿಯಲ್ಲಿ ದೋಷ ಕಾಣಿಸುವುದು. ಆದಾಯದ ಮೂಲಗಳೂ ಬಲಗೊಳ್ಳುತ್ತವೆ. ಇಂದು ನೀವು ಅನುಭವಸ್ಥರ ಮಾರ್ಗದರ್ಶನವನ್ನು ತೆಗೆದುಕೊಳ್ಳಬೇಕು. ಸೃಜನಾತ್ಮಕ ಕೆಲಸದಿಂದ ಹೆಚ್ಚಿನ ಯಶಸ್ಸನ್ನು ಸಾಧಿಸುವಿರಿ. ಸಂಗಾತಿಗಳಿಬ್ಬರೂ ದೂರಾಗುವ ಯೋಚನೆ ಮಾಡಬಹುದು. ನಿಮ್ಮ ಮಾತು ನಿಷ್ಪಕ್ಷಪಾತದಿಂದ ಇರಲಿ.
ಕರ್ಕಾಟಕ ರಾಶಿ :
ಸಾಲ ಕೊಟ್ಟವರ ಮಾತಿನಿಂದ ಇಂದು ನೆಮ್ಮದಿ ಹಾಳಾಗುವುದು. ನಿಮ್ಮ ತಪ್ಪನ್ನು ಎಲ್ಲರೆದು ಒಪ್ಪಿಕೊಳ್ಳಲು ಆಗದು. ಅಧಿಕ ಆಸ್ತಿಯೇ ನಿಮಗೆ ತೊಂದರೆಯನ್ನು ಉಂಟುಮಾಡಬಹುದು. ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ನೀವು ಸರಿಯಾದ ಫಲಿತಾಂಶಗಳನ್ನು ಪಡೆಯಲಿದ್ದೀರಿ. ನಿಮ್ಮ ತಪ್ಪಿಗೆ ಕ್ಷಮೆ ಕೇಳುವವರೆಗೂ ಪರಿಚಿತರು ನಿಮ್ಮನ್ನು ಬಿಡಲಾರರು. ನೀವು ಹೊಸ ವಾಹನವನ್ನು ಸ್ನೇಹಿತರ ಒತ್ತಾಯಕ್ಕೆ ಖರೀದಿ ಮಾಡುವಿರಿ. ಒಂದೇ ತರದ ಜೀವನವು ನಿಮಗೆ ಬೇಸರವಾಗುವುದು.
ಸಿಂಹ ರಾಶಿ :
ಇಂದು ಮಾಡಿದ ಕಠಿಣ ಕೆಲಸವು ಮುಂದಿನ ದಿನಗಳಲ್ಲಿ ಖಚಿತವಾದ ಫಲಿತಾಂಶವನ್ನು ನೀಡಲಿದೆ. ಇಂದು ಕೆಲವು ಕೆಲಸಗಳಲ್ಲಿ ಅನಿರೀಕ್ಷಿತ ಲಾಭದ ಪರಿಸ್ಥಿತಿ ಇದೆ. ನೀವು ಇಂದು ನಿಮ್ಮ ಕುಟುಂಬದ ಜೊತೆ ಸಮಯ ಕಳೆಯಬೇಕು ಎಂದುಕೊಂಡವರು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು, ಅವರ ಸಾಧನೆಗಾಗಿ ಸಮ್ಮಾನಿಸಬಹುದು. ಸಂಗಾತಿಯ ಮಾತನ್ನು ನಿರ್ಲಕ್ಷಿಸಿದ ಕಾರಣ ಸಿಟ್ಟಾಗಬಹುದು. ಆದಾಯದ ಮೂಲಗಳ ಸಂಖ್ಯೆ ಹೆಚ್ಚುಮಾಡಿಕೊಳ್ಳುವಿರಿ. ಬಹಳ ದಿನಗಳಿಂದ ಮರೆತುಹೋಗಿದ್ದ ಸಂಗತಿಯನ್ನು ಯಾರಾದರೂ ನೆನಪಿಸುವರು.
ಕನ್ಯಾ ರಾಶಿ :
ನಿಮ್ಮ ಪ್ರಮುಖ ಕೆಲಸಕ್ಕೆ ಸಂಬಂಧಿಸಿದ ರೂಪರೇಷೆಯನ್ನು ಮಾಡಿ. ಮಾತನ್ನು ಕಡಿಮೆ ಮಾಡಿ ಕಾರ್ಯದಲ್ಲಿ ತೋರಿಸಿ. ಅನಪೇಕ್ಷಿತ ವಿಚಾರದ ಬಗ್ಗೆ ಚರ್ಚೆ ಬೇಡ. ನಿಮ್ಮಲ್ಲಿ ಇರುವುದನ್ನು ಹಂಚಿ ಸ್ವೀಕರಿಸಿ. ಸುಮ್ಮನೇ ಸಮಯವನ್ನು ಹಾಳು ಮಾಡಿಕೊಳ್ಳುವಿರಿ. ಉದ್ಯಮದಲ್ಲಿ ಕಡಿಮೆ ಲಾಭವು ಸಮಾಧಾನ ತರದು. ಉದ್ಯೋಗದಲ್ಲಿ ಒತ್ತಡವನ್ನು ನಿಭಾಯಿಸಲು ಒದ್ದಾಡುವಿರಿ. ತಂದೆಯ ಜೊತೆ ಹಣಕಾಸಿನ ವಿಚಾರಕ್ಕೆ ಜಗಳವಾಗಬಹುದು. ಕೋಪದಿಂದ ಶಾಂತವಾಗಲು ಹಲವಾರು ದಾರಿಗಳನ್ನು ಕಂಡುಕೊಳ್ಳುವಿರಿ. ಸ್ತ್ರೀಯರನ್ನು ಅಪರಿಚಿತರು ಕಾಡಬಹುದು.
