All posts by nagaraj11081993

ಈ ವಾರ ಕನ್ನಡ ಸಿನಿಮಾಗಳ ನಡುವೆ ಭರ್ಜರಿ ಪೈಪೋಟಿ: ಯಾವ ಚಿತ್ರಗಳು ರಿಲೀಸ್? – Kannada News | Vikalpa Valavaara and other Kannada movies releasing on 30 January

2026ನೇ ಸಾಲಿನ ಮೊದಲ ತಿಂಗಳು ಕೊನೆಗೊಳ್ಳುತ್ತಿದೆ. ‘ಲ್ಯಾಂಡ್​ಲಾರ್ಡ್’ ಮತ್ತು ‘ಕಲ್ಟ್’ ಸಿನಿಮಾಗಳಿಂದ ಕನ್ನಡ ಚಿತ್ರರಂಗ (Kannada Film Industry) ಉತ್ತಮ ಓಪನಿಂಗ್ ಪಡೆದುಕೊಂಡಿತು. ಜನವರಿ ಕೊನೇ ವಾರದಲ್ಲಿ ಒಂದಷ್ಟು ಹೊಸ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಬೇರೆ ಬೇರೆ ಪ್ರಕಾರದ ಸಿನಿಮಾಗಳು ತೆರೆಕಾಣುತ್ತಿವೆ. ‘ವಲವಾರ’, ‘ವಿಕಲ್ಪ’, ‘ಅಮೃತ ಅಂಜನ್’, ‘ರಕ್ತ ಕಾಶ್ಮೀರ’, ‘ಸೀಟ್ ಎಡ್ಜ್’, ‘ಚೌಕಿದಾರ್’ (Chowkidar) ಮುಂತಾದ ಸಿನಿಮಾಗಳು ಪ್ರೇಕ್ಷಕರ ಎದುರು ಬರುತ್ತಿವೆ. ಆ ಮೂಲಕ ಸಿನಿಪ್ರಿಯರಿಗೆ ಹೆಚ್ಚಿನ ಆಯ್ಕೆ ಸಿಗುತ್ತಿದೆ. ಜನವರಿ 30ರಂದು ತೆರೆಕಾಣಲಿರುವ ಸಿನಿಮಾಗಳ (Kannada Cinema) ಬಗ್ಗೆ ಇಲ್ಲಿದೆ ಮಾಹಿತಿ..

ವಲವಾರ: ಟ್ರೇಲರ್ ಮೂಲಕ ‘ವಲವಾರ’ ಸಿನಿಮಾ ಗಮನ ಸೆಳೆದಿತ್ತು. ಈ ಸಿನಿಮಾದಲ್ಲಿ ಮಕ್ಕಳು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಟ್ರೇಲರ್ ನೋಡಿದ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಸುತನ್ ಗೌಡ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಬಿಡುಗಡೆಗೂ ಮುನ್ನ ಪ್ರೀಮಿಯರ್ ಶೋಗಳ ಮೂಲಕ ‘ವಲವಾರ’ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ಅಮೃತ ಅಂಜನ್: ಯೂಟ್ಯೂಬ್ ಕಿರುಚಿತ್ರಗಳ ಮೂಲಕ ಫೇಮಸ್ ಆದ ಕಲಾವಿದರು ಸೇರಿಕೊಂಡು ‘ಅಮೃತ ಅಂಜನ್’ ಸಿನಿಮಾ ಮಾಡಿದ್ದಾರೆ. ಸುಧಾಕರ್ ಗೌಡ, ಪಾಯಲ್ ಚಂಗಪ್ಪ, ಗೌರವ್ ಶೆಟ್ಟಿ, ಕಾರ್ತಿಕ್ ಶ್ರೀಭಾಗ್ಯ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕಾಮಿಡಿ ಇಷ್ಟಪಡುವ ಪ್ರೇಕ್ಷಕರು ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಕಾಂತಾರ, ಕೆಜಿಎಫ್ ಸಿನಿಮಾಗಳಿಂದ ಮಾತ್ರ ಚಿತ್ರರಂಗ ಬೆಳೆಯಲ್ಲ: ಪ್ರಿಯಾ ಹಾಸನ್

ರಕ್ತ ಕಾಶ್ಮೀರ: ಹಲವು ವರ್ಷಗಳ ಹಿಂದೆಯೇ ಚಿತ್ರೀಕರಣಗೊಂಡಿದ್ದ ‘ರಕ್ತ ಕಾಶ್ಮೀರ’ ಸಿನಿಮಾ ಈಗ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ರಮ್ಯಾ ದಿವ್ಯ ಸ್ಪಂದನಾ, ಉಪೇಂದ್ರ ಅವರು ಮುಖ್ಯ ಪಾತ್ರಗಳನ್ನು ಮಾಡಿದ್ದಾರೆ. ವಿಶೇಷ ಹಾಡಿನಲ್ಲಿ ದರ್ಶನ್, ಪುನೀತ್ ರಾಜ್​ಕುಮಾರ್, ವಿಷ್ಣುವರ್ಧನ್, ಅಂಬರೀಷ್, ರಮೇಶ್ ಅರವಿಂದ್, ಆದಿತ್ಯ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.

ವಿಕಲ್ಪ: ಸೈಕಲಾಜಿಕಲ್ ಕಥಾಹಂದರ ಹೊಂದಿರುವ ‘ವಿಕಲ್ಪ’ ಸಿನಿಮಾ ಸಹ ರಿಲೀಸ್ ಆಗುತ್ತಿದೆ. ಬೆಂಗಳೂರು ಮತ್ತು ಮಲೆನಾಡಿನ ಭಾಗದಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆದಿದೆ. ಪೃಥ್ವಿರಾಜ್ ಪಾಟೀಲ್ ಅವರು ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಭೂಮಿಕೆಯಲ್ಲೂ ನಟಿಸಿದ್ದಾರೆ. ನಾಗಶ್ರೀ ಹೆಬ್ಬಾರ್, ಆಯುಷ್, ಗಣಪತಿ ಹೆಗಡೆ, ಸ್ವರೂಪ್, ಸಂಧ್ಯಾ, ಪೂಜಾ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ: ಬೆಂಗಳೂರು ವಿವಿ ವಿದ್ಯಾರ್ಥಿಗಳ ಜೊತೆ ‘ಲ್ಯಾಂಡ್​ಲಾರ್ಡ್’ ವಿಜಯ್ ಜಾಥಾ

ಸೀಟ್ ​ಎಡ್ಜ್: ಯೂಟ್ಯೂಬ್ ವ್ಲಾಗರ್ ಕಹಾನಿ ಇರುವ ‘ಸೀಟ್ ಎಡ್ಜ್’ ಸಿನಿಮಾದಲ್ಲಿ ಸಿದ್ದು ಮೂಲಿಮನಿ ಅವರು ನಟಿಸಿದ್ದಾರೆ. ಹೊಸ ತಲೆಮಾರಿನ ಪ್ರೇಕ್ಷಕರಿಗೆ ಇಷ್ಟ ಆಗುವಂತಹ ಕಹಾನಿ ಈ ಸಿನಿಮಾದಲ್ಲಿ ಇದೆ. ಹಾರರ್, ಥ್ರಿಲ್ಲರ್ ಪ್ರಕಾರದ ಈ ಸಿನಿಮಾದಲ್ಲಿ ರವೀಕ್ಷಾ ಶೆಟ್ಟಿ, ರಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ ಮುಂತಾದ ಕಲಾವಿದರು ನಟಿಸಿದ್ದಾರೆ.

