All posts by nagaraj11081993

ಎತ್ತಿನ ಬಂಡಿಯಲ್ಲಿ ದುನಿಯಾ ವಿಜಯ್ ಪುತ್ರಿಯ ಮೆರವಣಿಗೆ: ವಿಡಿಯೋ – Kannada News | Duniya Vijay daughter Rithanya receive love in Anekal watch video

ದುನಿಯಾ ವಿಜಯ್ (Duniya Vijay) ನಟನೆಯ ‘ಲ್ಯಾಂಡ್​​ಲಾರ್ಡ್’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಬಿಡುಗಡೆ ಆಗಿತ್ತು. ಜಡೇಶ್ ನಿರ್ದೇಶನ ಮಾಡಿದ್ದ ಈ ಸಿನಿಮಾನಲ್ಲಿ ದುನಿಯಾ ವಿಜಯ್ ಪುತ್ರಿ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಜಮೀನ್ದಾರಿ ಪದ್ಧತಿ, ಜಾತಿ ಪದ್ಧತಿಯ ವಿರುದ್ಧ ಕತೆ ಹೊಂದಿದ್ದ ‘ಲ್ಯಾಂಡ್​ಲಾರ್ಡ್’ ಸಿನಿಮಾ ಬಗ್ಗೆ ಬಹಳ ಮೆಚ್ಚುಗೆಗಳು ವ್ಯಕ್ತವಾಗಿದ್ದವು. ಸ್ವತಃ ಸಿಎಂ ಸಿದ್ದರಾಮಯ್ಯ ಅವರು ‘ಲ್ಯಾಂಡ್​​ಲಾರ್ಡ್’ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಸಿನಿಮಾ ಆನೆಕಲ್​​ನಲ್ಲಿ ಒಳ್ಳೆಯ ಪ್ರದರ್ಶನ ಕಂಡಿದ್ದು, ಆನೆಕಲ್​​ನ ಅಭಿಮಾನಿಗಳು ದುನಿಯಾ ವಿಜಯ್ ಅವರ ಪುತ್ರಿಯನ್ನು ಎತ್ತಿನ ಬಂಡಿಯ ಮೇಲೆ ಮೆರವಣಿಗೆ ಮಾಡಿಸಿದ್ದಾರೆ, ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಆಫ್ರಿಕಾ ವಿರುದ್ಧ ದಿಟ್ಟ ಪ್ರದರ್ಶನ ನೀಡಿದ ಗುರ್ಬಾಝ್​ಗೆ ಸ್ಮರಣೀಯ ಉಡುಗೊರೆ ನೀಡಿದ ಕೊಹ್ಲಿ – Kannada News | Virat Kohli Gifts Bats to Gurbaz: Inspiring Young Talent After T20 World Cup Heroics

ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ವಿಶ್ವ ಕ್ರಿಕೆಟ್​ನ ಕಿಂಗ್ ವಿರಾಟ್ ಕೊಹ್ಲಿ (Virat Kohli) ಪ್ರಸ್ತುತ ಕ್ರಿಕೆಟ್​ನಿಂದ ದೂರ ಉಳಿದಿರಬಹುದು. ಆದರೆ ಯುವ ಆಟಗಾರರನ್ನು ಸದಾ ಬೆನ್ತಟ್ಟುವ ಕೆಲಸವನ್ನು ಕೊಹ್ಲಿ ಎಂದಿಗೂ ಮರೆತಿಲ್ಲ. ಇದೀಗ ನಡೆಯುತ್ತಿರುವ ಟಿ20 ವಿಶ್ವಕಪ್​ನಲ್ಲೂ (T20 World Cup) ದಕ್ಷಿಣ ಆಫ್ರಿಕಾದಂತಹ ಬಲಿಷ್ಠ ತಂಡದ ವಿರುದ್ಧ ಕೆಚ್ಚೆದೆಯ ಪ್ರದರ್ಶನ ನೀಡಿದ ಅಫ್ಘಾನಿಸ್ತಾನದ ರಹಮಾನಲ್ಲಾ ಗುರ್ಬಾಜ್​ಗೆ (Rahmanullah Gurbaz) ವಿರಾಟ್ ಕೊಹ್ಲಿ ಸ್ಮರಣೀಯ ಉಡುಗೊರೆ ನೀಡಿ ಅವರ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. ವಾಸ್ತವವಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ರಹಮಾನಲ್ಲಾ ಗುರ್ಬಾಜ್‌, ಅಫ್ಘನ್ ತಂಡದ ಗೆಲುವಿಗೆ ಏಕಾಂಗಿ ಹೋರಾಟ ನಡೆಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ವಿಫಲರಾಗಿದ್ದರು. ಆದರೆ ಅವರ ಆಟಕ್ಕೆ ಮನಸೋತಿರುವ ಕೊಹ್ಲಿ, ಎರಡು ಬ್ಯಾಟ್​ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಬ್ಯಾಟ್ ಉಡುಗೊರೆ ನೀಡಿದ ಕೊಹ್ಲಿ

ವಿರಾಟ್ ಕೊಹ್ಲಿ ಬ್ಯಾಟ್​ಗಳನ್ನು ಉಡುಗೊರೆಯಾಗಿ ನೀಡಿರುವ ಮಾಹಿತಿಯನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ರಹಮಾನಲ್ಲಾ ಗುರ್ಬಾಜ್‌, ‘ಅತ್ಯಂತ ಅದ್ಭುತ ಉಡುಗೊರೆ ನೀಡಿದ ವಿರಾಟ್ ಕೊಹ್ಲಿ ಅವರಿಗೆ ಧನ್ಯವಾದಗಳು. ನೀವು ಕೇವಲ ದಂತಕಥೆಯಲ್ಲ, ನೀವು ಎಲ್ಲಾ ಪೀಳಿಗೆಗೂ ಸ್ಫೂರ್ತಿ’ ಎಂದು ಬರೆದುಕೊಂಡಿದ್ದಾರೆ.

ವಾಸ್ತವವಾಗಿ ವಿರಾಟ್ ಕೊಹ್ಲಿ ಯುವ ಪ್ರತಿಭಾವಂತ ಆಟಗಾರರಿಗೆ ಈ ರೀತಿಯಾಗಿ ಬ್ಯಾಟ್​ಗಳನ್ನು ಉಡುಗೊರೆಯಾಗಿ ನೀಡಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಅವರು ಆರ್‌ಸಿಬಿ ನಾಯಕ ರಜತ್ ಪಾಟಿದಾರ್‌ನಿಂದ ಹಿಡಿದು ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಮತ್ತು ಭಾರತದ ರಿಂಕು ಸಿಂಗ್‌ ಸೇರಿದಂತೆ ವಿಶ್ವದಾದ್ಯಂತದ ಆಟಗಾರರಿಗೆ ಬ್ಯಾಟ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ನನ್ನ ಪ್ರಕಾರ.. ರೋಹಿತ್, ಕೊಹ್ಲಿ ಏಕದಿನ ವಿಶ್ವಕಪ್ ಆಡುವ ಬಗ್ಗೆ ಮೌನ ಮುರಿದ ಧೋನಿ