ತುಲಾ ರಾಶಿ :
ಮನಸ್ಸಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಭಾವನೆಗಳಲ್ಲಿ ಬರುವ ಮೂಲಕ ನೀವು ಹಾನಿ ಮಾಡಬಹುದು. ಇಂದು ನೀವು ಆಕರ್ಷಕ ವ್ಯಕ್ತಿಗಳಾಗಿ ಕಾಣುರುವಿರಿ. ಕೃಷಿಯ ಕೆಲಸದಲ್ಲಿ ನಿಮ್ಮ ಉತ್ಸಾಹ ಕಡಿಮೆಯಾಗಲಿದೆ. ನಿಮ್ಮ ಕಾರ್ಯ ಸಾಮರ್ಥ್ಯದ ಆಧಾರದ ಮೇಲೆ, ನೀವು ಯಾವುದೇ ಪ್ರಮುಖ ಕೆಲಸವನ್ನು ಉತ್ತಮ ರೀತಿಯಲ್ಲಿ ಮಾಡಲು ಸಾಧ್ಯವಾಗುತ್ತದೆ. ನೀವು ಕಷ್ಟದಲ್ಲಿ ಸುಖವನ್ನು ಕಾಣುವ ಮಾರ್ಗವನ್ನು ಹುಡುಕಿಕೊಳ್ಳುವಿರಿ. ಅಮೂಲ್ಯ ವಸ್ತುಗಳ ಸಂಪಾದನೆಯಾಗಲಿದೆ.
ವೃಶ್ಚಿಕ ರಾಶಿ :
ನಿಮ್ಮ ಆದಾಯದ ಮೂಲಗಳಿಂದ ಆದಾಯವು ಕಡಿಮೆಯಾಗಬಹುದು. ಜೀವನದಲ್ಲಿ ಕೆಲವು ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತೀರಿ. ಹೊಸದನ್ನು ಮಾಡಲು ಯೋಚಿಸುವಿರಿ. ನಿಮ್ಮೊಳಗಿನ ಹೊಸ ಶಕ್ತಿಯ ಪರಿಣಾಮವನ್ನು ನೀವು ಅನುಭವಿಸುವಿರಿ. ಅನಗತ್ಯ ಚಟುವಟಿಕೆಗಳಲ್ಲಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ಮನೆಯವರ ಜೊತೆ ವಾಗ್ವಾದಕ್ಕೆ ನಿಲ್ಲುವಿರಿ. ಸಂತಾನ ಸಂತೋಷವನ್ನು ನೀವು ಇಂದು ಅನುಭವಿಸುವಿರಿ.
ಧನು ರಾಶಿ :
ಸಕಾರಾತ್ಮಕ ಮನೋಭಾವವನ್ನು ಇಟ್ಟುಕೊಳ್ಳುವುದರಿಂದ, ಶೀಘ್ರದಲ್ಲೇ ವಿಷಯಗಳು ಸಾಮಾನ್ಯವಾಗುತ್ತವೆ. ಕೆಲವು ದಿನಗಳಿಂದ ನಡೆಯುತ್ತಿರುವ ಯಾವುದೇ ಸಮಸ್ಯೆಗೆ ಇಂದು ಸ್ವಲ್ಪ ಪರಿಹಾರ ದೊರೆಯಲಿದೆ. ಮಕ್ಕಳ ಗಮನವೂ ಅವರ ಅಧ್ಯಯನದ ಕಡೆಗೆ ಇರುತ್ತದೆ. ನಿಮ್ಮ ಮಾತುಗಳು ಇತರರಿಗೆ ಇಷ್ಟವಾಗುವುದು. ಆರ್ಥಿಕವಾದ ಸಂತೃಪ್ತಿಯು ನಿಮ್ಮ ಮುಖದಲ್ಲಿ ಇರಲಿದೆ. ಅನ್ಯರು ನಿಮ್ಮ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವುದು ನಿಮಗೆ ಇಷ್ಟವಾಗದು. ನೀವು ಬೇಕಾದ ಸಹಾಯವು ಸರಿಯಾದ ಸಮಯಕ್ಕೆ ಸಿಗುವುದು.