ಚೌಕಿದಾರ್: ಪೃಥ್ವಿ ಅಂಬಾರ್ ಅವರು ‘ಚೌಕಿದಾರ್’ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ಧನ್ಯಾ ರಾಮ್​ಕುಮಾರ್, ಸಾಯಿಕುಮಾರ್, ಸುಧಾರಾಣಿ, ಶ್ವೇತಾ ವಿನೋಧಿನಿ ಮುಂತಾದವರು ನಟಿಸಿದ್ದಾರೆ. ಫ್ಯಾಮಿಲಿ ಸೆಂಟಿಮೆಂಟ್ ಕಥೆ ಈ ಸಿನಿಮಾದಲ್ಲಿದೆ. ಈ ಸಿನಿಮಾಗಳ ಜೊತೆ ‘ಶ್ರೀಜಗನ್ನಾಥ ದಾಸರು 2’, ‘ಮಾವುತ’ ಮುಂತಾದ ಸಿನಿಮಾಗಳು ಕೂಡ ಬಿಡುಗಡೆ ಆಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೇರೆ ದೇಶಗಳ ಸಿನಿಮಾ ಯಾಕೆ ನೋಡಬೇಕು? ವಿವರಿಸಿದ ಸಿಎಂ ಸಿದ್ದರಾಮಯ್ಯ – Kannada News | CM Siddaramaiah speech in 17th Bengaluru International Film Festival Inauguration

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ (BIFFes) ಉದ್ಘಾಟಿಸಿ ಮಾತನಾಡಿದರು. ‘ಈ ಬಾರಿ 70 ದೇಶಗಳ ಆಯ್ದ ಸುಮಾರಿ 240 ಸಿನಿಮಾಗಳ ಪ್ರದರ್ಶನ ಆಗಲಿದೆ. ರಾಯಬಾರಿಯಾಗಿ ಪ್ರಕಾಶ್ ರಾಜ್ ಅವರನ್ನು ಆಯ್ಕೆ ಮಾಡಿದ್ದೇನೆ. ಅವರು ಬರೀ ಸಿನಿಮಾಗೆ ಸೀಮಿತ ಆಗಿಲ್ಲ. ಸಾಮಾಜಿಕ ಹೋರಾಟದಲ್ಲಿ ಕೂಡ ಭಾಗಿ ಆಗಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು. ಕಳೆದ ಬಾರಿ ಸರ್ವ ಜನಾಂಗದ ಶಾಂತಿಯ ತೋಟ ಥೀಮ್​​ನಲ್ಲಿ ಚಿತ್ರೋತ್ಸವ ಮಾಡಲಾಗಿತ್ತು. ಈಗ ಬಾರಿ ‘ಸ್ರೀ ಎಂದರೆ ಅಷ್ಟೇ ಸಾಕೆ’ ಎಂಬ ಥೀಮ್ ಆಯ್ಕೆ ಮಾಡಿದ್ದೇನೆ. ಚಲನಚಿತ್ರ ಬರೀ ಮನರಂಜನೆಗೆ ಸೀಮಿತವಾಗಿರುವುದು ಅಲ್ಲ. ಸಮಾಜದಲ್ಲಿ ಇರುವ ಅಂಕುಡೊಂಕು ತಿದ್ದುವ ಕೆಲಸ ಆಗಬೇಕು’ ಎಂದು ಸಿದ್ದರಾಮಯ್ಯ (CM Siddaramaiah) ಹೇಳಿದರು.

‘ಸಮಾಜದಲ್ಲಿ ಇಂದು ಅಸಮಾನತೆ, ಬಡತನ ಇದೆ. ದಲಿತರು, ರೈತರು, ಕಾರ್ಮಿಕರು, ಮಹಿಳೆಯರು, ಹಿಂದುಳಿದವರು, ಅಲ್ಪಸಂಖ್ಯಾತರು ಇದ್ದಾರೆ. ಅವರ ವಾಸ್ತವ ಸ್ಥಿತಿಯನ್ನು ಸಿನಿಮಾಗಳು ಜಗತ್ತಿನ ಮುಂದೆ ಇಡಬೇಕು. ಈ ಕೆಲಸವನ್ನು ರಾಜ್​​ಕುಮಾರ್ ಅವರ ಸಿನಿಮಾಗಳು ಯಶಸ್ವಿಯಾಗಿ ಮಾಡಿದ್ದನ್ನು ನಾವು ನೋಡಿದ್ದೇನೆ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಯಾಕೆ ಮಾಡುತ್ತೇವೆ ಎಂದರೆ, ಬೇರೆ ದೇಶಗಳ ಜನಜೀವನ, ರಾಜಕೀಯ, ಸಮಾಜ, ಪುರುಷರು-ಮಹಿಳೆಯರ ಸ್ಥಿತಿಗತಿ ಮುಂತಾದ್ದನ್ನು ಅರ್ಥ ಮಾಡಿಕೊಳ್ಳೋದು ಮುಖ್ಯ’ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

‘ಚಲನಚಿತ್ರೋತ್ಸವ ಒಂದು ಸುವರ್ಣ ಅವಕಾಶ. ಈ ಅವಕಾಶ ಬಳಸಿಕೊಂಡು ನಾವು ಸಮಾಜದಲ್ಲಿ ಬದಲಾವಣೆ ತರುವ ಕೆಲಸ ಮಾಡಬೇಕು. ಸಮಾಜದಲ್ಲಿ ಬದಲಾವಣೆ ಆಗದೇ ಇದ್ದರೆ ಸಿನಿಮಾಗಳು ಕೇವಲ ಮನರಂಜನೆಗೆ ಇರುವ ವಸ್ತುಗಳು ಆಗುತ್ತವೆ. ನಾವೆಲ್ಲ ಮನುಷ್ಯರು. ಮನುಷ್ಯರಾಗಿಯೇ ಬಾಳಬೇಕಾಗಿರುವುದು ಅತ್ಯಂತ ಅವಶ್ಯಕ’ ಎಂದರು ಸಿದ್ದರಾಮಯ್ಯ.

‘ನಾವು ಪ್ರತಿ ವ್ಯಕ್ತಿಯನ್ನು ಪ್ರೀತಿ, ಸ್ನೇಹದಿಂದ ಕಾಣಬೇಕು. ಆಗ ಮಾತ್ರ ಸಮಾನತೆಯ ಸಮಾಜ ಕಟ್ಟಲು ಸಾಧ್ಯತೆ ಆಗುತ್ತದೆ. ಅಸಮಾನತೆಯನ್ನು ಹೋಗಲಾಡಿಸುವ ಕೆಲಸವನ್ನು ಸಿನಿಮಾ ಮಾಧ್ಯಮದ ಮೂಲಕ ಮಾಡಬೇಕು. ಬೇರೆ ದೇಶಗಳಲ್ಲಿ ಯಾಕೆ ಬದಲಾವಣೆ ಆಗಿದೆ? ನಮ್ಮಲ್ಲಿ ಯಾಕೆ ಬದಲಾವಣೆ ಆಗಿಲ್ಲ ಎಂಬುದನ್ನು ಸಿನಿಮಾಗಳ ಮೂಲಕ ಅರ್ಥ ಮಾಡಿಕೊಳ್ಳಬಹುದು’ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ನೋಡಿ: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ವಿಡಿಯೋ ನೋಡಿ..

‘ನಮ್ಮ ಸರ್ಕಾರ ಎಲ್ಲ ರೀತಿಯ ಸಹಕಾರವನ್ನು ಸಿನಿಮಾರಂಗದ ಅಭಿವೃದ್ಧಿಗೆ ನೀಡುತ್ತೇವೆ. ನಮ್ಮ ಬದುಕನ್ನು ಹಸನು ಮಾಡುವಂತಹ ಸಿನಿಮಾಗಳು ಕನ್ನಡದಲ್ಲಿ ಬರಲಿ. ಈ ಚಲನಚಿತ್ರೋತ್ಸವ ಯಶಸ್ವಿ ಆಗಲಿ. ಜೈಹಿಂದ್, ಜೈ ಕರ್ನಾಟಕ, ಜೈ ಸಂವಿಧಾನ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣ ಪೂರ್ಣಗೊಳಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬರಲಿವೆ ನೋಟು ಬದಲಿಸಿ ಚಿಲ್ಲರೆ ಕೊಡುವ ಹೈಬ್ರಿಡ್ ಎಟಿಎಂಗಳು – Kannada News | Govt plans Hybrid ATMs that dispense smaller denomination notes

ನವದೆಹಲಿ, ಜನವರಿ 29: ಡಿಜಿಟಲ್ ಟ್ರಾನ್ಸಾಕ್ಷನ್ ವ್ಯಾಪಕವಾಗಿ ಹೆಚ್ಚಾಗಿದ್ದರೂ ಕ್ಯಾಷ್ ವಹಿವಾಟು (cash transactions) ಕೂಡ ಸಾಕಷ್ಟು ನಡೆಯುತ್ತದೆ. 10, 20, 50 ಇತ್ಯಾದಿ ಸಣ್ಣ ಸಣ್ಣ ಮೊತ್ತದ ನೋಟುಗಳು ಕೆಲವೊಮ್ಮೆ ಬಹಳ ಅಗತ್ಯ ಬೀಳುತ್ತವೆ. ಚಿಲ್ಲರೆ ಅಂಗಡಿಯಲ್ಲಿ 500 ರುಪಾಯಿಗೋ ಅಥವಾ ನೂರು ರುಪಾಯಿಗೋ ಚಿಲ್ಲರೆ ನೀಡಲು ನಿರಾಕರಿಸುತ್ತಾರೆ. ಯುಪಿಐ ಮೂಲಕ ಪಾವತಿಸಲಾಗದವರಿಗೆ ಈ ಸಂದರ್ಭ ಕಷ್ಟವಾಗಬಹುದು. ಇದನ್ನು ತಪ್ಪಿಸಲು ಸರ್ಕಾರ ಹೈಬ್ರಿಡ್ ಎಟಿಎಂ ಮೆಷೀನ್​ಗಳನ್ನು ಅಳವಡಿಸಲು ಯೋಜಿಸಿದೆ ಎಂದು ವರದಿಗಳು ಹೇಳುತ್ತಿವೆ.