ಆಫ್ರಿಕಾ ವಿರುದ್ಧ ಅಬ್ಬರಿಸಿದ್ದ ಗುರ್ಬಾಜ್

ಅಹಮದಾಬಾದ್‌ನಲ್ಲಿ ಫೆಬ್ರವರಿ 11 ರಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ರಹಮಾನಲ್ಲಾ ಗುರ್ಬಾಜ್‌ ಕೇವಲ 42 ಎಸೆತಗಳಲ್ಲಿ 84 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ದಕ್ಷಿಣ ಆಫ್ರಿಕಾ ನೀಡಿದ 187 ರನ್​ಗಳ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನದ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಗುರ್ಬಾಜ್ ತಮ್ಮ ಇನ್ನಿಂಗ್ಸ್​ನಲ್ಲಿ 4 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್‌ಗಳನ್ನು ಬಾರಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಆದರೆ ಎರಡೆರಡು ಸೂಪರ್ ಓವರ್​ಗಳ ಬಳಿಕ ವಿಜೇತರನ್ನು ಪಡೆದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿತ್ತು. ಆದಾಗ್ಯೂ ಎರಡನೇ ಸೂಪರ್ ಓಬರ್​ನಲ್ಲಿ ದಕ್ಷಿಣ ಆಫ್ರಿಕಾ ನೀಡಿದ 23 ರನ್​ಗಳ ಗುರಿ ಬೆನ್ನಟ್ಟಿದ ಅಫ್ಘನ್ ಪರ ಗುರ್ಬಾಜ್ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ತಂಡದ ಗೆಲುವಿಗಾಗಿ ಹೋರಾಡಿದರು. ಆದರೆ ಕೊನೆಯ ಎಸೆತದಲ್ಲಿ ಕ್ಯಾಚ್ ನೀಡುವ ಮೂಲಕ ವಿಕೆಟ್ ಒಪ್ಪಿಸುವುದರೊಂದಿಗೆ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡುವಲ್ಲಿ ವಿಫಲರಾಗಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:00 pm, Sat, 14 February 26

Source link

ರಿಯಲ್ ಎಸ್ಟೇಟ್ ಉದ್ಯಮಿ ರೋಹನ್ ಮೊಂಟೆರೋಗೆ ಟಿವಿ9 ನವ ನಕ್ಷತ್ರ ಪ್ರಶಸ್ತಿ – Kannada News | TV9 Nava Nakshatra 2026 Rohan Corporation Owner rohan monteiro awarded in Bengaluru

ಬೆಂಗಳೂರು, ಫೆಬ್ರವರಿ 14: ರೋಹನ್ ಕಾರ್ಪೊರೇಷನ್‌ನ ರೋಹನ್ ಮಾಂಟೆರೋ ಅವರನ್ನು ಟಿವಿ9 ನವ ನಕ್ಷತ್ರ (TV9 Nava Nakshatra) ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ. ರೋಹನ್ ಅವರ ಬದಲಾಗಿ ಪ್ರಶಸ್ತಿ ಸ್ವೀಕರಿಸಿದ ಅವರ ಡಿವನ್ ಮೊಂಟೆರೋ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರೋಹನ್ ಸನ್ಮಾನಿಸಿದರು. ರೋಹನ್ ಮೊಂಟೆರೋ ನಂಬಿಕೆ ಮತ್ತು ಗುಣಮಟ್ಟದ ರಿಯಲ್ ಎಸ್ಟೇಟ್ ವ್ಯವಹಾರ ಹಾಗೂ ಸಮಾಜಮುಖಿ ಕಾರ್ಯಗಳಿಂದ ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ.

TV9 ಕನ್ನಡ ಸುದ್ದಿವಾಹಿನಿಯು ಪ್ರತಿ ವರ್ಷದಂತೆ ಈ ಬಾರಿಯೂ ನವ ನಕ್ಷತ್ರ ಸನ್ಮಾನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತ್ತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 9 ಮಹನೀಯರನ್ನು ಗೌರವಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಈ ವರ್ಷದ ಸನ್ಮಾನಿತರಲ್ಲಿ ರೋಹನ್ ಕಾರ್ಪೊರೇಷನ್‌ನ ಸಂಸ್ಥಾಪಕ ರೋಹನ್ ಮಾಂಟೆರೋ ಅವರೂ ಒಬ್ಬರು.

ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕೇವಲ ವ್ಯವಹಾರ ದೃಷ್ಟಿಯಿಂದ ಕಾರ್ಯನಿರ್ವಹಿಸದೆ, ನಂಬಿಕೆ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡಿದ ರೋಹನ್ ಮಾಂಟೆರೋ ಅವರಿಗೆ ಮಂಗಳೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಕಡು ಕಷ್ಟದಲ್ಲಿ ಬೆಳೆದು, ರೋಹನ್ ಕಾರ್ಪೊರೇಷನ್‌ನಂತಹ ದೊಡ್ಡ ಸಂಸ್ಥೆಯನ್ನು ನಿರ್ಮಿಸುವುದರ ಜೊತೆಗೆ, ಅವರು ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೂಕರ್ ಪ್ರಶಸ್ತಿ ಲೇಖಕಿ ಬಾನು ಮುಷ್ತಾಕ್​ಗೆ ಟಿವಿ9 ನವ ನಕ್ಷತ್ರ ಅವಾರ್ಡ್​​ – Kannada News | Booker Prize Laureate Banu Mushtaq Honoured at TV9 Nava Nakshatra Awards 2026

ಬೆಂಗಳೂರು, ಫೆಬ್ರವರಿ 14: ನಗದರಲ್ಲಿ ನಡೆದ ಟಿವಿ9 ನವ ನಕ್ಷತ್ರ ಸನ್ಮಾನ 2026 ಕಾರ್ಯಕ್ರಮದಲ್ಲಿ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಭಾನು ಮುಷ್ತಾಕ್ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಭಾನು ಮುಷ್ತಾಕ್ ಅವರು, ಟಿವಿ9 ಸಂಸ್ಥೆಯು 18 ವರ್ಷಗಳ ಹಿಂದೆ ಹಾಸನದಲ್ಲಿ ಆರಂಭವಾದ ಸಂದರ್ಭವನ್ನು ಸ್ಮರಿಸಿದರು. ಮಾಧ್ಯಮ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳ ನಡುವೆಯೂ ಟಿವಿ9 ವಿಶ್ವಾಸಾರ್ಹ ಸುದ್ದಿವಾಹಿನಿಯಾಗಿ ನಿಂತಿದೆ ಎಂದು ಶ್ಲಾಘಿಸಿದರು. ಬೂಕರ್ ಪ್ರಶಸ್ತಿ ಘೋಷಣೆಯ ನಂತರದ ತಮ್ಮ ಅನುಭವಗಳನ್ನು ಹಂಚಿಕೊಂಡ ಅವರು, ಕನ್ನಡ ಸಾಹಿತ್ಯದ ಸಾರವನ್ನು ಜಗತ್ತಿನ ಮೂಲೆ ಮೂಲೆಗೆ ತಲುಪಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದಾಗಿ ಹೇಳಿದರು. ಕನ್ನಡದ ಮನಸ್ಥಿತಿ, ಮಾನವೀಯತೆ ಮತ್ತು ಮನುಷ್ಯ ಪ್ರೀತಿಯನ್ನು ವಿಶ್ವಕ್ಕೆ ತಲುಪಿಸುವ ಕಾರ್ಯದಲ್ಲಿ ನಿರತರಾಗಿರುವುದಾಗಿ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

IND vs PAK: ಪ್ರೇಮದಾಸ ಮೈದಾನದಲ್ಲಿ ಭಾರತ- ಪಾಕ್ ದಾಖಲೆ ಹೇಗಿದೆ? – Kannada News | T20 World Cup 2026: India Pakistan performance in Premadasa stadium

2026 ರ ಟಿ20 ವಿಶ್ವಕಪ್‌ನಲ್ಲಿ (T20 World Cup 2026) ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಪಂದ್ಯಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಕ್ರಿಕೆಟ್ ಲೋಕದ ಬದ್ಧವೈರಿಗಳೆನಿಸಿಕೊಂಡಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳು ಶ್ರೀಲಂಕಾದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಾಳೆ, ಅಂದರೆ ಫೆಬ್ರವರಿ 15, 2026 ರಂದು ಮುಖಾಮುಖಿಯಾಗುತ್ತಿವೆ. ಆದರೆ ಈ ಪಂದ್ಯಕ್ಕೆ ವರುಣ ಅಡ್ಡಿಪಡಿಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ಈ ಆತಂಕದ ನಡುವೆ ಪ್ರೇಮದಾಸ ಕ್ರೀಡಾಂಗಣದಲ್ಲಿ ಉಭಯ ತಂಡಗಳ ಪ್ರದರ್ಶನ (Premadasa Stadium records) ಹೇಗಿದೆ ಎಂಬುದನ್ನು ನೋಡುವುದಾದರೆ..