ಮಕರ ರಾಶಿ :
ಕುಶಲ ಕಾರ್ಯದಲ್ಲಿ ಆಸಕ್ತಿಯು ಹೆಚ್ಚಿರುವುದು. ಯಾವುದೇ ಸ್ಥಗಿತಗೊಂಡ ಸರ್ಕಾರಿ ಕೆಲಸಗಳು ಇಂದು ಪೂರ್ಣಗೊಳ್ಳಬಹುದು. ಆದ್ದರಿಂದ ನಿಮ್ಮ ಸಂಪೂರ್ಣ ಗಮನವನ್ನು ಅದರ ಮೇಲೆ ಇರಿಸಿ. ಯಾವುದೇ ವ್ಯಕ್ತಿಯೊಂದಿಗೆ ಚರ್ಚಿಸುವಾಗ ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಬೇಡಿ. ಅಪರಿಚಿತರ ಮಾತು ನಿಮಗೆ ಸಮಾಧಾನವನ್ನು ಕೊಡಬಹುದು. ಯಾರ ಮಾತನ್ನೂ ನೀವು ಕೇಳಲಾರಿರಿ. ಉದ್ಯೋಗದಲ್ಲಿ ನಿಮ್ಮ ಸ್ಥಾನವು ಬದಲಾಗುವುದು. ಸಮಯವೂ ಬದಲಾಗಲಿದ್ದು ಹೊಂದಿಕೊಳ್ಳುವುದು ಕಷ್ಟವಾದೀತು.
ಕುಂಭ ರಾಶಿ :
ಇಂದು ಸಾಮಾಜಿಕ ಚಟುವಟಿಕೆಗಳಿಗೆ ನಿಮ್ಮದಾದ ಕೊಡುಗೆ ಇರಲಿದೆ. ಉದ್ಯೋಗದ ಸ್ಥಳದಲ್ಲಿ ನಿಮ್ಮ ಮೇಲಧಿಕಾರಿಗಳ ವರ್ತನೆಯು ನಿಮ್ಮನ್ನು ಅಸಮಾಧಾನಗೊಳಿಸಬಹುದು. ನಿಮ್ಮ ತಂದೆಯ ಜೊತೆ ಸೌಹಾರ್ದ ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸುವಿರಿ. ನೀವು ಕೇಳಿದ ಸಾಲವು ನಿಮಗೆ ದೊರೆಯಬಹುದು. ಖರ್ಚಿನ ವಿಚಾರದಲ್ಲಿ ಕೈ ಹಿಂದೆ ಮಾಡುವುದು ಒಳ್ಳೆಯದು. ಜವಾಬ್ದಾರಿಗಳಿಂದ ನೀವು ಮುಕ್ತರಾಗಿ ಸಂತೋಷಿಸುವಿರಿ. ಅಪರಿಚಿತರು ನಿಮಗೆ ಸಮಸ್ಯೆಯನ್ನು ಕೊಡುವರು.
ಮೀನ ರಾಶಿ :
ನಿಮಗೆ ಯಾರನ್ನು ದ್ವೇಷಿಸಲೂ ಬಲವಾದ ಕಾರಣ ಇರದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸ್ಪರ್ಧಿಸುವ ಬಯಕೆ ಇರಲಿದೆ. ಕೆಲವು ಪ್ರಮುಖ ವ್ಯಕ್ತಿಗಳ ಯಶಸ್ಸು ನಿಮಗೆ ಹೆಚ್ಚು ಸ್ಫೂರ್ತಿ ನೀಡುತ್ತದೆ. ನಿರಂತರ ಓಡಾಟದಲ್ಲಿರುಬ ನಿಮ್ಮನ್ನು ಕಂಡು ಮನೆಯಲ್ಲಿ ಬೇಸರವಾಗಲಿದೆ. ನಿಮಗೆ ಯಾವುದರೂ ಅನವಶ್ಯಕ ಖರ್ಚು ಎಂದು ಕಂಡರೆ ಹೇಗಾದರೂ ಮಾಡಿ ನಿಲ್ಲಿಸುವಿರಿ. ಬಂಧನದಂತೆ ಅನ್ನಿಸಬಹುದು. ಅಪರಿಚಿತರ ಜೊತೆ ಸಲುಗೆ ಬೇಡ. ಸಂಗಾತಿಯ ಆಲೋಚನೆಗಳು ನಿಮಗೆ ಇಷ್ಟವಾಗಬಹುದು. ಇನ್ನೊಬ್ಬರಿಗೂ ಸಂತೋಷವಾಗುವಂತೆ ಇರುವಿರಿ.
ದಾವಣಗೆರೆ, ಮಾರ್ಚ್ 30): ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣಾ (Davanagere South By Election) ಪ್ರಚಾರ ಜೋರಾಗಿದೆ. ಆದರೆ ಕಾಂಗ್ರೆಸ್‍ಗೆ ಅಲ್ಪಸಂಖ್ಯಾತ ಸಮುದಾಯದ ಮತ ವಿಭಜನೆಯಾಗುವ ಆತಂಕ ಎದುರಾಗಿದೆ. ಹೀಗಾಗಿ ಸಾಧಿಕ್ ಪೈಲ್ವಾನ್ ಬಳಿಕ ಕಣದಲ್ಲಿರುವ ಮತ್ತೋರ್ವ ಮುಸ್ಲಿಂ ಪಕ್ಷೇತರ ಅಭ್ಯರ್ಥಿ ಖಾದರ್ ಬಾಷಾ ಮನವೊಲಿಕೆಗೆ ಕಾಂಗ್ರೆಸ್ ಮುಂದಾಗಿದೆ. ಮುಸ್ಲಿಂ ಸಮುದಾಯದ ಹಿರಿಯ ನಾಯಕ ಸಿಎಂ ಇಬ್ರಾಹಿಂ ಪ್ರಚಾರಕ್ಕಿಳಿಯುತ್ತಿದ್ದಂತೆಯೇ ಎಚ್ಚೆತ್ತುಕೊಂಡು ಕಾಂಗ್ರೆಸ್ ನಾಯಕರು ಖಾದರ್ ಬಾಷಾ ಅವರನ್ನು ಸೈಲೆಂಟ್ ಮಾಡಿಸಲು ಮುಂದಾಗಿದ್ದಾರೆ. ಆದ್ರೆ, ಇದಕ್ಕೆ ಖಾದರ್ ಬಾಷಾ ಕ್ಯಾರೇ ಎಂದಿಲ್ಲ.