ಈಗಿರುವ ಎಟಿಎಂ ಮೆಷೀನ್​ಗಳಲ್ಲಿ 500 ರೂ ಮತ್ತು 100 ರೂ ನೋಟುಗಳು ಸಿಗುತ್ತವೆ. ಸರ್ಕಾರ ಪ್ಲಾನ್ ಮಾಡಿರುವ ಹೊಸ ಎಟಿಎಂ ಮೆಷೀನ್​ಗಳು 10 ರೂ, 20 ರೂ ಮತ್ತು 50 ರೂ ನೋಟುಗಳನ್ನು ಡಿಸ್ಪೆನ್ಸ್ ಮಾಡುತ್ತವೆ.

ಇದನ್ನೂ ಓದಿ: ಎಐ ಕ್ಷೇತ್ರದ ಭಾರತೀಯ ಕಂಪನಿಗಳ ಸಿಇಒಗಳು, ಪರಿಣಿತರ ಜೊತೆ ಪ್ರಧಾನಿ ಮೋದಿ ಸಭೆ

ಹಾಗೆಯೇ, ಈ ಎಟಿಎಂಗಳಲ್ಲಿ ನೋಟು ವಿನಿಮಯಕ್ಕೂ ಅವಕಾಶ ಕೊಡುವ ಪ್ರಸ್ತಾಪವೂ ಸರ್ಕಾರದ ಮುಂದಿದೆ ಎನ್ನಲಾಗಿದೆ. ಈ ಪ್ರಸ್ತಾಪದ ಪ್ರಕಾರ, ನೀವು ನಿಮ್ಮಲ್ಲಿರುವ 100 ರೂ ಅಥವಾ 500 ರೂ ನೋಟುಗಳನ್ನು ಎಟಿಎಂಗೆ ಫೀಡ್ ಮಾಡಿದರೆ, ಆ ಮೌಲ್ಯದಷ್ಟು ಸಣ್ಣ ನೋಟುಗಳನ್ನು ಮರಳಿಸುತ್ತದೆ. ಇಂಥ ಹೈಬ್ರಿಡ್ ಎಟಿಎಂಗಳನ್ನು ಸ್ಥಾಪಿಸುವ ಉದ್ದೇಶ ಸರ್ಕಾರಕ್ಕೆ ಇದೆ.

ವರದಿಗಳ ಪ್ರಕಾರ ಮುಂಬೈನಲ್ಲಿ ಈಗಾಗಲೇ ಈ ಹೈಬ್ರಿಡ್ ಎಟಿಎಂಗಳನ್ನು ಕೆಲವೆಡೆ ಪ್ರಾಯೋಗಿಕವಾಗಿ ಸ್ಥಾಪಿಸಿ ಪರೀಕ್ಷಿಸಲಾಗುತ್ತಿದೆ. ಸ್ಥಳೀಯ ಮಾರುಕಟ್ಟೆ, ರೈಲ್ವೆ ಸ್ಟೇಷನ್, ಬಸ್ ಡಿಪೋ, ಆಸ್ಪತ್ರೆ, ಸರ್ಕಾರಿ ಕಚೇರಿ ಇತ್ಯಾದಿ ಕ್ಯಾಷ್ ಬಳಕೆ ಹೆಚ್ಚಿರುವ ಪ್ರದೇಶಗಳಲ್ಲಿ ಇಂಥ ಪ್ರಾಯೋಗಿಕ ಹೈಬ್ರಿಡ್ ಎಟಿಎಂಗಳನ್ನು ಸ್ಥಾಪಿಸಿ ಪರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: ಎಲೆಕ್ಟ್ರಿಕ್ ಕಾರು ಬ್ಯಾಟರಿ ದೀರ್ಘ ಬಾಳಿಕೆ ಬರಬೇಕಾ? ಇಲ್ಲಿದೆ ಏಳು ಟಿಪ್ಸ್

ಹೈಬ್ರಿಡ್ ಎಟಿಎಂಗಳ ಬಳಕೆಗೆ ಶುಲ್ಕ ಇರುತ್ತದಾ?

ಎಟಿಎಂಗಳನ್ನು ಸ್ಥಾಪಿಸಲು ಬ್ಯಾಂಕುಗಳಿಗೆ ವೆಚ್ಚವಾಗುತ್ತದೆ. ಸ್ಥಾಪನೆ ವೆಚ್ಚ ಹಾಗೂ ಮೈಂಟನೆನ್ಸ್ ವೆಚ್ಚವೂ ಇರುತ್ತದೆ. ಹೀಗಾಗಿ, ಗ್ರಾಹಕರಿಂದ ಇಂತಿಷ್ಟು ಶುಲ್ಕ ಪಡೆಯುವ ಸಾಧ್ಯತೆ ಇಲ್ಲದಿಲ್ಲ. ಸಣ್ಣ ಮೊತ್ತದ ನೋಟುಗಳನ್ನು ಸರ್ಕಾರ ಹೆಚ್ಚೆಚ್ಚು ಮುದ್ರಿಸಬೇಕಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗಾಳಿಪಟಕ್ಕೆ ದಾರ ಕೊಡಿಸಲಿಲ್ಲವೆಂದು 11 ವರ್ಷದ ಬಾಲಕ ಆತ್ಮಹತ್ಯೆ – Kannada News | Punjab village child hang himself after his Family not agreed to buy kite thread

ನವದೆಹಲಿ, ಜನವರಿ 29: ಗಾಳಿಪಟ (Kite) ಹಾರಿಸಲು ದಾರ ಕೊಡಿಸಲಿಲ್ಲ ಎಂದು ಮನನೊಂದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಂಜಾಬ್​​ನಲ್ಲಿ ನಡೆದಿದೆ. 11 ವರ್ಷದ ಬಾಲಕನೊಬ್ಬ ಗಾಳಿಪಟ ಹಾರಿಸಲು ದಾರ ಕೊಡಿಸಿ ಎಂದು ಮನೆಯವರ ಬಳಿ ಒತ್ತಾಯಿಸಿದ್ದ. ಅದಕ್ಕೆ ಅವರು ಒಪ್ಪಿರಲಿಲ್ಲ. ಹೋಗಿ ಓದಿಕೋ ಎಂದು ಅವರು ಗದರಿ ರೂಂಗೆ ಕಳುಹಿಸಿದ್ದರು. ಸ್ವಲ್ಪ ಹೊತ್ತಾದ ಮೇಲೆ ರೂಂ ಬಳಿ ಹೋಗಿ ನೋಡಿದಾಗ ಆ ರೂಂ ಒಳಗಿಂದ ಲಾಕ್ ಆಗಿತ್ತು. ಆ ಬಾಲಕನನ್ನು ಕರೆದರೂ ಪ್ರತಿಕ್ರಿಯೆ ಬರಲಿಲ್ಲ.

ಅನುಮಾನದಿಂದ ಕುಟುಂಬದ ಸದಸ್ಯರು ಬಾಗಿಲು ಒಡೆದು ಒಳಗೆ ಹೋದಾಗ, ಮಗು ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಕರ್ಟನ್ ರಾಡ್‌ಗೆ ನೇಣು ಬಿಗಿದುಕೊಂಡು ಆ ಬಾಲಕ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಪತ್ನಿ ಹೆರಿಗೆಗೆಂದು ತವರು ಮನೆಗೆ ಹೋಗಿದ್ದಾಗ ಹಳೇ ಪ್ರೇಯಿಸಿ ಜತೆ ಪತಿ ಆತ್ಮಹತ್ಯೆ

ಕಪುರ್ತಲಾ ಜಿಲ್ಲೆಯ ಫಾಗ್ವಾರಾದ ಪನ್ಶ್ತಾ ಗ್ರಾಮದಲ್ಲಿ ಈ ಮಾಡಿಕೊಂಡ ದುರಂತ ಘಟನೆ ನಡೆದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ, ಮಗುವಿನ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ, ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

(ಸೂಚನೆ: ಆತ್ಮಹತ್ಯೆಯನ್ನು ಟಿವಿ9 ಪ್ರಚೋದಿಸುವುದಿಲ್ಲ. ಇದನ್ನು ಕೇವಲ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಆತ್ಮಹತ್ಯೆಯ ಯೋಚನೆ ಬಂದರೆ ಆಪ್ತರೊಂದಿಗೆ ಮಾತನಾಡಿ ಅಥವಾ ಮನಶಾಸ್ತ್ರಜ್ಞರ ಸಹಾಯ ಪಡೆಯಿರಿ)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರಿ ಆಸ್ಪತ್ರೆ ರೋಗಿಗಳ ಮೊಟ್ಟೆ ಭಾಗ್ಯಕ್ಕೆ ಬ್ರೇಕ್? ಗೊಂದಲ ಮೂಡಿಸಿದ ಇಸ್ಕಾನ್ ನಡೆ – Kannada News | Karnataka government Hospital Food Menu Changes: Eggs Replaced by Soy