ಭಾರತದ ಟಿ20 ದಾಖಲೆ

ಎರಡೂ ತಂಡಗಳು ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಒಮ್ಮೆ ಮಾತ್ರ ಮುಖಾಮುಖಿಯಾಗಿವೆ. ಇದಲ್ಲದೆ, ಭಾರತ ಈ ಕ್ರೀಡಾಂಗಣದಲ್ಲಿ 15 ಪಂದ್ಯಗಳನ್ನು ಮತ್ತು ಪಾಕಿಸ್ತಾನ 7 ಪಂದ್ಯಗಳನ್ನು ಆಡಿದೆ. ಈ ಮೈದಾನದಲ್ಲಿ ಭಾರತ ತಂಡ ಒಟ್ಟು 15 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದೆ. ಈ ಪೈಕಿ 11 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದರಲ್ಲಿ ಪಾಕಿಸ್ತಾನ ವಿರುದ್ಧದ ಒಂದು ಪಂದ್ಯವೂ ಸೇರಿದೆ. 2012 ರಲ್ಲಿ ನಡೆದ ಆ ಪಂದ್ಯವನ್ನು ಭಾರತ 8 ವಿಕೆಟ್‌ಗಳಿಂದ ಗೆದ್ದಿತ್ತು.

ಈ ಕ್ರೀಡಾಂಗಣದಲ್ಲಿ ಭಾರತ 4 ಟಿ20 ಪಂದ್ಯಗಳನ್ನು ಸೋತಿದ್ದು, ಅದರಲ್ಲಿ 3 ಪಂದ್ಯಗಳನ್ನು ಶ್ರೀಲಂಕಾ ವಿರುದ್ಧ ಮತ್ತು ಒಂದು ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದೆ. ಶಿಖರ್ ಧವನ್ ಈ ಕ್ರೀಡಾಂಗಣದಲ್ಲಿ ಭಾರತದ ಪರ ಟಿ20 ಪಂದ್ಯಗಳಲ್ಲಿ 284 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಏತನ್ಮಧ್ಯೆ, ಯುಜ್ವೇಂದ್ರ ಚಾಹಲ್ 12 ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಆದರೆ ಇವರಿಬ್ಬರು ಈಗ ತಂಡದಲ್ಲಿಲ್ಲ.

 ಪಾಕಿಸ್ತಾನದ ಟಿ20 ದಾಖಲೆ

ಪಾಕಿಸ್ತಾನ ಕ್ರಿಕೆಟ್ ತಂಡವು ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಒಟ್ಟು 7 ಟಿ20 ಪಂದ್ಯಗಳನ್ನು ಆಡಿದೆ. ಈ ಪೈಕಿ 5 ಪಂದ್ಯಗಳನ್ನು ಗೆದ್ದು 2 ಪಂದ್ಯಗಳಲ್ಲಿ ಸೋತಿದೆ. ಇದರಲ್ಲಿ ಶ್ರೀಲಂಕಾ ವಿರುದ್ಧ 3 ಪಂದ್ಯಗಳು ಮತ್ತು ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ತಲಾ 1 ಪಂದ್ಯವನ್ನು ಸೋಲಿಸಿದೆ. ಪ್ರೇಮದಾಸ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಪರ ಅತಿ ಹೆಚ್ಚು ಟಿ20 ರನ್ ಗಳಿಸಿದ ಆಟಗಾರ (182 ರನ್) ಉಮರ್ ಅಕ್ಮಲ್ ಆಗಿದ್ದರೆ, ಸಯೀದ್ ಅಜ್ಮಲ್ 8 ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.

IND vs PAK: ವಿಮಾನ, ಹೋಟೆಲ್‌ ರೂಂ ಬೆಲೆ ದುಪ್ಪಟ್ಟು; ಕೊಲಂಬೊದಲ್ಲಿ ಜನ ಜಾತ್ರೆ

ಉಭಯ ತಂಡಗಳು

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್.

ಪಾಕಿಸ್ತಾನ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಸಾಹಿಬ್ಜಾದಾ ಫರ್ಹಾನ್, ಅಬ್ರಾರ್ ಅಹ್ಮದ್, ಬಾಬರ್ ಆಝಂ, ಫಹೀಮ್ ಅಶ್ರಫ್, ಫಖರ್ ಜಮಾನ್, ಖವಾಜಾ ನಫೆ, ಮೊಹಮ್ಮದ್ ನವಾಜ್, ಮೊಹಮ್ಮದ್ ಸಲ್ಮಾನ್ ಮಿರ್ಜಾ, ನಸೀಮ್ ಶಾ, ಉಸ್ಮಾನ್ ತಾರಿಕ್, ಸೈಮ್ ಅಯೂಬ್, ಶಾಹೀನ್ ಶಾ ಅಫ್ರಿದಿ, ಶಾದಾಬ್ ಖಾನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರಿ ಗೌರವಕ್ಕೆ ತಗುಲಿದ ವೆಚ್ಚ ಪಾವತಿಸುವಂತೆ ದಿ ರಾಮಯ್ಯ ಕುಟುಂಬಕ್ಕೆ ಸರ್ಕಾರ ಬಿಲ್? ಅಶೋಕ್​​​ ಕಿಡಿ – Kannada News | Did Karnataka Government Send Bill to Late Journalist Ramaiah Family for State Funeral Expenses; Ashoka sparks

ಸಿಎಂ ಸಿದ್ದರಾಮಯ್ಯ, ಆರ್​​ ಅಶೋಕ್​Image Credit source: deccanherald

ಬೆಂಗಳೂರು, ಫೆಬ್ರವರಿ 14: ರಾಜ್ಯ ಕಾಂಗ್ರೆಸ್ (congress) ಸರ್ಕಾರ ಒಂದು ಸಾವಿರ ದಿನ ಪೂರೈಸಿದ ಸಂಭ್ರಮದಲ್ಲಿದೆ. ಸರ್ಕಾರದ ಘಟಾನುಘಟಿಗಳು ಇಂದು ಹಾವೇರಿಯಲ್ಲಿ ಅಬ್ಬರಿಸಿದರು. ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶದ ಹೆಸರಿನಲ್ಲಿ ಒಂದು ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ. ಈ ಮಧ್ಯೆ ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತ ರಾಮಯ್ಯನವರ ಕುಟುಂಬಸ್ಥರಿಗೆ ಬಿಲ್ ನೀಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ನಿಜವೇ ಆದರೆ, ಕಾಂಗ್ರೆಸ್ ಸರ್ಕಾರದಂತಹ ಲಜ್ಜೆಗೇಡಿ ಸರ್ಕಾರ ಮತ್ತೊಂದಿಲ್ಲ ಎಂದು ವಿಪಕ್ಷ ನಾಯಕ ಆರ್​​. ಅಶೋಕ್ (R Ashoka) ವಾಗ್ದಾಳಿ ಮಾಡಿದ್ದಾರೆ.

ದಿವಂಗತ ರಾಮಯ್ಯನವರ ಕುಟುಂಬಕ್ಕೆ ಬಿಲ್?

ಈ ಬಗ್ಗೆ ಟ್ವೀಟ್ ಮಾಡಿರುವ ಆರ್​​. ಅಶೋಕ್, ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತರು, ವಿಧಾನ ಪರಿಷತ್ ಮಾಜಿ ಸದಸ್ಯರಾದ ಶ್ರೀ ರಾಮಯ್ಯನವರ ಅಂತ್ಯಸಂಸ್ಕಾರವನ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸುವುದಾಗಿ ಘೋಷಣೆ ಮಾಡಿದ್ದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಸರ್ಕಾರಿ ಗೌರವಕ್ಕೆ ತಗುಲಿದ ಖರ್ಚು ವೆಚ್ಚ ಪಾವತಿಸುವಂತೆ ದಿವಂಗತ ರಾಮಯ್ಯನವರ ಕುಟುಂಬಕ್ಕೆ ಬಿಲ್ ಕಳುಹಿಸಿರುವ ಘಟನೆ ನಾಡಿನ ಹಿರಿಯ ಪತ್ರಕರ್ತರಿಗೆ ಮಾಡಿರುವ ಅಪಮಾನದ ಜೊತೆಗೆ ರಾಜ್ಯ ಕಾಂಗ್ರೆಸ್​​ ಸರ್ಕಾರ ಯಾವ ಮಟ್ಟಕ್ಕೆ ದಿವಾಳಿ ಆಗಿದೆ, ಎಷ್ಟು ಲಜ್ಜೆಗೆಟ್ಟ ಸ್ಥಿತಿಗೆ ತಲುಪಿದೆ ಎನ್ನುವುದಕ್ಕೆ ಮತ್ತೊಂದು ತಾಜಾ ಉದಾಹರಣೆಯಾಗಿದೆ ಎಂದು ಕಿಡಿಕಾರಿದ್ದಾರೆ.