ಮತ ವಿಭಜನೆ ಆತಂಕದಲ್ಲಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಭದ್ರಾವತಿ ಶಾಸಕ ಸಂಗಮೇಶ್ (MLA Sangamesh) ಅವರು ಖಾದರ್ ಆದಿಲ್ ಬಾಷಾ ಅವರು ದಾವಣಗೆರೆ ದೇವರಾಜ ಅರಸು ಬಡಾವಣೆಯ ಆದಿಲ್ ಅವರ ಮನೆಗೆ ಭೇಟಿ ನೀಡಿದ್ದು, ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿ ಮನವೊಲಿಕೆಗೆ ಯತ್ನಿಸಿದ್ದಾರೆ.
ಖಾದರ್ ಬಾಷಾ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಭದ್ರಾವತಿ ಶಾಸಕ ಸಂಗಮೇಶ್ . ಪಕ್ಷೇತರ ಅಭ್ಯರ್ಥಿ ಖಾದರ್ ಆದಿಲ್ ಬಾಷಾ ನನಗೆ ಆತ್ಮೀಯ. ಇದೇ ಕಾರಣಕ್ಕೆ ಖಾದರ್ ಆದಿಲ್ ಬಾಷಾ ಮನೆಗೆ ಬಂದಿರುವೆ. ಪಕ್ಷದ ವರಿಷ್ಠರು, ಸಚಿವ ಮಲ್ಲಿಕಾರ್ಜುನ ಸೂಚನೆಯಂತೆ ಬಂದಿದ್ದೇನೆ. ಖಾದರ್ ಬಾಷಾ ಪರ ಪ್ರಚಾರ ನಡೆಸಿರುವ ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ನನ್ನ ಎದುರು ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದರು. ಅಂತಹ ವ್ಯಕ್ತಿ ಬಂದು ಇಲ್ಲಿ ಖಾದರ್ ಬಾಷಾರನ್ನು ಹೇಗೆ ಗೆಲ್ಲಿಸಲು ಸಾಧ್ಯ? ಕೇವಲ ಭಾಷಣ ಮಾಡಿದ್ರೆ ಮತ ಬರಲ್ಲ. ಮತ ವಿಭಜನೆ ಆಗಬಾರದು. ಕೋಮುವಾದಿ ಶಕ್ತಿಗಳಿಗೆ ಲಾಭ ಆಗಬಾರದು ಎಂಬುದು ನಮ್ಮ ಉದ್ದೇಶ. ಇನ್ನೆರಡು ದಿನದಲ್ಲಿ ನಿರ್ಧಾರ ತಿಳಿಸುವುದಾಗಿ ಖಾದರ್ ಬಾಷಾ ಹೇಳಿದ್ದಾರೆ ಎಂದರು.
ನಾನಂತೂ ಚುನಾವಣಾ ಕಣದಲ್ಲೇ ಇರುವೆ
ಇನ್ನು ತಮ್ಮ ನಿವಾಸಕ್ಕೆ ಶಾಸಕ ಸಂಗಮೇಶ್ ಭೇಟಿ ನೀಡಿರುವ ಬಗ್ಗೆ ಮಾತನಾಡಿದ ಖಾದರ್ ಆದಿಲ್ ಬಾಷಾ,
ನಾನು ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯುವುದಿಲ್ಲ. ನಾನು ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ನನ್ನ ಪರ ಕೇಂದ್ರದ ಮಾಜಿ ಸಚಿವ ಇಬ್ರಾಹಿಂ ಪ್ರಚಾರ ಮಾಡುತ್ತಿದ್ದಾರೆ. ಶಾಸಕ ಸಂಗಮೇಶ್ ನನ್ನ ಆತ್ಮೀಯರು, ಹೀಗಾಗಿ ಭೇಟಿಯಾಗಿದ್ದರು. ನಾನಂತೂ ಚುನಾವಣಾ ಕಣದಲ್ಲೇ ಇರುವೆ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಕಾಂಗ್ರೆಸ್‍ಗೆ ಮತ ವಿಭಜನೆ ಆತಂಕ
ಕಳೆದ ನಾಲ್ಕೈದು ದಿನಗಳಿಂದ ಸಿಎಂ ಇಬ್ರಾಹಿಂ, ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ದಲಿತ ನಾಯಕರ ಜೊತೆಗೂಡಿ ಆದಿಲ್ ಪ್ರಚಾರ ನಡೆಸಿದ್ದಾರೆ. ಇದೇ ಹೊತ್ತಲ್ಲಿ ಸಾದಿಕ್ ಪೈಲ್ವಾನ್ ಅವರಿಗೆ ಬೆಂಬಲ ನೀಡಿದ್ದ ಬಹುತೇಕ ಅಲ್ಪಸಂಖ್ಯಾತ ಯುವಕರು, ನಾಯಕರು ಆದಿಲ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇದೇ ಕಾರಣಕ್ಕೆ ಸಾದಿಕ್ ಪೈಲ್ವಾನ್ ನಂತರ ಕಾಂಗ್ರೆಸ್‍ಗೆ ಆದಿಲ್ ಬಾಷಾ ತಲೆನೋವಾಗಿದ್ದಾರೆ. ಮತ ವಿಭಜನೆ ಆತಂಕದಿಂದ ಎಚ್ಚೆತ್ತ ಕಾಂಗ್ರೆಸ್ ಮನವೊಲಿಕೆಗೆ ಕಸರತ್ತು ನಡೆಸುತ್ತಿದೆ. ಆದ್ರೆ, ಇದಕ್ಕೆ ಖಾದರ್ ಆದಿಲ್ ಬಾಷಾ ಡೋಂಡ್ ಕೇರ್ ಎಂದಿದ್ದು, ಕೊನೆ ತನಕ ಕಣದಲ್ಲಿ ಇರುವೆ ಎಂದಿದ್ದಾರೆ.