ರೋಗಿಗಳಿಗೆ ನೀಡಲಾಗುತ್ತಿರುವ ಊಟImage Credit source: tv9 kannada

ಬೆಂಗಳೂರು, ಜನವರಿ 29: ಸರ್ಕಾರಿ ಆಸ್ಪತ್ರೆ (government Hospital) ಅಂದರೆ ಸಾಕಷ್ಟು ರೋಗಿಗಳು ಆಸ್ಪತ್ರೆಗೆ ಹೋಗುವುದಕ್ಕೆ ಹಿಂಜರಿಯುತ್ತಾರೆ. ಚಿಕಿತ್ಸೆಗಿಂತ ಹೆಚ್ಚಾಗಿ ಊಟ ಸರಿ ಇರಲ್ಲ ಅನ್ನುವ ದೂರುಗಳೇ ಹೆಚ್ಚಾಗಿರುತ್ತದೆ. ಇದೀಗ ಇಂತಹ ದೂರುಗಳನ್ನು ಸರಿ ಪಡಿಸುವುದಕ್ಕೆ ಸರ್ಕಾರ ಮುಂದಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡುವ ಊಟದ ಮೆನು ಬದಲಾವಣೆ ಮಾಡಲಾಗಿದೆ. ಆದರೆ ಈ ಮೆನು ಬದಲಾವಣೆಯೇ ಇದೀಗ ದೊಡ್ಡ ತೊಂದರೆಗೆ ಕಾರಣವಾಗಿದೆ.

ಮೊಟ್ಟೆ ಭಾಗ್ಯಕ್ಕೆ ಬ್ರೇಕ್?

ಬಡ ರೋಗಿಗಳ ಪಾಲಿಗೆ ಸರ್ಕಾರಿ ಆಸ್ಪತ್ರೆಗಳು ವರದಾನವೆಂದು ಹೇಳಬಹುದು. ಆದರೆ ಇಂದಿಗೆ ಅದೆಷ್ಟೋ ಜನ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವುದಕ್ಕೆ ಹಿಂಜರಿಯುವವರು ಇದ್ದಾರೆ. ಇದಕ್ಕೆಲ್ಲಾ ಊಟ ಸರಿ ಇರಲ್ಲ ಎನ್ನುವುದು ಕೂಡ ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು. ಹೀಗಾಗಿ ಆರೋಗ್ಯ ಇಲಾಖೆ ಹೊಸ ಮಾದರಿಯಲ್ಲಿ ಊಟ ನೀಡಲು ಮುಂದಾಗಿದೆ. ಇಸ್ಕಾನ್ ಜೊತೆ ಒಪ್ಪಂದ ಮಾಡಿಕೊಂಡು ಒಳ್ಳೆಯ ರುಚಿಕರ ಊಟ ಕೊಡುತ್ತಿದೆ. ಆದರೆ ಮೊಟ್ಟೆ ಮಾತ್ರ ಊಟದಲ್ಲಿ ನೀಡುತ್ತಿಲ್ಲ. ಇದು ಈಗ ಹೊಸ ಗೊಂದಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಕರ್ನಾಟಕ ಪೊಲೀಸರಿಗೆ ಭರ್ಜರಿ ಗಿಫ್ಟ್, ಕುಟುಂಬಸ್ಥರ ಜತೆ ಕಾಲ ಕಳೆಯಲು ರಜೆ ಭಾಗ್ಯ

ನಗರದ ಕೆಸಿ ಜನರಲ್, ಜಯನಗರ ಹಾಗೂ ಸಿವಿ ರಾಮನ್ ಆಸ್ಪತ್ರೆಗಳಲ್ಲಿ ಊಟದ ಮೆನು ಬದಲಾಯಿಸಲಾಗಿದೆ. ಕಳೆದ 6 ತಿಂಗಳ ಹಿಂದೆಯೇ ಈ ಮೆನು ಬದಲಾವಣೆ ಮಾಡಲಾಗಿತ್ತು. ಇದೀಗ ಇದನ್ನೇ  ರಾಜ್ಯದ ಮತಷ್ಟು ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ಇಸ್ಕಾನ್ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಆರೋಗ್ಯ ಇಲಾಖೆ, ಆಸ್ಪತ್ರೆಗಳಿಗೆ ಇಸ್ಕಾನ್ ಮೂಲಕ ಊಟ, ತಿಂಡಿ ನೀಡಲು ಮುಂದಾಗಿದೆ. ಆದರೆ ಈಗ ಮೆನು ಬದಲಾವಣೆಯಿಂದ ಪ್ರೋಟೀನ್ ಊಟ ಬದಲಾಗಿದೆ. ನ್ಯಾಷನಲ್ ಮೊಟ್ಟೆ ಸ್ಕೀಮ್ ಅಡಿ ಆಸ್ಪತ್ರೆಗಳಲ್ಲಿ ಊಟದ ಜೊತೆ ಒಂದು ಮೊಟ್ಟೆ ನೀಡಲಾಗುತ್ತಿತ್ತು. ಆದರೆ ಈಗ ಇಸ್ಕಾನ್ ದೇವಾಲಯದ ಊಟ ವಿತರಣೆ ಹಿನ್ನೆಲೆ ಮೆನುನಲ್ಲಿ ಮೊಟ್ಟೆಗೆ ಪರ್ಯಾಯವಾಗಿ ಸೋಯಾ ನೀಡಲು ಇಸ್ಕಾನ್ ಮುಂದಾಗಿದೆ. ಇದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದ್ದ ಮೊಟ್ಟೆಗೆ ಬ್ರೇಕ್ ಬಿದ್ದಿದೆ.

ಸರ್ಕಾರಿ ಆಸ್ಪತ್ರೆ ರೋಗಿಗಳ ಮೊಟ್ಟೆ ಭಾಗ್ಯಕ್ಕೆ ಬ್ರೇಕ್ ಹಾಕಿ, ಟು ಸೋಯಾ ಚಂಕ್ಸ್ ನೀಡಲಾಗುತ್ತಿದೆ. ಆ ಮೂಲಕ ರೋಗಿಗಳಿಗೆ ನೀಡಲಾಗುತ್ತಿದ್ದ ಮೊಟ್ಟೆ ಭಾಗ್ಯಕ್ಕೆ ಆರೋಗ್ಯ ಇಲಾಖೆ ಕತ್ತರಿ ಹಾಕಿದೆ. ರಾಷ್ಟ್ರೀಯ ಆಹಾರ ಪೌಷ್ಟಿಕಾಂಶದ ಸ್ಕೀಮ್ ಕೈಬಿಟ್ಟಿದೆ. ಆದರೆ ಮೊಟ್ಟೆ ನೀಡುವುದು ಅದರ ಅಡಿಯಲ್ಲೇ ಬರುವುದರಿಂದ ಆಸ್ಪತ್ರೆಗಳಿಗೆ ಗೊಂದಲ ಎದುರಾಗಿದೆ.

ಸದ್ಯ ನೀಡಲಾಗುತ್ತಿದ್ದ ಮೊಟ್ಟೆಯಷ್ಟೇ ಪ್ರತ್ಯೇಕವಾಗಿ ಬೇಯಿಸಿ ನೀಡಬೇಕಾ, ಬೇಡವಾ ಎನ್ನುವ ಗೊಂದಲಕ್ಕೆ ಆಸ್ಪತ್ರೆಗಳು ಸಿಲುಕಿವೆ. ಸದ್ಯ  ಒಪ್ಪಂದ ಮಾಡಿಕೊಂಡು ನೀಡಿರುವ ಮೆನುವಿನಲ್ಲಿ ಮೊಟ್ಟೆ ಸೇರಿಸಿಲ್ಲ, ಹೀಗಾಗಿ ಆಸ್ಪತ್ರೆಗಳಲ್ಲಿ ಮೊಟ್ಟೆ ನೀಡುತ್ತಿಲ್ಲ.

ಆಸ್ಪತ್ರೆಗಳಲ್ಲಿ ನೀಡಲಾಗುತ್ತಿರುವ ಊಟದ ಮೆನು

  • ಬೆಳ್ಳಗ್ಗೆ ಉಪಹಾರಕ್ಕೆ ಹಾಲು, ಕಾಫಿ, ಟೀ, ಬ್ರೆಡ್, ಉಪ್ಪಿಟ್ಟು
  • ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಮೊಟ್ಟೆ, ಹಾಲು ಹಣ್ಣುಗಳು, ಪಲ್ಯ, ಚಪಾತಿ ಅನ್ನ-ಸಾಂಬರ್ ನೀಡಲಾಗುತ್ತದೆ.