ಆರ್​​​. ಅಶೋಕ್​ ಟ್ವೀಟ್​​

ಗೃಹ ಸಚಿವ ಡಾ. ಜಿ ಪರಮೇಶ್ವರ್​​ ಅವರೇ, ಶ್ರೀ ರಾಮಯ್ಯನವರ ಅಂತ್ಯಸಂಸ್ಕಾರದ ವೇಳೆ ಗಣ್ಯ ವ್ಯಕ್ತಿಗಳ ಭೇಟಿಗೆ ನಡೆಸಿದ ಸಿದ್ಧತೆಗಳು, ಬ್ಯಾರಿಕೇಡ್ ಅಳವಡಿಕೆ, ಭದ್ರತಾ ವ್ಯವಸ್ಥೆ ಮತ್ತು ಇತರ ಲಾಜಿಸ್ಟಿಕ್ ಸಿದ್ಧತೆಗಳಿಗೆ ಹಣ ಪಾವತಿಸುವಂತೆ ನಿಮ್ಮ ಪೊಲೀಸ್ ಇಲಾಖೆ ಓರ್ವ ವ್ಯಾಪಾರಿಯ ಮೂಲಕ ರಾಮಯ್ಯನವರ ಕುಟುಂಬಸ್ಥರಿಗೆ ಬಿಲ್ ನೀಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ನಿಜವೇ ಆದರೆ, ನಿಮ್ಮ ಕಾಂಗ್ರೆಸ್ ಸರ್ಕಾರದಂತಹ ಲಜ್ಜೆಗೇಡಿ ಸರ್ಕಾರ ಮತ್ತೊಂದಿಲ್ಲ ಎಂದಿದ್ದಾರೆ.

ಸಾವಿನಲ್ಲೂ ಕಾಸು ಕೇಳುವ ನೀಚತನಕ್ಕೆ ಇಳಿದಿದೆ: ಕಾಂಗ್ರೆಸ್​ ವಿರುದ್ಧ ಬಿಜೆಪಿ ಕಿಡಿ

ಬಿಜೆಪಿ ಕೂಡ ಟ್ವೀಟ್ ಮಾಡಿದ್ದು,​ ಸಾವಿರ ದಿನದ ಕಾಂಗ್ರೆಸ್​ ಸರ್ಕಾರ ಸಾವಿನಲ್ಲೂ ಕಾಸು ಕೇಳುವ ನೀಚತನಕ್ಕೆ ಇಳಿದಿದೆ. ಹಿರಿಯ ಪತ್ರಕರ್ತ, ವಿಧಾನ ಪರಿಷತ್‌ ಮಾಜಿ ಸದಸ್ಯ ಪಿ.ರಾಮಯ್ಯನವರ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸುವುದಾಗಿ ಬರುಡೆ ಬಿಟ್ಟ ಸಿಎಂ ಸಿದ್ದರಾಮಯ್ಯ ಸರ್ಕಾರ ಇದೀಗ ಹಿಂಬಾಗಿಲಿನಿಂದ ಅವರ ಕುಟುಂಬಸ್ಥರಿಗೆ ಬ್ಯಾರಿಕೇಡ್‌ ಹಾಕಿ ಬಂದೋಬಸ್ತ್‌ ಮಾಡಿರುವುದಕ್ಕೆ ಪೊಲೀಸ್‌ ಇಲಾಖೆ ಬಿಲ್‌ ಕಳುಹಿಸಿದೆ.

ಇದನ್ನೂ ಓದಿ: ಹಾವೇರಿಯಲ್ಲಿ ಕಾಂಗ್ರೆಸ್ ಸರ್ಕಾರದಿಂದ ಭ್ರಷ್ಟಾಚಾರದ ಸಾಧನೆಯ ಸಮಾವೇಶ; ಬಸವರಾಜ ಬೊಮ್ಮಾಯಿ ವ್ಯಂಗ್ಯ

ಮಿಸ್ಟರ್‌ ಗೊತ್ತಿಲ್ಲ ಹೋಮ್‌ ಮಿನಿಸ್ಟರ್‌ ಡಾ. ಜಿ ಪರಮೇಶ್ವರ್​​ ಅವರೇ, ಇದು ನಿಮಗೆ ಗೊತ್ತಿಲ್ಲವೇ? ಅಥವಾ ನಿಮ್ಮ ಸರ್ಕಾರ ಸಾವಿರದ ದಿನಕ್ಕೆ ಇಷ್ಟೊಂದು ಪಾಪರ್‌ ಆಗಿದೆಯೇ? ಎಂದು ಕಿಡಿಕಾರಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕನ್ನಡ ಸಿನಿಮಾ ಟ್ರೈಲರ್ ನೋಡಿ ವಾವ್ ಎಂಬ ಸಲ್ಮಾನ್ ಖಾನ್ – Kannada News | Salman Khan watched Rakkasapuradol Kannada movie trailer

ಬಾಲಿವುಡ್​​ನ ಸ್ಟಾರ್ ನಟ ಸಲ್ಮಾನ್ ಖಾನ್​​ಗೂ (Salman Khan) ಕನ್ನಡ ಚಿತ್ರರಂಗಕ್ಕೂ ಎತ್ತಣಿಂದೆತ್ತ ಸಂಬಂಧ. ಸುದೀಪ್ ಜೊತೆಗೆ ಒಂದು ಸಿನಿಮಾನಲ್ಲಿ ನಟಿಸಿರುವುದು ಬಿಟ್ಟರೆ ಸಲ್ಲು ಕನ್ನಡ ಚಿತ್ರರಂಗದ ಜೊತೆಗೆ ಹೆಚ್ಚಿನ ನಂಟು ಹೊಂದಿಲ್ಲ. ಆದರೆ ಇದೀಗ ಹಠಾತ್ತನೆ ಸಲ್ಮಾನ್ ಖಾನ್, ಕನ್ನಡ ಸಿನಿಮಾದ ಟ್ರೈಲರ್ ಒಂದನ್ನು ವೀಕ್ಷಿಸಿ ವಾವ್ ಎಂದಿದ್ದಾರೆ. ಮಾತ್ರವಲ್ಲದೆ, ಈ ಸಿನಿಮಾದ ಹಿಂದಿ ಆವೃತ್ತಿ ಯಾವಾಗ ತೋರಿಸುತ್ತೀರಿ ಎಂದು ಚಿತ್ರತಂಡದವರನ್ನು ಕೇಳಿದ್ದಾರೆ. ಅಷ್ಟಕ್ಕೂ ಯಾವುದು ಆ ಸಿನಿಮಾ?

ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ರಕ್ಕಸಪುರದೊಳ್’ ಸಿನಿಮಾದ ಟ್ರೈಲರ್ ಅನ್ನು ಸಲ್ಮಾನ್ ಖಾನ್ ವೀಕ್ಷಿಸಿದ್ದಾರೆ. ‘ರಕ್ಕಸಪುರದೊಳ್’ ಸಿನಿಮಾಕ್ಕೆ ಖ್ಯಾತ ಆಕ್ಷನ್ ಕೊರಿಯೋಗ್ರಫರ್ ರವಿವರ್ಮ ಅವರು ಬಂಡವಾಳ ಹೂಡಿದ್ದು, ರವಿವರ್ಮಾ, ಸಲ್ಮಾನ್ ಖಾನ್ ಅವರ ಹಲವು ಸಿನಿಮಾಗಳಿಗೆ ಫೈಟ್​​ಗಳ ನಿರ್ದೇಶನ ಮಾಡಿದ್ದಾರೆ. ಹಾಗಾಗಿ ಸಲ್ಮಾನ್ ಖಾನ್ ಜೊತೆಗೆ ಅವರು ಆತ್ಮೀಯತೆ ಹೊಂದಿದ್ದಾರೆ. ಸಲ್ಮಾನ್ ಅವರ ಹೊಸ ಸಿನಿಮಾ ‘ಗಲ್ವಾನ್’ಗೂ ರವಿವರ್ಮ ಸಾಹಸ ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ಶೂಟಿಂಗ್ ವೇಳೆಯಲ್ಲಿ ತಾವು ನಿರ್ಮಾಣ ಮಾಡಿರುವ ‘ರಕ್ಕಸಪುರದೊಳ್’ ಸಿನಿಮಾದ ಟ್ರೈಲರ್ ಅನ್ನು ಸಲ್ಮಾನ್ ಖಾನ್ ಅವರಿಗೆ ರವಿವರ್ಮ ತೋರಿಸಿದ್ದಾರೆ.

‘ರಕ್ಕಸಪುರದೊಳ್’ ಸಿನಿಮಾದ ಟ್ರೈಲರ್ ವೀಕ್ಷಿಸಿದ ಸಲ್ಮಾನ್ ಖಾನ್ ಅವರು ಟ್ರೈಲರ್​​ನ ಗುಣಮಟ್ಟವನ್ನು ಕೊಂಡಾಡಿ ‘ಕನ್ನಡ ಚಿತ್ರರಂಗದಲ್ಲಿ ಸೃಜನಾತ್ಮಕ ಪ್ರಯತ್ನಗಳು ಸದಾ ವಿಭಿನ್ನವಾಗಿರುತ್ತವೆ’ ಎಂದಿದ್ದಾರೆ ಜೊತೆಗೆ ಸಿನಿಮಾದ ಹಿಂದಿ ಆವೃತ್ತಿ ಯಾವಾಗ ತೋರಿಸುತ್ತೀರ ಎಂದು ಪ್ರಶ್ನೆ ಸಹ ಮಾಡಿದರಂತೆ. ಆ ಮೂಲಕ ಸಿನಿಮಾವನ್ನು ಹಿಂದಿಗೆ ಸಹ ಡಬ್ ಮಾಡಿ ಎಂಬ ಸಲಹೆಯನ್ನು ಸಲ್ಮಾನ್ ಖಾನ್ ಅವರು ಪರೋಕ್ಷವಾಗಿ ನೀಡಿದ್ದಾರೆ. ಸಲ್ಮಾನ್ ಖಾನ್ ಸಲಹೆಯನ್ನು ರವಿವರ್ಮ ಗಂಭೀರವಾಗಿ ತೆಗೆದುಕೊಳ್ಳುತ್ತಾರೆಯೇ ಕಾದು ನೋಡಬೇಕಿದೆ.

ಇದನ್ನೂ ಓದಿ:ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ

ಸೈಕಾಲಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ರಕ್ಕಸಪುರದೊಳ್’ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಶಿವ ಹೆಸರಿನ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಕುಡಿತದ ವ್ಯಸನ ಮತ್ತು ಮಾನಸಿಕ ಅಸ್ಥಿರತೆಯಿಂದ ಬಳಲುತ್ತಿರುವ ಪೊಲೀಸ್ ಒಬ್ಬ, ಹಳ್ಳಿಯಲ್ಲಿ ನಡೆಯುವ ನಿಗೂಢ ಕೊಲೆಗಳನ್ನು ಹೇಗೆ ಭೇದಿಸುತ್ತಾನೆ ಎನ್ನುವುದೇ ಈ ಸಿನಿಮಾದ ಕತೆ. ಟ್ರೈಲರ್‌ನಲ್ಲಿನ ರಾಜ್ ಅವರ ಮೌನ ಮತ್ತು ತೀವ್ರತೆಯ ನಟನೆಯನ್ನು ಸಲ್ಮಾನ್ ಮೆಚ್ಚಿದ್ದಾರೆ ಎನ್ನಲಾಗಿದೆ.

‘ರಕ್ಕಸಪುರದೊಳ್’ ಸಿನಿಮಾವನ್ನು ರವಿ ಸಾರಂಗ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಫೆಬ್ರವರಿ 6 ರಂದು ‘ರಕ್ಕಸಪುರದೊಳ್’ ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾಕ್ಕೆ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಾಲಿವುಡ್ ಸ್ಟಾರ್‌ಗಳ ಬೆಂಬಲ ಸಿಗುತ್ತಿರುವುದು ಚಿತ್ರದ ಓಟಕ್ಕೆ ಮತ್ತಷ್ಟು ಬಲ ನೀಡಿದಂತಾಗಿದೆ. ಕಿಚ್ಚ ಸುದೀಪ್ ಸೇರಿದಂತೆ ಕನ್ನಡದ ಅನೇಕ ಗಣ್ಯರು ಕೂಡ ಈ ಚಿತ್ರದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Ranji Trophy: ಕರ್ನಾಟಕಕ್ಕೆ ಉತ್ತರಾಖಂಡ ಸೆಮೀಸ್ ಎದುರಾಳಿ; 9ನೇ ಟ್ರೋಫಿಯತ್ತ ಪಡಿಕ್ಕಲ್ ಪಡೆಯ ಚಿತ್ತ – Kannada News | Ranji Trophy 2025 26 Semifinals: Karnataka Eyes 9th Title, Uttarakhand Chases Maiden Trophy Dream

2025-26 ರ ಆವೃತ್ತಿಯ ರಣಜಿ ಟ್ರೋಫಿ ಸೆಮಿಫೈನಲ್‌ಗೆ (Ranji Trophy Semifinals 2025-26) ವೇದಿಕೆ ಸಜ್ಜಾಗಿದ್ದು, 4 ತಂಡಗಳು ಫೈನಲ್​ಗೆ ಟಿಕೆಟ್ ಪಡೆಯಲು ಸೆಣಸಾಡಲಿವೆ. ಅದರಲ್ಲಿ ಕರ್ನಾಟಕ ತಂಡವು ಉತ್ತರಾಖಂಡ್ (Karnataka vs Uttarakhand) ವಿರುದ್ಧ ಸೆಣಸಲಿದ್ದು, ಇನ್ನೊಂದು ಪಂದ್ಯದಲ್ಲಿ ಬಂಗಾಳ ತಂಡವು ಜಮ್ಮು ಮತ್ತು ಕಾಶ್ಮೀರ ತಂಡವನ್ನು ಎದುರಿಸಲಿದೆ. ಈ ನಾಲ್ಕು ತಂಡಗಳು ಟೂರ್ನಿಯ ಪ್ರಸ್ತುತ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿವೆ. ಅದರಲ್ಲೂ ಕರ್ನಾಟಕ ಹಾಗೂ ಉತ್ತರಾಖಂಡ್ ನಡುವಿನ ಕಾಳಗಕ್ಕೆ ಎಲ್ಲರೂ ಕಾದುಕುಳಿತಿದ್ದಾರೆ. ಒಂದೆಡೆ ಕರ್ನಾಟಕ ತನ್ನ 9ನೇ ಪ್ರಶಸ್ತಿ ಕಡೆಗೆ ನೋಡುತ್ತಿದ್ದರೆ, ಇನ್ನೊಂದೆಡೆ ಉತ್ತರಾಖಂಡ್ ತನ್ನ ಚೊಚ್ಚಲ ರಣಜಿ ಟ್ರೋಫಿಗಾಗಿ ಎದುರು ನೋಡುತ್ತಿದೆ. ಹೀಗಾಗಿ ಯಾವ ತಂಡಕ್ಕೆ ಫೈನಲ್​ ಟಿಕೆಟ್ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

