ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಆಸ್ಟ್ರೇಲಿಯಾ ತಂಡಮ, ಬಾಂಗ್ಲಾದೇಶ (Australia vs Bangladesh) ಪ್ರವಾಸ ಮಾಡಿದೆ. ಈಗಾಗಲೇ ಸರಣಿಯ ಎರಡು ಪಂದ್ಯಗಳು ಮುಗಿದಿದ್ದು, ಆತಿಥೇಯ ಬಾಂಗ್ಲಾದೇಶದ ವಿರುದ್ಧ ಎರಡೂ ಪಂದ್ಯಗಳನ್ನು ಸೋತಿರುವ ಆಸ್ಟ್ರೇಲಿಯಾ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಬಾಂಗ್ಲಾದೇಶಕ್ಕೆ ಬರುವ ಮುನ್ನ ಪಾಕಿಸ್ತಾನದಲ್ಲಿ ಏಕದಿನ ಸರಣಿಯನ್ನಾಡಿದ್ದ ಆಸೀಸ್ ಪಡೆ ಅಲ್ಲೂ ಸಹ ಏಕದಿನ ಸರಣಿಯನ್ನು ಸೋತಿತ್ತು. ಇದೀಗ ಬಾಂಗ್ಲಾದೇಶದಲ್ಲೂ ಏಕದಿನ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಕಳೆದುಕೊಂಡಿದೆ. ಇತ್ತ ಬಾಂಗ್ಲಾದೇಶ ತಂಡ ತನ್ನ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡವನ್ನು ಏಕದಿನ ಸರಣಿಯಲ್ಲಿ ಸೋಲಿಸಿ ಹೊಸ ಇತಿಹಾಸ ನಿರ್ಮಿಸಿದೆ.
ಆಸೀಸ್ಗೆ ಆರಂಭಿಕ ಆಘಾತ
ಢಾಕಾದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾದ ನಿರ್ಧಾರ ತಪ್ಪು ಎಂಬುದು ಮೊದಲ ಮೂರು ಓವರ್ಗಳಲ್ಲಿಯೇ ಸಾಭೀತಾಯಿತು. ಬಾಂಗ್ಲಾದೇಶದ ಬೌಲರ್‌ಗಳಾದ ತಸ್ಕಿನ್ ಅಹ್ಮದ್ ಮತ್ತು ಮುಸ್ತಾಫಿಜುರ್ ರೆಹಮಾನ್ ಒಟ್ಟಾಗಿ ಆಸ್ಟ್ರೇಲಿಯಾದ ಮೂವರು ಆಟಗಾರರನ್ನು ಶೂನ್ನಕ್ಕೆ ಔಟ್ ಮಾಡಿದರು. ಆರಂಭಿಕರಾದ ಮ್ಯಾಟ್ ಶಾರ್ಟ್, ಕೂಪರ್ ಕಾನೊಲಿ ಮತ್ತು ಮ್ಯಾಟ್ ರೆನ್‌ಶಾ ತಮ್ಮ ಖಾತೆಗಳನ್ನು ತೆರೆಯಲು ವಿಫಲರಾದರು.
187 ರನ್ ಕಲೆಹಾಕಿದ ಆಸ್ಟ್ರೇಲಿಯಾ
ಅಲ್ಲದೆ 65 ರನ್‌ಗಳ ಒಳಗೆ, ಆಸ್ಟ್ರೇಲಿಯಾ ತಂಡದ ಅರ್ಧದಷ್ಟು ಆಟಗಾರರು ಪೆವಿಲಿಯನ್‌ಗೆ ಮರಳಿದರು. ಆದಾಗ್ಯೂ, ಮಾರ್ನಸ್ ಲಬುಶೇನ್ ಅಜೇಯ 55 ರನ್ ಮತ್ತು ಬಾರ್ಟ್ಲೆಟ್ 52 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡದ ಇನ್ನಿಂಗ್ಸ್ ಸ್ಥಿರಗೊಳಿಸಲು ಪ್ರಯತ್ನಿಸಿದರು. ಆದರೆ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿತು. ಇದರ ಪರಿಣಾಮವಾಗಿ ಆಸ್ಟ್ರೇಲಿಯಾ 42 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 187 ರನ್ ಗಳಿಸಲಷ್ಟೇ ಶಕ್ತವಾಯಿತು. ಇತ್ತ ಬಾಂಗ್ಲಾದೇಶ ಪರ ತಸ್ಕಿನ್ ಅಹ್ಮದ್ ಹಾಗೂ ಮುಸ್ತಫಿಜುರ್ ರೆಹಮಾನ್ ತಲಾ 3 ವಿಕೆಟ್ ಪಡೆದರೆ, ತನ್ವೀರ್ ಇಸ್ಲಾಂ 2 ವಿಕೆಟ್ ಪಡೆದರು.
ODI World Cup 2027: ಈ ದಿನದಿಂದ ಆರಂಭವಾಗಲಿದೆ 2027 ರ ಏಕದಿನ ವಿಶ್ವಕಪ್; ವೇಳಾಪಟ್ಟಿ ಬಹಿರಂಗ
35 ಓವರ್‌ಗಳಲ್ಲಿ ಗುರಿ ಬೆನ್ನಟ್ಟಿದ ಬಾಂಗ್ಲಾ
ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶದ ಇನ್ನಿಂಗ್ಸ್ ಆರಂಭಕ್ಕೂ ಮಳೆ ಅಡ್ಡಿಪಡಿಸಿತು. ಹೀಗಾಗಿ ಗುರಿಯನ್ನು 41 ಓವರ್‌ಗಳಲ್ಲಿ 192 ರನ್‌ಗಳಿಗೆ ನಿಗಧಿಪಡಿಸಲಾಯಿತು. ಅದರಂತೆ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾ ತಂಡಕ್ಕೂ ಉತ್ತಮ ಆರಂಭ ಸಿಗಲಿಲ್ಲ ಆರಂಭಿಕ ತನ್ಜಿದ್ ಹಸನ್ ರನ್ ಗಳಿಸದೆ ಔಟಾದರು. ಆದಾಗ್ಯೂ, ಸೌಮ್ಯ ಸರ್ಕಾರ್ ಮತ್ತು ನಜ್ಮುಲ್ ಹೊಸೈನ್ ಶಾಂಟೊ ತಲಾ 42 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು. ನಂತರ ಲಿಟ್ಟನ್ ದಾಸ್ 21 ರನ್ ಗಳಿಸಿದರು. ಆ ಬಳಿಕ ಬಂದ ತೌಹಿದ್ ಹೃದಯ್ ಅಜೇಯ 40 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಮೆಹಿದಿ ಹಸನ್ ಮಿರಾಜ್ ಕೂಡ ಅಜೇಯ 22 ರನ್‌ಗಳ ಇನ್ನಿಂಗ್ಸ್ ಆಡಿದರು. ಅಂತಿಮವಾಗಿ ಬಾಂಗ್ಲಾದೇಶ 35 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ ಜಯದ ನಗೆ ಬೀರಿತು.