ಇಸ್ಕಾನ್ ಮೆನು

  • ಚಿತ್ರಾನ್ನ, ರೊಟ್ಟಿ, ಉಪ್ಪಿಟ್ಟು, ಪೌಷ್ಟಿಕ ಕಾಳುಗಳು ಹಾಗೂ ಇನ್ನಿತರೆ ಬೆಳಗಿನ ಉಪಹಾರ ಸಿಗಲಿದೆ.
  • ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಮುದ್ದೆ, ಸೋಯಾ, ಹಾಲು ಹಣ್ಣುಗಳು, ಹಣ್ಣಿನ ಜ್ಯೂಸ್, ಪಲ್ಯ, ಪಾಯಸಾ, ಸಾಂಬಾರ್, ಸಾಗು, ರೋಟಿ, ಚಪಾತಿ ಹೀಗೆ ಇನ್ನು ಹಲವಾರು ಊಟ ಕೂಡ ಇಸ್ಕಾನ್ ವತಿಯಿಂದ ದೊರೆಯಲಿದೆ.

ಡಯೆಟ್ ಫುಡ್ ಯಾರಿಗೆ? ಎಷ್ಟು ಖರ್ಚು?

  • ಜನರಲ್ ಡಯೆಟ್‌: 183 ರೂ
  • ಥೆರಪಿಯಲ್ಲಿರುವ ರೋಗಿಗಳಿಗೆ: 210 ರೂ
  • ಗರ್ಭಿಣಿ/ಬಾಣಂತಿ: 225 ರೂ
  • ಮಕ್ಕಳು: 170 ರೂ

ಇದನ್ನೂ ಓದಿ: ಸರ್ಕಾರದಿಂದ ಮಹತ್ವದ ಆದೇಶ: ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಕನಸು ಕಾಣುತ್ತಿದ್ದವರಿಗೆ ಬಿಗ್ ಶಾಕ್

ಒಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸಪ್ಪೆ ಊಟ ಮಾಡುತ್ತಿದ್ದ ರೋಗಿಗಳಿಗೆ ಸರ್ಕಾರ ಮತ್ತಷ್ಟು ಪೌಷ್ಟಿಕ ಕೊಡಲು ಮುಂದಾಗಿದೆ. ಇಸ್ಕಾನ್​ನಿಂದ ಉತ್ತಮ ಊಟವು ಸಿಗುತ್ತಿದೆ. ಆದರೆ ಹೊಸ ಊಟ ನೀಡುವ ನೆಪದಲ್ಲಿ ಮೊಟ್ಟೆಯನ್ನ ಆರೋಗ್ಯ ಇಲಾಖೆ ಕಡೆಗಣಿಸಿರುವುದು ಎಷ್ಟು ಸರಿ ಎನ್ನುವ ಚರ್ಚೆ ಶುರುವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮಗನ ಮೇಲೆ ದಾಳಿ ಮಾಡಿದ ಚಿರತೆಯನ್ನು ಕತ್ತಿಯಿಂದ ಕೊಚ್ಚಿ ಕೊಂದ ರೈತ – Kannada News | 60 year old Man Kills Leopard With Spear and Sickle To Save From Attack In Gujarat

ಅಹಮದಾಬಾದ್, ಜನವರಿ 29: ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆಯಲ್ಲಿ 60 ವರ್ಷದ ರೈತರೊಬ್ಬರು ತನ್ನನ್ನು ಮತ್ತು ತನ್ನ ಮಗನನ್ನು ರಕ್ಷಿಸಿಕೊಳ್ಳಲು ಚಿರತೆಯನ್ನು (Leopard Attack) ಕತ್ತಿಯಿಂದ ಹಲ್ಲೆ ಮಾಡಿ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಿರತೆಯ ದಾಳಿಯ ನಂತರ ರೈತ ಬಾಬು ಅವರ ಮಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಕೊಂದಿದ್ದಕ್ಕಾಗಿ ಆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬುಧವಾರ ರಾತ್ರಿ ಜಿಲ್ಲಾ ಕೇಂದ್ರವಾದ ವೆರಾವಲ್‌ನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಗ್ಯಾಂಗ್ಡಾ ಗ್ರಾಮದ ಹೊರವಲಯದಲ್ಲಿರುವ ತನ್ನ ಮನೆಯ ವರಾಂಡಾದಲ್ಲಿ ಬಾಬು ವಾಜಾ ವಿಶ್ರಾಂತಿ ಪಡೆಯುತ್ತಿದ್ದಾಗ ಚಿರತೆ ಕಾಣಿಸಿಕೊಂಡಿದೆ. ಹತ್ತಿರದ ಹೊಲದಿಂದ ಹೊರಬಂದ ಚಿರತೆಯೊಂದು ಬಾಬು ಅವರ ಮೇಲೆ ಹಾರಿತು. ಆಗ ಅಲ್ಲಿಗೆ ಬಂದ ಅವರ ಮಗನ ಮೇಲೂ ದಾಳಿ ಮಾಡಿತು.

ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತನ ಕತ್ತು ಸೀಳಿ ಕೊಂದು ಹೊತ್ತೊಯ್ದಿದ್ದ ಚಿರತೆ ಕೊನೆಗೂ ಸೆರೆ

ಬಾಬು ವಾಜಾ ಅವರ ಪ್ರಕಾರ, ಚಿರತೆ ಅವರ ತೋಳನ್ನು ಕಚ್ಚಿ ಹಿಡಿದು ಎಳೆಯಲು ಪ್ರಾರಂಭಿಸಿತು. “ನನ್ನ ಕಿರುಚಾಟ ಕೇಳಿ ನನ್ನ ಮಗ ಶಾರ್ದೂಲ್ ನನ್ನನ್ನು ರಕ್ಷಿಸಲು ಓಡಿ ಬಂದ. ಆದರೆ, ಚಿರತೆ ಅವನ ಮೇಲೆ ಹಾರಿ ಗಾಯಗೊಳಿಸಿತು. ನಾನು ಶಾರ್ದೂಲ್​ನನ್ನು ಉಳಿಸಲು ಪ್ರಯತ್ನಿಸಿದಾಗ ಚಿರತೆ ಮತ್ತೆ ನನ್ನ ಮೇಲೆ ಹಾರಿತು. ಆಗ ಏನು ಮಾಡುವುದೆಂದು ತಿಳಿಯದೆ ಅಲ್ಲೇ ಇದ್ದ ಕತ್ತಿಯನ್ನು ತೆಗೆದುಕೊಂಡು ಚಿರತೆಗೆ ಹೊಡೆದೆ” ಎಂದು ಬಾಬು ತಿಳಿಸಿದ್ದಾರೆ.

ಇದನ್ನೂ ಓದಿ: ಮನೆ ಮುಂದೇ ಓಡಾಡ್ತಿತ್ತು ಚಿರತೆ! ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಬಾಬು ಮತ್ತು ಅವರ ಮಗನ ಮುಂಗೈ ಮತ್ತು ಹಣೆಯ ಮೇಲೆ ಗಾಯಗಳಾಗಿವೆ. ವರಾಂಡಾದಲ್ಲಿ ಇರಿಸಲಾಗಿದ್ದ ಕತ್ತಿಯನ್ನು ಹಿಡಿದು ಚಿರತೆಯನ್ನು ಕೊಲ್ಲಲಾಗಿದೆ. ಈ ಘಟನೆಯ ಬಗ್ಗೆ ತಿಳಿದ ನಂತರ, ಭರ್ವಾದ್ ಮತ್ತು ಅವರ ತಂಡ ಸ್ಥಳಕ್ಕೆ ತಲುಪಿ ಚಿರತೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪದೇ ಪದೇ ಸೀನು ಬರುತ್ತಾ? ಇದು ದುರ್ಬಲ ರೋಗನಿರೋಧಕ ಶಕ್ತಿಯ ಸಂಕೇತವೇ? – Kannada News | Seasonal Sneezing: Causes & Fixes