9ನೇ ಟ್ರೋಫಿಯತ್ತ ಕರ್ನಾಟಕದ ಕಣ್ಣು

ಕ್ವಾರ್ಟರ್ ಫೈನಲ್‌ನಲ್ಲಿ 42 ಬಾರಿಯ ಚಾಂಪಿಯನ್ ಮುಂಬೈ ತಂಡವನ್ನು ಸೋಲಿಸಿದ ಕರ್ನಾಟಕ ತಂಡ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ತಂಡವು ಯುವ ಮತ್ತು ಅನುಭವಿ ಆಟಗಾರರ ಸಮಮಿಶ್ರಣದಿಂದ ಕೂಡಿರುವುದು ತಂಡದ ಯಶಸ್ಸಿಗೆ ಕಾರಣವಾಗುತ್ತಿದೆ. ಅದರಲ್ಲೂ ಬ್ಯಾಟಿಂಗ್‌ ವಿಭಾಗದಲ್ಲಿ ಅನುಭವಿಗಳಾದ ಕೆಎಲ್ ರಾಹುಲ್, ಮಾಯಾಂಕ್ ಅಗರ್ವಾಲ್, ಕರುಣ್ ನಾಯರ್ ಜೊತೆಗೆ ದೇವದತ್ ಪಡಿಕ್ಕಲ್ ಮತ್ತು ಸ್ಮರಣ್​ರಂತಹ ಯುವ ಆಟಗಾರರು ಸೇರಿದ್ದಾರೆ. ಇತ್ತ ಬೌಲಿಂಗ್​ನಲ್ಲಿ ಪ್ರಸಿದ್ಧ್ ಕೃಷ್ಣ, ವಿಧ್ವತ್ ಕಾವೇರಪ್ಪ ಮತ್ತು ಶ್ರೇಯಸ್ ಗೋಪಾಲ್​ ತಂಡದ ಬಲ ಹೆಚ್ಚಿಸಿದ್ದಾರೆ. ಕರ್ನಾಟಕ ಇದುವರೆಗೆ 8 ರಣಜಿ ಟ್ರೋಫಿ ಪ್ರಶಸ್ತಿಗಳನ್ನು ಗೆದ್ದಿದ್ದು, 6 ಬಾರಿ ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡಿದೆ. ಇದೀಗ ಸೆಮಿಫೈನಲ್‌ನಲ್ಲಿ ಗೆಲುವಿನೊಂದಿಗೆ 9 ನೇ ಬಾರಿಗೆ ಟ್ರೋಫು ಎತ್ತಿಹಿಡಿಯುವ ಇರಾದೆಯಲ್ಲಿದೆ.

ಚೊಚ್ಚಲ ಟ್ರೋಫಿಯತ್ತ ಉತ್ತರಾಖಂಡ್

ಮತ್ತೊಂದೆಡೆ, ಮೇಲೆ ಹೇಳಿದಂತೆ ಉತ್ತರಾಖಂಡ್ ಇದುವರೆಗೂ ರಣಜಿ ಟ್ರೋಫಿಯನ್ನು ಗೆದ್ದಿಲ್ಲ. ಲೀಗ್ ಹಂತದಲ್ಲಿ 7 ಪಂದ್ಯಗಳನ್ನಾಡಿರುವ ಉತ್ತರಾಖಂಡ 4 ರಲ್ಲಿ ಗೆದ್ದು, 2 ಪಂದ್ಯಗಳನ್ನು ಸೋತಿದ್ದು, ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಜಾರ್ಖಂಡ್ ತಂಡವನ್ನು ಇನ್ನಿಂಗ್ಸ್ ಮತ್ತು 6 ರನ್‌ಗಳ ಅಂತರದಿಂದ ಸೋಲಿಸಿ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ.

ಸೆಮಿಫೈನಲ್‌ ನೇರ ಪ್ರಸಾರದ ವಿವರ

ಕರ್ನಾಟಕ vs ಉತ್ತರಾಖಂಡ ಮತ್ತು ಬಂಗಾಳ vs ಜಮ್ಮು ಮತ್ತು ಕಾಶ್ಮೀರ ಪಂದ್ಯಗಳನ್ನು ಅಭಿಮಾನಿಗಳು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಪಂದ್ಯವನ್ನು ಜಿಯೋಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಹಾಗೆಯೇ ಈ ಎರಡೂ ಪಂದ್ಯಗಳು ಫೆಬ್ರವರಿ 15 ರಂದು ಬೆಳಿಗ್ಗೆ 9 ಗಂಟೆಗೆಯಿಂದ ಪ್ರಾರಂಭವಾಗಲಿವೆ.

ಕೆಎಲ್ ರಾಹುಲ್ 25ನೇ ಶತಕದ ಇನ್ನಿಂಗ್ಸ್​ನ ಝಲಕ್ ಇಲ್ಲಿದೆ

ಉಭಯ ತಂಡಗಳು

ಕರ್ನಾಟಕ ತಂಡ: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್(ನಾಯಕ), ಕರುಣ್ ನಾಯರ್, ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ(ವಿಕೆಟ್ ಕೀಪರ್), ವಿದ್ಯಾಧರ್ ಪಾಟೀಲ್, ಶಿಖರ್ ಶೆಟ್ಟಿ, ಪ್ರಸಿದ್ಧ್ ಕೃಷ್ಣ, ವಿಧ್ವತ್ ಕಾವೇರಪ್ಪ, ಅನೀಶ್ ಕೆವಿ, ಮೊಹ್ಸಿನ್ ಖಾನ್, ಮುರಳೀಧರ ವೆಂಕಟೇಶ್, ಕೃಷ್ಣನ್ ಶ್ರೀಜಿತ್, ಧ್ರುವ ಪ್ರಭಾಕರ್

ಉತ್ತರಾಖಂಡ ತಂಡ: ಅವನೀಶ್ ಸುಧಾ, ಭೂಪೇನ್ ಲಾಲ್ವಾನಿ, ಕುನಾಲ್ ಚಂಡೇಲಾ(ನಾಯಕ), ಲಕ್ಷ್ಯ ರಾಜೇಶ್ ರಾಯಚಂದಾನಿ, ಜಗದೀಶ ಸುಚಿತ್, ಸೌರಭ್ ರಾವತ್(ವಿಕೆಟ್ ಕೀಪರ್), ಶಾಶ್ವತ್ ದಂಗ್ವಾಲ್, ಅಭಯ್ ನೇಗಿ, ಮಯಾಂಕ್ ಮಿಶ್ರಾ, ಆದಿತ್ಯ ರಾವತ್, ಜನಮೇಜಯ್ ಜೋಶಿ, ಪ್ರಶಾಂತ್ ಚೋಪ್ರಾ, ದೇವೇಂದ್ರ ಸಿಂಗ್ ಬೋರಾ, ಆರವ್ ಮಹಾಜನ್, ಹರ್ಷ ಪಟ್ವಾಲ್, ಆಂಜನೇಯ ಸೂರ್ಯವಂಶಿ, ರಾಜನ್ ಕುಮಾರ್, ಸಾಗರ್ ರಾವತ್, ಜಗಮೋಹನ್ ನಾಗರಕೋಟಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕಕ್ಕೆ ಗುಡ್ ನ್ಯೂಸ್; ಬಳ್ಳಾರಿ- ಹೊಸಪೇಟೆ ನಡುವೆ ಹೊಸ ರೈಲು ಮಾರ್ಗಕ್ಕೆ ಒಪ್ಪಿಗೆ – Kannada News | Modi Cabinet Approves Ballari Hosapete 3rd and 4th Railway line project in Karnataka know details