ಸದ್ಯ ಮುಸ್ಲಿಂ ಪಕ್ಷೇತರ ಅಭ್ಯರ್ಥಿ ಖಾದ್ ಬಾಷಾ ಅವರು ಕಣದಲ್ಲಿರುವುದಾಗಿ ಕಡ್ಡಿ ಮುರಿದಂತೆ ಹೇಳಿದ್ದು, ಸದ್ಯಕ್ಕೆ ಕಾಂಗ್ರೆಸ್ನ ಆಪರೇಷನ್ ಮುಸ್ಲಿಂ ಕ್ಯಾಂಡಿಡೇಟ್ ಕಾರ್ಯಚರಣೆ ಫೇಲ್ ಆಗಿದೆ. ಆದ್ರೆ, ಮುಂದೆ ಏನಾಗುತ್ತೋ ಕಾದುನೋಡಬೇಕಿದೆ.
ತುಮಕೂರು, ಮಾರ್ಚ್ 30: ಖಾಸಗಿ ಜಾಗವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಹೆಲ್ತ್ ಇನ್ಸ್‌ಪೆಕ್ಟರ್ (Food Inspector) ಶವ ಪತ್ತೆ (Death)ಆಗಿರುವಂತಹ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ತಾವರೆಕೆರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉಮೇಶ್ ಮೃತ ಹೆಲ್ತ್ ಇನ್ಸ್‌ಪೆಕ್ಟರ್. ಹುಟ್ಟುಹಬ್ಬದ ದಿನವೇ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ ಆಗಿದ್ದು, ಸದ್ಯ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಸಾವಿನ ಬಗ್ಗೆ ದೂರು ನೀಡಿದ ಬಳಿಕ ಪೊಲೀಸರು ಮುಂದಿನ ತನಿಖೆ ಕೈಗೊಳ್ಳಲಿದ್ದಾರೆ.
ನಡೆದಿದ್ದೇನು?
ವರ್ಷದ ಹಿಂದೆ ಸ್ಕ್ಯಾವೆಂಜರ್ ಆಕ್ಟ್ ಅಡಿ ಉಮೇಶ್ ಅಮಾನತಾಗಿದ್ದರು. ನಾಲ್ಕು ತಿಂಗಳ ಬಳಿಕ ಮತ್ತೆ ಹೆಲ್ತ್ ಆಫೀಸರ್ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ಪ್ರಸ್ತುತ ಹುಲಿಕುಂಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಇದೀಗ ನೇಣುಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆ ಆಗಿದೆ. ಅದರಲ್ಲೂ ಹುಟ್ಟುಹಬ್ಬದ ದಿನದಂದೇ ಹೀಗಾಗಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸದ್ಯ ಸ್ಥಳಕ್ಕೆ ತಾವರೇಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತರ ಕುಟುಂಬಸ್ಥರ ದೂರಿಗಾಗಿ ಕಾಯುತ್ತಿದ್ದಾರೆ. ಇನ್ನು ತಂದೆಯ ಸಾವಿನ ಸಂಗತಿ ತಿಳಿದು ಉತ್ತರ ಭಾರತದಿಂದ ಉಮೇಶ್ ಅವರ ಮಗಳು ಬರುತ್ತಿದ್ದಾರೆ. ಮಗಳು ಬಂದ ನಂತರ ಸಾವಿನ ಬಗ್ಗೆ ದೂರು ನೀಡಿದ ಬಳಿಕ ಪೊಲೀಸರು ಮುಂದಿನ ತನಿಖೆ ಕೈಗೊಳ್ಳಲಿದ್ದಾರೆ.
ನಿಯಂತ್ರಣ ತಪ್ಪಿ ಬೈಕ್ನಿಂದ ಬಿದ್ದು ಇಬ್ಬರು ಸವಾರರ ಸಾವು
ನಿಯಂತ್ರಣ ತಪ್ಪಿ ಬೈಕ್ನಿಂದ ಬಿದ್ದು ಇಬ್ಬರು ಸವಾರರು ಸಾವನ್ನಪ್ಪಿರುವಂತಹ ಘಟನೆ ತುಮಕೂರು ತಾಲೂಕಿನ ನಾಗವಲ್ಲಿ ಗ್ರಾಮದ ಬಳಿ ನಡೆದಿದೆ. ರಂಗನಾಥಪುರದ ಪ್ರಸಾದ್(20) ಮತ್ತು ವಸಂತ್(22) ಮೃತರು.