ಇತ್ತೀಚಿನ ದಿನಗಳಲ್ಲಿ, ದೇಶದ ಹಲವು ಭಾಗಗಳಲ್ಲಿ ಹವಾಮಾನದಲ್ಲಿ ತ್ವರಿತ ಬದಲಾವಣೆ ಕಂಡುಬರುತ್ತಿದ್ದು, ಶೀತ, ಮಳೆ ಕೆಲವು ಭಾಗದಲ್ಲಿ ಆರ್ದ್ರತೆ ಮತ್ತು ಧೂಳು ಹೆಚ್ಚಾಗಿದೆ. ಈ ರೀತಿಯ ಹವಾಮಾನದಲ್ಲಿ, ಅನೇಕರ ಆರೋಗ್ಯ ಏರುಪೇರಾಗುತ್ತಿದೆ. ಆಗಾಗ ಸೀನುವುದು (Sneezing), ಮೂಗಿನಲ್ಲಿ ತುರಿಕೆ ಅಥವಾ ನೆಗಡಿ ಅನುಭವಕ್ಕೆ ಬರುತ್ತಿದೆ. ಆದರೆ ಜನರು ಇದನ್ನು ಅಲರ್ಜಿ ಎಂದು ಭಾವಿಸಿ ನಿರ್ಲಕ್ಷಿಸುತ್ತಾರೆ, ಆದರೆ ಇದು ದೊಡ್ಡ ಸಮಸ್ಯೆಯ ಸಂಕೇತ ಆಗಿರಬಹುದು ಎಂಬುದನ್ನು ಮರೆಯಬಾರದು. ಸಾಮಾನ್ಯವಾಗಿ ಹವಾಮಾನದಲ್ಲಿ, ದೇಹವು ಹೊಸ ಪರಿಸರಕ್ಕೆ ಹೊಂದಿಕೊಳ್ಳಬೇಕಾಗುತ್ತದೆ, ಈ ಅವಧಿಯಲ್ಲಿ, ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ಗಮನಿಸಬಹುದು. ಇಂತಹ ಸಂದರ್ಭಗಳಲ್ಲಿ, ಆಗಾಗ ಸೀನು ಬರುವುದು ಸಾಮಾನ್ಯವೇ ಅಥವಾ ಅಲ್ಲವೇ ಎಂಬುದನ್ನು ತಿಳಿಯುವುದು ಬಹಳ ಮುಖ್ಯವಾಗುತ್ತದೆ. ಹಾಗಾದರೆ ಆಗಾಗ ಸೀನು ಬರುವುದು ದುರ್ಬಲ ರೋಗನಿರೋಧಕ ಶಕ್ತಿಯ ಸಂಕೇತವೇ ತಿಳಿದುಕೊಳ್ಳಿ.

ಆಗಾಗ ಸೀನು ಬರುವುದು ದುರ್ಬಲ ರೋಗನಿರೋಧಕ ಶಕ್ತಿಯ ಸಂಕೇತವೇ?

ಲೇಡಿ ಹಾರ್ಡಿಂಗ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಎಚ್‌ಒಡಿ ಡಾ. ಎಲ್.ಎಚ್. ​​ಘೋಟೇಕರ್ ಹೇಳುವ ಪ್ರಕಾರ, ಆಗಾಗ ಸೀನು ಬರುವುದು ಧೂಳು, ತಂಪಾದ ಗಾಳಿ ಅಥವಾ ಮಾಲಿನ್ಯದ ಪರಿಣಾಮವೂ ಆಗಿರಬಹುದು. ಆದರೆ ಆಗಾಗ ಸೀನು ಬರುವುದು, ಪುನರಾವರ್ತಿತವಾಗಿ ಶೀತವಾಗುವುದು, ಗಂಟಲು ನೋವು, ಆಯಾಸ ಅಥವಾ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವುದು ದುರ್ಬಲ ರೋಗನಿರೋಧಕ ಶಕ್ತಿಯ ಸಂಕೇತ. ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲವಾಗಿದ್ದಾಗ, ದೇಹವು ಬಾಹ್ಯ ಅಲರ್ಜಿನ್ ಮತ್ತು ವೈರಸ್‌ಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ರೋಗಲಕ್ಷಣಗಳು ಪದೇ ಪದೇ ಕಂಡುಬರುತ್ತದೆ.

ಇದನ್ನೂ ಓದಿ: ಪದೇ ಪದೇ ಶೀತವಾಗುವುದು ಈ ಕಾಯಿಲೆಯ ಆರಂಭಿಕ ಲಕ್ಷಣವಾಗಿರಬಹುದು ಎಚ್ಚರ!

ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ಹವಾಮಾನಕ್ಕೆ ಅನುಗುಣವಾಗಿ ಮೊದಲು ದೇಹವನ್ನು ಬೆಚ್ಚಗಿಟ್ಟುಕೊಳ್ಳಬೇಕು. ತಂಪಾದ ಗಾಳಿ ಮತ್ತು ಧೂಳಿನಿಂದ ಮೂಗನ್ನು ರಕ್ಷಿಸಿಕೊಳ್ಳುವುದು ಬಹಳ ಮುಖ್ಯ. ಇದೆಲ್ಲದರ ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ದೇಹವು ತೇವಾಂಶದಿಂದ ಕೂಡಿರುತ್ತದೆ ಮತ್ತು ಅಲರ್ಜಿಯ ಪರಿಣಾಮಗಳನ್ನು ಕಡಿಮೆ ಮಾಡಬಹುದು. ಧೂಳು ಮತ್ತು ಅಲರ್ಜಿನ್ ಗಳನ್ನು ಕಡಿಮೆ ಮಾಡಲು ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸುವತ್ತ ಗಮನ ಹರಿಸಿ. ಸಮಸ್ಯೆ ದೀರ್ಘಕಾಲದವರೆಗೆ ಮುಂದುವರಿದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಸಮತೋಲಿತ ಆಹಾರ ಮತ್ತು ಸರಿಯಾಗಿ ನಿದ್ರೆ ಮಾಡುವುದು ಒಳ್ಳೆಯದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ತವರಿನಲ್ಲಿ ಮೊಟ್ಟ ಮೊದಲ ಪಂದ್ಯವನ್ನಾಡುತ್ತಿರುವ ಸಂಜುಗೆ ಕೊನೆಯ ಅವಕಾಶ – Kannada News | Sanju Samson’s Last Chance: IND vs NZ Final T20 at Home Ground Thiruvananthapuram

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಭಾರತ ಈಗಾಗಲೇ ಮೊದಲ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿತ್ತು. ಆದರೆ ಕಿವೀಸ್ ತಂಡವು ನಾಲ್ಕನೇ ಪಂದ್ಯದಲ್ಲಿ ಭಾರತವನ್ನು 50 ರನ್‌ಗಳಿಂದ ಸೋಲಿಸುವ ಮೂಲಕ ಸತತ ಸೋಲಿನ ಸರಪಳಿ ಮುರಿದಿದೆ. ಇದೀಗ ಸರಣಿಯ ಕೊನೆಯ ಮತ್ತು ಐದನೇ ಪಂದ್ಯವು ಈಗ ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದು ಟೀಂ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್‌ಗೆ ಸ್ಮರಣೀಯ ಪಂದ್ಯವಾಗಿದೆ.

ಸಂಜು ಸ್ಯಾಮ್ಸನ್‌ಗೆ ವಿಶೇಷ ಪಂದ್ಯ

ಈ ಸರಣಿಯು ಇಲ್ಲಿಯವರೆಗೆ ಸಂಜು ಸ್ಯಾಮ್ಸನ್‌ಗೆ ನಿರಾಶಾದಾಯಕವಾಗಿದೆ. ಇಲ್ಲಿಯವರೆಗೆ ಆಡಿರುವ 4 ಪಂದ್ಯಗಳಲ್ಲಿ ಸಂಜು ಉತ್ತಮ ಪ್ರದರ್ಶನ ನೀಡಿಲ್ಲ. ಹೀಗಾಗಿ ತಮ್ಮ ಫಾರ್ಮ್ ಕಂಡುಕೊಳ್ಳುವ ಒತ್ತಡದಲ್ಲಿರುವ ಸಂಜುಗೆ ಉತ್ತಮ ಅವಕಾಶ ಸಿಕ್ಕಿದೆ. ಏಕೆಂದರೆ ಸಂಜು ಇದೇ ಮೊದಲ ಬಾರಿಗೆ ತಮ್ಮ ತವರು ನೆಲದಲ್ಲಿ ಅಂತರರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ. ತಿರುವನಂತಪುರಂ ಕ್ರೀಡಾಂಗಣದಲ್ಲಿ ಸಂಜು ಬಾಲ್ಯದಿಂದಲೂ ಆಡುತ್ತಿದ್ದು, ಈಗ ಭಾರತೀಯ ಜೆರ್ಸಿಯಲ್ಲಿ ಮೈದಾನಕ್ಕೆ ಇಳಿಯಲಿದ್ದಾರೆ.