ಬೆಂಗಳೂರು, ಫೆಬ್ರವರಿ 14: ಉತ್ತರ ಕರ್ನಾಟಕ ಭಾಗದ ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾದ ಹಂಪಿಗೆ ಹೋಗುವ ಪ್ರಯಾಣಿಕರಿಗೆ ರೈಲು ಸಂಚಾರ ಇನ್ಮುಂದೆ ಬಹಳ ಆರಾಮದಾಯಕವಾಗಲಿದೆ. ಏಕೆಂದರೆ, ಮೋದಿ ಸರ್ಕಾರ ಬಳ್ಳಾರಿ- ಹೊಸಪೇಟೆ ನಡುವೆ ಮೂರನೇ ಮತ್ತು ನಾಲ್ಕನೇ ರೈಲು ಮಾರ್ಗದ ಯೋಜನೆಗೆ ಒಪ್ಪಿಗೆ ನೀಡಿದೆ. ದೆಹಲಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಹೊಸ ರೈಲು ಮಾರ್ಗ ಹಂಪಿ (ಯುನೆಸ್ಕೋ ವಿಶ್ವ ಪರಂಪರೆಯ ತಾಣ), ಬಳ್ಳಾರಿ ಕೋಟೆ, ದರೋಜಿ ಕರಡಿ ಧಾಮ, ತುಂಗಭದ್ರಾ ಅಣೆಕಟ್ಟು, ಕೆಂಚನಗುಡ್ಡ, ವಿಜಯ ವಿಠಲ ದೇವಾಲಯ, ಇತ್ಯಾದಿ ಪ್ರಮುಖ ಪ್ರವಾಸಿ ತಾಣಗಳ ಸಂಪರ್ಕವನ್ನು ಸುಧಾರಿಸುತ್ತದೆ. ಅಲ್ಲದೆ, ಕಬ್ಬಿಣದ ಅದಿರು ಸಮೃದ್ಧ ಬಳ್ಳಾರಿ ಪ್ರದೇಶಕ್ಕೆ ಸಂಪರ್ಕವನ್ನು ಉತ್ತಮಗೊಳಿಸುತ್ತದೆ. ವಾರ್ಷಿಕ 25 ಮಿಲಿಯನ್ ಟನ್ ಹೆಚ್ಚುವರಿ ಸರಕು ಸಾಗಣೆಗೆ ಅನುಕೂಲ ಮಾಡಿಕೊಡುತ್ತದೆ. ಈ ಯೋಜನೆಯಿಂದ ಪ್ರತಿ ವರ್ಷ 323 ಕೋಟಿ ಲಾಜಿಸ್ಟಿಕ್ಸ್ ವೆಚ್ಚ ಉಳಿತಾಯವಾಗಲಿದೆ.

ಇದನ್ನೂ ಓದಿ: ಮಹಾರಾಷ್ಟ್ರದ ನಾಂದೇಡ್​ ಮತ್ತು ಬೀದರ್ ನಡುವಿನ ರೈಲು ಮಾರ್ಗ ಯೋಜನೆ ವಿಳಂಬಕ್ಕೆ ಕಾರಣ ಬಯಲು!

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ರೈಲ್ವೆ ಸಚಿವಾಲಯದ ಸುಮಾರು 18,509 ಕೋಟಿ ರೂ. ವೆಚ್ಚದ ಮೂರು ಯೋಜನೆಗಳನ್ನು ಅನುಮೋದಿಸಿದೆ. ಈ ಯೋಜನೆಗಳಲ್ಲಿ ಕಸರಾ-ಮನ್ಮಾಡ್, ದೆಹಲಿ-ಅಂಬಾಲ ಮತ್ತು ಬಳ್ಳಾರಿ-ಹೊಸಪೇಟೆ ನಡುವಿನ ಮೂರನೇ ಮತ್ತು ನಾಲ್ಕನೇ ಮಾರ್ಗಗಳ ನಿರ್ಮಾಣವೂ ಸೇರಿದೆ.

65 ಕಿ.ಮೀ ಉದ್ದದ ಬಳ್ಳಾರಿ-ಹೊಸಪೇಟೆ ಮೂರನೇ ಮತ್ತು ನಾಲ್ಕನೇ ರೈಲು ಮಾರ್ಗ ಯೋಜನೆಯು 34 ಪ್ರಮುಖ ಸೇತುವೆಗಳು ಮತ್ತು 220 ಸಣ್ಣ ಸೇತುವೆಗಳನ್ನು ಒಳಗೊಂಡಿರುತ್ತದೆ. ಇದರ ಜೊತೆಗೆ, ಈ ಯೋಜನೆಯು 11 ರಸ್ತೆ ಓವರ್ ಬ್ರಿಡ್ಜ್‌ಗಳು (ROBಗಳು) ಮತ್ತು 14 ರಸ್ತೆ ಕೆಳ ಸೇತುವೆಗಳನ್ನು (RUBಗಳು) ಒಳಗೊಂಡಿರುತ್ತದೆ. ಈ ಯೋಜನೆಯ ಒಟ್ಟು ಹಳಿಗಳ ಉದ್ದ 149 ಕಿ.ಮೀ. ಬಳ್ಳಾರಿ-ಹೊಸಪೇಟೆ ಮೂರನೇ ಮತ್ತು ನಾಲ್ಕನೇ ರೈಲು ಮಾರ್ಗ ಯೋಜನೆಯನ್ನು 4 ವರ್ಷಗಳಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಈ ಯೋಜನೆಯು ರೈಲು ಸಾಮರ್ಥ್ಯ ಮತ್ತು ಸಂಪರ್ಕವನ್ನು ಹೆಚ್ಚಿಸುವ ಮೂಲಕ ಕರ್ನಾಟಕದ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಿಗೆ ಭಾರೀ ಪ್ರಯೋಜನ ನೀಡುವ ನಿರೀಕ್ಷೆಯಿದೆ.

ಇದನ್ನೂ ಓದಿ: RailOne app : ರೈಲು ಪ್ರಯಾಣಿಕರೇ ಗಮನಿಸಿ; ಹಲವು ಆ್ಯಪ್​ಗಳ ಬದಲು ಈ ಒಂದೇ ಆ್ಯಪ್​ನಲ್ಲಿ ಸಿಗಲಿದೆ ಎಲ್ಲ ರೈಲ್ವೆ ಸೇವೆ

ದೆಹಲಿ, ಹರಿಯಾಣ, ಮಹಾರಾಷ್ಟ್ರ ಮತ್ತು ಕರ್ನಾಟಕದಾದ್ಯಂತ 12 ಜಿಲ್ಲೆಗಳನ್ನು ವ್ಯಾಪಿಸಿರುವ 3 ಪ್ರಮುಖ ಬಹು-ಪಥ ನಿರ್ಮಾಣ ರೈಲ್ವೆ ಯೋಜನೆಗಳಿಗೆ ಒಟ್ಟು 18,509 ಕೋಟಿ ರೂ. ಹೂಡಿಕೆಯ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳನ್ನು ಪ್ರಧಾನ ಮಂತ್ರಿ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಯೋಜಿಸಲಾಗಿದೆ. ಈ ಯೋಜನೆಗಳು ಅಸ್ತಿತ್ವದಲ್ಲಿರುವ ರೈಲು ಜಾಲಕ್ಕೆ ಸುಮಾರು 389 ಕಿ.ಮೀ.ಗಳನ್ನು ಸೇರಿಸುತ್ತವೆ.

ಈ ರೈಲು ಮಾರ್ಗ ವಿಸ್ತರಣೆಯು ಸುಮಾರು 3,902 ಹಳ್ಳಿಗಳಿಗೆ ರೈಲು ಸಂಪರ್ಕವನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಸುಮಾರು 97 ಲಕ್ಷ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಹಾಗೇ, ಉತ್ತಮ ಸಂಪರ್ಕವು ಒಳಗೊಂಡಿರುವ ಪ್ರದೇಶಗಳಲ್ಲಿ ಹೊಸ ಉದ್ಯೋಗ ಮತ್ತು ಸ್ವ-ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಪ್ರೇಮಿಗಳ ದಿನಾಚರಣೆ: ಪಾರು-ದೇವದಾಸ್ ಬದಲಿಗೆ ಚಂದ್ರ-ದೇವದಾಸ್ ಪ್ರೇಮಕತೆ – Kannada News | Lokesh Kanagaraj starrer DC Movie promo released