ರಂಗನಾಥಪುರದಿಂದ ತುಮಕೂರು ಕಡೆಗೆ ಹೋಗುವಾಗ ದುರ್ಘಟನೆ ಸಂಭವಿಸಿದೆ. ತೀವ್ರ ರಕ್ತಸ್ರಾವವಾಗಿ ಪ್ರಸಾದ್, ವಸಂತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಗುವಾಹಟಿಯಲ್ಲಿ ನಡೆದ ಐಪಿಎಲ್ 2026 ರ 3ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 8 ವಿಕೆಟ್ಗಳಿಂದ ಸೋಲಿಸಿದ ರಾಜಸ್ಥಾನ್ ರಾಯಲ್ಸ್ ಈ ಆವೃತ್ತಿಯನ್ನು ಗೆಲುವಿನೊಂದಿಗೆ ಆರಂಭಿಸಿದೆ. ಈ ಮೂಲಕ ಸಿಎಸ್ಕೆ ವಿರುದ್ಧ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಕಳೆದ ಆವೃತ್ತಿಯಲ್ಲಿ ಸಿಎಸ್ಕೆ ವಿರುದ್ಧ ಆಡಿದ್ದ ಎರಡೂ ಪಂದ್ಯಗಳನ್ನು ಗೆದ್ದಿದ್ದ ರಾಜಸ್ಥಾನ್, ಈ ಆವೃತ್ತಿಯಲ್ಲೂ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ಕೆ ಕೇವಲ 127 ರನ್ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್, 15 ವರ್ಷದ ವೈಭವ್ ಸೂರ್ಯವಂಶಿಯ ಸಿಡಿಲಬ್ಬರದ ಅರ್ಧಶತಕದಿಂದಾಗಿ ಇನ್ನು 47 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಮುಟ್ಟಿತು.
7ನೇ ವರ್ಷದ ‘ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ’ (Chandanavana Film Critics Academy Awards) ಪ್ರದಾನ ಮಾಡಲಾಗಿದೆ. ಇತ್ತೀಚೆಗೆ ಬೆಂಗಳೂರಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಅದ್ದೂರಿಯಾಗಿ ಸಮಾರಂಭ ನಡೆಯಿತು. 2025ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಅಭಿನಯಕ್ಕಾಗಿ ರಿಷಬ್ ಶೆಟ್ಟಿ (Rishab Shetty) ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರು. ‘ಗತ ವೈಭವ’ ಸಿನಿಮಾದ ನಟನೆಗಾಗಿ ಆಶಿಕಾ ರಂಗನಾಥ್ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು.
2025ನೇ ಸಾಲಿನ ಅತ್ಯುತ್ತಮ ಸಿನಿಮಾ ಪ್ರಶಸ್ತಿ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಪಾಲಾಯಿತು. ಈ ಸಿನಿಮಾ ಒಟ್ಟು 9 ವಿಭಾಗದಲ್ಲಿ ಪ್ರಶಸ್ತಿ ಪಡೆಯಿತು. ಮೂರು ಟ್ರೋಫಿಗಳು ರಿಷಬ್ ಅವರ ಕೈಸೇರಿತು. ಸುಬ್ಬಯ್ಯ ನಾಯ್ಡು ಅವರ ಮರಿಮೊಮ್ಮಗ ಸುಕ್ರತ್ ಸೃಜನ್ ಲೋಕೇಶ್ ಅವರಿಗೆ ವಿಶೇಷ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ನಿರ್ದೇಶಕ ರಾಜೇಂದ್ರ್ ಸಿಂಗ್ ಬಾಬು ಅವರಿಗೆ ಜೀವಮಾನ ಸಾಧನೆಯ ಗೌರವವನ್ನು ನೀಡಲಾಯಿತು.