ಹೀಗಾಗಿ ಈ ಪಂದ್ಯಕ್ಕಾಗಿ ಅಭಿಮಾನಿಗಳು ಕೂಡ ಕಾದು ಕುಳಿತಿದ್ದು, ಈ ಪಂದ್ಯವನ್ನು ಸುಮಾರು 55,000 ಅಭಿಮಾನಿಗಳು ವೀಕ್ಷಿಸಲಿದ್ದಾರೆ ಎಂದು ವರದಿಯಾಗಿದೆ. ಏಕೆಂದರೆ ಈಗಾಗಲೇ ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ. ಸಂಜು ಸ್ಯಾಮ್ಸನ್ ತನ್ನ ತವರು ನೆಲದಲ್ಲಿ ಮೊದಲ ಬಾರಿಗೆ ಆಡುವುದನ್ನು ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ಸಂಜು ಸ್ಯಾಮ್ಸನ್‌ಗೆ ಕೊನೆಯ ಅವಕಾಶ

ಈ ಸರಣಿಯಲ್ಲಿ ಇದುವರೆಗೆ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಸಂಜು ಸ್ಯಾಮ್ಸನ್ ಕೇವಲ 40 ರನ್ ಗಳಿಸಿದ್ದಾರೆ. ಮೊದಲ ಪಂದ್ಯದಲ್ಲಿ ಅವರು 10 ರನ್ ಗಳಿಸಿದರೆ, ಎರಡನೇ ಪಂದ್ಯದಲ್ಲಿ ಕೇವಲ 6 ರನ್ ಗಳಿಸಿದರು. ಮೂರನೇ ಪಂದ್ಯದಲ್ಲಿ ಅವರು ಖಾತೆ ತೆರೆಯಲು ಸಾಧ್ಯವಾಗದೆ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಔಟಾಗಿದ್ದರು. ನಂತರ ನಾಲ್ಕನೇ ಪಂದ್ಯದಲ್ಲಿ 24 ರನ್ ಗಳಿಸುವ ಮೂಲಕ ಅವರು ಮತ್ತೆ ಬ್ಯಾಕ್ ಅಪ್ ಮಾಡಲು ಪ್ರಯತ್ನಿಸಿದರು. ಈಗ, ಸರಣಿಯ ಐದನೇ ಪಂದ್ಯವು ಟಿ20 ವಿಶ್ವಕಪ್‌ಗೆ ಮುನ್ನ ಅವರ ಕೊನೆಯ ಅವಕಾಶವಾಗಿದೆ, ಏಕೆಂದರೆ ಇದರ ನಂತರ ಟೀಂ ಇಂಡಿಯಾ ಯಾವುದೇ ಸರಣಿಯನ್ನು ಆಡುವುದಿಲ್ಲ. ಆದ್ದರಿಂದ ಈ ಪಂದ್ಯದಲ್ಲಿ ಸಂಜು ಒಂದೊಳ್ಳೆ ಇನ್ನಿಂಗ್ಸ್ ಆಡುವ ಮೂಲಕ ತವರು ಅಭಿಮಾನಿಗಳನ್ನು ರಂಜಿಸುವುದರ ಜೊತೆಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಜ್ಞಾನಿಗಳು, ಸಾಧು ಸಂತರ ಮಾರ್ಗ ಒಂದೇ: ಇಸ್ರೋ ಮಾಜಿ ಅಧ್ಯಕ್ಷ ಸೋಮನಾಥ್ – Kannada News | Scientists and sadhu sant same path Says Former ISRO chairman Somanath In Bengaluru

ಬೆಂಗಳೂರು, (ಜನವರಿ 29): ಧಾರ್ಮಿಕ ವಲಯ ಮಾನವನ ಶ್ರೇಷ್ಠತೆಗಾಗಿ ಶ್ರಮಿಸುತ್ತದೆ. ವಿಜ್ಞಾನಿಗಳು (Scientists) ಭೌಗೋಳಿಕ ಜಗತ್ತಿನ ಕೌತುಗಳನ್ನು ಅನ್ವೇಷಿಸುತ್ತಾರೆ. ಇಬ್ಬರ ಕೆಲಸ ಪರಿಶೋಧನೆ ಮತ್ತು ಸತ್ಯಾನ್ವೇಷಣೆಯಾಗಿದೆ. ಇಬ್ಬರ ಹಾದಿಯೂ ಒಂದೇ ಆಗಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಹಾಗೂ ಚಾಣಕ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್. ಸೋಮನಾಥ್ (Former ISRO chairman Somanath) ಹೇಳಿದ್ದಾರೆ.

ಬೆಂಗಳೂರು ಅರಮನೆ ಮೈದಾನದಲ್ಲಿ ಕೆ.ಆರ್. ನಗರದ ಯಡತೊರೆ ಶ್ರೀ ಯೋಗಾನಂದ ಸರಸ್ವತಿ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಶಂಕರ ಭಾರತಿ ಸ್ವಾಮೀಜಿ ನೇತೃತ್ವದಲ್ಲಿ ವೇದಾಂತ ಭಾರತಿ ಹಾಗೂ ಪರಮ್ ಫೌಂಡೇಶನ್ ನಿಂದ ಆಯೋಜಿಸಲಾದ ನಾಲ್ಕು ದಿನಗಳ ರಾಷ್ಟ್ರಮಟ್ಟದ ಬೃಹತ್ “ವಿವೇಕ ದೀಪ್ತಿ” ಸಮಾವೇಶದಲ್ಲಿ ವಿಜ್ಞಾನ ಮತ್ತು ಧರ್ಮ ಕುರಿತು ಮಾತನಾಡಿದರು. ವಿಜ್ಞಾನಿಗಳು ಭೂಮಂಡಲದ ಬಗ್ಗೆ ಆಳವಾದ ಅಧ್ಯಯನ ನಡೆಸುತ್ತಾರೆ. ಸಾಧು, ಸಂತರು ಪಾರಮಾರ್ಥಿಕ ಸತ್ಯವನ್ನು ಅರಸುತ್ತಾರೆ. ಈ ದೇಶದಲ್ಲಿ ನಾವು ಸಹಸ್ರಾರು ವರ್ಷಗಳಿಂದ ಬದುಕುತ್ತಿದ್ದು, ನಮ್ಮಲ್ಲಿ ಪರಮೋಚ್ಛ ಜ್ಞಾನವಿದೆ. ಈ ಸಂಕಿರ್ಣದಾಯಕ ಪರಿಸ್ಥಿತಿ ಬಗ್ಗೆ ನಾವು ಅರ್ಥ ಮಾಡಿಕೊಳ್ಳಬೇಕು. ಋಷಿಮುನಿಗಳು ತಪಸ್ಸಿನ ಮೂಲಕ ಸಾಧನೆ ಮಾಡಿದರೆ, ವಿಜ್ಞಾನಿಗಳು ಸಹ ಸಂಶೋಧನೆಯನ್ನು ತಪಸ್ಸಿನಂತೆ ಏಕಾಗ್ರತೆಯಿಂದ ಕೈಗೊಳ್ಳುತ್ತಾರೆ. ವಿಜ್ಞಾನದಲ್ಲಿ ಹಲವಾರು ಸಿದ್ಧಾಂತಗಳಿವೆ. ಧರ್ಮದಲ್ಲೂ ಭಿನ್ನ, ಭಿನ್ನ ಸಿದ್ಧಾಂತಗಳಿವೆ. ವಿಜ್ಞಾನದಲ್ಲೂ ಪರಿಕಲ್ಪನೆಗಳಿವೆ. ಆಯಾಮಗಳಿವೆ ಎಂದರು.