ಭಾರತದ ಜನಪ್ರಿಯ ಪ್ರೇಮಕತೆಗಳೆಂದರೆ ಪಾರು-ದೇವದಾಸ್ ಕತೆ ನೆನಪಿಗೆ ಬರುತ್ತದೆ. ಹಲವಾರು ಭಾಷೆಗಳಲ್ಲಿ ಪಾರು-ದೇವದಾಸ್ ಕತೆ ಸಿನಿಮಾ ಸಹ ಆಗಿದೆ. ಪ್ರತಿ ಬಾರಿಯೂ ಪಾರು-ದೇವದಾಸ್ ಕತೆಯನ್ನು ಬೇರೆ ಬೇರೆ ರೀತಿಯಲ್ಲಿ ಹೇಳಲಾಗಿದೆ. ಆದರೆ ಇದೇ ಮೊದಲ ಬಾರಿಗೆ ದೇವದಾಸ್ ಮತ್ತು ಚಂದ್ರ ಪ್ರೇಮಕತೆ ತೆರೆ ಮೇಲೆ ಬರಲು ಸಜ್ಜಾಗಿದೆ. ದೇವದಾಸ್-ಪಾರು ಪ್ರೇಮಕತೆಯಲ್ಲಿ ಬರುವ ವೇಶ್ಯೆಯ ಹೆಸರು ಚಂದ್ರ. ದೇವದಾಸ್-ಪಾರು ಕತೆಯಲ್ಲಿ ಚಂದ್ರ ಒಂದು ರೀತಿ ಪೋಷಕ ಪಾತ್ರವಷ್ಟೆ ಆದರೆ ಈಗ ನಿರ್ದೇಶಕರೊಬ್ಬರು ಚಂದ್ರ ಅನ್ನೇ ನಾಯಕಿಯನ್ನಾಗಿಸಿ ದೇವದಾಸ್ ಮತ್ತು ಚಂದ್ರ ಪ್ರೇಮಕತೆಯನ್ನು ಸಿನಿಮಾ ಮಾಡಲು ಮುಂದಾಗಿದ್ದಾರೆ. ಸಿನಿಮಾದ ಹೆಸರು ‘ಡಿಸಿ’ (ದೇವದಾಸ್-ಚಂದ್ರ).

‘ಕೈದಿ’, ‘ಲಿಯೊ’, ‘ವಿಕ್ರಂ’, ‘ಕೂಲಿ’ ಸಿನಿಮಾಗಳ ನಿರ್ದೇಶಕ ಲೋಕೇಶ್ ಕನಕರಾಜ್ ಇದೀಗ ನಾಯಕನಾಗಿ ಎಂಟ್ರಿ ಕೊಟ್ಟಿದ್ದು, ‘ಡಿಸಿ’ ಸಿನಿಮಾ ಮೂಲಕ ಅವರು ನಾಯಕನಾಗಿದ್ದಾರೆ. ಇದು ಆಧುನಿಕ ದೇವದಾಸ್ ಮತ್ತು ಚಂದ್ರ ಅವರುಗಳ ಕತೆಯಾಗಿದ್ದು, ‘ಡಿಸಿ’ ಸಿನಿಮಾದ ಟೀಸರ್ ಇಂದು (ಫೆಬ್ರವರಿ 14) ಬಿಡುಗಡೆ ಆಗಿದೆ. ಈಗ ಬಿಡುಗಡೆ ಆಗಿರುವ ಟೀಸರ್​​ನಲ್ಲಿ ಭರ್ಜರಿ ರಕ್ತದೋಕುಳಿಯೇ ಹರಿದಿದ್ದು, ಇದೇ ಕಾರಣಕ್ಕೆ ‘ಬ್ಲಡಿ ಲವ್ ಸ್ಟೋರಿ’ (ರಕ್ತ-ಸಿಕ್ತ ಪ್ರೇಮಕತೆ) ಎಂದು ‘ಡಿಸಿ’ ಸಿನಿಮಾವನ್ನು ಕರೆದಿದ್ದಾರೆ ನಿರ್ದೇಶಕ.

ಲೋಕೇಶ್ ಕನಕರಾಜ್ ಅವರು ‘ದೇವದಾಸ್’ ಪಾತ್ರದಲ್ಲಿ ಕಾಣಿಸಿಕೊಂಡರೆ, ಅವರಿಗೆ ಜೋಡಿಯಾಗಿ ಬಾಲಿವುಡ್ ನಟಿ ವಾಮಿಕಾ ಗಬ್ಬಿ ‘ಚಂದ್ರ’ ಎಂಬ ವೇಶ್ಯೆಯ ಪಾತ್ರದಲ್ಲಿ ನಟಿಸಿದ್ದಾರೆ. ನಟಿ ಸಂಜನಾ ಕೃಷ್ಣಮೂರ್ತಿ ‘ಪಾರ್ವತಿ’ ಎಂಬ ಪ್ರಮುಖ ಪಾತ್ರದಲ್ಲಿದ್ದಾರೆ. ಈಗ ಬಿಡುಗಡೆ ಆಗಿರುವ ಟೀಸರ್ ಗಮನಿಸಿದರೆ ಪ್ರೇಮಭಂಗ ಅನುಭವಿಸಿದ ವ್ಯಕ್ತಿಯ ಮೇಲೆ ವೇಶ್ಯೆಗೆ ಪ್ರೀತಿ ಆಗುವ ಬಳಿಕ ನಾಯಕ ವೇಶ್ಯೆ ಹಾಗೂ ಮೊದಲ ಪ್ರೀತಿಯ ನಡುವೆ ಯಾವುದನ್ನು ಆರಿಸಿಕೊಳ್ಳುತ್ತಾನೆ ಎಂಬ ತಿಕ್ಕಾಟಗಳನ್ನು ಹೊಂದಿರುವ ಕತೆ ಇದೆಂಬುದರ ಸುಳಿವು ಸಿಗುತ್ತದೆ.

ಇದನ್ನೂ ಓದಿ:ಈ ವಾರವೂ ಒಟಿಟಿಗೆ ಬಂದಿವೆ ಹಿಟ್ ಸಿನಿಮಾಗಳು: ಪಟ್ಟಿ ಇಲ್ಲಿದೆ

ಧನುಶ್ ಮತ್ತು ಶಿವರಾಜ್ ಕುಮಾರ್ ನಟಿಸಿದ್ದ ‘ಕ್ಯಾಪ್ಟನ್ ಮಿಲ್ಲರ್’ ಮತ್ತು ‘ರಾಕಿ’ ಸಿನಿಮಾಗಳನ್ನು ನಿರ್ದೇಶಿಸಿದ್ದ ಅರುಣ್ ಮಟ್ಟೇಶ್ವರನ್ ಈ ‘ಡಿಸಿ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಲೋಕೇಶ್ ಅವರ ಆಪ್ತ ಗೆಳೆಯ ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಇಂದು ಬಿಡುಗಡೆಯಾದ ಪ್ರೋಮೋ ದೇವದಾಸನ ಹಳೆಯ ಕಥೆಯನ್ನು ಆಧುನಿಕ ಗ್ಯಾಂಗ್‌ಸ್ಟರ್ ಹಿನ್ನೆಲೆಯಲ್ಲಿ ತೋರಿಸುವಂತಿದೆ. ರಕ್ತಸಿಕ್ತ ಕೈಯಲ್ಲಿ ಚಾಕು ಹಿಡಿದು ಲೋಕೇಶ್ ಅವರು ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ. ಪ್ರೀತಿ ಮತ್ತು ಹಿಂಸೆಯ ಸಮ್ಮಿಶ್ರಣವಾಗಿರುವ ಈ ಚಿತ್ರವು ‘ಬ್ಲಡಿ ವ್ಯಾಲೆಂಟೈನ್’ ಎಂಬ ಥೀಮ್ ಹೊಂದಿದೆ.

ಸನ್ ಪಿಕ್ಚರ್ಸ್ ನಿರ್ಮಾಣದ ಈ ಸಿನಿಮಾ 2026ರ ಬೇಸಿಗೆಯಲ್ಲಿ ತೆರೆಗೆ ಬರಲು ಸಜ್ಜಾಗಿದೆ. ನಿರ್ದೇಶಕನಾಗಿ ಯಶಸ್ಸು ಕಂಡಿರುವ ಲೋಕೇಶ್, ಈಗ ನಟನಾಗಿ ಎಷ್ಟು ಪ್ರಭಾವ ಬೀರಲಿದ್ದಾರೆ ಎಂದು ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:19 pm, Sat, 14 February 26

Source link