2025ನೇ ಸಾಲಿನ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ಪಡೆದವರು:
1. ಅತ್ಯುತ್ತಮ ಚೊಚ್ಚಲು ನಿರ್ಮಾಣ: ನಿವೇದಿತಾ ಶಿವರಾಜ್ ಕುಮಾರ್ (ಫೈರ್ ಪ್ಲೈ)
2. ಅತ್ಯುತ್ತಮ ಚೊಚ್ಚಲ ಬರಹಗಾರ: ಸುಮಂತ್ ಭಟ್ (ಮಿಥ್ಯ)
3. ಅತ್ಯುತ್ತಮ ಚೊಚ್ಚಲ ಸಿನಿಮಾ ನಿರ್ದೇಶನ : ಭೀಮರಾವ್ ಪಿ (ಹೆಬ್ಬುಲಿ ಕಟ್)
4. ಅತ್ಯುತ್ತಮ ಚೊಚ್ಚಲ ನಟಿ: ಪ್ರಿಯಾಂಕಾ ಆಚಾರ್ (ಏಳುಮಲೆ)
5. ಅತ್ಯುತ್ತಮ ಚೊಚ್ಚಲ ನಟ: ಕಿರಿಟಿ (ಜ್ಯೂನಿಯರ್) ಹಾಗೂ ದುಷ್ಯಂತ್ (ಗತ ವೈಭವ)
6. ಅತ್ಯುತ್ತಮ ಬಾಲ ನಟ: ಅತೀಶ್ ಶೆಟ್ಟಿ (ಮಿಥ್ಯ)
7. ಅತ್ಯುತ್ತಮ ವಿಎಫೆಕ್ಸ್: ಕೆ.ವಿ, ಸಂಜಿತ್ (ಕಾಂತಾರ ಚಾಪ್ಟರ್ 1)
8. ಅತ್ಯುತ್ತಮ ಕಲಾ ನಿರ್ದೇಶನ : ಬೆಂಗಲನ್ ಮತ್ತು ಧರಣಿ ಗಂಗಾಪುತ್ರ (ಕಾಂತಾರ ಚಾಪ್ಟರ್ 1)
9. ಅತ್ಯುತ್ತಮ ಸಾಹಸ ನಿರ್ದೇಶನ: ಅರ್ಜುನ್ ರಾಜ್ ( ಕಾಂತಾರ ಚಾಪ್ಟರ್ 1)
10. ಅತ್ಯುತ್ತಮ ಸಂಕಲನ: ಕೆ.ಎಂ ಪ್ರಕಾಶ್ (ಏಳುಮಲೆ)
11. ಅತ್ಯುತ್ತಮ ಸಂಭಾಷಣೆ: ಜೆ.ಪಿ. ತುಮಿನಾಡು (ಸು ಫ್ರಂ ಸೋ)
12. ಅತ್ಯುತ್ತಮ ಸಿನಿಮಾಟೋಗ್ರಫಿ: ಅರವಿಂದ್ ಕಶ್ಯಪ್ (ಕಾಂತಾರ ಚಾಪ್ಟರ್ 1)
13. ಅತ್ಯುತ್ತಮ ನೃತ್ಯ ನಿರ್ದೇಶನ: ವಿನಾಯಕ ಆಚಾರ್ಯ (ಸು ಫ್ರಂ ಸೋ)
14. ಅತ್ಯುತ್ತಮ ಗಾಯಕ: ಅಬ್ಬಿ ವಿ (ಕಾಂತಾರ ಚಾಪ್ಟರ್ 1)
15. ಅತ್ಯುತ್ತಮ ಗಾಯಕಿ: ಸಾನ್ವಿ ಸುದೀಪ್ ( ಮಾರ್ಕ್)
16. ಅತ್ಯುತ್ತಮ ಚಿತ್ರ ಸಾಹಿತ್ಯ: ಸಿಂಪಲ್ ಸುನಿ (ಗತ ವೈಭವ)
17. ಅತ್ಯುತ್ತಮ ಹಿನ್ನೆಲೆ ಸಂಗೀತ: ಸಂದೀಪ್ ತುಳಸಿದಾಸ್ ( ಸು ಫ್ರಂ ಸೋ)
18. ಅತ್ಯುತ್ತಮ ಸಂಗೀತ: ಅಜನೀಶ್ ಲೋಕನಾಥ್ (ಕಾಂತಾರ ಚಾಪ್ಟರ್ 1)
19. ಅತ್ಯುತ್ತಮ ಚಿತ್ರಕಥೆ: ಪುನೀತ್ ರಂಗಸ್ವಾಮಿ (ಏಳು ಮಲೆ)
20. ಅತ್ಯುತ್ತಮ ಸಹ ನಟಿ: ಸಂಧ್ಯಾ ಅರಕೆರೆ (ಸು ಫ್ರಂ ಸೋ)
21. ಅತ್ಯುತ್ತಮ ಸಹ ನಟ: ಮಹಾಂತೇಶ್ ಹಿರೇಮಠ (ಹೆಬ್ಬುಲಿ ಕಟ್)
22. ಅತ್ಯುತ್ತಮ ನಿರ್ದೇಶಕ: ರಿಷಬ್ ಶೆಟ್ಟಿ (ಕಾಂತಾರ ಚಾಪ್ಟರ್ 1)
23. ಅತ್ಯುತ್ತಮ ನಟಿ : ಆಶಿಕಾ ರಂಗನಾಥ್ ( ಗತ ವೈಭವ)
24. ಅತ್ಯುತ್ತಮ ನಟ: ರಿಷಬ್ ಶೆಟ್ಟಿ (ಕಾಂತಾರ ಚಾಪ್ಟರ್
25. ಅತ್ಯುತ್ತಮ ಚಿತ್ರ: ಕಾಂತಾರ ಚಾಪ್ಟರ್ 1
26. ಜೀವಮಾನ ಸಾಧನೆ ಪ್ರಶಸ್ತಿ: ಎಸ್.ವಿ.ರಾಜೇಂದ್ರ ಸಿಂಗ್ ಬಾಬು
ಮುಖ್ಯ ಅತಿಥಿಗಳಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಗಿರೀಶ್ ಕಾಸರವಳ್ಳಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ತಾರಾ ಅನುರಾಧಾ, ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಖ್ಯಾತ ನಿರ್ದೇಶಕ ಬಿ. ಸುರೇಶ, ಹಿರಿಯ ನಟಿ ಗಿರಿಜಾ ಲೋಕೇಶ್, ಖ್ಯಾತ ನಟಿ ಪೂಜಾ ಗಾಂಧಿ, ಬಿಗ್ ಬಾಸ್ ಖ್ಯಾತಿಯ ಅಶ್ವಿನಿ ಗೌಡ, ಖ್ಯಾತ ನಟ ಮಾಸ್ಟರ್ ಮಂಜುನಾಥ್ ಮುಂತಾದವರು ಭಾಗಿ ಆಗಿದ್ದರು.
ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಮತ್ತು ಅವರ ಪುತ್ರಿ ಸುಹಾನಾ ಖಾನ್ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ‘ಕಿಂಗ್’ (King) ಸಿನಿಮಾದ ಚಿತ್ರೀಕರಣಕ್ಕೆ ಅನಿರೀಕ್ಷಿತ ಅಡೆತಡೆ ಎದುರಾಗಿದೆ. ದುಬೈನಲ್ಲಿ ನಡೆಯಬೇಕಿದ್ದ ಈ ಚಿತ್ರದ ಪ್ರಮುಖ ಹಂತದ ಚಿತ್ರೀಕರಣವನ್ನು ಭದ್ರತಾ ಕಾರಣಗಳಿಂದಾಗಿ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದುಬೈ ಬದಲು ಮುಂಬೈನಲ್ಲೇ ಮರುಭೂಮಿ ನಿರ್ಮಾಣ ಮಾಡಿ ಚಿತ್ರೀಕರಣ ನಡೆಸಲಾಗುವುದು!
ವರದಿಗಳ ಪ್ರಕಾರ, ಏಪ್ರಿಲ್ 9ರಿಂದ ದುಬೈನಲ್ಲಿ ಒಂದು ವಾರಗಳ ಕಾಲ ‘ಕಿಂಗ್’ ಸಿನಿಮಾಗೆ ಚಿತ್ರೀಕರಣ ನಡೆಸಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಸಹ ಪಡೆಯಲಾಗಿತ್ತು. ಆದರೆ, ಯುದ್ಧದ ಭೀತಿಯಿಂದಾಗಿ ಪ್ಲ್ಯಾನ್ ಬದಲಾಗಿದೆ. ಸಿನಿಮಾದ ತಾರಾಗಣ ಮತ್ತು ತಾಂತ್ರಿಕ ತಂಡದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಿರ್ದೇಶಕ ಸಿದ್ಧಾರ್ಥ್ ಆನಂದ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ದುಬೈ ಪ್ಲ್ಯಾನ್ ರದ್ದಾದ ಬೆನ್ನಲ್ಲೇ ಚಿತ್ರತಂಡ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದೆ. ಮುಂಬೈನ ವಿಲೆ ಪಾರ್ಲೆ ಬಳಿಯ ಸ್ಟುಡಿಯೋದಲ್ಲಿ ಈಗ ಚಿತ್ರೀಕರಣ ನಡೆಯಲಿದೆ. ಅಲ್ಲಿನ ಪ್ರೊಡಕ್ಷನ್ ವಿನ್ಯಾಸ ತಂಡವು ಮರುಭೂಮಿಯಂತಹ ಬೃಹತ್ ಸೆಟ್ ನಿರ್ಮಿಸುತ್ತಿದೆ. ಇಲ್ಲಿ ಶಾರುಖ್ ಖಾನ್ ಅವರ ಸಾಹಸ ದೃಶ್ಯಗಳು ಮತ್ತು ಚೇಸಿಂಗ್ ಸೀಕ್ವೆನ್ಸ್ ಚಿತ್ರೀಕರಿಸಲಾಗುವುದು.
ದುಬೈನಲ್ಲಿ ಶಾರುಖ್ ಖಾನ್ ಆ್ಯಕ್ಷನ್ ದೃಶ್ಯಗಳಲ್ಲಿ ಭಾಗಿಯಾಗಬೇಕಿತ್ತು. ಸುಹಾನಾ ಖಾನ್ ಮತ್ತು ಅನಿಲ್ ಕಪೂರ್ ಅವರು ಮರುಭೂಮಿಯ ದೃಶ್ಯಗಳಲ್ಲಿ ಕಾಣಿಸಿಕೊಳ್ಳಬೇಕಿತ್ತು. ಈ ಚಿತ್ರದಲ್ಲಿ ಇವರಲ್ಲದೇ ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್, ರಾಣಿ ಮುಖರ್ಜಿ, ಅಭಯ್ ವರ್ಮಾ, ಅರ್ಷದ್ ವಾರ್ಸಿ ಮತ್ತು ರಾಘವ್ ಜುಯಲ್ ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದಾರೆ.
ಶಾರುಖ್ ಒಡೆತನದ ‘ರೆಡ್ ಚಿಲ್ಲಿಸ್ ಎಂಟರ್ಟೈನ್‌ಮೆಂಟ್’ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಶಾರುಖ್ ಖಾನ್ ಅವರು ವೃತ್ತಿಪರ ಹಂತಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಪಾಯಕಾರಿ ಜಗತ್ತಿನಲ್ಲಿ ಬದುಕುಳಿಯುವುದು ಹೇಗೆ ಎಂಬ ಬಗ್ಗೆ ಯುವತಿಯೊಬ್ಬಳಿಗೆ ಅವರು ತರಬೇತಿ ನೀಡುವ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ ಎನ್ನಲಾಗಿದೆ. ಈ ಬಹುನಿರೀಕ್ಷಿತ ಚಿತ್ರವು ಕ್ರಿಸ್‌ಮಸ್ ವೇಳೆಗೆ ವಿಶ್ವದಾದ್ಯಂತ ತೆರೆಗೆ ಬರಲು ಸಜ್ಜಾಗುತ್ತಿದೆ.