ಇತಿಹಾಸ ತಜ್ಞ ಡಾ. ವಿಕ್ರಮ್ ಸಂಪತ್ ಮಾತನಾಡಿ, ಭಾರತದ ಪ್ರಾಚೀನ ಜ್ಞಾನ ಪರಂಪರೆ ಬೃಹತ್ತಾದದ್ದು, ಮಹತ್ತಾದ್ದದು ಆಗಿದೆ. ನಮ್ಮ ನಾಲ್ಕು ಸಾವಿರ ವರ್ಷಗಳ ಜ್ಞಾನ ಸಂಪತನ್ನು ನಾಶಪಡಿಸಲು ವ್ಯಾಪಕ ಪ್ರಯತ್ನ ನಡೆಯಿತು. ಜಗತ್ತಿನ ಅತಿ ದೊಡ್ಡ ನಳಂದ ವಿಶ್ವವಿದ್ಯಾಲಯವನ್ನು ಸುಟ್ಟು ಭಸ್ಮ ಮಾಡಲಾಯಿತು. ಈ ಸಮಯದ ಆರು ತಿಂಗಳಲ್ಲಿ ತಕ್ಷಶಿಲಾ, ವಿಕ್ರಮ ಶಿಲಾ ಒಳಗೊಂಡಂತೆ ಹಲವಾರು ವಿಶ್ವವಿದ್ಯಾಲಯಗಳನ್ನು, ಅಲ್ಲಿನ ಅಕ್ಷರ ಸಂಸ್ಕೃತಿಯನ್ನು ನಾಮಾವಶೇಷಗೊಳಿಸಿದರು. ಇಷ್ಟಾದರೂ ನಮ್ಮ ಜ್ಞಾನ ಸಂಪತ್ತು ನಮ್ಮ ಮೆದುಳಿನಲ್ಲಿ ಸುಪ್ತವಾಗಿ, ಆಳವಾಗಿ ಅಡಗಿದೆ. ಹೀಗಾಗಿ ನಮ್ಮ ವೈಜ್ಞಾನಿಕ ಸ್ಫೂರ್ತಿಗೆ ಯಾರೊಬ್ಬರೂ ಧಕ್ಕೆ ತರಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಪರಂಮ್ ಫೌಂಡೇಷನ್ ನ ಟ್ರಸ್ಟಿ ಶ್ರೀನಿವಾಸ ಗುಪ್ತಾ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಸೃಜಿಸಲು ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ. 150 ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿ ನಾವೀನ್ಯತೆ ವಲಯದಲ್ಲಿ ತೊಡಗಿಕೊಂಡಿದ್ದಾರೆ. ಬೆಂಗಳೂರು ಹೊರ ಹೊಲಯದ ಚೆನ್ನೇನ ಹಳ್ಳಿಯಲ್ಲಿ ಬೃಹತ್ ವಿಜ್ಞಾನ ಸಂಸ್ಥೆ ತಲೆ ಎತ್ತುತ್ತಿದ್ದು, ಇದು ಪ್ರಪಂಚದಲ್ಲೇ ಶ್ರೇಷ್ಠ ಸಂಸ್ಥೆಯಾಗಿ ರೂಪಿಸಲಾಗುವುದು. ಇದಕ್ಕಾಗಿ ವೇದಾಂತ ಭಾರತಿ ಸಂಸ್ಥೆಯೊಂದಿಗೆ ರಚನಾತ್ಮಕ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಯಡತೊರೆ ಮಠದ ಪರಮಪೂಜ್ಯ ಶ್ರೀ ಶ್ರೀ ಬ್ರಹ್ಞಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿ, ವೇದ, ಉಪನಿಷತ್ತು, ಅತ್ಯಂತ ಶ್ರೇಷ್ಠವಾದದ್ದು. ಶ್ರೀ ಶಂಕರ ಭಗವತ್ಪಾದರು ನಮಗೆ ಕೊಟ್ಟಿರುವ ಸ್ತೋತ್ರಗಳು ಸರ್ವಕಾಲಿಕವಾದದ್ದು ಎಂದರು. ಇದೇ ಸಂದರ್ಭದಲ್ಲಿ ವಿಜ್ಞಾನ – ಧರ್ಮ ಕುರಿತಂತೆ ವೇದಾಂತ ಭಾರತಿ ಮತ್ತು ಪರಂ ಫೌಂಡೇಷನ್ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಯಿತು.

ಕರ್ನಾಟದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಎಐ ಕ್ಷೇತ್ರದ ಭಾರತೀಯ ಕಂಪನಿಗಳ ಸಿಇಒಗಳು, ಪರಿಣಿತರ ಜೊತೆ ಪ್ರಧಾನಿ ಮೋದಿ ಸಭೆ – Kannada News | PM Modi interaction with CEOs and experts in AI field ahead of AI Impact Summit in 2026 Feb

ನವದೆಹಲಿ, ಜನವರಿ 29: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗುರುವಾರ ಎಐ ಕ್ಷೇತ್ರದ ಪರಿಣಿತರು ಮತ್ತು ಸಿಇಒಗಳ ಜೊತೆ ಸಭೆ ನಡೆಸಿದರು. ಲೋಕ ಕಲ್ಯಾಣ್ ಮಾರ್ಗ್ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಈ ಕಾರ್ಯಕ್ರಮ ನಡೆಯಿತು. ಫೆಬ್ರುವರಿಯಲ್ಲಿ ನಡೆಯಲಿರುವ ಇಂಡಿಯಾಎಐ ಇಂಪ್ಯಾಕ್ಟ್ ಸಮಿಟ್ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಪ್ರಧಾನಿಗಳು ಈ ಸಭೆ ನಡೆಸಿದ್ದಾರೆ. ಎಐ ಟೆಕ್ನಾಲಜಿಯಲ್ಲಿ ಸ್ವಾವಲಂಬನೆ ಸಾಧಿಸಬೇಕೆನ್ನುವ ಸರ್ಕಾರದ ಗುರಿಗೆ ಬೆಂಬಲವಾಗಿ ನಿಲ್ಲುವುದಾಗಿ ಸಿಇಒಗಳು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಯುಪಿಐ ರೂಪಿಸುವ ಮೂಲಕ ಭಾರತ ತಾನು ತಾಂತ್ರಿಕ ನಾವೀನ್ಯತೆ ಮಾಡಬಲ್ಲುದು ಎಂಬುದನ್ನು ಸಾಬೀತುಪಡಿಸಿದೆ. ಎಐ ಕ್ಷೇತ್ರದಲ್ಲೂ ಇದನ್ನೇ ಆಗುತ್ತದೆ ಎಂದು ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಜನಸಂಖ್ಯಾ ಬಲ ಇದೆ, ವೈವಿಧ್ಯತೆ ಇದೆ, ಪ್ರಜಾತಂತ್ರ ಸಿಸ್ಟಂ ಇದೆ. ಈ ವಿಶೇಷ ಸಮ್ಮಿಳನವು ಭಾರತದ ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್ ಬಗ್ಗೆ ವಿಶ್ವದ ನಂಬಿಕೆ ಬೆಳೆಯಲು ಕಾರಣವಾಗಿದೆ ಎಂದೂ ಪ್ರಧಾನಿಗಳು ಬಣ್ಣಿಸಿದ್ದಾರೆ.

ಇದನ್ನೂ ಓದಿ: Economic Survey 2026: ಆರ್ಥಿಕ ಸಮೀಕ್ಷೆ ವರದಿ ಮಂಡನೆ; ಜಿಡಿಪಿ ಶೇ. 6.8-7.2 ಬೆಳೆಯುವ ನಿರೀಕ್ಷೆ

ತಂತ್ರಜ್ಞಾನದ ಹಂಚಿಕೆ ಮತ್ತು ಡಾಟಾ ಸೆಕ್ಯೂರಿಟಿಬಹಳ ಮಹತ್ವದ್ದು ಎಂದಿರುವ ಮೋದಿ, ನಿಷ್ಪಕ್ಷಪಾತವಾದ, ಸುಭದ್ರವಾದ ಮತ್ತು ಪಾರದರ್ಶಕವಾದ ಎಐ ಇಕೋಸಿಸ್ಟಂ ನಿರ್ಮಾಣಕ್ಕೆ ತಾವೆಲ್ಲರೂ ಕೆಲಸ ಮಾಡಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಎಐ ಟೆಕ್ ಸಿಇಒಗಳಿಗೆ ಕರೆ ನೀಡಿದ್ದಾರೆ.

ವಿಪ್ರೋ, ಟಿಸಿಎಸ್, ಎಚ್​ಸಿಎಲ್ ಟೆಕ್, ಝೋಹೋ ಕಾರ್ಪೊರೇಶನ್, ಎಲ್​​ಟಿಐ ಮೈಂಡ್​ಟ್ರೀ, ಜಿಯೋ ಪ್ಲಾಟ್​ಫಾರ್ಮ್ಸ್, ಅದಾನಿ ಕಾನೆಕ್ಸ್, ಎನ್ನೆಕ್ಸ್​ಟ್ರಾ ಡಾಟಾ, ನೆಟ್ವೆಬ್ ಟೆಕ್ನಾಲಜೀಸ್ ಇತ್ಯಾದಿ ಎಐ ಕ್ಷೇತ್ರದಲ್ಲಿ ತೊಡಗಿರುವ ಕಂಪನಿಗಳ ಸಿಇಒಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಹಾಗೆಯೇ, ಐಐಐಟಿ ಹೈದರಾಬಾದ್, ಐಐಟಿ ಮದ್ರಾಸ್, ಐಐಟಿ ಬಾಂಬೆಯಿಂದ ಪರಿಣಿತರೂ ಕೂಡ ಪಾಲ್ಗೊಂಡಿದ್ದರು. ಸರ್ಕಾರದ ಪರವಾಗಿ ಪ್ರಧಾನಿ ಜೊತೆ ಸಚಿವರಾದ ಅಶ್ವಿನಿ ವೈಷ್ಣವ್, ಜಿತಿನ್ ಪ್ರಸಾದ ಅವರೂ ಇದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link